ಕೂರ್ಮ ಜಯಂತಿ ಮತ್ತು ನಮ್ಮ ಮನೆ ಅಂಗಳದಲ್ಲಿ ಆಗಮಿಸಿದ ಕೂರ್ಮ!
ಅಂದು ಬುಧವಾರ, ೧೦ ಮೇ, ೨೦೧೭. ಸಂಜೆ ಮನೆಗೆ ಬಂದು ಇಂಟರ್ನೆಟ್ ನೋಡುತ್ತಿದ್ದಾಗ ತಿಳಿದುಬಂದದ್ದು ಅಂದು ಬುದ್ಧ ಪೂರ್ಣಿಮೆಯೆಂದು. ರಾತ್ರಿ ೮ ಗಂಟೆಗೆ ಹುಟ್ಟಿದ ಪೂರ್ಣ ಚಂದ್ರನನ್ನು ನೋಡಿ ಅದೇನೋ ಒಂದು ರೀತಿಯ ಆಹ್ಲಾದವಾಯಿತು. ಆ ದಿನ ವಿಷ್ಣುವಿನ ಅವತಾರಗಳಲ್ಲಿ ಒಂದಾದ ಭಗವಾನ್ ಬುದ್ಧನ ಜಯಂತಿ ಎಂದು ತಿಳಿದು ಯೂಟ್ಯೂಬ್ನಲ್ಲಿ ಹುಡುಕಿ ಕೆಲವು ಬುದ್ಧಮ್ ಶರಣಂ ಗಚ್ಚಾಮಿ ಎನ್ನುವ ಸಂಗೀತವನ್ನು ಕೇಳುತ್ತ ಮಲಗಿದ್ದಾಗ ಮನಸ್ಸಿನ ಲಹರಿ ತಾನಾಗಿಯೇ ದಶಾವತಾರದ ಕಡೆಗೆ ಹರಿಯಿತು. ಸತ್ಯ ಅಥವ ಕೃತಾ ಯುಗದಲ್ಲಿ ಮತ್ಸ್ಯ, ಕೂರ್ಮ, ವರಾಹ ಮತ್ತು ನರಸಿಂಹ ರೂಪಗಳಲ್ಲಿ ವಿಷ್ಣು ಭೂಮಿಯಲ್ಲಿ ಅವತರಿಸಿದನೆಂದು ನಮ್ಮ ಪುರಾಣಗಳು ಹೇಳುತ್ತವೆ. ತ್ರೇತಾ ಯುಗದಲ್ಲಿ ವಾಮನ, ಪರಶುರಾಮ ಮತ್ತು ರಾಮನ ಅವತಾರ ಆದದ್ದು, ನಂತರ ದ್ವಾಪರ ಯುಗದಲ್ಲಿ ಶ್ರೀ ಕೃಷ್ಣಾವತಾರ ಆದದ್ದು ಎಲ್ಲರಿಗೂ ಮನದಟ್ಟವಾಗಿರುವ ಪುರಾಣದ ಕಥೆಗಳು. ಕಲಿ ಯುಗದ ಕೊನೆಯಲ್ಲಿ ಕಲ್ಕಿ ಬರಲಿದ್ದಾನೆಂದು ಪುರಾಣದಲ್ಲಿ ಬರುವ ಮತ್ತೊಂದು ಕಥೆ. ದಕ್ಷಿಣ ಭಾರತೀಯರು ಬುದ್ಧನನ್ನು ವಿಷ್ಣುವಿನ ಅವತಾರವೆಂದು ಪರಿಗಣಿಸುವುದಿಲ್ಲ ಎಂದು ತಿಳಿದು ನಿಮಗೆ ನಿರಾಸೆ ಆಗಬಹುದು. ದಶಾವತಾರದ ಸಂಖ್ಯೆ ಸರಿಹೊಂದಿಸಲು ಬಲರಾಮ ವಿಷ್ಣುವಿನ ೮ನೇ ಅವತಾರವೆಂದೂ, ಶ್ರೀ ಕೃಷ್ಣ ೯ನೇ ಅವತಾರವೆಂದು ದಕ್ಷಿಣ ಭಾರತೀಯರ ನಂಬುಗೆ.
ಅದೇನೇ ಇರಲಿ, ಈ ಎಲ್ಲ ಅವತಾರಗಳು ಭೂಮಿಯಲ್ಲಿ ಅವತರಿಸಿದ ದಿನ ಅಥವ ಅವುಗಳ ಹುಟ್ಟುಹಬ್ಬದ ದಿನಗಳನ್ನು ಕರಾರುವಾಕ್ಕಾಗಿ ತಿಳಿಸಬಲ್ಲರು ನಮ್ಮ ಜ್ಯೋತಿಷಿಗಳು ಎಂದು ನಿಮಗೆ ಗೊತ್ತಿರಬಹುದು. ಏಕೆಂದರೆ ಪ್ರತಿ ವರ್ಷ ನಾವು ಆಚರಿಸುವ ಶ್ರೀ ರಾಮ ಹುಟ್ಟಿದ ದಿನ ಚೈತ್ರ ಮಾಸದ ಶುಕ್ಲ ಪಕ್ಷ ನವಮಿಯೆಂದು, ಶ್ರೀಕೃಷ್ಣ ಹುಟ್ಟಿದ ದಿನ ಶ್ರಾವಣ ಮಾಸದ ಕೃಷ್ಣ ಪಕ್ಷ ಅಷ್ಟಮಿಯೆಂದು ಜ್ಯೋತಿಷಿಗಳು ಗೊತ್ತುಪಡಿಸಿದ್ದಾರೆ. ರಾಮನವಮಿ ಮತ್ತು ಕೃಷ್ಣ ಜನ್ಮಾಷ್ಟಮಿ ಪರಿಚಯವಿರುವಷ್ಟು ಬೇರೆ ಅವತಾರಗಳ ಹುಟ್ಟು ದಿನಗಳನ್ನು ನಾವು ಆಚರಿಸದಿರಬಹುದು. ಅಂದರೆ, ಕೃತಾ ಯುಗದ ವಿಷ್ಣುವಿನ ಅವತಾರಗಳನ್ನು ನಾವು ಮರೆತು ತ್ರೇತಾಯುಗದಲ್ಲಿ ಜನಿಸಿದ ರಾಮನ ಮತ್ತು ದ್ವಾಪರಯುಗದ ಕೊನೆಯಲ್ಲಿ ಜನಸಿದ ಕೃಷ್ಣ ಹುಟ್ಟಿದ ದಿನದಂದು ಮಾತ್ರ ಪೂಜೆ ಪುನಸ್ಕಾರ ಮಾಡುತ್ತೇವೆ. ಎಲ್ಲ ಅವತಾರಗಳು ಭೂಮಿಯಲ್ಲಿ ಧರ್ಮವನ್ನು ಉಳಿಸಲು ಸಮಪ್ರಮಾಣದಲ್ಲಿ ಕಷ್ಟ ಪಟ್ಟಿರುವಾಗ, ರಾಮ ಮತ್ತು ಕೃಷ್ಣರಿಗೆ ಮಾತ್ರ ಪೂಜೆ ಎಂದರೆ ಅಧರ್ಮ ಎಸಗಿದಂತಾಗುವುದಿಲ್ಲವೇ? ಈ ಪ್ರಶ್ನೆಯನ್ನು ಮತ್ತಷ್ಟು ತುಲನೆ ಮಾಡಿದಾಗ ಪ್ರಾಣಿ ಮತ್ತು ನರ-’ಸಿಂಹ’ನ ಅವತಾರಗಳಿಗಿಂತ ಮಾನವ ರೂಪದ ಅವತಾರಗಳೆ ಹೆಚ್ಚು ಎಂದು ಪಕ್ಷಪಾತ ಮಾಡಿದ ಹಾಗಾಗಲಿಲ್ಲವೇ? ತನ್ನ ಕೊಂಬುಗಳಲ್ಲಿ ಎತ್ತಿಹಿಡಿದು ಭೂಮಿಯನ್ನೇ ಕಾಪಾಡಿದ ವರಾಹನ ಧರ್ಮನಿಷ್ಠೆಗಿಂತ ಕ್ಷತ್ರಿಯರನ್ನು ಕೊಂದ ಪರುಶರಾಮನ ಅವತಾರ ಹೆಚ್ಚೆ? ಸಮುದ್ರ ಮಂಥನದ ಸಮಯದಲ್ಲಿ ಮುಳುಗುತ್ತಿದ್ದ ಮಂದರ ಪರ್ವತವನ್ನೇ ತನ್ನ ಕವಚದ ಮೇಲೆ ಆಧಾರ ಕೊಟ್ಟು ಕಾಪಾಡಿದ ಕೂರ್ಮನಿಗಿಂತ ಬಲರಾಮನ ಅವತಾರ ಹಚ್ಚೆ? ಹಾಗಿದ್ದಲ್ಲಿ ಈ ಬಡ ಪ್ರಾಣಿಗಳು ಮತ್ತು ನರಸಿಂಹನಿಗೇಕೆ ಪ್ರಾಮುಖ್ಯತೆ ಕೊಟ್ಟಿಲ್ಲ? ರಾಮ ಕೃಷ್ಣ ಮತ್ತು ವಾಮನಾದಿಗಳಿಗೆ ಸಿಗುವ ಮನ್ನಣೆಯನ್ನು ಮತ್ಸ್ಯ ಕೂರ್ಮ ವರಾಹಗಳಿಗೂ ಸಿಗುವಂತೆ ಮಾಡಲು ಜನ ಜಾಗೃತಿಯಲ್ಲಿ ತೊಡಗಬೇಕು ಎಂದೆಲ್ಲ ಆಲೋಚಿಸಿದೆ. ಆ ಅನ್ವೇಷಣೆಯಲ್ಲಿ ಮೊದಲು ಅರಿತು ಕೊಳ್ಳಬೇಕಾದ್ದು ಈ ವರ್ಷ ಮತ್ಸ್ಯ, ಕೂರ್ಮ, ವರಾಹ ಮತ್ತು ನರಸಿಂಹ ಜಯಂತಿ ಯಾವ ದಿನ ಬರುತ್ತದೆ ಎಂದು ತಿಳಿದುಕೊಳ್ಳಬೇಕು ಎಂತಲೂ ನಿರ್ಧರಿಸಿ ಮಾರನೇ ದಿನ ಕಾರ್ಯ ಮಗ್ನನಾದೆ.
ಸರಿ, ಪಂಚಾಂಗ ತೆಗೆದು ಹುಡುಕಿದೆ. ಪಂಚಾಂಗ ಅಂದರೆ ೨೧ನೇ ಶತಮಾನದ ಇಂಟರ್ನೆಟ್ನಲ್ಲಿ ಸಿಗುವ ಡಿಜಿಟಲ್ ಪಂಚಾಂಗ. ಆದರೆ ಪಂಚಾಂಗ ನೋಡಿದಾಗ ಕಂಡುಬಂದದ್ದು ಮತ್ಸ್ಯ ಜಯಂತಿ (೨೯ ಮಾರ್ಚ್ ೨೦೧೭) ಆಗಲೇ ಬಂದು ಹೋಗಿತ್ತು. ಛೆ, ನರಸಿಂಹ ಜಯಂತಿ (೮ ಮೇ ೨೦೧೭), ಕೂರ್ಮ ಜಯಂತಿ (೯ ಮೇ ೨೦೧೭), ಮತ್ತು ಬುದ್ಧ ಜಯಂತಿ (೧೦ ಮೇ, ೨೦೧೭) ಕೇವಲ ಎರಡು-ಮೂರು ದಿನಗಳ ಮುಂಚೆಯೇ ಆಗಿಹೋಗಿತ್ತಲ್ಲ ಅಂತ ಬೇಜಾರಾಯಿತು. ಹಾಗಾದರೆ ಮೂರುದಿನಗಳಲ್ಲಿ ಮೂರು ಅವತಾರಗಳ ಜಯಂತಿಯನ್ನು ಆಚರಿಸಬಹುದಾಗಿತ್ತು. ಮಿತ್ರರಿಗೆ Wish you Happy Janmastami ಅಂತ ಕಳಿಸುವ ಹಾರೈಕೆಯೋಲೆ ರೀತಿಯೇ Wish You Happy Narasimha Jayanti ಅಂತ ಕಳುಹಿಸಿ, ಎರಡು ದಿನ ತಡವಾದ್ದರಿಂದ “Wish You Belated Happy Narasimha Jayanti” ಅಂತ ಕಳುಹಿಸಿ ಬಿಡಬಹುದಾಗಿತ್ತು. ಅದೂ ಒಂದು ರೀತಿಯ ಪಕ್ಷಪಾತ ಮಾಡಿದ ಹಾಗೆಯೆ ಎಂದು ಸುಮ್ಮನಾದೆ. ವರಾಹ ಜಯಂತಿಗೆ (೨೩ ಆಗಸ್ಟ್ ೨೦೧೭) ಪಕ್ಷ ಮತ್ತು ತಿಥಿ ಕೂಡಿ ಬರಲು ಇನ್ನೂ ಕೆಲವು ತಿಂಗಳುಗಳೇ ಇದೇ ಎಂದು ತಿಳಿದು ಸ್ವಲ್ಪ ಸಮಾಧಾನವಾಯಿತು. ಆ ದಿನ ವರಾಹ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಬೇಕು ಮತ್ತು ಮಿತ್ರರೊಡನೆ ಗೋಕುಲಾಷ್ಟಮಿಯಂತೆ ಸಿಹಿ ಹಂಚಿಕೊಳ್ಳಬಹುದು ಎಂದು ಯೋಜಿಸಿದೆ. ಅಷ್ಟರೊಳಗೆ ನನ್ನ ಯೋಜನೆಯನ್ನು ವರಾಹ ಮೂರ್ತಿಯಿರುವ ದೇವಸ್ಥಾನಗಳ ಪುರೋಹಿತರ ಜೊತೆ ಸಮಾಲೋಚಿಸಿ ಅಂದಿನ ಕಾರ್ಯಕ್ರಮಗಳನ್ನು ನಿರ್ಧರಿಸಲು ಸಾಕಷ್ಟು ಸಮಯವಿದೆ ಎಂತಲೂ ನೆಮ್ಮದಿಯಿಂದ ಹಾಗೆ ನಿದ್ದೆ ಕೂಡ ಮಾಡಿದೆ.
ಮಾರನೆಯ ದಿನ ಅಂದರೆ ಶುಕ್ರವಾರ ಬೆಳಗ್ಗೆ ೧೧ ಗಂಟೆಗೆ ಡಾಕ್ಟರ್ ಬೇಟಿಕೊಡಬೇಕಾದ ಕಾರಣ ಸ್ವಲ್ಪ ನಿಧಾನವಾಗಿಯೇ ಹೊರಟೆ. ಬೆಳಗಿನ ನಾಷ್ಟಾ ಮಾಡುತ್ತ, ಪೇಪರ್ ತಿರುವಿಹಾಕುತ್ತಿದ್ದಾಗ ನಮ್ಮ ಮನೆಯ ಹಿತ್ತಲಿನಲ್ಲಿ ಏನೋ ಓಡಾಡುತ್ತಿದ್ದ ಹಾಗೆ ಕಂಡಿತು. ಬೆಕ್ಕೋ ಅಥವಾ ನಾಯಿ ಇರಬಹುದೆಂದು ಕೊಂಡೆ. ಆದರೆ ಅದರ ಆಕಾರ ನೋಡಿದರೆ ಇದು ಯಾರೋ ತಂದಿಟ್ಟ ಕರಿ ಕಲ್ಲಿನಂತೆ ಕಂಡಿತು. ಬಾಗಿಲು ತೆಗೆದು ಹತ್ತಿರ ಹೋಗಿ ನೋಡಿದಾಗ ನನ್ನ ಕಣ್ಣುಗಳನ್ನು ನಾನೇ ನಂಬದಾದೆ. ಅಲ್ಲಿ ನಾನು ಕಂಡದ್ದು ಒಂದು ೧೨-೧೫ ಇಂಚಿನಷ್ಟು ಅಗಲದ ಒಂದು ಆಮೆ. ಕೂರ್ಮ! ಕುತ್ತಿಗೆಯನ್ನು ಹೊರಗೆ ಹಾಕಿ ಪಿಳಿ ಪಿಳಿ ನೋಡುತ್ತಾ ಎಳೆ ಬಿಸಿಲು ಕಾಯಿಸಿಕೊಳ್ಳುತ್ತಿದ್ದ ಆ ಕೂರ್ಮವನ್ನು ನೋಡಿ ನನಗೆ ಒಂದು ರೀತಿ ಗಾಬರಿ ಜೊತೆಗೆ ಆಶ್ಚರ್ಯವಾಯಿತು. ನಾಲ್ಕೂ ಕಡೆ ಐದಡಿ ಎತ್ತರದ ಕಾಂಪೌನ್ಡ್ ಇರುವ ನಮ್ಮ ಮನೆ ಅಂಗಳದೊಳಗೆ ಅದು ಹೇಗೆ ಮತ್ತು ಎಲ್ಲಿಂದ ಈ ಕೂರ್ಮ ಬರಲು ಸಾಧ್ಯ? ಗೇಟ್ ಕೂಡ ತೆರೆದಿಲ್ಲದಿರುವಾಗ ಅದೂ ನೆಡೆದು ಕೊಂಡು ಒಳಗೆ ಬರಲು ಹೇಗೆ ಸಾಧ್ಯ? ಸುಮಾರು ಇಪ್ಪತ್ತು ವರ್ಷಗಳಿಂದ ಇದೆ ಮನೆಯಲ್ಲಿದ್ದರೂ ಒಂದು ಬಾರಿಯೂ ಆಮೆಯನ್ನು ನಾನು ನೋಡಿಲ್ಲದಿರುವಾಗ ಈ ದಿನ ಎಲ್ಲಿಂದ ಬಂದಿತು? ಬರೀ ಪ್ರಶ್ನೆಗಳೇ ಹೊರತು ಉತ್ತರ ಸಿಗಲಿಲ್ಲ. ಇಷ್ಟೊಂದು ಆಶ್ಚರ್ಯಕರ ಸನ್ನಿವೇಶವನ್ನು ಯಾರೊಂದಿಗಾದರೂ ಹಂಚಿಕೊಳ್ಳಬೇಕು ಅನಿಸಿ, ಕೈಯಲ್ಲಿದ್ದ ಐಫೋನ್ ನಿಂದ ಆ ಆಮೆಯ ಒಂದೆರಡು ಫೋಟೋ ತೆಗೆದುಕೊಂಡೆ.
ಒಂದು ವೇಳೆ ಅದನ್ನು ಹಾಗೆಯೆ ಬಿಟ್ಟರೆ ರಾತ್ರಿ ಯಾವುದಾದರು ಬೆಕ್ಕು ಅದನ್ನು ತಿಂದುಬಿಡಬಹುದಲ್ಲ ಅಂತ ಸ್ವಲ್ಪ ಚಿಂತೆ ಆಯಿತು. ಯೋಚಿಸಲು ಟೈಮ್ ಇರಲಿಲ್ಲ. ತಕ್ಷಣ ಹೊಳೆದದ್ದು ಯಾವುದಾದರು Animal Shelter ಸಂಸ್ಥೆಗೆ ಕೊಟ್ಟರಾಯಿತು ಅಂತ. ಸರಿ, ಒಂದು ಕಾರ್ಡಬೋರ್ಡ್ ಪೆಟ್ಟಿಗೆ ತಂದು ಅದರೊಳಗೆ ಆ ಆಮೆಯನ್ನು ಬಹಳ ಹುಷಾರಾಗಿ ರವಾನಿಸಲು ಪ್ರಯತ್ನ ಮಾಡಿದೆ. ಜೀವನದಲ್ಲಿ ಮೊದಲನೇ ಬಾರಿ ಒಂದು ಜೀವಂತ ಆಮೆಯನ್ನು ಕೈಯಲ್ಲಿ ಹಿಡಿದಿದ್ದು ಒಂದು ವಿಚಿತ್ರ ಅನುಭವವಾಯಿತು. ದೇಹದಲ್ಲಿ ವಿದ್ಯುತ್ತು ಪ್ರವಾಹ ಆದಂತಹ ಮತ್ತು ವರ್ಣಿಸಲಾಸಾಧ್ಯವಾದ ಅನುಭವ. ನಾನು ಮುಟ್ಟಿದ್ದೆ ತಡ ಆ ಆಮೆ ತನ್ನ ಕುತ್ತಿಗೆ, ನಾಲ್ಕು ಕಾಲುಗಳನ್ನೂ ಮತ್ತು ಬಾಲವನ್ನು ಕವಚದೊಳಗೆ ಅವಿತಿಸಿಕೊಂಡು ಒಂದು ಭಾರವಾದ ಕಲ್ಲಿನಂತೆ ಪರಿವರ್ತನೆಗೊಂಡಿತು. ಪೆಟ್ಟಿಗೆಯೊಳಗಿಡುವುದು ಸುಲುಭವಾಯಿತು. ಪೆಟ್ಟಿಗೆಯನ್ನು ತಂದು ಕಾರ್ ಗ್ಯಾರೇಜಿನಲ್ಲಿ ಇಟ್ಟು ನಾನು ನನ್ನ ಡಾಕ್ಟರ್ ಭೇಟಿಗೆ ಹೊರಟುಬಿಟ್ಟೆ. 
ಡಾಕ್ಟರ್ಗೆ ಕಾಯುತ್ತ ಕುಳಿತ್ತಿದ್ದಾಗ ಯೋಚನೆ ಬಂದದ್ದು ಒಂದು ವೇಳೆ ಆ ಆಮೆ ಅಕ್ಕಪಕ್ಕದ ಮನೆಯವರ ಸಾಕು (pet) ಆಮೆ ಆಗಿದ್ದರೆ ಅವರಿಗೆ ತಲುಪಿಸಿಬಿಡಬೇಕು. ನನ್ನಾಕೆಗೆ ಫೋನ್ ಮಾಡಿ ಗ್ಯಾರೇಜಿನಲ್ಲಿರುವ ಆಮೆಯ ಬಗ್ಗೆ ನಮ್ಮ ಮನೆಯ ಅಕ್ಕಪಕ್ಕದಲ್ಲಿರುವವರಲ್ಲಿ ವಿಚಾರಿಸು ಅಂತ ಹೇಳಿದೆ. ಭಾರವಾದ ಆ ಆಮೆಯನ್ನುಅಕ್ಕಪಕ್ಕದವರ ಮನೆಗೆ ತೋರಿಸಿ ಬಂದ ನನ್ನಾಕೆ ಅದು ಯಾರ ಸಾಕು ಆಮೆಯಲ್ಲ ಅಂತ ಖಚಿತಪಡಿಸಿದಳು. ನಾನು ಮನೆಗೆ ಬಂದನಂತರ, ಹಸಿವು ಮತ್ತು ಬಾಯಾರಿದಂತೆ ಕಂಡ ಆ ಆಮೆಗೆ ಒಂದು ಸಣ್ಣ ತಟ್ಟೆಯಲ್ಲಿ ನೀರು ಮತ್ತು ಮನೆಯಲ್ಲಿದ್ದ letuse ಸೊಪ್ಪನ್ನು ತಿನ್ನಲು ಕೊಟ್ಟೆ. ನೀರನ್ನೇನೋ ಕುಡಿಯಿತಾದರೂ ಸೊಪ್ಪನ್ನು ತಿನ್ನಲಿಲ್ಲ. Animal Shelter ಸಂಸ್ಥೆಗೆ ಈ ಕೂರ್ಮವನ್ನು ತಲುಪಿಸಲು ಆಗಲೇ ತಡವಾದ್ದರಿಂದ, ನಾಳೆ ಬೆಳೆಗ್ಗೆಯವರೆಗೂ ಆ ಡಬ್ಬದಲ್ಲಿ ಇಟ್ಟುಕೊಳ್ಳುವುದೆಂದು ತೀರ್ಮಾನಿಸಿದೆ. ಜೊತೆಗೆ ಶಾಲೆಯಿಂದ ಬಂದ ಮೇಲೆ ಮಗಳಿಗೂ ಈ ಆಶ್ಚರ್ಯಕರ ಅತಿಥಿಯನ್ನು ತೋರಿಸಿದ ಹಾಗು ಆಗುತ್ತದೆ ಎಂದುಕೊಂಡೆ. ನನ್ನ ಮತ್ತಿತರ ಕೆಲಸಗಳಿಗೆ ಗಮನ ಹರಿಸಲು ಗ್ಯಾರೇಜ್ ಬಾಗಿಲು ಹಾಕಿ ಮನೆಯೊಳಗೆ ಹೋದೆ.
ಸಂಜೆ ಸ್ಕೂಲಿನಿಂದ ಬಂದ ಮಗಳಿಗೆ ಆ ಆಮೆಯನ್ನು ತೋರಿಸುವ ಆತುರ. ಆದರೆ ಗ್ಯಾರೇಜ್ನಲ್ಲಿ ಮತ್ತೊಂದು ಆಶ್ಚರ್ಯ ಕಾದಿತ್ತು. ಡಬ್ಬದಲ್ಲಿಟ್ಟಿದ್ದ ಕೂರ್ಮ ಮಾಯವಾಗಿತ್ತು. ಎಲ್ಲಿ ಹುಡುಕಿದರೂ ಕಾಣಲಿಲ್ಲ. ಬಹಳ ಶೋಧನೆಯ ನಂತರ ಒಂದು ಮೂಲೆಯಲ್ಲಿ ಕಂಡುಬಂದ ಆ ಕೂರ್ಮ ಹಾಯಾಗಿ ಮಲಗಿ ನಿದ್ರಿಸುತ್ತಿದ್ದನು ನೋಡಿ ಸಧ್ಯ ತಪ್ಪಿಸಿಕೊಳ್ಳಲಿಲ್ಲವೆಂದು ಸಂತೋಷವಾಯಿತು. ಮಗಳು ಮನೆಗೆ ಆಗಮಿಸಿದ ಕೂರ್ಮಕ್ಕೆ Marty ಎಂದು ನಾಮಕರಣ ಮಾಡಿ Dad, shall we keep it as a pet? ಅಂತ ಕೇಳಿದಳು! ಅಷ್ಟು ಚೂಟಿಯಾದ ಮತ್ತು ಮುದ್ದಾದ ಆಮೆಯನ್ನು ಸಾಕಿಕೊಳ್ಳಲು ಯಾವ ಮಕ್ಕಳಿಗೆ ತಾನೇ ಇಷ್ಟವಾಗುವುದಿಲ್ಲ. ಆಮೆಯನ್ನು ನಾವು ಸಾಕಲು ಸಾಧ್ಯವಿಲ್ಲ ಎಂದು ಮಗಳಿಗೆ ಮನವರಿಕೆ ಮಾಡುವ ಕೆಲಸವನ್ನು ನನ್ನಾಕೆಗೆ ಒಪ್ಪಿಸಿದೆ. ಎಷ್ಟೋ ಹೊತ್ತಿನ ನಂತರ ಇಬ್ಬರೂ ಸೇರಿ ಕೊನೆಗೆ ಒಂದು ರಾಜಿ ಮಾಡಿಕೊಂಡ ಹಾಗೆ ಕೇಳಿಸಿತು. ಆ ಆಮೆಯನ್ನು Animal Shelter ಗೆ ಕೊಡುವುದರ ಬದಲು ನಾವೇ ಯಾವುದಾದರು ಒಂದು ಸಣ್ಣ ಸರೋವರದಲ್ಲಿ ಬಿಟ್ಟುಬಂದರೆ ಅದಕ್ಕೆ ಸ್ವಾತಂತ್ರ್ಯ ದೊರಕುವುದು ಎಂದು ವಾದಿಸಿದ ಮಗಳ ವಾಕ್ಸರಣಿಗೆ ನಾನು ಮಣಿಯಲೇ ಬೇಕಾಯಿತು. ಗಾಜಿನ ಪಂಜರದಲ್ಲಿ ಏಕಾಂಗಿಯಾಗಿ ಜೀವನ ನಡೆಸುವುದಕ್ಕಿಂತ ಸ್ವಾತಂತ್ರವೇ ಮೇಲು ಎನ್ನುವುದು ಅವಳ ದೃಢ ನಂಬುಗೆ. ಆ ಅಶಕ್ತ ಮೂಕ ಪ್ರಾಣಿಗೆ ಪುಟ್ಟ ಹುಡುಗಿಯೋರ್ವಳು ಪ್ರಬಲ ಬೆಂಬಲಿಗಳಾದದ್ದನ್ನು ಕಂಡು ನನಗೂ ಅದೇ ಸರಿಯೆನ್ನಿಸಿತು. ನಮ್ಮ ಬಡಾವಣೆಯಲ್ಲೇ ಇರುವ ಒಂದು ಚಿಕ್ಕ ಸರೋವರದಲ್ಲಿ ಆಮೆಯನ್ನು ಬಿಟ್ಟುಬರುವುದೆಂದು ನಿರ್ಧರಿಸಿದ್ದಾಯಿತು. ಆದರೆ ನನ್ನ ಮನಸ್ಸಿನ ಯೋಚನಾ ಲಹರಿಗಳೇ ಬೇರೆಯಾಗಿತ್ತು. ಕೂರ್ಮಾವತಾರದ ಜಯಂತಿಯ ಪುಣ್ಯ ಗಳಿಗೆಯಲ್ಲಿ ಶ್ರೀಮ್ಮನಾರಾಯಣನೇ ಅಥಿತಿಯಾಗಿ ನಮ್ಮ ಮನೆಯಂಗಳದಲ್ಲಿ ಆಗಮಿಸಿರುವುದು ನಮ್ಮ ಅದೃಷ್ಟವೇ ಸರಿ. ಪೂಜೆ ಪುನಸ್ಕಾರಗಳಿಲ್ಲದೆ ಸರೋವರಕ್ಕೆ ಹಿಂದಿರುಗಿಸುವುದು ತಪ್ಪು! ನನ್ನ ಸಂತೋಷಕ್ಕೆ ಪೂಜೆಯೋನೋ ಮಾಡಬಹುದು. ಆದರೆ ಅದು ಮಗಳ ಕಣ್ಣಲ್ಲಿ ಮೂಡನಂಬಿಕೆ. ಸರಿ, ಅವಳು ಹೋಮ್ ವರ್ಕ್ ಮಾಡಿಕೊಳ್ಳುತ್ತಿರುವ ಸಮಯದಲ್ಲಿ ಎರಡು ತುಪ್ಪದ ದೀಪ, ಊದಿನ ಕಡ್ಡಿ, ಹಚ್ಚಿ ಅರಿಶಿನ ಕುಂಕಮ ಮಂತ್ರಾಕ್ಷತೆ, ನೈವೇದ್ಯಕ್ಕೆ ಬಾಳೆಹಣ್ಣು, ಹೀಗೆ ಸಾಂಗವಾಗಿ ಪೂಜಾವಿಧಿ ಮುಗಿಸಿ, ಕೂರ್ಮ ಸಮೇತ ಸರೋವರಕ್ಕೆ ಹೊರಡಲು ಅಣಿಯಾದೆ. ಮಗಳ ಜೊತೆ ಹೋಗಿ ಸರೋವರದಲ್ಲಿ ಶ್ರೀಮನ್ನಾರಾಯಣನಿಗೆ ವಿದಾಯ ಹೇಳಿ ಮನೆಗೆ ವಾಪಸ್ಸು ಬಂದೆವು. ದಾರಿಯಲ್ಲಿ Dad, why are your fingers red ಅಂತ ಕೇಳಿದ ಮಗಳಿಗೆ ಅದು ಕುಂಕುಮದಿಂದಾದದ್ದು ಎಂದು ಹೇಳಲಿಲ್ಲ ಅಷ್ಟೇ!
ರಾತ್ರಿ ನಿದ್ದೆ ಬರುವ ಮುಂಚೆ ಮರೆಯಬಾರದು ಎಂದು ಮುಂದಿನ ವರ್ಷ ಕೂರ್ಮಾವತಾರದ ಪೂಜೆಯನ್ನು ಯಾವುದಾದರು ದೇವಸ್ಥಾನದಲ್ಲಿ ಮಾಡಿಸಬೇಕು ಅಂತ ನನ್ನ ಡಯರಿಯಲ್ಲಿ ಬರೆದುಕೊಂಡೆ. ಇಂಟರ್ನೆಟ್ ಆಗಲೇ ನಾನು ಕಳೆದ ೩೬ ಗಂಟೆಗಳಲ್ಲಿ ಹುಡುಕಿದ ಪದಗಳ ಆದಾರದ ಮೇಲೆ ಕೆಳಗಿನ ವಿಡಿಯೋ ನೋಡಲು ಯೋಜನೆ ಮಂಡಿಸಿತ್ತು!
ಆಂಧ್ರ ಪ್ರದೇಶದ ಯಾವುದೊ ಸಣ್ಣ ದೇವಸ್ಥಾನದಲ್ಲಿ ಕಾಣಬರುವ ಈ ಕೂರ್ಮಾವತಾರದ ಸಂಭ್ರವನ್ನು ನೋಡಿ ನಾನು ಚಕಿತನಾದೆ. ಎಲ್ಲೂ ನೋಡಿರಲಿಲ್ಲ, ಕೇಳಿರಲಿಲ್ಲ, ಇದರ ಬಗ್ಗೆ ಓದಿರಲಿಲ್ಲ. ಈ ದೇವಸ್ಥಾನದ ಉತ್ಸವ ಮೂರ್ತಿ ಬೆಳ್ಳಿಯ ಕೂರ್ಮ! ಸುಂದರವಾದ ಬೆಳ್ಳಿ ಕವಚ, ಕವಚದ ಮೇಲೆ ಪಚ್ಛೆ ಕಲ್ಲಿನ ಹಸಿರು ಮಂದರ ಪರ್ವತ. ಪರ್ವತವನ್ನು ಬಳಸಿದ ವಾಸುಕಿ ಸರ್ಪ ಕೂಡ ನೋಡಿದ ಮೇಲೆ ಕೂರ್ಮಾವತಾರದ ಇಡೀ ಕಥೆಯೇ ಕಣ್ಣು ತುಂಬಿತು. ಮೂರೇ ನಿಮಿಷದ ವಿಡಿಯೋ ನನ್ನನ್ನು ಮಂತ್ರಮಜ್ಞನನ್ನಾಗಿ ಮಾಡಿತು! ಮಂತ್ರಘೋಷ್ಠಿ ಅಷ್ಟು ಸರಿಯಾಗಿ ಕೇಳಿಸಲಿಲ್ಲ. ಆದರೆ ಕೂರ್ಮ ಜಯಂತಿಯಂದು ಇಂತಹ ಅಮೋಘ ಪೂಜೆ ನಡೆಯುತ್ತದೆಯೆಂದು ತಿಳಿದು ಸ್ವಲ್ಪ ಸಮಾಧಾನವಾಯಿತು. ಮಗಳಿಗೆ ಈ ವಿಡಿಯೋ ತೋರಿಸಬೇಕು ಅಂದುಕೊಳ್ಳುವಾಗಲೇ ಅವಳು ಗಾಢ ನಿದ್ರೆಯಲ್ಲಿ ಮುಳುಗಿದ್ದಳು!
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ