ಗುಬ್ಬಿಯ ಅವಸಾನ
ರವಿ ಗೋಪಾಲರಾವ್
ಸ್ಯಾನ್ ಹೋಸೆ, ಕ್ಯಾಲಿಫೋರ್ನಿಯ.
ಬೀದಿ ನಾಯಿಗಳ ಬೊಗಳು ಮತ್ತು ಕಾಗೆಗಳ ಕೂಗಾಟದಿಂದ ಎಚ್ಚರವಾದಾಗ ಎಲ್ಲಿ ಮಲಗಿದ್ದೀನಿ ಅಂತಲೇ ಮರೆತು ಹೋಗಿತ್ತು. ಪ್ರಯಾಣದ ಸುಸ್ತಿನಿಂದ ಇರಬೇಕು, ಬಳಲಿದ ದೇಹಕ್ಕೆ ಗಡದ್ದಾಗೆ ನಿದ್ದೆ ಬಂದಿತ್ತು ಅಂತ ಕಾಣುತ್ತೆ. ಕಣ್ಣು ಅರಳಿಸಿ ಸುತ್ತಲೂ ನೋಡಿದೆ. ಇನ್ನೂ ಕತ್ತಲು ಕರಗಿರಲಿಲ್ಲ. ಮುಬ್ಬು ಬೆಳಕಿನಲ್ಲಿ ಮಂಚದ ಬಳಿಯಲ್ಲಿದ್ದ ಯಾವುದೇ ವಸ್ತುವಾಗಲಿ, ಕಿಟಕಿ ಬಾಗಿಲಾಗಲಿ ಪರಿಚಯ ಇದ್ದಂದತೆ ಕಾಣಲಿಲ್ಲ. ಪಕ್ಕದಲ್ಲಿ ಪುಟ್ಟಿ, ಪುಟ್ಟಿ ಪಕ್ಕದಲ್ಲಿ ಅವಳಮ್ಮ ಮಲಗಿದ್ದಾರೆಂದು ಮುಟ್ಟಿ ನೋಡಿದ ಮೇಲೆ ಖಾತ್ರಿಯಾಯಿತು. ಅಮೆರಿಕದಿಂದ ನೆನ್ನೆ ರಾತ್ರಿ ತಾನೆ ಬೆಂಗಳೂರಿಗೆ ಬಂದು ಅಣ್ಣನ ಮಹಡಿ ಮನೆಯ ಮೇಲ್ಗಡೆ ರೂಮಿನಲ್ಲಿ ಮಲಗಿದ್ದೀನಿ ಅಂತ ಅರಿವಾಗಲು ಸ್ವಲ್ಪ ಸಮಯವೇ ಬೇಕಾಯಿತು. ಕಾಗೆಗಳ ಕೂಗಾಟದ ಜೊತೆಗೆ ಈಗ ಜೋರಾಗಿ ಅಲ್ಲಾ ಹೋ ಅಕ್ಬರ್ ಅಂತ ಧ್ವನಿವರ್ದಕದಿಂದ ಕೇಳಿ ಬರುತ್ತಿದ್ದ ನಮಾಝ್ ನನ್ನನ್ನು ಪೂರ್ಣ ಎಚ್ಚರಗೊಳಿಸಿತ್ತು. ಅಸ್ಪಷ್ಟವಾಗಿ ವೆಂಕಟೇಶ ಸುಪ್ರಭಾತ ಕೇಳಿಸಿದಾಗ ರೇಡಿಯೋನಲ್ಲಿ ಬರುತ್ತಿದೆಯೋ ಅಥವ ಗುಡಿಯ ಧ್ವನಿವರ್ದಕದಿಂದ ಬರುತ್ತಿದೆಯೋ ಗೊತ್ತಾಗಲಿಲ್ಲ. ಮಂಚ ಬಿಟ್ಟು ಏಳೋಣ ಅಂದುಕೊಂಡೆ. ಆದರೆ ಇನ್ನೂ ಯಾರು ಎದ್ದಂತಿಲ್ಲ. ಅವರಿಗೆಲ್ಲ ಯಾಕೆ ಸುಮ್ಮನೆ ತೊಂದರೆ ಕೊಡುವುದು ಅಂತ ಸುಮ್ಮನೆ ಮಲಗಿದ್ದೆ. ಕಸ ಗುಡುಸಿ ಅಂಗಳಕ್ಕೆ ನೀರು ಹಾಕುವ ಶಬ್ದ, ದೂರದಲ್ಲಿ ಆಟೋ ಶಬ್ದ, ಹಾಲಿನ ಕ್ಯಾನ್ ಶಬ್ದ, ತರಕಾರಿ ಮಾರುವವನ "ಸೊಪ್ಪು, ಹುರಳಿಕಾಯಿ, ಬೆಂಡೇಕಾಯಿ" ಎಂದು ಕೂಗುವ ಗಡಸು ಧ್ವನಿ, ಎಲ್ಲ ಸೇರಿ ಕಾಗೆಗಳ ಕೂಗಾಟ, ನಾಯಿಗಳ ಬೊಗಳು ಕಡಿಮೆ ಆದಂತೆ ಅನ್ನಿಸಿತು. ಸೂರ್ಯನ ಬೆಳಕೇ ಕಂಡಿಲ್ಲ ಆಗಲೇ ಎಷ್ಟೊಂದು ಚಟುವಟಿಕೆ ಶುರುವಾಗಿದೆಯಲ್ಲ. ಸ್ಯಾನ್ ಹೋಸೆಯಲ್ಲಿ ಬೆಳಗಿನ ಜಾವ ಅಲಾರಾಮ್ ಬಿಟ್ಟು ಇನ್ಯಾವ ಶಬ್ದವೂ ಕೇಳಿ ಅಭ್ಯಾಸವಿಲ್ಲ ಅಂತ ಮನಸ್ಸು ಆಗಲೇ ವ್ಯತ್ಯಾಸ ಹುಡುಕುತ್ತಿತ್ತು. ಮಂಚದಿಂದ ಎದ್ದು ಕಿಟಕಿ ಕರ್ಟನ್ ಸರಿಸಿ ನೋಡಿದಾಗ ತುಂಬ ಬೆಳಕಾಗಿದೆ ಎನ್ನುವ ಅರಿವಾಯಿತು. ಮಂಚದಿಂದ ಎದ್ದು, ರೂಮಿಗೇ ಅಂಟಿಕೊಂಡಂತೆ ಇದ್ದ ಮಹಡಿ ಮೆಟ್ಟಲು ಹತ್ತಿ ಛತ್ತಿಗೆ ಹೋದೆ. ಪಕ್ಕದ ಮನೆಯಿಂದ ಎತ್ತರಕ್ಕೆ ಬೆಳದಿದ್ದ ಸಂಪಿಗೆ ಮರದಲ್ಲಿ ಅಷ್ಟೊಂದು ಹೂವು ಕಾಣದಿದ್ದರೂ ಘಂ ಅಂತ ಸುವಾಸನೆ ಬಂದು, ಜೊತೆಗೆ ತಣ್ಣನೆಯ ಗಾಳಿ ಬೀಸಿದಾಗ ನನಗರಿವಿಲ್ಲದಂತೆ ಎದೆ ಉಬ್ಬಿಸಿ ಹವ ಕುಡಿದು ಕೈ ಕಟ್ಟಿ ನಿಂತೆ. ಛಾವಣಿ ಮೇಲೆ ನಿಂತಿದ್ದರಿಂದ ದೂರದವರೆಗೂ ಮುಂಜಾವಿನ ಕಿತ್ತಳೆ ಬಣ್ಣದ ಆಕಾಶ ಕಾಣುತ್ತಿತ್ತು. ಆ ಸೌಂದರ್ಯಕ್ಕೆ ಮಸಿ ಬಳೆದಂತೆ ಎಲ್ಲಿ ನೋಡಿದರೂ ಬರೀ ಕಪ್ಪು ಕಾಗೆಗಳೇ ಹಾರಾಡುತ್ತಿದ್ದವು. ಈ ಊರಿನಲ್ಲಿ ಬೇರೆ ಹಕ್ಕಿಗಳೆ ಇಲ್ಲವೇ ಅನ್ನಿಸುವಷ್ಟು. ನಾನು ಚಿಕ್ಕಂದಿನಲ್ಲಿ ನೋಡುತ್ತಿದ್ದ ಗುಬ್ಬಚ್ಚಿ, ಕೋಗಿಲೆ, ಅಳಿಲು, ಚಿಟ್ಟೆ, ಒಂದೂ ಕಾಣಿಸುತ್ತಿಲ್ಲವಲ್ಲ ಅಂದುಕೊಂಡೆ. ಛಾವಣಿಯಿಂದ ಕೆಳಗಿಳಿದು ಷೂ ಧರಿಸಿ ನನ್ನ ಬೆಳಗಿನ ವ್ಯಾಯಮಕ್ಕೆಂದು ವಾಕಿಂಗ್ ಹೊರಟೆ. ಅಲ್ಲೇ ಹತ್ತಿರದಲ್ಲಿದ್ದ ಕುಮಾರಸ್ವಾಮಿ ಲೇಔಟಿನ ಒಂದು ಬಿ.ಸಿ.ಸಿ ಉದ್ಯಾವನದ ಬೆಂಚಿನ ಮೇಲೆ ಕುಳಿತು ಗಿಡ ಮರಗಳನ್ನು ನೋಡುತ್ತಿದ್ದೆ. ಅರೆ, ಇಲ್ಲೂ ಕೂಡ ಗುಬ್ಬಚ್ಚಿ, ಅಳಿಲು, ಚಿಟ್ಟೆ ಒಂದೂ ಕಾಣಲ್ವಲ್ಲ. ಬರೀ ಕಾಗೆಗಳೇ. ಮನೆಗೆ ಹೋಗುವ ದಾರಿಯಲ್ಲಿ ಶನೀಶ್ವರನ ಗುಡಿ ಅಂತ ಕಂಡ ದಾರಿಗಂಬವನ್ನೇ ಅನುಸರಿಸಿ ಹೋದಾಗ ಅದೊಂದು ಉಚ್ಚೆ ಕಾಯಿ ಮರದ ಕಟ್ಟೆಗೆ ಗುಡಿಸಿಲಿನಂತೆ ಕಟ್ಟಿದ್ದ ಸಣ್ಣ ಗುಡಿ. ಬಗ್ಗಿ ನೋಡಿದರೂ ಕಾಣದಷ್ಟು ಸಣ್ಣ ಶನೀಶ್ವರ ಕಪ್ಪು ಕಾಗೆ ಮೇಲೆ ಕುಳಿತು ಸವಾರಿ ಮಾಡುತ್ತಿರುವ ದೃಷ್ಯ ಅಸಮದಾನ ತಂದಿತು. ಸುತ್ತಲೂ ಇದ್ದ ಕೊಳಕು, ವಾಸನೆ ಜೊತೆಗೆ ಎಂತಹ ಕೀಳು ಭಕ್ತರಿರಬೇಕು ಅನ್ನಿಸಿತು. ಈ ಬಡಾವಣೆಯಲ್ಲಿ ಕಾಗೆಗಳು ಇಷ್ಟೊಂದು ಯಾಕಿವೆ ಅಂತ ಕಾರಣ ಹೊಳೆದು ತುಟಿ ಅಂಚಿನಲ್ಲಿ ನಗೆ ಮೂಡಿತ್ತು. ಶನೀಶ್ವರನಿಗೆ ನಮಸ್ಕಾರ ಹಾಕಿದೆನಾದರೂ ಗುಬ್ಬಚ್ಚಿಗಳೇನಾದವು ಅಂತ ತಲೆ ಕೊರೆಯುತ್ತಿತ್ತು. ಒಂದು ವೇಳೆ ಈ ಕಾಗೆಗಳೇನಾದರೂ… ಅಂತ ಯೋಚನೆ ಕೂಡ ಬಂತು.
ಎಲ್ಲ ಕಡೆ ಹುಡುಕಿದರೂ ಗುಬ್ಬಚ್ಚಿಗಳೇ ಕಾಣಲಿಲ್ಲ. ಅಮೆರಿಕದಿಂದ ರಜ ಕಳೆಯಲು ಬಂದ ನನಗ್ಯಾಕೆ ಈ ಗುಬ್ಬಚ್ಚಿ ವಿಚಾರ ಅಂತ ಸುಮ್ಮನಾದೆ. ಅಣ್ಣ, ಅಕ್ಕ, ಸಂಭದೀಕರು, ಗೆಳೆಯರು ಅಂತ ಎಲ್ಲರ ಮನೆಗಳಿಗೂ ಬೇಟಿ ಕೊಡುವುದರಲ್ಲಿ ಕಾಲ ಹೋದದ್ದೇ ಗೊತ್ತಾಗಲಿಲ್ಲ. ಅಣ್ಣನ ಮನೆಯಲ್ಲೇ ಇದ್ದ ಅಮ್ಮನ ಜೊತೆ ಕಾಲ ಕಳೆಯುವಾಗ, ಊಟ ಮಾಡುವಾಗ, ಮನಬಿಚ್ಚಿ ಮಾತನಾಡುವಾಗ, ಅಮ್ಮ ಹೇಳಿದ ಕತೆಗಳನ್ನು ಕಿವಿಗೊಟ್ಟು ಕೇಳುವಾಗ ಎಲ್ಲಿಲ್ಲದ ನೆಮ್ಮದಿ ತರುತ್ತಿತ್ತು. ಅಮ್ಮ ತಾತ್ಕಾಲಿಕವಾಗಿ ಉಳಿದು ಕೊಂಡಿರುವುದು ನಮ್ಮ ಅಣ್ಣನ ಮನೆಯಲ್ಲಿ. ಬಸವನಗುಡಿಯಲ್ಲಿದ್ದ ಸ್ವಂತ ಹಳೆ ಹೆಂಚಿನ ಮನೆಗೆ ಬೀಗ ಹಾಕಿದ್ದರೂ ಅಮ್ಮನ ಮನಸ್ಸೆಲ್ಲ ಅಲ್ಲೇ ಇರುತ್ತಿತ್ತು. ನಾವೆಲ್ಲ ಬೆಳೆದ ಮನೆಯನ್ನು ನೋಡದೆ ಅಮೆರಿಕಗೆ ಹೋಗಲು ನನಗೂ ಮನಸ್ಸಿರಲಿಲ್ಲ. ಬೀಗದ ಕೈ ಹಿಡಿದು ಬಸವನಗುಡಿ ಮನೆಗೆ ಒಬ್ಬನೇ ಹೋದೆ. ಅಪ್ಪ ಕಟ್ಟಿಸಿದ ಹೆಂಚಿನ ಮನೆ ಮುರುಕು ಸ್ತಿಥಿಯಲ್ಲಿ ಬಿಕೋ ಅನ್ನಿಸಿತು. ಇಲಿ ಹೆಗ್ಗಣಗಳು ದಾಳಿ ಮಾಡಿರುವ ಸೂಚನೆ ಅವುಗಳ ಮಲ ಮೂತ್ರದ ವಾಸನೆಯಿಂದಲೇ ಗೊತ್ತಾಗುತ್ತಿತ್ತು. ಉಸಿರು ಕಟ್ಟಿದಂತಾಗಿ ಎಲ್ಲ ಕಿಟಕಿ ಬಾಗಿಲುಗಳನ್ನು ತೆರೆದು ಒಂದೊಂದೇ ಕೋಣೆಗೆ ಹೋಗಿ ನೋಡಿದೆ. ನಡುಮನೆಯಲ್ಲಿದ್ದ ಅಮ್ಮ ಮಲಗಿಕೊಳ್ಳುವ ಮಂಚದ ಮೇಲೆ ಕುಳಿತೆ. ಗ್ಲ್ಯಾಸ್ ಹೆಂಚಿನ ಮೂಲಕ ಬೀಳುತ್ತಿದ್ದ ಸೂರ್ಯನ ಕಿರಣ ಹಿತವೆನ್ನಿಸಿತು. ಕತ್ತೆತ್ತಿ ನೋಡಿದಾಗ ಅಮ್ಮ ಮಡಿ ಸೀರೆ ಒಣಗಲು ಹಾಕುತ್ತಿದ್ದ ತಂತಿ ಇನ್ನೂ ಹಾಗೆ ಇತ್ತು. ಮಡಿ ಕೋಲು ಸದಾ ಬಾಗಿಲಿನ ಹಿಂದೆ ಇರಲೇ ಬೇಕಲ್ಲವೆ ಎಂದು ಕೊಂಡವನು ನಡುಮನೆಯ ಬಾಗಿಲ ಹಿಂದೆ ನೋಡಿದೆ. ಅದೇ ಐದಡಿ ಉದ್ದದ ತೆಳ್ಳನೆ ಬಿದುರಿನ ಕೋಲು, ಅಂದುಕೊಂಡಂತೆ ಗೋಡೆಗೆ ಒರಗಿ ನಿಂತಿತ್ತು. ನನಗರಿವಿಲ್ಲದಂತೆ ಕೈಗೆತ್ತಿಕೊಂಡೆ. ಗುಬ್ಬಚ್ಚಿ ವಿಚಾರ ಮರೆತಿದ್ದೆನಾದರೂ ಆ ಮಡಿ ಕೋಲು ನೋಡಿದ ಮೇಲೆ ಎಲ್ಲ ಮರುಕಳಿಸಿ ಬಂದಿತು. ಇಪ್ಪತ್ತು ವರ್ಷಗಳೇ ಆಗಿರಬೇಕಲ್ಲವೆ….
ಆ ದಿನ ಹಾಸಿಗೆಯಿಂದ ಎದ್ದವನೇ ನಿರ್ಧರಿಸಿ ಬಿಟ್ಟಿದ್ದೆ. ಏನಾದರೂ ಮಾಡಿ ಈ ಗುಬ್ಬಚ್ಚಿಗಳನ್ನು ಮನೆಯಿಂದ ಹೊರಗೋಡಿಸಲೇ ಬೇಕೆಂದು. ಅವಕ್ಕೆಷ್ಟು ಧೈರ್ಯವಿರಬೇಕು. ನನ್ನ ಕೋಣೆಯ ಒಳಗೆ ಹೆಂಚಿಗೆ ಅಂಟಿಕೊಂಡಂತೆ ಈ ಗುಬ್ಬಚ್ಚಿಗಳು ಗೂಡು ಕಟ್ಟಿ ಗಬ್ಬೆಬ್ಬಿಸುತ್ತಿವೆಯಲ್ಲ ಅಂತ ಕೋಪ ಬಂದಿತ್ತು. ಸಾಲದು ಎನ್ನುವಂತೆ ನಾನು ಮಾಡುತ್ತಿದ್ದ ಡ್ರಾಯಿಂಗ್ ಮೇಲೆ ಹಿಕ್ಕೆ ಹಾಕಿ ಪುರ್ ಅಂತ ಹಾರಿ ಹೋಗಿತ್ತಲ್ಲ, ನೋಡ್ಕೊಳ್ತೀನಿ ಈವತ್ತು ಎಂತಲೇ ಎದ್ದೆ. ನಡುಮನೆಗೆ ಹೋಗಿ ಅಮ್ಮನ ಮಡಿ ಕೋಲು ತಂದಿಟ್ಟುಕೊಂಡೆ. ಗೂಡಿನ ಒಡೆಯರಾದ ಗಂಡು ಹೆಣ್ಣು ಗುಬ್ಬಚ್ಚಿಗಳು ಒಳಗೆ ಬರುವುದನ್ನೇ ಕಾದು ತಕ್ಷಣ ಕಿಟಕಿ ಬಾಗಿಲುಗಳೆನ್ನೆಲ್ಲ ಮುಚ್ಚಿದೆ. ವಿಕಾರವಾಗಿ ಕಿರುಚುತ್ತಾ ಮಡಿ ಕೋಲನ್ನು ಎತ್ತರಕ್ಕೆ ಬೀಸುತ್ತ ಗುಬ್ಬಚ್ಚಿಗಳು ಹಠಾತ್ತನೆ ದಿಗ್ಬ್ರಾಂತಿಗೊಳ್ಳುವಂತೆ ಮಾಡಿದೆ. ಕಿಟಕಿ ಮುಚ್ಚಿದ್ದರಿಂದ ತಪ್ಪಿಸಿಕೊಳ್ಳಲು ಸಾದ್ಯವೇ ಇರಲಿಲ್ಲ. ಏದುಸಿರು ಬಿಡುತ್ತಿದ್ದ ಆ ಬೆದರಿದ ಗುಬ್ಬಿಗಳು ಹೆಂಚಿನೆತ್ತರಕ್ಕೇ ಹಾರಿ ಹಾರಿ ಸುಸ್ತಾದ ಮೇಲೆ "ಹುಂ, ಇನ್ನೆಂದಾದರು ಒಳಗೆ ಬಂದೀರ, ಜೋಕೆ" ಅಂತ ಕಿರುಚಿ ಕಿಟಕಿ ಬಾಗಿಲು ತೆರೆದೆ. ಬದುಕಿದೆಯ ಬಡ ಜೀವಿ ಅಂತ ಎರಡೂ ಗುಬ್ಬಚ್ಚಿಗಳು ಹಾರಿ ಹೋಗುವುದನ್ನು ನೋಡಿ ಏನೋ ಗೆದ್ದವನಂತೆ ಅನ್ನಿಸಿತು. ಒಂದು ಕುರ್ಚಿಯ ಮೇಲೆ ನಿಂತು ತೊಲೆಗೆ ಹೆಂಚಿಗೆ ಮಧ್ಯ ಕಟ್ಟಿದ್ದ ಗೂಡನ್ನು ಕೋಲಿನಿಂದ ಎಬ್ಬಿ ತಿವಿದು ಕೆಳಗುರುಳಿಸಿದೆ. ಗೂಡು ನೆಲಕ್ಕೆ ಬೀಳುವ ಮುನ್ನವೇ ಟಪ್, ಟಪ್ ಅಂತ ಎಂದು ಶಬ್ದ ಬಂದಾಗ ನೆಲದ ಕಡೆ ಕಣ್ಣಾಡಿಸಿದೆ. ನಾನು ಯೋಚಿಸದೆ ಮಾಡಿದ ಪಾಪ ಕಾರ್ಯ ನನಗರಿವಿಲ್ಲದಂತೆ ನಡೆದು ಹೋಗಿತ್ತು. ಕುರ್ಚಿಯಿಂದ ಕೆಳಗಿಳಿದು ನೋಡಿದೆ. ಕೆಂಪು ರೆಡ್ ಆಕ್ಸೈಡ್ ಸಿಮೆಂಟ್ ನೆಲದ ಮೇಲೆ ಎರಡು ನಿರಾಕಾರದ ಹಳದಿ ಲೋಳೆಗಳು ಒಂದನ್ನೊಂದು ಮುತ್ತಿಡುವಂತೆ ಚಲ್ಲಿತ್ತು. ಪಕ್ಕದಲ್ಲೇ ಬಿಳಿ ಹತ್ತಿ, ಕಾಗದದ ಚೂರು, ಗರಿಕೆ, ದಾರಗಳಿಂದ ಮಾಡಿದ್ದ ಗುಬ್ಬಚ್ಚಿಗಳ ಗೂಡು ಕೇಳುವರಿಲ್ಲದೆ ಬಿದ್ದಿತ್ತು. ಎಂತಹ ಅನಾಹುತವಾಯಿತಲ್ಲ ಅಂತ ಮನಸ್ಸು ಬೇಸರಗೊಳ್ಳುತ್ತಿತ್ತು. ಛೆ, ಗುಬ್ಬಿಗಳು ಮೊಟ್ಟೆ ಇಟ್ಟಿವೇ ಅಂತ ಗೊತ್ತಿದ್ದರೆ ಖಂಡಿತ ಗೂಡು ಬೀಳಿಸುತ್ತಿರಲಿಲ್ಲ. ಒಂದು ವೇಳೆ ಗೂಡಿನ ಜೊತೆಗೇ ಬಿದ್ದಿದ್ದರೆ ಮೊಟ್ಟೆಗಳು ಒಡೆಯುತ್ತಿರಲಿಲ್ಲವೇನೋ. ಯಾಕಾದರೂ ಈ ಮಡಿ ಕೋಲು ತಂದೆನೋ. ಏಣಿ ಹಾಕಿಕೊಂಡು ಕೈಯಲ್ಲೇ ಗೂಡು ಕಿತ್ತಿದ್ದರೆ ಮೊಟ್ಟೆ ಇರುವ ಅರಿವಾಗುತ್ತಿತ್ತೇನೋ. ಎಷ್ಟು ಸಮಾದಾನ ಮಾಡಿಕೊಂಡರೂ ಗುಬ್ಬಿ ಹತ್ಯೆಗೆ ಕಾರಣನಾದ ಅಪರಾಧಿ ನಾನೇ ಎಂದು ಒಳ ಮನಸ್ಸು ಕೊರೆಯುತ್ತಿತ್ತು. ಮತ್ತೇನಾದರು ಆ ಗುಬ್ಬಿಗಳು ಮೊಟ್ಟೆಗೆ ಕಾವು ಕೊಡಲು ಬಂದರೇ? ಈ ಬೀಕರ ದೃಷ್ಯವನ್ನು ಆ ಬಡ ಅಪ್ಪ-ಅಮ್ಮ ಗುಬ್ಬಿಗಳು ನೋಡದಿರಲೆಂದು ಮತ್ತೆ ಕಿಟಕಿ ಬಾಗಿಲು ಮುಚ್ಚಿದೆ. ಏನೂ ಮಾಡಲು ತೋಚದೆ ಸುಮ್ಮನೆ ಕತ್ತಲಲ್ಲಿ ಕುಳಿತೆ. "ಅಯ್ಯ, ಇದ್ಯಾಕ ಹಿಂಗ ಕತ್ತಲಲ್ಲಿ ಕೂತ್ರಿ" ಅಂತ ಕೋಣೆಯೊಳಗೆ ಬಂದ ಕೆಲಸದವಳಿಗೆ ಎಲ್ಲ ಅರ್ಥವಾಗಿತ್ತು. "ಗುಬ್ಬಿ ಕೊಂದು ಪಾಪ ಕಟ್ಟ್ಕೊಂಡವ್ರೆ, ರವಪ್ಪ" ಅಂತ ತನ್ನ ಎಂಟು ವರ್ಷದ ಮಗಳಿಗೂ ಹೇಳಿದ್ದು ಕೇಳಿಸಿತು. ಹಿತ್ತಲಿನಿಂದ ಬೊಗಸೆಗೈಯಲ್ಲಿ ಸ್ವಲ್ಪ ಮಣ್ಣು, ಹೊಟ್ಟಿನ ಪುಡಿ ತಂದು ಲೋಳೆಯ ಮೇಲೆ ಹಾಕಿ ವಾಂತಿ ಎತ್ತುವಂತೆ ಮೊರದಲ್ಲಿ ತುಂಬಿ ನೆಲ ಸ್ವಚ್ಚ ಮಾಡಿದ ಕೆಲಸದಾಕೆಗೆ ಮನಸ್ಸಿನಲ್ಲೇ ಧನ್ಯವಾದ ಹೇಳಿಕೊಂಡೆ. ಮಡಿ ಕೋಲು ಇನ್ನು ಅಲ್ಲೇ ಗೋಡೆಗೆ ಒರಗಿ ನಿಂತಿತ್ತು. ಕೆಲಸದವಳಿಗೂ ಗೊತ್ತು ತಾನು ಮಡಿ ಕೋಲು ಮುಟ್ಟುವ ಹಾಗಿಲ್ಲ ಎಂದು. ಅದಕ್ಕೆ ಅಂತ ಕಾಣುತ್ತೆ, ನೆಲ ಎಲ್ಲ ಸ್ವಚ್ಚ ಮಾಡಿದರೂ ಮಡಿ ಕೋಲನ್ನು ಅಲ್ಲೇ ಬಿಟ್ಟಿದ್ದಳು. ಈ ಮಡಿ ಕೋಲು ಅಪವಿತ್ರವಾದ ಕೆಲಸ ಮಾಡಲು ಸಹಾಯ ಮಾಡಿದೆ. ಇದನ್ನು ಶುಬ್ರಗೊಳಿಸದೆ ಅಮ್ಮನಿಗೆ ಗೊತ್ತಿಲ್ಲದಂತೆ ನಡುಮನೆಗೆ ವಾಪಸ್ಸು ಇಡಲು ಮನಸ್ಸಾಗಲಿಲ್ಲ. ಹಿತ್ತಲಲ್ಲಿದ್ದ ಒಗೆಯೊ ಕಲ್ಲಿನ ಬಳಿ ಹೋಗಿ ತೊಟ್ಟಿಯ ಮೇಲಿದ್ದ ತಾಮ್ರದ ಚೊಂಬಿನಿಂದ ನೀರು ತುಂಬಿ ಮೂರು ಸಲ ಮಡಿ ಕೋಲಿನ ಮೇಲೆ ಸುರಿದ ನಂತರ ಸ್ವಚ್ಚವಾಗಿ ಕಾಣಿಸಿತು. ಒಂದು ಹಳೆ ಬಟ್ಟೆಯಲ್ಲಿ ಆ ಮಡಿ ಕೋಲನ್ನು ಒರೆಸಿ, ಅಡಿಗೆ ಮನೆಯಲ್ಲಿದ್ದ ಅಮ್ಮನಿಗೆ ಗೊತ್ತಾಗದಂತೆ ತಂದು ನಡುಮನೆಯ ಬಾಗಿಲಿನ ಹಿಂದೆ ಒರೆಗಿಸಿದೆ. ಆಗಲೇ ಹತ್ತು ಗಂಟೆ ಹೊಡೆದು ಹೊಟ್ಟೆ ಚುರುಗುಟ್ಟುತ್ತಿತ್ತು.
ಛಠ ಛಠನೆ ಸಿಡಿಯುವ ಒಗ್ಗರಣೆ ಶಬ್ದದ ಜೊತೆಗೆ ಕಾದ ಸೌಟಿನಿಂದ ಒಗ್ಗರಣೆ ಇಳಿಬಿಡುವಾಗ ಬರುವ ಛುಯ್ ಶಬ್ದ, ಘಂ ಅಂತ ಮೂಗಿಗೆ ಬರುವ ಹಿಂಗಿನ ಸುವಾಸನೆ ಎಲ್ಲ ಸೇರಿ ಅಡುಗೆ ತಯಾರಿದೆ ಎಂದು ಗೊತ್ತಾಯಿತು. ಸ್ನಾನ ಮಾಡಿ ಬಂದಾಗ ಅಮ್ಮ ನಡುಮನೆಯಲ್ಲಿ ತಟ್ಟೆ ಹಾಕಿ ಕಾಯುತ್ತಿದ್ದರು. "ನಿನಗಿಷ್ಟವೆಂದು ಹೆಸರು ಬೇಳೆ ತೌವ್ವೆ ಮಾಡಿದ್ದೀನಿ" ಎಂದು ಹೇಳಿ ಚಲ್ಲದಿರುವಂತೆ ಪಾತ್ರೆ ಕೊನೆಗೆ ಸೌಟಿನ ತಳ ಒರೆಸಿ ತಟ್ಟೆಗೆ ಹಾಕಲು ಬಂದಾಗ ಎರಡು ತೊಟ್ಟು ನೆಲದ ಮೇಲೆ ಬಿದ್ದದ್ದು ಅಮ್ಮನಿಗೆ ಕಾಣಲಿಲ್ಲ. ಕೆಂಪು ರೆಡ್ ಆಕ್ಸೈಡ್ ಸಿಮೆಂಟ್ ನೆಲದ ಮೇಲೆ ಬಿದ್ದ ನಿರಾಕಾರದ ಹಳದಿ ತೌವ್ವೆಗೂ, ಸ್ವಲ್ಪ ಹೊತ್ತಿನ ಕೆಳಗಾದ ಪಾಪ ಕಾರ್ಯಕ್ಕೂ ತೀರ ಹೋಲಿಕೆಯ ಅರಿವಾಗಿ ಹೊಟ್ಟೆ ತೊಳಸಿದಂತಾಯಿತು. "ನನಗೆ ಹಸಿವಿಲ್ಲ" ಅಂತ ಹೇಳಿ ಕೈ ತೊಳೆದೆ.
ದಪ್ ಅಂತ ಆದ ಶಬ್ಧದಿಂದ ಎಚ್ಚತ್ತು ಮಡಿ ಕೋಲನ್ನು ಅಲ್ಲೆ ಗೋಡೆಗೆ ಒರಗಿಸಿ ಮುಂಬಾಗಿಲಿಗೆ ಬಂದೆ. ಪೇಪರ್ ಹುಡುಗ ಕಿಟಕಿ ಮೂಲಕ ಎಸದ ಡೆಕ್ಕನ್ ಹೆರಾಲ್ಡ್‍ದೆ ಇರಬೇಕು, ದಪ್ ಅಂತ ಶಭ್ದ ಆಗಿತ್ತು ಅಂತ ಖಚಿತವಾಯಿತು. ಅಲ್ಲೆ ಇದ್ದ ಒಂದು ಸೋಫ಼ ಕುರ್ಚಿಯಲ್ಲಿ ಕುಳಿತು ಪೇಪರ್ ತಿರುವಿಹಾಕಿದೆ. ಎದುರಿಗಿದ್ದ ಗಾಜಿನ ಅಲ್ಮಿರ ಕಡೆ ಗಮನ ಹರಿಯಿತು. ನಾನು ಚಿಕ್ಕವನಾಗಿದ್ದಲೂ ನೋಡುತ್ತಿದ್ದ ಮಣ್ಣಿನ ಗೊಂಬೆಗಳು ಬೀರುವಿನಲ್ಲಿ ಸಾಲಾಗಿ ಮೌನವಾಗಿ ಕುಳಿತಿದ್ದವು. ಬಿಳಿಯ ಬಣ್ಣದ ಸ್ವೌಮ್ಯ ಮೂರ್ತಿ ಬುದ್ಧನ ಬೊಂಬೆ, ರಾಮ ಸೀತೆ ಲಕ್ಶ್ಮಣ ಹನುಮಂತನ ಬೊಂಬೆಗಳು, ಸರಸ್ವತಿಯ ಬೊಂಬೆ ಎಲ್ಲ ಸಮಯದ ಪರಿವೆಯೇ ಇಲ್ಲದಂತೆ ಕುಳಿತಲ್ಲೆ ನಿಂತಲ್ಲೇ ಸುಮಾರು ಇಪ್ಪತೈದು ವರ್ಷಗಳಿಂದ ಅದೇ ಗೂಡಿನಲ್ಲಿ ಇರುವುದು ನೋಡಿ ಕಾಲ ಎಷ್ಟು ಸ್ಥಿರ ಸ್ಥಿತಿಯಲ್ಲಿದೆ ಅನ್ನಿಸಿತು. ಸಮ್ ತಿಂಗ್ಸ್ ನೆವೆರ್ ಚೇಂಜ್! ಗೂಡಿನಲ್ಲೇ ಇದ್ದ ಹಳೆ ಫೋಟೊ ಆಲ್ಬುಮ್ ಕೈಗೆತ್ತಿಕೊಂಡೆ. ಅಜ್ಜ ಅಜ್ಜಿ ಫೋಟೊ, ಅಪ್ಪನ ರಿಟೈರ್ಮೆಂಟ್ ಫೋಟೊ, ಅಮ್ಮನ ಜೊತೆ ಹಾಸನದ ಗೌಡತಿ ಫೋಟೊ, ಅಕ್ಕ ಭಾವಂದಿರ ಜೋಡಿ ಫೋಟೊ, ಅಣ್ಣ ಅತ್ತಿಗೆಯರ ಜೋಡಿ ಮದುವೆ ಫೋಟೊ, ಹೀಗೆ ಒಂದೊಂದೆ ಕಪ್ಪು ಆಲ್ಬಮ್ ಪುಟಗಳನ್ನು ಬೆರಳು ಬೇಗನೆ ತಿರುವಿ ಹಾಕುತ್ತಿದ್ದರೂ ಮನಸ್ಸು ಮಾತ್ರ ಹಿಂದಿನ ಘಟನೆಗಳನ್ನೆಲ್ಲವನ್ನು ಕತೆಯಂತೆ ಪೋಣಿಸಿಯೇ ಮುಂದಕ್ಕೆ ಹೋಗುತ್ತಿತ್ತು. ಅರೆ, ನಾವಿದ್ದ ಗುಬ್ಬಿ ಹಳ್ಳಿಯ ಮನೆ –ಶಾಂತಿ ನಿಲಯ, ಗುಬ್ಬಿ ಕೆರೆ, ಗೆಳಯ ಅನಂತ, ಅಪ್ಪ ಅಮ್ಮನ ವರಮಹಾಲಕ್ಷಿ ವ್ರತದ ಫೋಟೊ, ಶಿವಗಂಗೆ ಬೆಟ್ಟ, ಬೇಲೂರು ಎಲ್ಲ ಕಣ್ಣಿಗೆ ಕಟ್ಟಿದೆಯಂತಿದೆಯಲ್ಲ. ಗುಬ್ಬಿ ನೆನೆಪು ಯಾವಾಗಲೂ ಹಸಿರಾಗೆ ಉಳಿದಿದೆಯಲ್ಲ, ಯಾಕಿರಬಹುದು? ನನ್ನಾಕೆ ಕೂಡ ಗುಬ್ಬಿಯಲ್ಲಿ ಬೆಳದವಳಲ್ಲವೆ? ಆ ಕಾರಣದಿಂದಿರಬಹುದೆ? ಅಥವ ಅವಳೂ ಕೂಡ ಗುಬ್ಬಿಯಲ್ಲಿ ನನ್ನಂತೆಯೆ ಮತ್ತೆಲ್ಲೂ ನೋಡದ ವೆಲ್ವೆಟ್ ಹುಳಗಳನ್ನು ಬೆಂಕಿಪೊಟ್ಟಣದಲ್ಲಿ ಹುಲ್ಲಿನ ಹಾಸಿಗೆ ಮಾಡಿ ಅದರೊಳಗಿಟ್ಟು ಆಟವಾಡಿದ್ದಾಳೆ ಅಂತಲೆ? ಅಥವ ಬೈಲಾಂಜನ ಗುಡಿಯಲ್ಲಿ ಮುತ್ತುತ್ತಿದ್ದ ಕೋತಿಗಳಿಗೆ ಬಾಳೆಹಣ್ಣು ಕೊಡುವಾಗ ಒಂದು ಗಡವ ಕೋತಿ ಮೈಮೇಲೆ ಹಾರಿತ್ತೆಂದೆ? ಸದಾ ನೆನಪು ಗುಬ್ಬಿಯದು.
"ಯಾಕೋ ಬೆಳಗಿನಿಂದ ಪೆಚ್ಚಗಿದಿಯೆಲ್ಲ" ಅಮ್ಮ ರಾತ್ರಿ ಕೇಳಿದ ಪ್ರಶ್ನೆಗೆ ಉತ್ತರ ಕೊಡಲಿಲ್ಲ. "ಕೆಲಸದವಳು ಎಲ್ಲ ಹೇಳಿದಳು. ಗುಬ್ಬಚ್ಚಿ ಮೊಟ್ಟೆ ಒಡೆದೆ ಅಂತ ಯಾಕೆ ಬೇಜಾರು ಮಾಡ್ಕೋಳ್ತಿ? ಏನೋ ಗೊತ್ತಿಲ್ಲದೆ ತಪ್ಪು ಮಾಡಿದ್ದಿ. ಏನ್ಮಾಡೋಣ ಹೇಳು. ಮುಂದಿನ ವಾರ ಆ ಚಂದ್ರಶೇಕರಯ್ಯ ಗುಬ್ಬಿ ಜಾತ್ರೆಗೆ ಹೋಗುತ್ತಾರಂತೆ. ಅವರಿಗೆ ಇಪ್ಪತ್ತೈದು ರೂಪಾಯಿ ಕೊಟ್ಟು ಗುಬ್ಬಮ್ಮನ ಹುಂಡಿಗೆ ನಿನ್ನ ಹೆಸರ್ಹೇಳಿ ಹಾಕ್ಬಿಡಿ ಅಂತ ಹೇಳಿದೀನಿ. ಅವರು ಹೊರಡೋ ದಿವಸ ನೀನೆ ಹೋಗಿ ಬಾಳೆಹಣ್ಣು ತೆಂಗಿನಕಾಯಿ ಕೊಟ್ಟು ಅವರಿಗೆ ನಮಸ್ಕಾರ ಮಾಡಿ ಬಾ." ಹಲ್ಲಿ ಮೈ ಮೇಲೆ ಬಿದ್ದ ದೋಷಕ್ಕೆ ಪರಿಹಾರ ಇರುವಂತೆ ಇದಕ್ಕೂ ಪರಿಹಾರ ಇದೆಯೆಲ್ಲ ಅಂತ ಸ್ವಲ್ಪ ಸಮಾಧಾನ ಆಗಿತ್ತು.
ಗಂಟೆ ಹನ್ನೆರಡಾಗಿತ್ತು. ಟೈಮ್ ಹೋಗಿದ್ದೇ ಗೊತ್ತಾಗಲಿಲ್ಲ. ಈ ಬಸವನಗುಡಿ ಮನೆ ಯಾವಾಗಲೂ ಹೀಗೆ– ನೆನೆಪಿನ ಗಣಿ. ಎಲ್ಲಿ ಅಗೆದರೂ ಸಿಹಿ ಕಹಿ ಅನುಭವಗಳ ಖಣಿಜವೇ ಸಿಗುತ್ತೆ. ಅಮ್ಮ ಊಟಕ್ಕೆ ಕಾಯುತ್ತಾ ಇರ್ತಾರೆ ಅಂತ ಅರಿವಾಗಿ ಹೊರಡುವ ಆತುರವಾಯಿತು. ಎಲ್ಲ ಬಾಗಿಲುಗಳನ್ನು ಮುಚ್ಚಿದ್ದೇನೆಯೇ ಎಂದು ಖಾತ್ರಿ ಪಡಿಸಿಕೊಳ್ಳಲು ಹಿಂಬಾಗಿಲಿಗೂ ಹೋದೆ. ಆ ಬಾಗಿಲಿಗೆ ಮರದಲ್ಲೆ ಮಾಡಿದ್ದ ಬೀಗ ಭದ್ರವಾಗಿ ಹಾಕಿತ್ತು. ಗುಡಿ ಹೆಬ್ಬಾಗಿಲುಗಳಿಗೆ ಹಾಕಲಹರ್ವವಾದ ಆ ಮಜುಭೂತಾದ ಬೀಗ ಕೂಡ ಗುಬ್ಬಿಯ ನೆನಪನ್ನು ತಂದಿತು. ಗುಬ್ಬಿ ಆಶ್ರಮದ ಭಟ್ಟರು ಬೆಂಗಳೂರಿಗೆ ನಮ್ಮ ಮನೆಗೆ ಬಂದಾಗ ತೇಗದ ಮರದಲ್ಲಿ ಕೆತ್ತಿ ಮಾಡಿದ್ದ ಟೊಂಕಶಾಲೆ ಬೀಗ ಅದು. ಆ ಬೀಗದ ನಿಗೂಡ ವಿನ್ಯಾಸ ಗೊತ್ತಿಲ್ಲದವರು ತಿಪ್ಪರಲಾಗ ಹೊಡೆದರೂ ತೆಗೆಯಲು ಸಾಧ್ಯವಿರಲಿಲ್ಲ. ಶಾಲೆಯಿಂದ ಬರುವ ವೇಳೆಗೆ ಹೊರಟು ಹೋಗಿದ್ದ ಭಟ್ಟರ ಮುಖ ಮಸಕು ಮಸುಕಾಗಿ ನೆನಪಿತ್ತು ಅಷ್ಟೆ. ಮುಂಬಾಗಿಲಿಗೆ ಬೀಗ ಹಾಕಿ ಆಟೋ ಹಿಡಿದು ಕುಮಾರಸ್ವಾಮಿ ಲೇಔಟಿಗೆ ವಾಪಸ್ಸು ಬಂದು ಅಮ್ಮ ಬಡಿಸಿದ ಊಟ ಮಾಡಿ ಹಾಗೇ ಚಾಪೆಯ ಮೇಲೆ ಉರಳಿಕೊಂಡೆ. ಮಂಪರು ನಿದ್ದೆಯಲ್ಲಿ ಗುಬ್ಬಿ ಚಿತ್ರದ ಬಣ್ಣ ಬಣ್ಣದ ಚಿಟ್ಟೆಗಳು ಹಾರುವಂತೆ ಕಣ್ಮುಂದೆಯೇ ಕಾಣತೊಡಗಿದವು.
ಗುಬ್ಬಿ ಒಂದು ಹಳ್ಳಿಯೂ ಅಲ್ಲ, ಪಟ್ಟಣವೂ ಅಲ್ಲ. ಹೆಸರಿಗೆ ತಕ್ಕಂತೆ ಗುಬ್ಬಚ್ಚಿಯಷ್ಟೆ ಚಿಕ್ಕದಾದ ಜಾಗ. ಕಲ್ಲು ಕಲ್ಲು ಕೂಡ ಕಥೆ ಹೇಳುವ ಕರ್ನಾಟಕದಲ್ಲಿ ಗುಬ್ಬಿಗೂ ಒಂದು ಪುರಾತನ ಸ್ಥಳಮಹಿಮೆ ಇರಬೇಕಲ್ಲವೆ? ಇಲ್ಲವಾದಲ್ಲಿ ಗುಬ್ಬಿ ಅಂತ ಯಾರು ಹೆಸರು ಇಡಲು ಹೋಗ್ತಾರೆ? ಯಾಕೋ ಏನೋ ಎಷ್ಟು ಜ್ಞಾಪಿಸಿಕೊಂಡರೂ ಗುಬ್ಬಿ ಹೆಸರಿನ ಹಿಂದಿದ್ದ ಚರಿತ್ರೆ ನೆನಪಿಗೆ ಬರಲಿಲ್ಲ. ಹಳ್ಳಿ ಅಥವ ಊರಿನ ಹೆಸರು ಪ್ರಾಣಿಗಳ ಮೂಲಾದಾರದಿಂದ ಬರುವುದು ತೀರ ಕಡಿಮೆಯಾದರು ಬಸವನಹಳ್ಳಿ, ನಂದಿಗ್ರಾಮ, ನವಿಲೂರು ಹೀಗೆ ಎಷ್ಟು ಜಾಗಗಳನ್ನು ನಾನೆ ನೋಡಿಲ್ಲವೆ. ಅವೆಲ್ಲಕ್ಕೂ ಒಂದಲ್ಲ ಒಂದು ಕತೆ ಪುರಾಣ ಹಣದಿದ್ದರಲ್ಲವೆ ನಮ್ಮ ಪೂರ್ವಿಕರು. ಏನಿಲ್ಲ ಅಂದರೂ ಹಳ್ಳಿ ಗೌಡ, ಊರಿನ ದೊರೆ, ಋಷಿಮುನಿಗಳು, ಗಾನಗಂಧರ್ವರು, ದೇವ ದೇವತೆಗಳು –ಹೀಗೆ ಯಾರಾದರೊಬ್ಬರು ಸ್ಥಳಪುರಾಣಕ್ಕೆ ಕಾರಣರಿರಬೇಕಲ್ಲ. ಚಿಕ್ಕನಾಯಕನ ಹಳ್ಳಿಗೂ ಒಬ್ಬ "ನಾಯಕ" ಇದ್ದಂತೆ. ಆದರೆ ಗುಬ್ಬಿಗೆ? ಗುಬ್ಬಮ್ಮನ ಜಾತ್ರೆಗೂ ಹೋಗಿದ್ದ ನೆನಪಿದೆ. ಜಾತ್ರೆಗೆ ಹೋಗುವಾಗ ಗುಬ್ಬಮ್ಮನ ಪೂಜೆ ಯಾಕೆ ಮಾಡುತ್ತಾರೆಂದು ಅಮ್ಮ ಹೇಳಿದ್ದ ಕಥೆಗೂ ಗುಬ್ಬಿ ಹೆಸರಿಗೂ ಏನೋ ಸಂಭಂದ ಇತ್ತಲ್ಲವೆ ಅಂತ ಮನಸ್ಸು ಮೆಲಕು ಹಾಕುತ್ತಿತ್ತು. ಗುಬ್ಬಿಯಲ್ಲಿ ಹುಟ್ಟಿ ಬೆಳದವರಿಗೆ ಗುಬ್ಬಿ ಗುಬ್ಬಮ್ಮನ ಜಾತ್ರೆ ಪುರಾಣ ಗೊತ್ತಿಲ್ಲ ಅಂದರೆ ಯಾರಾದರು ನಂಬುತ್ತಾರೆಯೆ? ಬೆಂಗಳೂರಿನಲ್ಲಿ ಬಸವನಗುಡಿ ಬಸವಣ್ಣನ ಕತೆಗೂ ಕಡಲೆಕಾಯಿ ಪರ್ಷೆಗೂ ಸಂಭಂದ ಕಲ್ಪಿಸಬೇಕೆ? ಯಾರಾದರು ನಕ್ಕಾರು. ಗುಬ್ಬಿ ಜಾತ್ರೆಗೆ ಹೋಗಿದ್ದು ಒಂದೆ ಸಲ. ಬಲ ಮೊಣಕೈ ಮೇಲೆ ಇದ್ದ ಸುಟ್ಟ ಗಾಯದ ಕಲೆ ನೋಡಿದಾಗಲೆಲ್ಲ ಅದ್ಯಾಕೋ ಗುಬ್ಬಮ್ಮನ ಜಾತ್ರೆ ನೆನಪಿಗೆ ಬರುತ್ತಿತ್ತು. ಗುಬ್ಬಿ ಜಾತ್ರೆಗೆ ಹೋಗುವರೆಲ್ಲಾ ಒಂದಲ್ಲಾ ಒಂದು ಕೋರೈಕೆ ಇಟ್ಟುಕೊಂಡೆ ಹೋಗ್ತಿದ್ರಲ್ಲವೆ. ಮೊಣಕೈ ಮೆಲೆ ಬಂದಿದ್ದ ನರ ಗಳ್ಳೆ (ವಾರ್ಟ್) ಕುದುರೆ ಬಾಲದ ಕೂದಲು ಕಟ್ಟಿದರೂ ಹೋಗದಿದ್ದಾಗ ಅಮ್ಮ ಗುಬ್ಬಮ್ಮನ ಮೊರೆ ಹೊಕ್ಕಿದ್ದು ಜ್ಞಾಪಕ ಬಂತು. ಜಾತ್ರೆಲಿ ಗುಬ್ಬಮ್ಮನ ರಥ ಎಳೆಯುವಾಗ ಬಾಳೆಹಣ್ಣು ದೇವರಿಗೆ ಅರ್ಪಿಸುವುದು ಪುರಾತನ ಪದ್ದತಿ. ಆ ಬಾಳೆಹಣ್ಣಿನಲ್ಲಿ ನಾಲ್ಕು ಮೆಣಸಿನ ಕಾಳು ಹುದುಗಿಸಿ ಜಾತ್ರೆ ದಿನ ಗುಬ್ಬಮ್ಮನ ರಥಕ್ಕೆ ಎಸೆದರೆ ಎಂತಹ ನರಗಳ್ಳೆಯೂ ಮಾಯವಾಗುವುದಂತೆ. ಜಾತ್ರೆಗೆ ಹೋಗಲು ಇನ್ನೆಂತಹ ಕಾರಣ ಬೇಕು? ಅಮ್ಮನ ಜೊತೆ ನಾನೂ ಜಾತ್ರೆಗೆ ಹೋಗಿ ಮೆಣಸಿನ ಕಾಳು ಹುದುಗಿಸಿದ ನಾಲ್ಕು ಬಾಳೆಹಣ್ಣುಗಳನ್ನು ರಥಕ್ಕೆಸೆದು ಬಂದಿದ್ದೆ. ಮೂಡನಂಬಿಕೆಯಲ್ಲದಿದ್ದರೂ ದೇವರನ್ನು ನಂಬಿ ಕೆಟ್ಟವರಿಲ್ಲ ಅಂತ ಅಮ್ಮನ ತರ್ಕ. ಆದರೆ ನರಗಳ್ಳೆಯಂತೂ ಹೋಗಲಿಲ್ಲ. ನಮ್ಮ ಅಪ್ಪ ಗುಬ್ಬಿಗೆ ಮೆಡಿಕಲ್ ಆಫ಼ೀಸರ್ ಆಗಿರುವಾಗ ಇಂತ ಸಣ್ಣ ನರಗಳ್ಳೆಗೆ ಔಷದ ಕೊಡದಿರುತ್ತಾರೆಯೆ? ಮೊಣಕೈ ಮೇಲಿದ್ದ ನರಗಳ್ಳೆಗೆ ಒಂದಿಷ್ಟು ಹೈಡ್ರೋಕ್ಲೋರಿಕ್ ಆಸಿಡ್ ಹಾಕಿದರೆ ಆಯಿತು. ನರಗಳ್ಳೆ ಸುಟ್ಟು ಬಸ್ಮವಾಗುತ್ತೆ. ನೂತನ ವೈದ್ಯಕೀಯ ತರ್ಕ ಅಪ್ಪನದು. ದೀಪಾವಳಿ ಹಬ್ಬದಲ್ಲಿ ಆನೇ ಪಟಾಕಿ ಮೈಮೇಲೆ ಸಿಡಿದಂತೆ ನೋವಾಗಿತ್ತು ನನ್ನ ಮೊಣಕೈಗೆ. ಸುಟ್ಟ ಗಾಯ ಉಳಿದರೂ ನರಗಳ್ಳೆಯಂತೂ ಮಾಯವಾಗಿತ್ತು. ಆದರೆ ಚಿಕ್ಕ ಮನಸ್ಸಿನ ಮೇಲೆ ಗುಬ್ಬಮ್ಮನ ಜಾತ್ರೆ ಹೆಚ್ಚು ಪ್ರಭಾವ ಬೀರಿತ್ತೋ ಸುಟ್ಟ ಗಾಯವೋ ಹೇಳುವುದು ಕಷ್ಟ.
ಮೊಂಪರುಗಣ್ಣಿನಲ್ಲೇ ಎಡಗೈ ಬೆರಳು ಬಲ ಮೊಣಕೈ ಸವರಿಕೊಂಡಾಗ ವಾಸ್ತವ ಅರಿವಾಯಿತು. ಚಾಪೆ ಸುತ್ತಿ ಅಮ್ಮ ಕೊಟ್ಟ ಕಾಫ಼ಿ ಕುಡಿದು ಸುಮ್ಮನೆ ಹಾಗೆ ಸುತ್ತಾಡಿ ಬರೋಣವೆಂದು ಲಾಲ್ ಬಾಗ್‍ಗೆ ಹೋದೆ. ಎಲ್ಲಡೆ ಪ್ರೇಮಿಗಳು ಕೈ ಹಿಡಿದು ಹೋಗುತ್ತಿರುವುದನ್ನು ನೋಡಿ, ನಾನು ನನ್ನಾಕೆ ಜೊತೆ ಬರಬಹುದಿತ್ತಲ್ಲ ಅನ್ನಿಸಿತು. ಇಲ್ಲ, ವಾಸ್ತವವಾಗಿ ನಾನು ನೋಡಲು ಬಂದಿರುವುದು ಲಾಲ್ ಬಾಗ್‍ನಲ್ಲಿಯಾದರೂ ಗುಬ್ಬಚ್ಚಿಗಳು ಕಾಣಿಸಬಹುದೆಂದು. ಕತ್ತಲಾದರೂ ಒಂದೂ ಗುಬ್ಬಚ್ಚಿ ಕಣ್ಣಿಗೆ ಬೀಳಲಿಲ್ಲ. "ಇಲ್ಲೆಲ್ಲಾದರೂ ಗುಬ್ಬಚ್ಚಿ ನೋಡಿದೀರ?" ಯಾರನ್ನಾದರೂ ಕೇಳುವ ಮನಸ್ಸಾಯಿತು. ಎಲ್ಲೊ ಹುಚ್ಚರಾಸ್ಪತ್ರೆಯಿಂದ ತಪ್ಪಿಸಿಕೊಂಡು ಬಂದವನೆ ಅಂತ ಆಡಿಕೊಳ್ತಾರೆ ಅಂತ ಸುಮ್ಮನಾದೆ. ಅಸಮಾದಾನದಿಂದಲೇ ಮನೆಗೆ ಹೊರಟೆ. ಎಷ್ಟು ಕಾದರೂ ಆಟೊ ಸಿಗದ ಕಾರಣ ಬಿಟಿಎಸ್ಸ್ ಬಸ್ ಹತ್ತಿ ಜಯನಗರ ಕಾಂಪ್ಲೆಕ್ಸ್‍ಗೆ ಬಂದೆ. ಎಲ್ಲಿ ನೋಡಿದರೂ ಕಪ್ಪು ಹೊಗೆ ಉಗುಳುವ ವಾಹನಗಳೇ ಕಂಡು ಬಂದಿತು. ಬೆಂಗಳೂರಿನಲ್ಲಿ ಎಷ್ಟೊಂದು ಪಲ್ಲ್ಯೂಷನ್ ಆಗಿ ಬಿಟ್ಟಿದೆ ಅನ್ನಿಸಿತು. ಅಣ್ಣವರ ಹಾಡು ಕೇಳಿ ಬರುತ್ತಿದ್ದ ಒಂದು ಮೂಸಿಕ್ ಅಂಗಡಿ ಒಳಗೆ ನುಗ್ಗಿದೆ. ಕೆಲವು ಹಿಂದುಸ್ತಾನಿ ಹಾಗು ಕರ್ನಾಟಿಕ್ ಮೂಸಿಕ್ ಕ್ಯಾಸೆಟ್ಟುಗಳನ್ನು ಕೊಂಡು ಹೊರಡುವುದರಲ್ಲಿದ್ದೆ. ಅನಂತಸ್ವಾಮಿಯವರ ಮಕ್ಕಳ ಹಾಡುಗಳು –"ಚಿಂವ್ ಚಿಂವ್ ಗುಬ್ಬಿ" ಅಂತ ಕನ್ನಡ ಕ್ಯಾಸೆಟ್ಟ್ ಕಂಡಾಗ ಅದನ್ನೂ ಕೊಂಡೆ. ಮಕ್ಕಳೇ ಹೇಳಿರುವ ಹಾಡುಗಳು, ನಮ್ಮ ಪುಟ್ಟಿಗೆ ಇಷ್ಟವಾಗಬಹುದು ಎಂದು ಅನ್ನಿಸಿದರೂ ಈ ಹಾಡನ್ನು ನಾನೇ ಮೊದಲು ಕೇಳಬೇಕು ಅಂತ ಗಡಿಬಿಡಿಯಿಂದ ಮನೆಗೆ ಹೊರ್‍ಅಟೆ. ನಿಜ ಜೀವನದಲ್ಲಿ ಸಿಗದಿರುವ ವಸ್ತುವನ್ನು ಕವಿ ಬರೆದ ಕನಸಿನ ಊಹಾ ಲೋಕದಲ್ಲೆ ನೋಡಿ ಆನಂದ ಪಡ್ತಾರಲ್ಲ, ಜನ ಏಕೆ? ಪ್ರಶ್ನೆಗೆ ಉತ್ತರ ಹುಡುಕಲು ಮನಸ್ಸಿಗೆ ತಾಳ್ಮೆ ದೇಹಕ್ಕೆ ವಯಸ್ಸು ಎರಡೂ ಸಾಲದು ಅನ್ನಿಸಿತು. ಮನೆಗೆ ಬಂದಾಗ ರಾತ್ರಿ ಒಂಬತ್ತಾಗಿತ್ತು. ಪರಿಸರ ಮಲಿನದಿಂದಾಗಿ ಮೂಗಿನ ರಂದ್ರದೊಳಗೆ ಇಳಿಣದಂತೆ ಸೇರಿದ್ದ ಕಪ್ಪು ಹೊಗೆಯ ಕಲ್ಮಷವನ್ನೆಲ್ಲ ಶುಬ್ರಗೊಳಿಸಲು ಕೆಲ ಸಮಯವೇ ಬೇಕಾಯಿತು. ಅಬ್ಬ, ಇದೇ ರೀತಿ ಹೊಗೆ ಕುಡಿದರೆ ಅಖಾಲ ಮರಣ ಖಂಡಿತ ಅನಿಸಿತು.
ರಾತ್ರಿ ಎಂದಿನಂತೆ ಮಲಗುವಾಗ ಪುಟ್ಟಿ "ಅಪ್ಪ ಕತೆ ಹೇಳಿದ್ರೇನೆ ನಾನು ಮಲಗಿಕೊಳ್ಳೋದು" ಅಂತ ಹಟ ಮಾಡಿದಾಗ ಪಂಚತಂತ್ರದಿಂದ ಕತೆ ಹೇಳಲು ಶುರು ಮಾಡಿದೆ. ಒಂದಾದನಂತರ ಒಂದು ಕತೆ ಹೇಳಿದರೂ ಪುಟ್ಟಿಗೆ ನಿದ್ದೆ ಬರುವ ಸೂಚನೆ ಕಂಡು ಬರಲಿಲ್ಲ. ಕೊನೆಗೆ ಅವಳಿಗಿಷ್ಟವಾದ ಗುಬ್ಬಚ್ಚಿ ಕತೆ ಶುರು ಮಾಡಿದೆ. "ಒಂದೂರಿನಲ್ಲಿ ಒಬ್ಬ ರಾಜ ಇದ್ದ, ಅವನಿಗೊಬ್ಬಳು ರಾಜಕುಮಾರಿ, ಆ ರಾಜಕುಮಾರಿಗೆ ಯಾವಾಗಲೂ ಕತೆ ಕೇಳುವ ಹುಚ್ಚು… ರಾಜ ಡಂಗುರ ಸಾರಿಸಿದ…ಪಕ್ಕದೂರಿನ ರಾಜ ಕುಮಾರ ಹೇಳಿದ ಕತೆ "ಒಂದು ಗುಬ್ಬಚ್ಚಿ ಬಂತು, ಒಂದು ಅಕ್ಕಿ ಕಾಳು ತಗೊಂಡು ಪುರ್ ಅಂತ ಹಾರಿಹೋಯಿತು, ಮತ್ತೊಂದು ಗುಬ್ಬಚ್ಚಿ ಬಂತು, ಮತ್ತೊಂದು ಕಾಳು ತಗೊಂಡು ಪುರ್ ಅಂತ ಹಾರಿ ಹೋಯಿತು……" ಹೀಗೆ ಕೊನೆ ಇಲ್ಲದ ಕತೆ ಹೇಳಿ ರಾಜಕುಮಾರಿಯನ್ನೇ ಮದುವೆ ಮಾಡಿಕೊಂಡು ಸುಖವಾಗಿದ್ದನಂತೆ." ಪುಟ್ಟಿ ನಿದ್ದೆ ಮಾಡಿ ಎಷ್ಟೋ ಹೊತ್ತಾದರೂ ನಾನು ಇನ್ನು ಗುಬ್ಬಚ್ಚಿ ಕತೆ ಹೇಳುತ್ತಲೇ ಇದ್ದೆ. ಈ ಗುಬ್ಬಚ್ಚಿ ಕತೆ ಎಷ್ಟು ರಾತ್ರಿ ಪುಟ್ಟಿಯನ್ನು ಮಲಗಿಸಲು ಸಹಾಯ ಮಾಡಿದೆ ಅನಿಸಿತು. ಮುಂದೆ ಅವಳೂ ತನ್ನ ಮಗುವನ್ನು ಮಲಗಿಸಲು ಈ ಕತೆ ಹೇಳಬಹುದೆ? ಅಥವ ಗುಬ್ಬಚ್ಚಿಗಳನ್ನೇ ನೋಡದ ಪುಟ್ಟಿಗೆ ಅವುಗಳನ್ನು ಮ್ಯೂಸಿಯಂಗಳಲ್ಲಿ ಡೈನೋಸರ್ ತರಹ ಬರಿ ಎಲುಬು ನೋಡುವ ಕಾಲ ಬಾರಬಹುದೆ? ಸಾಮಾನ್ಯ ಗುಬ್ಬಚ್ಚಿಗೆ ಯಾರು ಮ್ಯೂಸಿಯಂ ಕಟ್ಟಲು ಸಾಧ್ಯ? ಅಂದರೆ ಅವುಗಳ ಎಲುಬೂ ನೋಡುವ ಭಾಗ್ಯ ಕೂಡ ನಮ್ಮ ಮುಂದಿನ ಪೀಳಿಗೆಗೆ ಇಲ್ಲವೆ?
ಮರುದಿನ ಬೆಳಿಗ್ಗೆನೇ ಕೇಳಿ ಬರುತ್ತಿದ್ದ "ಚಿಂವ್ ಚಿಂವ್ ಗುಬ್ಬಿ" ಹಾಡಿನಿಂದಲೇ ಗೊತ್ತಾಯಿತು. ಪುಟ್ಟಿ ತನ್ನ ಟೇಪ್ ರೆಕಾರ್ಡರಿನಲ್ಲಿ ಕೇಳುತ್ತ ಟೆರ್ರೇಸ್ ಮೇಲೆ ಡ್ಯಾನ್ಸ್ ಮಾಡುತ್ತಿದ್ದಾಳೆಂದು. ಆದರೆ ಕೆಲ ನಿಮಿಷಗಳ ನಂತರ ಪುಟ್ಟಿ ಅಳುವಿನ ಸದ್ದು ಕೇಳಿ ಅವಳಿದ್ದ ಜಾಗಕ್ಕೆ ಹೋದೆ. ಕಾ ಕಾ ಎಂದು ಮುತ್ತುತ್ತಿದ್ದ ಕಾಗೆಗಳ ಗುಂಪು ನೋಡಿ ಹೆದರಿಕೊಂಡು ಅಳುತ್ತಿದ್ದಳು. ಕೈಯಲ್ಲಿ ಹಿಡಿದ ಪೊಟ್ಟಣದಲ್ಲಿ ಅಕ್ಕಿ ಕಾಳು ಸ್ವಲ್ಪವೇ ಉಳಿದಿತ್ತು. ನೆಲದ ಮೇಲೆಲ್ಲ ಚೆಲ್ಲಿದ್ದ ಅಕ್ಕಿ ಕಾಳುಗಳನ್ನು ಕಾಗೆಗಳು ಒಂದೂ ಬಿಡದೆ ತಿನ್ನುತ್ತಿದ್ದವು. "ಅಪ್ಪ, ಅಪ್ಪ" ಅಂತ ಅಳುತ್ತಿದ್ದ ಪುಟ್ಟಿನ ಸಮಾಧಾನ ಮಾಡಿ ಕಾರಣ ಕೇಳಿದೆ. ಹಿಂದಿನ ರಾತ್ರಿ ಹೇಳಿದ ರಾಜಕುಮಾರಿ ಕತೆಯಲ್ಲಿ ಬರುವ ಸನ್ನಿವೇಶವನ್ನು ತನ್ನದೇ ಪಾತ್ರದಲ್ಲಿ ಅಭಿನಯಸುತ್ತಿದಳು. ಅಕ್ಕಿ ಕಾಳುಗಳನ್ನು ಗುಬ್ಬಚ್ಚಿಗಳು ಒಂದೊಂದೇ ಬಂದು ತಿನ್ನುವ ಬದಲು ಕರಿ ಕಾಗೆಗಳೇ ಹಾರಿ ಕುಕ್ಕಲು ಬಂದಾಗ ಭಯದಿಂದ ಅಳು ಬಂದಿತ್ತು. "ಯೂ ಲೈಡ್ ಟು ಮಿ" ಅಂತ ಇಂಗ್ಲಿಷ್‍ನಲ್ಲಿ ಅಳುತ್ತಲೇ ಹೇಳಿದಳು. ಇನ್ನೆಂದೂ ಗುಬ್ಬಚ್ಚಿ ಕತೆ ಹೇಳುವುದಿಲ್ಲವೆಂದು ನಿರ್ಧರಿಸಿದೆ.
ಮಾರನೆ ದಿನ ಭಾನುವಾರ ನನ್ನ ಗೆಳಯ ಆಜ಼ಾದ್ ಕೆಲಸದ ಮೇಲೆ ತುಮಕೂರಿಗೆ ಹೋಗ್ತಿದೀನಿ ನೀನು ಬರ್ತೀಯ ಅಂತ ಕೇಳಿದಾಗ ನಾನೂ ಅವನ ಜೊತೆ ಮೋಟರ್ ಬೈಕ್‍ನಲ್ಲಿ ಹೊರಟೆ. ತುಮಕೂರಿನಿಂದ ಕೇವಲ ೧೨ ಮೈಲಿ ದೂರ ಇರುವ ಗುಬ್ಬಿಗೆ ಅಲ್ಲಿಂದ ನಾನೊಬ್ಬನೆ ಹೋದೆ. ಮೂವತ್ತು ವರ್ಷಗಳ ನಂತರ ಗುಬ್ಬಿಗೆ ಹೋಗಿ ಅಲ್ಲಿಯಾದರೂ ಗುಬ್ಬಚ್ಚಿಗಳಿವೆಯೇ ಅಂತ ಹುಡುಕಾಡಿದೆ. ಅಲ್ಲಿಯೂ ಗುಬ್ಬಚ್ಚಿ ಕಾಣಲಿಲ್ಲ. ಗುಬ್ಬಿ ಕೂಡ ಪಾಳು ಬಿದ್ದು, ನಾನು ಚಿಕ್ಕಂದಿನಲ್ಲಿ ನೋಡಿದ್ದ ಗುಬ್ಬಮ್ಮನ ಜಾತ್ರೆ ರಥ, ದೇವಸ್ಥಾನ ಎಲ್ಲ ಮುರುಕು ಸ್ಥಿತಿಯಲ್ಲಿ ಬಿದ್ದಿರುವುದನ್ನು ಕಂಡಾಗ ನಂಬಲೂ ಸಾಧ್ಯವಾಗಲಿಲ್ಲ. ಗುಬ್ಬಿಯ ಪ್ರತಿಯೊಂದು ದೃಷ್ಯವೂ ಕನಸು, ಕಲ್ಪನೆ ಮತ್ತು ನೆನಪಿನ ಸರಪಳಿಯಲ್ಲಿ ಮಿಶ್ರಣಗೊಂಡಂತಾಗಿತ್ತು. ಆದರೆ ಸತ್ಯಾಂಶವೇ ಬೇರೆಯಾಗಿತ್ತು. ಬಾಲ್ಯದ ಮುಗ್ಧತೆಯಲ್ಲಿ ವಿಸ್ಮಯಕಾರಿಯಾಗಿ ಕಂಡ ಒಂದೊಂದೂ ದೃಶ್ಯವೂ ಏಕೋ ಸ್ವಾರಸ್ಯ ಕಳೆದುಕೊಂಡ ವಸ್ತುವಿನಂತೆ ಅಲಿಪ್ತತೆ ತರಸಿದವು ನನ್ನಲ್ಲಿ. ಗಲ್ಲಿ ಗಲ್ಲಿ ಅಲೆದು ಸುಸ್ತಾಗಿ ಕೊನೆಗೆ ಊರ್‍ಇನ ಹೊರಗಡೆ ಹೊಲಗಳ ಕಡೆ ಬೈಕ್ ಓಡಿಸಿದೆ. ಅಲ್ಲಿಯೂ ಗುಬ್ಬಚ್ಚಿಗಳ ಸುಳಿವಿರಲಿಲ್ಲ. ಆದರೆ ನನ್ನ ಗಮನ ಸೆಳೆದದ್ದು ಹೆಜ್ಜೆಗೊಂದು ಕಂಡ ಗೊಬ್ಬರ ಮಾರುವ ಅಂಗಡಿಗಳು ಮತ್ತು ಅದನ್ನು ಮಾರಾಟಮಾಡಲು ಜಾಹೀರಾತು ಇರುವ ದೊಡ್ಡದಾದ ಬೋರ್ಡ್‍ಗಳು. ಸುಂದರ ಗ್ರಾಮೀಣ ಹೆಣ್ಣೊಂದು ಆಕರ್ಷೀಯಣವಾಗಿ ನಿಂತು ಸುಫಲ ಲಾಂಚನದ ಗೊಬ್ಬರವನ್ನೇ ಕೊಳ್ಳಲು ರೈತರಿಗೆ ಬಿನ್ನಹ ಮಾಡುತ್ತಿದ್ದ ಈ ಜಾಹೀರಾತುಗಳು ಯಾರ ಕಣ್ಣನ್ನೂ ತಪ್ಪಿಸುವಂತಿರಲಿಲ್ಲ. ವೈಯಾರಿ ಹೆಣ್ಣಿನ ಜಾಹೀರಾತನ್ನು ಕಣ್ಣು ಮಿಟುಕಿಸದೆ ನಿಂತು ನೋಡುತ್ತಿದ್ದ ಕೆಲವು ರೈತರುಗಳ ಜೊತೆ ಸಂಭಾಷಣೆ ನೆಡಸಿದೆ. "ಇಷ್ಟೊಂದು ಲಾರಿನಲ್ಲಿ ತರಿಸಿಕೊಳ್ಳೋ ಈ ಗೊಬ್ಬರ ಯಾವ ಊರಿನಿಂದ ಬರ್ತದೆ?" ಅಂತ ನಾನು ಕೇಳುವ ಮೊದಲೇ ಒಬ್ಬ ರೈತ ಕೋಪಗೊಂಡು "ರೀ ಅದು ಗೊಬ್ಬರ ಅಲ್ಲರೀ. ಎನ್ ಕೆ ಪಿ ಇಪ್ಪತ್ತೆರಡು ಫ಼ರ್ಟಿಲೈಜ಼ರ್. ಹೊಲಕ್ಕೆ ಅದನ್ನ ಮೂಟೆಗಟ್ಟಲೆ ಹಾಕ್ದಿದ್ರೆ ನಮ್ಮ ಫಸಲು ಜ಼ೀರೊ ಆಗ್ಬುಡ್ತದೆ ರೀ. ಅದಕ್ಕ ಆ ಹೆಣ್ಣಿನ ಸೀರಿ ಹಂಗ ನಮ್ಮ ಹೊಲ ಸದಾ ಹಸಿರಾಗಿರೋದು" ಎಂದು ಆ ಜಾಹೀರಾತಿನ ಕಡೆ ಬೆಟ್ಟು ಮಾಡಿ ತೋರಿಸಿದ. ಈ ಪಚ್ಚೆ ಹಸರಿನ ಹೊಲದಲ್ಲಿ ನಾನಾಡುತ್ತಿದ್ದ ವೆಲ್ವೆಟ್ ಹುಳಗಳು ಕಾಣಬಹುದೆಂದು ಬಗ್ಗಿ ನೋಡಿದೆ. ಒಂದೂ ಕಾಣಲಿಲ್ಲ. ಒಬ್ಬ ರೈತ ಮತ್ತೊಬ್ಬನಿಗೆ "ಏ ಕೆಂಪ, ಆ ತೊಗರಿಕಾಳ್ ಕೊಪ್ಪಲ್ದಾಗ ಹುಳ ಹೊಡ್ದೈತೆ. ಅದಕ್ಕೆ ವಸಿ ಜಾಸ್ತಿ ಈ ವಿಷ ಸ್ಪ್ರ್‍ಏ ಮಾಡಿ ಬಾರ್‍ಲ" ಅಂತ ಒಂದು ದೊಡ್ಡ ತಗಡಿನ ಡಬ್ಬಿ ಕೊಟ್ಟಿದ್ದನ್ನ ನೋಡಿ ನನಗೆ ಗಾಬರಿಯೇ ಆಯಿತು. ಕೆಂಪು ಬಣ್ಣದ ತಲೆಬುರುಡೆ ಮುಂದೆ ಅಡ್ಡಲಾಗಿ ಚಿತ್ರಿಸಿದ್ದ ಎರಡು ಮೂಳೆಗಳ ಚಿನ್ಹೆ ಡಬ್ಬದ ಮೇಲೆ ನೋಡಿ ನನಗಂತೂ ಭಯವೇ ಆಯಿತು. ಇದೇನಿದು ಇಷ್ಟು ಅನಾಯಸವಾಗಿ ಕ್ರಿಮಿನಾಶಕವನ್ನು ಉಪಯೋಗಿಸುತ್ತಾರಲ್ಲ ಅಂತ ಯೋಚನೆ ಶುರುವಾಯಿತು. ಬೆಂಗಳೂರಿನಲ್ಲಿ ವಾಹನಗಳಿಂದಾದ ಪಲ್ಲ್ಯೂಷನ್ ಸೇವಿಸಿದ್ದು ಸಾಲದು ಎನ್ನುವಂತೆ ಈ ಹಳ್ಳಿಯಲ್ಲೂ ಕ್ರಿಮಿನಾಶಕದ ವಿಷ ಗಾಳಿ ಕುಡಿಯುವ ಪ್ರಸಂಗ ಬಂತಲ್ಲಪ್ಪ ಈಗ ಏನು ಮಾಡೋಣ ಎಂದು ಉಪಾಯ ಹುಡಿಕುತ್ತಿತ್ತು ನನ್ನ ಮನಸ್ಸು. ರಾಸಾಯನಿಕ ಗೊಬ್ಬರ ಮತ್ತು ಕ್ರಿಮಿನಾಶಕಗಳ ಕೆಟ್ಟ ಪರಿಣಾಮ ಎಲ್ಲೆಡೆ ಕಾಣುತ್ತಿತ್ತು. ಗುಬ್ಬಚ್ಚಿಗಳ ಅವಸಾನಕ್ಕೆ ಕಾರಣವೂ ಇದೇ ಇರಬಹುದೆಂದು ನನ್ನ ತರ್ಕ ವಾದ ತಲೆಯಲ್ಲಿ ಕೊರೆಯಲಾರಂಭಿಸಿತು. ಈ ಫ಼ರ್ಟಿಲೈಜ಼ೆರನ್ನು ಯಾವಾಗ ರೈತರು ಉಪಯೋಗಿಸಲು ಶುರು ಮಾಡಿದರೋ ಆಗಿನಿಂದಲೆ ಗುಬ್ಬಚ್ಚಿಯ ಮೊಟ್ಟೆಗಳ ಹೊರ ಬಾಗ ಕ್ರಮೇಣ ಗಟ್ಟಿಯಾಗಲು ಶುರುವಾಯಿತು. ಒಳಗಿದ್ದ ಗುಬ್ಬಚ್ಚಿ ಮರಿಗಳು ತಮ್ಮ ಕೊಕ್ಕಿನಿಂದ ಮೊಟ್ಟೆಯನ್ನು ಒಡೆದು ಹೊರಗೆ ಬರಲು ಎಷ್ಟು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಮೊಟ್ಟೆಗಳು ಗಾಜಿನ ಗೋಲಿಯಂತೆ ಗಟ್ಟಿಯಾಗಿ ಒಂದಾದ ನಂತರ ಒಂದು ಗುಬ್ಬಿ ಸಂಸಾರ ಸಾವನ್ನಪ್ಪಿದವು. ಜೊತೆಗೆ ಕ್ರಿಮಿ ಕೀಟಗಳೆ ನಾಶವಾದ ಮೇಲೆ ಉಳಿದ ಗುಬ್ಬಚ್ಚಿ ಆಹಾರದ ಅಭಾವದಿಂದ ಸಾವನ್ನಪ್ಪಲು ಹೆಚ್ಚು ಸಮಯ ಬೇಕಾಗುವುದಿಲ್ಲ. "ಪರಿಸರ ಮಲಿನದಿಂದಾಗುವ ಪ್ರಮಾಣಭೂತ ಉದಾಹರಣೆ ಇದು" ಎಂದು ಒತ್ತಿ ಹೇಳುತ್ತಿದ್ದ ನನ್ನ ಪ್ರೊಫ಼ೆಸರ್ ಒಬ್ಬರ ಜ್ಞಾಪಕ ಬಂದಿತು.
ರೈತರಿಗೆ ವಿದಾಯ ಕೂಡ ಹೇಳದೆ, ಗುಬ್ಬಿ ಉತ್ತರ ತುದಿಯಲ್ಲಿದ್ದ ಚಿದಂಬರಾಶ್ರಮದ ಕಡೆ ಓಡಿಸಿದೆ ನನ್ನ ಬೈಕ್. ದಾರಿ ಮಧ್ಯದಲ್ಲಿ ಸಿಕ್ಕ ಬೈಲಾಂಜನ ಗುಡಿಯ ಬಳಿ ನಿಂತೆ. ಗುಡಿಯ ಬಾಗಿಲು ಹಾಕಿತ್ತಾದರೂ ಕೋತಿಗಳು ಕಂಡು ಬರಬಹುದೆಂದು ಇಣುಕಿ ನೋಡಿದೆ. ನೈವೇದ್ಯಕ್ಕೆಂದು ಇಟ್ಟ ಬಾಳೆಹಣ್ಣುಗಳು ಹಾಗೇ ಇದ್ದವು. ಕೋತಿಗಳ ಸುಳಿವಂತೂ ಇರಲಿಲ್ಲ. ಅಲ್ಲೇ ಮುರುಕು ಸ್ಥಿತಿಯಲ್ಲಿದ್ದ ಹಲವಾರು ಕಬ್ಬಿಣದ ಬೋನುಗಳು ಮನುಷ್ಯನ ಕೄರತೆಗೆ ಮೂಕ ಸಾಕ್ಷಿಯಂತೆ ಬಿದ್ದಿದ್ದವು. ಬಾಳೆ ಹಣ್ಣಿನ ಲಾಲಸೆ ತೋರಿಸಿ ಕೋತಿಗಳನ್ನು ಬೋನಿನೊಳಗೆ ಹಿಡಿದು ಪ್ರಯೋಗ ಶಾಲೆಗಳಿಗೆ ಮಾರಿರಬಹುದಾದ ಪುರಾವೆಗಳು ಎಲ್ಲೆಲ್ಲೂ ಕಂಡು ಬರುತ್ತಿತ್ತು. ಆಂಜನೇಯನ ಭಕ್ತರು ಈ ನಿಜ ಜೀವನದ ಆಂಜನೇಯನಿಗಾದ ಅನ್ಯಾಯ ಸಹಿಸಿದ್ದಾದರೂ ಹೇಗೆ?
ಆಶ್ರಮದೊಳಗೆ ಮತ್ತೇನು ಆಶಾಭಂಗ ಕಾದಿದೆಯೋ ಎಂಬ ಯೋಚನೆಯಲ್ಲೇ ಒಳ ಹೊಕ್ಕೆ. ಆದರೆ ಸನಿಹದಿಂದಲೇ ಕೇಳಿ ಬಂದ ವೇದ ಘೋಷಗಳ ಪಠನ ಕಿವಿಗೆ ಹಿತವಾಗಿತ್ತು. ಆಶ್ರಮದ ಪ್ರಶಾಂತ ವಾತಾವರಣ ಮತ್ತು ಸೌಗಂಧಭರಿತ ಪರಿಮಳ ನನ್ನ ಬಾಲ್ಯದ ನೆನಪುಗಳನ್ನ ಮರುಕಳಿಸಿತು. ನಾಗಪುಷ್ಪವಲ್ಲಿ ಮರಗಳಿಂದ ಬರುತ್ತಿದ್ದ ಆ ಸುವಾಸನೆ ಆಹ್ಲಾದಕರವಾಗಿತ್ತು. ಎಲ್ಲೆಲ್ಲೂ ವನರಾಶಿಯ ಸಿರಿಯೇ. ಆಶ್ರಮದ ಹಿಂಬದಿಯಲ್ಲಿ ಹರಿಯುತ್ತಿದ್ದ ನದಿ ಹಸುರಿಗೆ ಮೆರಗು ಕೊಟ್ಟಿತ್ತು. ಎತ್ತರಕ್ಕೆ ಬೆಳೆದ ಜಂಬೂ ನೇರಳೆಯ ಮರದಡಿ ಬಿದ್ದಿದ್ದ ಕೆನ್ನೀಲಿ ಬಣ್ಣದ ಹಣ್ಣುಗಳು, ರೆಕ್ಕೆಗಳನ್ನು ಹರಡಿ ಅಲ್ಲೇ ರಮಿಸುತ್ತಿದ್ದ ನವಿಲಿನ ಕಣ್ಣುಗಳು ಒಂದನ್ನೊಂದು ಸರಿದೂಗುತ್ತಿತ್ತು. ಹಕ್ಕಿಗಳ ಇಂಚರದೊಂದಿಗೆ ದುಂಬಿಯ ಝೇಂಕಾರ ಬೆರೆತ ಈ ನಂದನವನದ ಮೂಲೆ ಮೂಲೆಯೂ ಪರಿಚಿತವೆನಿಸಿತು. ಆಗ ಹಠಾತ್ತನೆ ಜ್ಞಾಪಕ ಬಂತು. ಗುಬ್ಬಿ ಹೆಸರಿನ ಹಿಂದಿದ್ದ ಸ್ಥಳ ಪುರಾಣ. ಈ ಆಶ್ರಮದ ಗುಬ್ಬಿಯೊಂದು ದಿನ ನಿತ್ಯವೂ ನದಿಯಲ್ಲಿ ಮಿಂದು ವೇದ ಪಠನದ ಸಮಯದಲ್ಲಿ ಗುರುಗಳೊಂದಿಗೆ ಕುಳಿತು ತಾನೂ ಇಂಪಾಗಿ ಹಾಡುತ್ತಿತ್ತಂತೆ! ವೇದಪಾರಂಗತನಾದ ಆ ಗುಬ್ಬಚ್ಚಿ ಹುಟ್ಟಿದ ಜಾಗಕ್ಕೆ ಗುಬ್ಬಿ ಎಂದು ನಾಮಕರಣ ಮಾಡಿದರಂತೆ. ನಮ್ಮ ಪೂರ್ವಿಕರ ಸುಂದರ ಕಲ್ಪನೆ. ಛೇ, ಅದನ್ನು ಮತ್ತೆ ಕೇಳುವ ಭಾಗ್ಯ ನಮಗಿಲ್ಲವಾಯಿತಲ್ಲ ಎಂದು ಹತಾಶನಾಗಿ ಅಲ್ಲೇ ಇದ್ದ ಒಂದು ಬಂಡೆಯ ಮೇಲೆ ಕುಳಿತೆ.
ಹಕ್ಕಿಯೊಂದು ನನ್ನ ಬಳಿಯೇ ಹಾರಿ ಹೋದಾಗ ನನ್ನ ಕಣ್ಣುಗಳು ಅರಿವಿಲ್ಲದಯೇ ಅದನ್ನು ಹಿಂಬಾಲಿಸಿದವು. ಗೂಡೊಂದರ ಬಳಿ ಕುಳಿತ ಆ ಹಕ್ಕಿ ಮೇಲೆ ನನ್ನ ಗಮನ ಕಡಿಮೆಯಾದರೂ ಚಿಂವ್ ಚಿಂವ್ ಎಂದು ಶಬ್ಧ ಕೇಳಿ ಬಂದಾಗ ನನ್ನ ದೃಷ್ಟಿ ಮತ್ತು ಕಿವಿ ಎರಡೂ ಚುರುಕಾದವು. ಅಮ್ಮ ಹಕ್ಕಿ ಹಸಿದ ಮರಿಗಳನ್ನು ಮುದ್ದಿಸಿ ಎಬ್ಬಿಸಿದಾಗ ಮತ್ತೆಲ್ಲಿಂದಲೋ ಪುರ್ ಅಂತ ಹಾರಿ ಬಂದ ಅಪ್ಪ ಹಕ್ಕಿ ಕೊಟ್ಟದ್ದು ಭರ್ಜರಿ ಊಟ. ಗುಬ್ಬಿಗಳ ಚಿಂವ್ ಚಿಂವ್ ಆಶ್ರಮದಿಂದ ಕೇಳಿ ಬರುತ್ತಿದ್ದ ವೇದಗೋಷ್ಟಿಯಂತೆ ಹಿತವಾಗಿತ್ತು.
____________________________________________________________
ದ್ರೌಪದಿಯ ಮನಸ್ಸಿನಂತರಾಳಕ್ಕೊಂದು ಕನ್ನಡಿ.
ಡಾ. ರವಿ ಗೋಪಾಲರಾವ್, ಸ್ಯಾನ್ ಹೋಸೆ, ಕ್ಯಾಲಿಫ಼ೋರ್ನಿಯ.
ಐವರಿಗೆ ಅರ್ಧಾಂಗಿ ಎಂದು ಬಿರುದು ಗಳಿಸಿರುವ ನನ್ನನ್ನು ಯಾವ ಹೆಣ್ಣು ತಾನೆ ಗೌರವದಿಂದ ಕಾಣಲು ಸಾಧ್ಯ? ಛೆ, ಈ ಮನಸ್ಸೊಂದು ಲಗಾಮಿಲ್ಲದ ಕುದುರೆಯಂತೆ. ಮತ್ತೆ ಆ ಅಜ್ಞಾತವಾಸದ ಚಕ್ರವ್ಯೂಹಕ್ಕೆ ಎಳೆದು ನನ್ನನ್ನು ನಾನೇ ನಿಂದಿಸಿಕೊಳ್ಳುವಂತೆ ಮಾಡತ್ತೆ.
ಆ ದಿನ ಬೆಳಿಗ್ಗೆ ಕನ್ನಡಿಯಲ್ಲಿ ನೋಡಿಕೊಂಡಾಗ ನನ್ನ ಕೂದಲು ಎಷ್ಟು ಸುಂದರವಾಗಿ ಕಾಣಿಸ್ತಾ ಇತ್ತಲ್ಲವೆ? ನನ್ನ ಮೈ ಮಾಟ ಕೂಡ ಇನ್ನೂ ಹದಿಹರೆಯದ ಹುಡುಗಿಯಂತೇ ಇದೆ. ಅದಕ್ಕೇ ಇರಬೇಕು ಆ ದುರ್ಯೋಧನ ನನ್ನನ್ನು ಯಾವಾಗಲೂ ಕಾಮ ದೃಷ್ಟಿಯಿಂದಲೇ ನೋಡುವುದು. ಪಾಪ ಅವನಿಗೆ ಈ ಪಾಂಚಾಲಿಯನ್ನು ಕಾಮಿಗಳಿಂದ ಕಾಪಾಡಲು ಐದು ಜನ ಪಾಂಡವರಿದ್ದಾರೆಂದು ಮರೆತುಹೋಗಿರಬೇಕು. ಆತ ಹುರಿಮೀಸೆಯ ದೃಡಕಾಯನೇನೋ ಸರಿ. ಆದರೆ ಮಂದಬುದ್ಧಿಯವ. ಇಲ್ಲದಿದ್ದಲ್ಲಿ ಅಂದು ಮಯ ಭವನದಲ್ಲಿ ಎಲ್ಲರ ಮುಂದೆ ನೀರಿನ ಕೊಳವನ್ನ ಅಮೃತಶಿಲೆಯ ನೆಲವೆಂದು ಭಾವಿಸಿ ಧೊಪ್ಪನೆ ಬೀಳುತ್ತಿರಲಿಲ್ಲ. ಪಾಪ, ಪೆಟ್ಟಾಗಿರಬೇಕು. ನನಗಂತೂ ನಗು ತಡಿಯಲು ಸಾಧ್ಯವಾಗಲಿಲ್ಲ. ಒದ್ದೆಯಾದ ಬಟ್ಟೆಯಲ್ಲಿ ಅವನ ಮೈಕಟ್ಟು ನೋಡಲು ನಾಚಿಕೆ ಆದರೂ ಅವನ ಕೆಳ ನೋಟದ ಮೀಸೆ ನನ್ನ ನಗುವಿಗೆ ಕಾರಣವಾಗಿತ್ತು. ಯಾಕೋ ಏನೋ ಆ ಗಳಿಗೆಯಲ್ಲಿ ನಾನೂ ದುಡುಕಿಬಿಟ್ಟೆ. ಬಿದ್ದವನಿಗೆ ಸಹಾಯ ಮಾಡುವ ಬದಲು "ಕುರುಡನ ಮಕ್ಕಳೆಲ್ಲ ಕುರುಡರೇ" ಅಂತ ಹೀಯಾಳಿಸಿಬಿಟ್ಟೆನಲ್ಲ. ಅಬ್ಬ, ದುರ್ಯೋಧನನ ಕೋಪ ನನ್ನನ್ನ ಜೀವಂತ ಸುಡುವಷ್ಟು ತೀಕ್ಷಣವಾಗಿತ್ತಲ್ಲವೆ? ಸಧ್ಯ ಶ್ರೀಕೃಷ್ಣನೇ ಆ ಗಳಿಗೆಯಲ್ಲಿ ನನ್ನನ್ನ ಪಾರು ಮಾಡಿರಬೇಕು. ಆದರೆ ಮುಂದೇನು ಮಾಡುತ್ತಾನೋ ಆ ಕೋಪಿ ದುರ್ಯೋಧನ ಅಂತ ನನಗಂತು ತುಂಬ ಭಯ ಆಗಿತ್ತು. ನನ್ನದೇ ತಪ್ಪು.
ಸ್ವಾಭಿಮಾನಿ ದುರ್ಯೋಧನ ಎಲ್ಲರ ಮುಂದೆ ಅವಮಾನಗೊಂಡು ನಿಂತಿದ್ದಾಗ ನಾನು ಬೆಂಕಿಗೆ ತುಪ್ಪ ಸುರಿದಂತೆ ಅವನನ್ನ ಹೀಯಾಳಿಸಿದ್ದಲ್ಲದೆ ಪೂಜ್ಯ ಧೃತರಾಷ್ಟ್ರರನ್ನೂ ಕುರುಡರೆಂದು ಅಂದದ್ದು ನನ್ನದೇ ತಪ್ಪು. ಯಾಕಾದರೂ ಆ ಕಟುನುಡಿಗಳು ನನ್ನ ನಾಲಿಗೆಯಲ್ಲಿ ಹೊರಬಂತೋ ನಾ ಕಾಣೆ. ಒಂದು ಮನಸ್ಸು ತಕ್ಷಣ ಹಸ್ತಿನಾಪುರದ ಅರಮನೆಗೆ ಹೋಗಿ ದುರ್ಯೋಧನನ ಕ್ಷಮೆ ಕೇಳಬೇಕು ಅನ್ನಿಸಿತ್ತು.
ಹಾಳಾದ್ದು ಈ ಸ್ವಾಭಿಮಾನ ಇದೆಯಲ್ಲ. ನಾನು ದುರ್ಯೋಧನನ ಕ್ಷಮೆ ಕೇಳುವಂತ ತಪ್ಪು ಮಾಡಿದ್ದಾದರೂ ಏನು? ಅವನ ಕ್ಷಮೆ ಇಡೀ ಪಾಂಡವ ವಂಶಕ್ಕೇ ಬೇಕಿಲ್ಲ. ನಾನು ಪಾಂಡವರು ಅಜ್ಞಾತವಾಗಿ ಒಂದು ವರುಷ ಕಳೆದದ್ದಕ್ಕಿಂತ ಹೆಚ್ಚು ಅವಮಾನವಾಯಿತೆ ದುರ್ಯೋಧನನಿಗೆ? ಖಂಡಿತ ಇಲ್ಲ. ಪಾಂಡವರ ರಾಣಿಯಾದ ನಾನು, ಅತ್ತೆ ಕುಂತಿ ಪಟ್ಟ ಪಾಡಿಗೆಲ್ಲ ಆ ದುರ್ಯೋಧನನಲ್ಲವೆ ಕಾರಣ? ಸೈರಂದ್ರಿಯಾಗಿ ನಾನು ವಿರಾಟನ ರಾಣಿಗೆ ಸೇವಕಿಯಾಗಿ ಕಾಲ ಕಳೆದೆನಲ್ಲ ಆ ಅವಮಾನದ ಗಾಯ ಇನ್ನೂ ಮಾಗಿಲ್ಲ. ಇಂದ್ರಪ್ರಸ್ಥಕ್ಕೆ ಅಧಿಪತಿಯಾದ ಮಧ್ಯಮ ಪಾಂಡವ ಬೃಹನ್ನಳೆಯಾಗಿ ನಪುಂಸಕನಂತೆ ನಾಟ್ಯ ಕಲಿಸಿದಾಗ ಆದ ಅವಮಾನಕ್ಕಿಂತ ಈ ದುರ್ಯೋಧನ ನೀರಿಗೆ ಬಿದ್ದ ಆಕಸ್ಮಿಕ ಘಟನೆ ಹೆಚ್ಚಾಯಿತೆ? ಅಂದು ಆದದ್ದಾದರು ಏನು? ಒಂದು ಆಕಸ್ಮಿಕ ಘಟನೆ. ಅದಕ್ಕೆ ದುರ್ಯೋಧನನೇ ಹೊಣೆಗಾರ. ಕಣ್ಣಿದ್ದವರಿಗೆಲ್ಲ ಕಾಣುವ ಕೊಳದಲ್ಲಿ ಬಿದ್ದ ಕಾರಣವಾದರೂ ಏನಿರಬಹುದು? ನನ್ನನ್ನು ಅಂತಃಪುರದಲ್ಲಿ ನೋಡಿದ ಮೇಲಲ್ಲವೆ ಅವನು ನೀರಿನಲ್ಲಿ ಜಾರಿದ್ದು? ಹಾಗಾದರೆ ಆತ ಕುರುಡನಲ್ಲದಿದ್ದರೂ ಮದಾಂಧನೇ ಆಗಿರಬೇಕು. ಇದರಲ್ಲಿ ನನ್ನದೇನು ತಪ್ಪು? ಜೋರಾಗಿ ನಕ್ಕಿದ್ದೆ? ನಾನೊಬ್ಬಳೇ ನಗಲಿಲ್ಲವಲ್ಲ? ಸಭೆಯಲ್ಲಿ ನೆರೆದಿದ್ದ ಆಮಂತ್ರಿತರೆಲ್ಲರು ನೀರಿಗೆ ಬಿದ್ದ ದುರ್ಯೋಧನನ್ನು ನೋಡಿ ನಗಲಿಲ್ಲವೆ? ನನ್ನೊಬ್ಬಳ ಮೇಲೆ ಮಾತ್ರ ಅಷ್ಟು ಕೋಪ ಯಾಕೆ ಬರಬೇಕಿತ್ತು? ಮಂದಬುದ್ಧಿಯ ಜೊತೆ ಮದಾಂಧತೆ ಸೇರಿದರೆ ಎಲ್ಲರ ಮೇಲೂ ಕೋಪ ತಾನಾಗಿ ಬರುತ್ತೆ. ರೂಪವತಿಯಾದ ಪರಸ್ತ್ರೀಯ ಮೇಲೆ ಇನ್ನೂ ಹೆಚ್ಚು. ಪಾಪ, ದುರ್ಯೋಧನನಿಗೂ ನನ್ನಷ್ಟೆ ರೂಪವತಿ ಅರ್ಧಾಂಗಿ ಇದ್ದಿದ್ದರೆ ಕೋಪ, ತಾಪ, ಕಾಮ, ಕ್ರೋಧ ಎಲ್ಲ ಕಡಿಮೆ ಇರುತ್ತಿತ್ತೇನೋ. ಅವನ ಮುಂಗೋಪ ಎಲ್ಲರಿಗೂ ಗೊತ್ತು. ಆದರೂ ನಾನು ಅವನನ್ನ ಆ ರೀತಿ ಕೆಣಕ ಬಾರದಿತ್ತು. ಎಷ್ಟಾದರು ಕೌರವರೆಲ್ಲ ನಮ್ಮ ಸಂಬಂಧಿಗಳಲ್ಲವೆ?
ಸ್ವಾಭಿಮಾನ ಬಿಟ್ಟು ದುರ್ಯೋಧನನ್ನ ಕ್ಷಮೆ ಕೇಳಲು ಹೋಗಿ ನನ್ನ ಮುಖಕ್ಕೇ ಛೀಮಾರಿ ಹಾಕಿಸಿಕೊಂಡು ಬಂದೆನಲ್ಲ ಆ ದಿನ ಅಂತ ಬೇಜಾರು. ನಾನು ಕ್ಷಮೆ ಕೇಳುವ ಮೊದಲೇ "ಐದು ಜನ ಹೇಡಿ ಪಾಂಡವರ ಒಬ್ಬಳೇ ಅರ್ಧಾಂಗಿ, ಕೌರವ ಪುರುಷೋತ್ತಮನನ್ನು ವರಿಸಲು ಬಂದೆಯಾ?" ಎಂದು ಅವಮಾನ ಮಾಡಿದನಲ್ಲ ಆ ಪಾಪಿ ದುರ್ಯೋಧನ, ಅಗ್ನಿ ಪುತ್ರಿಯಾದ ನನ್ನನ್ನ. ಅಲ್ಲೇ ಭಸ್ಮ ಮಾಡಿಬಿಡುವಷ್ಟು ಕೋಪ ಬಂದಿತ್ತು. ಆದರೆ ಏನು ಮಾಡುವುದು? ನಾನೊಬ್ಬ ಏಕಾಂಗಿ ಹೆಣ್ಣು. ಅವಮಾನ, ಕೋಪ, ದುಃಖ ತಡಿಯಲಾರದೆ ಅವನನ್ನ ಶಪಿಸಲೂ ಆಗದೆ ಅಂತಃಪುರದ ಕತ್ತಲು ಕೋಣೆಯ ಮೊರೆ ಹೊಕ್ಕೆ. ಐದು ಜನರ ಆಸ್ತಿಯಲ್ಲವೆ ನಾನು? ಅತ್ತೆ ಕುಂತಿಯಲ್ಲವೆ ಅಂದು ಮಧ್ಯಮ ಪಾಂಡವ ನನ್ನನ್ನು ಸ್ವಯಂವರದಲ್ಲಿ ಗೆದ್ದು ಮನೆಗೆ ಕರೆತಂದಾಗ ಹೇಳಿದ್ದು ಎಲ್ಲರೂ ಸಮನಾಗಿ ಹಂಚಿಕೊಳ್ಳಿ ಎಂದು. ಸಮನಾಗಿ ಹಂಚಿಕೊಳ್ಳಲು ನಾನೇನು ಒಂದು ವಸ್ತುವೇ, ಆಸ್ತಿಯೇ? ಅದೊಂದು ನನ್ನ ಜೀವನದಲ್ಲಿ ನೆಡೆದ ಮರೆಯಲಾಗದ ಘಟನೆ. ಸಮಾಜದ ದೃಷ್ಟಿಯಲ್ಲಿ ಆದ ದೊಡ್ಡ ವಿಪರ್ಯಾಸ!
ಅಂದು ಅತ್ತೆ ಕುಂತಿ ಪರಿಸ್ಥಿತಿಯ ಅರಿವಿಲ್ಲದೆ ನುಡಿದದ್ದದಾರೂ ಏನು? ಪಾಂಡವರ ಮನೆಗೆ ಬಂದ ಸೊಸೆಯನ್ನ ಹಂಚಿಕೊಳ್ಳಿ ಎಂದು ಅತ್ತೆ ಕುಂತಿ ಹೇಳಿದ್ದು ತಪ್ಪಲ್ಲವೆ? ನನ್ನನ್ನು ಅರ್ಧಾಂಗಿನಿಯಾಗಿ ಐವರು ಹಂಚಿಕೊಳ್ಳಲು ಯಾವ ನೀತಿ ಶಾಸ್ತ್ರದಲ್ಲೂ ಬರೆದಿಲ್ಲವಲ್ಲ. ಆದರೆ ಜನರಿಗೇನು ಗೊತ್ತು ಪಾಂಡವರ ಗುಟ್ಟು? ಧರ್ಮರಾಯನಲ್ಲವೆ ಅಂದು ಈ ಘಟನೆಯನ್ನ ಪಾಂಡವರ ಅನುಕೂಲಕ್ಕೆ ತಿರುವು ಮಾಡಿಕೊಟ್ಟಿದ್ದು? ಅಜ್ಞಾತವಾಸದಲ್ಲಿದ್ದ ಪಾಂಡವರ ಮನೆಗೆ ಬಂದ ಹೊಸತೊಂದು ಹೆಣ್ಣಿನ ರಕ್ಷಣೆಯನ್ನ ಹಂಚಿಕೊಳ್ಳಲು ಪಣ ತೊಡುತ್ತೇವೆ ಹೊರತು ದೇಹವನ್ನಲ್ಲ ಅಂತ ಅಮ್ಮನೊಡನೆ ವಾದಿಸಿ ಗೆದ್ದ ಧರ್ಮರಾಯನಿಗೆ ನನ್ನ ಗೌರವ ನಿರಂತರ. ಅಜ್ಞಾತವಾಸದ ಸಂಧಿಗ್ಧ ಪರಿಸ್ಥಿತಿಯಲ್ಲಿ ಅರ್ಜುನ ಮದುವೆಯಾದದ್ದೇ ತಪ್ಪೆಂದು ವಾದಿಸಿದ್ದು ನಕುಲನಲ್ಲವೆ? ಭೀಮ ತಾನಾಗಲೇ ಹಿಡಂಬಿಯನ್ನು ವರಿಸಿ ಘಟೋತ್ಕಚ ಪುತ್ರನಿರುವಾಗ ಈ ಮದುವೆ ಬೇಡ ಎನ್ನಲಿಲ್ಲವೇ? ಸಹದೇವ ಕೂಡ ಭೀಮನ ಜೊತೆ ಸೇರಿ ಅಜ್ಞಾತವಾಸದ ಅವದಿಯಲ್ಲಿ ತಾವುಗಳು ಮದುವೆಯಾಗುವುದು ಉಚಿತವಲ್ಲವೆಂದು ಹೇಳಿದ್ದು ಈಗಲೂ ನೆನಪಿನಲ್ಲಿದೆ.
ಧರ್ಮರಾಯನ ಧರ್ಮಸಂಕಟ ನನಗೊಬ್ಬಳಿಗೇ ಅರ್ಥವಾಗಿದ್ದು ಅಂದರೂ ತಪ್ಪಿಲ್ಲ. ಒಂದು ಕಡೆ ಅಮ್ಮ ನುಡಿದಂತೆ ನಡೆದರೆ ಒಂದು ಹೆಣ್ಣು ಜೀವನಪರ್ಯಂತ ಪಡುವ ದುಃಖಕ್ಕೆ ಪಾಂಡವರು ಕಾರಣರಾಗುವರು. ಮತ್ತೊಂದು ಕಡೆ ಅಮ್ಮನ ಆದೇಶವನ್ನು ಉಲ್ಲಂಘಿಸಿದ ಪಾಂಡವರು ಎಂದೆಂದೂ ಸಮಾಜದಲ್ಲಿ ತಲೆ ತಗ್ಗಿಸಿ ನಡೆಯಬೇಕಾಗಬಹುದೆಂಬ ಭಯ. ಅಗ್ರಜ ಧರ್ಮರಾಯನ ಸಲಹೆಗೆ ಒಮ್ಮತಿಯಿತ್ತು ನನ್ನ ರಕ್ಷಣೆಗೇ ಪಣ ತೊಟ್ಟು ಎಲ್ಲ ಪಾಂಡವರು ಅಂದು ಮಲಗಿದಾಗ ಬೆಳಕು ಹರಿದಿತ್ತು. ಒಟ್ಟಿನಲ್ಲಿ ವಾದ ವಿವಾದಲ್ಲಿ ಕಳೆದಿತ್ತು ನನ್ನ ಮಧುಚಂದ್ರ. ಆದರೆ ಮಾರನೆಯ ದಿನ ಗುಲ್ಲೆದ್ದಿದ್ದು ಬರೀ ಸುಳ್ಳಲ್ಲವೆ? ಐವರಿಗೂ ಅರ್ಧಾಂಗಿನಿ ಎಂಬ ಬಿರುದು ಬಿರುಗಾಳಿಯಂತೆ ಹಬ್ಬಿತ್ತು. ಜನರ ಗುಸು ಗುಸು ಮಾತು ಕೇಳಿಸಿದರೂ ಕೇಳಿಸದಂತೆ ನಡೆಯುವ ಈ ಪಾಂಡವರ ಮನೆಗೆ ಏಕಾದರೂ ಸೊಸೆಯಾಗಿ ಬಂದೆನೋ. ಎಲ್ಲ ಅವಮಾನಗಳ ಸಹಿಷ್ಣತೆಗೆ ಕಾರಣವೂ ಉತ್ತರವೂ ಅಜ್ಞಾತವಾಸವೆ. ಅಜ್ಞಾತವಾಸ. ಎಂತಹ ರಣಧೀರರನ್ನೂ ಸಂಕುಚಿತಗೊಳಿಸಿ ನಿಸ್ಸಹಾಯಕರಂತೆ ಮಾಡುವ ದುರ್ಭಿಕ್ಷ ಕಾಲ. ದೃಪದರಾಜನ ರಾಜಕುಮಾರಿಯಾದ ನನಗೆ ಅಂತಹ ಸ್ಥಿತಿ ಬಂದೊದಗಿತ್ತಲ್ಲ. ಯಜ್ಞಸೇನಿ ಎಂದು ಕರೆಸಿಕೊಂಡ ನನಗೆ ಈ ಅವಮಾನ ಸಹಿಸಲಸಾಧ್ಯವಾಗಿತ್ತು. ಎಷ್ಟು ಚಿಂತಿಸಿ ಪ್ರಯೋಜನವೇನು? ಸಮಾಜದ ದೃಷ್ಟಿಯಲ್ಲಿ ನಾನೊಬ್ಬ ಅಧರ್ಮಿ ಹೆಣ್ಣು ಆದರೆ ದೇಹ ಮನಸ್ಸೆರಡೂ ಗಂಗೆಯಂತೆ ನಿರ್ಮಲ. ಐವರಿಗೂ ಅರ್ಧಾಂಗಿನಿಯಾಗುವ ಬದಲು ಕುಮಾರಿಯಾಗಿ ಉಳಿಯುವುದೇ ಮೇಲು. ಮನಸ್ಸಿನ್ನಲ್ಲಾಗುತ್ತಿದ್ದ ಈ ಹೋರಾಟಕ್ಕೆ ಉತ್ತರ ದೊರೆತಿದ್ದು ನಾನಂದು ಕೈಗೊಂಡ ‘ಚಂದ್ರಯಾನ ವ್ರತ’ದಿಂದ. ಈ ವ್ರತವನ್ನಾಚರಿಸುವ ಹೆಣ್ಣು ತನ್ನ ಇಚ್ಛೆಯಂತೆ ಸದಾ ಕುಮಾರಿಯಾಗೆ ಇರಲು ಸಾಧ್ಯವಾಗುವುದೆಂದು ನಾನಾಗಲೇ ತಿಳಿದಿದ್ದೆ. ನೋಡುವವರ ಕಣ್ಣಿಗೆ ಐದು ಪುರುಷರ ಸ್ತ್ರೀ. ಆದರೆ ನಿಜರೂಪದಲ್ಲಿ ಚಂದ್ರಯಾನ ವ್ರತ ಆಚರಿಸುವ ಯಜ್ಞಸೇನಿ. ಎಲ್ಲ ಕಳಂಕಗಳೂ ದೂರವಾಗಿ ಮನಸ್ಸು ಹಗುರವಾಗಿತ್ತು. ಆ ದಿನಗಳ ಕಹಿ ನೆನಪುಗಳನ್ನ ಈಗಲಾದರೂ ಮರೆತು ಸುಖದಿಂದಿರುವೆನೆಂದುಕೊಂಡರೆ ಈ ಪಾಪಿ ದುರ್ಯೋಧನ "ಐವರಿಗೂ ಅರ್ಧಾಂಗಿ" ಎಂದು ಮತ್ತೆ ಹೀಯಾಳಿಸಿದನಲ್ಲ. ಶ್ರೀಕೃಷ್ಣ ನಿನಗೊಬ್ಬನಿಗಲ್ಲವೇ ನನ್ನ ದುಃಖ ತಿಳಿಯುವುದು. ರೂಪ ಎಷ್ಟಿದ್ದರೇನು? ಈ ಜನ್ಮದಲ್ಲಿ ನನ್ನೀ ಕಳಂಕ ದೂರವಾಗುವುದೆ, ನೀನೇ ಹೇಳು ಕೃಷ್ಣ. ಇದೇ ಕೊರಗಿನಲ್ಲಿ ನಾನೆಷ್ಟು ಸಲ ಮಧ್ಯಮ ಪಾಂಡವನನ್ನು ನಿಂದಿಸಿ ನನ್ನನ್ನು ಮದುವೆಯಾದದ್ದಾರೂ ಏಕೆ ಎಂದು ಕೇಳಲಿಲ್ಲವೆ?
ಅಂತಹ ಕಷ್ಟ ಕಾಲದಲ್ಲೂ ನನಗೊಂದು ಸದಾ ನೆಮ್ಮದಿ ತರುತ್ತಿದ್ದ ವಿಷಯವೆಂದರೆ ಶ್ರೀಕೃಷ್ಣನ ಸಾನ್ನಿಧ್ಯ. ಹಸನ್ಮುಖಿಯೂ ಸ್ನೇಹಮಯಿಯೂ ಆದ ಅವನಿಲ್ಲದಿದ್ದರೆ ನನ್ನ ಜೀವನ ಮತ್ತಷ್ಟು ಬರಡಾಗಿರುತ್ತಿತ್ತು. ಮಧ್ಯಮ ಪಾಂಡವ ನನ್ನನ್ನು ವರಿಸದಿದ್ದರೆ ನನಗೆ ಶ್ರೀಕೃಷ್ಣನ ಸ್ನೇಹ ದೊರೆಯುತ್ತಿತ್ತೆ? ಸ್ನೇಹವೇನೋ ಸರಿ. ಆದರೆ ಸ್ನೇಹ ಸಂಬಂಧದಲ್ಲಿ ಕೊನೆಗೊಳ್ಳುತ್ತೆ ಅಂತ ನಾನು ಎಣಿಸಿರಲಿಲ್ಲ. ಸುಭದ್ರೆ ನನ್ನ ಸವತಿಯಾಗಿ ಮದ್ಯಮ ಪಾಂಡವನ ಮಡದಿಯಾಗಿ ಬರುವ ವಿಷಯ ನನಗಂತೂ ಬೇವು-ಬೆಲ್ಲ ಸವಿದಂತಾಗಿತ್ತು. ಸುಭದ್ರೆ ಬೇವಿನಂತಾದರೆ, ಚಂದ್ರಯಾನ ವ್ರತದಿಂದ ಮಧ್ಯಮ ಪಾಂಡವ ವಿಮುಕ್ತನಾಗುವ ಅಶಾಕಿರಣ ಬೆಲ್ಲತಿಂದಷ್ಟೇ ಸವಿಯಾಗಿತ್ತು. ಬಂದ ಹೊಸದರಲ್ಲಿದ್ದ ನನ್ನ-ಸುಭದ್ರೆಯ ಸವತಿ ಮಾತ್ಸರ್ಯ ಕೆಲವೇ ದಿನಗಳಲ್ಲಿ ಮಾಯವಾಗಲು ಆ ಮಾಯಾವಿ ಶ್ರೀಕೃಷ್ಣನೇ ಕಾರಣವಿರಬೇಕು. ಎಷ್ಟಾದರೂ ನಾನು ಸುಭದ್ರೆ ಅವನ ಅನುಜೆಯರಲ್ಲವೇ? ಆದರೂ ನಾನು ಸೊಸೆಯಾಗಿ ಬಂದಾಗ ಸಿಕ್ಕ ಹೊಟ್ಟೆಗಿಲ್ಲದ ವೈಭವಕ್ಕೂ ಸುಭದ್ರೆ ಬಂದಾಗ ದೊರೆತ ಸತ್ಕಾರಕ್ಕೂ ಅಜಗಜಾಂತರ. ಛೇ, ಹಳೆಯದನ್ನ ನೆನಸಿಕೊಂಡಾಗಲೆಲ್ಲ ಬರೀ ದುಃಖದ ದಿನಗಳೇ ಕಣ್ಮುಂದೆ ಬರುತ್ತವೆ. ನಾನು ವಧುವಾಗಿ ಬಂದ ಸಂತೋಷದ ಕಾಲದಲ್ಲೂ ಮನೆಯಲ್ಲಿ ಬಡತನವೇ. ಪಾಂಡು ಪುತ್ರರಿಗೂ ಬ್ರಾಹ್ಮಣ ವಟುಗಳಂತೆ ಭಿಕ್ಷೆ ಬೇಡುವ ಕಾಲ. ಸುಭದ್ರೆ ಬಂದ ಕೆಲವೇ ಮಾಸಗಳಲ್ಲಿ ಗರ್ಭಿಣಿಯಾದಾಗ ನನ್ನ ಅಸೊಯೆ, ಮಾತ್ಸರ್ಯಗಳನ್ನ ಮನಸ್ಸಿನೊಳಗೇ ಮುಚ್ಚಿಡಲು ಬಹಳ ಕಷ್ಟವೇ ಆಗುತ್ತಿತ್ತು. ಸುಭದ್ರೆಯ ಷೋಷಣೆಗೆ ಹಣ್ಣು ಹಂಪಲಗಳನ್ನು ತವರಿಂದ ಶ್ರೀಕೃಷ್ಣನೇ ತಂದುಕೊಡುತ್ತಿದ್ದ. ತುಂಬು ಗರ್ಭಿಣಿಯಾದ ಅವಳಿಗೆ ಕಥೆ ಕೂಡ ಹೇಳಿ ಮಲಗಲು ಸಹಾಯ ಮಾಡುತ್ತಿದ್ದ. ನವಮಾಸದಲ್ಲಿ ಅದೆಷ್ಟು ಸಲ ಅವಳು ತವರಿಗೆ ಹೋಗಿ ಕಾಲ ಕಳೆದಿದ್ದು?
ತಾಯ್ತನದ ಹಂಬಲ ನನ್ನನ್ನೆಷ್ಟು ಕಾಡಿದರೂ ಚಂದ್ರಯಾನ ವ್ರತದಿಂದ ವಿಮುಕ್ತಳಾಗಲು ನನಗೆ ಧೈರ್ಯವೇ ಬರಲಿಲ್ಲ. ವ್ರತಭ್ರಷ್ಟೆಯಾದರೆ ಗಾಯದ ಮೇಲೆ ಬರೆಯೆಳೆದಂತಾಗುವುದೆಂಬ ಭಯ. ಪಂಜರದಲ್ಲಿ ಕೂಡಿಟ್ಟ ಸಿಂಹಿಣಿಯಂತಾಗಿತ್ತು ನನ್ನ ಸ್ಥಿತಿ. ನವಮಾಸ ಕಳೆದು ಸುಭದ್ರೆಗೆ ಗಂಡು ಮಗು ಹುಟ್ಟಿದಾಗ ಆ ಮುಗ್ಧ ಮಗುವಿನ ನಗುಮುಖ ಮಧ್ಯಮ ಪಾಂಡವನನ್ನೇ ಹೋಲುತ್ತಿದ್ದನ್ನ ಕಂಡು ನಾನೇ ಆ ಮಗುವಿಗೆ ಜನ್ಮ ಕೊಟ್ಟಷ್ಟು ಸಂತೋಷವಾಗಿತ್ತು. ಅಭಿಮನ್ಯುವನ್ನು ನಾನೇ ಅಲ್ಲವೆ ಸುಭದ್ರೆಗಿಂತ ಹೆಚ್ಚು ಪ್ರೀತಿಯಿಂದ ಬೆಳೆಸಿದ್ದು? ತುಂಟಾಟ ಮಾಡಿ ಸುಭದ್ರೆಯ ಪೆಟ್ಟುಗಳನ್ನ ತಪ್ಪಿಸಿಕೊಂಡು ನನ್ನನ್ನಪ್ಪಿ ಸೆರಗಿನ ಆಶ್ರಯ ಪಡೆದಾಗ ನನಗಾಗುತ್ತಿದ್ದ ಮಾತೃವಾತ್ಸಲ್ಯ ಯಾರಿಗೂ ಅರ್ಥವಾಗುತ್ತಿರಲಿಲ್ಲ. ನೋಡುವವರ ಕಣ್ಣಿಗೆ ನಾನೊಬ್ಬಳು ಬಂಜೆಯಲ್ಲವೇ? ಅಭಿಮನ್ಯುಗೂ ಶ್ರೀಕೃಷ್ಣನನ್ನು ಕಂಡರೆ ಎಷ್ಟು ಪ್ರೀತಿ, ಗೌರವ. ಹೆಮ್ಮೆ ಪಡಲು ಅರ್ಹನಾದ ನಮ್ಮ ಏಕ ಮಾತ್ರ ಪುತ್ರ. ಅವನನ್ನು ಹೆತ್ತ ಸುಭದ್ರೆಯೇ ಧನ್ಯಳು.
ಅತ್ತೆ ಕುಂತಿಯ ಹದ್ದಿನ ಕಣ್ಣು ನನ್ನ ಮೇಲೆ ಸದಾ ಇದ್ದೇ ಇರುತ್ತಿತ್ತು. ನಾನು ತವರಿಗೆ ಹೋಗಲು ಅನುಮತಿ ಕೇಳಿದಾಗಲೆಲ್ಲ ಒಂದಲ್ಲ ಒಂದು ಕಾರಣ ಹೇಳಿ ಏಕಚಕ್ರಿ ನಗರದಲ್ಲೇ ಇರುವಂತೆ ಮಾಡುತ್ತಿದ್ದನ್ನ ನೆನಪಿಸಿಕೊಂಡರೆ ಅತ್ತೆ ಕುಂತಿಗೆ ನನ್ನ ಮೇಲೆ ಅಪಾರ ಪ್ರೀತಿ ಇತ್ತೋ ಅಥವಾ ಹತೋಟಿಯಲ್ಲಿಡಲೋ ಹೇಳುವುದು ಕಷ್ಟ. ಬರೀ ದೃಢಕಾಯ ಗಂಡು ಮಕ್ಕಳನ್ನೇ ಬೆಳಸಿದ ಅತ್ತೆ ಕುಂತಿ ನನ್ನ ಕೋಮಲ ದೇಹ, ಹೆಣ್ಣಿನ ಮೃದು ಸ್ವಭಾವ ಕಂಡು ನನ್ನನ್ನ ಮಗಳಂತೆ ನೋಡಿಕೊಳ್ಳುತ್ತಿದ್ದರು. ಹೆಣ್ಣಿನ ಕಷ್ಟ ಸುಖಗಳನ್ನ ಕೇಳಿ ತಿಳಿಯುವ ತಾಳ್ಮೆ ಮತ್ತೊಂದು ಹೆಣ್ಣಿಗಷ್ಟೇ ಸಾಧ್ಯ. ನನ್ನ ಎಲ್ಲ ಪ್ರಶ್ನೆಗಳಿಗೂ ಅತ್ತೆ ಕುಂತಿಯ ಬಳಿ ಉತ್ತರವಿದ್ದೇ ಇರುತ್ತಿತ್ತು. ಆಂತರ್ಯದಲ್ಲಿ ಚರ್ಚಿಸಲು ಸಮಯ ಸಾಕಷ್ಟು ಸಿಗುತ್ತಿತ್ತು. ತೆರದಿಟ್ಟ ಪುಸ್ತಕದಂತೆ ನನ್ನ ಮನಸ್ಸನ್ನ ಓದಿಬಿಡುತ್ತಿದ್ದರು ಅತ್ತೆ ಕುಂತಿ. ನಾನು ಪ್ರಶ್ನೆ ಕೇಳುವ ಮೊದಲೇ ಮಧ್ಯಮ ಪಾಂಡವ ಚಿಕ್ಕವನಾಗಿದ್ದಾಗ ಮಾಡಿದ ಸಾಹಸ ಕತೆಗಳನ್ನ ಮನದಟ್ಟವಾಗುವಂತೆ ಹೇಳಿಬಿಡುತ್ತಿದ್ದರು. ಅಬ್ಬ, ಆಗಲೂ ಆ ದುರ್ಯೋಧನನ ದ್ವೇಷ, ವಾರಣಾವತಿಯಲ್ಲಿ ಅವನು ಅರಗಿನರಮನೆಯಲ್ಲಿ ಪಾಂಡವರನ್ನು ಸುಟ್ಟುಬಿಡಲು ಹೂಡಿದ ಸಂಚು ಎಲ್ಲ ಕಣ್ಣಿಗೆ ಕಟ್ಟುವಂತೆ ಹೇಳುತ್ತಿದ್ದರು. ದುಃಖ ತಡೆಯಲಾರದೆ ಕಣ್ಣೀರು ಬಂದರೂ ತೋರಿಸದೆ ನನಗೆ ಧೈರ್ಯ ಹೇಳುತ್ತಿದ್ದರು.
ನನ್ನನ್ನು ಕಾಡುತ್ತಿದ್ದ ಬಂಜೆ ಎಂಬ ಕಲುಷಿತ ಅಪವಾದವನ್ನ ದೂರ ಮಾಡಲು ಪರಿಹಾರ ಅತ್ತೆ ಕುಂತಿಯೇ ತೋರಿಸಿಕೊಟ್ಟಿದ್ದು. ಅದೊಂದು ನಮ್ಮಿಬ್ಬರ ಮದ್ಯದಲ್ಲಿರುವ ನಿಗೂಡ ರಹಸ್ಯ. ಯಾರಿಗೂ ಗೊತ್ತಿಲ್ಲದ, ನಂಬಲು ಸಾಧ್ಯವಿಲ್ಲದ ಗುಟ್ಟು. ನಾನು ನನ್ನ ಸ್ವ-ಇಚ್ಛೆಯಿಂದಲೇ ಕುವರಿಯಾಗಿರಲು ನಿರ್ಧರಿಸಿದ್ದನ್ನ ಅತ್ತೆ ಕುಂತಿ ತುಂಬ ಸಹಾನುಭೂತಿ ತೋರಿಸಿದ್ದಲ್ಲದೆ ನನ್ನನ್ನು ಅರ್ಥ ಮಾಡಿಕೊಂಡಿದ್ದರು. ಆದರೆ ಪಾಂಡು ಸಂತಾನ ನನ್ನಿಂದಲೇ ಕೊನೆಗೊಳ್ಳುವುದೆಂಬ ಅರಿವಾದಾಗ ಚಿಂತೆ ಅವರನ್ನು ಕಾಡಿತ್ತು. ಪ್ರಜೆಗಳು ಏನಂದಾರು? ಸುಮ್ಮನೆ ಚಿಂತಿಸಿ ಕೂಡುತ್ತಾರೆಯೇ ಅತ್ತೆ ಕುಂತಿ? ಸ್ವಲ್ಪ ದಿನಗಳ ನಂತರ ಒಂದು ನಿರ್ದಿಷ್ಟ ನಿರ್ಣಯಕ್ಕೆ ಬಂದಿದ್ದರು. ವ್ರತ ಮುಂದುವರೆಸಲು ಅವರ ಎರಡು ಷರತ್ತಿಗೆ ನಾನು ಒಪ್ಪಿಗೆ ಕೊಡಲೇ ಬೇಕೆಂಬುದೇ ಆ ನಿರ್ಧಿಷ್ಟ ನಿರ್ಣಯ. ಒಂದು, ಪಾಂಡು ಸಂತಾನ ಮುಂದುವರೆಯಲು ಮಧ್ಯಮ ಪಾಂಡವನಿಗೆ ನಾನೆ ನಿಂತು ಮತ್ತೊಂದು ಮದುವೆ ನೆರವೇರಿಸುವುದು. ಎರಡನೆಯದಾಗಿ, ನನ್ನ ಬಂಜೆತನದ ಅಪವಾದ ಹೋಗಿಸಲು ಯಾರಿಗೂ ಗೊತ್ತಾಗದಂತೆ ಐದು ಪುಟ್ಟ ಬಾಲಕರನ್ನ ದತ್ತು ತೆಗೆದುಕೊಳ್ಳುವುದು. ಎಷ್ಟು ಯೋಚಿಸಿದರೂ ಎರಡೂ ಷರತ್ತುಗಳು ನನ್ನನ್ನ ಹತಾಷಗೊಳಿಸಿದವೇ ಹೊರತು ನನ್ನ ಮನಸ್ಸಿನ ದ್ವಂದ್ವವನ್ನ ಹೋಗಲಾಡಿಸಲಿಲ್ಲ. ಕೊನೆಗೆ ನಾನೇ ಸೋತು ಅತ್ತೆ ಕುಂತಿ ಸಲಹೆಯಂತೆ ನಡೆದುಕೊಂಡೆ. ಕಾಕತಾಳೀಯವೋ ಎನ್ನುವಂತೆ ಮಧ್ಯಮ ಪಾಂಡವ ಸುಭದ್ರೆಯನ್ನು ಮನೆಗೆ ಕರೆತಂದದ್ದೂ ಆ ಸಮಯದಲ್ಲೆ. ಅಷ್ಟೇ ಸುಲಭವಾಗಿ ಎರಡನೇ ಷರತ್ತಿಗೆ ಅತ್ತೆ ಕುಂತಿ ತಾವೇ ಉತ್ತರ ಹುಡಿಕಿದ್ದರು. ಅಂದು ವಾರಾಣವತಿಯಲ್ಲಿ ಅರಗಿನಮನೆಯಲ್ಲಿ ದುರ್ಯೋಧನ ಕೊಂದದ್ದು ಪಾಂಡವರನ್ನಲ್ಲ. ಒಂದು ಬೇಡರ ಹೆಣ್ಣು ಹಾಗು ಅವಳ ಐದು ಪುತ್ರರನ್ನ. ಆದರೆ ಕಾಡಿನಲ್ಲೇ ಉಳಿದು ಅನಾಥರಾದ ಆ ಹೆಣ್ಣಿನ ಐದು ಮೊಮ್ಮಕ್ಕಳನ್ನ ಕಂಡು ಅತ್ತೆ ಕುಂತಿಗೆ ತುಂಬ ಪಶ್ಚಾತ್ತಾಪವಾಯಿತಂತೆ. ಆ ಪುಟ್ಟ ಬಾಲಕರು ಬೆಳೆದದ್ದು ವಿದುರನ ಜೊತೆ. ಆ ಐವರನ್ನ ಉಪಪಾಂಡವರೆಂದು ಕರೆದು ನಾನು ಅತ್ತೆ ಕುಂತಿ ರಹಸ್ಯದಲ್ಲಿ ದತ್ತು ತೆಗೆದುಕೊಂಡದ್ದು ಯಾರಿಗೂ ಗೊತ್ತಾಗಲಿಲ್ಲ. ಜನರೆಲ್ಲ ನಾನೆ ಪಾಂಡವರಿಂದ ಪಡೆದ ಸಂತಾನವೆಂದು ನಂಬಿದರು. ಇದರಿಂದ ನನ್ನ ಚಂದ್ರಯಾನ ವ್ರತದ ಗುಟ್ಟು ಬೇರೆಯವರಿಗೆ ಗೊತ್ತಾಗಲೇಇಲ್ಲ. ಅತ್ತೆ ಕುಂತಿಯ ಸಹಾಯವಿಲ್ಲದಿದ್ದರೆ ನಾನೆಂದೂ ಕಣ್ಣೀರು ಮಿಡಿಯಬೇಕಾಗುತ್ತಿತ್ತು. ಕುಂತಿಯಂತಹ ಅತ್ತೆಯನ್ನ ಪಡೆದ ನಾನೇ ಧನ್ಯಳು.
ಆದರೆ ನನ್ನ-ಉತ್ತರೆಯ ಸಂಬಂಧ ಒಂದು ರೀತಿ ಘರ್ಷಣೆಯಲ್ಲೆ ಕೊನೆಗೊಂಡಿದೆಯಲ್ಲ. ಸೊಸೆಯಾಗಿ ನಾನು ಅತ್ತೆ ಕುಂತಿಯನ್ನ ಅರ್ಥ ಮಾಡಿಕೊಂಡಂತೆ ನನ್ನ ಸೊಸೆ ಉತ್ತರೆ ನನ್ನನ್ನ ಅರ್ಥ ಮಾಡಿಕೊಂಡಿಲ್ಲವಲ್ಲ. ಏಕಿರಬಹುದು? ಇನ್ನೂ ಹದಿಹರೆಯದ ಅಭಿಮನ್ಯು ಶಸ್ತ್ರಾಭ್ಯಾಸದಲ್ಲಿ ತೊಡಗಿರುವಾಗಲೇ ಉತ್ತರೆಯನ್ನ ಮನೆಗೆ ಸೊಸೆಯಾಗಿ ತಂದಿದ್ದು ನಮ್ಮದೇ ತಪ್ಪು. ಸ್ವಯಂವರದಲ್ಲಿ ಮಧ್ಯಮ ಪಾಂಡವ ನನ್ನನ್ನು ಗೆದ್ದಂತೆ ಅಭಿಮನ್ಯು ಉತ್ತರೆಯನ್ನು ಗೆದ್ದು ತಂದಿದ್ದರೆ ಜೋಡಿ ಸಮನಾಗಿರುತ್ತಿತ್ತೋ ಏನೋ. ಮತ್ಸ್ಯ ದೇಶದ ವಿರಾಟ ರಾಜನ ಪುತ್ರಿ ಉತ್ತರೆ ನಮ್ಮ ಮನೆಗೆ ಸೊಸೆಯಾಗಿ ಬಂದಿದ್ದು ಬಳುವಳಿಯಾಗಲ್ಲವೇ? ಏಕಚಕ್ರ ನಗರಿಯಲ್ಲಿ ಎಲ್ಲವೂ ವಿಚಿತ್ರವೆ. ಕೀಚಕನಂತ ದುಷ್ಕರ್ಮಿಗೆ ಸೇನಾಧಿಪತಿ ಸ್ಥಾನ! ಪೌರುಷಕ್ಕೇ ನಗೆಗೀಡಲಾದ ರಾಜಕುಮಾರ ಉತ್ತರ! ಮಗಳನ್ನ ಸ್ವಯಂವರದಲ್ಲಿ ಧಾರೆ ಕೊಡುವ ಸಂಪ್ರದಾಯವೇ ಇಲ್ಲದ ಸಾಮಂತ ಮನೆತನ! ಉತ್ತರ ಕುಮಾರನ ಪೌರುಷ ಬಯಲಾದದ್ದು ಮಧ್ಯಮ ಪಾಂಡವ ಬೃಹನ್ನಳೆಯ ರೂಪದಲ್ಲಿ ಸಾರಥಿಯಾಗಿ ಕೌರವರನ್ನ ಸೋಲಿಸಿದಾಗಲಲ್ಲವೇ? ಆದರೇನು ಏಕಚಕ್ರ ನಗರವಾಸಿಗಳು ನಂಬಿದ್ದು ಉತ್ತರ ಕುಮಾರನ ಧೀರತನದಲ್ಲಿ. ವಿರಾಟ ರಾಜ ಬೃಹನ್ನಳೆಯೇ ಮಧ್ಯಮ ಪಾಂಡವ ಎಂದು ಗೊತ್ತಾದ ಮೇಲಲ್ಲವೆ ಉತ್ತರೆಯನ್ನ ಅಭಿಮನ್ಯುವಿಗೆ ಬಹುಮಾನವಾಗಿ ಧಾರೆಯೆರದು ಕೊಡಲು ಮುಂದೆ ಬಂದದ್ದು? ನನಗಂತೂ ಈ ಸಂಬಂಧ ಅಷ್ಟೊಂದು ಉಚಿತವೆನಿಸಲಿಲ್ಲ. ವಿರಾಟ ರಾಜನ ಸ್ನೇಹ, ವಿನಯ ಜೊತೆಗೆ ಶ್ರೀಕೃಷ್ಣನ ಒಪ್ಪಿಗೆ ಎಲ್ಲ ಸೇರಿ ನನ್ನ ವಿಚಾರಧಾರೆಗಳು, ಸಂಶಯಗಳು ನನ್ನೊಳಗೇ ಉಳಿದುಬಿಟ್ಟವು. ನನ್ನ ಮನಸ್ಸಿನಲ್ಲಿದ್ದನ್ನ ಆಗಲೇ ಎಲ್ಲರಿಗೂ ತಿಳಿಸಬೇಕಿತ್ತು. ಮದುವೆಯ ಎಲ್ಲ ಕಾರ್ಯಗಳೂ ತರಾತುರಿಯಲ್ಲಿ ನಡೆದದಿದ್ದರಿಂದ ನನಗೂ ಯೋಚಿಸಲು ಸಮಯವೇ ಸಿಗಲಿಲ್ಲ. ಆದರೂ ಅಂದಿನ ಚಿಂತನೆಗಳು ಇಂದೂ ನೆನೆಪಿನಲ್ಲಿವೆ. ಮದುವೆಯ ಮುಂಚೆ ಪ್ರತಿದಿನವೂ ಉತ್ತರೆ ನನ್ನನ್ನು ಕಂಡದ್ದು ರಾಣಿಯ ಸೇವಕಿ ಸೈರಂದ್ರಿಯಾಗಿ. ಮದ್ಯಮ ಪಾಂಡವನನ್ನು ನೋಡಿದ್ದು ನಪುಂಸಕ ಬೃಹನ್ನಳೆಯಾಗಿ. ಭೀಮನನ್ನು ನೋಡಿದ್ದು ಅಡಿಗೆ ಭಟ್ಟ ವಲಾಳನಾಗಿ. ನಕುಲ ಕೇವಲ ಅಶ್ವಗಳನ್ನು ನೋಡಿಕೊಳ್ಳುವ ಧರ್ಮಗ್ರಂಥಿಯಾಗಿ. ಸಹದೇವ ಹಸುಕರುಗಳನ್ನು ನೋಡಿಕೊಳ್ಳುವ ತಂತ್ರಪಾಲನಾಗಿ. ಪಾಂಡು ಪುತ್ರರ ಸಂಸಾರವೇ ಈ ರೀತಿ ಕೆಳಮಟ್ಟದ ಕೆಲಸಗಳಲ್ಲಿ ತೊಡಗಿದ್ದಾಗ ರಾಜಕುಮಾರಿ ಉತ್ತರೆಗೆ ಗೌರವ, ಅಭಿಮಾನ ಬರಲು ಸಾಧ್ಯವೇ? ಅಭಿಮನ್ಯುವಿನ ಮೇಲೆ ಪ್ರೀತಿಯಿರಲು ಸಾಧ್ಯವೇ? ವಿರಾಟ ರಾಜನಿಗಂತು ಪಾಂಡವರ ಸಂಬಂಧ ಲಾಭದಾಯಕವೆ. ಎಲ್ಲ ತಿಳಿದ ಶ್ರೀಕೃಷ್ಣನೇ ಸಮ್ಮತಿಯಿತ್ತು ಮುಂದೆ ವಿರಾಟರಾಜನ ಸಹಾಯ ಬೇಕಾಗಬಹುದೆಂದು ಹೇಳಿದಾಗ ಅತ್ತೆ ಕುಂತಿ ಕೂಡ ಸುಮ್ಮನಾದರು. ಉತ್ತರ ಕುಮಾರನ ಪೌರುಷ ನೆನೆಸಿಕೊಂಡು ಅವನಿಂದ ಸಹಾಯ? ಮನಸ್ಸಿನಲ್ಲೇ ನಕ್ಕಿದ್ದೆ ಅಂದು! ಅಂತೂ ನನ್ನ ಅನಿಸಿಕೆಗಳನ್ನ ಅದುಮಿಡಲು ಕಷ್ಟವೇ ಆಗಿತ್ತು. ಮದುವೆಯ ದಿಬ್ಬಣದಲ್ಲೂ ವಧುಗಿಂತ ವರನೇ ಹೆಚ್ಚು ಆಕರ್ಷಣೀಯವಾಗಿ ಕಂಡದ್ದು. ಎಷ್ಟಾದರು ನನ್ನ ಕುಮಾರನಲ್ಲವೇ ಅಭಿಮನ್ಯು?
ಅಥವಾ ಅದೊಂದು ನನ್ನ ಮನಸ್ಸಿನ ಭ್ರಮೆಯೆ? ತಾಯ್ತನದ ಹಂಬಲ ಮಾತ್ರವೇ? ಹಾಗಾದರೆ ಉತ್ತರೆ ನನ್ನ ಸೊಸೆಯಲ್ಲವೆ? ಮದುವೆಯ ನಂತರವೂ ನನ್ನನ್ನು ಸೈರಂದ್ರಿಯ ರೂಪದಲ್ಲೇ ನೋಡುತ್ತಿದ್ದಾಳೆಯೆ ಉತ್ತರೆ? ಇಲ್ಲದಿದ್ದಲ್ಲಿ ನನ್ನ ಬಗ್ಗೆ ಅಷ್ಟೊಂದು ತಾತ್ಸಾರ ಬರಲು ಕಾರಣವಾದರೂ ಏನಿರಬಹುದು? ಐವರಿಗೆ ಅರ್ಧಾಂಗಿ ಎಂದು ಬಿರುದು ಗಳಿಸಿರುವ ನನ್ನನ್ನು ಯಾವ ಹೆಣ್ಣು ತಾನೆ ಗೌರವದಿಂದ ಕಾಣಲು ಸಾಧ್ಯ?
ಛೆ, ಈ ಮನಸ್ಸೊಂದು ಲಗಾಮಿಲ್ಲದ ಕುದುರೆಯಂತೆ. ಮತ್ತೆ ಆ ಅಜ್ಞಾತವಾಸದ ಚಕ್ರವ್ಯೂಹಕ್ಕೆ ಎಳೆದು ನನ್ನನ್ನು ನಾನೇ ನಿಂದಿಸಿಕೊಳ್ಳುವಂತೆ ಮಾಡತ್ತೆ. ಒಮ್ಮೊಮ್ಮೆ ಮನಸ್ಸು ಇನ್ನೂ ದುಗುಡಗೊಳ್ಳುತ್ತೆ. ಮತ್ತೊಮ್ಮೆ ಆ ಸ್ವನಿಂದನೆಯಿಂದಲೇ ಮನಸ್ಸು ಹಗುರಗೊಳ್ಳುತ್ತೆ. ನನ್ನ ದುಃಖಕ್ಕೆ ಬೇರೆಯವರು ಕಾರಣರಾದರೆ ನನ್ನಮೇಲೆ ನನಗೇ ಅನುಕಂಪ ಹುಟ್ಟುತ್ತದೆ. ಸ್ವ-ಅನುಕಂಪದ ಜೊತೆ ಸ್ವ-ಅಭಿಮಾನ ಬೆರತಾಗ ಮನಸ್ಸು ವಿಕಾರಗೊಳ್ಳುತ್ತೆ. ಒಟ್ಟಿನಲ್ಲಿ ಈ ಮನಸ್ಸನ್ನ ಅರ್ಥ ಮಾಡಿಕೊಳ್ಳಲು ಆ ಬ್ರಹ್ಮನಿಗೂ ಸಾಧ್ಯವಿಲ್ಲ.
ಈ ಮನಸ್ಸಿನಂತರಾಳಕ್ಕೊಂದು ತಳಹದಿಯೇ ಇಲ್ಲ. ಕನ್ನಡಿ ಹಿಡಿದರೆ ಬೇರಾರು ನೋಡಲಸಾಧ್ಯವಾದ ನನ್ನದೆ ಪ್ರತಿಬಿಂಬ ಮೂಡಿ ನನ್ನ ಅಸ್ತಿತ್ವವನ್ನೇ ಪ್ರಶ್ನಿಸುವಂತೆ ಮಾಡಿದೆ.
___________________________________________________
ಸಂವೇದನೆ
ಡಾ. ರವಿ ಗೋಪಾಲ ರಾವ್, ಸ್ಯಾನ್ ಹೋಸೆ, ಕ್ಯಾಲಿಫ಼ೋರ್ನಿಯ.
ಇನ್ನೂ ಒಂದು ವಾರ ಕೂಡ ಆಗಿರಲಿಲ್ಲ ನನ್ನ ಶ್ರೀಮತಿ ಮತ್ತು ಮಕ್ಕಳು ಬೆಂಗಳೂರಿಗೆ ಹೋಗಿ. ಮನೆಯಲ್ಲ ಬಿಕೋ ಎನ್ನುತ್ತಿತ್ತು. ಲೈಬ್ರೆರಿಯಿಂದ ಡಿ.ವಿ.ಡಿ ತಂದು ಒಬ್ಬನೇ ಕುಳಿತು ಯಾವುದಾದರೂ ಹಿಂದಿ ಅಥವ ಕನ್ನಡ ಚಲನ ಚಿತ್ರ ನೋಡಬಹುದೆಂಬ ಯೋಚನೆ ಬಂತು. ಸರಿ, ಹತ್ತಿರದಲ್ಲೆ ಇರುವ ನಮ್ಮ ಸ್ಯಾನ್ ಹೋಸೆ ವಾಚನಾಲಯಕ್ಕೆ ಹೋದೆ. ಅಲ್ಲಿ "ಇಂಡಿಯನ್ ಮೂವೀಸ್" ನಾಮಫಲಕದ ಶೆಲ್ಫ್ ಬಳಿ ಬಂದು ಎಷ್ಟು ಹುಡುಕಿದರೂ ಒಂದೂ ನೋಡಬಯಸುವ ಚಲನ ಚಿತ್ರ ಕಾಣಲಿಲ್ಲ. ಮನೆಗೆ ವಾಪಸ್ಸು ಹೊರಡುವವನಿದ್ದೆ. ಆದರೆ ಶೆಲ್ಫಿನ ಮೇಲಿದ್ದ ಒಂದು ಡಿ.ವಿ.ಡಿಯ ಶೀರ್ಷಿಕೆ ನನ್ನ ಗಮನ ಸೆಳೆಯಿತು. ಕೈಗೆತ್ತಿಕೊಂಡು ನೋಡಿದೆ. "ಸಂವೇದನ" ಎಂದಿದ್ದ ಆ ಶೀರ್ಷಿಕೆ ಓದಿ ಯಾವುದೋ ಹಳೆ ಆರ್ಟ್ ಚಲನ ಚಿತ್ರವಿರಬೇಕೆಂದುಕೊಂಡೆ. ಅದರ ಮೇಲಿದ್ದ ಚಿತ್ರ ನೋಡಿ ಸ್ವಲ್ಪ ಆಶ್ಚರ್ಯವಾಯಿತು. ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೈಯವರ ಮುಖಚಿತ್ರ! ಪ್ರಧಾನಮಂತ್ರಿ ಯಾವಾಗ ನಟಿಸಲು ಶುರು ಮಾಡಿದರಪ್ಪ ಈ ಇಳಿವಯಸ್ಸಿನಲ್ಲಿ ಅನ್ನಿಸಿತು. ಲೈಬ್ರೆರಿ ಬಾಗಿಲು ಹಾಕುವುದಕ್ಕೆ ಇನ್ನೈದೇ ನಿಮಿಷಗಳಿತ್ತು. ಇದನ್ನೇ ನೋಡಿದರಾಯಿತು ಎಂದುಕೊಂಡು ಬೇಗನೆ ಚೆಕ್ ಔಟ್ ಮಾಡಿಕೊಂಡು ಮನೆಗೆ ಬಂದೆ. ನಾನಂದುಕೊಂಡಂತೆ ಸಂವೇದನ ಒಂದು ಚಲನ ಚಿತ್ರವಾಗಿರಲಿಲ್ಲ. ಪ್ರಧಾನಮಂತ್ರಿ ವಾಜಪೈಯವರು ಬರೆದ ಕವಿತೆಗಳನ್ನ ಪ್ರಖ್ಯಾತ ಗಜ಼ಲ್ ಹಾಡುಗಾರ ಜಗಜಿತ್ ಸಿಂಗ್ ಸಂಗೀತಕ್ಕೆ ಅಳವಡಿಸಿ, ಯಶ್ ಚೋಪ್ರ ನಿರ್ದೇಷಿಸಿದ ಒಂದು ವೀಡಿಯೋ. ಶಾರೂಖ್ ಖಾನ್ ನಟಿಸಿದ ಹಾಗು ಅಮಿತಾಬ್ ಬಚ್ಚನ್ನನ ಮುನ್ನುಡಿಯೊಂದಿಗೆ ತುಂಬ ಗಂಬೀರವಾದ ಸನ್ನಿವೇಶಗಳಿದ್ದ ಈ ವೀಡಿಯೋ ನನ್ನ ಮನಸ್ಸಿನ ಲಹರಿಯನ್ನೆ ಬೇರೊಂದು ಕಡೆ ತಿರುಗಿಸಿತು. ಜೊತೆಗೆ ಈ ಕವಿತೆಗಳ ಒಳ ಅರ್ಥವನ್ನು ಬಿಡಿಸಿ ಹೇಳಿದ ಪ್ರಸಿದ್ದ ಕವಿ ಜ಼ಾವೇದ್ ಅಕ್ತರ್‌ರ ಶುಷ್ರಾವ್ಯ ಉರ್ದೂ ವಾಚನ ನನ್ನನ್ನು ಬೇರೆ ಲೋಕಕ್ಕೆ ಸೆಳೆಯಿತು. ಆ ವೀಡಿಯೋನಲ್ಲಿರುವ ಒಂದು ಕವಿತೆ "ಕ್ಯಾ ಖೋಯ ಕ್ಯಾ ಪಾಯ" ನಾನೆಷ್ಟು ಬಾರಿ ಕೇಳಿದರೂ ಮತ್ತೆ ಕೇಳಬೇಕೆಂಬ ಹಂಬಲ ಉಂಟುಮಾಡಿತು. ನನಗೆ ನೆನಪಿರುವಂತೆ ಈ ರೀತಿಯಾದ ಭಾವನಾ ಭರಿತ ಕವಿತೆಯನ್ನು ನಾನು ಮತ್ತೆ ಮತ್ತೆ ಆಲಿಸಿ ಕವಿಯ ಮನೋಗತವನ್ನು ಅರಿಯಲು ಹವಣಿಸಿದ್ದು ಇದು ಮೊದಲ ಬಾರಿಯಲ್ಲ. ಹರಿವಂಶ್ ರಾಯ್ ಬಚ್ಚನ್, ರಾಜ ಮೆಹದಿ ಅಲಿ ಖಾನ್, ಶೈಲೇಂದ್ರ, ಮಾಯ ಗೋವಿಂದ್ ಮತ್ತಿತರರ ಕವಿತೆಗಳನ್ನು, ಅವರ ಮೌಲ್ಯಗಳನ್ನು, ಅವರ ಬರವಣಿಗೆಯ ಶೈಲಿಯನ್ನು ಅರಿಯಲು ಪ್ರಯತ್ನ ಮಾಡಿದ್ದೆ. ಈ ಸಂಭಾವಿತ ವ್ಯಕ್ತಿಗಳೆಲ್ಲರೂ ಹುಟ್ಟು ಕವಿಗಳು. ಆದರೆ "ಕ್ಯಾ ಖೋಯ ಕ್ಯಾ ಪಾಯಾ" ಬರೆದ ಕವಿ ಒಬ್ಬ ಪಳಗಿದ ರಾಜಕಾರಣಿ, ದೇಶದ ಪ್ರಧಾನಮಂತ್ರಿ. ನಮ್ಮೆಲ್ಲರ ಮನಸ್ಸಿನಲ್ಲಿ ಅಚ್ಚಾಗಿ ಉಳಿದಿರುವ ರಾಜಕಾರಣಿಗಳ ಡಂಬಾಚಾರ, ಕಪಟತನ, ಕುಟಿಲತೆ ಎಲ್ಲವೂ ಸೇರಿ ರಾಜಕೀಯದ ಬಗ್ಗೆ ಅಸಹ್ಯ ತರಿಸಿವೆ. ಒಬ್ಬ ವ್ಯಕ್ತಿ ರಾಜಕೀಯದಲ್ಲಿ ತನ್ನ ಘನತೆ ಗೌರವಗಳನ್ನ ಮುಡಿಪಾಗಿಟ್ಟು ಅಖಾಡಕ್ಕೆ ಇಳಿಯುತ್ತಾನೆ. ಇದರಲ್ಲಿ ಗೆಲ್ಲುವವರು ಬಹಳ ಕಡಿಮೆ. ಅಂತಹುದರಲ್ಲಿ ಇಮಾಂ ಸಾಬಿಗೂ ಗೋಕುಲಾಷ್ಟಮಿಗೂ ಏನು ಸಂಭಂದ ಎನ್ನುವಂತೆ ರಾಜಕೀಯದಲ್ಲಿ ಪಳಗಿದ ವ್ಯಕ್ತಿ ಸಂವೇದನಶೀಲ ಕವಿಯು ಆಗಲು ಸಾಧ್ಯವೇ? ರಾಜಕಾರಣಿಗಳು ಅನುಕಂಪವಿಲ್ಲದವರು ಎಂಬ ನಮ್ಮ ಅಭಿಪ್ರಾಯ ತಪ್ಪೆ? ಹಾಗದರೆ ಸಂವೇದನೆ ಎಂದರೇನು? ಇದೇ ವಿಚಾರಲಹರಿಯಲ್ಲಿ ನಿದ್ದೆ ಬಂದಿದ್ದೇ ಗೊತ್ತಾಗಲಿಲ್ಲ.
ಮರುದಿನ ಬೆಳಿಗ್ಗೆ ಕೈಗೆ ಸಿಕ್ಕಿದ್ದು ನನ್ನ ಶ್ರೀಮತಿಯ ಹಾಡುಗಳ ಪುಸ್ತಕ. ಚಿಕ್ಕ ವಯಸ್ಸಿನಲ್ಲಿ ಆಕೆಯೇ ಮುದ್ದಾದ ಅಕ್ಷರಗಳಲ್ಲಿ ಬರೆದು ಸಂಗೀತ ಕಲೆಯುತ್ತಿದ್ದ ಕಾಲದ ಪುಸ್ತಕ. ನೂರಾರು ಜಾನಪದಗೀತೆ, ಭಾವಗೀತೆ ಮತ್ತು ದೇವರನಾಮಗಳಿರುವ ಆ ಪುಸ್ತಕವನ್ನು ತಿರುವಿಹಾಕಿದೆ. ಕಾಕತಾಳೀಯವೆನ್ನುವಂತೆ ನನ್ನ ಗಮನ ಸೆಳೆದ ಒಂದು ಕವಿತೆಯ ವಿಚಾರದಾಟಿ ರಾತ್ರಿ ಕಾಡಿದ ಸಂವೇದನೆ ಪ್ರಶ್ನೆಗಳಿಗೆ ಉತ್ತರ ದೊರಕಿಸಿತ್ತು.
ಕನ್ನಡದ ಒಬ್ಬ ಕವಿ ಈ ಸಂವೇದನೆಯನ್ನ ಈ ಕೆಳಗಿನ ಕವಿತೆಯಲ್ಲಿ ಮನೋಜ್ಞವಾಗಿ ವಿವರಿಸಿದ್ದರು:
ಹೃದಯಂತರಾಳದಿ ಹುದುಗಿ ಹೊಮ್ಮುವ ನೋವ
ಬಡನುಡಿಯಲೆಂತಡಗಿ ತೋರಬಹುದು
ಆಂತರಿಕ ಶ್ರೀಮಂತನನುಭವದ ಸಾರವನು
ಸಾಂತ ಭಾಷೆಯೊಳೆಂತು ಹಿಡಿಯಬಹುದು
ಅಂತರಂಗದನಂತ ಶ್ರೀಮಂತ ಲೋಕದಲಿ
ಜಗದ ಶ್ರೀಮಂತಿಕೆಯ ಸವಿಯಬಹುದು
ತೊದಲು ನುಡಿವಿಣೆಗೆನೊಲು ಕವಿದೇವನೋಯುತ್ತ
ದಿನ ದಿನವೂ ತಪಿಸುತ್ತ ಕೊರಗುತಿಹುದು
ಹೇಗೋ ಏನೋ ಎಂತೋ ಒಳದನಿಯ ಹೊಮ್ಮಿಸುವೆ
ಕಾವ್ಯಕೃಪೆಗೆನ್ನೆದೆಯು ಮಣಿಯುತಿಹುದು
ಇನಿತಾದರೂ ಇಂಥ ಶಕ್ತಿಯನು ವ್ಯಕ್ತಿಯಲಿ
ಕೃಪೆಗೈವ ಶಕ್ತಿಗಿದು ನಮಿಸುತಿಹದು
ಮನಸ್ಸಿನ ಲಹರಿ ಹೃದಯದಾಳದಲ್ಲಿ ಬೆಸೆದು ತಂತಿ ಮೀಟಿದಂತಾದಾಗ ಬರುವ ಭಾವನೆಗಳೆ ಸಂವೇದನೆ. ಇದು ಜೀವನದ ಸುಖ ದುಃಖಗಳನ್ನು, ಜಂಜಾಟಗಳನ್ನು ಮೆಟ್ಟಿ ನಿಂತು ಬಹಳಷ್ಟು ಅನುಭವದಿಂದ ಮಾತ್ರ ಪಡೆಯಲು ಸಾಧ್ಯವಾಗುವ ಒಂದು ತೇಜಸ್ಸು. ಆದರೆ ಈ ಸಂವೇದನ ಶಕ್ತಿ ನಮ್ಮೆಲ್ಲರಲ್ಲೂ ಒಂದಲ್ಲ ಒಂದು ರೂಪದಲ್ಲಿ ಗೋಚರಿಸಿಯೂ ಗೋಚರಿಸಿದಂತೆ ವ್ಯಕ್ತವಾಗುತ್ತದೆ. ಅದೇ ಕಾರಣದಿಂದಲೇ ಇರಬೇಕು ಮನುಷ್ಯ ಒಂದು ಸಂವೇದನಾ ಭರಿತ ಕವಿತೆ, ಕಲಾಕೃತಿ, ಅಥವಾ ಪ್ರಕೃತಿಯ ನಿಯಮಗಳನ್ನು ನೋಡಿದಾಗ ಅದರೊಡನೆ ತಾನೂ ಬೆರೆತು ತಲ್ಲೀನನಾಗುವುದು. "ದಿನ ನಿತ್ಯದ ಆಗು ಹೋಗುಗಳ, ಮಾರುಕಟ್ಟೆಯ ‘ಇಂದಿನ ಲಾಭ ನಷ್ಟಗಳೆಷ್ಟು’ ಎಂಬ ಮಾತುಗಳ, ಸಂಭಂದಗಳ, ರಾಜಕೀಯದ ಹಾವಳಿಯಿಂದ ಬಹು ದೂರ ಹೋದಾಗ ಮನಸ್ಸು ಏಕಾಂಗಿತನ ಹುಡುಕಲಾರಂಬಿಸುತ್ತದೆ" ಎನ್ನುತ್ತಾರೆ ಜ಼ಾವೇದ್ ಅಕ್ತರ್. ಮುಂದುವರಿಸಿ ಹೇಳುತ್ತಾರೆ "ಆ ಏಕಾಂಗಿತನದಲ್ಲಿ ಜಾಗೃತಗೊಂಡ ಕವಿಯ ಸ್ಮೃತಿಪಟಲದಲ್ಲಿ ಕನಸಿನಂತೆ ಜೀವನದ ಬಣ್ಣ ಬಣ್ಣದ ಭಾವ ಚಿತ್ರಗಳು ಮೂಡಿ ಕಾಗದದಲ್ಲಿ ಕೆತ್ತಲ್ಪಡುತ್ತವೆ." "ಅಂತಹ ಕವಿತೆಯಲ್ಲಿ ಕವಿಯ ‘ನಾನು’ ಹಾಗು ಕೇಳುವವರ ‘ನೀವು’ ಅನ್ನುವ ಅಹಂಮಿನ ಗೋಡೆ ಇರುವುದಿಲ್ಲ." "ಕವಿಯ ಹಾಗು ಕೇಳುವವರ ‘ಸಂವೇದನೆ’ ಎರಡೂ ಒಂದಾದಾಗ ಕವಿ ವಾಣಿ ಜಗದ ಸಂವೇದನೆಯನ್ನೇ ಪ್ರತಿಧ್ವನಿಸುತ್ತದೆ," ಎನ್ನುತ್ತಾರೆ ಜ಼ಾವೇದ್ ಅಕ್ತರ್.
ಅಂತಹುದೇ ಒಂದು ಕವಿತೆ ವಾಜಪೈಯವರು ಬರೆದಿರುವ "ಕ್ಯಾ ಖೋಯಾ, ಕ್ಯಾ ಪಾಯ ಜಗಮೆ." ಹಿಂದಿ ಪಂಡಿತರಿಗೂ ಅರ್ಥಮಾಡಿಕೊಳ್ಳಲು ಕ್ಲಿಷ್ಟವಾದ ಪದಜೋಡಣೆ ಈ ಕಾವ್ಯದಲ್ಲಿದೆ. ಆದರೆ ಈ ಕವಿತೆಯನ್ನು ಕನ್ನಡಕ್ಕೆ ಅನುವಾದ ಮಾಡಿದಾಗ ವಾಜಪೈಯವರ ಸಂವೇದನೆ ಕನ್ನಡಿಗರಾದ ನಮಗೆ ಇನ್ನೂ ಹೆಚ್ಚು ಸ್ಪಂದಿಸುವುದರಲ್ಲಿ ಸಂಷಯವಿಲ್ಲ. ಅನುವಾದದಲ್ಲಿ ಮೂಲ ಕೃತಿಯ ವ್ಯಾಖ್ಯಾನಕ್ಕೆ ಎಲ್ಲಿ ದಕ್ಕೆ ಬಂದು ಕವಿಯ ಮನೋಗತವನ್ನು ಓದುಗರಿಗೆ ತಿಳಿಸಲು ಅಸಫಲನಾಗುವೆನೋ ಎಂಬ ಭಯವಿದ್ದ ಕಾರಣ, ಈ ಕವಿತೆಯನ್ನು ಮೂಲ ಹಿಂದಿ ಭಾಷೆಯಲ್ಲೂ ಮುದ್ರಿಸಲಾಗಿದೆ. ಹಿಂದಿ ಭಾಷೆ ತಿಳಿದವರು ಹಿಂದಿಯಲ್ಲೇ ಓದಿಕೊಳ್ಳಿ.
ಏನು ಕಳೆದುಕೊಂಡೆ ಏನು ಗಳಿಸಿದೆ ಜಗದಲಿ
ಬೇಟಿ-ನಿರ್ಗಮನ ಕೂಡುಹಾದಿಲಿ
ನನಗ್ಯಾರ ಮೇಲೂ ಇಲ್ಲ ದೂರು
ಹೆಜ್ಜೆಹೆಜ್ಜೆಗೂ ಮೋಸ ನೂರು
ಕಳೆದ ದಿನಗಳ ಮೇಲಿತ್ತು ಧೃಷ್ಠಿ
ನೆನೆಪುಗಳ ಎದೆಭಾರ ಕಲಕಿತ್ತು ಮನಶ್ಶಾಂತಿ
ಹೇಳಿತು ಸ್ವಗತ ನನ್ನೀ ಮನ
ಪೃಥ್ವಿಗುಂಟು ಲಕ್ಷಾಂತರ ವರುಷ
ಜೀವನಕುಂಟು ಅನಂತ ಕಥೆ
ತನುವಿಗಾದರೋ ತನ್ನದೇ ಸೀಮಿತ
ಆದರೂ ನನಗಿತ್ತು ಭರವಸೆ ನಿರಂತರ ಜೀವನದಲಿ
ಇಷ್ಟೇ ಸಾಕು
ಅಂತಿಮ ಹೊಸ್ತಿಲಲಿ
ನಾನೇ ಬಾಗಿಲು ತೆರೆವೆ
ಹೇಳಿತು ಸ್ವಗತ ನನ್ನೀ ಮನ
ಜನ್ಮ ಮರಣ ಅವಿರತ ಪುನರಾವರ್ತನ
ಜೀವನವೊಂದು ಬಂಜಾರರ ಡೇರೆ
ಇಂದು ಇಲ್ಲಿ ನಾಳೆ ಎಲ್ಲೆಂದು ಕೇಳದಿರೆ
ಯಾರಿಗೆ ಗೊತ್ತು ಮುಂಜಾವು ಎಲ್ಲೆಂದು
ಕತ್ತಲು ಆಕಾಶ ಅಸೀಮಿತ
ತುಲನೆ ಮಾಡಿತು ಪ್ರಾಣ ಶಕ್ತಿ
ಹೇಳಿತು ಸ್ವಗತ ನನ್ನೀ ಮನ
ಏನು ಕಳೆದುಕೊಂಡೆ ಏನು ಗಳಿಸಿದೆ ಜಗದಲಿ
-ಅಟಲ್ ಬಿಹಾರಿ ವಾಜಪೈ
क्या खॊया क्या पाया जगमे
मिल्ते और बिचड्ते मग मे
मुझे किसीसे नहि षिकायत
यद्यपि चला गया पग पग मे
ऎक धृष्ठि बीति पर डाले
यादॊंकि पॊत्लि टटॊले
अप्ने ही मन से कुछ भॊले
पृथ्वि लाकॊ वर्ष पुरानि
जीवन ऎक अनंत कहानि
पर तन कि अप्नि सीमाये
यद्यपि सौ शर्दॊंकि वाणि
इत्न काफ़ि है
अंतिम दस्तक पर
खुद दर्वाज खॊले
अप्ने ही मन से कुछ भॊले
जनम मरण के अभिरत फॆरा
जीवन बंजारॊंका डॆरा
आज यँहा कल कँहा पूच है
कौन जानता किधर सवॆरा
अंधियारा आकाश असीमित
प्राणॊंके फंखॊन्को तौँले
अप्ने ही मन से कुछ भॊले
क्या खॊया क्या पाया जगमे
-अटल बिहारि वाज्पै
ಜ಼ಾವೇದ್ ಅಕ್ತರ್‌ರು ಹೇಳಿದಂತೆ ಈ ಕವಿತೆ ಕಾಗದದಲ್ಲಿ ಕೆತ್ತಲ್ಪಟ್ಟಿದೆ ಎನ್ನುವುದರಲ್ಲಿ ಉತ್ಪ್ರೇಕ್ಷೆಯೆನಿಸಲಿಲ್ಲ. ಆದರೆ ಹೃದಯದಂತರಾಳದಲ್ಲಂತೂ ಪ್ರವಾಹದಂತೆ ಹರಿದ ಸಂವೇದನೆ ನಿಮ್ಮನ್ನೂ ತೋಯ್ದಿತೆಂದು ನನ್ನ ಅನಿಸಿಕೆ. ಮತ್ತೊಮ್ಮೆ ಕವಿತೆಯನ್ನ ಓದಿ. ಆಗ ನಿಮಗೆ ಈ ಕವಿತೆಯಲ್ಲಿರುವ ಜೀವನದ ಕಟು ಸತ್ಯವನ್ನ ಕವಿ ಹೇಗೆ ತುಲನೆ ಮಾಡಿದ್ದಾರೆಂಬುದರ ಅರಿವಾಗುತ್ತದೆ. "ದೇಹ ನೆಪಮಾತ್ರ, ಆತ್ಮ ನಿರಂತರ" ಎಂದು ಗೀತೆಯಲ್ಲಿ ಶ್ರೀಕೃಷ್ಣ ಅರ್ಜುನನಿಗೆ ಬಿಡಿಸಿ ಹೇಳಿದ್ದನ್ನೇ, ಇಲ್ಲಿ ವಾಜಪೈಯವರು ಸರಳವಾದ ಆಂತರ್ಯ ಸಂಭಾಷಣೆಯ ಮೂಲಕ ವ್ಯಕ್ತಪಡಿಸಿದ್ದಾರೆ. ಜನ್ಮ ಮರಣವನ್ನೂ ಅಷ್ಟೇ ಸುಲಭವಾಗಿ ಪರಿಶೀಲಿಸಿ ಜನ ಸಾಮಾನ್ಯರ ವಿಚಾರಧಾಟಿಗೆ ಸರಿದೂಗಿಸಿದ್ದಾರೆ. ಹಾಗಾದರೆ ಮಾನವನಿಗೇಕೆ ನಿರಂತರ ಜೀವನದಲಿ ಭರವಸೆ? ಆಧ್ಯಾತ್ಮ ಚಿಂತನೆಯ ಮೂಲಭೂತ ಪ್ರಶ್ನೆಗಳಿಗೆ ಉತ್ತರ ಹುಡುಕುವುದುರಲ್ಲಿ ಈ ಕವಿತೆ ನಿಜವಾಗಿಯೂ ನಮ್ಮನ್ನು ಮುಂದಿನ ಹಂತಕ್ಕೆ ಹೋಗುವಂತೆ ಪ್ರೇರೇಪಿಸುತ್ತದೆ. ಜೀವನದ ಸಾರ್ಥಕತೆಯನ್ನ ಬರಿ ಲಾಭ ನಷ್ಟಗಳಿಂದ ಅಳೆಯಲು ಸಾಧ್ಯವೇ? ಖಂಡಿತ ಸಾಧ್ಯವಿಲ್ಲದ ಮಾತು.
________________________________________________________
ಸತಿ:
ಅಮೆರಿಕದ ತ್ರಿವಿಕ್ರಮ-ಬೇತಾಳ ಕಥೆಗಳು!
ಡಾ. ರವಿ ಗೋಪಾಲರಾವ್, ಸ್ಯಾನ್ ಹೋಸೆ, ಕ್ಯಾಲಿಫ಼ೋರ್ನಿಯ. ಆಗಸ್ಟ್, ೨೦೦೩.
ವಿಕ್ರಮ್ ದೇಶಪಾಂಡೆ. ಈ ಸಾಮಾನ್ಯ ಹೆಸರಿನ ವ್ಯಕ್ತಿಗಳೆಷ್ಟಿದ್ದಾರೋ ಈ ಪ್ರಪಂಚದಲ್ಲಿ ಯಾರಿಗೆ ಗೊತ್ತು? ಈ ಹೆಸರಿನಂತೆಯೇ ನಾನೂ ಕೂಡ ಒಬ್ಬ ಆಟಕ್ಕುಂಟು ಲೆಖ್ಖಕ್ಕಿಲ್ಲದ ಅಗೋಚರ ವ್ಯಕ್ತಿ. ನನ್ನ ಬಗ್ಗೆ ಯಾರಿಗೂ ನಿರ್ಧಿಷ್ಟವಾದ ಅಭಿಪ್ರಾಯವಾಗಲಿ ಅಥವ ನನ್ನನ್ನು ನೋಡಿ ಪರಿಚಿತನೆಂದು ಮುಗುಳುನಗೆ ಬೀರುವ ಮನೋಭಿಲಾಷೆಯಾಗಲಿ ಇದ್ದಂತೆ ಕಾಣುವುದಿಲ್ಲ. ಜನರ ಅಸ್ಪಷ್ಟ ಕಲ್ಪನೆಗೆ ಸಿಕ್ಕಿದ ಅನಾಮಧೇಯ ನಾನು. ನನಗೂ ಅಷ್ಟೆ ಯಾರ ಮುಖಪರಿಚಯವೂ ಇಲ್ಲ. ಕೆಲವೊಮ್ಮೆ ಎಷ್ಟೋ ತಿಂಗಳುಗಳೇ ಕಳೆದಿರುತ್ತವೆ ನಾನು ಬೇರೆಯವರೊಡನೆ ಸಂಭಾಷಣೆ ನೆಡಸಿ. ಅಂದೊಮ್ಮೆ ಕಿಟಕಿಯ ಗಾಜಿನಲ್ಲಿ ಕಂಡ ಒಬ್ಬ ದೃಡಕಾಯ ಅಪರಿಚಿತ ವ್ಯಕ್ತಿಗೆ "ಹಾಯ್" ಎಂದು ಹೇಳುವನಿದ್ದೆ. ಅದು ನನ್ನದೇ ಪ್ರತಿಭಿಂಭವೆಂದು ಅರಿವಾಗಲು ಸ್ವಲ್ಪ ಸಮಯವೇ ಬೇಕಾಯಿತು. ಅರಡಿ ಎತ್ತರ, ಆಜಾನುಬಾಹು, ಗುಂಗುರು ತಲೆ ಕೂದಲು, ಹುರಿ ಮೀಸೆಯಿರುವುದರಿಂದಲೇ ನನಗೆ ಈ ಕೆಲಸ ಸಿಕ್ಕಿದ್ದು. ಕೆಲಸ ಅಂದರೆ ಈ ನಿಶಾಚರ ಕೆಲಸ. ನಮ್ಮ ದೇಶದಿಂದ ಬಂದವರೆಲ್ಲ ಇಲ್ಲಿ ಹಾರ್ಡ್ವೇರ್ ಸಾಫ಼್ಟ್ವೇರ್ ಕೆಲಸದಲ್ಲಿ ತೊಡಗಿದ್ದರೆ, ಈ ದೇಶದಲ್ಲಿ ನನೊಬ್ಬ ವಿಭಿನ್ನ ವ್ಯಕ್ತಿ, ಮಾಡುವುದು ವಿಭಿನ್ನ ಕೆಲಸ. ಸ್ಯಾನ್ ಫ಼್ರಾನ್ಸಿಸ್ಕೋನಲ್ಲಿರುವ ಕಲಾ ವಸ್ತುಸಂಗ್ರಹಾಲಯದಲ್ಲಿ ನಾನೊಬ್ಬ ಕಾವಲುಗಾರ ಅಂತ ಪರಿಚಯ ಮಾಡಿಕೊಂಡಾಗಲೆಲ್ಲ ಜನ ನನ್ನನ್ನು ನಂಬಿದಂತೆ ಕಾಣುವುದಿಲ್ಲ. ಒಬ್ಬಂಟಿಯಾದ ನನಗೆ ಯಾರ ಜವಾಬ್ದಾರಿಯೂ ಇಲ್ಲ. ರಾತ್ರಿ ಹೊತ್ತು ಪಹರೆ ಕೆಲಸದಲ್ಲಿ ತೊಡಗಿರುವ ನನ್ನ ಬಗ್ಗೆ ತಿಳಿದುಕೊಳ್ಳುವುದಕ್ಕೇ ಜನರಿಗೆ ಒಂದು ರೀತಿ ಗುಮಾನಿ, ಜೊತೆಗೆ ತಾಳ್ಮೆಯಿಲ್ಲದಿರುವಾಗ ಇನ್ನು ನನಗೆ ಹೆಣ್ಣು ಕೊಡಲು ಬರುವರೆ? ಒಂಟಿತನ ಒಗ್ಗಿಬಿಟ್ಟಿದೆ. ನನ್ನ ದಿನಚರಿಯೂ ಅಷ್ಟೇ –ವಿಧಿಬದ್ದವಾದ ನಿಶಾಚರರು ಮಾತ್ರ ಮೆಚ್ಚುವಂತದ್ದು. ಬಾವಲಿಗಳಂತೆ ಸೂರ್ಯಾಸ್ತಮದವರೆಗೂ ನಿದ್ದೆ ಮಾಡಿ ಕತ್ತಲಾದ ಬಳಿಕ ಗುಹೆಯಿಂದ ಹಾರಿ ಹೋಗುವಂತೆ ನನ್ನ ಕೆಲಸದಲ್ಲೂ ಒಂದು ನಿಯತಕ್ರಮ. ರಾತ್ರಿ ಹತ್ತಕ್ಕೆ ಸ್ಯಾನ್ ಹೋಸೆಯ ವಿಲ್ಲೋ ಗ್ಲೆನ್ ಬಡಾವಣೆಯಲ್ಲಿರುವ ಮನೆ ಬಿಟ್ಟು ಟಲ್ಲಿ ರೋಡ್ ದಾಟಿ ಹೈವೇ ೨೮೦ ಹಿಡಿದು ಸ್ಯಾನ್ ಫ಼್ರಾನ್ಸಿಸ್ಕೋ ತಲಪುವ ವೇಳೆಗೆ ಹನ್ನೊಂದು ಗಂಟೆ. ರಾತ್ರಿಯಿಡೀ ಮೂಸಿಯಮ್ಮಿನ ಮಸಕು ಮಸಕು ಕತ್ತಲಲ್ಲಿ ಕಾಲಕಳೆದು ಸೂರ್ಯೋದಯದ ಮುಂಚೆ ಮನೆ ಸೇರಿ ನಿದ್ರಾದೇವಿಗೆ ಶರಣೆನ್ನುವುದು ನನ್ನ ಹತ್ತು ವರ್ಷಗಳ ದಿನಚರಿ.
ಆದರೆ ಆ ದಿನ ನಡೆದ ಘಟನೆ ನೆನಸಿಕೊಂಡರೆ ಮೈಮೇಲೆ ಹಾವು ಚೇಳುಗಳು ಹರಿದಂತ ಅನುಭವವಾಗುತ್ತೆ…
ಅಂದು ಎಚ್ಚರವಾದಾಗ ಆಗಲೇ ಎಲ್ಲ ಕಡೆ ಕತ್ತಲೆ. ತರಾತುರಿಯಲ್ಲಿ ಮೂಸಿಯಮ್ಮಿನ ಯೂನಿಫ಼ಾರಮ್ ಧರಿಸಿ ಬೂಟ್ ಹಾಕಿಕೊಂಡು ಹೊರಟೆ. ರೂಮಿನ ಗೋಡೆಗೆ ಮೊಳೆಹೊಡೆದು ತಗುಲಿಹಾಕಿದ್ದ ಬೆಂಗಳೂರು ಮುದ್ರಣಾಲಯದ ಕ್ಯಾಲೆಂಡರ್ ಕಡೆ ನನಗರಿವಿಲ್ಲದಂತೆ ಗಮನ ಬಿತ್ತು. ಅಂದು ಶುಕ್ರವಾರ ನವಂಬರ್ ೧೩. ೧೩ರ ಮೇಲೆ ಕಪ್ಪಗಿನ ವರ್ತುಲಾಕಾರದಲ್ಲಿ ಕಂಡ ಚಿಹ್ನೆ ನೋಡಿದಾಗಲೆ ಅರಿವಾದದ್ದು ಅಂದು ಅಮಾವಾಸ್ಯೆ ಎಂದು. ಅಪಾರ್ಟ್ಮೆಂಟಿನ ಮೆಟ್ಟಲಿಳಿದು ಕಾರನ್ನು ಸ್ಟಾರ್ಟ್ ಮಾಡಿ ಹೊರಡುವುದರಲ್ಲಿದ್ದೆ. ಎಂದೂ ಕಾಣದ ಒಂದು ಕರಿ ಬೆಕ್ಕಿನ ಮರಿ ನನ್ನ ಪಕ್ಕದ ಕಾರಿನ ಹುಡ್ ಮೇಲೆ ಕುಳಿತು ಶಾಕ ಕೊಟ್ಟುಕೊಳ್ಳುತ್ತಿತ್ತು. ಪಾಪ ಅನ್ನಿಸಿದರೂ ಏನೂ ಮಾಡಲು ತೋಚದೆ ಕಾರು ಸ್ಟಾರ್ಟ್ ಮಾಡಿ ಹೊರಟೆ. ಟಲ್ಲಿ ರೋಡ್ ತಲುಪಿ ಒಂದು ಸಿಗ್ನಲ್ ಲೈಟಿಗಾಗಿ ಕಾಯುತ್ತಿದ್ದೆ. ಟಲ್ಲಿ ರೋಡಿನಲ್ಲಿ ಒಂದು ಸುಂದರ ಉದ್ಯಾನವನದಂತೆ ಕಾಣುವ ಶ್ಮಶಾನ ಹಾಗು ಅಂತಿಮಕ್ರಿಯಾ ಮನೆಯನ್ನು (Funeral Home) ನಾನು ದಿನನಿತ್ಯವೂ ರಸ್ತೆ ಪಕ್ಕದಿಂದ ನೋಡುತ್ತಿದ್ದೆ. ಆದರೆ ಆ ರಾತ್ರಿ ಕತ್ತಲೆಯಲ್ಲೂ ಉದ್ಯಾನವನದಲ್ಲಿ ಬೆಳಕಿನ ಕಿರಣಗಳು ಅಲ್ಲಲ್ಲಿ ಕಾಣುತ್ತಿದ್ದವು. ಮಿಂಚು ಹುಳಗಳಿರಬೇಕು ಅನ್ನಿಸಿದರೂ ವಿಚಿತ್ರವೆನಿಸಿತು. ಸಿಗ್ನಲ್ ಲೈಟಿಗೆ ಕಾಯುತ್ತಿದ್ದಾಗ ಹಾಗೇ ಗ್ಯಾಸ್ ಸಾಕಷ್ಟಿದೆಯೇ ಎಂದು ನೋಡಿದೆ. ಗ್ಯಾಸ್ ಫ಼ುಲ್ಲ್ ಅಂತ ಕಂಡರೂ ಬಾಗಿಲು ತೆರೆದಿದೆ ಎನ್ನುವ ಕೆಂಪು ಚಿಹ್ನೆ ಕಂಡಿತು. ನನ್ನ ಕಾರಿಗೆ ಇರುವುದೇ ಎರಡು ಬಾಗಿಲು. ಎಡ ಬಾಗಿಲು ಸರಿಯಿದೆಯೆಂದು ಖಚಿತ ಪಡಿಸಿಕೊಂಡು, ನನ್ನ ಬಲಕ್ಕೆ ಬಗ್ಗಿ ಪ್ಯಾಸೆಂಜರ್ ಕಡೆಯ ಬಾಗಿಲನ್ನ ಸ್ವಲ್ಪ ತೆರೆದು ಮತ್ತೆ ಜೋರಾಗಿ ಹಾಕಿದೆ. ತಣ್ಣನೆಯ ಗಾಳಿ ಒಳನುಗ್ಗಿ ಛಳಿಯಾಯಿತು. ಎಲ್ಲಿಂದಲೋ ಕೇಳಿ ಬಂದ "ಥ್ಯಾಂಕ್ಯೂ" ಅನ್ನುವ ಹೆಣ್ಣು ಧ್ವನಿ ಕೇಳಿಸಿದಂತಾಗಿ ಸುತ್ತಲೂ ನೋಡಿದೆ. ಯಾರೂ ಇರಲಿಲ್ಲ. ನನ್ನ ಒಂಟಿತನದ ಕುಹಕ ಅಭಿಲಾಷೆ ಅನ್ನಿಸಿತು. ಕಾರೊಳಗಿನ ನಿಶ್ಶಬ್ದತೆಯಲ್ಲೂ ಯಾರೋ ನನ್ನ ಪಕ್ಕದಲ್ಲಿ ಕುಳಿತಿರುವ ಭಾವನೆ ಬಂದಂತಾಗಿ ಬಲಪಕ್ಕಕ್ಕೆ ತಿರುಗಿ ನೋಡಿದೆ. ನನ್ನ ಭ್ರಮೆ ಇರಬೇಕು ಅಷ್ಟೆ. ಹೈವೇ ೨೮೦ ಸಿಕ್ಕ ಮೇಲೆ ವೇಗವಾಗಿ ಕಾರು ಓಡಿಸಿ ಕ್ಯಾಸೆಟ್ಟ್ ಕೇಳಲು ಶುರು ಮಾಡಿದೆ. ನನಗಿಷ್ಟವಾದ ಹಾಡು ಕೇಳುತ್ತಾ ನಾನೂ ಜೊತೆಜೊತೆಗೆ ಹಾಡುತ್ತ ಕಾರ್ ಡ್ರೈವ್ ಮಾಡುವುದು ನನ್ನ ಅಭ್ಯಾಸ. ಆದರೆ ಇದ್ದಕ್ಕಿದ್ದಂತೆ ಹಾಡು ನಿಂತು "ಗುಮ್ ನಾಮ್ ಹೈ ಕೋಯಿ.." ಎಂದು ಹೆಣ್ಣಿನ ಹಾಡುವ ಧ್ವನಿ ಕೇಳಿ ಗಾಬರಿಯಾಯಿತು. ಒಣಗಿದ ಗಂಟಲೊಳಗೆ ಉಗುಳು ನುಂಗಿ "ಯಾರು, ಯಾರು?" ಎಂದು ತಡವರಿಸಿದೆ.
"ಭಯಪಡಬೇಡಿ, ಮಿಸ್ಟರ್ ದೇಶಪಾಂಡೆ. ನಾನೊಬ್ಬ ನಿರ್ಭಾಗ್ಯ ಹೆಣ್ಣು ಬೇತಾಳ. ನೀವು ಶ್ಮಶಾನದ ಬಳಿ ಬಾಗಿಲು ತೆಗೆದಾಗ ನಾನೇ ಒಳಗೆ ಕುಳಿತು ಥ್ಯಾಂಕ್ಯೂ ಹೇಳಿದ್ದು. ಯಾಕೋ ನಿಮಗೆ ನಾನು ಹೇಳಿದ ಹಾಡು ಇಷ್ಟವಾದಂತೆ ಕಾಣಲಿಲ್ಲ. ಹೋಗಲಿ ಬಿಡಿ, ಮತ್ತೇನಾದರು ಮಾತನಾಡೋಣ." ನನ್ನ ಹೃದಯ ಕೆಲವು ಕ್ಷಣ ನಿಂತೇ ಹೋಗಿತ್ತು. ಹೆಣ್ಣು ಬೇತಾಳಕ್ಕೆ ನನ್ನ ಹೆಸರು ಹೇಗೆ ಗೊತ್ತಾಯಿತು?
"ನಿಮ್ಮ ಹೆಸರು ಈ ಬೇತಾಳಕ್ಕೆ ಹೇಗೆ ಗೊತ್ತಾಯಿತು ಅಂತ ಯೋಚಿಸ್ಬೇಡಿ. ನೀವು ನನ್ನ ದೂರ ಸಂಭಂಧಿ."
ಕೈ ಕಾಲು ನಡುಗಿತಾದರೂ ತೋರಿಸಿಕೊಳ್ಳದೆ ಹುಸಿ ಧೈರ್ಯದಿಂದಲೇ "ನನ್ನಿಂದ ನಿಮಗೇನಾಗಬೇಕು?" ಅಂತ ಕೇಳಿದೆ.
ಆಗ ಬೇತಾಳ ಹೇಳಿತು. "ವಿಕ್ರಮ್ ದೇಶಪಾಂಡೆ, ಹೈವೇ ಪ್ರಯಾಣದ ಆಯಾಸ ತಿಳಿಯದಿರಲು ಒಂದು ಕಥೆ ಹೇಳುತ್ತೇನೆ. ಇದೊಂದು ಧಾರುಣ ಕಥೆ. ಕಥೆಯ ಅಂತ್ಯದಲ್ಲಿ ನಾ ಕೇಳುವ ಪ್ರಶ್ನೆಗೆ ನೀವು ಉತ್ತರ ಕೊಡಬೇಕು." ಮೌನದಲ್ಲಿ ಕಾರು ಓಡಿಸಿದೆ.
"ಸರಿ ಉತ್ತರ ಕೊಡದಿದ್ದಲ್ಲಿ ನಿಮ್ಮ ತಲೆ ಸಾವಿರ ಹೋಳಾಗುವುದು.." ಗಹಗಹಿಸಿ ನಕ್ಕು ಬೇತಾಳ ಕಥೆ ಶುರು ಮಾಡಿತು.
"ಈ ಕಥೆಯ ಹೆಸರು ಸತಿ. ಕಥೆಯ ಸಾರಾಂಶ ಹೀಗಿದೆ: ಕಥಾ ನಾಯಕ ಆದಿತ್ಯ ಕುಲಕರ್ಣಿ ಇನ್ನೂ ಹದಿವರೆಯದ ತರುಣ, ಕಾಲೇಜ್ ವಿಧ್ಯಾರ್ಥಿ. ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ ಓದು ಮುಗಿಸುವ ತಯಾರಿಯಲ್ಲಿ ಇದ್ದಾನೆ. ತಂದೆ ತಾಯಿ ಇಬ್ಬರೂ ಹೆಸರುವಾಸಿಯಾದ ವೈದ್ಯಕೀಯ ತಜ್ಞರು. ತಂದೆ ಮನೋಹರ್ ಕುಲಕರ್ಣಿ ನೇತ್ರ ತಜ್ಞರಾದರೆ ತಾಯಿ ಜಯಶ್ರಿ ಕುಲಕರ್ಣಿ ಹೃದಯ ತಜ್ಞೆ. ಆಗರ್ಭ ಶ್ರೀಮಂತರ ಸಂಸಾರದಲ್ಲಿ ಬೆಳೆದ ಸುಕುಮಾರ ಆದಿತ್ಯ. ಆದರೆ ಸ್ಯಾನ್ ಹೋಸೆಯಲ್ಲಿರುವ ತಂದೆ ತಾಯಿಯ ಅಖಾಲ ಮರಣದ ಸುದ್ದಿ ಕೇಳಿ ಆದಿತ್ಯನ ಮನಸ್ಸಿಗೆ ಆಗಾತವಾಗಿದೆ. ತಂದೆ ತಾಯಿ ಇಬ್ಬರೂ ಒಂದು ಕಾರು ಅಪಗಾತದಲ್ಲಿ ಒಂದೇ ಗಳಿಗೆಯಲ್ಲಿ ಕಣ್ಮುಚ್ಚಿದ ಘಟನೆ ಎಲ್ಲರನ್ನೂ ವಿಭ್ರಾಂತಗೊಳಿಸಿದೆ. ಪೋಲೀಸ್ ವಿಚಾರಣೆಯಲ್ಲಿ ಅಪಗಾತಕ್ಕೆ ಕಾರಣ "drive-by shooting." ಯಾರೋ ಪಾಪಿಗಳು ಮಾಡಿದ ಕೊಲೆ. ತಂದೆ ಅಪಗಾತದಲ್ಲಿ ಮೃತರಾದರೆ, ತಾಯಿಗೆ ಗುಂಡಿನೇಟಿನಿಂದ ಮರಣ. ಯಾವ ಅಪರಾದಿಗಳೂ ಸಿಕ್ಕದ ಕಾರಣ ಅಪಗಾತದ ತನಿಖೆ ಇನ್ನೂ ಅಪೂರ್ಣವಾಗಿದೆ."
ಹೆಣ್ಣು ಬೇತಾಳ ಸ್ವಲ್ಪ ಹೊತ್ತು ಸುಮ್ಮನಿದ್ದು ಬಿಕ್ಕಿಸಿ ಬಿಕ್ಕಿಸಿ ಅಳಲು ಶುರು ಮಾಡಿತು. ಅಲ್ಲೇ ಪಕ್ಕದಲ್ಲಿದ್ದ ಟಿಸ್ಸ್ಯೂ ಪೇಪರ್ ತೆಗೆದುಕೊಂಡು ಮೂಗು ಒರೆಸಿಕೊಳ್ಳುವ ಶಬ್ದ ಕೇಳಿಸಿತು. ಆದರೆ ನನಗೆ ಬಲಗಡೆ ತಿರುಗಿ ನೋಡಲೂ ಧೈರ್ಯವಿಲ್ಲದಂತಾಗಿತ್ತು. ನಾನು ಮುಂದೇನಾಯಿತು ಎಂದು ಕೇಳುವ ಮೊದಲೇ ಮುಂದುವರೆಸಿತು ಆ ಹೆಣ್ಣು ಬೇತಾಳ.
"ಮನೆಗೆ ಮರಳಿ ಬಂದ ಆದಿತ್ಯನಿಗೆ ತಂದೆ ತಾಯಿಯ ಅನ್ನ್ಯೋನ್ಯ ಸಂಭಂದ, ಒಲವು, ಹಾಸ್ಯ, ಒಬ್ಬರೊನ್ನಬ್ಬರು ಬಿಟ್ಟಿರಲು ಬಯಸದ ಪ್ರೀತಿ, ವಾತ್ಸಲ್ಯ –ಹೀಗೆ ಎಲ್ಲ ಹಿಂದಿನ ಆಗು ಹೋಗುಗಳು ನೆನಪಿಗೆ ಬರುತ್ತವೆ. ಒಟ್ಟಿನಲ್ಲಿ ಹೇಳುವುದಾದರೆ ಕುಲಕರ್ಣಿ ದಂಪತಿಗಳ ದಾಂಪತ್ಯ ಹಾಲಿನಲ್ಲಿ ಸಕ್ಕರೆ ಬೆರೆತಂತೆ. ಚಿಕ್ಕವನಾಗಿದ್ದಾಗ ಅಮ್ಮ ಹೇಳಿದ ಕಥೆಗಳು, ಜೊತೆಯಲ್ಲಿ ನೋಡಿದ ಚಲನಚಿತ್ರಗಳು, ಭಾರತದ ಪ್ರವಾಸಗಳು, ಎಲ್ಲ ಸಿಹಿ ನೆನಪುಗಳು ಒಂದೊಂದೆ ಕಣ್ಮುಂದೆ ಬರುತ್ತವೆ ಆದಿತ್ಯನಿಗೆ. ಇಂತಹ ಸಿಹಿ ಸಂಸಾರದಲ್ಲಿ ಕಹಿ ಹಿಂಡಿದ ಆ ಅಪರಾದಿಗಳನ್ನ ಹಿಡಿಯುವ ಸಲುವಾಗಿ ಆದಿತ್ಯ ತನ್ನದೆ ತನಿಖೆ ಶುರು ಮಾಡುತ್ತಾನೆ. ಆದಿತ್ಯ ಈ ತನಿಖೆಯಲ್ಲಿ ಸಫಲನಾಗುತ್ತಾನೆ. ಹಾಗಾದರೆ ಅಪರಾದಿ ಯಾರು?"
ಮತ್ತೆ ಸ್ವಲ್ಪ ಹೊತ್ತು ಮೌನದ ನಂತರ ಬೇತಾಳ ಹೇಳಿತು: "ಅಪರಾದಿ ಯಾರೆಂದು ನಿಮಗೆ ತಿಳಿದೂ ಹೇಳದಿದ್ದರೆ ನಿಮ್ಮ ತಲೆ ಸಾವಿರ ಹೋಳಾಗುವುದು! ಮಿಸ್ಟರ್ ದೇಶಪಾಂಡೆ."
ಸಾವಿರ ಹೋಳು. ದೇಹದಲ್ಲಿರುವ ಪ್ರತಿಯೊಂದು ಮೂಳೆಗಳಲ್ಲೂ ನಡುಕ ಹುಟ್ಟಿ ಆ ನಡುಕದಿಂದಲೇ ಮೈ ಸ್ವಲ್ಪ ಬೆವರಲು ಶುರುವಾಯಿತು. ವಿಕ್ರಮ್ ದೇಶಪಾಂಡೆ, ಬೇತಾಳ ಕೇಳಿದ ಪ್ರಶ್ನೆಗೆ ಬೇಗ ಉತ್ತರ ಹುಡುಕು ಇಲ್ಲವಾದರೆ ನೀನೂ ಕೂಡ ಈ ಹೆಣ್ಣು ಬೇತಾಳದೊಂದಿಗೆ ಶ್ಮಶಾನ ಯಾತ್ರೆ ಮಾಡಬೇಕಾದೀತು. ನನ್ನ ಮನಸ್ಸು ನನಗೆ ಎಚ್ಚರ ಕೊಡಲಾರಂಬಿಸಿತು. ಬೇತಾಳ ಕಥೆಯಲ್ಲಿ ಹೇಳಿದ ವಿಷಯಗಳನ್ನ ಬೇಗ ಬೇಗನೆ ಪರಿಶೀಲಿಸಲು ಮನಸ್ಸಿಗೆ ಏಕಾಗ್ರತೆಯಿಲ್ಲದೆ ಚಡಪಡಿಸಿದೆ. ಎಲ್ಲೆಡೆ ಹಬ್ಬಿದ್ದ ಕತ್ತಲು ಜೊತೆಗೆ ಕಿರುಚಿಕೊಳ್ಳುವಷ್ಟು ಭಯವಾದರೂ ಕಾರನ್ನು ತೀವ್ರಗತಿಯಿಂದಲೇ ಓಡಿಸಿದೆ. "ಮಿಸ್ಟರ್ ದೇಶಪಾಂಡೆ, ವೇಗದ ಮಿತಿ ೬೫ ಮೈಲಿಯಷ್ಟೆ. ಕಾರು ನಿಧಾನವಾಗಿ ಓಡಿಸಿ. ನನಗಂತೂ ಹೈವೇನಲ್ಲಿ ಡ್ರೈವ್ ಮಾಡಲು ತುಂಬ ಭಯ." ಹೆಣ್ಣು ಬೇತಾಳದ ಈ ಎಚ್ಚರಿಕೆ ಮಾತುಗಳನ್ನ ಕೇಳಿಸಿಯೂ ಕೇಳಿಸಿಕೊಳ್ಳದವನಂತೆ ನಟಿಸಿ, ಕಾರಿನ ವೇಗ ಮತ್ತಷ್ಟು ಹೆಚ್ಚಿಸಿದೆ. ಆದರೆ ಮನಸ್ಸಿನಲ್ಲಾಗುತ್ತಿದ್ದ ತಳಮಳವೇ ಬೇರೆ. ಈ ಹೆಣ್ಣು ಬೇತಾಳ ನಿಜವಾಗಿಯೂ ಸೌಜನ್ಯಶೀಲತೆಯಿಂದಲೇ ನಡೆದುಕೊಳ್ಳುತ್ತಿದೆ. ನಾನು ಆಕೆಯ ಎಚ್ಚರಿಕೆಗಳಿಗೆ ಯಾವ ಪ್ರತಿಕ್ರಿಯೆ ತೋರಿಸದೆ ಸುಮ್ಮನೆ ಇದ್ದರೆ ದುರಹಂಕಾರಿಯೆಂದು ನನ್ನ ಮೇಲೆ ಅದಕ್ಕೆಲ್ಲಿ ಕೋಪ ಬರುವುದೋ ಎನ್ನುವ ಭೀತಿ ಹುಟ್ಟಿತು. ಸದ್ದಿಲ್ಲದೆ ಕಾರಿನ ವೇಗ ಕಡಿಮೆಮಾಡಿದೆ. ಮತ್ತೆ ಅದೇ ‘ಥ್ಯಾಂಕ್ಯೂ’ ಪ್ರತಿಕ್ರಿಯೆ ಕೇಳಿಸಿದಾಗ ಮೈ ಪರಚಿಕೊಳ್ಳುವಷ್ಟು ಕೋಪಬಂದಿತ್ತು ನನಗೆ. ಆದರೂ ತಡವರಿಸಿ ‘ಊ ಆರ್ ವೆಲ್ಕಂ’ ಎಂದೆ ನಾನು. ನನ್ನ ಒಂಟಿತನವೇ ಕಾರಣ ಇರಬೇಕು ಇಲ್ಲದಿದ್ದರೆ ಈ ಹೆಣ್ಣು ಬೇತಾಳದೊಂದಿಗೆ ಕೂಡ ಸ್ನೇಹ ಬಯಸುತ್ತಾ ಇದೆಯಲ್ಲ ನನ್ನ ಮನಸ್ಸು ಎಂದು ನನಗೇ ಆಶ್ಚರ್ಯವಾಯಿತು. ಕಾರಿನಲ್ಲಿ ಮೌನ ತಡೆಯಲಾರದೆ ಮತ್ತೆ ಕ್ಯಾಸೆಟ್ಟ್ ಕೇಳೋಣವೇ ಅಂದುಕೊಳ್ಳುವುದರಲ್ಲಿ "ಯಾವ ಹಾಡೂ ಕೇಳೋದು ಬೇಡ. ಈ ಶ್ಮಶಾನ ಮೌನವೇ ಚೆನ್ನಾಗಿದೆ. ಕಾಲಹರಣ ಮಾಡಿ ನಾನು ಕೇಳಿದ ಪ್ರಶ್ನೆಗೆ ಉತ್ತರ ಕೊಡದಿದ್ದರೆ ನಿಮ್ಮ ತಲೆ ಸಾವಿರ ಹೋಳಗುವುದು, ಎಚ್ಚರಿಕೆ, ಮಿಸ್ಟರ್ ದೇಶಪಾಂಡೆ" ಎಂದು ಬೇತಾಳ ನನ್ನ ಮನಸ್ಸಿನ್ನಲ್ಲಿ ಮೂಡಿದ್ದ ಭಾವನೆಯನ್ನು ಚಿಗುರಿನಲ್ಲೇ ಮುರಿದೆಸೆಯಿತು. ಹಾಗಾದರೆ ಈ ಬೇತಾಳಕ್ಕೆ ನನ್ನ ಮನಸ್ಸಿನಲ್ಲಾಗುತ್ತಿರುವ ಎಲ್ಲ ವಿಚಾರಗಳು ಹೇಗೋ ಗೊತ್ತಾಗಿಬಿಡುತ್ತೆ! ಭಯಕ್ಕೆ, ಉತ್ತರ ಯೋಚಿಸುವುದಿರಲಿ, ಬೇತಾಳ ಕೇಳಿದ ಪ್ರಶ್ನೆಯೇ ಮರೆತು ಹೋದಂತಾಯಿತು. ಭಯ ನಿವಾರಣೆಗೆ ಅಮ್ಮ ನಾನು ಚಿಕ್ಕವನಾಗಿದ್ದಾಗ ಹೇಳಿಕೊಟ್ಟಿದ ಹನುಮಂತನ ಶ್ಲೋಕ ಅರೆಬರೆಯಾಗಿ ಜ್ಞಾಪಿಸಿಕೊಂಡು ನನಗೇ ಮಾತ್ರ ಕೇಳಿಸುವಂತೆ ಗುನುಗಿ ಕೊಳ್ಳಲು ಶುರು ಮಾಡಿದೆ. ಹಠಾತ್ತನೆ ನನ್ನ ಮೈಯಲ್ಲಿ ವಿದ್ಯುತ್ಪ್ರವಾಹ ಆದಂತಾಗಿ, ನನಗಿದ್ದ ಭಯವೆಲ್ಲ ಮಂಜಿನಂತೆ ಕರಗುವ ಅನುಭವವಾಯಿತು. ಅದೇ ಸಮಯಕ್ಕೆ ಪಕ್ಕದಲ್ಲಿದ್ದ ಬೇತಾಳ ಕೂಡ ಚಡಪಡಿಸುತ್ತಿರುವಂತೆ ಭಾಸವಾಯಿತು. ಏನೂ ಮಾಡಲು ತೋಚದೆ ಜೋರಾಗಿ ಮತ್ತೆ ಮತ್ತೆ ಶ್ಲೋಕ ಹೇಳಿಕೊಂಡೆ. ಬೇತಾಳ ಚಡಪಡಿಸುತ್ತಲೇ ಅಸ್ಪಷ್ಟ ಧ್ವನಿಯಲ್ಲಿ "ಆದಿ, ಆದಿ, ನನ್ನದೇ ತಪ್ಪು. ಮನ್ನೂ, ನಾನೆಂತಹ ಮಾಡಬಾರದ ಕೆಲಸ ಮಾಡಿಬಿಟ್ಟೆ" ಎಂದು ದುಃಖ ತಡಿಯಲಾರದೆ ಅಳುತ್ತಿತ್ತು. ಹೆಣ್ಣಿನ ರೋಧನ ಇಷ್ಟು ಸಮೀಪದಿಂದ ಕೇಳಿದ್ದು ಇದೇ ಮೊದಲನೆ ಬಾರಿ. ಕನಿಕರ ಉಮ್ಮಳಿಸಿತಾದರೂ ಈ ಬೇತಾಳ ನನಗಿನ್ನೆಲ್ಲಿ ’emotional blackmail’ ಮಾಡುವುದೋ ಎಂದು ಸಂದೇಹ ಕೂಡ ಬಂತು. ಈ ಮನಸ್ಸಿನ ಪ್ರವೃತ್ತಿ ಎಷ್ಟು ನಿರ್ಧಯವಾದದ್ದು. ಕೆಲವೇ ಕ್ಷಣಗಳಲ್ಲಿ ಭಾವನೆಗಳು ಅದಲುಬದಲಾಗುತ್ತವೆ. ನನ್ನ ಶಿರವನ್ನೇ ಸಾವಿರ ಹೋಳು ಮಾಡುತ್ತೇನೆಂದು ಹೆದರಿಸಿದ ಈ ಹೆಣ್ಣು ಬೇತಾಳದ ಬಗ್ಗೆ ನಿರ್ದಯವಾಗಿ ವರ್ತಿಸುವುದರಲ್ಲಿ ತಪ್ಪೇನಿಲ್ಲ ಅನ್ನಿಸಿತು. ಹೇಗಾದರೂ ಆಗಲಿ, ಈ ಸಂಕಷ್ಟದಿಂದ ಪಾರಾಗಲೇಬೇಕೆಂದು ನಿರ್ಧರಿಸಿದೆ.
ಆ ನಿರ್ಧಿಷ್ಟತೆಯಿಂದಲೇ ಇರಬೇಕು ಏಕಾಗ್ರತೆ ಮರುಕಳಿಸಿತು. ಆದಿತ್ಯನ ತಂದೆ ತಾಯಿಯನ್ನ ಕೊಂದ ಅಪರಾದಿ ಯಾರೆಂದು ಉತ್ತರ ಮಿಂಚಿನಂತೆ ಹೊಳೆಯಿತು. ಧೈರ್ಯದಿಂದ ಬಲ ಪಕ್ಕಕ್ಕೆ ತಿರುಗಿ ನೋಡಿದೆ. ಬೇತಾಳದ ಉದ್ವೇಗ ಕಡಿಮೆಯಾಗಿದ್ದಂತೆ ಭಾಸವಾಯಿತು. "ಎಲೈ ಬೇತಾಳ, ನೀ ಕೇಳಿದ ಪ್ರಶ್ನೆಗೆ ಉತ್ತರ ಹೇಳುತ್ತೇನೆ. ಸಮಾಧಾನದಿಂದ ಕೇಳು." ಬೇತಾಳದ ಪ್ರತಿಕ್ರಿಯೆಗಾಗಿ ಕಾಯದೆ ನನ್ನ ಕಥೆ ಮುಂದುವರೆಸಿದೆ.
"ನೀ ಹೇಳಿದ ಧಾರುಣ ಕಥೆಯ ನಾಯಕ ಆದಿತ್ಯ ಚಿಕ್ಕವನಾದರೂ ತುಂಬ ಪ್ರಪಂಚ ಜ್ಞಾನ ಉಳ್ಳವನು. ಎಂತಹ ಧೈರ್ಯವಂತರೂ ಕೂಡ ಒಂದೇ ಕ್ಷಣದಲ್ಲಿ ತಂದೆ ತಾಯಿ ಇಬ್ಬರನ್ನೂ ಕಳೆದುಕೊಂಡು ಅನಾಥರಾದಾಗ ದೃತಿಗೆಡೆವುದು ಸಹಜ. ಅಂದು ಪ್ರಯಾಣದಿಂದ ಧಣಿದು ಸ್ಯಾನ್ ಹೋಸೆಗೆ ಮರಳಿ ಬಂದ ಆದಿತ್ಯನಿಗೆ ನಿದ್ದೆ ಬಂದದ್ದೇ ಗೊತ್ತಾಗಲಿಲ್ಲ. ಮಾರನೆ ದಿನ ಬೆಳಿಗ್ಗೆ ಪೋಲಿಸರು ಮನೆಗೆ ಬಂದು ಸಂತಾಪ ಸಲ್ಲಿಸಿ ನಡೆದ ಅನಾಹುತದ ಬಗ್ಗೆ ತಮ್ಮ ತನಿಖೆಯ ರಿಪೋರ್ಟ್ ಕೊಟ್ಟು ಹೋದರು. ಅನಾಹುತಕ್ಕೆ ಕಾರಣ "drive-by shooting" ಎಂದು ಪದೆ ಪದೇ ಬರೆದಿದ್ದ ರಿಪೋರ್ಟನ್ನು ಅದೆಷ್ಟು ಬಾರಿ ಓದಿದನೋ ಆದಿತ್ಯ ಗೊತ್ತಿಲ್ಲ. ಸುಖ ಸಂಸಾರದಲ್ಲಿ ನಡೆದ ಈ ಧುರ್ಘಟನೆಗೆ ಕಾರಣಕರ್ತರು ನಿಸ್ಸಹಾಯಕ ವ್ಯಕ್ತಿಗಳನ್ನು ಕೊಲೆ ಮಾಡಿದ ಆಘುಂತಕರೆಂದು ತಿಳಿದ ಆದಿತ್ಯನಿಗೆ ಸಹಜವಾಗಿ ಕೋಪ ಬಂದಿತ್ತು. ಆದರೆ ಆದಿತ್ಯ ಆ ಕೋಪದಲ್ಲಿಯೂ ತಾಳ್ಮೆಯಿಂದ ಅಪರಾದಿಗಳನ್ನ ಹುಡಕಲು ತೊಡಗಿದಾಗ ಸಿಕ್ಕ ಪುರಾವೆಗಳೇ ಬೇರೊಂದು ಕಡೆಗೆ ಬೆಟ್ಟುಮಾಡಿ ತೋರಿಸಿದವು." ಬೇತಾಳದ ನಿಟ್ಟುಸಿರು ಮಾತ್ರ ಕೇಳಿ ಬರುತ್ತಿತ್ತು.
"ಜಯಶ್ರಿ ಕುಲಕರ್ಣಿ ಹಲವು ವರ್ಷಗಳಿಂದಲೂ ತಮ್ಮ ದಿನಚರಿಯನ್ನ ಒಂದು ಡಯರಿಯಲ್ಲಿ ಬರೆದಿಡುವ ಹವ್ಯಾಸ ಇಟ್ಟುಕೊಂಡಿದ್ದರು. ಮನೆಗೆ ಬಂದ ಆದಿತ್ಯನ ಕೈಗೆ ಆ ಡಯರಿ ಸಿಕ್ಕಿದ್ದೂ ಆಕಸ್ಮಿಕವಾಗಿಯೆ: ಆಫ಼ೀಸ್ ಕೋಣೆಯ ಪುಸ್ತಕಗಳ ಶೆಲ್ಫ್ ಮಧ್ಯದಲ್ಲಿ ಕಂಡೂ ಕಾಣದಂತೆ ಅಡಗಿಕೊಂಡಿತ್ತು. ಓದಲು ಸಂಕೋಚವಾದರು ಆದಿತ್ಯ ಡಯರಿಯ ಪುಟಗಳನ್ನ ತ್ವರಿತದಿಂದಲೇ ತಿರುವಿಹಾಕಿದ. ಕುಲಕರ್ಣಿ ದಂಪತಿಗಳ ಸಾಮರಸ್ಸ್ಯ ಜೀವನದ ಪ್ರತಿ ಸವಿ ನೆನಪುಗಳಿಗೆ ಕನ್ನಡಿ ಹಿಡಿದಂತಿತ್ತು ಆ ಡಯರಿ. ಪ್ರತಿ ಪುಟದಲ್ಲೂ ‘ಮನ್ನು ಈ ದಿನ ಹೀಗೆ ಮಾಡಿದರು, ಮನ್ನು ಹಾಗೆ ಮಾಡಿದರು..’ ಎಂತಲೋ ಅಥವಾ ‘ಮನ್ನೂ ನನಗಾಗಿ ಇಂದು ವಜ್ರದೋಲೆ ತಂದಿದ್ದಲ್ಲದೆ ಜೊತೆಗೆ ಮುತ್ತಿನ ಮಳೆಗರೆದರು.’ ಹೀಗೆ ಪ್ರತಿ ಘಟನೆಗಳ ಸಂಕ್ಷಿಪ್ತ ದಾಖಲಾಗಿತ್ತು. ಅಪ್ಪ ಅಮ್ಮನ ಪ್ರೀತಿವಾತ್ಸಲ್ಯವನ್ನ ಪ್ರತ್ಯಕ್ಷ ನೋಡಿದ್ದ ಆದಿತ್ಯನಿಗೆ ಯಾವುದೂ ಉತ್ಪ್ರೇಕ್ಷೆಯಂತೆ ಕಾಣಲಿಲ್ಲ. ಅಮ್ಮನ ಮುದ್ದಾದ ಕನ್ನಡ ಅಕ್ಷರಗಳನ್ನ ನೋಡಿದ ಆದಿತ್ಯನಿಗೆ ನೆನಪು ಬಂದದ್ದು ಅಮ್ಮ ಯಾವಾಗಲೂ ಎಡಗೈಯಲ್ಲೇ ಬರೆಯುತ್ತಿದ್ದೆಂದು. ಅಮ್ಮ ತನಗೆ ಕನ್ನಡ ಕಲಿಸಲು ಪಟ್ಟ ಶ್ರಮ ಇಂದು ಫಲಕಾರಿಯಾಯಿತೆಂದು ಹೆಮ್ಮೆ ಪಟ್ಟುಕೊಂಡ ಆದಿತ್ಯ. ಡಯರಿಯ ಪುಟಗಳಲ್ಲಿ ಆದಿತ್ಯನಿಗೆ ಗಮನ ಸೆಳದದ್ದು ಅಮ್ಮ ಯಾವಾಗಲೂ ನೋಡ ಬಯಸುತ್ತಿದ್ದ ಹಳೇ ಕನ್ನಡ ಚಲನ ಚಿತ್ರಗಳು. ‘ಈ ದಿನ ವೀಡಿಯೋನಲ್ಲಿ ನೋಡಿದ ‘ಸತ್ಯ ಹರಿಶ್ಚಂದ್ರ’ ಪೌರಾಣಿಕ ಚಿತ್ರ ತುಂಬಾ ಚೆನ್ನಾಗಿತ್ತೆಂತಲೋ, ಅಥವ ‘ಮಹಾಸತಿ ಅನುಸುಯ’ ತುಂಬಾ ಅಳುಬರಿಸಿತೆಂತಲೋ ಹೀಗೆ ತನ್ನ ಹೃದಯ ಮಿಡಿಯುವ ದಿನ ನಿತ್ಯದ ಸಣ್ಣ ಪುಟ್ಟ ಆಗುಹೋಗುಗಳನ್ನ ಬರೆದಿದ್ದ ಅಮ್ಮನ ಡಯರಿ ಓದಿ ಆದಿತ್ಯನ ಕಣ್ಣೂ ತೇವವಾಗಿತ್ತು. ‘ಈ ದಿನ ಸಾಯಂಕಾಲ ನಾವಿಬ್ಬರೂ "Living Trust" ಸೆಮಿನಾರ್ಗೆ ಹೋಗಿಬಂದದ್ದು ತುಂಬಾ ಬೇಜಾರಾಗಿದೆ.’ ಮತ್ತೊಂದು ಪುಟದಲ್ಲಿದ್ದ ಆ ದಿನದ ಬೇಜಾರಿಗೆ ಕಾರಣ ಕೊಟ್ಟಿರಲಿಲ್ಲ. ಆದರೆ ಆದಿತ್ಯನಿಗೆ ಆಶ್ಚರ್ಯಗೊಳಿಸಿದ ಉಲ್ಲೇಖ ‘ಮನ್ನು ಮೇಲೆ ತುಂಬಾ ಕೋಪ ಬಂದಿದೆ. ಈ ದಿನ ನಾನೆಷ್ಟು ಬೇಡವೆಂದರೂ ಮನ್ನೂ ನನಗೆ ಕೊಡಿಸಿದ್ದು ಒಂದು ರಿವಾಲ್ವರ್! ಅದನ್ನು ನೋಡಲೂ ಹೆದರಿಕೆ ನನಗೆ. ನನ್ನ ಸ್ವರಕ್ಷಣೆಗಂತೆ, ನನ್ನ ಪರ್ಸಿನಲ್ಲಿ ಇಟ್ಟುಕೊಂಡಿರಬೇಕಂತೆ!! ಡಯರಿಯ ಪುಟಗಳ ಮದ್ಯದಲ್ಲಿ ಜೋಪಾನವಾಗಿ ಇಟ್ಟಿದ್ದ ಒಂದು ಕರಪತ್ರದಲ್ಲಿ ರಿವಾಲ್ವರ್ ಉಪಯೋಗಿಸುವ ಕೈಪಿಡಿ ಹಾಗೇ ಇತ್ತು."
ನನಗೂ ಬಾಯಾರಿದಂತಾಗಿತ್ತು. ಕಾರಿನಲ್ಲೇ ಇದ್ದ ಒಂದು ಕೋಕ್ ಕುಡಿಯುತ್ತಾ ಮುಂದುವರೆಸಿದೆ. "ಡಯರಿ ಓದಿ ಮುಗಿಸಲು ಆದಿತ್ಯನಿಗೆ ಹಲವು ಗಂಟೆಗಳೇ ಬೇಕಾದವು. ತಂದೆ ತಾಯಿಗೆ ಗೌರವ ಸಲ್ಲಿಸುವ ಸಲುವಾಗಿ ಆದಿತ್ಯ ಒಂದು ಹೂ ಗೊಂಚಲು ಹಿಡಿದು ಅನಾಹುತ ನಡೆದ ಜಾಗಕ್ಕೆ ಹೋದ. ಸ್ಯಾನ್ ಹೋಸೆ ನಗರಕ್ಕೆ ಸುಮಾರು ೫೦ ಮೈಲಿಗಳಷ್ಟು ದೂರವಿರುವ ಸಾಂಟ ಕೃಜ಼್ ಬೆಟ್ಟಗಳ ಸಾಲು. ಕಡಿದಾದ ಘಟ್ಟ ಹತ್ತಿ ಇಳಿದರೆ ಪೆಸೆಫ಼ಿಕ್ ಸಾಗರ. ಧುರ್ಘಟನೆ ನಡೆದಿರುವ ಜಾಗ ರೆಡ್ವುಡ್ ಮರಗಳಿಂದ ಕೂಡಿದ ನಿರ್ಜನ ರಸ್ತೆ. ಪೋಲಿಸರು ಮರಕ್ಕೆ ಕಟ್ಟಿದ್ದ ಹಳದಿ ಪ್ಲಾಸ್ಟಿಕ್ ಟೇಪ್ ಬಿಟ್ಟರೆ ಮತ್ತೇನು ಇರಲಿಲ್ಲ. ಆದಿತ್ಯ ರಸ್ತೆ ಬಳಿಯಲ್ಲಿ ಕಾರು ನಿಲ್ಲಿಸಿ ನೆಡೆದು ಜಾಗಕ್ಕೆ ಬಂದಾಗ ದುಃಖ ತಡಿಯಲು ಸಾಧ್ಯವಾಗಲಿಲ್ಲ. ಒಂದು ಕಲ್ಲಿನ ಬಂಡೆ ಮೇಲೆ ಕುಳಿತು ದೂರ ದಿಗಂತದಲ್ಲಿ ಕಾಣುತ್ತಿದ್ದ ಪ್ರಶಾಂತ ಸಾಗರ ನೋಡುತ್ತಾ ಮೈಮರೆತು ಕೆಲವು ಕಾಲ ಕಳೆದ. ತಂದಿದ್ದ ಹೂ ಗೊಂಚಲು ಕೈ ಜಾರಿ ಬಿದ್ದಾಗ ಬಂಡೆಯಿಂದ ಕೆಳಗಿಳಿದು ನೋಡುತ್ತಾನೆ. ಹೊಳೆಯುವ ಒಂದು ವಸ್ತು ಎರಡು ಬಂಡೆಗಳ ಮಧ್ಯದಲ್ಲಿ ಅವನ ಕಣ್ಣು ಚುಚ್ಚಿದವು. ಹತ್ತಿರ ಹೋಗಿ ನೋಡಿದಾಗ ಅದೊಂದು ರಿವಾಲ್ವರ್! ಕೈಗೆತ್ತಿಕೊಂಡು ಪರೀಕ್ಷಿಸಿದಾಗ ಕೈಪಿಡಿಯಲ್ಲಿ ನೋಡಿದ ಚಿತ್ರವನ್ನೇ ಹೋಲುತ್ತಿತ್ತು. ಹಾಗಾದರೆ? ಕ್ಷಣ ಕಾಲ ಆವೇಷಭರಿತನಾಗಿ ಕಿರುಚಿಕೊಳ್ಳುತ್ತ ಓಡಿ ಹೋಗಿ ಕಾರಿನಲ್ಲಿ ಕುಳಿತು ಬಾಗಿಲನ್ನು ಭದ್ರವಾಗಿ ಹಾಕಿಕೊಂಡ."
ಬೇತಾಳ ಅಲುಗದೆ, ನಿಶ್ಶಬ್ಧದಲ್ಲಿ ಕುಳಿತು ಎತ್ತಲೋ ನೋಡುತ್ತಿರುವಂತೆ ಭಾಸವಾಯಿತು. ಆದರೂ ಮುಂದುವರೆಸಿದೆ. "ಆ ದಿನ ನಡೆದದ್ದಾದರು ಏನು, ಅಪರಾದಿ ಯಾರು ಎಂದು ತಿಳಿದುಕೊಳ್ಳುವ ಆತುರವಿಲ್ಲವೇ ನಿನಗೆ?" ಎಂದು ಬೇತಾಳವನ್ನ ಪ್ರಶ್ನಿಸಿದಾಗ ‘ಇಲ್ಲ’ ಎಂದಷ್ಟೇ ದೃಡವಾಗಿ ಹೇಳಿತು.
"ಅಂದು ಭಾನುವಾರ ಕುಲಕರ್ಣಿ ದಂಪತಿಗಳು ವಿಹಾರಕ್ಕಾಗಿ ಸಮುದ್ರ ತೀರಕ್ಕೆ ಹೋಗುವ ಯೋಜನೆ ಹಾಕಿಕೊಂಡಿದ್ದರು. ಇತ್ತೀಚೆಗೆ ಕೊಂಡ ಬೆಂಜ್ ಕನ್ವರ್ಟಿಬಲ್ ಕಾರಿನಲ್ಲಿ ನವ ದಂಪತಿಗಳಂತೆ ಸುತ್ತಿ ಬರುವ ಯೋಚನೆಯನ್ನ ಜಯಶ್ರಿ ಕುಲಕರ್ಣಿಯೆ ಸೂಚಿಸಿದ್ದು. ತಮ್ಮ ೨೭ ವರ್ಷಗಳ ದಾಂಪತ್ಯ ಜೀವನದ ವಾರ್ಷಿಕೋತ್ಸವನ್ನು ತಾವಿಬ್ಬರೇ ಸಮುದ್ರತೀರದ ರಮ್ಯ ಸ್ಥಳವೊಂದರಲ್ಲಿ ಆಚರಿಸಲು ಉತ್ಸುಕತೆಯಿಂದ ಹೊರಟರು. ಕಾರ್ತೀಕ ಮಾಸದ ಛಳಿ, ಆ ದಿನದ ಬೆಚ್ಚನೆಯ ಬಿಸಿಲಿನ ತಾಪ, ಭೋರ್ಗರೆವ ಸಮುದ್ರದಲೆಗಳು, ಸುತ್ತಲಿನ ಹಸಿರು ವನರಾಶಿ ಎಲ್ಲ ಸೇರಿ ಅವರ ಏಕಾಂತಕ್ಕೆ ಮೆರೆಗು ಕೊಟ್ಟಿತ್ತು. ದಿನವಿಡೀ ನಿರ್ಜನವಾದ ಸಕ್ಕರೆ ಮರಳಿನ ಸಮುದ್ರ ತೀರದಲ್ಲಿ ನೆಡೆದಾಡಿ, ಮುದ್ದಾಡಿ, ಮಾತಾಡಿ ಮುತ್ಸಂಜೆಯ ಸಮಯಕ್ಕೆ ಮನೆಗೆ ಹೊರಟರು ಕುಲಕರ್ಣಿ ದಂಪತಿಗಳು. ದೂರದಲ್ಲಿ ನಿಲ್ಲಿಸಿದ್ದ ಕಾರಿಗೆ ಬಂದಾಗ ಮನೋಹರ್ ಎಷ್ಟು ಬೇಡವೆಂದರೂ ಜಯಶ್ರಿ ತಾನೇ ಡ್ರೈವ್ ಮಾಡುತ್ತೇನೆಂದು ಹೇಳಿದಾಗ ಒಪ್ಪಲೇ ಬೇಕಾಯಿತು. ಎಳ್ಳು ಹುರಿದಂತೆ ಇನ್ನೂ ಮಾತನಾಡುತ್ತಲೇ ಕಡಿದಾದ ಬೆಟ್ಟದ ದಾರಿಯನ್ನು ಅನಾಯಾಸವಾಗಿ ಡ್ರೈವ್ ಮಾಡುತ್ತಿದ್ದರೂ ಆ ರೆಡ್ವುಡ್ ಮರಗಳಿಂದ ಕೂಡಿದ ನಿರ್ಜನ ರಸ್ತೆಗೆ ಬರುವ ಹೊತ್ತಿಗೆ ಕತ್ತಲಾಗಿ ಜಯಶ್ರಿ ಕುಲಕರ್ಣಿಗೆ ಭಯವಾಗತೊಡಗಿತು. ಮನೋಹರ್ ಸುಸ್ತಿನಿಂದ ಇರಬೇಕು ಇಲ್ಲ ಆ ದಿನದ ಸವಿ ನೆನಪುಗಳನ್ನ ಮೆಲಕು ಹಾಕುತ್ತಲೋ ಕಣ್ಣು ಮುಚ್ಚಿ ನಿದ್ರಿಸುತ್ತಿದ್ದರು. ‘ಎಲ್ಲಾದರೂ ಕಾರು ನಿಲ್ಲಿಸಿ ಮನ್ನೂಗೆ ಡ್ರೈವ್ ಮಾಡಲು ಹೆಳುತ್ತೇನೆ’ ಎಂದು ಜಯಶ್ರಿಗೆ ಅನ್ನಿಸುತ್ತಿತ್ತು. ಆದರೆ ನಿದ್ರಿಸುತ್ತಿದ್ದವರನ್ನ ಎಬ್ಬಿಸುವ ಗೋಜಿಗೆ ಎಂದೂ ಹೋದವಳಲ್ಲ ಆಕೆ. ಘಟ್ಟ ಇಳಿಯುವಾಗ ಕಾರಿನ ವೇಗ ನಿಯಂತ್ರಿಸುವುದು ಕಷ್ಟವಾಗತೊಡಗಿತು. ಕತ್ತಲಲ್ಲಿ ಎಲ್ಲಿಂದಲೋ ಬಂದು ಅಡ್ಡ ನಿಂತ ಒಂದು ಜಿಂಕೆಗೆ ಡಿಕ್ಕಿ ಹೊಡೆಯುವುದನ್ನ ತಪ್ಪಿಸಲು ಬ್ರೇಕ್ ಹಾಕಿದಾಗ ನಿಯಂತ್ರಣ ತಪ್ಪಿ ಕಾರಿನ ಬಲಗಡೆಯ ಭಾಗ ಒಂದು ಮರಕ್ಕೆ ಜಜ್ಜಿತು. ಮುಂಬಾಗದಲ್ಲಿ ನಿದ್ರಿಸುತ್ತಿದ್ದ ಮನೋಹರ್‌ಗೆ ಜಖಂ ಆಗಿ ಅವರು ತೀವ್ರ ಯಾತನೆಯಲ್ಲಿದ್ದರು. ಕೆಲವೇ ಕ್ಷಣಗಳಲ್ಲಿ ಮತ್ತೆ ಕಾರು ನಿಯಂತ್ರಣಕ್ಕೆ ಬಂದರೂ "ಜಯೂ, ಜಯೂ" ಎಂದಷ್ಟೇ ಕೇಳುತ್ತಿದ್ದ ಆಕಂಪನದ ಕ್ಷೀಣ ಧ್ವನಿ ಕೇಳಿ ಮತ್ತಷ್ಟು ಗಾಬರಿಯಾಯಿತು ಜಯಶ್ರಿಗೆ. ಕಾರು ನಿಲ್ಲಿಸಿ ಗಾಯಗೊಂಡ ಗಂಡನಿಗೆ ಸಹಾಯ ಮಾಡಲು ಹಾತೊರೆದಳು. ಆದರೆ ಕಾಲ ಮಿಂಚಿತ್ತು. ಮನೋಹರ್ ಕುಲಕರ್ಣಿಯ ಜೀವ ಪಕ್ಷಿ ಹಾರಿ ಹೋಗಿತ್ತು. ಹೃದಯ ತಜ್ಞೆಯಾದ ಜಯಶ್ರಿಗೆ ಅದರ ಅರಿವಾಗಲು ಹೆಚ್ಚು ಸಮಯ ಬೇಕಾಗಲಿಲ್ಲ. "ಮನ್ನೂ, ಮನ್ನೂ, ನನ್ನನ್ನ ಬಿಟ್ಟು ಹೋಗ ಬೇಡಿ" ಎಂದು ಭಾವೋದ್ರೇಕದಲ್ಲಿ ಕೂಗಿದಳು. ಕತ್ತಲೆಯ ನಿರ್ಜನ ರಸ್ತೆ. ದೈತ್ಯ ಮರಗಳಿಂದ ಅವಳ ಅಂತರಾಳದ ಕೂಗು ಮಾರ್ದನಿಗೊಂಡಿತೆ ಹೊರತು ಅವಳ ಧ್ವನಿ ಮನ್ನೂಗೆ ಕೇಳಿಸಲಿಲ್ಲ. "ಇಲ್ಲ, ಇಲ್ಲ, ನಾನೂ ನಿಮ್ಮ ಜೊತೆ ಬಂದುಬಿಡುತ್ತೀನಿ. ನಿಮ್ಮನ್ನು ಬಿಟ್ಟು ನಾನು ಖಂಡಿತ ಬದುಕಿರಲು ಸಾಧ್ಯವಿಲ್ಲ" ಹೀಗೆ ಕೆಲ ನಿಮಿಷಗಳನ್ನು ದಾವಾಗ್ನಿಯಲ್ಲಿ ಕಳೆದ ಅವಳ ಮನಸ್ಸು ಒಂದು ಭಾವೋದ್ರೇಕದ ನಿರ್ಧಾರ ಮಾಡಿತ್ತು. ತನ್ನ ಪ್ರಿಯ ಮನ್ನೂವಿನ ದೇಹವನ್ನು ಅಪ್ಪಿ ಕೆನ್ನೆಗೆ ಮುತ್ತಿಟ್ಟು ಸುರಿಯುತ್ತಿದ್ದ ರಕ್ತವರ್ಣವನ್ನೇ ಸಿಂಧೂರದಂತೆ ಹಣೆಗೆ ಹಚ್ಚಿ ಕೊಂಡಳು. ಪರ್ಸಿನಲ್ಲಿದ್ದ ರಿವಾಲ್ವರನ್ನು ಹೊರತೆಗೆದು ಎಡಗೈಯಲ್ಲಿ ಹಿಡಿದು ತನ್ನ ಎಡ ಕಪೋಲದ ಮೇಲಿರಿಸಿ ಟ್ರಿಗರ್ ಎಳೆದಳು. ‘ಟಪ್’ ಎಂದು ಹೊರಬಂದ ಕರ್ಕಶ ಶಬ್ಧಕ್ಕೆ ಮರಗಳ ಮೇಲೆ ನಿದ್ರಿಸುತ್ತಿದ್ದ ಹಕ್ಕಿಗಳೆಲ್ಲವೂ ಚೆಲ್ಲಾಪಿಲ್ಲಿಯಾಗಿ ಹಾರಿ ಮತ್ತೆ ಏನೂ ಆಗಿಲ್ಲ ಎನ್ನುವಂತೆ ಮರಳಿ ಬಂದು ಕುಳಿತವು. ಆ ರುದ್ರನಾಟಕ "ಮನ್ನೂ, ನಾನೂ ಬಂದೆ" ಎಂದು ಹೊರಬಂದ ಮೆಲುದನಿಯಲ್ಲಿ ಅಂತ್ಯಗೊಂಡಿತ್ತು. ಕೈಯಲ್ಲಿದ್ದ ರಿವಾಲ್ವರ್ ದೂರಕ್ಕೆ ಹಾರಿ ಕತ್ತಲಲ್ಲಿ ಮಾಯವಾಗಿತ್ತು." ಹೆಣ್ಣು ಬೇತಾಳದ ಮನಸ್ಸಿನಂತೆ ನನ್ನ ಮನಸ್ಸೂ ಕೂಡ ವಿಕ್ಷೋಬಗೊಂಡು ಕಣ್ಣಂಚಿನಲ್ಲಿ ಹನಿಗರೆಯುತ್ತಿತ್ತು. ಅದನ್ನು ತೋರಿಸಿಕೊಳ್ಳದೆ ಕಥೆಯನ್ನು ಮುಕ್ತಾಯ ಮಾಡಲು ಹೆಣಗಿದೆ. "ಈ ಧಾರುಣ ಕಥೆಯ ರಹಸ್ಯ ತಿಳಿಯದ ಪೋಲಿಸರು ಆಗುಂತಕ ಕೊಲೆಗಾರರೇ ಈ ಅನಾಹುತಕ್ಕೆ ಕಾರಣವೆಂದು ನಂಬಿದರು. ಜೊತೆಗೆ "drive-by shooting" ಅನ್ನುವ ತರ್ಕ ಎಲ್ಲ ಪುರಾವೆಗಳನ್ನು ಒದಗಿಸಿ, ಎಲ್ಲರಿಂದಲೂ ಒಪ್ಪಿಗೆ ಪಡೆಯಲು ಯೋಗ್ಯವಾದ ಒಂದು ಕಾರಣವಾಗಿತ್ತು."
ಹೈವೇ ದಾಟಿ ವಸ್ತುಸಂಗ್ರಹಾಲಯದ ಹತ್ತಿರ ಬಂದಾಗಿತ್ತು. ಬೇತಾಳ ಹೇಳಿದಂತೆ ಹೈವೇ ಪ್ರಯಾಣದ ಆಯಾಸವೇ ಗೊತ್ತಾಗಲಿಲ್ಲ. ಸಿಗ್ನಲ್ ಲೈಟಿಗಾಗಿ ಕಾಯುತ್ತ ನಾ ಕೊಟ್ಟ ಉತ್ತರಕ್ಕೆ ಬೇತಾಳದ ಪ್ರತಿಕ್ರಿಯೆ ಏನಿರಬಹುದೆಂದು ಯೋಚಿಸುತ್ತಿದ್ದೆ. ಆದರೆ ನನ್ನ ಒಳಮನಸ್ಸಿನ ಕಾತುರತೆ ನನಗರಿವಿಲ್ಲದಂತೆ ಬೇತಾಳವನ್ನೇ ಕೇಳಿತು: "ಎಲೈ ಬೇತಾಳ, ನೀನೆ ಹೇಳು. ಜಯಶ್ರಿ ಕುಲಕರ್ಣಿ ಆತ್ಮಹತ್ಯೆ ಮಾಡಿಕೊಂಡ ಅಪರಾದಿಯೆ? ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಹೇಡಿಯಲ್ಲ ಆಕೆ. ಹಾಗಾದರೆ ಮನೋಹರ್ ಕುಲಕರ್ಣಿಯ ಧರ್ಮಪತ್ನಿ ಸತಿಯಾದಳೆ? ವಿಚಲಿತ ಬದುಕಿನ ನೀತಿ ನಿಯಮಗಳನ್ನೇ ಪ್ರಶ್ನಿಸುವ ಈ ಘಟನೆಗೆ ಸರಿಯಾದ ಉತ್ತರ ನಿಮಗೇ ಗೊತ್ತಲ್ಲವೇ ಜಯಶ್ರಿ ಕುಲಕರ್ಣಿ" ಎಂದು ಧೈರ್ಯವಾಗಿ ಬೇತಾಳದ ಕಡೆ ನೋಡಿದೆ. ಯಾರೋ ಗಹಗಹಿಸಿ ನಕ್ಕಂತಾದರೂ ಮನಸ್ಸು ಹಗುರವಾಗಿತ್ತು. ಇದ್ದಕಿದ್ದಂತೆ ಒಳ ನುಗ್ಗಿದ ತಣ್ಣನೆಯ ಗಾಳಿಯಿಂದ ದೇಹಕ್ಕೆ ಹಾಯೆನಿಸಿತು.
ಕಾರಿನ ಬಾಗಿಲು ತೆರೆದಿದೆ ಎನ್ನುವ ಕೆಂಪು ಚಿಹ್ನೆ ಕಂಡು ಬಂದಾಗ ಮತ್ತೆ ಬಲ ಪಕ್ಕಕ್ಕೆ ಬಗ್ಗಿ ಕಾರಿನ ಬಾಗಿಲನ್ನು ಜೋರಾಗಿ ಹಾಕಿಕೊಂಡೆ.
ಮಾರನೆ ದಿನ ನಗರದ ‘ಮರ್ಕ್ಯುರಿ ನ್ಯೂಸ್’ ಪತ್ರಿಕೆಯ ೧೬ನೇ ಪುಟದಲ್ಲಿ ಸಣ್ಣಕ್ಷರಗಳಲ್ಲಿ ಮುದ್ರಿಸಿದ "Couple Killed in Drive-by Shooting" ಅನ್ನುವ ಶೀರ್ಷಿಕೆ ಓದಿ ಆಶ್ಚರ್ಯಚಕಿತನಾದೆ. ಆದರೆ ನಿಜಾಂಶ ನನಗೊಬ್ಬನಿಗೇ ಗೊತ್ತಿರುವುದೆಂದು ಸಮಾಧಾನವಾಯಿತು.
_________________________________________________________

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ