ಭಾನುವಾರ, ಸೆಪ್ಟೆಂಬರ್ 25, 2016

ಕನ್ನಡಿ.

ಕನ್ನಡಿ.

ಇಣುಕಿ ನೋಡಿದವನ
ಬಡತನ ಸಿರಿತನ ಕೋಪ ತಾಪ ತಾಳ್ಮೆ
ಮರೆಮಾಚದೇಕೋ ಅಹಂಕಾರವನೆ   
ಆ ಮಾಯಕನ್ನಡಿ?

ಇದ್ದದ್ದನ್ನು ಇದ್ದಂತೆ
ಕಂಡದ್ದನ್ನು ಕಂಡಂತೆ
ಪ್ರತಿಬಿಂಬಿಸಿತೇಕೋ ಅಂತರಂಗವನೆ  
ಆ ಸೋಜಿಗದ ಕನ್ನಡಿ?

ಯೌವನದ  ಮೈಕಾಂತಿ
ಮತ್ತೆ ನೋಡುವ ಆಸೆ ತಣಿಸಿ  
ಸುಕ್ಕುಗಟ್ಟಿದ ಬಾಹ್ಯದಲಿ ಸಾರಿತೇಕೋ ಅಂತ್ಯವನೆ
ಆ ನಿಷ್ಕರುಣ ಕನ್ನಡಿ?

ಹಿಂಬದಿಯಲಿ ಈಕ್ಷಿಸಿದವನ
ನ್ಯೂನತೆಯನೆ ಪರಿಗಣಿಸಿ   
ಸಾರ್ಥಕ ಜೀವನದ ಕೈಪಿಡಿ ಆಯಿತೇಕೋ  
ಆ ಅರ್ಥಗರ್ಭಿತ ಕನ್ನಡಿ?

ಕಣ್ಗಳಲಿ ಕಾಡಿಗೆಯನಿಡುವವನ
ಕಣ್ಣಲ್ಲಿ ಕಣ್ಣಿಟ್ಟು
ಪ್ರಶ್ನಿಸಿತೇಕೋ ಅಂತರಾಳದ ತಳಹದಿಯನೆ
ಆ ಕುರುಡು ಕನ್ನಡಿ?

ಜಗದ ಹಿತ ಅಹಿತವನೆಣಿಸದೆ
ಮೂಕ ಧ್ವನಿಯಲಿ
ನುಡಿಯಿತೇಕೋ ಸತ್ಯವನೆ
ಆ ನಿಷ್ಠುರ ಕನ್ನಡಿ?

ಕೋಪದಲಿ ನೀ ಒಡೆದ
ಕನ್ನಡಿ ಚೂರಾದರೂ  
ಸತ್ಯ ಚೂರಾಗದೇಕೋ ಮನುಜ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ