ಹಳ್ಳಿ ನಾಟಕ
ತುಂಬಾ ವರ್ಷಗಳ ಹಿಂದಿನ ಬಾಲ್ಯದ ನೆನಪು. ಆಗಿನ್ನೂ ನನಗೆ ಐದೋ ಆರೋ ವರ್ಷಗಳಿರಬಹುದು. ಅದೊಂದು ಪುಟ್ಟ ಹಳ್ಳಿ. ಕತ್ತಲಿನ ಅದೊಂದು ರಾತ್ರಿ ಅದೇಕೋ ಆ ಪುಟ್ಟ ಹಳ್ಳಿಯಲ್ಲಿ ಸಡಗರವೋ ಸಡಗರ. ಗುಬ್ಬಿ ವೀರಣ್ಣನವರ ನಾಟಕದ ಕಂಪನಿ ‘ಲವ ಕುಶ’ ಪ್ರದರ್ಶಿಸಲು ಬಂದಿದೆ ಅಂತ ಚಿಕ್ಕವನಾದ ನನಗೆ ಅದರ ಪರಿವೆಯೇ ಇಲ್ಲ ಆದರೆ ಇಡೀ ಸುತ್ತ ಮುತ್ತಲಿನ ಹಳ್ಳಿಯವರಿಗೆಲ್ಲ ಎಲ್ಲಿಲ್ಲದ ಸಡಗರ. ಎತ್ತಿನ ಗಾಡಿಯಲ್ಲಿ ಹೋದದ್ದು ನೆನೆಪುಂಟು. ಎಲ್ಲಿಂದ ಎಲ್ಲಿಗೆ, ಎಷ್ಟು ಸಮಯದಲ್ಲಿ ಅಂತ ಏನೂ ನೆನಪಿಲ್ಲ. ದಾರಿಯಲ್ಲಿ ಯಾವುದೋ ಜಾತ್ರೆ ಇರಬೇಕು ಅಷ್ಪಷ್ಟ ನೆನೆಪು. ಯಾವುದೋ ಸಣ್ಣ ಗುಡುಸಿಲಿನ ಹೋಟೆಲ್ ಬಳಿ ಇಡ್ಲಿ ಚಟ್ನಿ ತಿಂದ ನೆನಪು. ಜೊತೆಗಿದ್ದವರು ಯಾರು ಅಂತಲೂ ಎಷ್ಟು ನೆನಪಿಸಿಕೊಂಡರು ಅವರ ಮುಖ ಚಹರೆ ಪರಿಚಯ ಇತ್ತೆ ವಿನಃ ಅವರು ನನಗೆ ಹೇಗೆ ಸಂಭಂದ ಅಂತ ಈಗಲೂ ನೆನಪಿಲ್ಲ. ಇನ್ನೆಲ್ಲ ಹೊತ್ತು ನಿದ್ದೆ ಮಾಡಿರಬೇಕು. ಯಾವುದು ನೆನಪಿಲ್ಲ. ಆದರೆ ನೆನಪಿನಲ್ಲಿ ಉಳಿದಿರುವುದು ಯಾರೋ ಕೂಗಿ ‘ಎಚ್ಚರ ಮಾಡಿಕೊಳ್ಳೋ ಮಗ. ಲವ ಕುಶ ಬಂದಾರೆ, ನೋಡೋ’ ಅಂತ ಚಾಪೆಯಮೇಲೆ ಮಲಗಿದ್ದ ನನ್ನನ್ನು ಎಬ್ಬಿಸಿದಾಗ. ಉಜ್ಜಿ ಕಣ್ತೆರೆದಾಗ ಕಂಡದ್ದು ಉಜ್ವಲ ರಂಗ ಮಂಚದ ಮೇಲೆ ದೊಡ್ಡ ಅರಮನೆಯ ಆಸ್ಥಾನ, ಶ್ರೀ ರಾಮ ಎಲ್ಲರ ಜೊತೆ ಕುಳಿತಿದ್ದಾನೆ, ಲವ ಕುಶ ಮೊದಲ ಬಾರಿಗೆ ಶ್ರೀ ರಾಮನ ಕಥೆಯನ್ನು ಆಸ್ಥಾನದಲ್ಲಿರುವರೆಲ್ಲ ಮೆಚ್ಚುವಂತೆ ಹಾಡುತ್ತಿದ್ದಾರೆ. ಕಣ್ಣಿಗೆ ಕಟ್ಟಿದಂತ ದೃಶ್ಯ. ಜೊತೆಗೆ ಜೋರಾಗಿ ಕೇಳಿ ಬರುತ್ತಿದ್ದ ಸಂಗೀತ. ಅಷ್ಟೇ ನೆನಪು ಯಾಕೆಂದರೆ ಕೆಲವು ಕ್ಷಣಗಳ ನಂತರ ಇದ್ದಕಿದ್ದಂತೆ ಕತ್ತಲಾವರಿಸಿತ್ತು. ನೆರದಿದ್ದವರೆಲ್ಲರೂ ‘ಇದ ಘಳಿಗೆಯಾಗ ಕರೆಂಟ್ ಹೋಗ್ಬೇಕಿತ್ತ’ ಅಂತ ಬೈಯುತ್ತಿರುವುದು ಕೇಳಿಸಿಕೊಂಡು ಆಗ ಅರ್ಥವಾಗದೆ ಹಾಗೆ ಚಾಪೆಯ ಮೇಲೆ ನಿದ್ದೆ ಮಾಡಿದ್ದೆ. ಎಚ್ಚರವಾದದ್ದು ಮಾರನೆಯ ದಿನವೇ. ಹಳ್ಳಿ ನಾಟಕ ನೋಡುವ ಭಾಗ್ಯ ಮತ್ತೆ ಬರಲೇಇಲ್ಲ. ಎಲ್ಲ ಮರೆತು ಆ ಲವ ಕುಶ ಸನ್ನಿವೇಶ ನನ್ನ ನಿಜ ಜೀವನದ ನೆನಪೋ ಅಷ್ಪಷ್ಟ ಕಲ್ಪನೆಯೋ ಓದಿದ ನೆನಪೋ ಯಾವುದೂ ತಿಳಿಯದೆ ಕಾಲ ಉರುಳಿ ಹೋಗಿತ್ತು. ಕಾರಣ ನಮ್ಮ ತಂದೆಗೆ ಬೆಂಗಳೂರಿಗೆ ವರ್ಗವಾಗಿ ಮತ್ತೆ ಹಳ್ಳಿಯಲ್ಲಿ ವಾಸಿಸುವ ಅವಕಾಶವೇ ಸಿಗಲಿಲ್ಲ.
ಸ್ವಲ್ಪ fast forward ಮಾಡಿ ಹೇಳಬೇಕೆಂದರೆ ನನಗಾಗಲೇ ೩೫ ವರ್ಷ ದಾಟಿತ್ತು. ಬೆಂಗಳೂರಿನಿಂದ ದಿಲ್ಲಿಗೆ, ದಿಲ್ಲಿಯಿಂದ ಅಮೆರಿಕೆಗೆ ಬಂದು ಹತ್ತು ವರ್ಷಗಳೇ ಮೀರಿದ್ದರು ಆ ಬಾಲ್ಯದ ನೆನಪು ಪ್ರತಿನಿತ್ಯವೂ ಕಾಡುತ್ತಿತ್ತೇ ಹೊರತು ಮರೆತು ಬಿಡುವ ಪ್ರಮಯವೇ ಬರಲಿಲ್ಲ. ನಾನು ನೋಡಿದ ಆ ಹಳ್ಳಿ ನಾಟಕದ ತುಣುಕು, ನನ್ನ ಕಲ್ಪನೆಯೋ ಅಲ್ಲವೋ ಎಂಬುದನ್ನು ತಿಳಿಯಲು ಬೆಂಗಳೂರಿಗೆ ರಜೆಗೆ ಹೋದಾಗ ನನ್ನ ಅಮ್ಮನ ಜೊತೆ ಹೀಗೆ ಅದು ಇದು ಮಾತನಾಡುತ್ತ ಕುತೂಹಲ ವ್ಯಕ್ತ ಪಡಿಸಿದ್ದೆ. “ಅಯ್ಯೋ, ಅದೆಷ್ಟು ಜ್ಞಾಪಕ ಶಕ್ತಿಯೋ ನಿನಗೆ. ಆಗ ನಿನಗೆ ಇನ್ನು ಎರಡು ವರ್ಷ ತುಂಬಿರಲಿಲ್ಲ. ಆಗ ನಾವಿದ್ದಿದ್ದು ಚಿಕ್ಕನಾಯಕನ ಹಳ್ಳಿಯಲ್ಲಿ. ನಿಮ್ಮ ತಂದೆ ಸರ್ಕಾರಿ ಡಾಕ್ಟರ್. ಮನೆಯಲ್ಲಿ ತುಂಬಾ ಕೆಲಸಗಾರರು ಇದ್ದರು. ತಿರುಗಾಡೋಕ್ಕೆ ಒಂದು ಜೀಪು ಕೂಡ ಇತ್ತು. ಚಿಕ್ಕನಾಯಕನ ಹಳ್ಳಿ ಹತ್ತಿರ ಇನ್ನೊಂದು ಯಾವುದೋ ಸಣ್ಣ ಹಳ್ಳಿ. ನನಗೆ ಅದರ ಹೆಸರು ನೆನಪು ಬರ್ತಿಲ್ಲ. ಅಲ್ಲಿ ನೀನು ಹೇಳ್ದಂತೆ ಗುಬ್ಬಿ ವೀರಣ್ಣ ನಾಟಕ ಮಂಡಳಿ ಲವ ಕುಶ ನಾಟಕ ತೋರಿಸಲು ಬಂದಿದ್ದರು. ನಾವೆಲ್ಲ ಜೀಪಿನಲ್ಲಿ ಹೋಗುವುದು ಅಂತ ಆಗಿತ್ತು. ಅದ್ಯಾಕೋ ಅವತ್ತು ಜೀಪು ಕೆಟ್ಟುಹೋಗಿ ನಿಮ್ಮ ತಂದೆ ನಾನು ಹೊರಡಕ್ಕೆ ಆಗಲಿಲ್ಲ. ನೀನು ಹಠಮಾರಿ ಹುಡುಗ. ನಮ್ಮ ಮನೆ ಕೆಲಸಗಾರ ಒಬ್ಬ ಇದ್ದ. ಅವನ ಸಂಸಾರ ನಾಟಕ ನೋಡಿಲಿಕ್ಕೆ ಹೊರಟಿದ್ದರು ಅವರದೇ ಎತ್ತಿನ ಗಾಡಿಯಲ್ಲಿ. ಸರಿ, ನಿನ್ನನ್ನು ಅವರ ಜೊತೆ ಕಳಿಸಿದ್ವಿ. ನೀನು ಹೇಳಿದ ಜಾತ್ರೆ, ನಿನ್ನ ಹಳ್ಳಿ ನಾಟಕದ ಅನುಭವ ಕಲ್ಪನೆ ಅಲ್ಲ ಕಣೋ. ಇಲ್ಲದಿದ್ದರೆ ನಿನಗೆ ಎತ್ತಿನ ಗಾಡಿಯಲ್ಲಿ ಸವಾರಿ ಮಾಡುವುದಕ್ಕೆ ಅವಕಾಶ ಸಿಗುತ್ತಿತ್ತೇನೋ ಈ ಬೆಂಗಳೂರಿನಲ್ಲಿ?’ ಅಂತ ಹೇಳಿ ನನ್ನ ಸಂಶಯ ನಿವಾರಣೆ ಮಾಡಿದ್ದರು. ಅಲ್ಲೇ ಕುಳಿತು ಕೇಳುತ್ತಿದ್ದ ಹಿರಿಯರೊಬ್ಬರು ‘ಹೆತ್ತ ತಾಯಿಗೆ ನಿನ್ನ ಹಿಂದಿನ ಜನ್ಮದ ಕಥೆಯು ನೆಪ್ಪಿರ್ತದೆ ನೋಡು ಮಗ’ ಅಂತ ಹೇಳಿದ್ದು ಇನ್ನು ಕಿವಿಯಲ್ಲಿ ಗುನುಗುಟ್ಟುತ್ತಿದೆ.
ಮತ್ತೊಮ್ಮೆ ಸ್ವಲ್ಪ fast forward ಮಾಡಿ ಹೇಳಬೇಕೆಂದರೆ ಈ ಮಾತು ಕತೆ ನೆಡದು ಆಗಲೇ ಹದಿನೈದು ವರ್ಷ ಕಳೆದಿರಬಹುದು. ದಶಕಗಳ ಹಿಂದಿನ ಬಾಲ್ಯದ ಘಟನೆ ತಾನಾಗಿಯೇ ಮನಸ್ಸಿನ ಹಳ್ಳ ದಿಣ್ಣೆಗಳಲ್ಲಿ ಕರಗಿ ಸಂಪೂರ್ಣ ಮರೆಯಾಗಿತ್ತು. ಈ ವರ್ಷ ಡಿಸೆಂಬರ್ ತಿಂಗಳಿನ ಕ್ರಿಸ್ಮಸ್ ಸಮಯದಲ್ಲಿ ಸ್ವಲ್ಪ ಬಿಡುವು ಸಿಕ್ಕಿತ್ತು. ಹೊರಗೆಲ್ಲ ಚಳಿ ಜೊತೆಗೆ ಮಳೆ ಜಿನುಗಿಕೊಂಡ ದಿನಗಳು. ಮನೆಯಲ್ಲೇ ಬೆಚ್ಚಗೆ ಕುಳಿತು ಟಿವಿ ಮತ್ತು ಇಂಟರ್ನೆಟ್ಟಿನ ಯೂಟ್ಯೂಬ್ ನೋಡಿ ಕಾಲ ಕಳಿಯುತ್ತಿದ್ದೆ. “ಕನ್ನಡ ಡ್ರಾಮ” ಎಂದು ಯೂಟ್ಯೂಬಿನಲ್ಲಿ ಶೋಧನೆ ಮಾಡಿದಾಗ ಸಿಕ್ಕ ಒಂದು ವಿಡಿಯೋ ಕ್ಲಿಪ್ ನನ್ನ ಮನಸೆಳೆಯಿತು. ಇಂಗ್ಲಿಷ್ನಲ್ಲೇ ಇದ್ದ ಶೀರ್ಷಿಕೆ “kurukshetra Nataka held at at Thirthapura village, CN halli Taluk, Tumkur,” ಓದಿ, ತುಂಬಾ ಹಳೇ ಕಾಲದ ಫೋಟೋಗಳನ್ನು ಅಥವಾ ಗ್ರಾಮೀಣ ಹಾಡುಗಳನ್ನು ಯಾರೋ ಪೋಸ್ಟ್ ಮಾಡಿರಬಹುದು ಎಂದು ಕುತೂಹಲ ಮೂಡಿತು. CN halli Taluk ಅಂದರೆ ಏನಿರಬಹುದೆಂದು ಬೇಗ ಹೊಳೆಯಲಿಲ್ಲ. ಪ್ರಪಂಚದಾದ್ಯಂತ ಕೇವಲ ೨೭ ಬಾರಿ ಈ ವಿಡಿಯೋ ನೋಡಿದ್ದಾರೆ ಅಂತ ಮಾಹಿತಿ ನೋಡಿ ನಿರಾಸೆ ಆದರೂ “Published on Mar 12, 2015 Sri Durgaparameshwari Krupa poshitha Mandali played Kurukshetra nataka at Thirthapura village, CN halli Taluk, Tumkur. Date:27/2/2015” ಎನ್ನುವ ವಿಷಯ ಸೂಚಿ ಓದಿದ ಮೇಲೆ ಕ್ಲಿಕ್ ಮಾಡಲೋ ಬೇಡವೊ ಎನ್ನುವ ಸಂದೇಹ ಬೇರೆ ಹುಟ್ಟಿತು. ಕೇವಲ ೩೦ ನಿಮಿಷದ ವಿಡಿಯೋ ಆದ್ದರಿಂದ ನೋಡೇ ಬಿಡೋಣ ಅಂತ ಕ್ಲಿಕ್ ಮಾಡಿಯೇ ಬಿಟ್ಟೆ! ಬನ್ನಿ ನೀವು ಸಹ ನನ್ನ ಜೊತೆ ಕುಳಿತು ಕುರುಕ್ಷೇತ್ರ ನಾಟಕ ನೋಡಿರಿ.
ಮೊದಲ ಮೂರು ನಿಮಿಷ ನೋಡುತ್ತಾ ಇದೇನಪ್ಪ ಇದು ಕನ್ನಡ ಪಿಕ್ಚರ್ನಲ್ಲಿ ಇರುವಂತೆ ರಮಣೀಯ ದೃಷ್ಯದ ಹಿನ್ನಲೆಯಲ್ಲಿ ಶೀರ್ಷಿಕೆಗಳು ತುಂಬಾ ವರ್ಣರಂಜಿತವಾಗಿ ಕಾಣಿಸುತ್ತಿದೆಯಲ್ಲ, ಇದೇನು ಹಳ್ಳಿ ನಾಟಕವೋ ಕುರುಕ್ಷೇತ್ರ ಪಿಚ್ಕ್ಚರೋ ಅಂತ ಗುಮಾನಿ ಶುರುವಾಯಿತು. ಆದರೆ ತ್ವರಿತಗತಿಯಲ್ಲಿ ಸಾಗುತ್ತಿದ್ದ ಶೀರ್ಷಿಕೆಗಳ ಮಧ್ಯೆ ಕಾಣುತ್ತಿದ್ದ “ನಟಭಯಂಕರ ಭೀಮ,” ಛಲಂದಕ ಮಲ್ಲ ೧ನೇ ದುರ್ಯೋದನ,” ಸೇಡಿನ ಸರ್ಪ ಶಕುನಿ,” ಮತ್ತಿತರ ಹೆಸರುಗಳು ತಾವಾಗಿಯೇ ಮಂದಹಾಸ ತರಿಸಿದವು.
ಈ ದೃಶ್ಯಗಳೆಲ್ಲವೂ ತೆರೆಮರೆಯಲ್ಲಿ ಕಂಡದ್ದು. ಆದರೆ ತೆರೆಯ ಮುಂದಾಗುತ್ತಿದ್ದ ಪ್ರಸಂಗಗಳು ನನ್ನನ್ನು ನೆನಪಿನ ದೋಣಿಯಲ್ಲಿ ದೂರಕ್ಕೆ ಕರೆದೊಯ್ದವು. ಪ್ರೇಕ್ಷಕರೆಲ್ಲರೂ ಚಾಪೆ ಹಾಸಿ ಹಾಯಾಗಿ ಮಾತನಾಡುತ್ತ ಕುಳಿತಿರುವ ದೃಶ್ಯ, ಹಾಗೆ ಚಾಪೆಯ ಮೇಲೆ ನಿದ್ರೆಯಲ್ಲಿ ವಿಶ್ರಮಿಸುತ್ತಿರುವ ಹಳ್ಳಿಗರು, ಬೀಡಿ ಸೇದುತ್ತ ಸಮಾಲೋಚನೆಯಲ್ಲಿ ಮುಳುಗಿರುವ ಹಳ್ಳಿ ಪಟೇಲರು, ಕಾಂಪೌನ್ಡ ಮೇಲೆ ಕುಳಿತ ಪ್ರತಿಷ್ಠೆಯ ಎಳೆಯರು, ಹೀಗೆ ಎಲ್ಲ ದೃಶ್ಯಗಳ ಮಧ್ಯದಲ್ಲಿ ಗಮನಿಸಿದಾಗ ಒಬ್ಬಾಕೆಯ ಪಕ್ಕದಲ್ಲಿ ಕುಳಿತಿರುವ ಒಬ್ಬ ಮುಗ್ಧ ಬಾಲಕನ ಕಣ್ಣಲ್ಲಿರುವ ಪ್ರತೀಕ್ಷೆ ನನ್ನ ಗಮನ ಸೆಳೆಯಿತು. ಅರೆ, ನನ್ನ ಸ್ಮೃತಿಯಲ್ಲಿ ಅಳಿಸದೇ ಉಳಿದ ದೃಶ್ಯವನ್ನು ಪುನರಾವರ್ತನೆ ಮಾಡಿದ ಈ ಪ್ರಸಂಗವನ್ನು ನೋಡಿ ನಾನು ದಿಗ್ಬ್ರಾಂತನಾದೆ. ಆ ಹುಡುಗ ನಾನೇ, ಪಕ್ಕದಲ್ಲಿ ಕುಳಿತಿರುವ ಅವ್ವೆ ನನ್ನನ್ನು ನೋಡಿಕೊಳ್ಳುತ್ತಿದ್ದ ದಾದಿಯೇ ಇರಬಹುದೆಂಬ ಅಸಹಜ ಸತ್ಯ ನನ್ನ ಮನದಲ್ಲಿ ಮೂಡಿತು. ನನ್ನ ಬಾಲ್ಯದ ಕಲ್ಪನೆಯ ಸತ್ಯತೆಯನ್ನು ಐದು ದಶಕಗಳ ನಂತರ ಸೆರೆಹಿಡಿದ ಈ ದೃಶ್ಯ ನಾನು ವರ್ಣಿಸಲು ಸಾಧ್ಯವೇ?
ಕಾಲ
ವೇ ಹೆಪ್ಪುಗಟ್ಟಿ ನಿಂತಂತೆ ಅನುಭವ. ಆ ದೃಶ್ಯದಲ್ಲೇ ತನ್ಮಯನಾದ ನನ್ನನ್ನು ಮತ್ತೆ ವಾಸ್ತವಕ್ಕೆ ತಂದಿದ್ದು ಹಾರ್ಮೋನಿಯಂ ವಾದಕರು, ಕ್ಲಾರಿಯೋನೆಟ್ ವಾದಕರು, ಪಿಟೀಲು ವಾದಕರು ಎಲ್ಲರು ಶ್ರುತಿ ಹಿಡಿದು ಅಭ್ಯಾಸ ಮಾಡುತ್ತಿದ್ದಾಗ, “ಗೋವಿಂದಾ, ಜೈ, ಜೈ,” ಎಂದು ನಾಟಕದ ಮೊದಲನೇ ಸೀನ್ ಶುರುವಾದಾಗ. ವರ್ಣರಂಜಿತ ಸೀನ್. ಇದನ್ನು ಸುಂದರವಾಗಿ ಸಜ್ಜು ಮಾಡಿದವರು “ತಿರುಮಲ ರಂಗ ವಿಲಾಸ ಡ್ರಾಮ ಸೀನ್ಸ್ ಅಂಡ್ ಸಪ್ಪ್ಲೆಯರ್ಸ್, ಕಿತ್ತಗನಹಳ್ಳಿ, ಗೂಳೂರು ಪ್ರಾಂತ್ಯ” ಹಿನ್ನಲೆಯಲ್ಲಿ ಕಾಣುತ್ತಿತ್ತು. ಕೈಮುಗಿದು ನಿಂತ ಹಳ್ಳಿ ಮುಗ್ಧಬಾಲೆಯರಿಂದ ಪ್ರಾರ್ಥನೆಗೆ live orchestra. ಪ್ರಾಥನೆಯಲ್ಲಿ ಮುಳುಗಿದ್ದ ಮಗಳ ಧಾವಣಿಯ ಪಿನ್ ಹಾಕಲು ಮರೆತ ತಂದೆ ಮಧ್ಯದಲ್ಲೇ ಸ್ಟೇಜ್ ಮೇಲೆ ಬಂದದ್ದು ನೀವು ಗಮನಿಸಲೇ ಬೇಕು. ಮಗಳ ಕೋಪ
ವನ್ನು ನೀವು ಮಿಸ್ ಮಾಡಿಕೊಂಡಿದ್ದರೆ ಮತ್ತೆ ನೋಡಿ ಈ ಫೋಟೋನಲ್ಲಿ. ನಂತರ ಮತ್ತೊಬ್ಬ ನಿಷ್ಕಪಟ ವ್ಯಕ್ತಿ ಸ್ಟೇಜ್ ಮೇಲೆ ಹಾಡಿನ ಮಧ್ಯದಲ್ಲಿ ಬಂದು ಒಂದು ಹಾರವನ್ನು ಹಾಕಿದ್ದಂತೂ ಹಳ್ಳಿ ನಾಟಕಕ್ಕೆ ಕಳೆ ಕೊಟ್ಟಂತಿತ್ತು. ಮುಗಿದ ಕೈ ಮತ್ತೆ ಹಾರದ ಒಳಗಿಂದ ಹೊರತರಲು ಆ ಹುಡುಗಿ ತೋರಿದ ಜಾಣ್ಮೆ ಮೆಚ್ಚುವಂತದ್ದೇ. ಹತ್ತು ಬಾರಿ ತಲೆ ತಗ್ಗಿಸಿ ಮತ್ತೆ ಮತ್ತೆ ಗಾನವೃಂದಕ್ಕೆ ಸರಿದೂಗುವಂತೆ ಪ್ರಾರ್ಥನೆ ಜೊತೆಗೂಡಿಸಿದ ಈ ಬಾ
ಮೂವತ್ತು ನಿಮಿಷದ ಈ ವಿಡಿಯೋ ಬಹಳ ಬೇಗನೆ ಮುಗಿದುಹೋಯಿತಲ್ಲ ಎಂದು ವ್ಯಥೆಪಡುತ್ತಿದ್ದೆ ನಾನು. ಮತ್ತೆಂದಾದರೂ ಈ ನಾಟಕದ ಮಿಕ್ಕ ವಿಡಿಯೋ ಸಿಗಬಹುದೆಂಬ ಭರವಸೆ ಹಾಗೆ ಉಳಿದಿದೆ.
ಮತ್ತಷ್ಟು ಸಂಶೋಧನೆ ಮಾಡಿದ ಮೇಲೆ ಗೊತ್ತಾದದ್ದು, CN halli ಅಂದರೆ ಚಿಕ್ಕನಾಯಕನಹಳ್ಳಿ ಎಂದು! ಅಮ್ಮ ಹೇಳಿದ್ದು ಜ್ಞಾಪಕ ಬಂತು. “ಚಿಕ್ಕನಾಯಕನ ಹಳ್ಳಿ ಹತ್ತಿರ ಇನ್ನೊಂದು ಯಾವುದೋ ಸಣ್ಣ ಹಳ್ಳಿ. ನನಗೆ ಅದರ ಹೆಸರು ನೆನಪು ಬರ್ತಿಲ್ಲ.” ಆ ಹಳ್ಳಿಯೇ ಈ ನಾಟಕ ನಡೆದ ತೀರ್ಥಪುರ ಅಂತ ತಿಳಿದು ಮತ್ತಷ್ಟು ಸಂತೋಷ ಪಟ್ಟೆ. ಗೂಗಲ್ ಮ್ಯಾಪ್ಸ್ನಲ್ಲಿ ಈ ಹಳ್ಳಿಯ ನಕ್ಷೆ ಹುಡುಕಿದೆ. ತೀರ್ಥಪುರ ಹಳ್ಳಿಯ ನಕ್ಷೆ ನನ್ನ ಬಾಲ್ಯದ ಘಟನೆಯೊಂದರ ಸುಂದರ ತಾಣ, ಮುಗ್ಧ ಜನರ ಬೀಡು, ಅಸ್ಪಷ್ಟ ನೆನಪನ್ನು ನಿಜವಾಗಿಸಿದ ಈ ಹಳ್ಳಿ ನಾಟಕ ಸಾಬೀತು ಪಡಿಸಿದ್ದಿಷ್ಟೇ: Somethings Never Change! ಬದಲಾಗದಿದ್ದರೇ ಇನ್ನೂ ಚೆಂದ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ