ಶನಿವಾರ, ಸೆಪ್ಟೆಂಬರ್ 30, 2017

ಚಿತ್ರಗುಪ್ತ ಮತ್ತು ಕೃತಕ ಬುದ್ಧಿಮತ್ತೆ (Artificial Intelligence)

ಚಿತ್ರಗುಪ್ತ ಮತ್ತು ಕೃತಕ ಬುದ್ಧಿಮತ್ತೆ (Artificial Intelligence)


“ಅವನ ಮನಸ್ಸಿನ್ನಲ್ಲಿ ಏನು ಇದೆಯೋ, ಯಾರಿಗೆ ಗೊತ್ತು?”  ಎನ್ನುವ ಸಂಭಾಷಣೆಯನ್ನು ನಾವು ಒಂದಲ್ಲ ಒಂದು ಸನ್ನಿವೇಶದಲ್ಲಿ ಉಪಯೋಗಿಸುತ್ತೇವೆ.  ಅಂದರೆ ಬೇರೆಯವರ ಮನೋಗತವನ್ನು ನಿರ್ಧಿಷ್ಟವಾಗಿ ಅರ್ಥ ಮಾಡಿಕೊಳ್ಳಲು ನಾವೆಲ್ಲರೂ ಕಷ್ಟಪಡುತ್ತೇವೆ.  ಕೆಲವು ಸರಿ  “ಅವನು ಮುಂದೇನು ಮಾಡುತ್ತಾನೋ, ಯಾರಿಗೆ ಗೊತ್ತು?” ಎಂದು ಈ ಸನ್ನಿವೇಶವನ್ನು ಅನುಮಾನದಲ್ಲಿ ಪ್ರಶ್ನಾರ್ಥಕವಾಗಿ ಮುಂದುವರೆಸುತ್ತೇವೆ.  ಅಂದರೆ ಮತ್ತೊಂದು ಅಜ್ಞಾತ ಫಲಿತಾಂಶದ ಬಗ್ಗೆ ನಮ್ಮ ಯೋಚನಾಲಹರಿಯನ್ನು ಹಂಚಿಕೊಳ್ಳುತ್ತೇವೆ.  “ಯಾರಿಗೆ ಗೊತ್ತು” ಎನ್ನುವಾಗ ಬೇರೆಯವರ ಮನಸ್ಸಿನಲ್ಲಿ  ಮೂಡಿದ ಪ್ರಶ್ನೆಗೆ ಭೌತಿಕ ಅಥವಾ ಅರಿಯಬಲ್ಲ ಉತ್ತರ ಇರಬಹುದೇ ಎಂದು ಪ್ರಶ್ನಿಸಿದಂತಾಯಿತು.  ಇನ್ನೊಂದು ರೀತಿ ಹೇಳಬೇಕೆಂದರೆ, ಮನಸ್ಸಿನ ಏಕಾಂತತೆಯಲ್ಲಿ ಮೂಡಿದ ಭಾವನೆಗಳನ್ನು ಧೈಹಿಕವಾಗಿ ಅವನು ಹೇಗೆ ಪ್ರಕಟಗೊಳಿಸಬಹುದು ಎನ್ನುವ ಕಲ್ಪನೆ ನಮ್ಮ ಮುಂದಿನ ಪ್ರತಿಕ್ರಿಯೆಗೆ ನೆರವಾಗಬಹುದು.  ಉದಾಹರಣೆಗೆ ಒಂದು ಹೆಣ್ಣಿಗೆ ತನ್ನ ಗಂಡ ಹಬ್ಬಕ್ಕೆಂದು ಒಂದು ಒಳ್ಳೆ ರೇಷ್ಮೆ ಸೀರೆ ತಂದು ಕೊಡಲಿ ಎಂದು ಮೂರು ನಾಲ್ಕು ವಾರಗಳಿಂದ ಮನಸ್ಸಿನಲ್ಲಿ ಇರಬಹುದು.  ಹಬ್ಬ ಹತ್ತಿರ ಬಂದರೂ ಗಂಡ ಅದರ ಬಗ್ಗೆ ಏನೂ ಮಾಡದಿದ್ದಾಗ ಆ ಹೆಣ್ಣು ತಾನೇ ಅಂಗಡಿಗೆ ಹೋಗಿ ತನಗೆ ಇಷ್ಟವಾದ ಸೀರೆಯನ್ನು ಕೊಂಡು ತರಬಹುದು.  ಗಂಡನಿಗೆ ಹೆಂಡತಿಯ ಚೀಮಾರಿಯನ್ನಂತೂ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ.  ಆದರೆ ಈ ಎರಡು ಘಟನೆಗಳ ಮಧ್ಯೆ ಆ ಹೆಣ್ಣು ಗೆಳತಿಯರೊಡನೆ ಮಾತಿನಿಂದ, ಇಂಟರ್ನೆಟ್ ಹುಡುಕಾಟದಿಂದ ಅಥವಾ ಇನ್ಯಾವುದೇ ಗ್ರಹಿಸಲಾಗದ ಕಾರ್ಯಗಳಲ್ಲಿ ಕೆಲವು ಸುಳಿವನ್ನು ಕೊಟ್ಟಿರಬಹುದು.  ಇಂತಹ ಸುಳಿವುಗಳನ್ನು ಸಂಗ್ರಹಿಸುವ ಕೆಲಸ ಗಂಡನಿಗೆ ಸಾಧ್ಯವಿಲ್ಲ.  ಆದರೆ ಕೃತಕ ಬುದ್ಧಿಮತ್ತೆ (Artificial Intelligence) ಬಳಸಿಕೊಂಡು ಇಂತಹ ಸುಳಿವುಗಳನ್ನು ಕೂಡೀಕರಿಸುವುದು ಸುಲುಭವಾಗಿದೆ.  ಆ ಬಡಪಾಯಿ ಗಂಡನಿಗೆ ಈ ಸುಳಿವುಗಳನ್ನು ಅವನ ಫೋನ್ ಗೆ ಒಂದು ವಾರದ ಮುಂಚೆಯೇ ಬೇರೆಯರಾದರೂ ಟೆಕ್ಸ್ಟ್ ಮೆಸೇಜ್ ಕಳಿಸಿಬಿಟ್ಟಿದ್ದರೆ ಅವರಿಬ್ಬರ ದಾಂಪತ್ಯ ಜೀವನದಲ್ಲಿ ಕಡಿಮೆ ಘರ್ಷಣೆಗಳಿರುತ್ತಿತ್ತೋ ಏನೋ.  ಹಿಂದಿನ ಗೂಢಚಾರದ ಕೆಲಸಗಳಿಗೂ ಇಂದಿನ ಕೃತಕ ಬುಧ್ಧಿಮತ್ತೆಗೂ ಅಷ್ಟೇನು ವ್ಯತ್ಯಾಸ ಕಾಣುವುದಿಲ್ಲ ಅಂತ ನೀವು ಅಂದುಕೊಂಡರೆ ಮತ್ತೊಮ್ಮೆ ಯೋಚಿಸಿ.  ಏಕೆಂದರೆ ಗೂಢಚಾರದ ಮೂಲಕ ಸುಳಿವುಗಳನ್ನು ಸಂಗ್ರಹಿಸಲು ಹಲವು ವರ್ಷಗಳೇ ಬೇಕಾಗುತ್ತಿತ್ತು, ಈಗ ಕೇವಲ ಒಂದೆರಡು ಕ್ಷಣಗಳಲ್ಲಿ ಸಂಗ್ರಹಿಸಬಹುದು.

ನಮ್ಮ ಪುರಾಣ ಕಥೆಗಳಲ್ಲಿ ನಮ್ಮ ನೆರಳನ್ನು ಚಿತ್ರಗುಪ್ತ ಎನ್ನುತ್ತಾರೆ.  ಚಿತ್ರಗುಪ್ತ ಯಮನ ಶೀಘ್ರಲಿಪಿಕಾರ.  ನಾವು ಮಾಡುವ ಎಲ್ಲ ಕೆಲಸ, ಆಡಿದ ಮಾತು, ಮಾಡಿದ ಪಾಪಪುಣ್ಯ ಎಲ್ಲವನ್ನು ಬರೆದುಕೊಳ್ಳುತ್ತಾನಂತೆ, ಸದಾ ನಮ್ಮ ಜೊತೆಯಿರುವ ಈ ಚಿತ್ರಗುಪ್ತ.  ಅವನಿಂದ ಮುಕ್ತಿ ಪಡೆಯಲು ಸಾಧ್ಯವಾಗುವುದು ನಾವು ಈ ಜೀವನವನ್ನು ತ್ಯಜಿಸಿದ ಮೇಲೆಯೇ!  ಅದೇ ರೀತಿ ಈ ಕೃತಕ ಬುಧ್ಧಿಮತ್ತೆಯು ಕೂಡ ಚಿತ್ರಗುಪ್ತನಂತೆ ನಮ್ಮ ಮೊಬೈಲ್ ಫೋನ್, ಜೆಪಿಎಸ್, ಟ್ಯಾಬ್ಲೆಟ್, ಕಂಪ್ಯೂಟರ್ ಮೂಲಕ ಸದಾ ನಮ್ಮಜೊತೆಯೇ ಇದ್ದು ನಮ್ಮ ಮನಸ್ಸಿನ ಏಕಾಂತೆಯನ್ನು ಬರೆದು ಕೊಂಡು ಯಮನಿಗೆ ಕೊಡುವ ಬದಲು ಮಾರಾಟ ಮಾಡುತ್ತಿದೆ. ಭೌತಿಕ ವಸ್ತುಗಳನ್ನು ಕದಿಯುವುದು ಸುಲಭ.  ಆದರೆ ನಮ್ಮ ಸ್ವಾಧೀನದಲ್ಲಿ ಇದೆ ಎಂದು ಅಂದುಕೊಂಡ ನಮ್ಮ ಮನಸ್ಸಿನ ಏಕಾಂತತೆಯನ್ನೇ ಕಪಟದಿಂದ ಕದ್ದು ಬೇರೆಯವರಿಗೆ ಹರಾಜು ಮಾಡಿತ್ತಿವೆ ಈ ಕೃತಕ ಬುದ್ಧಿಮತ್ತೆಯ ಸಂಸ್ಥೆಗಳು.  ಇದಕ್ಕೆ ಒಂದು ಸ್ವಂತ ನಿದರ್ಶನ -- ನನ್ನ ಇಂದಿನ ಅನುಭವ.  ನೀವೂ ಓದಿ ನಿಮ್ಮ ಅನುಭವಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳಿ.


ಎಂದಿನಂತೆ ಇಂದೂ ಕೂಡ ಬೆಳಗ್ಗೆ ಕಾಫಿ ಕುಡಿಯುವ ಸಮಯದಲ್ಲಿ ಮೊಬೈಲ್ ಫೋನ್ ಉಪಯೋಗಿಸಿಕೊಂಡು ಇಂದಿನ ಸಮಾಚಾರಗಳನ್ನು ಓದುತ್ತಿದ್ದೆ.  ಗಮನ ಸೆಳೆದ ತಾಜಾ ಸುದ್ದಿಯಲ್ಲಿ “ಮುಂಬೈ ನಗರದ ನೂಕುನುಗ್ಗಲಲ್ಲಿ ೨೨ ಜನರ ಮರಣ” ಎನ್ನುವ ಶೀರ್ಷಿಕೆ.  ಅದನ್ನೇ ಮೊದಲು ಕ್ಲಿಕ್ ಮಾಡಿದೆ.  ಓದುತ್ತ ಹೋದಂತೆ ಛೇ ಎಷ್ಟು ಅಸಹಾಯಕ ಮತ್ತು ತಡೆಗಟ್ಟಬಹುದಾದ ಸಾವುಗಳು ಅಂತ ಅನಿಸಿತು.  ಪಾಪ, ಈ ಸಾವಿಗೀಡಾದವರಲ್ಲಿ ಎಷ್ಟು ಮಂದಿ ನಮ್ಮಂತೆ ಜನಸಾಮಾನ್ಯರೊ, ಎಷ್ಟು ಪುಟ್ಟಮಕ್ಕಳೊ, ಹಿರಿವಸ್ಸಿನವರೋ, ಕೆಲಸಕ್ಕೆ ಹೋರಟ ತುಂಬು ಉತ್ಸಾಹಿ ನವ ಯುವಕ ಯುವತಿಯರೋ ಎಂದು ಖಿನ್ನತೆ ಮೂಡುವ ಸುದ್ದಿ.   ಒಂದೆರಡು ಬಾರಿಯಾದರೂ ನಾನು ಕೂಡ ಅಂತಹ ಸಣ್ಣ ಸೇತುವೆಯ ಮೇಲೆ ಅದೇ ಮುಂಬೈ ನಗರಿಯಲ್ಲಿ ಓಡಾಡಿದ್ದೆ ಅಂತ ಮನಸ್ಸು ಹಿಂದಿನದನ್ನು ಯೋಚಿಸುತ್ತಿತ್ತು.  ಓದುವುದಕ್ಕಿಂತ ಹೆಚ್ಚು ವೇಗದಲ್ಲಿ scroll down ಮಾಡುವ ಅಭ್ಯಾಸವೇ ಹೊರತು ವಿವರಣೆಗಳನ್ನು ಓದುವುದು ಕಡಿಮೆ.  ಅದಕ್ಕೂ ವೇಗದಲ್ಲಿ ಸುದ್ದಿ ಜೊತೆಗಿರುವ ಚಿತ್ರಗಳನ್ನು ಸ್ಕಿಪ್ ಮಾಡುವುದೇ ಅಭ್ಯಾಸವಾಗಿಬಿಟ್ಟಿದೆ.  ಹೆಚ್ಚು ವಿವರಣೆಯಿಲ್ಲದ ಆ ಸುದ್ದಿಯ ಜೊತೆಗಿದ್ದ ಈ ಕೆಳಗಿನ ಚಿತ್ರ ಕೂಡ ನನ್ನ ಗಮನ ಸೆಳೆಯಿತು


AI_HowBad_CanItGet2.JPG

ಅದೇಕೋ ಏನೋ “ಎಲ್ಫಿನ್ಸ್ಟೋನ್ ರೋಡ್” ಅಂತ ದೊಡ್ಡ ಅಕ್ಷರಗಳಲ್ಲಿ ಕಂಡ ಆ ದಾರಿಗಂಬವನ್ನು ಸ್ವಲ್ಪ ಹೆಚ್ಚು ಸಮಯ  ನೋಡಿದೆ. ಎಲ್ಲ ಚಿತ್ರಗಳನ್ನು ನೋಡುವುದಕ್ಕಿಂತ ಅಬ್ಬಬ್ಬಾ ಎಂದರೆ ೪-೫ ಕ್ಷಣಗಳಷ್ಟು ಜಾಸ್ತಿ ನೋಡಿರ ಬಹುದು ಅಷ್ಟೇ.  ಆ ಕೊಳಕು ಮತ್ತು ತುಕ್ಕು ಹಿಡಿದ ದಾರಿಗಂಬ ಹೆಚ್ಚು ಹೊತ್ತು ನೋಡಲು ಕಾರಣ, ಇಂದಿನ ಮುಂಬೈ ನಗರದಲ್ಲಿ ಶಿವಸೇನೆಯರ ಆಡಳಿತದಲ್ಲಿ ಇನ್ನೂ ಬ್ರಿಟಿಷ್ ಕಾಲದ ಹೆಸರಿನ ರಸ್ತೆಗಳಿರಲು ಸಾಧ್ಯವೇ ಎಂದು ಮನಸ್ಸು ಎಲ್ಲ ಕಡೆ ಓಡಿತ್ತು.  ಭಾರತ ದೇಶದಲ್ಲಿ ಇಂತಹ ದುರ್ಘಟನೆಗಳ ಸುದ್ದಿಯನ್ನು ಹಲವಾರು ಬಾರಿ ಓದಿ ಹತಾಶಗೊಳ್ಳುತ್ತೇವೆ ಹೊರತು ನಾವು ಏನು ಮಾಡಲು ಸಾಧ್ಯವಿಲ್ಲ ಅಂತ ಅನಿಸಿತು.   ಇನ್ನು ಅಂದಿನ ದಿನಚರಿಗೆ ನಿಧಾನವಾಗುತ್ತೆ ಎಂದು ಮುಂಜಾನೆಯ ಬಿಸಿ ಬಿಸಿ ಕಾಫಿ ಎಚ್ಚರ ಕೊಟ್ಟಿದ್ದರಿಂದ ಬೇರೆ ಸುದ್ದಿಗಳನ್ನು ಓದುವುದನ್ನು ನಿಲ್ಲಿಸಿ ಆಫೀಸ್ಗೆ ಹೊರಡುವ ತಯಾರಿ ನೆಡಸಿದೆ.  

ಸುಮಾರು ಅರ್ಧ ಗಂಟೆಯ ನಂತರ ಬೆಳಗಿನ ತಿಂಡಿ ತಿನ್ನುತ್ತಾ, ಒಂದು ಬಾರಿ ಕೈಯಲ್ಲಿದ್ದ ಮೊಬೈಲ್ನಲ್ಲಿ ಫೇಸ್ಬೂಕ್ ನೋಡಿದೆ.  ಮೇಲಿನ ಸಾಲಿನಲ್ಲಿಯೇ ಬರುವ ಶೀರ್ಷಿಕೆ People You May Know ಎನ್ನುವುದನ್ನು ಎಂದಿನಂತೆ scroll down ಮಾಡುವವನಿದ್ದೆ.  ಏಕೆಂದರೆ ಅದರಲ್ಲಿ ಪ್ರತಿದಿನವೂ ಹೆಚ್ಚು ಕಮ್ಮಿ ನನಗೆ ಗೊತ್ತಿಲ್ಲದ ಜನರನ್ನು ಅಥವಾ ನಾನು ಫ್ರೆಂಡ್ಸ್ ಆಗಲು ಬಯಸದ ಮುಖಗಳನ್ನೇ ತೋರಿಸುತ್ತದೆ.  ಇನ್ನೇನು scroll down ಮಾಡುವುದರಲ್ಲಿದ್ದೆ, ಆದರೆ ಮೊದಲನೇ ಚಿತ್ರದಲ್ಲಿ ಲಕ್ಷ್ಮಿ ಶ್ರೀನಾಥ್ (ರಷ್ಮಿ) ಅಂತ ಒಂದು ಹೆಸರು ನನ್ನ ಗಮನ ಸೆಳೆಯಿತು.  

AI_HowBad_CanItGet1.JPG
ಏಕೆಂದರೆ ಆ ಹೆಸರಿನ ಕೆಳಗೆ ಕಂಡ Elphinstone College, Mumbai ಎನ್ನುವ ಶೀರ್ಷಿಕೆ.   ಅಂದರೆ, ನಾನು ಕೆಲ ಕ್ಷಣಗಳ ಕಾಲ ನೋಡಿದ ಚಿತ್ರದಿಂದಲೇ ನನ್ನ ಮನ್ನಸ್ಸಿನ ಏಕಾಂತತೆಯನ್ನು ಅರ್ಥ ಮಾಡಿಕೊಳ್ಳುವ ನೆಪದಲ್ಲಿ ಈ ಚಿತ್ರಗುಪ್ತ, ೮ ಸಾವಿರ ಮೈಲಿ ದೂರವಿರುವ ಮುಂಬೈನಲ್ಲಿ ಎಲೆಫಿನ್ಸ್ಟೋನ್ ಕಾಲೇಜಿನಲ್ಲಿ ಓದಿದ ಲಕ್ಷ್ಮಿ ಶ್ರೀನಾಥ್ (ರಷ್ಮಿ) ಯವರೊಡನೆ ನಾನು “ಸ್ನೇಹ” ಮಾಡಿಕೊಳ್ಳಲಿ ಎಂದು ಸಲಹೆ ಕೊಡುತ್ತಿದ್ದಾನೆ!   ಇಂತಹ ದುರಂತ ಘಟನೆಯ್ನನು ಬಳಸಿಕೊಂಡು ಫೇಸ್ಬುಕ್ ತನ್ನ ವ್ಯವಹಾರದಲ್ಲಿ ಲಾಭ ಪಡೆಯಲು ಕೃತಕ ಬುದ್ಧಿಮತ್ತೆಯನ್ನು ಉಪಯೋಗಿಸುತ್ತಿದೆ ಎಂದು ಅರಿತು ಒಂದು ರೀತಿಯ ಜಿಗುಪ್ಸೆ ಬರಿಸಿತು.  ಜೊತೆಗೆ ಗಾಬರಿಯಾಯಿತು.  ನನ್ನ ಮನಸ್ಸಿನ ಏಕಾಂತತೆಯನ್ನು ನನಗಿರಿವಲ್ಲದಯೇ ಕಳವು ಮಾಡಿದ್ದರ ಜೊತೆಗೆ ಮುಂದೆ ನಾನೇನು ಮಾಡಬೇಕೆಂದು ವಂಚಿಸಿ ಪ್ರೇರೇಪಣೆ ಮಾಡುತ್ತಿದೆ.  ಮುಂಜಾನೆಯ ಬೆಳಕಿನಲ್ಲಿ ಗೋಡೆಯ ಮೇಲೆ ಬೀಳುತ್ತಿದ್ದ ನನ್ನ ನೆರಳನ್ನೇ ನೋಡಿದೆ.  ಗಹಗಹಿಸಿ ನಕ್ಕಂತಾಯಿತು ಆ ನೆರಳು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ