“ಗೋಧಿ ಬಣ್ಣ ಸಾಧಾರಣ ಮೈಕಟ್ಟು” ಇತ್ತೀಚಿನ ಕನ್ನಡ ಚಿತ್ರ, ಬಿಡುಗಡೆಯಾಗಿ ಇನ್ನು ಕೆಲವೇ ದಿನಗಳಾಗಿವೆ. ಥಿಯೇಟರ್ನಲ್ಲಿ ಕುಳಿತು ನೋಡಿ ಆನಂದಿಸಿದೆ. ಆದರೆ ಆ ಚಿತ್ರದಲ್ಲಿ ಬರುವ “ಅಲೆ ಮೂಡದೇ” ಎಂಬ ಹಾಡನ್ನು ನಾನು ಈಗಾಗಲೇ ೧೦-೧೫ ಬಾರಿ ಕೇಳಿದ್ದಲ್ಲದೆ ಗುನುಗಿ ಕೊಳ್ಳಲೂ ಶುರು ಮಾಡಿದ್ದೇನೆ. ಹೊಸ ರೀತಿಯ ಸುಂದರ ಕವಿತೆಗೆ ಆಕರ್ಷಿತನಾಗಿದ್ದೇನೆ. ಸಾಮನ್ಯವಾಗಿ ಭಾವಗೀತೆಗಳಲ್ಲಿ ಮೂಡಿಬರುವ ಸ್ಪಂದನ ಈ ಹಾಡಿನಲ್ಲಿ ನಾವು ಕಾಣ ಬಹುದು.
ಅಲೆ ಮೂಡದೇ ನಿಂತಿದೆ ಸಾಗರ
ತುಸು ದೂರವೇ ನಿಂತನು ಚಂದಿರ
ಧ್ವನಿ ಬಾರದೇ ನಿಂತಿದೆ ಆ ಸ್ವರ
ಮಾತಾಡಲು ಮೂಡಿದೆ ಅಂತರ
ನನಗೂ ಕನ್ನಡದಲ್ಲಿ ಕವನ ಬರೆಯುವ ಹವ್ಯಾಸ. ಆದರೆ ಸುದರ್ಶನ್ ಡಿ. ಸಿ. ಎಂಬುವರು ಬರೆದ ಈ ಕವಿತೆಯನ್ನು ಕೇಳಿದ ಮೇಲೆ ನಾನು ಕವನ ಬರೆಯುವುದನ್ನು ನಿಲ್ಲಿಸಿಬಿಡಬಾರದೇಕೆ ಎಂಬ ಸಂಶಯ ಹುಟ್ಟಿತು. ಆದರೆ ಸ್ವಲ್ಪ ದಿನಗಳ ನಂತರ ಮತ್ತೆ ಬರೆಯಲು ಹೊಸ ತರಹದ ಸ್ಫೂರ್ತಿ, ಉತ್ಸಾಹ ತರಿಸಿದೆ ಸುದರ್ಶನರ ಈ ಕವಿತೆ. ಪ್ರತಿ ಸಾಲಿನಲ್ಲಿ ಕೊನೆಗೊಳ್ಳುವ ಸಾಗರ, ಚಂದಿರ, ಸ್ವರ, ಅಂತರ ಎನ್ನುವ ಪ್ರಾಸಬಧ್ಧ ಪದಗಳು ಹಳೆ ಹಾಡೊಂದನ್ನು -- ನೀರಿನಲ್ಲಿ ಅಲೆಯ ಉಂಗುರ, ಕೆನ್ನೆ ಮೇಲೆ ಪ್ರೇಮದ ಉಂಗುರ-- ನೆನಪಿಸಿತು. ಅಂದರೆ ಅರವತ್ತರ ಶತಕದ ಕನ್ನಡದ ಹಾಡುಗಳಂತೆ ಈ ಹಾಡು ನಮ್ಮ ಮನಸ್ಸಿನಲ್ಲಿ ಉಳಿಯಬಹುದೇ?
“ಗೋಧಿ ಬಣ್ಣ ಸಾಧಾರಣ ಮೈಕಟ್ಟು” ಚಿತ್ರದಲ್ಲಿ ಈ ಹಾಡಿನ ಚಿತ್ರೀಕರಣ ಅಷ್ಟು ಪ್ರಭಾವಶಾಲಿಯಾಗಿಲ್ಲ. ಅದೇ ಕಾರಣ ಈ ಹಾಡಿನ ವಿಡಿಯೋ ಯೂ ಟ್ಯೂಬಿನಲ್ಲಿ ನನಗೆ ಕಂಡರೂ ವಿಡಿಯೋ ಬದಲು ಧ್ವನಿ ಮುದ್ರಿಕೆಯನ್ನು ಮಾತ್ರ ಕೇಳಿಸಿಕೊಳ್ಳುತ್ತಿದ್ದೇನೆ. ಯಾವ ಚಿತ್ತ ಚಾಂಚಲ್ಯವಿಲ್ಲದೆ ಧ್ವನಿ ಮುದ್ರಿಕೆಯನ್ನು ಮಾತ್ರ ಕೇಳಿದರೆ ಈ ಕವಿತೆಯಲ್ಲಿ ಹುದುಗಿರುವ ಭಾವನೆ ಸ್ಪಂದಿಸಲು ಸಾಧ್ಯ ಅಂತ ನನ್ನ ಅನಿಸಿಕೆ. ನೀವು ಕಿವಿಗೊಟ್ಟು ಆಲಿಸಿ ನಿಮ್ಮ ಅನಿಸಿಕೆಗಳನ್ನು ಖಂಡಿತ ತಿಳಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ