ಬುಧವಾರ, ಜೂನ್ 8, 2016

Poems

ನಿಸ್ಸಂದೇಹ

ಬೇವಿನ ಹೂವೊಳು
ಭ್ರಮಿಸಿದರೂ ಜೇನು
ನೀಡದು  ಕಹಿಯನು
ನಿಸ್ಸಂದೇಹದಲಿ

ಲೋಭಿ ವ್ಯಭಿಚಾರಿಗಳ
ಸಂಘದೊಳು
ಜ್ಞಾನಾರ್ಜನೆ ಸಾಧ್ಯವಿರದು
ನಿಸ್ಸಂದೇಹದಲಿ

ಪಾಪಪ್ರಜ್ಞೆ ಇಲ್ಲದ
ಮಾನವ ಎಂದೂ
ಸಂತೋಷದಿಂದಿರನು
ನಿಸ್ಸಂದೇಹದಲಿ

ದೇಹ ತೊರೆದರೂ ನೀ
ನೀ ಆಡಿದ ಸುಳ್ಳು
ದಹಿಸಿ ಭಸ್ಮವಾಗದು
ನಿಸ್ಸಂದೇಹದಲಿ

ರಂಧ್ರ ಕೊರೆದಾಕ್ಷಣ
ಎಲ್ಲ ಟೊಂಗೆಯೊಳು
ಬಾರದು ಮುರಳಿನಾದ
ನಿಸ್ಸಂದೇಹದಲಿ

ಪಾಂಡಿತ್ಯ ಗಳಿಸಿದರೂ
ಅಸಂಸ್ಕೃತ
ಗಳಿಸನು ಗೆಳೆತನವ
ನಿಸ್ಸಂದೇಹದಲಿ

ತನ್ನ ತಾ ಅರಿತ ಮನುಜ
ಮನುಜರೊಳು
ಶ್ರೇಷ್ಟನೆಂದರಿಯೇಕೋ
ನಿಸ್ಸಂದೇಹದಲಿ ಮನುಜ?

_________________

ನೆನ್ನೆ, ಇಂದು, ನಾಳೆ

ನೆನ್ನೆಯ ವಿದ್ಯೆ
ವ್ಯರ್ಥವಾಗದು ಇಂದು
ಅತ್ಯಮೂಲ್ಯವು ನಾಳೆ
ವಿದ್ವತ್ತಿಗಾಗಿ ಎಂದೆಂದು

ನೆನ್ನೆಯ ಮಂಜು
ಕರಗುವುದು ಇಂದು
ಹರಿವುದು ನಾಳೆ
ನದಿಯಾಗಿ ಎಂದೆಂದು

ನೆನ್ನೆಯ ಸಂಪತ್ತು
ಬರಡಾಗುವುದು ಇಂದು
ಕೂಡಿಟ್ಟರೆ ನಾಳೆ
ಸೇರುವುದು ಪರರ ಎಂದೆಂದು

ನೆನ್ನೆಯ ದ್ವೇಷ  
ದಳ್ಳುರಿಯಾಗುವುದು ಇಂದು
ಉದ್ರೇಕದೊಳು ನಾಳೆ
ಮನುಷ್ಯತ್ವ ನಶಿಸುವುದು ಎಂದೆಂದು

ನೆನ್ನೆಯ ಪ್ರೀತಿ
ವೃದ್ದಿಯಾಗುವುದು ಇಂದು
ಹಂಚಿಕೊಂಡರೆ ನಾಳೆ
ಸಂಗ್ರಾಮ ಇರದು ಎಂದೆಂದು

ನೆನ್ನೆಯ ದುಃಖ
ವ್ಯಥೆಪಡುವುದು ಮನ ಇಂದು
ಮರೆತರೆ ನಾಳೆ
ಉಲ್ಲಾಸ ಮರುಕಳಿಸುವುದು ಎಂದೆಂದು

ನೆನ್ನೆಯ ಅಸ್ಪಷ್ಟ ಕನಸು
ನನಸಾಗದು ಇಂದು
ಅವಿರತ ಪ್ರಯತ್ನದೊಳು ನಾಳೆ
ಫಲಿಸುವುದು ಅಭಿಲಾಷೆ ಎಂದೆಂದು

ನೆನ್ನೆಯ ಸತ್ಯ
ಸುಳ್ಳಾಗದು ಇಂದು
ಉಳಿವುದು ನಾಳೆ
ಅಳಿಯದು ಎಂದೆಂದು

ನೆನ್ನೆ ಇರದ ಇಂದು
ಇಂದು ಇರದ ನಾಳೆ
ಇರದು ಎಂದೆಂದು
ಎಂದೇಕೆ ಅರಿಯೆಯೋ ಮನುಜ?

________________

ತನು ಮನ ಧನ

ತನು ಮನ ಧನ ತ್ರಯದೊಳು  
ಸಂಘರ್ಷವನ್ನರಿಯದೆ ನೀ
ಆಹುತಿಯ ನೀಡಲು ಅಶಕ್ಯನಾದೆಯೇಕೊ?

ತನುಮನವನರ್ಪಿಸಿ ಧನವ ತ್ಯಜಿಸಿದ
ಮೀರಳ ಭಕ್ತಿ ನೀ
ಬಯಸದಾದೆಯೇಕೋ?

ತನುಧನವನರಸಿ ಮನವ ತೊರೆದ
ದುರ್ಯೋಧನನ ಗರ್ವ
ಉದಯಿಸಿತೇಕೋ ನಿನ್ನಲ್ಲಿ ಉತ್ಕಾಂಕ್ಷೆ?

ದಣಿದು ತನುಧನವನೆ ಧಾರೆಯೆರದ
ಹರಿಶ್ಚಂದ್ರನ ಸತ್ಯತೆ ನೀ
ಅನುಸರಿಸದಾದೆಯೇಕೋ?

ಮನವರಿಕೆಯಲಿ ಧನವ ತೊರೆದ
ಪುರಂದರನ ವೈರಾಗ್ಯ ನೀ
ಹಂಚಿಕೊಳ್ಳದಾದೆಯೇಕೋ?

ದೃಢ ಮನದಲಿ ತನುವನೆ ದಾನಿಸಿದ
ಏಕಲವ್ಯನ ಗುರುಭಕ್ತಿ ನೀ
ಗ್ರಹಿಸದಾದೆಯೇಕೋ?

ಧನವ ನಿರಾಕರಿಸಿ ತನುವ ದಂಡಿಸಿ ಶಾಂತಿಯನೆ ಗೆದ್ದ
ಬುದ್ಧನ ನಿರ್ವಾಣ ನೀ
ಗಳಿಸದಾದೆಯೇಕೋ?

ದೃಢಕಾಯ ದೇಹ ಏಕಾಗ್ರ ಚಿತ್ತದಲಿ ಲಂಕೆಯೆನೆ ಗೆದ್ದ
ಪವನಪುತ್ರನ ಸ್ವಾಮಿನಿಷ್ಟೆ ನೀ
ಕಲಿಯಲಿಲ್ಲವೇಕೋ?

ಆಕಾಂಕ್ಷೆಯ ಜೀವನದೊಳು
ಸರಿಪಾಲು   
ಸ್ವಾಸ್ಥ್ಯ ನೆಮ್ಮದಿ ಸಿರಿಯ ನೀ ನಿರ್ಧರಿಸೋ ಮನುಜ.

________________

ಕಣ್ಗಳು

ಮುಕುಂದನ ಮುಗ್ಧ ಕಣ್ಗಳಲಿ ನೂರೆಂಟು
ತುಂಟತನವನೆ ಕಂಡಳೇಕೋ
ಯಶೋದೆ?

ಮುಕ್ಕಣ್ಣನ ಪ್ರಜ್ವಲಿಸುವ ಕಣ್ಗಳಲಿ
ದಹಿಸಿ ಭಸ್ಮವಾದನೇಕೋ
ಕಾಮದೇವ?

ಏಕದಂತನ ಸೂಕ್ಷ್ಮ ಕಣ್ಗಳಲಿ
ಅಗಾಧ ಬುದ್ದಿಯನೆ ಗ್ರಹಿಸಿದರೇಕೋ
ವ್ಯಾಸ ಮಹರ್ಷಿ?

ಕಾಮಭರಿತ ಇಪ್ಪತ್ತೂ ಕಣ್ಗಳಲಿ
ವೈದೇಹಿಯನೆ ಬಯಸಿದನೇಕೋ
ದಶಮುಖಿ?

ತಿವಿದು ಬಾಣದಲಿ ರಕ್ತ ಸುರಿವ ಕಣ್ಗಳನೇ
ಶಿವಲಿಂಗಕೆ ಅರ್ಪಿಸಿದನೇಕೋ
ಬೇಡರ ಕಣ್ಣಪ್ಪ?

ಚಿಗರೆಯ ಕಣ್ಗಳಲಿ  ಹೆಣ್ಣಿನ ಮೋಹಕ ದೃಷ್ಟಿಯಲಿ
ನೀ ಕಾಣದ ಶೃಂಗಾರವನೆ  ಸೆರೆಹಿಡಿದನೇಕೋ
ಕಾಳಿದಾಸ?

ಕಿವಿಯಲಾಲಿಸಿ ನುಡಿದ  ನಾಲಿಗೆಯ ಸುಳ್ಳನು ಕಣ್ಗಳಲಿ
ನೀ ಅವಿತಿಡಲು ಅಸಾಧ್ಯವಾಯಿತೇಕೋ
ಮನುಜ?

ಮನೊದೊಳು ಹುದುಗಿದ ಪ್ರೀತಿ ದ್ವೇಷ ಭಯ ಶಾಂತಿ
ಎಲ್ಲವನು ಪ್ರತಿಬಿಂಭಿಸಿದವೇಕೊ ನಿನ್ನ
ಕಣ್ಗಳು?

ಒಳಕಣ್ಣು ತೆರೆದಾಗ ಬಾಹ್ಯ ಕಣ್ಗಳ ಅಂದಾಕಾರ
ತಾನಾಗಿ ಮಾಯವಾಗದಿರುವುದೆ
ಮನುಜ?
__________________

ಅಗೋಚರ

ಎಣ್ಣೆಯೊಳು ಬತ್ತಿಯೋ
ಬತ್ತಿಯೊಳು ಎಣ್ಣೆಯೋ
ಬೆಳಕ ಚೆಲ್ಲಿದ ಹಣತೆಯೊಳು
ಅವಿತ ಅಗೋಚರನ್ಯಾರೋ?

ಜೀವದೊಳು ಉಸಿರೋ
ಉಸಿರೊಳು ಜೀವವೋ
ಶಕ್ತಿನೀವ ಜಠರಾಗ್ನಿಯೊಳು
ಅವಿತ ಅಗೋಚರನ್ಯಾರೋ?

ಹೂವಿನೊಳು ಬಣ್ಣವೋ
ಬಣ್ಣದೊಳು ಹೂವೋ
ಕಾರಣಕರ್ತ ರವಿಕಿರಣದೊಳು
ಅವಿತ ಅಗೋಚರನ್ಯಾರೋ?

ನಕ್ಷತ್ರ ಪುಂಜದೊಳು ಅವಧಿಯೋ
ಅವಧಿಯ ಗರ್ಭದೊಳು ನಕ್ಷತ್ರವೋ
ಕಲ್ಪನಾತೀತ ಈ ಶಕ್ತಿಯೊಳು
ಅವಿತ ಅಗೋಚರನ್ಯಾರೋ?

ಜ್ವಾಲೆಯೊಳು ಕಿಡಿಯೋ
ಕಿಡಿಯೊಳು ಜ್ವಾಲೆಯೋ
ಜಗವ ಸುಡುವ ಜ್ವಾಲಾಮುಖಿಯೊಳು
ಅವಿತ ಅಗೋಚರನ್ಯಾರೋ?

ಅರಿವಿನೊಳು ಜ್ಞಾನವೋ
ಜ್ಞಾನದೊಳು ಅರಿವೋ
ವಿಕಸಿತ ಮನದ ಜ್ಞಾನ ಜ್ಯೋತಿಯೊಳು
ಅವಿತ ಅಗೋಚರನ್ಯಾರೋ?

ಆ ಅಗೋಚರನಿಲ್ಲದ
ಜಗದೊಳೆಲ್ಲವೂ ಶಕ್ತಿಹೀನ ಕ್ರಿಯಾಹೀನ
ಎಂದೇಕೆ ಅರಿಯೆಯೋ ಮನುಜ?
_________________

ಪ್ರೀತಿ

ಪುರುಷನೊಳು ಪ್ರಕೃತಿ
ಬಯಸಿದಳೇಕೋ
ಸಹಜ ಪ್ರೀತಿಯನು?

ಬೃಂದಾವನದೊಳು ರಾಧೆ
ಹಂಬಲಿಸಿದಳೇಕೋ
ನಿರಂತರ ಪ್ರೀತಿಯನು?

ಧುಷ್ಯಂತನೊಳು ಶಾಕುಂತಲೆ
ಕಾಣದಾದಳೇಕೋ
ಕ್ಷಣಿಕ ಪ್ರೀತಿಯನು?

ವಿರಹದೊಳು ಮೀರ
ಹುಡುಕಿದಳೇಕೋ
ದೊರಕದಾ ಪ್ರೀತಿಯನು?

ದೊರಕಿದ ಪ್ರೀತಿಯನು
ಕೂಡಿಡುವ ಭರದಲಿ ನೀ
ಜೀವಸವೆದಿಹೆಯೇಕೋ?

ಅವಿಭಾಜ್ಯ ಪ್ರೀತಿಯನು  
ವಿಭಜಿಸುವ ಮತ್ಸರದಲಿ ನೀ
ಅತೃಪ್ತನಾದೆಯೇಕೋ?

ಮುಡುಪಿಟ್ಟ ಪ್ರೀತಿಯನು
ರಕ್ಷಿಸುವ ಹಮ್ಮಿನಲಿ ನೀ
ನಿರಂಕುಶನಾದೆಯೇಕೋ?

ಅಳಿದುಳಿದ ಪ್ರೀತಿಯನು  
ನೆಚ್ಚಿಸುವ ಸೋಗಿನಲಿ ನೀ
ಅಪ್ರಾಮಾಣಿಕನಾದೆಯೇಕೋ?

ಮುಗ್ದ ಪ್ರೀತಿಯನು
ಪೋಷಿಸುವ ಕಪಟದಲಿ ನೀ
ಮಲಿನಗೊಳಿಸಿದೆಯೇಕೋ?

ದೈವದತ್ತ ಪ್ರೀತಿಯನು
ಸ್ಪಂದಿಸುವ ಹೃದಯದಲಿ ನೀ
ಅರಿತಾಗ ಸಾಕ್ಷಾತ್ಕಾರವಾಗದೇ ಮನುಜ?
______________________

ಪಾಠ
ರವಿ ಗೋಪಾಲ ರಾವ್, ಸ್ಯಾನ್ ಹೋಸೆ, ಕ್ಯಾಲಿಫ಼ೋರ್ನಿಯ.

ಬಳ್ಳಿ ತಾ ನಂಬಿದ ಆಶ್ರಯವನು
ಅಪ್ಪಿ ಬಿಗಿದಪ್ಪಿ ಸಹಬಾಳ್ವೆ ನೆಡಸಲು
ಕಲಿಸಿದವನ್ಯಾರೋ?

ಕಾಮನಬಿಲ್ಲನು ಕಂಡ
ಮಯೂರಿಗೆ ನಾಟ್ಯ
ಕಲಿಸಿದವನ್ಯಾರೋ?

ಪುಷ್ಪವ ಭ್ರಮಿಸಿದ
ಜೇನಿಗೆ ಅಮೃತ ಕೂಡಿಡಲು
ಕಲಿಸಿದವನ್ಯಾರೋ?

ನಿರೀಕ್ಷೆಯ ಹಕ್ಕಿಗೆ
ನೆಲೆಗೊಡಲು ನೈಗೆಯ
ಕಲಿಸಿದವನ್ಯಾರೋ?

ಖಂಡವನೆ ದಾಟಿದ
ರಾಜಪತಂಗಕೆ ದಾರಿ ಕೌಶಲ
ಕಲಿಸಿದವನ್ಯಾರೋ?

ಅಲೆಯನೆ ವಿರೋದಿಸಿ ಈಜಿದ
ಮತ್ಸ್ಯಕೆ ಭರವಸೆಯನು
ಕಲಿಸಿದವನ್ಯಾರೋ?

ಶೃಂಗ ಪರ್ವತವನೆ ಹಾರಿದ
ಹಂಸಕೆ ಪರಿಸರ ಜ್ಞಾನ
ಕಲಿಸಿದವನ್ಯಾರೋ?

ಮಂದೆಗಟ್ಟಿ ಅಲೆವ ಗಜರಾಜನಿಗೆ
ಅಂತರ್ಜಲ ಕಲ್ಪನೆಯನು
ಕಲಿಸಿದವನ್ಯಾರೋ?

ನನ್ನಲ್ಲೂ ನಿನ್ನಲ್ಲೂ ಎಲ್ಲೆಲ್ಲೂ
ಹುದುಗಿದ ಅವನಲ್ಲದೆ
ಮತ್ತಿನ್ಯಾರೋ, ಮನುಜ?

___________________

ನೆರಳು
ರವಿ ಗೋಪಾಲರಾವ್

ಮುಂದೆ ಹಿಂದೆ ಅಕ್ಕಪಕ್ಕದಲ್ಲಿದ್ದರೇನಂತೆ
ಅಂಟಿಕೊಂಡಿರುವೆ ನನ್ನ ಕಾಲ ಬಳಿಯಲೆ
ಕಾಲನ ಕರೆ ಬಂದಾಗಲೇ ಅಲ್ಲವೇ ನೀ ನನ್ನ ನಿರ್ಗಮಿಸುವೆ?

ಕಣ್ಣು ಮೂಗು ಹೊಕ್ಕಳಿಲ್ಲದ ಕುರೂಪಿ ನೀ
ರತಿ ಕ್ರೀಡೆಯಲೂ ಜೊತೆಗಿರಲು ಬಯಸುವ ವಿಕೃತ ಕಾಮಿ
ಹಣತೆ ದೀಪದಲಿ ಭಯ ಹುಟ್ಟಿಸಲೆಂದೇ ನೀ ಹುಟ್ಟಿರುವೆ
ಎಲುಬಿಲ್ಲದ ಹೇಡಿ ರವಿಕಿರಣದಲಿ ನಿನ್ನ ಕೇಳುವರು ಯಾರೋ?

ನನ್ನ ಸುಖದಲಿ ನೀ ಪಾಲ್ಗೊಳ್ಳಲಾರೆ
ದುಃಖ ಸ್ವಾಂತನಗೊಳಿಸಲಾರೆ
ಹೃದಯವೇ ಇಲ್ಲದ ನಿರ್ದಯಿ
ನೀ ನನ್ನ ಜೀವ ಸಂಗಾತಿ ಹೇಗಾದೆಯೊ ನಾ ಕಾಣೆ

ನಾ ಮಾಡಿದ ಪಾಪ ಪುಣ್ಯಗಳ ಕಡತವನೆ
ನೀ ಕಾಲನ ಮುಂದಿರಿಸುವೆಯಂತೆ
ನರಕ ಸ್ವರ್ಗದ ದಾರಿ ತೋರಲು
ನೀ ನಂಬಿಕಸ್ಥನೋ ಯಮನ ಗೂಢಾಚಾರನೋ ನಾ ಅರಿಯೆ
ಬದುಕಿದ್ದಾಗಲೇ ನನಗೇಕೋ ದಾರಿ ತೋರದಾದೆ ನೀ ಚಿತ್ರಗುಪ್ತ?

ನಿನ್ನ ಗುಣ ಹೊಗಳಿದರೇನು ತೆಗಳಿದರೇನು
ನಾ ಕುಬ್ಜನಾದರೇನು ರಾವಣನಾದರೇನು ನೀ ನೀನಾದೆ
ಅರಿವಿಲ್ಲದೆ ನನ್ನ ಅಹಂಕಾರದ ಸಂಕೇತ
ಅಹಂಕಾರದಂತೆ ನಾ ನಿನ್ನ ಮೆಟ್ಟಲಾರೆ ತುಳಿಯಲಾರೆ
ಪರಿತ್ಯಜಿಸಲಾರೆ

ಮನುಕುಲದ ಪ್ರತೀಕವೇ ನೀನೇಕಾದೆ ಅವಿನಾಶಿ ನೆರಳೆ?







ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ