ಶನಿವಾರ, ಮೇ 18, 2013

Kannada Poems by Ravi Gopalarao

ನಾ ಬರೆದ ಕವನಗಳು



ರವಿ ಗೋಪಾಲ ರಾವ್
ಸ್ಯಾನ್ ಹೋಸೆ, ಕ್ಯಾಲಿಫ಼ೋರ್ನಿಯ

ಅಹಂಕಾರ

ತನುವಿಗೊಂದು ಪಂಚಮ ಕವಚ
ಮನಸ್ಸಿಗೊಂದು ಪಂಚಮ ಸ್ವರೂಪ
ಅಂತಃಕರಣ, ಚಿತ್ತ, ಅಂತರಾಳ, ಬುದ್ಧಿ, ಅಹಂಕಾರ

ಯಶೋದೆಯ ಅಂತಃಕರಣವನರಿಯಲು ಮುರಳಿ ನಾನಾಗುವ ಆಸೆ
ಕಾಳಿದಾಸನ ಸಂವೇದನೆಯನರಿಯಲು ಶಾಕುಂತಲೆ ನಾನಾಗುವ ಬಯಕೆ

ವ್ಯಾಸರ ಕಲ್ಪನೆಯನರಿಯಲು ಜನಮೇಜಯ ನಾನಾಗುವ ಆಸೆ
ನಳನ ಭಾವನೆಯನರಿಯಲು ದಮಯಂತಿ ನಾನಾಗುವ ಬಯಕೆ
ಬಾನಿಗೂ ಅಂತಃಕರಣಕ್ಕೂ ಎಲ್ಲೆ ಎಲ್ಲೆಂಬ ತಿಳಿವಾಸೆ

ಸ್ವೌಮ್ಯ ಮೂರುತಿ ಬುದ್ಧನ ಶಾಂತ ಚಿತ್ತವನರಿಯಲು ನನ್ನಲ್ಲಿಲ್ಲ ಚಿತ್ತಶುದ್ಧಿ
ಮೀರಳ ಅಂತರಾಳವನರಿಯಲು ನನ್ನಲ್ಲಿಲ್ಲ ಕಿಂಚಿತ್ತು ಭಕುತಿ
ರಾವಣನ ಅಹಂಕಾರವನರಿಯಲು ನನಗೇಕೋ ಭೀತಿ
ಕಂಸ ದುರ್ಯೋಧನ ಮತ್ತೆಲ್ಲ ಮದಾಂದರ ಸಂಕುಚಿತ ಬುದ್ಧಿ
ಅಹಂಕಾರದೊಳು ಬದಲಾದಂತೆ ತನು ನಿರ್ನಾಮವಾದಂತೆ

ನಿನ್ನ ಮನ ನಿಶ್ಚಿತ ಸ್ವರೂಪದಲಿ ಸಂಕಲ್ಪ-ವಿಕಲ್ಪ ಲಯದಲಿ
ರೂಪಗೊಳ್ಳಲು ಹರಸು ಮನುಜ
ತನು ಮನವನರ್ಪಿಸಿ ನಾಮಸ್ಮರಣೆಯಲಿ
ಆ ಅವಿಕೃತ ಮೂಲಸ್ವರೂಪವನರಿತಾಗ
ಅಹಂಕಾರ ಉದಯಿಸಲಸಾಧ್ಯ ಮನುಜ
________________________

ಅಕ್ಷಮ್ಯ ಅಪರಾಧ

ಮನುಕುಲ ವಿಧಿಸೀತು ದಯಾಹೀನ ಶಿಕ್ಷೆಯೆಂದರಿತೂ
ಕೊಲೆ ಸುಲಿಗೆ ದರೋಡೆ ದಗಾಕೋರತನದಲಿ
ವ್ಯಕ್ತಪಡಿಸುವೆಯೇಕೋ ನಿನ್ನೀ ದುಷ್ಕರ್ಮ ಮಾನವ?

ಕೈ ಕಡಿವರು ಕಣ್ಣ್‌ಕೀಳ್ವರು ಹೂಯ್ವರು ಕಿವಿಯಲಿ ಸೀಸ
ಕಲ್ಲೆಸೆದು ಕೊಲುವರು ನೊಗ ಹೂಡಿ ಕೊಲುವರು
ವಿಷ ಚುಚ್ಚಿ ಕೊಂದರೂ ಕೊಂದವನ ಕೊಲುವುದು
ಅಕ್ಷಮ್ಯ ಅಪರಾಧವೆಂದೇಕೋ ಅರಿಯರು?

ಸ್ತ್ರೀ ನೀ ದೇವಿ ಸಮಾನಳೆಂದು ಪೂಜಿಪ ಸಮಾಜ
ಹುಟ್ಟುವುದು ಹೆಣ್ಣೆಂದರಿತು ಭ್ರೂಣವನೆ ಕಿತ್ತೊಗೆವುದು
ಅಕ್ಷಮ್ಯ ಅಪರಾಧವೆಂದೇಕೋ ಅರಿಯರು?

ಹಲ್ಲಿ ಹುಲಿ ಕಾಗೆ ಹೆಗ್ಗಣಗಳಿಗೂ ಕಟ್ಟುವರು ಗುಡಿ
ಮಾನವ ನೀ ಅಸ್ಪೃಷ್ಯನೆಂದು ತಿರಸ್ಕರಿಸಿ
ದೇಗುಲದೊಳು ನಿಷೇದಿಸುವುದು
ಅಕ್ಷಮ್ಯ ಅಪರಾಧವೆಂದೇಕೋ ಅರಿಯರು?

ಸಮ ಸಂಪತ್ತನಿತ್ತಳು ಭೂತಾಯಿ ಎಲ್ಲರಿಗೆಂದೆ
ಸ್ವೇಚ್ಚೆಯಲಿ ನಿರ್ಲಕ್ಷಿಸಿ ಕೊಳ್ಳೆಹೊಡೆವರು
ಮರು ಪೀಳಿಗೆಗೆ ಉಳಿಸದ ಆಧೀನಕೊಪ್ಪಿಸದ
ನೀತಿರಹಿತ ನ್ಯಾಯಬಾಹಿರ ಈ ನಡತೆ
ಅಕ್ಷಮ್ಯ ಅಪರಾಧವೆಂದೇಕೋ ಅರಿಯರು?
________________________

ಅರಿವಾಗದ ಅರಿವು

ಮಕರಂದವ ಸವಿದವಗೆ ಅರಿವಾದೀತು
ದುಂಬಿ ಹೂವಿನ ಅನುಬಂದ

ಅನ್ವೇಷಣೆಯಲಿ ಅರಿವಾದೀತು
ನದಿ ಮೂಲ ಋಷಿ ಮೂಲ

ಅಳೆದರೆ ಅರಿವಾದೀತು
ಕಡಲಿನಾಳ

ಮೋಹಿಸಿದರೆ ಅರಿವಾದೀತು
ಹೆಣ್ಣಿನ ಮನದಂತರಾಳ

ಮರೀಚಿಕೆಯ ಅರಿವಾದೀತು
ದಾಹದಲಿ ಕಂಡ ಪ್ರತಿಬಿಂಭ

ಆಸ್ಪೋಟದ ಜ್ವಾಲಾಮುಖಿಯಲಿ ಅರಿವಾದೀತು
ಅಣುವಿನೊಳಗಿನ ಕಣ ಕಣದ ಶಕ್ತಿ

ಅವಧಿಯ ಊಹೆಯಲಿ ಅರಿವಾದೀತು
ನಕ್ಷತ್ರ ಪುಂಜಗಳ ಅವಿಷ್ಕಾರ

ಎಲ್ಲ ಅರಿತ ಮನುಜಗೆ
ತಾನ್ಯಾರೆಂಬ ಅರಿವು ಅರಿವಾಗದೇಕೋ ಮನುಜ?
_______________________

ಬಿತ್ತು, ಬಿತ್ತದಿರು

ಬಿತ್ತು ಬೀಜವ
ಮೊಳಕೆಯೊಡೆದು ಸಸಿ ಮರವಾದೀತು
ಕಣ್ಮನ ಹಸಿರಾದೀತು
ತಣಿಸೀತು ದಣಿದ ತನುವ

ಬಿತ್ತದಿರು ಅಸೂಯೆಯ
ಹೆಮ್ಮರವಾದೀತು ಕೈಕೆ ಮನದೊಳು
ಮಂಥರೆ ಬಿತ್ತಿದ ಮಾತ್ಸರ್ಯ

ಬಿತ್ತದಿರು ಕಪಟ
ಚಿಗುರೊಡೆದೀತು ಕೌರವರಲಿ
ಶಕುನಿ ಬಿತ್ತಿದ ಶಂಕೆ

ಬಿತ್ತದಿರು ಪ್ರತಿಷ್ಟೆ
ಅಡಿಯೂರೀತು ಅಲುಬಿನ ಬೀಜಾಂಕುರ
ಹಬ್ಬೀತು ಮರಳುಗಾಡಲಿ ಸ್ವಪ್ರಶಂಸೆ

ಬಿತ್ತದಿರು ದ್ವೇಷ
ಬೆಳೆದೀತು ಕೀಳಲಸಾಧ್ಯ ಕಳೆ
ಭೂದೇವಿಯ ದಹಿಸಿಯೂ ಮತ್ತೆ ಬೆಳೆವ ನಸುಗುನ್ನಿ

ಬಿತ್ತು ಸತ್ಯವ
ಹೊಂಗೆಯ ನೆಳಲಲಿ ಅರಳಿಯ ತಂಪಲಿ
ತೆರೆದೀತು ಒಳಗಣ್ಣು ಮಾನವ
__________________________

ಹಳೆ ಪಾದ್ರಿ, ಹೊಸ ಪಾದ್ರಿ

ಹಳೆ ಪಾದ್ರಿ ನವ ವರನನ್ನುದ್ದೇಶಿಸಿ ನುಡಿದರು
ಈ ಕುವರಿಯನ್ನು ಪತ್ನಿಯಾಗಿ ಸ್ವೀಕರಿಸುವೆಯ?
"ಐ ಡು" ಎಂದ ಕೋಲೆಬಸವ
ಹಳೆ ಪಾದ್ರಿ ವಧುವನ್ನುದ್ದೇಶಿಸಿ ನುಡಿದರು
ಈ ಪುರುಷನನ್ನು ಪತಿಯನ್ನಾಗಿ ಸ್ವೀಕರಿಸುವೆಯ?
"ಐ ಡು" ಎಂದಳು ಕೋಲೆಬಸವಿ
ಹಳೆ ಪಾದ್ರಿ ಸಭೆಯನ್ನುದ್ದೇಶಿಸಿ ಮರು ನುಡಿದರು
ಈ ಸ್ಥ್ರೀ ಪುರುಷನನ್ನು ಘೋಷಿಸುವೆ ನಾ ಪತಿಪತ್ನಿಯರೆಂದು
ಚುಂಬಿಸಿ ನವದಂಪತಿಗಳು
ಅಣಿಯಾದರು ಮಧುಚಂದ್ರಕ್ಕೆಂದು

ಹೊಸ ಪಾದ್ರಿ ವರನನ್ನುದ್ದೇಶಿಸಿ ನುಡಿದರು
ಈಕೆಯನ್ನು ಸ್ವೀಕರಿಸಿ "ಐ ಲವ್ ಯು" ಎಂಬ
ಮೂರಕ್ಷರದ ಸುಳ್ಳನು ಹೇಳುವೆಯ ಪ್ರತಿನಿತ್ಯವೂ?
"ಐ ಡು" ಎಂದ ಹಳೆ ವರ ನಿರ್ಲಕ್ಷಿಸಿ ವಧುವನ್ನು
ಹೊಸ ಪಾದ್ರಿ ಮತ್ತೆ ವರನನ್ನುದ್ದೇಶಿಸಿ ನುಡಿದರು
"ಐ ಆಮ್ ಸಾರಿ" ಎಂದು ಹೇಳುವೆಯ ಪ್ರತಿತಪ್ಪಿಗೂ?
"ಐ ಡು" ಎಂದ ಸಂಕೋಚವಿಲ್ಲದ ವರ
ಹೊಸ ಪಾದ್ರಿ ಸಭೆಯನ್ನುದ್ದೇಶಿಸಿ ಮರು ನುಡಿದರು
ಈ ಸ್ಥ್ರೀ ಪುರುಷನನ್ನು ಘೋಷಿಸುವೆ ನಾ
ಸದಾ ಸುಖಿ ಪತಿಪತ್ನಿಯೆರೆಂದು
ಚುಂಬಿಸಿ ನವದಂಪತಿಗಳು
ಅಣಿಯಾದರು ಹೆರಿಗೆ ಆಸ್ಪತ್ರೆಗೆಂದು
____________________________

ಜಾದೂ ಭರಿತ ನಯನ
(ಹಿಂದೂಸ್ಥಾನಿ ಗಾಯನದ ಭಾವಾರ್ಥ)

ಸಖಿ, ಜಾದೂ ಭರಿತ
ಆ ಪ್ರಿಯತಮನ ನಯನ
ವರ್ಣಿಸದಿರಲೆಂತು ನಾ
ಆ ಮಾಧುರ್ಯ ಭರಿತ
ಅರವಿಂದಾಕ್ಷನ
ಸಖಿ, ನೀ ಕೇಳೆ ಪ್ರಿಯತಮನ
ಭೃಂಗ-ಜ್ವಾಲೆ ಸ್ಪರ್ಷಿಸಿದಂತೆ
ಚಡಪಡಿಸದಿರಲೆಂತು ನಾ
_________________________

ಮನದಂತರಾಳದ ಮಾತುಗಳು
(ಹಿಂದುಸ್ಥಾನಿ ಗಾಯನದ ಭಾವಾರ್ಥ)

ಯಾರೊಡನೆ ನಿವೇದಿಸಲಿ ನನ್ನೀ
ಮನದಂತರಾಳದ ಅಳಲನು
ಮುಂಗಾರಿನ ವರ್ಷಧಾರೆ
ವರುಷಗಳಂತೆ ಕಳೆಯಿತಿನ್ನೂ
ಹಿಂದಿರುಗನೇಕೋ ನನ್ನೀ ಪ್ರಿಯತಮ
ದರುಶನಕೆಂದೇ ಹಗಲಿರಳು ತವಕಿಸಿತೆನ್ನ ಮನ
_____________________________

ಮುಕ್ತಿ, ಬಂಧನ

ಮುಪ್ಪಿನಲಿ ಮುಕ್ತಿಯನರಸಿ ಬಂಧನವ ತೊರೆವೆ
ಯೌವ್ವನದಲಿ ಮುಕ್ತಿಯ ತೊರೆದು ಬಂಧನವನರಸುವೆ

ಸಪ್ತಪದಿಯನಿಟ್ಟು ಅಗ್ನಿ ಸಾಕ್ಷಿಯಲಿ ಗಳಿಸಿದ ಬಂಧನ
ಮುಕ್ತಿಪಥದಲಿ ಬದಲಾದೀತೆ?
ಪಂಜರದೊಳಿಟ್ಟು ಬಂದಿಸಿದ ಅರಗಿಳಿಯ ಸ್ನೇಹ
ಬಂಧನದಲಿ ಬದಲಾದೀತೆ?

ದೈವೇಚ್ಚೆಯಲಿ ಲಭಿಸಿದ ಪಿತೃ ಪುತ್ರ ಋಣಾನುಬಂಧವ
ಚಿತೆ ದಹಿಸೀತೆ?
ಹೆತ್ತಮ್ಮ ತೊಡಿಸಿದ ಹಸಿರು ಬಳೆ ಅರಿಶಿನ ಕುಂಕುಮ
ಬಿಳಿ ಹಾಲಿನಲಿ ಧಾರೆಯೆರದರೆ ಕಪ್ಪಾದೀತೆ?

ಎಲ್ಲ ತ್ಯಜಿಸಿ ದೃಢಚಿತ್ತನಾಗಿ ನಿಂತರೂ ಬಾಹುಬಲಿ
ಭ್ರಾತೃ ಬಂಧನ ಕಲ್ಲಾದೀತೆ?
ದರ್ಭೆ ತೊಟ್ಟು ಕಪ್ಪೆಳ್ಳಿನಲಿ ಜಲತರ್ಪಣೆಯ ನೀಡಿ
ವೈಕುಂಟದ ಬಾಗಿಲನು ತೆರೆಯಲಾದೀತೆ?

ಅಬಲೆಯನು ಅಪಹರಿಸಿ ರಾವಣ
ಸೀತಾರಾಮನ ಬಂಧನವನು ಕದಿಯಲಾದೀತೆ?
ಶಿವಭಕ್ತ ಲಂಕಾಧೀಶನಿಗೇಕೋ ಮನುಜ
ಮುಕ್ತಿ ದೊರಕದಾಯಿತು?

ನಿಷ್ಠೆಯಲಿ ದೊರೆತ ಗುರು ಶಿಷ್ಯ ಅನುಬಂಧ
ದಕ್ಷಿಣೆಯಲಿ ಅಂತ್ಯಗೊಂಡೀತೆ?
ಅಂಗುಷ್ಟವನೆ ಪಡೆದರೂ ದ್ರೋಣಾಚಾರ್ಯ
ಏಕಲವ್ಯನ ವಿಧೇಯತೆಯನು ಪರೀಕ್ಷಿಸಲಾದೀತೆ?

ಚಿದಾನಂದ ರೂಪವನರಿಯದೆ ಮುಕ್ತಿಯನೂ ಗಳಿಸೆ
ಬಂಧನವನೂ ಅರಿಯೆ ಅದೇಕೋ ನೀ ಮನುಜ?
__________________________________

ನಿರ್ಲಿಪ್ತ

ಆಗು ನೀ
ಹೊಗಳಿದರೂ ಕಿವಿಗೊಡದ ಅಚಲ
ತೆಗಳಿದರೂ ಎದೆಗುಂದದ ನಿರ್ಭಯಿ
ಯಾರಿಗೂ ಜಗ್ಗದ ಒಗ್ಗದ ಬಲಶಾಲಿ

ಅನುಕರಿಸು ನೀ
ಕನಿಕರ ಇತರರ ನೋವಿನಲಿ
ಸಹಾನುಭೂತಿ ಇತರರ ನಲಿವಿನಲಿ
ಸಮನ್ವಯ ಜೀವನದ ಗತಿಯಲಿ

ಗಳಿಸು ನೀ
ಸಾಂಗತ್ಯ ದಿನನಿತ್ಯದ ಜಂಜಾಟದಲಿ
ಅನನ್ಯತೆ ಸಕಲ ಜೀವಾತ್ಮಗಳಲಿ
ಐಕ್ಯತೆ ಎಲ್ಲರಲಿ

ತೋರಿಸು ನೀ
ಅವಿರೋಧ ಇತರರ ಅಭಿಪ್ರಾಯದಲಿ
ಪರಿಪೂರ್ಣತೆ ವಿದ್ಯೆಯಲಿ
ಮುಖಕಾಂತಿ ಅಭಿಜ್ಞಾನದಲಿ

ಪಡಯೆದೆ ನೀ
ಈ ಎಲ್ಲ ಗುಣಲಕ್ಷಣ, ಮಾನವರಲಿ
'ನಿರ್ಲಿಪ್ತ' ನೀನೆಂದು ಕರೆವರಾರೋ ಮನುಜ?
_______________________________

ಸಹಜ, ಕೃತಕ

ಸಹಜ ತಂಗಾಳಿ ಅರಳಿಯ ಮರದಡಿಯಲಿ
ಕೃತಕ ಕಳ್ಳಿಗಿಡದಡಿಯ ಶುಷ್ಕ ಕ್ಷೋಭೆ

ಸಹಜ ಸಪ್ತಪದಿ ತುಳಿದ ನವವಧುವಿನ ಆಕಾಂಕ್ಷೆ
ಕೃತಕ ಮರುಮದುವೆಯ ದಿಬ್ಬಣದಲಿ ವರ ನೀಡಿದ ಅಭಯದಾನ

ಸಹಜ ಸಹಧರ್ಮಿಣಿ ನೀಡಿದ ದಾನ ಮಾಡಿದ ಸತ್ಕಾರ್ಯ
ಕೃತಕ ಕದ್ದುಳಿದ ಹಣದಲಿ ಮಾಡಿದ ಧರ್ಮಕಾರ್ಯ

ಸಹಜ ಕೃಷ್ಣನಿಗೆಂದೇ ತನುಮನವನರ್ಪಿಸಿ ಮೀರ ಹಾಡಿ ತೋರಿದ ಭಕುತಿ
ಕೃತಕ ಭಕುತಿ ತೋರಲೆಂದೇ ಧನವನರ್ಪಿಸಿ ಮಾಡಿಸಿದ ಕೃಷ್ಣಾರ್ಚನೆ

ಸಹಜ ನೊಂದ ಹೃದಯಕೆ ಸಂಗಾತಿ ಅಲೆಅಲೆಯಾಗಿ ಸುರಿವ ಕಂಬನಿ
ಕೃತಕ ದಶರಥನ ಸಂಗಾತಿ ಉಮ್ಮಳಿಸಿ ಸುರಿಸಿದ ಮೊಸಳೆ ಕಣ್ಣೀರು

ಸಹಜ ಬೇವು ಬೆಲ್ಲದೊಳಗಿನ ಕಹಿ ಸಿಹಿ, ಸೃಷ್ಟಿಸಿ ಪಡೆದ ದುಃಖ ಸುಃಖ
ಕೃತಕ ಪರರ ಸುಃಖದಲಿ ಹಿಂಡಿದ ಹುಳಿ, ಕಲ್ಪಿಸಿ ನೀಡಿದ ದುಃಖ

ಕೃತಕ ನಡೆಯನು ತೊರೆದು ಕೃತಾರ್ಥನಾಗು ಮನುಜ
ಸಹಜತೆಯಲಿ ಕಾಣೋ ಜೀವನ ಸಾಕ್ಷಾತ್ಕಾರ
_______________________________

ಸರಿ, ತಪ್ಪು

ಕುಬ್ಜ ಅಗಸನ ಮಾತಿಗಂಜಿ ಪೂರ್ಣ ಗರ್ಭಿಣಿ
ಸೀತೆಯನು ಕಾಡಿಗಟ್ಟಿದ ಶ್ರೀ ರಾಮ
`ಪುರುಷೋತ್ತಮ' ಹೇಗಾದಾನು?

ಪರ್ಣಕುಟೀರದಿ ರಾಮ ಮಾರೀಚನಟ್ಟಿದನಂದು
ಏಕಾಂತದೊಳು ರಾಮನುಜನ ನಿಂದಿಸಿ
ಲಕ್ಷ್ಮಣ ರೇಖೆಯನೂ ದಾಟಿದ ಸೀತೆ
`ಪಾವನಿ' ಹೇಗಾದಾಳು?

ಕೌರವ ಸಭೆಯೊಳಗೆ ಉನ್ಮಾದದಿ ಭರಸೆಳೆದು ಕರೆತಂದ
ಪಾಂಚಾಲಿಯ ಅಳಲನರಿತೂ ಕಿವಿಗೊಡದ ಭೀಷ್ಮ
`ಪಿತಾಮಹ' ಹೇಗಾದಾನು?

ಸಂಸಾರದ ಸುಃಖ ದುಃಖಗಳನೆದುರಿಸಲಂಜಿ
ಮಡದಿ ಮಕ್ಕಳ ತೊರೆದು ಕಾಡಿಗೋಡಿದ ಬುದ್ಧ
`ಭಗವಾನ್' ಹೇಗಾದಾನು?

ಎಲುಬಿನ ಹಂದರದ ನಿತ್ರಾಣಿ ಯೇಸುವನು ಶಿಲುಬೆಗೇರಿಸಿ
ಅಟ್ಟಹಾಸದಿ ಮೆರೆದ ರೋಮನ್ನರು
`ಪ್ರಬಲ' ಹೇಗಾದಾರು?

ಪರ ಮತೀಯರನು ಮೂರುತಿ ಆರಾಧಕರನು
ನಿರ್ನಾಮ ಮಾಡಲಾದೇಶವನಿತ್ತ ಮೊಹಮ್ಮದ್
`ದೇವದೂತ' ಹೇಗಾದಾನು?

ಸತ್ಯಾನ್ವೇಷಕ ಮಹಾತ್ಮನ ಕೊನೆಯುಸಿರು ಹೇ ರಾಮ್
ಗುಂಡಿಕ್ಕಿ ರಾಷ್ಟ್ರದ ತಂದೆಯನು ಕೊಂದ ನಾಥೂರಾಮ್
`ರಾಷ್ಟ್ರವಾದಿ' ಹೇಗಾದಾನು?

ಸರಿ ತಪ್ಪು ಅರಿಯದ ಮಾನವ
`ಮಾನವ' ಹೇಗಾದಾನು?
________________________________

ಕಟು ಸತ್ಯ, ಹುಸಿ ಸುಳ್ಳು

ಮೃತ ಶರೀರವ ಕಂಡಾಗಲೂ ನುಡಿಯಿತು ನಾಲಿಗೆ ಹುಸಿ ಸುಳ್ಳು
ನಿದ್ರಾ ಲೋಕದಿ ವಿರಮಿಸಿದಂತೆ ಕಾಣುತಿಹನು ನಿನ್ನೀ ಪುರುಷನೆಂದು
ವಿಧಿಲಿಖಿತ ಕಟು ಸತ್ಯ ಅಂತರಾಳವ ಎಚ್ಚರಿಸಿತು
ಹಿಂದಿರುಗನು ಇನ್ನೆಂದಿಗೂ ನನ್ನೀ ಪುರುಷನೆಂದು

ಹುಸಿ ಕೋಪ ತೋರಿದ ಮಡದಿಗೆ ನಟಿಸಿ
ನುಡಿಯಿತು ನಾಲಿಗೆ ಹುಸಿ ಸುಳ್ಳು
ಬರುವುದಿಂದು ಹೊತ್ತು ಮೀರಿದ ಮೇಲೆಯೇ ಎಂದು
ಕಟು ಸತ್ಯ ಅನುಭವದಲಿ ಕಟುನುಡಿಯಿತು
ಮತ್ತೋರ್ವಳ ಸೀರೆಅಂಚಿನಲಿ ಆಡುತಿಹನು
ಕಣ್ಮುಚ್ಚಾಲೆ ಇವನೆಂದು

ತಪ್ಪಲಿಲ್ಲ ಆ ಪರಮಾತ್ಮನಿಗೂ ಹುಸಿ ಸುಳ್ಳು
ಗಾಂಡೀವಿಯನು ಪ್ರಚೋದಿಸಿದನಂದು
ಕರುಣೆಯಿರಲಿ ಸಖಲ ಜೀವಿಗಳಲಿ ಎಂದು
ಕಟು ಸತ್ಯ ಕಾಡಿತು ಪಾರ್ಥನ
ಈ ಭಾಂದವರನ್ನೆಲ್ಲ ಕೊಂದು ಪಡವೆನೆಂತಹ ಭಾಗ್ಯವನೆಂದು

ಸತ್ಯ ಅಸತ್ಯತೆಯ ದ್ವಂದ್ವವನರಿಯೆ ನಾ
ಕಲ್ಪನಾತೀತ ಸಿದ್ದಾಂತವಾದರೇನಂತೆ ಹುಡುಕಿದೆನು ಉತ್ತರ
ದುಂಬಿಯಂತೆ ಕೊರೆಯುವ ಮನಕೆ ನೂರೆಂಟು ಪ್ರಶ್ನೋತ್ತರ

ತಡವೇಕೆಂದು ಕೇಳಿದ ಕಂದಮ್ಮಗೆ
ಮೊಲೆಯನಿತ್ತು ಕಟು ಸತ್ಯವನೇ ಉಣಬಡಿಸಲಿಲ್ಲವೆ ಪುಣ್ಯಕೋಟಿ?

ಪತಿಗೆ ನೊಗ ಹೂಡುವೆನೆಂದು ಬಂದ
ಮೃತ್ಯುವನ್ನೇ ಗೆಲ್ಲಲಿಲ್ಲವೆ ಸಾವಿತ್ರಿ ಸತ್ಯ ವಾದದಲಿ?

ದೇವಾನುದೇವತೆಗಳು ಕಲ್ಪಿಸಿದ ಸತ್ಯ ಪರೀಕ್ಷೆಯಲಿ
ಸೋತವನು ಹರಿಶ್ಚಂದ್ರನೇ?

ಕಬ್ಬಿಗೆ ತನ್ನೊಡಲ ಸಿಹಿ ಅರಿಯಲು ಕಹಿ ಸತ್ಯದ ಭಯವೇ?

ದೀಪದ ಹಣತೆ ನೀಡುವುದೇ ಹುಸಿ ಸುಳ್ಳಿನ ಪ್ರಕಾಶ?

ಅರ್ಭುದ ವ್ಯಾಘ್ರನಿಗಿನ್ನೂ ಪುಣ್ಯಕೋಟಿ ಹುಸಿ ನುಡಿವಳೆಂದು ಸಂಶಯವೇ?

ಸತ್ಯವೇ ಪರಮಸತ್ಯವೆಂದರಿತಾಗ ಸುಳ್ಳಿನ
ಭಾರವನೇಕೆ ಹೊರೆವೆಯೋ ಮನುಜ?
_______________________________________

ಶಬ್ದ, ನಿಶ್ಯಬ್ದ

ಕಡಲ ಭೋರ್ಗರೆವ ಅಲೆಗಳಾದೀತು ಶಬ್ದ
ಪ್ರಕೃತಿಯ ಅಳಲನರಿಯದ ಮನವೇಕೋ ನಿಶ್ಯಬ್ದ?

ಜೊತೆಗೂಡಿ ಕಟ್ಟಿದ ಗೂಡಲಿ ತುಂಬೀತು ಇಂಚರದ ಶಬ್ದ
ಮರಿ ಹಕ್ಕಿಯಿಲ್ಲದ ಗೂಡೇಕೋ ನಿಶ್ಯಬ್ದ?

ವಿಜಯದ ವೈಭವ ಸಾರೀತು ಶಬ್ದ
ಸೋಲಿನ ಸಂಕೇತ ಅದೇಕೋ ನಿಶ್ಯಬ್ದ?

ಹೊಸ್ತಿಲಲಿ ನಿಂತ ಗೃಹಲಕ್ಷ್ಮಿಯ ಆಭರಣ ಮಾಡೀತು ಶಬ್ದ
ಸರಸ್ವತಿ ಒಲಿಯದ ಹೊಸ್ತಿಲಒಳಗೇಕೋ ನಿಶ್ಯಬ್ದ?

ನಾಮಸ್ಮರಣೆಯಲಿ ಮೊಳಗೀತು ಘಂಟಾನಾದದ ಶಬ್ದ
ಪ್ರಣವಸ್ವರೂಪದಲಿ ಒಂದಾದಾಗ ಓಂ ಕೂಡ ಅದೇಕೋ ನಿಶ್ಯಬ್ದ?

ಭೂ ಗರ್ಭದಲಿ ಅಡಗೀತು ಜ್ವಾಲಾಮುಖಿಯ ಭೀಕರ ಶಬ್ದ
ಅನಂತದಲಿ ನಿರ್ಮಿತ ಬ್ರಹ್ಮಾಂಡ ಗೋಚರಿಸಿಯೂ ಅದೇಕೋ ನಿಶ್ಯಬ್ದ?

ಜನನದಲಿ ಹೊರ ಸೂಸಿದ ಮೊದಲುಸಿರಾದೀತು ಶಬ್ದ
ಮೃತ್ಯುವಿನಲಿ ಎಳೆದ ಕೊನೆಯುಸಿರೇಕೋ ನಿಶ್ಯಬ್ದ?

ಅವಿವೇಕದಲಿ ಉಸಿರದಿರು ವಾಕ್ಸರಣಿಯ ಅನರ್ಥ ಶಬ್ದ
ಅರಿಯೆ ಅದೇಕೋ ಮನುಜ ತುಂಬಿದ ಕೊಡ ಎಂದೆಂದೂ ನಿಶ್ಯಬ್ದ?
________________________________________

ಕಹಿ ನೆನಪು, ಸಿಹಿ ನೆನಪು

ಮನಸ್ಸಿನಂತರಾಳ ಗಣಿಯಂತೆ
ಅಗೆದರೆಲ್ಲಕಡೆ ಸಿಕ್ಕೀತು ಸಿಹಿ ಕಹಿ ನೆನಪು
ಜೀವನದ ಹೂಗೊಂಚಲಿ ಅವಿತ ಮುಳ್ಳಿನಂತೆ

ಹಾಲುಣಿಸಿ ಕೈತುತ್ತನಿತ್ತ ಮಾತೆಯ ನೆನಪು
ಗಂಗೆಯಲಿ ತೇಲಿಬಿಟ್ಟ ಅಸ್ತಿರದ ನೆನಪು
ಮನದಾಳದಲಿ ಮುಳುಗೀತೆ?

ಕೈಹಿಡಿದು ನಡೆಸಿದ ಪುಟ್ಟಿಯ ಪುಟ್ಟಪುಟ್ಟ ಹೆಜ್ಜೆಯ ನೆನಪು
ಕೈಹಿಡಿದ ಬೇಜವಾಬ್ದಾರಿ ಅಳಿಯನಿಟ್ಟ ಸಪ್ತಪದಿಯ ನೆನಪು
ಮನದಾಳದಲಿ ನೆಮ್ಮದಿ ತಂದೀತೆ?

ಮಧುಚಂದ್ರದಲಿ ಕಿವಿಯಲುಸಿರಿದ ಪ್ರೀತಿ ನುಡಿಗಳ ನೆನಪು
ವಿಚ್ಛೇದನಲಾಡಿದ ಕರ್ಣಕಠೋರ ನುಡಿಗಳ ನೆನಪು
ಮನದಾಳದಲಿ ನಿಟ್ಟುಸಿರಾದೀತೆ?

ಒಂದೇ ಸೂರಿನಡಿ ಆಸೆ ತೊರೆದು ಎಲ್ಲವನು ಹಂಚಿಕೊಂಡ ಬಾಲ್ಯದ ನೆನಪು
ಪಿತೃ ತೊರೆದ ಆಸ್ತಿಯನು ಹಂಚಿಕೊಳ್ಳಲರಿಯದೆ ಎಲ್ಲವನು ಕಳೆದುಕೊಂಡ ನೆನಪು
ಮನದಾಳದಲಿ ಭಾಗವಾದೀತೆ?

ಪ್ರಪಂಚವನೇ ಗೆಲುವೆನೆಂಬ ಆಕಾಂಕ್ಷೆಯಲಿ ಬಿಟ್ಟ ತಾಯ್ನಾಡ ನೆನಪು
ಗೆಲಲಿಲ್ಲವೆಂಬ ವಿಷಾದೆದೆಭಾರದಲಿ ಸೋತು ಹಂಬಲಿಸಿದ ನೆನಪು
ಮನದಾಳದಲಿ ಹಗುರಾದೀತೆ?

ಕಹಿ ನೆನಪೇ ನೀ ದೂರಸರಿಯೆಂದು ನಿರಾಕರಿಸಿ
ಸಿಹಿ ನೆನಪೊಂದೇ ಸಾಕೆಂದರೆ ಮನ ಒಪ್ಪದೇಕೋ ಮನುಜ?
_____________________________________________

ತಾಳ್ಮೆ, ಕೋಪ

ತಾಳ್ಮೆಯಲಿ ಶೂರ್ಪಣಕಿಯ ದೂರ ಸರಿಯೆಂದ ಶ್ರೀರಾಮ
ಕೋಪದಲಿ ರಕ್ಕಸಿಯ ನಾಸಿಕವನು ಕೋಯ್ದ ರಾಮನನುಜ
ಆದಿಷೇಶನ ಸ್ಪರ್ಷದಲಿ ಧನ್ಯಳಾದಳು
ಊರಿದಳು ಅಡಿಪಾಯ ಲಂಕಾದಿಪತಿಯ ಸರ್ವ ನಾಶಕೆ

ತಾಳ್ಮೆಯಲಿ ಪ್ರಹಲ್ಲಾದ ನುಡಿದ
ಇಹನು ಎಲ್ಲೆಡೆ ನನ್ನ ಹರಿ ಇಹನು ಈ ಕಂಬದಲೂ
ಕೋಪದಲಿ ಹಿರಣ್ಯಾಕ್ಷ ಒಡೆದನಾ ಕಂಬವನು
ಉಗ್ರ ನರ ಬಗೆದನಾ ಉಗ್ರಕೋಪಿಯ ಉದರವನು

ತಾಳ್ಮೆಯಲಿ ರೋಧನದಲಿ ಶಿಶುಹತ್ಯವನು ಸಹಿಸಿದಳಾ ದೇವಕಿ
ಕ್ರೋಧದಲಿ ಬಾಲ ಮುಕುಂದನ ಅಂತಕನಾಗಲು ಭ್ರಮಿಸಿದನಾ ಕಂಸ
ಲೋಕ ಕಲ್ಯಾಣಕೆ ಶಂಖ ಚಕ್ರಧಾರಿ ಮಾಡಿದನಾ ರಕ್ಕಸನಂತ್ಯ

ಕೋಪ
ಅಡಗಿಹುದು ಮನದಲಿ, ಸಿಡಿವೆ ನೀ ಜ್ವಾಲಾಮುಖಿಯಲಿ
ಅಡಗಿಹುದು ತನುವಲಿ, ಮೆರೆವೆ ನೀ ಪರರ ದೌರ್ಬಲ್ಯದಲಿ
ಅಡಗಿಹುದು ಜಿಹ್ವೆಯಲಿ, ನುಡಿವೆ ನೀ ದುರ್ಭಾಷೆ

ತಾಳ್ಮೆ
ಪುಟಿವುದು ತೇಜೊಮಯದಲಿ
ಗೆಲುವುದು ನಮ್ಮೆಲ್ಲರ ಐಕ್ಯದಲಿ
ನುಡಿಸುವುದೆನ್ನ ನಾಲಿಗೆ ಸುಭಾಷಿತದಲಿ

ಕೋಪ ತಾಳ್ಮೆಗೆ ಸಾಟಿಯಾದೀತೆ ಮನುಜ?
_______________________________________

ತೃಪ್ತ

ಮಡದಿ ಮಕ್ಕಳ ತೊರೆದು ಕಾನನದಲಿ ಕಠೋರ ತಪವೆಸಗಿ
ನಾನಾಗುವೆನೆ ಬುದ್ಧ?
ಮಡದಿಯ ಸಂಗದಲಿ ಆಲಿಂಗನದಲಿ ಕಂದನ
ಮೊದಲ್ನುಡಿಯ ತೊದಲ್ನುಡಿಯನಾಲಿಸಿ ತೃಪ್ತ ನಾ
ಅಡವಿಬೆಟ್ಟದಡಿಯ ಜಲಧಾರೆಯಲಿ ಮಿಂದು ತೃಪ್ತ ನಾ

ರಾಗ ಲಹರಿಯಲಿ ಆರೋಹಣ-ಅವರೋಹಣದ ಶುದ್ಧತೆಯಲಿ
ವಿಳಂಬ ಮಧ್ಯಮ ತೀವ್ರ ಗತಿಯಲಿ ಹಾಡಿ
ನಾನಾಗುವೆನೆ ತಾನಸೇನ?
ಪಂಚಮದಲಿ ಕೋಗಿಲೆ ವಸಂತದಲಿ ವಸಂತ ರಾಗವ ಕೇಳಿ ತೃಪ್ತ ನಾ
ಕೊಳಲ ನಾದದಲಿ ಕೊಂಬುಕಹಳೆಯ ಮಾರ್ದನಿಯಲಿ ತೃಪ್ತ ನಾ

ಸಾಲದಲಿ ಭವನ ದರ್ಪದಲಿ ಸಾಮ್ರಾಜ್ಯಗಳ ಕಟ್ಟಿ
ನಾನಾಗುವೆನೆ ಚಕ್ರಾಧಿಪತಿ?
ನಿದ್ರೆ ಬರದ ಹಂಗಿನ ಅರಮನೆಯಾಕೆ
ಮುರುಕು ಗುಡಿಸಿಲಿನಲೇ ತೃಪ್ತ ನಾ
ಕೈ ತುತ್ತಿನ ಮೃಷ್ಟಾನ್ನದಲಿ ಗುಟುಕು ಅಂಬಲಿಯಲಿ ತೃಪ್ತ ನಾ

ಇರಿದು ಕತ್ತಿಯ ಕೊಂದುಂಡ ಹಸುವಿನ ದೇಹ
ಇಂಗಿಸಲು ಹಸಿವಿನ ದಾಹ
ನಾನಾಗುವೆನೆ ಕಟುಕ?
ಅಹಿಂಸೆಯಲಿ ನೊರೆ ಹಾಲ ಕುಡಿದೇ ತೃಪ್ತ ನಾ
ಬೊಗಸೆಗಣ್ಣಿನ ಆಕಳ ಕಂದ ತನ್ನಮ್ಮನ ಕರೆದ
ಅಂಬಾ ಧ್ವನಿಯನಾಲಿಸಿ ತೃಪ್ತ ನಾ

ರಾಹು ಕೇತು ನವಗ್ರಹಗಳ ಮೀಮಾಂಸೆಯಲಿ ಧರಣಿಮಂಡಲ ನಿಬಂಧದಲಿ
ನಾನಾಗುವೆನೆ ಆರ್ಯಭಟ?
ತಾರೆಗಳೆಣಿಸಿ ರಾಶಿಯೊಳು ಕಂಡೂ ಕಾಣದ ಸಿಂಹಾಕೃತಿಯ ರಚಿಸಿ
ಮುಂಜಾವಿನ ಹೊಂಗಿರಣಗಳಲಿ ಜಲ ತರ್ಪಣೆಯ ನಿರ್ಲಿಪ್ತತೆಯಲಿ
ಚಂದ್ರಮನ ಬೆಳ್ದಿಂಗಳಿನಲಿ ತೃಪ್ತ ನಾ
_________________________________________

ವರ್ಷಧಾರೆ

(ಹಿಂದುಸ್ಥಾನಿ ಗಾಯನದ ಭಾವಾರ್ಥ)

ಮೇಘ ಮಾಸದ ವರ್ಷಧಾರೆ
ಸಿಂಪಡಿಸಿತು
ತುಂತುರು ತುಂತುರಿನ ಕಲರವದಲಿ
ಹಾಡಿತು ಮಾಮರದ ಕೋಗಿಲೆ ಬೆರೆತು ಸಂಗೀತದಲಿ
ಮಿಂಚಿನ ಹೊಳಪಲಿ ಗುಡುಗುಡಿಗಿನ ಆರ್ಭಟದಲಿ
ನಡುಗಿತು
ನನ್ನೀ ದೇಹ ಪ್ರಿಯತಮ ನೀನಿಲ್ಲದೆ ಸನಿಹದಲಿ
_________________________________________

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ