ಅಕ್ಕ -೨೦೧೪ ಸಮ್ಮೇಳನದಲ್ಲಿ ಭಾಗವಹಿಸಿದ ಡಾಕ್ಟರ್. ಎಸ್.ಎಲ್. ಭೈರಪ್ಪನವರೊಡನೆ ಸಂಧರ್ಶನ ಮಾಡಿದಾಗ ದಿನಾಂಕ ಆಗಸ್ಟ್ ೨೭ ರಂದು ಸ್ಯಾನ್ ಫ್ರಾನ್ಸಿಸ್ಕೋನಲ್ಲಿ ತೆಗೆದ ಚಿತ್ರ. ಎಡಗಡೆಯಿಂದ ಬಲಕ್ಕೆ: ಪ್ರಕಾಶ್ ನಾಯಕ್, ರವಿ ಗೋಪಾಲರಾವ್, ಡಾ. ಎಸ್. ಎಲ್. ಭೈರಪ್ಪ ಮತ್ತು ವಿಶ್ವನಾಥ್ ಹುಲಿಕಲ್.
________________________________________________________
ನಾಲ್ಕು ಲಕ್ಷ ಓದುಗರಿಂದ 4 ಸ್ಟಾರ್ ರೇಟಿಂಗ್ ಗಳಿಸಿದ ಎಸ.ಎಲ್.ಭೈರಪ್ಪನವರ ಸಂದರ್ಶನ !
ಗೂಗಲ್ ಹಾಗು ಮತ್ತಿತರ ವೆಬಸೈಟ್ ನಂತೆ ಟಂಬ್ಲರ್ ಎನ್ನುವುದು ಬ್ಲಾಗಿಗರ ಒಂದು ತಾಣ. 2015 ರಲ್ಲಿ ಎಸ.ಎಲ್.ಭೈರಪ್ಪನವರ ಒಂದು ಸಂದರ್ಶನವನ್ನು ನಾನು ನನ್ನ ಟಂಬ್ಲರ್ ಬ್ಲಾಗ್ ನಲ್ಲಿ ಪ್ರಕಟಿಸಿದ್ದೆ. ಹಲವಾರು ವರ್ಷಗಳ ನಂತರ ಹಾಗೆ ಸುಮ್ಮನೆ ಇವತ್ತು ಮತ್ತೊಮ್ಮೆ ಈ ವೆಬ್ ಸೈಟ್ ಗೆ ಭೇಟಿ ಕೊಟ್ಟಿದ್ದೆ. ಕನ್ನಡ ಓದುವರೆ ಕಡಿಮೆ ಇರುವ ಈ ಕಾಲದಲ್ಲಿ ನಾನು ಲೇಖನದ ಬಗ್ಗೆ ರೇಟಿಂಗ್ಸ್ ಆಗಲಿ ಅದನ್ನು ಎಷ್ಟು ಜನ ಓದಿದರು ಎನ್ನುವ ಮಾಹಿತಿಬಗ್ಗೆ ಅಷ್ಟು ಗಮನ ಕೊಡುವುದಿಲ್ಲ. ಆದರೆ ಇಂದು ಆಶ್ಚರ್ಯ ಕಾದಿತ್ತು. ಭೈರಪ್ಪನವರ ಸಂದರ್ಶನಕ್ಕೆ ಸುಮಾರು 4 ಲಕ್ಷ ಬಾರಿ (3,90,166) ಓದುಗರು ಕ್ಲಿಕ್ ಮಾಡಿ ಅದನ್ನು ರೇಟ್ ಮಾಡಿದ್ದರು. ಒಂದರಿಂದ ನಾಲ್ಕು ಸ್ಟಾರ್ ರೇಟಿಂಗ್ ಕೊಡಬಹುದಾದ ಈ ಮಾಹಿತಿಯಲ್ಲಿ ಈ ಲೇಖನಕ್ಕೆ 4 ಸ್ಟಾರ್ ಕೊಟ್ಟಿರುವುದನ್ನು ನೋಡಿ ಸ್ವಲ್ಪ ಆಶ್ಚರ್ಯವಾಯಿತು. ಅಂದರೆ 4 ಲಕ್ಷ ಓದುಗರು ಈ ಲೇಖನವನ್ನು ಓದಿದರೋ ಇಲ್ಲವೋ ಗೊತ್ತಿಲ್ಲ, ಆದರೆ 4 ಸ್ಟಾರ್ ರೇಟಿಂಗ್ ಕೊಟ್ಟಿರುವುದನ್ನು ಅರಿತು ಒಂದು ರೀತಿ ಗಾಬರಿಯೂ ಆಯಿತು.
Interview with SL Bhyrappa publicized in OneIndia. http://t.co/OURUX6Qyjr. Read the full text in my blog: http://t.co/hmDyb0WbVV— Ravi Gopalarao (@rgopalarao) January 30, 2015
________________________________________________________
ಎಸ್.ಎಲ್.ಭೈರಪ್ಪ ಸಂದರ್ಶನ
ಸ್ಥಳ: ಸ್ಯಾನ್ ಫ್ರಾನ್ಸಿಸ್ಕೊ .
ದಿನಾಂಕ: ಆಗಸ್ಟ್, ೨೭, ೨೦೧೪.
ಸಂದರ್ಶಕರು: ರವಿ ಗೋಪಾಲ ರಾವ್ ಮತ್ತು ಪ್ರಕಾಶ್ ನಾಯಕ್.
ಸಹಾಯ: ಕಾವ್ಯ ಭಟ್.
_________________________________________________________
ಸಂದರ್ಶಕ: “ನೀವು ಜೀವನದ ಬಹುಮುಖಗಳನ್ನು ನೋಡಿದ್ದೀರಿ. ಮೈಸೂರು ಪ್ರಾಂತ್ಯ, ಹುಬ್ಬಳ್ಳಿ, ಗುಜರಾತ್, ದೆಹಲಿ ಅಂತಹ ಬಿನ್ನ ಪರಿಸರಗಳನ್ನು ನೋಡಿದ್ದೀರಿ. ಭಾರತೀಯ ಜೀವನವು ಬಹಳಷ್ಟು ಬದಲಾವಣೆ ಆಗಿದೆ. ಅವರ ಜೀವನ ದರ್ಶನದಲ್ಲಿ ಏನು ಬದಲಾವಣೆ ಕಂಡಿದ್ದೀರಿ?”
ಎಸ್.ಎಲ್.ಬಿ: “ಇದು ನೇರವಾಗಿ ಸಾಹಿತ್ಯಕವಾಗಿ ಹೇಳುವುದಕ್ಕಿಂತ, ಇಡೀ ಪ್ರಪಂಚದೊಳಗೆ ಬದಲಾವಣೆ ಕಾಣ್ತಾ ಇದೆ. ಅವರ ಮೌಲ್ಯಗಳಲ್ಲಿ, ಎಲ್ಲ ದೇಶಗಳಲ್ಲು ಹೊಸ ಬದಲಾವಣೆ ಕಾಣ್ತಾ ಇದೆ. ಈಗ ಕೌಟುಂಬಿಕ ವ್ಯವಸ್ತೆ ಬೇರೆ ಬೇರೆ. ಇದರೊಳಗೆಲ್ಲ ಬದಲಾವಣೆ ಕಾಣ್ತಾ ಇದೆ. ಅದರ ಪ್ರಭಾವ ನಮ್ಮ ದೇಶದಲ್ಲು ಆಗ್ತಾಯಿದೆ. ನಮ್ಮ ಹಿಂದಿನ ಮೌಲ್ಯಗಳು ಇವಾಗೆಷ್ಟೊ ಜನರ ಮೇಲೆ ನಂಬಿಕೆ ಕಡಿಮೆ ಆಗಿದೆ ಅಂತ ಹೇಳುವುದಕ್ಕಿಂತ ಅದರ ಗ್ರಿಪ್ ಕಡಿಮೆ ಆಗಿದೆ, ನಮ್ಮ ಸಮಾಜದೊಳಗೆ. ನಮ್ಮ ತರುಣರಲ್ಲಿ ಅದು ಎಲ್ಲ ಕಡಿಮೆ ಆಗಿದೆ. ಬೇಕಾದಷ್ಟು ಇಂಡಸ್ಟ್ರಿಯಲೈಸೇಶನ್ ಆಗಿದೆ. ಆಮೇಲೆ ಕೆಲಸ ಹುಡುಕಿಕೊಂಡು ನಮ್ಮ ದೇಶ ಬಿಟ್ಟು ಹೊರಗಡೆಗೆ ಹೋಗುವುದು — ಅದು ಬಂದಿದೆ. ಇದರಿಂದ ಹೊರಗಡೆ ದೇಶಗಳ ಪ್ರಭಾವ ನಮ್ಮ ಮೇಲೆ ಬೇಗಲೆ ಆಗ್ತಾ ಇದೆ. ಉದಾಹರಣೆಗೆ ಈಗೆಲ್ಲ ಇಪ್ಪತ್ತು ಇಪ್ಪತ್ತಮೂರು ಅಥವ ಇಪ್ಪತ್ತನಾಲ್ಕು ವಯಸ್ಸಿನಲ್ಲೆ ಅಮೆರಿಕಗೆ ಹೊರಟುಹೋಗಿರ್ತಾರೆ. ಎಷ್ಟೊ ಜನ ನಮ್ಮವರು ಓದುವುದಕ್ಕೆ ಅಂತ ಹೋದವರು ಅಮೆರಿಕ ದೇಶಕ್ಕೆ ವಗ್ಗಿದ್ದಾರೆ. ಹಿಂದಿನ ತಲಮಾರಿನೊಳಗೆ ನಮಗೆ ಮೂವತ್ತು ನಲವತ್ತು ವರ್ಷ ವಯಸ್ಸು ಆಗೋಹೊತ್ತಿಗೆ ಯಾವ ಅನುಭವ ನಮಗೆ ಆಗ್ತಿತ್ತೋ ಇವಾಗ ೨೦-೨೪ ವಯಸ್ಸಿನಲ್ಲೆ ಅಮೆರಿಕ ನೋಡುವುದರಿಂದ ಅವರ ಪರ್ಸ್ಪೆಕ್ಟೀವ್ ಬದಲಾಗುತ್ತದೆ. ಇಡೀ ಪ್ರಪಂಚ ನೋಡುವುದರಿಂದ ಆ ಪರ್ಸ್ಪೆಕ್ಟೀವ್ ಬೇರೆ ಆಗುತ್ತದೆ. ಹೀಗಾಗಿ ನಮ್ಮ ಪರ್ಸ್ಪೆಕ್ಟೀವ್ ಒಳಗೆ ರೆವಲ್ಯೂಷನ್ ಆಗಿಹೋಗಿದೆ. ಎಷ್ಟೆಲ್ಲ ಬದಲಾವಣೆಗಳು ಆಗ್ತಾನೆ ಇದಾವೆ.
ಸಂದರ್ಶಕ:: “ಹಾಗಾದರೆ ಅವರ ಮೂಲಭೂತ ಮೌಲ್ಯಗಳಲ್ಲೆ ಬದಲಾವಣೆ ಆಗ್ತಾಯಿದೆಯೆ?”
ಎಸ್.ಎಲ್.ಬಿ: “ನಮ್ಮ ಪರಂಪರಾಗತ ನಂಬಿಕೆಗೆ ಬರ್ತಲೂ ಇದ್ದಾರೆ. ಈಗ ಎಷ್ಟೋ ಜನ ಚಿಕ್ಕ ವಯಸ್ಸಿನಲ್ಲೆ ಎಮ್.ಎಸ್ ಅದೂ ಇದೂ ಮಾಡಿಕೊಂಡು ಇಲ್ಲೇ ಅಮೆರಿಕದಲ್ಲೆ ಇರುವವರೂ ಕೂಡ ಅಲ್ಲಿ —ಭಾರತದಲ್ಲಿ— ಒಂದು ಕಾಂಟ್ಯಾಕ್ಟ್ ಇಟ್ಟುಕೊಂಡು ನಾವು ಸಂಕೃತ ಕಲಿತುಕೊಳ್ಳಬೇಕು, ಉಪನಿಷತ್ ಕಲಿತುಕೊಳ್ಳಬೇಕು ಅಂತ ಯಂಗ್ಸ್ಟರ್ಸ್ ಭಾರತಕ್ಕೆ ವಾಪಸ್ಸು ಹೋದವರು ಬಹಳ ಗಂಭೀರವಾಗಿ ಎಲ್ಲ ಅಧ್ಯಾಯನ ಮಾಡುವುದನ್ನು ಶುರು ಮಾಡಿದ್ದಾರೆ.”
“ಇಲ್ಲಿಂದ ನೀವು ಹೇಳುವಂತ ಸಂಸ್ಕೃತವನ್ನ ಎಲ್ಲ ಕೆಲಸಗಳನ್ನು ಬಿಟ್ಟು ೪-೫ ವರ್ಷಗಳ ಕಾಲ ಅಧ್ಯಯನ ಮಾಡಿರುವರೂ ಇದ್ದಾರೆ. ಅದೊಂದು ಹೊಸ ಆಸಕ್ತಿ ಇಟ್ಟುಕೊಂಡಿದ್ದಾರೆ.”
____________________________________________________________
ಸಂದರ್ಶಕ:: “ನಿಮ್ಮ ಮೇಲೆ ಪ್ರಭಾವ ಬೀರಿದ ಕನ್ನಡ ಲೇಖಕರು ಯಾರು? ಹೊಸ ಮಾರಿನ ಲೇಖಕರಲ್ಲಿ ಭರವಸೆ ಮೂಡಿರುವ ಭರವಸೆ ಹುಟ್ಟಿಸುವ ಲೇಖಕರು ಯಾರು?”
ಎಸ್.ಎಲ್.ಬಿ:: “ನನ್ನ ಮೇಲೆ ಪ್ರಭಾವ ಬೀರಿದೋರು ಹಿಂದಿನ ಲೇಖಕರಲ್ಲಿ ಕುಮಾರ ವ್ಯಾಸ ನನ್ನ ಮೇಲೆ ಸಾಕಷ್ಟು ಪ್ರಭಾವ ಬೀರಿರುವಂತ ದೊಡ್ಡ ಕವಿ. ಆಧುನಿಕ ಕಾಲದಲ್ಲಿ — ಇದು ಪ್ರಭಾವ ಅಂತ ನೇರವಾಗಿ ಹೇಳುವುದಕ್ಕಿಂತ — ನಾನು ಮೆಚ್ಚಿದ ಲೇಖಕರಿದ್ದಾರೆ. ಮೆಚ್ಚುವಾಗ ಏನಾಗುತ್ತೆ ಅಂದ್ರೆ ನಮಗೆ ಗೊತ್ತಿಲ್ಲದ ಹಾಗೆ ನಮ್ಮೊಳಗೆ ಹೋಗಿಬಿಡುತ್ತೆ. ಅದನ್ನು ಅರಗಿಕಿಸಿಕೊಂಡು ಬಿಟ್ಟಿರ್ತೀವಿ. ಜೀವನ ದೃಷ್ಟಿ ಆಗಿರಬಹುದು, ಎಕ್ಸ್‍ಪ್ರೆಶನ್ ಆಗಿರಬಹುದು, ಭಾಷೆ ಆಗಬಹುದು. ನಮಗೆ ಗೊತ್ತಿಲ್ಲದ ಹಾಗೆ ನಾವು ಕೆಲವು ಲೇಖಕರಿಂದ ಪ್ರಭಾವಿತರಾಗಿರ್ತೀವಿ. ನೇರವಾಗಿ ಆಗಬೇಕಂತಿಲ್ಲ. ಆ ರೀತಿಯಿಂದ ಬೇಂದ್ರೆ ನನಗೆ ತುಂಬ ಮೆಚ್ಚುಗೆ ಆದವರು.”
“ಒಂದುಹಂತದೊಳಗೆ ನಾನು ಹೈಸ್ಕೂಲ್ ಓದುವಾಗ ಈ ಸಾಹಿತ್ಯ ಓದುವ ಹುಚ್ಚು ಬಂತು. ಅವಾಗ ಆ.ನ.ಕೃ. ಅವರ ಕತೆಗಳನ್ನು ನಾನು ತುಂಬ ಓದಿದ್ದೆ. ಆಮೇಲೆ ಗಂಬೀರವಾಗಿ ಸಾಹಿತ್ಯ ಓದುವುದಕ್ಕೆ ಶುರು ಮಾಡಿದ ಮೇಲೆ ನನಗೆ ಆ.ನ.ಕೃ ಅವರ ಮೇಲೆ ಆಸಕ್ತಿ ಕಡಿಮೆ ಆಗಿ ಬಿಡ್ತು. ಕಾರಂತರ ಮೇಲೆ ಆಸಕ್ತಿ ಬರುವದಕ್ಕೆ ಶುರುವಾಯಿತು. ಏಕೆ ಅಂತ ಅಂದ್ರೆ ಅವರ ಬರವಣಿಗೆಯಲ್ಲಿ ಒಂದು ರಿಯಾಲಿಸಮ್ ಇರ್ತಾಯಿತ್ತು. ಆ.ನ.ಕೃ ಅವರದು ಒಂದು ರೀತಿ ಕೊಚ್ಚಿಕೊಂಡುಹೋಗುವಂತ ಭಾವನಾತ್ಮಕತೆ. ಇದೆಲ್ಲಿ ನಿಜ ಜೀವನದಲ್ಲಿ ಜನ ಎಲ್ಲಿ ಹೀಗಿರುತ್ತಾರೆ ಅಂತ ಕಾಡಿಸಿತು. ಕಾರಾಂತರ ಮೇಲೆ ನನಗೆ ಆಸಕ್ತಿ ಬಂತು. ನಾನು ಫಿಲಾಸಫಿಯನ್ನು ಓದಿಕೊಂಡು ನಾನು ಲೇಖಕನಾದ ಮೇಲೆ ಕಾರಾಂತರಲ್ಲಿ ಏನೋ ಓಂದು ಮಿತಿ ಕಾಣಲು ಶುರುವಾಯಿತು. ಏಕೆ ಅಂದ್ರೆ ಕಾರಾಂತರದೊಂದು, ಎನಂದ್ರೆ, ಸೈನ್ಸ್ ಏನು ಹೇಳುತ್ತೆ ಅದೇನೆ ಸತ್ಯ ಅಂತ ಹೇಳುವಂತ ಮನೋಭಾವ. ಆದರೆ ಕಾರಂತರು ನಂಬಿದಂತ ಸೈನ್ಸ್ ಯಾವುದು ಅಂತ ಅಂದ್ರೆ ಹಿಂದಿನ ಶತಮಾನದ, ಅಂದರೆ, ಐನ್‍ಸ್ಟೈನ್ ಕಾಲಕ್ಕೆ ಮುಂಚೆ ಗೊತ್ತಿದ್ದ ಸೈನ್ಸ್ ಅವರದ್ದು. ಹೆಚ್ಚಾಗಿ ಈ ಐನ್‍ಸ್ಟೈನನಗಿಂತ ಮೊದಲಿದ್ದ ಸೈನ್ಸ್ ಏನಿತ್ತೋ ಅದೆಲ್ಲ ಕ್ಲಾಸಿಕಲ್ ಫಿಸಿಕ್ಸ್, ಅವರದ್ದು ಅಷ್ಟೆನೆ ಆಗಿತ್ತು. ಐನ್‍ಸ್ಟೈನನ ಮಟ್ಟಕ್ಕೆ ಬರಬೇಕೆಂದರೆ ಫಿಲಾಸಫಿ ಬ್ಯಾಕ್‍ಗ್ರೌಂಡ್ ಬೇಕು. ಕಾರಂತರಿಗೆ ಆತರಹದ ಬ್ಯಾಕ್‍ಗ್ರೌಂಡ್ ಇರಲಿಲ್ಲ. ಅವರು ನಂಬಿದಂತ ನಿಜ ಸುಳ್ಳು ಇವೆಲ್ಲ ಬಹಳ ಸಿಂಪಲ್. ನಾವು ಜೀವನಕ್ಕೆ ಕೊಟ್ಟದ್ದು ಎಷ್ಟು ಜೀವನಕ್ಕೆ ಪಡದದ್ದೆಷ್ಟು ಎಂದು ಒಂದು ಈಕ್ವೇಶನ್ ಹಾಕಿ ಬಿಡುವವರು. ಅಷ್ಟು ಸುಲುಭವಾಗಿ ನಾವು ಮಾರಲ್ ಪ್ರಾಬ್ಲಮ್ಸ್ ಸಾಲ್ವ್ ಮಾಡೊಕ್ಕಾಗೊಲ್ಲ. ಏಕೆ ಅಂದ್ರೆ ನನ್ನ ಸಬ್ಜೆಕ್ಟ್ ಫಿಲಾಸಫಿ. ಆದ್ರಿಂದ ಮಾರಲ್ ವ್ಯಾಲ್ಯೂಸ್ ನಲ್ಲಿ ಸೊಫಿಸ್ಟಿಕೇಶನ್ ಬಂತು ನನಗೆ. ಕಾರಂತರು ಆ ತರಹದ ಅದ್ಯಯನ ಮಾಡಿದವರಲ್ಲ. ಹೀಗಾಗಿ ಯಾವ ಉತ್ಸಾಹದಿಂದ ನಾನು ಕಾರಾಂತರ ಕಡೆಗೆ ತಿರುಗಿದೆನೊ ನನಗೆ ಆ ಉತ್ಸಾಹ ಹೊರಟುಹೋಯಿತು. ಆಮೇಲೆ ನಾನಾಗಿ ನನ್ನ ದಾರಿಯನ್ನೆ ಹುಡಿಕಿಕೊಂಡೆ. ಉದಾಹರಣೆಗೆ ನನ್ನ ಒಂದು ಮೊದಲಲ್ಲಿ ಬರೆದ ಕೃತಿ ವಂಶವೃಕ್ಷ. ಅದರೊಳಗೆ ನಾನು ಎತ್ತಿದಂತ ಪ್ರಶ್ನೆ ನಾನು ಬರೆದಂತ ವಿಧಾನಗಳು ಕಾರಾಂತರಿಗೂ ನನಗೂ ಅಜಗಜಾಂತರ ಅನ್ನೋದು ಬಂದು ಬಿಟ್ಟಿತು. ನನ್ನ ೨೮ ವಯಸ್ಸಿನೊಳಗೆ ನಾನು ಕಾರಾಂತರಿಂದ ಬಿಡಿಸಿಕೊಂಡೆ. ಆಮೇಲೆ ಉದ್ದಕ್ಕೂ ನನ್ನ ದಾರಿಯಲ್ಲಿ ನಾನು. ನನಗೆ ಒಂದೊಂದು ಕಾದಂಬರಿಯಲ್ಲೂ ಒಂದೊಂದು ಹೊಸ ತರದ ಅನ್ವೇಷಣೆಯೆ. ಅದರಿಂದ ನನ್ನ ಮೇಲೆ ಪ್ರಭಾವ ಬೀರಿದ ಕನ್ನಡ ಲೇಖಕರು ಯಾರು ಅಂತ ಹೇಳೊದು ನೇರವಾಗಿ ಉತ್ತರ ಹೇಳುವುದು ಕಷ್ಟ.”
____________________________________________________________
ಸಂದರ್ಶಕ: “ಹೊಸ ತಲೆಮಾರಿನ ಲೇಖಕರಲ್ಲಿ ಭರವಸೆ ಮೂಡಿರುವ ಭರವಸೆ ಹುಟ್ಟಿಸುವ ಲೇಖಕರು ಯಾರು?”
ಎಸ್.ಎಲ್.ಬಿ: “ಇದು ವಾಸ್ತವವಾಗಿ ನಾನು ಹೊಸ ತಲೆಮಾರಿನವರು ಎಲ್ಲರನ್ನು ಓದಿಲ್ಲ. ಯಾಕೆ ಓದಿಲ್ಲ ಎಂದರೆ ನನ್ನ ಒಂದೊಂದು ಕಾದಂಬರಿ ಬರಿಬೇಕಾದರು ನಾನು ತುಂಬ ಅದರಲ್ಲಿ ತಲ್ಲೀನನಾಗಿರ್ತಿನಿ. ತುಂಬ ಅದ್ಯಯನ ಮಾಡಿರಬೇಕಾಗುತ್ತೆ. ಹಾಗೆ ಅದ್ಯನ ಮಾಡಿಕೊಂಡು ಬರಿಯುವಾಗ ನನಗೆ ಸಮಯ ಇರುವುದಿಲ್ಲ. ಬೇರೆ ಹೊಸ ತಲೆಮಾರಿನವರು ಏನು ಬರಿಯುತ್ತಿದ್ದಾರೆ ಏನು ಮಾಡ್ತಾ ಇದ್ದಾರೆ ಅಂತನ್ನೋದು. ಆಮೇಲೆ ಯಾವಾಗಾದ್ರು ಯಾರಾದ್ರು ಸ್ನೇಹಿತರು ಇದನ್ನು ನೀವು ಓದಿಲ್ಲವ, ಓದಿ ಅಂತ ಕೊಟ್ಟರೆ ಒಂದೊಂದು ಮಧ್ಯದಲ್ಲಿ ಓದಿರ್ತೀನಿ. ಅದು ರೆಗ್ಯುಲರಾಗಿ ನಾನು ಹಾಗೆ ಓದಿಲ್ಲ. ಅದು ಯಾವುದೋ ಒಂದು ಹಂತದೊಳಗೆ ಪರವಾಗಿಲ್ಲ ಇವರು ಭರವಸೆ ಬರುವಂತವಹರು ಅಂತ ಅಂದು ಅಂದುಕೊಂಡಿರ್ತಿನಿ. ಆಮೇಲೆ ಅವರು ಮುಂದೆ ಏನು ಬರೆಯುತ್ತಾರೆ ಅನ್ನುವುದನ್ನು ನಾನು ಫಾಲೊ ಅಪ್ ಮಾಡಿಲ್ಲ. ಅದರಿಂದ ನನಗೆ ಹೇಳೋದು ಕಷ್ಟ.”
______________________________________________________________
ಸಂದರ್ಶಕ: “ಹಾಗದರೆ ನಿಮಗೆ ಕನ್ನಡ ಸಾಹಿತ್ಯ ಯಾವ ಮಾರ್ಗದಲ್ಲಿ ಹೊಗುತ್ತಿರುವುದು ನಿಮಗೆ ಇಷ್ಟವಾಗುತ್ತಿದೆ ಅಥವ ಇಷ್ಟವಾಗುತ್ತಿಲ್ಲ?”
ಎಸ್.ಎಲ್.ಬಿ: ನೋಡಿ, ಕನ್ನಡ ಸಾಹಿತ್ಯ ಯಾವ ಮಾರ್ಗದಲ್ಲಿ ಹೋಗುತ್ತಿದೆ ಅನ್ನುವುದಕ್ಕೆ ಈಗ ಹೆಚ್ಚಾಗಿ ಸೊಷಿಯಲಾಜಿಕಲ್ ಡೈರೆಕ್ಷನ್ ಕಡೆ ಹೋಗುತ್ತಿದೆ. ಯಾಕೆ ಅಂದ್ರೆ ಅಲ್ಲಿ ನಮ್ಮಲ್ಲಿರುವ ಲೇಖಕರಿಗೆಲ್ಲ …. ಈ ನಿಮ್ಮ ಪ್ರಶ್ನೆ ಮುಂದಿನ ಪ್ರಶ್ನೆಯಲ್ಲೂ ಇದೆ.
______________________________________________________________
ಸಂದರ್ಶಕ: “ಸಾಹಿತಿ ಆದವನು ಸಾಮೂಹಿಕ ಹೋರಾಟಗಳಲ್ಲಿ ಪರಿವರ್ತನೆಗಳಲ್ಲಿ ನೇರವಾಗಿ ಭಾಗವಹಿಸ ಬೇಕೆ? ಭಾಗವಹಿಸಿದಲ್ಲಿ ಪೊಲಿಟಿಕಲ್ activism ಅಥವ ಬೇರೆ “ಇಸಮ್” ಗಳಿಂದ ಅವನು ಯಾವುದಕ್ಕೂ ಸಾಕ್ಷಿಯಾಗದೆ ಪರ ಅಥವ ವಿರೋದ ವಹಿಸುವನಾಗಬಹುದು. ಭಾಗವಹಿಸದೆ ಹೋದರೆ ಅನುಭವದ ಕೊರತೆ ಸಕ್ರಿಯನಾಗದ ದೋಷವು ಬರಬಹುದು?”
ಎಸ್.ಎಲ್.ಬಿ: “ಈ ಪ್ರಶ್ನೆ ಒಳಗೆ ನೀವು ಕೇಳಿರುವ ಮೊದಲ ಪ್ರಶ್ನೆ ಅಡಗಿದೆ. ಈಗ ನಮ್ಮಲ್ಲಿ ಏನಾಗಿದೆ ಅಂದ್ರೆ ಈ activism ಬಹಳವಾಗಿಬಿಟ್ಟಿದೆ. ಕನ್ನಡ ಸಾಹಿತ್ಯ ಲೇಖಕರಲ್ಲಿ ಸಕ್ರಿಯವಾಗಿ ಹೋರಾಡದೆ ಹೋದರೆ ನೀ ಸಾಹಿತಿ ಅಲ್ಲ. ನೀ ಸಮಾಜಕ್ಕೆ ಏನು ಪ್ರಯೋಜನ ಕೊಟ್ಟಿದ್ದೀಯ? ಅನ್ನೊ ಪ್ರಶ್ನೆಯನ್ನು ಅವರು ಕೇಳುತ್ತಿದ್ದಾರೆ. ಇದು ಮಾರ್ಕ್ಸಿಸ್ಟ್ ಐಡಿಯ. ಮಾರ್ಕ್ಸಿಸ್ಟ್ ರಷಿಯದೊಳಗೆ ಅಧಿಕಾರಕ್ಕೆ ಬಂದ ಮೇಲೆ ಅವರು ಎಲ್ಲರನ್ನು ಕೇಳುತ್ತಿದ್ದರು —ಸಮಾಜಕ್ಕೆ ನೀನು ಏನು ಕೊಟ್ಟಿದ್ದೀಯ? ಇಲ್ಲದೆಹೋದರೆ ನೀನು ಯೂಸ್ಲೆಸ್. ಒಬ್ಬ ಡಾಕ್ಟರು ಸಮಾಜಕ್ಕೆ ಕೊಡ್ತಾಯಿದ್ದಾನೆ ನೀನು ಏನು ಕೊಡ್ತಾಯಿದ್ದೀಯ? ಹಾಗೆ ಇನ್ನ್ಯಾರೊ ಒಬ್ಬ ಕೊಡ್ತಾಯಿದ್ದಾನೆ ನೀನು ಏನು ಕೊಡ್ತಾಯಿದ್ದಿಯ? ನೀನು ಕತೆನೊ ಕಾದಂಬರಿಯನ್ನೊ ಬರೆದು ಬಿಟ್ಟರೆ ಏನು ಕೊಟ್ಟಹಾಗುತ್ತೆ? ಏನು ಕೊಡಬೇಕುಅಂತ ಅವರು ಎಕ್ಸ್‍ಪೆಕ್ಟ್ ಮಾಡಿದರು ಅಂದರೆ ಇಡಿ ಸಮಾಜವನ್ನು ಬದಲಾಯಿಸುದು. ಆ ಓಲ್ಡ್ ಸಿಸ್ಟೆಮ್ ಬದಲಾಯಿಸುವುದಕ್ಕೆ — ಕಮ್ಮುನಿಸ್ಟಿಕ್ ಸಿಸ್ಟೆಮ್ ಒಳಗೆ everything is owned by government and you are a part of it. ಈ ಮನೋಭಾವ ಜನಕ್ಕೆ ಬರಲು ನೀನು ಏನು ಮಾಡ್ತಾಯಿದ್ದೀಯ? ಪ್ರತಿ ಕತೆ ಕಾದಂಬರಿಯಲ್ಲಿ ಈ ಮನೋಭಾವ ಇರಬೇಕು ಅಂತ ಅವರು expect ಮಾಡ್ತಿದ್ದರು. ಅವರದೆ writer’s guild ಅಂತ ಮಾಡ್ಕೊಂಡಿದ್ದರಲ್ಲ. ನೀವು ಏನಾದರು ಬರೆದಿದ್ದನ್ನು ಪಬ್ಲಿಷ್ ಮಾಡಬೇಕಾದರೆ ಅವರ ಮೂಲಕವೆ ಪಬ್ಲಿಷ್ ಮಾಡಬೇಕಾಗಿತ್ತು. ಇಲ್ಲದೆಇದ್ದರೆ ಪಬ್ಲಿಕೇಶನ್ ಸಾಧ್ಯವೆ ಇರುತ್ತಿರಲಿಲ್ಲ. ಅವರು ಇದು ideologically correct ಆಗಿ ಇದೆಯೇ ಅಂತ ಟೆಸ್ಟ್ ಮಾಡುವರು. ನಮ್ಮಲ್ಲಿ ಈ ಲೆಫ಼್ಟಿಸ್ಟ್ ಐಡಿಯಲಿಸಮ್ ತುಂಬ ಡಾಮಿನೇಟ್ ಆಯಿತು ಇಂಡಿಯದಲ್ಲಿ. ಅದು ಒಂದು ಈ ಸ್ಟಾಲಿನ್ ಕಾಲದೊಳಗೆ ಎಲ್ಲ ದೇಶಗಳಲ್ಲುನೇವೆ ಈ ಐಡಿಯಾಲಜಿ ಹರಡೋಸ್ಕರವಾಗಿ ಸಾಕಷ್ಟು ಪ್ರಭಾವ ಬೀರಿತು. ಆ ರಷಿಯದಲ್ಲಿ ತಿನ್ನುವುದಕ್ಕೆ ಅನ್ನ ಇಲ್ಲದಿದ್ದರು ಈ ನಾಲ್ಕಾಣೆ ಪುಸ್ತಕಗಳು ಅಂತ ಇತ್ತು ಅವಾಗ. ನಾವು ಸ್ಟುಡೆಂಟ್ಸ್ ಆಗಿದ್ದಾಗ. ಅದರೊಳಗೆ ಲೆನಿನಿಸಮ್ ಅಂದರೆ ಏನು, ಮಾರ್ಕಿಸಮ್ ಅಂದರೆ ಏನು ಆ ಸಮಾಜದೊಳಗೆ ಪ್ರತಿಒಬ್ಬರೂ ನಗ್ತಾಯಿದ್ದಾರೆ, ಪ್ರತಿಯೊಬ್ಬರೂ ಸುಖವಾಗಿದ್ದಾರೆ — ಈತರದ ಪಿಕ್ಚರುಗಳನ್ನು ಹಂಚಿಕೊಂಡು ಆ ಮೂಲಕನೂ ಪ್ರಸಾರ ಮಾಡಿದರು. ಅಮೇಲೆ ನಮ್ಮ ನೆಹರು — ಜವರಲಾಲ್ ನೆಹ್ರು — he was basically a communist. ಅವರು ಬರೆದ ಪುಸ್ತಕಗಳು ಎಲ್ಲ ಇದೆಯಲ್ಲ ಅದೊರಳಗೆ ರಷಿಯನ ಒಂದು ಹೊಗಳುತ್ತಾರೆ ಹೊಗಳುತ್ತಾರೆ ಅಂದರೆ, ವಾಚಾಮಗೋಚರವಾಗಿ ಹೊಗಳ್ಕಂಡೆ ಪುಸ್ತಕ ಬರದಿರೋದು. ಆದರೆ ಅದರ ಪರಿಣಾಮ ಏನು ಅಂತ ಬಾಕಿಯೋರು ಗಮನಿಸರಲಿಲ್ಲ. ಗಾಂಧಿ ಮಾಡಿದಂತ ಒಂದು ದೊಡ್ಡ ತಪ್ಪು ಅಂದರೆ ಆ ನೆಹರುನ ಪ್ರಧಾನಮಂತ್ರಿ ಮಾಡಿದ್ದು. ವಾಸ್ತವಿಕವಾಗಿ ೧೫ ಕಾಂಗ್ರೆಸ್ ಕಮಿಟಿಗಳಲ್ಲಿ ೧೨ ಕಮಿಟಿಗಳು ಸರ್ದಾರ್ ಪಟೇಲರನ್ನು ಚುನಾಯಿಸಿದ್ದರು. ನೆಹರು ಎಲ್ಲಿ ಮುನಿಸಿಕೊಂಡುಬಿಟ್ರೆ ಸೊಷಿಯಲಿಸ್ಟ್ ಪಂಗಡ ಎಲ್ಲಿ ಕಾಂಗ್ರೆಸ್ನಿಂದ ಹೊರಗಡೆ ಹೋಗಿಬಿಡುತ್ತಾರೊ ಅಂತ ಒಂದು ಅಂಜಿಕೆ ಕೆಲವರಿಗಿತ್ತು. ಗಾಂಧಿಜಿಗೆ ಕೆಲವು ವೈಯುಕ್ತಿಕವಾದಂತ ವೀಕ್ನೆಸ್ಸ್ ಇತ್ತು. ನೆಹರು ಕುಟುಂಬದ ಮೇಲೆ ವೈಯುಕ್ತಿಕವಾದ ವೀಕ್ನೆಸ್ಸ್ ಇತ್ತು. ಅವರು ಪಟೇಲರನ್ನು ಕರೆದು ಹೇಳಿದರು ನಿನ್ನ ಕ್ಯಾಂಡಿಡೇಚರ್ ವಿತ್‍ಡ್ರ ಮಾಡಿಕೊಳ್ಳಬಹುದೆಂದು ಹೇಳಿದರು.. ನೆಹರುಗೆ ಪ್ರಾಮಿಸ್ ಮಾಡಿದ್ದೇನೆ. ವಿತ್‍ಡ್ರ ಮಾಡಿಕೊ ಅಂತ ಹೇಳಿದರು. ಪಟೇಲರು ಏನ್ ಮಾಡಬೇಕು. ಒಂದು ಗಾಂಧಿ ಮೇಲೆ ಅವರಿಗೆ ಭಕ್ತಿ. ಬರಿ ಭಕ್ತಿಯಿಂದ ಅವರು ವಿತ್‍ಡ್ರ ಮಾಡಿಕೊಳ್ಳಲಿಲ್ಲ. ಸುಭಾಷಚಂದ್ರ ಬೋಸ್ ವಿಷಯದಲ್ಲಿ ಗಾಂಧಿ ಎನ್ ಮಾಡಿದರು? ಅವರು ಕಾಂಗ್ರೆಸ್ಸಿನ ಅಧ್ಯಕ್ಷರಾದಾಗ ಗಾಂಧಿ ವಿರೋದಿಸಿದ್ದರು. ಆದರು ಸುಭಾಷ್ ಗೆದ್ದರು. ಎರಡನೇ ಟರ್ಮ್ ಗು ಸುಭಾಷ್ ಕಂಟೆಸ್ಟ್ ಮಾಡಿದರು. ಆವಗಲೂ ಗೆದ್ದರು. ನನ್ನ ಸಿದ್ಧಾಂತ ಅಹಿಂಸೆ. ಅಹಿಂಸೆ ಮೂಲಕವೆ ನಾವು ಸ್ವಾತಂತ್ರ ಪಡೆಯೋದು ಅನ್ನೊ ಸಿದ್ಧಾಂತ ಮಾಡಿ ಎಲ್ಲರಿಗು ಹೇಳಿರುವಾಗ ಈ ಸುಭಾಷ್ ಅಹಿಂಸೆಯಿಂದ ಆಗದಿದ್ದರೆ ಹಿಂಸೆಯಿಂದ ಸ್ವತಂತ್ರ ಪಡೆಯಬೇಕು ಅನ್ನುವಂತೆ ಹೇಳುತ್ತಿದ್ದರು. ಅಂದರೆ ಇದು ಡಿಫೀಟ್ ಆಗಿಬಿಡ್ತು. ಅಂದು ಎಲ್ಲ ಕಾಂಗ್ರೆಸ್ಸ್ ಸದಸ್ಯರನ್ನು ಕರೆದು ನೀವು ರಿಸೈನ್ ಮಾಡಿ ಅಂತ ಹೇಳಿಬಿಟ್ಟರು. ಸುಭಾಷ್ ಎನ್ ಮಾಡ್ತಾರೆ. ವರ್ಕಿಂಗ್ ಕಮಿಟಿ ಸದಸ್ಯರೆಲ್ಲ ಒಬ್ಬೊಬ್ಬಆಗಿ ರಿಸೈನ್ ಮಾಡಿದ ಮೇಲೆ. ಸುಭಾಷ್ ತಾವಾಗೆ ರಿಸೈನ್ ಮಾಡಿ ಕಲ್ಕತ್ತಾಗೆ ಹೊರಟುಹೋದರು. ವೇಷ ಮರೆಸಿ ಆಫ್ಘಾನಿಸ್ತಾನದ ಮೂಲಕ ಯುರೋಪಿಗೆ ಹೋದರು. ಸೆಕಂಡ್ ವರ್ಲ್ಡ್ ವಾರ್ ನಲ್ಲಿ ಏನಾಯಿತು ನಿಮಗೆ ಗೊತ್ತು. Nehru imposed his communist ideologies on India ಭಾರತದ ಎಕಾನಮಿ ಹಾಳಾದದ್ದೆ ಇದರಿಂದ. ಆಮೇಲೆ ಏನಾಯಿತು. ಅಮೆರಿಕ ಮತ್ತು ರಷಿಯ ಮಧ್ಯೆ ಕೋಲ್ಡ್ ವಾರ್ ಶುರುವಾಯಿತು. ಆಗ ನೆಹರುಗೆ ಸಂಪೂರ್ಣವಾಗಿ ಆವರ ಬುದ್ಧಿನೆ ರಷಿಯಗೆ ಸರಂಡರ್ ಆಗಿತ್ತು. ಎಲ್ಲೆಲ್ಲಿ ಸಿಕ್ಕಿದರು ಅಮೆರಿಕವನ್ನು ಬೈಯುವುದು ಭಾಷಣ ಮಾಡುವುದು, ವಿಶ್ವ ಸಂಸ್ಥೆಯಲ್ಲಿ ಆ ಕಾಲದಲ್ಲಿ ಕೃಷ್ಣ ಮೆನನ್ ಅಂತ ಅವರನ್ನು ನೆಹರು ಕಳಿಸಿದ್ದರು. ಅವರು ೨೨ ಗಂಟೆ ಕಾಲ ಭಾಷಣ ಮಾಡಿದರು. ಅಮೆರಿಕವನ್ನು ಬೈಯುವುದು. ಇದು ಅಮೆರಿಕಗು ರೇಗುತ್ತೆ. ಜೊತೆಗೆ ಅಷ್ಟೊತ್ತಿಗೆ ನಮ್ಮ ದೇಶದಲ್ಲಿ ಯುದ್ದದ ಪರಿಣಾಮವಾಗಿ ಫುಡ್ ಸ್ಕೇರ್ಸಿಟಿ ಬಂತು. ನಮ್ಮ ದೇಶದಲ್ಲಿದ್ದ ಫುಡ್ಗಳನ್ನು ಯುದ್ದಕ್ಕಾಗಿ ಕಳಿಸಿಕೊಡುತ್ತಿದ್ದರು. ಅದೆ ಸಂದರ್ಭದಲ್ಲಿ ಸರಿಯಾಗಿ ಮಳೆ ಕೂಡ ಆಗಲಿಲ್ಲ. ಜನ ಸಾಯುವಂತ ಸ್ಥಿತಿಗೆ ಬಂತು. ಆಗ ಅಮೆರಿಕ ದಿನಸಿ, ಗೋಧಿ ಕಳಿಸುತ್ತಿತ್ತು. ಪಿ.ಎಲ್ ೪೮೦ ಅಂತ ಪ್ರೊಗ್ರಾಮ್ ಮಾಡಿ ಕಳಿಸುತ್ತಿದ್ದರು. ಆ ಹಣವನ್ನ ಒಂದು ಲೆಖ್ಖ ಹಾಕೋರು. ಅದನ್ನು ಖರ್ಚು ಮಾಡುವ ಹಕ್ಕು ದೆಹಲಿಯಲ್ಲಿರುವ American Embassy ಗೆ ಇರಬೇಕು ಅಂತ. ಅವರು ಖರ್ಚು ಮಾಡುತ್ತಿದ್ದದ್ದು ಹುಮಾನಿಟೇರಿಯನ್ ಕೆಲಸಕ್ಕೆ. ಅವರು ದಿನಸಿ ಕಳಿಸದಿದ್ದರೆ ನಾವು ಸತ್ತು ಹೋಗೇವು. ಅವರಿಂದ ದಿನಸಿ ತಗೊಂಡು ನಾವು ಊಟ ಮಾಡಿಕೊಂಡು ಬದುಕಿಕೊಂಡಿರುವಾಗ ಅವರನ್ನೆ ಬೈಯುವುದು. ಕ್ಯಾಪಿಟಲಿಸ್ಟ್ ಬ್ಲಡ್ ಸಕರ್ಸ್ ಅಂತ ಬೈಯುವುದು. ಪರಿಣಾಮ ಏನಾಯಿತೆಂದರೆ ಡಿಪ್ಲೊಮ್ಯಾಟಿಕ್ಕಾಗಿ ಅಮೆರಿಕ ಪಾಕಿಸ್ತಾನಕ್ಕೆ ಆರ್ಮ್ಸ್ ಕೊಡಲಿಕ್ಕೆ ಶುರು ಮಾಡಿದರು. ಅಮೆರಿಕನ್ನರು ನಮ್ಮ ಶತೃಗಳು ಅಂತ ಇನ್ನಷ್ಟು ಬೈಯುವುದು. ಆದರೆ ಅದನ್ನು ಕೌಂಟರ್ ಮಾಡುವಷ್ಟು ನಾವು ತೆಗೆದುಕೊಳ್ಳಬೇಕಲ್ಲ. ಏನ್ ಮಾಡೋದು. ರಷಿಯನ ಕೇಳೋದು. ರಷಿಯ ಯುದ್ಧ ಸಾಮಗ್ರಿಯನ್ನು ಭಾರತಕ್ಕೆ ಕೊಡಲಾರಂಭಿಸಿತು. ಸ್ವಲ್ಪ ಕನ್ಸಿಶನ್ ರೇಟ್ನಲ್ಲಿ ಕೊಡ್ತಿದ್ದರೆ ಹೊರತು ಬಿಟ್ಟಿ ಕೊಡುತ್ತಿರಲಿಲ್ಲ. ರಷಿಯ ಬಡ ದೇಶ ಅದು. ಯುದ್ಧಕ್ಕೆ ಬೇಕಾದ ಬಾಂಬ್ ಮತ್ತಿತರ ಟ್ಯಾಂಕ್ ಇತ್ತೆ ವಿನಹ ಅದೊಂದು ಬಡ ದೇಶ. ಹೀಗೆ ಇನ್ನಷ್ಟು ರಷಿಯಗೆ ಹತ್ತಿರವಾಗುವುದು, ಅಮೆರಿಕದ ದ್ವೇಷಗಳಿಸುವುದು. ಇದನ್ನು ನೆಹರು ಮಾಡಿಕೊಂಡ್ ಬಂದ್ರು. ಇಂತಹ ಸಂದರ್ಭದೊಳಗೆ ನಮ್ಮಲ್ಲಿ ಕಮ್ಮ್ಯುನಿಸ್ಟನವರು ಬಹಳ ಒಳ ನುಗ್ಗಿದರು. ನೆಹರುಗೆ ಇದರಲ್ಲಿ ಐಡಿಯನು ಇತ್ತು. ಕಮ್ಮ್ಯುನಿಸ್ಟರು ಎಲ್ಲ ಫೀಲ್ಡನಲ್ಲಿ ಬರೊದುಕ್ಕೆ ಶುರು ಮಾಡಿದರು. ಆವಾಗ ಸಾಹಿತಿಗಳಿಗೂ this is our goal ಅಂತ ಆಗಿಬಿಡ್ತು. ಸಾಹಿತ್ಯ ಬರೆಯುವ ಗೋಲ್ ಏನು? ನಮ್ಮ ಐಡಿಯಾಲಜಿ — ಸಾಹಿತಿ ಹೋರಾಡಲೆ ಬೇಕು ಅಂತ ಆಯಿತು. ಯಾತಕ್ಕಾಗಿ ಹೋರಾಡ ಬೇಕು? ಬರಿ ಬಡವರ ಪರವಾಗಿ ಹೋರಾಡ ಬೇಕು ಅಂತ ಅಲ್ಲ. ಸಮಾಜದೊಳಗೆ exploiter and the exploited ಅಂತ ಎರಡು ವರ್ಗ ಇದ್ದೆ ಇದೆ. Every capitalist and industrialist is an exploiter ಬಾಕಿಯವರೆಲ್ಲ exploited ಅಂತ ಇಷ್ಟು simplistic definition ಮಾಡಿ ಸಾಹಿತಿಗಳೆಲ್ಲ ಇದಕ್ಕೆ ಮರುಳಾಗಿಹೋಗಿಬಿಟ್ಟರು. ಇನ್ನೂ ಸಾಹಿತಿಗಳ ಮನಸ್ಸೊಳಗೆ ತುಂಬಿಕೊಂಡಿದೆ ಅದು. But economy is not that simple. ನೆಹರು ಕಾಲದೊಳಗೆ ಬರೀ ಇದನ್ನೆ ತುಂಬಿಕೊಂಡರು. ನೆಹರು ಹೋಗಿ ಇಂದಿರಾ ಗಾಂಧಿ ಬಂದಮೇಲೆ ಆಕೆಗೆ ಈ ಐಡಿಯಾಲಜಿ ಓದುವುದು ಏನು ಇರಲಿಲ್ಲ. ಆಕೆ ದೊಡ್ಡ opportunist. ಅವಾಗ ಈಕೆಗೆ supportಗೆ ಯಾರಾದರು ಬೇಕಾಗಿತ್ತು. ಕಾಂಗ್ರೆಸ್ಸ್ ಒಳಗೆನೆ ವಿರುದ್ದ ಹುಟ್ಟಲು ಶುರುವಾಯಿತು. ಆಗ ಕಮ್ಮ್ಯುನಿಸ್ಟರು ಕಾದುಕೊಂಡಿದ್ದರು. ನಾವಾಗೆನೆ ಪವರ್ ಗೆ ಬರುದೊಕ್ಕೆ ಆಗಲ್ಲ. ನಾವು infiltrate ಮಾಡಬೇಕು ಅಂತ ಅವರು ನಿರ್ಧಾರ ಮಾಡಿ ಕೊಂಡರು. ಸರಿ ಇಂದಿರಾ ಗಾಂಧಿಗೆ ಬೆಂಬಲ ನೀಡಿದರು. ಸಪೋರ್ಟ್ ಮಾಡಿ ನಮಗೆ ಎಜ್ಯೂಕೇಶನ್ ಡಿಪಾರ್ಟ್ಮೆಂಟ್ ಕೊಟ್ಟುಬಿಡಿ ಅಂತ ಕೇಳಿದರು. ಇಂದಿರಾ ಗಾಂಧಿ ಕಮ್ಯೂನಿಸ್ಟರಿಗೆ ಕೊಟ್ಟಿದ್ದೂ ಅದನ್ನೆ. ಹೀಗಾಗಿ ಸಂಪೂರ್ಣವಾಗಿ ಲೆಫ್ಟಿಸ್ಟ್ ಪಂಗಡಕ್ಕೆ ಪ್ರೋತ್ಸಾಹ ಕೊಟ್ಟಿಕೊಂಡರು. ಈ ಜವಹರಲಾಲ್ ಯೂನಿವರ್ಸಿಟಿ ಅಂತ ಸ್ಥಾಪನೆ ಮಾಡಿದ್ದೆ ಅದಕ್ಕಾಗಿ. ಆಮೇಲೆ Indian Historical Council ಅಂತ ಮಾಡಿದ್ದೆ ಇದಕ್ಕೋಸ್ಕರವಾಗಿ. ಇದನ್ನು ಹ್ಯಾಗೆ ನೋಡ ಬೇಕು? ಕಮ್ಮ್ಯುನಿಸ್ಟ್ ದೃಷ್ಟಿಯಿಂದ ನೋಡ ಬೇಕು. Whole economics ಕಮ್ಮ್ಯುನಿಸ್ಟ್ ದೃಷ್ಟಿಯಿಂದ ನೋಡ ಬೇಕು. ಇಂದಿರಾ ಗಾಂಧಿ ಕಾಲದೊಳಗೆ at the highest level of income tax was 97.5% plus surcharge. ಆಗ ಒಬ್ಬ ಲಾಯರ್ ಪಾಲ್ಕಿವಾಲ ಅಂತ ಒಂದು ಪುಸ್ತಕವನ್ನೆ ಬರೆದರು Highest Taxed Nation ಅಂತ. ಆಗೇನಾಯಿತು. ದುಡಿಯುವನು ಏಕೆ ದುಡಿಯ ಬೇಕು? There was no motivation. Black and white money ಶುರುವಾದದ್ದು ಅವಾಗ. ಇವರೆಲ್ಲ ಕಳ್ಳ ಲೆಖ್ಖ ಬರಿಯಲು ಶುರು ಮಾಡಿದರು. ಇಂದಿರ ಗಾಂಧಿಗೆ ಇವೆಲ್ಲ ಗೊತ್ತಾಗದೆ ಇರುತ್ತ. ಆಗ ಇವರನ್ನೆಲ್ಲ ಹಿಡಕೊಂಡು ಹೆದರಿಸುವುದು. ಕಳ್ಳ ಲೆಖ್ಖ ಬರೆದಿದಿಯ. ನನಗಷ್ಟು ಕೊಡು ನಿನಗಷ್ಟು ಇಟ್ಟಿಕೊ ಅಂತ ಪಾರ್ಟಿನ ಸ್ಟ್ರಾಂಗ್ ಮಾಡೊದು, ಇನ್ನಷ್ಟನ್ನ ಸ್ವಿಸ್ಸ್ ಬ್ಯಾಂಕ್‍ನಲ್ಲಿಡೋದು ಹೀಗೆ ಮಾಡೋಕೆ ಶುರು ಮಾಡಿದರು. ನಾನೆ ಆ ಜಮಾನದಲ್ಲಿ ಎಲೆಕ್ಶನ್ ನೋಡ್ತಿದ್ದೆ. ಎಲೆಕ್ಶನ್ ಬಂತು ಅಂದ್ರೆ ಗರಿಬಿ ಹಟಾವೋ ಅಂತ ಖೋಟಿ ಖೋಟಿ ಪೋಸ್ಟರ್ಸ್ ದೇಶದ ತುಂಬ ಇರ್ತಿತ್ತು. ಜೊತೆಗೆ ಆಕೆ ಫೋಟೊ. ’ಇಂದಿರಾ ನೇತ ದೇಶ್ ಕಿ ಮಾತ’ ಅಂತ ಎಲ್ಲ ಕಡೆ ಬಂತು. ಅಪೋಸಿಶನ್ ಪಾರ್ಟಿಯವರಿಗೆ ಚೀಟಿ ಹಂಚಲು ಕಾಸಿಲ್ಲ. ನಮ್ಮ ಜನ ಅವತ್ತು ಏನು ಮರುಳಾದರೋ ನಂಗೊತ್ತಿಲ್ಲ.
ಒಂದು ಪ್ರೈವೇಟ್ ಕಂಪನಿಯನ್ನು ಯಾವ ಮಾನದಂಡದಿಂದ ನೀವು ಅಳಿತೀರ. ಇಷ್ಟು ಇಂಕಮ್ ಇಷ್ಟು ಟ್ಯಾಕ್ಸ್ ಅಂತ ತಾನೆ? ಇವನು ಇಷ್ಟು ದುಡ್ಡು ಮಾಡ್ಬಿಟ್ಟಿದ್ದಾನೆ. ಇವನು ರಕ್ತ ಹೀರುತ್ತಿದ್ದಾನೆ. ನಮ್ಮ ಬುದ್ಧಿ ಜೀವಗಳಿಗೆ ಮತ್ತು ಸಾಹಿತಿಗಳಿಗೆ ಬರಿ ಇಷ್ಟೇನೆ economics ಗೊತ್ತಿರೋದು. ಅವನು ದೇಶದ ಸಂಪತ್ತನ್ನು ಎಷ್ಟು ಪಟ್ಟು ಜಾಸ್ತಿ ಮಾಡಿದ್ದಾನೆ ಅಂತ ಅವರ ತಲೆಗೆ ಹೋಗುವುದೇ ಇಲ್ಲ.
ಈ ಹಿನ್ನಲೆಯಲ್ಲಿ you must be a fighter. But fight for what? You must fight for an ideology, a profound ideology. ಸಾಹಿತಿ ನಿನ್ನ ಐಡಿಯಾಲಜಿ ನಾನೇಕೆ ಒಪ್ಪಿಕೊಳ್ಳಬೇಕು ನನ್ನದೆ ಐಡಿಯಾಲಜಿ ಇದೆ ಅಂತ ಹೇಳಿದರೆ ನೀನೊಬ್ಬ reactionary ಅಂತ ಬೈಯುವುದು. ಇವೆಲ್ಲ ಬಹಳ ಇದೆ ನಮ್ಮ ಈವತ್ತಿನ ಕರ್ನಾಟಕದ ಸಾಹಿತ್ಯದ ವಲಯದೊಳಗೆ. You must be a fighter ಅಂತ ಹೇಳ್ತಾರೆ ಅಷ್ಟೆ. ನನ್ನ ಸ್ವಂತ ಅನುಭವ ಏನು ಅಂತ ಅಂದ್ರೆ ಇಷ್ಟವಿದ್ದವನು activist ಆಗಿರಬಹುದು. ಇಲ್ಲದಿದ್ದರೆ ಬಿಡಬಹುದು. ಅದು ಅವನ ಸ್ವಾತಂತ್ರಕ್ಕೆ ಬಿಟ್ಟ ವಿಷಯ. ಆದರೆ ನೀವು ಅತೀ activist ಆಗಿ ಯಾವುದೋ ಐಡಿಯಾಲಜಿಗೆ ಕಟ್ಟು ಬಿದ್ದರೆ ನಿಮ್ಮ freedom of thinking ಕಡಿಮೆ ಆಗಿಬಿಡುತ್ತೆ. ನಾನು ಬಾವುಟ ಹಿಡಕೊಂಡು ಹೋಗಿಬಿಟ್ಟು ಯಾವುದೋ ಪಕ್ಷದೊಳಗೆ ಬೆಳಗ್ಗಿಂದ ಸಾಯಂಕಾಲದವರೆಗೆ ತಿಂಗಳುಗಟ್ಲೆ ಕೂಗಿ ಬಂದುಬಿಟ್ಟು ಆಮೇಲೆ ನಾನೇನೋ ಕಾದಂಬರಿ ಬರೆಯಬೇಕೆಂದರೆ ಆಗ ಬರುವಂತ ಪಾತ್ರಗಳೀವೆಯಲ್ಲ ಅವು ಆ ಬಾವುಟಕ್ಕೆ ತಕ್ಕಂತೆ ನನ್ನ ಪಾತ್ರಗಳೂ ಬಂದುಬಿಡುತ್ತವೆ. ಆಮೇಲೆ ಇನ್ನೊಂದು ಭಯ ನನ್ನನ್ನೇ ಕಾಡುತ್ತೆ ಅಂದರೆ ನಾ ಈ ಪಾತ್ರಗಳನ್ನ ಈ ರೀತಿ ಮಾಡಿದೆ ಅಂತ — ನಾ ಕೂಗಿರ್ತಿನಲ್ಲ ಒಂದು ತಿಂಗಳು — ಇವನು ಕೂಗುವುದೊಂದು ಬರೆಯುವುದೊಂದು ಅಂತ ಗೇಲಿ ಮಾಡಿಬಿಡ್ತಾರೆ. ಅದಕ್ಕೆ ನನ್ನ psychological ಸ್ವಾತಂತ್ರ ಉಳಿಸಿಕೊಳ್ಳಬೇಕಿದ್ದರೆ ನನ್ನ ಸ್ವಾತಂತ್ರವನ್ನು ನನ್ನ ಬರವಣಿಗೆಗೆ ಮಾತ್ರ ಮೀಸಲಾಗಿಟ್ಟುಕೊಳ್ಳಬೇಕು. ಯಾವುದೊ ಸನ್ನಿವೇಶಗಳಲ್ಲಿ ಒಂದು ಪಬ್ಲಿಕ್ ಇಸ್ಸ್ಯು ಮೇಲೆ ನಮ್ಮ opinion express ಮಾಡ ಬಹುದು. ಮಾಡ ಬಾರದು ಅಂತ ಅಲ್ಲ. ಆದರೆ ಇದಕ್ಕೆ ಹೆಚ್ಚು ಹೋಗ ಬಾರದು. ನಾವು ಬರಿ ಕಾದಂಬರಿ ಬರೆಯುವುದರಿಂದ ಯಾವ ಸಮಾಜ ಉದ್ದಾರ ಆಗೋದಿಲ್ಲ. ಎಷ್ಟು ಪ್ರತಿ ಖರ್ಚಾಗುತ್ತೆ ಎಷ್ಟು ಜನ ಅದನ್ನ ಓದುತ್ತಾರೆ. ಓದಿದವರಲ್ಲಿ ಸಾಧಾರಣ ಎಲ್ಲ educated middle class. ಅವರು ವೋಟ್ ಹಾಕಕ್ಕೆ ಹೋಗಲ್ಲ. ಆದ್ದರಿಂದ ಇವೆಲ್ಲ ಒಂದು ಹುಚ್ಚುಗಳು ಅಷ್ಟೆನೆ. ಅದಕ್ಕೆ ನಾನು ದೂರನೆ ಇರೋದು. ಈ ರಾಜಕಾರಣಗಳು ಅಥವ ಸಮಾಜ ಉದ್ದಾರ ಮಾಡುತ್ತೀನಿ ಎನ್ನುವ ವಿಷಯಗಳಲ್ಲಿ ನಾನು ದೂರವಿರುವುದು.
ನನ್ನ ಕಾದಂಬರಿಯ theme ಒಂದು ಕಾದಂಬರಿಗೂ ಮತ್ತೊಂದಕ್ಕು ಬೇರೆ ಬೇರೆ ಆಗುತ್ತವೆ. ಹಾಗಾಗಿ ಯಾವ activism ಅಂತ ಹುಡುಕುವುದು. ವಂಶವೃಕ್ಷ ಅಥವ ಗೃಹಭಂಗ ದಿಂದ ಯಾವ ಯಾವ activism ಮಾಡುವುದಕ್ಕೆ ಆಗುತ್ತೆ. ಆಮೆಲೆ ಮಂದ್ರ ಬರೆದಿದ್ದೀನಿ. ಇದರಲ್ಲಿ ಯಾವ activism ಇದೆ. Either pro or against ಯಾವುದರ ಬಗ್ಗೆಯೂ ಇಲ್ಲ. ಅದು ಕೊಡುವಂತಹ ಅನುಭವನೆ ಬೇರೆ. ನಿಮಗೆ ಸಾಹಿತ್ಯದ ಗಂಧ ಇದ್ದರೆ ನಿಮಗೆ ಅದು ಕೊಡುವಂತಹ ಅನುಭವ ಬೇರೆ. ಆದ್ದರಿಂದ ನನಗಿದರಲ್ಲಿ ನಂಬಿಕೆನೆ ಇಲ್ಲ.
ಪ್ರಶ್ನೆಯ ಕೊನೆಯಲ್ಲಿ ಸಕ್ರಿಯವಾಗಿ ಭಾಗವಹಿಸದೆ ಹೋದರೆ ಅನುಭವದ ಕೊರತೆ ಸಕ್ರಿಯನಾಗದ ದೋಷವು ಬರಬಹುದು ಅಂತ ಕೇಳಿದ್ದೀರಿ. ಅನುಭವ ಬರಬೇಕಾದರೆ ಈ ಹೋರಾಟದಲ್ಲಿ ಭಾಗವಹಿಸಿಯೇ ಅನುಭವ ಪಡಯಬೇಕೆ. ಬೇರೆ ಅನುಭವ ಬೇಕಾದಷ್ಟಿವೆ ಜೀವನದಲ್ಲಿ. ನೋಡಿ ನಾನು ವಿದೇಶಕ್ಕೆ ಸಂಚಾರ ಮಾಡುಕ್ಕೆ ಶುರು ಮಾಡಿ ೧೯೭೫ ನಲ್ಲಿ ಜಪಾನಿಗೆ ಹೋದೆ. ೧೯೭೭ ನಲ್ಲಿ ಇಂಗ್ಲೆಂಡ್ ಗೆ ಹೋದೆ. ೧೯೮೧ ನಲ್ಲಿ ಅಮೆರಿಕಗೆ ಬಂದೆ. ೬ ತಿಂಗಳ ಕಾಲ ನಾನು ಅಮೆರಿಕದಲ್ಲಿ ಸಂಚಾರ ಮಾಡಿದ್ದೆ. Ford Foundation travel grant ಮೂಲಕ ಬಂದಿದ್ದೆ. ಇಲ್ಲಿದ್ದ ಕನ್ನಡಿಗರೆಲ್ಲರಿಗು ಗೊತ್ತಾಯಿತು. ಆಮೆಲೆ ಎಲ್ಲರು ನಮ್ಮೂರಿಗೆ ಬನ್ನಿ ಅಂತ ಕರೆದು ಒಂದೊಂದು ಊರಿಗೆ ಹೋದರು ಒಂದೊಂದು ವಾರ ಆ ಊರಲ್ಲಿ ಇದ್ದು ಸುತ್ತಮುತ್ತಲೆಲ್ಲ ಕರೆದುಕೊಂಡು ಹೋಗುವ್ರು. ಜೊತೆಗೆ ಇಲ್ಲಿ ಅನುಭವ ಇಲ್ಲಿ ಸೊಸೈಟಿ ಎನು ಅಂತ ಬೇಕಾದಷ್ಟು ಮಾತಾಡ್ತಯಿದ್ದೆ. ಹೀಗಾಗಿ ನನಗನಿಸಿದ್ದು ಇಂಗ್ಲೆಂಡ್ ಈವತ್ತು ೩೦ ವರ್ಷ ಅಮೆರಿಕ ಹಿಂದೆ ಏನಿತ್ತೊ ಹಾಗಿದೆ. ಈವತ್ತು ಅಮೆರಿಕ ಏನಿದೆ ಮುಂದೆ ಇಂಗ್ಲೆಂಡ್ ಹಾಗಗುತ್ತೆ. ಯಾವತ್ತು ಅಮೆರಿಕನೆ ಮುಂದು. ಸೋಶಿಯಲ್ ಲೈಫ್ ಮತ್ತು ಕಲ್ಚರ್ನಲ್ಲಿ ಬದಲಾವಣೆ ಮೊದಲು ಅಮೆರಿಕದಲ್ಲಿ ಆಗ್ತಾಯಿದೆ.
ನಾನು ಇತ್ತಿಚೆಗೆ ಕವಲು ಕಾದಂಬರಿ ಬರೆದೆ. ಅದಕ್ಕೆ ಹಿನ್ನಲೆ ಅಮೆರಿಕ. ಅದಾಗಲೆ ಅಮೆರಿಕಗೆ ಹಳೆದು. ಆದರೆ ಈಗ ಅದು ಹೊಸದಾಗಿ ಭಾರತಕ್ಕೆ ಬಂದಿದೆ. ಈ ಸಂಚಾರ ಮಾಡಿದ್ದರಿಂದ ನನಗೆ ಈ ತಿಳಿವಳಕೆ ಬಂದದ್ದು. ಇಲ್ಲದೆ ಹೋಗಿದ್ದರೆ ನಾನು ಕವಲು ಕಾದಂಬರಿ ಬರೆಯಲು ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ಅನುಭವ ಬರುವುದು ಹೇಗೆ. ನೀವು ಬಾವುಟ ಹಿಡಕೊಂಡು ಒಡಾಡಿದರೆ ಮಾತ್ರ ಅನುಭವ ಬರುತ್ತೊ. ನಾನು ಸಾಧಾರಣ ಎಲ್ಲಿ ಹೋದರು ಕೂಡ ಹೋಟಲ್ನಲ್ಲಿ ಇಳ್ಕೊಳ್ಳಲು ಇಷ್ಟ ಪಡೊದಿಲ್ಲ. ನಿಮಗೆ ಹೋಟಲಿನಲ್ಲಿ ಯಾವ fresh experience ಕೂಡ ಅಗುವುದಿಲ್ಲ. ಅದು ನ್ಯೂ ಯಾರ್ಕ್ ಆಗಿರಬಹುದು ಅಥವ ಮುಂಬೈ ಹೋಟಲ್ ಆಗಿರಬುಹುದು. ಒಂದು ಫ್ಯಾಮಿಲಿ ಜೊತೆಗೆ ಇಳಿಕೊಂಡು, ಅಂದ್ರೆ, ಒಂದು ೪ ದಿವಸ ಅವರ ಜೊತೆ ಇದ್ದರೆ ಅವರು ಬೆಳಿಗ್ಗೆ ಎದ್ದು ಹಾಲು ಎಲ್ಲಿಂದ ತರ್ತಾರೆ ಮಕ್ಕಳನ್ನು ಸ್ಕೂಲ್ಗೆ ಎಷ್ಟುಹೊತ್ತಿಗೆ ಕಳಿಸುತ್ತಾರೆ, ಇಬ್ಬರು ಕೆಲಸ ಮಾಡ್ತ ಇರೋದ್ರಿಂದ ಮಕ್ಕಳನ್ನ ಯಾವ ರೀತಿ ಬೆಳಸ್ತಾಯಿದ್ದಾರೆ, ಅದರ ಪ್ರಭಾವ ಎನು, ಹೀಗೆ ನೋಡ್ತ ಇದ್ದರೆ ತಿಳಿಯುತ್ತೆ. ಹಾಗೇನೆ ಅವರೊಡನೆ ಮಾತು ಆಡ್ತಿನಿ. Its a family matter but whole country’s cultural matter ಕೂಡ ಆಗಿಬಿಡುತ್ತೆ. ಸೂಕ್ಷ್ಮವಾದ ಅನುಭವ ಗಳಿಸ ಬೇಕೆ ಹೊರತು activism ಇಂದ ಸಾಧ್ಯವಿಲ್ಲ.”
_____________________________________________________________
ಸಂದರ್ಶಕ: “ಅತ್ತ ಇಂಗ್ಲಿಷ್ನಲ್ಲೂ ಸಲ್ಲದ ಇತ್ತ ಕನ್ನಡವೂ ಬಾರದ ತಂತ್ರ ವಿದ್ಯಾ ವರ್ಗವು ಸೃಷ್ಟಿಯಾಗಿದೆ ಅನ್ನುವ ವಾದವಿದೆ. ನಿಮ್ಮ ಅಭಿಪ್ರಾಯವೇನು?”
ಎಸ್.ಎಲ್.ಬಿ: ಆಗ್ತಾಯಿದೆ. ನಮ್ಮಲ್ಲಿ ಏನಾಗಿದೆ ಅಂದ್ರೆ ಒಂದು ವರ್ಗ ಇದೆ. ಶುರುಶುರು ಆದದ್ದು ಈ interstate transfer ಆಗುವ ನೌಕರ ವರ್ಗದವರು. ಅವರೇನು ಮಾಡಿದರು? ಕರ್ನಾಟಕದಲ್ಲಿ ಕನ್ನಡ second language, English medium of instruction. ಮಹಾರಾಷ್ಟ್ರಕ್ಕೆ ಹೋದರೆ ಮರಾಠಿ ಆಗಿಬಿಡುತ್ತೆ, ಗುಜರಾತ್ಗೆ ಹೋದರೆ ಗುಜರಾತಿ ಆಗಿಬಿಡುತ್ತೆ ನಮ್ಮ ಮಕ್ಕಳಿಗೆ ಭಾಷೆ ಬದಲಾವಣೆ ಆಗುವುದರಿಂದ ಅವರ ವಿದ್ಯಾಭ್ಯಾಸ ಸರಿ ಹೋಗುವುದಿಲ್ಲ. ಆದ್ರಿಂದ ಎಲ್ಲಕಡೆ ಇಂಗ್ಲಿಷ್ ಇರಬೇಕು ಅಂತ ಅವರೆ Central School ಅಂತ ಸ್ಥಾಪಿಸಿದರು. ಇವುಗಳಲ್ಲಿ second language is ಹಿಂದಿ. ಅಂದರೆ ರಾಜ್ಯದ ಭಾಷೆಗಳು ಎಲ್ಲೂ ಇಲ್ಲ. ಅವರೆ ಒಂದು ಮಾಡೆಲ್ ಆದರು. ಈ products , ಈ ಮಕ್ಕಳು ಇವೆಯಲ್ಲ ಬೆಳದಾಗ ಅವರಲ್ಲ್ಯಾರಾದರು ಸಾಹಿತ್ಯದ ಗಂಧ ಇದ್ದರೆ ಅವರು ಬರಿಯುವುದು ಇಂಗ್ಲಿಷ್ನಲ್ಲೆ. ಅಂತೋರೆ ನಮ್ಮಲ್ಲಿ ಈಗ ಇಂಗ್ಲಿಷ್ ಬರಹಗಾರರು. Indian writers writing in English ಅಂತ. ಆವರು ಒಂದು ಮಟ್ಟಕ್ಕೆ ಬಂದ ಮೇಲೆ ಮುಂದೆ ಓದಿಗೆ ಅಮೆರಿಕ ಅಥವ ಇಂಗ್ಲೆಂಡ್ ಹೋಗುತ್ತಾರೆ. ಅಲ್ಲಿ ಸ್ವಲ್ಪ ಅವರ ಇಂಗ್ಲಿಷ್ ಭಾಷೆ ಕಲಿತು ಗ್ರಿಪ್ ಸ್ವಲ್ಪ better ಆಗುತ್ತೆ. ನಂತರ ಇಂಗ್ಲಿಷ್ನಲ್ಲಿ ಬರೆಯಲು ಶುರು ಮಾಡುತ್ತಾರೆ. ನನ್ನ observation ಏನಂದರೆ ಕೆಲವೊಂದು ಓದಿದ್ದೀನಿ. ಪಾಪ ಒಂದು cultureನ ಬೇರು ಅವರಿಗಿಲ್ಲ. ಅವರ ಬರವಣಿಗೆಗೆ ಯಾವ ಸತ್ವ ಇರುತ್ತೆ. ನೀವು ಆ ಭಾಷೆ ಬರೆಯುವುದಕ್ಕೆ ಶುರು ಮಾಡಿದರೆ ಆ concepts ಬಂದುಬಿಡುತ್ತೆ. ನಮ್ಮ ಭಾಷೆಯಲ್ಲಿ ಬರೆದರೆ ನಮ್ಮ concepts ಬರುತ್ತೆ.
ನನ್ನ ಕೃತಿಗಳ ಭಾಷಾಂತರಗಳ ಅನುಭವ ಹೇಳಿದರೆ ನಿಮಗೆ ನಾನು ಹೇಳುತ್ತಿರುವ ಮಾತು ಚೆನ್ನಾಗಿ ಮನದಟ್ಟಾಗುತ್ತೆ. ನನ್ನ ಕಾದಂಬರಿಗಳು ಭಾರತದ ಬಹುತೇಕ ಭಾಷೆಗಳಿಗೆ ಅನುವಾದವಾಗಿದೆ. ಕನ್ನಡದಿಂದ ಮರಾಠಿ ಭಾಷೆಗೆ ಭಾಷಾಂತರಿಸುವುದು ಸುಲುಭ. ಕನ್ನಡದಿಂದ ಹಿಂದಿ ಅಥವ ಇನ್ಯಾವುದೆ ಭಾರತಿಯ ಭಾಷೆಗಳಿಗೆ ಅನುವಾದ ಸುಲುಭ. ಏಕೆಂದರೆ ಅವುಗಳ culture ಒಂದೆನೆ. Basic value ಎಲ್ಲ ಒಂದೆ ಆಗಿರುತ್ತೆ ನಮ್ಮಲ್ಲಿ. ಏನೊ ಒಂದು ವ್ಯಾಕರಣ ಬೇರೆ ಇರುತ್ತೆ. ಆದರೆ ಕನ್ನಡದಿಂದ ಇಂಗ್ಲಿಷ್ ಗೆ ಭಾಷಾಂತರಿಸುವಾಗ ತಿಣುಕಿದರೂ ಕಷ್ಟವಾಗುತ್ತೆ. ಇದು ಏನು ತೋರಿಸುತ್ತೆ ಅಂದರೆ ನಮ್ಮ cultureನಲ್ಲಿ ಎಷ್ಟು basic gap ಇದೆ ಅನ್ನುವುದು ಆ ಭಾಷೆಯಲ್ಲಿ ನಮ್ಮ ಭಾಷೆ express ಮಾಡುವುದು ತುಂಬ ಕಷ್ಟವಾಗುತ್ತೆ. ಇಂಗ್ಲಿಷನಲ್ಲಿ ಬರೆಯುವರು ಈಗಷ್ಟೆ ಬರುತ್ತಿದ್ದಾರೆ. ಅವರಲ್ಲಿ ಯಾರು ದೊಡ್ದ ಲೇಖಕರು ಅಂತ ನನಗನಿಸುವುದಿಲ್ಲ.”
______________________________________________________________
ಸಂದರ್ಶಕ:. “TV, Internet, Cinema ದಂತಹ ಪ್ರಭಾವಿ ಮಾಧ್ಯಮಗಳೆದುರು ಅಕ್ಷರ ಮಾಧ್ಯಮ ಮಂಕಾಗುತ್ತಿದೆಯೆ?”
ಎಸ್.ಎಲ್.ಬಿ: “ಸ್ವಲ್ಪ ಭಾಗ ಜನರು ಅಂದರೆ semi-educated ಜನರು ಹೊತ್ತು ಕಳೆಯುವುದಕ್ಕೆ ಟಿವಿ, ಸಿನೆಮಾ ನೋಡುತ್ತಾರೆ. ಸ್ವಲ್ಪ ಗಂಭೀರವಾಗಿ ಬುದ್ಧಿ ಬೆಳೆದಿರುವವರು ಅಕ್ಷರ ಮಾಧ್ಯಮಕ್ಕೆ ಬರುತ್ತಾರೆ. ಈ ಟಿವಿ ಯ ಪರಿಣಾಮವಾಗಿ ಪುಸ್ತಕಗಳನ್ನು ಓದುವುದು ಕಡಿಮೆಯಾಗಿದೆ ಎಂದೊಂದು ವಾದವಿದೆ. ನನ್ನ ಅನುಭವದಿಂದ ಹೇಳಬೇಕೆಂದರೆ, ಎಷ್ಟು ಪುಸ್ತಕಗಳು ಮಾರಟವಾಗುತ್ತವೆ ಅಂತ ನೋಡಿದರೆ ಓದುವುದು ಕಡಿಮೆಆಗಿದೆ ಎಂಬ ವಾದ ಸರಿಯಲ್ಲ ಅಂತ.
ಈಗ ನಾವು ಸಾಹಿತಿಗಳು ಅರ್ಥ ಮಾಡಿಕೊಳ್ಳಬೇಕಿರುವುದು - Knowledge explosion ಅಂದರೆ ಚಿಕ್ಕ ವಯಸ್ಸಿನಲ್ಲೆ ದೇಶ-ವಿದೇಶಗಳಿಗೆ ನೌಕರಿಗೆ ಹೋಗಿ ಬಂದು, ಅವರ ಅನುಭವಗಳ explosion ಆಗ್ತಾ ಇರೋವಾಗ, ನಮ್ಮ ಅದೇ ಕರ್ನಾಟಕದ themes ಗಳಾದ ಜಾತೀಯತೆ, ಹಳ್ಳಿ ಜೀವನದ ಅನುಭವಗಳಲ್ಲಿ ಆಸಕ್ತಿ ಉಳಿದಿಲ್ಲ. They are not important problems of life. To know the very important problems of life, ಪ್ರಪಂಚದ ಬೇರೆ ಬೇರೆ ದೇಶಗಳಲ್ಲಿ ಏನಾಗ್ತ ಇದೆ, ನಮ್ಮ ಜೀವನದ ಮೇಲೆ ಅವುಗಳ ಪರಿಣಾಮವೇನು ಅನ್ನುವುದರ ಮಾಹಿತಿ ಇರಬೇಕಾಗುತ್ತೆ. ಅಂತಹುದಕ್ಕೆ ಲೇಖಕರು ತಮ್ಮನ್ನು ತಾವೆ ತೆರೆದುಕೊಳ್ಳದೆ, ಕಷ್ಟ ಪಡದೆ ಹೋದರೆ, ಬರವಣಿಗೆಯಲ್ಲಿ ಸತ್ವವಿರುವುದಿಲ್ಲ. ಆಗ ಇಂತಹ ಪ್ರಶ್ನೆಗಳು ಬರುತ್ತವೆ. ಕನ್ನಡ ಪುಸ್ತಕಗಳನ್ನು ಓದುವರಿಲ್ಲ, ನನ್ನ ಪುಸ್ತಕಗಳನ್ನು ಓದುವರಿಲ್ಲ ಅಂತ.
ಸಾಹಿತ್ಯವನ್ನು ಗಂಭೀರವಾಗಿ ತೆಗೆದುಕೊಂಡಲ್ಲಿ ತುಂಬ ಕಷ್ಟ ಪಡಬೇಕಾಗುತ್ತದೆ. ಉದಾಹರಣೆಗೆ ಮಂದ್ರ ಕಾದಂಬರಿ ಬರೆಯುವಾಗ, “My first love is music, my second love is literature” ಆದ್ರು, ಪ್ರತ್ಯೇಕವಾಗಿ research ಮಾಡಿ, ಸಂಚಾರ ಮಾಡಿ, ಒಂದು ವರ್ಷಗಳ ಕಾಲ ಒಬ್ಬರು ಸಂಗೀತ ಗುರುಗಳೊಂದಿಗೆ ಅಭ್ಯಾಸ ಮಾಡಿದೆ. ಕೆಲವು ರಾಗಗಳನ್ನು, ಸ್ವರಗಳನ್ನು refresh ಮಾಡಿಕೊಂಡೆ. ನನ್ನ ಹತ್ತಿರವಿರುವ Music collections, live cassettes ಗಳನ್ನು ಕೇಳುತ್ತಿದ್ದೆ. ಕಾದಂದರಿಯಲ್ಲಿ ಉದಾಹರಣೆಗೆ ಯಮನ್ ರಾಗವನ್ನು ವರ್ಣನೆ ಮಾಡಬೇಕೆಂದರೆ, ಭೀಮ್ ಸೇನ್ ಜೋಶಿ ಹಾಡಿರುವ ಯಮನ್, ಗಂಗೂಬಾಯಿ ಹಾಡಿರುವ ಯಮನ್, ಆಲಿ ಅಕ್ಬರ ಬಾರಿಸುವ ಯಮನ್, ಹೀಗೆ ಬೇರೆ ಬೇರೆ masters ಆ ಒಂದು ರಾಗವನ್ನು ಹೇಗೆ ಮಾಡಿದ್ದರೆ ಎಂದು ಪ್ರತಿಯೊಂದನ್ನು ೨-೩ ಸಲ ಕೇಳಿ, ಅದನ್ನ ಕಾದಂಬರಿಯ ಪಾತ್ರ, ಸನ್ನಿವೇಶಗಳಿಗೆ ಬೆರೆಯುವ ರೀತಿ ಆ ಭಾಗವನ್ನು (೨-೩ ಪುಟಗಳು) ಬರೆದಿದ್ದೀನಿ. ಇದು ಒಂತರಹ ತಪಸ್ಸು. ತಯಾರಿಗೆ ಹಲವು ದಿನಗಳು ಕಳೆದರೂ, whole life experiences ತುಂಬಿದರೂ, ಬರೆಯಬೇಕೆಂದು ಕುಳಿತಾಗ ಅದು ಸಹ ಸಾಕಷ್ಟು ಸಮಯ ತೆಗೆದುಕೊಳ್ಳುತ್ತೆ. ಬರೆಯುವುದು ಸುಲಭದ ಕೆಲಸವಲ್ಲ. ದೈಹಿಕ ಬಳಲಿಕೆಯಾಗುತ್ತದೆ. Mental and Physical exhaustion ತುಂಬಾ ಆಗುತ್ತೆ.”
____________________________________________________________
ಸಂದರ್ಶಕ:. “ನೀವು ಇಷ್ಟು ಅಧ್ಯಯನ ಮಾಡ್ತೀರಲ್ಲ. ಅದರಲ್ಲಿ ಯಾವ ವಿಚಾರ ನಿಮಗೆ ತುಂಬ ಇಷ್ಟವಾಗಿದೆ?”
ಎಸ್.ಎಲ್.ಬಿ: ಹೇಳುವುದಕ್ಕಾಗುವುದಿಲ್ಲ. ಒಂದೊಂದು ಕಾದಂಬರಿಗೆ ಒಂದೊಂದು ವಿಷಯ ನನ್ನನ್ನು ಹಿಡಿದಿಟ್ಟುಕೊಂಡಿರುತ್ತದೆ. ಆ ಕಾದಂಬರಿ ಬರೆಯುವಾಗ ಪ್ರಪಂಚದಲ್ಲಿ ಅದು ಒಂದೆ ವಿಷಯವಿರುವುದು ಅನ್ನಿಸುತ್ತೆ. ಇಂತಹದ್ದೆ ವಿಷಯ ನನಗೆ ಇಷ್ಟ ಎಂದು ಹೇಳಲಾರೆ.”
____________________________________________________________
ಸಂದರ್ಶಕ: “ಇಷ್ಟು ಆಳವಾದ ಅಧ್ಯಯನವನ್ನು ಓದುಗನಿಗೆ ಬಹಳ ಅರ್ಥಗರ್ಭಿತವಾಗಿ ಹೇಳುತ್ತೀರ. ಮಂದ್ರ ಓದಿದರೆ, ನನಗೆ ಹಿಂದುಸ್ತಾನಿ ಸಂಗೀತದಲ್ಲಿ ಇರುವ ಆಸಕ್ತಿಯನ್ನು ನನ್ನ ಮೂಲಕವೆ ಹೇಳ್ತಾ ಇದ್ದೀರ ಅನ್ಸತ್ತೆ. ಈ ಅದ್ಯಯನದಲ್ಲಿ ಕಲಿತದದ್ದನ್ನು ಬರವಣಿಗೆಯಲ್ಲಿ ಹೇಗೆ step by step explain ಮಾಡುತ್ತೀರಿ?”
ಎಸ್.ಎಲ್.ಬಿ: “Step-by-step explain ಎಲ್ಲು ಮಾಡಿಲ್ಲ. ಪಾತ್ರ ಇದೆ, ಪಾತ್ರದ ಸನ್ನಿವೇಶದ ಒಳಗೆ Musical ಆಗಿ ಗ್ರಹಿಸಿದ್ದೇನೆ. ಮಂದ್ರ ಕಾದಂಬರಿಯ ತಯಾರಿಯ ವೇಳೆಯಲ್ಲಿ ಅಮೆರಿಕಾಗೆ ಬಂದಿದ್ದೆ. ಇಲ್ಲಿ ನಚಿಕೇತ್ ಶರ್ಮ ಅಂತ ಇದಾರೆ. ಅವರು ನನ್ನನ್ನು ಆಲಿ ಅಕ್ಬರ ಖಾನ್ ರ ಶಾಲೆಗೆ ೨ ದಿನ ಕರೆದುಕೊಂಡು ಹೋದರು. ಆಲಿ ಅವರ ಜೊತೆಗೆ ಎಷ್ಟೋ ವಿಷಯಗಳನ್ನು ಮಾತನಾಡಿದ್ದೀನಿ. ಹೀಗೆ ಸಾಕಷ್ಟು ಸುತ್ತಿದ್ದೀನಿ ಇದರ ತಯಾರಿಗೆ. ಇದಕ್ಕೆಲ್ಲ ದುಡ್ಡು ಎಲ್ಲಿಂದ ಬರುತ್ತೆ? ನನ್ನ ಕೈಯಿಂದ ಹಾಕಿಕೊಂಡು ಬಂದಿದ್ದೀನಿ. ಪರಿಚಯದವರು hospitality ತೋರಿಸ್ತಾರೆ. ಅವರ ಕಾರಲ್ಲಿ ಕರೆದುಕೊಂಡು ಸುತ್ತಾಡಿಸಿದ್ದಾರೆ. ಆದರೆ ಭಾರತದಿಂದ ಇಲ್ಲಿಗೆ ಬರುವುದಕ್ಕೆ ನಾನೆ ಖರ್ಚು ಮಾಡ್ತೀನಿ. ಹೀಗೆ ೨ ವರ್ಷದವರೆಗೆ ಅದೆ theme ನಲ್ಲಿ ಇದ್ದೆ. ಅದನ್ನೆ ಸಿದ್ಢ ಮಾಡಿಕೊಂಡು, ಕೊನೆಗೆ ಕಾದಂಬರಿ ಬರೆಯುವುದಕ್ಕೆ ಇನ್ನೊಂದು ವರ್ಷ ಹಿಡಿಯಿತು.”
____________________________________________________________
ಸಂದರ್ಶಕ: “ಹಾಗಾದರೆ ಯಾನ ಕಾದಂಬರಿ ಬರೆಯುವುದಕ್ಕೆ ಎಷ್ಟು ವರ್ಷ ತಯಾರಿ ನಡೆಸಿದ್ದೀರಿ?”
ಎಸ್.ಎಲ್.ಬಿ: “ಯಾನ ಪುಸ್ತಕದಲ್ಲಿ ಹಿನ್ನುಡಿ ಬರೆದಿದ್ದೇನೆ. ಅಲ್ಲಿ ಕಾದಂಬರಿಯ ತಯಾರಿಯ ಬಗ್ಗೆ ಹೇಳಿದ್ದೇನೆ. ಹೇಗೆ ಶುರು ಆಯಿತು ಅಂದರೆ, ಅಮೆರಿಕಾದವರು ಮೊದಲಿಗೆ ಚಂದ್ರನಲ್ಲಿಗೆ ಆರ್ಮಸ್ಟ್ರಾಂಗ್ ಕಳುಹಿಸಿದಾಗ, ಅದೊಂದು great achievement ಅನ್ನಿಸಿತು. ನನಗೆ Astro Physics ಅಲ್ಲಿ ಮೊದಲಿಂದಲೂ ಆಸಕ್ತಿ ಇತ್ತು. “ನೆಲೆ” ಎನ್ನುವ ಕಾದಂಬರಿಯಲ್ಲಿ Astro physics ಮೇಲೆ ಸ್ವಲ್ಪ ಬರೆದಿದ್ದೀನಿ. ಆಗ ಅಂದರೆ Telescope ಅಲ್ಲಿ ನೋಡುವುದು ಇತ್ತು. ಆ ಮಟ್ಟಕ್ಕೆ early 1970s ಅಲ್ಲಿ “ನೆಲೆ” ಕಾದಂಬರಿಯಲ್ಲಿ ಒಂದು ಪಾತ್ರ ತಂದಿದ್ದೀನಿ. ಆಮೇಲೂ ನಂಗೆ ಖಗೋಳದಲ್ಲಿ ಆಸಕ್ತಿ ಬೆಳೆಯಿತು. ನಂತರ ಓದೋದಕ್ಕೆ ಶುರು ಮಾಡಿದೆ. ನಾನು Mathematics ಓದಿಲ್ಲ. ಆದರೆ ನನ್ನ college ಅಲ್ಲಿ Physics Professor ಮಾಹೇಶ್ವರಿ ಅವರು ಎಸ್. ಚಂದ್ರಶೇಖರ ಕೆಳಗೆ PhD ಮಾಡಿದವರು, ನನ್ನ ಆಸಕ್ತಿ ನೋಡಿ ನಮ್ಮ ಕಾಲೇಜ್ library ಗೆ ಪುಸ್ತಕಗಳನ್ನು ತಂದು ಕೊಡೋದು, ನಾನು ಅದನ್ನು ಓದುವುದು, ಅದರ ಬಗ್ಗೆ ಚರ್ಚೆ ಮಾಡುವುದು ನಡೆದೆ ಇತ್ತು. ಹೀಗೆ ಖಗೋಳದ ಮೇಲಿನ ಆಸಕ್ತಿ ಬೆಳೆಯುತ್ತಾ ಇತ್ತು.
ಜೊತೆಗೆ ನಾನು ಯಾವಗ ವಾಷಿಂಗ್ಟನ್ ಡಿಸಿ ಗೆ ಬಂದಾಗಲು, Smithsonian Space Museum ಗೆ ಪ್ರತಿ ಸಾರಿ ಭೇಟಿ ಕೊಟ್ಟಿದ್ದೀನಿ. ಅದನ್ನು ಹೊಸತಾಗಿ ನೋಡ್ತಿದ್ದೆ. Space ಬಗ್ಗೆ ಮಾಡಿದ ಚಲನಚಿತ್ರಗಳನ್ನು ನೋಡಿದ್ದೀನಿ. ಜೊತೆಗೆ space travel ಬಗ್ಗೆ ಅಲ್ಲಿದ್ದ ಪುಸ್ತಕಗಳನ್ನು ಕೊಂಡು ಓದುತ್ತಿದ್ದೆ. ಆಗ ಒಂದು ಥೀಮ್ ಇದ್ದಕ್ಕಿದ್ದಂತೆ ಹೊಳೆಯಿತು. Americans ಒಂದು ಯಾನವನ್ನು ಘಂಟೆಗೆ ೪೦೦೦೦ ಮೈಲಿ ವೇಗದಲ್ಲಿ ಕಳುಹಿಸಿದ್ದರು (ಯಾನದ ಹೆಸರು ಮರೆತು ಹೋಗಿದೆ). ಆಗ ನನಗೆ ಹೊಳೆದದ್ದು, ನಮ್ಮ ಸೂರ್ಯನ ಹತ್ತಿರದ ನಕ್ಷ್ತ್ರ ಪುಂಜ ೪.೬ light years ದೂರದಲ್ಲಿರುವ ಪ್ರೊಕ್ಸಿಮ ಸೆಂಟಾರಿಸ್ ಗೆ ಕಳುಹಿಸಿದರೆ ಎಷ್ಟು ವರ್ಷ ಬೇಕಾಗುತ್ತದೆಂದು ಗುಣಾಕಾರ ಮಾಡಿ ನೋಡಿದಾಗ ೭೨೦೦೦ ವರ್ಷ ಎಂದು ತಿಳಿಯಿತು. ಅಂತಹ ಒಂದು ಯಾನವನ್ನು ಕಳುಹಿಸಿದರೆ, ಅದರಲ್ಲಿ ಬರುವ ಸಮಸ್ಯೆಗಳೇನು?, ಮನುಷ್ಯ ಅಷ್ಟು ವರ್ಷ ಬದುಕಲು ಸಾಧ್ಯವಿಲ್ಲದ್ದರಿಂದ ಮುಂದಿನ ಪೀಳಿಗೆ ಬೆಳೆಯುವುದು ಹೇಗೆ, ಅವರ ಆಹಾರ ಹೇಗೆ, ಹೀಗೆಲ್ಲ ಯೋಚನೆ ಮಾಡುತ್ತ ಇದ್ದೆ.
ಈಗ ೨೦೧೧ ದರಲ್ಲಿ ಐ.ಐ.ಎಸ್.ಸಿ ಬೆಂಗಳೂರು ಅವರು ೨ ತಿಂಗಳ ಮಟ್ಟಿಗೆ Visiting Professor ಆಗಿ ಆಹ್ವಾನ ಮಾಡಿದರು. Non-science creative ವ್ಯಕ್ತಿಯನ್ನು ಅವರ ಕ್ಯಾಂಪಸ್ ಗೆ ಕರೆಸುವುದು ಅವರ ಉದ್ದೇಶವಾಗಿತ್ತು. ನಾನು ಅಲ್ಲಿನ staff quarters ಅಲ್ಲಿ ಇದ್ದು, staff members and students ಗೆ available ಇರಬೇಕು. ನಾನು ನನಗೆ ಇಷ್ಟ ಬಂದ ಕೆಲಸವನ್ನು ಮಾಡಬಹುದಾಗಿತ್ತು, ಆ ಸ್ವಾತಂತ್ರ್ಯವಿತ್ತು. ಅಲ್ಲಿ ನನ್ನನ್ನು ಆಹ್ವಾನಿಸಲು ಹೆಚ್ಚು ಮುತುವರ್ಜಿ ವಹಿಸಿದ Aeronautics dept ನ HOD ರಘುನಂದನ್ ಅವರ ಪರಿಚಯವಾಯಿತು. ಮುಂಚೆಯಿಂದಲು ಆಸಕ್ತಿ ಇದ್ದದ್ದರಿಂದ ಅಲ್ಲಿನ ಲೈಬ್ರರಿಯಲ್ಲಿ ಪುಸ್ತಕಗಳನ್ನು ಓದಿದೆ, ನನ್ನನ್ನು ಭಾಧಿಸುತ್ತಿದ್ದ ಪ್ರಶ್ನೆಗಳನ್ನು ಕೇಳಿದೆ. ಅವರಲ್ಲಿ ೪ post-docs ಇದ್ದರು, ಚಿಕ್ಕ ವಯಸ್ಸಿನ ೩೦-೩೫ ಪ್ರಾಯದವರು. ರಘುನಂದನ್ ಅವರು ಬ್ಯುಸಿ ಇದ್ದದ್ದರಿಂದ post-docs ಜೊತೆಗೆ ಚರ್ಚೆ ಮಾಡ್ತಾ ಇದ್ದೆ. ನನ್ನ ಪ್ರಶ್ನೆಗಳಿಗೆಲ್ಲ ಉತ್ತರಿಸುತ್ತಿದ್ದರು. ನನಗೆ ಬಹಳ ಕಷ್ಟದ ಪ್ರಶ್ನೆಗಳು ಅಂತ ಅನ್ನಿಸುತ್ತಿದ್ದವು ಅವರಿಗೆ ಗೊತ್ತಿರುವ ವಿಷಯಗಳಾಗಿರುತ್ತಿದ್ದವು.
ಅದೆ ಸಮಯಕ್ಕೆ ISRO ಗೆ ಯಾಕೆ ಹೋಗಬಾರದೆನಿಸಿತು. ಗೊತ್ತಿರುವ ಒಬ್ಬರಿಗೆ ಕರೆ ಮಾಡಿ, ಅವರು ನನ್ನನ್ನು ISRO ಗೆ ಕರೆದುಕೊಂದು ಹೋಗಿ, PSLV ಅಲ್ಲಿ ಕೆಲಸ ಮಾಡಿದ ೪ ಜನರ ಜೊತೆ meeting ಏರ್ಪಡಿಸಿದರು. ಅವರ ಜೊತೆ ೧ ದಿನ ಕಳೆದೆ.
ಹೀಗೆ ಇಂತಹ process ಅಲ್ಲಿ ನನ್ನಲ್ಲಿದ್ದ ಆ ಥೀಮ್ ಬೆಳೆಯಿತು.
ಅಲ್ಲಿಂದ ಊರಿಗೆ ವಾಪಸ್ ಹೋದರೆ, COSPAR scientific committee (an international committee) ಅವರು ೨ ವರ್ಷಕ್ಕೊಮ್ಮೆ conference ಮಾಡ್ತಾರೆ. ಅದು ಈ ಸಾರಿ ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್ ಅಲ್ಲಿ ನಡೆಯುತ್ತಿರುವ ವಿಷಯ ತಿಳಿಯಿತು. ಆಗ ISRO ಗೆ ಕರೆದುಕೊಂದು ಹೋಗಿದ್ದ ಸತೀಶ್ ಅವರ ಹತ್ತಿರ ಕೇಳಿದಾಗ, conference ಕೇವಲ ವಿಜ್ಞಾನಿಗಳಿಗೆ ಅಥವ Science Institute ನ ಸದಸ್ಯರುಗಳಿಗೆ ಆದರು, ನನಗೆ ಅಲ್ಲಿಗೆ ಹೊಗೋದಕ್ಕೆ ಅವಕಾಶ ಮಾಡಿಕೊಟ್ಟರು. ಅಲ್ಲಿ ಬಹಳ ಒಳ್ಳೊಳ್ಳೆ lectures ಗಳು ನಡಿತಾ ಇದ್ದವು. ಒಬ್ಬರು ಇಟಾಲಿಯನ್ ವಿಜ್ಞಾನಿ ಬಿನಾಮಿ ಎನ್ನುವರು ಮಂಡಿಸಿದ ಸಿದ್ಧಾಂತ - “life originated in Mars and then carried to earth” ಅಂತ. ಅವರು ಅದರ ಬಗ್ಗೆ ಪುಸ್ತಕವನ್ನು ಬರೆದಿದ್ದಾರೆ. ಅವರು “94% of the known universe is unknown. Whatever we know of the universe is only 6%.” ಅಂತಲು ಭಾಷಣ ಮಾಡಿದರು. ಭಾಷಣವಾದಮೇಲೆ ಅವರನ್ನು ಕೇಳಿದೆ - “೯೪% unknown ಅಂತ ಹೇಳಬೇಕಾದರೆ you know. Without knowing how can you say exactly 94% is unknown?” ಎಂದು. ಅವರು mathematically explain ಮಾಡಿದರು. ಅದಕ್ಕೆ ನಾನು “ನನಗೆ ಗಣಿತ ತಿಳಿಯೋದಿಲ್ಲ. ನಾನು ಸಾಹಿತ್ಯಿಕ ವ್ಯಕ್ತಿ. ನನಗೆ ತಿಳಿಯುವ ಹಾಗೆ ಹೇಳಿರಿ” ಎಂದು. ಈ ತರಹದ ಅನುಭವಗಳು ಆಗುತ್ತಿದ್ದ ಹಾಗೆ, ಈ ಥೀಮ್ ಕೂಡ ಬೆಳೆದಿತ್ತು. ಯಾನ ವನ್ನು ಬರೆದೆ.
But essentially its a human story. ಇದು science fiction ಅಲ್ಲ. ನನಗೆ science fiction ನಿಜವಾದ ಸಾಹಿತ್ಯವಲ್ಲ ಅನ್ಸುತ್ತೆ. ನನ್ನದು purely literature. ಹೊಸ ಸನ್ನಿವೇಶಗಳಲ್ಲಿ Human behavior, Human values ಬಗ್ಗೆ ಅಷ್ಟೆ.”
_______________________________________________________________
ಸಂದರ್ಶಕ: “ನಿಮ್ಮ ಇತ್ತೀಚಿನ ಕೃತಿಗಳ ವಸ್ತು ವಿಭಿನ್ನ ಮತ್ತು ವಿಸ್ಮಯಕಾರಿಯಾಗಿವೆ. ಸಾರ್ಥ ಮತ್ತು ಆವರಣ ಇತಿಹಾಸ ಆಗಿದ್ದರೆ, ಕವಲು ಸಮಕಾಲೀನ ವಸ್ತು. ಯಾನ ಇನ್ನು ಭವಿಷ್ಯದಲ್ಲಿದೆ. ಈ ಬದಲಾವಣೆ ಉದ್ದೇಶಪೂರ್ವಕವೇ? ಅಥವಾ ಆ ಕಾಲದಲ್ಲಿ ಆಸಕ್ತಿ ಹುಟ್ಟಿಸಿದ ವಿಷಯವೆ?”
ಎಸ್.ಎಲ್.ಬಿ: ನಾನೇನು ವಿಷಯ ಬದಲಾಯಿಸಬೇಕು ಅಂತ ಮಾಡಿದ್ದಲ್ಲ. ಯಾವ ವಸ್ತು ನನ್ನನ್ನು ಆಕ್ರಮಿಸಿರುತ್ತೊ ಅದನ್ನ ಕುರಿತು ಬರಿತೀನಿ. ಅವುಗಳನ್ನು ಕುರಿತು ಹೆಚ್ಚು ಸಂಶೋಧನೆ ಮಾಡ್ತೀನಿ. ನನಗೆ ಯಾವುದೊ ಒಂದು ವಸ್ತು ಕೊತೂಹಲ ಹುಟ್ಟಿಸಬಹುದು, ಆದರೆ ಕಾದಂಬರಿ ಬರೆಯುವಂತಹ material ಆಗಲಿ, ಹಿಡಿತವಾಗಲಿ ಬರಬೇಕಾದರೆ ನಾವು ಅಧ್ಯಯನ ಮಾಡಲೇಬೇಕು. ಅದರಲ್ಲಿ ೨ ವಿಷಯ - ಒಂದು ಸಮಕಾಲೀನ ವಿಷಯವಾದರೆ, ನನಗೆ ಗೊತ್ತಿರುವಂತಹದ್ದಾದರೆ ಅದಕ್ಕೇನು ಅಧ್ಯಯನ ಬೇಕಾಗಿಲ್ಲ. ಉದಾಹರಣೆಗೆ ಗೃಹಭಂಗ, ಅದಕ್ಕೇನು ಅಧ್ಯಯನ ಮಾಡಿಲ್ಲ. ನಾನು ನೋಡಿದ, ಬದುಕಿದ ಜೇವನ ಅದರೊಳಗೆ ಇದ್ದದ್ದು. ಆದರೆ ಇನ್ನು ಕೆಲವಕ್ಕೆಲ್ಲ ಅಧ್ಯಯನದ ಅವಶ್ಯಕತೆ ಇತ್ತು.
ಇನ್ನಂದು - ನಿಮ್ಮ ವಿಷಯವನ್ನು ಬದಲಾಯಿಸದೆ ಹೋದರೆ, ನೀವು ಲೇಖಕನಾಗಿ repeat ಮಾಡಿದರೆ, ಓದುಗರು ನಿಮ್ಮನ್ನು reject ಮಾಡ್ತಾರೆ. ಅಲ್ಲಿ ಬರೆದದ್ದನ್ನ ಇಲ್ಲು ಹೇಳಿದ್ದಾರೆ, ಆ ಸಮಸ್ಯೆಯನ್ನು ಇಲ್ಲೂ ಹೇಳಿದ್ದಾರೆ, ಅದೇ ತರಹದ ಪಾತ್ರ ಇಲ್ಲೂ ತಂದಿದ್ದಾರೆ, ಇದನ್ನು ಏನು ಓದೋದು. ಬೇರೆ characters ಬಂತು ಅಂದರೆ ಬೇರೆ Probe ಇರತ್ತೆ, ಬೇರೆ exploration ಇರತ್ತೆ. ಅದು ನಿಜವಾಗಲು ಕಷ್ಟದ ಕೆಲಸ. ಲೇಖಕನ ನಿಜವಾದ ಕಷ್ಟ ಅದು. ಅದು ನಿಮ್ಮ ತಲೆ ತಿನ್ನುತ್ತೆ. ಅದು ನಿಮ್ಮೊಳಗೆ ಕೂತರೆ ಸರಿಯಾಗಿ ನಿದ್ದೆ ಬರಲ್ಲ ರಾತ್ರಿ ಹೊತ್ತು. ಖಂಡಿತವಾಗಿಯು ಬೇರೆ ಅಧ್ಯಯನ ಮಾಡಬೇಕಾಗುತ್ತದೆ, explore ಮಾಡಿದ space ಅಲ್ಲ ಅದು. ಬೇರೆಯವರಿಂದ guidance ಪಡೆಯಬೇಕಾಗುತ್ತದೆ. ಉದಾಹರಣೆಗೆ ಸಾರ್ಥ ವನ್ನು ತೆಗೆದುಕೋಂಡರೆ, ಸಾರ್ಥದ ಕಾಲ ೮ನೆಯ ಶತಮಾನ. ಆ ಕಾಲದಲ್ಲಿ, ಭಾರತದಲ್ಲಿ ಏನು ಸಂಸ್ಕೃತಿಯಿತ್ತು, ಏನೇನು ತೊಂದರೆಗಳಿದ್ದವು, ಯಾವ ಯಾವ ತರಹದ philosophical Thoughts ಇತ್ತು ಹೀಗೆ. ನನಗೆ ಅದರಲ್ಲಿ ಆಸಕ್ತಿ ಹುಟ್ಟೋದಕ್ಕೆ ಕಾರಣವೆಮ್ದರೆ, ನನ್ನ ವಿಷಯ Philosophy. ಆ ಕಾಲದಲ್ಲಿ ಇದ್ದಂತಹ ಶಂಕರಾಛಾರ್ಯರು, ಕುಮಾರ ಭಟ್ಟರು, ಬೌದ್ಧರು, ನಳಂದ, ಹಾಗೆಯೆ ಆ ಕಾಲದ ವ್ಯಾಪಾರ (ಸಾರ್ಥ ಅಂದರೆ caravan ಎಂದು) ಹೇಗಿತ್ತು, ಇವೆಲ್ಲವನ್ನು Authentic ಆಗಿ ತಿಳಿದುಕೊಳ್ಳಬೇಕೆಂದರೆ ಇತರ ಸಂಶೋಧಕರು ಏನು ಮಾಡಿರಬಹುದು ಅನ್ನೋದನ್ನ ಓದದೆ, ಕೇವಲ ಕಲ್ಪನೆ ಮಾಡಿಕೊಂಡು ಬರೆಯಲು ಹೋದರೆ ಅದು ಮೂರ್ಖತನವಾಗಿಬಿಡುತ್ತದೆ. ಅದಕ್ಕೆ authenticity ಇರುವುದಿಲ್ಲ. ಈಗ ನಳಂದದ ಬಗ್ಗೆ ಎಚ್. ಡಿ. ಸಂಕಾಲಿಯ ಅವರು ೧೯೩೬ ಅಲ್ಲಿ ಬಹಳ ದೊಡ್ಡ authentic ಪುಸ್ತಕ ಬರೆದರು. ತುಂಬ study ಮಾಡಿ ಬರೆದಿದ್ದಾರೆ. ೫೦ ವರ್ಷಗಳ ನಂತರ ೧೯೮೬ ರಲ್ಲಿ ಆ ಪುಸ್ತಕ ಮತ್ತೊಮ್ಮೆ ಮುದ್ರಣಗೊಂಡಿದೆ. ಅವರು ಅದರ ಮುನ್ನುಡಿಯಲ್ಲಿ ಹೀಗೆ ಬರೆದಿದ್ದಾರೆ - “೫೦ ವರ್ಷಗಳು ಕಳೆದರೂ ಇದರಲ್ಲಿ ನನಗೆ ಏನು ತಿದ್ದುಪಡಿ ಮಾಡಬೇಕೆನಿಸಿಲ್ಲ. ಯಾವ ವಿದ್ವಾಂಸರು ಇದರ ಮೇಲೆ ತಿದ್ದುಪಡಿ ಸೂಚಿಸಿಲ್ಲ” ಅಂತ ಹೇಳುತ್ತಾರೆ. ಅಷ್ಟು authentic ಪುಸ್ತಕವದು. ನಾನು ನಳಂದವನ್ನು as a general traveller ನೋಡಿದ್ದೆ. ಬುದ್ಧಿಸಂ theory ಓದೋದಕ್ಕೆ ಸಾಕಷ್ಟು ಪುಸ್ತಕಗಳಿವೆ. ಆದರೆ buddhism in action ಗೊತಾಗಬೇಕಾದರೆ ನಳಂದ ದಂತಹ ಊರಿಗೆ ಹೋಗಬೇಕು. ಸಂಕಾಲಿಯ ಪುಸ್ತಕ ಓದಿ, ನಳಂದಕ್ಕೆ ಹೋಗಿ, ಪುಸ್ತಕದಲ್ಲಿ ಕೊಟ್ಟಿರುವಂತಹ ವಿವರಣೆಗಳು ಎಲ್ಲೆಲ್ಲಿ ನಡೆದಿರಬಹುದು, ಏನೇನು ಆಗಿರಬಹುದು ಎಲ್ಲವನ್ನು ಕಲ್ಪನೆ ಮಾಡಿಕೊಂಡು ನಳಂದ ವನ್ನು ಚಿತ್ರಿಸಿದ್ದೀನಿ. ಹಾಗೆಯೆ ಶಂಕರಚಾರ್ಯರಿಗು, ಮಂಡನಮಿಶ್ರರಿಗು ವಾದ ಎಲ್ಲಿ ಆಗುತ್ತೆ - ನರ್ಮದ ನದಿಯ ತೀರದಲ್ಲಿ ಮಹೇಶ್ವರ ಎಂಬ ಊರಿನಲ್ಲಿ.
ಹೀಗೆ ಸಂಚಾರ ಮಾಡಿದ ಕಡೆಯೆಲ್ಲಾ ಪರಿಚಯದವರಿರುವುದಿಲ್ಲ. ನಾವೆ ಪರಿಚಯ ಮಾಡಿಕೊಂಡು, ಹೋಟೆಲ್ ಬುಕ್ ಮಾಡಿಕೊಂಡು, ತಿಳಿದವರ ಬಗ್ಗೆ ವಿಚಾರಿಸಿಕೊಂಡು, ನಾನು ಇಂತಹ ಕೆಲ್ಸಕ್ಕೆ ಬಂದಿದ್ದೀನಿ, ನೀವು ಸ್ವಲ್ಪ ಗೈಡ್ ಮಾಡಬೇಕು ಅಂತ ಕೇಳಿ, ಟ್ಯಾಕ್ಸಿ ಬಾಡಿಗೆಗೆ ಹಿಡಿದು, ಎಲ್ಲೆಲ್ಲಿ ಸುತ್ತಬೇಕು, ಏನೇನು ನೋಡಬೇಕು ಅಂದು ನೋಟ್ಸ್ ಮಾಡಿಕೊಂಡು, ಹೀಗೆ ಇದು ಬಹಳ ಕಠಿಣವಾದ ಕೆಲಸ.
ನಾನು ಪರ್ವ ಬರೆದಾದ ಮೇಲೆ, “ಪರ್ವ ಬರೆದದ್ದು” ಅಂತ ಒಂದು ಲೇಖನ ಬರೆದಿದ್ದೀನಿ. ದ್ವಾರಕ ಗೆ ಹೋಗಿ, ದ್ವಾರಕದ ಬಗ್ಗೆ ಡಾ. ಥಾಕರ (Medical doctor) ಅವರು special interest ತೆಗೆದುಕೊಂಡು ಮಾಡಿದ ಸಂಶೋಧನೆ ಯನ್ನು ಓದಿ, ಅವರಲ್ಲಿಗೆ ಹೋಗಿ ತಿಳಿದುಕೊಳ್ಳಲು ಬಂದಿದ್ದೇನೆ, ನೀವು ಸಲ್ಪ ಸಹಾಯ ಮಾಡಬೇಕು ಅಂದು ಕೇಳಿದೆ. ಅವರು elderly person and I was an youngster at that time. ತಮ್ಮ ಪುಸ್ತಕವನ್ನು ಓದಿದ್ದೀರ ಅಂತ ಕೇಳಿದರು. ಓದಿದ್ದೀನಿ ಅಂದೆ. ಅದಕ್ಕೆ ಅವರು, “ದ್ವಾರಕದಲ್ಲಿ ಒಂದು light house ಇದೆ. ಅದನ್ನು ಹತ್ತಿ, ಸುತ್ತ ನೋಡಿ, ನಿಮಗೆ ಒಂದು ಚಿತ್ರ ಮೂಡಿ ಬರುತ್ತೆ. ಅದನ್ನ ನೋಡಿಯಾದ ಮೇಲೆ ಚರ್ಚೆ ಮಾಡೋಣ” ಅಂದರು. ನಾನು light house ನೋಡಲು ಹೋದರೆ, ಅಲ್ಲಿದ್ದ ಕಾವಲುಗಾರ ಹತ್ತಲು ಬಿಡಲಿಲ್ಲ. ಇಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವವರು ಬರುತ್ತಾರೆ, ಆದ್ದ್ರಿಂದ ಯಾರನ್ನು ಬಿಡೋದಿಲ್ಲ ಅಂದ. ನಾನು, “ದುಡ್ಡು ಬೇಕಾದ್ರೆ ಕೊಡ್ತೀನಿ, ನಾನು ಆತ್ಮಹತ್ಯೆ ಮಾಡಿಕೊಳ್ಳೋದಕ್ಕೆ ಬಂದಿಲ್ಲ. ನೀನೆ ಬಾ ಅಥವ ಬೇರೆ ಯಾರನ್ನಾದರು ನನ್ನ ಜೊತೆ ಕಳುಹಿಸು. ನಿನ್ನ ಮೇಲೆ complaint ಬರೊದಿಲ್ಲ. ನಾನು ನೋಡಲೇಬೇಕು. ಥಾಕರ ಅವರು ನನ್ನನ್ನು ಇಲ್ಲಿಗೆ ಕಳುಹಿಸಿದ್ದಾರೆ. ಬೇಕಾದರೆ ಅವರ ಹತ್ತಿರ ವಿಚಾರಿಸು” ಎಂದೆ. ೨೦ ರುಪಾಯಿ ತೆಗೆದುಕೊಂಡು ನನ್ನನ್ನು ಬಿಟ್ಟ. ಹೀಗೆ ದ್ವಾರಕದಲ್ಲಿ ೪ ದಿನ ಇದ್ದೆ. ಅಲ್ಲಿಂದ ಈಗಿನ ಸೋಮೇಶ್ವರ ದೇವಸ್ಥಾನಕ್ಕೆ (ಸರ್ದಾರ ಪಟೇಲ್ ಕಟ್ಟದ್ದು) ಹೋದೆ. ಕೃಷ್ಣ ಸತ್ತು ಹೋದ ಜಾಗ ಅದಕ್ಕೆ ಹತ್ತಿರದಲ್ಲಿದೆ. ಇಂತಹ ಸಂಚಾರಗಳಿಗೆ ದುಡ್ಡು ಯಾರು ಕೊಡ್ತಾರೆ? ನಾನೆ ಕೈಯಿಂದ ಹಾಕಿಕೊಳ್ಳುತ್ತೇನೆ. ಇದರ ಅರ್ಥ ನನ್ನ ಹತ್ತಿರ ಸಾಕಷ್ಟು ದುಡ್ಡಿದೆ ಅಂತಲ್ಲ. ಸಂಶೋಧನೆ ಮಾಡುವ passion ಗೋಸ್ಕರ ಮಾಡ್ತೀನಿ.
ಹೀಗೆ ಸರಿಯಾದ ಸಂಶೋಧನೆ ಮಾಡಿದರೆ, ಎಲ್ಲ ವಿವರಗಳು ಸಿಗುತ್ತವೆ. ವಿವರಗಳನ್ನು ಇಟ್ಟುಕೊಂಡು, ಕಲ್ಪನೆ ಮಾಡಬೇಕು. Factual material ಇಲ್ಲದೆ, ಕಲ್ಪನೆ ಮಾಡಿದರೆ ಅದು ಕಾಗಕ್ಕ-ಗುಬ್ಬಕ್ಕನ ಕಥೆಯಾಗುತ್ತದೆ. ಅದಕ್ಕೆ value ಇರುವುದಿಲ್ಲ. ಸಂಶೋಧನೆ ಮಾಡಿದ್ದರಿಂದ ಪರ್ವ ಕಾದಂಬರಿಗೆ ಆ strength ಬಂದಿರುವುದು, ಭಾರತದ ಎಲ್ಲ ಭಾಷೆಗಳಿಗು ಅನುವಾದ ವಾಗಿರುವುದು. 20th century interpretation of vyasa bharata ಅಂತ ಹೇಳ್ತಾರೆ.
ನಾನು ಪರ್ವ ಬರೆಯಬೇಕಾದರೆ, ೩ ಅಧ್ಯಾಯವಾಗಿತ್ತು. ರಾತ್ರಿ ನಿದ್ದೆ ಬರುವುದು ಕಡಿಮೆಯಾಗಿ ಹೋಯಿತು. ಮಲಗಿದಾಗ ಕನಸಿನಲ್ಲು ಅದೇ ಬರುತ್ತಿತ್ತು. ಒಂದು ದಿನ ಮಧ್ಯ ರಾತ್ರಿಯಲ್ಲಿ ಎದ್ದು bathroom ಗೆ ಹೋಗಬೇಕಾದರೆ ತಲೆ ಸುತ್ತಿ ಬಿದ್ದುಬಿಟ್ಟೆ. ಗಾಬರಿಗೊಂಡು ಏನಾಯಿತೆಂದು ಹೆಂಡತಿ ಬಂದಾಗ, ನನಗೆ ಪ್ರಜ್ಞೆ ಇರಲಿಲ್ಲ. ತಣ್ಣೀರು ಹಾಕಿದ ಮೇಲೆ, ಎದ್ದು ಹಾಗೆ ಮಲಗಿದೆ. ಮರುದಿನ ಮುಂಜಾನೆ ನನ್ನ ಸ್ನೇಹಿತ Physician ಡಾ. ಅನಂತ್ ರಾವ್ ಅಂತ, ನನ್ನ ಮನೆಯ ಹತ್ತಿರದಲ್ಲೆ ಇದ್ದರು. ಸಾಹಿತ್ಯಾಸಕ್ತರಾದ ಅವರು ಬಂದು ನೋಡಿ ಏನು ಚಿಂತೆ ಮಾಡಬೇಡಿ. ಮಾತ್ರೆ ಕೊಡ್ತೀನಿ ಹೇಳಿ ಮಲಗುವ ಘುಳಿಗೆ ಕೊಟ್ಟು, ೩ ದಿನ ಕಾಲೇಜಿಗೆ ರಜೆ ಹಾಕಿ, ಮಲಗಿ ಎಂದರು. ಹಾಗೆ ನಾನು ೩ ದಿನ ಹಗಲು ರಾತ್ರಿ ಮಲಗಿ ಚೆನ್ನಾಗಿ ನಿದ್ದೆ ಮಾಡಿದೆ. ಆಮೇಲೆ ಬರವಣಿಗೆ ಇಲ್ಲಿಗೆ ನಿಲ್ಲಿಸಿ, ಒಂದು ೧೫ ದಿನ ಎಲ್ಲಾದರು ಹೋಗಿ mind fresh ಮಾಡಿಕೊಂಡು ಬನ್ನಿ ಅಂದರು. ಅದಕ್ಕೆ ನಾನು ೩ ದಿನ ಶಿವಮೊಗ್ಗಕ್ಕೆ ಹೋಗಿ, ಅಲ್ಲಿಂದ ಹುಬ್ಬಳ್ಳಿಗೆ ಹೋದೆ. ಅಲ್ಲಿ ಸಾಹಿತ್ಯ ಭಂಡಾರ ದ Publisher ಗೋವಿಂದರಾಯರ ತಮ್ಮನ ಮನೆಯಲ್ಲಿ ಇಳಿದೆ. ಅವರು ಅಲ್ಲಿಗೆ ಬಂದರು. ನನ್ನ ಸ್ಥಿತಿ ನೋಡಿ, ಇಲ್ಲೆ ಧಾರವಾಡದಲ್ಲಿ Mental Hospital ಇದೆ. ಅಲ್ಲಿ ಹೋಗಿ ವಿಚಾರಿಸೋಣ ಅಂದರು!! Mental Hospital ಅಂದರೆ ಹುಚ್ಚು ಅಂತಲ್ಲ, ತಲೆ ಸುತ್ತಿ ಬಂದಿರೋದ್ರಿಂದ ಡಾಕ್ಟರ ಹತ್ತಿರ ತೋರಿಸುವುದು ಒಳ್ಳೆಯದು ಅಂದರು. Hospital Superintendent ಸಿದ್ದಪ್ಪನವರಿಗೆ ಬೈರಪ್ಪನವರು ಬರ್ತಾ ಇದ್ದಾರೆ ಅಂತ ತಿಳಿಸಿದರು. ನಾನು ಅಲ್ಲಿಗೆ ಹೋದರೆ, ಸಿದ್ದಪ್ಪನವರು ಹಾರ ಎಲ್ಲ ತಯಾರಿ ಮಾಡಿಕೊಂಡು, ಅವರು, ಅವರ staff ಎಲ್ಲ ಹಾರ ಹಾಕಿ ಸ್ವಾಗತಿಸಿದರು, ಆಸ್ಪತ್ರೆ ನೋಡೋಕೆ ಬಂದಿದ್ದಾರೆ ಸಾಹಿತಿಗಳು ಎಂದುಕೊಂಡು!!. ಆಗ ನಾನು, ನಾನಾಗೆ ಇಲ್ಲಿಗೆ ಬಂದಿಲ್ಲ, ನನ್ನನ್ನು ಗೋವಿಂದರಾಯರು ಕರೆದುಕೊಂಡು ಬಂದಿದ್ದಾರೆ ಎಂದೆ. Staff ಎಲ್ಲರು ಹೋದಮೇಲೆ, ನಾನು, ಸಿದ್ದಪ್ಪ ಹಾಗು ಗೋವಿಂದರಾಯರು ಇದ್ದೆವು. ನಾನು ಆಗಿದ್ದೆಲ್ಲ ಹೇಳಿದ ಮೇಲೆ, ಸಿದ್ದಪ್ಪನವರು ಒಂದು analysis ಕೊಟ್ಟರು.
“ಇದು ಬಹಳ ದೊಡ್ಡ ಥೀಮ್. ಬೇಸಿಗೆ ರಜೆಯ ಒಳಗೆ ಇದನ್ನು ಮುಗಿಸಬೇಕೆಂದು ಹೊರಟಿದ್ದೀರಿ. ೨ ತಿಂಗಳಲ್ಲಿ ಮುಗಿಯುವಂತಹ ವಸ್ತುವಲ್ಲ ಇದು. You are racing against time. ಅದಕ್ಕೆ ತುಂಬಾ ಒತ್ತಡ ಆಗ್ತ ಇದೆ. ಇದು ನಿಮ್ಮ quality of writing ಮೇಲೂ ಪರಿಣಾಮ ಬೀಳಬಹುದು. ನೀವು successful ಆಗಿ ಕಾದಂಬರಿಯನ್ನು ಬರೆಯಬೇಕೆಂದರೆ, ಸಮಯದ ಒತ್ತಡದಿಂದ ಬಿಡುಗಡೆಯಾಗಬೇಕು. Take leave for a year. ಆಗ ಸಾಕಷ್ಟು ಸಮಯ ಇರುತ್ತೆ. ಒಂದೊಂದು ಅಧ್ಯಾಯಕ್ಕೆ ತಯಾರಿ ನಡೆಸಿ, ಅದನ್ನು ಬರೆದು, ಒಂದು ವಾರ ರೆಸ್ಟ್ ತಗೊಳ್ಳಿ” ಅಂದರು. ಹಾಗೆ ಮಾಡಬೇಕಾದರೆ ನಾನು ಒಂದು ವರ್ಷ leave without pay ತೆಗೆದುಕೊಳ್ಳಬೇಕು. ಹಾಗಾದರೆ ಸಂಸಾರ ನಡೆಯೋದು ಹೇಗೆ ಎಂದು ಯೋಚಿಸಿದೆ. ಅದಕ್ಕೆ ಗೋವಿಂದರಾಯರು ತಿಂಗಳಿಗೆ ಎಷ್ಟು ಬೇಕಾಗುತ್ತೆ ಸಂಸಾರ ನಡೆಯೋದಕ್ಕೆ ಅಂತ ಕೇಳಿದರು. ನಾನು ೩೦೦೦ ವಾದರು ಬೇಕು ಅಂದೆ. ಅದಕ್ಕೆ ಅವರು, “ಪ್ರತಿ ತಿಂಗಳ ಮೊದಲ ವಾರದೊಳಗೆ ನಾನು ೩೦೦೦ ಕಳುಹಿಸುತ್ತೇನೆ. ಸಂಸಾರದ ವಿಷಯ ಮರೆತುಬಿಡಿ. ಬರೆಯುವುದು ನಿಮ್ಮ ಕೆಲಸ. ಆಮೇಲೆ ಪುಸ್ತಕ ಬಿಡುಗಡೆಯಾಗಿ ಬಂದ ಹಣದಲ್ಲಿ, ನಾನು ವಜಾ ಮಾಡಿಕೊಳ್ಳುತ್ತೇನೆ, Take a decision” ಅಂದರು. ಆದರೆ ನಾನು ರಜೆ ಹಾಕುವುದಕ್ಕೆ ತಯಾರದರೂ, ಕಾಲೇಜ್ ಅವರು permission ಕೊಡಬೇಕಲ್ಲ. ನಮ್ಮದು central govt college. ಇಂತಹ long leave decisions ಎಲ್ಲ central govt ಗೆ ಹೋಗುತ್ತೆ. ಪ್ರಾಂಶುಪಾಲರಿಗೆ ಕೇಳಿದಾಗ, ಅವರು ಇಂತಹ ಪರಿಸ್ಥಿತಿಗಳನ್ನು ಅರ್ಥ ಮಾಡಿಕೊಳ್ಳುವವರಾದ್ದ್ರಿಂದ ರಜೆ ಕೊಡಿಸಿದರು. ಹೀಗೆ ಒಂದು ವರ್ಷ ರಜೆ ಹಾಕಿ, ನಾನು ಸಾರ್ಥ ಬರೆದದ್ದು. ಸಿದ್ದಪ್ಪನವರು ಹೇಳಿದ ಹಾಗೆ, ಒಂದು ಅಧ್ಯಾಯ ಬರೆಯುವಾಗ ಸಂಪೂರ್ಣ ತೊಡಗಿಕೊಂಡು, ಅದು ಮುಗಿದ ಮೇಲೆ ಕೆಲ ದಿನಗಳ ವಿರಾಮ. ಹೀಗೆ ಆ ಕಾದಂಬರಿಯನ್ನು ಬರೆದು ಮುಗಿಸಿದ್ದೀನಿ. ಯಾಕೆ ಇದನ್ನೆಲ್ಲ ಹೇಳುತ್ತಿರುವುದೆಂದರೆ, ಬರವಣಿಗೆ ತುಂಬಾ ಕಷ್ಟದ ಕೆಲಸ. ಹಗುರವಾಗಿ ಏನು ಬರುವುದಿಲ್ಲ. ಇದು ಒಂತರಹ life time dedication. ತಪಸ್ಸು ಎನ್ನುವುದು ಇದಕ್ಕೆ. ನಾನು ನನ್ನ ಸಾಹಿತ್ಯವನ್ನು ಆ dedication ಇಂದಲೆ ಜೀವನ ಪೂರ್ತಿ ಮಾಡಿದ್ದೀನಿ.”
______________________________________________________________
ಸಂದರ್ಶಕ: “ಎಲ್ಲ ಕಾಲದ ವಿಷಯಗಳಲ್ಲೂ ನೀವು ಕಾಳಜಿ ವಹಿಸುವ ಅಥವಾ ನಿಮಗೆ ಆಸಕ್ತಿ ಹುಟ್ಟಿಸುವ ಸಂಗತಿಯೆಂದರೆ ವ್ಯಕ್ತಿಗತ ನೈತಿಕತೆ, ವ್ಯಕ್ತಿಯಿಂದ ಸಮಾಜ ಎನ್ನುವ ನಂಬಿಕೆ ಕೆಲಸ ಮಾಡಿರುವಂತೆ ಕಾಣುತ್ತದೆ. ಈ ಆಬ್ಸರ್ವೇಷನ್ ಸರಿಯಾ?”
ಎಸ್.ಎಲ್.ಬಿ:: “ಹೌದು, ಸರಿ. ಯಾವುದೇ ಒಂದು ಸಾಹಿತ್ಯದೊಳಗೆ ನಾವು ಚಿತ್ರಿಸುವುದು ಯಾವುದನ್ನ? ನಾವು ಚಿತ್ರಿಸುವುದು ಪಾತ್ರಗಳನ್ನು. ನಾವು ಇಡೀ ಸಮಾಜವನ್ನು ಚಿತ್ರಿಸಲಿಕ್ಕೆ ಹೋದರೆ ಅದು ಸೋಷಿಯಾಲಜಿ ಬುಕ್ ಆಗಿಬಿಡ್ತದೆ. ಪಾತ್ರಗಳನ್ನು ತಗೊಂಡು, ಆ ಪಾತ್ರ ಯಾವ ಸಮಾಜದೊಳಗೆ ಇದೆ ಎನ್ನುವುದನ್ನು backgroundಲ್ಲಿ ಇಟ್ಕೊಂಡು, ಆ ವ್ಯಕ್ತಿಯ ಒಳಗಡೆ ಏನು ತಳಮಳ ಉಂಟಾಗತ್ತೆ ಅನ್ನೋದನ್ನ ಶೋಧಿಸಿದರೆ ಅದು ಸಾಹಿತ್ಯ ಕೃತಿಯಾಗುತ್ತೆ. ಆಗ ಅದು ಓದುಗರ ಹೃದಯ ಮುಟ್ಟುತ್ತೆ ಅದು. ನಾವು ಇಡೀ ಸಮಾಜನ್ನ ಇಟ್ಕೊಂಡು ಏನು ಅನ್ಯಾಯ ಆಗಿದೆ ಅಂತ ಎಕ್ಸಮೇಟರಿ ಮಾರ್ಕ್ ಹಾಕೊಂಡು ಹೋದರೆ ಸಾಹಿತ್ಯ ಆಗೋದಿಲ್ಲ ಅದು. ಪಾತ್ರಗಳ ಮೂಲಕ ಶೋಧನೆ ಮಾಡ್ಕೊಂಡು ಹೋದ್ರೆ ನಾವು. ಅದಕ್ಕೆ ಆಳಕ್ಕೆ ಇಳೀಬೇಕಾಗುತ್ತೆ. ಯಾವ ಮಹಾನ್ ಸಾಹಿತ್ಯ ಕೃತಿಗಳನ್ನು ಹುಡುಕಿದರೂ ನಮಗೆ ಕಾಣುವುದು ಇದೇ. ದಾಸ್ತವಿಸ್ಕಿಯನ್ನು ನಾವು ಯಾವ ಕಾರಣಕ್ಕೆ ದೊಡ್ಡ ಕಾದಂಬರಿಕಾರ ಎಂದು ಹೇಳ್ತೀವಿ? ಅವನ ಕ್ರೈಮ್ ಆಂಡ್ ಫನಿಷಮೆಂಟ್ ಓದಿರಬಹುದು ನೀವು. ಅದ್ರೊಳ್ಗೆ ಅವನು ಕ್ರೈಮ್ ಮಾಡ್ಬಿಟ್ಟು, ಕ್ರಮೇಣಾ ಆ ಪಾತ್ರಕ್ಕೆ ಪಾಪ ಪ್ರಜ್ಞೆ ಕಾಡಲಿಕ್ಕೆ ಶುರುವಾಗುತ್ತದೆ ಅಂದ್ರೆ, ಅವುಗಳನ್ನೆಲ್ಲ ಇಗ್ನೋರ್ ಮಾಡುತ್ತ ಅದ್ರಿಂದ ಏನಾಗುತ್ತೆ, ಇದರಿಂದ ಏನಾಗುತ್ತೆ ಅಂತ ಇಗ್ನೋರ್ ಮಾಡಲಿಕ್ಕೆ ಪ್ರಯತ್ನಿಸಿದರೂ ಕೊನೆಗೆ ಅವನು ಪೋಲೀಸ್‍ಗೆ ಹೋಗಿ ಶರಣಾಗುತ್ತಾನೆ. ಶಾಂತಿ ಸಿಕ್ಕುತ್ತೆ ಅವನಿಗೆ. ಶಿಕ್ಷೆ ಅವ್ರೇನಾದ್ರೂ ಕೊಡಲಿ. ಹೀಗೆ ಬರೀಬೇಕಾದ್ರೆ ದಸ್ತವಿಸ್ಕಿ ಎಷ್ಟು ಆಳಕ್ಕೆ ಇಳ್ದಿರಬೇಕು? ದಾಸ್ತಾವಿಸ್ಕಿ ಸತ್ತು ಹೋದಾಗ ರಷ್ಯಾದೊಳಗೆ ಮುವತ್ತು-ನಲವತ್ತು ಸಾವಿರ ಜನ ಅವನ ಫ್ಯುನರಲ್ಗೆ ಸೇರಿದ್ರು - ಎಲ್ಲ ಅಳ್ತಾ ಇದ್ರು, ನಮ್ಮೊಳಗಿನ ಎಲ್ಲವನ್ನೂ ಬರ್ದೀದಾನೆ ಇವನು. ಅವನು ಬಿಟ್ಟು ಇನ್ಯಾರು ಬರೀಲಿಕ್ಕೆ ಸಾಧ್ಯ? ಅದನ್ನು ಲೇಖಕ ಅನುಭವಿಸಬೇಕಾಗುತ್ತೆ.”
_______________________________________________________________
ಸಂದರ್ಶಕ: “ನೀವು ಎಲ್ಲ ಕಾದಂಬರಿಗಳಿಗೂ ಬಹಳಷ್ಟು ಸಂಶೋಧನೆ ಮಾಡುತ್ತೀರಿ. ಆ ಹುಡುಕಾಟದಲ್ಲಿ ನಿಮ್ಮ ನಿರೀಕ್ಷೆಗೆ ವಿರುದ್ಧವಾದ ಸಂಗತಿ ಬಂದರೆ ಏನು ಮಾಡುತ್ತೀರಿ?”
ಎಸ್.ಎಲ್.ಬಿ: ”ನಾನು ಅಕ್ಸೆಪ್ಟ್ ಮಾಡಿಕೊಳ್ಳುತ್ತೀನಿ.”
ಸಂದರ್ಶಕ: “ಆಗ ಆ ಕಾದಂಬರಿಯ ಹರಿವಿನಲ್ಲಿ ಬದಲಾವಣೆ ಮಾಡಬೇಕಾಗಬಹುದು.”
ಎಸ್.ಎಲ್.ಬಿ: “ಇಲ್ಲ ನಾನು ಮೊದಲು ಕಾದಂಬರಿಯ ಕುರಿತು ಡಿಸೈಡ್ ಮಾಡಿಕೊಂಡಿರುವುದಿಲ್ಲ. ಐ ಅಪ್ರೋಚ್ ವಿತ್ ಎ ಫ್ರೀ ಮೈಂಡ್. ನನಗೆ ಮುಖ್ಯವಾಗಿ ಬೇಕಾಗಿದ್ದೇನೆಂದರೆ ಆ ಅವಧಿಯಲ್ಲಿ ಇದ್ದ ಸಾಮಾಜಿಕ process ಏನು ಅನ್ನುವುದನ್ನು ಫಸ್ಟ್ ಗ್ರಾಸ್ಪ್ ಮಾಡ್ತೀನಿ.”
ಸಂದರ್ಶಕ: “ಹಾಗಾದ್ರೆ ಒಂದು ಫ್ಲಾಟ್ ಅಂತ ಮೊದ್ಲೇ ಡಿಸೈಡ್ ಮಾಡಿಕೊಳ್ಳೋದಿಲ್ವಾ?”
ಎಸ್.ಎಲ್.ಬಿ:: ಒಂದು ವೇಗ್ ಐಡಿಯಾ ಇರತ್ತೆ, ಬರೀತಾ ಬರೀತಾ ಅದು clarify ಆಗುತ್ತಾ ಹೋಗತ್ತೆ. ಆಮೇಲೆ ಓದುಗರು “ಓ, ಇದು ಪ್ಲಾಟ್” ಅಂತ ಅನ್ನಬಹುದು. ನಾನು ಇದನ್ನೇ ಫ್ಲಾಟ್ ಅಂದಿಟ್ಟುಕೊಂಡಿರೋದಿಲ್ಲ.”
_______________________________________________________________
ಸಂದರ್ಶಕ: “ನಿಮ್ಮ ಕಾದಂಬರಿಗಳೆಲ್ಲವೂ ಜನಪ್ರಿಯ ಕಾದಂಬರಿಗಳೇ. ಜನರ ನಾಡಿಮಿಡ್ತ ಚೆನ್ನಾಗಿ ಗೊತ್ತು. ನಿಮ್ಮ ಬಗ್ಗೆ ಜನರಿಗೂ ಅಪಾರ ವಿಶ್ವಾಸ. ಹೀಗಿರುವಾಗ ಆವರಣದಲ್ಲಿ ಪ್ರಕಟಿಸಿದ ರೆಫೆರನ್ಸ್‍ಗಳು ಜನರಿಗಾಗಿಯೇ ಅಥವಾ ವಿಮರ್ಶಕರಿಗಾಗಿಯೇ?”
ಎಸ್.ಎಲ್.ಬಿ:: “ಆವರಣದಲ್ಲಿ ನಾನು ಯಾಕೆ ರೆಫೆರೆನ್ಸ್ ಕೊಟ್ಟಿದೀನಿ ಅಂದ್ರೆ, ನಮ್ಮಲ್ಲಿ ಈ ಲೆಫ್ಟಿಸ್ಟ್‍ಗಳು ಇದಾರಲ್ಲ, ಅವರಿಗೆ ಒಂದು ಶಬ್ದ ಇಂಗ್ಲಿಷ್‍ನಲ್ಲಿ ಬಳಸ್ತಾರೆ - ನೆಗೇಷನಿಸಂ ಅಂತ. ನೀವು ಏನು ಹೇಳಿದ್ರೂ ಕೂಡ ಅದನ್ನು ನೆಗೇಟ್ ಮಾಡೋದು. ವಾಟ್ ಇಸ್ ದ ರೆಫೆರೆನ್ಸ್? ಅಂತ ಅನ್ನೋದು. ಹಿಸ್ಟರಿಯನ್ಸ್ ಹ್ಯಾವ್ ರಿಜೆಕ್ಟೆಡ್ ಇಟ್ ಅಂತ ಅಂದ್ಬಿಡೋದು. ಯಾವ ಇತಿಹಾಸಜ್ಞರು ಅನ್ನೋದು ಇವರಿಗೂ ಗೊತ್ತಿರೋದಿಲ್ಲ. ಈ ತರಹದಲ್ಲಿ ಉಢಾಫೆ ಮಾಡೋದು ಪ್ರವೃತ್ತಿಗೆ ನೆಗೇಷನಿಸಂ ಅಂತಾರೆ. ಅದು ಇಂಡಿಯಾದಲ್ಲಿ ಬಹಳ ಇದೆ. ಕಾನ್ರ್ರಡ್ ಎಲ್ಸ್ಟ್ ಅಂತ, ಅವನು ಈ ಶಬ್ದನ ಬಳಸಿರೋನು. ಈ ಕಾದಂಬರಿಯನ್ನು ವಿತೌಟ್ ರೆಫೆರೆನ್ಸ್ ಕೊಟ್ಟಿದ್ರೆ ಲೆಫ್ಟಿಸಿಟ್ ಮತ್ತು ಎಲ್ರೂನು ಸೇರ್ಕೊಂಡು ಇವನು ಬುರುಡೆ ಬರ್ದಿದಾನೆ ಅಂತ ಪ್ರಚಾರ ಮಾಡಿಬಿಡ್ತಾ ಇದ್ರು. . ಅಥೆಂಟಿಸಿಟಿಗೋಸ್ಕರವಾಗಿ ವಿಥಿನ್ ದ ಟೆಕ್ಸ್ಟ್ ರೆಫೆರೆನ್ಸ್ ಕೊಟ್ಟಿದ್ದೀನಿ, ನಂತರನೂ ಕೊಟ್ಟಿದೀನಿ. ಇವೆಲ್ಲವನ್ನೂ ಓದಿ ನನ್ನನ್ನು ರೆಪ್ಯೂಟ್ ಮಾಡ್ಬೇಕು. ಆದ್ರೆ ಇವೆಲ್ಲ ಸತ್ಯವಾದದ್ದು. ಅದ್ಕೇನು ಶುರು ಮಾಡಿದ್ರು ಅಂದ್ರೆ ಅದರ ಅಗತ್ಯ ಏನಿತ್ತು ಅಂತ. ಆದ್ರೆ ಅದು ಕ್ಲಿಕ್ ಆಗಲಿಲ್ಲ. ಕಲಿತ ಮಂದಿ ಇವತ್ತೂ “ಈ ರೀತಿಯ ಕಾದಂಬರಿ ನಮ್ಮ ಕಣ್ಣು ತೆರೆಸ್ತು, ಇಷ್ಟೆಲ್ಲ ಗೊತ್ತೇ ಇರಲಿಲ್ಲ.” ಇದನ್ನು ಬರೀಲಿಕ್ಕೆ ಎಷ್ಟು ಗುಂಡಿಗೆ ಇರಬೇಕು? ಅಂತ ಹೇಳಿದ್ರು. ಎಷ್ಟೋ ಜನ “ಸಾರ್, ನೀವು ಒಬ್ಬೊಬ್ಬ್ರೇ ಹೊರಗೆ ಹೋಗಬೇಡಿ ಅಂತ ಸಲಹೆ ಮಾಡಿದ್ರು. ಪೇಜಾವರ್ ಸ್ವಾಮಿಗಳು, ಹದಿನೈದು ದಿವಸ ಆಗಿತ್ತು ಆವರಣ ಬಿಡುಗಡೆಯಾಗಿ. ನನ್ನ ಬಗ್ಗೆ ಅಭಿಮಾನ ಇಟ್ಕೊಂಡವರು, ನನಗೆ ಪೋನ್ ಮಾಡಿ ಹೇಳಿದ್ರು, “ನಿಮ್ಮ ಆವರಣವನ್ನು ನಾವು ಓದಿದ್ದೇವೆ, ನಿಮಗೆ ನಾವು ಒಂದು ಸಲಹೆ ಕೊಡಲೇಬೇಕು. ನೀವು ದಿನಾ ಬೆಳಿಗ್ಗೆ ಬೇಗ ಎದ್ದು ದಿನಾ ವಾಕಿಂಗ್‍ಗೆ ಹೋಗುವ ಹವ್ಯಾಸ ಉಂಟು ಅಂತ ಕೇಳಿದ್ದೇವೆ. ಇನ್ನುಮೇಲೆ ಕತ್ತಲಲ್ಲಿ ಹೋಗಬಾರ್ದು. ವಾಕಿಂಗ್‍ಗೆ ಹೋಗುವಾಗ ಯಾರದರೂ ಒಬ್ಬ ಸ್ನೇಹಿತನನ್ನು ಜೊತೆಗೆ ಕರೆದುಕೊಂಡು ಹೋಗಬೇಕು ನೀವು. ಇದನ್ನು ನೀವು ಎರಡು ಮೂರು ತಿಂಗಳಾದ್ರೂ ಪಾಲಿಸಬೇಕು ನೀವು.” ಅಂತ ಹೇಳಿದ್ರು.. ರೆಫರೆನ್ಸ್ ಮತ್ತು ಸಂಶೋಧನೆ ಇಲ್ಲದೇ ಒಂದು ವಾಕ್ಯಾನೂ ಇಲ್ಲ, ಆ ಕಾದಂಬರಿಯಲ್ಲಿ.”
_______________________________________________________________
ಸಂದರ್ಶಕ:: “ಇದೇ ವಿಚಾರವಾಗಿ ನೀವೇ ಇನ್ನೊಂದು ಕಡೆ ಹೇಳ್ತಿದೀರಾ, ನೀವು ಬರೆದ್ ನಾವೆಲ್ ಪ್ರಕಾರನೇ ಡಿ ವಿಂಚಿ ಕೋಡ್ ನಾವೆಲ್ ಬರೆದ. ಅದರಲ್ಲಿ ಅವನು ಇಡೀ ಕ್ರಿಶ್ಚಿಯಾನಿಟಿಗೇ ಒಂದು ಪ್ರಶ್ನಾರ್ಹ ಸಂಗತಿಯನ್ನು ತರ್ತಾನೆ. ಆದ್ರೆ ಅವರೆಲ್ಲಾ ಆ ತರಹ ರಿಯಾಕ್ಟ್ ಮಾಡಿಲ್ಲ. ನಮ್ಡೇಶದಲ್ಲಿ ಮಾತ್ರ ಈ ತರಹ ರಿಯಾಕ್ಟ್ ಮಾಡ್ತಿದಾರೆ. ಯಾಕೆ?”
ಎಸ್.ಎಲ್.ಬಿ:: “ವೆಸ್ಟರ್ನ್ ಸಮಾಜ ಇಂತಹ ವಿಷಯಗಳಲ್ಲಿ ಬಹಳಷ್ಟು ಮೆಚುರ್ಡ್ ಆಗಿದೆ. ವೆಸ್ಟನಲ್ಲಿ ಸೈನ್ಸ್ ಹ್ಯಾಸ್ ಟೇಕನ್ ಅಪ್ಪರ್ ಹ್ಯಾಂಡ. ಕೆಲವು ಊರುಗಳಲ್ಲಿ ಕೆಲವು ಹಳೆ ಸಂಪ್ರದಾಯ ಇರಬಹುದಾದರೂ, ಅಮೇರಿಕಾದಲ್ಲಿ ಕೆಲವೊಂದು ಸ್ಟೇಟ್ಗಳಲ್ಲಿ ಇನ್ನೂನೂವೆ ಡಾರ್ವಿನ್ ಥಿಯರಿಯನ್ನು ಸ್ಕೂಲಗಳಲ್ಲಿ ಟೀಚ್ ಮಾಡಕೂಡದು ಅಂತ ಹೆತ್ತವರು ಆಗ್ರಹ ಮಾಡ್ತಿದ್ದಾರೆ. ಅದು ಯಾವುದೋ ಕೆಲವು ಸ್ಟೇಟ್‍ಗಳಲ್ಲಿ ಅಷ್ಟೇನೆ. ನೀವು ವೆಸ್ಟರ್ನ್, ಅಮೇರಿಕಾ ಮತ್ತು ವೆಸ್ಟರ್ನ್ ಯೂರೋಪ್ ತಗೊಂಡ್ರೆ ಅವ್ರಿಗೆ ಚರ್ಚ್ ಅಶ್ಟಕಷ್ಟೆ. ಯಂಗ್ಶ್ಟರ್ಸ್ ಯಾರನ್ನು ಕೇಳಿದರೂ ದೇ ಡೋಂಟ್ ಕೇರ್ ಫಾರ್ ಚರ್ಚ್. ದೇ ಡೋಂಟ್ ಕೇರ್ ಫಾರ್ ಗಾಡ್. ಅವರು ಆ ಮಟ್ಟಿಗೆ ಬಂದಿರೋದ್ರಿಂದ ಅಲ್ಲಿ ಡಿ ವಿಂಚಿ ಕೋಡ್ ಬರೆದ್ರೂ ಅದನ್ನು ಬೇಕಾದಷ್ಟು ಜನ ಓದಿದ್ರು, ಮಾಡಿದ್ರು. ಆದ್ರೆ ಡಿ ವಿಂಚಿ ಕೋಡ್ ಒಂದು ಲಿಟರರಿ ವರ್ಕ ಆದ್ರೂ, ಕುತೂಹಲವನ್ನು ಕೊನೆಯವರೆಗೂ ಕಾಪಾಡಿಕೊಂಡು ಬಂದಿದ್ದಾನೆಯೇ ಹೊರತು ಹ್ಯೂಮನ್ ಕ್ಯಾರೆಕ್ಟರ್ ಆವರಣದಷ್ಟು ಬಂದಿಲ್ಲ. ಅದೊಂದು ಲಿಟರರಿ ಕ್ರಾಫ್ಟ್, ಆವರಣ ಒಂದು ಲಿಟರರಿ ವರ್ಕ್. ಸಲ್ಮಾನ್ ರಷ್ದೀಗೆ ಅಯತೊಲ್ಲಾ ಖೊಮೇನಿ ಮರಣ ದಂಡನೆ ಕೊಟ್ಟಾಗ, ಬ್ರಿಟೀಷ್ ಸರಕಾರ ಎಷ್ಟು ದಿವಸ ಅವನಿಗೆ ಸೆಕ್ಯೂರಿಟಿ ಕೊಟ್ತು! ಪ್ಲೇನ್ ಕ್ಲಾಥ್ ಪೋಲೀಸರನ್ನು ಕೊಟ್ಟು, ಒಂದು ಜಾಗದಲಿ ಇಡಲಿಕ್ಕೆ ಬಿಡದೆ, ಅವನ ಮೈಲ್ಗಳನ್ನೆಲ್ಲ ಕಲೆಕ್ಟ್ ಮಾಡಿ ಸಿಕ್ರೆಟ್ ಆಗಿ ಡಿಲೆವರಿ ಮಾಡೋದು ಈ ತರಹದಲ್ಲಿ ಮಾಡಿ ಅವನನ್ನು ಎಷ್ಟು ಕಾಪಾಡಿದೆ. ಅದು ಯಾಕೆ ಅಂದ್ರೆ, ಫ್ರೀಡಂ ಆಫ್ ಎಕ್ಪ್ರೆಷನ್. ಅದಕ್ಕೆ ಅವರು ಕೊಟ್ಟ ಗೌರವ ನಮ್ಮ ದೇಶದಲ್ಲಿ ಎಲ್ಲಿ ಕೊಡ್ತಾರೆ? ಅವನು ಯಾಕೆ ಬರೀಬೇಕಾಗಿತ್ತು? ಹಿ ಡಿಸರ್ವ್ಸ್ ದಟ್ ಅಂತಿದ್ರು ನಮ್ಮ ಕಾಂಗ್ರೆಸ್ ಸರಕಾರದವ್ರು. ಆವರಣಾದಿಂದ ನನಗೇನಾದ್ರೂ ಥ್ರೆಟ್ ಬಂದಿದ್ರೆ ಅಥವಾ ನನ್ನನ್ನು ಕೊಲೆ ಮಾಡಿದ್ರೆ “ಅವ್ನು ಯಾಕೆ ಬರೀಲಿಕ್ಕೆ ಹೋಗಿದ್ದ. ಬುದ್ಧಿ ಇರಲಿಲ್ಲ್ವಾ.” ಅಂತ ಸರಕಾರವೇ ಹೇಳ್ತಾ ಇತ್ತು. ಇವ್ರ ವ್ಯಾಲ್ಯೂಸ್ ಬೇರೆ, ಅವರ ವೆಲ್ಯೂಸೇ ಬೇರೆ.”
_______________________________________________________________
ಸಂದರ್ಶಕ: “ಐತಿಹಾಸಿಕ ಮತ್ತು ವೈಜ್ಞಾನಿಕ ಕಾದಂಬರಿಗಳಲ್ಲಿ ಕಲ್ಪನೆಗೆ ಇರುವ ಸ್ವಾತಂತ್ರ ಎಷ್ಟೂ? ಪುರಾವೆ ಒದಗಿಸಬೇಕೆ?”
ಎಸ್.ಎಲ್.ಬಿ: “ಯಾನ ಕಾದಂಬರಿ ಓದಿ, ಗೊತ್ತಾಗುತ್ತೆ.”
ಸಂದರ್ಶಕ: “ತನ್ನ ಸೃಷ್ಟಿಯ ಪಾತ್ರಗಳ ಪೋಷಣೆಯಲ್ಲಿ ತಾರತಮ್ಯವಹಿಸುವ ಸ್ವಾತಂತ್ರ ಲೇಖಕನಿಗಿದೆಯೇ? “
ಎಸ್.ಎಲ್.ಬಿ: “ಅವನು ತಾರತಮ್ಯ ವಹಿಸಬಾರದು. ಅದರೊಳಗೆ ಒಂದು objectivity ಅಂತ ಇರುತ್ತೆ. Objectivity ಹ್ಯಾಗೆ ಬರುತ್ತೆ? ಆ ಸನ್ನಿವೇಶದಲ್ಲಿ ಆ ಪಾತ್ರ ಹೇಗೆ behave ಮಾಡತ್ತೆ, ಆ ಪಾತ್ರದ education ಹ್ಯಾಗೆ ಇರುತ್ತೆ, ಅದರ ಸ್ವಭಾವ ಹ್ಯಾಗೆ ಇರುತ್ತೆ ಅದಕ್ಕೆ ತಕ್ಕನಾಗಿ ಅದು behave ಮಾಡಿಕೊಳ್ಳುತ್ತದೆ. ಅದಕ್ಕೆ ತಕ್ಕನಾಗಿ behave ಮಾಡಿಕೊಂಡು ಹೋಗುವ ಸ್ವಾತಂತ್ರವನ್ನು ಇವನು ಆ ಪಾತ್ರಗಳಿಗೆ ಕೊಡಬೇಕು. ಅದಕ್ಕೆ ತಕ್ಕನಾಗಿ ಕಥೆಯನ್ನು ಹೆಣಕೊಂಡು ಹೆಣಕೊಂಡು ಹೋಗ್ತಾ ಇರಬೇಕು. ಇವನ ಲೈಕ್ ಮತ್ತು ಡಿಸ್ಲೈಕ್ ತಕ್ಕನಾಗಿ ಪಾತ್ರ ವಿನ್ಯಾಸ ಮಾಡಬಾರದು.”
______________________________________________________________
ಸಂದರ್ಶಕ: “ಹೊಗಳಿಕೆ ತೆಗಳಿಕೆ ಎರಡು ಒಂದೇ ನಾಣ್ಯದ ಮುಖಗಳಿದ್ದಂತೆ. ಹಾಗಿದ್ದಲ್ಲಿ ಸಾಹಿತಿಯೊಬ್ಬ ಈ ದ್ವಂದ್ವ ಪ್ರತಿಕ್ರಿಯೆಯನ್ನು ಹೇಗೆ ಎದುರಿಸಬೇಕು?”
ಎಸ್.ಎಲ್.ಬಿ: ಹೊಗಳಿಕೆ ತೆಗಳಿಕೆ ಅನ್ನುವುದನ್ನು ಯಾರು ಮಾಡ್ತಾರೆ? ಈಗ ನೋಡಿ ಜನರಲ್ educated readers ಇರ್ತಾರಲ್ಲ, ಅವ್ರು ನಿಜಾವಾಗ್ಲೂವೆ ಸಹೃದಯರು. ಅವ್ರು emotional ಆಗಿ ಏನೂ ಮಾಡ್ಲಿಕ್ಕೆ ಹೋಗೂದಿಲ್ಲ. ಕಡೆಗೆ ಯಾವುದೋ ಗುಂಪಿನವರು ಹೊಗಳ್ತಾರೆ, ಇಲ್ಲ ತೆಗಳ್ತಾರೆ, ಇದನ್ನೆಲ್ಲಾ ignore ಮಾಡಬೇಕು.”
_____________________________________________________________
ಸಂದರ್ಶಕ: “ಬರೆಯುವುದೇ ನನ್ನ ಧರ್ಮ ಎಂದು ಹೇಳಿದರು ರಾಜಾರಾವ್. ಈ ಹೇಳಿಕೆಗೆ ನೀವೇ ಸಾಕ್ಷಾತ್ ನಿದರ್ಶನ. ಸಾಹಿತಿ ಈ ಧರ್ಮ ಪಾಲನೆಗೆ ಪಣಕೊಟ್ಟು ನಿಂತಾಗ ತೊಂದರೆಗಳು ನೂರೆಂಟು. ನಿಮ್ಮ ಅನಿಸಿಕೆ ಏನು?”
ಎಸ್.ಎಲ್.ಬಿ:: “ಈ ಧರ್ಮ ಪಾಲನೆಗೆ ಬಂದಾಗ ಏನು ತೊಂದರೆಗಳು ಬರುತ್ತೆ? ಅವನು ಮಾರ್ಕೆಟ್ ಅಲ್ಲಿ ಹೆಚ್ಚು ಸಕ್ಸಫುಲ್ ಆಗ್ಬಹುದು ಇಲ್ಲ ಆಗ್ದೇ ಇರಬಹುದು. ಬಟ್ ಅವನು ಸರಿಯಾದ ವರ್ಕನ್ನು ಕ್ರಿಯೇಟ್ ಮಾಡಿದ್ರೆ ಅದಕ್ಕಿರೋ ವೆಲ್ಯೂ ಇದ್ದೇ ಇದೆ. ಈಗ ಬಂತಲ್ಲ, ಆ Suitable Boy, ವಿಕ್ರಮ್ ಸೇಟ್ ಬರೆದಿರುವ ಕಾದಂಬರಿ. ವಿಕ್ರಮ್ ಸೇಟ್‍ನಷ್ಟು ರಾಜಾರಾವ್ ಮಾರ್ಕೆಟ್ ಅಲ್ಲಿ ಸಕ್ಸಸ್ ಆಗಲಿಲ್ಲ. ಹಾಗಾದ್ರೆ ವಿಕ್ರಮ್ ಸೇಟ್ ರಾಜಾರಾವ್ ಗಿಂತ ಬೆಟರ್ ರೈಟರ್ ಅಂತಿರೇನು ನೀವು? ರಾಜಾರಾವ್ ಬರ್ದಿದ್ದು ಉಳಿಯುತ್ತೆ. It will be considered as a classic. ತೊಂದರೆಗಳು ನೂರೆಂಟು, ಅಂದ್ರೇನು, ರಾಜಾರಾವ್‍ಗೆ ಫೈನಾನ್ಷಿಯಲ್ ಪ್ರಾಬ್ಲೆಮ್ ಇತ್ತು. ಅವ್ರು ಜೀವನಕ್ಕೋಸ್ಕರವಾಗಿ ಯೂನಿವರ್ಸಿಟಿಯಲ್ಲಿ ಒಂದು ಸೆಮಿಸ್ಟರ್ ಪಾಠ ಮಾಡೋರು. ಮತ್ತೆ ಅವ್ರ ಅಡುಗೇನ ಅವ್ರೇ ಮಾಡ್ಕೊಂಡು ತಿನ್ನೋರು. ನಾನು ಅವ್ರ ಟೆಕ್ಸಾಸಲ್ಲಿ ಮನೆಗೆ ಹೋಗಿದ್ದೇನೆ. ಬಹಳ ಸಿಂಪಲ್ ಆದ ಮನೆ. ಅಡುಗೆ ಮಾಡ್ತೀನಿ, ಕೂತ್ಕೊಳ್ಳಿ, ಕೂತ್ಕೊಳ್ಳಿ ಅಂತ ಹಾಗೆ ಹೇಳಿದ್ರು. ನಾನು ಅವ್ರ ಅಡುಗೆ ಮನೆ ನೋಡ್ದೆ.ಪಾಪ, ಇನ್ನೇನು ಇಟ್ಕೊಂಡಿರ್ತಾರೆ? It’s allright. He had accepted frugal life consciously. He knew what he was doing.”
______________________________________________________________
ಸಂದರ್ಶಕ: “ಹಿಂದಾದ ಚರಿತ್ರೆಯನ್ನು ಒಂದು ಬರಹಗಾರ ಪುರಾವೆಗಳಿಂದ ದಾಖಲಿಸಲು ಮಾತ್ರ ಸಾಧ್ಯ. ಮುಂದಾದ ಮತ್ತು ಮುಂದಾಗುವ ಘಟನೆಗಳನ್ನು ಪ್ರಚೋದನೆಯ ರೂಪದಲ್ಲಿ ಕಲ್ಪಿಸಿ ತಿರುವು ಕೊಡಲು ಬರಹಗಾರನಿಗೆ ಹಕ್ಕಿದೆಯೆ? ಇಂತಹ ಹಕ್ಕುಗಳನ್ನು ಸರಕಾರ ಕಸಿದುಕೊಂಡರೆ ಬರಹಗಾರ ಏನು ಮಾಡಬೇಕು?”
ಎಸ್.ಎಲ್.ಬಿ:: ನೋಡಿ, ಮುಂದಾದಕ್ಕೆ ಪ್ರಚೋದನೆ ಕೊಡೋಕ್ಕೆ ಒಂದು ಉದಾಹರಣೆ ಅಂದ್ರೆ ಮ್ಯಾಕ್ಸಿಮ್ ಗಾರ್ಕಿ ಅಂತ ಬರ್ದಿದ್ದಾನೆ ಅಲ್ಲ, ಮದರ್ ಅನ್ನೋದು. ರಷ್ಯದಲ್ಲಿ ಕಮ್ಯೂನಿಸಂ ಮುವ್ಮೆಂಟ್ ನಡೆಯುತ್ತಿದ್ದವಾಗ ಅವನು ಆ ಕಾದಂಬರಿ ಬರೆದ. ಅದಕ್ಕೆ ಸಾಕಷ್ಟು ಪ್ರಸಿದ್ಧಿಯನ್ನೂ ಮಾಡಿದ್ರು, ಕಮ್ಮ್ಯುನಿಸ್ಟ್ ಪಾರ್ಟಿಯೊಳಗೆ. ಅದ್ರೆ ಅದರಿಂದ ಲೇ ಕಮ್ಮ್ಯುನಿಸ್ಟ್ ರೆವಲ್ಯೂಶನ್ ಆಯ್ತು ಅಂತಲ್ಲ. ಕಮ್ಮ್ಯುನಿಸ್ಟ್ ರೆವೆಲ್ಯೂಶನ್ ಆಗಿದ್ದು ಬಂದೂಕಿನ ಮುಖಾಂತರ. ಸಾಹಿತಿಗಳು ಹೇಳ್ತಾರೆ, ಇದು ಕಾದಂಬರಿಯಿಂದ ರಷ್ಯಾದಲ್ಲಿ ರೆವೆಲ್ಯೂಶನ್ ಆಯ್ತು ಅಂತ, ಅದು ಸಾಹಿತಿಗಳು ಬುರುಡೆ ಬಿಟ್ಕೊಳ್ಳೋದು ಅಷ್ಟೆನೆ. ಅವೆಲ್ಲ ಏನು ಆಗೂದಿಲ್ಲ. ಆದ್ರೆ ಇವನು ಪ್ರಾಮಾಣಿಕವಾಗಿ ಎಲ್ಲನೂ ತಿಳ್ದು ಮಾಡ್ಬೇಕು. ಆ ಕಾಲ್ದೊಳಗೆ ರಷ್ಯಾದಲ್ಲಿ economic situation ಒಳಗೆ ಹಳೇ ಜಮೀನ್ದಾರಿ ಪದ್ಧತಿಗಳು ಎಲ್ಲ ಇತ್ತು. ಸಾವಿರಾರು ಎಕ್ರೆ ಭೂಮಿ ಒಬ್ಬನ ಕೈಕೆಳಗೆ ಇರೋದು. ಆಮೇಲೆ ಹೊಸ ಮಾರ್ಕ್ಸ್ ಸಿದ್ಧಾಂತದಲ್ಲಿ “ಇಂಡಸ್ಟ್ರಿಯಲ್ ರೆವೊಲ್ಯೂಷನ್ ಆದ ನಂತರದೊಳಗೆ ಕಮ್ಯೂನಿಸ್ಟ್ ಬರುತ್ತೆ ಅಂತ ಹೇಳಿದ್ದ. ಕ್ಯಾಪಟಲಿಸ್ಟ್ ಎಕ್ಸ್‍ಪ್ಲಾಯಿಟ್ ಮಾಡುವಂತ ಸ್ಥಿತಿ ಬರಬೇಕಾದ್ರೆ ಮೊದಲು ಇಂಡಶ್ತ್ರಿಯಲೈಜ್ ಆಗಬೇಕು. ಅವನು ಅದನ್ನು ಇಂಗ್ಲೆಂಡಲ್ಲಿ ಕೂತ್ಕೊಂಡು ಮಾಡ್ದ. ಆದ್ರೆ ಇವನು ಮಾಡಿದ ಸಿದ್ಧಾಂತ ಇಂಗ್ಲೆಂಡ್ ಒಳಗೆ ಚಾಲ್ತಿಯಲ್ಲಿ ಬರಲೇ ಇಲ್ಲ. ಯಾಕೆಂದರೆ ಸರಕಾರ ಎಚ್ಚೆತ್ತುಗೊಂಡು ವೆಲ್ಫೆರ್ ಮೆಸರ್ಸ್‍ನ್ನು ಇಂಪ್ಲಿಮೆಂಟ್ ಮಾಡ್ತು. ಇಷ್ಟು ಗಂಟೇನೇ ಕೆಲಸ ಮಾಡ್ಬೇಕು, ಫ್ಯಾಕ್ಟರಿ ಹತ್ರದಲ್ಲೇ ಮನೆಗಳನ್ನು ಕಟ್ಬೇಕು, ಫ್ಯಾಕ್ಟರಿ ಹತ್ರದಲ್ಲೇ ಮಕ್ಕಳಿಗೆ ಶಾಲೆಗಳನ್ನು ನಡೆಸ್ಬೇಕು.. ಈ ತರಹ ಸರಕಾರವೇ ಶುರು ಮಾಡಿದಮೇಲೆ ಅಲ್ಲಿ ರೆವಲ್ಯೂಷನ್ ಬರಲಿಲ್ಲ. ಜನರು ಅರ್ಥ ಮಾಡ್ಕೊಂಡ್‍ಬಿಟ್ರು. ನಾವು ಕಷ್ಟ ಪಟ್ಟು ದುಡ್ದು ನಾವು ಹೆಚ್ಚಿಗೆ ಪ್ರೊಡ್ಯೂಸ್ ಮಾಡಿ, ಹೆಚ್ಚಿಗೆ ಎಕ್ಸ್ಪೋರ್ಟ್ ಮಾಡಿದ್ರೆ ನಮ್ಮ ದೇಶಕ್ಕೂ ಅನುಕೂಲಗಾಗುತ್ತೆ ನಮ್ಗೂ ಅನ್ಕೂಲ ಆಗುತ್ತೆ ಅಂತ ಜನನೇ ಅರ್ಥಮಾಡಿಕೊಂಡರು. ಅಲ್ಲಿ ಮಾರ್ಕ್ಸಿಸಂ ಬಲೇ ಇಲ್ಲ. ಲೆನಿನ್ ಏನು ಮಾಡ್ದ - ಹೆಸರಿಗೆ ಮಾರ್ಕ್ಸ್ ನ ಹೆಸರಿಟ್ಕೊಂಡು revolution through gun ಮಾಡ್ದ. ಅದು ಮಾರ್ಕ್ಸ್ ಹೇಳಿದ್ದಲ್ಲ, ಲೆನಿನ್ ಹೇಳಿದ್ದು. ಅಂದ್ರೆ ರಶ್ಯದಲ್ಲಿ ವಾಸ್ತವವಾಗಿ ಬಂದದ್ದು ತ್ರು ಗನ್. ಚೈನಾದಲ್ಲಿ ಬಂದದ್ದೂ ತ್ರು ಗನ್, ಮಾಕ್ಸಿಮ್ ಗಾರ್ಕಿ ಬರೆದ ಕಾದಂಬರಿ ಮೂಲಕವಾಗಿ ಅಂತೆಲ್ಲ ಅನ್ನುದು ಸುಳ್ಳು.”
______________________________________________________________
ಸಂದರ್ಶಕ: “ಇಪ್ಪತ್ತೊಂದನೇ ಶತಮಾನದಲ್ಲಿ ಹುಟ್ಟಿದ ಮಕ್ಕಳು ಇನ್ನೆರಡು ವರ್ಷಗಳಲ್ಲಿ ಫ್ರೌಢರಾಗುತ್ತಾರೆ. ಈ ಪೀಳಿಗೆ ನಾವೇಕೆ ಕನ್ನಡ ಸಾಹಿತ್ಯ ಓದಬೇಕು ಅಂತ ಕೇಳಿದರೆ ನಿಮ್ಮ ಉತ್ತರವೇನು?”
ಎಸ್.ಎಲ್.ಬಿ: “ವಾಸ್ತವವಾಗಿ ಕರ್ನಾಟಕದೊಳಗೆ ಎಲ್ಲರನ್ನೂ ಭಾಧಿಸ್ತಾ ಇರೋದು ನಮ್ಮ ಕಲ್ಚರು, ನಮ್ಮತನ ಉಳೀಬೇಕಾದ್ರೆ ನಮ್ಮ ಭಾಷೆ ಉಳೀಬೇಕಾ? ಅನ್ನುವ ಪ್ರಶ್ನೆ ಬರೀ ಕನ್ನಡ ಭಾಷಿಕರನ್ನೇ ಅಷ್ಟೇ ಅಲ್ಲ ಎಲ್ಲಾ ಭಾಷೆಗಳ ಜನರನ್ನೂ ಭಾಧಿಸ್ತಾ ಇದೆ. ಇಂಗ್ಲಿಷ್ ಇಲ್ಲದೇ ಹೋದ್ರೆ ನಮ್ಮ ಸೈನ್ಸ್ ಆಂಡ್ ಟೆಕ್ನಾಲಾಜಿ ಬೆಳೆಯೂದೇ ಇಲ್ಲ, ಇದು absolutely stupid ಅದು. ಸೈನ್ಸ್ ಆಂಡ್ ಟೆಕ್ನಾಲಜಿ ಭಾರತೀಯರಿಗೆ ಯಾವುದೇ ದೇಶದ ಜನರಿಗೆ ಬರಬೇಕಾದರೆ ಆ ಕಾನ್ಸೆಪ್ಟ್ ಮುಖ್ಯ ಹೊರತೂ ಭಾಷೆಯಲ್ಲ. ನಾವು ನಮ್ಮ ಭಾಷೆಯೊಳಗೆ ಮಕ್ಕಳಿಗೆ ಕಲಿಸಿದರೆ ಅದು ಅವ್ರಿಗೆ ಸರಿಯಾಗಿ ತಲೆಯೊಳಕ್ಕೆ ಹೋಗುತ್ತೆ ಅದು. ಕಾನ್ಸೆಪ್ಟ್ ಚೆನ್ನಾಗಿ ಬಂದ ಮೇಲೆ ಬೇರೆ ಭಾಷೆಯಲ್ಲಿ ಅದನ್ನು ಬರೀಬಹುದು, ಓದಬಹುದು. ಅದ್ಕೇನು ಇಂಗ್ಲಿಷ ಬೇಡ ಅಂತಲ್ಲ. ಬೇಸಿಕ ಆನೇ ಇವರು ಮಾಡಿದ್ರೆ ಎರಡು ತರದ ಹೊರೆಯನ್ನು ನಾವು ಹೊರೆಸ್ತೀವಿ. ಗೊತ್ತಿಲ್ದೇ ಇರೋ ಭಾಷೆಯ ಒಳಗೆ ಗೊತ್ತಿಲ್ಲದೇ ಇರೋ ವಿಷ್ಯನ ಪಾಠ ಮಾಡೋಕೆ ಹೋದ್ರೆ ಮಕ್ಕಳಿಗೆ ಗೊತ್ತಾಗೋದು ಹ್ಯಾಗೆ? ಇದನ್ನು ಜನರೂ ಅರ್ಥ ಮಾಡಿಕೊಳ್ಳೋದಿಲ್ಲ, ರಾಜಕಾರಣಿಗಳಂತೂ ಕಾಸು ಮಾಡ್ಬೇಕು, ತಾವೇನೆ. ಇಂಗ್ಲಿಷ್ ಮಿಡಿಯಮ್ ಸ್ಕೂಲ್ ಮಾಡಿ ಕೊಟ್ಟು ಅದ್ರೊಳ್ಗೆ ಎಲ್ಲ admission fee and donation ದುಡ್ದು ಮಾಡ್ಕೊಳ್ಳೊದಕ್ಕೆ ಮಾಡ್ತಿದ್ದರೆ ಹೊರತೂ ಇದರಲ್ಲಿ ನಿಜವಾದ ಎಜುಕೇಶನ್ ಬಗ್ಗೆ ಕಾಳಜಿ ಇಲ್ಲ. ಹೈಸ್ಕೂಲ್ ಪೂರ್ತಿ ನಾನು ಕನ್ನಡ ಮೀಡಿಯಮ್‍ನೊಳಗೇ ಓದಿದ್ದು. ನನಗೆ ಕಾನ್ಸೆಪ್ಟ್ ಎಲ್ಲ ಅರ್ಥ ಆಗಿದ್ದು ಕನ್ನಡದೊಳಗೇನೆ. ನನಗೆ ಇಗ್ಲೂನೂ ಎಂಟೆಟ್ಲೆ ಅರವ್ತ್ನಾಲ್ಕು ಅಂತ ಬರುತ್ತೆ ಹೊರತೂ ಇಂಗ್ಲಿಷಿನೊಳಗಲ್ಲ. ೩೨-೩೩ ವರ್ಷಗಳ ಕಾಲ ಇಂಗ್ಲಿಷನ ಮೂಲಕವಾಗಿ ಪಾಠ ಮಾಡಿದ್ದೀನಿ. ಫಿಲಾಸಾಫಿಕಲ್ ಕಾನ್ಸೆಪ್ಟ್‍ನ್ನೂ ನಾನು ಕನ್ನಡದಲ್ಲಿ ಹೆಚ್ಚು ಸಮರ್ಥವಾಗಿ ಹೇಳಬಲ್ಲೆ, ಹಿಂದಿಯಲ್ಲಿ ಹೇಳಬಲ್ಲೆ ನಾನು. ಇಂಗ್ಲಿಷನೊಳಗೆ ವೆಸ್ಟರ್ನ್ ಕಾನ್ಸಪ್ಟ್‍ನ್ನು ಹೇಳಬಲ್ಲನೇ ಹೊರತೂ ನಮ್ಮ ಕಾನ್ಸೆಪ್ಟ್ ಹೇಳಲಿಕ್ಕೆ ಆಗೋದಿಲ್ಲ. ಕನ್ನಡದಲ್ಲೇ ನಾನು ಏಕೆ ಕಾದಂಬರಿ ಬರಿತೀನಿ? ಹನ್ನೆರಡು ವರ್ಷಗಳ ಕಾಲ ಕರ್ನಾಟಕದ ಹೊರಗಡೆ ಇದ್ದೋನು. ಗುಜರಾತಿನಲ್ಲಿ ಆರು ವರ್ಷ ಇದ್ದೋನು, ದೆಲ್ಲಿಯಲ್ಲಿ ಇದ್ದೆ ನಾನು. ನಾನು ಕನ್ನಡದಲ್ಲೇ ಏಕೆ ಬರಿತೀನಿ? ದೆಲ್ಲಿಯಲ್ಲಿ ಇದ್ದಾಗ ಅಲ್ಲಿ “ನೀವ್ಯಾಕೆ ಕನ್ನಡದಲ್ಲಿ ಬರೀತಿದ್ದಿರಾ? ಇಂಗ್ಲೀಷನಲ್ಲಿ ಬರೀರಿ. ನಿಮಗೆ ರೆಕಾಗ್ನಿಷನ್ ಸಿಗುತ್ತೆ. ” ಅಂತ ಹೇಳೋರು. ಇಂಗ್ಲಿಷನಲ್ಲಿ ಬರೀಲಿಕ್ಕೆ ನನಗೆ ಆಗ್ತಿರಲಿಲ್ಲ. ಯಾಕೆಂದ್ರೆ ನನ್ನ emotions express ಮಾಡೋದು ಆಗ್ತಿರಲಿಲ್ಲ. ಹಿಂದೀಲಿ ಕೂಡ ಬರೀಲಿಕ್ಕೆ ಆಗ್ತಿರಲಿಲ್ಲ. ದೆಲ್ಲಿ ಬಿಟ್ಟು ಕರ್ನಾಟಕಕ್ಕೆ ಹೋಗ್ಬೇಕು ಅಂತ ಜೀವ ಹಪ್‍ಗುಡ್ತಾ ಇತ್ತು ನನಗೆ. ಸಾಹಿತ್ಯಕ್ಕೋಸ್ಕರವಾಗಿ ಜಾಬ್‍ಗೆ ರಾಜಿನಾಮೆ ಕೊಟ್ಟು ಹೋಗೋಣವೇ ಕರ್ನಾಟಕಕ್ಕೆ ಅಂತ ವಿಚಾರಮಾಡಿದ್ದು ಉಂಟು. ಅಲ್ಲಿ ಹೋದ್ರೆ ಜೀವನಕ್ಕೇನು ಮಾಡುವುದು. ಪ್ರೊಫೆಶನ್ನಲ್ಲಿ ಇನ್ನೂ ಮುಂದುವರೆಯುವ ಅವಕಾಶ ಇತ್ತು. ಕನ್ನಡದವ್ರೊಬ್ಬರು ಡೈರೆಕ್ಟರ್ ಬಂದ್ರು, ಎಸ್. ವಿ. ಚಂದ್ರಶೇಖರ ಅಯ್ಯ ಅಂತ. ಸಕಲೇಶಪುರದವರು ಅವರು. ಅವ್ರತ್ರ ನನ್ನನ್ನು ಮೈಸೂರಿಗೆ ಟ್ರಾನ್ಸ್ಪರ್ ಮಾಡಿಕೊಡಿ ಅಂತ ಕೇಳ್ಬೇಕು ಅಂದ್ಕೊಂಡಿದ್ದೆ. ಅವ್ರೇನು ತಿಳ್ಕೊತಾರೋ ಅಂತ ಸುಮ್ಮನಾದೆ, ಹೋಗಿ ಕೇಳೋಣ ಅಂತ ತೀರ್ಮಾನ ಮಾಡ್ದೆ. ಅವ್ರ ಪಿ.ಏ. ಗೆ ಪೋನ ಮಾಡ್ದೆ. “ನಾನು ಸಾಹೇಬ್ರನ್ನು ನೋಡ್ಬೇಕು, ನನಗೆ ಅಪಾಯಿಂಟ್‍ಮೆಂಟ್ ಬೇಕಿತ್ತು.” ಐದು ನಿಮಿಷ ತಡೆದು ಅವನು ನನಗೆ ಪೋನ್ ಮಾಡಿ, “ಸಾಹೇಬ್ರು ಈಗ ಫ್ರೀ ಇದ್ದಾರೆ, ಬನ್ನಿ” ಅಂದ. ಹೋದೆ. “ಗುಡ್ ಆಫ್ಟರ್ನೂನ್ ಸರ್” ಅಂತ ಅಂದೆ. “ಕನ್ನಡದಲ್ಲೇ ಹೇಳಿ ಅಪ್ಪಾ” ಅಂದ್ರು. ಆಮೇಲೆ ಊಟಕ್ಕೆ ಕುಳಿತ್ಕೊಂಡೆ, ಪರಿಚಯ ಆಯ್ತು. ಸರ್ ನಿಮ್ಮನ್ನು ಮೀಟ್ ಮಾಡಿದ ತಕ್ಷಣದಲ್ಲೇ ಹೇಳೋಕ್ಕೆ ನನಗೂ ಸಂಕೋಚ ಆಗುತ್ತೆ, ಆದ್ರೆ ನನಗೆ ಮೈಸೂರಿಗೆ ಟ್ರಾಸ್ನ್ಫರ್ ಬೇಕು.” ಅದಕ್ಕೆ ಅವ್ರು “ಯೋಚ್ನೆ ಮಾಡೋಣ” ಅಂತ ಅಂದ್ರು. ಮಾರನೆ ದಿನ ನಮ್ಮ ಮನೆಗೆ ಊಟಕ್ಕೆ ಬನ್ನಿ ಅಂತ ಹೇಳಿದ್ರು ಅವರು. ಅವ್ರ ಮನೆಗೆ ಹೋದೆ, ಅವ್ರ ಹೆಂಡತಿ ಬಹಳ ಆತ್ಮೀಯವಾಗಿ ಕಂಡ್ರು. ಅವ್ರು ಹೇಳಿದ್ರು: “ನೀವು ಕನ್ನಡಿಗರೇ ಆಗಿದ್ಕೊಂಡು ನಮ್ಮ ಮನೆಗೆ ಬರ್ತೀರಾ ಅಂತ ಅಂದ್ಕೊಂಡು ಕಾಯ್ತಾ ಇದ್ರೆ ನೀವು ಬರ್ತಾ ಇಲ್ಲ, ಎಷ್ಟೋ ಜನ ನಿಮಗೆ ಜಂಭ ಅಂತಿದ್ರು. ನಿಜ ಮಾಡಿದ್ದೀರಿ ನೀವು.” ಎಂತ ಅಂದ್ರು. ನಾನು ಟ್ರಾನ್ಸ್ಫರ್ ಕೇಳಿದ್ರೆ, ಅವ್ರು ನನಗೆ ಅಡ್ವೈಸ್ ಮಾಡಲಿಕ್ಕೆ ಶುರುಮಾದಿದ್ರು, “ಯಾಕಪ್ಪಾ ಹೋಗ್ತೀರಾ? ಮೊಪ್ಯೂಸಲ್ ಪ್ಲೇಸ್‍ಗೆ ಯಾಕೆ ಹೋಗ್ತೀರಾ? ದೆಲ್ಲಿ ಎನ್.ಸಿ.ಆರ್.ಟಿ. ಯಲ್ಲಿ ಇಲ್ಲೇ ಇರಿ,” ಅವಾಗ ನಾನು ರೀಡರ್ ಆಗಿದ್ದೆ. “ಐ ವಿಲ್ ಮೇಕ್ ಯು ಪ್ರೊಫೆಸರ್, ಯುನೆಸ್ಕೋ ಪೋಸ್ಟಗಳು ಎಷ್ಟೋ ಇರುತ್ತೆ, ನಾನು ರೆಕಮಂಡ್ ಮಾಡಿದ್ರೆ ನಿಮಗೆ ಸಿಗುತ್ತೆ. ನಿಮ್ಮ ಸಂಬಳ, ನಿಮ್ಮ ಪೆನ್ಷನ್ ಸಹ ಡಾಲರ್ ಅಲ್ಲಿ ಸಿಗ್ತದೆ. ಆದ್ರಿಂದ ಯಾಕೆ ಹೋಗ್ತೀರಾ ಅಲ್ಲಿಗೆ, ಹಳ್ಳಿಗೆ” ಎಂತ ಹೇಳಿದ್ರು. ಆಗ ಮೈಸೂರು ಹಳ್ಳಿ ಅಂತನೇ ಹೇಳೋರು. “ಇಲ್ಲಾ ಸಾರ್, ನನಗೆ ಅದರಲ್ಲಿ ಯಾವುದೊಳಗೂ ಆಸಕ್ತಿ ಇಲ್ಲ, ಪ್ರಮೋಷನ್ ಒಳಗೂ ಆಸಕ್ತಿಯಿಲ್ಲ. ನನಗೆ ಕನ್ನಡ ಎಷ್ಟರಮಟ್ಟಿಗೆ ಹಳೆದಾಗಿ ಹೋಗಿದೆ ಅಂತಂದ್ರೆ ನಾನು ರಜಾದಲ್ಲಿ ಕರ್ನಾಟಕಕ್ಕೆ ಹೋದ್ರೂ ಕೂಡ, ನಿದ್ದೆ ಮಾಡುವಾಗ ಯಾರಾದ್ರೂ ಬಾಗಿಲನ್ನು ಟ್ಯಾಪ್ ಮಾಡಿದ್ರೆ, “ಕೌನ್ ಹೈ” ಅಂತ ಬರತ್ತೇ ಹೊರತೂ ” ಯಾರು” ಅನ್ನೋದು ಬರ್ತಾ ಇಲ್ಲ. ನನ್ನ ಕನ್ನಡವೇ ವೀಕಾಗಿ ಹೋಗ್ತಾ ಇದೆ. ಹಾಗಿದ್ದು ನಾನು ಹ್ಯಾಗೆ ರೈಟರ್ ಆಗೋಕ್ಕೆ ಸಾಧ್ಯ?” “ಆಯ್ತು ಯೋಚನೆ ಮಾಡ್ತೀನಿ” ಅಂತ ಹೇಳಿದ್ರು. ಯೋಚನೆ ಮಾಡ್ತೀನಿ ಅಂತ ಹೇಳ್ತಿದ್ರೇ ಹೊರತೂ ಟ್ರಾನ್ಸ್ಫರ್ ಮಾಡ್ತೀನಿ ಅಂತ ಹೇಳ್ತಿರಲಿಲ್ಲ. ಆಮೇಲೆ ಇನ್ಯಾವುದೋ ಒಂದು ದಿವಸ ಪೋನ್ ಮಾಡಿದ್ರು: “ಬೆಂಗಳೂರಿಂದ ಯಾರೋ ಹಸಿ ಅವರೆಕಾಳು ತಂದಿದ್ದಾರೆ, ಸಾರು ಮಾಡಿದ್ದೀನಿ, ಬನ್ನಿ ಊಟಕ್ಕೆ” ಅಂತ ಕರೆದ್ರು. ಅಷ್ಟು ಆತ್ಮೀಯತೆ ಇಟ್ಕೊಂಡಿದ್ರು ಅವರು. ಹೋದ್ರೆ ಅಯ್ಯ ಅವ್ರು ಇನ್ನೂ ಮನೆಗೆ ಬಂದಿರಲಿಲ್ಲ. ಅವ್ರ ಹೆಂಡತಿ ಮೀನಾಕ್ಷಮ್ಮ ಅಂತ. ಅವ್ರು ಕೇಳಿದ್ರು “ನೀವು ಯಾಕೆ ಮೈಸೂರಿಗೆ ಹೋಗ್ಬೇಕು ಅಂತ ಹಟ ಮಾಡ್ತೀದೀರಿ? ನಮ್ಮ ಯಜಮಾನರು ಹೇಳಿದ ಹಾಗೆ ಕೇಳಿ, ನಿಮ್ಮ ಒಳ್ಳೆಯದಕ್ಕೇ ಅವ್ರು ಹೇಳ್ತಾ ಇರೋದು. ನೀವು ಬುದ್ಧಿವಂತರು, ನಿಮ್ಮಂತರೋನೆಲ್ಲಾ ಯುನೆಸ್ಕೋಗೆ ಕಳುಹಿಸಿದ್ರೆ ಎಷ್ಟು ಸಂಪಾದನೆ ಮಾಡ್ಬಹುದು. ಇನ್ನೂ ಮೇಲಕ್ಕೆ ಹೋಗ್ಬಹುದು ನೀವು ” ನಾನು ಕೇಳ್ದೆ, “ಅಮ್ಮ ನನ್ನ ಮೇಲೆ ನಿಮಗೆ ಯಾಕಿಷ್ಟು ಅಭಿಮಾನ ಇದೆ ಹೇಳಿ” ಅಂತ ಕೇಳಿದೆ. ಅವರು “ನಿಮ್ಮ ಪುಸ್ತಕ ಓದಿ.” ಆಂತಂದ್ರು. “ನಾನು ಇನ್ನೂ ಚೆನ್ನಾಗಿ ಬರೀಬೇಕು, ಇನ್ನೂ ತುಂಬಾ ಬರೀಬೇಕು ಅಂತ ನಿಮಗೆ ಆಸೆ ಇದೆಯೋ ಇಲ್ಲವೋ?” ಅಂದೆ. ಅವ್ರು “ಅಯ್ಯೋ, ಇನ್ನೂ ಚೆನ್ನಾಗಿ ಬರೀಬೇಕು, ತುಂಬಾನೇ ಬರೀಬೇಕು.’ ಆಂದ್ರು. “ಹಾಗದ್ರೆ ನೋಡಿ, ಕರ್ನಾಟಕಕ್ಕೆ ಹೋಗ್ದಿದ್ರೆ ನಾನು ಬರೆಯೋಕ್ಕೇ ಆಗಲ್ಲ, ” ಅಂತ ಅವ್ರಿಗೆ ಎಕ್ಸ್‍ಪ್ಲೇನ್ ಮಾಡ್ದೆ. “ಹೌದಾ, ಹಾಗ, ನಾನು ಹೇಳ್ತಿನಿ ತಡೀರಿ ಅವ್ರಿಗೆ” ಅಂತ ಅಂದ್ರು. ಸ್ವಲ್ಪ ಹೊತ್ತಿಗೆ ಅಯ್ಯ ಅವ್ರು ಬಂದ್ರು, ಅದಾದ ಎರಡು ದಿನಗಳಲ್ಲಿ ನನಗೆ ಪೋನ್ ಮಾಡಿ, “ನಿಮ್ಮನ್ನು ಜೂನ್ ತಿಂಗಳಲ್ಲಿ ಮೈಸೂರ್ಗೆ ಟ್ರಾನ್ಸಫರ್ ಮಾಡ್ತೀನಿ” ಅಂತ ಹೇಳಿ ಕಳುಹಿಸಿಕೊಟ್ರು. ಇಲ್ದೇ ಹೋಗಿದ್ದಿದ್ರೆ ನನಗೆ ಬರೆಯೋಕ್ಕೇ ಆಗ್ತಿರ್ಲಿಲ್ಲ. ಆಮೇಲೆನೆ ನನ್ನ ಮೇಜರ್ ವರ್ಕ್ಸ್ ಎಲ್ಲಾ ಬರೆದಿದ್ದು. ದಾಟು, ಪರ್ವ ಇತ್ಯಾದಿ. ಯಾಕೆ? ಮೈಸೂರಿಗೆ ವರ್ಗ ಆಗಿ ಹೋದ ಮೇಲೆ ನಾನು ಸಂತೆಗಳಿಗೆ ಹೋಗ್ತಾ ಇದ್ದೆ. ಅಲ್ಲಿ ಒಂದು ಕಲ್ಬೆಂಚಿನ ಮೇಲೆ ಸುಮ್ಮನೆ ಕುಳಿತುಕೊಳ್ಳುವೆ. ಸುತ್ತ ಜನರು, ಸಂತೆಯೊಳಗೆ ನಿಜವಾದ ಕನ್ನಡ ಮಾತಾಡ್ತಾರಲ್ಲ, ಹಳ್ಳಿಗರು ಬಂದು, ಅದನ್ನು ಕೇಳ್ತಾ ಕೇಳ್ತಾ ಈ ಶಬ್ದ ಎಷ್ಟು ಚೆನ್ನಾಗಿದೆಯಲ್ಲ, ನನಗೆ ಗೊತ್ತಿದ್ದದ್ದೂ ಮರ್ತೇ ಹೋಗಿದೆಯಲ್ಲ ಇದು ಅಂತ ಅನ್ನಿಸ್ತಿತ್ತು. ಬೈಗಳಲ್ಲಿ ಎಷ್ಟು ಒರಿಜಿನಾಲಿಟಿ ಇದೆ. ಹೀಗ್ ಎಲ್ಲಾ ಕೇಳ್ತಾ ಕೇಳ್ತಾ ಇದ್ದೆ. ಸಹಜವಾಗಿ ಕನ್ನಡ ಮಾತು ಬರೋದಕ್ಕೆ ಸುಮಾರು ಮೂರು ತಿಂಗಳಾಯ್ತು ನನಗೆ. ಆ ತರಹದ್ದು ಇಲ್ಲದೇ ಹೋದ್ರೆ ಹ್ಯಾಗೆ ಕನ್ನಡದಲ್ಲಿ ಬರೀಲಿಕ್ಕೆ ಸಾಧ್ಯ? ಕರಿಯರ್ ಮತ್ತು ಬರವಣಿಗೆ ಮಧ್ಯೆ ಕ್ಲ್ಯಾಶ್ ಬರುತ್ತೆ. ಒನ್ ಹ್ಯಾಸ್ ಟು ಸ್ಯಾಕ್ರಿಫೈಸ್. ಎರಡೂ ಮಾಡ್ತೀನಿ ಅಂತ ಅಂದ್ರೆ ಆಗಲ್ಲ.”
________________________________________________________________
ಸಂದರ್ಶಕ:: “ನಿಮ್ಮ ಕಥೆಗಳನ್ನು ಮೂವಿ ಚಿತ್ರೀಕರಣ ಮಾಡ್ದಾವಾಗ ನಿಮಗೆ ಏನು ಅನ್ನಿಸುತ್ತೆ?”
ಎಸ್.ಎಲ್.ಬಿ: “ನಾನು ಅದನ್ನು ಯೋಚನೆ ಮಾಡೊಕ್ಕೆ ಬಿಡಲ್ಲ. ನಾನು ಮೊದಲು ನೋಡೋದು ಏನಂತಂದ್ರೆ ಆ ಡೈರೆಕ್ಟರ್ ಯಾರು? ಅವನು ಇದ್ದುದರಲ್ಲಿ ಆನೆಸ್ಟಾಗಿ ಮಾಡ್ತಾನಾ? ಕಮರ್ಷಿಯಲ್ ಆಗಿ ಮಾಡ್ತಾನ? ಅವನು ಕಮರ್ಷಿಯಲ್ ಆಗಿ ಮಾಡಲ್ಲ, ಸ್ವಲ್ಪ ಮಟ್ಟಿಗೆ ಆರ್ಟಿಸ್ಟಿಕ್ ಎಬಿಲಿಟಿ ಇದೆ ಅನ್ನೋದು ನನಗೆ ಕನ್ವಿನ್ಸ್ ಆಗಿ ಬಿಟ್ರೆ ಸಾಕು. ಪರ್ಮಿಶನ್ ಕೊಟ್ಟ ಮೇಲೆ ಅದರ ಬಗ್ಗೆ ಯೋಚನೆ ಮಾಡೋಕ್ಕೇ ಹೋಗಲ್ಲ ನಾನು. ಅವನ ಮಾಧ್ಯಮದಲ್ಲಿ ಅವನು ಮಾಡ್ಕೋತಾನೆ. ನನ್ನ ಮಾಧ್ಯಮದಲ್ಲಿ ನಾನು ಬರ್ದಿದ್ದೀನಿ. ಅಂತ ಅಷ್ಟೆ. ಪ್ರೆಸ್‍ನವರು ಕೇಳ್ತಾರೆ. ಆದ್ರೆ ನಾನು ಯಾವಾಗಲೂ adverse criticisms ಯಾವತ್ತೂ ಹೇಳಲ್ಲ. ಯಾಕಂದ್ರೆ ನಾನು ಕೊಟ್ಟಾಗಿದೆ. ಅವನು ಲಕ್ಷಾಂತರ ಇನ್ವೆಸ್ಟ್ ಮಾಡಿ, ನಾನು adverse criticisms ಮಾಡಿ, ಅವನ ಕಲೆಕ್ಷನ್ ಕಡ್ಮೆ ಆದ್ರೆ ಅವನಿಗೆ ನಾನು ತೊಂದ್ರೆ ಮಾಡ್ದಾಂಗೆ ಆಗುತ್ತೆ. ಅದಕ್ಕೇ ನಾನು ಒಳ್ಳೆ ಅಭಿಪ್ರಾಯನೇ ಕೊಡ್ತೀನಿ. ಅಷ್ಟಕ್ಕೂ ಅವನು ಸಿನೇಮಾ ಹಾಗೆ ಮಾಡ್ದಾ ಅಂತ ನನ್ನ ಕಾದಂಬರಿಯ value ಏನು ಕಡಿಮೆ ಆಗಲ್ಲ ಅಥವಾ ಹೆಚ್ಚೂ ಆಗಲ್ಲ. ಕಾದಂಬರಿಯನ್ನು ಓದುವವರು ಯಾವ ರೀತಿ ಪಾತ್ರಗಳನ್ನು ಅನುಭವಿಸುತ್ತಾರೆ ಅನ್ನೋದು ಬೇರೆ. ಇದೇ ಬೇರೆ, ಅದೇ ಬೇರೆ.”
________________________________________________________________
ಎಸ್.ಎಲ್.ಭೈರಪ್ಪ ಸಂದರ್ಶನ Page End
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ