ಪ್ರಕಟಿತ ಕೃತಿಗಳು



ಶೋಷಿತ ಹೆಣ್ಣಿನ ಪುನಃಶ್ಚೇತನ: ಸವಾಲುಗಳ ಅವಲೋಕನ

ರವಿ ಗೋಪಾಲರಾವ್, ಸ್ಯಾನ್ ಹೋಸೆ, ಕ್ಯಾಲಿಫೋರ್ನಿಯ

ಅವಳು ಜನಿಸಿದ್ದೇ ಬಡತನದಲ್ಲಿ. ಹಿಂದೂ ಸಮಾಜದ ಅಸ್ಪೃಶ್ಯತೆಯ ತುಚ್ಛ, ನಿರ್ಗತಿಕ ಸಂಸಾರದಲಿ. ಸಹಿಸಲಾರದ ಅತ್ಯಾಚಾರ, ದೌರ್ಜನ್ಯ, ಅಸಾಹಾಯಕತೆಯಲ್ಲೂ ಸಮಾಜದ ವಿರುದ್ಧ ಬಂಡೆದ್ದು ದುಷ್ಕೃತ್ಯ ಮಾಡಿದವರನ್ನು ತಾನೇ ಕೊಂದು ಸೇಡು ತೀರಿಸಿಕೊಂಡ ದಲಿತ ಹೆಣ್ಣು. ನ್ಯಾಯಕ್ಕೆ ತಲೆಬಗ್ಗಿ ಶರಾಣಾಗತಿಯಲಿ ಕಠಿಣ ಕಾರಾಗೃಹವನು ಅನುಭವಿಸಿದ ಧೀರ ಮಹಿಳೆ. ತನ್ನ ಮೂವತ್ತೆಳೇ ವರ್ಷಗಳ ಜೀವನದಲ್ಲಿ ಶೋಷಿತ ಹೆಣ್ಣಿನ ಸ್ಥಾನದಿಂದ ಅಂತ್ಯ ಪಡೆದು ಪುನಃಸ್ಚೇತನ ಗಳಿಸಿ ಶೋಷಿತ ಜನರ ಪ್ರತಿನಿಧಿಯಾಗಿ ರಾಜಕೀಯದಲ್ಲಿ ಮೆರೆದ ದಿಟ್ಟ ಹೆಣ್ಣು. ದುರಾದೃಷ್ಟಾವಶಾತ್ ಮೇಲ್ಜಾತಿಯ ದ್ವೇಷ ಅಭಿಯಾನದ ಗುಂಡಿಗೆ ಬಲಿಯಾದ ಅಭಾಗ್ಯ ಹೆಣ್ಣು. ಆದರೂ ಕೊನೆಯಲ್ಲಿ ಜೀವನದ ಅತ್ಯಂತ ವಿಷಾದಕರ ಸಂಗತಿ ಏನು ಮತ್ತು ಮುಂದಿನ ಜನ್ಮದಲ್ಲಿ ಏನಾಗಲು ಬಯಸುತ್ತೀರಿ ಎನ್ನುವ ಪ್ರಶ್ನೆಗಳಿಗೆ ಆಕೆ ಉತ್ತರಿಸಿದ್ದು, “ವಿಧ್ಯೆ ಕಲಿಯಲು ಆಗಲಿಲ್ಲವೆಂಬ ವ್ಯಥೆ” ಮತ್ತು “ಏನೇ ಆದರೂ ಹೆಣ್ಣಾಗಿ ಮಾತ್ರ ಹುಟ್ಟಬಾರದೆಂಬ ಆಸೆ.” ಇದು ‘ದರೋಡೆಕೋರರ ರಾಣಿ’ ಎಂದೇ ಹೆಸರು ಪಡೆದ ಫೂಲನ್ ದೇವಿಯ ಸಂಕ್ಷಿಪ್ತ ಜೀವನ ಯಾತ್ರೆ.

ಫೂಲನ್ ದೇವಿಯ ಕಥೆ ಯಾವುದೇ ರಸಿಕತೆಯಿಂದ ಕೂಡಿದ ಕಥೆ ಅಲ್ಲ. ಬಹಳಷ್ಟು ಮಾನವನ ನೋವುಗಳ ಕತೆ. ಒಂದು ಹೆಂಗಸಿನ ಸಂಘರ್ಷದ ಕತೆ. ಯಾವ ರೀತಿ ಫೂಲನ್ ದೇವಿಯ ಕಥೆಯನ್ನು ಅರ್ಥ ಮಾಡಿಕೊಳ್ಳಬೇಕಾಗಿತ್ತೋ ಅದನ್ನು ಯಾರೂ ಅರ್ಥ ಮಾಡಿಕೊಳ್ಳಲೇ ಇಲ್ಲ ಎಂದರೆ ಬಹುಶಃ ತಪ್ಪಾಗಲಾರದು. ನಮ್ಮ ಇತಿಹಾಸದಲ್ಲಿ ಆ ರೀತಿ ಸಂಘರ್ಷ ಮಾಡುವ ವ್ಯಕ್ತಿಗಳು ಎಷ್ಟೋ ಜನರು ಬಂದು ಹೋಗುತ್ತಾರೆ ಆದರೆ ಅವರನ್ನು ನಾವು ಮರೆತು ಬಿಡುತ್ತೇವೆ. ಇತಿಹಾಸದಲ್ಲಿ ಉಳಿವವರು ಕೇವಲ ಒಂದೋ ಎರಡೂ ವ್ಯಕ್ತಿಗಳು. ಹಾಗೆ ನೋಡಿದಾಗ ಅವಳದೇ ಕತೆಯಲ್ಲಿ ಇದು ಸಂಪೂರ್ಣ ಕತೆ. ಈ ಕತೆಯನ್ನು ಆಧಾರವಾಗಿಟ್ಟುಕೊಂಡು ಬರೆದ ಲಘುಲೇಖನವಿದು.

ನಾನು ಫೂಲನ್ ದೇವಿಯ ಧಾರುಣ ಕತೆಯನ್ನು ಇಲ್ಲಿ ವಿವರಿಸಲು ಪ್ರಯತ್ನಿಸುವುದಿಲ್ಲ. ಏಕೆಂದರೆ ಈ ದಿಟ್ಟ ಮಹಿಳೆಯ ಆತ್ಮಚರಿತ್ರೆಯನ್ನು ಪುಸ್ತಕವಾಗಿ, ಚಲನಚಿತ್ರವಾಗಿ, ಕಿರುತೆರೆಯಲ್ಲಿ, ಜಾನಪದ ಗೀತೆಗಳಲ್ಲಿ, ನಾಟಕಗಳಲ್ಲಿ, ಚಿತ್ರಕಲೆಗಳಲ್ಲಿ, ಕರಕುಶಲ ವಸ್ತುಗಳ ಮೂಲಕ ಎಲ್ಲ ಮಾಧ್ಯಮದಲ್ಲೂ, ಪರದೇಶಗಳ ಮತ್ತು ಭಾರತದ ಶೈಕ್ಷಣಿಕ ಸಂಶೋಧಕರ ವಿಷಯಗಳಲ್ಲಿಯೂ, ತುಲನೆ ಮಾಡಿದ್ದಾರೆ. ಆದ್ದರಿಂದ ನಾನು ಇಲ್ಲಿ ಅವಳ ವ್ಯಕ್ತಿ ಚಿತ್ರಣವನ್ನೇ ನಿಮ್ಮ ಮುಂದಿಡುವುದರ ಜೊತೆಗೆ ಯಾವ ಹಂತದಲ್ಲಿ ಮತ್ತು ಹೇಗೆ ಅವಳು ತನ್ನ ಶೋಷಿತ ಸ್ಥಿತಿಯಿಂದ ಹೊರಬಂದು ಪುನಃಸ್ಚೇತನ ಗಳಿಸಿದಳು, ಆ ಪ್ರಕ್ರಿಯೆಯಲ್ಲಿ ಯಾವ ಸವಾಲುಗಳು ಉದ್ಭವಿಸುತ್ತವೆ ಎನ್ನುವುದರ ಅವಲೋಕನವನ್ನೇ ಈ ಲೇಖನದ ಗುರಿ ಮಾಡಿಕೊಂಡಿದ್ದೇನೆ. ಫೂಲನ್ ದೇವಿಯು ಹೇಗೆ ಜಾತಿಯ ಕಳಂಕ, ಆರ್ಥಿಕ ಶೋಷಣೆ ಮತ್ತು ಲಿಂಗ ಬೇಧಗಳನ್ನು ಸ್ಪಂದಿಸುವುದರ ಜೊತೆಗೆ ತನ್ನದೇ ಪ್ರತಿರೋಧಕ ಸಿದ್ಧಾಂತಗಳನ್ನು ಅಳವಡಿಸಿಕೊಂಡಳು ಎಂದು ಅವಲೋಕಿಸುವ ಪ್ರಯತ್ನವನ್ನು ಕೂಡ ಮಾಡಿದ್ದೇನೆ.

ಸವಾಲುಗಳು:
* ಶೋಷಣೆಗೊಳಗಾದ ಹೆಣ್ಣು ನ್ಯಾಯಗಳಿಸಲು ಪ್ರತೀಕಾರದ ಮಾರ್ಗದಲ್ಲಿ ನಡೆದರೆ ತಪ್ಪೇ?
* ಶೋಷಿತ ಹೆಣ್ಣು ಪುನಃಶ್ಚೇತನಗೊಂಡು ಗೌರವಾನ್ವಿತ ವ್ಯಕ್ತಿಯಾಗಬೇಕಾದರೆ ಪುರುಷರ ಮತ್ತು ಸಮಾಜದ ಬೆಂಬಲ ಬೇಕೇ?
* ಮಲ್ಲಾಹ್ ಮತ್ತು ಠಾಕೂರರ ಸಮಾಜದಲ್ಲಿ ಅತ್ಯಾಚಾರಗಳು ನಡೆಯುತ್ತಿದ್ದರೂ ಆ ಹಳ್ಳಿಯಲ್ಲಿ ಅದನ್ನು ಎದುರಿಸಲು ಯಾರೂ ಇರಲಿಲ್ಲವೇ? ಆ ಠಾಕೂರ್ ಸ್ತ್ರೀಯರು ಮತ್ತೊಬ್ಬ ಹೆಣ್ಣಿನ ಮೇಲಾದ ಅತ್ಯಾಚಾರಗಳ ಬಗ್ಗೆ ಏಕೆ ಸುಮ್ಮನಿದ್ದರು? ಅಥವ ಅವರ ಧ್ವನಿ ಯಾರಿಗೂ ಕೇಳಿಸಲಿಲ್ಲವೇ? ಆ ಸಮಾಜದಲ್ಲಿ ಎಲ್ಲ ಮಹಿಳೆಯರೂ ದಲಿತರಂತೆಯೇ? ದಲಿತ ಮಹಿಳೆಯರು ಯಾವ ಕಾರಣಕ್ಕಾಗಿ ತಾವು ಅತ್ಯಾಚಾರಕ್ಕೆ ಒಳಗಾದರೂ ಬೇರೆಯವರೊಡನೆ ಹೇಳಿಕೊಳ್ಳುವುದಿಲ್ಲ?
* ಫೂಲನ್ ದೇವಿಯ ಪ್ರತೀಕಾರದ ಹಿಂಸಾಕೃತ್ಯದಲ್ಲಿ ನೈತಿಕತೆಯ ನ್ಯಾಯ ಅದಲುಬದಲಾಗಿ ವಿಧವೆಯರಾದ ಅದೇ ಠಾಕೂರ ಸ್ತ್ರೀಯರು ಮತ್ತೊಮ್ಮೆ ಶೋಷಿತರಾದರೇ?


ಈ ಪ್ರಶ್ನೆಗಳಿಗೆ ಉತ್ತರ ಹುಡುಕಲು ಈ ಕೆಳಗಿನ ನಾಲ್ಕು ಮುಖ್ಯ ವಿವರಣೆಯನ್ನು ಕೊಡುವುದರ ಜೊತೆಗೆ ಫೂಲನ್ ದೇವಿಯ ಅನನ್ಯ ಸಾಧನೆ ಮತ್ತು ಮನೋಗತವನ್ನು ಓದುಗರ ಮುಂದಿಟ್ಟಿದ್ದೇನೆ: ಶೋಷಿತ ದಲಿತ ಮಹಿಳೆ, ಅತ್ಯಾಚಾರಿ ಪುರುಷರು, ಪ್ರತೀಕಾರ ಮತ್ತು ಪುನಃಶ್ಚೇತನ ಗಳಿಸಿದ ಹೆಣ್ಣು.

ಶೋಷಿತ ದಲಿತ ಮಹಿಳೆ:

ಯಾವ ಸಮಾಜವು ಹೆಣ್ಣಿಗೆ ತಾನು ಮತ್ತೆ ಹೆಣ್ಣಾಗಿ ಮಾತ್ರ ಹುಟ್ಟಬಾರದೆಂಬ ಆಶಯ ಮೂಡಿಸುತ್ತದೆಯೋ ಅಂತಹ ಸಮಾಜ ತನ್ನೊಳಗಿರುವ ಕಟು ಸತ್ಯವನೇ ವ್ಯಾಖ್ಯಾನಿಸಲು ಅನರ್ಹ ಸಮಾಜ ಎಂದು ಹೇಳಬಹುದು. ಅಂತಹುದೇ ಸಮುದಾಯದಲ್ಲಿ ಹುಟ್ಟಿದ್ದು ಫೂಲನ್ ದೇವಿ. ಸ್ವಾತಂತ್ರ್ಯಾ ನಂತರ ಬೇರೆಡೆಗಿಂತ ಹೆಚ್ಚಾಗಿ ಬಿಹಾರ ಮತ್ತು ಉತ್ತರ ಪ್ರದೇಶ ರಾಜ್ಯಗಳ ಕೆಲವೊಂದು ಪ್ರಾಂತಗಳಲ್ಲಿ ದಲಿತರ ಸ್ಥಿತಿ, ಅದರಲ್ಲೂ ದಲಿತ ಮಹಿಳೆಯರ ಸ್ಥಿತಿ ಶೋಚನೀಯವೇ ಆಗಿತ್ತು. ಸತ್ಯ ಹೇಳಬೇಕೆಂದರೆ ಅಲ್ಲಿನ ಮಹಿಳೆಯೆರೇ ದಲಿತರು. ದಲಿತ ಸಮಾಜವೇ ಮಹಿಳೆಯರನ್ನು ತಮ್ಮ ಮೇಲಾದ ಅತ್ಯಾಚಾರ ಮತ್ತು ಹಿಂಸಾಚಾರಕ್ಕೆ ಅವರೇ ಜವಾಬ್ದಾರಿಯುತರೆಂದು ಹಿಂದಿನಿಂದಲೂ ಹೇಳುತ್ತಿರುವುದರ ಜೊತೆಗೆ ಅವರ ಅಶಕ್ತತೆ ಮತ್ತು ಅಶುದ್ದತೆಯೇ ಕಳಂಕವೆಂದು ಸ್ವನಿಂದನೆಗೆ ಎಡೆ ಮಾಡಿಕೊಡುತ್ತದೆ. ಫೂಲನ್ ದೇವಿ ಮತ್ತು ಇತರ ದಲಿತ ಸ್ತ್ರೀಯರ ಹೇಳಿಕೆಯ ಪ್ರಕಾರ, ಬಿಹಾರ್ ರಾಜ್ಯದಲ್ಲಿ ಮೇಲ್ಜಾತಿಯ ಪುರುಷರು ದಲಿತ ಹೆಣ್ಣು ಮಕ್ಕಳನ್ನು ಅವರ ತಂದೆ ತಾಯಿಗಳಿಂದ ಕಸಿದುಕೊಂಡು ಅತ್ಯಾಚಾರ ಅಥವಾ ಲೈಂಗಿಕ ಕಿರುಕಳ ಕೊಡುವುದು ಬಹಳವೇ ಸಾಮಾನ್ಯ. ಅಷ್ಟೇ ಏಕೆ, ಮೇಲ್ಜಾತಿಯ ಪುರುಷರ ಮುಂದೆ ದಲಿತ ಮಹಿಳೆ ಸುಳಿದಾಡುವುದೇ ತಪ್ಪೆಂದು ತಮ್ಮ ಮಕ್ಕಳಿಗೆ ಭೋದಿಸುವ ದಲಿತ ಮಹಿಳೆಯರೇ ಸಾಮಾನ್ಯ. ಇಂತಹ ಘಟನೆಗಳು ಮತ್ತು ಮನೋಭಾವ ಸಮಾಜದಲ್ಲಿ ದಲಿತ ಮಹಿಳೆಯರ ಕೆಳ ಸ್ಥಿತಿಯನ್ನು ಮತ್ತು ಮಾನವ ಘನತೆಗೆ ಮತ್ತೊಬ್ಬ ಮಾನವ ತೋರಿಸುವ ಉಪೇಕ್ಷೆಗಳಿಗೆ ಸಾಕ್ಷ್ಯ ಕೊಟ್ಟಿವೆ. ಆದರೆ ಫೂಲನ್ ದೇವಿಯ ಬಹುತೇಕ ವರುಷಗಳೇ ಈ ರೀತಿಯ ಸಮುದಾಯದಲ್ಲಿ ಕಳೆದು ಹೋದರೂ, ಅವಳ ಶೋಚಿತ ಜೀವನದ ಬಗ್ಗೆ ಸಕಾರಾತ್ಮಕ ತಿರುವು ಕೊಟ್ಟ ಕೆಲವು ದಲಿತ ಸಮುದಾಯದ ಜಾನಪದ ಗೀತೆಗಳನ್ನು ಕೇಳಿದಾಗ ಅವಳ ಹುಟ್ಟು, ಬಾಲ್ಯ ಮತ್ತು ಹರೆಯದ ಬಗ್ಗೆ ಒಂದು ನಿಜ ಜೀವನದ “ದೇವಿ” ಚಿತ್ರಣ ಮೂಡುತ್ತದೆ:

“ಸುಮ್ಮನೆ ಫೂಲನ್ ದೇವಿ ಹುಟ್ಟುವುದಿಲ್ಲ,
ಸುಮ್ಮನೆ ಎಲ್ಲರೂ ಫುಲನ್ ದೇವಿ ಆಗಲು ಸಾಧ್ಯವಿಲ್ಲ
ಒಂದಲ್ಲ ನೂರು ಬಾರಿ ಹುಡುಕು
ನದಿ, ನದಿಯಲ್ಲಿ ಸಿಗದಿದ್ದರೆ ಸಮುದ್ರದಲ್ಲಿ ಹುಡುಕು
ಬೀಸಿದ ಕಲ್ಲಿನ ರಭಸದಿಂದಲೇ ಒಡೆಯುವುದು ಗಾಜು
ಒಡೆಯಲಿ ಕಲ್ಲು ಗಾಜಿನ ರಭಸಕೆ
ಅಂತಹದನು ಹುಡುಕು
ಸಿಗುವಳು ಫೂಲನ್ ದೇವಿ”


ಮತ್ತೆ ಕೆಲವು ಜನಪದ ಗೀತೆಗಳು ಆಕೆಯನ್ನು ನ್ಯಾಯದ ಸಂಕೇತವಾಗಿ ಬಳಸಿಕೊಂಡಿವೆ. ಇತಿಹಾಸ ಮತ್ತು ಸ್ಟೈರ ಕಲ್ಪನೆಯನ್ನು ಒಂದೇ ಅರ್ಥದಲ್ಲಿ ಹೇಳುವ ಈ ಗೀತೆಗಳು ಕೆಲವೊಮ್ಮೆ ವಾಸ್ತವ, ಕೆಲವೊಮ್ಮೆ ಅಭಿಪ್ರಾಯಗಳನ್ನೂ ಸೇರಿಸಿ ಕತೆ ಹಣೆದಿರುವಂತಿವೆ. ಹಾಗಾಗಿ ಒಂದು ಸಾದೃಶ್ಯ ದಲಿತ ಸಮಾಜವನ್ನೇ ನಿರ್ಮಿಸಿ ಫೂಲನ್ ದೇವಿಯನ್ನು ವೀರ ಸ್ತ್ರೀಯೆಂದು ಸಾರುತ್ತವೆ. ಕತೆಯ ಪ್ರತಿ ಹಂತದಲ್ಲೂ ಅವಳ ಹಿಂದಿನ ವಾಸ್ತವ ಕತೆಗಿಂತಲೂ ಅವಳ ಭವಿಷತ್ಕಾಲದ ಪುನರ್ನಿರ್ಮಾಣವೇ ಮುಖ್ಯವಾಗಿ ಕಾಣುತ್ತವೆ. ಉದಾಹರಣೆಗೆ, ಅವಳು ಯಾರಿಗೂ ಭಯಪಡುವುದಿಲ್ಲ ಮತ್ತು ಅವಳು ಎಂದಿಗೂ ಅನ್ಯಾಯವನ್ನು ಸಹಿಸುವುದಿಲ್ಲ ಎನ್ನುವ ಭೂತ-ಭವಿಷ್ಯ ಕಾಲದ ಒಂದಕ್ಕೊಂದು ಪೂರಕವಾಗುವ ಘಟನೆಗಳನ್ನು ಒತ್ತಿಹೇಳುತ್ತವೆ. ವಾಸ್ತವದಲ್ಲಿ ಫೂಲನ್ ದೇವಿಯ ನೈಜ ಗುಣವೇ ಬೇರೆ.

ಅನಕ್ಷಳಾದ ಫೂಲನ್ ದೇವಿ ದಲಿತ ಮಹಿಳೆಯರ ಬಗ್ಗೆ ತನ್ನ ವೈಯಕ್ತಿಕ ಅನಿಸಿಕೆಗಳನ್ನು ವ್ಯಕ್ತಪಡಿಸುತ್ತಾ “ದಲಿತ ಮಹಿಳೆಯರು ಕೋಮಲ, ಮಮತೆಯುಳ್ಳವರು, ಎಷ್ಟೊಂದು ದಯಾಮಯಿಗಳು ಅಂದರೆ ಬೇರೆಯವರಿಗೆ ಭಾವಾನಾಪೂರಕವಾಗಿ ತಮ್ಮ ಪ್ರಾಣವನ್ನೇ ಕೊಡಬಲ್ಲರು. ಮಹಿಳೆಯರ ಧನಸಂಪತ್ತು ಅವಳ ಮಾನ. ಯಾವಾಗ ಅದನ್ನು ಬೇರೆಯವರು ಕಸಿದುಕೊಳ್ಳುತ್ತಾರೋ ಆಗ ಮಹಿಳೆಯರಿಗೆ ಬೆಂಕಿಯಲ್ಲಿ ಬೀಳುವುದೇಕೆ, ಪ್ರಾಣಹತ್ಯೆ ಮಾಡಿಕೊಳ್ಳುವ ಇಚ್ಛೆ, ಅಥವಾ ದುಷ್ಕರ್ಮಿಗಳನ್ನು ಕೊಂದುಬಿಡುವ ಯೋಚನೆಗಳು ಸಹಜ,” ಎಂದು ಭಾವಾನಾತ್ಮಕವಾಗಿ ಹೇಳಿರುವುದು ಒಂದು ಮಹತ್ವವುಳ್ಳ ಸಂಗತಿ. ಏಕೆಂದರೆ ಆಕೆಯಲ್ಲಿ ಹಿಂದೂ ಸ್ತ್ರೀಯರಲ್ಲಿ ಸಹಜವಾಗಿ ಸ್ಪಂದಿಸುವ ಮನೋಭಾವನೆಗಳೇ ಇರುವುದರ ಜೊತೆಗೆ ಆತ್ಮಗೌರವ ಕಾಪಾಡಿಕೊಳ್ಳಲು ತನ್ನ ಪ್ರಾಣವನ್ನೇ ಒತ್ತೆ ಇಟ್ಟು ದುಷ್ಕರ್ಮಿಗಳ ಮೇಲೆ ಪ್ರತೀಕಾರ ತೀರಿಸಿಕೊಳ್ಳುವ ದೃಢ ನಿಶ್ಚಯ ಕೂಡ ಇದೆ. ಈ ಕಾರಣಕ್ಕಾಗಿ ಫೂಲನ್ ದೇವಿ ಹರೆಯದ ವಯಸ್ಸಿನಿಂದಲೂ ಒಂದೆಡೆ ಅಮಾಯಕಳಾಗಿಯೂ ಮತ್ತೊಂದು ಸಂದರ್ಭಗಳಲ್ಲಿ ಮೇಲ್ಜಾತಿಯ ಪುರುಷರ ಮೇಲೆ ಬಂಡಾಯಗಾರ ಮನೋವೃತ್ತಿಯವಳಾಗಿಯೇ ಬೆಳದದ್ದು ಸ್ಪಷ್ಟವಾಗುತ್ತದೆ. ಈ ದ್ವಂದ್ವವೇ ಅವಳು ಮುಂದೆ ಬಂದೂಕು ಹಿಡಿದು ನಿರ್ದಯಿ ದರೋಡೆಕೋರಳಾದ ಕಾರಣಗಳಿಗೆ ಸೂಕ್ಷ್ಮ ಸೂಚನೆ ಕೊಡುತ್ತವೆ ಎಂದು ನಾವು ಯೋಚಿಸಿದರೆ ಬಹುಶಃ ತಪ್ಪಾಗಲಾರದು. ಏಕೆಂದರೆ ಅವಳ ಮೇಲೆ ಅತ್ಯಾಚಾರವೆಸಗಿದ ದುಷ್ಕರ್ಮಿಗಳೆಲ್ಲರೂ ಪುರುಷರೇ.

* ಅತ್ಯಾಚಾರಿ ಪುರುಷರು

ಬಡತನ ಮತ್ತು ಆಸ್ತಿಯ ವಹಿವಾಟಿನಲ್ಲಿ ಸಿಕ್ಕಿಹಾಕಿಕೊಂಡ ತಂದೆ ತನ್ನ ಹನ್ನೊಂದು ವರ್ಷದ ಮಗಳನ್ನು ಮೂವತ್ತಮೂರು ವರ್ಷದ ವಿಧುರನೊಬ್ಬನಿಗೆ ಕನ್ಯಾ ದಾನದ ಹೆಸರಿನಲ್ಲಿ ಕೊಟ್ಟು ಮಗಳ ಜವಾಬ್ದಾರಿಯನ್ನು ಕೈ ತೊಳೆದುಕೊಳ್ಳುವುದು ದಲಿತ ಸಮುದಾಯಕ್ಕೆ ಹೊಸದೇನಲ್ಲ. ಆದರೆ ಫೂಲನ್ ದೇವಿಯನ್ನು ಮದುವೆಯಾದ ಅತ್ಯಾಚಾರಿ ಗಂಡು ತನ್ನ ಕಾಮುಕತೆಯನ್ನು ಪೂರೈಸಿಕೊಳ್ಳಲು ಮಾಡಿದ ಅಕೃತ್ಯಗಳ ಬಗ್ಗೆ ಬರೆಯುವುದೂ ಮತ್ತು ಓದುವುದು ಮೃದುಹೃದ್ಯಗಳಿಗೆ ಮಾತ್ರವಲ್ಲ, ಕಟುಕರಿಗೂ ಸಾಧ್ಯವಿಲ್ಲ. ಆ ಕೃತ್ಯಗಳನುಭವಿಸುವಾಗ ತಾನು ಗುಡಿಗಳ ಕಲ್ಲಿನ ಮೂರ್ತಿಗಳಂತಾಗಬಾರದೇ, ಯೋಚನೆಗಳೆ ಬರದಂತಾಗಲಿ, ಯಾವುದನ್ನೂ ಕೇಳದಂತಾಗಲಿ, ಯಾವುದನ್ನು ನೋಡದಂತಾಗಲಿ ಎಂದು ಆಶಿಸುವ ಬಾಲಕಿಯ ಆಕ್ರಂದನವನ್ನು ಯಾರು ಕೇಳಲು ಇರಲಿಲ್ಲ ಆ ಗಂಡನ ಮನೆಯಲ್ಲಿ. ಕೆಲವು ವರ್ಷಗಳ ನಂತರ ಗಂಡನ ಮನೆಯಿಂದ ತಪ್ಪಿಸಿಕೊಂಡು ಮನೆಗೆ ಹಿಂತಿರುಗಿದರೂ, ಹಳ್ಳಿಯ ಸರಪಂಚನ ಕಡೆಯವರು ಇಬ್ಬರು ಅವಳ ತಂದೆ ತಾಯಿ, ಚಿಕ್ಕ ಸಹೋದರಿ ಮತ್ತು ಸಹೋದರನ ಮುಂದೆ, ಅವಳದೇ ಮನೆಯಲ್ಲಿ ಅತ್ಯಾಚಾರ ಮಾಡಿದ ಘೋರ ಕೃತ್ಯಕ್ಕೂ ಹಳ್ಳಿಯ ಜನ ಯಾರೂ ಹೆದರಿಕೆಯಿಂದ ಪೊಲೀಸರಿಗೆ ದೂರುಕೊಡಲು ಮುಂದೆ ಬರಲಿಲ್ಲ.

ಫೂಲನ್ ದೇವಿಯ ಜೀವನದಲ್ಲಿ ಎಲ್ಲ ಪುರುಷರು ಅವಳನ್ನು ಭೋಗದ ವಸ್ತುವಾಗಿಯೇ ಕಂಡವರು; ಹನ್ನೊಂದು ವರ್ಷಕ್ಕೆ ಅವಳನ್ನು ಮದುವೆಯಾದ ಫೂಲನಳ ಅತ್ಯಾಚಾರಿ ಗಂಡ, ಹಳ್ಳಿಯ ಮುಖ್ಯಸ್ಥನ ಅತ್ಯಾಚಾರಿ ಪುತ್ರ, ಹಳ್ಳಿಯ ಅತ್ಯಾಚಾರಿ ಪೊಲೀಸರು, ಮೇಲ್ಜಾತಿಯ ದರೋಡೆಕೋರರ ಮುಖ್ಯಸ್ಥ ಅತ್ಯಾಚಾರಿ ಬಾಬು ಗುಜ್ಜರ್, ಅವಳನ್ನು ಅಪಹರಿಸಿ ಅತ್ಯಾಚಾರವೆಸಗಿದ ಥಾಕುರ್ ಶ್ರೀ ರಾಮ್ ಮತ್ತು ಲಾಲಾ ರಾಮ್ ನ ಗ್ಯಾಂಗ್, ಎಲ್ಲರೂ ಅವಳ ಜೀವನವನ್ನು ಕನಿಕರದಲ್ಲಿ ಮುಳುಗಿಸಿದವರು. ಆದರೆ ಅವಳ ಹೃದಯವನ್ನು ಕಲ್ಲು ಮಾಡಿದ್ದು ಬಹುಶಃ ಶ್ರೀ ರಾಮ್ ಮತ್ತು ಲಾಲಾ ರಾಮ್ ಅವಳನ್ನು ನಗ್ನ ಮಾಡಿ ಹಳ್ಳಿಯ ಕಿರುರಸ್ತೆಗಳಲ್ಲಿ ಎಲ್ಲರ ಮುಂದೆ ಓಡುವಂತೆ ಮಾಡಿದ ಘಟನೆ. ದಲಿತ ಹೆಣ್ಣಿನ ಮೇಲೆ ಕೊನೆಯೇ ಇಲ್ಲದ ಅತ್ಯಾಚಾರ ಮತ್ತು ಶಾರೀರಿಕ ದೌರ್ಜನ್ಯದಿಂದ ಮೇಲ್ಜಾತಿಯ ಗಂಡುಗಳು ಪುಷ್ಟಿಕರಿಸಿಕೊಂಡಿದ್ದು ಇಷ್ಟೇ: ಪುರುಷ ಬಲದಿಂದ ಬಂಧಿಸಿದ ದಲಿತ ಹೆಣ್ಣಿನ ದೇಹವನ್ನು ತಮ್ಮ ಹತೋಟಿಯಲ್ಲಿ ಇಟ್ಟುಕೊಂಡು ಸಮಾಜದ ಜಾತಿ ಪದ್ದತಿಯ ಮೂಲಕ ಯಾರು ಪ್ರಬಲರು ಎನ್ನುವುದನ್ನು ಸ್ಥಾಪಿಸುವ ಒಂದು ದಾರುಣ ಕೃತ್ಯ.

ಇಂತಹ ಪುರುಷರ ಮಧ್ಯೆ ತನ್ನ ಹರೆಯತನವನ್ನು ಕಳೆದ ಫೂಲನ್ ದೇವಿಗೆ ಕ್ಷಣ ಕಾಲದ ನೆಮ್ಮದಿ ಸಿಕ್ಕಿದ್ದು ವಿಕ್ರಂ ಮಲ್ಲಾಹ್ ಎನ್ನುವ ಅವಳ ಜಾತಿಯ ದಲಿತನೊಬ್ಬನಿಂದ ಮಾತ್ರ. ಗಜ್ಜರ್ ಎನ್ನುವ ದರೋಡೆಕೋರರ ಗುಂಪಿನಲ್ಲಿ ಇದ್ದವನು ವಿಕ್ರಂ. ಅವನು ಅವಳ ವಿಶ್ವಾಸ ಗೆದ್ದು ಅವಳಿಗೆ ಬಂದೂಕ ಚಲಾಯಿಸುವುದು ಮತ್ತು ದರೋಡೆಕೋರರ ಜೀವನದ ಶೈಲಿಗೆ ಹೊಂದಿಕೊಳ್ಳಲು ಅವಳಿಗೆ ಸಹಾಯ ಮಾಡಿದ ವ್ಯಕ್ತಿ. ಅವರಿಬ್ಬರ ಮಧ್ಯೆ ಪ್ರಣಯದ ಜೊತೆ ಒಬ್ಬರಿಗೊಬ್ಬರು ಸಹಾಯ ಮಾಡುವ ಅನುಭೂತಿ ಬೆಳೆದಿತ್ತು. ಆದರೆ ಒಂದು ದಿನ ಮುಖ್ಯಸ್ಥ ಗಜ್ಜರ್ ಫೂಲನ್ ಮೇಲೆ ಅತ್ಯಾಚಾರವೆಸಗುವ ಸಮಯದಲ್ಲಿ ಕೋಪಗೊಂಡ ವಿಕ್ರಂ ಅವನನ್ನು ಗುಂಡಿಕ್ಕಿ ಕೊಲ್ಲುತ್ತಾನೆ. ವಿಕ್ರಂ ಮುಖ್ಯಸ್ಥನಾಗಿ ದರೋಡೆಕೋರರ ಕೆಲಸದಲ್ಲಿ ಮುಂದುವರೆಯುತ್ತಾನೆ. ಸಹಬಾಗಿಯಂತೆ ಫೂಲನಳಿಗೂ ಅರ್ಧ ಮುಖ್ಯಸ್ಥ ಸ್ಥಾನವನ್ನು ಕೊಡುವಷ್ಟು ಉಪಕಾರಿ ವಿಕ್ರಂ. ಆದರೆ ಆ ಸಮಯದಲ್ಲಿ ಡೊರೋಡೆಕೋರರ ಗುಂಪಿಗೆ ಶ್ರೀ ರಾಮ್ ಮತ್ತು ಲಾಲಾ ರಾಮ್ ಜೈಲುವಾಸ ಮುಗಿಸಿಕೊಂಡು ಮತ್ತೆ ಸೇರುತ್ತಾರೆ. ವಿಕ್ರಂನ್ನು ಕೊಂದು ತಮ್ಮ ಹಗೆ ತೀರಿಸಿಕೊಳ್ಳುತ್ತಾರೆ. ಅವಳನ್ನು ಅಪಹರಿಸಿ ಠಾಕೂರರ ದುಷ್ಟರ ಕೂಟ ಅವಳನ್ನು ಬೆಹ್ಮಾಯಿ ಎನ್ನುವ ಹಳ್ಳಿಯೊಂದರಲ್ಲಿ ನಿರಂತರವಾಗಿ ಅತ್ಯಾಚಾರ ಮಾಡುತ್ತಾರೆ. ಅಲ್ಲಿಂದ ತಪ್ಪಿಸಿಕೊಂಡು ಫೂಲನ್ ಬಾಬಾ ಮುಸ್ತಾಕಿನ್ ಎನ್ನುವವನ ಆಶ್ರಯ ಪಡೆದು ಮಾನ್ ಸಿಂಗ್ ಎನ್ನುವನ ದರೋಡೆಕೋರರ ಗುಂಪು ಸೇರುತ್ತಾಳೆ. ವಿಕ್ರಂನ ಸಾವಿನ ನಂತರ ಫೂಲನ್ ದೇವಿ ತನ್ನದೇ ದರೋಡೆಕೋರರ ಗುಂಪಿಗೆ ಮುಖ್ಯಸ್ಥೆ ಆಗುತ್ತಾಳೆ. ವಿಧಿಲಿಖಿತವೋ ಎನ್ನುವಂತೆ ಒಂದು ಶೋಷಿತ ಹೆಣ್ಣು ಪುರುಷ-ಪ್ರಮುಖವಾದ ದರೋಡೆ ಕೆಲಸದಲ್ಲಿ ತೊಡಗುತ್ತಾಳೆ. ಅಂದಿನಿಂದ ಅವಳ ಜೀವನವೇ ಬದಲಾಗುತ್ತದೆ. ದುಷ್ಕರ್ಮಿಗಳನ್ನು ಕೊಂದುಬಿಡುವ ಪ್ರತೀಕಾರದ ಛಾಯೆ ಕಂಡುಬರುತ್ತದೆ.

* ಪ್ರತೀಕಾರ

ದರೋಡೆಕೋರರ ಗುಂಪಿಗೆ ನಾಯಕಿ ಆದರೂ, ಫೂಲನ್ ದೇವಿಯ ದ್ವಂದ್ವ ಗುಣಗಳನ್ನು ಪರಿಶೀಲಿಸುವುದು ಅಷ್ಟೇನೂ ಕಷ್ಟದ ಕೆಲಸವಲ್ಲ: ಒಂದು ಕಡೆ ರಾಬಿನ್ ಹುಡ್ ತರಹ ಶ್ರೀಮಂತರ ಹಣವನ್ನು ದೋಚಿ ಬಡಬಗ್ಗರಿಗೆ ಕೊಡುವುದು, ಮತ್ತೊಂದು ಕಡೆ ತನಗೆ ಮತ್ತು ತನ್ನ ದಲಿತ ಸಮುದಾಯಗಳ ಮೇಲೆ ಅತ್ಯಾಚಾರ ಮಾಡಿದವರನ್ನು ಶಿಕ್ಷಿಸಿ ತನ್ನದೇ ನ್ಯಾಯಾಂಗ ಕ್ರಮಗಳನ್ನು ಜಾರಿಗೆ ತರುವುದು, ಎರಡೂ ರೀತಿಯ ವಿಭಿನ್ನ ಪ್ರಕ್ರಿಯೆಗಳಿಗೆ ಒಂದೇ ರೀತಿ ಸ್ಪಂದಿಸುತ್ತಿದ್ದಳು. ಶೋಷಿತ ಹೆಣ್ಣು ಬಂದೂಕ ಹಿಡಿದು ಡಕಾಯಿತಳಾಗಲು ಅವಳದೇ ಸಮರ್ಥನೆ ಇತ್ತು: “ಡಕಾಯಿತರು ತಾವು ತಾವಾಗಿಯೇ ಬಂದೂಕ ಹಿಡಿದರೆಂದು ನೀವೆಂದುಕೊಂಡಿದ್ದರೆ ಮತ್ತೊಮ್ಮೆ ಯೋಚಿಸಿ. ನಾನೇನು ಚಂಬಲ್ ಘಾಟಿನಲ್ಲೇ ಹುಟ್ಟಿ ಬೆಳೆದವಳು ಅಂದುಕೊಂಡಿದ್ದೀರೇನು? ನನಗೂ ತಂದೆ ತಾಯಿ ಬಂಧು ಬಳಗವಿತ್ತು. ಶಿಕ್ಷಣವೇ ಇಲ್ಲದ ನನಗೆ ನಾನು ದೊಡ್ಡವಳಾದ ತಕ್ಷಣ ನಮ್ಮ ತಂದೆ ತಗೋ, ಈ ಬಂದೂಕ ಚಲಾಯಿಸಲು ಕಲಿತುಕೊ ಅಂತ ಪಾಠ ಹೇಳಿಕೊಡಲಿಲ್ಲ. ನಾನು ನಾನಾಗಲು ನಮ್ಮ ಸಮಾಜವೇ ಕಾರಣ.”

ಜನಪದ ಗೀತೆಗಳಲ್ಲಿ ಅವಳ ದರೋಡೆಕೋರ ಜೀವನದ ಒಂದು ಘಟನೆಯನ್ನು ಹೀಗೆ ವಿವರಿಸಿದೆ:

ಫೂಲನಳ ಗುಂಪು ಹಿಡಿದವು ಬಂದೂಕ
ಕೆಂಪು ವಸ್ತ್ರದ ಮುಂಡಾಸು ಧರಿಸಿ ನಡೆದಳು
ಬೆಹ್ಮಾಯಿ ಹಳ್ಳಿಯ ಕಡೆಗೆ
ಎಲ್ಲಿ ಅವಳ ಅತ್ಯಾಚಾರವೆಸಗಿದರೋ ಠಾಕೂರರು
ಅಲ್ಲಿ ಇಪ್ಪತ್ತೊಂದು ಠಾಕುರರನು ಕೊಂದಳಂದು ಫೂಲನ್ ದೇವಿ
ರಕ್ತದಲಿ ಓಕುಳಿಯನೇ ಆಡಿದಳು
ಯಮುನಾ ನದಿಯೇ ಕೆಂಪಾಯಿತು ಅಂದು
ಅವಳ ವರ್ಷಗಳ ಕೋಪ ತೀರಿತಂದು ಪ್ರತೀಕಾರದಲಿ


ದಾಖಲೆಗಳ ಪ್ರಕಾರ ಫೂಲನ್ ದೇವಿ ಕೊಂದದ್ದು ಇಬ್ಬರು ಠಾಕುರರನ್ನು ಮಾತ್ರ, ಆದರೆ ಉದ್ರೇಕದಲ್ಲಿ ಮಿಕ್ಕವರನ್ನು ಕೊಂದದ್ದು ಅವಳ ಗುಂಪಿನ ದರೋಡೆಕೋರರು. ಪ್ರತೀಕಾರದ ಮಾರ್ಗದಲ್ಲಿ ಒಮ್ಮೆ ಹೆಜ್ಜೆ ಇಟ್ಟಮೇಲೆ ಹಿಂದೆಗೆಯುವುದು ಕಷ್ಟ ಸಾಧ್ಯವಾದರೂ, ಫೂಲನ್ ದೇವಿಗೆ ಅರಿವಾದದ್ದು, ಅವಳದೇ ದಲಿತ ಸಮುದಾಯ ಅವಳನ್ನು ಬೆಂಬಲಿಸುತ್ತಿದೆ ಎನ್ನುವ ಸತ್ಯತೆ. ಆದರೆ ಪ್ರತೀಕಾರ, ಬೂದಿ ಮುಚ್ಚಿದ ಕೆಂಡದಿಂದ ಆಗುವ ಅನಾಹುತದಂತೆ ಶೀಘ್ರದಲ್ಲಿಯೇ ತಾಪ ಹರಡುತ್ತಿತ್ತು. ಪೊಲೀಸರು ದರೋಡೆಕೋರರ ಗುಂಪಿನ ಹಿಂದೆ ಬಿದ್ದಿದ್ದರು. ನ್ಯಾಯದ ದೃಷ್ಟಿಯಲ್ಲಿ ಫೂಲನ್ ದೇವಿ ಒಬ್ಬ ಕೊಲೆಪಾತಕಿ. ಆದರೆ ಅವಳ ಮನೋಗತದಲ್ಲಿ ತನ್ನ ಮಾನ ಅಪಹರಿಸಿದ ಮೇಲ್ಜಾತಿಯವರನ್ನು ಕೊಲ್ಲುವುದು ಸಹಜವೇ ಹೊರತು ಬೇರೆ ದಾರಿ ಕಾಣುತ್ತಿರಲಿಲ್ಲ. ಜೊತೆಗೆ ದಲಿತ ಸಮುದಾಯದ ಅಭಿಪ್ರಾಯದಲ್ಲಿ ಕೂಡ ಶೋಷಿತ ಹೆಣ್ಣು ಸೇಡು ತೀರಿಸಿಕೊಳ್ಳುವುದರಲ್ಲಿ ಯಾವ ತಪ್ಪೂ ವ್ಯಕ್ತವಾಗಿರಲಿಲ್ಲ. ಪುರುಷರ ಅತ್ಯಾಚಾರದಿಂದ ಹೃದಯವೇ ಕಲ್ಲಾಗಿದ್ದ ಫೂಲನ್ ದೇವಿಗೆ ತಾನು ಕೊಲೆ ಪಾತಕಿ, ಆದ್ದರಿಂದ ಸುಸಂಸ್ಕೃತರ ತಿರಸ್ಕಾರಕ್ಕೆ ಮತ್ತು ಸಮಾಜದ ನ್ಯಾಯಕ್ಕೆ ತಾನು ಮಣಿಯಬೇಕೆಂಬ ಅನಿಸಿಕೆ ಮೂಡಲೇ ಇಲ್ಲ. ಆದರೆ ಅವಳು ಮನೋವಿಕೃತ ಕಾಯಿಲೆಗೆ ಬಲಿಯಾಗಿ ಠಾಕುರರನ್ನು ಕೊಲ್ಲಲಿಲ್ಲ.

ಯಾವ ವಿಕೃತಕಾಮಿ ಪುರುಷರು ತನ್ನ ಮೇಲೆ ಅತ್ಯಾಚಾರವೆಸಗಿದರೋ ಅವರನ್ನು ಕೊಲ್ಲುವುದರಲ್ಲಿ ಯಾವ ತಪ್ಪಿದೆ ಎನ್ನುವುದು ಅವಳ ತರ್ಕವಾಗಿತ್ತು. ಆಕೆ ಆ ಅತ್ಯಾಚಾರಗಳ ಬಗ್ಗೆ ಕೋಪಗೊಂಡಿದಂತೂ ನಿಜ ಆದರೆ ಆ ಕೋಪದ ಕಾರಣದಿಂದ ಮೇಲ್ಜಾತಿಯವರ ನಿರ್ದೋಷಿಗಳ ಮೇಲೆ ತಾನೂ ಅತ್ಯಾಚಾರ ಮಾಡುವ ವ್ಯಕ್ತಿಯಲ್ಲ. ಅಂದರೆ ಅವಳ ಪ್ರತೀಕಾರದ ಹರವು ಮತ್ತು ಗಂಭೀರತೆ ದೋಷಿಗಳ ಮೇಲೆಯೇ. ಆದರೂ ಅವಳು ಕಾರಣಳಾದ ಇಪ್ಪತ್ತೊಂದು ಠಾಕೂರರ ಕೊಲೆಯ ಅಂತಿಮ ಆಘಾತವಾದದ್ದು ಮಹಿಳೆಯರ ಮೇಲೆಯೇ. ಒಂದು ಸಣ್ಣ ಹಳ್ಳಿಯಲ್ಲಿ ಇಪ್ಪತ್ತೊಂದು ಗೃಹಣಿಯರು ವಿಧವೆಯರಾದ ಕ್ರೂರ ಘಟನೆಗೆ ತಾನು ಕಾರಣಳು ಎಂದು ಅವಳಿಗೆ ಅರಿವಾಗದಿರಲು ಹಲವು ರೀತಿ ಅವಲೋಕಿಸಬಹುದು. ಒಂದು, ಅವಳ ಹಿಂಸಾಕೃತ್ಯದಲ್ಲಿ ನೈತಿಕತೆಯ ನ್ಯಾಯ ಅದಲುಬದಲಾಗಿ ವಿಧವೆಯರಾದ ಅದೇ ಠಾಕೂರ್ ಸ್ತ್ರೀಯರು ಮತ್ತೊಮ್ಮೆ ಶೋಷಿತರಾದರೇ? ಎರಡು, ಈ ಕೃತ್ಯವನ್ನು ತಾನೇ ವಕೀಲೆ, ತಾನೇ ನ್ಯಾಮೂರ್ತಿಯೂ, ತಾನೇ ತಪ್ಪಿತಸ್ಥರನ್ನು ಗಲ್ಲಿಗೇರಿಸುವವಳೂ ಆಗಿ ಎಲ್ಲವನ್ನೂ ತನ್ನ ಸ್ವಾಧೀನದಲ್ಲೆ ನೆರವೇರಿಸಿದ್ದು ಸರಿಯೇ? ಮೂರು, ಈ ಹೀನ ಕೃತ್ಯದಿಂದ ಅವಳ ಕೋಮಲ ಮತ್ತು ಅಮಾಯಕತೆಯ ಮೇಲೆ ಯಾವ ಮಾನಸಿಕ ಪ್ರಭಾವ ಬೀರಿರಬಹುದು? ನಾಲ್ಕು, ಅದು ಪಶ್ಚಾತ್ತಾಪದಲ್ಲಿ ಕೊನೆಗೊಂಡು ಅವಳ ಮುಂದಿನ ಜೀವನದ ಶೈಲಿಯನ್ನು ಬದಲಾಯಿಸಿತೆ? ಮೊದಲನೇ ಪ್ರಶ್ನೆಗೆ ಉತ್ತರ ಖಂಡಿತವಾಗಿಯೂ ಆ ಠಾಕೂರ ಸ್ತ್ರೀಯರು ಶೋಷಿತರಾದರೆಂದು ಹೇಳಬಹುದು. ಏಕೆಂದರೆ ಫೂಲನ್ ದೇವಿಯ ಜೊತೆಗೂಡಿ ದಲಿತ ಸಮುದಾಯವೇ ಬಂಡೆದ್ದು ಜಾತಿಯಲ್ಲಿ ಶ್ರೇಣಿ ವ್ಯವಸ್ಥೆಯನ್ನು ವಿಪರ್ಯಯ ಗೊಳಿಸಿ ಆ ಠಾಕೂರ ಸ್ತ್ರೀಯರನ್ನು ಆರ್ಥಿಕ ಶೋಷಣೆಗೆ ಒಳಮಾಡಿತ್ತು. ನ್ಯಾಯ ಇಲಾಖೆಗಳೂ ಕೂಡ ಅವರಿಗೆ ನಷ್ಟ ಪರಿಹಾರ ಕೊಡದೆ ಅವರನ್ನು ಮತ್ತಷ್ಟು ಅಧೋಗತಿಗೆ ತಳ್ಳಿದವು. ಎರಡನೇ ಪ್ರಶ್ನೆಗೆ ಉತ್ತರ, ದರೋಡೆಕೋರರ ನಾಯಕಿಯಾಗಿ ತಾನು ಕೈಗೊಂಡ ಕಾರ್ಯವನ್ನು ತನ್ನದೇ ಕರಾರುಗಳಿಗೆ, ತನ್ನದೇ ಅಲಿಖಿತ ನ್ಯಾಯದಲ್ಲಿ ಪೂರ್ತಿಗೊಳಿಸುವುದು ನಾಯಕತ್ವದ ಸಂಕೇತವಾಗಿತ್ತು. ಆದ ಕಾರಣ ಮೂರೂ ಕೆಲಸವನ್ನು ತಾನೇ ನಿರ್ವಹಿಸಿದ್ದು ಸರಿ ಎಂದು ಅನಿಸಿದರೆ ಅದರ ಅರ್ಥ ವಿವರಣೆ ಓದುಗನಿಗೆ ಬಿಟ್ಟದ್ದು. ನಾಲ್ಕನೆಯ ಪ್ರಶ್ನೆಗೆ ಉತ್ತರ, ಪಶ್ಚಾತ್ತಾಪಕ್ಕಿಂತ ಹೆಚ್ಚಾಗಿ ಆ ಕೃತ್ಯದ ನಂತರ ಪೊಲೀಸರು ಅವಳ ಇಡೀ ದರೋಡೆಕೋರರ ಗುಂಪನ್ನು ವ್ಯವಸ್ಥಿತವಾಗಿ ನಿರ್ನಾಮ ಮಾಡಿದ ಕಾರಣ ಅವಳಿಗೆ ಬೇರೆ ದಾರಿ ಕಾಣದೆ ನ್ಯಾಯಕ್ಕೆ ಶರಣಾಗತಳಾಗ ಬೇಕಾಯಿತು. ಮುಂದೆ ಈ ಲೇಖನದಲ್ಲಿ ವಿಶ್ಲೇಷಿಸಿರುವಂತೆ ಈ ಒಂಟಿತನ ಮತ್ತು ಧೀರ್ಘ ಕಾರಾಗೃಹವಾಸದಿಂದ ಅವಳಲ್ಲಿ ಬದಲಾವಣೆ ಕಂಡುಬಂದಿತು ಎಂದರೆ ತಪ್ಪಾಗಲಾರದು.

* ಪುನಃಸ್ಚೇತನ

ಪುನಃಸ್ಚೇತನದ ಹಿನ್ನಲೆಯ ಪ್ರಕ್ರಿಯೆ ಬಹಳಷ್ಟು ಅವಳದೇ ಆತ್ಮಸಾಧನೆ ಆದರೂ ತನ್ನೊಡನೆ ಸ್ಪಂದಿಸುವವರ ಜೊತೆಗೂಡಿ ಕಾರ್ಯ ಸಾಧಿಸುವ ಛಲ ಕೂಡ ಸೇರಿದೆ. ಪ್ರಕೃತಿ ತಾನು ಬಯಸಿದ ಗುಣಗಳನ್ನು ಪುರುಷನಲ್ಲಿ ನಿರಂತರವಾಗಿ ಸೃಷ್ಟಿಸುವ ಶಕ್ತಿ ಪಡೆದಿರುತ್ತಾಳೆ ಮತ್ತು ಯಾವ ಅಸಾಧಾರಣವಾದ ಸಾಮರ್ಥ್ಯಗಳನ್ನು ಅವಳು ಹೊಂದಲು ಸಾಧ್ಯವಿಲ್ಲವೋ ಅಂತಹ ಪುರುಷ ಗುಣಗಳೇ ಅವಳಿಗೆ ಅಪಾರ ಮತ್ತು ಮಹತ್ತರವಾದ ಶಕ್ತಿ ಆಗಿರುತ್ತದೆ. ಡಕಾಯಿತಳಾಗುವ ಹಂತದಲ್ಲಿ ಪೂಲನ್ ಮತ್ತು ವಿಕ್ರಂ ನಡುವೆ ಇಂತಹ ಸಮ್ಮಿಶ್ರಣವಾದ ಶಕ್ತಿಯ ಪ್ರದರ್ಶನವನ್ನು ನಾವು ಕಾಣಬಹುದು. ನಂತರ ಮಾನ್ ಸಿಂಗ್ ಜೊತೆ ಕೂಡ ಇದೆ ರೀತಿಯ ಸಮ್ಮಿಶ್ರಣವನ್ನು ಕಾಣುತ್ತೇವೆ. ವಿಕ್ರಂ ಮತ್ತು ಮಾನ್ ಸಿಂಗ್ ಇಲ್ಲದಿದ್ದರೆ ಪೂಲನ್ ತನ್ನ ಕಾಲ ಮೇಲೆ ತಾನು ನಿಂತ ಮಹಿಳೆ ಆಗುತ್ತಿದ್ದಳೇ ಎನ್ನುವ ಪ್ರಶ್ನೆಗೆ ಕೂಡ ಈ ವಿವರಣೆ ಸಮರ್ಥನೆ ಕೊಡುತ್ತದೆ. ಫೂಲನ್ ದೇವಿಯ ಪುನಃಸ್ಚೇತನದ ಮೊದಲ ಅಧ್ಯಾಯಕ್ಕೆ ಕಾರಣ ಕೂಡ ಪುರುಷನೆಂಬುದು ಇಲ್ಲಿ ಗಣನೆಗೆ ತಂದುಕೊಳ್ಳಬಹುದು.

ಪ್ರತೀಕಾರದಲ್ಲಿ ಗೆಲುವು ಪಡೆದ ಮೇಲೆ ಫೂಲನ್ ದೇವಿಗೆ ದೊರೆತದ್ದು, ಹಿಂದೆ ಯಾವ ಹೆಣ್ಣೂ ಗಳಿಸದ, “ದರೋಡೆಕೋರರ ರಾಣಿ” ಎನ್ನುವ ಬಿರುದು ಮಾತ್ರ. ಸ್ಥಳೀಯ ದಲಿತರಿಗೆ ಅವಳ ಬಗ್ಗೆ ಗೌರವ, ಗೌರವಕ್ಕಿಂತ ಭಯ, ಭಯಕ್ಕಿಂತ ಅವಳು ಕೊಡುತ್ತಿದ್ದ ಬಳುವಳಿ, ಬಳುವಳಿಗಿಂತ ಅವಳು ತುಂಬುತ್ತಿದ್ದ ಸ್ಥೈರ್ಯ ಮುಖ್ಯವೆನಿಸಿದವು. ಶೋಷಿತ ಜನರ ಮನೋಭಾವ ಹೇಗಿರುತ್ತೆ ಅಂದರೆ ಅವರಿಗೆ ಯಾರಾದರೂ ನಾವು ನಿಮ್ಮ ಜೊತೆ ಇದ್ದು ಸಹಾಯಮಾಡುತ್ತೇವೆ ಅಥವಾ ನಿಮ್ಮ ಯಾವುದೇ ಕಷ್ಟಗಳನ್ನು ನಮ್ಮೊಡನೆ ಹಂಚಿಕೊಳ್ಳಬಹುದು ಎಂದು ಹೇಳಿದರೆ ಇಡೀ ಸಮಾಜದ ಸ್ಥೈರ್ಯವೇ ಹೆಚ್ಚಾಗುತ್ತೆ. ಫೂಲನ್ ದೇವಿ ತಾನು ದರೋಡೆಕೋರಳಾಗಿ ಬಡಜನರಿಗೆ ಆಶ್ವಾಸನೆ ಕೊಡುತ್ತಿದ್ದನ್ನು ನೋಡಿದರೆ ಅವಳ ಸಮುದಾಯದ ಜನರಿಗೆ ಅವಳ ಮೇಲೆ ವಿಶ್ವಾಸ ಬರಲು ಮುಖ್ಯ ಕಾರಣವಾಯಿತು. ಆದರೆ ತಪ್ಪಿತಸ್ಥೆಯ ಹಿಂದೆ ಇಡೀ ರಾಜ್ಯದ ಪೊಲೀಸ್ ಸಿಬ್ಬಂದಿ ಕಾರ್ಯಗತವಾಗಿದ್ದರೂ ಅವಳನ್ನು ಬಂಧಿಸಲು ಅಸಮರ್ಥವಾಗಿದ್ದವು. ಇಡೀ ನಾಡಿನಲ್ಲಿ ಅವಳ ಕ್ರೂರತೆಯನ್ನು ತೆಗಳಿ ಅವಳನ್ನು ದ್ವೇಷಿಸುವವರೇ ಹೆಚ್ಚು ಮಂದಿ ಇದ್ದರು. ತಾನು ಶೋಷಿತ ಹೆಣ್ಣು ನಿಜ, ಆದರೂ ತನ್ನನ್ನು ಜನ ದ್ವೇಷಿಸುತ್ತಾರೆ ಎನ್ನುವ ಅರಿವು ಅವಳಿಗಿತ್ತು. ಹಾಗೆಂದ ಮಾತ್ರಕ್ಕೆ ತಲೆಮರೆಸಿಕೊಂಡು ದೇಶ ಬಿಟ್ಟುಹೋಗುವಳೇ? ಜೀವನದಲ್ಲಿ ಸವಾಲುಗಳು ಬರುತ್ತಲೇ ಇರುತ್ತವೆ. ಬಿರುಗಾಳಿ, ಭೂಕಂಪ ಎಲ್ಲ ಆಗುತ್ತಲೇ ಇರುತ್ತವೆ. ಸಾವು ಬಂದರೆ ಶ್ರಮದಿಂದ ಬರುವ ನಿದ್ದೆಯಲ್ಲೇ ಸಾಯುವೆನು ಹೊರತು ಅಂಜುವುದಿಲ್ಲ ಎನ್ನುವ ಸಂಕಲ್ಪ ಅವಳದು. ಸಾವನ್ನು ಬಹಳವೇ ಸಮೀಪದಿಂದ ನೋಡಿದ ಹೆಣ್ಣು ಅವಳು. ಒಂದು ಕ್ಷಣ ಸಾವಿನಿಂದ ಬಚಾವು ಆದಳು ಎನ್ನುವುದರಲ್ಲಿ ಮತ್ತೊಂದು ಕ್ಷಣದಲಿ ಅದು ಜೀವವನ್ನೇ ಕಸಿದುಕೊಳ್ಳಬಹುದು ಎನ್ನುವ ಭಯದಲ್ಲಿ ಇದ್ದದ್ದೇ ಹೆಚ್ಚು. ಈ ಬೆಕ್ಕು ಇಲಿ ಆಟದಲ್ಲಿ ಸೋತಿದ್ದು ಪೊಲೀಸರೇ –ಪ್ರಪಂಚವೇ ಕೌತುಕದಿಂದ ಕಾಯುತ್ತಿದ್ದ ಫೂಲನ್ ದೇವಿಯ ದಸ್ತಗಿರಿಯ ಬದಲು ಅವಳು ತನ್ನದೇ ಷರತ್ತುಗಳನ್ನು ಒಡ್ಡಿ ಕೊನೆಗೆ ನ್ಯಾಯಾಂಗಕ್ಕೆ ಶರಣಾಗತಿ ಆದಳು.

ಹನ್ನೊಂದು ವರ್ಷಗಳ ಕಠಿಣ ಶಿಕ್ಷೆಯ ಪರ್ಯಟನದೊಂದಿಗೆ ಅವಳ ಪುನಃಸ್ಚೇತನದ ಎರಡನೆಯ ಅಧ್ಯಾಯ ಪ್ರಾರಂಭವಾಯಿತು. ಆದರೆ ಅವಳು ಎಂತಹ ಮಹಿಳೆಯೆಂದರೆ, ಯಾರೊಡನೆಯೂ ಸಮಜಾಯಿಷಿ ಮಾಡುತ್ತಿರಲಿಲ್ಲ. ಫೂಲನ್ ದೇವಿ ಒಂದು ಹಸುಳೆಯ ತರಹ, ತನ್ನ ಮೇಲಾದ ಅತ್ಯಾಚಾರವನ್ನು ಅತ್ಯಾಚಾರದ ಘಟನೆಗಳನ್ನು ಕೂಡ ನಗು ನಗುತ್ತಲೇ ಹೇಳಿಬಿಡುತ್ತಿದ್ದಳು. ಕಷ್ಟಗಳನ್ನು ಇಂತ ಸಣ್ಣ ಪುಟ್ಟ ಹಾಸ್ಯ ರೀತಿಯಲ್ಲಿ ನಿಭಾಯಿಸಿಕೊಳ್ಳುವ ಕಲೆಯನ್ನು ಕರಗತಮಾಡಿಕೊಳ್ಳುವುದು ಪುನಃಸ್ಚೇತನದ ಮೊದಲ ಹಂತ. ಜೈಲಿನಲ್ಲಿ ಕುಳಿತು ಇನ್ನೊಬ್ಬ ಹೆಣ್ಣಿನ ಸಹಾಯದಿಂದ ತನ್ನ ಆತ್ಮಕತೆಯನ್ನು ನಿರೂಪಿಸಿ ಅದು ಪುಸ್ತಕವಾಗಿ ಪ್ರಕಟಣೆಗೊಂಡಿದ್ದೂ ಕೂಡ ಅವಳ ಪುನಃಸ್ಚೇತನಕ್ಕೆ ನಾಂದಿಯಾಯಿತು ಎಂದು ಹೇಳಬಹುದು. ಅನಕ್ಷರತೆ ಮತ್ತು ವಿದ್ಯೆಕಲಿಯದ ವಿಷಾದ ಕಾಡಿತಾದರೂ ಮನಸ್ಸಿನಲ್ಲಿ ಹುದುಗಿದ ಭಾವನೆಗಳನ್ನು ನಿಸ್ಸಂಕೋಚವಾಗಿ ಹಂಚಿಕೊಂಡಿದ್ದರಿಂದ ಅವಳ ನ್ಯೂನತೆಗಳಿಗೆ ಚಿಕಿತ್ಸಕ ಮೌಲ್ಯ ದೊರಕಿದಂತಾಯಿತು. ಜೈಲಿನ ನಾಲ್ಕು ಗೋಡೆಗಳ ಮಧ್ಯೆ ಸಕಾರಾತ್ಮಕ ದೃಷ್ಟಿಯಿಂದಲೇ ತನ್ನ ಎದೆಯಮೇಲಿನ ಭಾರ ಕಳೆದುಕೊಂಡದ್ದೂ ಕೂಡ ಸಹಾಯವಾಯಿತು. ನಂತರದ ಹಂತಗಳಲ್ಲಿ ಅವಳು ಜೈಲಿನಿಂದ ಬಿಡುಗಡೆ ಹೊಂದಿ ರಾಜಕೀಯಕ್ಕೆ ಇಳಿಯುವ ಹೊತ್ತಿಗಾಗಲೇ ಬೌದ್ಧ ಮತವನ್ನು ಸ್ವೀಕರಿಸಿದ್ದಳು. ಅವಿದ್ಯಾವಂತೆಯಾದ ಅವಳು ಬೌದ್ಧ ಧರ್ಮವನ್ನು ಸ್ವೀಕರಿಸಲು ಅವಳಿಗೆ ಕಷ್ಟವೇ ಆಗಿರಬೇಕು. ಏಕೆಂದರೆ ಬೌದ್ಧ ಧರ್ಮದ ಖಠಿಣ ಶಿಸ್ತು, ಅದರೊಳಗೆ ಹಾಸುಹೊಕ್ಕಾಗಿರುವ ಅಹಿಂಸೆ, ಶಾಖಾಹಾರಿ ಪದ್ದತಿಗಳನ್ನು ಅರಿತು ಅದರಂತೆ ನಡೆಯಲು ಒಂದಿಷ್ಟಾದರೂ ಅದರ ಬಗ್ಗೆ ಯೋಚಿಸಿರಬೇಕು. ಆ ಹಂತಕ್ಕೆ ಬರಲು ಮೊದಲು ಜ್ಞಾನದೀಕ್ಷೆಯನ್ನೇ ಪಡೆದಿರಬೇಕು. ಶಾರೀರಿಕ, ಮಾನಸಿಕ ಮತ್ತು ಸಮಾಜದಲ್ಲಿ ಆಕೆ ಚಿಕ್ಕ ಹುಡುಗಿಯಾಗಿ ಕಿಶೋರಿಯಾಗಿ ಹೆಣ್ಣಾಗಿ ಅನುಭವಿಸಿದ ಹಿಂಸಾಕೃತ್ಯವನ್ನು ಬೌದ್ಧ ಧರ್ಮದ ಅನುಯಾಯಿ ಆಗಿ ಮರೆಯಲು ಸಾಧ್ಯವಾಯಿತೇ? ಸಾಧ್ಯವಿರಬಹುದು. ಆದರೆ ಬೇರೊಂದು ರೀತಿಯಾಗಿ ವಿಶ್ಲೇಷಿಸಿದಾಗ ಅರಿವಾಗುವುದು ಆಕೆ ಹಿಂದೂ ಸಮಾಜದ ಜಾತಿ ಪದ್ಧತಿಯಲ್ಲಿ ಬೇಸತ್ತಿದ್ದಂತೂ ಕಂಡುಬರುತ್ತದೆ. ಅದರ ಭೀಭತ್ಸ ರೂಪವನ್ನು ಕಣ್ಣಾರೆ ಕಾಣುವುದರ ಜೊತೆಗೆ ಅವಳಿಗೆ ಅನುಭವಕ್ಕೂ ಬಂದಿತ್ತು. ಅಂತಹ ವ್ಯವಸ್ಥೆಯಿಂದ ಹೊರ ಬಂದಾಗಾಲೆ ದಲಿತರ, ಅದಕ್ಕೂ ಹೆಚ್ಚಾಗಿ ಹೆಣ್ಣಿನ ಶೋಷಣೆಯನ್ನು ದೂರ ಮಾಡಲು ಸಾಧ್ಯವೆಂಬ ಅರಿವನ್ನು ತಾನು ಮನಗಂಡಿರಬೇಕು. ಅಥವಾ ಅಂಬೇಡ್ಕರ್ ಅವರ ಈ ರೀತಿಯ ಅನಿಸಿಕೆಗಳನ್ನು ಮನದಟ್ಟು ಮಾಡಿದವರ ಒಡನಾಟ ಇದ್ದಂತೆ ಕಾಣುತ್ತದೆ. ಈ ಎಲ್ಲ ಕಾರಣಗಳಿಂದ ಆಕೆಗೂ ಹಿಂದೂ ಸಮಾಜದಿಂದ ತನನ್ನು ತಾನು ಬೇರ್ಪಡಿಸಿಕೊಂಡು ಶೋಷಿತರನ್ನು ಬೌದ್ಧ ಮತದಲ್ಲಿರುವಂತೆ ಯಾವುದೇ ಜಾತಿ ಭೇದವಿಲ್ಲದೆ ಮುಂದಕ್ಕೆ ತರಬಹುದೆಂಬ ಅರಿವಾಗಿರಬೇಕು. ದೀಕ್ಷಾ ಭೂಮಿ ಎನ್ನುವ ಸ್ಥಳದಲ್ಲಿ ಬೌದ್ಧ ಧರ್ಮವನ್ನು ಸ್ವೀಕರಿಸುವಾಗ ಆಕೆಯನ್ನು “ಕೋಪವಿಲ್ಲದ ಫೂಲನ್ ದೇವಿ, ಮೊದಲ ಬಾರಿಗೆ ಬಂದೂಕವನ್ನು ಹೆಗಲಮೇಲೆ ಏರಿಸದೆ ಮುಗುಳುನಗೆಯಲಿ, ಓರ್ವ ಸಾಮಾಜಿಕ ಮತ್ತು ಸಾಂಸ್ಕೃತಿಕ ನ್ಯಾಯಮೂರ್ತಿಯಾಗಿ, ಮುಖ್ಯಸ್ಥಳಂತೆ ನಿಂತಿದ್ದಳು,” ಎಂದು ವರ್ಣಿಸಿದ್ದವು ಅಂದಿನ ಪತ್ರಿಕೆಗಳು. ಬೌದ್ಧ ಧರ್ಮ ಸ್ವೀಕಾರ ಫೂಲನ್ ದೇವಿಯ ಪುನಃಸ್ಚೇತನದಲ್ಲಿ ಪ್ರಮುಖ ಪಾತ್ರವಹಿಸಿದೆ ಎಂದು ಸಂಕ್ಷಿಪ್ತವಾಗಿ ಹೇಳಬಹುದು.

ರಾಜಕೀಯಕ್ಕೆ ಫೂಲನ್ ದೇವಿಯ ಪ್ರವೇಶ ಅವಳ ಸಾಧನೆ ಎಂದು ಹೇಳುವುದು ಕಷ್ಟವೆನಿಸಿದರೂ ಅದು ಅವಳ ಪುನಃಸ್ಚೇತನದ ಪ್ರಕ್ರಿಯೆಯಲ್ಲಿ ಮೂರನೆಯ ಅಧ್ಯಾಯ ಎನ್ನಬಹುದು. “ನಮ್ಮ ದೇಶದಲ್ಲಿ ಬಡವರಿಗೆ ಒಂದು ನ್ಯಾಯ ಶ್ರೀಮಂತರಿಗೆ ಮತ್ತೊಂದು ನ್ಯಾಯ. ದೇಶದಲ್ಲಿ ಪರಿವರ್ತನೆ ಆಗಲೇ ಬೇಕು. ಯಾವ ಜಾತಿಯದೇ ನಾಯಕರಾದರೂ ಎಲ್ಲರೂ ಸೇರಿ ಬಡವರ ಬಗ್ಗೆ ಸಂಘಟನೆ ನೆಡಸಬೇಕು. ಮಹಿಳಿಯೆಯರಿಗೂ ಕೂಡ. ಇಲ್ಲಿಯವರೆಗೂ ಮಹಿಳೆಯರು ಸತ್ಯತೆಯಲ್ಲಿ ದಲಿತರೇ.” ಒಬ್ಬ ರಾಜಕಾರಿಣಿ ಆಗಿ ಇವು ತನ್ನ ಧ್ಯೇಯವೆಂದು ಸಾರಿ ತನ್ನ ಸ್ವಂತ ಪುನಃಸ್ಚೇತನದ ಮಾದರಿಯಲ್ಲೇ ಸಮಾಜವೂ ಕೂಡ ಉನ್ನತ ಗುರಿಮುಟ್ಟಬಹುದು ಎಂದು ನೀತಿ ಬೋಧೆ ಮಾಡಿದಳು. ಆದರೆ ಫೂಲನ್ ದೇವಿಯೇ ತಾನು ಹುಟ್ಟಿಬೆಳೆದ ಚಂಬಲ್ ಕಣಿವೆಯ ಗ್ರಾಮದಲ್ಲಿ ದಲಿತ ಮಹಿಳೆಯರ ಸೇನಾ ಪಡೆ ಎನ್ನುವ ನಾಗರೀಕ ಎಚ್ಚರಿಕೆಯ ತಂಡಗಳನ್ನು ದಲಿತ ಹಳ್ಳಿಯವರೇ ಸ್ಥಾಪಿಸಿಕೊಳ್ಳಲು, ಹೆಣ್ಣುಮಕ್ಕಳಿಗೆ ಬಂದೂಕ ಉಪಯೋಗಿಸುವುದನ್ನು ಕಲಿಸುವ ಕಾರ್ಯಗಾರಗಳನ್ನು ಪ್ರಾರಂಭ ಮಾಡಿದಳು. ಫೂಲನ್ ದೇವಿ ಮುಂದೆ ದಲಿತ ಯುವಕ ಯುವತಿಯರ ಸ್ವಯಂ ರಕ್ಷಣೆಗಾಗಿ ಏಕಲವ್ಯ ಸೇನಾ ಅನ್ನುವ ಪಡೆಯನ್ನೂ ಪ್ರಾರಂಭ ಮಾಡಿದಳು. ಬರಿ ಮಾತಿನಿಂದ ಕೆಲಸ ಸಾಗುವುದಿಲ್ಲ, ಜೊತೆಗೆ ಕಾರ್ಯೋಪಯೋಗಿ ವ್ಯವಸ್ಥೆಗಳನ್ನು ಮಾಡಬೇಕೆಂಬ ತರ್ಕ ಅವಳದು. ಹೆಣ್ಣು ಅಮಾಯಕಳಾಗಿಯೂ ದೌರ್ಜನ್ಯದ ವಿರುದ್ಧ ಅಗತ್ಯವಿದ್ದರೆ ಬಂದೂಕದ ಸಹಾಯ ಪಡೆಯಬಹುದು. ಅದು ಅವಳ ಪುನಃಸ್ಚೇತನ ಜೀವನದ ಪಯಣದಲ್ಲಿ ಕಲಿತ ಪಾಠ. ಶೋಷಣೆ ತಡೆಯಲಾರದೆ ಸಮಾಜವನ್ನೇ ಎದುರುಹಾಕಿಕೊಂಡು ತಪ್ಪು ದಾರಿಹಿಡಿದ ಡಕಾಯಿತರು ಎಲ್ಲಿ ಈಗಲೂ ಇದ್ದಾರೋ ಅವರಿಗೂ ನ್ಯಾಯ ಸಿಗಲಿ, ಅವರೂ ಕೂಡ ತನ್ನಂತೆಯೇ ಶರಣಾಗತರಾಗಲು ನ್ಯಾಯಾಂಗದ ಕ್ರಮಗಳನ್ನೂ ಜಾರಿಗೆ ತರಲು ಸಫಲಳಾದಳು. ಚಂಬಲ್ಲ್ನಲ್ಲಿ ಮಾತ್ರ ಡಕಾಯಿತಿ ನಡೆಯುತ್ತಿದೆ ಅಂದು ಕೊಂಡರೆ ಸಾಲದು. ದಿಲ್ಲಿಯಲ್ಲೂ ಬೇರೆ ಮಾರ್ಗಗಳಿಂದ ಎಲ್ಲಕಡೆ ಲೂಟಿಮಾಡುವರೇ ಇದ್ದಾರೆ. ನಾಗರೀಕ ವರ್ತನೆ ಕೂಡ ಪುನಃಸ್ಚೇತನಗೊಳ್ಳಲಿ ಎನ್ನುವುದು ಅವಳ ಆಶಯವಾಗಿತ್ತು. ಡಕಾಯಿತ ಜೀವನಕ್ಕೆ ವಿರುದ್ಧವಾಗಿ, ದಿನದಲ್ಲಿ ಒಂದುಬಾರಿ ಒಬ್ಬರಿಗೋ ಇಬ್ಬರಿಗೋ ಸಹಾಯ ಮಾಡಿದರೆ ಅದೇ ಸಾರ್ಥಕ ಬದುಕಾಗುತ್ತದೆ ಎನ್ನುವ ದೃಢ ನಂಬಿಕೆಯನ್ನು ಬೆಳಸಿಕೊಂಡಳು. ರಾಜಕೀಯದಲ್ಲಿ ತನ್ನ ಸುತ್ತಮುತ್ತಲು ಆಗುತ್ತಿದ್ದ ಎಷ್ಟೊಂದು ವಿಚಾರಗಳು ಅವಳ ಪ್ರಜ್ಞೆಗೆ ಬರುತ್ತಲೇ ಇರಲಿಲ್ಲ. ಉದಾಹರಣೆಗೆ ಪ್ರಪಂಚದ ಬೇರೆ ಬೇರೆ ದೇಶಗಳ ಪತ್ರಿಕೋದ್ಯಮಿಗಳು ಅವಳ ಬಗ್ಗೆ ಅವರದೇ ಭಾಷೆಯಲ್ಲಿ ಏನು ಬರೆಯುತ್ತಿದರು ಎನ್ನುವುದಾಗಲಿ, ಯಾರು ತನ್ನ ಕಥೆಯನ್ನು ತಿರುಚಿ ತಮ್ಮ ಸ್ವಂತ ಲಾಭಕ್ಕಾಗಿ ಬಳಸುಕೊಳ್ಳುತ್ತಿದರು ಎನ್ನುವ ವಿಚಾರಗಳೆಲ್ಲವೂ ಅವಳ ಗಹನೆಗೆ ಬರುತ್ತಿರಲಿಲ್ಲ. ವಿದೇಶದ ಪುಸ್ತಕ ಮತ್ತು ಹಿಂದಿ ಸಂಚಿಕೆಗಳಲ್ಲಿ ತನ್ನ ಫೋಟೋಗಳು ಮುದ್ರಿತವಾಗುವುದನ್ನು ಕಂಡು ಸಂತೋಷ ಪಡುತ್ತಿದ್ದಳು ಅಷ್ಟೇ. ಅವಳಲ್ಲಿದ್ದ ಪ್ರತೀಕಾರದ ಬದಲು ಮತ್ತೆ ಅಮಾಯಕಳಾಗಿ ಪುನಃಸ್ಚೇತನಗೊಂಡಿದ್ದಳು. ಹಿಂದುಸ್ಥಾನದ ಎಲ್ಲ ಶೋಷಿತ ಜನಾಂಗಕ್ಕೂ ಆಕೆ ತೋರಿಸಿಕೊಟ್ಟದ್ದೆಂದರೆ “ನಾವು ಯಾವಾಗ ಸಂಕಲ್ಪ ಮಾಡುತ್ತೆವೆಯೋ ಆಗ ತಪ್ಪುಗಳನ್ನು ಮತ್ತು ದೌರ್ಜನ್ಯವನ್ನು ಕಸಿದುಕೊಂಡು ಸಮಾಜವನ್ನು ಸತ್ಯದ ನೇರ ದಾರಿಯಲ್ಲಿ ಹೋಗಲು ಅನುವು ಮಾಡಿಕೊಡಬಹುದು.” ಒಂದುವೇಳೆ ಆಕೆಯ ಹತ್ಯೆ ಆಗದಿದ್ದರೆ, ಇಂದಿಗೂ ಜೀವಿತವಾಗಿದ್ದರೆ ಬಹುಶಃ ತನ್ನ ಸಮುದಾಯದ ಅತಿ ದೊಡ್ಡ ಪುನಃಸ್ಚೇತನಗೊಂಡ ಪ್ರತಿನಿಧಿ ಆಗುತ್ತಿದ್ದಳು. ಅವಳು ಈಗ ನಮ್ಮ ಜೊತೆ ಇಲ್ಲದಿರಬಹುದು, ಆದರೆ ಅವಳು ನಂಬಿದ ವ್ಯಕ್ತಿಯೇ ಅವಳನ್ನು ಗುಂಡಿಟ್ಟು ಕೊಲ್ಲುವುದು ಅವಳ ದುರ್ಭಾಗ್ಯವೋ ಅಥವಾ ನಮ್ಮ ಸಮಾಜದ ಅನೀತಿಯೋ ಎಂದು ಗೊತ್ತಿಲ್ಲ.

ಮುಕ್ತಾಯ:

ಫೂಲನ್ ದೇವಿ ಹಂತ ಹಂತವಾಗಿ ನಿರ್ಧಿಷ್ಟ ದಿಕ್ಕಿನಲ್ಲಿ ಚಲಿಸಿ, ಶೋಷಿತ ಹೆಣ್ಣಿನ ಸ್ಥಾನದಿಂದ ಸಮಾಜದ ಉನ್ನತ ಸ್ಥಾನ ಪಡೆದ ಕಥೆ ರೋಚಕ. ಇದರಲ್ಲಿ ಪುನಃಸ್ಚೇತನ ಒಂದು ಪ್ರಭಾವಿ ಪ್ರಕ್ರಿಯೆ ಮತ್ತು ಸಾಧನ. ಎಲ್ಲ ಶೋಷಿತರಿಗೂ ಆ ಪ್ರಕ್ರಿಯೆಯ ಬಗ್ಗೆ ಒಂದೇ ರೀತಿಯ ಹತೋಟಿ ಇರಲು ಸಾಧ್ಯವಿಲ್ಲ. ಈ ಪುಟಿದೇಳುವ ಪ್ರಕ್ರಿಯೆಯಿಂದಲೇ ಸಮುದಾಯದ ಜನಪದದಲ್ಲಿ “ದೇವಿ” ಎಂದು ಬಿರುದು ಪಡೆದದ್ದು ಫೂಲನ್ ದೇವಿಯ ಆತ್ಮ ಸಾಧನೆ. ಆದರೆ ತನ್ನ ಮೇಲೆ ಅತ್ಯಾಚಾರ ಮಾಡಿದ ದುಷ್ಕರ್ಮಿಗಳ ಮೇಲಿನ ಪ್ರತೀಕಾರವೇ ಅವಳನ್ನು ಹೊರಗಿನ ಪ್ರಪಂಚಕ್ಕೆ ಕುಖ್ಯಾತಳನ್ನಾಗಿ ಪರಿಚಯ ಮಾಡಿಕೊಟ್ಟಿದ್ದು, ಶೋಷಿತ ದಲಿತ ಹೆಣ್ಣು ಮೇಲ್ಜಾತಿಯ ಪುರುಷರನ್ನು ಸಾಲಾಗಿ ನಿಲ್ಲಿಸಿ ಬಂದೂಕಿನಿಂದ ಕೊಂದದ್ದು ಕೆಲವರಿಗೆ ಕ್ರೌರ್ಯ ಮತ್ತೆ ಕೆಲವರಿಗೆ ನ್ಯಾಯಸಮ್ಮತ. ತನ್ನ ಕ್ರೌರ್ಯದಿಂದ ಠಾಕೂರ ಸ್ತ್ರೀಯರೇ ಶೋಷಿತರಾದಾಗ ಅವಳ ವಿವೇಚನೆಗೆ ಸಮರ್ಥನೆ ಇದೆಯೇ? ಸರಿ ತಪ್ಪಿನ ಸವಾಲುಗಳನ್ನು ಅವಲೋಕನೆ ಮಾಡಲು ಈ ಲೇಖನ ನಿಷ್ಪಕ್ಷಪಾತದಲ್ಲಿ ಫೂಲನ್ ದೇವಿಯ ವ್ಯಯಕ್ತಿಕ ವ್ಯಕ್ತಿಚಿತ್ರಣ ನೀಡಿದೆ. ಈ ಚಿತ್ರಣದಲ್ಲಿ ಮೇಲ್ನೋಟಕ್ಕೆ ಅವಳು ಅಮಾಯಕ ಮತ್ತು ಕ್ರೂರತನದ ದ್ವಂದ್ವದಲ್ಲಿ ಸಿಲುಕಿದ್ದರೂ, ಕೊನೆಗೆ ಕಂಬಳಿಹುಳ ಚಿಟ್ಟೆ ಆಗುವ ರೀತಿಯಲ್ಲಿ ರೂಪಾಂತರಗೊಂಡು ಸಮಾಜದ ಉಪಯುಕ್ತ ವ್ಯಕ್ತಿ ಆಗುತ್ತಾಳೆ. ಈ ಪರ್ಯಟನೆಯ ಅನ್ವೇಷಣೆಯಲ್ಲಿ ಮುಖ್ಯವಾಗಿ ವ್ಯಕ್ತವಾಗುವುದು ಅವಳ ಕಷ್ಟಸಹಿಷ್ಣುತೆ, ದೃಢತೆ ಮತ್ತು ತನ್ನಲ್ಲಿ ಕಾರ್ಯತತ್ಪರತೆಗೆ ಇರದ ಗುಣಗಳನ್ನು ತನ್ನೊಡನೆ ಸ್ಪಂದಿಸುವವರ ಸಹಾಯ ಯಾಚಿಸಿ ಕಾರ್ಯ ಸಾಧಿಸುವ ಛಲ. ಇದರಲ್ಲಿ ಪುರುಷರ ಮತ್ತು ಸಮಾಜದ ಬೆಂಬಲಕ್ಕೆ ಶರಣು ಹೋಗಿದ್ದಲ್ಲದೆ ಧಾರ್ಮಿಕ ಪರಿವರ್ತನೆಯ ಮೂಲಕ ಹಿಂದಿನ ಪ್ರತೀಕಾರ ಮನೋವೃತ್ತಿಯನ್ನು ಸಕಾರಾತ್ಮಕವಾಗಿ ಬದಲಾಯಿಸಿಕೊಳ್ಳಲು ಫೂಲನ್ ದೇವಿಗೆ ಸಾಧ್ಯವಾಯಿತು.


Reference:

The Bandit Queen of India : An Indian Woman's Amazing Journey from Peasant to International Legend, by Phoolan Devi 2003 Internet Archive

Gestures of Cultural Justice: Narrative Justice for Phoolan Devi in Epic Recounting February 2022 Economic and Political Weekly 57(9)

Devi, Phoolan (1996). Cuny, Marie-Therese; Rambali, Paul (eds.). I, Phoolan Devi: The autobiography of India's bandit queen. London: Little, Brown and Company. ISBN 0-316-87960-6.

India's Bandit Queen : the True Story of Phoolan Devi, by Sen, Mala.

Outlaw : India's Bandit Queen and Me, by Moxham, Roy, 2010.

"From Heroic Durga to the Next Victim of an Oppressive Patriarchal Indian Culture: Too  Many Variants of Phoolan Devi's Biography". Cracow Indological Studies. 20 (2): 257–280. doi:10.12797/CIS.20.2018.02.12. S2CID 165523279.

Several YouTube and Internet Media interviews with Phoolan Devi

“Bandit Queen,” Hindi Film directed by Shekar Kapoor.
________________________


ಬರ್ರಿ, ನಮ್ಮ್ಕನ್ನಡ್ಕೂಟದ್ ನೆನಪಿನ್ದೋಣಿಯಾಗ್ಕೂತ್ ನೌಕಾಯಾನ ಮಾಡಿಬರೋಣ
 

-ರವಿ ಗೋಪಾಲರಾವ್, ಸ್ಯಾನ್ ಹೋಸೆ, ಕ್ಯಾಲಿಫೋರ್ನಿಯ

ಅಲ್ಲ್ರೀ ಪಾಟೀಲ್ ಸಾಹೇಬ್ರ, ಹತ್ತೊಂಬತ್ತನೂರ್ ತೊಂಬತ್ತರದಶಕದಾಗ ನಮ್ಮ್ಕನ್ನಡ್ಕೂಟ ಹೆಂಗಿತ್ರಿ ಅಂತ್ ನೀವ್ ಕೇಳೀರಿ. ನಾ ನಿಮ್ಮನ್ಭೇಟಿಯಾದದ್ದು ೯೩ರಲ್ಲ್ವೇನ್ರಿ, ಪಾಟೀಲ್ರ. ಅಂದರ ಮೂವತ್ತ್ವರ್ಷದ್ ಹಿಂದಾಯ್ತಲ್ರಿ. ಸನ್ನಿವೇಲ್ ದೇವಸ್ಥಾನ್ದಾಗ ಕೂಟದ ಗಣೇಶ್ಪೂಜೆಯ್ಯಾಗ್ ನಿಂತ್ ನನ್ನಹಾಂಗಾ ನೀವೂ ತೀರ್ಥ ಕುಡಿಲಿಕ್ಕ ತ್ರಾಸ್ ಬೀಳ್ತಿದ್ರಿ, ಯಾಕಂದ್ರ ನಮ್ಮಿಬ್ಬರ ಭುಜದ್ಮ್ಯಾಲಿದ್ ಕೂಸುಗಳು ಜಪ್ಪಯ್ಯಂದ್ರೂ ಕೆಳಗಿಳೀಲಿಲ್ಲ. ಒಂದಾಕೈಯ್ಯಾಗ ತೀರ್ಥ್ಕುಡಿದಿದ್ದ್ ನೆಪ್ ಬಂತೇನ್ರೀ? ಆದಿವಸ್ಪೂಜೆ ಮಾಡಿಸ್ದೂರು ಶ್ರೀ ಹರಿಹರೇಶ್ವರ ಮತ್ತ್ ನಾಗಲಕ್ಷ್ಮಿ ದಂಪತಿಗಳನ್ನ್ ನಾವ್ ಹೆಂಗಾಮರೆಯೋದ್ ನೀವೇ ಹೇಳ್ರಲ. ನಮ್ಮಂತ್ ಹೊಸಬ್ರ ಜೊತೆಯಾಗ್ ಅದೆಷ್ಟ್ ಸುಲಭದಾಗ್ ಸ್ನೇಹಬೆಳಸಿಬಿಡ್ತಿದ್ರೀ ಆ ದಂಪತಿಗಳ್, ನನಗಾ ಈಗ್ಲೂ ಅವರಮನೀಗ್ಹೋಗಿ ಚಲೋ ನಾಷ್ಟಾಮ್ಮಾಡಿದ್ದ್ ನೆನಪಿಸ್ಕೊತಿರ್ತೀನ್ರಿ. ಅವರಹಾಂಗಾ ನಂಗೂ ಕೂಟದ್ಹೊಸ ಮಂದಿಯೋರ್ನ ಪರಿಚಯ ಮಾಡ್ಕೊಳ್ಳಿಕ್ಕ ಆಸೆರ್ರಿ, ಆದ್ರ ಈಗಿನ್ ಸದಸ್ಸ್ಯಾರನ್ನ್ ನೀವ್ನೋಡಿಲ್ರಿ, ತೊಂಬತ್ತರಾಗ ಅವ್ರು ಹುಟ್ಟ್ಯಾರೋ ಇಲ್ಲೋ ಅಂತ ನನಗಂತೂ ಸಂದೇಹ ಬರ್ತಾದ್ರಿ. ನೀವ್ ಆಗ್ಲಾ ಮುತ್ಯಾಗೀರೀ, ಆದ್ರ ಈಗಿನ್ ಅನಿವಾಸಿಗಳ್ ನಮಗಿಂತ್ ಭಾಳ್ ಶಾಣ್ಯಾ ಇದಾರ್ರಿ. ಕೈಯಾಗ ಸದಾ ಟೆಲಿಫೋನ್, ಡಿಜಿಟಲ್ ವಾಚ್, ಅಷ್ಟೆಅಲ್ರಿ ಇಡೀ ಮನ್ಯಾಗ ಅಂಗಳದೊಂದ್ ಕ್ಯಾಮರಾ, ಹಿತ್ತ್ಲಾಗೊಂದ್ ಕ್ಯಾಮರಾ, ಅದೇನೋ ದ್ರೋಣಾಂತ ಆಕಾಶದ್ಮ್ಯಾಲಿಂದ್ ಮತ್ತೊಂದ್, ಹಿಂಗಾ ಎಲ್ಲಾ ಕಡಿ ಫೋಟೋ ತೆಗೀತಿರ್ತಾರ್ರ. ಅದೊಂದ್ ಕಾಲಿತ್ತ್ರಿ ಒಂದು ಸ್ಟೇಜ್ ಮ್ಯಾಲ್ನ್ಯಾಗ ಫೋಟೋ ತೆಗೀಬೇಕಂದ್ರಾ, ಅದೇರ್ರಿ ನೇಪ್ಬರ್ತಿಲ್ಲಾ, ಅದೇನೋ ಫಿಲಂ ರೋಲ್ ಅಂತ ಅದನ್ನ ಕತ್ತಲ್ನ್ಯಾಗ ಕ್ಯಾಮರ ಒಳಗ್ಹಾಕಿ ಕೂಡ್ಲೇ ಅದರ ಬಾಗ್ಲ್ನಮುಚ್ಚಿ ಹೆಗಲ್ಮೇಲ್ ಕ್ಯಾಮರ ಹೇರಿಸ್ಕೊಂಡ್ ಹೊರ್ಟ್ರಾಂದರ ನೀವೇರ್ರಿ ಹೀರೊ. ಜನಗಳ್ಮುಂದ ಶೋಕಿಯಾಗಿ ತೆಗೆದ ಆ ರೋಲ್ನ ಮತ್ತೆ ಫೋಟೋ ದುಖಾನ್ಗೆ ಕೊಟ್ಮ್ಯಾಗ್ ಅಂವಾ ಅದೇನೋ ಕತ್ಲಾಗ ಅದಕ್ಕ್ ಜಲಕಮಾಡ್ಸಿ ಪ್ರಿಂಟ್ ನಂಕೈಸೇರಲಿಕ್ಕ ಏನಿಲ್ಲಾಂದ್ರ ಒಂದು ಹಫ್ತೆ ಬೇಕಾಗ್ತಿತ್ತ್ರಿ. ನಮ್ಮುಖ ನೋಡ್ಕೊಳ್ಳಿಕ್ಕ ಅಷ್ಟು ದಿವಸ್ ಕಾಯ್ಬೇಕಿತ್ರಿ ಅಂತ ನೀವ್ ನಮ್ ನವಪೀಳಿಗ್ಹೇಳಿಯಾರ್ರೀ ಅಂದ್ರ್ ಅವರ್ ನಗಲಿಕ್ಕಿಲ್ವೇನ್ರಿ? ಹುಷ್, ಕಪ್ಪು ಬಿಳುಪು ಚಿತ್ರ ಕೂಡ ತೆಗಿತಿದ್ವ್ರಿ ಅಂತ ಅವರಿಗ್ಹೇಳ್ಬೇಡ್ರಿ, ಪಾಟೀಲ್ರ, ಮತ್ತ್ನಕ್ಕಾರ್ರು.

ಕೂಟದ್ಮಂದಿಯರ್ನ ಕಾರ್ಯಕ್ರಮಕ್ಕ್ಬರ್ರಿ ಅಂತ ಹೇಳೋಕಾ ಫೋನ್ ಸಂಖ್ಯಾನ “ಗುಮಾಯಿಸಿ ಗುಮಾಯಿಸಿ” ಕರೆಹಚ್ಚಿ ನಂತರ ಗಪ್ಪೆ ಮಾತಾಡ್ಲಿಕ್ಕ್ ಚಲೋಯಿತ್ರಿ. ಆಗ್ ಅದೇನೋ ಮಿಂಚಂಚೆ, ಯಾಹೂ, ಮೈಕ್ರೋಸಾಫ್ಟ್ ಅಂತ್ರಿ ಹೀಂಗಾ ಎಲ್ಲಾಕಡೀ ಸುದ್ದಿಮಾಡ್ಲಿಕ್ಕ್ಹತ್ತಿದ್ವ್ರಿ. ಗೂಗಲ್ ಹೆಸರೂ ಕೇಳ್ದಾಂಗಿಲ್ರಿ. ನಾವ್ಕೂಡೆ ಒಂದು ಕೈನೋಡ್ಬಿಡುವಾಂತ ಆಫೀಸ್ನಾಗ, ವಿಶ್ವವಿದ್ಯಾಲಯ್ದಾಗ್ ಎಲ್ಲಿದ್ರಲ್ಲಿ ಕುಂತು ಮುಚ್ಚುಮರೀ ಮಾಡಿ ಒಂದ್ ಖಬರ್ ಟೈಪ್ಮಾಡಿ “ಸೆಂಡ್” ಅಂತ್ ಕಳಿಸ್ಲಿಕ್ಕ್ ಕಲ್ತಿದ್ ನೆಪ್ ಇದಾರಿ. ನೋಡ್ರಿ, ನಾವ್ ಕನ್ನಡ್ಕೂಟ ಬೆಳಿಸಿರೋದ್ಹಾ ಹೀಂಗಾಂತ ಹೇಳೊಕಾ ನಮಗ್ ಖುಷಿಕೊಡ್ತಾದ್ರಿ, ಹಂಗಾ ಅಂವಾ ಅಮೆರಿಕಾದ್ ಅಧ್ಯಕ್ಷ ಬಿಲ್ ಕ್ಲಿಂಟನ್ ಜೊತಿ ಉಪಾಧ್ಯಕ್ಷ ಇದ್ನಲ್ಲ ಅಂವಾ ಹೇಳ್ದಂಗಾ ನಮ್ ಸಿಲಿಕಾನ್ಕಣಿವೆಯಾಗ ಇಂಟರ್ನೆಟ್, ಸಾಫ್ಟ್ವೇರ್ ಕೂಡ ನಾವ್ರಿ ಕಂಡುಹಿಡಿದ್ದಂತಾ ಜಂಬ್ಕೂಡಐತ್ರಿ ನಮಗ. ನೀವ್ ಕೇಳಿರೋಇಲ್ಗೊತ್ತಿಲ್ಲ ನಮ್ಮ್ಕನ್ನಡ್ಕೂಟದ ಬಿವಿ ಜಗದೀಶ್ ಆಗಿನ್ಕಾಲ್ದಾಗ ದೊಡ್ಡ್ ಸ್ಟಾರ್ಟಪ್ ಆರಂಭ್ಮಾಡಿ ನೂರಾರು ಹೈಕಳಿಗೆ, ಅಲ್ರಿ, ಹೈ ಟೆಕಿಗಳಿಗೆ ಕೆಲ್ಸಕೊಟ್ರೂಅಂತ ಹೇಳ್ಲಿಕ್ಕ್ ಖುಷಿಯಾಗ್ತದ್ರಿ. ಯುಗಾದಿ, ಗಣೇಶ್ಪೂಜಾ, ದೀಪಾವಳಿ ಅಂತ ಕಾರ್ಯಕ್ರಮದಾಗ ನಾವೆಲ್ಲ ಭೇಟಿಯಾತೂಅಂದ್ರ ನೀವೆಲ್ಕೆಲಸ ಮಾಡೀರಿ ಅಂತ ನೀವ್ ಕೇಳಿರೋ ಮುಗಿತ್ರಿ, ಹೋಟೆಲ್ನ್ಯಾಗ ಮಾಣಿ ‘ದೋಸೆ, ಇಡ್ಲಿ, ಪೂರಿ ಸಾಗು, ವಡೆ ಸಾಂಬಾರ್” ಅಂತ ನಿಲ್ಲಿಸ್ದಾಂಗ ಹೇಳ್ತಾನಲ್ರಿ ಹಾಂಗಾನೆ ಆಪಲ್, ಆರಕಲ್, ಯಾಹೂ, ಎಚ್.ಪಿ, ಅಂತ ನೂರಾರು ಕಂಪನಿ ಹೆಸರು ಕೇಳಿಸ್ತಿತ್ರಿ. ಹೋಟೆಲ್ ಅಂದ್ ಮ್ಯಾಗ ನೆಪ್ ಬಂತ್ರಿ, ಕೂಟದ ಊಟ ಅಂದ್ರ ಆಗೆಲ್ಲ ಬಾಯಾಗ್ ನೀರ್ಬರಿಸೋ ಮೈಸೂರ್ಪಾಕ್, ಜಾಮೂನ್ ಇತ್ಯಾದಿ ಜೊತಿ ಬಿಸಿಬೇಳೆಬಾತ್, ಮೊಸರನ್ನ, ಪಲಾವ್, ಚಪಾತಿ ಹೀಂಗಾ ಹೇಳ್ಲಿಕ್ಕ್ಹೋದ್ರಾ ಪಟ್ಟಿ ಮುಗಿಯೋದಿಲ್ರಿ. ಊಟಕ್ಕ್ ಬೀಡ್ ಆದ್ರ ಆಡಿಟೋರಿಯಂ ಒಳಗ ಕೂಡ್ಲಿಕ್ಕೂ ಜಾಗಸಿಗ್ತಿರಲಿಲ್ರಿ, ಹಿಂದ್ನಿಂತು ಚಪ್ಪಾಳಿ ಹೊಡೆಯೋದು, ಶಿಳ್ಳಿಹಾಕಾದು ಅಂದ್ರ್ ಅದೇನು ಖುಷಿ ಅಂತೀರ್ರೀ! ಛಲೋ ಕಾರ್ಯಕ್ರಮಗಳಲ್ಲಿ ನೃತ್ಯ, ನಾಟಕ, ಸಂಗೀತ ಹೀಂಗಾ ದೋಫರ್ ನಾಲ್ಕ್ ಗಂಟಿಗ್ ಶುರುವಾತ್ ಅಂದ್ರ ಎಲ್ಲಾ ಕಾರ್ಯಕ್ರಮ ಮುಗಿಯೋ ವೇಳಿ ಪೌನೆ ಒಂಬತ್ತು, ಹತ್ತ್ ಘಂಟಿ ಆಗ್ತಿತ್ತ್ರಿ. ನನಗ್ ಭಾಳ್ ಇಷ್ಟ್ಆದ್ ಕಾರ್ಯಕ್ರಮವೊಂದ್ ಅಂದ್ರ ಒಂದ್ಬಾರಿ ನಾವ್ ಧಾರ್ವಾಡ್ಕಡೀ ಮಂದಿಯಲ್ಲ ಸೇರಿ ರಸ್ತೆ ನಾಟಕ ಮಾಡೀವ್ರಿ. ವೇದಿಕೆಯಾಮ್ಯಾಲೆ ನಾಟಕ ಮಾಡ್ಲಿಕ್ಕಿಂತ ರಸ್ತೆಯಾಗ ನಿಂತು ಅಭಿನಯಸುದೂನ್ದ್ರ ಅದೇನ್ ಚಲೋ ಇತ್ತಂದ್ರ, ನಾ ನಮ್ಮೂರಾಗ್ಕೂಡ್ ನೋಡಿರಲಿಲ್ರಿ. ಅದಕ್ಕಾ ನಾ ಹೇಳೋದು ನಮ್ಮ್ಕನ್ನಡ್ಕೂಟದಾಗ್ ಇರೋ ಪ್ರತಿಭೆಆಂದ್ರಾ ನೀವ್ ಎಲ್ಲ್ಕಡಿ ಹುಡ್ಕಿದ್ರೂ ಸಿಗಲಿಕ್ಕಿಲ್ಲಾಂತ್ ನನಗ್ ಖಾತ್ರಿಯಾಗದ. ನನಗ್ ಮತ್ತೊಂದ್ಬಾರಿ ಇಷ್ಟಾದ್ ಹಾಡಾನ್ದ್ರ, ಜಯ ಭಾರತ ತನುಜಾತೆ ಅಂತ ಕುವೆಂಪುಅವ್ರ ಕವನ್ಅದಾರಲ್ರಿ ಅದನ್ನ ಆಡಿಟೋರಿಯುಮನಾಗ್ ಸೇರಿದ್ದ ಮಂದಿಯೆಲ್ಲಾ ಜೊತೆಗೂಡಿ ಒಂದಾಸಮ ಹಾಡಿದ್ದು ಭಾಳ್ ಛಲೊಇತ್ರಿ. ನಾ ಬಾತ್ರೂಮ್ನ್ನಾಗ್ ಹಾಡೋಕ್ಕೂ ಹೆದ್ರಕೋಳಾವ್ವ ಅಂದ್ ಜೋರಾಗ್ ಹಾಡಿದ್ದ್ ಕೇಳಿ ನನ್ನಾಕಿಗ್ಕೂಡ ಅಚ್ಚರಿಯಾಗಿತ್ರೀ. ನೀವ್ ಅದೇನ್ ಕನ್ನಡತನಂತೀರೊ ಅದರ್ ಪ್ರಭಾವ ನಮ್ಮ್ಯಾಗ್ ಬೀರೋವಷ್ಟು ಶಕ್ತಿ ನಮ್ಮ್ಕನ್ನಡ್ಕೂಟಕ್ಕ್ ಬಿಟ್ಟ್ ಇನ್ಯಾವ್ ಸಂಸ್ಥೆಗಿಲ್ರಿ. ಆದ್ರ ಒಂದ್ಬಾರಿ ಕೂಟದ್ಮ್ಯಾಲ ಭಾಳ್ ಕೋಪಬಂದಿತ್ರಿ, ಯಾಕಂತೀರಾ? ಡಿಸಂಬರ್ ೩೧ರ ರಾತ್ರಿ ಹೊಸವರ್ಷ ಸನ್ನಿವೇಲ್ ದೇವಸ್ಥಾನದಾಗ ಕಾರ್ಯಕ್ರಮಮಾಡ್ಲಿಕ್ಹತ್ತೀವಿ ನೀವೂ ಬರ್ರಿಅಂತ ಎಲ್ಲ ಸದಸ್ಸ್ಯಾರ್ಗ ಆಹ್ವಾನ ಬಂದಿತ್ತ್ರಿ, ನಮ್ಮ್ ಕೂಟದ್ ಅಧ್ಯಕ್ಷರಿಂದ. ಮುನ್ನೂರಕ್ಕೂ ಹೆಚ್ಚ್ ಸಂಸಾರಸ್ತ್ ಮಂದಿ ಬಂದಿದ್ರ. ಆದ್ರ ಅಸಂಪ್ರದ್ದಾಯಿಕ್ ಘಟನಾ ಅಂದ್ರ ಅಂವಾ ಅಂದ್ ರಾತ್ರಿ ಹನ್ನೆರ್ಡ್ಗಂಟೆಯಾಗ ವೈನು, ಬೀಯರ್, ವಾಡ್ಕ ಅಂತ ಎಲ್ಲರಿಗೂ ಕುಡೀಲಕ್ಕ್ ಸರಬರಾಜಮಾಡ್ಲಿಕ್ಕ್ ಹತ್ಯಾನ. ಅಲ್ರಿ ನಮ್ ದೇವಸ್ಥಾನದ ಆಡಿಟೋರಿಯಂನಾಗ ಯಾರಾದ್ರ ಹಂಗ್ಮಾಡಾದ್ ಕೇಳೀರಿ ನೀವು? ಮಾರ್ನ್ಯಾದಿವ್ಸ್ ಕೂಟದ್ ಸಮಿತಿಯಲ್ಲಿದ್ದವರೆಲ್ಲರಿಗೂ ಕಪಾಳಮೋಕ್ಷಾಗೊಂದು ಬಾಕಿಇತ್ರಿ, ಆದ್ರ ಅಷ್ಟು ಬೈಗುಳ ಬಿತ್ರಿ ಅವರ್ಗ. ಅದೊಂದು ಘಟನೆಯಾ ಬಿಟ್ಟ್ರಾ, ನಾ ಮೂವತ್ತವರ್ಷದಾಗ್ ನೂರಾರ್ ಕಾರ್ಯಕ್ರಮನಾ ನೋಡೀನ್ರಿ, ಎಲ್ಲ್ ಚಂದಿರ್ತಾದ್ರಿ. ತಪ್ಪನ್ನತಿದ್ಕೊಂಡ್ ಮುಂದಾಹೋಗುದ್ಕೂಡ ಕಲಿತರೆ ಸಂಸ್ಥೆ ಬೆಳಿತಾದ ಅಂತ್ ನಮಗ್ ತಿಳಿಹೇಳ್ದವರು ನಮ್ಮ್ ರವಿ ರವೀಂದ್ರನಾಥ್, ಜಿ.ಎಸ್. ಸತ್ಯ, ತಿರು ನಾರಾಯಣ್ ಐಯಂಗಾರ್, ಈ ಹಿರಿಯರಿಗೆಲ್ಲಾ ಸಂಸ್ಥೆ ಚಿರಋಣಿಯಾಗಾದ್ರಿ.

ಕೂಟದ್ ಇಪ್ಪತೈದ್ವರ್ಷ, ಅಂದ್ರ ಬೆಳ್ಳಿ ಹುಟ್ಟಹಬ್ಬಾದಾ ಎರಡು ದಿವಸ್ ಕಾರ್ಯಕ್ರಮ ನೋಡ್ಲಿಕ್ಕ್ ಎರಡು ಕಣ್ಣುಸಾಲಾದಾತ್ರೀ. ಒಂದಾದ್ ನಂತರ ಮತ್ತೊಂದು ನಮ್ಮೂರ್ ಶಾಣ್ಯಾ ಮಕ್ಕಳಿಂದ್ ಹಿಡಿದ್ ಮುತ್ಯಾ ಮಂದೀವರ್ಗೆ ಎಲ್ರೂ ಕಾರ್ಯಕ್ರಮ್ದಾಗ್ ಅಂದು ಭಾಗವಹಿಸ್ದ್ರಾ. ನಮ್ಮ್ ಕರ್ನಾಟಕ್ದಿನ್ದ ರಗಡ್ ಗಣ್ಯರನ್ನ್ ಕರೆಸಿ ಅವರಾ ಕೈಯಾಗ ಸಂಗೀತ, ನಾಟಕ, ಸಾಹಿತ್ಯ, ಭಾವಗೀತ, ಜಾದೂ ಷೋ, ಹೀಂಗಾ ಹತ್ತಾರು ಕಾರ್ಯಕ್ರಮ ಕೊಟ್ಟಾರ್ರಿ ಅವರೆಲ್ಲ. ಸಾಹಿತಿ ಯು. ಆರ್. ಅನಂತಮೂರ್ತಿ ಅವರ್ಕೂಡ್ ನಮ್ಮ್ ಸದಸ್ಸ್ಯಾರ್ಜೊತಿ ಭಾಳ್ ಸಂತೋಷದಾಗ್ ಸಮಯಕಳೆದಾರ್ರಿ ಅಂದು, ಬಿಗುಮಾನಿಲ್ದಾ ಅಂತ್ಯಾಕ್ಷರಿ ಕಾರ್ಯಕ್ರಮದಾಗ ಹಾಡ್ಹೇಳಿದ್ದು ಚಂದಿತ್ರಿ. ಆ ಎರಡ್ ದಿವಸಾದ್ ನೆನಪ್ ಬಗ್ಗೆ ಬರೀಲಿಕ್ಕ್ ಬಾಳ್ ಸಮಯ್ಬೇಕಾತದ್ರಿ ಅದಕ್ಕ್ ನೀವ್ ಒಂದು ಕೆಲ್ಸ್ಮಾಡ್ರಲ್ಲ, ನಿಮ್ಮ್ ಮನಿಯಾಗ ಪುಸ್ತಕದ್ಲಮಾರ್ ಇದ್ರ ಅದರಾಗ್ಹುಡುಕಿ ಬೆಳ್ಳಿ ಹಬ್ಬದೊಂದ್ ಸಂಚಿಕೆ ಸಿಗ್ತಾದ, ಹಂಗಾ ಅದ್ರಪುಟ್ಗಳನ್ನ್ ನೋಡ್ರಿ. ಈಗಿನಾಂಗ ಬಣ್ಣದ್ ಪುಟಗಳಿಲದ್ರಾಗ ಆದ್ರ ಆಗಿನ್ ಕಪ್ಪುಬಿಳುಪ್ ಚಿತ್ರ ನಿಮ್ಮನ್ ಆ ಕಾಲಕ್ಕವೈತದ. ನಿಮಗ್ಹೇಳಾದ್ ಮರೆತೇ; ನಮ್ಮ್ಕನ್ನಡ್ಕೂಟದ್ ಭಾಳ್ ಮಂದಿ ತೊಂಬತ್ತರ ದಶಕದಾಗ್ ಬಿಡುಗಡೆಯಾದ್ಚಿತ್ರ ‘ಅಮೇರಿಕ ಅಮೆರಿಕ’ದಾಗ ನಟಿಸಿಯಾರ್ರ, ಜೊತಿಗಿ ಕಥೀಬರೀಲಿಕ್ಕ್ ಕೂಡ್ ಸಹಾಯ್ಮಾಡಾರ್ರ. ನಾ ಮೊದಿಲೀಹೇಳ್ದಾಂಗ ಪ್ರತಿಭೆಗೆ ಅಭಾವಿಲ್ರಿ ನಮ್ಮ್ ಸಿಲಿಕಾನ್ಕಣಿವೆಯಾಗ. ರೊಕ್ಕಕ್ಕೂ ಅಭಾವಿರಲಿಲ್ರಿ ಆಗ, ಈಗ್ಲೂಹಂಗಾರ್ರೀ, ನಮ್ಮ್ಕನ್ನಡ್ಕೂಟದ್ ಮಂದಿ ದಾನಮಾಡ್ಲಿಕ್ಕ್ ಎತ್ತಿದ್ಕೈರ್ರಿ. ಆಗ್ ನಮ್ಮ್ ಖಜಾನೆಯಾಗ್ ಹತ್ತು ಸಾವಿರ ಡಾಲರ್ ರೋಕ್ಕ್ಬಂದ್ರ ಅದ್ರಾಗ್ ಕೂಡ ಕರ್ನಾಟ್ಕದಾಗಿರೋ ಬಡಬಗ್ಗರ ಸಂಸ್ಥೆಗಳಿಗ್ ದಾನ ಮಾಡೊದಲ್ದೆ ಸ್ವಯಂಸೇವಕರಾಗಿ ಬಹಳಸಹಾಯ್ ಮಾಡ್ತಾರ್ರೀ ನಮ್ಮ್ ಸಹೃದಯಿ ಕನ್ನಡಿಗರು. ಅದಾ ಕಾರಣಕ್ಕಿರಬೇಕ್ರಿ ಆಗ್ ಚಾಲೂ ಆದ ಹತ್ತಾರ್ ಸೇವಾ ಸಂಸ್ಥೆಗಳ್ ಈಗ್ಲೂ ಹೆಸರ್ಮಾಡಾವಾ. ಆಗ್ ಮುನ್ನೂರ್ನಾನೂರ್ ಕನ್ನಡಿಗರಿದ್ರಾ ಈಗ್ ಬರೋಬರಿ ಡೇಡ್ ಹಜಾರ್ ಮಂದಿಯಿದಾರ್ರಿ, ಹಾಂಗಾ ನಮ್ಮ್ ಖಜಾನೆಯಾಗ್ ರೊಕ್ಕೂಡ ಐನೂರಸಾವಿರ ಮುಟ್ಟಾದ. ಅಂದ್ರ, ಅಡ್ಕಿಮರಿ ಹಾಂಗಾ ಸಪೂರಿದ್ದ್ ನಮ್ಮ್ಕನ್ನಡ್ಕೂಟ ಈಗ್ ನೋಡ್ರಲ್ಲಾ ಅರಳೀಮರದಾಂಗ ಇಡೀ ಸಿಲಿಕಾನ್ಕಣಿವೆಯಾಗ ಬೆಳೆದ್ನಿಂತದ. ಟಿಸಿಲು ಮತ್ತ್ ಬೇರು ಅಗಾಧವಾಗ್ಬೆಳದಾದ, ಅದರಾಗ ನಮ್ಮ್ನಿಮ್ಮ್ ಬೆವರು ಬೆರತಾದ ಅಂತ್ ಹೇಳ್ಲಿಕ್ಕ್ ನನಗ ಖುಷಿಯಾಗ್ತದ. ಅಮೆರಿಕಾದ್ ಬೇರೆ ಕನ್ನಡಕೂಟಗಳಿಗೂ ಮಾದರಿಯಾಗದ. ಬೇರೆ ಕೂಟದ್ ಮಂದಿರ್ನಕರೆಸಿ ನಾಟಕ ಮತ್ತ್ ಸಂಗೀತ್ಕಚೇರಿ ನೆಡಸಾದ್ ನಮ್ಮ್ ಕಾಲದಾಗ್ ಶುರುವಾತಿಲ್ಲೋ, ಹಾಂಗಾನೆ ಈಗ್ ಅದಕ್ಕ್ “ಅಕ್ಕ” ಅಂತ್ ಒಂದ್, “ನಾವಿಕ” ಅಂತಮತ್ತೊಂದ್ ಭಾಳ್ ದೊಡ್ದ್ಸಂಸ್ಥೆಗಳ ಮಾಡಿಯಾರ್ರಿ. ಅಮೆರಿಕಾದ್ ಎಲ್ಲ್ ಕನ್ನಡಿಗರ್ಸೇರಿ ನಮ್ಮ್ಸಂಸ್ಕೃತಿಯನ್ನ್ ಮತ್ತೊಂದು ಉನ್ನತಘಟ್ಟಕ್ಕ್ ಮುಟ್ಟಿಸಿಯಾರ್ರಿ. ಸಿಲಿಕಾನ್ಕಣಿವೆಯಾಗ ಭಾರತದಿಂದ್ಬಂದು ನೆಲಸಿದೋರ್ರು ಭಾಳ್ಮಂದಿಯಿದರ್ರಾ, ಅವರ ಸಂಘಗಳಿಗೂ ನಮ್ಮ್ಕನ್ನಡ್ಕೂಟ ಮಾದರಿಯಾಗಾದ್ರಿ. ನಮಮ್ದೇಶದ್ ಮಂದಿ ಎಲ್ಲ ಕೂಡಿ ಸ್ವತಂತ್ರದಿವಸ್ ಆಚರಿಸೋದ್ ನೋಡ್ಲಿಕ್ಕ್ ನಾವೆಲ್ಲ್ ಮೆರವಣಿಗೆಯಾಗ್ ಹೋಗ್ತಿದ್ವಿರ್ರಿ. ಬಣ್ಣಬಣ್ಣದ್ ವಸ್ತ್ರಧರಿಸಿ ಕೆಂಪು ಹಳದಿ ಜಂಡಾ ಹಿಡಿದು, ತಮಟೆ ಬಾರಿಸಿಕೊಂಡ್, ಹಾಡ್ಹೇಳ್ತಾ, ನೃತ್ಯಮಾಡ್ತ ಆ ಅಲಂಕರಿಸಿರೋ ವಾಹನದಾಗ ಮೆರವಣಿಗೆ ಹೊರಟಾನ್ದ್ರ ದೇಶಪ್ರೇಮ ಉಕ್ಕಿಬರ್ತೀತ್ರಿ. ೨೦೦೦ ನೇ ಇಸವಿ ಮೈಲಿಗಲ್ಲ್ ವಿಚಾರಾಂದ್ರ ನಮ್ಮ್ಕನ್ನಡ್ಕೂಟದ್ ಫ್ಲೋಟ್, ಅಂದ್ರ ಸಾಂಸ್ಕೃತಿಕ ಮೆರವಣಿಗೆಗೆ ಮೊದಲ್ನೇ ಬಹುಮಾನ್ ಸಿಕ್ಕಿತ್ತ್ರಿ. ಈ ವಿಷಯ ನಂಗೂ ನೆಪ್ಪಿರ್ಲಿರ್ರಿ, ಆದ್ರ ಇದೆಲ್ಲ ಅಮೃತ, ಶ್ರೀಮುಖ, ವಿಕ್ರಮ ಅಂತ ಕೂಟದ್ ಸಂಚಿಕೆಯಾಗ ಮತ್ತ್ ಓದ್ಕೊಳ್ಲಿಕ್ಕ್ ಹೋದ್ರ ನೆನಪಿನ್ದೋಣಿಯಾಗ್ಕೂತ್ ನೌಕಾಯಾನ ಮಾಡಿದ್ಹಾಂಗಾ ಅನಿಸುತ್ತ್ರೀ. ಕೂಟದ್ಸದಸ್ಯಾರ್ ಬರೆದ ಕಥೆ, ಕವನ, ಟಿಪ್ಪಣಿ, ಚಿತ್ರಕಲೆ, ವರದಿ, ಹೀಂಗಾ ಸಂಚಿಕೆ ಕೂಡ ನಮ್ಮ್ ಪ್ರತಿಭೆಗೆ ಕಳ್ಶಿಟ್ಟಂಗ್ ವರ್ಷಾದ್ಕೊನೆಯಾಗ್ ಬಿಡುಗಡೆ ಆಗ್ತಿತ್ತ್ರ್ರಿ. ನೀವ್ಬಿಡ್ರಲ್ಲ, ಅದೆಷ್ಟ್ ಅಂದವಾಗಿ ಆ ಪುಸ್ತಕಾದ್ ಮುಖಪುಠ ಬಿಡಿಸ್ತೀದ್ರ್ರಿ. ಹಾ, ನೇಪ್ಬೆಂತ್ರಿ, ನಮ್ಮ್ಕೂಟಕ್ಕ್ ಒಂದ್ ಚಲೋ ಪ್ರತೀಕ ಇದ್ದಹಾಂಗ ಒಂದು ಚಿನ್ಹೆ, ಅಂದ್ರ, ಲೋಗೋ ಕೂಡ ನಮ್ಮ್ಸದಸ್ಸ್ಯಾರೆ ಚಿತ್ರಿಸಿದ್ದು. ಒಂದ್ಕಾಲ್ದಾಗ ಸಂಚಿಕೆಯಾಗ ಬರೀ ದೊಡ್ಡವರ್ರೇ ಕನ್ನಡದಾಗ್ ಮಾತ್ರ ಬರಿತೀದ್ರಿ. ನಂತರ ಕೂಟದ್ ಶಾಲಾ ಮಕ್ಕಳ್ ಹಾಗೂ ಎರಡನೇ ಪೀಳಿಗೆ ಯುವಕರ್ಕೂಡ ಬರೀಲಿಕ್ಕ್ಹತ್ತಾರ್ರೀ. ಮುಂದ್ ಅವರಾ ಕೈಯಲ್ಲವೇನ್ರಿ ನಂಮಸಂಸ್ಕೃತಿಯನ್ನ್ ಅಮೆರಿಕದಲ್ಲಿ ಬೆಳಸಾಕ ಜವಾಬ್ದಾರಿ ಇರೋದು. ಅದಕ್ಕಾ ನಾ ಮಕ್ಕಳ್ ಎಲ್ಲ್ಕಂಡ್ರೂ ಕನ್ನಡ್ದಾಗೆ ಮಾತಾಡಿಸೋದು, ಅವರ ತಂದಿತಾಯ್ಗ್ ನಿಮ್ಮ್ಮಕ್ಕಳ್ ಭಾಳ್ ಶಾಣ್ಯಾಇದಾರ್ರಿ ಕೂಟದ್ ಕಾರ್ಯಕ್ರಮಕ್ಕಾಬರ್ರೀ ಅಂತ್ ಹೇಳೋದು. ನಿಮ್ಮ್ಹುಡ್ಗ ಆಗ್ಲೇ ಡಾಕ್ಟರಾಗವಾ ಅಂತ್ ಕೇಳಿ ಭಾಳ್ ಖುಷಿಯಾತ್ರಿ. ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ ಅಂತ್ ಅಂವಾ ಸ್ಟೇಜ್ಮ್ಯಾಲ್ ಹಾಡಿದ್ದ್, ಮಕ್ಕಳ್ನೃತ್ಯ, ನಾಟಕ ಹಿಂಗಾ ಎಷ್ಟು ಚಲೋ ವರ್ಷಗಳ್ಹೋದದ್ದಾ ಗೊತ್ತಾಗುದಿಲ್ರಿ ನಮ್ಮ್ಕೊಟದಾಗ. ನಮ್ಮ್ಮಕ್ಕಳಹಾಂಗಾ ನಾವೂಕೂಡ್ ಕೂಟದ್ಜೊತೆಗೀ ಬೆಳೆದದ್ಧಾಂತ್ ಅನ್ನಿಸ್ಲಿಕ್ಕ್ಹತ್ತಾದ್ರಿ.

ಪ್ರಜಾರಾಜ್ಯದಾಗ ಹೆಂಗಚಾಲೂಅದ ಹಂಗಾನಾ ನಮ್ಮ್ಕೂಟದಾಗ ಚುನಾವಣೆ ನೆಡೀತಿತ್ರಿ, ಆದ್ರ ಒಂದ್ಬಾರೀ ಕೂಡ ಅಧ್ಯಕ್ಷರಸ್ಥಾನಕ್ಕ್ ಸ್ಪರ್ಧೆಯಾಗ್ಲಿ ವಿರೋದಾಗ್ಲಿ ಇರ್ತಿರ್ಲಿರಿ, ಒಮ್ಮತ ಅಂದ್ರ ಅದೂರ್ರಿ. ಅಷ್ಟೆಅಲ್ಲ್ರಿ ತಾರಾ ಬೇಲೂರ್, ಅಲಮೇಲು ಐಯಂಗಾರ್, ರಮಾ ವಿಠ್ಠಲ್, ವಿಮಲಾ ನಾಗರಾಜ್, ಬ್ರಹ್ಮರ ಶಾಸ್ತ್ರಿ ಅಂತ್ಹೆಸ್ರಗಳನ್ನ್ ನೀವ್ಕೇಳಿರಿಲ್ಲೋ, ಈ ಎಲ್ಲ್ ಗಣ್ಯಸ್ತ್ರೀಯಾರು ನಮ್ಮ್ಕೂಟದ ಅಧ್ಯಕ್ಷರಾಗಿ ಸೇವೆಸಲ್ಲಿಸಿದ ಕಾಲ ಅದು. ಬೇರಿಕಡಿಹಾಂಗಾ ಪುರುಷಪ್ರಧಾನ ಸಂಸ್ಥೆ ಆಗಿಲ್ರಿ, ಮುಂದ್ ೨೧ನೇ ಶತಮಾನದ್ದಾಗ ಪದ್ಮ ಕಡೂರ್, ಶಾಂತಲಾ ಭಂಡಿ, ಶುಭ ಪ್ರಿತ್ವಿರಾಜ್, ಅಧ್ಯಕ್ಷಾರಾಗಿ ಸೇವೆಸಲ್ಲಿಸಾರ್ರಿ. ಜೊತಿಗಿ ಕಾರ್ಯಕಾರಿ ಸಮಿತಿಯಾಗ, ಮನರಂಜನಾ ಕಮಿಟಿಯಾಗ, ಊಟದ್ವ್ಯವಸ್ಥೆಯಾಗ ಹೀಂಗಾ ಎಲ್ಲಾದ್ರಲ್ಲೂ ಸ್ತ್ರೀಯಾರು ಪುರುಷರಿಗಿಂತ ಹೆಚ್ಚಕೆಲಸಮಾಡ್ಯಾರ್ರಿ. ಅವರಿಲ್ದಾ ನಮ್ಮ್ಕೂಟ ನಡೀತಿರ್ಲ್ಲ್ರಿ, ನಾನಂತೂ ಅವರೆಲ್ಲರ್ರಿಗೂ ಪ್ರಣಾಮ್ಮಾಡತ್ತೇನ್ರೀ. ಹಾಂಗಾನಾ ನಮ್ಮನ್ ಅಗಲಿದ ಗಣ್ಯವ್ಯಕ್ತೀರನ್ನ ನೆಪ್ ಮಾಡ್ಕಾಳಾದ್ ಎಲ್ರ್ಕರ್ತವ್ಯ್ಕೂಡ್ರಿ, ನೀವೇನಂತೀರ್ರೀ, ಪಾಟೀಲ್ರ. ರವಿ ರವೀಂದ್ರನಾಥ್, ಹರಿಹರೇಶ್ವರ, ನಾಗಲಕ್ಷ್ಮಿ ಹರಿಹರೇಶ್ವರ, ಪ್ರಭು ದೇವ್, ಅರಕೆರೆ ವಾಸುದೇವ್, ಇವರೆಲ್ರಿಗೂ ಶ್ರದ್ಧಾಂಜಲಿ ಅರ್ಪಿಸಿ ಅವ್ರುಕಟ್ಟಿದ್ ನಮ್ಮ್ಕನ್ನಡಕೂಟಕ್ಕ್ ಈ ಸುವರ್ಣವರ್ಷ ಅದ್ಭುತ ಸಾಧನೆಯ್ವರ್ಷವಾಗ್ಲಿ ಅಂತ್ಹಾರೈಸ್ತೀನ್ರ್ರಿ.

_________________________




ಬೃಂದಾವನದೊಳಗಿನ ರಹಸ್ಯ

-ಗಂಧಾಕ್ಷತೆ, ಐಯೋವಾ, USA.


ಚಿಕ್ಕಂದಿನಿಂದಲೂ ನನಗೆ ಈಜಿಪ್ಟಿನ ಪಿರಮಿಡ್ಗಳ ಬಗ್ಗೆ ಕುತೂಹಲ.  ಅದರೊಳಗಿನ ಕತ್ತಲೆ ಕೋಣೆ, ಬಣ್ಣಬಣ್ಣದ ಗೋಡೆ, ಎಲ್ಲೋ ಅವಿತ ರಾಜರಾಣಿಯರ ಮಮ್ಮಿಗಳು, ಚಿನ್ನದ ಮುಖವಾಡ ಎಲ್ಲ ನೋಡುವ ಆಸೆ. ಕಾಲೇಜಿನಲ್ಲಿದ್ದಾಗ ತಾಜ್ ಮಹಲ್ ನೋಡುವ ಕುತೂಹಲ.  ಜೀವನದ ಮತ್ತೊಂದು ಘಟ್ಟ ಸೇರಿದಾಗ ಅದೇ ದೃಷ್ಟಿಯಿಂದಲ್ಲದಿದ್ದರು ಭಕ್ತಿಭಾವದಲ್ಲಿ ಯತಿಗಳ ಬೃಂದಾವನ ನೋಡುವ ಮತ್ತು ಅದರ ರಹಸ್ಯ ಅರಿತುಕೊಳ್ಳಲು ವಿಷಯಲಾಲಸೆ ಹುಟ್ಟಿದ್ದು ಇತ್ತೀಚಿಗೆ. ಭವ್ಯತೆಯಲ್ಲಿ ಸಮರೂಪ ಎನಿಸದಿದ್ದರೂ, ಈ ಮೂರೂ ಮಾನವ ನಿರ್ಮಿತ ಕಟ್ಟಡಗಳೇನೋ ಸರಿ ಆದರೆ ಶತಮಾನಗಳಿಂದ ಯಾತ್ರಿಕರು ಕೇವಲ ಮೃತ ರಾಜರಾಣಿಯರನ್ನು ಯಾ ಯತಿಗಳನ್ನು ಭೇಟಿ ಕೊಡಲು ಬರುತ್ತಾರೆಯೇ ಅಥವಾ ಇನ್ಯಾವುದೋ ಸೆಳೆತವಿದೆಯೇ ಎಂದು ನನ್ನ ಶೋಧನೆ ಆರಂಭವಾಯಿತು.


ಈ ವಿಶ್ಲೇಷಣಾತ್ಮಕ ಅಧ್ಯಯನದ ಹಿನ್ನಲೆಯಲ್ಲಿ ಎರಡು ಬೃಂದಾವನ-ಸಂಬಂಧಿ ಘಟನೆಗಳು ನನ್ನ ಶೋಧನೆಯನ್ನು ಭದ್ರಪಡಿಸಿದವು.  ಈ ಎರಡು ಘಟನೆಗಳನ್ನು ಮೊದಲು ನೋಡೋಣ.


1. ವರದಾ ನದಿಯತೀರ, ಹೊಸರಿತ್ತಿ ಎನ್ನುವ ಗ್ರಾಮ, ಇಸವಿ 1791. ಕಾರಣಾಂತರಗಳಿಂದ ಅಲ್ಲಿದ್ದ ಶ್ರೀ ಸುಧೀಂದ್ರ ತೀರ್ಥರ ಬೃಂದಾವನವನ್ನು ಮತ್ತೊಂದು ಜಾಗಕ್ಕೆ ಸ್ಥಳಾಂತರಿಸುವ ಸಮಯದಲ್ಲಿ ಆ ಘಟನೆಯ ಬಗ್ಗೆ ಬರೆಯುತ್ತ “ಅವರ ಶರೀರ ಆಗ ತಾನೇ ಅರಳಿದ ಹೂವಿನಂತೆ, ಬೃಂದಾವನ ನಿರ್ಮಿಸಿದ ಸಮಯದಲ್ಲಿ ಪ್ರಜ್ವಲಿಸುತ್ತಿದ್ದ ಹಾಗೆಯೇ ಕಾಣುತ್ತಿತ್ತು. ಕೊರಳಲ್ಲಿ ಇದ್ದ ಕಂದದ ತುಳಸಿ ಮಾಲೆಯ ಸುಗಂಧ, ಹಣೆಯಮೇಲಿನ ನಾಮ, ಅಕ್ಷತೆ ಎಲ್ಲವು 6 ವರ್ಷಗಳ ನಂತರವೂ ಹಾಗೆಯೇ ಇರುವುದು ಆಶ್ಚರ್ಯ ತಂದಿದೆ.”  

2. ತುಂಗಾ ನದಿಯ ತೀರ, ಆನೆಗೊಂದಿ ಗ್ರಾಮ, ಇಸವಿ 2019. ನವಬೃಂದಾವನಗಳಲ್ಲಿ ಒಂದಾದ ಶ್ರೀ ವ್ಯಾಸರಾಜ ತೀರ್ಥರ ಬೃಂದಾವನವನವನ್ನು ನಿಧಿ ಹುಡುಕುವ ಕೆಲವು ಭ್ರಷ್ಟರು ಒಡೆದು ಉರುಳಿಸಿ ಹಾಕಿದ್ದಾರೆ. ಆ ಭ್ರಷ್ಟರಿಗೆ ಸಿಕ್ಕಿದ್ದು ಬರಿ ಕಲ್ಲುಮಣ್ಣು. ಆದರೆ ಮಾರೆನೆಯ ದಿನವೇ ಸಾವಿರಾರು ಸ್ವಯಂಸೇವಕರು ಸೇರಿ ಬೃಂದಾವನವನ್ನು ಮತ್ತೆ ಕಟ್ಟಿ ನಿಲ್ಲಿಸಿ ಮರುಪ್ರತಿಷ್ಠಾಪನೆ ಮಾಡಿದರು. 


228 ವರ್ಷಗಳ ಅಂತರದಲ್ಲಿ ಜರುಗಿದ ಈ ಎರಡು ವ್ಯತಿರಿಕ್ತ ಘಟನೆಗಳು ನಮ್ಮ ಮೂಲಭೂತ ನಂಬಿಕೆಯನ್ನೇ ಪ್ರಶ್ನಿಸುತ್ತವೆ ಅಲ್ಲವೇ? ಹೌದೆನಿಸಿದರೆ ಬನ್ನಿ ಈ ಅನ್ವೇಷಣೆಯಲ್ಲಿ ಜೊತೆಗೂಡಿ ನಡೆಯೋಣ. 

******

ಮೃತರಾದವರನ್ನು ಅಗ್ನಿಗೆ ಸಮರ್ಪಿಸಿ ಅಂತ್ಯೇಷ್ಟಿ ಮಾಡುವುದು ಹಿಂದೂ ಧರ್ಮದಲ್ಲಿ ಇರುವ ಬಹು ಪುರಾತನ ಆಚರಣೆ. ಆದರೆ ಕೆಲವೊಂದು ಯೋಗಿಗಳು, ಸನ್ಯಾಸಿಗಳು ಮತ್ತು ಪವಾಡಪುರುಷರನ್ನು ಆ ರೀತಿ ಅಂತ್ಯೇಷ್ಟಿ ಮಾಡದೇ ಮಣ್ಣುಮಾಡುವುದು ಅಥವಾ ಬೃಂದಾವನ ಕಟ್ಟಿ ಆರಾಧಿಸುವುದು ಕೂಡ ಹಳೆ ಪದ್ಧತಿ. ವೈಖಾನಸಸ್ಮಾರತಸೂತ್ರದಲ್ಲಿ ಯತಿಗಳು ಮತ್ತು ಯೋಗಿಗಳ ಶವಸಂಸ್ಕಾರ ಮಾಡುವ ರೀತಿಯನ್ನು ವರ್ಣಿಸಲಾಗಿದೆ. ಯಾರು ಆಗಲೇ ಜೀವನದಿಂದ ಮುಕ್ತಿಪಡೆದಿರುವರೋ, ಯಾರ ಆತ್ಮ ಆಗಲೇ ದೇವರಲ್ಲಿ ಐಕ್ಯವಾಗಿರುವುದೋ ಅಂತಹವರ ದೇಹವನ್ನು ಅಗ್ನಿಗೆ ಸಮರ್ಪಿಸುವುದು ಸಹಜವೆನಿಸುವುದಿಲ್ಲ. ಹಾಗೆಯೇ ಆತ್ಮ ಅಮರವಾದರೆ ಅಂತಹ ಯತಿಗಳ ಮಾರ್ಗದರ್ಶನವನ್ನು ಭುವಿಯಲ್ಲಿ ಸತತವಾಗಿ ಪಡೆಯಬಹುದು ಎನ್ನುವುದೇ ಈ ಹಿಂದೂ ಸಮಾಧಿ, ಬೃಂದಾವನಗಳ ಹಿನ್ನಲೆ. 


ಹಾಗಾದರೆ ಶ್ರೀರಾಮ ಮತ್ತು ಶ್ರೀ ಕೃಷ್ಣ ನಾರಾಯಣನ ಮನುಷ್ಯ ರೂಪದ ಎರಡು ಅವತಾರಗಳು, ಭುವಿಯಲ್ಲಿ ಧರ್ಮವನ್ನು ಮತ್ತೆ ಸಂಸ್ಥಾಪಿಸಿ ಕೊನೆಗೆ ಇಬ್ಬರೂ ಜಲಸಮಾಧಿಯ ಕ್ರಿಯೆಯಲ್ಲಿ ದೇಹವನ್ನು ತ್ಯಜಿಸಿದರೆಂದು ತಿಳಿದಾಗ ಆಶ್ಚರ್ಯವೆನಿಸದಿದ್ದರೂ ಮನುಷ್ಯರೇಕೆ ಅವರ ಬೃಂದಾವನ ಕಟ್ಟಲಿಲ್ಲ ಎನ್ನುವ ಪ್ರಶ್ನೆ ಮೂಡುತ್ತದೆ. 

ತ್ರೇತಾಯುಗದಲ್ಲೂ ದ್ವಾಪರಯುಗದಲ್ಲೂ ವೇದಕಾಲದಲ್ಲಿಯೂ ಜಾರಿಯಲ್ಲಿರದ ಬೃಂದಾವನ ಸಮಾಧಿ ನಮ್ಮ ಹಿಂದೂ ಸಂಸ್ಕೃತಿಯಲ್ಲಿ ಹೇಗೆ ಮತ್ತು ಯಾವಾಗ ಮೊದಲಬಾರಿಗೆ ಉದಯಿಸಿತು?  


ಆ ಪ್ರಶ್ನೆಗೆ ಉತ್ತರ ಸಿಕ್ಕಿದ್ದು ಶಂಕರಾಚಾರ್ಯರ ಕಾಲದಲ್ಲಿ  -- ದಂಡಿ  (ಕುಂಕುಮಕೇಸರಿಯ ಬಟ್ಟೆಯನ್ನು ಒಂದು ಬಿದರಿನ ಕೋಲಿಗೆ ಕಟ್ಟಿಕೊಂಡು ಭಿಕ್ಷೆ ಬೇಡುವವರು) ಎನ್ನುವ ಒಂದು ಶೈವ ಒಳಪಂಗಡದವರು ನಿರ್ಗುಣ ಮೂರ್ತಿಗಳನ್ನು ಆರಾಧಿಸುತ್ತಿದ್ದರಲ್ಲದೆ ಅವರಲ್ಲಿ ಅಗ್ನಿಯನ್ನು ಬಳಸುವ ನಿಷೇದವಿದ್ದ ಕಾರಣ ಮೊದಲ ಬಾರಿಗೆ ಹಿಂದುಗಳಲ್ಲಿ ಮೃತರಾದವರನ್ನು ಹೂಳುವ ಅಥವಾ ಜಲಸಮಾಧಿ ಮಾಡುವ ಅಭ್ಯಾಸ ಕಾಣಿಸುತ್ತದೆ. ಹಿಂದೂ ಅಂತ್ಯೇಷ್ಟಿ ಸಂಸ್ಕಾರದಲ್ಲಿ ಈ ವಿಧಾನವನ್ನು ಅಷ್ಟಾಗಿ ವಿವರಿಸಿಲ್ಲ.  ಆದರೆ ಆ ವೇಳೆಯ ಹೊತ್ತಿಗೆ (8-9 ನೇ ಶತಮಾನ) ಮುಸ್ಲಿಮರ ದಾಳಿಯಿಂದ ಹಿಂದೂ ಧರ್ಮದಲ್ಲಿ ಪರಮತೀಯರ ಪ್ರಭಾವ ಕಾಣಿಸುತ್ತಿತ್ತಾದರೂ 13ನೇ ಶತಮಾನದವರೆಗೂ ಬೃಂದಾವನ ನಿರ್ಮಿಸಿದ ಹಾಗೆ ಕಾಣುವುದಿಲ್ಲ. ಹಾಗಿದ್ದಲ್ಲಿ ಬೃಂದಾವನವೂ ಕೂಡ ಕ್ರೈಸ್ತ, ಇಸ್ಲಾಂ, ಯಹೂದಿ, ಅಥವಾ ವೀರಶೈವ ಪವಾಡಪುರುಷರ ಗೋರಿಯ ರೂಪದಲ್ಲಿ ಹೂಳುವ ಮತಾಚರಣೆಯ ರೀತಿಯಂತೆಯೇ ಎಂದು ನಿಮಗೆ ಅನಿಸಿದರೆ ಮತ್ತೊಮ್ಮೆ ಯೋಚಿಸಿ. ಬೇರೆ ಮತಗಳಲ್ಲಿ ಮೃತರಾದವರೆಲ್ಲರನ್ನು ಮಣ್ಣಿನಲ್ಲಿ ಹೂಳುತ್ತಾರೆ.  ಆದರೆ ಹಿಂದೂಗಳಲ್ಲಿ ಅದು ಆಗಮ್ಯ ಮಹಿಮೆಯ ಯತಿಗಳಿಗೆ, ಪವಾಡ ಪುರುಷರಿಗೆ ಮತ್ತು ಸಮಾಧಿ ಗಳಿಸಿದವರಿಗೆ ಮಾತ್ರ ಅನ್ವಯಿಸುತ್ತದೆ.   


ಈ ಅವಲೋಕನದಲ್ಲಿ ಮೊದಲು ಸಮಾಧಿ ಎಂದರೇನು ಎಂದು ತಿಳಿಯುವುದು ಮುಖ್ಯ.  ಇದನ್ನು ಗೋರಕ್ಸಶತಕದಲ್ಲಿ ವರ್ಣಿಸಲಾಗಿದೆ. ಯಾರು ಸತತ ಯೋಗದಿಂದ ಪಂಚೇಂದ್ರಿಯಗಳ ಗ್ರಹಿಕೆ ತೊರೆದು, ಬೆಣ್ಣೆಯೊಳಗೆ ಬೆಣ್ಣೆ ಬೆರೆತಂತೆ, ಬೆಂಕಿಯೊಳಗೆ ಬೆಂಕಿ ಬೆರೆತಂತೆ,  ಪರಿಶುದ್ಧ, ನಿಶ್ಚಲ, ನಿರಂತರ, ಗುಣಾತೀತ, ನಿಶ್ಚಿಂತ, ದ್ವಂದ್ವರಹಿತದ ಅತ್ಯುನ್ನತ ಸ್ಥಿತಿಲ್ಲಿ ಬ್ರಹ್ಮವನ್ನು ಸೇರುತ್ತಾರೋ ಅಂತಹ ಯತಿವರ್ಯರು ಸಮಾಧಿ ಸ್ಥಿತಿಯಲ್ಲಿರುವರು ಎಂದು ನಮ್ಮ ನಂಬಿಕೆ. ಅಂದರೆ ಅಂತಹ ಮಹರ್ಷಿಗಳಿಗೆ ಮಾತ್ರ ಬೃಂದಾವನ ನಿರ್ಮಿಸುವ ಪದ್ಧತಿ ಉದಯಿಸಿತು. 


ಆ ನಂಬಿಕೆಯಲ್ಲಿ ಉದಯಿಸಿದ ಬೃಂದಾವನ ಎನ್ನುವ ಕಲ್ಪನೆಗೆ ಮತ್ತು ಅದರ ನಿರ್ಮಾಣಕ್ಕೆ ಆಕಾರ ಕೊಡುವ ಹಂತದಲ್ಲಿ ಬಹುಶಃ ಆ ಕಾಲದಲ್ಲಿ ಪ್ರಚಲಿತವಿದ್ದ ತುಳಸಿ ಕಟ್ಟೆಯನ್ನು ಮಾದರಿಯಾಗಿ ಬಳಸಿದರೆಂದು ನಾವು ಊಹಿಸಬಹುದು. ಏಕೆಂದರೆ ನಮ್ಮ ಪುರಾಣಗಳಲ್ಲಿ ಬರುವ ತುಳಸಿ ಗಿಡದ ಮಹಿಮೆ, ಜಲಂಧರ ಮತ್ತು ವೃಂದಳ ಕಥೆ ಜನಜನಿತವಾಗಿದೆ. ಬೃಂದಾವನದ ಸಂಸ್ಕರಿಸದ ವಿನ್ಯಾಸ ಹೇಗಿತ್ತೆಂದು ಹೇಳುವುದು ಸುಲಭ. ದೇಹವನ್ನು ಪದ್ಮಾಸನದಲ್ಲಿ ಕುಳ್ಳಿರಿಸಿ ಹೂಳುವುದು, ನಂತರ ಸುತ್ತಲೂ ಮರಳು, ಉಪ್ಪು ಹಾಕಿ ಅದರ ಮೇಲೆ ಇಟ್ಟಿಗೆ ಯಾ ಕಲ್ಲು ಬಳಸಿ ಘನಾಕೃತಿಯ ಬೃಂದಾವನ ಕಟ್ಟುವುದು ಅಥವಾ ಆ ಜಾಗದಲ್ಲಿ ಒಂದು ಲಿಂಗವನ್ನು ಸ್ಥಾಪಿಸುವುದು ವಾಡಿಕೆಯಾಗಿ ಬೆಳೆಯಿತು. ತುಳಸಿ ಮತ್ತು ಲಿಂಗವು, ಈ ಜಾಗದಲ್ಲಿ ಮಹಾನ್ ಚೈತನ್ಯವೊಂದು ದೇಹತ್ಯಾಗ ಮಾಡಿದೆ ಎಂದು ಸಾರುವ ಸಂಕೇತಗಳಾಯಿತು. ಆ ರೀತಿ ಪದ್ಮಾಸನದಲ್ಲಿ ಕುಳ್ಳರಿಸಿದ ದೇಹವನ್ನು ಆತ್ಮ ತ್ಯಜಿಸುವುದು ಕಪಾಲದ ಮೂಲಕ ಎಂದು ನಂಬಿಕೆಯಿರುವುದರಿಂದ ಕೆಲವೊಮ್ಮೆ ತೆಂಗಿನಕಾಯಿಂದ ಬುರುಡೆ ಒಡೆಯುವ ಆಚರಣೆ ಕೂಡ ಇದೆ.  ಮತ್ತೊಂದು ಆಚರಣೆಯಲ್ಲಿ ಯತಿವರ್ಯರು ಜೀವಂತವಾಗಿರುವಾಗಲೇ ಸ್ವಇಚ್ಛೆಯಿಂದ ಬೃಂದಾವನ ಸಮಾಧಿಯೊಳಗೆ ಕುಳಿತು ದೇಹತ್ಯಾಗ ಮಾಡುವುದು ಕೂಡ ಪದ್ಧತಿಯಲ್ಲಿದೆ. ಆ ರೀತಿ ಸಜೀವ ಸಮಾಧಿಯಲ್ಲಿ ದೇಹತ್ಯಾಗ ಮಾಡಿದವರಲ್ಲಿ ಶ್ರೀ ವಾದಿರಾಜ ತೀರ್ಥರು ಮೊದಲಿಗರು. ನಂತರ ಸಿಗುವ ಸಜೀವ ಬೃಂದಾವನದ ಉದಾಹರಣೆಗಳಲ್ಲಿ  ಉತ್ತರಾದಿ ಮಠದ ರಘುತ್ತಮ ತೀರ್ಥರು (1595) ಮತ್ತು ಸತ್ಯವ್ರತ ತೀರ್ಥರು, ಮಂತ್ರಾಲಯದ ಶ್ರೀ ಗುರು ರಾಘವೇಂದ್ರರದ್ದು ಬಹಳ ಪ್ರಸಿದ್ಧಿಯಾದದ್ದು. 1671ರಲ್ಲಿ ನಿರ್ಮಿತವಾದ ಈ ಬೃಂದಾವನದಲ್ಲಿ ಗುರು ರಾಘವೇಂದ್ರರ ಆತ್ಮ 700 ವರ್ಷಗಳ ಕಾಲ ಭಕ್ತರಿಗೆ ಮಾರ್ಗದರ್ಶನ ನೀಡುವುದು ಎಂದು ನಂಬಿಕೆ ಇದೆ.  ಮಂತ್ರಾಲಯ ಬೃಂದಾವನ ದರ್ಶನಕ್ಕೆ ಮತ್ತು ಭಕ್ತರ ಅವಿರತ ಸೆಳವಿಗೆ ಇದೆ ಮುಖ್ಯ ಕಾರಣ ಎಂದು ಹೇಳಬಹುದು. ಯತಿಗಳ ನಶ್ವರ ದೇಹಕ್ಕೆ, ವಸ್ತುಸಂಬಂಧಿ ಪ್ರಾಮುಖ್ಯತೆ ಇಲ್ಲ ಎಂದಾಯಿತು. 


ಈ ಮೂಲ ಬೃಂದಾವನದ ಸಾವಿರಾರು ಮ್ರಿಥಿಕ ರೂಪಕಗಳು ದಕ್ಷಿಣ ಭಾರತದಲ್ಲಿ ಅನೇಕ ಕಡೆ ಕಂಡುಬರುತ್ತವೆ.  ಬಾಗೇವಾಡಿ ಚೆನ್ನಗಿರಿ ಬೇಟಗಿರಿ ಹೊನ್ನಾಳಿ ಕಡೂರ್ ಮುಂತಾದವು ಕೆಲವು ಉದಾಹರಣೆಗಳು. ಅಷ್ಟೇ ಏಕೆ ಲೋಹಗಳಲ್ಲಿ ಮಾಡಿದ ಬೃಂದಾವನದ ಕಿರು ಆಕೃತಿಗಳನ್ನು ಮನೆಗಳಲ್ಲಿ ಪೂಜಿಸುವುದು ವೈಷ್ಣವ ಸಂಪ್ರದಾಯ. ಹಾಗಾದರೆ ಮೂಲದಲ್ಲಿರುವಷ್ಟೇ ಮ್ರಿಥಿಕ ಬೃಂದಾವನಗಳಲ್ಲಿಯೂ ಕೂಡ ವಸ್ತುಸಂಬಂಧಿ ವಿಷಯಗಳಿಗೆ ಪ್ರಾಮುಖ್ಯತೆ ಇಲ್ಲ ಎಂದಾಯಿತು. ಆದರೆ ಪೂಜ್ಯಭಾವನೆಯೇ ಮುಖ್ಯವೆಂದಾಯಿತು.  ಮೂಲ ರೂಪದಲ್ಲಿಯೂ, ಮ್ರಿತಿಕರೂಪದಲ್ಲಿಯೂ, ಪ್ರತಿಮೆಯ ರೂಪದಲ್ಲಿಯೂ ಭಕ್ತರಿಗೆ ಬೃಂದಾವನದ ಸೆಳೆತ ವಾಸ್ತವಿಕ. ಉದಾಹರಣೆಗೆ ರಾಘವೇಂದ್ರಸ್ವಾಮಿ ಬೃಂದಾವನವು ನರಸಿಂಹ (ಶತ್ರು ಮತ್ತು ಭಯ ನಿವಾರಿಸವವನು), ರಾಮದೇವರು (ಕಳೆದುಕೊಂಡ ಆಸ್ತಿ, ಸಾಮ್ರಾಜ್ಯ, ಅಧಿಕಾರ ನೀಡುವವನು), ಕೃಷ್ಣ (ಮದುವೆಯಾಗಲಿ, ಮಕ್ಕಳಾಗಲಿ ಎನ್ನುವ ಆಕಾಂಕ್ಷೆ ಉಳ್ಳವರಿಗೆ ವರ ನೀಡುವವನು) ಮತ್ತು ವೇದವ್ಯಾಸರ (ಜ್ಞಾನ ಸಂಪತ್ತನ್ನು ನೀಡುವವನು) - ಈ ನಾಲ್ವರ ಸನ್ನಿಧಾನ ಅಥವಾ ವೃಂದ ಎಂದು ನಂಬಿಕೆ. 


ಮೇಲೆ ಕೊಟ್ಟಿರುವ ಎರಡನೇ ಘಟನೆಯ ಹಿನ್ನಲೆಯಲ್ಲಿ ನೋಡಿದಾಗ, ಆನೆಗೊಂದಿಯಲ್ಲಿರುವ ನವಬೃಂದಾವನದಲ್ಲಿ ಇರುವ ಒಂಬತ್ತು ಬೃಂದಾವನಗಳ ಇತಿಹಾಸ ಕುತೂಹಲ ಮೂಡಿಸುತ್ತವೆ. ಏಕೆಂದರೆ ಒಂದೇ ಸ್ಥಳದಲ್ಲಿ ಇವುಗಳನ್ನು ಸ್ಥಾಪಿಸಲು ಸುಮಾರು 300 ವರ್ಷಗಳೆ ತೆಗೆದುಕೊಂಡಿವೆ.  ಇಸವಿ 1324ರಲ್ಲಿ ಶ್ರೀಪದ್ಮನಾಭ ತೀರ್ಥರು, 1399ರಲ್ಲಿ ಕವೀಂದ್ರ ತೀರ್ಥರು, 1407ರಲ್ಲಿ ವಾಗೀಶ ತೀರ್ಥರು, 1539ರಲ್ಲಿ ವ್ಯಾಸರಾಜ ತೀರ್ಥರು, 1559ರಲ್ಲಿ ಶ್ರೀನಿವಾಸ ತೀರ್ಥರು, 1588ರಲ್ಲಿ ರಾಮಚಂದ್ರ ತೀರ್ಥರು, 1623ರಲ್ಲಿ ಸುಧೀಂದ್ರ ತೀರ್ಥರು, ಎಂದು ಗಮನಕ್ಕೆಬರುತ್ತದೆ. ಉಳಿದ ರಘುವರ್ಯ ತೀರ್ಥರು ಹಾಗು ಗೋವಿಂದ ಒಡೆಯರುಗಳ ಬೃಂದಾವನ ಕಟ್ಟಿದ ಇಸವಿಗಳು ದಾಖಲಾಗಿಲ್ಲ. ಈ ಒಂಬತ್ತು ಸಜೀವ ಬೃಂದಾವನಗಳಲ್ಲ. ವಾಸ್ತುಶಿಲ್ಪದಲ್ಲಿ ಯಾವುದೇ ನಿಗಧಿತ ರೂಪರೇಖೆಯೂ ಇದ್ದಂತಿಲ್ಲ. ಒಂದು ನಾಲ್ಕು ಅಡಿ ಎತ್ತರದ ಚಿಕ್ಕ ತುಳಸಿಕಟ್ಟೆಯಂತಿದ್ದರೆ ಮತ್ತೊಂದು ಹತ್ತಾರು ಅಡಿಗಳ ಘನಾಕೃತಿ. ದೇವಸ್ಥಾನಗಳನ್ನು ನಿರ್ಮಿಸುವ ಪೂರ್ವಪಶ್ಚಿಮ ಅಕ್ಷರೇಖೆಯ ನಿಯಮವೂ ಇದ್ದಂತಿಲ್ಲ. ಅಶಿಸ್ತಿನ ಛಾಯೆ ಕಾಣುತ್ತದೆ. ಹಾಗಿದ್ದಲ್ಲಿ ವಾಸ್ತುಶಿಲ್ಪದ ನಿಯಮಗಳಿಗಿಂತ ಪ್ರಾಣಪ್ರತಿಸ್ಥಾಪನೆ ಮಾಡಿದ ನಂತರ ಈ ಬೃಂದಾವನಗಳಿಗೆ ಪಾವನತ್ವ ದೊರಕಿದೆ ಎಂದಾಯಿತು.  ಆದರೆ ಅವುಗಳ ಮೂಲ ನಿರ್ವಹಣ ವಿಧಾನ ಒಂದೇ ಎಂದು ಹೇಳಬಹುದು. 


ಬೃಂದಾವನದ ಪ್ರತಿಷ್ಠಾಪನೆ ಕೂಡ ಗುಡಿಯಲ್ಲಿ ಮೂಲದೇವರ ಪ್ರತಿಷ್ಠಾಪನೆಯಂತೆ ಬಹಳಷ್ಟು ವ್ರತಾಚರಣೆ ಮತ್ತು ಕಲಶಪೂಜೆಯ ನಿಯಮಗಳನ್ನೊಳಗೊಂಡಿರುತ್ತದೆ. ಇಲ್ಲಿಯವರೆಗೆ ದೊರಕಿರುವ ದಾಖಲೆಗಳ ಪ್ರಕಾರ 1785ರಲ್ಲಿ ಸ್ಥಾಪಿತವಾದ ಸುಧೀಂದ್ರ ತೀರ್ಥರ ಬೃಂದಾವನವೇ ಕೊನೆಯದು.  ಇತ್ತೀಚಿನ ನೆಲಸಮವಾದ ವ್ಯಾಸರಾಜರ ಬೃಂದಾವನವನ್ನು ಎಲ್ಲ ವ್ರತಾಚಾರಣೆ ಮತ್ತು ಕಳಶಪೂಜೆಯೊಂದಿಗೆ ಮರುಪ್ರತಿಷ್ಠಾಪನೆ ಮಾಡಲಾಯಿತು. ಹಾಗಾದರೆ ಕಳೆದ 235 ವರ್ಷಗಳಲ್ಲಿ ಹೊಸ ಬೃಂದಾವನ ಪ್ರತಿಷ್ಠಾಪನೆ ಆಗಿಲ್ಲ ಎನ್ನುವುದು ಒಂದು ಸೋಜಿಗದ ಸಂಗತಿ. ಅಥವಾ ಈ ಕಾಲಾವಧಿಯಲ್ಲಿ ಅತ್ತ್ಯುನ್ನತ ಸಮಾಧಿ ಸ್ಥಿತಿಯನ್ನು ಗಳಿಸಿದ ಯತಿವರ್ಯರು ಜನಿಸಲಿಲ್ಲವೋ ಎನ್ನುವುದೂ ಕೂಡ ಸೋಜಿಗ. ಇದನ್ನು ಮತ್ತಷ್ಟು ಅವಲೋಕಿಸಿದಾಗ ಯತಿಗಳಿಗೆ ಬೃಂದಾವನ ಕಟ್ಟುವ ನಿರ್ಣಯ ಯಾರು ಮಾಡುತ್ತಾರೆ ಎನ್ನುವ ಪ್ರಶ್ನೆ ಏಳುತ್ತದೆ.  ದೇಹ ತ್ಯಾಗ ಮಾಡಿದ ನಂತರ ಭಕ್ತಾದಿಗಳು ಅಥವಾ ಮಠದ ಪ್ರಾದಿಕಾರಿಗಳು ಬೃಂದಾವನ ನಿರ್ಣಯಿಸುವ ಸನ್ನಿವೇಶವೇ ಹೆಚ್ಚು. ಇದಕ್ಕೆ ಭಿನ್ನವಾಗಿ ಶ್ರೀ ರಾಘವೇಂದ್ರರು ಸ್ವತಃ ತಾವೇ ನಿರ್ಣಯ ಮಾಡಿ ತಾವು ಇಂತಹ ಘಳಿಗೆಯಲ್ಲಿ ಸಜೀವ ಸಮಾಧಿ ಹೊಂದುವುದಾಗಿ ಹೇಳಿದ್ದಲ್ಲದೇ, ಬೃಂದಾವನದ ಯೋಜನೆ, ಅದರ ವಿನ್ಯಾಸ, ಅದಕ್ಕೆ ಬೇಕಾದ ಸರಕು, ಕಲಶದಲ್ಲಿಡಲು 700 ಸಾಲಿಗ್ರಾಮಗಳು ಮತ್ತು ಪ್ರತ್ಯೇಕ ಶಿಲೆಯನ್ನು ಹೊರನಾಡಿನಿಂದ ತರಿಸಿಕೊಂಡು ತಮ್ಮದೇ ಬೃಂದಾವನದ ನಿರ್ಮಾಣದಲ್ಲಿ ಸಕ್ರಿಯವಾಗಿದ್ದರು. ಶ್ರೀ ರಾಮ ಮತ್ತು ಸೀತೆ ಕುಳಿತ ಶಿಲೆಯನ್ನು ತಮ್ಮ ದಿವ್ಯದೃಷ್ಟಿಯಿಂದ ಹುಡುಕಿ ಬೃಂದಾವನಕ್ಕೆ ಕೂರ್ಮಾಸನದ ಪೀಠಕ್ಕೆ ಬಳಸಲು ಆದೇಶ ನೀಡಿದ್ದರಂತೆ. ಇಲ್ಲಿ ಗಮನಿಸಬೇಕಾದ್ದು ಮೊದಲೇ ಹೇಳಿದಂತೆ ವಸ್ತುಸಂಬಂಧಿ ವಿಚಾರಗಳು ಅಪಕೃತ ಎನಿಸಿದರೂ, ಸಾಲಿಗ್ರಾಮ, ರಾಮಶಿಲೆ ಮತ್ತು ಕೂರ್ಮಾಸನದ ಪೀಠ ಇವೆಲ್ಲದಕ್ಕೂ ಪ್ರಾಚೀನ ಪ್ರಜ್ಞೆಯ ತಳಹದಿ ಇರುವುದು ಸ್ಪಷ್ಟವಾಗುತ್ತದೆ. ಏಕೆಂದರೆ ಸಾಲಿಗ್ರಾಮ ವಿಷ್ಣುವಿನ ಸಾರ್ವತ್ರಿಕ ತತ್ವ, ಮತ್ತು ಕೂರ್ಮಾಸನದ ಪೀಠ, ಜ್ಞಾನಾರ್ಜನೆಯ ಸಂಕೇತಗಳು. ಕೂರ್ಮಪುರಾಣದಲ್ಲಿ ಇದರ ಬಗ್ಗೆ ಸೂಕ್ಷ್ಮ ವಿವರಣೆಗಳನ್ನು ಓದಿಕೊಳ್ಳಬಹುದು. ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಕೂರ್ಮಾಸನ ಪೀಠ ಉಪಾಸಕನಲ್ಲಿ ಜ್ಞಾನ, ಭಕ್ತಿ ಮತ್ತು ವೈರಾಗ್ಯ ಬೆಳೆಸುವುದು.  


ಹಾಗಾದರೆ ಬೃಂದಾವನ ನಿರ್ಮಾಣದ ಮೂಲ ಉದ್ದೇಶ ಶ್ರೀಹರಿಯ ಧಾಮವನ್ನು ಭುವಿಯಲ್ಲಿ ಲಾಕ್ಷಣಿಕವಾದ ರೂಪದಲ್ಲಿ ನಿರ್ಮಿಸಿ, ಯತಿವರ್ಯರ ಆತ್ಮ ನೆಲೆನಿಂತ ಪವಿತ್ರಸ್ಥಾನವನ್ನಾಗಿಸುವುದು. ವ್ಯಾಸರಾಜರು “ಇದು ನಮ್ಮ ಸಮಾಧಿ ಅಲ್ಲ. ಭಗವಂತನ ಆವಾಸಮಂದಿರ,” ಎಂದು ಹೇಳಿದ್ದಾರೆ.  ಆದರೂ ಬೃಂದಾವನದ ವಾಸ್ತುಶಾಸ್ತ್ರ ನಮಗೆ ಪರಿಚಯವಿರುವ ಗುಡಿಯ ವಾಸ್ತುಶಾಸ್ತ್ರಕ್ಕಿಂತ ಭಿನ್ನ. ಅದನ್ನು ವಿವರಿಸುವ ಶ್ರಮಪಡುವ ಬದಲು ಬೃಂದಾವನದ ಈ ರೇಖಾಚಿತ್ರ ನೋಡಿದರೆ ಅದನ್ನು ಹರಿಧಾಮ ಎಂದು ಏಕೆ ಕರೆಯುವರು ಎನ್ನುವುದು ತಾನಾಗಿಯೇ ಸ್ಪಷ್ಟವಾಗುತ್ತದೆ. ಭಕ್ತಾದಿಗಳಲ್ಲಿ ಸಾಮಾನ್ಯವಾಗಿ ಮೂಡುವ ನೋಟ ಬೃಂದಾವನದೊಳಗೆ ಯತಿವರ್ಯರು ಕುಳಿತಿರುವರೆಂದು.  ಆದರೆ ಬೃಂದಾವನ ಶಿಲೆಯಲ್ಲಿ ನಿರ್ಮಿಸಿದ ಘನಾಕೃತಿ, ಅದರಲ್ಲಿ ಕೊಠಡಿಯಂತೆ ಜಾಗವಿರುವುದಿಲ್ಲ ಎನ್ನುವ ತರ್ಕವನ್ನು ನಿರಾಕರಿಸುವರು ನಿಷ್ಠೆಯ ಉಪಾಸಕರು. ಅತಿ ದೊಡ್ಡ ಘನಾಕೃತಿಯ ವಿಸ್ತೀರ್ಣ ಕೂಡ ಸುಮಾರು 6x6 ಅಡಿಗಳು ಮಾತ್ರ.  ಎತ್ತರ ಸುಮಾರು 7-8 ಅಡಿಗಳು. ರಾಘವೇಂದ್ರರ ಬೃಂದಾವನದಲ್ಲಿರುವಂತೆ ಕೆಲವಕ್ಕೆ ಮಾತ್ರ ವಿಸ್ತಾರವಾದ ಮಂಟಪ ನಿರ್ಮಿಸಲಾಗಿದೆ.  ಆದ್ದರಿಂದ ಯತಿವರ್ಯರ ಪಾರ್ಥಿವ ಶರೀರ ಎಲ್ಲಿರುತ್ತದೆ ಎನ್ನುವ ಪ್ರಶ್ನೆ ಮೂಡುತ್ತದೆ. ಬೃಂದಾವನದ ಭೂಮಿಯ 8-10 ಅಡಿಗಳ ಕೆಳಗಿರುವ ರಹಸ್ಯ ಗುಹೆಯಂತಿರುವ ಸಮಭುಜದ ಕೊಠಡಿಯೊಳಗೆ ಪದ್ಮಾಸನದಲ್ಲಿ ಸಾಮಾನ್ಯವಾಗಿ ಯತಿಗಳ ಶರೀರವಿರುತ್ತದೆ. ಗುಹೆಯ ದ್ವಾರವನ್ನು ಎಲ್ಲ ದಿಕ್ಕುಗಳಿಂದ ಮುಚ್ಚಿಬಿಡುವುದರಿಂದ ಎಂದೆಂದಿಗೂ ರಹಸ್ಯವಾಗೇ ಉಳಿಯುತ್ತದೆ. ಆದರೆ ಸಮಾಧಿ ಸ್ಥಿತಿಯಲ್ಲಿರುವ ಆ ದೇಹ ಎಂದೆಂದಿಗೂ ನಿಷ್ಕಳಂಕ ಸ್ಥಿತಿಯಲ್ಲೇ ಇರುವುದೆಂಬ ಅರಿವು ಅನಿವರ್ಚನೀಯ. ಆತ್ಮ-ಪರಮಾತ್ಮ ಒಂದಾಗಿ ಅಜ್ಞಾನ ನಿರ್ಮೂಲಮಾಡಿದಂತೆ. ವಿಜ್ಞಾನ ಇದನ್ನು ಮೂಢನಂಬಿಕೆಯೆಂದರೂ, ಮೇಲೆ ವಿವರಿಸಿದ ಹೊಸರಿತ್ತಿ ಗ್ರಾಮದ ಘಟನೆಯನ್ನು ಮತ್ತೊಮ್ಮೆ ಉಪಾಸಕರ ದೃಷ್ಟಿಕೋನದಿಂದ ನೆನಪಿಸಿಕೊಳ್ಳೋಣ. ಮೇಲೆ ವಿವರಿಸಿದ ಆನೆಗೊಂದಿ ಘಟನೆಯಲ್ಲಿ ಭ್ರಷ್ಟರು ಮೇಲಿನ ಘನಾಕೃತಿಯ ಬೃಂದಾವನವನ್ನು ನಿರ್ನಾಮಮಾಡಿದರೂ ರಹಸ್ಯಚೈತನ್ಯ ಹಾಗೆಯೇ ಮುಂದುವರಿದಿದೆ.            


ಮೂಲ ಬೃಂದಾವನದಲ್ಲಿ ಯತಿಗಳ ಅಯಸ್ಕಾಂತತ್ವವೇ ಸಬೀಜವಾಗುವುದರಿಂದ ದೇಹ ನಶಿಸದೆ ಪರಮಾತ್ಮವೂ ನಿರಂತರವಾಗಿರುತ್ತದೆ ಎನ್ನುವುದು ಭಕ್ತರ ನಂಬಿಕೆ. ಆದರೆ ಯತಿಗಳ ಸಮಾಧಿ ಸ್ಥಿತಿ ಮತ್ತು ಅದರ ಕಾಲಾವಧಿ ಅವರ ಅಯಸ್ಕಾಂತತ್ವ ಶಕ್ತಿಯ ಮೇಲೆ ಅವಲಂಬಿಸಿದೆ. ಆ ಕಾಲಾವಧಿ ಕೆಲವು ಶತಮಾನಗಳಷ್ಟೇ ಇರುವುದರಿಂದ ಯತಿಗಳು ಭಕ್ತರನ್ನು ಹರಿಸಿ, ಸಮಸ್ಯೆಗಳಿಗೆ ಮಾರ್ಗದರ್ಶನ ಕೊಡುವರೆಂಬ ನಂಬಿಕೆ ಇರುವುದರಿಂದಲೇ ಈ ಬೃಂದಾವನಗಳು ಭಕ್ತರನ್ನು ಸೆಳೆಯುತ್ತವೆ. ಅದೇ ತರ್ಕದಲ್ಲಿ, ನಿಗಧಿತ ಅವಧಿಯಲ್ಲಿ ಯತಿಗಳ ಅಯಸ್ಕಾಂತತ್ವ ಕ್ಷೀಣಿಸಿ ಹೋಗುವುದಾದರೆ ಭಕ್ತರ ಸೆಳೆತವೂ ಕಡಿಮೆ ಆಗುತ್ತದೆಯೇ?  ಮುಂದೊಮ್ಮೆ ಹೊಸ ಯತಿಗಳ ಬೃಂದಾವನ ನಿರ್ಮಾಣವಾಗದಿದ್ದಲ್ಲಿ ಆ ಪರಿಕಲ್ಪನೆಯೇ ಅಂತಿಮಗೊಳ್ಳುವ ಸಾಧ್ಯತೆ ಇದೆಯೇ?  ಆಗ ಮತ್ತೊಂದು ಪ್ರಶ್ನೆ ಸಹಜ: ಎಲ್ಲವೂ ನಶ್ವರ ಎನ್ನುವುದೇ ಹಿಂದೂ ಧರ್ಮದ ಸಿದ್ಧಾಂತವಾಗಿರುವಾಗ, ಪಾಳುಬಿದ್ದ, ಬಳಕೆಯಲ್ಲಿರದ ಬೃಂದಾವನಗಳ ಘಟಕಾಂಶಗಳನ್ನು ಪ್ರಕೃತಿಗೆ ಹಿಂದುರಿಗಿಸಿದರೆ ಯತಿಗಳ ಆತ್ಮಕ್ಕೆ ಭುವಿಯ ಭಕ್ತರ ಮಾರ್ಗದರ್ಶನದ ಜವಾಬ್ದಾರಿಯಿಂದ ಅಂತಿಮ ಮುಕ್ತಿ ಸಿಗಬಹುದೇ? ಹಾಗೆ ಮಾಡದಿದ್ದರೆ ಭಕ್ತರು ತಮ್ಮ ಕರ್ತವ್ಯ ಪಾಲಿಸುವುದು ಹೇಗೆ ಸಾಧ್ಯ?


ವೈಜ್ಞಾನಿಕ ದೃಷ್ಟಿಯಿಂದ ಪರಿಶೀಲಿಸಿದರೆ ಮೂಢನಂಬಿಕೆ ಎನಿಸಿದರೂ, ವಿಜ್ಞಾನ ಮತ್ತು ಮತಾಚರಣೆಗಳು ಅನಾದಿಕಾಲದಿಂದಲೂ ತದ್ವಿರುದ್ದ ದಿಕ್ಕಿನಲ್ಲೇ ಚಲಿಸುತ್ತಿವೆ. ಅದರಲ್ಲಿ ಯಾವುದು ಸರಿ ತಪ್ಪು ಎನ್ನುವುದನ್ನು ವಿಶ್ಲೇಷಿಸುವುದು ಈ ಪ್ರಬಂಧದ ಉದ್ದೇಶವಲ್ಲ. ಮೇಲೆ ಕೊಟ್ಟಿರುವ ಎರಡು ಘಟನೆಗಳನ್ನು ವಿಶ್ಲೇಷಿಸಿದಾಗ ಸುಧೀಂದ್ರ ತೀರ್ಥರ ದೇಹ ಯಾವುದೇ ಬದಲಾವಣೆ ಇಲ್ಲದಿರುವುದು ನಂಬಿಕೆ, ಅವೈಜ್ಞಾನಿಕ ಎನಿಸಿದರೆ, ವ್ಯಾಸರಾಜ ತೀರ್ಥರ ಬೃಂದಾವನ ನೆಲಸಮವಾದರೂ ಭಕ್ತಿಯಿಂದ ಮರುಪ್ರತಿಷ್ಠಾಪನೆ ಮಾಡಿದ್ದನ್ನು ನೋಡಿದಾಗ ನಾಶ ಮಾಡಿದ ಭ್ರಷ್ಟರೇ ಅಜ್ಞಾನಿಗಳು ಎಂದು ಅನಿಸುವುದು.


____________________________________


ಪರಸಂಸ್ಕೃತಿಯನ್ನು ಸ್ವೀಕಾರ ಮಾಡುವುದರಿಂದ ಮೂಲಭೂತ ಮೌಲ್ಯಗಳು ಬದಲಾಗುತ್ತವೆಯೇ?

-  ರವಿ ಗೋಪಾಲ ರಾವ್, ಸ್ಯಾನ್ ಹೋಸೆ, ಕ್ಯಾಲಿಫೋರ್ನಿಯ  

ವೈಯುಕ್ತಿಕ ಅನುಭವಗಳನ್ನು ಒಟ್ಟುಗೂಡಿಸಿ ಬರೆದ ಲಘು ಲೇಖನ ಇದು.  ಇದರಲ್ಲಿ ಮೂರು ತಲೆಮಾರಿನಲ್ಲಾದ ಮೌಲ್ಯಗಳ ಬದಲಾವಣೆಯನ್ನು ಸಂಕ್ಷಿಪ್ತವಾಗಿ ವಿವರಿಸಿದ್ದೇನೆ.   ಮೌಲ್ಯಗಳು ಅನೇಕ ಮತ್ತು  ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ನಿಗದಿತವಾಗಿ ವರ್ಗಾವಣೆಯಾಗುವ ಎಲ್ಲ ಮೌಲ್ಯಗಳನ್ನು ತುಲನೆ ಮಾಡುವ ಉದ್ದೇಶ ನನ್ನದಲ್ಲ.  ಈ ಮೂರೂ ಪೀಳಿಗೆಗಳಲ್ಲಿ ಕಂಡು ಬಂದ ಐದು ಅವಿಭಾಜ್ಯ ಅಥವಾ ತಾತ್ವಿಕ ಮೌಲ್ಯಗಳನ್ನು ಮಾತ್ರ ವಿಶ್ಲೇಷಿಸಿ ನಿಮ್ಮ ಮುಂದಿಟ್ಟಿದ್ದೇನೆ.  ಈ ಮೂರು ತಲೆಮಾರಿನ ಕಾಲಾವಧಿ ಎಂಬತ್ತು ವರ್ಷಗಳಿಗಿಂತ (1935-2015) ಹೆಚ್ಚು ವ್ಯಾಪಿಸಿರುವುದರ ಜೊತೆಗೆ ಎರಡು ಖಂಡಗಳ ಮಧ್ಯೆ ಮತ್ತು ಮೂರು ಸಂಸ್ಕೃತಿಗಳ -- ಭಾರತ, ಬ್ರಿಟನ್ ಮತ್ತು ಅಮೆರಿಕ ದೇಶಗಳ -- ನಿಕಟ ಪ್ರಭಾವಕ್ಕೆ ಒಳಗಾದ ಕಾರಣ ಈ ಮೌಲ್ಯಗಳು ಕಾಲ, ದೇಶ ಮತ್ತು ಪರ ಸಂಸ್ಕೃತಿಯನ್ನು ಸಮನ್ವಯಗೊಳಿಸುತ್ತವೆ.    ಮುಖ್ಯವಾಗಿ, ಈ ಚಾರಿತ್ರಿಕ ಕಾಲಮಾನದಲ್ಲಿ ಪರಿವರ್ತನೆಯ ಮಹತ್ತರ ಪರಿಣಾಮ ಅಲೆಗಳಂತೆ ಅಪ್ಪಳಿಸಿ ಬಂದು ನಮ್ಮ ಮೌಲ್ಯಗಳ ಅಡಿಪಾಯವನ್ನೇ ಪ್ರಶ್ನಿಸುವಂತೆ ಮಾಡಿದೆ. ಆದಕಾರಣ ಈ ಸಂಶೋಧನೆಯ ನಿರ್ಮಿತಿಯನ್ನು ಕೆಲವು ಸಾಮಾಜಿಕ, ತಾಂತ್ರಿಕ, ಆರ್ಥಿಕ, ಮತ್ತು ರಾಜಕೀಯ ಘಟನೆಗಳಿಂದ  ಸಾಧ್ಯವಾದಷ್ಟು ಹೊರತು ಮಾಡಿ ನಮ್ಮ ತಾತ್ವಿಕ ಮೌಲ್ಯಗಳಿಗೆ ಅಂಟಿಯೂ ಅಂಟದಂತೆ ಒರೆಹಚ್ಚಲು ಪ್ರಯತ್ನಪಟ್ಟಿದ್ದೇನೆ.
ಈ ಲಘು ಲೇಖನವನ್ನು ನಾಲ್ಕು ಭಾಗಗಳಲ್ಲಿ ವಿವರಿಸಿದ್ದೇನೆ. 
  1. ವ್ಯಕ್ತಿಗತ ಗುಣವಿಶೇಷಗಳು: ಒಂದೇ ಕುಟುಂಬದ ಮೂರು ತಲೆಮಾರಿನ ಸದಸ್ಯರ ಗುಣವಿಶೇಷಗಳನ್ನು ಮತ್ತು ಕಾಲಾವಧಿಯನ್ನು ಕೂಲಂಕಷವಾಗಿ ಮೊದಲನೇ ಭಾಗದಲ್ಲಿ ಕೊಟ್ಟಿದ್ದೇನೆ. 
  2. ತಾತ್ವಿಕ ಮೌಲ್ಯಗಳು: ನಂತರ ಈ ಕುಟುಂಬದ  ಮೂರೂ ತಲೆಮಾರಿನಲ್ಲಿ ಅಡಕವಾಗಿರುವ ತಾತ್ವಿಕ ಮೌಲ್ಯಗಳ ಬಗ್ಗೆ ಮತ್ತು ಆ ಮೌಲ್ಯಗಳನ್ನು ಪರಿಪಾಲಿಸುವ ಪದ್ದತಿಯ ಬಗ್ಗೆ ಎರಡನೇ ಭಾಗದಲ್ಲಿ ಹೆಚ್ಚು ವಿವರಣೆ ಕೊಟ್ಟಿದ್ದೇನೆ.    
  3. ಮೌಲ್ಯಗಳ ಬದಲಾವಣೆ: ಈ ಎಂಬತ್ತು ವರ್ಷಗಳ ಕಾಲಾವಧಿಯಲ್ಲಿ ಪರಸಂಸ್ಕೃತಿಯ ಪ್ರಭಾವದಿಂದ  ಆದ ಮೌಲ್ಯಗಳ ಬದಲಾವಣೆ, ಸೃಜಿಸಿದ ಹೊಸ ಮೌಲ್ಯಗಳು, ಮೌಲ್ಯಗಳ ಹೊಂದಾಣಿಕೆ ಮತ್ತು ಸಮೀಕರಣವಾದ ಮೌಲ್ಯಗಳ ಬಗ್ಗೆ ಮೂರನೇ ಭಾಗದಲ್ಲಿ ವಿವರಿಸಿ ಕಾರಣಗಳನ್ನು ಕೊಟ್ಟಿದ್ದೇನೆ.  
  4. ವಿಶ್ಲೇಷಣೆ: ಕೊನೆಯಲ್ಲಿ ವೈಯುಕ್ತಿಕ ಮಾಪನ ಬಳಸಿ ಈ ಮೂರೂ ತಲೆಮಾರಿನಲ್ಲಿ ಆದ ಮೌಲ್ಯಗಳ ರೂಪಾಂತರ ಮತ್ತು ವ್ಯತ್ಯಾಸವನ್ನು ವಿಶ್ಲೇಷಿಸಿ ಪರಸಂಸ್ಕೃತಿಯನ್ನು ಸ್ವೀಕಾರ ಮಾಡುವುದರಿಂದ ಮೂಲಭೂತ ಮೌಲ್ಯಗಳು ಬದಲಾಗುತ್ತವೆಯೇ ಎನ್ನುವ ಪ್ರಶ್ನೆಗೆ ನಿರ್ಣಾಯಕರ ಉತ್ತರ ಕೊಡುವ ಪ್ರಯತ್ನ ಮಾಡಿದ್ದೇನೆ.   

1.0.0 ವ್ಯಕ್ತಿಗತ ಗುಣವಿಶೇಷಗಳು:

ನನ್ನ ತಂದೆ ತಾಯಿಗಳನ್ನು ಇಲ್ಲಿ ಮೊದಲನೇ ತಲೆಮಾರೆಂದೂ, ನಾನು ಮತ್ತು ನನ್ನ ಶ್ರೀಮತಿಯನ್ನು ಎರಡನೇ ತಲೆಮಾರೆಂದೂ ಮತ್ತು ನಮ್ಮ ಮಕ್ಕಳನ್ನು ಮೂರನೇ ತಲೆಮಾರೆಂದೂ ಪರಿಗಣಿಸಿದ್ದೇನೆ.  ಮೂರೂ ತಲೆಮಾರಿನ ವಿಭಿನ್ನತೆಯ ವಿಶಿಷ್ಟತೆ ಎಂದರೆ, ಕರ್ನಾಟಕದಲ್ಲಿ ಹುಟ್ಟಿ ಬೆಳೆದರೂ ನನ್ನ ತಂದೆ ತಾಯಿಗಳು ಚಿಕ್ಕಂದಿನಲ್ಲಿ ಮತ್ತು ಸಂಸಾರಿಗಳಾಗುವುದ್ದಕ್ಕೆ ಮುಂಚೆ ಬ್ರಿಟಿಷರ ಸಾಂಸ್ಕೃತಿಕ ಮತ್ತು ಪಾರಿಭಾಷಿಕ ತೀವ್ರ ದಾಳಿಯ ಪ್ರಭಾವಕ್ಕೊಳಗಾದವರು. ಅವರು ಭಾರತದ ಸ್ವಾತಂತ್ರ್ಯದ ಮುಂಚಿತ ವರುಷಗಳ ಜೊತೆಗೆ ಸ್ವತಂತ್ರ ಭಾರತದಲ್ಲಿ ಬದುಕಿ ಬಾಳಿದವರು.  ಅದರಂತೆಯೇ ನಾನು ಮತ್ತು ನನ್ನ ಶ್ರೀಮತಿ ಸ್ವಾತಂತ್ರ್ಯದ ಹಲವಾರು ವರ್ಷಗಳ ನಂತರ ಕರ್ನಾಟಕದಲ್ಲಿ ಹುಟ್ಟಿ ಬೆಳೆದರೂ, ವಯಸ್ಕರಾದ ಮೇಲೆ ಮತ್ತು ಸಂಸಾರಿಗಳಾಗುವ ಸಮಯಕ್ಕೆ ಅಮೆರಿಕನ್ನರ ಸಾಂಸ್ಕೃತಿಕ ಮತ್ತು ಪಾರಿಭಾಷಿಕ ಪ್ರಭಾವಕ್ಕೊಳಗಾದವರು. ನನ್ನ ತಂದೆತಾಯಿಗಳ ಅನುಭವಕ್ಕೆ ವಿಭಿನ್ನವಾಗಿ, ನಾವು ಭಾರತವನ್ನು ಬಿಟ್ಟು ಅಮೆರಿಕಾಗೆ ವಲಸೆ ಬಂದು ಸಂಸಾರ ಹೂಡಿದ್ದರಿಂದ ನಮ್ಮ ಸಾಂಸ್ಕೃತಿಕ ಅನುಭವ ಎರಡೂ ಖಂಡಗಳ ಬೆರಕೆ ಎನ್ನಬಹುದು.  ಆದರೆ ನನ್ನ ಮಕ್ಕಳು ಅಮೆರಿಕದಲ್ಲಿಯೇ ಹುಟ್ಟಿ ಬೆಳದು ಚಿಕ್ಕಂದಿನಲ್ಲಿ ನಮ್ಮ ಹಿಂದಿನ ಕರ್ನಾಟಕದ ಸಾಂಸ್ಕೃತಿಕ ಪ್ರಭಾವಕ್ಕೊಳಗಾಗಿದ್ದರೂ ವಯಸ್ಕರಾಗುವ ಸಮಯಕ್ಕೆ ಅಮೆರಿಕದ ಸಂಸ್ಕೃತಿಯನ್ನೇ ಅನುಸರಣೆ ಮಾಡಿದ್ದಾರೆ. ಈ ಮೂರೂ  ತಲೆಮಾರುಗಳನ್ನು ಕಾಲಾವಧಿಯ ಮಾಪನದಲ್ಲಿ ಎಣಿಸುವುದಾದರೆ,  ಸುಮಾರು ಎಂಬತ್ತು ವರ್ಷಗಳ ವೈವಿಧ್ಯಮಯ ಐತಿಹಾಸಿಕತೆಯಿದೆ ಈ ವಿವರಣೆಯಲ್ಲಿ.  ಜೊತೆಗೆ ಮೂರೂ ತಲೆಮಾರಿನವರನ್ನು ಅವಿಭಕ್ತ ಕುಟುಂಬವಾಗಿ ಪರಿಗಣಿಸಿದ್ದರೆ ಒಟ್ಟು 65 ಜನರ ದೊಡ್ಡ ಸಮೂಹವೇ ಆಗುತ್ತದೆ.  (ತಂದೆ ತಾಯಿ, 11 ಮಕ್ಕಳು, ಅವರ 11 ಪತಿ ಯಾ ಪತ್ನಿಯರು,  20 ಮೊಮ್ಮಕ್ಕಳು, ಅವರ 13 ಪತಿ ಯಾ ಪತ್ನಿಯರು ಮತ್ತು ನಾಲ್ಕನೇ ತಲೆಮಾರಿನ 8 ಮರಿಮೊಮ್ಮಕ್ಕಳು). ಆದರೆ ಈ ಲಘು ಲೇಖನವನ್ನು ನಿರೂಪಿಸಲು ಕೇವಲ 6 ಜನರನ್ನು -- ನನ್ನ ತಂದೆ ತಾಯಿ ಮತ್ತು ನನ್ನ ನಾಲ್ಕು ಜನರ ಕುಟುಂಬವನ್ನು ಮಾತ್ರ ಆರಿಸಿಕೊಂಡಿದ್ದೇನೆ.  

1935-2015 ರ ಈ ದೀರ್ಘ ಕಾಲಾವಧಿಯನ್ನು ಮನದಟ್ಟು ಮಾಡಿಕೊಳ್ಳಲು ಮೇಲೆ ಉಲ್ಲೇಖಿಸಿದ ಪ್ರಮುಖ ಸಾಂಸ್ಕೃತಿಕ ಬದಲಾವಣೆಗಳನ್ನು ಮೂರು ಕಾಲಮಾಪನದ ಗುಂಪಿಗೆ ಸೇರಿಸಿದ್ದೇನೆ.  1935-1960 ರ ಕಾಲಮಾಪನವನ್ನು ಮೊದಲನೇ ತಲೆಮಾರಿನವರಾದ ನನ್ನ ತಂದೆತಾಯಿ ಬ್ರಿಟಿಷ್ ಮತ್ತು ಭಾರತದ ಸಾಂಸ್ಕೃತಿಕ ನೆರಳಲ್ಲಿ ಕುಟುಂಬವನ್ನು ಹೂಡಿದ  ಗುಂಪಿಗೂ, ನಂತರ 1960-1985 ರ ಕಾಲಮಾಪನವನ್ನು ಎರಡನೇ ತಲೆಮಾರಿನವರಾದ ನಾನು ಮತ್ತು ನನ್ನ ಶ್ರೀಮತಿ ಭಾರತದ ಸಾಂಸ್ಕೃತಿಕ ನೆರಳಲ್ಲಿ ಬೆಳದು ವಿದ್ಯಾಭ್ಯಾಸ ಮಾಡಿದ ಗುಂಪಿಗೂ ಮತ್ತು 1985-2015 ರ ಕಾಲಮಾಪನವನ್ನು ಎರಡು ಮತ್ತು ಮೂರನೇ ತಲೆಮಾರಿನವರು (ನನ್ನ ಕುಟುಂಬ) ಅಮೆರಿಕದಲ್ಲಿ ನೆಲಸಿ ಸಂಸಾರ ಹೂಡಿದ ಗುಂಪಿಗೂ ಸೇರಿಸಿದ್ದೇನೆ. ಅನುಕ್ರಮವಾಗಿ ಈ ಕಾಲಾವಧಿಯಲ್ಲಿ ಆದ ಪ್ರಪಂಚದ ಮುಖ್ಯ ಬದಲಾವಣೆಗಳು: ಅ. 1935-60: ಎರಡನೇ ವಿಶ್ವ ಯುದ್ಧ, ಭಾರತದ  ಸ್ವಾತಂತ್ರ್ಯ, ಆ. 1960-85: ಭಾರತದಲ್ಲಿ ಕೈಗಾರಿಕೋದ್ಯಮ, ಮಧ್ಯಮವರ್ಗದ ಉತ್ಥಾನ, ಇ. 1985-2015: ಗಣಕಯಂತ್ರದ ಅವಲಂಬನ ಮತ್ತು ಪ್ರಪಂಚದಾದ್ಯಂತ ಆದ ತಾಂತ್ರಿಕ ಬದಲಾವಣೆ. 

ಈ ಬದಲಾವಣೆಗಳು ಹಲವಾರು ರೀತಿಗಳಲ್ಲಿ ನಮ್ಮ ಜೀವನ ಶೈಲಿಗೆ ತಿರುವು ಕೊಟ್ಟಿದ್ದಲ್ಲದೆ, ಆ ಬದಲಾವಣೆಗಳೇ ನಮ್ಮ ಕೆಲವೊಂದು ಮೌಲ್ಯಗಳ ಮೇಲೆ ತೀವ್ರ ಪ್ರಭಾವಬೀರಿದೆ ಎಂದು ಖಂಡಿತ ಹೇಳಬಹುದು.  ಪರಿವರ್ತನೆಯ ತೀವ್ರತೆಯಲ್ಲಿ ಕೂಡ ಒಂದು ತಲೆಮಾರಿಗೂ ಮತ್ತೊಂದು ತಲೆಮಾರಿಗೂ ಅಜಗಜಾಂತರವಿರಬಹುದು.  ಹಾಗಿದ್ದಲ್ಲಿ ಈ ಮೌಲ್ಯಗಳ ಮೇರೆ ಮತ್ತು ಅವುಗಳ ಇತಿಮಿತಿಯನ್ನು ನಾವು ಬೇರೊಂದು ದೃಷ್ಟಿಕೋನದಿಂದ ಅರ್ಥ ಮಾಡಿಕೊಳ್ಳಬೇಕಾಗುತ್ತದೆ.      

2.0.0 ತಾತ್ವಿಕ ಮೌಲ್ಯಗಳು

ಸಾಧಾರಣವಾಗಿ ಎಲ್ಲ ಹಿಂದೂ ಕುಟುಂಬಗಳು ತಮ್ಮ ಮನೆತನದಲ್ಲಿ ನಡೆದುಬಂದ ಮತಾಚಾರಗಳನ್ನು ಒಂದಲ್ಲ ಒಂದು ರೀತಿ  ಉಳಿಸಿಕೊಂಡು ಬಂದಿವೆ.  ಗೃಹಪ್ರವೇಶದ  ಸಮಯದಲ್ಲಿ  ಹಾಲು ಉಕ್ಕಿಸುವ ಪದ್ಧತಿ ಇರಬಹುದು, ಅಥವಾ ಗರ್ಭಿಣಿಗೆ ಬಳೆ ತೊಡಿಸುವ ನಿಯಮವಿರಬಹುದು ಅಥವಾ ಹೆಣ್ಣು ಮಕ್ಕಳಿಗೆ ಕಿವಿಚುಚ್ಚುವ ಆಚಾರವಿರಬಹುದು, ಇಂತಹ ಮತಾಚರಣೆಗಳನ್ನು ಪಟ್ಟಿಮಾಡುತ್ತಾ ಹೋದರೆ ಒಂದು ಸಂಪುಟವೇ ಆಗಬಹುದು.  ಈ ರೀತಿಯ ಮತಾಚರಣೆಗಳನ್ನು ಎಷ್ಟೋ ಕುಟುಂಬಗಳು ತಪ್ಪು ಅರ್ಥದಲ್ಲಿ ಗ್ರಹಿಸಿಕೊಂಡು ಇವೆಲ್ಲವೂ ತಮ್ಮ ಮನೆತನದ ಮೌಲ್ಯಗಳೆಂದು ಹೆಮ್ಮೆ ಪಡುವುದನ್ನು ನೋಡಿದ್ದೇವೆ.  ಭಾರತೀಯ ಚಲನ ಚಿತ್ರಗಳು, ಕಥೆ ಕಾದಂಬರಿಗಳು, ಅವಿಭಕ್ತ ಕುಟುಂಬಗಳು, ಮತ್ತು ಎಲ್ಲ ರೀತಿಯ ಸಾಮಾಜಿಕ ಮಾಧ್ಯಮಗಳು ಈ  ಮತಾಚರಣೆಗಳನ್ನೇ ವೈಭವೀಕರಿಸಿ ಇವುಗಳೇ ನಮ್ಮ ಮೌಲ್ಯವೆಂದು ಪ್ರಭಾವ ಬೀರುವುದರಲ್ಲಿ ಯಶಸ್ವಿಯಾಗಿವೆ.  ಆದರೆ ಈ ಲಘು ಲೇಖನದಲ್ಲಿ ಮೌಲ್ಯ ಪದದ  ಅರ್ಥವಿವರಣೆ ಸ್ವಲ್ಪ ಬೇರೆಯದೇ ಆಗಿರುವುದರಿಂದ  ಕೆಲವು ಸ್ಪಷ್ಟೀಕರಣದ ಮಾತುಗಳು ಇಲ್ಲಿ ಸೂಕ್ತ: 
ಮೊದಲನೆಯದಾಗಿ, ಒಂದು ಕುಟುಂಬದ ಮೂಲಭೂತ ನಂಬಿಕೆಗಳನ್ನು ಮೌಲ್ಯವೆಂದು ಪರಿಗಣಿಸಿದರೂ, ಅವುಗಳನ್ನು ಪಾಲಿಸುವ ವ್ಯಕ್ತಿಗಳಿಗೆ ಜೀವನದಲ್ಲಿ ಯಾವುದು ಸರಿ ಯಾವುದು ತಪ್ಪು ಎನ್ನುವ ಒಂದು ದಿಗ್ದರ್ಶಕ ಸಿದ್ಧಾಂತವನ್ನು ಆದೇಶ ಪಡಿಸುತ್ತವೆ.  
ಎರಡನೆಯದಾಗಿ, ಮೌಲ್ಯಗಳನ್ನು ವೈಯುಕ್ತಿತವಾಗಿ ಆರಿಸಿಕೊಳ್ಳವ ಸಾಧ್ಯತೆ ತೀರ ವಿರಳ, ಏಕೆಂದರೆ ತಂದೆ ತಾಯಿ, ಗುರು, ಅಥವಾ ಸಮಾಜ ಚಿಕ್ಕಂದಿನಿಂದಲೂ ಮೌಲ್ಯಗಳನ್ನು ಹನಿಹನಿಯಾಗಿ ತುಂಬಿಬಿಟ್ಟಿರುತ್ತಾರೆ.  ನಮಗೆ ಅರಿವಿಲ್ಲದೆಯೇ ಕೆಲವೊಂದು ಮೌಲ್ಯಗಳನ್ನು ನಾವು ನಮ್ಮದಾಗಿಸಿಕೊಂಡಿರುತ್ತೇವೆ. 
ಮೂರನೆಯದಾಗಿ, ಯಾವ ಮೌಲ್ಯಗಳು ತಲೆತಲಾಂತರದಿಂದ ವರ್ಗಾವಣೆಗೊಳ್ಳುವುದರ ಜೊತೆಗೆ, ಅವುಗಳನ್ನು ಬಿಟ್ಟು ಜೀವನ ನಡೆಸಲು ಸಾಧ್ಯವಿಲ್ಲ ಎಂದು ಅನಿಸುತ್ತದೆಯೋ ಅಂತಹ ಮೌಲ್ಯಗಳನ್ನು ಮಾತ್ರ ನಾವು ಮೂಲಭೂತ ಅಥವಾ ತಾತ್ವಿಕ ಮೌಲ್ಯಗಳೆಂದು ಕರೆಯಬಹದು.  ಗಮನವಿಟ್ಟು ನೋಡಿದಾಗ ಈ ತಾತ್ವಿಕ ಮೌಲ್ಯಗಳು ಪ್ರತಿಯೊಂದು ಕುಟುಂಬದಲ್ಲಿ ಬೇರೆಬೇರೆಯಾಗಿಯೇ ಗೋಚರವಾಗುತ್ತವೆ. ಉದಾಹರಣೆಗೆ ತಲಾಂತರದಿಂದ ದೇಶಸೇವೆಗೆಂದೇ ಪಣತೊಟ್ಟ ಸೈನಿಕ ಕುಟುಂಬದ ಮೌಲ್ಯಗಳನ್ನು, ಒಂದು ರೈತ ಕುಟುಂಬಕ್ಕೆ ಹೋಲಿಸಿದರೆ ತೀರಾ ವಿಭಿನ್ನವಾಗಿರಬಹುದು.  ಈ ವಿಭಿನ್ನತೆಯಲ್ಲೂ ಕೆಲವು ಸಾಮಾನ್ಯ ಅಂಶಗಳನ್ನೊಳಗೊಂಡ ಮೌಲ್ಯಗಳು ಗೋಚರಿಸಬಹುದು.  ಉದಾಹರಣೆಗೆ ಈ ಎರಡೂ ಕುಟುಂಬಗಳಲ್ಲಿ ಭೂತಾಯಿಯ ಮೇಲಿನ ಗೌರವ ತಾತ್ವಿಕ ಮೌಲ್ಯವಾಗಿರಬಹುದು.  

ಹಾಗಿದ್ದಲ್ಲಿ ನಿಮ್ಮ ಮೌಲ್ಯಗಳನ್ನು ನೀವೇ ಅರಿತುಕೊಂಡು ಅವುಗಳನ್ನು ನಿಮ್ಮ ಹಿಂದಿನ ಮತ್ತು ಮುಂದಿನ ಪೀಳಿಗೆಗೆ ಹೋಲಿಸಿ ನೋಡಿದಾಗ ನಿಮ್ಮ ಕುಟುಂಬದ ತಾತ್ವಿಕ ಮೌಲ್ಯಗಳು ಯಾವುದೆಂದು ಗೋಚರವಾಗುತ್ತದೆ --ಜರಡಿಯ ರಂಧ್ರಗಳಲ್ಲಿ ಪ್ರತ್ಯೇಕಿಸಿದಾಗ ಉಳಿವ ಚಿನ್ನದ ಅದಿರಿನಂತೆ.     ಈ ಸ್ವಗತ ಮಾಪನದಲ್ಲಿ ತುಲನೆ ಮಾಡಿದಾಗ ಕೆಳಕಂಡ ಐದು ತಾತ್ವಿಕ ಮೌಲ್ಯಗಳು ನನ್ನ ಕುಟುಂಬದಲ್ಲಿ ಹಿಂದಿನ ತಲೆಮಾರಿಗೂ, ನನಗು ಮತ್ತು ಮುಂದಿನ ತಲೆಮಾರಿಗೂ ಅನ್ವಯಿಸುವ ಸಾಮಾನ್ಯ ಅಂಶವೆನಿಸಿತು

2.1 ದೇವರಲ್ಲಿ ನಂಬಿಕೆ, ಶಾಂತಿ ಮತ್ತು ಧಾರ್ಮಿಕ ಸಂಪ್ರದಾಯಗಳನ್ನು ಪರಿಪಾಲಿಸುವುದು
2.2 ಮಿತವ್ಯಯ ಮತ್ತು ಸಂಪನ್ಮೂಲಗಳನ್ನು ದುಂದು ವೆಚ್ಚ ಮಾಡದಿರುವುದು
2.3 ಕುಟುಂಬ ಮತ್ತು ಕುಟುಂಬದ ಐಕ್ಯತೆಗೆ ಹೆಚ್ಚು ಪ್ರಾಧಾನ್ಯ ಕೊಡುವುದು   
2.4 ವಿದ್ಯಾಭ್ಯಾಸ ಮತ್ತು ಶಿಸ್ತಿನ ಜೀವನವನ್ನು ಗೌರವಿಸಿವುದು  
2.5 ಅಹಿಂಸೆ ಮತ್ತು  ಆಹಾರ ಪದ್ದತಿಯನ್ನು ಅನುಸರಿಸುವುದು 

ಈ ಐದು ಮೌಲ್ಯಗಳನ್ನು ಪರಸ್ಪರ ಅವಲಂಬಿತ ಮತ್ತು ಸಂಯುಕ್ತ ಮೌಲ್ಯಗಳೆಂದೇ ಅರ್ಥೈಸಿಕೊಳ್ಳಬೇಕು.  ಈ ಮೌಲ್ಯಗಳನ್ನು ಯಾವುದೇ ಕ್ರಮಯೋಜನೆಯಲ್ಲಿ ವಿಶ್ಲೇಷಿಸಿದರೂ ಒಂದನ್ನೊಂದು ಬಲಪಡಿಸುತ್ತವೆಯೇ ಹೊರತು ವಿರೋಧಿಸುವುದಿಲ್ಲ.  ಕಣ್ಣೋಟಕ್ಕೆ ಈ ಐದು ಮೌಲ್ಯಗಳು ಮೂರೂ ತಲೆಮಾರಿನವರು ತಮ್ಮ ಅನುಕೂಲತೆಗೆ ಅಳವಡಿಸಿಕೊಂಡ ವ್ಯಾವಹಾರಿಕ ಪರಿಪಾಠಗಳಂತೆ ಕಾಣಬಹುದು.  ಆದರೆ ಇವು ಕೇವಲ ಪರಿಪಾಠವಾಗದೆ ಪ್ರತಿಯೊಂದು ತಲೆಮಾರಿನಲ್ಲೂ ಒಂದೇ ಅರ್ಥ ಕೊಡುವಂತ ಪರಿಕಲ್ಪನೆಯಲ್ಲಿ ಬೆಳೆದ ಮೌಲ್ಯಗಳು.  ನಮ್ಮ ತಂದೆತಾಯಿಗಳು ತಮ್ಮಲ್ಲಿದ್ದ ದೇವರ ನಂಬಿಕೆಯನ್ನು ಬೇರೆ ರೀತಿಯಲ್ಲಿ ಪರಿಪಾಲಿಸಿದರೂ, ಅಗೋಚರನೊಬ್ಬನಿದ್ದಾನೆ ಎನ್ನುವ ಪರಿಕಲ್ಪನೆಯನ್ನು  ನಾನು ಕೂಡ ಹಂಚಿಕೊಂಡು ನನ್ನ ಮಕ್ಕಳಲ್ಲೂ ಅಂಥಹುದೇ ಒಂದು ಗ್ರಹಿಕೆ ಇದೆಯೆಂದಾಗ, ಅದು ತಾತ್ವಿಕ ಮೌಲ್ಯವೇ ಹೊರತು ಪರಿಪಾಠವಲ್ಲ.  ಅದೇ ಅಳತೆಗೋಲಲ್ಲಿ ಮಿಕ್ಕ ನಾಲ್ಕು ಮೌಲ್ಯಗಳನ್ನು ವಿವರಿಸಿದಾಗಲೂ ಬೆಳಕಿಗೆ ಬರುವ ಸಂಗತಿಯೆಂದರೆ ಮೂರೂ ತಲೆಮಾರಿನಲ್ಲಿ ಕೂಡ ಇವುಗಳ ಅಂತರಾರ್ಥ ನಿರೂಪಣೆ ಒಂದೇ ರೀತಿಯದಾಗಿದೆ. ಆದರೆ ಅವುಗಳನ್ನು ಕಾರ್ಯರೂಪಕ್ಕೆ ತರುವ ಮಾರ್ಗಗಳು ಬೇರೆಯಾದ್ದರಿಂದ ಇಲ್ಲಿ ಕೆಲವು ಉದಾಹರಣೆಗಳು ಸೂಕ್ತವಾಗಿವೆ:

2.1.1 ದೇವರಲ್ಲಿ ನಂಬಿಕೆ:  ನನ್ನ ತಂದೆತಾಯಿಗಳಿಗೆ ಈ ಮೌಲ್ಯದ ಒಳಮರ್ಮವಿಷ್ಟೇ -- ದೇವರಲ್ಲಿ ನಂಬಿಕೆ ಇಟ್ಟ ಮಾನವ ಎಂದೂ  ದುರ್ಮಾರ್ಗಿಯಾಗುವುದಿಲ್ಲ ಎನ್ನುವುದು. ವೇದಪಾಠ, ಮಂತ್ರೋಚ್ಚಾರ, ಮಡಿ ಮೈಲಿಗೆಯಲ್ಲಿ ಮಾಡುವ ವ್ರತಗಳು, ಶ್ರಾದ್ಧಾ, ಬಡವರಿಗೆ ಮತ್ತು ಬ್ರಾಹ್ಮಣರಿಗೆ ದಾನ ಮಾಡುವುದು, ದೇವಸ್ಥಾನಗಳಿಗೆ ಭೇಟಿ, ಕಾಣಿಕೆ ಸಲ್ಲಿಸುವುದು, ಪವಿತ್ರಸ್ಥಾನಗಳಿಗೆ ತೀರ್ಥಯಾತ್ರೆ, ಶಾಂತಿಯುತ ಜೀವನ ಹೀಗೆ ಹಲವಾರು ಮಾರ್ಗದಲ್ಲಿ ತಮ್ಮ ನಂಬಿಕೆಯನ್ನು ವ್ಯಕ್ತಪಡಿಸಿ ಈ ಮೌಲ್ಯವನ್ನು ಪರಿಪಾಲಿಸುತ್ತಿದ್ದರು. ಶಾಂತಿ ಮತ್ತು ಧಾರ್ಮಿಕ ಸಂಪ್ರದಾಯಗಳೇ ಅವರ ವ್ಯಕ್ತಿಗತ ನಿರೂಪಣೆಯಾಗಿತ್ತು. 
ನನ್ನ ಮತ್ತು ನನ್ನ ಶ್ರೀಮತಿಯ ದೃಷ್ಟಿಕೋನದಲ್ಲಿ ದೇವರಲ್ಲಿ ನಂಬಿಕೆ ಎಂದರೆ ಆ ಅಗೋಚರನಿಲ್ಲದೆ ಎಲ್ಲವು ಕ್ರಿಯಾಹೀನವಾದ್ದರಿಂದ ಆ ಚೈತನ್ಯದಲ್ಲಿ ಸದಾ ನಂಬಿಕೆಯಿಟ್ಟು ಬಾಳಬೇಕು ಎನ್ನುವುದು.  ಪರಿಪಾಲಿಸುವ ಮಾರ್ಗ ಹಲವಾರು ಸಂಪ್ರದಾಯಗಳ  ಜೊತೆಗೂಡಿ ಖಾಸಗಿ ಅಭಿರುಚಿಗಳನ್ನು, ಅಮೆರಿಕದ ಜೀವನ ಶೈಲಿಗೆ ಅನುಷ್ಠಾನ ಮಾಡಿಕೊಂಡಿದ್ದೇವೆ.  ಧಾರ್ಮಿಕ ಸಂಪ್ರದಾಯಗಳಿಗೆ ನಮ್ಮ ಹಿಂದಿನ ತಲೆಮಾರಿನವರಂತೆ ಪ್ರಾಮುಖ್ಯತೆ ಕೊಡಲು ಇಚ್ಛೆಯಿದ್ದರೂ ಕಾರ್ಯರೂಪಕ್ಕೆ ತರಲು ಅಡಚಣೆಗಳೇ ಹೆಚ್ಚು.
ನನ್ನ ಮುಂದಿನ ತಲೆಮಾರಿನ ಹೆಣ್ಣು ಮಕ್ಕಳಿಬ್ಬರಿಗೆ ದೇವರಲ್ಲಿ ವೈಯುಕ್ತಿಕ ನಂಬಿಕೆಗಿಂತ ಸಮಾಜದಲ್ಲಿ ಸರಿ ತಪ್ಪುಗಳ ಎಲ್ಲೆ ಗುರುತಿಸಲು ಮತ್ತು ನಮ್ಮ ಸಂಸ್ಕೃತಿಯಲ್ಲಿ ಭಾಗವಹಿಸಲು ಸಹಾಯವಾಗಿದೆ ಈ ಮೌಲ್ಯ.  ಅವುಗಳನ್ನು ತಮ್ಮದೇ ಆದ ಮತಾಚರಣೆಗಳಲ್ಲಿ ರೂಢಿಸಿಕೊಳ್ಳಲು ಇನ್ನು ಸಾಧ್ಯವಾಗಿಲ್ಲ ಮತ್ತು ಆಗುವ ಸಾಧ್ಯತೆ ಅಮೇರಿಕದ ಸಂಸ್ಕೃತಿಯಲ್ಲಿ ಕ್ಷೀಣಿಸುತ್ತಿದೆ.   

2.2.1 ಮಿತವ್ಯಯ:  ಮೂವತ್ತರ ಶತಕದ ಬ್ರಿಟಿಷ್ ರಾಜ್ಯದಲ್ಲಿ ಹೆಚ್ಚಿನ ಭಾರತೀಯರು ಬಡತನದಲ್ಲೇ ಜೀವನ ನಡೆಸಿದ ಕಾಲ.  ಆದರೆ ಅದಕ್ಕೂ ಮುಂಚೆ ಹಿಂದೂ ಸಮಾಜದಲ್ಲಿ ಮಿತವ್ಯಯ ಮತ್ತು ಸಂಪನ್ಮೂಲಗಳನ್ನು ದುಂದು ಮಾಡದಿರುವ ನಿಯಮಗಳನ್ನು ನನ್ನ ಅಜ್ಜಂದಿರು ಕೂಡ ಪಾಲಿಸುತ್ತಿದ್ದರು.  ನನ್ನ ತಂದೆ ತಾಯಿ ಕೂಡ ಮಧ್ಯಮವರ್ಗದಲ್ಲೇ ಬೆಳದ ಕಾರಣ ವೃಥಾ  ಖರ್ಚು ಮತ್ತು ಪರಿಸರಕ್ಕೆ ಹಾನಿಯಾಗುವಂತ ಯಾವುದೇ ಕೆಲಸಗಳನ್ನು ಮಾಡಕೂಡದೆಂಬ ಹೆಮ್ಮೆಯ ಮೌಲ್ಯಗಳನ್ನು ತಮ್ಮದಾಗಿಸಿಕೊಂಡಿದ್ದರು. ನಾವು ಬೆಳೆಯುವಾಗ ಅದೇ ವಿಚಾರಧಾರೆ ಮತ್ತು ರೂಡಿಯಾಗಿಸಿಕೊಂಡ ಈ ಮೌಲ್ಯಗಳನ್ನು ಅಮೆರಿಕದಂತ ಸಂಪನ್ಮೂಲ ದೇಶಕ್ಕೆ ವಲಸೆ ಬಂದರೂ ಪರಿಪಾಲಿಸಲು ನಮಗೆ ಕಷ್ಟವಾಗಲಿಲ್ಲ. ಬಿಗಿಮುಷ್ಟಿಯ ಜೊತೆಗೆ ಪರಿಸರವಾದಿ ತತ್ವಗಳನ್ನು ನಮ್ಮದಾಗಿಸಿಕೊಂಡು ನಮ್ಮ ಮುಂದಿನ ಜನಾಂಗಕ್ಕೂ ಒಗ್ಗುವಂತೆ ಅಳವಡಿಸಿಕೊಂಡಿದ್ದೇವೆ.  ಮಿತವ್ಯಯಕ್ಕಿಂತ ಹೆಚ್ಚಾಗಿ ನಮ್ಮ ಮುಂದಿನ ಪೀಳಿಗೆ ಗಾಳಿ, ನೀರು, ಗಿಡಮರ, ಮತ್ತು ವನ್ಯಮೃಗಗಳ ಬಗ್ಗೆ ಕಾಳಜಿ ತೋರಿಸುವುದನ್ನು ಅರಿತಾಗ ಈ ಮೌಲ್ಯ ಅಚ್ಚಳಿಯದೆ ಉಳಿದಿದೆ ಎಂದು ಹೇಳಬಹುದು.  

2.3.1 ಕುಟುಂಬದ ಐಕ್ಯತೆ:  ನಮ್ಮ ಹಿಂದಿನ ತಲೆಮಾರಿಗೆ ಅವಿಭಕ್ತ ಕುಟುಂಬದ ಜೀವನ ಶೈಲಿ ಕರಗತವಾಗಿತ್ತು.  ದೊಡ್ಡ ಕುಟುಂಬದ ಹೊಂದಾಣಿಕೆಯಲಿ ಕಲಿತ ಬಾಳಿನ ಶಿಕ್ಷಣವೇ ನಮ್ಮ ಹಿರಿಯರಿಗೆ ದಾರಿದೀಪವಾಗಿತ್ತು.  ಅವಿಭಕ್ತ ಕುಟುಂಬ ಮುಂದುವರಿಸಲು ಇಚ್ಛೆಯಿದ್ದರೂ, ನನ್ನ ತಂದೆ ಸರ್ಕಾರೀ ಕೆಲಸ ಮಾಡುತ್ತಿದ್ದ ಕಾರಣ ವರ್ಗಾವಣೆಗಳಾಗಿ ಒಂದೇ ಊರಿನಲ್ಲಿ ಇರಲು ಅವರಿಗೆ ಸಾಧ್ಯವಾಗಲಿಲ್ಲ.  ಆದರೆ ತಮ್ಮದೇ ಹನ್ನೊಂದು ಮಕ್ಕಳ ಸಂಸಾರವನ್ನು ನಿರ್ವಹಿಸಿದ್ದರಿಂದ ನನ್ನ ತಂದೆತಾಯಿಗೆ ಕುಟುಂಬದ ಐಕ್ಯತೆ ಎನ್ನುವುದು ಮಹತ್ತರ ಉದ್ದಿಶ್ಯವಾಗಿತ್ತು.  ಅಂತಹ ಹತ್ತು ಮಂದಿ ಒಡಹುಟ್ಟಿದವರ ಸನ್ನಿವೇಶದಲ್ಲಿ ನನ್ನ ಬಾಲ್ಯ ಕಳೆದದ್ದಿರರಿಂದ ಅರಿವಿಲ್ಲದೆಯೇ ಈ ಮೌಲ್ಯವನ್ನು ನಾನೂ ಅಳವಡಿಸಿಕೊಂಡಿದ್ದೆ.  ಆದಾಗ್ಯೂ, ಎಂಬತ್ತರ ಶತಕದಲ್ಲಾಗುತ್ತಿದ್ದ ‘ಸ್ವಂತ ಸಾಧನೆಗಳೇ ಮುಖ್ಯ’ ಎನ್ನುವ ಸಾಮಾಜಿಕ ಒತ್ತಡ ಮತ್ತು ಕಟ್ಟಳೆಗೊಳಪಡದ ನಿಲುವುಗಳನ್ನು ಕೂಡ ನನ್ನದಾಗಿಸಿಕೊಂಡಿದ್ದೆ.  ಆದರೆ ಇಪ್ಪತ್ತನೇ ಶತಮಾನದ ರೂಪವೈಶಿಷ್ಟ್ಯದಲ್ಲಿ ಅವಿಭಕ್ತ ಕುಟುಂಬಗಳು ಕಣ್ಮರೆಯಾದದ್ದನ್ನು ನೋಡಿದ್ದ ನನಗೆ, ಅಮೆರಿಕದಲ್ಲಿ ನನ್ನದೇ ಪುಟ್ಟದೊಂದು ಘಟಕ ಸಂಸಾರ ನನ್ನ ಕೇಂದ್ರ ಬಿಂದು ಆಗುವುದೆಂದು ಎಣಿಸಿರಲಿಲ್ಲ.  ನಾಲ್ಕೇ ಜನರಿರುವ ಈ ಕುಟುಂಬದ ಐಕ್ಯತೆಯ ವಾಸ್ತವಾಂಶ ಬದಲಾಯಿತೇ ಹೊರತು ಅದನ್ನು ಪರಿಪಾಲಿಸುವ ನಿಯಮಗಳು ಬದಲಾಗಲಿಲ್ಲ.  ವೈಯುಕ್ತಿಕತೆಗೆ ಹೆಚ್ಚು ಪ್ರಾಮುಖ್ಯ ಕೊಡುವ ಅಮೆರಿಕದಲ್ಲಿ ಬೆಳೆದ ನನ್ನ ಮಕ್ಕಳ ಮನೋಭಾವ ವಿಭಿನ್ನವಾದರೂ ಅವರ ಚಿಂತನೆಯ ಹಿಂದೆ ಅದೇ ಹಳೇ ಆಧಾರತತ್ವದ ಅಡಿಪಾಯವಿದೆ ಎಂದು ಹೇಳುವುದು ಕಷ್ಟ.  ಏಕೆಂದರೆ , ಮೊದಲನೆಯದಾಗಿ, ಅಮೆರಿಕದಲ್ಲಿ ಬೆಳೆದ ಮಕ್ಕಳು ಚಿಕ್ಕ ವಯಸ್ಸಿನ್ನಲ್ಲೇ ಹೈಸ್ಕೂಲ್ ಮುಗಿಸಿ, ದೂರದ ಕಾಲೇಜ್ ಸೇರಿ, ನಂತರ ಮತ್ತೆಲ್ಲೋ ಕೆಲಸಕ್ಕೆ ಸೇರಿ ತಮ್ಮ ಗೂಡಿಗೆ ಮರಳಿ ಬರುವುದೇ ಇಲ್ಲ.  ಎರಡನೆಯದಾಗಿ, ಅವಿಭಕ್ತ ಕುಟುಂಬದ ಮಾದರಿಯಂತೆ ಜೀವನ ನೆಡಸಲು ಎಲ್ಲ ತರಹದ ಸಹಾಯ ಸಿಗದ ಕಾರಣ ಮತ್ತು, ತಮ್ಮ ಸ್ವಂತ ಸಾಧನೆಯಿಂದಲೇ ಮುಂದೆ ಬರಬೇಕೆಂಬ ನಿಯಮವನ್ನು ಪಾಲಿಸುವುದರಿಂದ, ಕುಟುಂಬದ ಐಕ್ಯತೆಯ ಬಗ್ಗೆ ಗಮನ ಹರಿಸುವುದಿಲ್ಲ.
     
2.4.1 ವಿದ್ಯಾಭ್ಯಾಸ ಮತ್ತು ಶಿಸ್ತು:  ವಿದ್ಯೆಯಿಲ್ಲದ ಮಾನವ, ಮಾನವ ಹೇಗಾದನು ಎನ್ನುವ ಧೋರಣೆಯನ್ನು ಬೆಳಸಿಕೊಂಡಂತ ಕುಟುಂಬ ನನ್ನ ತಂದೆ ತಾಯಿಗಳದು.  ಬಡತನದಲ್ಲೇ ಬೆಳೆದರೂ, ಬ್ರಿಟಿಷ್ ಸಾಮ್ರಾಜ್ಯದಲ್ಲಿ ಅವರಿಗೆ ಸಿಕ್ಕಂತ ಅವಕಾಶಗಳನ್ನು ಉಪಯೋಗಿಸಿಕೊಂಡು ನನ್ನ ತಂದೆ ಆಗಿನ ವೈದ್ಯಕೀಯ ಪದವಿ ಪಡೆದು ತಮ್ಮ ಮುಂದಿನ ಪೀಳಿಗೆಯ ವಿದ್ಯಾರ್ಜನೆ ಮತ್ತು ಶಿಸ್ತಿನ ಜೀವನಕ್ಕೆ ಅಡಿಗಲ್ಲು ಹಾಕಿದ್ದರು.  ಪ್ರಗತಿಪರ ಜೀವನ ಶೈಲಿಗೆ ಮತ್ತು ಬಡತನದಿಂದ ಬಿಡುಗಡೆಗೆ ವಿದ್ಯಾಭ್ಯಾಸ ಮತ್ತು ಶಿಸ್ತು ಮುಖ್ಯ ಎನ್ನುವುದೇ ಈ ಮೌಲ್ಯದ ಹಿಂದಿರುವ ತತ್ವ.  ಅಂತಹ ಮೌಲ್ಯವನ್ನು ಕರಗತ ಮಾಡಿಕೊಂಡ ನನ್ನ ಒಡಹುಟ್ಟಿದ ಹತ್ತೂ ಜನ ಪದವೀಧರರಾಗಿ ಆರ್ಥಿಕ ಉನ್ನತಿ ಗಳಿಸಿರುವುದರಿಂದ ಇದರಲ್ಲಿ ನಾವು ಸತ್ಯತೆಯನ್ನೇ ಕಾಣಬಹುದು. ಭಾರತದಲ್ಲಿ ಇಂಜಿನಿಯರಿಂಗ್ ಮುಗಿಸಿ ನಾನು ಮತ್ತು ನನ್ನ ಶ್ರೀಮತಿ ಅಮೆರಿಕಾಗೆ ವಲಸೆ ಬಂದದ್ದೇ ಉನ್ನತ ಶಿಕ್ಷಣಕ್ಕಾಗಿ ಎನ್ನುವುದರ ಹಿನ್ನಲೆಯಲ್ಲಿ ಈ ಮೌಲ್ಯದ ಮಹತ್ತರ ಪ್ರಭಾವ ಅರಿವಾಗುತ್ತದೆ.  ಹಾಗಾಗಿ, ತಲಾಂತರಗಳಿಂದ ಜಿನುಗುತ್ತಿರುವ ಈ ಮೌಲ್ಯವನ್ನು ನನ್ನ ಮಕ್ಕಳೂ ಕೂಡ ಸ್ವೀಕರಿಸಿ ಅಮೆರಿಕದಲ್ಲಿ ವಿದ್ಯಾಭ್ಯಾಸ ಮತ್ತು ಶಿಸ್ತಿಗೆ ಮನ್ನಣೆ ಕೊಟ್ಟಿದ್ದಾರೆ.      

2.5.1 ಅಹಿಂಸೆ ಮತ್ತು  ಆಹಾರ ಪದ್ದತಿ:  ಜಗತ್ತಿನ ಎಲ್ಲ ಜೀವಿಗಳೂ ದೈವದತ್ತ ಕೊಡುಗೆಯಾದ್ದರಿಂದ ಅವುಗಳನ್ನು ಕೊಲ್ಲುವ ಹಕ್ಕು ಯಾರಿಗೂ ಇಲ್ಲ ಮತ್ತು ನಮ್ಮ ಆಹಾರಕ್ಕಾಗಿ ಅಮಾಯಕ ಪ್ರಾಣಿಗಳನ್ನು ಕೊಲ್ಲಬೇಕಿಲ್ಲ ಎನ್ನುವುದು ಒಂದು ಉದಾತ್ತಭಾವ.  ಅದನ್ನು ನಮ್ಮ ಹಿರಿಯರು ಪ್ರಕೃತಿಜನ್ಯ ನಿಯಮವಾಗಿ ಪಾಲಿಸಿದ್ದಲದೆ, ಅಹಿಂಸೆ ಮತ್ತು ಶಾಕಾಹಾರದ ನಿಬಂಧನೆಗಳನ್ನು ನಮ್ಮ ತಲೆಮಾರಿಗೆ ವರ್ಗಾಯಿಸುವುದರಲ್ಲಿ ಯಶಸ್ವಿಯಾಗಿದ್ದರು. ಸಮಾಜದಲ್ಲಾಗುತ್ತಿದ್ದ ಒತ್ತಡಗಳಿಗೆ ಮಣಿಯದೆ ನಾವೂ ಕೂಡ ಈ ತತ್ವವನ್ನು ದಿನನಿತ್ಯದ ಸಂಗತಿಯಾಗಿ ಪರಿಪಾಲಿಸುತ್ತಿದ್ದೇವೆ.  ಅಮೆರಿಕದ ಮಾಂಸಹಾರಿ ಸಮಾಜದ ಒತ್ತಡದಲ್ಲಿ ಶಾಕಾಹಾರಿ ಪದ್ದತಿಯನ್ನು ಉಳಿಸಿಕೊಳ್ಳುವುದು ಪ್ರಯಾಸವೆನಿಸಿದರು, ನಮ್ಮದೇ ಆದ ವಿಜಯಗಳಿಸಿದ್ದೇವೆ. ಆದರೆ ನಮ್ಮ ಮುಂದಿನ ಪೀಳಿಗೆ ಈ ಒತ್ತಡಕ್ಕೆ ಶರಣಾಗಲಾರದು ಎನ್ನುವ ಭರವಸೆಯನ್ನು ಉಳಿಸಿಕೊಂಡಿದ್ದೇವೆ.     

ತಾತ್ವಿಕ ಮೌಲ್ಯಗಳನ್ನು ಮತ್ತು ಅವುಗಳನ್ನು ಪರಿಪಾಲಿಸುವ ನಿಯಮಗಳನ್ನು ಮೇಲಿನ ಸಾಲುಗಳಲ್ಲಿ ಕೇಂದ್ರಬಿಂದುವಾಗಿ ಇಟ್ಟುಕೊಂಡು ವಿಶ್ಲೇಷಣೆ ಮಾಡಿದೆವು.  ಇನ್ನು ಮುಂದೆ ಪರಸಂಸ್ಕೃತಿಯ ಪ್ರಭಾವಗಳಿಂದ ಮೌಲ್ಯಗಳಲ್ಲಾದ ಬದಲಾವಣೆಗಳತ್ತ ಗಮನ ಹರಿಸೋಣ. 

3.0.0  ಮೌಲ್ಯಗಳ ಬದಲಾವಣೆ

ಎಂಬತ್ತು ವರ್ಷಗಳ ದೀರ್ಘಾವದಿಯಲ್ಲಿ ಮಾನವನಿರ್ಮಿತ ಮೌಲ್ಯಗಳು ಬದಲಾವಣೆ ಆಗುವುದು ಅನಿವಾರ್ಯ.  ಆದರೆ ನಾನು ಈ ಲೇಖನಕ್ಕೆ ಪೂರ್ವ ಸಿದ್ಧಾಂತವೆಂದು ವಿವರಣೆ ಕೊಡುವಾಗ ಈ ತಾತ್ವಿಕ ಮೌಲ್ಯಗಳು ಮೂರೂ ತಲೆಮಾರಿನಲ್ಲಿ ಒಂದೇ ಅರ್ಥದಲ್ಲಿ ಪರಿಕಲ್ಪನೆಗೊಂಡ ಮೌಲ್ಯಗಳೆಂದು ವಿವರಿಸಿದ್ದೆ.  ಹಾಗಾದರೆ ಈ ಮೌಲ್ಯಗಳು ಪರಿವರ್ತನೆಗೊಳ್ಳಬಹುದೇ ಹೊರತು ಸಂಪೂರ್ಣ ಬದಲಾವಣೆಗೊಳ್ಳಲು ಸಾಧ್ಯವಿಲ್ಲವೆಂದಾಯಿತು.  ಈ ಅನಿಸಿಕೆಯಲ್ಲಿ ನಾವು  ಬದಲಾಗುತ್ತಿರುವ ಸಂಸ್ಕೃತಿ, ಆರ್ಥಿಕ ಪರಿಸ್ಥಿತಿ, ರಾಜಕೀಯ ಮತ್ತು ತಾಂತ್ರಿಕ ಪರಿಸ್ಥಿತಿಗಳನ್ನು ಬೇರೆ ಬೇರೆ ಸನ್ನಿವೇಶಗಳಿಗೆ ಹೋಲಿಸಿ ಮಾರ್ಪಾಡಾಗದ ಮೌಲ್ಯಗಳೆ ಹೆಚ್ಚೆಂದು ಪಕ್ಷಪಾತ ತೋರಬಹದು.  ಆದರೆ ನಿಜಾಂಶ ಸ್ವಲ್ಪ ಬೇರೆಯೇ ಆಗಿರುತ್ತದೆ.  ಏಕೆಂದರೆ ಪರಸಂಸ್ಕೃತಿಯನ್ನು ಸ್ವೀಕಾರ ಮಾಡಿದಾಗ ಅಥವಾ ಪರಸಂಸ್ಕೃತಿಯ ಒತ್ತಡಕ್ಕೊಳಗಾದಾಗ ಅದನ್ನು ಅನುಸರಿಸದಿದ್ದರೆ ಅನಿವಾರ್ಯವಾಗಿ ಪ್ರತ್ಯೇಕತೆಯ ಅನುಭವ ಮತ್ತು ಏನೋ ಕಳೆದುಕೊಳ್ಳುತ್ತಿದ್ದೀವೆಂಬ ಭಾವನೆ ಹುಟ್ಟುತ್ತದೆ.  ಜೊತೆಗೆ ಮಧ್ಯಪಾನ, ಸಿಗರೇಟ್, ಮಾಂಸಾಹಾರ, ಮತ್ತಿತರ ಕೆಟ್ಟ ಚಟಗಳಲ್ಲಿ ಉತ್ತೇಜನ ಸಿಗಬಹುದು.  ಉಡುಗೆತೊಡುಗೆಗಳಲ್ಲಿ, ಆಹಾರ ಪದ್ದತಿಯಲ್ಲಿ, ಇತರ ಗುಂಪುಗಳೊಡನೆ ಹೊಂದಿಕೆಯಲ್ಲಿ, ಭಾಷೆಯಲ್ಲಿ ಮತ್ತು ಹಲವಾರು ನಿರ್ಬಂಧಿತ ವಿಷಯಗಳಲ್ಲಿ, ಈ ಪ್ರತ್ಯೇಕತೆಯ ಭಯ ಗಾಢವಾಗಿ ಪ್ರಕಟಗೊಳ್ಳುವುದು.  ಜೊತೆಗೆ ವಿಶ್ವವ್ಯಾಪಕ ಘಟನೆಗಳು ಸ್ಥಳೀಯ ಬದಲಾವಣೆಗಳಿಗೆ ಪ್ರೇರಕವಾಗಬಹುದು. ಉದಾಹರಣೆಗೆ ಎರಡನೇ ವಿಶ್ವಯುದ್ಧದ ಸಮಯದಲ್ಲಿ ತಲೆದೋರಿದ ಆಹಾರದ ಅಭಾವದಿಂದಾಗಿ ಮಿತವ್ಯಯ ನಮ್ಮ ತಂದೆ ತಾಯಿ ಕಾಲಕ್ಕೆ ತಾತ್ವಿಕ ಮೌಲ್ಯವಾಗಿ ಬೆಳೆಯಿತು.  ಪರಸಂಸ್ಕೃತಿಯ ತೀರ್ವ ಒತ್ತಡದಲ್ಲಿ ಮತಾಚರಣೆಗಳು ಬಹು ಬೇಗ ಯಜ್ಞಪಶುಗಳಾಗಿಬಿಡುತ್ತವೆ.  ಹಾಗಾಗಿ, ಯಾವ ಮತಾಚರಣೆಗಳನ್ನು ತಾತ್ವಿಕ ಮೌಲ್ಯದ ಸಂಕೇತವಾಗಿ ಅನುಸರಿಸುತ್ತದ್ದರೋ ಅವುಗಳೂ ಕೂಡ ಇಲ್ಲದಂತಾಗುತ್ತವೆ.  ಕುಟುಂಬದ ಚೌಕಟ್ಟಿನೊಳಗೆ ಯಾವುದು ಮುಖ್ಯ ಎನ್ನುವ ಹೊಸ ಗ್ರಹಿಕೆ, ಹಳೆ ನಿಯಮಗಳನ್ನು ಸಡಿಲಗೊಳಿಸುತ್ತವೆ.  ನನ್ನ ತಂದೆ ತಾಯಿಗಳ ಸನ್ನಿವೇಶದಲ್ಲಿ ಹೇಳುವುದಾದರೆ, ದೇವರಲ್ಲಿ ಇರಬೇಕಾದ ನಂಬಿಕೆಗೂ ವರ್ಷಕ್ಕೊಮ್ಮೆ ಕುಲದೇವತೆಯನ್ನು ನೋಡಲು ನಂಜನಗೂಡಿಗೆ ಹೋಗಲೇಬೇಕೆಂಬ ನಿಯಮದ ಕುಣಿಕೆ ಸಡಿಲಗೊಂಡಿತ್ತು. ನಮ್ಮ ತಂದೆಗಾದರೋ ಇದೊಂದು ಬ್ರಿಟಿಷ್ ಸರ್ಕಾರದ ಬಿಡುವಿಲ್ಲದ ವೈದ್ಯಕೀಯ ವೃತ್ತಿಯಲ್ಲಿ ತಾವು ಕುಶಾಗ್ರಮತಿಯಿಂದ ಮಾಡಿಕೊಂಡ ಪರಿವರ್ತನೆಯೇ ಹೊರತು ಸಂಪೂರ್ಣ ಬದಲಾವಣೆಯಲ್ಲ.   ಹೊಸ ಬಟ್ಟೆಯಂತೆ ಸಂಪ್ರದಾಯಗಳನ್ನು ಅದಲು ಬದಲು ಮಾಡಿಕೊಳ್ಳುವ ಉತ್ತಮ ನಿದರ್ಶನ ಭಾರತದ ಸ್ವಾತಂತ್ರ್ಯದ ನಂತರ ಕಾಣಬಹುದು.  ಯಾವ ಸಂಪ್ರದಾಯಗಳನ್ನು ಬ್ರಿಟಿಷ್ ಸಾಮ್ರಾಜ್ಯದಲ್ಲಿ ಅನುಸರಿಸಲು ಸಾಧ್ಯವಿರಲಿಲ್ಲವೋ ಅಂತಹ ಸಂಪ್ರದಾಯಗಳನ್ನು ಸ್ವಾತಂತ್ರ್ಯ ನಂತರ ನನ್ನ ತಂದೆ ತಾಯಿ ಮತ್ತೆ ಕಾರ್ಯರೂಪಕ್ಕೆ ತಂದರು. ಮಿಕ್ಕೆಲ್ಲ ಧಾರ್ಮಿಕ ಸಂಪ್ರದಾಯಗಳು ಕೂಡ ಒಂದಾದ ನಂತರ ಮತ್ತೊಂದು ರೀತಿಯಲ್ಲಿ ಪರಿವರ್ತನೆಗೊಂಡರೂ ದೇವರಲ್ಲಿದ್ದ ನಂಬಿಕೆ ಬಿಡಲಿಲ್ಲ.  ಅಂದರೆ ಏಕಮಾತ್ರವಾಗಿ ಸಂಪ್ರದಾಯಗಳು ತಾತ್ವಿಕ ಮೌಲ್ಯದ ಮೇಲೆ ಪರಿಣಾಮ ಬೀರಲಿಲ್ಲ ಎಂದಾಯಿತು.
ನನ್ನ ಸನ್ನಿವೇಶದಲ್ಲಿ, ಅಮೆರಿಕಗೆ ವಲಸೆ ಬಂದ ಹೊಸತರಲ್ಲಿದ್ದ ತೀವ್ರ ಒತ್ತಡವಿದ್ದದ್ದು --ಅಮೆರಿಕನ್ನರನ್ನು ಅನುಸರಿಸದಿದ್ದರೆ ಸಮರೂಪಿ ಜೀವನ ಶೈಲಿ ಸಾಧ್ಯವಿಲ್ಲ, ಆದ್ದರಿಂದ ಏಳಿಗೆ ಸಾಧ್ಯವಿಲ್ಲ -- ಎನ್ನುವ ನಿರಾಧಾರವಾದ ಅಭಿಪ್ರಾಯ.  ವರ್ಷಗಳು ಕಳೆದಂತೆ, ನಮ್ಮ ಹಿರಿಯರಿಂದ ಗಳಿಸಿದ ತಾತ್ವಿಕ ಮೌಲ್ಯಗಳನ್ನು ಯಾವ ಬದಲಾವಣೆಯಿಲ್ಲದೆ ಅಮೆರಿಕದಲ್ಲೂ ಪರಿಪಾಲಿಸಬಹುದೆಂಬ ವಿಶ್ವಾಸ ಮೂಡಿತ್ತು ಮತ್ತು ಅವುಗಳು ತ್ರಿಕಾಲಕ್ಕೂ (ನೆನ್ನೆ, ಇಂದು, ನಾಳೆಗೂ) ಅನ್ವಯಿಸುವ ಮೌಲ್ಯಗಳೆಂಬ ಮನವರಿಕೆಯಾಗಲು ಹೆಚ್ಚು ಸಮಯ ಬೇಕಾಗಲಿಲ್ಲ.  ಪರಸಂಸ್ಕೃತಿಯ ವ್ಯವಹಾರಿಕತೆಯನ್ನು ಅಳವಡಿಸಿಕೊಳ್ಳಲು ನಮ್ಮ ತಾತ್ವಿಕ ಮೌಲ್ಯಗಳನ್ನು ಬಿಕರಿ ಮಾಡಬೇಕಿಲ್ಲ.  ಆದರೆ ಆ ತಾತ್ವಿಕ ಮೌಲ್ಯದ ಚೌಕಟ್ಟಿನೊಳಗೆ ನಮಗೆ ಸಮ್ಮತಿಸಿದ ಪರಿವರ್ತನೆಗಳನ್ನು ಮಾಡಿಕೊಳ್ಳಲೇ ಬೇಕಾಗುತ್ತದೆ, ಸಂಪೂರ್ಣ ಬದಲಾವಣೆಗಳನ್ನಲ್ಲ.   ಬೇರೆ ಪರಸಂಸ್ಕೃತಿಗಳಿಗೆ ಹೋಲಿಸಿದರೆ ಅಮೆರಿಕದಲ್ಲಿ ನಮ್ಮದೇ ಮತಾಚರಣೆಗಳನ್ನು ಮತ್ತು ಸಂಪ್ರದಾಯಗಳನ್ನು ವೈಯುಕ್ತಿಕ ಮತ್ತು ಸಮಾಜದ ಎರಡೂ ಅಂತಸ್ತಿನಲ್ಲಿ ಅಳವಡಿಸಿಕೊಳ್ಳಲು ಅವಕಾಶ ಸಿಗುತ್ತದೆ.  ಎಲ್ಲಿಯವರೆಗೆ ವಲಸಿಗರು ಉದಾತ್ತವಾದ ಸಾರ್ವತ್ರಿಕ ಮೌಲ್ಯಗಳನ್ನು ಅನುಕರಿಸುವರೋ ಅಲ್ಲಿಯವರೆಗೂ ಹೊಂದಾಣಿಕೆಯ ಸಂಘರ್ಷಣೆ ಬರುವುದಿಲ್ಲ.  ಮೇಲೆ ವಿವರಿಸಿದ ಐದು ತಾತ್ವಿಕ ಮೌಲ್ಯಗಳನ್ನು ತೋರಿಕೆಯ ಹೊರನೋಟಕ್ಕಾಗಿ ಆಚರಿಸಿದೆ ಆಂತರಿಕ ಪ್ರಮಾಣದಲ್ಲಿ ಅನುಸರಿಸುತ್ತಿದ್ದೇವೆ.  ಆದ ಕಾರಣ, ಅಮೆರಿಕದ ಸಂಸ್ಕೃತಿಯ ಪ್ರಭಾವ ನಮ್ಮ ಪೀಳಿಗೆಯಲ್ಲಿ ಕಡಿಮೆ.  ಆದರೆ ಅಮೆರಿಕದಲ್ಲೇ ಹುಟ್ಟಿ ಬೆಳೆದ ನನ್ನ ಮಕ್ಕಳಿಗೆ ಬೇರಾವ ಸಂಸ್ಕೃತಿಯ ವೈಯುಕ್ತಿಕ ಅನುಭವವಿಲ್ಲದ ಕಾರಣ ತಲೆಮರೆಸಿಕೊಂಡಿರುವ ಒಳ್ಳೆಯ ಅಥವಾ ಕೆಟ್ಟ ಪ್ರಭಾವನ್ನು ನಮ್ಮ ದೃಷ್ಟಿಕೋನದಿಂದ ಅರ್ಥ ಮಾಡಿಕೊಳ್ಳುವುದು ಒಂದು ನಿಜವಾದ ಸವಾಲು.   

3.1.0 ಸೃಜಿಸಿದ ಮೌಲ್ಯಗಳು:  ಕೆಲವೊಮ್ಮೆ ಪರಸಂಸ್ಕೃತಿಯೇ ಹೊಸ ಪರಿಕಲ್ಪನೆಗೆ ಕಾರಣವಾಗಿ, ಅವುಗಳಲ್ಲಿ ಯಾವುದನ್ನು ಹೊಸ ಸನ್ನಿವೇಶಗಲ್ಲಿ ಅಳವಡಿಸಿಕೊಂಡಾಗ ನಮ್ಮ ಮೌಲ್ಯಗಳಿಗೆ ಹೆಚ್ಚಿನ ಸ್ಪಷ್ಟತೆ ಸಿಗಬಹುದು ಎನ್ನುವ ಆತ್ಮವಿಮರ್ಶೆಗೆ ಎಡೆಮಾಡಿಕೊಡುತ್ತವೆ.    ಉದಾಹರಣೆಗೆ, ಅಸ್ಪೃಶ್ಯತೆಯ ಬಗ್ಗೆ ನಮ್ಮ ಹಿರಿಯರಿಗಿದ್ದ ಅಭಿಪ್ರಾಯಗಳು ನಮ್ಮ ತಲೆಮಾರಿಗಿಂತ ತೀರಾ ವಿಭಿನ್ನವಾದದ್ದು.  ಈ ವಿಚಾರದಲ್ಲಿ  ಸ್ವಾತಂತ್ರ್ಯ ನಂತರ ಭಾರತದಲ್ಲಿ ಆದ ಸಕಾರಾತ್ಮಕ ಬದಲಾವಣೆಗಳನ್ನು ಜೀರ್ಣಿಸಿಕೊಂಡು ನಂತರ ಅಮೆರಿಕದ ಮಾನವ ಹಕ್ಕುಗಳ ಬಗ್ಗೆ ಮತ್ತಷ್ಟು ಪರಿಚಯವಾದಾಗ  ತಾನಾಗಿಯೇ ಸ್ಪಷ್ಟತೆ ದೊರಕಿತ್ತು ನಮ್ಮ ತಲೆಮಾರಿಗೆ.  ಈ ಮಾನವ ಹಕ್ಕುಗಳೇ ಮುಂದೆ ನಮ್ಮ ಕುಟುಂಬದ ಹೊಸ ತಾತ್ವಿಕ ಮೌಲ್ಯಗಳಾಗುವುದರಲ್ಲಿ ಸಂಶಯವಿಲ್ಲ.  ಏಕೆಂದರೆ, ನಮ್ಮ ಮುಂದಿನ ಪೀಳಿಗೆ ಇದನ್ನಾಗಲೇ ಪ್ರಕೃತಿಜನ್ಯ ಮೌಲ್ಯವೆಂದು ಪರಿಗಣಿಸಿ ಪ್ರಾಣಿಪಕ್ಷಿಗಳಿಗೂ ಅಂಥಹುದೇ ಹಕ್ಕುಗಳನ್ನು ವ್ಯಾಪಿಸಲು ಅಣಿಯಾಗಿದ್ದಾರೆ.  ಹಾಗಾಗಿ, ತಾತ್ವಿಕ ಮೌಲ್ಯಗಳು ಬದಲಾಗದಿದ್ದರು ಹೊಸ ಮೌಲ್ಯಗಳಿಗೆ ಒತ್ತುಕೊಡುತ್ತವೆ.

3.2.0 ಮೌಲ್ಯಗಳ ಹೊಂದಾಣಿಕೆ:  ಎಲ್ಲಿ ಪರ ಸಂಸ್ಕೃತಿಯಿಂದ ಪ್ರಭಾವಗೊಳಗಾಗಿ ಸಂಪ್ರದಾಯಗಳು ಭಿನ್ನಾಭಿಪ್ರಾಯಕ್ಕೆಡೆಮಾಡಿಕೊಡುತ್ತವೆಯೋ ಅಂತಹ  ವಿಷಯಗಳಲ್ಲಿ ಒಪ್ಪಂದ ಅಥವಾ ರಾಜಿ ಮಾಡಿಕೊಳ್ಳುವುದು ಸ್ವಾಭಾವಿಕ ಎಂದಾಯಿತು. ಈ ಸುಧಾರಣೆ ಕ್ರಮದಲ್ಲಿ ಸೂಕ್ತವೆನಿಸದ ಭಾಗಗಳನ್ನು ತೊರೆದುಹಾಕಿ, ಹೊಂದಾಣಿಕೆಯ ಮೂಲಕ ಮತ್ತೊಂದು ಹೊಸ ಸಂಪ್ರದಾಯವನ್ನು ಊರ್ಜಿತಮಾಡಬಹುದು.  ಮೌಲ್ಯಗಳನ್ನು ಸಮರ್ಥಿಸುವಂತ ಈ ಹೊಸ ಸಂಪ್ರದಾಯಗಳನ್ನು ಮಾತ್ರ ಬೆಳಸಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ.     ಉದಾಹರಣೆಗೆ ಮಡಿಯಲ್ಲಿ ವ್ರತ ಮಾಡಿಯೇ ದಾನ ಮಾಡುವುದು ನಮ್ಮ ಹಿರಿಯರಿಗೆ ತೃಪ್ತಿಯಿತ್ತರೆ, ನಮ್ಮ ಸಮಾಜಕ್ಕನುಗುಣವಾಗಿ ಬಡ ಬಗ್ಗರ ಸಂಸ್ಥೆಗಳಲ್ಲಿ ಸ್ವಯಂಸೇವಕರಾಗಿ ಅಥವಾ ಆರ್ಥಿಕ ಸಹಾಯ ಮಾಡಿದರೆ ಹೊಸ ಸಂಪ್ರದಾಯ ಊರ್ಜಿತವಾದಂತೆಯೂ ಆಯಿತು, ಪರಸಂಸ್ಕೃತಿಗೆ ಹೊಂದಾಣಿಕೆಯೂ ಆಯಿತು.  ಇಂತಹ ಹೊಂದಾಣಿಕೆಯಲ್ಲಿ ಹಲವಾರು ಬೇಧಗಳನ್ನು ಕಾಣಬಹುದು: 

3.2.1 ಸಮೀಕರಣ:  ನಮ್ಮ ಸಂಸ್ಕೃತಿ ಮತ್ತು ಪರಂಪರೆಗಳನ್ನು ನಮ್ಮದಾಗಿಯೇ ಉಳಿಸಿಕೊಂಡು ಬೇರೆ ಅಥವಾ ಪರಸಂಸ್ಕೃತಿಗಳಲ್ಲಿ ಭಾಗವಹಿಸುವುದೇ ಸಮೀಕರಣ.  ವಲಸೆ ಬಂದ ನಾವು ಹೆಚ್ಚು ಪಾಲು ಸಮೀಕರಣದಲ್ಲೇ ನಮ್ಮ ಜೀವನ ಕಳೆಯುತ್ತೇವೆ.  ಉದಾಹರಣೆಗೆ ಹಬ್ಬಗಳ ಆಚರಣೆ, ಸಾಂಸ್ಕೃತಿಕ ಕೂಟಗಳಲ್ಲಿ ಭಾಗವಹಿಸುವುದು, ನೃತ್ಯ ನಾಟಕ ಎಲ್ಲವೂ ನಮ್ಮದಾದರೂ, ಕ್ರಿಸ್ಮಸ್, ಥ್ಯಾಂಕ್ಸ್ ಗಿವಿಂಗ್, ಹಾಲೋವಿನ್ ಮುಂತಾದ ಪರಸಂಕೃತಿಯ, ಪಾರಿಭಾಷಿಕ ಚಟುವಟಿಕೆಗಳನ್ನು ನಮ್ಮದಾಗಿಸಿಕೊಂಡಿದ್ದೇವೆ.  Best of both worlds ಎನ್ನುವುದನ್ನು ಪ್ರತಿಶತ ಅಳವಡಿಸಿಕೊಂಡು ಮುಂದಿನ ಪೀಳಿಗೆಗೆ ಅಡಿಪಾಯ ಹಾಕಿದ್ದೇವೆ.  ನಮ್ಮ ಹಿರಿಯರು ಕೂಡ ಬ್ರಿಟಿಷ್ ಮತ್ತು ಭಾರತೀಯ ಸಂಸ್ಕೃತಿಯನ್ನು ಜೊತೆಗೂಡಿಸಿದರು.  ತಾತ್ವಿಕ ಮೌಲ್ಯಗಳು ಹಾಗೆಯೆ ಉಳಿದಿದೆ ಎಂದರೆ ಅದು ನಮ್ಮ ಸಂಸ್ಕೃತಿಯ ಸರ್ವೋತೋಮುಖದ ಕುರುಹು. 

3.2.2 ವಿಲೀನಗೊಳಿಸುವಿಕೆ:  ಎಷ್ಟೋ ಬಾರಿ ಪರಸಂಸ್ಕೃತಿಯನ್ನೇ ನಮ್ಮದಾಗಿಸಿಕೊಂಡು, ನಮ್ಮ ಸಂಸ್ಕೃತಿಯನ್ನು ತಳ್ಳಿಹಾಕುವ ಸನ್ನಿವೇಶಗಳು ವಿಲೀನಗೊಂಡ ಸಂಪ್ರದಾಯಗಳಾಗಿಬಿಡುತ್ತದೆ.  ಅದೃಷ್ಟವಶದಿಂದ ನನ್ನ ತಲೆಮಾರಿನಲ್ಲಿ ಅಂತಹ ವಿವೇಕರಹಿತ ಉದಾಹರಣೆ ಸಿಗದಿದ್ದರೂ, ಮುಂದಿನ ಪೀಳಿಗೆಯಲ್ಲಿ  ಅಂತಹ ಅಪಾಯ ಸೂಚನೆ ಕೆಲವೊಮ್ಮೆ ಕಂಡುಬರುತ್ತಿದೆ.  ಧರ್ಮಪ್ರಜ್ಞೆ ಅವರಲ್ಲಿ ಜಾಗೃತಿಯಾಗುವರೆಗೂ ನಾವು ನಮ್ಮ ಶಿಸ್ತುಕ್ರಮ ಜಾರಿಗೆ ತರಬಹುದೇ ವಿನಃ ಭಾವೋದ್ವೇಗದಲ್ಲಿ ಕುಟುಂಬದ ಐಕ್ಯತೆಗೆ ಹಾನಿ ತರಲು ಸಾಧಿವಿಲ್ಲ. 

3.2.3 ಪ್ರತ್ಯೇಕೀಕರಣ:   ವಲಸೆ ಬಂದರೂ ಬೇರೊಂದು ಪರಸಂಸ್ಕೃತಿಯನ್ನು ಸ್ವೀಕರಿಸಿದೆ, ಅದರಲ್ಲಿ ಬೆರೆಯದೇ ತಮ್ಮ ಹಳೇ ಸಂಪ್ರದಾಯಗಳಲ್ಲೇ ಜೀವನ ನಡೆಸಿದಾಗ ಆಗುವ ಪರಿಣಾಮವೇ ಪ್ರತ್ಯೇಕೀಕರಣ.  ಅಂತಹ ಕುಟುಂಬಗಳಲ್ಲಿ ಎರಡನೇ ತಲೆಮಾರಿಗೆ  ಜೀವನ ನಿಂತ ನೀರಿನಂತೆ ಆಗುತ್ತದೆಯೇ ಹೊರತು ಪ್ರವಹಿಸಲು ಸಾಧ್ಯವಿಲ್ಲ. ಕಟ್ಟುನಿಟ್ಟಿನ ನಿಯಮಗಳನ್ನು ಹೊರಿಸುವುದರ ಜೊತೆಗೆ ಉಗ್ರಗಾಮಿ ನಿಲುವನ್ನು ಮುಂದಿನ ಪೀಳಿಗೆಗೆ ವರ್ಗಾಯಿಸಿದರೆ  ಸಂದಿಗ್ಧ  ಪರಿಸ್ಥಿತಿಯೇ ಉಂಟಾಗುತ್ತದೆ. ಅದೃಷ್ಟವಶಾತ್, ನಮ್ಮ ಹಿಂದೂ ಸಂಸ್ಕೃತಿ ಪ್ರತ್ಯೇಕೀಕರಣಕ್ಕಿಂತಲೂ ಸಮೀಕರಣದಲ್ಲಿ ಬಾಳನ್ನು ಹಸನು ಮಾಡಿದೆ.  ಮೊದಲೇ ವಿವರಿಸಿದಂತೆ, ಈ ಐದು ತಾತ್ವಿಕ ಮೌಲ್ಯಗಳು ಪರಸ್ಪರ  ಅವಲಂಬಿತವಾದ್ದರಿಂದ ಇಡೀ ಸಮಾಜದ ಶಾಂತಿ ಮತ್ತು ನೆಮ್ಮದಿಯ ಅನ್ವೇಷಣೆ, ವೈಯುಕ್ತಿಕ ಅನ್ವೇಷಣೆ ಆದಾಗ ಮಾತ್ರ ಸಾಧ್ಯ, ಪ್ರತ್ಯೇಕೀಕರಣದಿಂದ ಖಂಡಿತ ಸಾಧ್ಯವಿಲ್ಲ.

3.2.4  ತ್ರಿಶಂಕು ಅಥವಾ ಅಂಚಿನಲ್ಲಿರುವುದು:  ವಲಸೆ ಬಂದರೂ ಒಂದು ಕಡೆ ಹಳೇ ಸಂಪ್ರದಾಯಗಳಿಗೆ   ತಿಲಾಂಜಲಿಯನಿತ್ತು,   ಮತ್ತೊಂದೆಡೆ ಪರಸಂಸ್ಕೃತಿಯನ್ನೂ ಸ್ವೀಕರಿಸದೆ ತ್ರಿಶಂಕು ಜೀವನ ಅಥವಾ ಅಂಚಿನಲ್ಲಿ ಜೀವನ ನಡೆಸುವ ಸನ್ನಿವೇಶಗಳು ವಿರಳವೆನ್ನಬಹುದು.  ಈ ಲೇಖನದಲ್ಲಿ ವಿವಿರಿಸಿರುವ ಮೂರೂ ತಲೆಮಾರಿಗೆ ಈ ಸನ್ನಿವೇಶ ಅನ್ವಯಿಸುವುದಿಲ್ಲ.  ಆದರೆ ನಿರಾಶ್ರಿತರಾಗಿ ವಲಸೆ ಬಂದವರಿಗೆ ಇದು ನಿಜಸ್ಥಿತಿ. ಉಟ್ಟ ಬಟ್ಟೆಯಲ್ಲೇ ತಮ್ಮ ಹಿಂದಿನ ಜೀವನ ಶೈಲಿಯನ್ನು ತ್ಯಜಿಸಿ ಅನಾಶ್ರಿತರಾಗಿ ಗಡಿಪಾರಾದವರಿಗೆ ಪರಸಂಸ್ಕೃತಿ ಕಠಿಣವೇ. ಮೇಲೆ ವಿವರಿಸಿದ ನಾಲ್ಕು ಭೇದಗಳನ್ನು ಬಳಸಿ, ಈ ನಿರಾಶ್ರಿತ ಗುಂಪಿನಲ್ಲಿ ಆಗುವ ಬದಲಾವಣೆಗಳನ್ನು ಕೂಲಂಕಷವಾಗಿ ಸಮರ್ಥನೆ ಮಾಡುವ ಉದ್ದೇಶ ನನ್ನದಲ್ಲ.  ಆದರೂ ಪರಸಂಸ್ಕೃತಿಯ ಪ್ರಭಾವಕ್ಕೊಳಗಾದ ಎಲ್ಲ ಗುಂಪಿಗೆ ಅನ್ವಯಿಸುವ ಸಾಮಾನ್ಯ ಅಂಶಗಳನ್ನು ಮೇಲೆ ವಿವರಿಸಿದ್ದೇನೆ.  

4.0.0 ವಿಶ್ಲೇಷಣೆ:

ಮೇಲಿನ ಕೆಲವು ಉದಾಹರಣೆ, ಅಭಿಪ್ರಾಯ, ಅನುಭವ, ಮತ್ತು ಸಮಾಜಶಾಸ್ತ್ರ ತಜ್ಞರ ಸಂಶೋಧನೆಗಳನ್ನು ಅಳವಡಿಸಿಕೊಂಡು ಮೂರೂ ತಲೆಮಾರಿನವರ ವಿಚಾರಪರಂಪರೆಯನ್ನು ಒರೆಹಚ್ಚಿ ನೋಡಿದಾಗ ತೀರ್ಮಾನಕ್ಕೆ ಬಂದದ್ದು ಎರಡು ವಿಚಾರಗಳು:  
1. ಏಕಮಾತ್ರವಾಗಿ ಸಂಪ್ರದಾಯಗಳು ತಾತ್ವಿಕ ಮೌಲ್ಯದ ಮೇಲೆ ಪರಿಣಾಮ ಬೀರಲಿಲ್ಲ ಮತ್ತು 
2. ಮೌಲ್ಯಗಳನ್ನು ಪರಿಪಾಲಿಸುವ ಪದ್ಧತಿಗಳಲ್ಲಿ ಪರಿವರ್ತನೆ ಅನಿವಾರ್ಯ.

ನೈತಿಕ ವಿವೇಚನೆ ಮತ್ತು ವೈಯುಕ್ತಿಕ ದೃಷ್ಟಿಕೋನದಲ್ಲಿ ತುಲನೆ ಮಾಡಿದಾಗ ತೀರ್ಮಾನಕ್ಕೆ ಬಂದ ವಿಚಾರಗಳು: 

  • ದೇವರಲ್ಲಿ ನಂಬಿಕೆ, ಶಾಂತಿ ಮತ್ತು ಧಾರ್ಮಿಕ ಸಂಪ್ರದಾಯಗಳನ್ನು ಪರಿಪಾಲಿಸುವ ಮೌಲ್ಯವನ್ನು ವಿಶ್ಲೇಷಿಸಿದಾಗ, ಬ್ರಿಟಿಷ್ ಪರಸಂಸ್ಕೃತಿಯಲ್ಲಿ ಮೊದಲನೇ ತಲೆಮಾರಿಗೆ (1935-60) ಹೆಚ್ಚಾಗಿ ಪರಿವರ್ತನೆ ಆಗಲಿಲ್ಲ.  ವ್ಯಾವಹಾರಿಕ ಮತ್ತು ದಿನನಿತ್ಯದ ಮತಾಚಾರಗಳನ್ನು ಬದಲಾವಣೆಗಿಂತ ಹೊಂದಾಣಿಕೆಯಲ್ಲಿ ಸರಿದೂಗಿಸಿದರು. ಅಮೆರಿಕದ ಪರಸಂಸ್ಕೃತಿಯಲ್ಲಿ ಎರಡನೇ ತಲೆಮಾರಿಗೆ (1985-2015) ವ್ಯಾವಹಾರಿಕ ಮತ್ತು ದಿನನಿತ್ಯದ ಮತಾಚಾರಗಳಲ್ಲಿ ಹೆಚ್ಚಿನ ಬದಲಾವಣೆ ಮಾಡಬೇಕಾಯಿತಾದರೂ ಸಮೀಕರಣದ ಮೂಲಕ ಎರಡು ಸಂಸ್ಕೃತಿಯನ್ನು ಸರಿದೂಗಿಸಿದೆವು.  ಆದರೆ ಮೂರನೇ ತಲೆಮಾರಿಗೆ (1985-2015 ಮತ್ತು ಅದರಾಚೆ) ತೀವ್ರ ಬದಲಾವಣೆಯಾಗಿ ತಳಹದಿ ಭದ್ರವಾಗಿದ್ದರೂ ಮುಂದೆ ಏನಾಗುವುದು ಎಂದು ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ. ದೇವರಲ್ಲಿ ನಂಬಿಕೆ ಉಳಿದರೂ ಧಾರ್ಮಿಕ ಸಂಪ್ರಧಾಯಗಳು ಮುಂದುವರೆಯುವ ಸಾಧ್ಯತೆ ಶೂನ್ಯವೆಂದೇ ಹೇಳಬಹುದು.  

  • ಮಿತವ್ಯಯ ಮತ್ತು ಸಂಪನ್ಮೂಲಗಳನ್ನು ದುಂದು ವೆಚ್ಚ ಮಾಡದಿರುವ ಮೌಲ್ಯ ಮೂರೂ ಸಂಸ್ಕೃತಿಗಳಿಂದ ಮೂರೂ ತಲೆಮಾರಿಗೆ ವರ್ಗಾವಣೆಯಾಗಿ, ಕೆಲವೊಂದು ಸೃಜಿಸಿದ ಮೌಲ್ಯಗಳನ್ನು ಅಳವಡಿಸಿಕೊಂಡು ಯಾವ ಬದಲಾವಣೆಯ ಅವಶ್ಯವಿಲ್ಲದೆ ಮುಂದುವರಿಯುತ್ತಿದೆ.  ಸೃಜಿಸಿದ ಮೌಲ್ಯಗಳಿಗಿಂತ ತಾತ್ವಿಕ ಮೌಲ್ಯಗಳೇ ಆಧಾರಸ್ಥಂಭಗಳಾಗಿವೆ.

  • ಕುಟುಂಬ ಮತ್ತು ಕುಟುಂಬದ ಐಕ್ಯತೆಗೆ ಹೆಚ್ಚು ಪ್ರಾಧಾನ್ಯ ಕೊಡುವ ಮೌಲ್ಯ, ಪರಸಂಸ್ಕೃತಿಗಳ ಪ್ರಭಾವ ಮತ್ತು ಸಮಾಜದಲ್ಲಾದ ಬದಲಾವಣೆಗಳಿಂದ, ಹೆಚ್ಚು ಪಾಲು ವಿಲೀನಗೊಂಡು ವೈಯುಕ್ತಿಕತೆಗೆ ಮತ್ತು ಒಂಟಿತನದ ಅಸ್ತಿತ್ವಕ್ಕೆ ಪ್ರಾಧಾನ್ಯ ತಂದಿವೆ. ಬ್ರಿಟಿಷರ ಪರಸಂಸ್ಕೃತಿಯಲ್ಲೇ ಮೊದಲನೇ ತಲೆಮಾರಿನಲ್ಲಿ  ಶುರುವಾದ ಈ ಪರಿವರ್ತನೆ ಅಮೆರಿಕದಲ್ಲಿ ಎರಡನೇ ತಲೆಮಾರಿಗೆ ಸುಪರಿಚಿತವಾಗಿ ಮೂರನೇ ತಲೆಮಾರಿನಲ್ಲಿ ವಿಲೀನಗೊಂಡು ಬೇರೂರಿದೆ. 

  • ವಿದ್ಯಾಭ್ಯಾಸ ಮತ್ತು ಶಿಸ್ತಿನ ಜೀವನವನ್ನು ಗೌರವಿಸಿವುವ ಮೌಲ್ಯ, ಮೂರೂ ಸಂಸ್ಕೃತಿಗಳಿಂದ ಮೂರೂ ತಲೆಮಾರಿಗೆ ವರ್ಗಾವಣೆಯಾಗಿ ಯಾವ ಬದಲಾವಣೆಯ ಅವಶ್ಯವಿಲ್ಲದೆ ಮುಂದುವರಿಯುತ್ತಿದೆ.

  • ಅಹಿಂಸೆ ಮತ್ತು  ಆಹಾರ ಪದ್ದತಿಯನ್ನು ಅನುಸರಿಸುವ ಮೌಲ್ಯದಲ್ಲಿ,  ಬ್ರಿಟಿಷ್ ಪರಸಂಸ್ಕೃತಿ ನನ್ನ ತಂದೆ ತಾಯಿಯ ತಲೆಮಾರಿಗೆ ಅಷ್ಟೇನೂ ಪ್ರಭಾವ ಬೀರದಿದ್ದರೂ, ಅಮೆರಿಕದ ಪರಸಂಸ್ಕೃತಿಯಲ್ಲಿ ಎರಡನೇ ಮತ್ತು ಮೂರನೇ ತಲೆಮಾರಿನವರು ಸಾಕಷ್ಟು ಪರಿವರ್ತನೆ ಮಾಡಿಕೊಂಡು ಹೆಚ್ಚಾಗಿ ಸಮೀಕರಣ ಮತ್ತು ಸೃಜಿಸಿದ ಮೌಲ್ಯಗಳನ್ನು ಅಳವಡಿಸಿಕೊಂಡಿದ್ದೇವೆ.  ಈ ವಿಚಾರದಲ್ಲಿ ಪ್ರತ್ಯೇಕೀಕರಣ ಹೆಚ್ಚು ಯಶಸ್ಸು ತಂದಿದೆ ಎಂದೇ ಹೇಳಬಹುದು. 

ಮುಕ್ತಾಯ:  ಈ ಲಘುಲೇಖನದ ಮೊದಲಲ್ಲಿ ನಾನು ಉತ್ತರ ಹುಡುಕಲು ಹೋದ ಪ್ರಶ್ನೆ:  ಪರಸಂಸ್ಕೃತಿಯನ್ನು ಸ್ವೀಕಾರ ಮಾಡುವುದರಿಂದ ಮೂಲಭೂತ ಮೌಲ್ಯಗಳು ಬದಲಾಗುತ್ತವೆಯೇ ಎಂದು.  ಮತಾಚರಣೆಗಳನ್ನು ಮತ್ತು ಸಂಪ್ರದಾಯಗಳನ್ನು ಪ್ರತ್ಯೇಕಿಸಿ  ತಾತ್ವಿಕ ಮೌಲ್ಯಗಳನ್ನು ಒಂದು ಹೊಸ ದೃಷ್ಟಿಕೋನದಿಂದ ನೋಡಿದೆವು.  ಆ ತುಲನೆಯಲ್ಲಿ ಹೊರಹೊಮ್ಮಿದ ಐದು ತಾತ್ವಿಕ ಮೌಲ್ಯಗಳು, ನನ್ನದೇ ಮೂರು ತಲೆಮಾರಿನ 80 ವರ್ಷಗಳ ದೀರ್ಘ ಕಾಲಾವಧಿ ಮತ್ತು ಮೂರು ಪರಸಂಕೃತಿಗಳ ಪ್ರಭಾವದಿಂದ ಬದಲಾದವೇ ಎನ್ನುವ ಸಂಶೋಧನೆ ಈ ಲಘುಲೇಖನಕ್ಕೆ ಸ್ಫೂರ್ತಿಯಾದವು. ಈ ಪ್ರಶ್ನೆಗೆ ನಿರ್ಣಾಯಕರ ಉತ್ತರ ಕೊಡುವ ಪ್ರಯತ್ನದಲ್ಲಿ ಕೆಳಗಿನ ನಾಲ್ಕು ಅವಲೋಕನಗಳು ಪರಿಣಾಮಕಾರಿಯಾಗಿವೆ:  
  • ತಾತ್ವಿಕ ಮೌಲ್ಯಗಳು ಮೊದಲ ಎರಡು ತಲೆಮಾರಿನಲ್ಲಿ ಹೆಚ್ಚು ಬದಲಾಗದೆ ಉಳಿದಿವೆ. 
  • ಮೊದಲೆರಡು ತಲೆಮಾರಿನಲ್ಲಿ ಪರಿವರ್ತನೆ ಮತ್ತು ಸಮೀಕರಣವೇ ಮೇಲುಗೈ ಪಡೆದಿದೆ. 
  • ಅಮೆರಿಕದ ಸಾಮಾಜಿಕ ಪರಿವರ್ತನೆಯ ಫಲಿತಾಂಶವೆ ಇರಬಹುದೇನೋ ಎನ್ನುವಂತೆ, ಮೂರನೇ ತಲೆಮಾರಿನಲ್ಲಿ ತಾತ್ವಿಕ ಮೌಲ್ಯಗಳು ಸೃಜಿಸಿದ ಮೌಲ್ಯಗಳೊಡನೆ ಬೆರೆತು ಹೊಸ ರೂಪ ತಾಳಿವೆ.  ಜೊತೆಗೆ ಈ ತಲೆಮಾರಿನ ಧಾರ್ಮಿಕ ಸಂಪ್ರದಾಯ ಮತ್ತು ಕುಟುಂಬದ ಐಕ್ಯತೆಯಲ್ಲಿ ತೀರ್ವ ಬದಲಾವಣೆಗಳಾಗಿ, ತಾತ್ವಿಕ ಮೌಲ್ಯ ಒಂದು ಅನಿರ್ಧಿಷ್ಠಿತ ದಿಸೆಯಲ್ಲಿ ಸಾಗುತ್ತಿದ್ದರೂ ಅಡಿಪಾಯ ಭದ್ರವಾಗಿದೆ. 
  • ಪರಸಂಸ್ಕೃತಿಯಲ್ಲಿ ತಾತ್ವಿಕ ಮೌಲ್ಯಗಳನ್ನು ಉಳಿಸಿಕೊಳ್ಳಲು ಹೊರಗಿನಿಂದ ಎಷ್ಟೇ ದಾಳಿಯ ಭೀತಿ, ಒತ್ತಡವಿದ್ದರೂ ಕೊನೆಗೆ ನಮ್ಮ ಹಿಂದಿನ ತಲೆಮಾರಿನಿಂದ ನಾವು ಕಲಿತದ್ದನ್ನು ನಮ್ಮದಾಗಿಸಿಕೊಳ್ಳುವುದು ನಮ್ಮ ಕೈಯಲ್ಲೇ ಇದೆಯೇ ಹೊರತು ಪರಸಂಸ್ಕೃತಿಯನ್ನು ಆಕ್ಷೇಪಿಸುವುದರಿಂದಾಗಲಿ ಅಥವಾ ನಕಲು ಮಾಡುವುದರಿಂದ ಸಾಧ್ಯವಿಲ್ಲ. ಪರಸಂಸ್ಕೃತಿಯಲ್ಲಿ ತಾತ್ವಿಕ ಮೌಲ್ಯಗಳನ್ನು ಕಾಪಾಡಲು ಪ್ರತಿಯೊಂದು ತಲೆಮಾರಿಗೂ ಬೇರೆಯೇ ಹೊಣೆಗಾರಿಕೆ ಕಾಣಿಸಿಕೊಳ್ಳುತ್ತದೆ.  ಅವುಗಳನ್ನು ನಿಷ್ಪಕ್ಷಪಾತವಾಗಿ ಅಳವಡಿಸಿಕೊಳ್ಳಲು ಬದಲಾವಣೆ, ಹೊಂದಾಣಿಕೆ, ಸಮೀಕರಣ, ವಿಲೀನಗೊಳಿಸುವಿಕೆ  ಅಥವಾ ಪ್ರತ್ಯೇಕೀಕರಣದನಂತಹ  ಪರಿಹಾರ ಮಾರ್ಗಗಳ ಮೇಲೆ ಬೆಳಕು ಚೆಲ್ಲಿದೆ, ಈ ಲಘುಲೇಖನ.  
__________________________
ಉಲ್ಲೇಖ / References:
  1. Acculturation -- Wikipedia
  2. Rethinking the Concept of Acculturation: Implications for Theory and Research, Seth J. Schwatrz et al., American Psychology, May-June 2010, Pages: 237-251.
  3. Acculturation: Living successfully in two cultures, John W. Berry.,  International Journal of Intercultural Relations, Volume 29, Issue 6, November 2005, Pages 697-712

  4. Several blogs and internet sites.  Specifically Thoughtco.com


______________________________
ಕನ್ನಡದ ಅಜ್ಞಾತ ಆಂಗ್ಲ ಸಾಹಿತಿ ರಾಜಾ ರಾವರ “ಗಂಗಾ ಘಾಟ್”


ಇಂಗ್ಲಿಷ್ನಿಂದ ಕನ್ನಡಕ್ಕೆ ಅನುವಾದ: ರವಿ ಗೋಪಾಲರಾವ್.

ಇಂಗ್ಲಿಷ್ ಹಾಗು ಫ಼್ರೆಂಚ್ ಸಾಹಿತಿ ರಾಜಾ ರಾವರ ಹೆಸರನ್ನು ಕೇಳಿರುವ ಜನ ಬಹಳಷ್ಟು ಕಡಿಮೆ.  ಅದರಲ್ಲೂ ಭಾರತೀಯ ಪ್ರಾಂತ ಭಾಷೆಗಳನ್ನು ಬಳಸುವವರ ಪೈಕಿ ಕೆಲವೇ ಓದುಗರಿಗಷ್ಟೇ ಅವರ ಕೃತಿಗಳ ಪರಿಚವಿರುವುದು ಒಂದು ವಿಷಾದಕರ ಸಂಗತಿ.  ೧೯೩೦ರ ದಶಕದಲ್ಲೇ ಆಂಗ್ಲ ಭಾಷೆಯಲ್ಲಿ ಕಾದಂಬರಿಗಳನ್ನು ಬರೆದ ಭಾರತೀಯರಲ್ಲಿ ಅಗ್ರಗಣ್ಯರು, ರಾಜಾ ರಾವ್.  ಅವರು ೧೯೩೮ರಲ್ಲಿ ಬರೆದ ಸಣ್ಣ ಕಾದಂಬರಿ ‘ಕಾಂತಾಪುರ,’ ಭಾರತೀಯ ಆಂಗ್ಲ ಸಾಹಿತ್ಯಕ್ಕೆ ಬುನಾದಿ ಆಯಿತು ಎನ್ನುವುದರಲ್ಲಿ ಸಂದೇಹವಿಲ್ಲ.  ಬ್ರಿಟಿಷರ ಮುನ್ನೂರು ವರ್ಷಗಳ ಆಳ್ವಿಕೆಯಲ್ಲಿ ಭಾರತೀಯರು ಮೊದಲ ಬಾರಿಗೆ ತಮ್ಮದೇ ಆದ ಒಂದು ಆಂಗ್ಲ ಶೈಲಿಯಲ್ಲಿ ಕಥೆ ಕಾದಂಬರಿಗಳನ್ನು ಬರೆದು ಪ್ರಖ್ಯಾತಿ ಪಡೆದದ್ದು ಒಂದು ಸೋಜಿಗದ ಸಂಗತಿ.  ಭಾರತೀಯ ಆಂಗ್ಲ ಶೈಲಿಯ ವಿಶೇಷತೆಯನ್ನು ಅರಿಯಲು ರಾಜಾ ರಾವ್ ಬರೆದ ಕೃತಿಗಳನ್ನು ಓದಲೇಬೇಕು.  ತಮ್ಮ ನೆಲನಾಡಿನ ಸಂಸ್ಕೃತಿಯನ್ನು ಪರರಿಗೆ ತಮ್ಮದಲ್ಲದ ಆಂಗ್ಲ ಭಾಷೆಯಲ್ಲಿ ಅಭಿವ್ಯಕ್ತಗೊಳಿಸುವುದು ಒಂದು ಕಷ್ಟಕರ ಬರವಣಿಗೆಯ ಶೈಲಿ.  ಅದರಲ್ಲೂ ಭಾರತೀಯ ತತ್ವಶಾಸ್ತ್ರ, ನಂಬಿಕೆ, ಚಿಂತನೆಗಳನ್ನು ಬಿಡಿಸಿ ಹೇಳುವುದು ಕಷ್ಟ.  ಹಿಂದೂ ಆತ್ಯಾದ್ಮಿಕ ಮತ್ತು ಧಾರ್ಮಿಕ ಸಂಗತಿಗಳನ್ನು ಸಣ್ಣ ಕಥೆ ಮತ್ತು ಕಾದಂಬರಿಗಳಲ್ಲಿ ಮನದಟ್ಟವಾಗುವಂತೆ ಬರೆಯುವುದು ರಾಜಾ ರಾವರ ಬರವಣಿಗೆಯ ಶೈಲಿ.  ವಿಶೇಷವಾಗಿ ತಮ್ಮದೇ ಕನ್ನಡೀಕರಿಸಿದ ಆಂಗ್ಲ ಭಾಷೆಯಲ್ಲಿ ಅವರು ಬರೆದ ಕಾದಂಬರಿ ‘ಕಾಂತಾಪುರ’ದಲ್ಲಿ ಕನ್ನಡ ಭಾಷೆಯ ಲಯ ಮತ್ತು ಸೊಗಡನ್ನು ನಾವು ಕಾಣಬಹುದು.  ಅವುಗಳಿಗಿಂತ ಹೆಚ್ಚಾಗಿ ಅವರ ಬರವಣಿಗೆಯ ಭಾಷೆ ಇಂಗ್ಲಿಷ್ ಹಾಗು ಫ್ರೆಂಚ್ ಆದರೂ ಮನದಾಳದ ಪ್ರಕ್ರಿಯೆ ಅಥವಾ thought process ಕನ್ನಡ ಭಾಷೆಯಲ್ಲೇ ಇರುವಂತಿರುವುದನ್ನು ಅವರ ಎಲ್ಲ ಬರವಣಿಗೆಯಲ್ಲಿ ಕಾಣಬಹುದು.  

ಕರ್ನಾಟಕದ ಹಾಸನ ರಾಜಾ ರಾವರ ತವರೂರು.  ೧೯೦೯ರಲ್ಲಿ ಸಂಪ್ರದಾಯಬದ್ಧ ಬ್ರಾಹ್ಮಣ ಸಂಸಾರದಲ್ಲಿ ಹುಟ್ಟಿ ಬೆಳದ ಅವರಿಗೆ ತಂದೆಗಿಂತ ಹೆಚ್ಚಾಗಿ ಅಜ್ಜನ ಪ್ರಭಾವವಿದ್ದು, ಕನ್ನಡ ಮತ್ತು ಸಂಸ್ಕೃತ ಭಾಷೆ, ಹಿಂದೂ ಸಂಸ್ಕಾರ, ತತ್ವಶಾಸ್ತ್ರ, ಯೋಗ, ವೇದಾಂತ, ಧ್ಯಾನ ಮುಂತಾದ ಗಂಬೀರ ವಿಚಾರಗಳಲ್ಲಿ ಆಸಕ್ತಿ ಬೆಳೆಯಲು ಕಾರಣವಾಯಿತು. ಮುಂದೆ ಹೈದರಾಬಾದಿನ ನಿಝಾಮ್ ಕಾಲೇಜಿನಲ್ಲಿ ಓದು ಮುಗಿಸಿ ಹೆಚ್ಚಿನ ವ್ಯಾಸಾಂಗಕ್ಕೆಂದು ಪ್ಯಾರಿಸ್ ಗೆ ತೆರಳಿದರು.  ಅಲ್ಲಿ ಫ್ರೆಂಚ್ ಭಾಷೆಯಲ್ಲಿ ಪರಿಣಿತಿ ಪಡೆದರು.  ಫ್ರಾನ್ಸ್ನಲ್ಲಿರುವಾಗ ಅವರು ತಮ್ಮ ಮೊದಲ ಆಂಗ್ಲ ಮತ್ತು ಫ್ರೆಂಚ್ ಕಥೆಗಳನ್ನು ಪ್ರಕಟಿಸಿದರು.  ಅವುಗಳಲ್ಲಿ ಕಾಂತಾಪುರವು ಒಂದು.  ಕಡಲಾಚೆ ಇದ್ದರೂ ಅವರು ಈ ಕಥೆಯ ಸನ್ನಿವೇಶ ಮತ್ತು ಹಿನ್ನಲೆಯನ್ನು ಕರ್ನಾಟಕದ ಒಂದು ಗ್ರಾಮದಲ್ಲಿ ರೂಪಿಸಿರುವುದು ರಾಜಾ ರಾವರ ಬಾಲ್ಯ ಮತ್ತು ಅವರ ಮೇಲಿನ ಕನ್ನಡ ಸಂಸ್ಕೃತಿಯ ಪ್ರಭಾವಗಳನ್ನು ಓದುಗರಲ್ಲಿ ಸ್ಪಂದಿಸುತ್ತದೆ.  ಅಚ್ಚಕ್ಕ ಎನ್ನುವ ಸೂತ್ರಧಾರಿ, ಕಥಾನಾಯಕ ಎಲ್ಲರೂ ನಮ್ಮಲ್ಲೇ ಇರುವ ದೂರ ಸಂಭಂಧಿಗಳಂತೆ ಅನುಭವ ಕೊಡುತ್ತಾರೆ.  ಅಂಥಹ ನೈಜ ಚಿತ್ರಣ ರಾಜ ರಾವರ ಬರಹಗಳಲ್ಲಿ. The Serpent and the Rope (1960), The Cat and Shakespeare (1965), Comrade Kirillov (1976), The Chessmaster and His Moves (1988) ರಾಜಾ ರವರ ಇತರ ಕಾದಂಬರಿಗಳು.  ಮೊದಲ ಕಾದಂಬರಿಗೆ ಭಾರತದ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ಚೆಸ್ಮಾಸ್ಟರ್ ಕಾದಂಬರಿಗೆ Neustadt International Award for Literature ಗಳಿಸಿದ ರಾಜಾ ರಾವ್ “ಬರೆಯುವುದೇ ನನ್ನ ಧರ್ಮ” ಎಂದು ಹೇಳಿಕೆ ನೀಡಿದರು.  ಕನ್ನಡದಲ್ಲಿ ಒಂದು ಕಾದಂಬರಿಯನ್ನು ಬರೆಯುವ ತಮ್ಮ ಅಭಿಲಾಷೆಯನ್ನು ಸದಾ ವ್ಯಕ್ತಪಡಿಸುತ್ತಿದ್ದ ರಾಜಾ ರಾವ್, ೨೦೦೬ ರಲ್ಲಿ ದಿವಂಗತರಾದರು.

On the Ganga Ghat ಎನ್ನುವ ಸಣ್ಣ ಕಥೆಗಳ ಸಂಕಲನ ರಾಜ ರಾವರ ಅತ್ತ್ಯುತ್ತಮ ಕೃತಿಗಳಲ್ಲಿ ಒಂದು.  ಇದರಲ್ಲಿ ಹತ್ತು ಸಣ್ಣ ಕಥೆಗಳಿವೆ ಹಾಗು ಪ್ರತಿಯೊಂದು ಕಥೆಗೂ ಬೇರೆ ಬೇರೆ ಶೀರ್ಷಿಕೆಗಳಿಲ್ಲ.  ಕೇವಲ ಅಧ್ಯಾಯ ೧ ರಿಂದ ೧೦ ಎಂದು ನಾಮಕರಣ ಮಾಡಿದ್ದಾರೆ.  ಹನ್ನೊಂದನೆಯ ಅಧ್ಯಾಯ ಕತೆಯಂತೆ ಇರದೇ ಮೊದಲಿನ ಹತ್ತು ಕಥೆಗಳಲ್ಲಿ ಅರಸಲು ಹೋದ ಆಧ್ಯಾತ್ಮಿಕ ಪ್ರಶ್ನೆಗೆ ಉತ್ತರೆದಂತಿದೆ.  ಈ ಕಥೆಗಳೆಲ್ಲವೂ ಬನಾರಸ್ಸಿನ ಹಿನ್ನಲೆಯಲ್ಲಿ ಇರುವುದರಿಂದ, ಇದೊಂದು ಸಣ್ಣ ಕಾದಂಬರಿಯಂತೆ ಓದುಗನ ಮನಸ್ಸಿನಲ್ಲಿ ಉಳಿಯುವುದು.  ಈ ಕಥೆಗಳಲ್ಲಿ ರಾಜಾ ರಾವ್ ಗಂಗಾ ಘಾಟಿನಲ್ಲಿ ಕುಳಿತು ಜೀವನದ ಆಟವನ್ನು ಪರಿಶೀಲಿಸಿ, “ಜೀವನದ ಸಾರಾಂಶ ಮನುಷ್ಯ ತನ್ನತನದ ಮೇಲೆ ತಾನೆ ಆಟವಾಡಿದ ಹಾಗೆ” ಎನ್ನುತ್ತಾರೆ. ಈ ಕಥೆಗಳು ಪ್ರಕಟವಾಗುವುದು ಹಿಂದೂಗಳ ಪವಿತ್ರ ಸ್ಥಳ ಬನಾರಸ್ಸಿನಲ್ಲಿ.  ಲಕ್ಷಾಂತರ ಹಿಂದುಗಳ ಅಂತಿಮ ತೀರ್ಥಯಾತ್ರೆಯ ಇಚ್ಛೆ ಬನಾರಸ್.  ಅದಕ್ಕಾಗಿಯೆ ರಾಜಕುಮಾರರು, ರಾಜರು, ಬಿಕ್ಷುಕರು, ವರ್ತಕರು, ದ್ರೋಹಿಗಳು, ನರ್ತಕಿಯರು, ಜನ ಸಾಮಾನ್ಯರು, ಎಲ್ಲರೂ ಬನಾರಸ್ಸಿಗೆ ಬರುವುದು.  ಜೀವನದ ಅರ್ಥ ಹುಡುಕಲು ಅಥವಾ ಸಾವಿನಲ್ಲಿ ಜೀವನದ ಸಾರ್ತಕತೆಯನ್ನು ಮತ್ತೊಂದು ಘಟ್ಟಕ್ಕೆ ಪಾರುಮಾಡಲು ಎಲ್ಲರೂ ಬರುವುದು ಬನಾರಸ್ಸಿಗೆ.  ರಾಜ ರಾವರ ಬನಾರಸ್ಸಿನ ಕಥೆ  ಮನುಷ್ಯರಿಗೆ ಮಾತ್ರ ಸೀಮಿತವಲ್ಲ.  ಅಲ್ಲಿನ ಪಶು ಪಕ್ಷಿಗಳು, ‘ಮಧೋಭ’ ಎನ್ನುವ ಬ್ರಮ್ಹಚಾರಿ ಗಿಣಿ ಮತ್ತು ಮೋಹಿನಿಯರು, ‘ಭೀಮ’ ಎಂಬ ಹೆಸರಿನ ಸಾಧು ಗಿಳಿ, ಗಂಗೆಯಲ್ಲಿ ತನ್ನ ಪ್ರತಿಬಿಂಭ ನೋಡಿಕೊಳ್ಳುವ ‘ಜವೇರಿ ಬಾಯಿ’ ಎನ್ನುವ ಹಸು, ಕತ್ತೆ, ನಾಯಿ, ಹಂದಿಗಳು ಎಲ್ಲವೂ ಈ ಆಟದಲ್ಲಿ ಪಾತ್ರಧಾರಿಗಳು.  ಜೊತೆಗೆ ಮಂತ್ರ ಒದರುವ -ಶಾಪ ಕೊಡುವ ಸಾಧುಗಳು, ಎಲ್ಲವನ್ನು ತ್ಯಜಿಸಿ ಇತರರ ಜೀವನದ ಜಿಘ್ನಾಸೆಯನ್ನು ಕಂಡು ನಗುವ ಮಹಾಪುರುಷರು ಎಲ್ಲರು ಬನಾರಸ್ಸಿನ ಪಾತ್ರದಾರಿಗಳು.  ನಿರ್ಜೀವ ವಸ್ತುಗಳಿಗೂ ಜೀವ ಕೊಟ್ಟು, ಕಥೆ ಹಣೆದು ಹಿಂದು ಧರ್ಮಕ್ಕೆ ಮೂಲಭೂತವಾದ “ಎಲ್ಲದರಲ್ಲೂ ಐಕ್ಯತೆ ಕಾಣು” ಎನ್ನುವುದನ್ನು ಈ ಕಥೆಗಳಲ್ಲಿ ನಿರೂಪಿಸಿದ್ದಾರೆ, ರಾಜಾ ರಾವ್.  

ಗಂಗಾ ಘಾಟಿನ ಎಂಟನೇ ಅದ್ಯಾಯ ಹಾಗು ಕೊನೆಯ ಅಧ್ಯಾಯವನ್ನು ಕನ್ನಡಕ್ಕೆ ಭಾಷಾಂತರಿಸಲು ನನಗೆ ಅಷ್ಟೇನು ಕಠಿಣವೆನಿಸಲಿಲ್ಲ.  ಭಾಷಾಂತರ ಮುಗಿಸಿ ಕನ್ನಡದಲ್ಲಿ ಓದಿದ ಮೇಲೆ ಅನ್ನಿಸಿದ್ದು ಪ್ರಾಯಶಃ ಕನ್ನಡಿಗನಾದ ನನಗೆ ಅವರ ಸಂವೇದನೆ ಆಂಗ್ಲ ಭಾಷೆಗಿಂತ ಕನ್ನಡದಲ್ಲೇ ಸರಳವಾಗಿ ಸ್ಪಂದಿಸಿ ಅವರ ಆಧ್ಯಾತ್ಮ ಚಿಂತನೆಯ ಸಾರಾಂಶ ಅರಿತುಕೊಳ್ಳಲು ಸಾದ್ಯವಾಯಿತು.  ಓದುಗನ ಮಾತೃ ಭಾಷೆ ಹಾಗು ಬರಹಗಾರನ ಯೋಚನಾ ಪ್ರಕ್ರಿಯೆ ಎರಡೂ ಕನ್ನಡವಾದ್ದರಿಂದ ಅಂತಹ ನಿಕಟ ಸ್ಪಂದನೆಗೆ ಕಾರಣವಾಯಿತೆಂದು ನನ್ನ ಅನಿಸಿಕೆ.

ಗಂಗಾ ಘಾಟ್:
ಅದ್ಯಾಯ ೮.

“ಪಲ್ಲಕ್ಕಿ, ಪಲ್ಲಕ್ಕಿ,” ಎಂದು ಕೂಗುವವನು ಪಲ್ಲಕ್ಕಿಯ ಹೊರುವವ, ಪಾಳುಬಿದ್ದ ಇಕ್ಕಟ್ಟಾದ ಓಣಿಯಲಿ ಓಡುತ್ತ. “ಪಲ್ಲಕ್ಕಿ, ಪಲ್ಲಕ್ಕಿ, ರಾಣಿ ರಸೋಮಣಿಯವರ ಪಲ್ಲಕ್ಕಿ.  ದಾರಿ ಬಿಡಿ, ದಾರಿ ಬಿಡಿ, ಅಪರಿಚತರೆ ದಾರಿ ಬಿಡಿ,” ಎಂದು ಕೂಗುವವ ಪಲ್ಲಕ್ಕಿ ಹೊತ್ತ  ಮುಖ್ಯಸ್ಥ, ಅದೇ ಕೆಂಪು ರುಮಾಲು ಪೇಟ ಸುತ್ತಿಕೊಂಡು ಎಡಗೈಯಲ್ಲಿ ಬೆಳ್ಳಿಯ ಕಡಗತೊಟ್ಟ ಮುಖ್ಯಸ್ಥ ಹಾಡುವನು,

ಗಿಣಿಗೆ ಹಲ್ಲಿಲ್ಲ
ಕೋಳಿಗೆ ಮುಕುಟವಿಲ್ಲ
ಅತ್ತಿ ಹಣ್ಣಿಗೆ ಹೂವಿಲ್ಲ
ನದಿ ಹಿಂದೆಜ್ಜೆ ಇಡುವುದಿಲ್ಲ.

ನದಿ ಹಿಂದೆಜ್ಜೆ ಇಡುವುದಿಲ್ಲ, ಕೂಗುವುದು ಮತ್ತೊಮ್ಮೆ ಗಾಯಕ ವೃಂದ.

ಶಿವ ಕುಡಿದ ವಿಷವ ಉಳಿಯಿತು ಗಂಠಲಲಿ
ಪಾರ್ವತಿ ಕುಳಿತಳು ತಪಸ್ಸಿನಲಿ ಶಿವ ಕಣ್ತೆರೆಯಲೆಂದು
ದಾರಿ ಬಿಡಿ ದಾರಿ ಬಿಡಿ ಅಪರಿಚಿತರೇ
ಭಂಜೆ ಕೂಡ ಹಡೆದಾಳು ಶಿಷುವ ಶಿವ ಮೆಚ್ಚಿದರ

ಬನಾರಸ್ಸಿನ ಜನಜಂಗುಳಿಯೆಲ್ಲ ಹಿಂತಿರುಗಿ ನೋಡಿದರು, ನಂತರ ಮುಂದೆ ನೋಡಿದರು ಅವಸರದಲಿ ಹೋಗುವ ಪಲ್ಲಕ್ಕಿಯನು, ಇಣುಕಿ ನೋಡಿದರೆ ಕಂಡದ್ದು ಹೊಟ್ಟಿನ ಬಣ್ಣದ ಮೈಯಿನ ಬಿಳಿ ಸೀರೆಯನುಟ್ಟ ಒಂದು ವೃಧ್ಧ ಸ್ಥ್ರೀ, ಹಣೆಯ ಮೇಲೆ ಅಷ್ಟೇನು ಒತ್ತಾಗಿರದ ಬಿಳಿ ಕೂದಲು, ಎವೆ ಮಿಟುಕಿಸಿ ನೋಡದ ದೃಷ್ಟಿ, ಜಪಮಣಿ ಕೈಯಲ್ಲಿ, ಜಪದಲಿ ತಲ್ಲೀನೆ.  ತಾ ಕಂಡದ್ದನ್ನಾಗಲಿ ಕೇಳಿದ್ದನ್ನಾಗಲಿ ಯಾವುದು ತನಗೆ ಸಂಬಂಧವಿಲ್ಲವೆನ್ನುವಂತೆ ಕಾಣಿಸಿದಳಾಕೆ -- ಬ್ರಹ್ಮ ಪ್ರಪಂಚವನು ಸೃಷ್ಟಿಸಿದ ದಿನದಿಂದಲೂ ಅವಳ ಪ್ರಪಂಚ ಇದೇ ರೀತಿ ಇರುವಂತೆ, ಪ್ರಳಯದಲಿ ಕೊನೆಗೊಳ್ಳುವ ತನಕ -- ನಿಮಗೆ ಗೊತ್ತಲ್ಲ ಪ್ರಳಯವಾಗಲು ಸಹಸ್ರಾರು ವರುಷಗಳೆ ಬೇಕಾದೀತು.  ಬನಾರಸ್ಸಿನಲ್ಲಿ ಯಾವುದು ಬದಲಾಗಿಲ್ಲ.  ಮನು ಕುಲದ ಏಳಿಗೆಗಾಗಿ ಶಿವ ಬಂದಾಗಿನಿಂದಲೂ, ಎಲ್ಲಿ ಎರಡು ತೊರೆಗಳು ವರುಣ ಮತ್ತು ಅಸಿ ಮಿಲನಗೊಳ್ಳುವುವೊ, ಎಲ್ಲಿ ರಸ್ತೆಯ ಆಸುಪಾಸಿನಲ್ಲಿ ಅಂಗಡಿಗಳಿವೆಯೋ, ಎಲ್ಲಿ ನಾಯಿಗಳೂ ಕೂಡ ಇವೆಯೋ, ಅವೆಲ್ಲವೂ ರಾಣಿ ರಸೋಮಣಿಗೆ ಬ್ರಹ್ಮ ಸೃಷ್ಟಿಯೆ.  ಅವಳಿಗೆ ಅದು ಬರಿ ಸಂವೇದನೆಯಲ್ಲ, ಅವಳಿಗೆ ಗೊತ್ತಿರುವ ವಿಚಾರ.  ಎಲ್ಲಿ ಸತ್ಯವಿದೆಯೋ ಅಲ್ಲಿ ಯಾವುದೂ ಬದಲಾಗುವುದಿಲ್ಲ.

ನಿಜ ಹೇಳಬೇಕೆಂದರೆ ರಾಣಿ ರಸೋಮಣಿ ಹುಟ್ಟಿನಿಂದಲೂ ವಿಧವೆ.  ಅವಳಿಗೆ ಗಂಡನೊಬ್ಬ ಇದ್ದನೆನ್ನುವುದು ಸತ್ಯ.

ಆದರೆ ಅದು ತುಂಬ ಹಿಂದಾದದ್ದು.  ಎಲ್ಲರೂ ಅವನನ್ನು ಮರೆತಂತೆ ಅನ್ನಿಸಿದರೂ ಅವನು ಸದಾ ಇಲ್ಲೇ ಇರುವಂತಿದೆ.  ಅವನು ಇರಲು ಹೇಗೆ ಸಾಧ್ಯವಿಲ್ಲ?  ಸತ್ತವರ ಬಗ್ಗೆ ಸತ್ಯವಿದಷ್ಟೆ.  ಅವರು ಸತ್ತಿರುವರು ಮತ್ತು ಯಾರೂ ಅವರನ್ನು ನೆನಯದಿರುವರು.  ಆದರೆ ಅವರು ಅಕ್ಕಿ ಮೂಟೆಯ ಹಿಂದೆ ಅವಿತಂತೆ, ಪೊರಕೆ ಇಡುವ ಮೂಲೆಯಲ್ಲಿ, ಹುಣಿಸೆ ಮರದ ಛಾಯೆಯಲ್ಲಿ, ಅಂಗಳದಲ್ಲಿ, ಮಂಚದ ಕೆಳಗೆ, ಆಳುಮಕ್ಕಳ ಕಣ್ಣಲ್ಲಿ, ಬೀಸಣಿಗೆಯ ಮದ್ಯದಲ್ಲಿ ಇದ್ದಂತೆ ಕಾಣುವರು -- ಸತ್ತ ಮನುಷ್ಯ ನಿನ್ನ ಪಕ್ಕದಲ್ಲೇ ಕುಳಿತೂ ಊಟ ಮಾಡದಿರುವಂತೆ-- ಅವನು ತನ್ನ ಹೊಟ್ಟೆಯನ್ನು ಸವರಿಕೊಂಡಾಗ ಅವನ ಪಚನಕ್ರಿಯೆಯ ಶಬ್ಧ ನಿಮಗೆ ಕೇಳಿಸಿದಂತೆ ಬ್ರಾಸವಾದರು ಅವನು ಬರಿದೆ ಹೊಗೆ ಮತ್ತು ಗಾಳಿಯಷ್ಟೆ. ಅದಕ್ಕಾಗಿಯೇ ಇರಬೇಕು ಅವೆಲ್ಲವೂ ತುಂಬ ಹಿಂದಾದದ್ದು ಎಂದನಿಸುವುದು ಈಗ, ಈಗಲೂ.  ರಾಣಿ ರಸೋಮಣಿಗೆ ತನ್ನ ಯಜಮಾನ, ಬಂಕಿಪುರದ ರಾಜ ಪ್ರತಾಪ್ಚಂದ್ರ ಮೌಜುಮ್ದಾರ್, ನೀವು ಚಿಕ್ಕವರಾಗಿದ್ದಾಗ ನೋಡಿದ ದೇವಸ್ಥಾನದ ಕಲ್ಯಾಣಿ ಅಥವಾ ಬೆಟ್ಟದಂತೆ, ಯಾವಾಗಲೂ ಇರುವುದು ಆದರೆ ಈಗಿಲ್ಲ.  ನಿಮಗೆ ಅರ್ಥವಾಯಿತಲ್ಲ.  ಇದೇ ಕಾರಣವಿರಬೇಕು ಎವೆ ಮಿಟುಕಿಸದೆ ನೋಡುವುದು ಮತ್ತು ಜಪದಲಿ ಮುಳುಗುವುದು ಸುಲುಭವಾಯಿತು.

ದಾರಿ ಬಿಡಿ ದೇವರನರಸುವವರೆ
ದಾರಿ ಬಿಡಿ, ಓಡಿ ಬೆನ್ನಟ್ಟಿ ದೇವರ
ಜಿಂಕೆಗೆ ಕಿವಿಉಂಟು
ಚಿರತೆಗೆ ಕಾಲುಂಟು
ಧಿಟ್ಟತನವಿಲ್ಲ ಜಿಂಕೆಯಲಿ  
ದೇವ ಅವನ ರೂಪಿಸಿದು ಅಂತೆಯೇ
ನೀವು ದೇವರನರಸಿ
ಅರಸಿ ಮಾತ್ರ ದೇವನ

ರಾಣಿ ರಸೋಮಣಿ ತನ್ನ ಗಂಡನನ್ನು ಸದಾ ನೆನೆಯುತ್ತಾಳೆ.  ಅದೊಂದು ದಿನ ಎಂದಿನಂತೆಯೇ ಅಥವಾ ಎರಡು ದಿನಗಳಲ್ಲಿ ಒಂದು ಬಾರಿ --ಲಾರ್ಡ್ ಕರ್ಝನ್ ಸಂಜೆಯ ವೇಳೆ ಆಮಂತ್ರಿತರಿಗೆ ಕೊಡುತ್ತಿದ್ದ ಮದ್ಯವನ್ನು ರಾಜ ಪ್ರತಾಪ್ಚಂದ್ರ ಆನಂದಿಸುತ್ತಿದ್ದ.  ಅವನು ಯುರೋಪಿಯನ್ನರನ್ನು ಇಷ್ಟಪಡುತ್ತಿದ್ದುದು ಅದಕ್ಕಾಗಿಯೆ.  ರುಮಾಲು ಪೇಟ ಮತ್ತು ಕೋಟು ಧರಿಸಿ ಹೋಗುತ್ತಿದ್ದ ರಾಜ, ಬರುತ್ತಿದ್ದುದು ರುಮಾಲು ಪೇಟ ಕೋಟು ಇಲ್ಲದೆಯೆ.  ಮೋಹನ್ ಸಿಂಗ್, ವಾಹನ ಚಾಲಕ ಸದಾ ತನ್ನ ಬಾಹುಗಳಲ್ಲೆ ಅವನನ್ನು ಹೊತ್ತು ತರುತ್ತಿದ್ದ.  ರಾಜ ಸೂಕ್ಷ್ಮ ಪ್ರಕೃತಿಯವನು. ಚಿಕ್ಕವನಾಗಿದ್ದಾಗ ಒಂದು ಬಾರಿ ರಜದಲ್ಲಿ ಇಂಗ್ಲೆಂಡಿಗೆ ಹೋದವನು ಬಂದಾಗ ಯೂರೋಪಿಯನ್ನರ ನಡವಳಿಕೆಯನ್ನು ತುಂಬಿ ತಂದಿದ್ದ.  ಏಳನೇ ಎಡ್ವರ್ಡ್ ರಾಜನಿಗೂ ಅವನನ್ನು ಪರಿಚಯಿಸಿದ್ದರು.  ಆಗಿನಿಂದ ಅವನ ಷರ್ಟಿನ ತೋಳ ತುದಿಯ ಗುಂಡಿಗೆಳಿಗೆ ಏಳನೇ ಎಡ್ವರ್ಡ್ ರಾಜನ ಚಿತ್ರವನ್ನು ಕೆತ್ತನೆ ಮಾಡಿಸಿಕೊಂಡಿದ್ದ.  ಬಂಕಿಪುರದ ರಾಜ, ರಾಣಿ ರಸೋಮಣಿಗೆ ನೆನಪಿರುವಂತೆ, ಸಂಗೀತವನ್ನೂ ಕಲಿತಿದ್ದ.  ಕಲ್ಕತ್ತ ನಗರದಲ್ಲಿ ಯಾರು ತಾನೆ ಸಂಗೀತವನ್ನು ಮೆಚ್ಚುವುದಿಲ್ಲ?  ರಾಜ ಕೂಡ ಅದಕ್ಕೆ ಹೊರತಾಗಿರಲಿಲ್ಲ.  ಆದರೆ ಪಾರ್ಸಿ ನಾಟಕ ಸಂಗೀತವನ್ನು ಮಾತ್ರ ಅವನು ಮೆಚ್ಚಿದ್ದ.  ಎಲ್ಲ ಪಾರ್ಸಿ ನಾಟಕ ಮಂದಿರಗಳಿಗೆ ಹೋಗುವುದಲ್ಲದೆ “ಬಿಲ್ವ ಮಂಗಳ” ನಾಟಕ ನೋಡಿ ಕಣ್ಣೀರು ಕೂಡ ಸುರಿಸಿದ್ದ.  ಆತನ ತಂದೆ ಸರ್ ಅಪೂರ್ವ ಚಂದ್ರ ನಿತ್ಯಾನಂದ ಮೌಝುಂದಾರ್ ಬದುಕಿರುವಾಗಲೇ ಮೂರನೆ ಮಗನಾದ ಅವನನ್ನು  ಅವನ ಮಾವ ಬಂಕಿಪುರಕ್ಕೆ ಹೋಗಲು ಕೆಲವು ಬಾರಿ ಒತ್ತಾಯಿಸಿದ್ದ.  ಬಂಕಿಪುರವಿರುವುದು ಗಂಗಾ ನದಿ ತೀರದಲ್ಲೆ.  ನಾವೆಯಲಿ ಬಂಕಿಪುರಕ್ಕೆ ಹೋಗಿ ಅಲ್ಲಿನ ಕಡಪತ್ರಗಳನ್ನು ತಾಳೆ ನೋಡುವುದು, ದನ ಕರುಗಳನ್ನು ಪರೀಕ್ಷಿಸುವುದು, ಅಥವಾ ಏನು ಇಲ್ಲದಿದ್ದರೆ ಸುಮ್ಮನೆ ಹೋಗಿ ಕೆಲಸಗಾರರು ಕಾಲುವೆಯನ್ನು ಸರಿಪಡಿಸಿದ್ದಾರೊ ಇಲ್ಲವೋ ನೋಡುವುದು, ಅಥವಾ ಕೆಲಸಗಾರರ ಮಕ್ಕಳೆಲ್ಲ ಶುಭ್ರವಾಗಿ ಕಾಣುತ್ತಿದ್ದಾರೋ ಇಲ್ಲವೋ ಎಂದು ಪರೀಕ್ಷಿಸುವುದು ಅವನಿಗೆ ಕರಗತವಾಯಿತು.  ವೃದ್ಧ ರಾಜನಿಗೆ ತಲೆಯಲ್ಲಿ ಹೊಸ ವಿಚಾರಗಳೇ ತುಂಬಿತ್ತು.  ಹುಟ್ಟಿನಿಂದಲೆ ಬ್ರಹ್ಮ ಸಮಾಜದ ಪ್ರಭಾವವಿದ್ದಿರಂದ ಮನೆಯಲ್ಲಿ ಜ್ಞಾನೋದಯದ ಹಾಡುಗಳೇ ತುಂಬಿದ್ದವು. ಬ್ರಾಹ್ಮಣರು ಯಾರೂ ನಡುಮನೆಯ ಒಳಗೆ ಬರಲು ಅಪ್ಪಣೆಯಿರಲಿಲ್ಲ.  ಅವರು ಪಕ್ಕದ ಬಾಗಿಲಿನ ಮೂಲಕ, ಸ್ತ್ರೀ ವಸತಿಯನ್ನು ದಾಟಿ ಹೋಗಬೇಕಿತ್ತು.  ಇಲ್ಲಿ ವೃಂದಾವನವಿತ್ತೆ ವಿನಃ ನೈವೇದ್ಯವಿರಲ್ಲಿಲ್ಲ.

ದಾರಿ ಬಿಡಿ ದಾರಿ ಬಿಡಿ ಅಪರಿಚಿತರೇ
ಬಿಂದಿಗೆ ತಾನಾಗಿಯೇ ತುಂಬುವುದಿಲ್ಲ
ಹಳ್ಳಿಯ ಕೆರೆ ಮಳೆಯಿರದೆ ಉಕ್ಕಿ ಹರಿಯುವುದಿಲ್ಲ
ನವ ಮಾಸ ತುಂಬದೆ ಶಿಶು ಜನಿಸದು
ದೇವ ಬರನು ಸಮಸ್ಯೆ ಬಗೆಹರಿವ ಮುನ್ನ
ಎಡ ಬಲ, ಪ್ರಕೃತಿ ಪುರುಷ, ವಸ್ತು ಬ್ರಹ್ಮ
ದಾರಿ ಬಿಡಿ ದಾರಿ ಬಿಡಿ ಅಪರಿಚಿತರೇ

ಆದರೆ ಪೂಜಾಕೋಣೆಯ ಬಳಿ ಸದಾ ಪಂಚಾಂಗದ ಪ್ರಕಾರ ದೇವರಿಗೆಂದೇ ರುಚಿ ರುಚಿಯಾದ ನೈವೇದ್ಯ ತೈಯಾರಿಯಾದರೂ ಅವನೆಲ್ಲಿ ತಿಂದಾನು ಪಾಪ, ಆದರೆ ಬ್ರಾಹ್ಮಣರು ಮಾತ್ರ ಮನೆ ಯಜಮಾನಿಯನು ಅಭಿನಂದಿಸಿ “ಖೀರು ತುಂಬ ಚೆನ್ನಾಗಿದೆ, ಇನ್ನೊಂದ್ ಸ್ವಲ್ಪ ಹಾಕಿ ರಾಣಿ ಸಾಹೇಬ, ಗಡದ್ದಾಗಿದೆ” ಎಂದು ಹೊಗಳಿ ಕಬಳಿಸುವರು.

ರಾಜ ಸಾಹೇಬ್ ಹುಖ್ಖ ಸೇದುತ್ತ ಯೂರೋಪಿಯನ್ನರಿಗೂ ಅದನ್ನೇ ಕೊಡುತ್ತಾನೆ -- ಅವನಿಗೆ ಪರಕೀಯರು ಕೂಡ ತನ್ನದೇ ಚುಂಗಾಣಿಯಲಿ ಸೇದುವುದು ಅಷ್ಟೊಂದು ಮನಸ್ಸು ಕೆಡಸಿಕೊಳ್ಳುವ ವಿಚಾರವಲ್ಲ.  ಪುರುಷರ ಕಲ್ಪನೆಯೇ ವಿಚಿತ್ರ.  ಅವರು ಇರುವುದೇ ಹಾಗಿರಬೇಕು.  ಅವರು ನಿನ್ನ ಮುಂದೆ ಪರಸ್ಥ್ರಿಯರ ಬಗ್ಗೆ ಮಾತಾಡುವುದು ನೀನೆ ಮಹಾ ತಾಯಿಯಂತಲೋ ಅಥವಾ ನೀ ದೇವಿ ಸಮಾನಳೆಂದು.  ನಿನಗೆ ಮುತ್ತಿನೋಲೆಯನು ಕೊಡಿಸುವರು.  ಆದರೆ ಕಿರಿಕಿರಿ ಶುರುವಾಗುವುದು ನೀ ತಾಯಿ ಆಗಲಿಲ್ಲ, ಮಗುವಿಗೆ ಜನ್ಮ ನೀಡಲಿಲ್ಲ ಎಂದಾಗ.  ಹಿತ್ತಲಲಿ ಇರುವ ಬಾಳೆಹಣ್ಣಿನ ಮರದಲ್ಲಿ ಬಿಡುವ ಬಾಳೆಹಣ್ಣಿನ ಗೊಂಚಲಂತೆ ಎಲ್ಲರಿಗೂ, ದಗಾಕೋರ ಮತ್ತು ಗುಲಾಮರಿಗೂ ಮಕ್ಕಳಾಗುತ್ತವೆ ಆದರೆ ರಾಣಿ ರಸೋಮಣಿ ವರುಷದೊಳಗೆ ಶಿಶುವಿಗೆ ಜನ್ಮ ನೀಡದ್ದು ಪಾಪ.  ಹೌದು ಅದೊಂದು ಪಾಪ.  ಅವಳು ಜ್ಯೋತಿಷಿಗಳಲ್ಲಿ ಸಮಾಲೋಚಿದಾಗ ಅವರು ಕೊಟ್ಟದ್ದು ತಾಯಿತ.  ಅವೂ ಕೂಡ ಪಲಿತಾಂಶ ಕೊಡಲಿಲ್ಲ.  ಅವಳು ಸಾಧುಗಳ ಬಳಿ ಹೋಗುವುದನು ಆರಂಭಿಸಿದಾಗ ಅವರು ಪವಿತ್ರ ಅಕ್ಷತೆಯನ್ನು ಕೊಟ್ಟು ಸೋಮವಾರ ಉಪವಾಸ ಮಾಡಲು ಹೇಳಿ ಮಥುರ, ಪ್ರಯಾಗ, ಬನಾರಸ್ಸಿಗೆ ತೀರ್ಥ ಯಾತ್ರೆ ಮಾಡಲು ಹೇಳಿದರು.  ಆದರೆ ಮೌಜುಂದಾರ್ ದಂಪತಿಗಳು ಪ್ರಯಾಣ ಮಾಡುವ ಮೊದಲೇ ಅವನು ಸ್ವರ್ಗಸ್ತನಾದ.  ಅವನು ಬತ್ತದ ಗದ್ದೆಯಲಿ ಕುದುರೆಮೇಲಿಂದ ಬಿದ್ದು ಬಂಕಿಪುರದಲ್ಲೆ ಪ್ರಾಣ ಕಳೆದುಕೊಂಡ.  ಆಗಿನ ಕಾಲದಲ್ಲಿ ಟೆಲಿಗ್ರಾಂ ಬರಲು ಒಂದು ರಾತ್ರಿಯೇ ಕಳೆಯುತ್ತಿತ್ತು.  ರೈಲು ಗಾಡಿಯಲಿ ಹತ್ತು ಗಂಟೆಗಳೇ ಬೇಕಾಯಿತು.  ಅವನ ಅಸ್ಥಿಯ ಬೂದಿಯನು ಬ್ರಾಹ್ಮಣರು ತಂದರು. ಅದರೊಂದಿಗೆ ಅವಳು ಬನಾರಸ್ಸಿಗೆ ಹೋದವಳು ಮತ್ತೆ ಬರಲೇ ಇಲ್ಲ.  

ಆದರೆ ಈ ಸನ್ನಿವೇಶದ ವಿಚಿತ್ರವೆಂದರೆ ಬನಾರಸ್ಸಿನಲ್ಲಿ ಅವಳಿಗೆ ಅರಿವಾದದ್ದು ಅವಳು ಶೀಘ್ರದಲ್ಲೆ ಮಗುವಿನ ತಾಯಿ ಆಗುವಳೆಂದು.  ಪರಲೋಕದಲಿರುವ ತಂದೆಯ ಮಗು, ಮಗುವಲ್ಲ, ಕೆಲವರಂದರು. ತಂದೆಯ ಸ್ಪರ್ಶವೇ ಗೊತ್ತಿರದ ಮಗು.  ಆದರೆ ಮಾವ ಬ್ರಹ್ಮ ಸಮಾಜಿ, ಎಲ್ಲರಂತಲ್ಲ.  ಅವನು ಯೂರೋಪಿಯನ್ನರಂತೆ ವರ್ತಿಸಿದ.  ಅವಳಿಗೆ ಬನಾರಸ್ಸಿನಲ್ಲಿ ಒಂದು ವಿಶಾಲವಾದ ಜಮೀನು, ಬಂಗಲೆ ಕೊಡಿಸಿದ.

ದಾರಿ ಬಿಡಿ ದಾರಿ ಬಿಡಿ ಅಪರಿಚಿತರೇ
ನೊಗವಿರುವುದು ಎತ್ತಿಗಾಗಿ
ಗರ್ಭಕೋಶವಿರುವುದು ಮಗುವಿಗಾಗಿ
ತಂತಿ ಇರುವುದು ತಂಬೂರಿಗಾಗಿ
ತಂತಿ ಇರುವುದು ತಂಬೂರಿಗಾಗಿ..

ಪಲ್ಲಕ್ಕಿ ಹೊತ್ತಿದ್ದ ಸೇವಕರು ಪಲ್ಲಕ್ಕಿಯನ್ನು ಆಧಾರಕೊಟ್ಟು ಕೆಳಗಿಳಿಸಿ ಸ್ವಲ್ಪ ವಿಶ್ರಾಂತಿ ಪಡೆದು, ತಮ್ಮ ರುಮಾಲು ಪೇಟಗಳೀಂದಲೆ ಗಾಳಿ ಹಾಕಿಕೊಂಡು “ಹೇ ಶಂಭೋ” ಎನ್ನುತ್ತಾ ಕುಳಿತರು.

ತಂತಿ ಇರುವುದು ತಂಬೂರಿಗಾಗಿ..
ಪುರುಷನಿರುವುದು ಆರಾಧನೆಗಾಗಿ
ಹೇ ಶಂಭೋ ಶಂಕರ

ಜನಜಂಗುಳಿ ಪಲ್ಲಕ್ಕಿ ಹೊರುವವರನ್ನು ಸೇರಿ ಕೂಗುವವರು: ಹೇ ಶಂಭೋ ಶಂಕರ.

ಹೌದು, ಒಂದು ಹೆಣ್ಣು ಮಗುವಿನ ಜನ್ಮವಾಯಿತು.  “ಎ ಹಲ್ಲುಕಿರಿಯುವ ಕೋತಿ”  ಕೂಗಿದ ಪಲ್ಲಕ್ಕಿ ಹೊರುವವ, ದೊಡ್ಡ ಕೋತಿಯನ್ನು ಕಂಡು.  ಚಾವಣಿ ಮೇಲಿಂದ ಆ ಕೋತಿ ರಾಣಿ ಮುಂದಿರುವ ಬೆಳ್ಳಿ ತಟ್ಟೆಯಿಂದ ಬಾಳೆಹಣ್ಣು ಮತ್ತು  ತೆಂಗಿನಕಾಯಿಯನ್ನು ಕದಿಯಲು ಸರಿಯಾದ ವೇಳೆಗೆ ಕಾಯುತ್ತಾ ಹಲ್ಲುಕಿರಿಯುತ್ತಿತ್ತು.  

ಮಗಳಿಗೆ ಹಿಮವತಿ ದೇವಿ ಎಂದು ಹೆಸರಿಡಲು ಕಾರಣ ಅವಳು ಹುಟ್ಟಿದ್ದು ಜನವರಿ ತಿಂಗಳಿನ ಛಳಿಯಲ್ಲಿ.  ಜ್ಯೋತಿಷಿಗಳು ಅವಳಿಗೆ ಭೂಮ್ಯಾಕಾಶದ ಅಷ್ಟೈಶ್ವರ್ಯ ಸಿಗುವುದೆಂದೂ, ಮತ್ತು ಅವಳು ಗಣ್ಯ ವ್ಯಕ್ತಿಯನ್ನು ಮದುವೆ ಮಾಡಿಕೊಂಡು ವಿದೇಶಕ್ಕೆ ಹೋಗುವಳೆಂದು ಘೋಷಿಸಿದರು.  ಅವೆಲ್ಲವೂ ಅರ್ಥಗರ್ಬಿತವಾಗಿರ ಬೇಕಲ್ಲವೆ? ವಿದೇಶಕ್ಕೆ ಪ್ರಯಾಣ ಮಾಡುವುದು ಎಂದರೆ ರಾಣಿ ರಸೋಮಣಿಯ ಅರ್ಥದಲಿ ನೀವು ಮದ್ಯಪಾನ ಮಾಡುವುದನ್ನು ಕಲಿತು ಕೊಳ್ಳುವಿರಿ, ಏಳನೇ ಎಡ್ವರ್ಡ್ ರಾಜ ನಿಮ್ಮನ್ನು ಬರ ಮಾಡಿಕೊಳ್ಳುವವ ಎಂತಲೇ ಆಗಿತ್ತು.  ಭಾರತವನ್ನಾಳಿದ ಬ್ರಿಟಿಷ್ ಚಕ್ರಾಧಿಪತಿ ಸತ್ತು ಎಷ್ಟೊ ವರುಷಗಳಾಯಿತು ಎನ್ನುವುದು ಕೂಡ ಅವಳಿಗೆ ಹೊಳೆಯುವುದೇ ಇಲ್ಲ.  ಅವಳಿಗೆ ಯಾವ ಬದಲಾವಣೆಯೂ ಆಗಿಲ್ಲ.  ಏಳನೇ ಎಡ್ವರ್ಡ್ ಇನ್ನೂ ಭಾರತ ದೇಶವನ್ನು ಆಳುತ್ತಿದ್ದ.  “ಮನೆ ಕಡೆ ಎಲ್ಲ ಹೇಗಿದೆ?” ಎಂದು ಕೆಲವೊಮ್ಮೆ ಕಲ್ಕತ್ತಾಯಿಂದ ಬಂದ ಸಂಭದಿಕರೊಂದಿಗೆ ಕೇಳುವಳು.  ಅವಳನ್ನರಿತ ಅವರು ಚೊಕ್ಕದಾಗಿ “ದೊಡ್ಡ ರಾಜರು ದೇವರ ದಯೆಯಿಂದ ಆರೋಗ್ಯವಾಗಿರುವರು ಮತ್ತು ಚಿಕ್ಕ ರಾಜರು ಜೀವನದಲ್ಲಿ ಪಡೆದ ಐಶ್ವರ್ಯವನ್ನು ಸುಖಿಸಿ ಹಲವಾರು ಮಕ್ಕಳೊಂದಿಗೆ ಇರುವರು” ಎಂದು ಹೇಳುವರು.  ಎಲ್ಲ ಮುಂದಿನ ಪ್ರಶ್ನೆಗಳು ಅಲ್ಲಿಗೆ ಮುಗಿಯುತ್ತಿತ್ತು.

ದಾರಿ ಬಿಡಿ ದಾರಿ ಬಿಡಿ ಅಪರಿಚಿತರೆ
ರಾಣಿ ರಸೋಮಣಿ ಬರುತ್ತಿದ್ದಾರೆ

ನಿಜಾಂಶ ಏನಂದರೆ ತಾನು ರಾಣಿ ರಸೋಮಣಿ ಎನ್ನುವುದೇ ಮರೆತು ಹೋಗಿತ್ತು. ತನ್ನ ಹೆಸರನ್ನು ಕೇಳಿದಾಗ ಅವಳಿಗೆ ಸದಾ ಗೊತ್ತಿರುತ್ತಿತ್ತು ಆದರೆ ಅದನ್ನು ಎಲ್ಲಿ ಜೋಡಿಸಬೇಕೆಂದು ತಿಳಿಯುತ್ತಿರಲಿಲ್ಲ.  ಹಲ್ಲುಗಳೇ ಇಲ್ಲದ ಅವಳ ಮುಖದಲ್ಲಿ  ಹೊಳಪಿಲ್ಲದ ಬಿಳಿ ಕಣ್ಣುಗಳು.  ಆದರೆ ಅವಳ ಕೈ ಕಾಲುಗಳು ಇನ್ನೂ ಎಷ್ಟು ಗಟ್ಟಿಯಾಗಿಯೇ ಇದ್ದುವೆಂದರೆ ಅವಳು ಪಲ್ಲಕ್ಕಿಯಿಂದ ಜಿಗಿದು ಮಂದಿರದ ರತ್ನಗಂಬಳಿಯ ಮೇಲೆ ಓಡಲು ಸಾದ್ಯವಿತ್ತು.  “ರಾಣಿ ರಸೋಮಣಿ ಬಂದಿದ್ದಾರೆ” ಎಂದು ದ್ವಾರಪಾಲಕರು ಘೋಷಿಸಿದರೆ ಸಾಕು, ಕೆಲವೇ ನಿಮಿಷಗಳಲ್ಲಿ ಪಂಡಿತ್ ಶಿವಂತರು ಮಂದಿರದ ಮೆಟ್ಟಲು ಬಳಿ ಹೂವು ಅರಿಶಿನ ಕುಂಕುಮ ಕರ್ಪೂರವನ್ನು ತರುವರು.  ರಾಣಿ ತ್ವರಿತದಲ್ಲಿ ಮೆಟ್ಟಲು ಹತ್ತಿ ದೇವರ ದರ್ಶನಕೆಂದು ನಿಶ್ಶಬ್ದದಲ್ಲಿ ನಿಂತು ಶಿವನ ಸಾನಿದ್ಯದಲ್ಲಿ, ಎಲ್ಲಿ ಜನನ ಮರಣವನು ಕೂಡ ಯಾರೂ ಯಾಮಾರಿಸಲು ಸಾಧ್ಯವಿಲ್ಲವೋ ಅಲ್ಲಿಯೂ ಜನಜಂಗುಳಿ ರಾಣಿ ರಸೋಮಣಿಗೆ ದಾರಿ ಮಾಡಿಕೊಡುವುದು.  ರಾಣಿ ಎಲ್ಲೋ ಕಳೆದು ಹೋದಂತೆ ಮಗ್ನವಾಗಿ ನಿಂತಿರುವಳು.  ಪೂಜೆ ಕೂಡ ತ್ವರಿತದಲೇ ಮುಗಿಯುವುದು.  ನಂತರ ಅವಳ ಬ್ರಾಹ್ಮಣ ಸೇವಕ ಶಂಕರ್ ದಿಯೋ ಮಂದಿರದ ಹಿಂದಿನ ಅಂಗಳದಲ್ಲಿ ಸಣ್ಣ ರತ್ನಗಂಬಳಿಯನ್ನು ಹಾಸಿದರೆ ನೀವು ನೋಡಬೇಕು ಅದರ ಮೇಲೆ ಕುಳಿತ ರಾಣಿ ಹೇಗೆ ಧ್ಯಾನದಲಿ ಮುಳುಗುವಳೆಂದು.  ಆಲೋಚನೆಯೇ ಒಂದು, ಒಂದೇ ಆಲೋಚನೆ ಅವಳ ಧ್ಯಾನದ ವೈಖರಿ.  ಚಿಂತನೆ ಎಂದಿದ್ದರೂ ಚಿಂತನೆಯೆ.  ಆದ್ದರಿಂದ ಚಿಂತನೆಯೇ ಇರದು.  ಅವಳು ಶಿವನನ್ನು ಆಲೋಚಿಸಿದಾಗ ಅಲ್ಲೇ ಇರುವನು ಶಿವ, ಕುತ್ತಿಗೆಯಲಿ ಸರ್ಪದ ಹಾರ, ಗಂಗೆಯ ಮುಕುಟ, ಬಸ್ಮಧಾರಿ, ಅನುಕಂಪದ ಮೂರನೆ ಕಣ್ಣು, ಎಲ್ಲ ಇರುವಂತೆಯೆ.  ಶಿವ ಅವಳಿಗೆ ನಿಜಸ್ವರೂಪಿ.  ಮಂದಿರದ ಅಮೃತಶಿಲೆಯ ನೆಲದ ಮೇಲೆ ತನ್ನ ಕೈ ಕುಟ್ಟಿ ಬೇಕಾದರೆ ಶಿವ ಎಂದಿದ್ದರೂ ನಿಜಸ್ವರೂಪಿ ಶಿವನೆಂದೆ ಹೇಳುವಳು.

ಅವಳ ಬೆಂಗಾಲಿ ಅಷ್ಟೊಂದು ಮೇಲ್ಮಟ್ಟಕ್ಕಿರಲಿಲ್ಲ -- ಅವಳು ಶಾಲೆಗೆ ಹೋಗಿರಲಿಲ್ಲ.  ಅವಳಿಗೆ ಅಕ್ಷರ ಓದಲು ಬರುತ್ತಿತ್ತು ಮತ್ತು ಕೆಲವೊಮ್ಮೆ ಪಂಡಿತರಿಲ್ಲದಿದ್ದಾಗ ಯಾವುದಾದರು ಭಾಷಾಂತರಿಸಿದ ಪುರಾಣ ಪುಸ್ತಕಗಳನ್ನು ಓದುತ್ತಿದ್ದಳು.  ಅವಳು ಬುದ್ಧಿವಂತೆಯೂ ಅಲ್ಲ ದಡ್ಡಿಯೂ ಅಲ್ಲ, ಏನೂ ತಿಳಿಯದವಳು ಅಲ್ಲ, ಅವಳು ಅವಳೇ.  ಅವಳು ಅದನ್ನೂ ಅರ್ಥ ಮಾಡಿಕೊಂಡಿರಲಿಲ್ಲ.  ಅವಳ ಪಲ್ಲಕ್ಕಿ ಹೊರುವವರು ಗೊತ್ತಿದ್ದರು ಮತ್ತೆ ಕೆಲವು ಬಾರಿ ತನ್ನ ಮಗಳನ್ನು ನೆನೆಯುವಳು.  ಸರಿ ಸರಿ, ಅವಳ ಮಗಳು ಅವಳಿಗೆ ಒಂದು ದೊಡ್ಡ ಸಮಸ್ಯೆ ಆಗಿರಲಿಲ್ಲ.  ಹಿಮವತಿ ವಾಸ್ತವವಾಗಿ ಇರಲೇಇಲ್ಲ.  ಪತ್ರಗಳು ಬಂದಾಗ ಹಿಮವತಿ ಮತ್ತು ಅವಳ ಗಂಡ ಇಂಗ್ಲೆಂಡ್ನಲ್ಲಿ ಇದ್ದರು.  ಬಿಜೋಯ್ ಗೆ ಅಲ್ಲಿನ ಎಂಬೆಸ್ಸಿಯಲ್ಲಿ ಕೆಲಸವಿತ್ತು -- ಮೊದಲು ಲಾರ್ಡ್ ಸಿನ್ಹ ಜೊತೆಗಿದ್ದು ನಂತರ ಸೈನ್ಯದಲ್ಲಿದ್ದು ಈಗ ರಾಯಭಾರಿ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದ.  ಅವನೇನೂ ಕೆಟ್ಟ ಹುಡುಗನಲ್ಲ ಆದರೆ ಅವನ ಮಡದಿ ಅವಳ ತಂದೆಯ ದಾರಿಯನ್ನೇ ಹಿಡಿದಿದ್ದಳು.  ಅವಳಿಗೂ ಮದ್ಯಪಾನ ಮತ್ತು ಸಿಗರೆಟ್ ಸೇದುವ ಹವ್ಯಾಸ ಕೂಡ ಇದೆಯೆಂದು ಹೇಳುತ್ತಾರೆ.  ಇವೆಲ್ಲ ಮುಖ್ಯವಾದದ್ದಲ್ಲ ಎಕೆಂದರೆ ಪರಲೋಕ ಸೇರಿದ ತಂದೆಯ ಮಕ್ಕಳ ಅವಸ್ಥೆ ಹಾಗೆಯೇ.  ಅವರು ಇಲ್ಲದ ತಂದೆಯನ್ನೇ ಹೋಲುತ್ತಾರೆ.  ಮೊಮ್ಮಕ್ಕಳು ಇನ್ನೂ ಕಡೆ.  ಬೆಂಗಾಲಿ ಮಾತಾಡುವುದಿಲ್ಲ.  ಬೆಂಗಾಲಿಯಲ್ಲಿ ನೀವು ಮಾತಾಡದಿದ್ದರೆ ನೀವು ಪಸ್ಕರಿನ ಕೋತಿಯಷ್ಟೇ ಸುಸಕ್ಷಿತರು.  ಇಂಗ್ಲಿಷ್ ಭಾಷೆ ಕೇವಲ ಪೇಪರ್ ಓದಲು ಅಥವಾ ಏಳನೇ ಎಡ್ವರ್ಡ್ ಜೊತೆ ಸರಿ, ಇಲ್ಲ, ಹಾ, ಹೂಂ ಅಂತ ಹೇಳಲು ಸರಿಯಷ್ಟೆ.  ಆದರೆ ಈ ಅಸ್ಪೃಶ್ಯ ಭಾಷೆಯ ಹೊಲಸು ನಾಲಿಗೆಯ ಆಕ್ರಮಣ ಒಂದು ದೈವದ್ರೋಹವೇ ಸರಿ.  ನೀವು ನಿಮ್ಮ ಜಪವನ್ನು ಇಂಗ್ಲಿಷ್ನಲ್ಲಿ ಹೇಳುವುದಿಲ್ಲ ತಾನೆ?  ಅಥವಾ ನಿಮ್ಮ ಮಂತ್ರಗಳನ್ನು ಆ ಕಂಠ್ಯ ಮತ್ತು ಅವಲಕ್ಷಣ ನಾಲಿಗೆಯಲ್ಲಿ  ಹೇಳುತ್ತೀರ?

ದಾರಿ ಬಿಡಿ ದಾರಿ ಬಿಡಿ
ಬನಾರಸ್ಸಿನ ರಸ್ತೆಯಂತೆ ಎಲ್ಲೂ ಇಲ್ಲ
ಸತ್ಯದಂತ ಸದ್ಗುಣವಿಲ್ಲ
ಶಿವನ ಉಡುಗೊರೆಗಿಂತ ಅದ್ಭುತವಿಲ್ಲ
ಪರಿಶುದ್ದತೆಗಿಂತ ಸೌಂದರ್ಯವಿಲ್ಲ
ರಾಣಿ ರಸೋಮಣಿ ಬರುತ್ತಿದ್ದಾರೆ
ದಾರಿ ಬಿಡಿ ದಾರಿ ಬಿಡಿ ದಾರಿಹೋಕರೆ

ಹಿಂದಿರುಗುವ ರಸ್ತೆ ಯಾವಗಲೂ ಸರಾಗ, ದೇವರು ಪಲ್ಲಕ್ಕಿ ಹೊರುವವರಿಗೆ ರೆಕ್ಕೆ ಕೊಟ್ಟಂತೆ, ಅವರು ಓಡುವರು ಯಾರನ್ನೂ ಲಕ್ಷಿಸದೆ.  ಪಲ್ಲಕ್ಕಿಗೆ ಬಿಕ್ಷುಕರು ಅಡ್ಡ ಬಂದರೂ ಅಥವಾ ಟಾಂಗ ಗಾಡಿ ತ್ವರಿತವಾಗಿ ಬಳಿ ಸರಿದರೇನಂತೆ ಪಲ್ಲಕ್ಕಿ ಹೊರುವವ ಭೀಮನಂತೆ ಕೂಗುವನು.  ಅವನ ಧ್ವನಿ ದೂರದವರೆಗೂ, ನಗರದ ಕೋಟೆಯವರಿಗೂ ಕೇಳಿಸುವುದು.  ಅಲ್ಲಿಯ ವಾಹನಗಳು ಕೂಡ ನಿಧಾನವಾಗಿ ಚಲಿಸುವುವು ಮತ್ತು ಅಲ್ಲಿನ ವ್ಯಾಪಾರಿಗಳು ನಗುತ್ತ “ಅವರು ಕಾಶಿಯ ರಾಣಿ” ಎಂದು ಹೇಳುವರು.  ಇದನ್ನು ಕೇಳಿಸಿಕೊಂಡ ರಸೋಮಣಿಗೆ ಆನಂದವಾಗುತ್ತಿತ್ತು.  ಅವಳು ಹುಟ್ಟಿದ್ದೇ ಪ್ರಾಯಶಃ ಬನಾರಸ್ಸಿನಲ್ಲೇ ಅಹುದಲ್ಲವೇ?  ಮದುವೆಯಾದದ್ದು ಬನಾರಸ್ಸಿನಲ್ಲವೇ, ನೀವೆ ಹೇಳಿ.  ಅವಳ ಶರೀರವನ್ನು ಅಲ್ಲೇ ಬನಾರಸ್ಸಿನಲ್ಲಿ ಸುಡುವುದೆಂದು ತೀರ್ಮಾನಿಸಿದ್ದಾಳೆ ಅಲ್ಲವೇ?  ಮಿಕ್ಕೆಲ್ಲ ಹಣ ಕಾಸುಗಳನ್ನು ದಾನ ಧರ್ಮಕ್ಕೆಂದೆ ವಿತರಣೆ ಆಗಿದೆಯಲ್ಲವೆ.  ಹಿಮವತಿಗೆ ಆಸ್ತಿವಂತ ಗಂಡನಿದ್ದಾನೆ.  ಹರಿವ ನದಿಗೆ ಯಾರಾದರೂ ಕುಡಿಕೆಯಲ್ಲಿ ನೀರು ತರುವರೆ?  ವಾಸ್ತವಿಕವಾಗಿ ರಾಣಿ ರಸೋಮಣಿಗೆ ಯಾವುದು ನಿಜವಲ್ಲ.  ಎಲ್ಲವೂ ಬನಾರಸ್ಸ್.  ಒಂದೆ ಒಂದು ಜೀವಂತವಾಗಿರುವ ಅಸ್ತಿತ್ವವೆಂದು ರಸೋಮಣಿ ಗುರಿತಿಸುವುದು ಬನಾರಸ್ಸಿನ ಮಾ ಆನಂದಮಯಿಯನ್ನು ಮಾತ್ರ.  ಬನಾರಸ್ಸಿಗೆ ಆನಂದಮಯಿ ಬಂದಾಗ, ರಸೋಮಣಿ ಪಲ್ಲಕ್ಕಿಯಲ್ಲಿ ಅವರ ಆಶ್ರಮಕ್ಕೆ ಹೋಗಿ  ಕೀರ್ತನೆಗಳನ್ನು ಹಾಡುತ್ತಿದ್ದಳು.  ಆನಂದಮಯೀ ಸದಾ ಅವಳಿಗೆ ಆಶೀರ್ವಚನ ಮಾಡುತ್ತಿದ್ದುದು ಒಂದೇ ರೀತಿ -- ಬೊಗಸೆಗೈಯಲ್ಲಿ ಹೂವು ಹಣ್ಣು ಕೊಟ್ಟು ಅವಳೊಡನೆ ಶುದ್ದ ಬೆಂಗಾಲಿ ಭಾಷೆಯಲ್ಲಿ ಮಾತನಾಡುವರು.  ಆನಂದಮಯಿ ಒಂದು ಮಂತ್ರ ಹೇಳಿಕೊಟ್ಟು ಜೊತೆಗೆ ರಸೋಮಣಿಯ ಜಪಮಾಲೆಯನ್ನು ಸ್ಪರ್ಷಿಸಿದ್ದರು.  

ರಾಣಿ ರಸೋಮಣಿಗೆ ಎಂಬತ್ತೈದು ವರ್ಷವೆಂದು ಜನ ಹೇಳುವರು, ಮತ್ತೆ ಕೆಲವರು ನೂರು ಎಂದರು. ಆದರೂ ಜ್ಯೋತಿಷಿಗಳು ಸರಾಗವಾಗಿ ನಿಮಗೆ ಹೇಳಬಹುದಿತ್ತು ಅವಳಿಗೆ ಎಪ್ಪತಾರು ವರ್ಷಗಳೆಂದು.  ಆದರೆ ಅವಳು ಒಬ್ಬಂಟಿ, ತಿನ್ನುವುದು ಕಡಿಮೆ (ತಾಜ ಹಣ್ಣು, ಅದೂ ಸ್ವಲ್ಪವೇ ತಿನ್ನುವುದು)  ಮತ್ತು ಜಪ ಮಾಡುವುದು, ಸ್ನಾನ, ದೇವಸ್ಥಾನಕ್ಕೆ ಹೋಗುವುದು ಮತ್ತು ಅರಮನೆಗೆ ಹಿಂದುರುಗಿ ಮಹಾಭಾರತ ಕತೆಯನ್ನ ಕೇಳುವುದು,  ಹಿಂದು ಮುಂದಾಗಿ ಎಷ್ಟು ಬಾರಿ ಈ ಕಳೆದ ಐವತ್ತು ವರ್ಷಗಳಲ್ಲಿ ಬ್ರಾಹ್ಮಣರು ಈ ಕಥೆಯನ್ನು ಹೇಳಿದ್ದರೋ ಗೊತ್ತಿಲ್ಲ. ಅವಳಂತೂ ಕುರ್ಚಿಯಲ್ಲಿ ಕುಳಿತು ನವಿಲುಗಳು ಪಚ್ಚೆನೆಲದ ಮೇಲೆ ಕುಕ್ಕರುಗಾಲಿನಲ್ಲಿ ಕುಳಿತಿರುವುದನ್ನು ನೋಡುತ್ತ ತೂಕಡಿಸುವಳು.  ಈ ಪವಿತ್ರ ವ್ಯಾಸಂಗದ ಕೊಠಡಿ ಇರುವುದು ಪ್ರವೇಶದ್ವಾರದ ಎಡ ಪಕ್ಕಕ್ಕೆ.  ಪ್ರವೇಶದ್ವಾರದ ಬಳಿ ಆರಾಮ ಕುರ್ಚಿಯಲ್ಲಿ ಕುಳಿತು ಕತೆ ಕೇಳುವ ಹವ್ಯಾಸ.  ಯಾರು ಅವಳನ್ನು ನೋಡಲು ಬರುವುದಿಲ್ಲ.  ಅವಳೂ ಯಾರನ್ನು ನೋಡಲು ಹೋಗುವುದಿಲ್ಲ.  ದಾನ ಧರ್ಮದ ವಿತರಣೆಯನ್ನು ನೋಡಿಕೊಳ್ಳಲು ಕರಣಿಕ ಮನ್ನ ಲಾಲ್ ಇದ್ದಾನೆ.  ಜೀವನ ಸರಳವಾಗಿದೆ. ಪ್ರವೇಶ ದ್ವಾರದ ಬಳಿ ಇದ್ದ ನಗಾರಿ ಹೊಡೆಯುವರನ್ನು ಈಗಾಗಲೆ ಕೆಲಸದಿಂದ ತೆಗದು ಹಾಕಲಾಗಿದೆ.  ಕಾಂಗ್ರೆಸ್ಸ್ ರಾಜ್ಯ ಬಂದ ಮೇಲೆ ಮನ್ನ ಲಾಲ್ ಮಾಡಿದ ಈ ಕೆಲಸವನ್ನ ರಸೋಮಣಿ ಗಮನಿಸಿಯೂ ಇರಲಿಲ್ಲ.  ಆದಾರ ತೆರಿಗೆ ಇಡಿ ಪ್ರಪಂಚದಲ್ಲೇ ಹೆಚ್ಚು ಕೊಡಬೇಕಾದ್ದರಿಂದ ಮನ್ನ  ಲಾಲ್ ನಗಾರಿ ಹೊಡೆಯುವರ ಮತ್ತು ಮತ್ತಿತರ ಕೆಲಸದವರನ್ನು ಮನೆಗೆ ಕಳಿಸಿದ್ದ.

ಆದ್ದರಿಂದ ಈಗ ನಗಾರಿ ಹೊಡೆಯುವರ ಕೊಠಡಿಯಲ್ಲಿ, ಪ್ರವೇಶದ್ವಾರದ ಮೇಲೆ ಎಲ್ಲಕಡೆ ಗಿಣಿಗಳು ವಾಸ ಮಾಡಿಕೊಂಡಿದ್ದವು. ಹಾಗಾದರೆ ರಾಣಿ ರಸೋಮಣಿ ಏನು?  ಅನಾಮಧೇಯ ವಿಶಿಷ್ಟವ್ಯಕ್ತಿ, ಒಮ್ಮೆ ಇದ್ದವಳು, ಈಗಲೂ ಹಾಗೆ ಇರುವವಳು ಮತ್ತು ಮುಂದೆಯೂ ಹಾಗೆ ಇರುವವಳು. ರಾಣಿ ರಸೋಮಣಿಗೆ ಇನ್ನೂ ನೆನಪಿರುವಂತೆ ಏಳನೇ ಎಡ್ವರ್ಡ್ ರಾಜನಂತಹ ಪ್ರಭಾವ ಒಬ್ಬಾತನ ಅಸ್ತಿತ್ವಕ್ಕೇ ತೊಡಕಾಗಬಹುದು, ಅಥವಾ ಅಸ್ತಿತ್ವವೇ ಬದಲಾಗಬಹುದು.  ಈ ನಡುವೆ ಅವಳಿಗೆ ಶ್ರೀಗಂಧದ ಬಗ್ಗೆ ಒಂದು ರೀತಿಯ ಅನುರಾಗ ಬೆಳದಿದೆ.  ಶ್ರೀಗಂಧದ ದೊಡ್ಡ ದೊಡ್ಡ ದಿಮ್ಮಿಗಳನ್ನು ಆಗಲೆ ನಗದು ಕೊಟ್ಟು ಖರೀದಿಸಿ ಕೊಂಡಾಗಿದೆ  --ಅಪ್ಪಟ ಚಿನ್ನದಷ್ಟೇ ಬೆಲೆಯುಳ್ಳ ತೂಕದ್ದು.  ರಾಣಿಯ ಶರೀರವನ್ನು ಶ್ರೀಗಂಧದಲಿ ಬೂದಿ ಮಾಡಿದಾಗ ಇಡೀ ಬನಾರಸ್ಸ್ನಲ್ಲಿ ಪರಿಮಳದ ಕಂಪು ಹರಡಲೆಂದು.  ಅವಳು ಪರರ ಬಗ್ಗೆ ಕೇಡು ಬಯಸಳು.  ಪರರ ಬಗ್ಗೆ ಅಕ್ಕರೆಯೂ ಇಲ್ಲ ಅವಳಿಗೆ.  ಅವಳು ಸಾವಿಗಾಗಿ ಕಾಯುತ್ತಿದ್ದಾಳೆ.  ಹಸಿದ ಮರಿ ಹಕ್ಕಿ ಕಾತುರವಾಗಿ ತಾಯಿಯ ಕೊಕ್ಕಿನಿಂದ ಹುಳು ಹುಪ್ಪಟ್ಟೆಗಳನು ತಿನ್ನಲು ಬಯಸುವಂತೆ.

ಬನಾರಸ್ಸಿನಲ್ಲಿ ಹೇಳುವರು:  ಬಿಡಿ, ರಾಣಿ ನೂರು ವರುಷ ಬದುಕುವಳು.  ಹೌದು, ಅವಳು ನೂರು ವರುಷ ಬದುಕುವಳು.  ಅವಳನ್ನೊಮ್ಮೆ ನೋಡಿ, ನಿಮಗೇ ಅನ್ನಿಸುವುದು.  ನೂರು ವರುಷ ಬದುಕಲು ನೀವೊಬ್ಬ ವಿಧವೆ ಆಗಿರಬೇಕು, ಬಿಳಿ ಸೀರೆಯನು ಉಡ ಬೇಕು, ಶಿವನ ಸನ್ನಿಧಾನಕ್ಕೆ ಬೇಟಿ ಕೊಡಬೇಕು, ಮತ್ತು ಯುದ್ದ, ಸರ್ಕಾರ ಏನೊಂದು ಗೊತ್ತಿರಬಾರದು.

______________

ಅದ್ಯಾಯ ೧೧.

ಪುರುಷನ ಶಕ್ತಿ ಬಿತ್ತುವುದರಲ್ಲಿ, ಪ್ರಕೃತಿಯದು ಫ಼ಲ ಪಡೆಯುವುದರಲ್ಲಿ. ಎತ್ತುಗಳು ಭೂಮಿಯನ್ನು ಉಳಬಹುದು, ಹಕ್ಕಿಗಳು ಕ್ರಿಮಿಕೀಡೆಗಳನು ಮತ್ತು ಹಣ್ಣುಗಳನ್ನು ವೃಕ್ಷದಿಂದ ಕೀಳಬಹುದು, ಪುರುಷನ ಕೂಗು ಅವಧಿಯ ಎಲ್ಲ ದಿಕ್ಕುಗಳಲ್ಲಿ ನೇರ ರೇಖೆಯಂತೆ ಕೇಳ ಬರಬಹುದು -- ಆನೆಗಳು ರೈಲ್ವೆ ನಿಲ್ದಾಣದ ದೂರದಲಿ ಮೇಯಬಹುದು, ಒಂಟೆಗಳು ತಮ್ಮ ಗೂನ ಡುಬ್ಬಗಳ ಮೇಲೆ ಭಾರ ಹೊರಬಹುದು-- ಆದರೆ ನದಿಯ ಹರಿವು ಒಂದು ಹೆಸರಿನಂತೆ -- ತನ್ನದೇ ದೃಢತ್ವ,  ಹೊಳಪು ಪಡೆವುದು.  ಹಡಗುಗಳು ನಿಶ್ಶಬ್ಧ ಕನಸಿನಂತೆ ತೇಲುವುದು, ಕಾಲ ಮತ್ತು ಚಲನೆ ಒಂದಾದಂತೆ, ಆದರೆ  ಅವಧಿಯ ಅರ್ಥ ವೀಕ್ಷಿಸುವುದು ಎಂದಾದರೆ ಅದು ಮಾನವ ತನ್ನ ಮೇಲೆ ತಾನು ಆಡಿದ ಆಟದಂತೆ. ಮಾನವ ಒಂದು ದುಡಿವ ಮೃಗವಲ್ಲ, ಆದರೆ ಹಾಡಲು ಯೋಗ್ಯವಾದ ಹಾಡಿನಂತೆ.  ಎಲ್ಲಿ  ನೀನು ಪ್ರಾರ್ಥನೆಯ ಬೀಜವನು ಬಿತ್ತುವುವೆಯೊ ಅದೇ ಭೂಮಿ ದೇಗುಲ-ಉದ್ಯಾನವನದಂತೆ.   ಏಕೆಂದರೆ ಪ್ರಾರ್ಥನೆಯೇ ಜೀವ, ಜೀವದ ಉಸಿರು ಮತ್ತು ಸಾರ, ಅಲ್ಲಿ ಪುರುಷ ಸತ್ಯವನು ಬಿಟ್ಟಿರಲಾರ.  ಹಾಗಿದ್ದಲ್ಲಿ  ಪ್ರತಿ ಶಬ್ಧವು ಪವಿತ್ರವಾದ ಹೆಸರು, ಪ್ರತಿ ಹೆಸರು ಒಂದು ಸತ್ಯ ದ್ವನಿ.  ಕೇಳೋಣ ಬನ್ನಿ ನಮಗೆ ಪರಿಚಿತವಾದ “ಅನಹತ,” ಹೃದಯ ದ್ವನಿ, ಅದು ಹರಿವುದು  ನದಿಯಂತೆ.  

ದೇವ, ನದಿ ಹರಿಯುವುದನು ನಿಲ್ಲಿಸಿದರೆ ಏನಾದೀತು?  (ಒಂದು ಬಾರಿ ಆಕೆ ಮಾಡಿದಂತೆ, ನಿನಗೆ ನೆನಪಿದೆಯೇ, ಆಗ ನೀನೆ ಅವಳು ಗುಡುಗಿನ ಭರದಲಿ ಹರಿವುದನು ನಿನ್ನ ಕೇಶದಲಿ ಕಟ್ಟಿ ನಿಲಿಸಿದೆ, ನಗುವ ಚಂದಿರ ನಿನ್ನ ಹಣೆಯ ಮೇಲಂತೆ).  ಆಗ ವೇದಗಳು ಏನು ಮಾಡಬಹುದು. ಮೀನುಗಳು, ಬೀಜಗಳು, ದ್ವನಿಗಳು, ಆನೆಗಳು ಏನು ಮಾಡ್ಯಾವು?  ಓ ದೇವ, ಜಲ ಹರಿಯಲು ಬಿಡು, ತನ್ನ ಸನ್ನೆಗೋಲಿನಿಂದ ದೂರ ಸರಿಯದಂತೆ ಪೃತ್ವಿ ತಿರುಗಲಿ, ಗಂಗೆ ಹರಿಯಲಿ, ಸುತ್ತಿ ಸುತ್ತಿ ಆಕಾಶದಿಂದ ಧರೆಗೆ, ಸ್ವರ್ಗದಿಂದ ಮತ್ತೆ ಹಿಮಾಲಯದ ಗಿರಿಗೆ.  ವೃತ್ತಾಕಾರ ಎಲ್ಲ ಪ್ರಾರಂಭಕ್ಕೂ ಅಂತ್ಯದಂತೆ, ಗಂಗೆ ನೀರಿಗಂತೆ.  ಎಲ್ಲಿ ಹರಿವುದು ಅಂತ್ಯಗೊಳ್ಳುವುದೊ -- “ಅಪ್,” ಜಲದ ಅಸ್ಥಿತ್ವ ಪ್ರಾರಂಭವಾಗುವುದು.  ಅದಕ್ಕೋಸ್ಕರ, ಗಂಗೆ, ಹರಿ.

ಸಾವಿಗೆ ಅರ್ಥವಿಲ್ಲ.  ಪುರುಷನ ಸಂಕಲ್ಪವೇ ಸತ್ಯಾನ್ವೇಷಣೆ.  ನನ್ನ ಜೊತೆ ಕುಳಿತುಕೊ, ಆಲಿಸೋಣ ಬಾ.  ನದಿಗೆ ಆಳವಿದೆ, ನೋಡು ಹಕ್ಕಿಗಳಿಗೆ ಹಾರುವಿಕೆ ಇದೆ.  ಹಡಗಿಗಿದೆ ಕಣ್ಣುಗಳು, ಸೇತುವೆಗೆ ಇದೆ ಜಿಗಿತ.  ಆದರೂ ಮನುಷ್ಯ ಕತ್ತೆಗಳ ಕಿರುಚಾಟವನು ಕೇಳಲೆ ಬೇಕೇಕೊ? ಬನಾರಸ್ಸಿನ ಗಲ್ಲಿಗಳಲಿ ದುರ್ಗಂಧ ಎಲ್ಲಡೆ.  ಹೆಣ್ಣುಗಳು ಸಂಕೋಚ ಪಡುವರು ತಮ್ಮ ಸೀರೆಯ ಅಂಚಿನ ವಕ್ರರೇಖೆಯಂತೆ ಆದರೂ ಪುರುಷನ ಉತ್ಸಾಹ ತನ್ನ ಹಸಿದ ಕಣ್ಣ್ಗಳ ಹೊಳಪಿನಂತೆ.  ಚರಂಡಿಗಳು ಕೂಡ ತಮ್ಮ ತಮ್ಮ ದಾರಿಯಲಿ ಹೋಗುವವು ಜೊತೆಯಲಿ ಮುರಿದ ಮಣ್ಣಿನ ಕುಡಿಕೆಗಳನು ತೇಲಿಸಿಕೊಂಡು.  (ಮಾನವನಿಗೆ  ಹಾಲು, ಚಹಾ, ಮತ್ತು ಮೊಸರಿನ ಬಯಕೆಗಳನು ಪೂರೈಸಿ ನಂತರ ತಮ್ಮದೇ ನಾಶಕ್ಕೆ ಹೊರಟಿರುವಂತೆ) -- ಚರಂಡಿಯಲಿ ಮುರಿದ ಕುಕ್ಕೆಗಳು, ದಾರ ಕಟ್ಟಿದ ಸಿಹಿ ತಿಂಡಿಗಳ ಪೊಟ್ಟಣ, ಇರುವೆ ತಿಂದ ಮಗುವಿನ ಹೊಕ್ಕಳ ಬಳ್ಳಿ, ಹರಿದ ಬಟ್ಟೆಯ ತುಂಡು, ಅದರ ಮೇಲೆ ಶವಸಂಸ್ಕಾರದ ಜೇನುತುಪ್ಪವನು ಸವಿಯಲು ಕುಳಿತ ಹೆಜ್ಜೇನು. ಚರಂಡಿಗಳು ದಾರಿಯನು ಜಿಗಿದು, ಮೂಲೆಯಲಿ ತಿರುಗಿ, ಕೊನೆಯಲಿ ಅರ್ದ ಭರ್ತಿಯ ಕರಿ ಕೊಳಚೆಯನು ಗಂಗಾ ಘಾಟಿನಲಿ ತುಂಬುವ ಮುನ್ನ ಅರಳಿ ಮರದ ಕೆಳಗೆ ಜಿಗಿಯುವುದು.  ಇಲ್ಲಿ ಎಲ್ಲವೂ ಪವಿತ್ರ.   ಕೊಳಚೆಯೂ ಅವಸರದಲಿ  ಜಲಪಾತದಂತೆ ಧುಮುಕಿ ಅರಳಿ ಮರದ ಬೇರುಗಳಿಗೆ ನೀರು ಉಣಿಸಿದಂತೆ.  

ಪುರುಷನ ಸ್ಪಷ್ಟ ವಿಚಾರಗಳು ಮನಸ್ಸು ಅಥವಾ ಬುದ್ಧಿಯ ಮೇಲಿದ್ದರೂ, ಅವನು ತನ್ನ ಚಾರಿತ್ರ್ಯದ ಸಂಕೇತವೋ ಎನ್ನುವಂತೆ ಪಡಿಗೆ ಪಾತ್ರೆಗಳಿಗೆ  ಒಂದು ಆಕಾರ ಕೊಡಲೆತ್ನಿಸುತ್ತಾನೆ.  ನಾನೊಬ್ಬ ಯಾತ್ರಿಕ ಅದಕ್ಕಾಗಿಯೆ ನನ್ನ ಬಳಿ ನೀರಿನ ಬಿಂದಿಗೆ ಇದೆ.  ಒಂದು ಬಿಂದಿಗೆ.  ದೊಡ್ಡ ಬಿಂದಿಗೆ.  ಚಿಕ್ಕ ಬಿಂದಿಗೆ.  ಹಿತ್ತಾಳೆ ಆನೆಯ ಸೊಂಡಲಿನಾಕಾರದ ಅಥವಾ ಬೆಳ್ಳಿಯಲಿ  ಮಾಡಿದ ಹಂಸ ತಲೆಯ ಬಿಂದಿಗೆ, ಎರಡು ಘೋ-ಮುಖವಿರುವ ಬಿಂದಿಗೆ, ಅಥವಾ ಕಮಾನಿನ ಹಿಡಿಯಿರುವ ಬಿಂದಿಗೆ.  ಬಿಂದಿಗೆ ಎಂದಿದ್ದರೂ ಬಿಂದಿಗೆಯೆ.  ಗಂಗೆಗೆ ಆಯ್ಕೆ ಮಾಡಲು ಅವಕಾಶವೇ ಇಲ್ಲ.  ಬಿಂದಿಗೆಯನು ಮುಳುಗಿಸಿ ಗಂಗೆಯನು ಯಾತ್ರ ನಿವಾಸದ ಕೋಣೆಗೆ ತಂದು ಮೇಣದ ಮುಚ್ಚಳ ಮಾಡಿ, ನಿನ್ನೂರಿಗೆ ಮಹಾರಾಷ್ಟ್ರವೋ, ಭುವನೇಶ್ವರವೋ ಅಥವಾ ರಾಮೇಶ್ವರವೋ ಅಲ್ಲಿಗೆ ಕೊಂಡೈದು  ನಿನ್ನ ಆಶ್ರಿತ ಧಾಮದಲಿ, ಹೂವಿನಿಂದ ಮುಚ್ಚಿದ ದೇವರ ಬಳಿಯಲಿ ಸುರಕ್ಷಿತವಾಗಿ ಇಡುವೆ.  ಅಂತ್ಯದ ಸಮಯ ಬಂದಾಗ, ಯಾವಾಗ ನೀನು ಭಾರವಾದ ಉಸಿರು ಬಿಟ್ಟು  ನಿನ್ನೊಳಗೆ ನೀನು ಗೊಣಗಿಕೊಳ್ಳಲು  ಪ್ರಾರಂಭಿಸಿ ಅಮರನಾಗಲು ಹಾತೊರೆಯುವೆಯೋ, ಆಗ ನಿನ್ನ ಮಗನನ್ನೋ, ಚಿಕ್ಕಪ್ಪನನ್ನೋ, ಅಜ್ಜನನ್ನೋ ಗಂಗಾಜಲ ಕೇಳುವೆ.  ಆದರೆ ಒಂದು ಸಮಸ್ಯೆ ಎಂದರೆ ನೀನು ಎಷ್ಟು ಅಮರನಾಗಲು ಸಾಧ್ಯ?  ಹಾಗೆ ನೋಡಿದರೆ ಗಂಗೆಯಲಿ ತೇಲುವ ಸತ್ತ ನಾಯಿ ಕೂಡ ನಿನಗಿಂತ ಅಮರ.  ಅದರ ಇಡೀ ಬಾಹ್ಯ ಶರೀರವೇ ಗಂಗೆಯಲಿ ತೇಲುತ್ತಿದೆ.  ಅದೇ ರೀತಿ ಮುಳುಗಿದ ಹಂದಿಗಳು ಕೂಡ.   ನೀನು, ಕರಿ ಊದಿದ ಹಂದಿ, ನಿನಗೂ ಗೊತ್ತು ನೀ ಅಮರನೆಂದು.  ಜೀವನ ಒಂದು ಸ್ಮಶಾನದ ಆಟ, ಓ ಬ್ರಾಹ್ಮಣ.  ಅಮರತ್ವದ ಬಗ್ಗೆ ನೀ ಅಷ್ಟೊಂದು ವಿಚಾರ ಮಾತಾಡುವೆ.  ಅವೆಲ್ಲವೂ ನಿನ್ನ ಹಣಗಳಿಕೆಗೆ ನೆರವಾಗಲೆಂದೆ.  ಮಂತ್ರವೇ ಹಣ.  ದೇವಸ್ಥಾನದ ಘಂಟೆ ಇರುವುದೇ ಭಿಕ್ಷೆಗಾಗಿ.  ನಾಯಿ ಮರಿಯ ಕೂಗು ತನ್ನ ತಾಯಿಗಾಗಿ.  ಮಾತೆ ಎಂದಿದ್ದರೂ ತನ್ನ ಮಗು ಗಂಗಾ ಘಾಟಿನಲಿ ಅಂತ್ಯಗೊಳ್ಳಲಿ ಎಂದು ಜನ್ಮ ನೀಡುವುದಿಲ್ಲ.

ನಾಯಿ ಮರಿ ಆ ಬೂದಿ ಮತ್ತು ಸಗಣಿಯ ಮೇಲೆ ಕುಳಿತು ಅಳುವುದು.  ಅದರ ಒಂದು ಕಣ್ಣು ಹುಣ್ಣಾಗಿದೆ.  ನೊಣಗಳು ಅದನ್ನು ಶಾಂತಿಯಲಿ ಇರಲು ಸುಮ್ಮನೆ ಬಿಡುತ್ತಿಲ್ಲ.  ಅದಕ್ಕಾಗಿಯೆ ಅವನು ತನ್ನ ತಾಯಿಗಾಗಿ ಅಳುತ್ತಿದ್ದಾನೆ.  ಅವನ ಮೇಲೊಂದು ಕತ್ತೆ, ಸೌತೆಕಾಯಿಯ  ಸಿಪ್ಪೆ ಜಗಿಯಲು ಸಿಗದೆ ತನ್ನ ತಲೆ ಅಲ್ಲಾಡಿಸಿ ನೊಣಗಳನ್ನು ಓಡಿಸುತ್ತಾ ನಾಯಿಯ ಕಿವಿಗಳನ್ನೇ ನೆಕ್ಕುತ್ತಿದ್ದಾನೆ.  ಆದರೆ ನೊಣಗಳು ಕತ್ತೆಯ ಅಗಲವಾದ ಕಿವಿಗಳನ್ನೇ ಮುತ್ತಲು ಬಯಸುತ್ತಿವೆ.  ಮತ್ತೆಲ್ಲೋ ಮುದುಡಿದ ಹೂಗಳ ಕೆಳಗೆ ಮಗುವಿನ ಚಿಂದಿ ಬಟ್ಟೆ ಅವಿತಿದೆ.  ಯಾರ ಮಗುವಾಗಿತ್ತೋ?  ಅದರ ಮಾತೆ ಎಷ್ಟು ಮಮತೆಯಿಂದಲಿ ಮೊಲೆಗಳಿಗೆ ತಬ್ಬಿ ಹಿಡಿದಿದ್ದಳೋ.   ಚಿಂದಿ ಬಟ್ಟೆ ಜೀವನದ ಅಂತ್ಯತ್ವದಲಿ ಯಾವುದೂ ಗಹನವಾದುದಲ್ಲ ಎನ್ನುವುದರ ಸಂಕೇತ.  ಸತ್ಯಾಂಶದಲಿ ಬದುಕಿರುವುದೇ ಒಂದು ಅಮಾನುಷ ಘಟನೆ.

ಬನಾರಸ್ಸಿನಲ್ಲಿ ಬದುಕಿರುವವರೆ ಅಮಾನುಷರು.  ಅವರು ತಮ್ಮ ಬಿದಿರಿನ ಕಾಲು, ಕೋಲು, ರುಮಾಲಿನಿಂದಲೇ ತಮ್ಮ ಶಕ್ತಿಯನ್ನು ತೋರಿಸುತ್ತ ನೆಡವರು -- ಬನಾರಸ್ಸಿನಲ್ಲಿ ಕೆಲವೊಮ್ಮೆ ಪುರುಷರು ಮಾತನಾಡುವರು ಕೂಡ.  ಅವರಿಗೆ ಈ ಶಕ್ತಿ ಯಾವಾಗ ಬಂದಿತು?  ನಿಶ್ಶಬ್ಧವಾಗಿ ನಡೆವ ಅಲ್ಲಿಯ ಜನರಿಗೆ ಅಲ್ಲಿಯ ಪಾಳುಬಿದ್ದ ಅರಮನೆಯಂತೆ ತಮ್ಮದೇ ಜೀವಂತವಾಗಿರುವ ಗಂಗೆಯ ಚೂರುಪಾರಿನ ವೇದಿಕೆಯಷ್ಟೆ -- ಕೆಲವೊಮ್ಮೆ ಅಲ್ಲೊಂದು ಇಲ್ಲೊಂದು ಗಿಡ ಜೀವದ ಶಾಶ್ವತೆಯನು ಸಾಬೀತು ಗೊಳಿಸಲು ಆ ನಾಶದಲ್ಲೂ ತಲೆ ಎತ್ತಿ ನಿಲ್ಲುವುದು.  ಆದರೆ ಮುಂಬರುವ ಪ್ರವಾಹದಲ್ಲಿ ಆ ವೇದಿಕೆಯೂ  ಪಾತಾಳ ಸೇರಿ ಮತ್ತೊಮ್ಮೆ ಯಾರೂ ಆ ಕಲ್ಲುಗಳನ್ನು ಹುಡುಕಿ ಪಡೆಯರು.   ಮಹಾರಾಜರೆಲ್ಲರೂ ನಿರ್ಗಮಿಸಿದರೆಂದು ನೀನೆ ನೆನಪಿಸಿಕೊ.  ಚಕ್ರಾದಿಪತ್ಯಗಳೆ ಈ ರೀತಿ ಉರುಳಿದವು. ಎಲ್ಲ ಕಟ್ಟಡಗಳ ಹಣೆಬರಹವೂ ಕ್ಷಯಿಸಿ ಕೊನೆಗೆ ಅದೃಶ್ಯವಾಗುವುದೆ.  ಉಳಿವಿನ ಸಾರಾಂಶವಿಷ್ಟೆ:  ಕ್ರಿಯೆ ಮತ್ತು ಪ್ರತಿಕ್ರಿಯೆ.  ಕ್ರಿಯೆ ಮತ್ತು ಪ್ರತಿಕ್ರಿಯೆ ಮತ್ತೊಮ್ಮೆ.  ಒಬ್ಬ ವ್ಯಕ್ತಿ ಹುಟ್ಟ ಬೇಕೇಕೆ? ಜೀವನದಲ್ಲಿ ದುಃಖ ಪಡಬೇಕೇಕೆ?  ಬನಾರಸ್ಸಿನ ವಾಸ್ತುಶಿಲ್ಪದ ಶಿಕರಗಳು ಮತ್ತು ಕೆತ್ತನೆಗಳು ಜೀವನವನ್ನು ಸದಾ ಅಸ್ತಿತ್ವದಲ್ಲಿರುವ ವಸ್ತುಗಳೆಂದು ಹೆಸರಿಸಿದರೂ, ಕೇವಲ ಮರಣವೇ ನಿಜವಾದ ಅರ್ಥವೆಂದು ಸಾರಿ ಹೇಳುತ್ತಿವೆ.

ವತ್ಸ, ಸಾವಿಗೆ ಅರ್ಥವಿದೆಯೇ?  ಇಲ್ಲ, ಸಾವು ಒಂದು ಶೂನ್ಯ ಘಟನೆ.  ಕಾಗೆಯ ಕೂಗಿನಂತೆ, ಭಂಜೆಯ ಮಗನಂತೆ.  ಜೀವನಕ್ಕೆ ಸಾವುಂಟೆ ಎಂಬುದೇ ಪ್ರಶ್ನೆ.  ಗಂಗೆಯ ಉತ್ತರ:  ಮನುಷ್ಯ, ನೀನು ಸಾಯುತ್ತೀ ಎಂದು ಅಂದುಕೊಂಡಿರುವೆ.  ನಿನ್ನನ್ನೇ ನನ್ನ ದಡದಲ್ಲಿ ಬಸ್ಮ ಮಾಡಿಕೊಂಡರೆ ಅರಿವಾದೀತು ಯಾವುದು ಹರಿವುದೋ ಅದು ಮತ್ತೆ ಹರಿಯದಿರಲು ಸಾಧ್ಯವಿಲ್ಲ.  ಸಾವು ಒಂದು ಮೂಡ ನಂಬಿಕೆ, ನೊಣಗಳು ಆ ಮಗುವಿನ ಚಿಂದಿ ಬಟ್ಟೆ ಮೇಲೆ ಕುಳಿತು ಬೇರೆ ಏನನ್ನೂ ಕಾಣದಂತೆ.  ಕತ್ತೆಯ ಕೂಗು ಸಂಗಿತವೇ?  ನೀನು, ಹೆಸರಿರುವವ, ಸಾಯಲು ಹೇಗೆ ಸಾಧ್ಯ?  ಗಂಗೆ ಶುಷ್ಕವಾಗಲು ಸಾಧ್ಯವಿಲ್ಲದಿರುವಾಗ ನಿನಗೆ ಸಾವಿನ ಅರಿವಾಗಲು ಸಾಧ್ಯವೇ?  ಆದ್ದರಿಂದಲೆ, ಆಕೆ ಅನುಕಂಪದ ಮಹಾತಾಯಿ.  

ಮಾನವ ಮರ್ತ್ಯ ಎಂಬುದು ಮಾನವನೇ ಶೃಷ್ಟಿಸಿದ ಸುಳ್ಳು.  ಅವನು ಮೂರ್ಖನೇ ಸರಿ ಯಾರು ಅಂಥಹ ಸುಳ್ಳನ್ನು ನಂಬುವವನು.  ಯಾವಾಗ ಜ್ಞಾನ, ಗಂಗೆಯಂತೆ ಜ್ಞಾನ-ಗಂಗೆ ಹರಿಯುವಳೊ, ಸಾವು ಸತ್ಯದಲ್ಲಿ ಕರಗುವುದು.  ಶಂಕರಾಚಾರ್ಯರು ಹೇಳಿದಂತೆ ಆಕೆಯೆ ನಿಜ ಭೋದ ರೂಪಿಣಿ, ಆಕೆಯೆ ನಿರ್ಮಲ ಜಾಗೃತಿ.

ನಾನಿಲ್ಲಿಗೆ ಏಕೆ ಬಂದೆನೋ ನನಗರಿವಿಲ್ಲ.  ರಾಜ, ಹೆಸರಿಲ್ಲದ ನನಗೆ ಇಟ್ಟ ಹೆಸರು, ನೀರಿಗೆ ಅಲೆ ಎಂದು ಕರೆದ ಹಾಗೆ, ನಿಶ್ಶಬ್ಧಕ್ಕೂ ಒಂದು ಶ್ಶಬ್ಧವನು ಬಳಸಿದ ಹಾಗೆ.  ನಾನು ಇಲ್ಲಿ ಯಾಕಿರ ಬೇಕಿತ್ತು?  ನಾನು ಇಲ್ಲಿ ಇರಲು ಹೇಗೆ ಸಾಧ್ಯ? ಇಲ್ಲಿ ಎಂಬುದು ಎಲ್ಲಿ, ನಾನೆಲ್ಲಿ?  ಒಂದು ಬಿಂದು ಆಕಾಶವಾಗುವುದಿಲ್ಲ.  ಬಿಂದುಗಳ ಸಾಲು ಅವಧಿಯಾಗುವುದಿಲ್ಲ,  ಗ್ರಹಿಸಿದ ಪಂಕ್ತಿ ವಸ್ತುವಾಗುವುದಿಲ್ಲ.  ವಸ್ತುವನ್ನು ನೋಡಿದರೆ ಅದು ವಸ್ತು ಎನಿಸುವುದಿಲ್ಲ, ಅದನ್ನು ಗ್ರಹಿಸ ಬೇಕು.  ಇಲ್ಲಿ ಎಂಬುದಿಲ್ಲ, ದೇವ, ಅವಧಿ ಎಂಬುದಿಲ್ಲ, ಚಲನೆ ಎಂಬುದಿಲ್ಲ, ಆದ್ದರಿಂದಲೆ ನಾನು ಗಂಗೆ, ಹರಿದರೂ ಹರಿಯುವುದಿಲ್ಲ. ಹರಿಯುವಿಕೆಗೆ ಅಂತ್ಯವೆಲ್ಲಿ?  ಎಲ್ಲಿಯೂ ಇಲ್ಲ.  ಎಲ್ಲಿ ಅಂತ್ಯವಿಲ್ಲವೋ ಅಲ್ಲಿ ಆರಂಭ ಹೇಗಾಗಲು ಸಾಧ್ಯ?  ಯಾವುದು ಆರಂಭದಲ್ಲಿ ಅಸ್ತಿತ್ವದಲ್ಲಿರುವುದೋ ಅಂತ್ಯದಲ್ಲೂ ಅಸ್ತಿತ್ವದಲ್ಲಿರುವುದೋ ಅಂಥಹುದು ಮದ್ಯದಲ್ಲೂ ಕೊನೆಯಲ್ಲೂ ಇರಲು ಸಾಧ್ಯವಿಲ್ಲವೆಂದು ಹೇಳಿದ್ದಾರೆ ಗೌಡಪಾದ ಆಚಾರ್ಯರು.  ನಿಮಗೆ ಗೊತ್ತಿರುವ ಹಾಗೆ ಆತ ಶ್ರೀ ಶಂಕರಾಚಾರ್ಯರಿಗೆ ಗುರು.  ಆದ್ದರಿಂದ, ಮೂರ್ಖ, ಗಂಗೆ ಎಂದು ಹರಿಯುವುದಿಲ್ಲ ಎನ್ನುವುದನ್ನು ಅರಿತುಕೊ.

ನಮ್ಮನ್ನೇ ನಾವು ಆಲಿಸಿದಾಗ ಸತ್ಯ ಎಂಬುದು ಎಷ್ಟು ಸರಳ.  ಆದರೆ ನಾವು ಗಂಗ ಘಾಟಿನಲಿ ಕೇಳ ಬಯಸುವುದು ಕಾಗೆ ಕೂಗುವುದನು, ಅಂತ್ಯಕ್ರಿಯೆಲಿ ವಟಗುಟ್ಟುವ ಬ್ರಾಹ್ಮಣರ ಮಂತ್ರವನು, (ನಮ್ಮ ದೇವಸ್ತಾನದಲ್ಲು ಕೂಡ), ನಿಮ್ಮನ್ನು ಸಾವು ಮತ್ತು ಶುಂಕದ ಮಾತಲ್ಲೆ ಹೆದರಿಸುವ ಕುದುರೆ ಸವಾರನನನ್ನು, ಮತ್ತು ಸಾವಿಗಂಜದ ಸಾಧುಗಳನ್ನು.  ಜೀವನದ ತಾತ್ಪರ್ಯ ತುಂಬ ಸರಳ.  ಯಾರು ಗಂಗೆಗೆ ಹೋಗಲಾರರು.  ಯಾರೂ ತಮ್ಮ ಅಸ್ತಿತ್ವದ “ನಾನು” ಎಂಬುದಕ್ಕೆ ಹೋಗಲಾರರು.  ಧೈರ್ಯವಿದ್ದಲ್ಲಿ ಗಂಗೆಯನು ಸೂರ್ಯಾಸ್ತಮದಲ್ಲಿ ಆಳದಿಂದ ನೋಡಿ, ಗಂಗೆ ಹರಿಯದಿರುವುದನು ನೋಡಿದಾಗ ಗಂಗೆಯೆ ಇಲ್ಲವೆಂಬ ಅರಿವಾದೀತು.  ಜಲ ಜಲವಷ್ಟೆ,  ಆದ್ದರಿಂದ, ಓ, ಗಂಗಾ ಮಾತೆ, ಕೃಪೆಯಿಟ್ಟು ದಯೆ ತೋರು ಮತ್ತು ಸದಾ --- ಹರಿ.    

_______________________________________________________________
ಮೂಲ:
"On the Ganga Ghat,"  by Raja Rao., First published in 1989 by Vision Books Private Limited, Incorporating Orient Paperbacks, New Delhi, India.  Chapter 8, Pages 86-94 Chapter 11, Pages 124-127.
--------------------------------------------------------------------------


KSR2017_Book.jpeg

ಇತ್ತೀಚಿಗೆ ಬಾಸ್ಟನ್ ನಗರದಲ್ಲಿ ಕನ್ನಡ ಸಾಹಿತ್ಯ ರಂಗದ (ಕಸಾರಂ)2017ರ ಸಮ್ಮೇಳನ ಏರ್ಪಡಿಸಲಾಗಿತ್ತು.  ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುವ ಈ ಸಮ್ಮೇಳನದಲ್ಲಿಈ ವರ್ಷ "ಅವರವರ ಭಕುತಿಗೆ" ಎನ್ನುವ ವಿಶೇಷ  ಸಂಕಲನವನ್ನು ಕಸಾರಂ ಪ್ರಕಟಿಸಿದೆ.  ೪೦೦ ಪುಟಗಳಿಗೂ ಹೆಚ್ಚು ಇರುವ ಈ ಸಂಕಲನದಲ್ಲಿ ನಾನು ಬರೆದ “ಸಮಾಜ ಸುಧಾರಣೆಗೆ ವಚನ ಸಾಹಿತ್ಯದ ಕೊಡುಗೆ” ಎನ್ನುವ ಲೇಖನ ಕೂಡ ಪ್ರಕಟವಾಗಿದೆ.  ಈ ಬ್ಲಾಗ್ ನಲ್ಲಿ ಕೂಡ ಪೋಸ್ಟ್ ಮಾಡಿದ್ದೇನೆ.  ಸಮಯ ಸಿಕ್ಕಲ್ಲಿ ಓದಿ ನಿಮ್ಮ ಅಭಿಪ್ರಾಯ ಖಂಡಿತ ತಿಳಿಸಿ.

______________________

ಸಮಾಜ ಸುಧಾರಣೆಗೆ ವಚನ ಸಾಹಿತ್ಯದ ಕೊಡುಗೆ

“ಸಮಾಜ ಸುಧಾರಣೆಗೆ ವಚನ ಸಾಹಿತ್ಯದ ಕೊಡುಗೆ” ಎಂದಾಕ್ಷಣ ಮನಸ್ಸಿನಲ್ಲಿ ಬರುವ ಮೂಲಭೂತ ಪ್ರಶ್ನೆ:  ಸಾಹಿತ್ಯದಿಂದ ಸಮಾಜ ಸುಧಾರಣೆ ಆಗಲು ಸಾಧ್ಯವೇ  ಎಂದು.

ವಚನ ಸಾಹಿತ್ಯವನ್ನು ಉದಾಹರೆಣೆಯಾಗಿರಿಸಿಕೊಂಡು ಈ ಪ್ರಶ್ನೆಗೆ ಉತ್ತರ ಹುಡುಕಲು ಹೊರಟ ಒಂದು ಲಘುಲೇಖನ ಇದು. ಈ ಲಘುಲೇಖನದ ವಸ್ತು ಮೇರೆಯಿಲ್ಲದ ವಿಚಾರವೆನಿಸಿದರೂ, ಪರಿಮಿತಿಯ ಚೌಕಟ್ಟಿನೊಳಗೆ ಕೆಲವು ಮುಖ್ಯವಾದ ವಿಷಯಗಳನ್ನು ಮಾತ್ರ ವಿಂಗಡಿಸಿಕೊಂಡು ನಿಮ್ಮ ಮುಂದಿಡುವ ಪ್ರಯತ್ನ ಮಾಡಿದ್ದೇನೆ.

೧.  ಕನ್ನಡ ಸಾಹಿತ್ಯದಲ್ಲಿ ವಚನದ ಸ್ಥಾನ:  ಕನ್ನಡ ಸಾಹಿತ್ಯ ಚರಿತ್ರೆಯನ್ನು ಶಾಷನಗಳಿಂದ ಪ್ರಾರಂಭಿಸಿ ನವ್ಯದವರೆಗೂ ಕೂಲಂಕಷವಾಗಿ ಗುರಿತಿಸಿ ಅದರೊಳಗೆ ವಚನದ ಸ್ಥಾನವನ್ನು ವಿವರಿಸುವ ಉದ್ದೇಶ ನನ್ನದಲ್ಲ.  ವಚನ ಒಂದು ಸುವ್ಯಕ್ತ ಮತ್ತು ಅಸಾಧಾರಣ ಸಾಹಿತ್ಯಕ ಶೈಲಿಯಲ್ಲಿ ವಿನ್ಯಾಸಗೊಂಡ ಕಾರಣಗಳನ್ನು ಈಗಾಗಲೇ ಹಲವಾರು  ವಿದ್ವಾಂಸರು ವಿವಿರಿಸಿದ್ದಾರೆ.  ಆದರೂ ವಚನ ಸಾಹಿತ್ಯದ ಜನನ, ಅದರ ಪ್ರಭಾವ, ಅದರ ಒಂದು ಪರಿಪೂರ್ಣತೆಯನ್ನು  ತಿಳಿದು ಕೊಳ್ಳಲು ನಾವು ಹನ್ನೆರಡನೇ ಶತಮಾನದ ಹಿನ್ನಲೆಗೆ ಹೋಗಬೇಕು.  ಈ ಹಿನ್ನಲೆ ಬರಿ ಸಾಹಿತ್ಯ ದೃಷ್ಟಿಯಿಂದ ತಿಳಿದುಕೊಂಡರೆ ಸಾಲದು ಎಂದು ನನ್ನ ಅನಿಸಿಕೆ.  ಒಂದು ಹೊಸ ಸಾಹಿತ್ಯದ ರೂಪಕ ಜನಿಸಲು ಬೇರೆ ಬೇರೆ ಕಾರಣಗಳಿರುತ್ತವೆ.  ಸಾಮಾಜಿಕ, ಆರ್ಥಿಕ, ರಾಜಕೀಯ, ಬೌಗೋಳಿಕ, ಚಾರಿತ್ರಿಕ ಮತ್ತು ಧಾರ್ಮಿಕ ಹಿನ್ನಲೆಗಳನ್ನು ಅರ್ಥ ಮಾಡಿಕೊಂಡರೆ ನಮಗೆ ವಚನ ಸಾಹಿತ್ಯದ ಮೂಲವನ್ನು ತಿಳಿದುಕೊಳ್ಳಲು ಸಹಾಯವಾಗುತ್ತದೆ.   ನಿಮ್ಮ ಮನಸ್ಸನ್ನು ಆಧುನಿಕತೆಯಿಂದ ದೂರ ಮಾಡಿ ಹನ್ನೆರಡನೇ ಶತಮಾನದ ಒಬ್ಬ ಸಾಮಾನ್ಯ ಪ್ರಜೆಯಂತೆ ಕಲ್ಯಾಣ ಎಂಬ ನಗರಕ್ಕೆ ತಲುಪಿದಾಗ ವಚನಗಳ ಜನನ, ಆಕರ್ಷಣೆ ಮತ್ತು ಮೌಲ್ಯಗಳನ್ನು  ಅರಿಯಲು ನೆರವಾಗಬಹುದು.

ಈ ಹಿನ್ನಲೆಗೆ ಸಂಬಂಧ ಪಟ್ಟಂತೆ  ಕೆಳಕಂಡ ಕೆಲವು ವಿವರಗಳನ್ನು ಪರಿಶೀಲಿಸೋಣ.

೧.೧  ಬೌಗೋಳಿಕ ಹಿನ್ನಲೆ:  ವಚನ ಸಾಹಿತ್ಯ ರೂಪಗೊಂಡದ್ದು ಕರ್ನಾಟಕದ ಈಗಿನ ಬಿಜಾಪುರ ಜಿಲ್ಲೆಯಲ್ಲಿ.  ಇದೊಂದು ಅಷ್ಟೇನೂ ಶ್ರೀಮಂತಿಕೆಯಿಂದ ತುಳುಕುವ ಗಿರಿ ವನಗಳಿಂದ ಕೂಡಿದ ಪ್ರದೇಶವಲ್ಲ.  ಆದರೆ ಮಹಾರಾಷ್ಟ್ರ, ಕರ್ನಾಟಕ ಮತ್ತು ತೆಲಂಗಾಣ ಸರಹದ್ದಿನ ವಾಣಿಜ್ಯ ಕೇಂದ್ರವಾಗಿ ಪ್ರಸಿದ್ದಿ ಪಡೆದ ಜಾಗ.  ಈ ಪ್ರದೇಶದಲ್ಲಿ ನೆಲೆಯೂರಿದ ಕಳಚೂರ್ಯ ಮನೆತನದ ರಾಜರು ಮತ್ತು ಸಾಮಂತರಿಗೆ ಸೇರಿದ ಒಂದು ಕಲ್ಯಾಣವೆಂಬ ಸಣ್ಣ ಊರು ವಚನ ಸಾಹಿತ್ಯಕ್ಕೆ ಅಡಿಪಾಯ ಹಾಕಲು ಅಣಿಮಾಡಿಕೊಟ್ಟಿತು.  ತೆಲಗು, ಕನ್ನಡ ಮತ್ತು ಮರಾಠಿ ಭಾಷೆಗಳ ಪ್ರಭಾವದಿಂದ ಈ ಪ್ರಾಂತ್ಯ ಒಂದು ವಿಭಿನ್ನತೆ ಪಡೆದಿತ್ತು.

೧.೨  ಚಾರಿತ್ರಿಕ ಹಿನ್ನಲೆ:  ಹನ್ನೆರಡನೇ ಶತಮಾನದ ಪ್ರಾರಂಭ ಕಾಲದ ಅತಿಮುಖ್ಯ ಸಂಗತಿಗಳಲ್ಲಿ ಗಮನಿಸಬೇಕಾದ ಒಂದು ಹಿನ್ನಲೆಯಂದರೆ  ಆಗಿನ ಭರತ ಖಂಡದಲ್ಲಿ ಜೈನ ಧರ್ಮ ಹಲವಾರು ಕಾರಣಗಳಿಂದ ಎಲ್ಲೆಡೆ ಕ್ಷೀಣಿಸುತ್ತಾ ಬಂದಿತ್ತು.  ಆದರೆ ಕರ್ನಾಟಕದಲ್ಲಿ ಜೈನ ಮತ ನೂರಾರು ವರ್ಷಗಳಿಂದಲೂ ಅಭಿವೃದ್ಧಿ ಹೊಂದಿ ಕಲೆ ಮತ್ತು ಸಂಸ್ಕೃತಿಯ ಕೇಂದ್ರವಾಗಿತ್ತು.  ಜೈನ ರಾಜರ ದಕ್ಷ ಆಡಳಿತದಿಂದ ಅಲ್ಲಲ್ಲಿ ಹಿಂದೂ, ಜೈನ ಹಾಗು ಬೌದ್ಧ ಮತಗಳು ಶಾಂತಿಯಿಂದ ಒಟ್ಟಾಗಿದ್ದ ಕಾಲವೆನ್ನಬಹುದು.  ಜೈನ ಧರ್ಮ ಎಲ್ಲ ರೀತಿಯಲ್ಲೂ ಜನರ ಮೇಲೆ ಪ್ರಭಾವ ಬೀರಿದ್ದ ಕಾಲವದು.  ನಿಕಟದಲ್ಲೇ ಎನ್ನುವಂತೆ ಒಂಬತ್ತು ಮತ್ತು ಹತ್ತನೇ ಶತಮಾನದ ಆದಿಯಲ್ಲಿ ಶಂಕರಾಚಾರ್ಯರು ಸ್ಥಾಪಿಸಿದ ಅದ್ವೈತ ತತ್ವ ಎಲ್ಲಡೆ ಮನ್ನಣೆ ಪಡೆದು ಶೈವ ಪಂಗಡದ ಅನುಯಾಯಿಗಳು ಮಠ ಮಂದಿರಗಳನ್ನು ನಿರ್ಮಿಸಿದ್ದರು.  ಅದೇ ರೀತಿ ರಾಮಾನುಜರು ತಮಿಳುನಾಡು ಮತ್ತು ಪೂರ್ವ ಕರ್ನಾಟಕದಲ್ಲಿ ಭಕ್ತಿ ಮಾರ್ಗದ ಪ್ರಸಾರಣೆ ಮಾಡಿ ವೈಷ್ಣವ ಪಂಗಡಕ್ಕೆ ಅನುವು ಮಾಡಿಕೊಟ್ಟಿದ್ದ ಕಾಲವದು. ಕಳಚೂರ್ಯರ ಆಳ್ವಿಕೆ ಪ್ರಾರಂಭವಾದದ್ದು ಕ್ರಿ. ಶ. ೧೧೬೨ ರಲ್ಲಿ.  ಬಿಜ್ಜಳ ರಾಜ ಕಳಚೂರ್ಯರಲ್ಲಿ ಪ್ರಮುಖನಾದರೂ ಅನೇಕ ಸಾಮಂತ ರಾಜರುಗಳು ಸಣ್ಣ ಪುಟ್ಟ ಪ್ರಾಂತ್ಯಗಳಿಗೆ ಒಡೆಯರಾಗಿದ್ದರು.  ಬಿಜ್ಜಳನ ಆಳ್ವಿಕೆ ವಿಸ್ತೀರ್ಣದಲ್ಲಿ ಚಿಕ್ಕದಾದರೂ ಅವನೊಬ್ಬ ದಕ್ಷ ಆಡಳಿತಗಾರನಾಗಿದ್ದ.  ಕಲ್ಯಾಣ ನಗರವನ್ನು ವಾಣಿಜ್ಯ ಕೇಂದ್ರ ಮಾಡಲು ಬಿಜ್ಜಳ ಶ್ರಮ ಪಟ್ಟನಾದರೂ ಅದೇ ಸಮಯದಲ್ಲಿ ಉತ್ತರದಿಂದ ಮುಸ್ಲಿಂ ಬಾದಷಾಹಿಗಳ ಆಕ್ರಮಣ ಕಡಿಮೆಯಾದ್ದರಿಂದ  ಪ್ರಜೆಗಳಿಗೆ ಒಂದು ರೀತಿ ನೆಮ್ಮದಿ ದೊರಕಿತ್ತು.

೧.೩ ಧಾರ್ಮಿಕ ಹಿನ್ನಲೆ:  ಈ ಮೊದಲೇ ವಿವರಿಸಿದಂತೆ ಕರ್ನಾಟಕದಲ್ಲಿ ಹನ್ನೆರಡನೇ ಶತಮಾನದ ಮಧ್ಯದವರೆಗೂ ಜೈನ ಧರ್ಮ ಎಲ್ಲಡೆ ಹರಡಿತ್ತು. ಜೈನ ಧರ್ಮ ಜಾತಿ ಭೇದವನ್ನಾಗಲಿ, ವಿಗ್ರಹ ಪೂಜೆಯನ್ನಾಗಲಿ ಅಥವಾ ಆಹುತಿಯನ್ನಾಗಲಿ ಗುರಿತಿಸುವುದಿಲ್ಲ.  ಅಹಿಂಸೆಯಲಿ ದೃಢ ನಂಬಿಕೆ ಮತ್ತು ಶಾಕಾಹಾರ ಪದ್ದತಿಯನ್ನು ಪರಿಪಾಲಿಸುವ ಜೈನ ಅನುಯಾಯಿಗಳು ಶಾಂತಿಯಿಂದ ಧರ್ಮ ಪಾಲನೆಯಲ್ಲಿ ತೊಡಗಿದ್ದರು.  ಜೈನ ಧರ್ಮ ಸಂಖ್ಯಾಬಲ ಕಳೆದುಕೊಂಡಿತ್ತಾದರೂ ಅಂತರ್ಮತೀಯ  ವಿವಾಹಕ್ಕೆ ಮನ್ನಣೆಯಿರಲಿಲ್ಲ.  ನಿರಾಶಾವಾದಿ ಮತ್ತು ನಿಷ್ಕೃಷ್ಟವಾದ ಕಟ್ಟುನಿಟ್ಟಿನ ಜೀವನ ಪತದಲ್ಲಿ ಸಾಕಷ್ಟು ಸ್ವಾತಂತ್ರ್ಯ ಬಳಸಲು ಕೋರಿಕೆ ಕೇಳಿ ಬರುತ್ತಿತ್ತು.   ಅದೇ ಸಮಯದಲ್ಲಿ ವೇದ ಮತ್ತು ವೇದ ನೀತಿ ನಿಯಮಗಳನ್ನು ಪರಿಪಾಲಿಸುವ ಹಿಂದೂ ಧರ್ಮ ಪುನಶ್ಚೇತನಗೊಂಡಿದ್ದರೂ -- ಮೂಡ ನಂಬಿಕೆ, ಕುಲ ಭೇದ, ಯಜ್ಞಾಹುತಿಯ ನಿಯಮಗಳು, ಅರ್ಥವಾಗದ ಸಂಸ್ಕೃತ ಭಾಷೆಯ ಬಳಕೆ-- ಹೀಗೆ ಎಲ್ಲ ಧಾರ್ಮಿಕ ನಿಯಮಗಳನ್ನು ಜನಸಾಮಾನ್ಯರು ಪ್ರಶ್ನಿಸಲು ಪ್ರಾರಂಭ ಮಾಡಿದ ಕಾಲ ಎನ್ನಬಹುದು. ಒಟ್ಟಿನಲ್ಲಿ ಹೇಳುವುದಾದರೆ ಎಲ್ಲ ಧರ್ಮಗಳಿಗೂ ನಿರಂತರ ಪರಿವರ್ತನೆ ಮತ್ತು ತತ್ವಚಿಂತನೆಗೆ ಸದವಕಾಶ ದೊರೆತ ಸಮಯ ಹನ್ನೆರಡನೆಯ ಶತಮಾನ.

೧.೪  ಸಾಮಾಜಿಕ ಹಿನ್ನಲೆ:  ಹಿಂದೂ ಧರ್ಮದ ವರ್ಣಾಶ್ರಮಕ್ಕೆ ವ್ಯತಿರಕ್ತವಾಗಿ ಜೈನ ಧರ್ಮ ಸರಿಸಮಾನತೆಯನ್ನು ಬಹಿರಂಗವಾಗಿ ರೂಢಿಸಿಗೊಂಡಿತ್ತು.  ಅಕ್ಷರಸ್ಥ ಮತ್ತು ಅನಕ್ಷರಸ್ಥರ ನಂಬಿಕೆಗಳಲ್ಲಿ ವ್ಯತ್ಯಾಸ ಕಾಣುತ್ತಿದ್ದವು.  ಅಮೂರ್ತ ನಂಬಿಕೆ ಒಂದಾದರೆ ಮತ್ತೊಂದು ಒಕ್ಕೂಟದ ಗ್ರಹಿಕೆಯನು ಆಧರಿಸಿ ಮಾಡಿಕೊಂಡ ನಿಬಂಧನೆ ಎನ್ನಬಹುದು. ಇಂತಹ ನಿಬಂಧನೆಗಳಿಗೆ ಹೆಚ್ಚು ವಿವರಣೆಯ ಅಗತ್ಯವಿರಲಿಲ್ಲ.  ದೇವರನ್ನು ಮೂರ್ತಿ ಹಾಗು ಪ್ರತೀಕಗಳ ರೂಪದಲ್ಲಿ ಆರಾಧಿಸುತ್ತಿದ್ದರು. ಹಿಂದೂ, ಮುಸ್ಲಿಂ, ಜೈನ ಮತ್ತು ಬೌದ್ಧ ಮತಗಳ ಸಂಗಮ ಆಗಿನ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಯಲ್ಲಿ ಬದಲಾವಣೆಗಳನ್ನು ತರುವ ಮುನ್ಸೂಚನೆ ಕಂಡುಬರುತ್ತಿತ್ತು.  ಪ್ರಜೆಗಳಲ್ಲಿ ಇದ್ದವರು ಮತ್ತು ಇಲ್ಲದವರು ಎಂಬ ಎರಡು ಆರ್ಥಿಕ ಗುಂಪುಗಳು ಸ್ಪುಟವಾಗಿದ್ದವು.  ಜೊತೆಗೆ ಜೈನರಂತೆ ಕಳಚೂರ್ಯರು ಕೂಡ  ತೆರಿಗೆ ಪದ್ಧತಿಯನ್ನು ತಮ್ಮ ಆಡಳಿತದ ಪ್ರಾಧಾನ್ಯ ವ್ಯವಹಾರವಾಗಿ ಮಾಡಿಕೊಂಡಿದ್ದರು.

೧.೫ ಸಾಹಿತ್ಯಕ ಹಿನ್ನಲೆ:  ಜೈನ ಧರ್ಮ ಆಧಾರಿತವಾದ ಸಾಕಷ್ಟು ಗ್ರಂಥಗಳು, ಕಾವ್ಯಗಳು ಮತ್ತು ಆಗಮಗಳು ಸಾಹಿತ್ಯ ರೂಪದಲ್ಲಿ ಪ್ರಚಲಿತದಲ್ಲಿದ್ದವು.  ಇವುಗಳಲ್ಲಿ ನಾವು ಅಂದಿನ ಜನರ ಭಾವುಕತೆ, ಧಾರ್ಮಿಕ ಸಂಪ್ರದಾಯ, ನೀತಿನಿಯಮ, ಸಾಂಸ್ಕೃತಿಕ ಸಂಗತಿಗಳನ್ನು ಓದಿ ಒಂದು ನಿರ್ಧಿಷ್ಟ ಅಭಿಮತಕ್ಕೆ ಬರಬಹುದು.  ಅದೇ ಶತಮಾನದಲ್ಲಿ ಬರೆದ ಕೇಶಿರಾಜನ “ಶಬ್ದಮಣಿದರ್ಪಣಂ” ಕನ್ನಡ ವ್ಯಾಕರಣದ ಗ್ರಂಥ, ನಯನಸೇನ ಬರೆದ “ಧರ್ಮಾಮೃತ” ನೈತಿಕತೆ ಮತ್ತು ಜೈನರ ನಂಬಿಕೆ ಬಗ್ಗೆ ಗಾದೆಗಳನ್ನು ಉಪಯೋಗಿಸಿಕೊಂಡು ಬರೆದ ಪದ್ಯಗಳು, ಆಂಡಯ್ಯ ಬರೆದ “ಕಬ್ಬಿಗರ ಕಾವ್ಯ” ಮತ್ತು ಬ್ರಹ್ಮಶಿವ ಬರೆದ “ಸಮಯ ಪರೀಕ್ಷೆ” ಮತ್ತಿತರ ಪುಸ್ತಕಗಳನ್ನು ಇಲ್ಲಿ ಉದಾಹರಿಸಬಹುದು.  ಈ “ಸಮಯ ಪರೀಕ್ಷೆ” ಆಗಿನ ಮತಗಳ ಒಂದು ವಿಶ್ಲೇಷಣೆ.  ಒಂದು ಮತದ ಹೆಗ್ಗಳಿಕೆಯನ್ನು ಮತ್ತೊಂದು ಮತಕ್ಕೆ ಹೋಲಿಸಿ ಬೇರೆಯವರನ್ನು ಅಲ್ಲಗೆಳೆವ ಮೊದಲ ಪ್ರಯತ್ನ ಇದೆನ್ನಬಹುದು.  

ಈ ಸಾಹಿತ್ಯ ಕಿರುಪರಿಚಯದಿಂದ ನಾವು ಗಮನಿಸಬೇಕಾದ ಒಂದು ವಿಷಯವೆಂದರೆ ಈ ಎಲ್ಲ ಸಾಹಿತ್ಯಗಳು ಒಂದು ರೀತಿಯಲ್ಲಿ ಜನಸಾಮಾನ್ಯರಿಗೆ ತಿಳಿ ಹೇಳುವ ಅಥವಾ ಕ್ಲಿಷ್ಟವಾದ ವಿಷಯಗಳನ್ನು ಬಿಡಿಸಿ ಹೇಳುವ ಶೈಲಿ ಆಗಲೇ ಶುರುವಾಗಿದ್ದ ಕಾಲ.  ಆದರೆ ಇವೆಲ್ಲ ಸಾಹಿತ್ಯಗಳು ಜೈನರ ಕೊಡುಗೆ.  ಅದೇ ರೀತಿ ದ್ವೈತ ಅದ್ವೈತದಲ್ಲಿ ಬರುವ ತತ್ವಚಿಂತನೆಗಳನ್ನು ಎಲ್ಲ ಪ್ರಾದೇಶಿಕ ಭಾಷೆಗಳು ನಿರಾಡಂಬರ ಮಾಧ್ಯಮದಲ್ಲಿ ಅನುಷ್ಠಾನಗೊಳಿಸಲು ಶುರುಮಾಡಿದ ಕಾಲ.  ವೇದ ಮತ್ತು ಉಪನಿಷಿತ್ತಿನ ಜಟಿಲ ತಾತ್ಪರ್ಯಗಳನ್ನು ಸುಲಭಸಾಧ್ಯವಾದ ಭಾಷೆಯಲ್ಲಿ ವಿವರಿಸಿದ್ದಲ್ಲದೆ ನೃತ್ಯ, ಸಂಗೀತ, ಭೂಮಿಕೆಯ ಮಾಧ್ಯಮದಲ್ಲಿ ಅಳವಡಿಸಿಕೊಂಡ ಉದಾಹರಣೆಗಳು  ಸಿಗುತ್ತವೆ. ಆಗಿನ ವಿದ್ವಾಂಸರು  ಆತ್ಮಾವಲೋಖನ ಮತ್ತು ಆಧ್ಯಾತ್ಮದ ಬಗ್ಗೆ ಹೆಚ್ಚಾಗಿ ಗಮನ ಕೊಟ್ಟ ಪುರಾವೆಗಳು ಸಿಗುತ್ತವೆ.  

ಈ ಮೇಲಿನ ಸಂಕ್ಷೇಪ ಹಿನ್ನಲೆಯ ವಿಷಯಗಳನ್ನು ಗಮನಿಸಿದಾಗ ವಚನ ಸಾಹಿತ್ಯ ನಿರ್ವಾತದಲ್ಲಿ ಜನನಹೊಂದಲು ಸಾಧ್ಯವಿರಲಿಲ್ಲ ಎಂಬುದು ಅರಿವಾಗುತ್ತದೆ.  ಇಂತಹ ಒಂದು ಪ್ರಭಾವಶಾಲಿ ಚಾರಿತ್ರಿಕ ಘಳಿಗೆಯಲ್ಲಿ ಕೆಲವೊಮ್ಮೆ ಜನಸಾಮಾನ್ಯರಲ್ಲೇ ಮುಖಂಡತ್ವವು ಆವಿಷ್ಕರಣ ಹೊಂದಿ ಸಾಹಿತ್ಯದ ಬೆಳವಣಿಗೆ ಆದದ್ದನ್ನು ನಾವು ಕಾಣಬಹುದು.  ವಚನ ಸಾಹಿತ್ಯದ ಜನಕರಾದ ಅಲ್ಲಮ ಪ್ರಭು ಮತ್ತು ಬಸವಣ್ಣನವರನ್ನು ನಾವು ಇಲ್ಲಿಉದಾಹರಿಸಬಹುದಾದರೂ ಎರಡು ಮುಖ್ಯ ಅಂಶಗಳನ್ನು ಗಮನಿಸಬೇಕು:  ೧.  ಎಲ್ಲ ಬರಹಗಾರರು, ಸಮಾಜ ಸುಧಾರಕರು, ಚಿಂತಕರೂ ಒಂದಲ್ಲ ಒಂದು ರೀತಿ ಆಧ್ಯಾತ್ಮದ ಮೊರೆ ಹೊಕ್ಕಿದ್ದಾರೆ.  ಕೆಲವರು ಮಾತ್ರ ಈ ಸಾಧನೆಯಲ್ಲಿ ಯಶಸ್ಸುಗಳಿಸಿದ್ದಾರೆ.  ೨.  ಆಧ್ಯಾತ್ಮಿಕ ಸಾಧನೆಯನ್ನು ಬರಿ ಸಾಹಿತ್ಯ ರೂಪದಲ್ಲಿ ಬರೆದು ತೃಪ್ತಿ ಪಡದೆ, ಅದರ ಫಲವನ್ನು ಜನರಿಗೆ ಹಂಚಿ ಅವರಿಂದಲೇ ಹೊಸ ಸಮಾಜ ಸೃಷ್ಟಿಸುವುದು ಇನ್ನೂ ಕಷ್ಟದ ಕೆಲಸ.  

ಹಾಗಾದರೆ ವಚನ ಸಾಹಿತ್ಯ ಈ ಎರಡೂ ದೃಷ್ಟಿಕೋನದಲ್ಲಿ ಸಫಲವಾಯಿತೇ ಇಲ್ಲವೇ ಎಂಬುದನ್ನ ಮುಂದಿನ ಪರಿಚ್ಛೇದದಲ್ಲಿ ಕೂಲಂಕಷವಾಗಿ ಚರ್ಚಿಸುತ್ತೇನೆ.  

ಈ ಹಿನ್ನಲೆಯ ವಿಷಯಗಳನ್ನು ನಿಮಗೆ ತಿಳಿಸಿದ ಮೇಲೆ ನನ್ನ ಮುಂದಿನ ಕೆಲಸ ಸ್ವಲ್ಪ ಸುಲುಭವಾಗುವುದು ಎಂದು ನನ್ನ ನಂಬಿಕೆ.  ಹಲವಾರು ವಿದ್ವಾಂಸರು ಈಗಾಗಲೇ ಮಾಡಿರುವ ವಚನ ಸಾಹಿತ್ಯ ಮತ್ತು ಸಮಾಜ ಸುಧಾರಣೆಯ ವಿಶ್ಲೇಷಣೆಯನ್ನು ನೀವು ಈ ಕೆಳಗಿನ ಒಂದು ಸಾಲಿನಲ್ಲಿ ಅರ್ಥ ಮಾಡಿಕೊಳ್ಳಬಹುದು:  

“ಅಂತರಂಗದ ಆಧ್ಯಾತ್ಮಿಕ ಸಾಧನೆಯನ್ನು ಬಹಿರಂಗದ ಸಾಮಾಜಿಕ ಹಿತಕ್ಕಾಗಿ ಅಳವಡಿಸಿಕೊಂಡಂತ ಒಂದು ಸಾಹಿತ್ಯಕ ರೂಪಕ ವಚನಗಳು.”

ವಚನ ಸಾಹಿತ್ಯಕ್ಕೆ ಅಡಿಪಾಯ  ಅಂತರಂಗದ ಆಧ್ಯಾತ್ಮ ಅಥವಾ ಅಂತರ್ವಾಣಿ ಎಂದು ವಿದ್ವಾಂಸರ ಅಭಿಮತ.  ಸಮಾಜದಲ್ಲಿ ಆಗುತ್ತಿರುವ ವಿಷಮತೆಯನ್ನು ಅನುಭವದಿಂದ ಪರಿಹರಿಸಲು ಪಣತೊಟ್ಟವರೇ ಇರಬಹದು ಅಥವಾ ಮನ ನೊಂದು ಬೇರೆ ದಾರಿಯನರಸಿದವರಿರಬಹುದು, ದೂರ ದೃಷ್ಟಿಯಿರಬಹುದು ಒಟ್ಟಿನಲ್ಲಿ ಈ ಚಿಂತಕರ ಮಿಡಿತ ವಚನಗಳಿಗೆ ನಾಂದಿ ಆಯಿತು.  ಆಧ್ಯಾತ್ಮಿಕ ಸಾಧನೆಗೆ ಕಾರಣಕರ್ತರಾದ ಬಸವಣ್ಣ, ಅಲ್ಲಮ ಪ್ರಭು, ಅಕ್ಕಮಹಾದೇವಿ, ಜೇಡರ ದಾಸಿಮಯ್ಯ ಮತ್ತಿತರ ವಚನಕಾರರನ್ನು ನಾವು ಮುಖ್ಯ ಸೂತ್ರದಾರಿಗಳೆಂದು ಪರಿಗಣಿಸಿ ಅವರ ತತ್ವ ಸಿದ್ಧಾಂತದ ಬಗ್ಗೆ ಸ್ವಲ್ಪ ಗಮನ ಹರಿಸೋಣ.  ಮೊದಲಿಗೆ ಈ ಅಂತರಂಗದ ಆಧ್ಯಾತ್ಮಿಕ ಸಾಧನೆಯ ಗುರಿ ಮುಟ್ಟಲು ವಚನಕಾರರು ಯಾವ ಮಾಧ್ಯಮಗಳನ್ನು ಬಳಸಿದರು ಎಂದು ಪರಿಶೀಲಿಸೋಣ.  ಈ ದಿಶೆಯಲ್ಲಿ ನಾವು ನಾಲ್ಕು ಮಾಧ್ಯಮಗಳನ್ನು ಗುರುತಿಸಬಹುದು: ಶೂನ್ಯ ಸಂಪಾದನೆ, ಆಗಮಗಳ ಅಳವಡಿಕೆ, ಅನುಭವ ಮಂಟಪ ಸ್ಥಾಪನೆ ಮತ್ತು ವೀರ ಶೈವ ಮತ ಸ್ಥಾಪನೆ.  

೨.೦  ಆಧ್ಯಾತ್ಮಿಕ ಸಾಧನೆಯ ಮಾಧ್ಯಮಗಳು

೨.೧  ಶೂನ್ಯ ಸಂಪಾದನೆ:  ತತ್ವ ಸಿದ್ಧಾಂತ ಅಥವಾ ಜ್ಞಾನ ರಹಸ್ಯಯವನ್ನು ಅನ್ವೇಷಿಸಿ  ಅಲ್ಲಮ ಪ್ರಭುಗಳು ಬರೆದ  “ಮಂತ್ರ ಗೋಪ್ಯ,” ಚೆನ್ನ ಬಸವಣ್ಣ ಬರೆದ “ಕರುಣ ಹಸುಗೆ,” ಮತ್ತು ಎಲ್ಲ ಶರಣರು ಸೇರಿ ಬರೆದ “ಶೂನ್ಯ ಸಂಪಾದನೆ”ಗಳಲ್ಲಿ ನಾವು ಆತ್ಮಾವಲೋಖನದ ಪರಮ ಮಿತಿಯನ್ನು ಕಾಣ ಬಹುದು.  ಈ ಶೂನ್ಯ ಸಂಪಾದನೆಯಲ್ಲಿ ಅಡಕವಾಗಿರುವ ತತ್ವ ವಚನದ ತಳಪಾಯ.  ಶೂನ್ಯ ಎಂದರೇನು ಎಂಬುದನ್ನು ಅಲ್ಲಮ ಪ್ರಭು ಬಹಳ ಸುಂದರವಾಗಿ ಈ ರೀತಿ ವರ್ಣಿಸಿದ್ದಾರೆ:

ಅನಂತಕೋಟಿ ಬ್ರಹ್ಮಾಂಡಗಳ ಮೆಟ್ಟಿ
ಕಾಯದ ಕಣ್ಣು ಮುಚ್ಚಿ ಜ್ಞಾನದ ಕಣ್ಣ್ ತೆರದು ನೋಡಲ್ಕೆ
ಅಲ್ಲಿ ಒಂದು ನಿರಾಕಾರವುಂಟು
ಆ ನಿರಾಕಾರದಲ್ಲಿ ನಿಂದು ನಿರ್ಣಯಿಸಿ ನೋಡಲ್ಕೆ
ಅಲ್ಲಿ ಒಂದು ನಿಶ್ಯೂನ್ಯವುಂಟು
ಆ ನಿಶ್ಯೂನ್ಯದಲಿ ನಿಂದು ನಿಶ್ಚೈಸಿ ನೋಡಲ್ಕೆ
ಕತ್ತಲೆಯಲ್ಲ ಬೆಳಗಲ್ಲ, ಬಚ್ಚಬರಿಯ ಬಯಲು ಗುಹೇಶ್ವರಾ!
------- ಅಲ್ಲಮ ಪ್ರಭು.

ಇಂತಹ ಒಂದು ಮೂಲಭೂತ ತತ್ವ ಚಿಂತನೆಯ ಹಿಂದೆ ವೇದ ಮತ್ತು ಉಪನಿಷಿತ್ತುಗಳ ಪ್ರಭಾವ ಎದ್ದು ಕಾಣುತ್ತದೆ.  ವೇದಗಳಲ್ಲಿ ಬರುವ ಪೂರ್ಣ ಎಂಬುದಕ್ಕೆ ಸಮನಾದ ಪದ ಈ ಶೂನ್ಯ.  ಮೊದಲೇ ಹೇಳಿದಂತೆ ಸಂಸ್ಕೃತದ ಕ್ಲಿಷ್ಟ ತತ್ವಗಳನ್ನು ಮತ್ತು ಜ್ಞಾನದ ರಹಸ್ಯವನ್ನು ಬಿಡಿಸಿ ಜನ ಸಾಮಾನ್ಯರಿಗೆ ಹೇಳಿದ ರೀತಿಯನ್ನು ನಾವು ಈ ಶೂನ್ಯ ಸಂಪಾದನೆಯಲ್ಲಿ ನೋಡಬಹುದು.  ಈ ಶೂನ್ಯವನ್ನು ಸಂಪಾದನೆ ಅಥವಾ ಪಡೆಯುವುದೇ ಮನುಷ್ಯನ ಉದ್ದೇಶವಾಗಿರಬೇಕೆಂದು ತಿಳಿ ಹೇಳಿದ ವಚನ ಇದು.  ಜ್ಞಾನಾರ್ಜನೆಗೆ ಬೇರೆ ಬೇರೆ ಮಾರ್ಗಗಳು ಇರಲು ಸಾಧ್ಯ ಎನ್ನುವುದನ್ನು ಅಲ್ಲಮ ಪ್ರಭು ಮತ್ತು ಇತರ ವಚನಕಾರರು ತೋರಿಸಿಕೊಟ್ಟದ್ದು ಇಂತಹ ಅರ್ಥಪೂರ್ಣ ದಾರ್ಶನಿಕ ಚಿಂತನೆಗಳಿಂದ ಎಂದರೆ ತಪ್ಪಾಗದು. ಈ ವಿಭಿನ್ನತೆಯೇ ಜನ ಸಾಮಾನ್ಯರಲ್ಲಿ ವಚನಗಳಲ್ಲಿ ಅಭಿರುಚಿ ಬೆಳೆಯಲು ನೆರವಾಯಿತು.  ವೇದ ಉಪನಿಷಿತ್ತಿನ ಪಠಣದಲ್ಲಿ ದೊರೆಯದ ಈ “ಶೂನ್ಯ,” “ಸತ್ಯತೆ,” “ಸಾರ್ವಕಾಲಿಕ,” “ಊಹಾತೀತ,” ಹೀಗೇ ವಿವಿಧ ರೀತಿಯಲ್ಲಿ ಪರಬ್ರಹ್ಮನ ಬಗ್ಗೆ ಬೋಧಿಸುವುದನ್ನು ನಾವು ವಚನಗಳಿಗೆ ಮುಂಚಿತವಾಗಿ ಆಗಮಗಳಲ್ಲಿ ಮತ್ತು ಭಕ್ತಿ ಮಾರ್ಗದಲ್ಲಿ ಕಾಣಬಹುದು.  ಅದೇ ಕಾರಣದಿಂದಿರಬೇಕು ವಚನಕಾರರು ಆಗಮಗಳನ್ನು ತಮ್ಮ ಆಧ್ಯಾತ್ಮ ಸಾಧನೆಯಲ್ಲಿ ಅಳವಡಿಸಿಕೊಂಡಿದ್ದು.  

೨.೨  ಆಗಮಗಳ ಅಳವಡಿಕೆ:  ದಿನ ನಿತ್ಯ ರೂಡಿಯಲ್ಲಿ ವೇದೋಪನಿಷತ್ತುಗಳ ಪ್ರಭಾವ ಕಡಿಮೆ ಆದದ್ದು ಜೈನ ಮತ್ತು ಬೌದ್ಧ ಧರ್ಮಗಳ ಸ್ಥಾಪನೆಯಾದ ನಂತರವೇ. ಹಿಂದೂ ಧರ್ಮದ ದೇವಪೂಜಾತಂತ್ರ ವಿಧಾನವನ್ನು ತಿಳಿಸುವ ಶಾಸ್ತ್ರಗಳನ್ನು ನಾವು ಆಗಮಗಳಿಂದ ತಿಳಿಯಬಹುದು.  ಅದೇ ರೀತಿ ಅಹಿಂಸೆ, ಶಾಕಾಹಾರಿ ನಿಯಮ ಹೀಗೆ ಮೊದಲಾದ ಜೈನ ಆಚರಣೆಗಳಿಗೆ ಸಮರ್ಥನೆ  ನೀಡುವುದನ್ನು ಜೈನ ಆಗಮಗಳಲ್ಲಿ ನಾವು ಕಾಣಬಹುದು.  ವೇದ ಕಾಲದ ನಿಯಮಗಳಿಗೂ ಆಗಮಗಳಿಗೂ ತಾಳೆ ನೋಡಿದರೆ ಬಹಳಷ್ಟು ವ್ಯತ್ಯಾಸ ಕಂಡು ಬರುತ್ತದೆ.  ವಚನಕಾರರು ವೇದೋಪನಿಷಿತ್ತಿನ ಜ್ಞಾನ ಮಾರ್ಗವನ್ನು ವರ್ಣಾಶ್ರಮವನ್ನು ತೊರೆದು ಆಗಮಗಳ ಭಕ್ತಿ ಮಾರ್ಗ, ದೀಕ್ಷೆಯನ್ನು ತಮ್ಮದಾಗಿರಿಸಿಕೊಂಡ ನಿಧರ್ಶನಗಳು ಕಂಡುಬರುತ್ತವೆ.  

ವೇದೋಪನಿಷಿತ್
ಆಗಮ
ಜ್ಞಾನ ಮಾರ್ಗ
ಭಕ್ತಿ ಮಾರ್ಗ
ಅಗ್ನಿ ಮಾಧ್ಯಮ
ನೇರವಾಗಿ ದೇವರ ಪೂಜೆ
ಬಲಿ ಮತ್ತು ಆಹುತಿ
ಪ್ರಸಾದ ಮತ್ತು ನೈವೇದ್ಯ
ನೂರಾರು ದೇವರಿಗೆ ಪೂಜೆ
ಒಂದೇ ದೇವರ ಪೂಜೆ
ಮಂತ್ರಕ್ಕೆ ಹೆಚ್ಚು ಸ್ಥಾನ
ಭಜನೆ, ನಮನೆಗೆ ಹೆಚ್ಚು ಸ್ಥಾನ
ವಿಗ್ರಹ ಇಲ್ಲ
ಮೂರ್ತಿ ಹಾಗು ಪ್ರತೀಕಗಳು
ದೇವಸ್ಥಾನಗಳಿಲ್ಲ
ಸಾಮೂಹಿಕ ಪೂಜೆಗೆ ದೇವಸ್ಥಾನ
೧೬ ಸಂಸ್ಕಾರಗಳು
ದೀಕ್ಷೆ
ವರ್ಣಾಶ್ರಮ
ಎಲ್ಲ ಮನುಷ್ಯರು ಒಂದೇ

ಜೊತೆಗೆ ಜೈನ ಆಗಮಗಳಲ್ಲಿ ಕಂಡುಬರುವ ಅಹಿಂಸೆ, ಶಾಖಾಹಾರಿ, ಧರ್ಮ, ನೀತಿ, ನಡೆ-ನುಡಿ ಮತ್ತು ಹಲವಾರು ಗುಣಾತ್ಮಕ ನೀತಿನಿಯಮಗಳನ್ನು ಅಳವಡಿಸಿಕೊಂಡು ಒಂದು ವೈಶಿಷ್ಟ್ಯ ಪೂರ್ಣ ಮತವನ್ನು ಸ್ಥಾಪಿಸಲು ಯಶಸ್ವಿಯಾದರು.  

೨.೩  ಅನುಭವ ಮಂಟಪ:  ಆಧ್ಯಾತ್ಮಿಕ ಸಾಧನಗಳಲ್ಲಿ ಅತಿ ಮುಖ್ಯಪಾತ್ರ ವಹಿಸಿದ ಮಾಧ್ಯಮ ಎಂದರೆ ಅನುಭವ ಮಂಟಪ.  ಅನುಭವ ಮಂಟಪ ಆಧ್ಯಾತ್ಮಿಕ ಚಿಂತನೆಗೆ ಮತ್ತು ಜ್ಞಾನಾರ್ಜನೆಗೆ ಸ್ಥಾಪಿತವಾದ ಒಂದು ಗೋಷ್ಠಿ.  ಎಲ್ಲ ಕಡೆಯಿಂದ ಬಂದ ವಿದ್ವಾಂಸರು, ಕವಿಗಳು, ಜ್ಞಾನಿಗಳು, ಸಾಧಕರು, ಯೋಗಿಗಳು ದಿನನಿತ್ಯವೂ ವಿಚಾರ ವಿನಿಮಯ ಮಾಡುತ್ತಿದ್ದ ಒಂದು ವೇದಿಕೆ ಅನುಭವ ಮಂಟಪ.  ಹಳೆಯ ಸಂಪ್ರದಾಯಗಳನ್ನು ಬಿಟ್ಟು ಹೊಸ ಸಮಾಜವನ್ನು ಸೃಷ್ಟಿಸಲು ಅನುವು ಮಾಡಿಕೊಟ್ಟ ವೇದಿಕೆ.  ಇದೆ ವೇದಿಕೆಯಲ್ಲಿ ಸುಮಾರು ೪೫೦ ಶರಣ-ಶರಣೆಯರು ತಮ್ಮ ೧೪೫೦ಕ್ಕೂ ಹೆಚ್ಚು ವಚನಗಳನ್ನು ವಿವರವಾಗಿ ಚರ್ಚಿಸಲು ಅವಕಾಶ ದೊರಕಿತು.  ದೂರದ ಕಲ್ಯಾಣ ನಗರಿಗೆ ಬಂದವರಲ್ಲಿ ಮೇಲು ಕೀಳೆಂಬ ಬೇಧವಿಲ್ಲದೆ ಮತ್ತು ಹೆಣ್ಣು ಗಂಡಿನ ಅಂತರವನ್ನು ಕೇವಲ ಕಾಲ್ಪನಿಕ ಎಂದು ಸಾರಿದ ಸ್ತ್ರೀ ವಾದಿಗಳು ಎಲ್ಲರು ಒಂದುಗೂಡಿ ಸಹ ಬಾಳ್ವೆ ನೆಡಸಲು ಅನುವು ಮಾಡಿಕೊಟ್ಟ ಪವಿತ್ರ ಸ್ಥಳ.  ಅಕ್ಕಮಹಾದೇವಿಯಂತಹ ಶರಣೆಯರು ಅನುಭವ ಮಂಟಪದಲ್ಲಿ ಹೊಸತೊಂದು ಮಾದರಿಯಲ್ಲಿ ವ್ಯಕ್ತಿಗತವಾದ ಮನವಿ (personal appeal) ಮಾಡಿದ್ದರಿಂದ ಜನ ಸಾಮಾನ್ಯರಿಗೆ ವಚನಗಳು ಮನದಟ್ಟುವಂತಿತ್ತು.  ಅನುಭವ ಮಂಟಪದಲ್ಲಿ ಆಧ್ಯಾತ್ಮಿಕ ಚಿಂತನೆಯನ್ನು ವಿರಳವಾದ ಕಾವ್ಯ ಲಹರಿ ಮತ್ತು ಭಾವನೆಗಳನ್ನು ಬೆರಸಿ ವಚನಗಳನ್ನು ಬರೆದವರಲ್ಲಿ ಅಕ್ಕಮಹಾದೇವಿ ಅಗ್ರಗಣ್ಯಳು . ಈ ಕೆಳಗಿನ ವಚನ ಇಂತಹ ಒಂದು ಸುಂದರ ಮನವಿ:

ಹಸಿವಾದೊಡೆ ಭಿಕ್ಷಾನ್ನಗಳುಂಟು
ತೃಷೆಯಾದೊಡೆ ಕೆರೆಬಾವಿಗಳುಂಟು
ಶಯನಕೆ ಹಾಳುದೇಗುಲಗಳುಂಟು
ಚೆನ್ನಮಲ್ಲಿಕಾರ್ಜುನ ದೇವ
ಆತ್ಮ ಸಂಗಾತಕೆ ನೀನೆನಗುಂಟು
---- ಅಕ್ಕಮಹಾದೇವಿ

ಈ ವೇದಿಕೆಯ ಮಹತ್ತರ ಪರಿಣಾಮಗಳಲ್ಲಿ ಒಂದನ್ನು ನಾವು ಗಮನಿಸಬೇಕಾಗಿರುವುದೆಂದರೆ ಇಲ್ಲಿ ಸೇರಿದ್ದ ಶರಣ-ಶರಣೆಯರು ತಾವು ಬಂದ ಪ್ರದೇಶಗಳಿಗೆ ಮತ್ತೆ ಹಿಂದಿರುಗಿ ಅನುಭವ ಮಂಟಪದ ಆಧ್ಯಾತ್ಮಿಕ ಪ್ರಯೋಗಗಳನ್ನು ಹಂಚಿಕೊಂಡದ್ದು.  ಈ ರೀತಿ ಅದು ನಿರೀಕ್ಷಿಸಿದ್ದಕ್ಕಿಂತ ಎರಡರಷ್ಟು ಫಲಪ್ರದದಾಯಕ ಜ್ಞಾನಾರ್ಜನೆಯ ಮಾಧ್ಯಮವಾಯಿತು.  ಅವುಗಳಿಗೂ ಹೆಚ್ಚಾಗಿ ವೀರಶೈವ ಮತದ ಸ್ಥಾಪನೆಗೆ ಅಡಿಪಾಯವಾಯಿತು.  

೨.೪  ವೀರಶೈವ ಮತ ಸ್ಥಾಪನೆ:  ಆಧ್ಯಾತ್ಮ ಚಿಂತನೆ ಪರ್ಯವಸಾನಗೊಂಡದ್ದು ಹೊಸ ಸಮಾಜದ ನಿರ್ಮಾಣದಿಂದ.  ಮೊದಲೇ ವಿವರಿಸಿದಂತೆ ೩೬ ತತ್ವಗಳನ್ನು ಆಗಮಗಳಿಂದ ಅಳವಡಿಸಿಕೊಂಡು ಹೊಸತೊಂದು ಪ್ರಯೋಗಶೀಲ ಸಮಾಜ ಕಟ್ಟಲು ಪ್ರೇರೇಪಣೆಯಾದದ್ದು ಅನುಭವ ಮಂಟಪದಲ್ಲಿ.  ಬಸವಣ್ಣ ಮತ್ತು ಅಲ್ಲಮ ಪ್ರಭುಗಳ ನೇತೃತ್ವದಲ್ಲಿ, ಅನುಭವ ಮಂಟಪದ ನೆರಳಲ್ಲಿ ಹಾಗು ಬಿಜ್ಜಳ ರಾಜನ ಪ್ರೋತ್ಸಾಹದೊಂದಿಗೆ ವೀರ ಶೈವ ಮತ ಆರಂಭವಾಗಲು ಹೆಚ್ಚು ದಿನಗಳು ಬೇಕಾಗಲಿಲ್ಲ.  ಶೂನ್ಯ ಸಂಪಾದನೆ ಜ್ಞಾನದ ಮಾಧ್ಯಮವಾದರೆ ವಚನಗಳು ಜನ ಸಾಮಾನ್ಯರ ಮತಾಚರಣೆಗೆ ನಾಂದಿಯಾದವು.  ಇಷ್ಟಲಿಂಗ ಪೂಜೆ, ಜಂಗಮರಿಂದ ದೀಕ್ಷೆ ಮತ್ತು ಪಂಚಾಚರಗಳು (ಲಿಂಗಾಚಾರ, ಸದಾಚಾರ, ಶಿವಾಚಾರ, ಗಣಾಚಾರ ಮತ್ತು ಭ್ರುತ್ಯಾಚಾರ) ಎಲ್ಲ ಸೇರಿ ಜನರು ಈ ಮತವನ್ನು ಸ್ವೀಕಾರ ಮಾಡಲು ಸಹಾಯವಾಯಿತು. ಶಂಕರಾಚಾರ್ಯರ ಅನುಯಾಯಿಗಳು ಅನುಕರಿಸಿದ ರೀತಿಯಲ್ಲಿ ವೀರಶೈವರು ಕೂಡ ತಮ್ಮದೇ ಆದ ಮಠಗಳನ್ನು ಸ್ಥಾಪಿಸಿ ಈ ಮತಾಚರಣೆಯ ಬಗ್ಗೆ ಪಾರುಪತ್ಯ ವಹಿಸಿಕೊಂಡರು.  ಶಿವಯೋಗವೇ ಅತಿ ಶ್ರೇಷ್ಠ ಯೋಗಾಚರಣೆ ಮತ್ತು ಇಷ್ಟಲಿಂಗವೇ ಜೀವಾತ್ಮ ಪರಮಾತ್ಮಗಳ ಮಿಲನವೆಂದು ಭೋದಿಸಿ ನಿಯತ ಕ್ರಮಗಳನ್ನು ಪಾಲಿಸಲು ಆದೇಶ ನೀಡಿದರು.  ಒಟ್ಟಿನಲ್ಲಿ ಜೈನ, ಹಿಂದೂ ಮತ್ತು ಬೌದ್ಧ  ಮತಗಳ ದಿನ ನಿತ್ಯದ ರೂಡಿಗಳನ್ನೇ ವೀರ ಶೈವರು ಕಲಸುಮಲಸು ರೂಪ ಕೊಟ್ಟು ತಮ್ಮದಾಗಿರಿಸಿಕೊಂಡರು.  ಅಸತ್ಯ, ಅವಿವೇಕ, ನಾಸ್ತಿಕತೆ ಮತ್ತು ಮೂಡ ನಂಬಿಕೆಗಳನ್ನು ವೀರಶೈವರು ಖಂಡಿಸಿದರೆ ಹೊರತು ಬೇರೆ ಮತಗಳನ್ನು ಅಲ್ಲಗೆಳೆಯುತ್ತಿರಲಿಲ್ಲ.  

ಅಂತರಂಗದ ಆಧ್ಯಾತ್ಮಿಕ ಸಾಧನೆಯ ಮಾಧ್ಯಮಗಳನ್ನು ಮೇಲಿನ ಸಾಲುಗಳಲ್ಲಿ ಕೇಂದ್ರಬಿಂದುವಾಗಿ ಇಟ್ಟುಕೊಂಡು ವಿಶ್ಲೇಷಣೆ ಮಾಡಿದೆವು.  ಇನ್ನು ಮುಂದೆ ಬಹಿರಂಗ ಸಾಮಾಜಿಕ ಸುಧಾರಣೆಯ ಮಾಧ್ಯಮಗಳ ಬಗ್ಗೆ ಗಮನ ಹರಿಸೋಣ.  ಈ ದಿಶೆಯಲ್ಲಿ ಐದು ಮಾಧ್ಯಮಗಳನ್ನು ಗುರುತಿಸಬಹುದು:  ಅ) ಕಾಯಕವೇ ಕೈಲಾಸ ಎನ್ನುವ ತತ್ವಬೋಧನೆ, ಆ) ಕುಲ ಜಾತಿ ಮೇಲುಕೀಳೆಂಬುದಿಲ್ಲ ಎನ್ನುವ ಅರಿವು, ಇ) ನಡೆ-ನುಡಿಯಲ್ಲಿ ಭಾಷಾ ಸುಧಾರಣೆ, ಈ) ಧರ್ಮ ಮತ್ತು ನೀತಿಯ ಬಗ್ಗೆ ಸಾಮಾನ್ಯ ವ್ಯಾಖ್ಯಾನ ಮತ್ತು ಉ) ಕೊನೆಯದಾಗಿ ಕೆಲವೊಮ್ಮೆ ವಚನಗಳಲ್ಲಿ ಕಂಡು ಬರುವ ಅಪಹಾಸ್ಯ, ಅಪನಿಂದನೆ ಮತ್ತು ಹೀಯಾಳಿಕೆ.

೩.೦  ಬಹಿರಂಗ ಸಾಮಾಜಿಕ ಸುಧಾರಣೆಯ ಮಾಧ್ಯಮಗಳು.

೩.೧  ಕಾಯಕವೇ ಕೈಲಾಸ: ಶೂನ್ಯ ಸಂಪಾದನೆಯೇ ಗುರಿ ಎಂದು ಅರಿತು ಆ ಬ್ರಹ್ಮವನ್ನು ಪಡೆಯಲು ಭಕ್ತಿ ಒಂದು ಮಾರ್ಗವಾದರೆ ಕಾಯಕ ಅಥವ ಕೆಲಸದಲ್ಲಿ ಮಗ್ನನಾಗಿಯೂ ಅದನ್ನು ಪಡೆಯುವುದು ಯುಕ್ತವೆಂದು ವಚನಕಾರರು ಭೋದಿಸಿದ್ದಾರೆ.  ಯಾವುದನ್ನು ಶ್ರೀಕೃಷ್ಣ ಕರ್ಮಯೋಗವೆಂದು ಕರೆದನೋ, ಅದನ್ನೇ ವಚನಕಾರರು ಕಾಯಕವೇ ಕೈಲಾಸ ಎಂದರು.  ಆಯ್ದಕ್ಕಿ ಮಾರಯ್ಯ ಎಂಬುವನ ಈ ಕೆಳಗಿನ ವಚನದಲ್ಲಿ ಕಾಯಕದಲ್ಲಿ ನಿರತನಾದವನಿಗೆ ಮತ್ತೆಲ್ಲವೂ ವ್ಯರ್ಥ ಎಂದು ಹೇಳಿರುವುದು ಗಮನಾರ್ಹ.  

ಕಾಯಕದಲ್ಲಿ ನಿರತನಾದಡೆ,
ಗುರುದರ್ಶನವಾದಡೂ ಮರೆಯಬೇಕು
ಲಿಂಗಪೂಜೆಯಾದಡೂ ಮರೆಯಬೇಕು
ಜಂಗಮ ಮುಂದೆ ನಿಂದಿದ್ದಡೂ ಹಂಗ ಹರಿಯಬೇಕು
ಕಾಯಕವೆ ಕೈಲಾಸವಾದ ಕಾರಣ
ಅಮರೇಶ್ವರಲಿಂಗವಾಯಿತ್ತಾದಡೂ ಕಾಯಕದೊಳಗು
----- ಆಯ್ದಕ್ಕಿ ಮಾರಯ್ಯ

ಅನುಭವ ಮಂಟಪದಲ್ಲಿ ಸೇರಿದ್ದ ಕಮ್ಮಾರ, ನೈಗೆಯವ, ಬಡಗಿ, ಚಮ್ಮಾರ, ರೈತ, ಬಾಣಸಿಗ, ಕುಂಬಾರ, ಕೋಮಟಿಗ ಅಥವಾ ಇನ್ಯಾವುದೇ ಕಸುಬಿನಲ್ಲಿ ತೊಡಗಿದ್ದ ಜನ ಸಾಮಾನ್ಯರ ಮೇಲೆ ಕಾಯಕವೇ ಕೈಲಾಸ ಎನ್ನುವ ಮಂತ್ರ ಬಹಳಷ್ಟು ಪರಿಣಾಮ ಬೀರಿತು.  ಜೊತೆಗೆ ವೈದಿಕ ಧರ್ಮದ ವಿರುಕ್ತವಾಗಿ ಶರಣರು ಎಲ್ಲ ಮನುಜರು ಒಂದೇ ಎಂದು ಸಾರಿದ್ದರಿಂದ ಕುಲರಹಿತ ಸಮಾಜ ಕಟ್ಟಲು ಸಾಧ್ಯವಾಯಿತು.  

೩.೨  ಕುಲ, ಜಾತಿ ಮೇಲುಕೀಳೆಂಬುದಿಲ್ಲ:  ಈ ವಿಷಯಕ್ಕೆ ಸಂಬಂಧ ಪಟ್ಟಂತೆ ಬಸವಣ್ಣನವರ ದಾರ್ಶನಿಕ ವಚನವೊಂದು ಇಲ್ಲಿ ಉದಾಹರಿಸುವುದು ಸೂಕ್ತ.

ಕಳ ಬೇಡ ಕೊಲ ಬೇಡ ಹುಸಿಯ ನುಡಿಯಲು ಬೇಡ
ತನ್ನ ಬಣ್ಣಿಸ ಬೇಡ ಇದಿರ ಹಳಿಯಲು ಬೇಡ
ಮುನಿಯ ಬೇಡ ಅನ್ಯರಿಗೆ ಅಸಹ್ಯ ಪಡಬೇಡ
ಇದೆ ಅಂತರಂಗ ಶುದ್ಧಿ ಇದೆ ಬಹಿರಂಗ ಶುದ್ಧಿ
ಇದೆ ನಮ್ಮ ಕೂಡಲ ಸಂಗಮನೊಲಿಸುವ ಪರಿ
---- ಬಸವಣ್ಣ

ಮತ್ತೊಂದು ವಚನದಲ್ಲಿ ಬಸವಣ್ಣನವರೇ ಜಾತಿಯೆಂಬ ಮರಳುತನವನ್ನು ಹೀಗೆ ಖಂಡಿಸಿದ್ದಾರೆ:

ಜಾತಿವಿಡಿದು ಸೂತಕನರಸುವೆ
ಜ್ಯೋತಿವಿಡಿದು ಕತ್ತಲೆಯನರಸುವೆ
ಇದೇಕೋ ಮರಳು ಮಾನವ
ಜಾತಿಯಲ್ಲಿ ಅಧಿಕನೆಂಬೆ ….
------ ಬಸವಣ್ಣ.

ಉದ್ದೇಶಪೂರ್ವಕವಾಗಿ ಅಲ್ಲದಿದ್ದರೂ ಬೇರೆ ಮತಾಚರಣೆಗಳನ್ನು ಮಾನದಂಡವಾಗಿ ಬಳಸಿಕೊಂಡು ಜಾತಿ ಬೇಧ, ಕುಲ ಬೇಧ ಮತ್ತಿತರ ನಕಾರಾತ್ಮಕ ಮಾನವ ಪ್ರವೃತ್ತಿಯನ್ನು ತಿದ್ದಲು ಮಾಡಿದ ಪ್ರಯತ್ನಗಳಿವು.  ಇಂತಹ ಪರಿಷ್ಕರಣ ಪ್ರೇಯೋಗಗಳ ಜೊತೆಗೆ ಭಾಷಾ ಸುಧಾರಣೆಗಳನ್ನು ತರುವುದರಲ್ಲಿ ವಚನಕಾರರು ಸಫಲರಾದರು.

೩.೩  ನಡೆ-ನುಡಿಯಲ್ಲಿ ಭಾಷಾ ಸುಧಾರಣೆ: ಅಸಂಸ್ಕೃತ ಮನುಷ್ಯ ಗೆಳತನವ ಗಳಿಸಲು ಸಾಧ್ಯವಿಲ್ಲ ಮತ್ತು ಸಮಾಜದಲ್ಲಿ ಗೌರವ ಪಡೆಯಲಾರ ಎಂದು ಭೋದಿಸಿದ ವಚನಕಾರರು ಜನ ಸಾಮಾನ್ಯರನ್ನು ಸುಸಂಸ್ಕೃತಗೊಳಿಸಲು ಪ್ರಯತ್ನಿಸಿದರು.  ಇಂತಹ ಪರಿಷ್ಕಾರಕ ಮತ್ತು ಅನುಕರಣೀಯ ವ್ಯಕ್ತಿತ್ವ ಬಸವಣ್ಣ ಮತ್ತು ಅಕ್ಕಮಹಾದೇವಿಯಲ್ಲಿ ರಕ್ತಗತವಾಗಿತ್ತು ಎನ್ನುವುದಕ್ಕೆ ಈ ಕೆಳಗಿನ ಎರಡು ವಚನಗಳೇ ಸಾಕ್ಷಿ.

ನುಡಿದರೆ ಮುತ್ತಿನ ಹಾರದಂತಿರಬೇಕು
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು
ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು
ನುಡಿದರೆ ಲಿಂಗಮೆಚ್ಚಿ ಅಹುದೆನಬೇಕು
ನುಡಿಯೊಳಗೆ ನಡೆಯದಿದ್ದರೆ
ಕೂಡಲಸಂಗಮದೇವನೆಂತೊಲಿವನಯ್ಯ.
---- ಬಸವಣ್ಣ

ನಡೆಯದ ನುಡಿಗಡಣ, ಮಾಡದ ಕಲಿತನ,
ಚಿತ್ರದಸತಿಯ ಶೃಂಗಾರವದೇತಕ್ಕೆ ಪ್ರಯೋಜನ ?
ಎಲೆಯಿಲ್ಲದ ಮರನು, ಜಲವಿಲ್ಲದ ನದಿಯು,
ಗುಣಿಯಲ್ಲದ ಅವಗುಣಿಯ ಸಂಗವದೇತಕ್ಕೆ ಪ್ರಯೋಜನ ?
ದಯವಿಲ್ಲದ ಧರ್ಮ, ಉಭಯವಿಲ್ಲದ ಭಕ್ತಿಯು,
ನಯವಿಲ್ಲದ ಶಬ್ದವದೇತಕ್ಕೆ ಪ್ರಯೋಜನ ಎನ್ನ ದೇವ ಚೆನ್ನಮಲ್ಲಿಕಾರ್ಜುನಾ ?
----- ಅಕ್ಕಮಹಾದೇವಿ

ಇಲ್ಲಿಯವರಗೆ ದೊರಕಿರುವ ಹೆಚ್ಚು ಪ್ರಮಾಣದ ವಚನಗಳಲ್ಲಿ ನಡೆ-ನುಡಿಯ ಬಗ್ಗೆ ಪ್ರಾಧಾನ್ಯ ಕೊಡಲಾಗಿದೆ.  ಅಂಬಿಗರ ಚೌಡಯ್ಯ, ಗುರುಸಿದ್ಧದೇವರು, ಮೋರಿಗೆ ಮಾಚಯ್ಯ, ದೇಶಿಕೇಂದ್ರ ಸಂಗನಬಸವಯ್ಯ, ಹಡಪದ ಅಪ್ಪಣ್ಣ, ಹೀಗೆ ಹೇಳುತ್ತಾ ಹೋದರೆ ನೂರಾರು ವಚನಕಾರರ ನಿರೂಪಣೆಯಲ್ಲಿ ನಡೆ-ನುಡಿಯೇ ಪ್ರಾಮುಖ್ಯತೆ ಪಡೆದಿದೆ. “ನುಡಿದಂತೆ ನಡೆ” ಎನ್ನುವ ಒಂದು ಸಾಮುದಾಯಿಕ ಭಾವನೆಯನ್ನು ಬೆಳಸುವುದರ ಜೊತೆಗೆ ಸಮಾಜ ಸುಧಾರಣೆಯಲ್ಲಿ ಮುಖ್ಯ ಪಾತ್ರ ವಹಿಸಿದ ಅನುಚ್ಛೇದಗಳಿವು.  
ಹಿಂದೂ ಮತ್ತು ಜೈನರ ಧರ್ಮ ಮತ್ತು ನೀತಿಯ ತಿರುಳನ್ನು ತಮ್ಮ ಮಠಗಳಲ್ಲಿ ಅಡಕಿಸಿಕೊಂಡು ಹೊಸ ಬಗೆಯ ಸಾಮಾನ್ಯ ವ್ಯಾಖ್ಯಾನ ಮಾಡುವುದರಲ್ಲೂ ಶರಣರು ಸಫಲರಾದರು.

೩.೪ ಧರ್ಮ, ನೀತಿಯ ಬಗ್ಗೆ ಸಾಮಾನ್ಯ ವ್ಯಾಖ್ಯಾನ:  ಧರ್ಮ ಎಂದರೇನು ಎನ್ನುವ ಚಿಂತನೆ ಎಲ್ಲ ಕಾಲದಲ್ಲೂ, ಎಲ್ಲ ಮತಗಳಲ್ಲೂ ಕೇಳಿಬರುವ, ಆದರೆ ಉತ್ತರ ದೊರಕದ ಪ್ರಶ್ನೆ.  ಬೌದ್ಧ ಭಿಕ್ಷುಗಳು ಮತ್ತು ಜೈನ ದಿಗಂಬರರು ಸಾವಿರಾರು ಪುಟಗಳಲ್ಲಿ ಧರ್ಮದ ಬಗ್ಗೆ ಬರೆದ ಗ್ರಂಥಗಳನ್ನು ಸಮನ್ವಯಗೊಳಿಸಿ ಬಸವಣ್ಣನವರು ಬರೆದ ಈ ಕೆಳಕಂಡ ವಚನ ಎಲ್ಲರಿಗೂ ಅರ್ಥವಾಗುವ ಸಾಮಾನ್ಯ ವ್ಯಖ್ಯಾನಕ್ಕೆ ಒಂದು ಉತ್ತಮ ಉದಾಹರಣೆ.   

ದಯವಿಲ್ಲದ ಧರ್ಮವಾವುದಯ್ಯ
ದಯವೇ ಧರ್ಮದ ಮೂಲವಯ್ಯ
ದಯವಿರಬೇಕು ಸಕಲಪ್ರಾಣಿಗಳೆಲ್ಲರಲ್ಲಿ
ಕೂಡಲಸಂಗಮಂತೊಲ್ಲದೊಲ್ಲಯನಯ್ಯ
------ ಬಸವಣ್ಣ

ಧರ್ಮ ಎಂದರೇನು ಎಂದು ತರ್ಕಿಸುವ ಬದಲು ಧರ್ಮದ ಸಾರ್ವತ್ರಿಕ ಸತ್ಯವನ್ನು ತೋರಿಸಿಕೊಟ್ಟ ವಚನ ಇದು.  ಇದೆ ರೀತಿ ವಚನಕಾರ ಸಿದ್ದರಾಮೇಶ್ವರ ಕಾಮ, ಕ್ರೋಧ, ಮದ, ಮತ್ಸರ ಮತ್ತು ಆಸೆಯ ಹಿಂದಿರುವ ಮೂಲ ಕಾರಣಗಳನ್ನು ಸಾಮಾನ್ಯ ರೀತಿಯಲ್ಲಿ ವ್ಯಾಖ್ಯಾನಿಸಿದ್ದಾನೆ.  

ಕಾಯವಿಡಿಹನ್ನಕ್ಕರ ಕಾಮವೆ ಮೂಲ;
ಜೀವವಿಡಿಹನ್ನಕ್ಕರ ಕ್ರೋಧವೆ ಮೂಲ;
ವ್ಯಾಪ್ತಿಯುಳ್ಳನ್ನಕ್ಕರ ಸಕಲ ವಿಷಯಕ್ಕೆ ಆಸೆಯೆ ಮೂಲ.
ಎನ್ನ ಆಸೆ ಘಾಸಿಮಾಡುತ್ತಿದೆ,
ಶಿವಯೋಗದ ಲೇಸಿನ ಠಾವ ತೋರು,
ಕಪಿಲಸಿದ್ಧಮಲ್ಲಿಕಾರ್ಜುನಾ.
---- ಸಿದ್ಧರಾಮೇಶ್ವರ

ಅಕ್ಕಮಹಾದೇವಿಯ “ತನು ಕರಗದವರಲ್ಲಿ ಪುಷ್ಪವನೊಲ್ಲೆಯಯ್ಯ ನೀನು..” ಚಿಂತನಾಶೀಲ ವಚನ.  ಅದೇ  ರೀತಿ ಅಲ್ಲಮಪ್ರಭು, ಚೆನ್ನಬಸವಣ್ಣ, ಉರಿಲಿಂಗಪೆದ್ದಿ, ಕಾಡಸಿದ್ದೇಶ್ವರ ಮೊದಲಾದ ವಚನಕಾರರು ತನು-ಮನ-ಧನ ತ್ರಯದ ಸಮತೋಲನದ ಬಗ್ಗೆ ವ್ಯಾಖ್ಯಾನಿಸುರಿವುದನ್ನು ಕಾಣಬಹುದು.    

೩.೪  ಅಪಹಾಸ್ಯ, ಅಪನಿಂದನೆ ಮತ್ತು ಹೀಯಾಳಿಸುವುದು:  ಸಮಾಜದ ಅಂಕು ಡೊಂಕುಗಳನ್ನು ಬಹಿರಂಗ ಪಡಿಸುವುದರ ಜೊತೆಗೆ ವಾದವಿವಾದದಲ್ಲಿ ಜನರ ಗಮನ ಸೆಳದು ತಮ್ಮ ಪರ ವಹಿಸಲು ಅಥವಾ ಅವರನ್ನು ವಿಚಾರವಂತರನ್ನಾಗಿ ಮಾರ್ಪಡಿಸಲು ಬರೆದ ವಚನಗಳು ಸಾಕಷ್ಟಿವೆ.  ಉದಾಹರಣೆಗೆ ೧೬ನೇ ಶತಮಾನದ ಪರಿವ್ರಾಜಕಾಚಾರ್ಯ ಸರ್ವಜ್ಞ ಬರೆದ ವಚನ:

ಚಿತ್ತವಿಲ್ಲದೆ ಗುಡಿಯ ಸುತ್ತಿದೊಡೆ ಫಲವೇನು
ಎತ್ತು ಗಾಣವನು ಹೊತ್ತುತಾ
ನಿತ್ಯದಲಿ ಸುತ್ತಿ ಬಂದಂತೆ ಸರ್ವಜ್ಞ
---- ಸರ್ವಜ್ಞ

ಕೆಲವೊಂದು ಅಪಹಾಸ್ಯ ಅಥವಾ ಅಪನಿಂದನೆಯ ವೈಪರೀತ್ಯ ದೃಷ್ಟಿಯಿಂದ ಬರೆದಂತಹವೂ ಕೂಡ ಇವೆ. ಉದಾಹರಣೆಗೆ ಬಸವಣ್ಣನವರ ವಚನ:  

ಏನಯ್ಯಾ, ವಿಪ್ರರು ನುಡಿದಂತೆ ನಡೆಯರು, ಇದೆಂತಯ್ಯಾ
ತಮಗೊಂದು ಬಟ್ಟೆ, ಶಾಸ್ತ್ರಕೊಂದು ಬಟ್ಟೆ !
ಕೂಡಲಸಂಗಮದೇವಯ್ಯಾ, ಹೊಲೆಯರ ಬಸುರಲ್ಲಿ
ವಿಪ್ರರು ಹುಟ್ಟಿ ಗೋಮಾಂಸ ತಿಂಬರೆಂಬುದಕ್ಕೆ ಇದೆ ದೃಷ್ಟ.
---- ಬಸವಣ್ಣ

ಇಂತಹ ವಚನಗಳಲ್ಲಿ ನಿರ್ಧಿಷ್ಟ ಗುರಿ ಕಂಡು ಬರದೆ ಅಭಾಸಾತ್ಮಕ ಎನಿಸಿದರೂ ವೈಯುಕ್ತಿಕ ಅನುಭವದಲ್ಲಿ ಜಿಗುಪ್ಸೆಗೊಂಡು ಬರೆದ ಒಕ್ಕಣಿಕೆ ಎನ್ನಬಹುದು.  ಹಲವಾರು ವಚನಗಳು ಪ್ರಾಣಿಗಳ ಪ್ರವೃತ್ತಿಯನ್ನು ಉಪಮಾಲಂಕಾರವಾಗಿ ಬಳಸಿಕೊಂಡು ಮತಾಚರಣೆಯ ನಿಯಮಗಳನ್ನು ಖಂಡಿಸಲು ಸಫಲವಾಗಿವೆ.

ಕತ್ತೆ ಬತ್ತಲೆ ಇದ್ದಡೆ ನೆಟ್ಟನೆ ನಿರ್ವಾಣಿಯೆ ?
ಹುಚ್ಚ ಹೊಟ್ಟೆಗೆ ಕಾಣದೆ, ಎತ್ತಲೆಂದರಿಯದೆ,
ಮತ್ರ್ಯದೊಳಗಿರ್ದಡೆ ನಿಶ್ಚಟ ವಿರಕ್ತನೆ ?
ಇಂತಿವರ ತತ್ತುಗೊತ್ತ ಬಲ್ಲವಂಗೆ ಇನ್ನೆತ್ತಣ ಭಕ್ತಿ ವಿರಕ್ತಿಯೊ,
ನಿಃಕಳಂಕ ಮಲ್ಲಿಕಾರ್ಜುನಾ ?
----- ಮೋಳಿಗೆ ಮಾರಯ್ಯ

೪.೦ ಮುಕ್ತಾಯ:  ಈ ಲಘುಲೇಖನದ ಮೊದಲಲ್ಲಿ ನಾವು ಉತ್ತರ ಹುಡುಕಲು ಹೋದ ಪ್ರಶ್ನೆ:  ಸಾಹಿತ್ಯದಿಂದ ಸಮಾಜ ಸುಧಾರಣೆ ಸಾಧ್ಯವೇ ಎಂದು.  ವಚನ ಸಾಹಿತ್ಯದ ಆಧ್ಯಾತ್ಮಿಕ ಮಾಧ್ಯಮಗಳನ್ನು ಮತ್ತು ವಚನಕಾರರು ಬಳಸಿಕೊಂಡ ಸಮಾಜ ಸುಧಾರಣೆಯ ಮಾಧ್ಯಮಗಳನ್ನು ಐತಿಹಾಸಿಕ ದೃಷ್ಟಿಯಿಂದ ನೋಡಿದೆವು.  ಹನ್ನೆರಡನೇ ಶತಮಾನದ ಈ ಎಲ್ಲ ಮಾಧ್ಯಮಗಳು ಒಂದು ಹೊಸ ಸಾಹಿತ್ಯ ರೂಪಕ ಮತ್ತು ಹೊಸ ಭರವಸೆಯ ಸಮಾಜ ಸೃಷ್ಠಿಸಲು ಸಾಧ್ಯವಾಯಿತು.  ಇದರಲ್ಲಿ ಆದ್ಯಾತ್ಮಿಕ ಸಾಹಿತ್ಯದ್ದೇ ಮೇಲುಗೈ ಅಂತ ನಿಶ್ಚಯವಾಗಿ ಹೇಳಬಹುದು.  ಆದರೆ ಇಂತಹ ಒಂದು ಗುರಿಮುಟ್ಟಿದ ಕಾರ್ಯದಲ್ಲಿ ಮುಂದಾದದ್ದೆಲ್ಲ ಅಹಿತಕರ ಘಟನೆಗಳು.  ಕೇವಲ ಒಂಬತ್ತು ವರ್ಷಗಳಲ್ಲಿ ಶೂನ್ಯ ಸಂಪಾದನೆ,, ಅನುಭವ ಮಂಟಪ, ವೀರಶೈವ ಮತ ಸ್ಥಾಪನೆ, ವಚನ ಸಾಹಿತ್ಯದ ಜನನ ಎಲ್ಲ ತ್ವರಿತಗತಿಯಲ್ಲಿ ಅಸ್ಥಿತ್ವಗೊಂಡವು.  ಎಲ್ಲ ಕಾಲದಲ್ಲೂ ಇರುವಂತೆ ಆಗಲು ವಿರೋಧ ಪಕ್ಷಗಳು ಹುಟ್ಟಿದ್ದಲ್ಲದೆ, ಹಿಂದೂ ಧರ್ಮದ ವಿಷಸರ್ಪದ ಹೆಡೆ ತಲೆಯೆತ್ತಿತು.  ಜೈನರು ಕೂಡ ಸಾಮಾಜಿಕ ಬದಲಾವಣೆಗಳನ್ನು ವಿರೋಧ ಮಾಡಿದ್ದಲ್ಲದೆ, ಬ್ರಹ್ಮಶಿವ ಬರೆದ “ಸಮಯ ಪರೀಕ್ಷೆ” ಯಲ್ಲಿ ಜೈನ ಹಾಗು ವೀರಶೈವ ಮತದ ವ್ಯತ್ಯಾಸ ತೋರಿಸಿ ಜೈನ ಮತವೇ ಮೇಲೆಂದು ಸಾರಿತು.  ಹುಟ್ಟಿನಿಂದ ಎಲ್ಲರು ಒಂದೇ ಎಂದು ಸಾಭೀತು ಪಡಿಸಲು ಅನುಭವ ಮಂಟಪದಲ್ಲಿಒಂದು ಅಂತರ್ಜಾತಿಯ ಮದುವೆಯನ್ನು ಸ್ವತಃ ಬಸವಣ್ಣನವರೇ ನೆರವೇರಿಸಿದರು. ಆದರೆ ಇದನ್ನು ಸಹಿಸದ ಬಿಜ್ಜಳನ ಪ್ರಜೆಗಳು ಆಂದೋಲನ ಹೂಡಿದ್ದಲ್ಲದೆ, ಉಗ್ರಗಾಮಿಗಳು ಬಿಜ್ಜಳನ ಕೊಲೆ ಮಾಡಿದಾಗ ರಾಜಕಾರಣದಲ್ಲಿ ಅನಿರೀಕ್ಷಿತ ಸಂದಿಗ್ಧ ಪರಿಸ್ಥಿತಿ ಉಂಟಾಯಿತು.  ಅನುಭವ ಮಂಟಪದಲ್ಲಿ ಆಧ್ಯಾತ್ಮಿಕ ಚಟುವಟಿಕೆ ಕೊನೆಗೊಂಡು ಎಲ್ಲ ವಚನಕಾರರು ಚದುರಿ ಹೋದರು.  ಎಷ್ಟೋ ಶಿವಶರಣರ ಕೊಲೆ, ಅದಕ್ಕೆ ಪ್ರತಿಯಾಗಿ ಜೈನ ಹಾಗು ಹಿಂದುಗಳ ಕೊಲೆಗಳು, ಹೀಗೆ ಹಿಂಸಾಚಾರದಲ್ಲಿ ಆಗಬಾರದ್ದು ಆಗಿಹೋಗುತ್ತದೆ.  ಈ ಅನಾಹುತದಲ್ಲಿ ವಚನ ಸಾಹಿತ್ಯದ ತಾಳೆ ಪತ್ರಗಳು ನಾಶವಾದರು ವಚನಕಾರರು ಎಲ್ಲ ಕಡೆ ಚದುರಿ ಹೋದದ್ದು ಒಂದು ರೀತಿ ಒಳ್ಳೆಯದಾಗುತ್ತದೆ. ಏಕೆಂದರೆ ೨೦೦ ವರ್ಷಗಳ ನಂತರ ೧೪ನೇ ಶತಮಾನದ ಅರಸು ಇಮ್ಮಡಿ ದೇವರಾಯನ ಕಾಲದಲ್ಲಿ ವಚನ ಸಂಪುಟವನ್ನು ಮತ್ತೆ ಒಂದುಗೂಡಿಸಲಾಗುತ್ತದೆ.  ಅಂತರ್ಗತವಾದ ಆಧ್ಯಾತ್ಮ ಮತ್ತು ಮತಾಚರಣೆಗಳು ಪುನಶ್ಚೇತನಗೊಂಡು, ಅದರ ಪರಿಣಾಮವಾಗಿ ಬಸವಣ್ಣನವರ ತತ್ವಗಳು ಕಲಬೆರಕೆಯಾಗಿ ಮತ್ತೊಂದು ರೀತಿಯ ಸಮಾಜದ ಜನನವಾಗುತ್ತದೆ.  ಮತಾಚರಣೆಯಲ್ಲಿ ಯಾವುದನ್ನು ಬಸವಣ್ಣನವರು ತಿದ್ದಲು ಪ್ರಯತ್ನಿಸಿದರೋ ಅದೇ ನಕಾರಾತ್ಮಕ ಪ್ರವೃತ್ತಿಗಳಾದ ಅಸತ್ಯ, ಮೂಢನಂಬಿಕೆ, ಅವಿವೇಕ,  ಮತಪರಿವರ್ತನೆ, ಮೇಲು ಕೀಳೆಂಬ ಭಾವನೆ ಎಲ್ಲವು ಪ್ರತ್ಯಾಗಮನವಾಗುತ್ತದೆ.  ನಿರಂತರ ಪರಿವರ್ತನೆಯಿಂದಲೇ ಸಮಾಜ ಸುಧಾರಣೆಗೆ ಪುಷ್ಟಿಕೊಡಲು ಸಾಧ್ಯವೇ ಹೊರತು ರಭಸದ ಸಾಹಿತ್ಯ ದಾಳಿಯಿಂದ ಅಲ್ಲ ಎಂದು ನಮ್ಮನ್ನು ಎಚ್ಚರಿಸುತ್ತವೆ ಈ ಘಟನೆಗಳು.  ವಚನ ಸಾಹಿತ್ಯ ತಾತ್ಕಾಲಿಕ ಸಮಾಜ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದರು ದೀರ್ಘಾವಧಿ ಬದಲಾವಣೆ ತರುವುದರಲ್ಲಿ ವೈಫಲ್ಯಗೊಂಡಿತು.  


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ