ರಾಮನ 16 ಪುರುಷೋತ್ತಮ ಗುಣಗಳ ಬಗ್ಗೆ ಬರೆಯುವಾಗ ಆತ ಸತ್ಯವನ್ನು ಹೇಳುವವನು, ಧೈರ್ಯಶಾಲಿ, ಸ್ವಯಂನಿರ್ಣಯ ತೆಗೆದುಕೊಳ್ಳುವನು, ಇತ್ಯಾದಿ ಸೇರುತ್ತವೆ.
ಧೈರ್ಯಶಾಲಿ ಎನ್ನುವುದಕ್ಕೆ ಯಾರೂ ಉದಾಹರಣೆ ಕೊಡಬೇಕಿಲ್ಲ ಅಲ್ಲವೇ?
ಆದರೆ ರಾಮನ ಬಾಹ್ಯ ಚಿತ್ರೀಕರಣದಲ್ಲಿ ಒಂದು ಗಮನಿಸಬಹುದು. ಅವನ ಕೈಯಲ್ಲಿ ಕ್ಷತ್ರಿಯನಿಗೆ ಯೋಗ್ಯವಾದ ಬಿಲ್ಲು, ಅದರಲ್ಲೂ ಸದಾ ಹದೆ ಏರಿಸಿದ ಬಿಲ್ಲು, ಬೆನ್ನಿನ ಮೇಲೆ ಸದಾ ಭರ್ತಿಯಾಗಿರುವ ಬತ್ತಳಿಕೆ, ಬತ್ತಳಿಕೆಯಲ್ಲಿ ವಿವಿಧ ಬಾಣಗಳು. ಇವುಗಳಿಲ್ಲದೆ ರಾಮನ ಚಿತ್ರವೇ ಕಣ್ಣುಮುಂದೆ ಬರುವುದು ಕಷ್ಟ. ರಾಮಾಯಣದ ಆರು ಖಂಡಗಳಲ್ಲಿ - ಬಾಲ ಖಾಂಡದಿಂದ ಹಿಡಿದು ಯುದ್ಧ ಖಾಂಡದವರೆಗೆ - ರಾಮ ಅಂದರೆ ಯಾವಾಗಲೂ ಬಿಲ್ಲು ಹಿಡಿದವನೇ. ಅಬ್ಬಬ್ಬಾ ಅಂದರೆ ಸುಂದರ ಖಾಂಡದಲ್ಲಿ ಸೀತೆಯ ಜೊತೆ ಏಕಾಂತದಲ್ಲಿ ಎಲ್ಲಾದರು ಒಂದೆರಡು ಕಡೆ ರಾಮ ತನ್ನ ಬಿಲ್ಲು ಬಾಣಗಳನ್ನು ಬಿಟ್ಟಿರಬಹುದೇನೋ ಅಂತ ನಮಗೆ ಸಂಶಯ ಬಂದರೂ ಅದು ತಪ್ಪು. ಸುಂದರ ಖಾಂಡದಲ್ಲಿ ಅವುಗಳ ಬಳಕೆ ಹೆಚ್ಚಾಗಿಯೇ ಇತ್ತು. ಕಿಷ್ಕಿಂದೆಯಲ್ಲಿ ವಾಲಿಯನ್ನು ಕೊಲ್ಲಲು, ಮಾಯಾವಿ ಮೃಗಗಳನ್ನು ಕೊಲ್ಲಲು, ಸೆಲ್ಫ್ ಡಿಫೆನ್ಸ್ ಗೆ ಬಿಲ್ಲು ಬಾಣ ಇಲ್ಲದಿದ್ದರೆ ಸಾಧ್ಯವಾ ನೀವೇ ಹೇಳಿ.
ಹೋಗಲಿ ರಾವಣನನ್ನು ಕೊಂದು ಪುಷ್ಪಕ ವಿಮಾನದಲ್ಲಿ ಅಯೋಧ್ಯೆಗೆ ಮರಳಿ ಹೋಗುತ್ತಿರುವಾಗ? ಈಗಿನ TSA ಅಂತೆ ಲಗೇಜ್ ಚೆಕ್ ಇನ್ ಮಾಡಿ ವೆಪನ್ಸ್, ಪಿಸ್ತೂಲ್ ವಿಮಾನದಲ್ಲಿ ನಿಷೇದ ಅಂತ ಗೊತ್ತಿದ್ದರೂ ರಾಮ ಆ ಖಾಯಿದೆಯನ್ನು ಉಲ್ಲಂಘಿಸಿ ಎಂದಿನಂತೆ ಕೈಯಲ್ಲಿ ಬಿಲ್ಲು, ಬತ್ತಳಿಕೆಯಲ್ಲಿ ಬಾಣ ಹಿಡಿದೇ ಹಾರಿದ್ದಕ್ಕೆ ಇರಬೇಕು ಕುಬೇರ ತನ್ನ ಪುಷ್ಪಕ ವಿಮಾನವನ್ನು ಪ್ರೈವೇಟ್ ಜೆಟ್ ಅಂತ ಮತ್ತೆ ರಾಮನಿಗೆ ಕೊಡಲೇ ಇಲ್ಲ. ಕುಬೇರ ಕೂಡ ಶ್ರೀ ಲಂಕಾ ಫೆಡ್ರಲ್ ಸರ್ಕಾರಕ್ಕೆ ಫೈನ್ ಕಟ್ಟಿದ್ದು ಎಷ್ಟು ಅಂತ ಗೊತ್ತಿಲ್ಲ.
ಪುಷ್ಪಕ ವಿಮಾನದಿಂದ ಇಳಿದು ಸೀದಾ ತಾಯಿ ಚಿಕ್ಕಮ್ಮಂದಿರ ಬಳಿ ಹೋದಾಗಲೂ ಧೈರ್ಯ ಕಳೆದು ಕೊಳ್ಳಬಾರದೆಂದು ಕೈಯಲ್ಲಿ ಬಿಲ್ಲು ಬೆನ್ನಿನ ಮೇಲೆ ಬತ್ತಳಿಕೆಯಲ್ಲಿ ಬಾಣ ಹೊತ್ತೇ ಇದ್ದ ರಾಮ. ತಾಯಿಗೆ ಸಾಷ್ಟಾಂಗ ನಮಸ್ಕಾರ ಮಾಡುವಾಗ ಬಿಲ್ಲು ಕೆಳಗಿಟ್ಟಿದ್ದ ಎಂದು ವಾಲ್ಮೀಕಿಯೂ ಹೇಳಿಲ್ಲ ಅಂದ ಮೇಲೆ ಕುವೆಂಪು ಅವರು ಅದರ ಬಗ್ಗೆ ಬರೆಯಲು ಸಾಹಸ ಮಾಡಲಿಲ್ಲ ಅಂತ ಕಾಣುತ್ತೆ. ಕೈಕೆಯ ಬಳಿ ಹೋದಾಗ, ಯಾವ ಹುತ್ತದಲ್ಲಿ ಯಾವ ಹಾವೊ ಎನ್ನುವ ಹಾಗೆ, ಅಲ್ಲಿ ಬಿಲ್ಲು ಬಾಣ ಕೆಳಗಿಡುವುದು ಸರಿಯಲ್ಲ ಅಂತ ನಿಮಗೆ ಅನಿಸಿದರೆ ನೀವು ಶೇಕ್ಸ್ಪಿಯರ್ ನ ಜೂಲಿಯಸ್ ಸೀಸರ್ ಕತೆಯನ್ನು ರಾಮಾಯಣಕ್ಕಿಂತ ಹೆಚ್ಚು ಪ್ರೀತಿಸುತ್ತೀರಿ ಅಂತ ಹೇಳಲು ಹಿಂಜರಿಯುತ್ತಿದ್ದೀರಿ ಅಲ್ಲವೇ?
ಹೋಗಲಿ ಅಂತಹ ಕಾಲ್ಪನಿಕ ಭಯಾನಕ ಘಟನೆಯನ್ನು ನೀವು ಮರೆತು ರಾಮನ ಪಟ್ಟಾಭಿಷೇಕ ನೋಡಿ ಧನ್ಯನಾಗುವ ಅಂತ ಮುಂದಿನ ಯೋಚನೆ ಮಾಡಿ ಅಯೋಧ್ಯೆಗೆ ಹೋಗಿಯೇ ಬಿಟ್ಟಿರಿ. ಎಲ್ಲೆಲ್ಲೂ ಸಂಭ್ರಮ. ಯುದ್ಧ ಮುಗಿದ ಶಾಂತಿಯ ವಾತಾವರಣ. ರಾಮ ಸೀತೆ ಎಲ್ಲಾ ಸಿಂಹಾಸನದ ಮೇಲೆ ಆಸೀನರಾಗಿದ್ದಾರೆ. ಹನುಮಂತ ರಾಮನ ಬಲಗಡೆ, ಎಡಗಡೆ ಭರತ ಮೊಣಕಾಲೂರಿ ಕುಳಿತ್ತಿದ್ದಾರೆ. ಸಿಂಹಾಸನದ ಅಕ್ಕಪಕ್ಕದಲ್ಲಿ ಲಕ್ಷ್ಮಣ ಶತ್ರುಘ್ನರು ನಿಂತಿದ್ದಾರೆ. ಧನ್ಯ ಧನ್ಯ ನೀವೇ ಧನ್ಯರು. ಅಂತಹ ಸುಂದರ ಶಾಂತ ಗಳಿಗೆಯನ್ನು ಕಣ್ತುಂಬ, ಮನ ತುಂಬಾ ಹಿಡಿಯಬೇಕೆಂದು ನೀವೆಣಿಸುತ್ತೀದ್ದೀರಿ. ಆದರೆ ರಾಮ ಯಾಕೋ ಸಿಂಹಾಸನದ ಮೇಲೆ ಕಂಫರ್ಟಬಲ್ ಆಗಿ ಕುಳಿತಿಲ್ಲ ಅಂತ ನಿಮಗೆ ಅನಿಸುತ್ತೆ. ಬೆನ್ನು ವರಗಿಸಿಕೊಂಡು ಬಲಗಾಲನ್ನು ತನ್ನ ಎಡಗಾಲ ಮೇಲೆ ಬಲಗಾಲನ್ನು ಇರಸಿ ಕುಳಿತುಕೊಂಡಿದ್ದರೂ ಅದ್ಯಾಕೋ ಸರಿಯಿಲ್ಲ ಅಂತ ನಿಮಗೆ ಅನಿಸುತ್ತಿದೆ. ಮತ್ತೊಮ್ಮೆ ವೀಕ್ಷಿಸುತ್ತೀರಿ. ಇದೇನಿದು ಬೆನ್ನಿನ ಮೇಲೆ ಆ ಬತ್ತಳಿಕೆ ಹಾಕಿಕೊಂಡು ಯಾರಾದರೂ ವರಗಿ ಕುಳಿತುಕೊಳ್ಳಲು ಸಾಧ್ಯವಾ? ಅದೊ ಭರ್ತಿಯಾದ ಬತ್ತಳಿಕೆ. ಅದೇನು ಮೆತ್ತನೆಯ ಹಾಸಿಗೆಯೇ ಅದರಲ್ಲೂ ಹಿತ್ತಾಳೆಯ ಬತ್ತಳಿಕೆ, ಒಂದೊಂದು ಬಾಣವೂ ನ್ಯೂಕ್ಲಿಯರ್ ಬಾಂಬ್ ಶಕ್ತಿಯವು ಏನಿಲ್ಲೆಂದರೊ 300 ಕಿಲೋಗ್ರ್ಯಾಮ್ ಇರಬೇಕು. ಅಷ್ಟು ಭಾರದ ಬತ್ತಳಿಕೆ ಹೊತ್ತು ಚಿನ್ನದ ಸಿಂಹಾಸನಕ್ಕೆ ಸ್ಪೆಷಲ್ ಆರ್ಡರ್ ಕೊಟ್ಟು ಮಾಡಿಸಿದ ನಯವಾದ ಮೆತ್ತನೆಯ ನೀಲಿ ಮಕ್ಮಲ್ ಎಲ್ಲಿ ಹರಿದು ಹೋಗುತ್ತೋ ಅಂತ ರಾಮ ಅದೇನೋ ಹೇಳ್ತಾರಲ್ಲ, ಅದೇ ರೀ ಸಸ್ಪೆನ್ಸ್ ಚಿತ್ರ ನೋಡುವಾಗ, ಸಿಟಿಂಗ್ ಆನ್ ದಿ ಎಡ್ಜ್ ಆಫ್ ಸೀಟ್ ಅಂತ, ಹಾಗೆಯೇ ಕುಳಿತ್ತಿದ್ದಾನೆ ರಾಮ ಅಂತ ನಿಮಗೆ ಸ್ವಲ್ಪ ಗಾಬರಿ ಆಗುತ್ತೆ. ಇದೇನಿದು, ಯುದ್ಧಕ್ಕೆ ಹೊರಟಂತೆ ಎಲ್ಲರ ಕೈಯಲ್ಲೂ ಬಿಲ್ಲು ಬಾಣ, ಬತ್ತಳಿಕೆ. ರಾಮನ ಕೈಯಲ್ಲಿ, ಲಕ್ಷಣನ ಕೈಯಲ್ಲೂ, ಯಾವತ್ತೂ ಯುದ್ಧ ಮಾಡದ ಶತ್ರುಘ್ ನ ಕೈಯಲ್ಲೂ ಬಿಲ್ಲು, ಬೆನ್ನಿನ ಮೇಲೆ ಬತ್ತಳಿಕೆ! ಅಯ್ಯೋ ಹನುಮಂತ ಧೈರ್ಯವಂತ ವಯಸ್ಸಾದಂತೆ ಕಂಡರೂ ಕಣ್ಣು ಮುಚ್ಚಿ ಧ್ಯಾನಿಸುತ್ತಲೇ ಯಾವ ರಾಕ್ಷಸ ಈ ಪಟ್ಟಾಭಿಷೇಕಕ್ಕೆ ಬಂದರೂ ಗದೆ ಭುಜದ ಮೇಲೆ ಇದೆಯಾ ಅಂತ ಖಾತ್ರಿ ಪಡಿಸಿಕೊಂಡೆ ಕುಳಿತಂತಿದೆ. ಇದೇನಿದು, ಭರತ ವಿರಕ್ತಿಯಿಂದ ಬಿಲ್ಲು ಬಾಣದ ಜೊತೆ ಬತ್ತಳಿಕೆಯನ್ನೂ ನೆಲದ ಮೇಲಿಟ್ಟು ರಾಮನಿಗೆ ಹಣ್ಣು ಹಂಪಲು ಕೊಡುತ್ತಿದ್ದಾನೆ? ಛೇ ಅವನಿಗೆ ಕ್ಷತ್ರಿಯರ ಅದರಲ್ಲೂ ರಘುವಂಶದ ವೆಪನ್ಸ್ ಬಗ್ಗೆ ಗೌರವವೇ ಇಲ್ಲ. ಅದನ್ಯಾರಾದರು ಪಟ್ಟಾಭಿಷೇಕದ ವೇಳೆಯಲ್ಲಿ, ಶ್ರೀ ರಾಮ ಜೊತೆಯಿರುವಾಗ, ಗುರುವರ್ಯರು ಫ್ರಂಟ್ ಸೀಟಿನಲ್ಲಿ ಕುಳಿತಿರುವಾಗ ಬಿಲ್ಲನ್ನ ನೆಲೆದ ಮೇಲೆ ಇಡಬಹುದೇ? ಅಥವಾ ರಾಮನ ಪಾದುಕೆಯೇ ಸಾಕು ಎಂದು ವಿರಕ್ತಿಯೇ? ಅದೆಲ್ಲ ಸರಿ, ಇದು ಯುದ್ಧಕ್ಕೆ ಹೊರಟಿರುವ ತಂಜಾವೂರು ಶೈಲಿಯ ಚಿತ್ರವೋ ಅಥವಾ ಪಟ್ಟಾಭಿಷೇಕದ ಮಧುಬನಿ ಶೈಲಿಯ ಚಿತ್ರವೋ ಅಂತ ನೀವು ಯೋಚಿಸಬಾರದು. ಆದರೂ ಈ ಪಟ್ಟಾಭಿಷೇಕದ ಸಮಯದಲ್ಲಿ ರಾಮ ಬಿಲ್ಲು ಹಿಡಿಬಾರದಿತ್ತು, ಅಂತ ನೀವು ಬುದ್ಧನ ಅನುಯಾಯಿಗಳು ಶಾಂತಿಯನ್ನೇ ಬಯಸುತ್ತಿದ್ದರೆ ಮತ್ತೊಮ್ಮೆ ಯೋಚಿಸಿ. ರಾಮ ಧೈರ್ಯಶಾಲಿ. ಅವನಿಗೇಕೆ ಬೇಕು ಸದಾ ಬಿಲ್ಲು ಬಾಣ? ಅಷ್ಟೂ ಗೊತ್ತಾಗಲ್ವೆ ನಿಮಗೆ. ಅಯೋಧ್ಯೆ ಸುತ್ತಮುತ್ತಲು ಟೆರರಿಸ್ಟ್ ಗಳು!
ಹೇ ಆಗಿನ ಕಾಲದಲ್ಲಿ ರಾಮ ರಾಜ್ಯದಲ್ಲಿ ಟೆರರಿಸ್ಟ್ ಇರಕ್ಕೆ ಸಾಧ್ಯವಾ ಅಂತ ಯೋಚಿಸಬೇಕಾದ ವಿಷಯ. ಒಟ್ಟಿನಲ್ಲಿ ರಘುವಂಶದವರಿಗೆ ಯಾವಾಗಲೂ ಪ್ರಜೆಗಳನ್ನ ಕಾಪಾಡೋದೇ ಕೆಲಸ. ಹಂಗಿದ್ರೆ ನಾವು ಬಿಲ್ಲು ಬಾಣ ಹಿಡಕೊಂಡೆ ಇದ್ರೆ ನಮ್ಮನ್ನ ನಾವು ಕಾಪಾಡಿಕೊಳ್ಳಬಹುದಾ? ನೀವು ಹಿಂಗೆಲ್ಲ ವಾದಕ್ಕಿಳಿದರೆ ನಿಮ್ಮನ್ನ ಸೀದಾ ಟೆಕ್ಸಸ್ ರಾಜ್ಯಕ್ಕೆ ಪುಷ್ಪಕ ವಿಮಾನದಲ್ಲಿ ಕಳಿಸಿಬಿಡಬೇಕಾಗುತ್ತೆ. ಆ ರಾಜ್ಯದಲ್ಲಿ ಹಂಗೇನಾ. ಪ್ರಜೆಗಳೆಲ್ಲರೂ ಜೇಬೊಳಗೊಂದು, ಬೂಟಿನೊಳಗೊಂದು ಅಂತ ಅದೇನೋ ಅವಿಸಿಕೊಂಡು ಓಡಾಡ್ತಾರೆ.
ಆದ್ರೆ ರಾಮ ರಾಜ್ಯದಲ್ಲಿ ಹಂಗಿಲ್ಲ. ಪ್ರಜೆಗಳು ನಿಶ್ಚಿಂತ ಮನೋಭಾವದವರು. ರಾಮ ನೋಡಿಕೊಳ್ತಾನೆ ಅವನ ಬಳಿ ಬಿಲ್ಲು ಬಾಣ ಇದೆ ನಮಗ್ಯಾಕ ಆ ಉಸಾಬರಿ ಅಂತ ಸುಮ್ಮನಿರ್ತಾರೆ. ಹೆಗಲ ಮೇಲೆ ಟವಲ್ಲು (HMT) ಅಂತ ನೀವು ಹಳ್ಳಿ ಗೌಡರನ್ನ ಆಡಿಕೊಳ್ಳುವಂತೆ ಆಗಿನ ಕಾಲದ ರಾಮರಾಜ್ಯದಲ್ಲಿ HMB ಅಂತ ಕಾರ್ಟೂನ್ ಮಾಡಿ ಅಯೋಧ್ಯಾ ಟೈಮ್ಸ್ ಮಾಸ ಪತ್ರಿಕೆಯಲ್ಲಿ ಅದನ್ನು ಓದಬಹುದಿತ್ತು. ಅಯೋಧ್ಯೆಯವರಂತೂ ಬಾಲ ಖಾಂಡದಲ್ಲೇ ಇರುತ್ತಾರೆ. ಯಾರೂ ತಾವಾಗಿಯೇ ಬಿಲ್ಲು ಬಾಣ ಉಪಯೋಗಿಸುವ ಕಲೆಯನ್ನಾಗಲಿ, ಆಸಕ್ತಿಯನ್ನಾಗಲಿ ತೋರಿಸಲೇ ಇಲ್ಲ. ಅವರ್ಯಾರೂ ಬಿಲ್ಲು ಬಾಣ ಹಿಡಿಯಲೇ ಇಲ್ಲ ಅಂದರೆ ಅದೆಷ್ಟು ಮುಗ್ಧರು ಅವರು ಅಲ್ಲವೇ? ಸಧ್ಯ, ರಾಕ್ಷಸಿಯರಾಗಲಿ, ರಕ್ಕಸರಾಗಲಿ ಯಾರೊ ಅಯೋಧ್ಯೆಯ ಮೇಲೆ ಆಕ್ರಮಣ ಮಾಡಲಿಲ್ಲ. ಸಧ್ಯ ರಾಮ ಲಕ್ಷ್ಮಣರು ಊರಿನ ಹೊರವಲಯದಲ್ಲೇ ಮುಗಿಸಿಬಿಟ್ಟರು ಅವರ ಕತೆಯ. ಅಯೋಧ್ಯಾ ನಿವಾಸಿಗಳಿಗೆ ಒಂದು ಒಗಿಯೋ ಕಲ್ಲು ಸಾಕು. ರಾಮ ಹಿಂಗ ಸೀತೆ ಹಿಂಗ ಅಂತ ಒಂದೊಂದು ಬಾರಿ ಬಟ್ಟೆ ಒತ್ತಿ ಒಗಿಯುವಾಗ ಮಾತಾಡಿಕೊಳ್ತಾರೆ ಅಷ್ಟೇ. ಆ ಕಿಷ್ಕಿಂದಾ ನಗರದ ವಾನರರೇ ವಾಸಿ. ಅವರಿಗೆ ಕಲ್ಲುಗಳನ್ನು ಹೇಗೆ ಶಸ್ತ್ರವಾಗಿ ಉಪಯೋಗಿಸಬೇಕೆಂದು ಗೊತ್ತಿತ್ತು ಅಂತ ನೀವು ಇಲ್ಲಿ ವಗ್ಗರಣೆಯ ಮಾತು ಹೇಳಬೇಕೆನಿಸಿದರೆ ನನ್ನ ಅಭ್ಯಂತರವೇನಿಲ್ಲ. ಆದರೆ ಅಯೋಧ್ಯಾ ನಿವಾಸಿಗಳ ಆ ಮಾತು ರಾಮನಿಗೆ ಕೇಳಿಸ್ತು ಅಂದಾಗ ಮತ್ತೆ ರಾಮ ಬಿಲ್ಲು ಬಾಣ ಹಿಡಿದೇ ಆಜ್ಞೆ ಕೊಟ್ಟುಬಿಟ್ಟ, ಲಕ್ಷಣ ಬಿಲ್ಲು ಬಾಣ ಹಿಡಿದೇ ರಥದ ಮೇಲೆ ಕುಳಿತು ಜಾನಕಿಯನ್ನ ಕಾಡಿಗೇ ಬಿಟ್ಟು ಬಂದುಬಿಟ್ಟ. ಒಟ್ಟಿನಲ್ಲಿ ಈ ಬಿಲ್ಲು ಬಾಣ ಶುಭ ಘಳಿಗೆಯಲ್ಲಿ, ಕೆಟ್ಟ ಘಳಿಗೆಯಲ್ಲಿ, ಶಾಂತ ಘಳಿಗೆಯಲ್ಲಿ, ಯುದ್ಧ ಘಳಿಗೆಯಲ್ಲಿ ಯಾವಾಗಲೂ, ಅದೇನೋ ಹೇಳ್ತಾರಲ್ಲ ನೆತ್ತಿಯ ಮೇಲೆ ಅಲುಗಾಡುತ್ತಿದ್ದ ಮೊನಚಾದ ಕತ್ತಿಯಂತೆ, ಅಯ್ಯೋ ಅಲ್ಲ ರೀ ಅದೇ ಹೆಗಲ ಮೇಲೆ ನೆತ್ತಾಡುತ್ತಿದ್ದ ಬಿಲ್ಲಿನಂತೆ ಯಾವಾಗಲೂ ಇರುತ್ತೆ ರಾಮಾಯಣದಲ್ಲಿ.
ಬಿಲ್ಲು ಬಾಣದ ಕತೆ ಸಮಾಪ್ತಿ ಆಯಿತು ಅಂತ ನೀವು ಸುಮ್ಮನೆ ಕೂಡಬೇಡಿ, ಅಯೋಧ್ಯಾವಾಸಿಗಳಂತೆ; ಬದಲು ಬಿಲ್ಲು ಬಾಣ ಉಪಯೋಗಿಸಲು ಕಲಿತುಕೊಳ್ಳಿ, ಮುಂದೆ ಉಪಯೋಗಕ್ಕೆ ಬರಬಹುದು ಅಥವಾ ರಘುವಂಶಜರೆಂದು ನಿಮ್ಮನ್ನೂ ಗುರುತಿಸಬಹದು! ಹಾಗಂದ ಮಾತ್ರಕ್ಕೆ ನಾಳೆ ನಿಮ್ಮ ಆಫೀಸ್ಗೆ ಅದನ್ನು ಹೆಗಲ ಮೇಲೆ ಕೊಂಡಯ್ಯಬೇಡಿ ಅಷ್ಟೇ!
ಮೇಲಿನ ಹರಟೆಗೆ ಇನ್ಸ್ಪಿರೇಷನ್
ಪುರುಷೋತ್ತಮ ರಾಮನ ಭಜಿಸು ಮನವೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ