ಎದೆಯು ಮರಳಿ ತೊಳಲುತಿದೆ
ಶ್ರೀ ಎಂ. ಗೋಪಾಲಕೃಷ್ಣ ಅಡಿಗರ ಕವನ
ಎದೆಯು ಮರಳಿ ತೊಳಲುತಿದೆ
ದೊರೆಯುದುದನೆ ಹುಡುಕುತಿದೆ
ಅತ್ತಇತ್ತ ದಿಕ್ಕುಗೆಟ್ಟು ಬಳ್ಳಿಬಾಳು ಚಾಚುತಿದೆ
ತನ್ನ ಕುಡಿಯನು, ತನ್ನ ಕುಡಿಯನು
ಸಿಗಲಾರದ ಆಸರಕೆ
ಕಾದ ಕಾವ ಬೇಸರಕೆ
ಮಿಡುಕಿ ತುಡುಕಲೆಳಸುತಿದೆ
ತನ್ನ ಗಡಿಯನು ತನ್ನ ಗಡಿಯನು
ಅದಕು ಇದಕು ಅಂಗಲಾಚಿ
ತನ್ನೊಲವಿಗೆ ತಾನೇ ನಾಚಿ
ದಡವ ಮುಟ್ಟಿ ಮುಟ್ಟದೊಲು
ಹಿಂದೆಗೆಯುವ ವೀಚಿ ವೀಚೀ
ಮುರಟುತಲಿದೆ ಮನದಲಿ
ನೀರಗಗಳ ದೂರ ತೀರ
ಕರೆಯುತಲಿದೆ ಎದೆಯ ನೀರ
ಮೀರುತಲಿದೆ ಹೃದಯ ಭಾರ
ತಾಳಲೆಂತು ನಾ ತಾಳಲೆಂತು ನಾ
ಯಾವ ಬಲವು ಯಾವ ಒಲವು
ಕಾಯಬೇಕು ಅದರ ಹೊಳವು
ಕಾಣದೆ ತಳ್ಳಿಪನು ಮನವು
ಬಾಳಲೆಂತು ನಾ ಬಾಳಲೆಂತು ನಾ
ಟಿಪ್ಪಣಿ:
ಅಡಿಗರ ಜನ್ಮ ಶತಾಭ್ದಿ ವರುಷ ೨೦೧೭. ನಾವೆಲ್ಲ ಬೇ ಏರಿಯಾ ಕನ್ನಡಿಗರು ಸೇರಿ ಶತಾಭ್ಡಿಯ ದಿನವನ್ನು ಒಂದು ಪುಟ್ಟ ಸಭಾಂಗಣದಲ್ಲಿ ಆಚರಿಸಿದೆವು. ಅಂದು ನಾನು ಕೂಡ ಅಡಿಗರ ಕವನದ ಬಗ್ಗೆ ನನ್ನ ವಿಮರ್ಶನೆಯನ್ನು ಹಂಚಿಕೊಂಡೆ. ಆ ದಿನದ ನನ್ನ ವ್ಯಾಖ್ಯಾನ ಈ ಕೆಳ ಕಂಡ ಟಿಪ್ಪಣಿಯ ಆದರಿತವಾಗಿತ್ತು.
ಅಡಿಗರು ಈ ಕವಿತೆಯನ್ನು ಯಾವ ವರ್ಷದಲ್ಲಿ ಬರೆದಿದ್ದು ಅಂತ ಮಾಹಿತಿ ಸಿಗಲಿಲ್ಲ. ಬಹುಷಃ ನಲವತ್ತರ ಶತಕದಲ್ಲಿ ಬರೆದಿರಬಹುದೆಂದು ನನ್ನ ಊಹೆ.
ಹೆಣ್ಣಿನ ಮನೋಗತವನ್ನು ಮತ್ತು ಅವಳ ಮನಸ್ಸಿನ್ನಲ್ಲಾಗುವ ಅಸಹಾಯಕತೆಯನ್ನು ಸ್ಪಂದಿಸಿ ಬರೆದಂತ ಕವಿತೆ ಇದು. ಹೆಣ್ಣಿನ ಅಳಲನ್ನು ಅರ್ಥ ಮಾಡಿಕೊಳ್ಳಲು ಗಂಡಿಗೆ ಕಷ್ಟ ಎಂದು ಎಲ್ಲರ ಅಭಿಮತ. ಆದರೆ, ಜಾನಪದ ಸಾಹಿತ್ಯದಲ್ಲಿ ಹೊರತು ಪ್ರಪಂಚದ ಎಲ್ಲ ಸಾಹಿತ್ಯ ರೂಪದಲ್ಲೂ ಹೆಣ್ಣು ತನ್ನ ದುಃಖವನ್ನು ತಾನೇ ವರ್ಣಿಸಿ ಬರೆದ ಕವನಗಳು ಸ್ವಲ್ಪ ವಿರಳವೆಂದೇ ಹೇಳಬಹುದು. ಸೀತೆಯ ದುಃಖವನ್ನು ವಾಲ್ಮೀಕಿ ಸ್ಪಂದಿಸಿದಂತೆ ಬೇರಾವ ಹೆಣ್ಣು ತನ್ನದೇ ಕಾವ್ಯದಲ್ಲಿ ಬರೆದಿಲ್ಲ ಎನ್ನುವುದನ್ನು ಗಮನಿಸಿದಾಗ ಗಂಡಿನ ಮೇಲೆ ಹೊರಸಿರುವ ಈ ಅಪವಾದ ಅಷ್ಟು ಸರಿಯಲ್ಲ ಅನಿಸುತ್ತದೆ. ಅಡಿಗರ ಈ ಕವಿತೆಯೂ ಕೂಡ ಗಂಡಿನ ಮೇಲಿನ ಆಕ್ಷೇಪಣೆಗೆ ಹೊರತಾದದ್ದು, ಏಕೆಂದರೆ, ಅವರ ಎಷ್ಟೋ ಕವಿತೆಗಳು ಹೆಣ್ಣಿನ ಮನೋಗತವನ್ನು ವ್ಯಕ್ತೀಕರಣ ಮಾಡುವುದರಲ್ಲಿ ಬಹುಪಾಲು ಯಶಸ್ಸು ಪಡೆದಿವೆ. “ಯಾವ ಮೋಹನ ಮುರಳಿ ಕರೆಯಿತೋ,” ಈ ಸಾಲಿನಲ್ಲಿ ಉತ್ತಮ ಉದಾಹರಣೆ. ಅಡಿಗರ ಇಂತಹ ರಚನೆಗಳಲ್ಲಿ ಕಂಡು ಬರುವ ವೈಶಿಷ್ಟತೆ ಎಂದರೆ ಆಳವಾದ ಭಾವನೆಗಳನ್ನು ಅದರಲ್ಲೂ ಹೆಚ್ಚಾಗಿ ಹೆಣ್ಣಿನ ಮನದಾಳದ ಅನುಕಂಪನಗಳನ್ನು ಅವಳದೇ ದೃಷ್ಟಿಯಿಂದ ಹಂಚಿಕೊಳ್ಳುವ ಕವನ ಶೈಲಿ. ಹೃದಯದಿ ಮೂಡಿ ಬಂದರೂ ತುಟಿ ಕೂಡಿಸಲಾಗದ ಮಾತುಗಳ ದ್ವಂದತೆಯನ್ನು ಕನಿಕರಿಸಿ ಹೇಳುವ ಕವಿತೆ ಇದು. ಹಿಂದಿ ಮತ್ತು ಉರ್ದು ಭಾಷೆಗಳಲ್ಲಿ ಇರುವ ಗಝಲ್ ಗಳಂತೆಯೇ ಈ ಕವನಗಳು, ಒಮ್ಮೆ ಕೇಳಿದರೆ ಮತ್ತೆ ಮತ್ತೆ ಕಾಡುವ ಭಾವಗೀತೆಗಳಾಗಿ ಮಾರ್ಪಾಟಾಗುತ್ತವೆ.
ಐದು ಚರಣಗಳಿರುವ ಈ ಹಾಡನ್ನು ನೂರು ಬಾರಿ ಓದಿದಾಗಲೂ ಹೊಸ ಹೊಸ ಭಾವನೆಗಳೇ ಸ್ಪಂದಿಸುತ್ತವೆ. ಯಾವ ರೀತಿ ಎರಡು ಸೂರ್ಯೋದಯಗಳು ಒಂದು ರೀತಿ ಇರುವುದಿಲ್ಲವೋ ಅದೇ ತರಹ ಈ ಭಾವನೆಗಳು ಬೇರೆ ಬೇರೆಯಾಗಿ ಪರಿವರ್ತನೆ ಗೊಳ್ಳುತ್ತವೆ. ಈ ಕವಿತೆ ಓದಿದಾಗ ನೂರಾರು ಜನರಲ್ಲಿ ನೂರಾರು ರೀತಿಯ ಭಾವನೆಗಳು ಮೂಡುತ್ತವೆ. ಹಾಗಿದ್ದಲ್ಲಿ ಒಂದು ಕವಿತೆಯಲ್ಲಿ ಎಲ್ಲೆಯಿಲ್ಲದ ಭಾವನೆಗಳನ್ನು ಅಡಿಗರು ಹೇಗೆ ಸೃಷ್ಟಿಸಲು ಸಾಧ್ಯ? ಅದು ನಮ್ಮ ಸೀಮಿತ ಜ್ಞಾನದ ಮೇರೆಗೆ ಸಿಲುಕುವಂತದ್ದಲ್ಲ.
ಆದರೆ ನನ್ನ ದೃಷ್ಟಿಯಲ್ಲಿ ಈ ಕವಿತೆಯ ಭಾವಾರ್ಥ ಹೀಗಿದೆ: ಮೊದಲೆರಡು ಚರಣಗಳಲ್ಲಿ ಬಳ್ಳಿಯೊಂದನ್ನು ಉಪಮೆಯಾಗಿ ಬಳಸಿಕೊಳ್ಳುತ್ತಾರೆ ಅಡಿಗರು. ಯಾವುದು ನಮಗೆ ದೊರೆಯುದಿಲ್ಲೊವೋ ಅದನ್ನು ಪಡೆಯಲು ತೊಳಲಾಡುತ್ತದೆ ನಮ್ಮ ಮನ. ಬಳ್ಳಿಯಂತೆ ಎಲ್ಲ ದಿಕ್ಕುಗಳಲ್ಲಿ ನಮ್ಮ ಆಸೆಯ ಕುಡಿಯನು ಹರಡುವ ಪ್ರಯತ್ನದಲ್ಲಿ ಮತ್ತಷ್ಟು ತೊಳಲಾಡುತ್ತೇವೆ. ಆದರೆ ಬಳ್ಳಿಬಾಳಿಗೆ ಆಸರೆ ಸಿಗದಾಗ ಬೇಸರದಿಂದ ವಿಚಾರ ಸ್ವಾತಂತ್ರ್ಯ ಗಡಿಯನ್ನೇ ಮೊಟಕು ಗೊಳಿಸುತ್ತದೆ ಈ ಜೀವನ. ಇಲ್ಲಿ ಅಡಿಗರು ಕುಡಿ ಮತ್ತು ಗಡಿ ಎನ್ನುವ ಪ್ರಾಸವನ್ನು ಸುಂದರವಾಗಿ ಬಳಸಿಕೊಂಡಿದ್ದಾರೆ. “ಚಾಚುತಿದೆ ತನ್ನ ಕುಡಿಯನು,” ಮತ್ತು “ತುಡುಕಲೆಳಸುತಿದೆ ತನ್ನ ಗಡಿಯನು, ” ಹರಡುವ ಹಂಬಲ ಒಂದು ಕಡೆಯಾದರೆ ವ್ಯಕ್ತಪಡಿಸಲು ಸಾಧ್ಯವಾಗದ ಸತ್ಯತೆ ಇನ್ನೊಂದೆಡೆ.
ಮುಂದಿನ ಎರಡು ಚರಣಗಳಲ್ಲಿ ಗುರಿ ಸಾಧಿಸಲು ಹೊರಟ ಹೆಣ್ಣಿನ ಮನಸ್ಥಿತಿಯನ್ನು ಒಂದು ದೋಣಿ ಅಥವಾ ಹಡಗಿನ ಬಹು ಸೂಕ್ಷ್ಮ ಉಪಮೆಯೊಂದರಲ್ಲಿ ವರ್ಣಿಸಿದ್ದಾರೆ ಎಂದು ನನ್ನ ಅನಿಸಿಕೆ. ಗುರಿ ಸಾಧಿಸಲು ಹೊರಟ ಹೆಣ್ಣಿಗೆ ಇನ್ನೇನು ದಡ ಮುಟ್ಟಿತೆಂಬ ವಿಶ್ವಾಸ ಮೂಡಿದರೂ ವಾಸ್ತವಾಂಶವೇ ಬೇರೆಯಾಗಿ ಹಿಂದೆಜ್ಜೆ ಇಡಬೇಕಾದ ಪರಿಸ್ಥಿತಿಯನ್ನು ಬಹಳ ಮನೋಜ್ಞವಾಗಿ ವರ್ಣಿಸಿದ್ದಾರೆ. ಬೇರೆಯವರನ್ನು ಅಂಗಲಾಚಲು ಸ್ವಾಭಿಮಾನಿ ಸ್ತ್ರಿಗೆ ಸಾಧ್ಯವೇ?
ಕೊನೆಯ ಚರಣದಲ್ಲಿ ಕತ್ತಲಿನ ಸುರಂಗ ಮಾರ್ಗದ ಮತ್ತೊಂದು ಉಪಮೆಯನ್ನು ನಾವು ಕಾಣಬಹುದು. ಸುರಂಗದಲ್ಲಿ ಧೈರ್ಯ ಮತ್ತು ಧೃಡ ನಿಶ್ಚಯಕ್ಕೆ ಮನಸು ಬರದೇ ಕಕ್ಕಾವಿಕ್ಕಿಯಾದರೂ ಅಂತರ್ಜ್ಯೋತಿ ಒಂದೇ ನಮ್ಮನ್ನು ಕಾಯುವುದು. ಸುರಂಗದ ಕೊನೆಯಲ್ಲಿ ಸೂರ್ಯನ ಕಿರಣವನ್ನು ಕಂಡೇ ಕಾಣುತ್ತೇನೆ ಎಂಬ ಭರವಸೆ ಮೂಡುವುದು.
ಈ ಕವಿತೆಗೆ ನಿಮ್ಮ ಸ್ಪಂದನವೇ ಬೇರೆ ಎಂದು ನಾನು ಬಲ್ಲೆ. ಒಟ್ಟಿನಲ್ಲಿ ಹೇಳುವುದಾದರೆ, ಈ ಕವಿತೆಯನ್ನು ವಿಶ್ಲೇಷಿಸುವುದು ವ್ಯರ್ಥ. ಏಕೆಂದರೆ, ಮತ್ತೊಮ್ಮೆ ಓದಿದಾಗ ಮನದಲ್ಲಿ ಮೂಡುವ ಭಾವನೆಗಳೇ ಬೇರೆ! ಅದೇ ಅಡಿಗರ ಕೊಡುಗೆ ಅಂತ ಖಂಡಿತ ಹೇಳಬಲ್ಲೆ.
[A special thanks to Ravi Krishnappa for the video and Prakash Nayak and Anand Ramamurthy for their leadership in arranging Dr. Gopala Krishna Adiga’s centenary program.]
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ