ಕನ್ನಡ ಪ್ರಶ್ನಾವಳಿ (ಉತ್ತರಗಳನ್ನು ಕೊನೆಯಲ್ಲಿ ಕೊಟ್ಟಿದೆ)
ರಚನೆ: ರವಿ ಗೋಪಾಲರಾವ್ , ಸ್ಯಾನ್ ಹೋಸೆ, ಕ್ಯಾಲಿಫೋರ್ನಿಯಾ
phone: 408-531-9309
1. ಸಾಮಾನ್ಯ ಅಂಶ:
ರವಿ ಗೋಪಾಲರಾವ್
ಇವೆಲ್ಲವುಗಳ ಮಧ್ಯೆ ಒಂದು ಸಾಮಾನ್ಯ ಅಂಶವಿದೆ. ಅದು ಏನು ಮತ್ತು ಏಕೆ ಎಂದು ಪ್ರತಿ ವಾಕ್ಯದ ಉತ್ತರಕ್ಕೆ ಹೊಂದುವಂತೆ ಬರೆಯಿರಿ.
1.ಏಕಲವ್ಯನ ಪೈಪೋಟಿ
2. ಸಾಗರದ ಅಧಿಪತಿ ಸಾಗರವಿಜ್ಞಾನ ಓದುವ ಬದಲು ಹೃದಯ ರೇಖೆಯಲ್ಲಿ ತಜ್ಞನಂತೆ
3. ನಿಮ್ಮ ಮೃತ್ಯುಪತ್ರಕ್ಕೆ ಇದಿಲ್ಲದಿದ್ದರೆ ನಿರರ್ಥಕವಂತೆ
4. ಆಕಾಶದಲ್ಲಿ ಕೋಟ್ಯಾಂತರ, ಆದರೆ ಇಪ್ಪತ್ತೇಳು ನಕ್ಷತ್ರಗಳಲ್ಲಿ ಇದು ಒಂದಂತೆ
5. ಕವಿಗಳ ಊಹೆ: ಆನೆಯ ಸೊಂಡಿಲು ಹೀಗೂ ಕಂಡಿತು ಅವರಿಗೆ
6. ವಿಪ್ರರ ಊಟದ ಮುಂಚಿನ ಈ ಅಭ್ಯಾಸ ವೇದಕಾಲದದ್ದಂತೆ.
7. ಕವಿ ಕಾಗದದಲ್ಲಿ ಬರೆದದ್ದು ಶಿಲ್ಪಿ ಕಲ್ಲಿನಲ್ಲಿ ಕೆತ್ತಿದ್ದು ಎರಡೂ ಒಂದೇ ರೀತಿಯಂತೆ
8. ಥ್ಯಾಂಕ್ ಯು ಬದಲು ನಮಸ್ತೆ ಅಂತ ಹೇಳಿದರೆ ವಾಸಿ
9. ಕಾರು ಮೆಕಾನಿಕ್ ಆದರೇನು ಸರ್ಜನ್ ಆದರೇನು ಕೆಲಸ ಮಾಡುವರ ಸಹಜ ಸಾಮರ್ಥ್ಯ ಬೇಕು.
10. ಒಲಿಂಪಿಕ್ ಸ್ಪರ್ಧೆಯಲ್ಲಿ ಓಡುವಾಗ ಇದರ ತಾಳತಪ್ಪಿದರೆ ಸೋಲು ಖಂಡಿತ
__________
2. ಇಪ್ಪತ್ತೊಂದನೇ ಶತಮಾನದ ಮಾನಸೀ ಆಟ
ರವಿ ಗೋಪಾಲರಾವ್
ಇದೊಂದು 21ನೇ ಶತಮಾನದಲ್ಲಿ ಆಡಲು ಹೊಸ ಆಟ, ಆದರೆ ಇದನ್ನು ನಮ್ಮ ಪೂರ್ವಿಕರು ಚತುಶ್ಷಷ್ಠಿ ಕಲೆಗಳಲ್ಲಿ ಒಂದು ಎಂದು ಪರಿಗಣಿಸಿದ್ದ್ದರು. ಇದಕ್ಕೆ ಹೆಸರು ಮಾನಸೀ ಎಂದು. ಅನುಸ್ವಾರ ವಿಸರ್ಗಗಳನ್ನು ಯಥಾವತ್ತಾಗಿ ಬರೆದು ಉಳಿದ ಅಕ್ಷರಗಳೆಡೆಯಲ್ಲಿ ಕೇವಲ ಅವುಗಳ ತಲೆಕಟ್ಟು ಕೊಂಬು ಇತ್ಯಾದಿ ಚಿಹ್ನೆಗಳನ್ನು ತೋರಿಸಿ ಒಬ್ಬ ಶ್ಲೋಕ ಅಥವಾ ಇನ್ನೇನಾದರೂ ಬರೆಯುತ್ತಾನೆ. ಇನ್ನೊಬ್ಬ ಆಟಗಾರ ಆ ಚಿಹ್ನೆಗಳಿರುವೆಡೆಯಲ್ಲಿ ಉಚಿತವಾದ ಅಕ್ಷರಗಳನ್ನು ಪೂರ್ತಿಯಾಗಿ ಬರೆಯಬೇಕು.
ಉದಾಹರಣೆಗೆ:
ಾ. ಾ ಜ ು ಾ ್ (ನಟ);
ಇದಕ್ಕೆ ಸರಿಯಾದ ಉತ್ತರ: ಡಾ. ರಾ ಜ ಕು ಮಾ ರ್
ಆಡಲು ಸುಲಭವಾಗಲಿ ಎಂದು ಇಲ್ಲಿ ನಟ ಎಂದು ಸುಳಿವು ಕೊಡಲಾಗಿದೆ. ಆದರೆ ಹಿಂದಿನ ಕಾಲದಲ್ಲಿ ಯಾವ ಸುಳಿವು ಕೊಡುತ್ತಿರಲಿಲ್ಲ. ನಾನು ಕೆಲವೊಂದಕ್ಕೆ ಸುಳಿವು ಕೊಟ್ಟಿದ್ದೇನೆ.
1. ಒಂ ು ಕ ಣ್ಣಿ ೆ ೆ ಣ್ಣೆ ಮ ತ್ತೂಂ ು ಕ ಣ್ಣಿ ೆ ು ಣ್ಣ ಹ ಚ್ಚು (ನುಡಿಗಟ್ಟು)
2. ೈ ಾ ರ ತ ಜ ನ ಿ ಯ ತ ು ಾ ೆ
3. ಉ ದ ಯ ಾ ಗ ಿ ನ ಮ್ಮ ಕ ನ್ನ ಡ ಾ ು (ಕವಿತೆ )
4. ಒ ಲ ೆ ೀ ವ ನ ಾ ಾ ರ
ಒ ಲ ೇ ಮ ೆ ಯ ದ ಮ ಮ ಾ ರ
5. ಾಿ ಾ ಲ ಡೂಂು (ಗಾದೆ)
6. ೈ ೆ ಸ ಾ ದ ೆ ಾ ಿ ಮೂ ಸ ು
7. ೋಿ ಮೂ ಸ ು ತಿಂ ು ೇೆ ಾ ಯಿ ೆ ಒ ರ ಿ ತಂ ೆ (ಗಾದೆ)
8. ಿ. ಿ. ಿ ಯ ವ ರ ಮಂ ು ಿ ಮ್ಮ ನ ಕ ಗ್ಗ (ಪುಸ್ತಕ)
9. ೋ ು ಜ ಲ ಾ ತ ದ ಾ ಜ ಾ ಣಿ ಾ ೆ ್ ೋ ರ ್ (ಪ್ರವಾಸಿ ಸ್ಥಳ )
10. ಅ ತ್ತೆ ೊಂ ು ಾ ಲ ಸೂ ೆ ೊಂ ು ಾ ಲ
_______________
3. ಕ್ಷ ಅಕ್ಷರ ಊಹಿಸಿ.
ರವಿ ಗೋಪಾಲರಾವ್
ಈ ಎಲ್ಲ ವಾಕ್ಯಗಳಿಗೂ ಬರುವ ಉತ್ತರದಲ್ಲಿ ಕ್ಷ ಅಕ್ಷರ ಅವಿತುಕೊಂಡಿದೆ. ಅವುಗಳನ್ನು ಪತ್ತೆಹಚ್ಚಿ.
1. ಮನದೊಳಗಿದ್ದ ಕಾಮುಕ ಭಾವನೆಗಳೆನ್ನು ಯಾರಿಗೂ ಹೇಳಲಾಗದೆ ಅವನು ಹುಚ್ಚನಾಗಿದ್ದ
2. ನ್ಯಾಯಾಲದ ಕಟಕಟೆಯಲ್ಲಿ ನಿಂತ ಆ ವ್ಯಕ್ತಿಯನ್ನು ಎಲ್ಲೋ ನೋಡಿದ ನೆನಪು.
3. ಈ ರಾಜಮನೆತನದ ವಂಶಸ್ಥ ಒಬ್ಬ ಹೆಂಡತಿಯನ್ನೇ ಮಾರಿದನಂತೆ, ಮತ್ತೊಬ್ಬ ಕಾಡಿಗಟ್ಟಿದನಂತೆ, ನಿರ್ದಯಿಗಳು.
4. ತಾಯಿಯೋರ್ವಳು ಒಬ್ಬ ಮಗನನ್ನು ಉಳಿಸಲು ಮತ್ತೊಬ್ಬನಿಂದ ಮೋಸದಲ್ಲಿ ಕಸೆದುಕೊಂಡಳಂತೆ.
5. ಅವನು ಹಿಂದೂಧರ್ಮದ ನಿಯಮಗಳನ್ನೇ ಪರಿಪಾಲಿಸುವನೆಂದು ಶಪಥ ಮಾಡಿ, ಚಿಕ್ಕಂದಿನಲ್ಲಿಯೇ ಮಠ ಸೇರಿದ.
6. ಯಾರಿಗೆ ಗೊತ್ತು ಆಕಾರವಿಲ್ಲದ ಗಾಳಿ ಹೇಗೆ ರವಿ ಕಿರಣದ ಜೊತೆ ಒಳಗೆ ಬರುತ್ತೆ ಅಂತ?
7. ನಾವು ಕಟ್ಟಿದ್ದ ವಿಶ್ವವಿದ್ಯಾಲಯ ಈಗ ನಮ್ಮ ಪಕ್ಕದದೇಶದಲ್ಲಿ ಮುರಿದು ಬಿದ್ದಿದೆ ಅಂತ ಚರಿತ್ರಕಾರರು ಹೇಳ್ತಾರೆ.
8. ಆ ಕಾಂಗ್ರೆಸ್ ಪಾರ್ಟಿಗೂ ಶ್ಯಾಮನಿಗೂ, ಪಿತೃಗಳಿಗೂ, ಚಂದ್ರನ ಸುತ್ತುವಿಕೆಗೂ ಏನು ಸಂಭಂದ ಅಂತ ತಿಳಿಸಬಾರದೇ?
9. ಸಂಸ್ಕೃತದಲ್ಲಿ ಮಹಾಕಾವ್ಯ ಬರೆದರೂ ಪಾಪ, ಈ ಕನ್ನಡದವರು ಮರಾಮರಾಮ ಅಂತ ಜಪ ಮಾತ್ರ ಮಾಡ್ದ ಅಂತಾರೆ.
10. ನಿಜಸ್ಥಿತಿಯಲ್ಲಿ ಕಂಡ ಆ ಆಗುಂತಕ ಯಾರು ಅಂತ ಅರ್ಥವಾಗೋದರಲ್ಲಿ ಮಂಗಮಾಯವಾಗಿ ಬರಿ ಮನಸ್ಸಿನಲ್ಲೇ ಉಳಿದ.
11. ಕೆಂಪು ದಾರ ಕಟ್ಟಿದರೇನು, ಬೆನ್ನಿನಮೇಲೆ ಹಾಲುಎರೆದರೇನು, ನಮ್ಮ ಸಂಪ್ರದಾಯ ಬಿಡಲು ಸಾಧ್ಯವೇ?
12. ಹುಡುಗಿ ತುಂಬಾ ಸ್ಮಾರ್ಟ್ ಅಂತ ಆ ಸ್ಮಾರ್ಥರ ಹುಡುಗ ಮದುವೆಗೆ ಒಪ್ಪಿಕೊಳ್ಳಲಿಲ್ಲವಂತೆ.
13. ಆ ಕೊಲೆಗಾರ ಮಾಡಿದ ಪಾಪಗಳನ್ನು ದೇವರು ಮನ್ನಿಸಿದರೂ, ಕಾರಾಗೃಹದಲಿ ಅವನ ಸಾನ್ನಿಧ್ಯಸಿಗುವುದೇ?
14. ವಟುವಾದಾಗ ಹೊಟ್ಟೆಗಾಗಿ ಅನ್ನ ಬೇಡಿದ, ದೊಡ್ಡವನಾದ ಮೇಲೆ ಹೆಣ್ಣನ್ನು ಕಂಡು?
15. ಅಂಬುಧಿಯೊಳು ಹರಿ ಅವತರಿಸದ ಮೇಲೆ ಯುಗಗಳೇ ಕಾಯಬೇಕಾಯಿತಂತೆ ಸೋಮಸುಂದರ ಇವಳನ್ನು ವರಿಸಲು.
16. ಮಾರೀಚ ಆದಿಶೇಷನ ನಾಮೋಚ್ಚಾರಣೆಯಿಂದಲೇ ಮುಕ್ತಿ ಪಡೆಯಬಹುದಿತ್ತೆಂದು ವಾಲ್ಮೀಕಿಗೆ ಏಕೆ ಹೊಳೆಯಲಿಲ್ಲ.
17. ಅಲ್ಲ ಉದ್ದಿನ್ ಗವಿಯೊಳಗೆ ಹೋದರೂ ವಜ್ರವೈಡೂರ್ಯವನ್ನು ಕಾವಲು ಕಾಯುತ್ತಿತ್ತು ಹಾವೊಂದು.
18. ಕೀವು ರಕ್ತಗಳಿಂದ ಕೂಡಿದ ಗುಳ್ಳೆಯನ್ನು ನೋಡಿದ ಮೇಲೆ ವ್ಯಾಸರಿಗೆ ಸ್ಫೂರ್ತಿ ಬಂದಿರಬೇಕು ಈ ಕರ್ಮಕಾಂಡಕ್ಕೆ ಹೆಸರಿಡಲು
19. ಜ್ಞಾನ ದಾನ ಮಾಡುವುದರ ಜೊತೆಗೆ ದಂಡನೆಯನ್ನು ಕೊಡದಿದ್ದರೆ ನೀನು ಮುಟ್ಟಾಳ ಆಗಿಬಿಡುತ್ತಿದ್ದೆ.
20. ನ್ಯಾಯಾಧೀಶರನ್ನು ನೋಡಲು ಚಪ್ರಾಸಿಯೇ ಬಿಡದಿದ್ದರೆ ಅದೆಂತ ನ್ಯಾಯ ಮಾರಾಯ್ರೆ ಅಂತ ಮರುಗಬೇಡಿ. ಕೊಟ್ಟುಬಿಡಿ.
___________
4. ಹು ಪದ ಊಹಿಸಿ:
ರವಿ ಗೋಪಾಲರಾವ್
ಈ ಎಲ್ಲ ಹೇಳಿಕೆ ಅಥವಾ ವಾಕ್ಯಗಳಿಗೆ ಉತ್ತರ ಹು ಅಕ್ಷರದಿಂದ ಶುರುವಾಗುತ್ತದೆ: ಪದಗಳು ಯಾವುದೆಂದು ಊಹಿಸಿ.
1. ಈಗ ಅಜ್ಜ ಅಜ್ಜಿಯರಾದರೇನಂತೆ, ಅವರೂ ಒಂದು ಕಾಲದಲ್ಲಿ ಈ ಎಳೆವಯಸ್ಸಿನವರಾಗಿದ್ದರು.
2. ಈ ದಿನ ಶಶಿಧರನ ಮುಖ ಪಾರ್ವತಿಗೂ ಕಾಣುವುದಿಲ್ಲ
3. ಚಳಿಗಾಲದಲ್ಲಿ ದೋಸೆ ಹಿಟ್ಟು ಈ ಕಾರಣಕ್ಕೆ ಚೆನ್ನಾಗಿ ಆಗುತ್ತಿಲ್ಲ ಎಂದು ದೂರಿದಳು ಹೆಂಡತಿ.
4. ಅಮ್ಮ ಮಾಡಿದ ಆ ಎಸರು ಮತ್ತು ರಾಗಿ ಮುದ್ದೆ ಬಲು ರುಚಿಯಾಗಿತ್ತು.
5. ಈ ಸುಗ್ಗಿ ಹಬ್ಬದಾಗ ಆ ಕೊಡಗಿನ ಜನ ಅದೆಷ್ಟು ಚಂದ ಕಾಣ್ತಾರ
6. ಇದು ಇಲ್ಲದೆ ಹೈದರ್ ಆಲಿ ಆಸ್ಥಾನದೊಳಗೆ ಟೀಪು ಸುಲ್ತಾನ ಕೂಡ ಒಳಗೆ ಹೋಗಲಿಕ್ಕೆ ಆಗ್ತಿರಲಿಲ್ಲವಂತೆ
7. ಮನೆಯಲ್ಲಿ ಕೊಪ್ಪರಿಗೆಯಷ್ಟು ತೆಂಗಿನ್ಕಾಯಿದ್ದರೂ, ಗರ್ಭಿಣಿ ಹೆಂಡ್ತಿಗೆ ಈ ಮರದ ಕಾಯಿ ಬೇಕೇಬೇಕಂತೆ.
8. ಗರತಿ ತನ್ನ ಕಂದನ್ನ ನೋಡ್ತಾ ಇದು ಬೇವಿನಎಸಳಂಗೈತೆ ಎಂದು ಉಬ್ಬಿ ಹಾಡ್ಲಿಕ್ಕ ಶುರುಮಾಡಿದಳಂತೆ
9. ಆ ಚಿಳ್ಳೆಕೇತ ಮಾರ ಏನ್ ಬಣ್ಣ ಹಚ್ಚಿಕೊಂಡರೂ ಬೆಕ್ಕಿನಮರಿಹಂಗ ಕಾಣ್ತಿದ್ದ ಆ ವೇಷ್ದ್ಯಾಗ.
10. ಅದೆಷ್ಟು ಬೀಡು ಆ ಜಾತ್ರಿಯಲ್ಲಿ ಅಂದರೆ ಅವನಿಗೆ ಮೈ ಪರಚಿಕೊಳ್ಳುವಷ್ಟು ಚಡಪಡಿಕೆ ಆಗಿತ್ತು
______________
5. ದೇವರ ಹೆಸರುಗಳು
ರವಿ ಗೋಪಾಲರಾವ್
ದೇವನೊಬ್ಬ ನಾಮ ಹಲವು. ಆದರೆ ಪ್ರತಿಯೊಬ್ಬ ದೇವರಿಗೂ ಸಹಸ್ರಾರು ಹೆಸರುಗಳು. ಕೆಳಗೆ ನಮಗೆ ಸಾಮಾನ್ಯವಾಗಿ ಗೊತ್ತಿರುವ ದೇವರುಗಳ ಬೇರೊಂದು ಹೆಸರಿಗೆ ಸುಳಿವು ಕೊಟ್ಟಿದೆ. ಸುಳಿವಿನ ಜೊತೆಗೆ ಅಡ್ಡಾದಿಡ್ಡಿಯಾಗಿ ಉತ್ತರ ಕೊಟ್ಟಿದೆ. ಸುಳಿವು ನೋಡಿಕೊಂಡು ಆ ಅಡ್ಡಾದಿಡ್ಡಿಯಾದ ಹೆಸರನ್ನು ಸರಿ ಮಾಡಿ ಮತ್ತು ಆ ದೇವರಿಗೆ ಇರುವ ಸಾಮಾನ್ಯ ಹೆಸರನ್ನು ಬರೆಯಿರಿ. ಹೆಸರಿನ ಅರ್ಥ ಗೊತ್ತಿದ್ದರೆ ಅದನ್ನು ತಿಳಿಸಿ.
ಉದಾ: ೧. ಇವನು ಗಣೇಶನ ಅಪ್ಪನು ಹೌದು ಷಣ್ಮುಖನ ಅಮ್ಮನೂ ಹೌದು. ರ ನಾ ರ್ಧ ರೀ ಶ್ವ ಅ
ಉತ್ತರ: ಅರ್ಧನಾರೀಶ್ವರ (ಶಿವ) [ಶಿವ ಪಾರ್ವತಿ ಒಂದೇ ದೇಹದಲ್ಲಿ ಇರುವುದರಿಂದ ಅರ್ಧನಾರೀಶ್ವರ]
1. ಕಾಡ್ಗಿಚ್ಚು ಮನುಷ್ಯರಿಗೂ ಪ್ರಾಣಿಗಳಿಗೂ ಶತೃ ಆದರೆ ಈ ಶತೃವಿಗೆ ಗೆಳೆಯನಂತೆ ಇವನು: ಖ ಗ್ನಿ ಅ ಸ
2. ಪರ್ವತನ ಅಳಿಯನಾದ ಮಾತ್ರಕ್ಕೆ ತನ್ನ ಹೆಸರನ್ನು ಈ ರೀತಿ ಬದಲಾಯಿಸಿ ಕೊಂಡಿರುವುದನ್ನು ನೋಡಿದರೆ ಹೆಂಡತಿಯ ಮೇಲೆ ತುಂಬಾ ಪ್ರೀತಿಯಿರಬೇಕು ಇವನಿಗೆ: ಗ್ರ ಅ ಶ ಜೇ
3. ಎರಡೇ ಅಕ್ಷರದ ಹೆಸರಿನಿಂದ ಪರಿಚಯವಿದ್ದರೂ, ಮತ್ತೊಬ್ಬ ಕಾಮುಕ ದೇವರನ್ನು ಕೊಂದವನು ಎಂದು ಇಷ್ಟು ಉದ್ದದ ಹೆಸರು ಇವನಿಗೆ: ಕ ಜ ಅಂ ನ್ಮಾಂ ತ ಗ
4. ಎಲ್ಲರಂತೆ ಇವನಿಗೂ ಎರಡು ಕಣ್ಣು, ಮತ್ತೊಂದು ಕಣ್ತೆರೆದರೆ ಎಲ್ಲವೂ ಭಸ್ಮ : ಗ್ನಿ ನ ನ ಅ ಯ
5. ಅರ್ಜುನನ ತಂದೆ ಇವನಂತೆ, ಹಾಗಿದ್ದರೆ ಇವನು ದೇವರ ಊರಿಗೆ ಮುಖ್ಯಸ್ಥ: ತಿ ಅ ರ ಪ ಮ
6. ನೀರಿನಲ್ಲಿ ಅಥವಾ ತಾವರೆಯಲ್ಲಿ ಮನೆಮಾಡಿರುವವಳಂತೆ ಈ ದೇವತೆ: ನಿ ಬ್ಜ ಸಿ ವಾ ಅ
7. ಎಲ್ಲ ದೇವರುಗಳನ್ನು ಹೆಚ್ಚಾಗಿ ನೀಲಿ ಬಣ್ಣದಲ್ಲಿ ಚಿತ್ರಿಸಿದ್ದರೂ , ಇವನನ್ನು ಮಾತ್ರ ಜ್ವಾಲೆಯ ಬಣ್ಣದಲ್ಲಿ ಕೂಡ ವರ್ಣಿಸಿದ್ದಾರೆ ನಮ್ಮ ಕವಿಗಳು: ಗ್ನಿ ರ್ಣ ಅ ವ
8. ತುಂಬಾ ಊಹಾಶಕ್ತಿಯಿರಬೇಕು ನಮ್ಮ ಪುರಾಣ ಬರೆದವರಿಗೆ ಇಲ್ಲದಿದ್ದರೆ ಎತ್ತರದ ಶಿಖರ ಇವಳ ತಂದೆ ಆಗಲು ಸಾಧ್ಯವಿತ್ತೇ?: ಗ ತೆ ಜಾ ಅ
9. ನಾಲ್ಕು ದಿಕ್ಕಿನಲ್ಲಿ ನಾಲ್ಕು ತಲೆ, ನರೆತ ಕೂದಲು, ಗಡ್ಡ, ಆದರೂ ಇವನಿಗೆ ಚೆಲುವರಲ್ಲಿ ಚೆಲುವ ಮಗನಂತೆ: ಕ ಜ ಅಂ ನ ಗ
10. ಉದರದಿಂದ ತಾವರೆಯ ಬಳ್ಳಿ, ಆ ತಾವರೆಯೊಳಗೆ ಕುಳಿತ ಒಬ್ಬ ದೇವತೆ, ಆದರೆ ಎಲ್ಲರಂತೆ ನೆಡೆಯಲು ಸಾಧ್ಯವೇ ಇವನಿಗೆ?: ಧ ಬು ರ ಅಂ ಜೋ
11. ಎಲ್ಲರಿಗಿಂತ ಹೆಚ್ಚು ಐಶ್ವರ್ಯ ಇರುವುದಂತೆ ಈ ಟೊಣಪನ ಬಳಿ, ಆದರೆ ಎಲ್ಲರು ಪೂಜಿಸುವ ದೇವ ಇವನ ಗೆಳೆಯನಂತೆ:
ನಾ ಖ ಅ ಥ ರ್ಥ ಸ
12. ಕಮಲದಂತ ಕಣ್ಣುವುಳ್ಳವನಂತೆ ಇವನು, ಇಲ್ಲದಿದ್ದರೆ ಹದಿನಾರು ಸಾವಿರ ಹೆಂಗೆಳೆಯರು ಇವನ ಸ್ನೇಹ ಬಯಸುತ್ತಿದ್ದರೆ?:
ಕ್ಷ ಅಂ ಯ ಜಾ ತಾ ಬು
13. ಹಾವು, ಹಗ್ಗದಂತ ಜಟೆ, ಚರ್ಮದ ಉಡುಗೆ, ಇವೆಲ್ಲವೂ ಮೈಮೇಲೆ ಇದ್ದರೂ ಸಾಲದು ಎನ್ನುವಂತೆ ತಲೆ ಮೇಲೆ ಅಷ್ಟು ಭಾರದ ಇನ್ನೊಂದು ಉಪಗ್ರಹ ಕೂಡ ಬೇಕಿತ್ತೇ ಇವನಿಗೆ?: ರ್ಧ ಚೂ ಚಂ ಅ ದ್ರಾ ಡ
14. ಶಿವ ಧನಸ್ಸನ್ನು ಮುರಿದು ಭೂತಾಯಿ ಗರ್ಭದಲ್ಲಿ ಹುಟ್ಟಿದವಳನ್ನು ಮದುವೆಯಾದನಂತೆ ಇವನು: ತಿ ನಿ ಅ ಜಾ ವ ಪ
15. ಮಹಿಷಾಸುರ ಮರ್ಧಿನಿಗೆ ಆಯುಧಗಳೇ ಶೋಭೆ, ಈ ದೇವತೆಗೆ ವಾದ್ಯವೇ ಶೋಭೆ: ಪಾ ಕ್ಯ ಣಿ ಣಾ ಣಿ ವೀ ಮಾ
___________
6. ಅಪರೂಪದ ಗಾದೆಗಳು
ರವಿ ಗೋಪಾಲರಾವ್
ಒಂದು ಸಣ್ಣ ಪ್ರಶ್ನಾವಳಿ. ತುಂಬಾ ಅಪರೂಪದ ಗಾದೆಗಳು ಇಲ್ಲಿವೆ. ಆದರೆ ಅರ್ಧ ಮಾತ್ರ ಕೊಟ್ಟಿದೆ, ಮಿಕ್ಕಿದ್ದನ್ನು ನೀವು ಭರ್ತಿ ಮಾಡಿ.
೧. ಆಗಭೋಗಕ್ಕೆಲ್ಲಾ ರಂಗಸ್ವಾಮಿ, _______ _______
೨. ಆತನ ತಮ್ಮನು ಈತನೆಂದು _________ _______
೩. ಆದಿ ಹಿಡಿದ ಮನುಷ್ಯನಿಗೆ ____ _____
೪. ಆನೆ ಮೇಲೆ ಹೋಗುವವನ _____ ____
೫. ಆಲೆ ಇಲ್ಲದ ಊರಿಗೆ _____ _____ ____ (ಆಲೆ = ಆಲೆಮನೆ, ಬೆಲ್ಲ ಮಾಡುವ ಜಾಗ)
__________
7. ರಥ ಸಪ್ತಮಿ. ಸೂರ್ಯ ಜಯಂತಿ. ಸಣ್ಣ ಪ್ರಶ್ನಾವಳಿ.
ರವಿ ಗೋಪಾಲರಾವ್
1. ತನ್ನ ಶಕ್ತಿ ಮೀರಿ ಶ್ರೀ ರಾಮ ರಾವಣನ ಜೊತೆ ಕಾಳಗದಲ್ಲಿ ಹೋರಾಡುತ್ತಿದ್ದರೂ, ಗೆಲುವು ದೂರವಾಗುತ್ತಿತ್ತು. ಆಗ ಮುನಿಯೋರ್ವರು ರಾಮನಿಗೆ ಒಂದು ಶ್ಲೋಕ ಹೇಳಿಕೊಟ್ಟ ನಂತರ ರಾಮನಿಗೆ ಶಕ್ತಿ ಮರುಕಳಿಸಿತು. ಆ ಮುನಿ ಯಾರು ಮತ್ತು ಆ ಶ್ಲೋಕ ಯಾವುದು?
2. ಸಪ್ತಾಶ್ವವರ ರೂಢನಾದ ಸೂರ್ಯನ ೭ ಅಶ್ವಗಳ ಹೆಸರು ಏನು?
3. ಕೈಯಲ್ಲೊಂದು ಹೂವು ಹಿಡಿದಿರುವನಂತೆ ಸೂರ್ಯ? ಅವನ ತೇಜಸ್ಸಿನಿಂದ ಬಾಡಿಹೋಗದೆ ಆ ಹೂ?
4. ಕಶ್ಯಪಾತ್ಮಜಂ ಅಂತ ಸೂರ್ಯನನ್ನು ಏಕೆ ಕರೆವರು?
5. ಆದಿತ್ಯ ಕವಚಂ ಎನ್ನುವುದು ಸೂರ್ಯನ ಬಗ್ಗೆ ಶ್ಲೋಕ. ಇದು ಯಾವ ಪುರಾಣದಲ್ಲಿ ಬರುತ್ತದೆ?
_________________
8. ಕನ್ನಡದಲ್ಲಿ ಜೆಪರ್ಡಿ.
ರವಿ ಗೋಪಾಲರಾವ್
ABC ಟಿವಿ ಚಾನಲ್ನಲ್ಲಿ ಕಳೆದ ೩೦ ವರುಷಗಳಿಂದ ಪ್ರಸಾರವಾಗುವ ಜೆಪರ್ಡಿ ಕಾರ್ಯಕ್ರಮವನ್ನು ನೀವೆಲ್ಲ ನೋಡಿರಬಹುದು.
ಅದೇ ರೀತಿಯ ಆಟ ಇದು. ಇದರಲ್ಲಿ ಒಂದು ಪ್ರವರ್ಗದ ಆಧಾರಿತ 5 ಉತ್ತರಗಳನ್ನು ಕೊಡಲಾಗುವುದು. ನೀವು ಅದನ್ನು ಪ್ರಶ್ನೆಯ ರೂಪದಲ್ಲಿ ಉತ್ತರ ಕೊಡಬೇಕು. ಉದಾಹರಣೆಗೆ ಭೂಗೋಳ ಪ್ರವರ್ಗದಲ್ಲಿ “ಇದು ಕರ್ನಾಟಕದ ರಾಜಧಾನಿ,” ಎಂದಿದ್ದರೆ, ನಿಮ್ಮ ಉತ್ತರ “ಬೆಂಗಳೂರು ಯಾವ ಊರು?” ಎಂದಿರಬೇಕು.
ನಿಯಮ: 1. ಮೊದಲು ನಿಮ್ಮ ಹೆಸರು ಬರೆಯಿರಿ. ನಂತರ ಯಾವುದಾದರು ಪ್ರವರ್ಗ ಚುನಾಯಿಸಿಕೊಳ್ಳಿ. ಆ ಪ್ರವರ್ಗದ ಪ್ರತಿಯೊಂದು ಉತ್ತರಕ್ಕೂ ಸರಿಯಾದ ಪ್ರಶ್ನೆ ಬರೆಯಿರಿ. 2. ಪ್ರತಿಯೊಂದು ತಪ್ಪಾದ ಪ್ರಶ್ನೆಗೆ ಆ ಉತ್ತರದ ಮೊತ್ತ ಕಳೆಯಲಾಗುವುದು. 3. ಅದೇರೀತಿ ಮಿಕ್ಕ ಪ್ರವರ್ಗಗಳಿಗೆ ಒಂದಾದ ನಂತರ ಒಂದು ಬರೆದು ಆಟವನ್ನು ಮುಗಿಸಿ
ಉದಾಹರಣೆ:
ಹೆಸರು: ನರಹರಿ ಕಣ್ಣನ್ನೂರು
1. ಪ್ರವರ್ಗ: ಕೊಡಗು ಜಿಲ್ಲೆ
1A: “ಹುತ್ತರಿ ಹಬ್ಬ ಎಂದರೇನು?” (ಬೇಕೆಂದೆ ತಪ್ಪು ಕೊಟ್ಟಿದ್ದೇನೆ. ನಿಮ್ಮ ಪ್ರಶ್ನೆ ಸರಿಯಿದ್ದರೆ $100, ಇಲ್ಲದಿದ್ದರೆ -$100)
2A: “ಕುಪ್ಪಳ್ಳಿ ಪಾಟೀಲರು ಯಾರು?” (ಇದೂ ತಪ್ಪಿದ್ದರೆ -$200 + -$100= -$300)
ಈ ರೀತಿ ಬರೆದು ಕಳಿಸಿ. ಆಟ ಏನು ಅಂತ ಗೊತ್ತಾಯಿತಲ್ಲ… ಇನ್ನು ಎಲ್ಲ ನಿಮ್ಮದೇ
1. ಪ್ರವರ್ಗ: ಕೊಡಗು ಜಿಲ್ಲೆ.
1A. $100 ರ ಉತ್ತರ: ಎಲ್ಲರು ಹಬ್ಬಗಳ ದಿನ ದೇವರನ್ನು ಹೊಗಳಿ ಪೂಜಿಸಿದರೆ, ಕೊಡಗರು ಅವರ ಈ ಹಬ್ಬದ ದಿನ ದೇವರನ್ನು ಅಶ್ಲೀಲ ಶಬ್ದಗಳಿಂದ ಬೈದು ಆಚರಿಸುತ್ತಾರೆ.
1B. $200 ರ ಉತ್ತರ: ಭಾರತದ ಸೈನ್ಯದಲ್ಲಿ ಅತ್ತ್ಯುನ್ನತ ಪದವಿ ಪಡೆದ ಈ ಜನಪ್ರಿಯ ಕೊಡಗಿನವರನ್ನು ಕಂಡರೆ ಬಹಳ ಹೆಮ್ಮೆ.
1C. $300 ರ ಉತ್ತರ: ಮುದ್ದಳೆ ಬಾರಿಸಿಕೊಂಡು ಕೊಡಗಿನ ಪುರುಷರು ಕುಣಿವ ಜಾನಪದ ನೃತ್ಯದ ಹಾಡುಗಳನ್ನು ಬರೆದ ಕೊಡವ ಸಾಹಿತಿ ಎನ್.ಚಿನ್ನಪ್ಪ ಅವರು ಬರೆದದ್ದು ಈ ಪುಸ್ತಕದ ಹೆಸರು.
1D. $400 ರ ಉತ್ತರ: ಟೈಮ್ಸ್ ಆಫ಼್ ಇಂಡಿಯ ದಿನ ಪತ್ರಿಕೆಯಲ್ಲಿ ಕಾರ್ಟೂನ್ ಪ್ರಕಟಿಸುವ ಕೊಡಗಿನ ಪ್ರಖ್ಯಾತ ಕಲಾವಿದರು ಇವರು.
1E. $500 ರ ಉತ್ತರ: ಸಾಮಾನ್ಯವಾಗಿ ಮಾವಿನ ಹಣ್ಣಿನಲ್ಲಿ ಸಿಹಿ ತಿಂಡಿ ಮಾಡುತ್ತಾರೆ. ಆದರೆ ಕೊಡಗಿನ ಈ ಖಾರದ ಮೇಲೋಗರ ಮಾಡುವ ಬಗೆ ಹೀಗಿದೆ: ಮಾವಿನಹಣ್ಣಿನ ಚೂರುಗಳನ್ನು ತೆಂಗು, ಶುಂಠಿ, ಮೆಣಸಿನಕಾಯಿ, ಮತ್ತು ಮೊಸರಿನಲ್ಲಿ ಬೆರಸಿ, ಈರುಳ್ಳಿಯನ್ನು ಹುರಿದು ಒಗ್ಗರಣೆ ಹಾಕಿ ಚಿಟಿಕೆ ಬೆಲ್ಲ ಸೇರಿಸುತ್ತಾರೆ.
2. ಪ್ರವರ್ಗ: ಟಿಬೆಟ್ ಮತ್ತು ಕರ್ನಾಟಕ
2A. $100 ರ ಉತ್ತರ: ಅನಿವಾಸಿ ಟಿಬೆಟ್ ಜನಾಂಗದವರು ಕಟ್ಟಿದ ಬುದ್ಧ ದೇವಾಲಯ ಈ ಊರಿನಲ್ಲಿದೆ.
2B. $200 ರ ಉತ್ತರ: ಅನಿವಾಸಿ ಟಿಬೆಟ್ ನಿವಾಸಿಗಳು ಕಟ್ಟಿದ ಬುದ್ಧ ದೇವಾಲಯದ ಒಳಗಡೆ ಬುದ್ಧನ ಅಕ್ಕ ಪಕ್ಕದಲ್ಲಿರುವ ಈ ಎರಡು ಮೂರ್ತಿಗಳು ಬುದ್ಧನಷ್ಟೇ ಜನಪ್ರಿಯ.
2C. $300 ರ ಉತ್ತರ: ಟಿಬೆಟ್ ಜನರು ನಮ್ಮ ಚಂದ್ರಮಾನ ಯುಗಾದಿ ಸಮಯದಲ್ಲೆ ತಮ್ಮ ಹೊಸ ವರ್ಷವನ್ನು ಈ ಹೆಸರಿನಿಂದ ಆಚರಿಸುತ್ತಾರೆ.
2D. $400 ರ ಉತ್ತರ: ಟಿಬೆಟ್ ಸಂವತ್ಸರಗಳಿಗೂ ನಮ್ಮ ಚಾಂದ್ರಮಾನ ಯುಗಾದಿ ಸಂವತ್ಸರಗಳಿಗೂ ಇರುವ ತುಂಬಾ ಹತ್ತಿರದ ಹೋಲಿಕೆ ಇವು.
2E. $500 ರ ಉತ್ತರ: ನಮ್ಮ ದೇಶಕ್ಕೆ ವಲಸೆ ಬಂದ ಮತ್ತೊಂದು ಪ್ರಮುಖ ಪಂಗಡ ಪಾರ್ಸಿ ಜನರಿಗೂ ಟಿಬೆಟಿನ ಜನರಿಗೂ ಒಂದು ತೀರ ಹೋಲಿಕೆ ಇರುವ ಸಂಸ್ಕಾರ ಇದು.
3. ಪ್ರವರ್ಗ: ನಮ್ಮೂರು ನಿಮ್ಮೂರು
3A. $100 ರ ಉತ್ತರ: ಕರ್ನಾಟಕದ ಈ ಊರಿನಲ್ಲಿ ಇರುವ ಒಂದು ಗುರುದ್ವಾರ / ಮಂದಿರ ಸಿಖ್ ಧರ್ಮದ ಅನುಯಾಯಿಗಳಿಗೆ ಚಾರಿತ್ರಿಕ ದೃಷ್ಟಿಯಿಂದ ತುಂಬ ಪವಿತ್ರವಾದ ತೀರ್ಥಸ್ಥಳ.
3B. $200 ರ ಉತ್ತರ: ಕರ್ನಾಟಕದ ಈ ಐದೂ ಊರುಗಳಲ್ಲಿ ಕಲ್ಲಿನಲ್ಲಿ ಕೆತ್ತಿದ ಗೋಮಟೇಶ್ವರನ ವಿಗ್ರಹಗಳು ಇವೆ.
3C. $300 ರ ಉತ್ತರ: ಹಳದಿ ವಸ್ತ್ರ ತೊಟ್ಟು ಕಾವಾಡಿಯನ್ನ ಹೊತ್ತು ಹರೋಹರ ಎಂದು ಕೂಗಿ ನೆಡೆವರು ಈ ಊರಿನ ಭಕ್ತರು
3D. $400 ರ ಉತ್ತರ : ಈ ಜಿಲ್ಲೆಯಲ್ಲಿ ಕಲ್ಲು ಕಲ್ಲು ಕೂಡ ಕತೆ ಹೇಳಿದರೂ ನಮ್ಮೂರಿನಲ್ಲಿ ಅಂತರಿಕ್ಷದ ಕಡೆಯೇ ನಮ್ಮ ಗಮನ
3E. $500 ರ ಉತ್ತರ: ಕೆ.ಜಿ.ಎಫ್. ನಲ್ಲಿ ಮಾತ್ರ ಅಲ್ಲ ನಮ್ಮೂರಾಗು ಚಿನ್ನದ ಗಣಿ ಇದೆ.
4. ಪ್ರವರ್ಗ: ಕನ್ನಡ ರತ್ನಕೋಶ
4A. $100 ರ ಉತ್ತರ: ಈ ಪದವನ್ನು ನೋಡಿಲ್ಲದಿರುವುದನ್ನು, ನಿರ್ಧಿಷ್ಟ್ರಿತೆಯಿಂದ ಹೇಳಲಾಗದ್ದನ್ನು, ಕತೆಪುರಾಣಗಳನ್ನು ಶುರು ಮಾಡಲು ಹೇಳಲು ಬಳಸುತ್ತಾರೆ.
4B. $200 ರ ಉತ್ತರ: ಕೇರಳದಲ್ಲಿರುವ ಟ್ರಾವಂಕೂರಿನ ದೇವಸ್ಥಾನದ ಹರಿಯೂ ಇವನೇ ವೈಕುಂಠದಲ್ಲಿರುವ ಆರಕ್ಷರದ ಹರಿಯೂ ಇವನೇ
4C. $300 ರ ಉತ್ತರ: ಹೌದು, ನನ್ನ ತಂದೆ ಮರುಮದುವೆಯಾದರು. ಆಕೆಗಾಗಲೇ ಒಬ್ಬ ಮಗನಿದ್ದಾನೆ. ಹಾಗಾದರೆ ನನ್ನ ಮಲತಾಯಿಯ ಮಗನನ್ನು ನಾನು ಹೀಗೆ ಕರೆಯಬೇಕಂತೆ.
4D. $400 ರ ಉತ್ತರ: ಈ ‘ಬಟ್ಟೆಯನ್ನು ಉಟ್ಟರೂ ಕೊತ್ತಂಬರಿ ಸೊಪ್ಪನ್ನು ಮಾರುವುದು ಬಿಡಲಿಲ್ಲವಂತೆ’ ಎಂದು ಒಂದು ಗಾದೆ ಬೇರೆ ಇದೆಯಂತೆ ಈ ಪದವನ್ನು ವರ್ಣಿಸಲು
4E. $500 ರ ಉತ್ತರ: ಗತಪ್ರತ್ಯಾಗತ ಅಂದರೆ ಒಂದರ್ಥದಲ್ಲಿ ಚಿತ್ರವಂತೆ ಇನ್ನೊಂದರ್ಥದಲ್ಲಿ ಇದಂತೆ, ಅಬ್ಬಾ ಏನು ವಿಚಿತ್ರ.
_______________
9. ಈ ಚರಣ ಯಾವ ಹಾಡಿನದು?
ರವಿ ಗೋಪಾಲರಾವ್
ಯಾವುದಾದರು ಹಾಡನ್ನು ಹಾಡಿಕೊಳ್ಳಲು ಶುರು ಮಾಡಿದಾಗ ಆ ಹಾಡಿನ ಮೊದಲ ಚರಣಗಳು ಹೆಚ್ಚು ಜ್ಞಾಪಕವಿರುತ್ತೆ. ಮಧ್ಯದ ಅಥವಾ ಕೊನೆ ಚರಣಗಳು ಮರೆತುಹೋಗಿ ಎಷ್ಟೋ ವರುಷಗಳಾಗಿರುತ್ತವೆ. ಆ ಚರಣಗಳನ್ನು ಗುನುಗಿಕೊಂಡೆ ಹಾಡನ್ನು ಮುಗಿಸಿಬಿಡುತ್ತೇವೆ. ಅದೇಕೋ ಏನೋ “ಎಂದೆಂದೂ ನಿನ್ನನು ಮರೆತು ನಾನಿರಲಾರೆ” ಅಂತ ಜನಪ್ರಿಯ ಹಾಡುಗಳು ಎಲ್ಲರಿಗು ಮೊದಲಿಂದ ಕೊನೆಯವರಿಗೂ ಜ್ಞಾಪಕವಿರುತ್ತೆ. ನಿಮ್ಮ ಜ್ಞಾಪಕ ಶಕ್ತಿಗೆ ಇದೊಂದು ಶುಕ್ರವಾರದ ಸಂಜೆಯ ರಸಪ್ರಶ್ನೆ.
ಕೆಳಗೆ ಜನಪ್ರಿಯ ಹಾಡುಗಳ ಮೊದಲ ಚರಣವನ್ನು ಕೊಡದೆ ಮಧ್ಯದಲ್ಲಿ ಅಥವಾ ಕೊನೆಯಲ್ಲಿ ಬರುವ ಚರಣಗಳನ್ನು ಕೊಟ್ಟಿದೆ. ಮೊದಲ ಚರಣ ಮತ್ತು ಚಿತ್ರದ ಹೆಸರನ್ನು ಪತ್ತೆಹಚ್ಚಿ. (ವಿ.ಸೂ: ಗೀತಕಾರರ ಶೈಲಿಯನ್ನು ಗಮನದಲ್ಲಿಟ್ಟುಕೊಂಡು ಆದಷ್ಟು ಹಳೆ ಮತ್ತು ಹೊಸ ಹಾಡುಗಳ ಜೊತೆಗೆ ಕನ್ನಡದ ವೈವಿದ್ಯಮಯ ಕವಿತೆ ಮತ್ತು ಗೀತಕಾರರನ್ನು ಆಯ್ಕೆ ಮಾಡಿದ್ದೇನೆ.)
೧.ಹಾರಾಡೋ ಹಕ್ಕಿಗಳಲ್ಲಿ ಅರಗಿಳಿಯೆ ಅಂದವು
ನಾ ಕಂಡ ಹೆಣ್ಣುಗಳಲ್ಲಿ ಚೆಲುವೆ ನೀ ಚೆಂದವು
೨. ಆಡಿಸುವಾತನ ಕೈ ಚಳಕದಲಿ ಎಲ್ಲ ಅಡಗಿದೆ
ಆತನ ಕರುಣೆಯೆ ಜೀವವ ತುಂಬಿ ಕುಣಿಸಿ ನಲಿಸಿದೆ
೩. ಕಾಣದಿಹ ಕೈಯೊಂದು ಸ್ತೂತ್ರ ಹಿಡಿದಿದೆ
ಆಡಿಸಿದೆ ಕಾಡಿಸಿದೆ ಅಳಿಸಿ ನಗುತಿದೆ
೪. ಹಾರುವ ಹಕ್ಕಿಗಳ ಜೊತೆಯವಳು
ರೆಕ್ಕೆಯ ಮೇಲೆ ತಂದು ಕೂರಿಸಿದಳು
೫. ಕಣ್ಣು ತೆರೆದು ಕಾಣುವ ಕನಸೇ ಜೀವನ
ಸಣ್ಣ ಹಠವ ಮಾಡಿದೆ ಹೃದಯ ಈ ದಿನ
೬. ತುಟಿಗಳ ಹೂವಲಿ ಆಡದ ಮಾತಿನ ಸಿಹಿಯಿದೆ
ಮನಸಿನ ಪುಟದಲಿ ಕೇವಲ ನಿನ್ನದೇ ಸಹಿಯಿದೆ
೭. ಸುರಲೋಕದಿಂದ ಇಳಿದುಬಂದ ನಿಜ ಊರ್ವಶಿ
ನನ್ನೊಲವಿನ ಪ್ರೇಯಸಿ
೮. ಉಳುವವನೆ ಲೋಕಕ್ಕೆ ಬೇಕಾದ ಗೆಳೆಯ
ಹಳ್ಳಿಗೂ ದಿಲ್ಲಿಗೂ ಕೊಟ್ಟಾನೆ ಬೆಳೆಯ
೯. ಪ್ರಾಣವು ನೀನು ದೇಹವು ನಾನು
ಈ ತಾಯಿ ಕಾವೇರಿ ಆಣೆ
೧೦. ಭೂಮಿ ಮ್ಯಾಗೆ ಹಚ್ಚ ಹಚ್ಚಗೆ ಹಾದಿ ತೆಲಾವೇ
ಆ ಹಾದಿ ಪಕ್ಕ ಬಳ್ಳಿ ಬೆಳದಾವೆ
೧೧. ಸುರ ಸ್ವಪ್ನ ಬಿದ್ದ ಪ್ರತಿಬಿಂಬ ಬಿದ್ದ ಉದ್ದುದ್ದ ಶುದ್ಧ ನೀರೇ
ಎಚ್ಛೆತ್ತು ಎದ್ದು ಆಕಾಶದುದ್ದ ಧರೆಗಿಳಿಯೆ ಶುದ್ಧ ನೀರೇ
೧೨. ತಲುಪದ ಕರೆ ನೂರಾರಿವೆ
ಬೆರಳಲೆ ಇದೆ ಸಂಭಾಷಣೆ
೧೩. ಚೆಲುವನೇ ನಿನ್ನ ಮುಗುಳುನಗೆ
ಹಗಲಲು ಶಶಿಯು ಬೇಡುವನು ರಸಿಕನೇ ನಿನ್ನ ರಸಿಕತೆ
೧೪. ಸಮಯ ಸಾಗುವ ಗತಿಯ ತೊರೆಯುವ ಪರಿಯ
ನಾ ಕಾಣೆನು, ಕಳೆವ ಸನಿಹದ ಕ್ಷಣವ ..
೧೫. ಸ್ವರಗಳ ಮಾಧುರ್ಯ ರಾಗದ ಸೌಂಧರ್ಯ
ಮೃಗಗಳ ತಣಿಸೆ ಖಗಗಳ ಕುಣಿಸೆ
೧೬. ದಿಲ್ಲು ಒಳಗೆ ಗುಲ್ಲು ಎದ್ದು ನಮ್ದು ಮನಸು ಯಾಕೋ ಇಂದು
ಕ್ಯಾಕರಿಸಿ ಉಗಿತೈತೆ ನಿಮ್ದುಕೆ ಪ್ಯಾರ್ ಕರೋ ಅಂದೈತೆ
೧೭. ಪರಮ ಪದದೊಳಗೆ ವಿಷಧರನ ತಲ್ಪದಲಿ ನೀ
ಸಿರಿ ಸಹಿತ ಕ್ಷೀರ ವಾರಿಧಿಯೊಳಲಿರಲು
೧೮. ಹಸನಾದ ಮೇಳಕೆ ತಂಬೂರಿ ಇದು
ಕುಶಲರಿಗೊಪ್ಪುವ ತಂಬೂರಿ
ಬೋನಸ್ ಪ್ರಶ್ನೆ: ಯಾವುದಾದರು ಒಂದು ಹಾಡಿಗೆ ಗೀತಕಾರರ ಹೆಸರನ್ನು ತಿಳಿಸಿ.
__________________
10. ಸುಭಾಷಿತ ರಸಪ್ರಶ್ನೆ
ರವಿ ಗೋಪಾಲರಾವ್
ಸುಭಾಷಿತ ಸಂಸ್ಕೃತದಲ್ಲಿದ್ದರೂ ಎಲ್ಲರಿಗು ಒಂದಲ್ಲ ಒಂದು ರೀತಿ ಅವುಗಳ ಸಾಮಾನ್ಯ ಅರ್ಥ ಗೊತ್ತಿರುತ್ತದೆ. ಕೆಳಗೆ ಅಂತಹ ಸುಭಾಷಿತಗಳ ಸಾಧಾರಣ ಅರ್ಥ ಕೊಡುವುದರ ಜೊತೆಗೆ ಅವುಗಳ ತಾತ್ಪರ್ಯದಲ್ಲೇ ಒಂದು ರಸಪ್ರಶ್ನೆ ಕೊಟ್ಟಿದೆ. ಉತ್ತರ ಹುಡುಕಿ.
೧. ವಿಶ್ರಾಂತಿ ಪಡೆಯದೇ, ಭಾರ ಹೊತ್ತುವುದು ಮತ್ತು ಚಳಿ ಬಿಸಿಲನ್ನು ಎದುರಿಸುವ ಈ ಪ್ರಾಣಿಯಿಂದ ಮನುಷ್ಯರು ಅದರ ಮೂರು ಗುಣಗಳನ್ನು ಕಲಿತುಕೊಳ್ಳಬಹುದಂತೆ.
೨. ಇದನ್ನು ಕಳ್ಳರು ಕದಿಯಲು ಸಾಧ್ಯವಿಲ್ಲ, ರಾಜ ಕಸಿದುಕೊಳ್ಳಲು ಸಾಧ್ಯವಿಲ್ಲ, ಅಣ್ಣ ತಮ್ಮಂದಿರಲ್ಲಿ ವಿಭಜಿಸಲು ಸಾಧ್ಯವಿಲ್ಲ. ಆದರೆ ಹಂಚಿಕೊಂಡರೆ ಹೆಚ್ಚಾಗುವುದು.
೩. ಲಕ್ಷ್ಮಿ ಕುಳಿತುಕೊಳ್ಳುವ ಈ ಜಾಗ, ಹರ ವಾಸಿಸುವ ಈ ಜಾಗ ಮತ್ತು ಶರದಿಯಲಿ ಹರಿಯು ಇರುವ ಈ ಜಾಗಗಳು ಎಲ್ಲರಿಗು ನಿಖರವಾಗಿ ಗೊತ್ತಿರಬೇಕಂತೆ.
೪. ಆಕಾಶದಿಂದ ಬೀಳುವ ಎಲ್ಲ ನೀರು ಕೊನೆಗೆ ಸಮುದ್ರವನೇ ತಲಪುವಂತೆ, ನಾವು ಮಾಡುವ ಎಲ್ಲ ಪ್ರಣಾಮಗಳು ಇವನನ್ನು ಸೇರುವುದು.
೫. ಕಷ್ಟಕಾಲ ಬರಬಹುದೆಂದು ಮೊದಲೇ ತಿಳಿದಿರುವುದು ಒಳ್ಳೆಯದೇ ಹೊರತು ಬೆಂಕಿ ಬಿದ್ದಮೇಲೆ ಹೀಗೆ ಮಾಡಬಾರದು
೬. ಬಲವಂತರಿಗೂ ಶಕ್ತರಿಗೂ ಇದು ಭೂಷಣವಂತೆ. ಇದು ಇದ್ದಲ್ಲಿ ಪ್ರಪಂಚದಲ್ಲಿ ಸಾಧಿಸಲು ಏನೂ ಉಳಿದಿಲ್ಲವಂತೆ.
೭. ಹಸ್ತದ ಮೂಲೆಯಲ್ಲಿ ಲಕ್ಷ್ಮಿ, ಮಧ್ಯದಲ್ಲಿ ಸರಸ್ವತಿ, ಮೂಲತಃ ಗೋವಿಂದ ಇರುವುದರಿಂದ ಪ್ರತಿನಿತ್ಯ ಈ ರೀತಿ ಮಾಡಬೇಕಂತೆ.
೮. ಕಾಗೆಯು ಕಪ್ಪು, ಕೋಗಿಲೆಯು ಕಪ್ಪು. ಆದರೆ ಈ ಕಾಲ ಬಂದಾಗ ಕಾಗೆ ಕಾಗೆಯಾಗಿ, ಕೋಗಿಲೆ ಕೋಗಿಲೆಯಾಗಿ ಅರಿವಾಗುವುದಂತೆ.
೯. ನಾಳೆ ಏನಾಗುವುದೆಂದು ಬಲ್ಲವರಾರು ಆದ್ದರಿಂದ ಬುದ್ಧಿವಂತ ಈ ರೀತಿ ಮಾಡುತ್ತಾನಂತೆ.
೧೦. ಒಂದು ಪದದಲ್ಲಿ ಅನುಸ್ವಾರ ರಹಿತವಾದರೂ ಇದು ಮನುಷ್ಯನನ್ನು ದಹಿಸಿಬಿಡುವುದಂತೆ.
ಬೋನಸ್ ಪಾಯಿಂಟ್: ನಿಮಗೆ ಸಂಸ್ಕೃತದಲ್ಲಿ ಈ ಸುಭಾಷಿತಗಳು ಯಾವುವು ಎಂದು ಗೊತ್ತಾದರೆ ಅದನ್ನು ಪೋಸ್ಟ್ ಮಾಡಿ.
__________________
11. ಕನ್ನಡ ಕಾದಂಬರಿ ಆಧಾರಿತ ಚಲನಚಿತ್ರಗಳು
ರವಿ ಗೋಪಾಲರಾವ್
ಕೆಳಗಿನ ಚಿತ್ರಗಳೆಲ್ಲವೂ ಕನ್ನಡದ ಹೆಸರಾಂತ ಬರಹಗಾರರ ಕತೆಗಳನ್ನಾಧರಿಸಿದ ಚಿತ್ರಗಳು. ಸಾರಾಂಶ ಓದಿ ಚಿತ್ರ ಪತ್ತೆಹಚ್ಚಿ.
1. ಡಾ. ರಾಜ್ ಮತ್ತು ಕಲ್ಪನ ಅಭಿನಯದಲ್ಲಿ ಗಂಡು ಹೆಣ್ಣಿನ ಸಂಭಂದಗಳ ಸೂಕ್ಷ್ಮತೆ ಚಿತ್ರವಾಗಿದೆ.
2. ಒಬ್ಬ ಅಸ್ಪೃಶ್ಯ ವರ್ಗದ ಪ್ರಾಮಾಣಿಕ ವ್ಯಕ್ತಿಯ ಕಥೆಯನ್ನು ದುರಂತ ಕಥೆಯಾಗಿ ಚಿತ್ರಿಸಿದ್ದಾರೆ.
3. 70ರ ದಶಕದ ಈ ಮನೋವೈಜ್ಞಾನಿಕ ಮತ್ತು ಸಾಮಾಜಿಕ ಚಿತ್ರ ಮುಖ್ಯವಾಗಿ ಗಂಡು ಹೆಣ್ಣಿನ ಸಹಜೀವನದ ಶ್ರೀಮಂತಿಕೆಯನ್ನು ಹೆಣ್ಣಿನ ದೃಷ್ಟಿಯಿಂದ ನಿರೂಪಿಸುತ್ತದೆ.
4. ಉತ್ತರ ಹಾಗು ದಕ್ಷಿಣ ಭಾರತದ ಸಂಗೀತ ಶಾಸ್ತ್ರಕ್ಕೆ ಪ್ರಾಮುಖ್ಯತೆ ಕೊಟ್ಟಿದ್ದರೂ, ಕೊನೆಯಲ್ಲಿ ಗುರು-ಶಿಷ್ಯ ಪರಂಪರೆಯೇ ಎರಡಕ್ಕೂ ಮುಖ್ಯವೆಂದು ಸಾರಿದ ಈ ಚಿತ್ರ 60ರ ದಶಕದ ಹಿಟ್.
5. ಹಳೆ ಪೇಪರ್ ಅಂಗಡಿಯಲ್ಲಿ ಸಿಕ್ಕ ಕಾದಂಬರಿಯಾದರು ಕರ್ನಾಟಕದ ಚರಿತ್ರೆಯನ್ನು ಕಟ್ಟುಕತೆಯ ರೂಪದಲ್ಲಿ ರಜತ ಪರದೆಗೆ ತಂದು ಮನೋಜ್ಞವಾದ ಚಲನಚಿತ್ರವೆಂದು ಹೆಸರುಗಳಿಸಿತು.
ಬೋನಸ್ ಪಾಯಿಂಟ್: ಈ ಎಲ್ಲ ಕಾದಂಬರಿಕಾರರ ಹೆಸರನ್ನು ತಿಳಿಸಿ.
__________________
12, ಹೀಗೊಂದು ಸಂಭಾಷಣೆ.
ರವಿ ಗೋಪಾಲರಾವ್
1.”ಅದೇನೋ ಸರಿ, ನಾನು ಇನ್ನೂರಕ್ಕೂ ಜಾಸ್ತಿ ಪಿಕ್ಚರ್ ನಲ್ಲಿ ಅಭಿನಯಿಸಿದೀನಿ, ಆದ್ರೆ ನನಗೆ ನನ್ನ ಮೊದಲನೆಯ ಪಿಕ್ಚರೇ ಜ್ಞಾಪಕಯಿಲ್ಲ. ಮತ್ತ್ ನೀನು ನನ್ನ ೫೦ ನೇದು, ೧೦೦ ನೇದು, ೧೫೦ ನೇದು, ೨೦೦ ನೇದು ಯಾವುದು ಅಂತ ಕೇಳದ್ರೆ ಹೆಂಗಪ್ಪ? ನಿಮ್ಮೂರಿನವರಿಗೆ ಗೊತ್ತಿರುತ್ತೆ, ಅವರನ್ನೇ ಕೇಳ್ಬಿಡು.”
2. “ನಂಗೆ ಸರಿಯಾಗಿ ಇಂಗ್ಲಿಷ್ ಬರೋಲ್ಲ ಅಂತ ಗೊತ್ತಿದ್ದರೂ ನೀನು ನನ್ನ ಎರಡು ಪಿಕ್ಚರ್ಗೆ ಅದೇನೋ ಇಂಗ್ಲಿಷ್ನಲ್ಲೇ ಟೈಟಲ್ ಇಟ್ಟುಬಿಟ್ಟಿದ್ದಾರೆ ಅಂತ ಹೇಳ್ತಿಯಲ್ಲ? ನಿಮ್ಮೂರಿನವರಿಗೆ ಗೊತ್ತಿರುತ್ತೆ, ಅವರನ್ನೇ ಕೇಳ್ಬಿಡು.”
3. “ಸತಿ ನಳಾಯಿನಿ, ರಾಣಿ ಹೊನ್ನಮ್ಮ, ಕಿತ್ತೂರ್ ಚೆನ್ನಮ್ಮ, ತೇಜಸ್ವಿನಿ, ಗೌರಿ, ಸತಿ ಸಾವಿತ್ರಿ, ಬಾಲ ನಾಗಮ್ಮ, ಸತಿ ಸುಕನ್ಯಾ, ಸರ್ವಮಂಗಳ ಅಂತ ಎಲ್ಲ ಇಷ್ಟೊಂದು ಪಿಕ್ಚರ್ ಹೆಸರು ಯಾಕೆ ಹೇಳ್ತಿದಿ ನೀನು. ನನಗಂತೂ ಏಕೆ ಅಂತ ಗೊತ್ತಾಗ್ತಾಯಿಲ್ಲ. ಅದರಲ್ಲಿ ಏನಾದರೂ ವಿಶೇಷ ಇದ್ರೆ ನಿಮ್ಮೂರಿನವರಿಗೆ ಗೊತ್ತಿರುತ್ತೆ, ಅವರನ್ನೇ ಕೇಳ್ಬಿಡು.”
4. “ಅಲ್ಲ, ನಾನು ಕತ್ತಿ ಹಿಡ್ಕೊಂಡು ಅಷ್ಟೊಂದು ಪಿಕ್ಚರ್ನಲ್ಲಿ ಮಾಡಿದೀನಿ, ಅದು ಬಿಟ್ಟುಬಿಟ್ಟು ನೀನು ನಾನು ಬಂದೂಕ್ ಹಿಡ್ಕೊಂಡು ಕೊಲ್ಲೋದನ್ನ ನೋಡಿದ್ದೀನಿ ಅಂತಿಯಲ್ಲ . ನಾನೇನು ಕಳ್ಳನಾ? ನಿಮ್ಮೂರಿನವರಿಗೆ ಗೊತ್ತಿರುತ್ತೆ, ಅವರನ್ನೇ ಕೇಳ್ಬಿಡು.”
5.”ಹಾ ಜ್ಞಾಪಕ ಬಂತು, ನೀ ಹೇಳ್ತಿರೋ ನಾಗರಕಟ್ಟಿ ಸಹೋದರರು. ಅವರಿಗೂ ನನ್ನ ಪಿಕ್ಚರ್ನಲ್ಲಿ ರೋಲ್ ಕೊಟ್ಟಿದ್ದೆ ಅಂತ ನೆನಪು. ನಿಮ್ಮೂರಿನವರಿಗೆ ಗೊತ್ತಿರುತ್ತೆ, ಅವರನ್ನೇ ಕೇಳ್ಬಿಡು.”
__________________
13. ಬಣ್ಣ ಬಣ್ಣದ ಹೋಳಿ ಹಬ್ಬ
ರವಿ ಗೋಪಾಲರಾವ್
ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಯಿತು. ಆದರೆ ಅವುಗಳನ್ನೇ ಬೇರೆ ಬೇರೆ ಪ್ರಮಾಣದಲ್ಲಿ ಬೆರೆಸಿದರೆ ನೂರಾರು ಬಣ್ಣಗಳು. ಕೆಳಗಿನ ಪ್ರಶ್ನಾವಳಿಯಲ್ಲಿ ಒಂದು ಬಣ್ಣದ ಪ್ರಮಾಣ ಮಾತ್ರ ಕೊಟ್ಟು, ಯಾವ ಹೊಸ ಬಣ್ಣ ಫಲಿಸಬಹುದು ಎನ್ನುವುದಕ್ಕೆ ಸುಳಿವು ಕೊಟ್ಟಿದೆ. ? ಇರುವ ಪ್ರತಿ ಒಂದಕ್ಕೂ ಒಂದು ಉತ್ತರ ಕೊಟ್ಟು ಬಣ್ಣವನ್ನು ಪತ್ತೆ ಹಚ್ಚಿ.
* ಸುಳಿವು ನೋಡಿಕೊಂಡು ಮೊದಲು =? ಗೆ ಉತ್ತರ ಹುಡುಕಿದರೆ ಆಟ ಸುಲಭ
1. ಒಂದು ಕೆಂಪು + ಒಂದು ? = ? ಈ ಎತ್ತರದ ಮರಗಳನ್ನು ಹತ್ತಿ ಹಣ್ಣುಗಳನ್ನು ಕೀಳಲು ಕಷ್ಟಪಡುವುದರ ಬದಲು ಗಿಣಿಗಳಿಗೆ ಈ ಹಣ್ಣು ತಿನ್ನಲು ಬಿಟ್ಟು ಬಿಡಬೇಕು.
2. ಎರಡು ? + ಒಂದು ಕೆಂಪು = ? ಘನವಂತಿಕೆ, ಅರಸುತನಕ್ಕೆ ಮೀಸಲು, ಆದರು ಅವರು ಕೂಡ ತಿನ್ನುವುದು ಊಟದ ಜೊತೆ ಬದನೇಕಾಯಿ ಪಲ್ಯ ಮತ್ತು ಭೋಜನಾನಂತರ ದ್ರಾಕ್ಷಿ ಅಲ್ವೇ.
3. ಎರಡು ನೀಲಿ + ಒಂದು ? = ? ಅಬ್ಬಾ, ಎಂತ ಸುಂದರ ಬೆಲೆಬಾಳುವ ಪಚ್ಛೆಕಲ್ಲು, ಬಹುಶ ಶೃಂಗೇರಿಯ ದೇವಸ್ಥಾನದಲ್ಲೇ ಮಾತ್ರ ಕಾಣಬಹುದೇನೋ
4. ಒಂದು ನೀಲಿ + ಒಂದು ? = ? ಬಳೆಗಾರ ಚನ್ನಯ್ಯನಿಗೆ ತವರು ಮನೆಗೆ ಹೋಗೆಂದು ಹೇಳಿದರು ಅಮ್ಮನಿಗೆ ಈ ಬಳೆಯೆ ಬಣ್ಣವೇ ಇಷ್ಟವೆಂದು ಗೊತ್ತಂತೆ ಮಗಳಿಗೆ.
5. ಎರಡು ಹಳದಿ + ಒಂದು ? = ? ರೈತ ಗೆದ್ದೆಯನ್ನು ಉತ್ತು, ನೀರು ಹಾಯಿಸಿ ಬತ್ತವನ್ನು ಬಿತ್ತಿದ ನಂತರವೇ ಸ್ತ್ರಿಯರ ಕಣ್ಣಿಗೆ ತಂಪು
6. ಎರಡು ? + ಒಂದು ಕೆಂಪು = ? ಶ್ರೀ ಕೃಷ್ಣನಿಗೂ, ಸೂರ್ಯನ ಕಿರಣಕ್ಕೂ ಅಮೇರಿಕಾದ ಮಕ್ಕಳ ಅಪಹರಿಸುವವರ ಬಗ್ಗೆ ಜಾಗರೂಕತೆ ವಹಿಸುವುದಕ್ಕೂ ಎಲ್ಲಿಂದ ಎಲ್ಲಿಗೆ ಸಂಭಂದ.
7. ಒಂದು ಕೆಂಪು + ಒಂದು ? = ? ಕುಂಡಲಿನಿಯ ಒಂದು ಚಕ್ರಕ್ಕೂ, ಸಮರಸಕ್ಕೂ, ಸಮೃದ್ಧಿಗೂ, ಕಾಶ್ಮೀರದ ಒಂದು ಹೂವಿಗೂ, ಸನ್ಯಾಸಿಗಳಿಗೂ, ಬಾವುಟಗಳಿಗೂ, ಅದೇಕೆ ಇದು ಸಂಕೇತವೋ ನಾ ಕಾಣೆ
8. ಎರಡು ಕೆಂಪು + ಒಂದು ? = ? ದೇವಿ ಅರ್ಚನೆಗೆ, ಸ್ತ್ರೀಯರ ಶೋಭೆಗೆ, ರಾಮೇಶ್ವರದ ಸಮುದ್ರ ತೀರದಲ್ಲಿ ಸಿಗುವ ಮರಳಿಗೆ, ಹುಡುಕಿದರೆ ಸಿಗಬಹುದೇನೋ ಒಂದು ಸಂಬಂಧ.
9. ಒಂದು ? + ಒಂದು ಬಿಳಿ = ? ಅತ್ತಲೂ ಇಲ್ಲ ಇತ್ತಲೂ ಇಲ್ಲ, ಆದರೆ ಮಂಜುಕವಿದ ಮುಂಜಾನೆಯ ಸೊಬಗನ್ನು ಸವಿಯದವರು ಯಾರು.
10. ಎರಡು ಕೆಂಪು + ಒಂದು ? = ? ಗೆಣಸು, ಉಳ್ಳಾಗಡ್ಡಿ, ಈರುಳ್ಳಿ, ಬಿಟ್ ರೂಟ್ ಎಲ್ಲ ಸೇರಿಸಿ ಸಾಂಬಾರ್ ಮಾಡಿದರೆ ರುಚಿಯಾಗಿರುತ್ತಾ, ನನಗಂತೂ ಗೊತ್ತಿಲ್ಲ.
11. ಒಂದು ? + ಒಂದು ಹಳದಿ = ? ಚಳಿಯೆಂದು ಅಪ್ಪಿ ತಪ್ಪಿ ನೀವು ಪ್ರಿಯತಮೆಗೆ ಹೂವು ತರದಿದ್ದರೆ ದೇವರೇ ಗತಿ ನಿಮಗೆ ಅಂದು.
12. ಎರಡು ಹಳದಿ + ಒಂದು ? = ? ಭೂ ತಾಯಿ ಕಾಮನ ಬಿಲ್ಲನು ಕಂಡು ಅಯ್ಯೋ ನಿನ್ನಲ್ಲಿ ಏಳು ಬಣ್ಣ ಮಾತ್ರವೇ, ರೈತನನ್ನು ಅಥವಾ ಕುಂಬಾರಣ್ಣನನ್ನು ಕೇಳು ಅವರು ಪೂಜಿಸುವ ಬಣ್ಣ ಯಾವುದೆಂದು.
13. ಎರಡು ? + ಒಂದು ಕಪ್ಪು = ? ಈ ಗಿಡವನ್ನು ಬ್ರಿಟಿಷರು ಬಡ ಜೀತದಾಳು ರೈತರಿಂದ ಉಳುವರಿ ಮಾಡಿಸಿ ಲಾಭ ಪಡೆಯುತ್ತಿದ್ದಲ್ಲದೆ ಪರದೇಶಗಳಿಗೆ ರಫ್ತ್ತು ಕೂಡ ಮಾಡುತ್ತಿದ್ದರು.
14. ಒಂದು ನೀಲಿ + ಒಂದು ? = ? ಹೆಸರಿಗೆ ಶಾಂತಿ, ಸತ್ಯತೆ, ಪ್ರಶಾಂತತೆ, ಸಾಗರ ಅಷ್ಟೇ. ಕೋಪದಲ್ಲಿ ನೃತ್ಯ ಮಾಡುವಾಗಲೂ, ರಾಕ್ಷಸರನ್ನು ಕೊಲ್ಲಲು ಅವತರಿಸಿದರೂ, ಪಾಪ ಅದೇ ಅಮಾನುಷ ವರ್ಣ.
__________________
14. ಹಾಡಿಗೆ ದಿಲ್ಲಿಯಾದರೇನು ಹಳ್ಳಿಯದಾದರೇನು?
ರವಿ ಗೋಪಾಲರಾವ್
ಪಟ್ಟಣದಲ್ಲೂ ಹಳ್ಳಿಯಲ್ಲೂ ಜನಪ್ರಿಯ ಈ ಹಾಡುಗಳು. ಪತ್ತೆಹಚ್ಚಿ.
1. ಹೆಡದವ್ವನ ಹೆಂಚಿನ ಮನೆಗೆ ಗುತ್ತುಗುರಿಯಿಲ್ಲದ ಇವನನ್ನು ಕಳಿಸಲು ಅದೆಷ್ಟು ಕಳಕಳಿ ಸ್ತ್ರಿಯರಿಗೆ
2. ಭತ್ತ, ಭತ್ತದ ಹೊಟ್ಟು , ರಾಗಿ, ರಾಗಿ ಹೊಟ್ಟು ತಿನ್ನಲು ಬರುತ್ತದಂತೆ ಈ ಸಾವಿರ ಕಣ್ಣಿನ ಪಕ್ಷಿ.
3. ಗುಡುಗಿ ಗಂಗವ್ವ ಕೆರೆಯನ್ನು ತುಂಬಿದಳಂತೆ
4. ಸೀರೆ ರವಕೆ ತನಗಂತೆ ಆದರೆ ಇದು ನಲ್ಲನಿಗೆ ಕೊಡುತ್ತಾಳಂತೆ, ಸಂಕ್ರಾಂತಿ ಜಾತ್ರೆಯ ದಿನ
5. ಸೂರ್ಯೋದಯಕ್ಕೆ ಮುಂಚೆನೇ ಎದ್ದು ಇವನು ತನ್ನ ಮಣ್ಣಿನ ಕೆಲಸ ಶುರು ಮಾಡ್ತಾನಂತೆ, ನಾರಿಯರು ಮೆಚ್ಚಲಿಯೆಂದು
6. ಬೆಟ್ಟದ ಮೇಲಿನ ಬಿದಿರು, ಸೊರೆ ಬುರುಡೆಯಲ್ಲಿ ಮಾಡಿದ ಕಿನ್ನರಿ ಬಾರಿಸಿ ಊರೂರು ಸುತ್ತುತ್ತಾನಂತೆ ಇವನು ಆದರೆ ನಮ್ಮೂರಿಗೇಕೆ ಬರಲೊಲ್ಲ ಇವ.
7. ಅಂದದ ಚಂದದ ಮಾಯಾವಿ ಶಿವನ ಮೇಲೆ ಈ ಪುಷ್ಪದ ಮಳೆಗರೆದರಂತೆ
8. ಈ ಹಣ್ಣಿನ ತೋಟದಲ್ಲಿ ಬೆಳೆದಿಂಗಳು ಕ್ರೀಡೆ ಆಡಿದರೂ ಹೆಣ್ಣು ದೇವರಲ್ಲಿ ಬೇಡುವುದೇ ಬೇರೆ
_______________________
ಉತ್ತರಗಳು
1. ಸಾಮಾನ್ಯ ಅಂಶ:
ಉತ್ತರ
ಸಾಮಾನ್ಯ ಅಂಶ ಏನು : ಹಸ್ತ ಅಥವಾ ಕೈ.
ಏಕೆ: ಈ ಎಲ್ಲ ವಾಕ್ಯಗಳಲ್ಲಿ ಹಸ್ತ ಎನ್ನುವುದನ್ನು ಬೇರೆ ಬೇರೆ ರೀತಿ ಬಳಸಿದೆ
1.ಸವ್ಯಸಾಚಿ, ಎರಡು ಹಸ್ತಗಳಿಂದ (ಎಡಗೈಯಿಂದಲೂ) ಬಾಣ ಬಿಡುವವನು (ಅರ್ಜುನ)
2. ಹಸ್ತ ಸಾಮುದ್ರಿಕಾಶಾಸ್ತ್ರ. ಹಸ್ತ ನೋಡಿ ಭವಿಷ್ಯ ಹೇಳುವುದು
3. ಹಸ್ತಾಕ್ಷರ: ರುಜು, ಕೈ ಬರಹದಲ್ಲಿ ಸಹಿ ಹಾಕುವುದು
4. ಹಸ್ತ ನಕ್ಷತ್ರ, ಇಪ್ಪತ್ತೇಳು ನಕ್ಷತ್ರಗಳಲ್ಲಿ ಒಂದು.
5. ಹಸ್ತ ಎನ್ನುವುದನ್ನು ಆನೆಯ ಸೊಂಡಿಲು ಎಂದು ಬಳಸುತ್ತಾರೆ
6. ಹಸ್ತೋದಕ
7. ಹಸ್ತ ಪ್ರತಿ, ಕಾಗದದಲ್ಲಿ ಬರೆದ್ದದ್ದು
8. ಹಸ್ತಲಾಘವ: ಕೈ ಕುಲುಕು
9. ಹಸ್ತ ಕೌಶಲ: ಕೈ ಚಳಕ
10. ಹಸ್ತಾ ಅಂತರ, ಒಬ್ಬರ ಕೈಯಿಂದ ಮತ್ತೊಬ್ಬರ ಕೈಗೆ (ಬ್ಯಾಟನ್) ಬದಲಾಯಿಸುವುದು
_________
2. ಇಪ್ಪತ್ತೊಂದನೇ ಶತಮಾನದ ಮಾನಸೀ ಆಟ
ಉತ್ತರ.
1. ಒಂ ದು ಕ ಣ್ಣಿ ಗೆ ಬೆ ಣ್ಣೆ ಮ ತ್ತೊಂ ದು ಕ ಣ್ಣಿ ಗೆ ಸು ಣ್ಣ ಹ ಚ್ಚು
2. ಜೈ ಭಾ ರ ತ ಜ ನ ನಿ ಯ ತ ನು ಜಾ ತೆ
3. ಉ ದ ಯ ವಾ ಗ ಲಿ ನ ಮ್ಮ ಕ್ಕ ನ್ನ ಡ ನಾ ಡು
4. ಒ ಲ ವೆ ಜೀ ವ ನ ಸಾ ಕ್ಷಾ ತ್ಕಾ ರ
ಒ ಲ ವೇ ಮ ರೆ ಯ ದ ಮ ಮ ಕಾ ರ
5. ನಾ ಯಿ ಬಾ ಲ ಡೊಂ ಕು
6. ಕೈ ಕೆ ಸ ರಾ ದ ರೆ ಬಾ ಯಿ ಮೊ ಸ ರು
7. ಕೋ ತಿ ಮೊ ಸ ರು ತಿಂ ದು ಮೇ ಕೆ ಬಾ ಯಿ ಗೆ ಒ ರ ಸಿ ತಂ ತೆ
8. ಡಿ. ವಿ. ಜಿ. ಯ ವ ರ ಮಂ ಕು ತಿ ಮ್ಮ ನ ಕ ಗ್ಗ
9. ಜೋ ಗ ಜ ಲ ಪಾ ದ ದ ರಾ ಜ ರಾ ಣಿ ರಾ ಕೆ ಟ್ ರೋ ರ ರ್
10. ಅ ತ್ತೆ ಗೊಂ ದು ಕಾ ಲ ಸೊ ಸೆ ಗೊಂ ದು ಕಾ ಲ
_______________
3. ಕ್ಷ ಅಕ್ಷರ ಊಹಿಸಿ.
ಉತ್ತರ:
1.ಆಕಾಂಕ್ಷೆ (ಮನದ ಆಸೆ)
2. ಸಾಕ್ಷಿ
3. ಇಕ್ಷ್ವಾಕು
4. ರಕ್ಷಾಕವಚ (ಕುಂತಿ ಕರ್ಣ)
5. ದೀಕ್ಷಾಬದ್ಧ
6. ಗವಾಕ್ಷಿ
7. ತಕ್ಷ ಶಿಲಾ
8. ಪಕ್ಷ (ಕಾಂಗ್ರೆಸ್ ಪಕ್ಷ, ಕೃಷ್ಣ ಪಕ್ಷ, ಶುಕ್ಲ ಪಕ್ಷ, ಪಿತೃ ಪಕ್ಷ)
9. ವೃಕ್ಷ (ಮರ)ವಾಲ್ಮೀಕಿ ಬೇಡನಾಗಿದ್ದಾಗ ಮರ ಮರ ಎಂದು ಮಾಡಿದ ಜಪ {ಅದು ರಾಮ ರಾಮ ಎಂದು ಬದಲಾದದ್ದು } )
10. ಪ್ರತ್ಯಕ್ಷ, ಪರೋಕ್ಷ (ನಿಜಸ್ಥಿತಿ, ಮನಸ್ಸಿನಲ್ಲೇ ಉಳಿವ ಸ್ಥಿತಿ)
11. ರಕ್ಷಾಬಂಧನ
12. ಸೂಕ್ಷ್ಮಬುಧ್ಧಿ
13. ಮೋಕ್ಷ
14. ಪ್ರೇಮಭಿಕ್ಷೆ
15. ಮೀನಾಕ್ಷಿ
16. ಲಕ್ಷ್ಮಣ (ಮಾರೀಚ ಆದಿಶೇಷನ ರೂಪವಾದ ಲಕ್ಷಣನನ್ನ ‘ಹೇ ಲಕ್ಷ್ಮಣ’ ಎಂದು ಕೂಗಿದ್ದು ಜ್ಞಾಪಿಸಿಕೊಳ್ಳಿ)
17. ಸುರಕ್ಷಿತ
18. ಕುರುಕ್ಷೇತ್ರ
19. ಶಿಕ್ಷಕ, ಶಿಕ್ಷೆ
20. ಭಕ್ಷೀಸು
____________
4. ಹು ಪದ ಊಹಿಸಿ:
ಉತ್ತರ:
1. ಹುಡುಗ ಹುಡುಗಿ / ಹುಡುಗಾಟಿಕೆ
2. ಹುಣ್ಣಿಮೆ
3. ಹುದುಗು
4. ಹುರುಳಿ ಸಾರು
5. ಹುತ್ತರಿ
6. ಹುಕುಂ
7. ಹುಣಿಸೆ ಮರ
8. ಹುಬ್ಬು
9. ಹುಲಿವೇಷ
10. ಹುಚ್ಚಾಪಟ್ಟೆ
______________
5. ದೇವರ ಹೆಸರುಗಳು
ಉತ್ತರ:
1. ಕಾಡ್ಗಿಚ್ಚು ಮನುಷ್ಯರಿಗೂ ಪ್ರಾಣಿಗಳಿಗೂ ಶತೃ ಆದರೆ ಈ ಶತೃವಿಗೆ ಗೆಳೆಯನಂತೆ ಇವನು: ಅಗ್ನಿಸಖ (ವಾಯು) [ಅಗ್ನಿ ಹರಡಲು ಸಹಾಯಮಾಡುವುದರಿಂದ, ವಾಯು ಅವನ ಗೆಳೆಯ]
2. ಪರ್ವತನ ಅಳಿಯನಾದ ಮಾತ್ರಕ್ಕೆ ತನ್ನ ಹೆಸರನ್ನು ಈ ರೀತಿ ಬದಲಾಯಿಸಿ ಕೊಂಡಿರುವುದನ್ನು ನೋಡಿದರೆ ಹೆಂಡತಿಯ ಮೇಲೆ ತುಂಬಾ ಪ್ರೀತಿಯಿರಬೇಕು ಇವನಿಗೆ. ಅಗ್ರಜೇಶ (ಶಿವ) [ಅಗ್ರಜಾತೆ, ಅಂದರೆ ಪರ್ವತರಾಜನ ಮಗಳು, ಪಾರ್ವತಿ. ಪಾರ್ವತಿಯ ಗಂಡ ಅಗ್ರಜೇಶ, ಶಿವ]
3. ಎರಡೇ ಅಕ್ಷರದ ಹೆಸರಿನಿಂದ ಪರಿಚಯವಿದ್ದರೂ, ಮತ್ತೊಬ್ಬ ಕಾಮುಕ ದೇವರನ್ನು ಕೊಂದವನು ಎಂದು ಇಷ್ಟು ಉದ್ದದ ಹೆಸರು ಇವನಿಗೆ: ಅಂಗಜನ್ಮಾಂತಕ, (ಶಿವ) [ಅಂಗ ಅಂದರೆ ಕಾಮದೇವ. ಕಾಮನನ್ನು ಕೊಂದವನು, ಶಿವ]
4. ಎಲ್ಲರಂತೆ ಇವನಿಗೂ ಎರಡು ಕಣ್ಣು, ಮತ್ತೊಂದು ಕಣ್ತೆರೆದರೆ ಎಲ್ಲವೂ ಭಸ್ಮ : ಅಗ್ನಿನಯನ (ಶಿವ) [ಅಗ್ನಿಯಷ್ಟೇ ತೀಕ್ಷ್ಣ, ಶಿವನ ಮೂರನೇ ಕಣ್ಣು]
5. ಅರ್ಜುನನ ತಂದೆ ಇವನಂತೆ, ಹಾಗಿದ್ದರೆ ಇವನು ದೇವರ ಊರಿಗೆ ಮುಖ್ಯಸ್ಥ: ಅಮರಪತಿ (ಇಂದ್ರ) [ಅಮರ ಅಂದರೆ ದೇವಲೋಕ, ದೇವಲೋಕದ ಅಧಿಪತಿ, ಇಂದ್ರ, ಅರ್ಜುನನ ತಂದೆ]
6. ನೀರಿನಲ್ಲಿ ಅಥವಾ ತಾವರೆಯಲ್ಲಿ ಮನೆಮಾಡಿರುವವಳಂತೆ ಈ ದೇವತೆ: ಅಬ್ಜವಾಸಿನಿ (ಲಕ್ಷ್ಮಿ) [ಅಬ್ಜ ಅಂದರೆ ನೀರು]
7. ಎಲ್ಲ ದೇವರುಗಳನ್ನು ಹೆಚ್ಚಾಗಿ ನೀಲಿ ಬಣ್ಣದಲ್ಲಿ ಚಿತ್ರಿಸಿದ್ದರೂ , ಇವನನ್ನು ಮಾತ್ರ ಜ್ವಾಲೆಯ ಬಣ್ಣದಲ್ಲಿ ಕೂಡ ವರ್ಣಿಸಿದ್ದಾರೆ ನಮ್ಮ ಕವಿಗಳು: ಅಗ್ನಿವರ್ಣ (ಶ್ರೀರಾಮ) [ದಶರಥನ ಅಗ್ನಿಪೂಜೆಯ ಪುತ್ರಕಾಮೇಷ್ಟಿಯಾಗದಲ್ಲಿ ಹುಟ್ಟಿದವನು ರಾಮ]
8. ತುಂಬಾ ಊಹಾಶಕ್ತಿಯಿರಬೇಕು ನಮ್ಮ ಪುರಾಣ ಬರೆದವರಿಗೆ ಇಲ್ಲದಿದ್ದರೆ ಎತ್ತರದ ಶಿಖರ ಇವಳ ತಂದೆ ಆಗಲು ಸಾಧ್ಯವಿತ್ತೇ?: ಅಗ್ರಜಾತೆ (ಪಾರ್ವತಿ) [ಅಗ್ರ ಅಂದರೆ ಉನ್ನತ ಪರ್ವತ. ಪರ್ವತರಾಜನ ಮಗಳು, ಪಾರ್ವತಿ]
9. ನಾಲ್ಕು ದಿಕ್ಕಿನಲ್ಲಿ ನಾಲ್ಕು ತಲೆ, ನರೆತ ಕೂದಲು, ಗಡ್ಡ, ಆದರೂ ಇವನಿಗೆ ಚೆಲುವರಲ್ಲಿ ಚೆಲುವ ಮಗನಂತೆ: ಅಂಗಜನಕ (ಬ್ರಹ್ಮ) [ಅಂಗ ಅಂದರೆ ಕಾಮ ದೇವ. ಕಾಮದೇವನ ತಂದೆ ಬ್ರಹ್ಮ]
10. ಉದರದಿಂದ ತಾವರೆಯ ಬಳ್ಳಿ, ಆ ತಾವರೆಯೊಳಗೆ ಕುಳಿತ ಒಬ್ಬ ದೇವತೆ, ಆದರೆ ಎಲ್ಲರಂತೆ ನೆಡೆಯಲು ಸಾಧ್ಯವೇ ಇವನಿಗೆ?: ಅಂಬುಜೋಧರ (ವಿಷ್ಣು) [ಅಂಬುಜ ಅಂದರೆ ಕಮಲ. ಉಧರದಲ್ಲಿ ಕಮಲವಿರುವವನು, ವಿಷ್ಣು]
11. ಎಲ್ಲರಿಗಿಂತ ಹೆಚ್ಚು ಐಶ್ವರ್ಯ ಇರುವುದಂತೆ ಈ ಟೊಣಪನ ಬಳಿ, ಆದರೆ ಎಲ್ಲರು ಪೂಜಿಸುವ ದೇವ ಇವನ ಗೆಳೆಯನಂತೆ: ಅರ್ಥನಾಥಸಖ (ಶಿವ) [ಅರ್ಥನಾಥ ಅಥವಾ ಐಶ್ವರ್ಯದ ಅಧಿಪತಿ, ಅಂದರೆ ಕುಬೇರ. ಕುಬೇರನ ಗೆಳೆಯ, ಶಿವ]
12. ಕಮಲದಂತ ಕಣ್ಣುವುಳ್ಳವನಂತೆ ಇವನು, ಇಲ್ಲದಿದ್ದರೆ ಹದಿನಾರು ಸಾವಿರ ಹೆಂಗೆಳೆಯರು ಇವನ ಸ್ನೇಹ ಬಯಸುತ್ತಿದ್ದರೆ?: ಅಂಬುಜಾತಾಕ್ಷ (ಶ್ರೀ ಕೃಷ್ಣ) [ಅಂಬುಜ ಅಂದರೆ ಕಮಲಾ, ಕಮಲದಂತ ಕಣ್ಣುವುಳ್ಳವನು ಕೃಷ್ಣ]
13. ಹಾವು, ಹಗ್ಗದಂತ ಜಟೆ, ಚರ್ಮದ ಉಡುಗೆ, ಇವೆಲ್ಲವೂ ಮೈಮೇಲೆ ಇದ್ದರೂ ಸಾಲದು ಎನ್ನುವಂತೆ ತಲೆ ಮೇಲೆ ಅಷ್ಟು ಭಾರದ ಇನ್ನೊಂದು ಉಪಗ್ರಹ ಕೂಡ ಬೇಕಿತ್ತೇ ಇವನಿಗೆ?: ಅರ್ಧಚಂದ್ರಚೂಡ (ಶಿವ) [ಅರ್ಧ ಚಂದ್ರನನ್ನು ಧರಿಸಿರುವನು, ಶಿವ ]
14. ಶಿವ ಧನಸ್ಸನ್ನು ಮುರಿದು ಭೂತಾಯಿ ಗರ್ಭದಲ್ಲಿ ಹುಟ್ಟಿದವಳನ್ನು ಮದುವೆಯಾದನಂತೆ ಇವನು: ಅವನಿಜಾಪತಿ (ಶ್ರೀ ರಾಮ) [ಅವನಿ ಅಂದರೆ ಭೂಮಿ, ಭೂಮಿಯ ಗರ್ಭದಲ್ಲಿ ಹುಟ್ಟಿದವಳು ಸೀತೆ. ಸೀತೆಯ ಗಂಡ ರಾಮ ]
15. ಮಹಿಷಾಸುರ ಮರ್ಧಿನಿಗೆ ಆಯುಧಗಳೇ ಶೋಭೆ, ಈ ದೇವತೆಗೆ ವಾದ್ಯವೇ ಶೋಭೆ: ಮಾಣಿಕ್ಯವೀಣಾಪಾಣಿ (ಸರಸ್ವತಿ) [ಮಾಣಿಕ್ಯ ಖಚಿತ ವೀಣೆಯನ್ನು ಕೈಯಲ್ಲಿ ಹಿಡಿದವಳು, ಸರಸ್ವತಿ]
___________
6. ಅಪರೂಪದ ಗಾದೆಗಳು
ಉತ್ತರ:
1. ಆಗಭೋಗಕ್ಕೆಲ್ಲಾ ರಂಗಸ್ವಾಮಿ, ಸತ್ಯಪ್ರಮಾಣಕ್ಕೆ ಗಂಗಾಧರೇಶ್ವರ
2. ಆತನ ತಮ್ಮನು ಈತನೆಂದು ಮಾತಿನಿಂದ ತಿಳಿಯಬಹುದು
3. ಆದಿ ಹಿಡಿದ ಮನುಷ್ಯನಿಗೆ ಅದೇ ಮುಪ್ಪು
4. ಆನೆ ಮೇಲೆ ಹೋಗುವವನ ಸುಣ್ಣ ಕೇಳಿದಹಾಗೆ
5. ಆಲೆ ಇಲ್ಲದ ಊರಿಗೆ ಇಪ್ಪೆಯ ಹೂವೇ ಸಕ್ಕರೆ (ಆಲೆ = ಆಲೆಮನೆ, ಬೆಲ್ಲ ಮಾಡುವ ಜಾಗ)
__________
7. ರಥ ಸಪ್ತಮಿ. ಸೂರ್ಯ ಜಯಂತಿ. ಸಣ್ಣ ಪ್ರಶ್ನಾವಳಿ
ಉತ್ತರ.
1. ಅಗಸ್ತ್ಯ ಮುನಿ. ಆದಿತ್ಯ ಹೃದಯಂ.
2. ಗಾಯತ್ರಿ, ಬೃಹತಿ, ಉಶ್ನಿಹ್, ಜಾಗತಿ, ತ್ರೈಷ್ಟುಭಾ, ಅನುಷ್ಟುಭ, ಪಂಕ್ತಿ
3. ಕಮಲದ ಹೂ
4. ಕಶ್ಯಪ ನ ಮಗ. ಇಲ್ಲಿ ಆತ್ಮಜ ಅಂದರೆ ಮಗ.
5. ಸ್ಕಂದ ಪುರಾಣ
________________
8. ಕನ್ನಡದಲ್ಲಿ ಜೆಪರ್ಡಿ.
ಉತ್ತರಗಳಿಗೆ ಸರಿಯಾದ ಪ್ರಶ್ನೆಗಳು:
1A: (ನಗಬೇಡಿ). ಕುಂಡೆ ಹಬ್ಬ ಎಂದರೆ ಏನು?
1B: ಜೆನೆರಲ್ ಕರಿಯಪ್ಪ ಅಂದರೆ ಯಾರು?
1C: ಪತ್ತೊಲೆ ಪಲೂಮೆ ಯಾವ ಪುಸ್ತಕದ ಹೆಸರು?
1D: ಏನ್. ಪೊನ್ನಪ್ಪ ಅಂದರೆ ಯಾರು?
1E: ಮಂಗ್ಯ ಪಜ್ಜಿ ಎಂದರೆ ಏನು?
2A: ಬೈಲುಕುಪ್ಪೆ ಎಲ್ಲಿದೆ?
2B: ಪದ್ಮಸಂಭವ ಮತ್ತು ಅಮಿತಾಯುಶ್ (ಟಿಬೆಟಿನ ಬೌದ್ಧ ಗುರುಗಳು ಯಾರು?)
2C: ಲೂಸಾರ್ ಎಂದರೆ ಏನು?
2D: 60 ಸಂವತ್ಸರ ಮತ್ತು 12 ಮಾಸಗಳು ಎಂದರೆ ಏನು?
2E: ಶವ ಸಂಸ್ಕಾರ ಎರಡೂ ಧರ್ಮಗಳಲ್ಲಿ ರಣ ಹದ್ದು ಮತ್ತಿತರ ಪಕ್ಷಿಗಳಿಗೆ ಮೀಸಲು ಎಂದರೆ ಏನು?
3A: ಬೀದರ್ ಎಂದರೆ ಯಾವ ಊರು?
3B: ೧. ವೇಣೂರು ೨. ಕಾರ್ಕಳ ೩. ಶ್ರವಣ ಬೆಳಗೊಳ ೪. ಗೊಮ್ಮಟ ಗಿರಿ ೫. ಧರ್ಮಸ್ಠಳ ಅಂದರೆ ಯಾವ ಊರುಗಳು?
3C: ಬೆಂಗಳೂರು ಅಂದರೆ ಯಾವ ಊರು?
3D: ಹಾಸನ ಎಂದರೆ ಯಾವ ಊರು?
3E: (ರಾಯಚೂರಿನ ಬಳಿಯಿರುವ) ಹಟ್ಟಿ ಚಿನ್ನದ ಗಣಿ ಎಲ್ಲಿದೆ?
4A: ಅಂತೆ ಎಂದರೆ ಏನು?
4B: ಅನಂತಶಯನ ಅಂದರೆ ಯಾರು?
4C: ವೈಮಾತ್ರೇಯ ಅಂದರೆ ಯಾರು?
4D: ಪೀತಾಂಬರ ಅಂದರೆ ಏನು?
4E: ಹಿಂದಿನಿದ ಮುಂದಕ್ಕೂ, ಮುಂದಿನಿಂದ ಹಿಂದಕ್ಕೂ ಚಲಿಸುವುದು ಅಂದರೆ ಏನು?
_____________
9. ಈ ಚರಣ ಯಾವ ಹಾಡಿನದು?
ಉತ್ತರ:
೧. ಥೈ ಥೈ ಬಂಗಾರಿ, ಸೈ ಸೈ ಎನ್ನು ಸಿಂಗಾರಿ (ಚಿತ್ರ: ಗಿರಿಕನ್ಯೆ)
೨. ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು (ಚಿತ್ರ: ಕಸ್ತೂರಿ ನಿವಾಸ)
೩. ಇದು ಯಾರು ಬರೆದ ಕಥೆಯೋ, ಎನಗಾಗಿ ತಂದ ವ್ಯಥೆಯೋ (ಚಿತ್ರ: ಪ್ರೇಮದ ಕಾಣಿಕೆ)
೪. ಉಸಿರೇ ಉಸಿರೇ ಈ ಉಸುರ ಕೊಲ್ಲ ಬೇಡ (ಚಿತ್ರ: ಹುಚ್ಚ)
೫. ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ (ಚಿತ್ರ: ಮಿಲನ)
೬. ಅನಿಸುತಿದೆ ಯಾಕೋ ಇಂದು ನೀನೆ ನನ್ನವಳೆಂದು (ಚಿತ್ರ: ಮುಂಗಾರು ಮಳೆ)
೭. ರವಿ ವರ್ಮನ ಕುಂಚದ ಕಲೆ ಭಲೇ ಸಾಕಾರವೋ (ಚಿತ್ರ: ಸೊಸೆ ತಂದ ಸೌಭಾಗ್ಯ)
೮. ಬೆಳುವಲದ ಮಡಿಲಲ್ಲಿ ಬೆವರ ಹನಿ ಬಿದ್ದಾಗ (ಚಿತ್ರ: ಬೆಳುವಲದ ಮಡಿಲಲ್ಲಿ)
೯. ಕನಸಲೂ ನೀನೆ ಮನಸಲೂ ನೀನೆ (ಚಿತ್ರ: ಬಯಲುದಾರಿ)
೧೦. ತೇರಾನೇರಿ ಅಂಬರದಾಗೆ ನೇಸರ ನಗುತಾನೆ (ಚಿತ್ರ: ಪರಸಂಗದ ಗೆಂಡೆತಿಮ್ಮ)
೧೧. ಇಳಿದು ಬಾ ತಾಯಿ ಇಳಿದು ಬಾ ಹರನ ಜಡೆಯಿಂದ.. (ಚಿತ್ರ: ಅರಿಶಿನ ಕುಂಕುಮ)
೧೨. ಬದುಕಿನ ಬಣ್ಣವೇ ಬದಲಾದರೆ ಅದು ಪ್ರೇಮವೇ (ಚಿತ್ರ:ಟಗರು)
೧೩. ತುಂತುರು ಅಲ್ಲಿ ನೀರ ಹಾಡು ಕಂಪನ ಇಲ್ಲಿ ಪ್ರೀತಿ ಹಾಡು (ಚಿತ್ರ: ಅಮೃತವರ್ಷಿಣಿ)
೧೪. ಘಾಟಿಯ ಇಳಿದು ತೆಂಕಣ ಬಂದು ಅವಳ ನೋಡಿ ನಿಂತನು (ಚಿತ್ರ: ಉಳಿದವರು ಕಂಡಂತೆ)
೧೫. ನಾದಮಯ ಈ ಲೋಕವೆಲ್ಲ ನಾದಮಯ (ಚಿತ್ರ: ಜೀವನ ಚೈತ್ರ)
೧೬. ಪ್ಯಾರ್ಗೆ ಆಗಬುಟ್ಟೈತೆ ಓ ನಮ್ದುಕೆ ಪ್ಯಾರ್ಗೆ ಆಗಬುಟ್ಟೈತೆ (ಚಿತ್ರ: ಗೋವಿಂದಾಯ ನಮಃ)
೧೭. ಬಾಗಿಲನು ತೆರೆದು ಸೇವೆಯನು ಕೊಡೊ ನರಹರಿಯೇ (ಚಿತ್ರ: ಭಕ್ತ ಕನಕದಾಸ)
೧೮. ತರವಲ್ಲ ತಗಿ ನಿನ್ನ ತಂಬೂರಿ, ಒಳಗೆ ಬಾರಿಸದಿರು ತಂಬೂರಿ (ಚಿತ್ರ: ಶಿಶುನಾಳ ಶರೀಫ)
_______________
10. ಸುಭಾಷಿತ ರಸಪ್ರಶ್ನೆ
ಉತ್ತರ:
೧. ಗಾರ್ಧಭ ಅಥವಾ ಕತ್ತೆ
೨. ವಿಧ್ಯೆ
೩. ಕಮಲ, ಕೈಲಾಸ ಪರ್ವತ, ಸಮುದ್ರದ ಸುಳಿ (ಆವರ್ತ)
೪. ಕೇಶವ
೫. ಬಾವಿ ತೋಡಲು ಪ್ರಾರಂಭ ಮಾಡಬಾರದು
೬. ಕ್ಷಮೆ
೭. ಕರ ದರ್ಶನ ಮಾಡಬೇಕು
೮. ವಸಂತ ಕಾಲ (ಕೋಗಿಲೆ ಹಾಡಿದಾಗ)
೯. ನಾಳೆಯ ಕೆಲಸವನ್ನು ಇಂದೇ ಮಾಡುತ್ತಾನೆ
೧೦. ಚಿತೆ ಮತ್ತು ಚಿಂತೆ (ಚಿತೆ ನಿರ್ಜಿವವನ್ನು ಮತ್ತು ಚಿಂತೆ ಜೀವವನ್ನು ಸುಡುತ್ತದೆ)
ಸಂಸ್ಕೃತದ ಮೂಲ ಸುಭಾಷಿತಗಳು, ರಸಪ್ರಶ್ನೆಗೆ ಉತ್ತರ.
೧. ಅವಿಶ್ರಾಮಂ ವಹೇದ್ಭಾರಂ ಶೀತೋಷ್ಣಂ ನ ಚ ವಿನ್ದತಿ ।
ಸಸನ್ತೋಷಸ್ತಥಾ ನಿತ್ಯಂ ತ್ರೀಣಿ ಶಿಕ್ಷೇತ ಗರ್ದಭಾತ್ ॥ 20॥
೨. ನ ಚೋರಹಾರ್ಯಂ ನ ಚ ರಾಜಹಾರ್ಯಂ ನ ಭ್ರಾತೃಭಾಜ್ಯಮ್ ನ ಚ ಭಾರಕಾರೀ ।
ವ್ಯಯೇ ಕೃತೇ ವರ್ಧತ ಏವ ನಿತ್ಯಂ ವಿದ್ಯಾಧನಂ ಸರ್ವಧನಪ್ರಧಾನಮ್ ॥
೩. ಕಮಲೇ ಕಮಲಾ ಶೇತೇ ಹರಷೇತೇ ಹಿಮಾಲಯೇ ।
ಕ್ಷಿರಾಬ್ಧೌ ಚ ಹರಿಷೇತೇ ಮನ್ಯೇ ಮತ್ಕುಣ ಶನ್ಕಯ। ॥
೪. ಆಕಾಶಾತ್ ಪತಿತಂ ತೋಯಂ ಯಥಾ ಗಚ್ಛತಿ ಸಾಗರಮ್ ।
ಸರ್ವದೇವನಮಸ್ಕಾರಃ ಕೇಶವಂ ಪ್ರತಿಗಚ್ಛತಿ ॥
೫. ಚಿನ್ತನೀಯಾ ಹಿ ವಿಪದಾಮಾದಾವೇವ ಪ್ರತಿಕ್ರಿಯಾ ।
ನ ಕೂಪಖನನ್ಂ ಯುಕ್ತಂ ಪ್ರದೀಪ್ತೇ ವಹ್ನಿನಾ ಗೃಹೇ ॥
೬. ಕ್ಷಮಾ ಬಲಮಶಕ್ತಾನಾಮ್ ಶಕ್ತಾನಾಮ್ ಭೂಶಣಮ್ ಕ್ಷಮಾ ।
ಕ್ಷಮಾ ವಶಿಕ್ರುತೇ ಲೋಕೇ ಕ್ಷಮಯಾ: ಕಿಮ್ ನ ಸಿಧ್ಯತಿ ।
೭. ಕರಾಗ್ರೇ ವಸತೇ ಲಕ್ಷ್ಮೀಃ ಕರಮಧ್ಯೇ ಸರಸ್ವತೀ ।
ಕರಮೂಲೇ ತು ಗೋವಿನ್ದಃ ಪ್ರಭಾತೇ ಕರದರ್ಶನಮ್ ॥
೮. ಕಾಕಃ ಕೃಷ್ಣಃ ಪಿಕಃ ಕೃಷ್ಣಃ ಕೋ ಭೇದಃ ಪಿಕಕಾಕಯೋಃ ।
ವಸನ್ತಸಮಯೇ ಪ್ರಾಪ್ತೇ ಕಾಕಃ ಕಾಕಃ ಪಿಕಃ ಪಿಕಃ ॥
೯. ನ ಹಿ ಕಶ್ಚಿತ್ ವಿಜಾನಾತಿ ಕಿಂ ಕಸ್ಯ ಶ್ವೋ ಭವಿಷ್ಯತಿ ।
ಅತಃ ಶ್ವಃ ಕರಣೀಯಾನಿ ಕುರ್ಯಾದದ್ಯೈವ ಬುದ್ಧಿಮಾನ್ ॥
೧೦. ಚಿನ್ತಾಯಾಸ್ತು ಚಿತಾಯಾಸ್ತು ಬಿನ್ದು ಮಾತ್ರಮ್ ವಿಶೇಶತಃ ।
ಚಿತಾ ದಹತಿ ನಿರ್ಜೀವಮ್, ಚಿನ್ತಾ ದಹತಿ ಜೀವಿತಮ್ ॥
_________________
11. ಕನ್ನಡ ಕಾದಂಬರಿ ಆಧಾರಿತ ಚಲನಚಿತ್ರಗಳು
ಉತ್ತರ:
೧. ಉಯ್ಯಾಲೆ (ಚದುರಂಗ) ೨. ಚೋಮನ ದುಡಿ (ಶಿವರಾಮ ಕಾರಾಂತ್) ೩. ಶರಪಂಜರ (ತ್ರಿವೇಣಿ) ೪. ಸಂಧ್ಯಾರಾಗ (ಅ. ನ.. ಕೃ) ೫. ಮಯೂರ (ದೇವುಡು ನರಸಿಂಹ ಶಾಸ್ತ್ರಿ)
__________________
12, ಹೀಗೊಂದು ಸಂಭಾಷಣೆ.
ಉತ್ತರ:
ಇದು ಡಾ. ರಾಜ್ ಜೊತೆ ನಡೆದ ಕಾಲ್ಪನಿಕ ಸಂಭಾಷಣೆ ಅಂತ ಊಹಿಸಿದರೆ ಉತ್ತರ ಸುಲಭ.
1. ಡಾ. ರಾಜ್ ರ 1, 50, 100, 150, 200ನೇ ಚಿತ್ರಗಳ ಹೆಸರು: 1. ಬೇಡರಕಣ್ಣಪ್ಪ, 50. ಚಂದವಳ್ಳಿಯ ತೋಟ 100. ಭಾಗ್ಯದ ಬಾಗಿಲು 150. ಗಂಧದ ಗುಡಿ 200. ದೇವತಾ ಮನುಷ್ಯ
2. ಡಾ. ರಾಜ್ ನಟಿಸಿದ ಎರಡು ಇಂಗ್ಲಿಷ್ನಲ್ಲೇ ಟೈಟಲ್ ಇರುವ ಚಿತ್ರಗಳು: 1. ಆಪರೇಷನ್ ಜ್ಯಾಕ್ಪಾಟ್ CID 999, 2. ಆಪರೇಷನ್ ಡೈಮಂಡ್ ರಾಕೆಟ್
3. ಡಾ. ರಾಜ್ ನಟಿಸಿದ ಈ ಚಿತ್ರಗಳಲ್ಲಿ ಸ್ತ್ರೀ-ಪಾತ್ರಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಟ್ಟ ಚಿತ್ರಗಳು ಮತ್ತು ಅವರು ನಟಿಸಿದ ೨೦೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ಇವು ಮಾತ್ರ ಟೈಟಲ್ ಕೂಡ ಸ್ತ್ರೀ ಹೆಸರಿನವು
4. ಸಿಪಾಯಿ ರಾಮು ಚಿತ್ರದಲ್ಲಿ ಚಂಬಲ್ ಕಣಿವೆಯ ಕಳ್ಳನಾಗಿ ಡಾ. ರಾಜ್ ರ ಅಭಿನಯ.
5. ಅನಂತ್ ನಾಗ್ ಮತ್ತು ಶಂಕರ್ ನಾಗ್ (ನಾಗರಕಟ್ಟೆ ಸಹೋದರರು) ಡಾ. ರಾಜ್ ಜೊತೆ ಅಭಿನಯಿಸಿದ ಚಿತ್ರಗಳು: ಕಾಮನ ಬಿಲ್ಲು, ಭಕ್ತ ಪ್ರಹಲ್ಲಾದ, ಅಪೂರ್ವ ಸಂಗಮ
__________________
13. ಬಣ್ಣ ಬಣ್ಣದ ಹೋಳಿ ಹಬ್ಬ
ಉತ್ತರ:
1. ಒಂದು ಕೆಂಪು + ಒಂದು ನೀಲಿ = ನೇರಳೆ ಅಥವಾ ನೀಲಿ-ನೇರಳೆ
2. ಎರಡು ನೀಲಿ + ಒಂದು ಕೆಂಪು = ಕೆನ್ನೀಲಿ ಅಥವಾ ಪರ್ಪಲ್
3. ಎರಡು ನೀಲಿ + ಒಂದು ಹಳದಿ = ತಿಳಿನೀಲಿ ಅಥವಾ ಟೀಲ್
4. ಒಂದು ನೀಲಿ + ಒಂದು ಹಳದಿ = ಹಸಿರು
5. ಎರಡು ಹಳದಿ + ಒಂದು ನೀಲಿ = ತಿಳಿ ಹಸಿರು
6. ಎರಡು ಹಳದಿ + ಒಂದು ಕೆಂಪು = ಪೀತಾಂಬರ ಅಥವಾ ಆಂಬರ್
7. ಒಂದು ಕೆಂಪು + ಒಂದು ಹಳದಿ = ಕಿತ್ತಳೆ, ಕೇಸರಿ, ನಾರಂಗಿ
8. ಎರಡು ಕೆಂಪು + ಒಂದು ಹಳದಿ = ಕುಂಕುಮ, ಸಿಂಧೂರ
9. ಒಂದು ಕಪ್ಪು + ಒಂದು ಬಿಳಿ = ಬೂದು ಅಥವಾ ಗ್ರೇ
10. ಎರಡು ಕೆಂಪು + ಒಂದು ಕಪ್ಪು = ಕಂದು ಅಥವಾ ಕಡುಗೆಂಪು
11. ಒಂದು ಕೆಂಪು + ಒಂದು ಹಳದಿ = ಗುಲಾಬಿ ಅಥವಾ ಪಿಂಕ್
12. ಎರಡು ಹಳದಿ + ಒಂದು ಕಪ್ಪು = ಕಂದು (ಮಣ್ಣಿನ ಬಣ್ಣ) ಅಥವಾ ಬ್ರೌನ್
13. ಎರಡು ನೀಲಿ + ಒಂದು ಕಪ್ಪು = ನೀಲಿ ಅಥವಾ ತೀವ್ರ ನೀಲಿ ಅಥವಾ ಇಂಡಿಗೋ ಅಥವಾ ನೇವಿಬ್ಲ್ಯೂ
14. ಒಂದು ನೀಲಿ + ಒಂದು ಬಿಳಿ = ತಿಳಿನೀಲಿ ಅಥವಾ ಆಕಾಶ ನೀಲಿ
____________________
14. ಹಾಡಿಗೆ ದಿಲ್ಲಿಯಾದರೇನು ಹಳ್ಳಿಯದಾದರೇನು?
ಉತ್ತರ:
1. ಭಾಗ್ಯದ ಬಳೆಗಾರ ಹೋಗಿ ಬಾ ನನ್ನ್ ತವರಿಗೆ
2. ನವ್ವಾಲೆ ಬಂತಪ್ಪ ನವ್ವಾಲೆ, ಸೋಗಿಯ ಬಣ್ಣದ ನವ್ವಾಲೆ
3. ಮಾಯದಂಥ ಮಳೆ ಬಂತಣ್ಣ ಮದಗಾರ ಕೆರೆಗೆ
4. ಜಲ್ಲೆ ಕಬ್ಬು ವಲ್ಲಿ ವಸ್ತ್ರ ನಲ್ಲ ನಿನಗೆ
5. ಮುಂಜಾನೆದ್ದು ಕುಂಬಾರಣ್ಣ ಹಾರುಬ ಉಂಡಾನ ಹಾರುತ್ತ
6. ಚಲುವಯ್ಯ ಚೆಲುವೋ ತಾನಿ ತಂದಾನ ಚಿನ್ನ ಮಾಯಾರೂಪೇ
7. ಚೆಲ್ಲಿದರು ಮಲ್ಲಿಗೆಯ ಬಾನ ಸುರೇಲಿಮ್ಯಾಲೆ
8. ನಿಂಬಿಯಾ ಬನಾದಮ್ಯಾಗಳ ಚಂದ್ರಮ ಚೆಂಡಾಡಿದ
____________________
ಚತುಷ್ಕೋನ: ಅಣ್ಣಾವರ ಚಿತ್ರಗಳನ್ನು ಪತ್ತೆಹಚ್ಚಿ.
ಮೇಲೆ ಕೊಟ್ಟಿರುವ ಚತುಷ್ಕೋನದಲ್ಲಿ ಈ ಕೆಳಗೆ ಕೊಟ್ಟಿರುವ ಡಾ. ರಾಜಕುಮಾರ್ ನಟಿಸಿರುವ ಚಿತ್ರಗಳ ಹೆಸರು ಅವಿತುಕೊಂಡಿವೆ.
ಬಬ್ರುವಾಹನ, ಬಂಗಾರದ ಮನುಷ್ಯ , ಅಮ್ಮ , ಬೆಂಗಳೂರು ಮೈಲ್ , ಆಕಸ್ಮಿಕ , ಗಂಧದ ಗುಡಿ , ಬಹದ್ದೂರು ಗಂಡು , ಕಿತ್ತೂರು ಚೆನ್ನಮ್ಮ, ಶ್ರೀ ಕೃಷ್ಣದೇವರಾಯ, ಭಕ್ತ ಕುಂಬಾರ , ಶ್ರೀ ಕೃಷ್ಣ ಗಾರುಡಿ , ಗಾಳಿ ಗೋಪುರ, ಭಲೇ ಜೋಡಿ , ಶಂಕರ್ ಗುರು , ಅಣ್ಣ ತಂಗಿ , ಕಣ್ತೆರೆದು ನೋಡು , ವಾಲ್ಮೀಕಿ , ಕನ್ಯಾರತ್ನ ,ಮಯೂರ, ನಮ್ಮ ಸಂಸಾರ , ಬೇಡರ ಕಣ್ಣಪ್ಪ , ಭಲೇ ಹುಚ್ಚ , ಭಲೇ ರಾಜ, ಚೂರಿ ಚಿಕ್ಕಣ್ಣ , ದಶಾವತಾರ , ದೇವತಾ ಮನುಷ್ಯ , ಗಾಂಧಿ ನಗರ , ಕರುಳಿನ ಕರೆ , ಭಕ್ತ ಪ್ರಹಲ್ಲಾದ , ಚಿಕ್ಕಮ್ಮ , ಹಾಲುಜೇನು , ಹರಿಭಕ್ತ , ಭಕ್ತ ಚೇತ , ಹಸಿರು ತೋರಣ , ಕಸ್ತೂರಿ ನಿವಾಸ , ಪ್ರತಿಧ್ವನಿ , ಮಧುಮಾಲತಿ , ಬಂಗಾರದ ಹೂವು , ಅದೇ ಕಣ್ಣು , ಧೂಮಕೇತು , ಚಂದ್ರಹಾಸ , ನಾಗಾರ್ಜುನ , ಭೂಕೈಲಾಸ , ಧೃವತಾರೆ , ಎರಡು ಕನಸು , ಸತಿಶಕ್ತಿ , ಮನಸಾಕ್ಷಿ , ಗೌರಿ , ಗಂಗೆ ಗೌರಿ, ಭೂದಾನ , ಗಿರಿಕನ್ಯೆ , ಗುರಿ, ಬಿಡುಗಡೆ
ಈ ಚಿತ್ರಗಳು ಮೇಲಿಂದ ಕೆಳಕ್ಕೆ, ಕೆಳಗಿಂದ ಮೇಲಕ್ಕೆ, ಎಡಗಡೆಯಿಂದ ಬಲಗಡೆಗೆ, ಬಲಗಡೆಯಿಂದ ಎಡಗಡೆಗೆ, ಮತ್ತು ಕರ್ಣರೇಖೆಯಲ್ಲಿ (Diagonal) ಇರಬಹುದು. ಅವುಗಳನ್ನು ಮೊದಲು ಪತ್ತೆ ಮಾಡಿ ಆ ಅಕ್ಷರಗಳ ಮೇಲೆ ವೃತ್ತಾಕಾರದ ಚಿನ್ಹೆಯನ್ನು ಹಾಕಿರಿ. ಒಂದು ಪದ ಗುರಿತಿಸಿದ ಮೇಲೆ ಕೊಟ್ಟಿರುವ ಪಟ್ಟಿಯಲ್ಲಿ ಅಡ್ಡಗೆರೆ ಎಳೆಯುತ್ತ ಹೋದರೆ ಆಟ ಸುಲಭವಾಗುವುದು. ಎಲ್ಲ ಪದಗಳನ್ನು ಸರಿಯಾಗಿ ಪತ್ತೆಹಚ್ಚಿದರೆ ೧೦ ಅಕ್ಷರಗಳು ಉಳಿಯುವುದು. ಆ ಉಳಿದ ೧೦ ಅಕ್ಷರಗಳನ್ನು ಇಲ್ಲಿ ಭರ್ತಿ ಮಾಡಿ:
⬜⬜⬜⬜⬜⬜⬜⬜⬜⬜
ಅಡ್ಡಾದಿಡ್ಡಿಯಾಗಿ ಕಾಣುವ ಈ ಅಕ್ಷರಗಳನ್ನು ಮತ್ತೆ ಬಳಸಿಕೊಂಡು ನಿಮಗೆ ತೋಚಿದ ಡಾ. ರಾಜ್ ಕುಮಾರ್ ಚಿತ್ರದ ಹೆಸರನ್ನು ಇಲ್ಲಿ ಬರೆಯಿರಿ. ಟಿಪ್: ಭಾರತಿ ಮತ್ತು ಸರೋಜಾ ದೇವಿ ನಾಯಕಿಯರಾಗಿ ನಟಿಸಿದ್ದರೂ, ನಾರದನ ಕಿತಾಪತಿ ಹೆಚ್ಚಾಗಿದೆ, ಅಣ್ಣಾವರ ಈ ಪೌರಾಣಿಕ ಚಿತ್ರದಲ್ಲಿ!
⬜ ⬜⬜ ⬜⬜⬜ ⬜⬜⬜⬜
ಉತ್ತರ: ಶ್ರೀ ಕೃಷ್ಣ ರುಕ್ಮಿಣಿ ಸತ್ಯಭಾಮ
ಅಡ್ಡಾದಿಡ್ಡಿ ಪದಗಳು 1
ಕೆಳಗೆ ಕೊಟ್ಟಿರುವ ಪದಗಳನ್ನು ಸರಿ ಮಾಡಿ ಚತುಷ್ಕೋನ ಮತ್ತು ವರ್ತುಲಾಕಾರಗಳಲ್ಲಿ ಭರ್ತಿ ಮಾಡಿ. ನಂತರ ವರ್ತುಲಾಕಾರಗಳಲ್ಲಿ ಇರುವ ಅಕ್ಷರಗಳನ್ನು ಉಪಯೋಗಿಸಿಕೊಂಡು ಕೆಳಗೆ ಕೊಟ್ಟಿರುವ ಚಿತ್ರಕ್ಕೆ ಸರಿಹೊಂದುವ ಶೀರ್ಷಿಕೆಯನ್ನು ಭರ್ತಿ ಮಾಡಿ.
ತೆ ವೀ ನ ಮಾ ಯ ⬜ ◯ ⬜ ◯ ◯
ನು ಜಾ ಮಿ ◯ ⬜ ◯
ತ ಹಾ ಭಾ ಮ ರ ⬜ ⬜ ◯ ◯ ◯
ರ ಯ ಜ ಜ ಕಾ ಯ ◯ ◯ ◯ ◯ ⬜ ⬜
ತ ನಿ ಸ್ವಿ ಪ ◯ ⬜ ⬜ ◯
ಕನ್ನಡಾಂಬೆಯ ಈ ಗೀತೆ ಕೇಳಿದರೆ ಕನ್ನಡ ನುಡಿ ಕುಣಿದಾಡುವುದೆನ್ನ ಮನದಲಿ
◯◯ ◯◯◯ ◯◯◯◯ ◯◯◯◯
_____________________________________________
ಅಡ್ಡಾದಿಡ್ಡಿ ಪದಗಳು 2
ಕೆಳಗೆ ಕೊಟ್ಟಿರುವ ಪದಗಳನ್ನು ಸರಿ ಮಾಡಿ ಚತುಷ್ಕೋನ ಮತ್ತು ವರ್ತುಲಾಕಾರಗಳಲ್ಲಿ ಭರ್ತಿ ಮಾಡಿ. ನಂತರ ವರ್ತುಲಾಕಾರಗಳಲ್ಲಿ ಇರುವ ಅಕ್ಷರಗಳನ್ನು ಉಪಯೋಗಿಸಿಕೊಂಡು ಕೆಳಗೆ ಕೊಟ್ಟಿರುವ ಚಿತ್ರಕ್ಕೆ ಸರಿಹೊಂದುವ ಶೀರ್ಷಿಕೆಯನ್ನು ಭರ್ತಿ ಮಾಡಿ.
ನ ವ ಸಾ ಧಾ ◯ ◯ ⬜ ⬜
ದ ವೇ ನ ನಿ ⬜ ◯ ⬜ ◯
ರ್ಣೋ ರ ಧ್ಧಾ ಜೀ ◯ ⬜ ⬜ ◯
ಮ ದೇ ಪ್ರ ಕ್ಷಾ ಶ ◯ ⬜ ⬜ ⬜ ⬜
ಗ ಲ ಒ ಡ್ಡೋ ◯ ⬜ ◯ ⬜
ಪ ಆ ಲ ತ್ಕಾ ⬜ ⬜ ◯ ⬜
ಈ ಶೀರ್ಷಿಕೆಯ ಹಾಡಿನಲ್ಲಿ ಪ್ರೀತಿಯೂ ಧುಮ್ಮಿಕ್ಕಿ ಹರಿಯುವ ಝಲಧಾರೆಯಂತೆ
◯◯◯ ◯◯◯ ◯◯◯◯
______________________________________________________
ಅಡ್ಡಾದಿಡ್ಡಿ ಪದಗಳು 3
ಕೆಳಗೆ ಕೊಟ್ಟಿರುವ ಪದಗಳನ್ನು ಸರಿ ಮಾಡಿ ಚತುಷ್ಕೋನ ಮತ್ತು ವರ್ತುಲಾಕಾರಗಳಲ್ಲಿ ಭರ್ತಿ ಮಾಡಿ. ನಂತರ ವರ್ತುಲಾಕಾರಗಳಲ್ಲಿ ಇರುವ ಅಕ್ಷರಗಳನ್ನು ಉಪಯೋಗಿಸಿಕೊಂಡು ಕೆಳಗೆ ಕೊಟ್ಟಿರುವ ಚಿತ್ರಕ್ಕೆ ಸರಿಹೊಂದುವ ಶೀರ್ಷಿಕೆಯನ್ನು ಭರ್ತಿ ಮಾಡಿ.
ಳು ನ ದಂ ವ ತಿ ಪ ಗ ◯ ⬜ ◯ ⬜ ◯ ⬜ ⬜
ಕು ರ ಬೇ ⬜ ◯ ◯
ಕು ಮು ಗೆ ತ್ತಿ ಹಾ ◯ ◯ ⬜ ⬜ ◯
ರು ಡಿ ಸು ನು ವ ◯ ◯ ⬜ ⬜ ⬜
ರೆ ರ ಕ ದ ⬜ ◯ ◯ ◯
ವೀರಶೈವರ ಈ ವಚನ ಸದಾ ಕಾಲಕ್ಕೂ ಅನ್ವಯಿಸುತ್ತದೆ
◯◯◯◯ ◯◯◯ ◯◯◯◯◯◯◯
______________________________________________________
ಉತ್ತರ 1: ಮಾ(ನ)ವೀಯ(ತೆ), (ಜಾ)ಮಿ(ನು), ಮಹಾ(ಭಾ)(ರ)(ತ), (ಜ)(ಯ)(ಜ)(ಯ)ಕಾರ, (ತ)ಪಸ್ವಿ(ನಿ)
ಚಿತ್ರಕ್ಕೆ ಸರಿಹೊಂದುವ ಶೀರ್ಷಿಕೆ: ಜಯ ಭಾರತ ಜನನಿಯ ತನುಜಾತೆ
ಉತ್ತರ 2: (ಸಾ)(ವ)ಧಾನ, ನಿ(ವೇ)ದ(ನ), (ಜೀ)ರ್ಣೋದ್ಧಾ(ರ), (ಕ್ಷಾ)ಮಪ್ರದೇಶ, (ಒ)ಡ್ಡೋ(ಲ)ಗ, ಆಪ(ತ್ಕಾ)ಲ
ಚಿತ್ರಕ್ಕೆ ಸರಿಹೊಂದುವ ಶೀರ್ಷಿಕೆ: ಒಲವೇ ಜೀವನ ಸಾಕ್ಷಾತ್ಕಾರ
ಉತ್ತರ 3: (ನ)ವ(ದಂ)ಪ(ತಿ)ಗಳು, ಕು(ಬೇ)(ರ), (ಮು)(ತ್ತಿ)ಗೆ(ಹಾ)(ಕು), (ನು)(ಡಿ)ಸುವರು, ಕ(ರ)(ದ)(ರೆ)
ಚಿತ್ರಕ್ಕೆ ಸರಿ ಹೊಂದುವ ಶೀರ್ಷಿಕೆ: ನುಡಿದರೆ ಮುತ್ತಿನ ಹಾರದಂತಿರಬೇಕು.
_____________________________________________________
ಪದಗಳನ್ನು ಜೋಡಿಸಿ
ಈ ಕೆಳಗಿನ ಪಟ್ಟಿಯಲ್ಲಿ ಎಡಗಡೆ ಕೊಟ್ಟಿರುವ ಎಲ್ಲ ಪದಗಳು ನಮಗೆ ಪರಿಚಯವಿರುವ ಸಾಮಾನ್ಯ ಪ್ರಾಣಿಗಳನ್ನು ಬಲಗಡೆ ಇರುವ ಪಟ್ಟಿಯಲ್ಲಿ ಅರ್ಥೈಸುತ್ತವೆ. ಆದರೆ ಹೊಂದಾಣಿಕೆ ಕಲಸುಮಲಸಾಗಿದೆ. ಸರಿಜೋಡಿಸಿ ನಿಮ್ಮ ಕನ್ನಡ ಪದಕೋಶದ ಜ್ಞಾನವನ್ನು ಅಳತೆ ಮಾಡಿಕೊಳ್ಳಿ.
೧. ಕುಂಭಿ | A. ಒಂದು ಪಕ್ಷಿ | |
೨. ಕುಂಭೀನಸ | B. ಕೋಳಿ | |
೩. ಕುಂಭೀರ | C. ನವಿಲು | |
೪. ಕುಕ್ಕುರ | D. ಆನೆ | |
೫. ಕುಕ್ಕುಟ | E. ಸಿಂಹ | |
೬. ಕೊತ್ತಿ | F. ಹಾವು | |
೭. ಕೃಕವಾಕು | G. ಮೊಸಳೆ | |
೮. ಕೆಂಬೂತ | H. ಹುಂಜ | |
೯ ಕೇಕಿ | I. ಬೆಕ್ಕು | |
೧೦. ಕೇಸರಿ | J. ನಾಯಿ |
________________
ಕನ್ನಡದ ನುಡಿಗಟ್ಟುಗಳು
ಕನ್ನಡ ಭಾಷೆಯಲ್ಲಿ ಬಹಳಷ್ಟು ನುಡಿಗಟ್ಟುಗಳನ್ನು ನಾವು ದಿನನಿತ್ಯವೂ ಬಳಸುತ್ತೇವೆ. ಹಲವಾರು ಜನಸಾಮಾನ್ಯ ನುಡಿಗಟ್ಟುಗಳಲ್ಲಿ ಪಕ್ಷಿ ಪ್ರಾಣಿ,, ಮರಗಿಡ, ಕಥೆ ಪುರಾಣದ ವ್ಯಕ್ತಿಗಳನ್ನು ಹೋಲಿಕೆಯ ರೂಪದಲ್ಲಿ ಬಳಸಿಕೊಂಡಿರುವುದನ್ನು ನಾವು ಕಾಣಬಹುದು. ಶರೀರದ ಅಂಗಗಳನ್ನು ಕೂಡ ಉಪಯೋಗಿಸಿಕೊಂಡು ಹೆಣೆದ ನುಡಿಗಟ್ಟುಗಳು ಸರ್ವೇಸಾಮಾನ್ಯ. “ಅವನು ಯಾವಾಗಲೂ ಕಾಮಾಲೆ ಕಣ್ಣಿನಿಂದಲೇ ನೋಡುತ್ತಾನೆ ” ಎಂದು ಬಳಸಿದಾಗ ಆ ನುಡಿಗಟ್ಟಿನ ಅರ್ಥ “ಅವನು ಸಹಜವಲ್ಲದ ದೃಷ್ಟಿಯಿಂದಲೇ ನೋಡುತ್ತಾನೆ” ಎಂದು ಮಾತ್ರ. ಕೆಳಗೆ ಅಂತಹ ಹಲವಾರು ನುಡಿಗಟ್ಟುಗಳನ್ನು ಮತ್ತು ಅವುಗಳ ಅರ್ಥವನ್ನೂ ಕೊಟ್ಟಿದೆ. ಆದರೆ ಈ ನುಡಿಗಟ್ಟುಗಳಲ್ಲಿ ಬಳಸಿದ ಶರೀರದ ಅಂಗಗಳನ್ನು ಕೊಟ್ಟಿಲ್ಲ. . ಖಾಲಿ ಬಿಟ್ಟಿರುವ ಪದಗಳನ್ನು ಭರ್ತಿ ಮಾಡಿ ನಿಮ್ಮ ನುಡಿಗಟ್ಟುಗಳ ಜ್ಞಾನವನ್ನು ಪರೀಕ್ಷಿಸಿಕೊಳ್ಳಿ. ಉದಾಹರಣೆ: --------ನ ಮೇಲೆ ಬೆರಳಿಡು: ಆಶ್ಚರ್ಯಪಡು. ಉತ್ತರ: ಮೂಗು
೧ . ------- ಊರಗಲ ಮಾಡು: ಸಂತೋಷದಿಂದ ಹಿಗ್ಗು.
೨. ------- ತಟ್ಟಿ ಹೇಳು: ಧೈರ್ಯದಿಂದ ಹೇಳು
೩. ಒಂದು ------- ಒಳಗೆ, ಒಂದು ------ ಹೊರಗೆ: ಗಡಿಬಿಡಿಯಲ್ಲಿರು ಅಥವಾ ಯಾವ ಪಕ್ಷಕ್ಕೂ ಸೇರದಿರು
೪. ------ಗೆ ಮಣ್ಣೆರಚು: ಮೋಸಮಾಡು
೫. ------ ಕಿತ್ತುಬರು: ಬಹಳ ದುಃಖವಾಗು
೬. ------ ಬೆಚ್ಚಗೆ ಮಾಡು: ಲಂಚ ಕೊಡು
೭. ತನ್ನ ------- ಮೇಲೆ ತಾನು ನಿಲ್ಲು: ಸ್ವಾವಲಂಬಿಯಾಗು
೮. -----ಯ ಮೇಲೆ ಚಪ್ಪಡಿ ಎಳೆ: ನಾಶಮಾಡು, ತೊಂದರೆಯುಂಟುಮಾಡು
೯. ----- ಬಿಗಿ ಹಿಡಿದು ಮಾತಾಡು: ಮಿತಿಯಾಗಿ ಮಾತಾಡು
೧೦. ----ಗೆ ತುಪ್ಪ ಹಚ್ಚು: ಆಸೆ ತೋರಿಸು
೧೧. ----- ಹಿಡಿದು ಮಾತಾಡು: ಎಚ್ಚರಿಕೆಯಿಂದ ಮಾತಾಡು
೧೨. ------ಯ ಮೇಲೆ ಹೊಡೆ: ಜೀವನೋಪಾಯವನ್ನು ತಪ್ಪಿಸು.
೧೩. ಹಿತ್ತಾಳೆ ------: ಚಾಡಿ ಮಾತು ಕೇಳುವ ಸ್ವಭಾವ
೧೪. ------- ಮೇಲೆ ಒದ್ದೆಬಟ್ಟೆ ಹಾಕಿಕೊ: ತಿನ್ನಲು ಏನೂ ಇಲ್ಲದಿರು
೧೫. ------ ಹೊಡೆ: ಸುಳ್ಳು ಸುಳ್ಳು ಹೇಳು
___________________
ಅದೇನು “ಮಹಾ”?
ಅದೇನು ಮಹಾ ಎನ್ನುವ ಪ್ರಶ್ನೆಯನ್ನು ನಾವು ಅನೇಕ ಸಲ ಆಡುಮಾತಿನಲ್ಲಿ ಬಳಸುತ್ತೇವೆ. ಅದೇ ರೀತಿ “ಮಹಾ ಚಾಡಿಕೋರ” ಅಂತಲೋ ಅಥವಾ “ಮಹಾ ಜಿಪುಣ” ಅಂತಲೋ ಉತ್ಪ್ರೇಕ್ಷೆ ಮಾಡಲು ಇದನ್ನು ಬಳಸುತ್ತೇವೆ. ಬೇರೆ ಪದಗಳ ಜೊತೆ ಕೂಡಿಸಿದಾಗ ಎರಡಕ್ಷರದ ಈ ಶಬ್ದ ಬಹಳ ಮಹತ್ತರವಾದ ಸ್ಥಾನವನ್ನೇ ಗಳಿಸಿಕೊಂಡಿದೆ. ಉದಾಹರಣೆಗೆ ಮಹಾ ಮತ್ತು ಆತ್ಮ ಸೇರಿ ಮಹಾತ್ಮ ಎನ್ನುವ ಪದವನ್ನು ಘನವಂತ ಎಂದು ನಿರೂಪಿಸಲು ಉಪಯೋಗಿಸುತ್ತೇವೆ. ಕೆಳಗಡೆ ಮಹಾ ಎಂದು ಆರಂಭವಾಗುವ ಪದಗಳನ್ನು ಸಂಪೂರ್ಣವಾಗಿ ಕೊಡದೆ ಅವುಗಳ ಅರ್ಥವನ್ನು ಕೊಟ್ಟಿದೆ. ಮಹಾ ಜೊತೆಗೆ ಮಿಕ್ಕೆರಡು ಅಥವಾ ಮೂರಕ್ಷಗಳನ್ನು ಭರ್ತಿ ಮಾಡಿ ಮತ್ತೊಂದು ಪದವನ್ನು ಬರೆಯಿರಿ. ಕೊನೆಯಲ್ಲಿ ನಿಮ್ಮ “ಅದೇನು ಮಹಾ” score ನೋಡಿಕೊಂಡು ನಕ್ಕುಬಿಡಿ!
೧. ಮಹಾ........ : ಹೆಬ್ಬಾಗಿಲು
೨. ಮಹಾ..........: ದೊಡ್ಡ ಪ್ರವಾಹ
೩. ಮಹಾ........ : ಊರಿನ ಹಿರಿಯರು
೪. ಮಹಾ....... : ಶ್ರೇಷ್ಠ ವ್ಯಕ್ತಿ
೫. ಮಹಾ...... : ಶಿವ
೬. ಮಹಾ........ : ಹಿಂದೂ ಹಬ್ಬಗಳಲ್ಲಿ ಇದೂ ಒಂದು
೭. ಮಹಾ....... : ಪ್ರತಿರ್ವತೆ
೮. ಮಹಾ........ : ಪ್ರಧಾನಮಂತ್ರಿ
೯. ಮಹಾ...... : ಬಿಲ್ಲುಗಾರರನ್ನು ಎದಿರಿಸುವ ಯೋಧ
೧೦. ಮಹಾ..... : ಒತ್ತಿ ಉಚ್ಚರಿಸುವ ಧ್ವನಿ
__________________
ಅಡ್ಡಾದಿಡ್ಡಿ ಪದಗಳು
ಕೆಳಗೆ ಕೊಟ್ಟಿರುವ ಅಡ್ಡಾದಿಡ್ಡಿ ಪದಗಳನ್ನು ಸರಿ ಮಾಡಿ ಚತುಷ್ಕೋನ ಮತ್ತು ವರ್ತುಲಾಕಾರಗಳಲ್ಲಿ ಭರ್ತಿ ಮಾಡಿ. ನಂತರ ವರ್ತುಲಾಕಾರಗಳಲ್ಲಿ ಇರುವ ಅಕ್ಷರಗಳನ್ನು ಉಪಯೋಗಿಸಿಕೊಂಡು ಕೆಳಗೆ ಕೊಟ್ಟಿರುವ ಚಿತ್ರಕ್ಕೆ ಸರಿಹೊಂದುವಂತ ಶೀರ್ಷಿಕೆಯನ್ನು ಭರ್ತಿ ಮಾಡಿ.
ರ ಗ ಜಾಂ ಅ ಜ ತ ⬜ О ⬜ ⬜ ☐ O
ಶ ಮ ಅ ರ ಕೋ ⬜ О O ⬜ ⬜
ಸು ಲ್ಪಿ ಕ ⬜ О ⬜
ಸಾ ಅ ಲಿ ಕ್ಕ О О ⬜ ⬜
ಣ ವ ಗು ಶಿ О ⬜ ⬜ О
ಬೇಲೂರಿನ ಚೆನ್ನಕೇಶವ ದೇವಸ್ಥಾನದ ಪ್ರಖ್ಯಾತ ಶಿಲಾಬಾಲಿಕೆ ಇವನಿಂದಲೇ ಕೆತ್ತಲ್ಪಟ್ಟಿತು
ООО ОО ООО
___________________
ವೈಶಿಷ್ಟ್ಯಪೂರ್ಣ “ವೈ”
ಕೆಳಗಿನ ಸಾಲುಗಳಲ್ಲಿ ಅಡಿಗೆರೆ (underline) ಮಾಡಿರುವ ಪದಗಳೆಲ್ಲವೂ ತುಂಬಾ ವೈಶಿಷ್ಟ್ಯಪೂರ್ಣ. ಏಕೆಂದರೆ ಈ ಪದಗಳ ಬದಲು “ವೈ” ಇಂದ ಆರಂಭವಾಗುವ ಮತ್ತೊಂದು ಪದವನ್ನು ಸಹ ಉಪಯೋಗಿಸಬಹುದು. ಅವುಗಳನ್ನು ಪತ್ತೆಹಚ್ಚಿ ನಿಮ್ಮ ಕನ್ನಡ ಭಾಷೆಯ ವೈಕಲ್ಯವನ್ನು (ಚಿಂತೆಯನ್ನು) ಸ್ವಲ್ಪ ಕಡಿಮೆ ಮಾಡಿಕೊಳ್ಳಿ!
೧. ಜೈ ಭಾರತಮಾತೆಯ ಬಾವುಟವನ್ನು ಹಾರಿಸುತ್ತ ಚಳುವಳಿಕಾರರು ಮುನ್ನಡೆದರು.
೨. ಏಳು ಹೆಡೆ ಸರ್ಪವನ್ನು ನೋಡಿ ಪಾಪ, ಲಕ್ಷ್ಮಿ ವಿಷ್ಣುವಿನ ನಿವಾಸದಲ್ಲಿ ಸದಾ ಭಯಭೀತಿಯಿಂದ ಕಾಲ ಕಳಿಯುತ್ತಿದ್ದಳು
೩. ಇಲ್ಲ ಸಾರ್, ಆ ವೀಣೆ ನುಡಿಸೋ ನಂಜುಂಡ ಶಾಸ್ತ್ರೀ ನಾಳೆ ರಿಹರ್ಸಲ್ಗೆ ಬರಕ್ಕಾಗಲ್ಲ ಅಂದ್ರು.
೪. ಬಲಶಾಲಿ ಹನುಮಂತ ಲಂಕೆಗೆ ಬೆಂಕಿ ಹಚ್ಚಿ ಸೀತೆಯ ಬಳಿ ಬಂದು ನಮಸ್ಕರಿಸಿದ.
೫. ಚೊಚ್ಚಲ ಮೊಮ್ಮಗು ಹುಟ್ಟಿದೆಯೆಂದು ಕೇಳಿ ನಾಗರಾಜನ ತಂದೆತಾಯಿಗಳು ಆಸ್ಪತ್ರೆಗೆ ತೆರಳಿದರು.
೬. ‘ನಿರಜ’ ಅನ್ನೋ ಹಿಂದಿ ಚಿತ್ರ ನೋಡಿ ವಿಮಾನ ನೆಡಸೋ ತಂಡದವರ ಮೇಲೆ ಅನುಕಂಪ ಮೂಡಿದೆ.
೭. ಕಾಶ್ಮೀರದಲ್ಲಿ ಭಾರತದ ಸೈನಿಕರು ಪಾಕಿಸ್ತಾನದ ಶತ್ರುಗಳನ್ನು ಎದುರಿಸಲು ಪೂರ್ವಸಿದ್ಧತೆ ಮಾಡಿದರು.
೮. ದಾಂಪತ್ಯ ಜೀವನದ ಸುಖ ದುಃಖಗಳನ್ನು ಎದುರಿಸಲು ಆಗದೆ ಆತ ಬಳಲಿ ಬೆಂಡಾದ.
೯. ಐಶ್ವರ್ಯ ರಾಯ್ ಸೊಸೆಯಾಗಿ ಬಂದು ಬಚ್ಚನ್ ಸಂಸಾರದ ಐಶ್ವರ್ಯವನ್ನೇ ದ್ವಿಗುಣಗೊಳಿಸಿದಳು
೧೦. ಕದನದಲ್ಲಿ ಮಡಿದವರ ಭಯಾನಕ ದೃಶ್ಯಗಳನ್ನು ನೋಡಿ ಚಕ್ರವರ್ತಿ ಅಶೋಕನಿಗೆ ವಿರಕ್ತಿ ಉಂಟಾಯಿತು
__________________
“ಪರ”ಕೀಯ ಭಾಷೆ ಇಂಗ್ಲಿಷ್!
ಕನ್ನಡ ಭಾಷೆಗಿಂತ ಇಂಗ್ಲೀಷನ್ನೇ ಹೆಚ್ಚು ಬಳಸುವ ನಮಗೆ ಅದೊಂದು “ಪರ”ಕೀಯ ಭಾಷೆ ಎಂದು ಅನ್ನಿಸುವುದೇ ಇಲ್ಲ. ಅನ್ಯ ದೇಶದ ಜನ ಅಥವಾ “ಪರಭಾಷೆ” ಮಾತಾಡುವ ಜನ ಎಂದರ್ಥೈಸಿದರೆ ನಾವೆಲ್ಲ ಪರಂಗಿಗಳೇ! ಅಬ್ಬಬ್ಬಾ ಈ ವಿಷಯ ತೆಗೆದರೆ ಸಾಕು ಎಲ್ಲರೂ “ಪರ” ವಹಿಸಿಕೊಂಡೆ ಮಾತನಾಡುತ್ತಾರೆ. ಕೊನೆಗೆ “ಪರ”ಮಾತ್ಮನ ಮೇಲೆ ಭಾರ ಹೊರಿಸಿ ಪರಾಭವ ಹೊಂದುತ್ತಾರೆ! ಹೋಗ್ಲಿ ಬಿಡಿ. ನೀವು ದಿನನಿತ್ಯವೂ ಪರಭಾಷೆಯ ಪದಗಳನ್ನ ಉಪಯೋಗಿಸಿಕೊಂಡು ಮಾತಾಡುವ ಕೆಲವು ಸಾಲುಗಳನ್ನು ಕೆಳಗೆ ಕೊಟ್ಟಿದೆ. ನೀವು ಈ ಎಲ್ಲ ಇಂಗ್ಲಿಷ್ ಪದಗಳನ್ನು “ಪರ” ಅಥವಾ “ಪರಂ”ಎಂದು ಆರಂಭವಾಗುವ ಕನ್ನಡ ಪದಗಳನ್ನೇ ಬಳಸಬಹುದು. ಅವುಗಳನ್ನು ಪತ್ತೆ ಹಚ್ಚಿ ಕನ್ನಡವೇ “ಪರಕೀಯ”ವಾಗಿದ್ದರೆ ಕೊನೆಯಲ್ಲಿ ನಿಮ್ಮ score ನೋಡಿಕೊಳ್ಳಿ!
೧. “ಹೃತಿಕ್ ರೋಷನ್ನನ್ನು ನೋಡ್ತಾ ನಾನು ಹಾಗೆ mesmerize ಆಗಿ ಕುಳಿತ್ಬಿಟ್ಟಿದ್ದೆ! “
೨. “ನನ್ನ ಮೊದಲನೇ ಪ್ರೆಗ್ನೆನ್ಸಿ ಯಲ್ಲಿ ನನಗೆ ತುಂಬಾ relishing ಸಿಹಿ ತಿಂಡಿ ಅಂದರೆ ಹೂರಣದ ಒಬ್ಬಟ್ಟು.”
೩. “ಇಲ್ಲಾರಿ, ಮಗು ನೆನ್ನೆ ರಾತ್ರಿ ನಿದ್ದೆನಲ್ಲಿ ಗೊತ್ತಾಗದೆ ಮುಖ scratch ಮಾಡಿಕೊಂಡಿದೆ ಪಾಪ.”
೪. “ನಮ್ಮ ಯಜಮಾನರು ಅವರ ತಂದೆ permission ಇಲ್ಲದೆ ಯಾವ ಬಿಸಿನೆಸ್ನಲ್ಲೂ ಕೈಹಾಕೋಲ್ಲ.”
೫. “ಗುಬ್ಬಿ ವೀರಣ್ಣನವರ ನಾಟಕ ಕಂಪನಿಯಲ್ಲಿ ನಮ್ಮ ಅಜ್ಜ screen ಎಳೆಯೋ ಕೆಲಸ ಮಾಡ್ತಿದ್ರಂತೆ”
೬. “ನಮ್ಮ ಅತ್ತೆ ಮನೆ ಕಡೆ ಬೊಂಬೆ ಹಬ್ಬಾನಾ ತುಂಬಾ traditional ಆಗಿ ಮಾಡಿಕೊಂಡು ಬಂದಿದಾರೆ.”
೭. “ನಮ್ಮ ಕಾಲೇಜಿನಲ್ಲಿ ಒಬ್ಬ ಕ್ರಿಶ್ಚಿಯನ್ ಪ್ರೊಫೆಸ್ಸರ್ ನಮಗೆ ವೆಸ್ಟರ್ನ್ ಫಿಲಾಸಫಿಯಲ್ಲಿ ದೇವರು ಅಂದ್ರೇನು, ಮೋಕ್ಷ ಅಂದ್ರೇನು, salvation ಅಂದ್ರೇನು ಅಂತ ಚೆನ್ನಾಗಿ ಮೊಳೆ ಹೊಡಿತಿದ್ರು.”
೮. “ಗಾರ್ಲಿಕ್ festival ಏನ್ ಮಹಾ ಬಿಡ್ರಿ ಬೆಂಗಳೂರಿನ ಬಸವನಗುಡಿಯಲ್ಲಿ ಆಗುತ್ತಲ್ಲ ಕಡ್ಲೆಕಾಯಿ festival ಅದೇ ಚೆನ್ನ ಬಿಡ್ರಿ.”
೯. “ನಮ್ಮ ಕಥೆಗಳಲ್ಲಿ ಯಾವಾಗಲು ಒಳ್ಳೆಯವರೆಲ್ಲ ಕೊನೆಯಲ್ಲಿ ಸತ್ತು heaven ಗೆ ತಾನೆ ಸೇರಿಕೊಳ್ಳೋದು.”
೧೦. “ಡೊನಾಲ್ಡ್ ಟ್ರಂಪ್ ಅಮೇರಿಕ ಹೆಚ್ಚು nuclear ಬಾಂಬ್ ತಯಾರು ಮಾಡ್ಬೇಕಂತ ನೆನ್ನೆ ಟ್ವೀಟ್ ಕಳಿಸಿ ಎಲ್ಲರ ಕೈಯಲ್ಲಿ ಚೀಮಾರಿ ಹಾಕಿಸಿಕೊಂಡಿದ್ದಾರೆ.”
_________________
ಚತುಷ್ಕೋನ
ಪ್ರ | ಸಾ | ದ | ಮಾ | ರು | ಕ | ಟ್ಟೆ | ದ |
ಧಾ | ದ | ಶ | ನಿ | ಆ | ಲು | ಪ | ಮೊ |
ನ | ರಿ | ರ್ಶ | ನಿ | ವಿ | ರ | ಕ್ಕಾ | ಕ |
ಮಂ | ದ | ಲ್ದಾ | ನ | ಶ್ವ | ರ | ಸಿ | ಕಾ |
ತ್ರಿ | ಣ | ನ | ಈ | ಷ್ಟಿ | ವಿ | ಗೇ | ರೆ |
ಡು | ಕಾ | ರು | ದೃ | ಸಿ | ಕಿ | ಪು | ಪ |
ಕ | ಳ್ಳಿ | ರ | ಷ್ಟಾಂ | ಣಿ | ರ | ಡಿ | ರಂ |
ಬಂ | ದೂ | ಕ | ತ | ನೊ | ಣ | ವಾ | ಪ |
ಮೇಲೆ ಕೊಟ್ಟಿರುವ ಚತುಷ್ಕೋನದಲ್ಲಿ ಈ ಕೆಳಗೆ ಕೊಟ್ಟಿರುವ ಎಲ್ಲ ಪದಗಳು ಅವಿತುಕೊಂಡಿವೆ.
ಈಶ್ವರ, ಈರುಳ್ಳಿ, ಕಸಿವಿಸಿ, ಕಾಡು, ಕಾನನ, ಕಿಡಿ, ಕಳ್ಳಿ, ಪರಂಪರೆ, ಪ್ರಸಾದ, ಪದ, ಪ್ರಧಾನಮಂತ್ರಿ, ಪ್ರದರ್ಶನ, ಬಂದೂಕ, ಮಾರುಕಟ್ಟೆ, ಮಂದ, ಮೊಟ್ಟೆ, ಮಾನಿನಿ, ದರ್ಶನಿ, ದೂರದೃಷ್ಟಿ, ದೃಷ್ಟಾಂತ, ನವಿಲು, ನರಿ, ನೊಣ, ನಿಲ್ದಾಣ, ರವಿಕಿರಣ, ಸಿಕ್ಕಾಪಟ್ಟೆ, ಸೀಗೆಪುಡಿ
ಈ ಪದಗಳು ಮೇಲಿಂದ ಕೆಳಕ್ಕೆ, ಕೆಳಗಿಂದ ಮೇಲಕ್ಕೆ, ಎಡಗಡೆಯಿಂದ ಬಲಗಡೆಗೆ, ಬಲಗಡೆಯಿಂದ ಎಡಗಡೆಗೆ, ಮತ್ತು ಕರ್ಣರೇಖೆಯಲ್ಲಿ (diagonal) ಇರಬಹುದು. ಅವುಗಳನ್ನು ಮೊದಲು ಪತ್ತೆ ಮಾಡಿ ಆ ಅಕ್ಷರಗಳ ಮೇಲೆ ವೃತ್ತಾಕಾರದ ಚಿಹ್ನೆಯನ್ನು ಹಾಕಿರಿ. ಒಂದು ಪದ ಗುರಿತಿಸದ ನಂತರ ಮೇಲೆ ಕೊಟ್ಟಿರುವ ಪಟ್ಟಿಯಲ್ಲಿ ಅಡ್ಡಗೆರೆ ಎಳೆಯುತ್ತ ಹೋದರೆ ಆಟ ಸುಲಭವಾಗುವುದು. ಎಲ್ಲ ಪದಗಳನ್ನು ಸರಿಯಾಗಿ ಪತ್ತೆಹಚ್ಚಿದರೆ ೫ ಅಕ್ಷರಗಳು ಮಾತ್ರ ಉಳಿಯುವುದು. ಉಳಿದ ಈ ೫ ಅಕ್ಷರಗಳನ್ನು ಇಲ್ಲಿ ಭರ್ತಿ ಮಾಡಿ:
ಅಡ್ಡಾದಿಡ್ಡಿಯಾಗಿ ಕಾಣುವ ಈ ಅಕ್ಷರಗಳನ್ನು ಮತ್ತೆ ಬಳಸಿಕೊಂಡು ನಿಮಗೆ ತೋಚಿದ ಪದವನ್ನು ಇಲ್ಲಿ ಬರೆಯಿರಿ. ಕಿವಿಯಾಲಿಸಿ ಕೇಳಿದರೆ ಈ ಐದಕ್ಷರದ ಪದದ ಸುಳಿವು ನಿಮಗೆ ಅಶರೀರ ಧ್ವನಿಯಲ್ಲಿ ಕೇಳಿಸಬಹುದು!
ಎರಡಕ್ಷರದ ಮಹಿಮೆ.
ಕನ್ನಡದಲ್ಲಿ ಐವತ್ತಕ್ಕಿಂತ ಹೆಚ್ಚು ಅಕ್ಷರಗಳಿದ್ದರು ಅದೇಕೋ ಎರಡಕ್ಷರದ ಪದಗಳು ಸಾಕಷ್ಟಿವೆ. ಅಂದರೆ ಮಿತಿಯಾಗಿ ಅಕ್ಷರಗಳನ್ನು ಉಪಯೋಗಿಸಿಕೊಂಡು ದಕ್ಷತೆಯಿಂದ ಬೇರೆ ಪದಗಳನ್ನು ವಿಕಸಿಸುವುದರಲ್ಲಿ ಕನ್ನಡ ಭಾಷೆ ಮಿಕ್ಕೆಲ್ಲ ಭಾಷೆಗಳಿಗಿಂತ ಮುಂದುವರೆದಿದೆ. ಕೆಳಗಿನ ಕೋಷ್ಟಕದಲ್ಲಿ ೧೬ ಅಕ್ಷರಗಳನ್ನು ಕೊಟ್ಟಿದೆ. ಇವುಗಳನ್ನು ಮತ್ತೊಂದು ಅಕ್ಷರದ ಜೊತೆ ಕೂಡಿಸಿದಾಗ ಉದ್ಭವಿಸುವ ಎರಡಕ್ಷರದ ಪದದ ಅರ್ಥವನ್ನು ಕೊಡಲಾಗಿದೆ. ಆದರೆ ಮೂಲ ಪದವನ್ನು ಕೊಟ್ಟಿಲ್ಲ. ಉದಾಹರಣೆಗೆ: ಭಾಗ :______. ಇಲ್ಲಿ “ಪಾಲು” ಸರಿಯಾದ ಉತ್ತರ. ಏಕೆಂದರೆ “ಪಾ” ಮತ್ತು ಮೊದಲನೇ ಚತುರ್ಶ್ಕೋನದಲ್ಲಿರುವ “ಲು” ಸೇರಿದಾಗ “ಪಾಲು” ಅಂದರೆ ಭಾಗ ಎಂದರ್ಥೈಸುತ್ತದೆ. .
ಮಿಕ್ಕ ೧೫ ಎರಡಕ್ಷರದ ಪದಗಳನ್ನು ಊಹಿಸಿ ಕೆಳಗೆ ಕೊಟ್ಟಿರುವ ಅವುಗಳ ಅರ್ಥವನ್ನು ಹೊಂದಿಸಿ.
ಲು | ಣಿ | ಕ | ಶ |
ಚಿ | ಠ | ದ್ರಿ | ವು |
ದ | ತ್ರೆ | ಡ್ಯ | ನ |
ಳ್ಯ | ಪಿ | ತ್ರ | ರು |
೧. ಹಸಿರು ಬಣ್ಣದ ಜಾರಿಕೆಯ ಸಸ್ಯ: _____
೨. ಓದುವುದು: _____
೩. ನಟನೆ: _____
೪. ಕೊಳಗ: _____
೫. ಅಡಿ: _____
೬. ಅಡುಗೆ: _____
೭. ಕೈ: _____
೮. ಕ್ರೈಸ್ತಗುರು: _____
೯. ದುಷ್ಟ: _____
೧೦. ಪಕ್ಷದ ಮೊದಲನೇ ದಿನ: _____
೧೧. ಬೀಡು: _____
೧೨. ಹಗ್ಗ: _____
೧೩. ಸೇರಿನ ನಾಲ್ಕನೆಯ ಭಾಗ: _____
೧೪. ಕುಡಿಯುವ ಪದಾರ್ಥ: _____
೧೫. ದಾಟು: ____
_____________________
ಮೂರಕ್ಷರ ಗೊತ್ತಿದ್ದರೆ ಸಾಕು.
ಅ, ಆ, ಇ ಕನ್ನಡದ ಮೊದಲ ಮೂರಕ್ಷರಗಳು. ಈ ಅಕ್ಷರಗಳ ಜೊತೆಗೆ ಮಿಕ್ಕೆರಡು ಅಕ್ಷರ ಸೇರಿಸಿದರೆ ಸಾವಿರಾರು ಪದಗಳನ್ನು ವಿಕಸಿಸಲು ಸಾಧ್ಯವಾಗಿದೆ. ಕನ್ನಡ ರತ್ನಕೋಶ ಬೆಳೆದದ್ದೇ ಹಾಗೆ. ಉದಾಹರಣೆಗೆ ವಸತಿ, ವಠಾರ, ವರಸೆ, ವಸುಧೆ, ವಯಸ್ಕ ಎಲ್ಲವು ಮೂರಕ್ಷರದ ಪದಗಳೇ. “ವ” ಅಕ್ಷರವನ್ನು ಬಳಸಿ ಮಿಕ್ಕೆರಡು ಅಕ್ಷರಗಳನ್ನು ಜೊತೆಗೂಡಿಸಿ ವಿವಿಧ ಕ್ರಮಜೋಡಣೆಯ ಮೂಲಕ ಬೆಳಸಿದ ಪದಗಳಿವು.
ಇದೆ ಉದಾಹರಣೆಯಂತೆ “ಅ ಅಥವಾ ಆ” ಅಕ್ಷರದ ಜೊತೆಗೂಡಿಸಿ ಹಣೆದ ಮೂರಕ್ಷರ ಪದಗಳನ್ನು ಊಹಿಸಿಕೊಳ್ಳಿ
.
“ಅ” ಜೊತೆಗೆ ರ, ಖಾ, ಗ, ಕ್ಷ, ಧ್ಯ, ಸ, ಣ್ಯ, ಡ, ಎನ್ನುವ ಯಾವುದೇ ಮಿಕ್ಕೆರಡು ಅಕ್ಷರಗಳನ್ನು ಕ್ರಮಜೋಡಿಸಿದರೆ ಕನಿಷ್ಠ ೫ ಮೂರಕ್ಷರದ ಪದಗಳಾಗುತ್ತವೆ.
“ಆ” ಜೊತೆಗೆ ಕಾ, ಧ, ಸ್ತಿ, ಮ, ಯು, ತಿ, ಶ, ರ, ಕ, ರಾ,ಎನ್ನುವ ಯಾವುದೇ ಮಿಕ್ಕೆರಡು ಅಕ್ಷರಗಳನ್ನು ಕ್ರಮಜೋಡಿಸಿದರೆ ಕನಿಷ್ಠ ೫ ಮೂರಕ್ಷರದ ಪದಗಳಾಗುತ್ತವೆ.
ಈ ಮೇಲಿನ ೧೦ ಪದಗಳನ್ನು ಕೊಡದೆ ಈ ಕೆಳಗಿನ ಸಾಲುಗಳಲ್ಲಿ ಸುಳಿವು ಕೊಡಲಾಗಿದೆ. ಈ ಮೂರಕ್ಷರದ ಪದಗಳನ್ನು ಭರ್ತಿ ಮಾಡಿ.
೧. ಆಕೆ ಪಂಜಾಬಿನವಳಾದರೂ ಕನ್ನಡ -------- ಮಾಲೆ ಓದಲು ಕಲಿತುಕೊಂಡಿದ್ದಳು.
೨. ಕುಸ್ತಿ ಪಟು ಮಹಾವೀರ್ ಸಿಂಗ್ ---------- ದಲ್ಲಿ ನಿಂತರೆ ಎಲ್ಲ ಪ್ರತಿಸ್ಫರ್ಧಿಗಳು ಹೆದರುತ್ತಿದ್ದರು.
೩. ಕುಬ್ಜ ------- ನ ಮಾತಿಗಂಜಿ ಶ್ರೀರಾಮ ಸೀತೆಯನ್ನು ಕಾಡಿಗೆ ಕಳುಹಿಸಿದ.
೪. ರೈತ ಸಂಘದ -------- ರಾಮೇ ಗೌಡರು ಸಕ್ಕರೆ ಖಾರ್ಕಾನೆಯನ್ನು ಉದ್ಘಾಟಿಸಿದರು.
೫. -------- ಇಲಾಖೆಯ ನಿಯಮದಂತೆ ಆನೆಗಳ ದಂತವನ್ನು ಮಾರುವ ಹಾಗಿಲ್ಲ.
೬. ನೀಲಿ -------- ನೋಡಿ ಅವನ ಮನಸ್ಸು ಹಕ್ಕಿಯಂತೆ ರೆಕ್ಕೆಗೆದರಿ ಹಾರಲು ಬಯಸಿತು..
೭. ಹರಿದ್ವಾರದಲ್ಲಿ ಪ್ರತಿ ಸಂಜೆ ಶಿವನಿಗೆ ಮಾಡುವ ಲಕ್ಷದೀಪದ ------- ನೋಡಲು ಬಲು ಚಂದ.
೮. -------- ಕುರ್ಚಿಯಲ್ಲಿ ಕಾಲುಚಾಚಿ ನಿದ್ರಿಸುತ್ತಿದ್ದ ಅಮುಲ್ದಾರ್ ಭಗವಂತ ರಾವ್ ಯಾರೋ ಕೂಗಿದಂತಾಗಿ ಎಚ್ಚರಗೊಂಡರು.
೯. ಆ ದಿನದ ನವರಾತ್ರಿ ಹಬ್ಬದಲ್ಲಿ ಎಲ್ಲ ಕಾರ್ಮಿಕರು ತಮ್ಮ -------- ಉಪಯೋಗಿಸಲು ನಿರಾಕರಿಸಿದರು.
೧೦. ರಮೇಶ ದೇವರಲ್ಲಿ ನಂಬಿಕೆ ಮತ್ತು ಶ್ರದ್ಧೆಯುಳ್ಳ -------- . ಆದರೂ ಆಗ್ಯಾಗ್ಗೆ ಪವಾಡಪುರುಷರ ಸಂಘದಲ್ಲಿ ಅವನ ನಂಬಿಕೆಯನ್ನು ಸಂದೇಹವೇ ಕಾಡುತ್ತಿತ್ತು.
___________________
ಹೆಸರುಗಳನ್ನು ವಿಂಗಡಿಸಿ
ಪಾಪ, ಟೈಪಿಸ್ಟ್ ಮಿಸ್ ಜೂಲಿ ಸಂಜೆ ಮನೆಗೆ ಹೋಗುವ ತಯಾರಿಯಲ್ಲಿದಾಗ ಆಕೆಯ ಬಾಸ್ ಕರೆದು ಒಂದು ಅರ್ಜೆಂಟ್ ಕೆಲಸ ಕೊಟ್ಟುಬಿಟ್ರು. “ಏನಿಲ್ಲ ತುಂಬಾ ಸಿಂಪಲ್ ಕೆಲಸ. ಈ ದಿನ ಸದಸ್ಯರಾದ ೧೫ ಮಂದಿಯ ಹೆಸರನ್ನ ವಿಂಗಡಿಸ ಬೇಕಿತ್ತು. ಈ ಹೆಸರುಗಳನ್ನ alphabetical orderನಲ್ಲಿ ಟೈಪ್ ಮಾಡಿಕೊಡಿ.” ಅಂತ ಹೇಳಿ ಒಂದು ಕನ್ನಡದಲ್ಲಿ ಬರೆದಿದ್ದ ಚೀಟಿ ಕೊಟ್ಟರು. ನೋಡಲು ಸಿಂಪಲ್ ಆಗೇ ಇತ್ತು.
ಪ್ರತಿಭಾ
ಪ್ರಮೋದ್
ಪ್ರವೀಣ್
ಪ್ರಭು
ಪ್ರಸನ್ನ
ಪ್ರಸಾದ್
ಪ್ರಕಾಶ್
ಪ್ರಜ್ವಲ್
ಪ್ರಣತಿ
ಪ್ರಶಾಂತ್
ಪ್ರತಾಪ್
ಪ್ರಭಾಕರ್
ಪ್ರದೀಪ್
ಪ್ರಫುಲ್ಲ
ಪ್ರಭವ್
ಆದರೆ ಟೈಪ್ ಮಾಡ್ತಾ ಮಾಡ್ತಾ ಅವಳಿಗೆ ಅರ್ಥವಾಯಿತು ಇದನ್ನು ಸರಿಯಾಗಿ ವಿಂಗಡಿಸಲು ಕನ್ನಡದ ಪಂಡಿತರಿಗೂ ಕೂಡ ಕಷ್ಟವೆಂದು. ಪಾಪ, ಮಿಸ್ ಜೂಲಿ ನಿಮ್ಮ ಸಹಾಯ ಕೇಳ್ತಿದ್ದಾಳೆ. ನೀವಾದ್ರೂ ಬೇಗ ವಿಂಗಡಿಸಿ ಕೊಟ್ರೆ ಅವಳು ಬೇಗ ಮನೆ ಸೇರಬಹುದು. ನಿಮ್ಮ ಉತ್ತರ ಎಲ್ಲ ಸರಿಯಿದ್ದಲ್ಲಿ ಆಕೆ ನಿಮ್ಮನ್ನು ಖಂಡಿತ “ಪ್ರಣಯರಾಜ” ಎಂದು ಕರೆಯಬಹುದು!
______________________
ಉತ್ತರಗಳು:
ಪದಗಳನ್ನು ಜೋಡಿಸಿ:
ಉತ್ತರ:
೧. ಕುಂಭಿ ------ D. ಆನೆ
೨. ಕುಂಭೀನಸ ------- F. ಹಾವು
೩. ಕುಂಭೀರ ------- G. ಮೊಸಳೆ
೪. ಕುಕ್ಕುರ ------- J. ನಾಯಿ
೫. ಕುಕ್ಕುಟ ------- H. ಹುಂಜ
೬. ಕೊತ್ತಿ ------- I. ಬೆಕ್ಕು
೭. ಕೃಕವಾಕು ------- B. ಕೋಳಿ
೮. ಕೆಂಬೂತ ------ A. ಒಂದು ಪಕ್ಷಿ
೯ ಕೇಕಿ ------- C. ನವಿಲು
೧೦. ಕೇಸರಿ ------- E. ಸಿಂಹ
ಕನ್ನಡದ ನುಡಿಗಟ್ಟುಗಳು
ಉತ್ತರ:
೧. ಮುಖ. ೨. ಎದೆ. ೩. ಕಾಲು, ಕಾಲು. ೪. ಕಣ್ಣು (ಕಣ್ಣಿಗೆ). ೫. ಕರಳು. ೬. ಕೈ. ೭. ಕಾಲು (ಕಾಲಿನ) ೮. ತಲೆ. ೯. ಹಲ್ಲು . ೧೦. ಮೂಗು (ಮೂಗಿಗೆ) ೧೧. ನಾಲಿಗೆ ೧೨. ಹೊಟ್ಟೆ (ಹೊಟ್ಟೆಯ). ೧೩. ಕಿವಿ ೧೪. ಹೊಟ್ಟೆ. ೧೫. ಬುರುಡೆ.
ಅದೇನು “ಮಹಾ?”
ಉತ್ತರ:
೧. ಮಹಾದ್ವಾರ ೨. ಮಹಾಪೂರ ೩. ಮಹಾಜನ ೪. ಮಹಾಪುರುಷ ೫. ಮಹಾಕಾಲ ಅಥವಾ ಮಹಾಕಾಳ ೬. ಮಹಾನವಮಿ ೭. ಮಹಾಸತಿ ೮. ಮಹಾಮಾತ್ಯ ೯. ಮಹಾರಥ ೧೦. ಮಹಾಪ್ರಾಣ
ನಿಮ್ಮ Score:
೧-೨ ಸರಿಯಾಗಿದ್ದಲ್ಲಿ “ಮಹಾ ಮಂಕ” ೩-೪ ಸರಿಯಾಗಿದ್ದಲ್ಲಿ “ಮಹಾ ಪೆದ್ದ” ೫-೬ ಸರಿಯಾಗಿದ್ದಲ್ಲಿ “ಮಹಾ ಬುದ್ಧಿವಂತ” ೭-೮ ಸರಿಯಾಗಿದ್ದಲ್ಲಿ “ಮಹಾ ಮೇಧಾವಿ” ೯-೧೦ ಸರಿಯಾಗಿದ್ದಲ್ಲಿ “ಮಹಾ ಪಂಡಿತ”
ಅಡ್ಡಾದಿಡ್ಡ ಪದಗಳು
ಉತ್ತರ:
ಅ(ಜ)ಗಜಾಂತ(ರ), ಅ(ಮ)(ರ)ಕೋಶ, ಕ(ಲ್ಪಿ)ಸು , (ಅ)(ಕ್ಕ)ಸಾಲಿ, (ಶಿ)ವಗು(ಣ)
ಚಿತ್ರಕ್ಕೆ ಹೊಂದುವ ಉತ್ತರ: ಅಮರ ಶಿಲ್ಪಿ ಜಕ್ಕಣ
ವೈಶಿಷ್ಟ್ಯಪೂರ್ಣ “ವೈ”
ಉತ್ತರ:
೧. ಬಾವುಟ = ವೈಜಯಂತ ೨. ವಿಷ್ಣುವಿನ ನಿವಾಸ = ವೈಕುಂಠ. ೩. ವೀಣೆ ನುಡಿಸುವವ = ವೈಣಿಕ ೪. ಸೀತೆ = ವೈದೇಹಿ ೫. ಆಸ್ಪತ್ರೆ = ವೈದ್ಯಶಾಲೆ ೬. ವಿಮಾನ ನೆಡಸುವ = ವೈಮಾನಿಕ ೭. ಶತ್ರು = ವೈರಿ ೮. ದಾಂಪತ್ಯ = ವೈವಾಹಿಕ ೯. ಐಶ್ವರ್ಯ = ವೈಭವ ೧೦. ವಿರಕ್ತಿ = ವೈರಾಗ್ಯ.
“ಪರ”ಕೀಯ ಭಾಷೆ ಇಂಗ್ಲಿಷ್!
ಉತ್ತರ:
೧. Mesmerize: ಪರವಶ. ೨. Relish: ಪರಮಾಯಿಷಿ. ೩. Scratch: ಪರಚು. ೪. Permission: ಪರವಾನಿಗಿ. ೫. Screen: ಪರದೆ. ೬. Tradition: ಪರಂಪರೆ. ೭. Salvation: ಪರತತ್ವ. ೮. Festival: ಪರಷೆ ಅಥವಾ ಪರಿಷೆ. ೯. Heaven: ಪರಂಧಾಮ. ೧೦. Nuclear: ಪರಮಾಣು.
ನಿಮ್ಮ Score:
೧-೨ ಸರಿಯಾಗಿದ್ದಲ್ಲಿ “ಪರಮ ಮೂರ್ಖ” ೩-೪ ಸರಿಯಾಗಿದ್ದಲ್ಲಿ “ಪರಮಾತ್ಮನೇ ಗತಿ” ೫-೬ ಸರಿಯಾಗಿದ್ದಲ್ಲಿ “ಪರದೇಶಿಯರೇ ವಾಸಿ” ೭-೮ ಸರಿಯಾಗಿದ್ದಲ್ಲಿ “ಪರವಾಗಿಲ್ಲ ಬಿಡಿ” ೯-೧೦ ಸರಿಯಾಗಿದ್ದಲ್ಲಿ “ಪರಮೇಷ್ಠಿ ಪಂಡಿತ”
ಚತುಷ್ಕೋನ
ಉತ್ತರ:
೧. ಉಳಿದ ಐದು ಅಕ್ಷರಗಳು: ಶ, ಆ, ಕಾ, ಣಿ, ವಾ. ೨. ಸುಳಿವಿಗೆ ತಕ್ಕ ಪದ: ಆಕಾಶವಾಣಿ
ಎರಡಕ್ಷರದ ಮಹಿಮೆ.
ಉತ್ತರ:
೧. ಹಸಿರು ಬಣ್ಣದ ಜಾರಿಕೆಯ ಸಸ್ಯ: ಪಾಚಿ. ೨. ಓದುವುದು: ಪಾಠ . ೩. ನಟನೆ: ಪಾತ್ರ. ೪. ಕೊಳಗ: ಪಾತ್ರೆ. ೫. ಅಡಿ: ಪಾದ. ೬. ಅಡುಗೆ: ಪಾಕ. ೭. ಕೈ: ಪಾಣಿ. ೮. ಕ್ರೈಸ್ತಗುರು: ಪಾದ್ರಿ. ೯. ದುಷ್ಟ: ಪಾಪಿ. ೧೦. ಪಕ್ಷದ ಮೊದಲನೇ ದಿನ: ಪಾಡ್ಯ. ೧೧. ಬೀಡು: ಪಾಳ್ಯ. ೧೨. ಹಗ್ಗ: ಪಾಶ. ೧೩. ಸೇರಿನ ನಾಲ್ಕನೆಯ ಭಾಗ: ಪಾವು. ೧೪. ಕುಡಿಯುವ ಪದಾರ್ಥ: ಪಾನ. ೧೫. ದಾಟು: ಪಾರು.
ಮೂರಕ್ಷರ ಗೊತ್ತಿದ್ದರೆ ಸಾಕು.
ಉತ್ತರ:
೧. ಅಕ್ಷರ ೨. ಅಖಾಡ ೩. ಅಗಸ ೪. ಅಧ್ಯಕ್ಷ ೫. ಅರಣ್ಯ ೬. ಆಕಾಶ ೭. ಆರತಿ ೮. ಆರಾಮ ೯. ಆಯುಧ ೧೦. ಆಸ್ತಿಕ
ಹೆಸರುಗಳನ್ನು ವಿಂಗಡಿಸಿ
ಉತ್ತರ:
೧. ಪ್ರಕಾಶ್, ೨. ಪ್ರಜ್ವಲ್, ೩. ಪ್ರಣತಿ , ೪. ಪ್ರತಾಪ್, ೫. ಪ್ರತಿಭಾ, ೬. ಪ್ರದೀಪ್, ೭. ಪ್ರಫುಲ್ಲ, ೮. ಪ್ರಭವ್, ೯. ಪ್ರಭಾಕರ್, ೧೦. ಪ್ರಭು, ೧೧. ಪ್ರಮೋದ್, ೧೨. ಪ್ರವೀಣ್, ೧೩. ಪ್ರಶಾಂತ್, ೧೪. ಪ್ರಸನ್ನ, ೧೫. ಪ್ರಸಾದ್
________________
ಅಕ್ಷರ ಬದಲಾಯಿಸಿ ಪದಗಳ ಅರ್ಥ ಬದಲಾವಣೆ
ಒಂದು ವಾಟ್ಸಾಪ್ ತಂಡದಲ್ಲಿ ಯಾರೋ ಒಂದು ಕ್ವಿಜ್ ಪೋಸ್ಟ್ ಮಾಡಿದ್ದರು.
ಅದು ಹೀಗಿತ್ತು: ಕನ್ನಡದ ಮೂರೂ ಅಕ್ಷರ ಪದಗಳಲ್ಲಿ ಒಂದು ವೇಳೆ ಒಂದಕ್ಷರವನ್ನು ಬೇರೊಂದು ಅಕ್ಷರದಿಂದ ಬದಲಾಯಿಸಿ ಬೇರೆಯೇ ಅರ್ಥಕೊಡುವ ಪದಗಳನ್ನು ನೀವು ಎಷ್ಟು ಕೊಡಬಲ್ಲಿರಿ ಅಂತ. ೨೦ಕ್ಕಿಂತ ಜಾಸ್ತಿ ಕೊಟ್ಟವರು ವಿಜೇತರು ಅಂತಲೂ ತಿಳಿಸಿದ್ದರು.
ಸರಿ, ನಾನು ಶುರು ಮಾಡಿದೆ. ಯಾವ ಡಿಕ್ಷನರಿ ಸಹಾಯವಿಲ್ಲದೆ ಒಂದೆರಡು ನಿಮಿಷಗಳಲ್ಲಿ ೨೦ ಬರೆದುಬಿಟ್ಟೆ. ಹಾಗೆಯೇ ಮುಂದುವರಿಸಿಕೊಂಡು ಹೋಗುತ್ತಾ, ಹೋಗುತ್ತಾ ನೋಡಿದರೆ ೨೦೦ ಪದಗಳಿಗಿಂತ ಜಾಸ್ತಿ ತಲೆಗೆ ಬಂತು, ಎಲ್ಲ ಟೈಪ್ ಮಾಡಿದ ಮೇಲೆ ಒಂದು ರೀತಿ ಆಶ್ಚರ್ಯ ಆಯಿತು. ಪರವಾಗಿಲ್ಲ ನನಗೆ ಇಷ್ಟೊಂದು ಕನ್ನಡ ಪದಗಳು ಗೊತ್ತಲ್ಲ ಅಂತ. ಮತ್ತೊಂದು ಆಶ್ಚರ್ಯ ಅಂದರೆ ಇವೆಲ್ಲವೂ ಒಂದು ರೀತಿ ಪ್ರಾಸಬದ್ದವಾಗಿವೆಯಲ್ಲ ಅಂತ ಅನಿಸಿತು. ಜೊತೆಗೆ ಯಾರೋ ಅದೇ ವಾಟ್ಸಾಪ್ ತಂಡದಲ್ಲಿ ಸಾರ್, ಈ ಲಿಸ್ಟ್ನಿಂದ ಕವನ ಬರೆಯುವರಿಗೆ ಎಷ್ಟೊಂದು ರೆಡಿ ಮೇಡ್ ಪ್ರಾಸದ ಪದಗಳು ಸಿಗುತ್ತೆ. ಇದನ್ನು ನಾವು ಉಪಯೋಗಿಸಿಕೊಳ್ಳಬಹುದೇ ಅಂತ ಕೇಳಿದಾಗ ಖಂಡಿತ ಅಂತ ಹೇಳಿದೆ.
ಮುಂದೆಂದಾದರು ನಿಮಗೆ ಉಪಯೋಗ ಬಂದರೆ ಇದೋ ಆ ಪದಗಳು ಇಲ್ಲಿವೆ:
ಅಪಾಯ, ಉಪಾಯ
ಅಪೇಕ್ಷೆ, ಉಪೇಕ್ಷೆ
ಅವಳಿ, ಜವಳಿ
ಆಗ್ರಹ, ನಿಗ್ರಹ
ಆದಾಯ, ವಿದಾಯ
ಆಪತ್ತು, ವಿಪತ್ತು
ಆಮಿಷ, ನಿಮಿಷ
ಆಯೋಗ, ವಿಯೋಗ
ಆಶ್ರಮ, ವಿಶ್ರಮ
ಆಶ್ವಾಸ, ವಿಶ್ವಾಸ
ಆಹಾರ, ವಿಹಾರ
ಇಸವಿ, ಬಸವಿ
ಉದ್ಯಮ, ಮಧ್ಯಮ
ಉಬ್ಬರ, ಅಬ್ಬರ
ಒಟ್ಟಿಗೆ, ಇಟ್ಟಿಗೆ, ಕೊಟ್ಟಿಗೆ
ಕಡಲು, ಒಡಲು
ಕನಸು, ನನಸು
ಕರುಳು, ಇರುಳು, ಉರುಳು
ಕಾಡಿಗೆ, ಬೀಡಿಗೆ
ಕಿವುಡು, ತವುಡು
ಕುರೂಪ, ವಿರೂಪ
ಕೇಸರ, ನೇಸರ, ಬೇಸರ
ಖಚಿತ, ಉಚಿತ
ಗರಡಿ, ಕರಡಿ
ಗೊಡವೆ, ಒಡವೆ
ಚದುರೆ, ಕುದುರೆ
ಚುಟುಕು, ಗುಟುಕು
ಚೆಲುವ, ಗೆಲುವ
ಜನಿಸು, ಇನಿಸು, ಮುನಿಸು
ಜರಿದ, ಹರಿದ, ಸರಿದ
ಜಾಡಿಸು, ಬಾಡಿಸು, ಬಡಿಸು
ಜಾತಕ, ಘಾತಕ, ಪಾತಕ
ಜಾರಿದ,ಹಾರಿದ, ಸಾರಿದ
ಜೋಳಿಗೆ, ಹೋಳಿಗೆ, ಈಳಿಗೆ
ಟೊಣಪ, ಗಣಪ
ತದ್ಭವ, ಉದ್ಭವ
ತಪಸ್ಸು, ವಾಪಸ್ಸು
ತರಚು, ಪರಚು
ತರುಣ, ವರುಣ
ತಿಕ್ಕಲು, ಒಕ್ಕಲು, ಪುಕ್ಕಲು
ತೆಗಳು, ತಂಗಳು
ತೊಂದರೆ, ಬಂದರೆ, ಅಂದರೆ
ತೊಳಸು, ಹಳಸು, ಬೆಳಸು,
ದುರಾಶೆ, ನಿರಾಶೆ
ದುರುಳ, ಮರುಳ
ದುರ್ಗತಿ, ನಿರ್ಗತಿ
ಧರಣಿ, ಭರಣಿ
ಧವಳ, ಹವಳ
ನಕಾರ, ವಿಕಾರ
ನಗಿಸು, ಮುಗಿಸು
ನಡುಗು, ಗುಡುಗು
ನಾಯಕ, ಗಾಯಕ
ನಾಸ್ತಿಕ, ಆಸ್ತಿಕ
ನಿಟ್ಟಿಸು, ದಿಟ್ಟಿಸು
ನಿರ್ಬಲ, ದುರ್ಬಲ
ನಿವೃತ್ತಿ, ಆವೃತ್ತಿ
ಪಂಡಿತ, ಖಂಡಿತ
ಪರಂಗಿ, ಫಿರಂಗಿ
ಪರಾರಿ, ಮುರಾರಿ
ಪಾಲಿಸು, ಆಲಿಸು
ಬಂಗಾರ, ಸಿಂಗಾರ, ಶೃಂಗಾರ
ಬಟಾಣಿ, ಕುಟಾಣಿ
ಬಾಲಕ, ಚಾಲಕ
ಭ್ರಮರ, ಸಮರ, ಪಾಮರ,
ಮಲೆಯ, ಹೊಲೆಯ
ಮಾಂತ್ರಿಕ, ಯಾಂತ್ರಿಕ
ಮೊಸರು, ಕೊಸರು
ವಿಕಟ, ನಿಕಟ
ವಿಕ್ರಮ, ಆಕ್ರಮ
ಸಂಚಿಸು, ವಂಚಿಸು
ಸಾಸಿವೆ, ಹಸಿವೆ
ಸಿಂಬಳ, ಕುಂಬಳ, ಸಂಬಳ
ಸಿಡಿತ, ಬಡಿತ, ಮಿಡಿತ
ಸಿಲುಕು, ನಿಲುಕು
ಸೀಗಡಿ, ನೆಗಡಿ
ಸೀಮಂತ, ಧೀಮಂತ
ಸುಜ್ಞಾನ, ಅಜ್ಞಾನ
ಸುಮಾರು, ಯಾಮಾರು
ಹರಸು, ಅರಸು
ಹವಳ, ಧವಳ
ಹುಂಕಾರ, ಝೇಂಕಾರ
ಹುಡುಕು, ತೊಡಕು
ಹುರುಪು, ತಿರುಪು
ಹೆಚ್ಚಳ, ನಿಚ್ಚಳ
ಹೊರಡು, ಬರಡು
________________
ಅಕ್ಷರ ಬದಲಾಯಿಸಿ ಪದಗಳ ಅರ್ಥ ಬದಲಾವಣೆ
ಒಂದು ವಾಟ್ಸಾಪ್ ತಂಡದಲ್ಲಿ ಯಾರೋ ಒಂದು ಕ್ವಿಜ್ ಪೋಸ್ಟ್ ಮಾಡಿದ್ದರು.
ಅದು ಹೀಗಿತ್ತು: ಕನ್ನಡದ ಮೂರೂ ಅಕ್ಷರ ಪದಗಳಲ್ಲಿ ಒಂದು ವೇಳೆ ಒಂದಕ್ಷರವನ್ನು ಬೇರೊಂದು ಅಕ್ಷರದಿಂದ ಬದಲಾಯಿಸಿ ಬೇರೆಯೇ ಅರ್ಥಕೊಡುವ ಪದಗಳನ್ನು ನೀವು ಎಷ್ಟು ಕೊಡಬಲ್ಲಿರಿ ಅಂತ. ೨೦ಕ್ಕಿಂತ ಜಾಸ್ತಿ ಕೊಟ್ಟವರು ವಿಜೇತರು ಅಂತಲೂ ತಿಳಿಸಿದ್ದರು.
ಸರಿ, ನಾನು ಶುರು ಮಾಡಿದೆ. ಯಾವ ಡಿಕ್ಷನರಿ ಸಹಾಯವಿಲ್ಲದೆ ಒಂದೆರಡು ನಿಮಿಷಗಳಲ್ಲಿ ೨೦ ಬರೆದುಬಿಟ್ಟೆ. ಹಾಗೆಯೇ ಮುಂದುವರಿಸಿಕೊಂಡು ಹೋಗುತ್ತಾ, ಹೋಗುತ್ತಾ ನೋಡಿದರೆ ೨೦೦ ಪದಗಳಿಗಿಂತ ಜಾಸ್ತಿ ತಲೆಗೆ ಬಂತು, ಎಲ್ಲ ಟೈಪ್ ಮಾಡಿದ ಮೇಲೆ ಒಂದು ರೀತಿ ಆಶ್ಚರ್ಯ ಆಯಿತು. ಪರವಾಗಿಲ್ಲ ನನಗೆ ಇಷ್ಟೊಂದು ಕನ್ನಡ ಪದಗಳು ಗೊತ್ತಲ್ಲ ಅಂತ. ಮತ್ತೊಂದು ಆಶ್ಚರ್ಯ ಅಂದರೆ ಇವೆಲ್ಲವೂ ಒಂದು ರೀತಿ ಪ್ರಾಸಬದ್ದವಾಗಿವೆಯಲ್ಲ ಅಂತ ಅನಿಸಿತು. ಜೊತೆಗೆ ಯಾರೋ ಅದೇ ವಾಟ್ಸಾಪ್ ತಂಡದಲ್ಲಿ ಸಾರ್, ಈ ಲಿಸ್ಟ್ನಿಂದ ಕವನ ಬರೆಯುವರಿಗೆ ಎಷ್ಟೊಂದು ರೆಡಿ ಮೇಡ್ ಪ್ರಾಸದ ಪದಗಳು ಸಿಗುತ್ತೆ. ಇದನ್ನು ನಾವು ಉಪಯೋಗಿಸಿಕೊಳ್ಳಬಹುದೇ ಅಂತ ಕೇಳಿದಾಗ ಖಂಡಿತ ಅಂತ ಹೇಳಿದೆ.
ಮುಂದೆಂದಾದರು ನಿಮಗೆ ಉಪಯೋಗ ಬಂದರೆ ಇದೋ ಆ ಪದಗಳು ಇಲ್ಲಿವೆ:
ಅಪಾಯ, ಉಪಾಯ
ಅಪೇಕ್ಷೆ, ಉಪೇಕ್ಷೆ
ಅವಳಿ, ಜವಳಿ
ಆಗ್ರಹ, ನಿಗ್ರಹ
ಆದಾಯ, ವಿದಾಯ
ಆಪತ್ತು, ವಿಪತ್ತು
ಆಮಿಷ, ನಿಮಿಷ
ಆಯೋಗ, ವಿಯೋಗ
ಆಶ್ರಮ, ವಿಶ್ರಮ
ಆಶ್ವಾಸ, ವಿಶ್ವಾಸ
ಆಹಾರ, ವಿಹಾರ
ಇಸವಿ, ಬಸವಿ
ಉದ್ಯಮ, ಮಧ್ಯಮ
ಉಬ್ಬರ, ಅಬ್ಬರ
ಒಟ್ಟಿಗೆ, ಇಟ್ಟಿಗೆ, ಕೊಟ್ಟಿಗೆ
ಕಡಲು, ಒಡಲು
ಕನಸು, ನನಸು
ಕರುಳು, ಇರುಳು, ಉರುಳು
ಕಾಡಿಗೆ, ಬೀಡಿಗೆ
ಕಿವುಡು, ತವುಡು
ಕುರೂಪ, ವಿರೂಪ
ಕೇಸರ, ನೇಸರ, ಬೇಸರ
ಖಚಿತ, ಉಚಿತ
ಗರಡಿ, ಕರಡಿ
ಗೊಡವೆ, ಒಡವೆ
ಚದುರೆ, ಕುದುರೆ
ಚುಟುಕು, ಗುಟುಕು
ಚೆಲುವ, ಗೆಲುವ
ಜನಿಸು, ಇನಿಸು, ಮುನಿಸು
ಜರಿದ, ಹರಿದ, ಸರಿದ
ಜಾಡಿಸು, ಬಾಡಿಸು, ಬಡಿಸು
ಜಾತಕ, ಘಾತಕ, ಪಾತಕ
ಜಾರಿದ,ಹಾರಿದ, ಸಾರಿದ
ಜೋಳಿಗೆ, ಹೋಳಿಗೆ, ಈಳಿಗೆ
ಟೊಣಪ, ಗಣಪ
ತದ್ಭವ, ಉದ್ಭವ
ತಪಸ್ಸು, ವಾಪಸ್ಸು
ತರಚು, ಪರಚು
ತರುಣ, ವರುಣ
ತಿಕ್ಕಲು, ಒಕ್ಕಲು, ಪುಕ್ಕಲು
ತೆಗಳು, ತಂಗಳು
ತೊಂದರೆ, ಬಂದರೆ, ಅಂದರೆ
ತೊಳಸು, ಹಳಸು, ಬೆಳಸು,
ದುರಾಶೆ, ನಿರಾಶೆ
ದುರುಳ, ಮರುಳ
ದುರ್ಗತಿ, ನಿರ್ಗತಿ
ಧರಣಿ, ಭರಣಿ
ಧವಳ, ಹವಳ
ನಕಾರ, ವಿಕಾರ
ನಗಿಸು, ಮುಗಿಸು
ನಡುಗು, ಗುಡುಗು
ನಾಯಕ, ಗಾಯಕ
ನಾಸ್ತಿಕ, ಆಸ್ತಿಕ
ನಿಟ್ಟಿಸು, ದಿಟ್ಟಿಸು
ನಿರ್ಬಲ, ದುರ್ಬಲ
ನಿವೃತ್ತಿ, ಆವೃತ್ತಿ
ಪಂಡಿತ, ಖಂಡಿತ
ಪರಂಗಿ, ಫಿರಂಗಿ
ಪರಾರಿ, ಮುರಾರಿ
ಪಾಲಿಸು, ಆಲಿಸು
ಬಂಗಾರ, ಸಿಂಗಾರ, ಶೃಂಗಾರ
ಬಟಾಣಿ, ಕುಟಾಣಿ
ಬಾಲಕ, ಚಾಲಕ
ಭ್ರಮರ, ಸಮರ, ಪಾಮರ,
ಮಲೆಯ, ಹೊಲೆಯ
ಮಾಂತ್ರಿಕ, ಯಾಂತ್ರಿಕ
ಮೊಸರು, ಕೊಸರು
ವಿಕಟ, ನಿಕಟ
ವಿಕ್ರಮ, ಆಕ್ರಮ
ಸಂಚಿಸು, ವಂಚಿಸು
ಸಾಸಿವೆ, ಹಸಿವೆ
ಸಿಂಬಳ, ಕುಂಬಳ, ಸಂಬಳ
ಸಿಡಿತ, ಬಡಿತ, ಮಿಡಿತ
ಸಿಲುಕು, ನಿಲುಕು
ಸೀಗಡಿ, ನೆಗಡಿ
ಸೀಮಂತ, ಧೀಮಂತ
ಸುಜ್ಞಾನ, ಅಜ್ಞಾನ
ಸುಮಾರು, ಯಾಮಾರು
ಹರಸು, ಅರಸು
ಹವಳ, ಧವಳ
ಹುಂಕಾರ, ಝೇಂಕಾರ
ಹುಡುಕು, ತೊಡಕು
ಹುರುಪು, ತಿರುಪು
ಹೆಚ್ಚಳ, ನಿಚ್ಚಳ
ಹೊರಡು, ಬರಡು
ರವಿ ಗೋಪಾಲ್ರವರೇ ನಮಸ್ಕಾರ.
ಪ್ರತ್ಯುತ್ತರಅಳಿಸಿಬಹಳ ಬಹಳ ಉತ್ತಮವಾದ...ಬುದ್ಧಿಗೆ ಸಾಣೆ ಹಿಡಿಯುವ.... ಮನಸ್ಸಿಗೆ ಸಂತಸ ನೀಡುವ ಅನೇಕ ಬಗೆಯ ಪದಗಳಾಟಗಳನ್ನು ನೀಡಿದ್ದೀರಿ. ಅಚಾನಕ್ಕಾಗಿ ನಿಮ್ಮ ತಾಣವನ್ನು ವೀಕ್ಷಿಸಿ ಬಹಳ ಖುಷಿಯಾಯಿತು. ತಮಗೆ ಅನೇಕ ಧನ್ಯವಾದಗಳು. ನಮ್ಮ ಗುಂಪುಗಳಲ್ಲಿ ಹಂಚಿ ಖುಷಿಪಡುವೆ.
Vē hi vi ṣṭa kṣa te ra ka sū ( unable to find out Kannada word please help me)
ಪ್ರತ್ಯುತ್ತರಅಳಿಸಿತುಂಬಾ ಸುಂದರವಾಗಿದೆ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಎಲ್ಲರಿಗೂ ತಿಳಿಸುವ ಪ್ರಯತ್ನ ಮಾಡಬೇಕಿದೆ ಉತ್ತಮ
ಪ್ರತ್ಯುತ್ತರಅಳಿಸಿಬ್ಲಾಗ್ ಪ್ರದರ್ಶನ
kannadadeevige.blogspot.com
ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ
ಪ್ರತ್ಯುತ್ತರಅಳಿಸಿjayakumarcsj@gmail.com