ಈ ವೀಡಿಯೋ ನೋಡಿದ ಮೇಲೆ ಸಣ್ಣ ಕಥೆಗಳನ್ನು ಬರೆಯುವುದು ವ್ಯರ್ಥ ಅನಿಸಿತು.
ಏಕೆ ಅಂತ ನೀವು ಕೇಳಬಹುದು.
ಮೊದಲು ಈ ವೀಡಿಯೋನ ಒಂದು ತುಲನಾತ್ಮಕ ದೃಷ್ಟಿಯಿಂದ ನೋಡೋಣ ಬನ್ನಿ.
ಇದೊಂದು ಘಟನೆ ಮತ್ತು ಮನುಷ್ಯ ಸ್ವಭಾವಗಳನ್ನು ಸೆರೆ ಹಿಡಿದ ಚಿತ್ರಣ. ಘಟನೆ ಆರಂಭದಲ್ಲಿ ಸುಂದರ ತರುಣಿಯೋರ್ವಳ ದೃಡ ವಿಶ್ವಾಸ ಕೆಲಸದಲ್ಲಿನ ಮಗ್ನತೆ ಮತ್ತು ಅವಳ ಹಾಸ್ಯ ಪ್ರವೃತ್ತಿ ಎಲ್ಲ ಪರಿಚಯವಾಗುತ್ತದೆ. ನಂತರ ನಮಗೆ ಪರಿಚಯಸಿದ ಶ್ರೀಮಂತ ಸುಂದರ ದೃಡಕಾಯ ತರುಣ ಮತ್ತು ಈ ಯುವತಿಯಲ್ಲಿ ಪ್ರೇಮ ಹೇಗೆ ಬೆಳೆಯಿತು ಎಂಬ ಮತ್ತೊಂದೆರಡು ಉಪ ಘಟನೆಗಳಿಂದ ನಮ್ಮ ಮನಸ್ಸಿನಲ್ಲಿ ಈ ಜೋಡಿಯ ಬಗ್ಗೆ ಒಂದು ಅಳಿಸಲಾರದ ಭಾವನೆಗಳನ್ನು ಮೂಡಿಸಲು ಶುರು ಮಾಡುತ್ತದೆ. ಮುಂದೇನಾಗಬಹುದೆಂಬ ಕಲ್ಪನೆಯ ಜೊತೆಗೆ ಮನಷ್ಯ ಸ್ವಭಾವ ಮತ್ತು ಮೌಲ್ಯದ ಬಗ್ಗೆ ಕುತೂಹಲ ಮೂಡಿ ಬರುತ್ತದೆ. ಪಾತ್ರಧಾರಿಗಳಿಗಿಂತ ವ್ಯಕ್ತಿ ಚಿತ್ರಣ ನಮ್ಮ ಸಂವೇದನೆಗೆ ಅಣುವು ಮಾಡಿಕೊಡುತ್ತದೆ. ಮುಕ್ತಾಯದ ಹೊತ್ತಿಗೆ ಹಿಂದಿನ ಘಟನೆಗಳೆಲ್ಲವು ಜೊತೆಗೂಡಿ ಹೆಣ್ಣು ಗಂಡಿನ ಪ್ರೇಮ ಕಥೆಯೊಂದು ಮದುವೆಯಲ್ಲಿ ಕೊನೆಗೊಳ್ಳುವ ಒಂದು ಸುಂದರ ಸನ್ನಿವೇಶ ಮೂಡಿ ಬರುತ್ತದೆ.
ಹಿನ್ನಲೆ ಗಾಯನ ಹೊಸ ರೀತಿಯಾಗಿದ್ದು ಸನ್ನಿವೇಶಗಳಿಗೆ ಹೊಂದಿಕೊಂಡಿದೆ ಎನ್ನಬಹುದು. ಒಂದು ವೇಳೆ ಹಿನ್ನಲೆ ಸಂಗೀತವಿಲ್ಲದೆ ನೀವು ಇದನ್ನು ಮೂಕ ಚಿತ್ರದಂತೆ ನೋಡಿದರೂ ಇದೊಂದು ಸ್ಪಂದಿಸುವ ಕಥೆಯ ಚೌಕಟ್ಟಿನಲ್ಲಿ ಅನಾವರಣಗೊಳ್ಳುತ್ತದೆ ಎಂದು ಅರ್ಥೈಸಿಕೊಳ್ಳಬಹುದು. ಅಂದರೆ ಇದರಲ್ಲಿ ಒಂದು ಸಣ್ಣ ಕಥೆಯಲ್ಲಿರಬೇಕಾದ ಎಲ್ಲ ಒಳ್ಳೆಯ ಅಂಶಗಳನ್ನು ನಾವು ಕಾಣಬಹುದು. ಮಾಧ್ಯಮ ಬೇರೆ ಅಷ್ಟೆ. ಭಾಷೆಯೇ ಬೇಡವಾದ, ಭಾಷೆಗೆ ಗಮನ ಕೊಡದೆಯೇನೆ ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬಹುದು. ಆದ್ದರಿಂದಲೆ ಇರಬೇಕು ಈ ವೀಡಿಯೊನ ಒಂದು ಕೋಟಿ ಮೂವತ್ತಮೂರು ಲಕ್ಷ ಬಾರಿ ಪ್ರಪಂಚದ ಮೂಲೆ ಮೂಲೆಗಳಿಂದ ಜನ ನೋಡಿದ್ದಾರೆ ಎಂಬ ಮಾಹಿತಿ ತಿಳಿದು ನಾನೂ ಕೂಡ ನಿಮ್ಮಂತೆಯೆ ಬೆರಗಾದೆ.
ಈಗ ಈ ವೀಡಿಯೋನ ಒಂದು ಸಣ್ಣ ಕಥೆಯ ದೃಷ್ಟಿಯಿಂದ ಪರಿಶೀಲಿಸೋಣ. ಸಣ್ಣ ಕಥೆಗಳ ರೂಪದಲ್ಲಿ ಇದನ್ನು ಬರೆಯಲು ಹೋದರೆ ೮-೧೦ ಪುಟಗಳಲ್ಲಿ ಮುಗಿಸಬಹುದು. ಸುಂದರ ಪದ ಜೋಡಣೆ, ವಿರಳವಾದ ವಿವರಣೆ, ಭಾಷೆ ಮತ್ತು ವ್ಯಾಕರಣದ ಮೇಲಿನ ಪ್ರಬುತ್ವ ಇರುವ ಪಳಗಿದ ಬರಹಗಾರನಿಗೂ ಈ ಕಥೆ ಬರೆಯಲು ಸಾಕಷ್ಟು ಪ್ರಯತ್ನದಿಂದ ಸಾಧ್ಯವಾಗಬಹುದು. ಜೊತೆಗೆ ಬಹಳಷ್ಟು ಕ್ರಿಯಾಶೀಲತೆಯೊಂದಿಗೆ ಎಲ್ಲ ಘಟನೆಗಳನ್ನು, ವಿವರಣೆಗಳಿಗೆ ಹೆಚ್ಚು ಪ್ರಾಮುಖ್ಯತೆ ಕೊಡದೆ, ಒಂದರನಂತರ ಮತ್ತೊಂದು ಸನ್ನಿವೇಶವನ್ನು ಸೇರಿಸಿ ಬರೆಯುವುದು ಕೆಲವರಿಗಷ್ಟೇ ಸಾಧ್ಯ. ಎಲ್ಲದಕ್ಕೂ ಹೆಚ್ಚಾಗಿ ಸ್ಪಂದಿಸಿದ ವ್ಯಕ್ತಿಯ ಮೌಲ್ಯ, ನಡವಳಿಕೆ, ಸ್ವಭಾವ, ದೃಡತೆ ಎಲ್ಲವೂ ಅರ್ಥಗರ್ಬಿತವಾಗುವಂತೆ ಬರೆಯಲು ಸಾಕಷ್ಟು ಪರಿಣಿತಿ ಬೇಕು. ಇದಕ್ಕೆ ಸಂಭಂದಪಟ್ಟಂತೆ ತರುಣಿಯ ಹಾಸ್ಯ ಪ್ರವೃತ್ತಿಯನ್ನು ಕೈ ಸನ್ನೆ ಹಾಗು ಮಾತಿಲ್ಲದ ಮುಗುಳುನಗೆಯಲ್ಲಿ ಸೆರೆಹಿಡಿದ ಈ ವೀಡಿಯೊನ ಕಥೆ ರೂಪದಲ್ಲಿ ಬರೆಯುವುದಾದರೂ ಹೇಗೆ ಸಾಧ್ಯ? ಅರ್ಧ ನಿಮಿಷಗಳಲ್ಲಿ ಮನದಟ್ಟವಾಗುವ ಅವಳ ಮೌಲ್ಯ, ನಡವಳಿಕೆ ಸ್ವಭಾವನ್ನು ೩-೪ ಪುಟಗಳಲ್ಲಿ ಕೂಡ ಬರೆಯುವುದು ಕಷ್ಟ. ಈ ವೀಡಿಯೋ ನೋಡಿದ ನಂತರ ಮೂಡಿಬರುವ “ಅವಳೇ ನಾನಾಗಿದ್ದರೆ” ಎಂಬ ಕಲ್ಪನೆಯ ಸಂವೇದನೆಯನ್ನು ಬರವಣಿಗೆಯ ಮೂಲಕ ಓದುಗನ ಹೃದಯದಲ್ಲಿ ಮೂಡಿಸಲು ಸಾಧ್ಯವಾಗುವುದೇ? ಅಥವಾ “ನಾನು ಬಡವನಾದರೂ ಅವನಂತೆಯೇ ಮೋಹಿಸಿ ಸುಂದರಿಯೋರ್ವಳನ್ನು ಮದುವೆ ಆಗುವೆ” ಎಂಬ ಹುಟ್ಟಿದ ಬಯಕೆಯನ್ನು ಬರವಣಿಗೆಯ ಮೂಲಕ ಸಣ್ಣ ಕಥೆಯಲ್ಲಿ ಜೀವ ಕೊಡಲು ಸಾಧ್ಯವೆ? ಈ ಕಥೆ ಬರವಣಿಗೆಯ ಶೈಲಿಯಲ್ಲಿದ್ದರೆ ಒಂದು ಕೋಟಿಗೂ ಹೆಚ್ಚು ಜನ ಓದಿ ಆನಂದಿಸುತ್ತಿದ್ದರೆ? ಒಟ್ಟಿನಲ್ಲಿ ಈ ವೀಡಿಯೊನಲ್ಲಿ ಮೂಡಿ ಬಂದ ಕಥೆ ಒಂದು ಸಣ್ಣ ಕಥೆಗಿಂತ ಹೆಚ್ಚು ಸುಂದರವಾಗಿ ಮೂಡಿ ಬಂದಿದೆ. ಐದೇ ನಿಮಿಷಗಳಲ್ಲಿ ನಮ್ಮ ಮೌಲ್ಯ, ಕಲ್ಪನೆ, ಕನಸು, ನನಸು, ಎಂದು ಹತ್ತಾರು ಸ್ಪಂದಿಸುವ ಭಾವನೆಗಳನ್ನು ಬರವಣಿಗೆಯ ಮಾಧ್ಯಮದಲ್ಲಿ ಸೆರೆಹಿಡಿಯಲು ಖಂಡಿತ ಸಾಧ್ಯವಾಗುತ್ತಿರಲಿಲ್ಲ.
ಆದ್ದರಿಂದಲೇ ಈ ವೀಡಿಯೋ ನೋಡಿದ ಮೇಲೆ ಸಣ್ಣ ಕಥೆಗಳನ್ನು ಬರೆಯುವುದು ವ್ಯರ್ಥ ಅನಿಸಿತು. ನಿಮ್ಮ ಅನಿಸಿಕೆ ಏನು? ಖಂಡಿತ ತಿಳಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ