ಶನಿವಾರ, ಆಗಸ್ಟ್ 15, 2015

ನಿರ್ವಾಣ ಷಟ್ಕಂ ಅಥವಾ ಆತ್ಮ ಷಟ್ಕಂ

ನಿರ್ವಾಣ ಷಟ್ಕಂ  ಅಥವಾ ಆತ್ಮ ಷಟ್ಕಂ 
ಸಂಸ್ಕೃತ ಮೂಲ: ಶ್ರೀ ಆದಿ ಶಂಕರಾಚಾರ್ಯರು

ಮನೋ ಬುಧ್ಯಹಂಕಾರ ಚಿತ್ತಾನಿ ನಾಹಂ
ನ ಚ ಶೋತ್ರಜಿಹ್ವೆ ನ ಚ ಘ್ರಾಣ ನೇತ್ರೆ
ನ ಚ ವ್ಯೋಮ ಭೂಮಿರ್ನ ತೇಜೋ ನ ವಾಯುಃ
ಚಿದಾನಂದ ರೂಪಃ ಶಿವೋಹಂ ಶಿವೋಹಂ

ನ ಚ ಪ್ರಾಣ ಸಂಜ್ಞ್ಯೋ ನ ವೈ ಪಂಚ ವಾಯುಃ
ನ ವಾ ಸಪ್ತಧಾತುರ್ನ ವಾ ಪಂಚ ಕೋಶಃ
ನ ವಾಕ್ಪಾಣಿ ಪಾದೌ ನ ಚೋಪಸ್ಥ ಪಾಯು
ಚಿದಾನಂದ ರೂಪಃ ಶಿವೋಹಂ ಶಿವೋಹಂ

ನ ಮೇ ದ್ವೇಷ ರಾಗೌ ನ ಮೇ ಲೋಭ ಮೋಹೋ
ಮದೋ ನೈವ ಮೇ ನೈವ ಮಾತ್ಸರ್ಯ ಭಾವಃ
ನ ಧರ್ಮೋ ನ ಚಾರ್ಥ್ರೋ ನ ಕಾಮೋ ನ ಮೋಕ್ಷಃ
ಚಿದಾನಂದ ರೂಪಃ ಶಿವೋಹಂ ಶಿವೋಹಂ

ನ ಪುಣ್ಯಂ ನ ಪಾಪಂ ನ ಸೌಖ್ಯಂ ನ ದುಃಖಂ
ನ ಮಂತ್ರೋ ನ ತೀರ್ಥಂ ನ ವೇದ ನ ಯಜ್ಞಃ
ಅಹಂ ಭೋಜನಂ ನೈವ ಭೋಜ್ಯಂ ನ ಭೋಕ್ತಾ
ಚಿದಾನಂದ ರೂಪಃ ಶಿವೋಹಂ ಶಿವೋಹಂ

ನ ಮ್ರುತ್ಯುರ್ನ ಶಂಖಾ ನ ಜಾತಿ ಬೇಧಃ
ಪಿತಾ ನೈವ ಮೇ ನೈವ ಮಾತಾ ನ ಜನ್ಮಃ
ನ ಬಂಧುರ್ನ ಮಿತ್ರಂ ಗುರುರ್ನೈವ ಶಿಷ್ಯಃ
ಚಿದಾನಂದ ರೂಪಃ ಶಿವೋಹಂ ಶಿವೋಹಂ

ಅಹಂ ನಿರ್ವಿಕಲ್ಪೋ ನಿರಾಕಾರ ರೂಪೋ
ವಿಭುರ್ವ್ಯಾಪ್ಯ ಸರ್ವರ್ತ್ರ ಸರ್ವೇಂದ್ರಿಯಾಣಂ
ನ ಚ ಸಂಘಟಂ ನೈವ ಮುಕ್ತತಿರ್ನ ಮೇಯಃ
ಚಿದಾನಂದ ರೂಪಃ ಶಿವೋಹಂ ಶಿವೋಹಂ

ನಿರ್ವಾಣ ಷಟ್ಕಂ ಅಥವಾ ಆತ್ಮ ಷಟ್ಕಂ 
ಸಂಸ್ಕೃತ ಮೂಲ ಶ್ರೀ ಆದಿ ಶಂಕರಾಚಾರ್ಯರು
ಕನ್ನಡ ಭಾವಾರ್ಥ: ರವಿ ಗೋಪಾಲ ರಾವ್, ಸ್ಯಾನ್ ಹೋಸೆ, ಕ್ಯಾಲಿಫೋರ್ನಿಯ

ನಾನು ಅಂತಃಕರಣ, ಚಿತ್ತ, ಅಂತರಾಳ, ಬುದ್ಧಿ, ಅಹಂಕಾರವೆಂಬ ಪಂಚಸ್ವರೂಪವೂ ಅಲ್ಲ
ನಾನು ಕಣ್ಣು, ಮೂಗು, ನಾಲಿಗೆ, ಕಿವಿ, ಚರ್ಮವೆಂಬ ಪಂಚೇಂದ್ರಿಯವೂ ಅಲ್ಲ
ನಾನು ಪೃಥ್ವಿ, ವ್ಯೋಮ (ಆಪ್ಪು), ಭೂಮಿ, ವಾಯು, ಆಕಾಶವೆಂಬ ಪಂಚಭೂತವೂ ಅಲ್ಲ
ನಾನು ಜಾಗೃತ ಪರಮಾನಂದ ಸೃಷ್ಟಿಸುವ ಚಿದಾನಂದ ಶಿವಸ್ವರೂಪಿ.


ನಾನು ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನವೆಂಬ ಪಂಚ ಪ್ರಾಣವೂ ಅಲ್ಲ
ನಾನು ರಸ, ರಕ್ತ, ಮಾಂಸ, ಮೇದಸ್ಸು, ಮಜ್ಜೆ, ಅಸ್ತಿ, ಶುಕ್ಲವೆಂಬ ಸಪ್ತ ಧಾತುವು ಅಲ್ಲ
ನಾನು ಅನ್ನಮಯ, ಪ್ರಾಣಮಯ, ಮನೋಮಯ, ವಿಜ್ಞಾನಮಯ, ಆನಂದಮಯವೆಂಬ ಪಂಚ ಕೋಶವು ಅಲ್ಲ
ನಾನು ವಾಕ್ (ಮಾತು), ವಾಗ್ಮಿಯೂ ಅಲ್ಲ, ಕರ, ಪಾದವು ಅಲ್ಲ
ನಾನು ಜಾಗೃತ ಪರಮಾನಂದ ಸೃಷ್ಟಿಸುವ ಚಿದಾನಂದ ಶಿವಸ್ವರೂಪಿ

ನನ್ನಲ್ಲಿ ದ್ವೇಷ, ಲೋಭ, ಮೋಹವಿಲ್ಲ
ನನ್ನಲ್ಲಿ ಮದ, ಮತ್ಸರ ಭಾವನೆಯಿಲ್ಲ
ನನ್ನಲ್ಲಿ ಕರ್ತವ್ಯ, ಚಾರಿತ್ರ್ಯ, ಕಾಮ, ಮೋಕ್ಷದ ಅಪೇಕ್ಷೆಯಿಲ್ಲ,
ನಾನು ಜಾಗೃತ ಪರಮಾನಂದ ಸೃಷ್ಟಿಸುವ ಚಿದಾನಂದ ಶಿವಸ್ವರೂಪಿ.

ನನ್ನಲ್ಲಿ ಪಾಪ ಪುಣ್ಯ ಸುಖ ದುಃಖವಿಲ್ಲ
ಮಂತ್ರ, ತೀರ್ಥ, ವೇದ, ಯಜ್ಞಗಳಲ್ಲಿ ನನಗಿಚ್ಚೆಯಿಲ್ಲ
ನಾ ಅನುಭವಿಯೂ ಅಲ್ಲ, ಅನುಭವವೂ ಅಲ್ಲ
ನಾನು ಜಾಗೃತ ಪರಮಾನಂದ ಸೃಷ್ಟಿಸುವ ಚಿದಾನಂದ ಶಿವಸ್ವರೂಪಿ.

ನನ್ನಲ್ಲಿ ಮೃತ್ಯುವಿನ ಶಂಕೆಯಿಲ್ಲ, ಜಾತಿ ಬೇಧವಿಲ್ಲ
ಪಿತೃವೂ ಇಲ್ಲ, ಜನ್ಮ ಕೊಟ್ಟ ತಾಯಿಯೂ ಇಲ್ಲ
ಬಂಧುಗಳಿಲ್ಲ, ಮಿತ್ರರಿಲ್ಲ, ಗುರು ಶಿಷ್ಯರಿಲ್ಲ
ನಾನು ಜಾಗೃತ ಪರಮಾನಂದ ಸೃಷ್ಟಿಸುವ ಚಿದಾನಂದ ಶಿವಸ್ವರೂಪಿ.

ನಾ ದ್ವಂದ್ವರಹಿತ ನಿರಾಕರರೂಪಿ
ನಾ ಎಲ್ಲೆಡೆಯಿರುವೆ, ಸರ್ವೇಂದ್ರಿಯಗಳಲ್ಲೂ ಇರುವೆ
ನನ್ನನ್ನು ಸಂಘಟಿಸಲಾರೆ, ಬಂಧಿಸಲಾರೆ, ಮುಕ್ತಿಗೊಳಿಸಲಾರೆ
ನಾನು ಜಾಗೃತ ಪರಮಾನಂದ ಸೃಷ್ಟಿಸುವ ಚಿದಾನಂದ ಶಿವಸ್ವರೂಪಿ.
ನಾನೇ ಶಿವ, ನಾನೇ ಶಿವ
________________
ಟಿಪ್ಪಣಿ:

ಸುಮಾರು ೧೨೦೦ ವರ್ಷಗಳ ಹಿಂದಿನ ಸನ್ನಿವೇಶ. ನರ್ಮದ ನದಿಯ ತೀರದಲ್ಲಿ ಇರುವ ಒಂದು ಗುರುಕುಲ. ಗುರು ಗೋಪಾದರು ಧ್ಯಾನದಿಂದ ಕಣ್ಣ್ತೆರದು ನೋಡುತ್ತಾರೆ. ಸುಂದರ ಬಾಲಕನೋರ್ವನು ಕೈಮುಗಿದು ನಿಂತಿದ್ದಾನೆ. ಮುಖದಲ್ಲಿ ಕಾಂತಿ ತುಂಬಿ ತುಳುಕುತ್ತಿದ್ದ ಅವನ ಮುಗ್ದತೆಗೆ ಮಾರುಹೋಗಿ ಗುರುಪಾದರು “ನೀ ಯಾರು, ಎಲ್ಲಿಂದ ಬಂದೆ, ನಿನ್ನ ತಂದೆ ತಾಯಿ ಎಲ್ಲಿರುವರು” ಎಂದು ಸಹಜ ಪ್ರಶ್ನೆ ಕೇಳುವರು. ಎಂಟು ವರ್ಷದ ಆ ಬಾಲಕ ತದೇಕಚಿತ್ತದಲ್ಲಿ ಕೊಟ್ಟ ಉತ್ತರವೇ ಈ ನಿರ್ವಾಣ ಅಥವಾ ಆತ್ಮ ಷಟ್ಕಂ . ನಾನು ಜಾಗೃತ ಪರಮಾನಂದ, ಶಿವಾನಂದ ಸ್ವರೂಪಿ, ಮಾತ ಪಿತೃ ಬಂಧುಗಳಾರಿಲ್ಲ ಎಂದು ತನ್ನದೇ ಅದ ಹೊಸ ಅದ್ವೈತ ವೇದಾಂತದ ಸಾರವನ್ನು ಗುರುಗಳಿಗೆ ಸಮರ್ಪಿಸಿದಾಗ ಗುರುಗಳು ಬೆರಗಾದರು. ಆ ಬಾಲಕನ ಹೆಸರು ಶಂಕರಾಚಾರ್ಯ.

ಶಂಕರಾಚಾರ್ಯರು ಆತ್ಮ ಷಟ್ಕಂ  ರಚಿಸಿದ್ದು ಅವರು ಕೇವಲ ಎಂಟು ವರ್ಷದವರಿದ್ದಾಗ! ಯಾರಿಗೂ ಅರಿವಾಗದ ಸೃಷ್ಟಿಯ ನಿಗೂಡತೆಯನ್ನು ಸರಳ ಸಂಸ್ಕೃತದಲ್ಲಿ ಹಾಡಿದ ಈ ಬಾಲಕನ ಅದ್ವೈತ ವೇದಾಂತ ಇಡೀ ಹಿಂದೂ ಸಮಾಜದ ಅಡಿಪಾಯವಾಯಿತು ಎನ್ನುವುದರಲ್ಲಿ ಸಂಶಯವಿಲ್ಲ. ಅದ್ವೈತ ವೇದಾಂತ ಅಷ್ಟು ಹಳೆಯದಾದರೂ ಸನಾತನ ಧರ್ಮ ಮತ್ತು ಹಿಂದೂ ಆಧ್ಯಾತ್ಮಿಕ ಹಾಗು ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿದೆ. ಸಂಗೀತ, ನೃತ್ಯ, ಕಲೆಯಲ್ಲಿ ನಿರ್ವಾಣ ಶತಕ ಹಸಿರಾಗಿದೆ. ಕಾವ್ಯ,

ಸಂಗೀತ, ಪುಸ್ತಕ, ಚಲನಚಿತ್ರ ಎಲ್ಲವನ್ನು “ಈ ವರ್ಷದ Top 10” ಎಂದು ಗುರಿತಿಸಿ ಪುರಸ್ಕಾರ ಅಥವಾ ಬಹುಮಾನ ಕೊಡುವುದು ಸಮಕಾಲಿನ ಪದ್ದತಿ. ಆದರೆ ಸಾವಿರದ ಇನ್ನೂರು ವರ್ಷಗಳಿಂದಲೂ ಸಂಸ್ಕೃತದ “Top 10” ಕಾವ್ಯಗಳಲ್ಲಿ ಒಂದಾಗಿ ಈ ನಿರ್ವಾಣ ಶತಕ ಪ್ರತಿ ವರ್ಷವೂ ಅಗ್ರ ಸ್ಥಾನ ಗಳಿಸಿರುವಂತ ಒಂದು ವಿಷೇಶ ಕೃತಿ. ಹಿಂದೂ ಧರ್ಮದ ವಿದ್ವಾಂಸರ ವೇದಾದ್ಯನದಲ್ಲಿ, ವಿಜ್ಞಾನದಲ್ಲಿ, ಭರತನಾಟ್ಯದ ಗುರು-ಶಿಷ್ಯ ಪರಂಪರೆಯಲ್ಲಿ, ಕರ್ನಾಟಕ ಮತ್ತು ಹಿಂದೂಸ್ಥಾನಿ ಗಾಯನದಲ್ಲಿ, ನಾಟಕಗಳಲ್ಲಿ, ಹರಿಕತೆಯಲ್ಲಿ, ಲಘು ಸಂಗೀತದಲ್ಲಿ, ಮಂಕು ತಿಮ್ಮನ ಕಗ್ಗದಲ್ಲಿ, ದಾಸವಾಣಿಯಲ್ಲಿ, ವೀರಶೈವ ಚಿಂತನೆಯಲ್ಲಿ ಹೀಗೆ ಎಲ್ಲಕಡೆ ಸತತವಾಗಿ ಈ ಕಾವ್ಯವನ್ನು ಅಳವಡಿಸಿಕೊಳ್ಳಲಾಗಿದೆ. ಅಷ್ಟೆ ಏಕೆ, ನೀವೆಂದಾದರು ಇಂಟರ್ನೆಟ್ಟಿನಲ್ಲಿ “relaxing music” ಅಂತ ಹುಡಿಕಿ ಕೇಳಿದರೆ ಈ ಕಾವ್ಯದಿಂದ ದೇಹಕ್ಕೂ ಮನಸ್ಸಿಗೂ ಸಿಗುವ ವಿಶ್ರಾಮದ ಅರಿವಾದೀತು. ಸುಮಾರು ಹತ್ತು ವರ್ಷಗಳ ಹಿಂದೆ ಶಂಕರಾಚಾರ್ಯರ ಈ ಕಾವ್ಯ ನನಗೆ ಪರಿಚಯವಾದದ್ದು ಇಂಟೆರ್ನೆಟ್ ಮೂಲಕವೆ.

ಚಿಕ್ಕವನಾಗಿದ್ದಾಗ ಮನೆಯಲ್ಲಿ ‘ಚಂದಮಾಮ’ ‘ಕಸ್ತೂರಿ’ ‘ಸುಧಾ’ ‘ಮಯೂರ’ ಓದಿ ಕಾಲಕಳೆಯುತ್ತಿದ್ದರೂ, ಮನೆಗೆ ಪ್ರತಿ ತಿಂಗಳು ಬರುತ್ತಿದ್ದ ‘ವೇದಾಂತ ಭಾರತಿ’ ಓದಲು ಮಾತ್ರ ಹಿಂಜರಿಕೆ. ಅದರಲ್ಲಿ ಸಂಸ್ಕೃತವೇ ಹೆಚ್ಚು. ಹೈಸ್ಕೂಲಿನಲ್ಲಿ ಕನ್ನಡ ಎರಡನೆ ಭಾಷೆಆದ್ದರಿಂದ ಸಂಸ್ಕೃತ ಕಲಿಯಲು ಅವಕಾಶ ಸಿಗಲಿಲ್ಲ. ಮನೆಯಲ್ಲಿ ಅಪ್ಪ ಅಮ್ಮ ಇಬ್ಬರೂ ಶಂಕರ ಮಠದ ಅನುಯಾಯಿಗಳು. ಮನೆಯ ಗೋಡೆಯ ಮೇಲೆ ಶಂಕರಾಚಾರ್ಯರ ಪಟ ಮತ್ತು ಅದರ ಪಕ್ಕದಲ್ಲೇ ಸರಸ್ವತಿಯ ಪಟ ಸದಾ ಕಂಗೊಳಿಸಿರುತ್ತಿತ್ತು. ಮನೆಗೆಲಸ ಮುಗಿಸಿ ಅಮ್ಮ ‘ವೇದಾಂತ ಭಾರತಿ’ ಪ್ರತಿನಿತ್ಯವೂ ಓದುತ್ತಿದ್ದರು. ಶಂಕರಾಚಾರ್ಯರ ಬಗ್ಗೆ ತುಂಬ ಗೌರವ, ಭಕ್ತಿ. ಸಾಲಿಗ್ರಾಮ, ಶಿವ, ಪಾರ್ವತಿ, ಶಾರದಾಂಬೆ, ಗಣೇಶನಿಗೆ ದಿನ ನಿತ್ಯ ಪೂಜೆ ಮಾಡಿದರೂ ಅಮ್ಮ ಶಂಕರಾಚರ್ಯರಿಗೆ ಪೂಜೆ ಪುನಸ್ಕಾರ ಮಾಡುತ್ತಿರಲಿಲ್ಲ. ಮಾನವರು ಎಂದಿದ್ದರೂ ಪೂಜೆಗೆ ಅಹ್ರರಲ್ಲ ಎಂಬುದು ಅವರ ನಂಬಿಕೆ. ಅದೇ ಕಾರಣಕ್ಕಾಗಿ ಪವಾಡ ಪುರುಷರಾದ ಸಾಯಿ ಬಾಬಾ, ರಾಘವೇಂದ್ರ ಸ್ವಾಮಿ, ಪರಮಹಂಸ ಮತ್ತಿತರನ್ನು ಗೌರವಿಸುತ್ತಿದ್ದರೆ ಹೊರತು ಪೂಜೆ ಮಾಡುವುದು ಅವರಿಗೆ ಇಷ್ಟವಿರಲಿಲ್ಲ. ಆದರೆ ಅದ್ವೈತ ವೇದಾಂತದ ಬಗ್ಗೆ ಕನ್ನಡದಲ್ಲಿ ಪ್ರಕಟಿತವಾದ ಸಾಕಷ್ಟು ಪುಸ್ತಕಗಳನ್ನು ಓದಿದ ನಮ್ಮ ತಾಯಿ ಶಂಕರಾಚಾರ್ಯರಿಗೆ ಗುರುವಿನ ಸ್ಥಾನ ಕೊಟ್ಟಿದ್ದರು. ಅದೇ ಕಾರಣದಿಂದಿರಬೇಕು ನನ್ನ ಶಾಲಾ ಪರೀಕ್ಷೆ ಮುಗಿಯುವರೆಗೂ ನಾನೂ ಕೂಡ ಅಮ್ಮ ಹೇಳಿದಂತೆ ಅಕ್ಕ ಪಕ್ಕದಲ್ಲಿದ್ದ ಶಂಕರಾಚಾರ್ಯ ಮತ್ತು ಸರಸ್ವತಿಯ ಪಟಗಳಿಗೆ ನಮಸ್ಕಾರ ಮಾಡಿಯೇ ಶಾಲೆಗೆ ಹೋಗುತ್ತಿದ್ದೆ. ಅಮೆರಿಕಗೆ ಬಂದಮೇಲೆ ಎಲ್ಲವೂ ಮರೆತಂತೆ ಆಗಿತ್ತು. ನಾನು ಆ ಪುಸ್ತಕಗಳನ್ನು ಆಳವಾಗಿ ಓದದಿದ್ದರೂ, ಮನಸ್ಸಿನಲ್ಲಿ ವೇದಾಂತ ಮತ್ತೆ ಮರುಕಳಿಸಲು ಎರಡು ಘಟನೆಗಳು ಕಾರಣವಾಯಿತು. ಒಮ್ಮೆ ಯೂ ಟ್ಯೂಬಿನಲ್ಲಿ ಜಿ.ವಿ. ಅಯ್ಯರ್ ನಿರ್ದೇಶನದ ‘ಶಂಕರಾಚಾರ್ಯ’ ಸಂಸ್ಕೃತ ಚಿತ್ರವನ್ನು ನೋಡಿದೆ. ಸನಾತನ ಧರ್ಮದ ಪುನರುದ್ದಾರಕ್ಕೆ ಶಂಕರಾಚಾರ್ಯರ ಕೊಡುಗೆ ಅಮೋಘವೆನಿಸಿ ಪ್ರಭಾವಿತನಾದೆ. ಎರಡನೆಯದು Art of Living ಸ್ತಾಪಕ ಶ್ರೀ ಶ್ರೀ ರವಿ ಶಂಕರರ ಸಹೋದರಿ ಹಾಡಿದ ನಿರ್ವಾಣ ಶತಕವನ್ನು ಇಂಟರ್ನೆಟ್ಟಿನಲ್ಲಿ ಕೇಳಿ ಮತ್ತಷ್ಟು ಆಕರ್ಷಿತನಾದೆ. ವೇದ ಕಾಲದ ಮಂತ್ರಗಳಂತೆಯೂ ಇರದೆ, ಯಾವ ವಾದ್ಯದ ಹಿನ್ನಲೆಯೂ ಇರದ ಈ ಸಂಸ್ಕೃತ ಕಾವ್ಯವನ್ನು ಕೇಳಿ ನನಗನ್ನಿಸಿದ್ದು ಬಹುಷಃ ಬಾಲಕ ಶಂಕರಾಚಾರ್ಯ ಇದೇ ರೀತಿ ಮೊದಲ ಬಾರಿಗೆ ಗುರುಪಾದರ ಮುಂದೆ ಹಾಡಿರಬಹುದೇನೋ ಎಂದು. ಕಣ್ಣುಮುಚ್ಚಿ ಧ್ಯಾನದಿಂದ ನೀವು ಕೂಡ ಈ ಕೆಳಗಡೆ ಕೊಟ್ಟಿರುವ ಮ್ಯುಸಿಕ್ ವಿಡಿಯೋ ಕೇಳಿಸಿಕೊಳ್ಳಿ. ಗುರುಪಾದರಂತೆ ನೀವು ಕೂಡ ತಲೆ ತೂಗಿಸುವಿರೆಂದು ನನ್ನ ನಂಬಿಕೆ.



ಸರಳ ಸಂಸ್ಕೃತದ ಈ ಕಾವ್ಯವನ್ನು ಮತ್ತೆ ನೀವು karaoke ರೂಪದಲ್ಲಿ ಮೇಲೆ ಕೊಟ್ಟಿರುವ ಮೂಲ ಕೃತಿಯ ಜೊತೆಯಲ್ಲಿ ಗುನಿಗಿ ಕೊಳ್ಳಿ. ಆಗ ನಿಮ್ಮ ದಿನನಿತ್ಯದ ಜಂಜಾಟಕ್ಕೆ ಕೆಲ ನಿಮಿಷಗಳ ವಿರಾಮ ದೊರಕುವುದು. ಮನಸ್ಸಿನ ನಿರುತ್ಸಾಹವನ್ನು ಗುಣಪಡಿಸುವ ಶಕ್ತಿ , ಶಾಂತ ರಸ ತುಂಬಿ ತುಳುಕುತ್ತಿರುವ ಈ ಕಾವ್ಯದಲ್ಲಿದೆ.

ಭಾರತೀಯ ಸಂಗೀತದಲ್ಲಿ ಕಾಳಿದಾಸನ ಸಂಸ್ಕೃತ ಕಾವ್ಯಗಳನ್ನು ಅಳವಡಿಸಿಕೊಂಡಿರುವುದನ್ನು ನಾವು ಐದನೇ ಶತಮಾನದಲ್ಲಿ ಕಾಣಬಹುದು. ಮೊಹಮದ್ದೀಯರ ಆಕ್ರಮಣದವರೆಗೂ ಭಾರತೀಯ ಸಂಗೀತದಲ್ಲಿ ಅಷ್ಟೇನು ಬದಲಾವಣೆಗಳು ಕಾಣದಿದ್ದರೂ ಮೊಗಲರ ಕಾಲದ ಹೊತ್ತಿಗೆ ಎರಡು ಪ್ರತ್ಯೇಕ ಶಾಕೆಗಳು --ಹಿಂದುಸ್ಥಾನಿ ಮತ್ತು ಕರ್ನಾಟಿಕ್-- ಪ್ರಾರಂಭವಾಗಿರಬಹುದೆಂದು ವಿದ್ವಾಂಸರ ಅಭಿಮತ. ಈ ಎರಡೂ ಸಂಗೀತ ಪದ್ದತಿಗಳಲ್ಲಿ ಸಂಸ್ಕೃತ ಕಾವ್ಯಗಳ ಬಳಕೆ ವಿಭಿನ್ನ ರೀತಿಯವು. ನಿರ್ವಾಣ ಶತಕವನ್ನು ಹಿಂದುಸ್ಥಾನಿ ಸಂಗೀತದಲ್ಲಿ ಹೇಗೆ ಅಳವಡಿಸಿಕೊಂಡಿದ್ದಾರೆ ಎಂದು ಅರಿಯಲು ಮೊದಲು ಪಂಡಿತ್ ರಮೇಶ್ ನಾರಾಯಣ್ ಹಾಡಿರುವ ಈ ಗೀತೆಯನ್ನು ಕೇಳೋಣ ಬನ್ನಿ.



ಈ ಹಾಡಿನಲ್ಲಿ ಭಕ್ತಿ ರಸಕ್ಕೆ ಪ್ರಾಮುಖ್ಯತೆ ಕೊಟ್ಟಿರುವುದುದನ್ನು ನೀವು ಗಮನಿಸಿರಬಹುದು. ಕಾವ್ಯದ ಪದ ಜೋಡಣೆಗಿಂತ ಹೆಚ್ಚಾಗಿ ರಾಗ ಮತ್ತು ತಾಳಕ್ಕೆ ಮಹತ್ವ ಕೊಡುವ ಪದ್ಧತಿ ಹಿಂದುಸ್ಥಾನಿ ಸಂಗೀತದಲ್ಲಿ ಕಂಡುಬಂದರೂ, ಇಲ್ಲಿ ಪಂಡಿತ್ ರಾಮ್ ನಾರಾಯಣ್, ನಿರ್ವಾಣ ಶತಕದ ಪ್ರತಿಯೊಂದು ಸಂಕೃತ ಪದವನ್ನು ಒಬ್ಬ ವಿಶ್ವಾಸಾರ್ಹ ಗುರುವಿನಂತೆ ಬಿಡಿಸಿ ಹಾಡಿದ್ದಾರೆ.

ಭರತನಾಟ್ಯ ಮತ್ತು ಕರ್ನಾಟಿಕ್ ಸಂಗೀತ ಒಂದರಲ್ಲಿ ಒಂದು -ಸಕ್ಕರೆ ಮತ್ತು ಹಾಲಿನಂತೆ-- ಬೆರತು ದಕ್ಷಿಣ ಭಾರತದ ಉನ್ನತ ಕಲೆಯ ದೃಷ್ಟಾಂತವಾಗಿ ಬೆಳೆದು ಬಂದಿವೆ. ಎರಡರಲ್ಲೂ ಸಂಸ್ಕೃತ ಕಾವ್ಯ ಒಂದು ಮಹತ್ತಿನ ಸ್ಥಾನವನ್ನು ಪಡೆದಿದೆ. ನಿರ್ವಾಣ ಶತಕವನ್ನು ಅಳವಡಿಸಿಕೊಂಡು ನಾಟ್ಯ ಮತ್ತು ಸಂಗೀತದ ಈ ಪ್ರಯೋಗವನ್ನು ನೋಡೋಣ ಬನ್ನಿ.



ನಾಟ್ಯಶಾಷ್ತ್ರದ ಲಯ, ಹಾವ, ಭಾವ, ಶೃಂಗಾರದ ಜೊತೆ ಕರ್ನಾಟಿಕ್ ಸಂಗೀತದ ತಾಳ, ಲಯ ಬೆರತಿರುವ ಈ ವೀಡಿಯೋ ನೋಡಿದಾಗ ನಮ್ಮ ಸಂಸ್ಕೃತಿ ಎಂದೆಂದೂ ಶಾಶ್ವತ ಅನಿಸುವುದು. ಅಮೇರಿಕಾದಲ್ಲಿ ಹುಟ್ಟಿ ಬೆಳದ ಮಕ್ಕಳು ಕೂಡ ಇಪ್ಪತ್ತೊಂದನೇ ಶತಮಾನದಲ್ಲಿ ಶಂಕರಾಚಾರ್ಯರ ನಿರ್ವಾಣ ಶತಕವನ್ನು ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ ಅಂದರೆ ಆ ಕಾವ್ಯದ ಹಿರಿಮೆ ಅರಿವಾಗುವುದು. (ತಮಿಳ್ನಾಡಿನ ಗಾಯನ ವೃಂದದ ಕರ್ನಾಟಿಕ್ ಸಂಗೀತ ಚೆನ್ನಾಗಿ ಹಾಡಿದ್ದರೂ, ತಮಿಳ್ ಭಾಷೆಯಲ್ಲಿನ ಮಿತಿ -- ಹ ಎನ್ನುವ ಅಕ್ಷರ ಇರದ ಕಾರಣ -- “ಶಿವೋಹಂ” ನಿಮಗೆ “ಶಿವೋಗಮ್” ಅಂತ ಕೇಳಿಸಿದ್ದರೆ ಆಶ್ಚರ್ಯ ಪಡಬೇಡಿ)


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ