ಕತೆಗಳು

 ಅಸ್ತಿತ್ವ 

–ರವಿ ಗೋಪಾಲರಾವ್, ಸ್ಯಾನ್ ಹೋಸೆ, ಕ್ಯಾಲಿಫೋರ್ನಿಯ 


ನಾನು ಗೆಳೆಯ ರಮೇಶನನ್ನು ಬೆಂಗಳೂರಿನಲ್ಲಿ ಭೇಟಿ ಆಗುತ್ತಿರುವುದು ಇಪ್ಪತ್ತು ವರ್ಷಗಳ ನಂತರವೇ. ನಮ್ಮಿಬ್ಬರ ಗೆಳೆತನ ಅದಕ್ಕೂ ಹಿಂದೆ, ಅಂದರೆ ಪ್ರೈಮರಿ ಸ್ಕೂಲಿನಲ್ಲಿ ಒಟ್ಟಿಗೆ ಓದ್ದುತ್ತಾಗಿನಿಂದ, ಒಂದೇ ಬಡಾವಣೆಯಲ್ಲಿ ಬೆಳೆದಾಗಿನಿಂದಾ ಇದೆ ಅಂದರೆ ಅಬ್ಬಾ ಎಷ್ಟು ಬೇಗ, ನಾವು ಆಡುತ್ತಿದ್ದ ಫುಟ್ಬಾಲ್ ಚೆಂಡಿನ ತರಹವೇ ಕಾಲ ಉರುಳಿ ಉರುಳಿ ಹೋಗುತ್ತಿದೆ ಎಂದು ಅನಿಸಿದೆ. ಇಬ್ಬರೂ ಒಂದೇ ಕಾಲೇಜಿನಲ್ಲಿ  ಪಿಯುಸಿ ಮುಗಿಸಿ ನಂತರ ನಾನು ದೂರದ ದೆಹಲಿ ಐಐಟಿ ಇಂಜಿನಿಯರಿಂಗ್, ಅವನು ಬೆಂಗಳೂರಿನಲ್ಲೇ ಬಿಎಸ್ಸಿ ಗೆ ಸೇರಿದ ಮೇಲೆ ನಮ್ಮಿಬ್ಬರ ಒಡನಾಟಕ್ಕೆ ಅಡ್ಡಿಬಂದಿತ್ತು. ರಜಾ ದಿನಗಳೂ ಕೂಡ ಸರಿಹೊಂದದೆ ನಾವಿಬ್ಬರೊ ಈ ಬಾಹ್ಯ ದೂರದಲ್ಲಿ ಚುಕ್ಕಾಣಿ ಇಲ್ಲದ ದೋಣಿಯಂತೆ ದೂರ ಸರಿದಿದ್ದೆವು. ಆದರೆ ಓದು ಮುಗಿಸಿ ರಮೇಶ ತನ್ನ ಮದುವೆಗೆ ಆಹ್ವಾನ ಕೊಟ್ಟಾಗ ಗೊತ್ತಾದದ್ದು ಅವನು ಕಾಲೇಜಿನಲ್ಲಿ ಪ್ರೀತಿಸಿದ ಹುಡುಗಿಯನ್ನೇ ತಂದೆ ತಾಯಿಗಳ ವಿರೋದವಿದ್ದರೂ ಯಾವ ಆಡಂಭರವಿಲ್ಲದೆ ಮದುವೆ ಮಾಡಿಕೊಳ್ಳುತ್ತಿರುವನು ಎಂದು.  ಆ ಮದುವೆಯ ವಿರೋಧಕ್ಕೆ ಕಾರಣ ಅವನು ವೈಷ್ಣವ ಬ್ರಾಹ್ಮಣ, ಹುಡುಗಿ ಲಿಂಗಾಯತ ಮತದವಳು. ವಿರೋಧ ಸಹಜವೇ ಅನಿಸಿತು.  ರಮೇಶನ ಕುಟುಂಬವನ್ನು ಅಷ್ಟು ಚಿಕ್ಕ ವಯಸ್ಸಿನಿಂದ ನೋಡಿ ಬೆಳೆದವ ನಾನು. ಅವರ ಸಂಪ್ರದಾಯಗಳು, ಮಡಿ ಮೈಲಿಗೆಯಲ್ಲಿ ಬೆರೆತ ದಿನಚರಿಗಳು, ಅವನ ಉಪನಯನ, ಅವನ ಅಜ್ಜ ಅಜ್ಜಿಯರ ಶ್ರಾದ್ಧ ದಿನಗಳಲ್ಲಿ ತಿಂದ ಉದ್ದಿನ ವಡೆ ಕಜ್ಜಾಯಗಳು, ಕೃಷ್ಣಾಷ್ಟಮಿಯಂದು ತಿಂದ ಮಿಠಾಯಿಗಳು ಎಲ್ಲವನ್ನು ನೆನೆಸಿಕೊಂಡರೆ ರಮೇಶನಿಗೆ ಆ ವಸುಧಳೇ ಪೆರ್ಫೆಕ್ಟ್ ಲೈಫ್ ಪಾರ್ಟ್ನರ್ ಆಗುವಳು ಎಂದು ಎಷ್ಟೋ ಬಾರಿ ಅಣಕಿಸಿದ್ದೇ.  ವಸುಧ ರಮೇಶನ ಸೋದರಮಾವನ ಮಗಳು, ನಮ್ಮಿಬ್ಬರ ಬೇಸಿಗೆ ದಿನಗಳ ಸಂಗಾತಿ. ರಮೇಶನ ಬಾಳ  ಸಂಗಾತಿ ಆಗಲಿಲ್ಲವೇಕೋ.   


ತುಮಕೂರಿನ ಒಂದು ಜಂಗಮ ಛತ್ರದಲ್ಲಿ ಆದ ಮದುವೆಗೆ ನಾನೂ ಹೋಗಿದ್ದೆ.  ಮೊದಲ ಬಾರಿಗೆ ವೀರಶೈವರ ಮದುವೆಯಲ್ಲಿ ನೋಡಿದ ಸಂಪ್ರದಾಯ, ಮಾಡಿದ ಭೋಜನ ಎಲ್ಲವೂ ರಮೇಶನಿಗೂ ಹೊಸದಾದರೆ ನನಗೆ ಯಾವುದೋ ಕನ್ನಡ ಚಲನಚಿತ್ರದಲ್ಲಿ ಭಾಗವಹಿಸಿದ ಅನುಭವ.  ಸ್ಪುರದ್ರೂಪಿ ಮಧುವಣಗಿ ಮಹಿಮಾಳನ್ನು ನನಗೆ ಪರಿಚಯಿಸುವಾಗ ರಮೇಶನ ಕಣ್ಣು ಮಿಂಚುತ್ತಿದ್ದವು. ಆದರೆ ಅಪ್ಪ ಅಮ್ಮ ಬಂಧುಬಳಗ ಎಲ್ಲರನ್ನು ತ್ಯಜಿಸಿ ಮದುವೆಗೆ ನಿಂತ ವರ ಏನನ್ನೂ ಹುಡುಕುತ್ತಿರುವಂತೆಯೇ ಕಂಡ.  ನಾನು ಅವರಿಬ್ಬರನ್ನು ಅಂದು ನೋಡಿದವನು ಮತ್ತೆ ನೋಡಲೇ ಇಲ್ಲ.  ನನ್ನ ಅಮೇರಿಕಾದ ಮುಂದಿನ ವಿದ್ಯಾಭ್ಯಾಸ, ಅಲ್ಲಿಯೇ ಕೆಲಸ, ಅಲ್ಲಿಯೇ ದೆಹಲಿಯಿಂದ ಬಂದು ನೆಲೆಸಿದ ಕನ್ನಡ ಹುಡುಗಿಯೊಂದಿಗೆ ಮದುವೆ, ನಂತರ ಮಕ್ಕಳು,  ಬಾಣಂತನಕ್ಕೆ ಬಂದ ತಂದೆ ತಾಯಿ, ಹೀಗೆ ಇಪ್ಪತ್ತು ವರ್ಷ ಕಳೆದಿತ್ತು.  ಇಷ್ಟು ವರ್ಷಗಳ ನಂತರ ಬೆಂಗಳೂರಿಗೆ ನನ್ನ ಪಯಣದ ಕಾರಣ ಅಮ್ಮ ತೀರಿಹೋದದ್ದು ಮತ್ತು ತಂದೆ ತಮ್ಮ ಪ್ರೊಫೆಸ್ಸರ್ ಹುದ್ದೆಯಿಂದ ನಿವೃತ್ತರಾಗಿ ನಾನಿದ್ದ ಫಿಲಡೆಲ್ಫಿಯಾ ನಗರಕ್ಕೆ ನನ್ನೊಡನೆ ಬರಲು ಒಪ್ಪಿದ್ದರಿಂದ. ಹದಿಮೂರನೆಯ ದಿನದ ವೈಕುಂಠಸಮಾರಾಧನೆಯಲ್ಲಿ ನೋಡಿದ್ದು ನಾನು ರಮೇಶನನ್ನು.  ಬಹಳಾ ಬದಲಾದಂತೆ ಕಂಡ.  ಸಮಾರಾಧನೆಯ ಗಲಾಟೆಯಲ್ಲಿ ಸಮಯವೇ ಸಿಗಲಿಲ್ಲ ಅವನೊಡನೆ ಮಾತನಾಡಲು.  ಅದರ ಮಾರನೇ ದಿವಸ ನಾನು ಕೃಷ್ಣರಾವ್ ಪಾರ್ಕಿನಲ್ಲಿ ವಾಕಿಂಗ್ ಹೋಗಿದ್ದಾಗ ಅಲ್ಲಿ ಅವನು ಕಂಡದ್ದು ನನಗೆ ಅತ್ಯಂತ ಖುಷಿ ಕೊಟ್ಟಿತ್ತು. ಕೆಲವು ಕ್ಷಣಗಳು ಇಬ್ಬರಿಗೂ ಏನು ಹೇಳಬೇಕೆಂದೇ ತೋಚದಿದ್ದರೂ ಹಳೆಯ ಗೆಳೆತನ ತಾನಾಗಿಯೇ ಆ ಗೋಡೆಯನ್ನು ಅಲುಗಿಸಿ ನೆಲಕ್ಕುರುಳಿಸಿತ್ತು.  ಮನ ಬಿಚ್ಚಿ ಮಾತನಾಡಲು ಹಳೆ ಗೆಳೆತನಕ್ಕಿಂತ ಬೇಕೇ?  


“ಮದುವೆಯಾದ ಮೇಲೆ ನನ್ನ ಅಸ್ತಿತ್ವವೇ ಬದಲಾಯಿತು,” ಎಂದು ಪ್ರಾರಂಭಿಸಿದ ರಮೇಶನ ಜೀವನದ ಸತ್ಯಾಂಶ ಅವನಿಂದಲೇ ತಿಳಿಯಿತು.  “ತಂದೆ ತಾಯಿಯನ್ನು, ನೆಂಟಿಷ್ಠರನ್ನು ವಿರೋಧಿಸಿ ನಾನು ಮಹಿಮಾಳ ಮನೆಯಲ್ಲೇ ಸಂಸಾರ ಹೂಡಬೇಕಾಯಿತು.  ಕೆಲಸವಿಲ್ಲದ ನನಗೆ ಮಾವನ ಆಶ್ರಯವೇ, ಜೊತೆಗೆ ಮಹಿಮಾಳಿಗೆ ಅವರ ತಂದೆ ಶಿಪಾರಸ್ಸಿನಿಂದ ಒಳ್ಳೆ ಉದ್ಯೋಗ ಸಿಕ್ಕಿತು.  ಅವರೆಲ್ಲರೂ ಕಟ್ಟಾ ಲಿಂಗಾಯಿತ ಮತದವರು.  ನನ್ನ ವೈಷ್ಣವ ಬ್ರಾಹ್ಮಣಿಕೆಗೆ ವಿದಾಯ ಹೇಳಲು ಹೆಚ್ಚು ಸಮಯ ಬೇಕಾಗಲಿಲ್ಲ.  ನನಗೆ ಗೊತ್ತಿದ್ದ ಪೂಜೆ ಮಂತ್ರಗಳನ್ನು ಹೇಳಿಕೊಳ್ಳಲು ತಂದಿದ್ದ ಹರಿಹರರ ಮೂರ್ತಿಗಳೂ ಸ್ವಲ್ಪ ದಿವಸದಲ್ಲೇ ಮಾಯವಾಗಿದ್ದವು.  ಜನಿವಾರ ಬದಲಿಸಲು ಉಪಾಕರ್ಮದ ದಿನದಂದು ನನಗೆ ನನ್ನ ಮಾವ ಕೊಟ್ಟದ್ದು ಇಷ್ಟಲಿಂಗ.  ಪ್ರತಿಭಟನೆಗೆ ಅವಕಾಶವಿರದಂತೆ ಎಲ್ಲ ಏರ್ಪಾಟುಗಳಾಗಿತ್ತು.  ಮೂರು ದಿವಸದ ಸಮಾರಂಭ.  ತಲೆಗೆ ಮುಂಡನದಿಂದ ಹಿಡಿದು ಗೋಮೂತ್ರದ ಸ್ನಾನ, ಮರು ದಿನ ಜಂಗಮರ ಕಾಲನ್ನು ತೊಳೆದ ನೀರಿನ ಧೂಳೋದಕ, ಪಂಚಾಮೃತ ಸ್ನಾನ, ಹೀಗೆ ಎಲ್ಲಾ ಕಾರ್ಯಗಳು ನನಗರಿವಿಲ್ಲದಂತೆ ಯಾಂತ್ರಿಕವಾಗಿ ಜರುಗಿ ಮೂರು ವರ್ಷಗಳ ನಂತರ ನಾನೂ ಕಟ್ಟಾ ಲಿಂಗಾಯ್ತನಾಗಿಬಿಟ್ಟಿದ್ದೆ. ಅಂದು ಬಂದ ಅಥಿತಿಗಳ ಮಧ್ಯೆ ನನ್ನ ವಾದ ನನಗೆ ಕೇಳಿಸಲಿಲ್ಲ.  ಅಲಂಕಾರಕ್ಕೆ ಬ್ರಾಹ್ಮಣ ಅಳಿಯ, ಅತ್ತೆ ಮಾವಂದಿರ ಅಚ್ಚುಮೆಚ್ಚಿನ ಮಗಳು, ದೊಡ್ಡ ಮನೆ, ಜೊತೆಗೊಂದು ಮೊಮ್ಮೊಗು ಬಂದಾಗ ನಾನು ಮತ್ತಷ್ಟು ದೂರವಾಗಿದ್ದೆ.  ಮಗಳಿಗೆ ಆರು ವರ್ಷ ತುಂಬಿದಂತೆಯೇ ಅವಳಿಗೂ ಕೂಡ ಇಷ್ಟಲಿಂಗ ಧರಿಸಿ ಸುಶ್ರಾವ್ಯವಾಗಿ ವಚನ ಹಾಡುವುದು, ಜಂಗಮರ ಶಾಲೆಯಲ್ಲಿ ವಿದ್ಯಾಭ್ಯಾಸ, ಅವರ ಸಂಪ್ರದಾಯಗಳಲ್ಲೇ ನನ್ನ ಅಪ್ರಾಮಾಣಿಕ ಮೆಚ್ಚಿಕೆ ಗಳಿಸಲು ಆರಂಭಿಸಿದಳು.  ನನ್ನ ಅಸ್ತಿತ್ವವೇ ಬದಲಾಗಿ ನಾನೂ ಯಾಂತ್ರಿಕ ಜೀವನ ನಡೆಸುತ್ತಿದ್ದೆ. ನಾನು ಪ್ರೀತಿಸಿದ ಮಹಿಮಾ ಕೂಡ ಬದಲಾಗಿ ನಮ್ಮಿಬ್ಬರ ನಡುವೆ ಈ ಮತಾಚರಣೆಗಳು ಒಂದು ಗೋಡೆಯನ್ನೇ ನಿರ್ಮಿಸಿದವು.  ಈ ತೋರಿಕೆಯ ಹೊರನೋಟದ ಜೀವನದಿಂದ ನಾನು ಹೊರಬರಲು ತವಕಿಸಿದಷ್ಟೂ ಅಸಹಾಯಕತೆಯೇ ಹಿಂದೆಜ್ಜೆಗೆ ಕಾರಣವಾಯಿತು.  ಆದರೆ ಅವಳಿಗೆ ಕಾಣದೆ ಶ್ರೀರಾಮನ ಗುಡಿಗೆ ಹೋಗುವುದು, ಪ್ರಸಾದಕ್ಕೆ ಹಾತೊರೆಯುವುದು, ಮಂತ್ರಘೋಷಗಳನ್ನು, ಭಕ್ತಿ ಸಂಗೀತವನ್ನು ಕೇಳುವುದು ಎಷ್ಟು ದಿನ ಮುಚ್ಚಿಡಲು ಸಾಧ್ಯ ನೀನೆ ಹೇಳು.  ಅದು ಗಾಳಿಮಾತಾದಾಗ ನನ್ನ ಮಾವ ಜಂಗಮರ ಬಾಯಿಂದಲೇ ಕಟ್ಟಪ್ಪಣೆ ನೀಡಿಸಿದರು, ಲಿಂಗಾಯತ ಮತ ಪಾಲನೆ ಇಲ್ಲದೇ ಮಹಿಮಾ ಮತ್ತು ಮಗಳನ್ನು ಮರೆಯಬೇಕೆಂದು.  ಅದೇ ಸಮಯಕ್ಕೆ ಸಮಾಜದಲ್ಲೂ ವೀರಶೈವ-ಲಿಂಗಾಯತರ ಒಳ ಒಡಕು, ವೀರಶೈವರು ತಾವು ಹಿಂದೂಗಳೆಂದೂ, ಲಿಂಗಾಯಿತರು ತಮ್ಮದೇ ಹೊಸ ಧರ್ಮವೆಂದು, ರಾಜಕೀಯದಲ್ಲಿ ಹೋರಾಟವಾಗಿ ಕೊನೆಗೆ ನ್ಯಾಯ ತೀರ್ಪಿನ ಆದೇಶದ ಮೇಲೆ ಒಂದು ಹಂತಕ್ಕೆ ಬಂದು ನಿಂತರೂ ನಾನು ಆ ಮತದಿಂದ ಹೊರಬರಲು ನಿಶ್ಚಯಿಸಿದ್ದೆ.  ನಿನಗೆ ಗೊತ್ತಿರುವಂತೆ ಮುಸ್ಲಿಮರು ಹಿಂದೂಗಳನ್ನು ಮದುವೆಯಾಗಿ ಲವ್ ಜಿಹಾದ್ ಮಾಡುವುದಕ್ಕೂ ನನಗಾದ ಕಹಿ ಅನುಭವಕ್ಕೂ ಅಷ್ಟು ವ್ಯತ್ಯಾಸವಿರಲಿಲ್ಲ, ಜೀವಂತವಾಗಿ ಉಳಿದ್ದಿದ್ದೇನೆಷ್ಟೇ.  ಆಗ ನಿನ್ನ ತಂದೆಯವರೇ ನನಗೆ ಹಿಂದೂಗಳ ವಾಪಸಿ ಆಂದೋಲನದ ಬಗ್ಗೆ ತಿಳಿಸಿದರು. ಮಹಿಮಾಳೆ ಡೈವೋರ್ಸ್ ಮಾಡಿದ ನಂತರ ಹೊರಬಂದಿದ್ದೇನೆ ಎನ್ನುವ ನಿಶ್ಚಿಂತತೆಗಿಂತಲೂ ಮುಂದೇನು ಎನ್ನುವ ಪ್ರಶ್ನೆ ಹಾಗೆ ಕಾಡುತ್ತಿದೆ.” 


ನನಗೆ ರಮೇಶನ ಮೇಲೆ ಕೋಪವೇ ಬಂದಿತ್ತು, ಬೇರೆಯವರ ಮೇಲೆಯೇ ಎಲ್ಲಾ ಹೊರಿಸಿ ತಾನು ಮಾತ್ರ ನಿಸ್ಸಹಾಯಕ  ಎಂದೇ ಹೇಳುತ್ತಿದ್ದಾನಲ್ಲ, ಇವನಿಗೆ ಏಕೆ ತನ್ನತನ ಇರಲಿಲ್ಲ ಎಂದು.  


ಅಮೇರಿಕಾದಲ್ಲಿ ಉಳಿದ ನನಗೆ ಇವ್ಯಾವುದರ ಬಗ್ಗೆ ಒಂದು ಚೂರು ಸುಳಿವು ಸಿಕ್ಕಿರಲಿಲ್ಲ ಅಂತ ಅಲ್ಲ.    ಬಾಲ್ಯದಲ್ಲಿ ಎಷ್ಟೋ ಗೆಳೆಯರು ತಮ್ಮ ಜನಿವಾರದ ತುದಿಯಲ್ಲಿ ಇದ್ದ ಇಷ್ಟಲಿಂಗವನ್ನು ನನಗೆ ವಿವರಿಸಿದ್ದರೂ ಅವರೆಲ್ಲರೂ ನಮ್ಮಂತೆಯೇ ಎನ್ನುವುದನ್ನು ಬಿಟ್ಟು ಮತ್ಯಾವ ಜ್ಞಾನವೂ ಬೇಕಿರಲಿಲ್ಲ.  ಆದರೆ  ರಮೇಶ ಮದುವೆಯಾದ ದಿನದಿಂದಲೇ ನನಗೂ ವೀರಶೈವ ಮತದ ಬಗ್ಗೆ ಹೆಚ್ಚು ತಿಳಿಯುವ ಆಸೆ ಮೂಡಿತ್ತು. ಲೈಬ್ರೆರಿ ಮತ್ತು ಗೂಗಲ್ ಸಹಾಯದಿಂದ ಹಲವಾರು ವಿಷಯಗಳನ್ನು ಸಂಗ್ರಹಿಸಿ, ಲಿಂಗಾಯತ ಮತದ ತುಲನೆ ಮಾಡಿ ನನ್ನದೇ ತೀರ್ಮಾನಕ್ಕೆ ಬರಲು ಸಮಯವೂ ಸಾಲದು, ಪಡೆದುಕೊಂಡಿರುವ ಜ್ಞಾನವೂ ಸಾಲದು ಎಂದೆನಿಸಿತ್ತು. ಆದರೆ ಬಾಲ್ಯದ ಮುಗ್ಧತೆಯಿಂದ ಹೊರಗಿನ ಪ್ರಪಂಚದಲ್ಲಿ ಕಾಲಿಟ್ಟ ನನಗೆ ಕೊರೆಯುತ್ತಿದ್ದ ಪ್ರಶ್ನೆ ಒಂದೇ:  ಮುಸ್ಲಿಮರಂತೆ ಲಿಂಗಾಯತ ಮತದವರು ಹಿಂದೂ ದ್ವೇಷಿಗಳೇ?  ಹಿಂದೂ ಧರ್ಮದಿಂದಲೇ ಹುಟ್ಟಿ ಬೆಳೆದ ಮತ ಮುಸ್ಲಿಮರಂತೆಯೇ ಮೂರ್ತಿ ದ್ವೇಷಿಗಳು, ಮತಾಂತರದಿಂದ ಹಿಂದುಗಳ ಸಹಿಷ್ಣುತೆಯನ್ನು ಅಗೌರವಿಸುವ ಮತ್ತೊಂದು ಧರ್ಮವಾಗಿ ಬೆಳೆಯುತ್ತಿದೆಯಲ್ಲ ಏಕಿರಬಹುದು. ಪರರ ಮತ ನಮ್ಮ ಅಸ್ಥಿತ್ವವನ್ನೇ ಕೊಲ್ಲಬಹುದೇ?  ರಮೇಶನನ್ನು ವಕ್ರ ದೃಷ್ಟಿಯಿಂದಲೇ ತುಲನೆ ಮಾಡಿ ತಮ್ಮದೇ ತೀರ್ಮಾನಕ್ಕೆ ಬರುವವರೇ ಹೆಚ್ಚು. ತನ್ನತನವನ್ನೇ ಕಸಿದುಕೊಳ್ಳುವವರ ಜೊತೆ ರಮೇಶ ಹೆಣಗಿದ್ದಾದರೂ ಹೇಗೆ? ಪ್ರೀತಿಸಿದ ಹೆಣ್ಣಿನ ಹಂಗಿನಲ್ಲಿ ಸಂಸಾರ ನಡೆಸುವುದಾದರೂ ಹೇಗೆ? ಹಿಂಸೆಯಿಂದ ಹೊರಬಂದರೆ ಸ್ವಾತಂತ್ರ್ಯ ಹಿಂದಿರುಗುವುದೇ? ಸ್ವಲ್ಪ ದಿವಸ ಕೆಲಸದಲ್ಲಿದ್ದನಂತೆ ಆದರೆ ಅವನ ಮನಸ್ಸಿನ್ನಲ್ಲಾಗುತ್ತಿದ್ದ ಬೇಗುದಿ, ಕೋಪ, ತಾತ್ಸಾರ, ಅಪಮಾನ, ನಿಸ್ಸಹಾಯಕತೆಗೆ ಉತ್ತರ ಬಲ್ಲವರಾರು?  ಅವನ ಅಸ್ತಿತ್ವವೇನು? ವಸುಧ ಜೊತೆ ಅವನ ಮದುವೆ ಆಗಿದ್ದರೆ ಅವನ ಅಸ್ತಿತ್ವ ಉಳಿಯುತ್ತಿತ್ತೇ?  ನಾನು ಅವನ ಆಪ್ತ ಸ್ನೇಹಿತ, ಈ ಎಲ್ಲ ಅಳಿದುಳಿದ ಪ್ರಶ್ನೆಗಳಿಗೆ ಉತ್ತರ ನನಗೆ ಗೊತ್ತಿರಬೇಕಿತ್ತು.   


ತಂದೆ ಜೊತೆ ಅಮೆರಿಕಾಗೆ ವಾಪಸ್ಸು ಬಂದ ನಂತರ ಅವರಿಗೂ ಹೊಸ ಅನುಭವಗಳು.  ಇಲ್ಲಿಯ ಜನರ ಸಾಮಾಜಿಕ ನಿಲುವು, ಧರ್ಮಗಳ ಬಗ್ಗೆ ವಯಕ್ತಿಕ ನಿಲುವು, ರಾಷ್ಟ್ರಪ್ರೇಮ, ಹೀಗೆ ಎಲ್ಲ ವಿಚಾರಗಳಲ್ಲಿ ಅವರ ವಿಭಿನ್ನ ದೃಷ್ಟಿ ಕೇಳಿ ನಾನು  ಸಾಮಾಜಿಕ ಶಾಸ್ತ್ರದಲ್ಲಿ ಒಬ್ಬ ಪ್ರೊಫೆಸ್ಸರ್ ಜೊತೆ ಹೊಸ ಶಿಕ್ಷಾರ್ಥಿಯಾಗಿದ್ದೇನೆ ಎಂದು ಅನಿಸುತ್ತಿತ್ತು.  ತಂದೆಯೇ ಶಿಕ್ಷಕರಾದರೆ ಪ್ರಶ್ನೆ ಕೇಳಲು ಸಂಕೋಚವಿರುವಿದಿಲ್ಲ, ಅಂತೆಯೇ ನನ್ನ ಪ್ರಶ್ನೆಗಳನ್ನು ಅವರ ಮುಂದಿಟ್ಟಾಗ, ಅವರ ಕಣ್ಣಿನ ತೀಕ್ಷ್ಣತೆಯಲ್ಲಿ ‘ಪರವಾಗಿಲ್ಲವೇ, ಇಂಜಿನೀರ್ ಆಗಿ ಸಮಾಜ ಶಾಸ್ತ್ರ, ತತ್ವ ಶಾಸ್ತ್ರಗಳ ಬಗ್ಗೆ ಇಷ್ಟು ತಿಳಿದಿದ್ದಾನೆ ನನ್ನ ಮಗ’ ಎನ್ನುವ ಹೆಮ್ಮೆಯ ಹೊಳಪು ಕಂಡಿತು.

  “ಇದೆ ವಿಚಾರವಾಗಿ ರಮೇಶ ಡೈವೋರ್ಸ್ ಕೋರ್ಟಿಗೆ ಅಲೆದಾಡುತ್ತಿದ್ದಾಗ ನಾನು ಒಂದು ಪ್ರಬಂಧ ಬರೆದಿದ್ದೆ. ವಿಷಯ ನಿನ್ನದೇ ಪ್ರಶ್ನೆ: ಲಿಂಗಾಯತ ಮತದವರು ಹಿಂದೂ ದ್ವೇಷಿಗಳೇ? ಆಗ ನಾನು ಈ ಪ್ರಬಂಧವನ್ನು ಯುನಿವರ್ಸಿಟಿ ಜರ್ನಲ್ ಗಳಿಗೆ ಮುದ್ರಣಕ್ಕೆ ಕಳಿಸಲಿಲ್ಲ.  ಕಾರಣ, ಎಲ್ಲಿ ನನ್ನ ನೇರ ಅಭಿಪ್ರಾಯಗಳು ರಾಜಕೀಯದಲ್ಲಿ ಸಿಲುಕಿ ನನ್ನ ಪ್ರೊಫೆಸರ್ ಹುದ್ದೆಗೆ ಮಾರಕವಾಗುತ್ತೋ ಎನ್ನುವ ಭಯ.  ಅದು ಇನ್ನೂ ನನ್ನ ಕಂಪ್ಯೂಟರ್ನಲ್ಲಿ ಹಾಗೆ ಇದೆ, ಅದನ್ನು ಪ್ರಿಂಟೌಟ್ ತೆಗೆದುಕೊಂಡು ಓದು.” 

15 ಪುಠಗಳ ಪ್ರಬಂಧ, ಓದಲು ಶುರು ಮಾಡಿದೆ. 

ಲಿಂಗಾಯಿತ ಮತದಿಂದ ಹಿಂದೂ ಅಸ್ಥಿತ್ವ ನಾಶವಾಗುತ್ತಿದೆಯೇ? ಈ ನಕಾರಾತ್ಮಕ ಪ್ರಶ್ನೆಯಿಂದಲೇ ಪ್ರಬಂಧವನ್ನು ಪ್ರಾರಂಭಿಸಲು ನನಗೆ ಇಷ್ಟವಿಲ್ಲ.  ಆದರೆ ನನ್ನ ವಾದ ಮತ್ತು ಉತ್ತರ ಅರ್ಥ ಮಾಡಿಕೊಳ್ಳಲು ಬಹಳ ಕ್ಲಿಷ್ಟವಾದದ್ದೇನಲ್ಲ.  ಒಂದು ಪದದ ಉತ್ತರ; ಹೌದು, ಲಿಂಗಾಯಿತ ಮತ ಹಿಂದೂ ಧರ್ಮವನ್ನು ದ್ವೇಷಿಸುತ್ತದೆ.  ಹಿಂದೂ ಧರ್ಮವನ್ನ ಯಾರು ದ್ವೇಷಿಸುವುದಿಲ್ಲ ನೀವೇ ಹೇಳಿ.  ಮುಸ್ಲಿಮರು, ಕ್ರೈಸ್ತರು, ಸಿಖ್ಖರು, ಜೈನರು, ಬೌದ್ಧರು, ಬುಡಕಟ್ಟಿನ ಜನಾಂಗ, ದಲಿತರು, ನಿರೀಶ್ವರವಾದಿಗಳು, ಸಮತಾವಾದಿಗಳು, ತೀವ್ರಗಾಮಿಗಳು, ಹೀಗೆ ಹೇಳುತ್ತಾ ಹೋದರೆ ಪ್ರಪಂಚದ ಮುಕ್ಕಾಲು ಜನಸಂಖ್ಯೆ ಹಿಂದೂ ಧರ್ಮವನ್ನು ದ್ವೇಷಿಸುತ್ತದೆ.  ಇಷ್ಟು ದೊಡ್ಡ ದ್ವೇಷಿಗಳ ಗುಂಪಿರುವಾಗ ಲಿಂಗಾಯಿತರನ್ನು ಅದರಲ್ಲಿ ಏಕೆ ಸೇರಿಸಬಾರದು? ಸೇರಿಸಲೇಬೇಕು.  ಹಿಂದೂ ಧರ್ಮದ ನ್ಯೂನ್ಯತೆಗಳನ್ನು, ವರ್ಣಾಶ್ರಮದ ದೃಷ್ಟಿಕೋನದಿಂದ ವಿಭಜಿಸಿ ಸಾಮಾಜಿಕ ಆಂದೋಲನವನ್ನು, ಸಾಹಿತ್ಯದ ಆಶ್ರಯದಲ್ಲಿ ಎಲ್ಲರಿಗಿಂತ ಮೊದಲು ಪ್ರಾರಂಭಿಸಿದ್ದು ವೀರಶೈವಿಗಳೇ ಅಲ್ಲವೇ.  ಅಷ್ಟೇ ಅಲ್ಲ ಹಿಂದೂ ಧರ್ಮದ ಪ್ರತಿಯೊಂದು ನಂಬಿಕೆಗಳನ್ನು, ಬ್ರಾಹ್ಮಣರನ್ನು ನಿಂದನೆಯ ಕಣ್ಣಿನಲ್ಲೇ ನೋಡಿ ವಚನಗಳ ನಂತರ ವಚನಗಳನ್ನು ಬರೆದವರೂ ಅವರೇ. 

ಹಿಂದೂ ಸಮಾಜದ ಅಂಕು ಡೊಂಕುಗಳನ್ನು ಬಹಿರಂಗ ಪಡಿಸುವುದರ ಜೊತೆಗೆ ವಾದವಿವಾದದಲ್ಲಿ ಜನರ ಗಮನ ಸೆಳದು ತಮ್ಮ ಪರವಹಿಸಲು ಅಥವಾ ಅವರನ್ನು ವಿಚಾರವಂತರನ್ನಾಗಿ ಮಾರ್ಪಡಿಸಲು ಬರೆದ ವಚನಗಳು ಸಾಕಷ್ಟಿವೆ.  ಉದಾಹರಣೆಗೆ 16ನೇ ಶತಮಾನದ ಪರಿವ್ರಾಜಕಾಚಾರ್ಯ ಸರ್ವಜ್ಞ ಬರೆದ ವಚನ:

 

ಚಿತ್ತವಿಲ್ಲದೆ ಗುಡಿಯ ಸುತ್ತಿದೊಡೆ ಫಲವೇನು

ಎತ್ತು ಗಾಣವನು ಹೊತ್ತುತಾ

ನಿತ್ಯದಲಿ ಸುತ್ತಿ ಬಂದಂತೆ ಸರ್ವಜ್ಞ

---- ಸರ್ವಜ್ಞ

ಕೆಲವೊಂದು ಅಪಹಾಸ್ಯ ಅಥವಾ ಅಪನಿಂದನೆಯ ವೈಪರೀತ್ಯ ದೃಷ್ಟಿಯಿಂದ ಬರೆದಂತಹವೂ ಕೂಡ ಇವೆ. ಉದಾಹರಣೆಗೆ ಬಸವಣ್ಣನವರ ವಚನ: 

ಏನಯ್ಯಾ, ವಿಪ್ರರು ನುಡಿದಂತೆ ನಡೆಯರು, ಇದೆಂತಯ್ಯಾ

ತಮಗೊಂದು ಬಟ್ಟೆ, ಶಾಸ್ತ್ರಕೊಂದು ಬಟ್ಟೆ!

ಕೂಡಲಸಂಗಮದೇವಯ್ಯಾ, ಹೊಲೆಯರ ಬಸುರಲ್ಲಿ

ವಿಪ್ರರು ಹುಟ್ಟಿ ಗೋಮಾಂಸ ತಿಂಬರೆಂಬುದಕ್ಕೆ ಇದೆ ದೃಷ್ಟ.

---- ಬಸವಣ್ಣ

ಇಂತಹ ವಚನಗಳಲ್ಲಿ ನಿಂದನೆಯ ನಿರ್ಧಿಷ್ಟ ಗುರಿ ಕಂಡು ಬರುತ್ತದೆ.  ಹಲವಾರು ವಚನಗಳು ಪ್ರಾಣಿಗಳ ಪ್ರವೃತ್ತಿಯನ್ನು ಉಪಮಾಲಂಕಾರವಾಗಿ ಬಳಸಿಕೊಂಡು ಮತಾಚರಣೆಯ ನಿಯಮಗಳನ್ನು ಖಂಡಿಸಲು ಸಫಲವಾಗಿವೆ.

ಕತ್ತೆ ಬತ್ತಲೆ ಇದ್ದಡೆ ನೆಟ್ಟನೆ ನಿರ್ವಾಣಿಯೆ?

ಹುಚ್ಚ ಹೊಟ್ಟೆಗೆ ಕಾಣದೆ, ಎತ್ತಲೆಂದರಿಯದೆ,

ಮತ್ರ್ಯದೊಳಗಿರ್ದಡೆ ನಿಶ್ಚಟ ವಿರಕ್ತನೆ?

ಇಂತಿವರ ತತ್ತುಗೊತ್ತ ಬಲ್ಲವಂಗೆ ಇನ್ನೆತ್ತಣ ಭಕ್ತಿ ವಿರಕ್ತಿಯೊ,

ನಿಃಕಳಂಕ ಮಲ್ಲಿಕಾರ್ಜುನಾ?

----- ಮೋಳಿಗೆ ಮಾರಯ್ಯ

ಇಷ್ಟು ಓದಿದ ಮೇಲೆ ನನ್ನ ಮನಸ್ಸಿನಲ್ಲಿ ಆಗುತ್ತಿದ್ದ ಪ್ರತಿಕ್ರಿಯೆಯೇ ಬೇರೆ: ಇವೆಲ್ಲವೂ 12ನೇ ಶತಮಾನದಲ್ಲಿ ಆದ ಸಾಮಾಜಿಕ ಅಶಾಂತಿಗಳು.  ಅದಕ್ಕೂ 21ನೇ ಶತಮಾನದಲ್ಲಿ ಈಗ ಆಗುತ್ತಿರುವ ಹಿಂದೂ ಲಿಂಗಾಯತ ಅಶಾಂತಿಗೂ ಏನು ಸಂಬಂಧ?  ಅದಕ್ಕೆ ಉತ್ತರವೋ ಎನ್ನುವಂತೆ ಮುಂದುವರಿಸಿದ್ದರು: 

ಹನ್ನೆರಡನೇ ಶತಮಾನದಲ್ಲಿ ಹಿಂದೂ ಧರ್ಮ ಕ್ಷೀಣಿಸುತ್ತಿದ್ದು ನಿಜ. ವೀರಶೈವ ಮತ ಸ್ಥಾಪನೆಯಾದದ್ದೂ ಅದೇ ಕಾಲಾವಧಿಯಲ್ಲಿ.  ಶೂನ್ಯಸಂಪಾದನೆ, ವಚನಗಳು ಮತ್ತಿತರ ಆಧ್ಯಾತ್ಮ ಚಿಂತನೆ ಪರ್ಯವಸಾನಗೊಂಡು ಬಸವಣ್ಣನವರ ಅನುಭವ ಮಂಟಪದ ತಳಹದಿಯಲ್ಲಿ ಹೊಸ ಸಮಾಜದ ನಿರ್ಮಾಣವಾಯಿತು.  36 ತತ್ವಗಳನ್ನು ಆಗಮಗಳಿಂದ ಅಳವಡಿಸಿಕೊಂಡು  ಶೂನ್ಯ ಸಂಪಾದನೆ ಜ್ಞಾನದ ಮಾಧ್ಯಮವಾದರೆ ವಚನಗಳು ಜನ ಸಾಮಾನ್ಯರ ಮತಾಚರಣೆಗೆ ನಾಂದಿಯಾದವು.  ಇಷ್ಟಲಿಂಗ ಪೂಜೆ, ಜಂಗಮರಿಂದ ದೀಕ್ಷೆ ಮತ್ತು ಪಂಚಾಚರಗಳು ಎಲ್ಲ ಸೇರಿ ಜನರು ಈ ಮತವನ್ನು ಸ್ವೀಕಾರ ಮಾಡಲು ಸಹಾಯವಾಯಿತು. ಶಂಕರಾಚಾರ್ಯರ ಅನುಯಾಯಿಗಳು ಅನುಕರಿಸಿದ ರೀತಿಯಲ್ಲಿ ವೀರಶೈವರು ಕೂಡ ತಮ್ಮದೇ ಆದ ಮಠಗಳನ್ನು ಸ್ಥಾಪಿಸಿ ಈ ಮತಾಚರಣೆಯ ಬಗ್ಗೆ ಪಾರುಪತ್ಯ ವಹಿಸಿಕೊಂಡರು.  ಶಿವಯೋಗವೇ ಅತಿ ಶ್ರೇಷ್ಠ ಯೋಗಾಚರಣೆ ಮತ್ತು ಇಷ್ಟಲಿಂಗವೇ ಜೀವಾತ್ಮ ಪರಮಾತ್ಮಗಳ ಮಿಲನವೆಂದು ಭೋದಿಸಿ ನಿಯತ ಕ್ರಮಗಳನ್ನು ಪಾಲಿಸಲು ಆದೇಶ ನೀಡಿದರು.  ಒಟ್ಟಿನಲ್ಲಿ ಜೈನ, ಹಿಂದೂ ಮುಸ್ಲಿಂ ಮತ್ತು ಬೌದ್ಧ  ಮತಗಳ ದಿನ ನಿತ್ಯದ ರೂಡಿಗಳನ್ನೇ ವೀರಶೈವರು ಕಲಸುಮಲಸು ರೂಪ ಕೊಟ್ಟು ತಮ್ಮದಾಗಿಸಿಕೊಂಡರು.  ಅಸತ್ಯ, ಅವಿವೇಕ, ನಾಸ್ತಿಕತೆ ಮತ್ತು ಮೂಡ ನಂಬಿಕೆಗಳನ್ನು ವೀರಶೈವರು ಖಂಡಿಸಿದರೆ ಹೊರತು ಹಿಂದೂ ಧರ್ಮದ ಮೇಲೆ ಮುಸ್ಲಿಮರಂತೆ ದ್ವೇಷ ಸಾಧಿಸುವ, ಕತ್ತಿ ಮಸೆಯುವ ಆದೇಶ ನೀಡಲಿಲ್ಲ.  ಹಿಂದೂ ಧರ್ಮದ ಸೌಹಾರ್ದತೆಯೇ ವೀರಶೈವ ಮತದ  ಏಳಿಗೆಗೂ ಕಾರಣವಾಗಿತ್ತು.

ಆದರೆ 21ನೇ ಶತಮಾನದಲ್ಲಿ ಈ ಎಲ್ಲ ಧಾರ್ಮಿಕ ತಳಪಾಯಗಳು ಸಮಾಜ ಹೊರೆಸಿದ ಭಾರವನ್ನು ತಡೆಯಲಾದವೋ ಎನ್ನುವಂತೆ ಒಂದೊಂದಾಗಿ ಕುಸಿಯತೊಡಗಿವೆ. ಹಿಂದೂ ಸನಾತನ ಧರ್ಮವನ್ನು ಬಿಟ್ಟರೆ ಮಿಕ್ಕೆಲ್ಲ ಮತಗಳ, ಧರ್ಮಗಳ ಸಮಸ್ಯೆ ಉಧ್ಭವವಾಗಿರುವುದೇ ಮತಾಂತರದಿಂದ. ಇಸ್ಲಾಮ್ ಮತ್ತು ಕ್ರೈಸ್ತ ಮತಾಂತರಗಳ ಹಾವಳಿಯನ್ನು, ರಾಜಕೀಯವನ್ನು ವರ್ಣಿಸುತ್ತ ಹೋದರೆ ದೊಡ್ಡ ಪುಸ್ತಕವೇ ಆಗುತ್ತದೆ.  ಆದರೆ ಲಿಂಗಾಯತ ಮತದ ಹಿಂದೂ ದ್ವೇಷಕ್ಕೆ ಕಾರಣ ಹುಡುಕುವುದು ಸುಲಭ. ಹಿಂದೂಗಳ ನಾಲ್ಕು ವರ್ಣಾಶ್ರಮಗಳಲ್ಲಿ ಲಿಂಗಾಯಿತರು ಆಗಬಯಸಿದ್ದು ಬ್ರಾಹ್ಮಣರನ್ನು.  ತಾವೂ ಅವರಂತೆಯೇ ಜ್ಞಾನಾರ್ಜನೆಯಲ್ಲಿ ನಿರತರಾಗಬೇಕು, ಸಂಕೃತ ಕಲಿತು ಸುಸಂಕೃತರಾಗಬೇಕು, ಶಿವ ಭಕ್ತರಲ್ಲಿ ಶ್ರೇಷ್ಠ ಭಕ್ತರಾಗಬೇಕು, ಶಾಖಾಹಾರಿಗಳಾಗಬೇಕು, ಹೀಗೆ ಎಲ್ಲ ವಿಷಯಗಳಲ್ಲೂ ಬ್ರಾಹ್ಮಣರಂತೆ ಉತ್ತಮ ಸ್ಥಾನದಲ್ಲಿರಬೇಕು.  ಏಕೆಂದರೆ ಅವರು ಅನುಕರಣೀಯ ಗುಣಗಳನ್ನು ಉಳ್ಳವರು ಮತ್ತು ತಮ್ಮ ಸಮೂಹಕ್ಕೆ ಹತ್ತಿರವಾದ ಶಿವನನ್ನೇ ಅವರೂ ಕೂಡ ಲಿಂಗ ರೂಪದಲ್ಲಿ ಪೂಜಿಸುವರೆಂಬ ಅಂಶಗಳು ಲಿಂಗಾಯಿತರಿಗೆ ಆಪ್ತವೆನಿಸಿತು.  ಆದರೆ ಆ ಆಶಯ 19 ರಿಂದ 21ನೇ ಶತಮಾನದ ವಾಸ್ತವದಲ್ಲಿ ರೂಪಗೊಂಡದ್ದೇ ಬೇರೆ.  ವೀರಶೈವ-ಲಿಂಗಾಯಿತ ಎನ್ನುವ ಎರಡು ಸಮೂಹಗಳೇ ಹುಟ್ಟಿ ವೀರಶೈವರು ತಾವು ಹಿಂದೂಗಳ ಮತ್ತೊಂದು ಪಂಗಡವೆಂದು ಘೋಷಿಸಿಕೊಂಡು ಲಿಂಗಾಯಿತರನ್ನು ಮತ್ತು ಅದರೊಳಗೆ ಭಾಗಿಯಾದ ಸುಮಾರು 92 ಒಳಪಂಗಡದವರನ್ನು ಬೇರೆಯೇ ವೀರಶೈವ ಗುಂಪೆಂದು ತಿಕ್ಕಾಟ ಶುರುವಾಗಿದೆ.  ಈ 92 ಒಳಪಂಗಡದಲ್ಲಿ ದಲಿತರು, ಮಾದಿಗರು, ಎಲ್ಲರೂ ಸೇರಿರುವುದು ಲಿಂಗಾಯಿತರಿಗೆ ಒಂದು ಬಗೆಹರಿಯದ ರಾಜಕೀಯ ಸಮಸ್ಯೆ ಆಗಿದೆ.  ವೀರಶೈವರ ಹಿಂದೂ ಧರ್ಮದ ಆಲಿಂಗನ ಲಿಂಗಾಯಿತರಿಗೆ ಮತ್ತಷ್ಟು ಹಿಂದುಗಳ ಮೇಲಿನ ದ್ವೇಷಕ್ಕೆ ಕಾರಣವಾಗಿದೆ ಅಂದರೆ ತಪ್ಪೇನಿಲ್ಲ.  ಲಿಂಗಾಯಿತರು ಬ್ರಾಹ್ಮಣ ಪಂಗಡದವರನ್ನು ದ್ವೇಷಿಸಲು ಕಾರಣ ಅವರಿಗೆ ಜ್ಞಾನ ಸಂಪಾದನೆಯಲ್ಲಿ ಮತ್ತು ವಿದ್ಯಾರ್ಜನೆಯಲ್ಲಿ ಸಂಸ್ಕೃತ ಕಲಿಸುವ ಶಾಲೆಗಳಿಗೆ ಬ್ರಾಹ್ಮಣರನ್ನು ಪೈಪೋಟಿ ರೂಪದಲ್ಲೇ ಕಂಡಿದ್ದಾರೆ.  ಸರ್ಕಾರಗಳು ಶಾಲೆಗಳಿಗೆ ಕೊಡುವ ಮುಜರಾಯಿ ಹಣ ಕೂಡ ಒಂದು ಹೆಣಗಾಟದ ಅಂಶವಾಗಿದೆ.  ಬ್ರಾಹ್ಮಣರನ್ನು ಎಷ್ಟು ದ್ವೇಷಿಸುತ್ತಾರೆ ಅನ್ನುವುದಕ್ಕೆ ನಿದರ್ಶನವಾಗಿ ಯಾವ ಲಿಂಗಾಯಿತ ರೈತನಾಗಲಿ, ಉದ್ಯಮಿಯಾಗಲಿ ಬ್ರಾಹ್ಮಣನನ್ನು ಕೆಲಸಕ್ಕೆ ಇಟ್ಟುಕೊಳ್ಳುವುದಿಲ್ಲ.  ಆದರೆ ಮತಾಂತರಿಸಲು ಮುಂದೆ ಬರುತ್ತಾರೆ. ಕ್ರೈಸ್ತ ಮತ್ತು ಮುಸ್ಲಿಮರಂತೆ ಮತಾಂತರವೂ ಕೂಡ ಒಂದೇ ದಿಕ್ಕಿನಲ್ಲಿ ಸಾಗುತ್ತದೆ.  ಹಿಂದೂ ಧರ್ಮದ ಮೂಲಭೂತ ಹಕ್ಕುಗಳಾದ ಮೂರ್ತಿ ಪೂಜೆ, ವ್ರತ, ಉಪವಾಸ, ತೀರ್ಥಯಾತ್ರೆ, ಎಲ್ಲವನ್ನೂ ಬಹಿಷ್ಕರಿಸಿದ ಮತವದು.  ಹಿಂದೂ ರಾಷ್ಟ್ರದಲ್ಲೇ ಈ ನಿಯಮಗಳನ್ನು ಪಾಲಿಸುವ ಸ್ವಾತಂತ್ರ್ಯ ಕೊಡದ ಮತ ದ್ವೇಷವನ್ನು ಮಾತ್ರ ಹರಡಬಲ್ಲದು.  ರಾಜಕೀಯ ಮತ್ತು ಆರ್ಥಿಕ ಸಂಸ್ಥೆಗಳಲ್ಲಿ ಸ್ವಜನಪಕ್ಷಪಾತ, ಹಿಂದೂಗಳನ್ನು ತುಳಿಯುತ್ತಿರುವ ಮತಾಚರಣೆಗಳು ಎಲ್ಲವೂ ದ್ವೇಷದಿಂದಲೇ ಹುಟ್ಟಿದ ವಾಸ್ತವ.  ನಾವು ಹಿಂದೂಗಳೇ ಅಲ್ಲ ಎಂದು ಪ್ರಪಂಚಕ್ಕೆ ಸಾರುವ ಧೋರಣೆ ಬೆಳೆದಿರುವುದು ವಿಷಾದಕರ. 

  10 ಪುಠಗಳಷ್ಟೇ ನಾನು ಓದಿದ್ದು, ಮುಂದಕ್ಕೆ ಓದಲು ಹೋಗಲಿಲ್ಲ.  ನಾನು ಕೇಳಿದ ಪ್ರಶ್ನೆಗಳಿಗೆ ಉತ್ತರ ದೊರಕಿತ್ತು.  ಹಿಂದೂ ದ್ವೇಷಿ, ರಮೇಶನ ಅಸ್ಥಿತ್ವವನ್ನೇ ಕಸಿದುಕೊಂಡ ಮತ ನಮ್ಮ ಅಂಗಳದಲ್ಲೇ ಬೆಳೆಯುತ್ತಿದೆ ಎಂದು ಮನವರಿಕೆ ಆಗಿ ಅವನ ಮೇಲೆ ಅಂದು ಬಂದಿದ್ದ ಕೋಪ ತಾನಾಗಿಯೇ ಶಮನವಾಯಿತು.

ಅದೇಕೋ ರಮೇಶನ ಆತ್ಮಹತ್ಯೆಗೆ ನನ್ನ ಸ್ಪಂದನೆ ತೀರ್ಮಾನದ ಕಟಕಟೆಯಲ್ಲಿ ನಿಂತು ವಿಚ್ಛೇಧನ ಪಡೆಯುವಷ್ಟು ಸುಲಭವಾಗಿರಲಿಲ್ಲ. ತನ್ನ  ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೆಣಗಿ ತಾನೇ ಯಜ್ಞಪಶುವಾದನೆ?  ನನಗೆ ತಿಳಿಯುವ ಮನಸ್ಸಿರಲಿಲ್ಲ. 



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ