ಮಂಗಳವಾರ, ಡಿಸೆಂಬರ್ 27, 2016

ಗಾಂಧಿ ವಿರುದ್ಧ ಗಾಂಧಿ




ಗಾಂಧಿ ವಿರುದ್ಧ ಗಾಂಧಿ

ಕ್ರಿಸ್ಮಸ್ ರಜೆದಿನಗಳಲ್ಲಿ ಕಾಲ ಕಳೆಯಲು ಯೂ ಟ್ಯೂಬ್ ನಲ್ಲಿ ಯಾವುದಾದರು ಕನ್ನಡ ನಾಟಕ ನೋಡುವ ಅಭ್ಯಾಸವಾಗಿ ಬಿಟ್ಟಿದೆ.  ನೆನ್ನೆ ಹಾಗೆ ಹುಡುಕುತ್ತಿರುವಾಗ ಆಕಸ್ಮಿಕವಾಗಿ ಸಿಕ್ಕ ವಿಡಿಯೋ “ಸಂಚಿ ಫೌಂಡೇಶನ್” ನಿರೂಪಿತ ಕನ್ನಡ ನಾಟಕ “ಗಾಂಧಿ ವಿರುದ್ಧ ಗಾಂಧಿ.”  ಹಲವು ವರ್ಷಗಳ ಹಿಂದೆ  ಇದರ ಬಗ್ಗೆ ಎಲ್ಲೋ ಓದಿದ ನೆನಪು ಸ್ಮೃತಿಪಟಲದಲ್ಲಿ ಉಳಿದಿತ್ತು.  ಗೂಗಲ್ಲಿನ “ಗುಡ್ ರೀಡ್ಸ್” ಅನ್ನುವ ಒಂದು ವೆಬ್ ಸೈಟ್ನಲ್ಲಿ ಒಂದು ಪುಸ್ತಕ ಕೊಂಡು ಓದುವ ಆಸೆ ಇನ್ನು ಹಾಗೆ ಉಳಿದಿತ್ತು.  ದಿನಕರ್ ಜೋಷಿ ಎನ್ನುವರು ೧೯೮೮ ರಲ್ಲಿ ಬರೆದ ಮೂಲ ಗುಜರಾತಿ ಪುಸ್ತಕ “ಪ್ರಕಾಶನೋ ಪಡ್ಚ್ಯಾಯೋ” ಅಂದರೆ “ಬೆಳಕಿನ ನೆರಳು” ಕಥೆಯನ್ನು ಇಂಗ್ಲಿಷ್ನಲ್ಲಿ “Mahatma VS Gandhi” ಎಂದು ಬಿಡುಗಡೆಯಾದ ಪುಸ್ತಕ.  ನನ್ನ ಗಮನ ಸೆಳೆದ ಪುಸ್ತಕಗಳಲ್ಲಿ ಒಂದು.    ಎಲ್ಲ ಓದುಗರು ತುಂಬಾ ಹೊಗಳಿ ಬರೆದ ವಿಮರ್ಶೆಗಳನ್ನ ಆಗ್ಯಾಗ್ಗೆ ಓದಿ ನಾನೂ ಓದಬೇಕೆಂದು ಗುರುತು ಹಾಕಿಕೊಂಡ ಪುಸ್ತಕವಿದು.   ಆದರೆ ಓದಲು ಸಮಯ ಸಿಕ್ಕಿರಲಿಲ್ಲ. ೨೦೦೭ರಲ್ಲಿ ಇದೆ ಪುಸ್ತಕದ ಆಧಾರಿತವಾದ Gandhi, My Father ಎನ್ನುವ ಫಿಲಂ ಕೂಡ ಬಿಡುಗಡೆಯಾಗಿ ರಾಷ್ಟೀಯ ಮಟ್ಟದಲ್ಲಿ ಹಲವು ಪ್ರಶಸ್ತಿಗಳಿಸಿತ್ತು.  ಅಂಥ ಒಂದು ಪುಸ್ತಕದ ಆಧಾರಿತ ನಾಟಕ ಕನ್ನಡದಲ್ಲಿ ಹೊರಬಂದಿದೆ ಎಂದು ತಿಳಿದು ನನಗೆ ನಾಟಕ ನೋಡಲು ಹೆಚ್ಚು ಹುಮ್ಮಸ್ಸು ಬಂದಿತು.  ಬನ್ನಿ ನೀವೂ ನನ್ನ ಜೊತೆ ಕುಳಿತು ಈ ವಿಡಿಯೋ ನೋಡಿ.
ನಾಟಕ ನೋಡುವ ಮೊದಲು ಈ ನಾಟಕದ ಪೂರ್ವಾಪರ ಸಂದರ್ಭವನ್ನು ಅರಿತಾಗ ಹೆಚ್ಚು ಸ್ಪಂದಿಸಬಹುದು.  ಮಹಾತ್ಮಾ ಗಾಂಧಿಯವರ ಆತ್ಮಚರಿತ್ರೆ ಹಾಗು ಬೇರೆ ಲೇಖಕರು ಅವರ ಜೀವನದ ಬಗ್ಗೆ ಬರೆದ ಪುಸ್ತಕಗಳಲ್ಲಿ ನಾವು ಹೆಚ್ಚು ಕಾಣುವುದು ಗಾಂಧೀಜಿಯವರ ರಾಜಕೀಯ ತತ್ವಚಿಂತನೆ ಮತ್ತು ಅವರು ಅದರಲ್ಲಿ ಗಳಿಸಿದ ಗೆಲುವಿನ ಬಗ್ಗೆ.  ಆದರೆ ಅವರ ವೈಯುಕ್ತಿಕ ಜೀವನದ ಸುಖದುಃಖಗಳ ಬಗ್ಗೆ ವಿಶದವಾಗಿ ವಿಶ್ಲೇಷಿಸಿ ಬರೆದ ಪ್ರಕಟಣೆಗಳು ತೀರಾ ಕಡಿಮೆ. ದಿನಕರ್ ಜೋಶಿಯವರು ಗಾಂಧೀಜಿಯ ವೈಯುಕ್ತಿಕ ಜೀವನದ ಘಟ್ಟಗಳನ್ನು ಆಳವಾಗಿ ಸಂಶೋಧನೆ ಮಾಡಿ ಬರೆದ ಪುಸ್ತಕ ‘ಮಹಾತ್ಮಾ ವಿರುದ್ಧ ಗಾಂಧಿ.’  ಗಾಂಧೀಜಿ ಮತ್ತು ಅವರ ಜೇಷ್ಠ ಪುತ್ರ ಹರಿ ಲಾಲ್ ಗಾಂಧಿಯವರ ಮಧ್ಯದಲ್ಲಿ ಇದ್ದ ವೈಮನಸ್ಯವನ್ನು ಮನ ಮಿಡಿಯುವಂತೆ ಬರೆದಿರುವರು.  ತಂದೆ ಮತ್ತು ಮಗನ ಮಧ್ಯೆ ಬೆಳದು ನಿಂತ ವಿಭಿನ್ನ ನಿರೀಕ್ಷಣೆಗಳು ಜೀವನದ ಘಟ್ಟಗಳಲ್ಲಿ ಹೇಗೆ ಹಂತ ಹಂತವಾಗಿ ತಿರುವು ಕೊಟ್ಟು ದುರಂತದಲ್ಲಿ ಕೊನೆಗೊಳ್ಳುವುದು ಎನ್ನುವುದೇ ಈ ನಾಟಕದ ಕಥಾವಸ್ತು. ತಾಯಿ-ಮಗನ ಮಮತೆ ಮತ್ತು ಅಸಹಾಯಕತೆಯನ್ನು ಮಾರ್ಮಿಕವಾಗಿ ಸೆರೆಹಿಡಿದ  ಹಿನ್ನಲೆಯಲ್ಲಿ ಕಸ್ತೂರಬಾ ಗಾಂಧಿ ಮತ್ತು ಹರಿ ಲಾಲರ ಪಾತ್ರ ಈ ನಾಟಕದ  ಜೀವಾಳ ಎನ್ನಬಹುದು.  

ಕನ್ನಡ ನಾಟಕ ಅಭಿಮಾನಿಗಳಿಗೆ ಈ ನಾಟಕ ಹಿಡಿಸುವುದರಲ್ಲಿ ನನಗೆ ಸಂಶಯ ಇಲ್ಲ.  ನನ್ನ ವ್ಯಾಖ್ಯಾನ ಸಾಕು.  ನೀವೇ ನಾಟಕ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ.   

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ