ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟದ ವಾರ್ಷಿಕ ಸಂಚಿಕೆ ಸ್ವರ್ಣಸೇತು-೨೧೦೬ ರ ಬಿಡುಗಡೆಯ ಸಮಾರಂಭದಲ್ಲಿ ನನ್ನ ಭಾಷಣದ ವಿಡಿಯೋ ಮತ್ತು ಬರಹ ಇಲ್ಲಿದೆ.
ಮುಖ್ಯ ಅತಿಥಿಗಳಾದ ಶ್ರೀಮತಿ ಅಲಮೇಲು ಅಯಂಗಾರ್, ಕೂಟದ ಅಧ್ಯಕ್ಷರುಗಳಾದ ಶ್ರೀ ಪ್ರದೀಪ್ ನಡುತೋಟ ಮತ್ತು ಸಿದ್ದು ರತಿ ಅವರೇ, ಮತ್ತು ಈ ದಿನ ಇಲ್ಲಿ ಸೇರಿರುವ ಕನ್ನಡಿಗರಿಗೆ ನನ್ನ ನಮಸ್ಕಾರ.
2016ರ ಸ್ವರ್ಣಸೇತು ವಾರ್ಷಿಕ ಸಂಚಿಕೆಯನ್ನು ನಿಮ್ಮೊಡನೆ ಹಂಚಿಕೊಳ್ಳುವ ಹರ್ಷದ ಕೆಲಸ ನನ್ನದಾಗಿದೆ.
ಎಲ್ಲೋ ಹುಟ್ಟಿ, ಎಲ್ಲೋ ಬೆಳದು, ಎಲ್ಲೋ ನೆಲೆ ಸೇರಿರುವ ನಮ್ಮೆಲ್ಲರಿಗೂ ಕನ್ನಡ ಕೂಟ ಸಾಂಸ್ಕೃತಿಕ ಬಂಧನ. ಅದೇ ರೀತಿ, ಸ್ವರ್ಣಸೇತು, ಸಾಹಿತ್ಯ ಮತ್ತು ಬರವಣಿಗೆಯ ಮೂಲಕ ಆ ಹೊಂದಿಕೆಯನ್ನು ಭದ್ರಪಡಿಸುವ ಅವಿಭಾಜ್ಯ ಅಂಗವಾಗಿ ಬೆಳದು ಬಂದಿದೆ. ನನಗೆ ನೆನಪಿರುವಂತೆ, ಕಳೆದ ೨೫ ವರ್ಷಗಳಿಂದಲೂ ಈ ಸಂಚಿಕೆ ಸಿಲಿಕಾನ್ ಕಣಿವೆಯ ಕನ್ನಡಿಗರ ಕೈ ಸೇರಿದೆ ಎನ್ನುವುದು ಒಂದು ಹೆಮ್ಮೆಯ ವಿಷಯ. ಇತ್ತೀಚಿಗೆ ನಾನು ಸುವರ್ಣ ವಾಹಿನಿ ಎನ್ನುವ ಒಂದು ಡಿಜಿಟಲ್ ಪೇಪರ್ ನಲ್ಲಿ ಸ್ವರ್ಣಸೇತುವಿನ ಹಿಸ್ಟರಿ ಬಗ್ಗೆ ಬರೆದಿದ್ದೆ. ನೀವೆಲ್ಲರೂ ಅದನ್ನು ಓದಿರ ಬಹುದು. 12 ವರ್ಷಗಳ ನಂತರ ಮತ್ತೊಮ್ಮೆ ಸ್ವರ್ಣಸೇತು ಸಂಚಿಕೆಯ ಸಾರಥ್ಯವನ್ನು ವಹಿಸಿಕೊಳ್ಳುವ ಅದೃಷ್ಟ ನನ್ನದಾಗಿದೆ.
ಕಳೆದ ಸಲದ ಅನುಭವಕ್ಕೆ ಹೋಲಿಸಿದರೆ, ಬಹಳ ಬದಲಾವಣೆ ಆಗಿದೆ. ಕಳೆದ ಒಂದು ದಶಕದಲ್ಲಿ ಕನ್ನಡದ ಡಿಜಿಟಲ್ ಮಾಧ್ಯಮ ಸಾಕಷ್ಟು ಬೆಳೆದಿದೆ ಎನ್ನುವುದನ್ನು ನಾನು ಒತ್ತಿ ಹೇಳಬೇಕಿಲ್ಲ. ಸಾವಿರಾರು ಕನ್ನಡಿಗರು ಬ್ಲಾಗ್, ಫೇಸ್ಬುಕ್, ಟಂಬ್ಲರ್, ಗೂಗಲ್ ಪ್ಲಸ್, ಮತ್ತು ಇಂಟರ್ನೆಟ್ ಮೂಲಕ ಬರವಣಿಗೆಯಲ್ಲಿ ತೊಡಗಿದ್ದಾರೆ.
ಆದರೆ ಇಷ್ಟೊಂದು ಡಿಜಿಟಲ್ ಮಾಧ್ಯಮಗಳ ಮಧ್ಯೆ ಪ್ರಿಂಟ್ ಮಾಧ್ಯಮ ತನ್ನ ಹೊಳಪನ್ನು ಕಳೆದು ಕೊಂಡಿದೆ ಎನ್ನುವುದು ಸತ್ಯ. ಸಾಹಿತ್ಯದ ತೃಷೆ ನೀಗಿಸಿಕೊಳ್ಳಲು ಮೊದಲಿನಂತೆ ನಾವು ಪ್ರಿಂಟ್ ಮಾಧ್ಯಮಕ್ಕೆ ಗುಲಾಮರಾಗಬೇಕಿಲ್ಲ ಎನ್ನುವ ಬದಲಾದ ಧೋರಣೆ ಬರಹಗಾರರಲ್ಲೂ ಕಂಡು ಬರುತ್ತಿದೆ.
ಅದರ ಅನುದ್ದೇಶಿತ ಪರಿಣಾಮವೋ ಎನ್ನುವಂತೆ ಸ್ವರ್ಣಸೇತು ಸಂಚಿಕೆಗೆ ಬರುವ ಕಥೆ, ಕವನ ಮತ್ತು ಲೇಖನಗಳ ಸಂಖ್ಯೆ ಕೂಡ ಬೆರಳೆಣಿಸುವಷ್ಟು ಸ್ಥಿತಿಗೆ ಇಳಿದಿದೆ. ಸಂಪಾದಕ ಸಮಿತಿ ಅಂಗಲಾಚಿದರೂ ನಮಗೆ ಸಿಗುವ ಲೇಖನಗಳು ತೀರಾ ಕಡಿಮೆ. ಸಿಕ್ಕಿದರು ಅದನ್ನು ಆಗಲೇ ಬರಹಗಾರರು ತಮ್ಮ ಬ್ಲಾಗ್ ನಲ್ಲಿ ಆಗಲೇ ಪೋಸ್ಟ್ ಮಾಡಿರುತ್ತಾರೆ. ಜೊತೆಗೆ ಮುದ್ರಣ ಖರ್ಚು ಗಗನಕ್ಕೇರಿದೆ. ಒಂದು ಪ್ರತಿ ನಿಮ್ಮ ಕೈ ಸೇರಲು ೧೪ ಡಾಲರುಗಳೇ ಬೇಕಾಯಿತು ಈ ಬಾರಿ . ಹಾಗಿದ್ದಲ್ಲಿ ಸ್ವರ್ಣಸೇತು ಸಂಚಿಕೆಯನ್ನು ಮುಂದುವರಿಸ ಬೇಕೇ ಅಥವಾ ಅದರ ಪರಿಮಿತಿಯನ್ನು ಕೇವಲ ಡಿಜಿಟಲ್ ಮಾಧ್ಯಮಕ್ಕೆ ನಿಗ್ರಹಿಸಬಾರದೇಕೆ ಎನ್ನುವ ಸಂಶಯ ತಲೆದೋರಿದ್ದು ಸಹಜ.
ಆದರೆ ಅವು ವಿಷಾದಕರ ಪ್ರಶ್ನೆಗಳು ಮಾತ್ರ. ಏಕೆಂದರೆ, ಅಂಗೈಯಲ್ಲಿ ಸಂಚಿಕೆಯನ್ನು ಹಿಡಿದು, ಕನ್ನಡದ ಸುಂದರ ಲಿಪಿಯನ್ನು ಕಣ್ತುಂಬ ಓದಿ, ಪುಟಗಳನ್ನು ತಿರುವಿಹಾಕುವುದರ ಆನಂದ ಡಿಜಿಟಲ್ ಮಾಧ್ಯಮ ಇನ್ನೂ ಕೊಡಲಾರದು ಎನ್ನುವ ಮಿತಿ ಅರಿವಾದಾಗ ಉತ್ತರ ತಾನಾಗಿಯೇ ದೊರಕುವುದು.
ಈ ಸಂಚಿಕೆಯ ಒಳಗೇನಿದೆ ಎಂದು ನಾನು ಹೆಚ್ಚು ಹೇಳಲು ಹೋಗುವುದಿಲ್ಲ. ಏಕೆಂದರೆ ನೀವೇ ಅದನ್ನು ನಿಮ್ಮ ಬಿಡುವಿನ ಸಮಯದಲ್ಲಿ ಓದಿ, ಬರಹಗಾರರ ಮನೋಗತವನ್ನು ಅರಿತುಕೊಂಡರೆ ಚೆನ್ನ.
ಅಲ್ಲದೆ ನಾನು ಮತ್ತು ಶ್ರೀಮತಿ ಅಲಮೇಲು ಅವರನ್ನು ಬಿಟ್ಟು ಯಾರೂ ಈ ಸಂಚಿಕೆಯ ಮುದ್ರಿತ ಪ್ರತಿಯನ್ನು ನೋಡಿಲ್ಲ. ಅಂದರೆ ನಿಮಗೂ ಅದರ ಬಗ್ಗೆ ಕುತೂಹಲ ಮೂಡಿರಬಹುದು! ಆದರೆ ಇಷ್ಟು ಮಾತ್ರ ಹೇಳಬಲ್ಲೆ: ಅದರಲ್ಲಿ ಕತೆ, ಕವನ, ವಿಡಂಬನೆ, ಲೇಖನ, ಚಾಯ ಚಿತ್ರ, ವರದಿ, ಪ್ರಭಂದ, ಸಂದರ್ಶನ, ಬುದ್ದಿಗೆ ಕಸರತ್ತು ಕೊಡುವ ಪ್ರಶ್ನೆಗಳು, ಪ್ರವಾಸ ಕಥನ, ಮಕ್ಕಳ ಬರವಣಿಗೆ, ಎಲ್ಲ ಇವೆ.
ಒಟ್ಟಿನಲ್ಲಿ ಹೇಳುವುದಾದರೆ ಕೂಟದ ಎಲ್ಲ ಸದಸ್ಯರ ಸಾಹಿತ್ಯ ಅಭಿಲಾಷೆಯ ಪ್ರಾತಿನಿಧಿಕ ಲೇಖನಗಳನ್ನು ಆರಿಸಿ ನಿಮ್ಮ ಮುಂದಿಟ್ಟಿದ್ದೀವಿ. ಈ ಅರ್ಥದಲ್ಲಿ ಸ್ವರ್ಣಸೇತು ನಿಮ್ಮಿಂದಲೇ, ನಿಮಗೋಸ್ಕರ ಮತ್ತು ನಿಮಗಾಗಿಯೇ ಅರ್ಪಿಸಿದ ಕೃತಿ.
ಪ್ರಿಂಟ್ ಮತ್ತು ಡಿಜಿಟಲ್, ಈ ಎರಡೂ ಮಾಧ್ಯಮಗಳಲ್ಲಿ ಲಭ್ಯವಿರುವ ಸ್ವರ್ಣಸೇತು ಸಂಚಿಕೆಯನ್ನು ಓದಿ ಆನಂದಿಸಿರಿ.
ಅಲಮೇಲು ಅವರನ್ನೇ ಕೇಳಿ. ಈ ಸಂಚಿಕೆಯನ್ನು ಓದುವಾಗ ಎಷ್ಟು ಬಾರಿ ಉತ್ಸಾಹ ಮತ್ತು ಎಷ್ಟು ಬಾರಿ ತೂಕಡಿಕೆ ಬರಸಿತು ಅಂತ. ನಿಮಗೂ ಒಂದು ಅಂದಾಜು ಸಿಗಬಹುದು! ಸಂಪಾದಕ ಸಮಿತಿ ಬಡಾಯಿ ಕೊಚ್ಚಿಕೊಳ್ಳುವುದರ ಬದಲು ನೀವುಗಳೇ ಅದನ್ನು ಓದಿ ನಿಮ್ಮ ಅಭಿಪ್ರಾಯ, ಠೀಕೆ, ಪ್ರೋತ್ಸಾಹ, ಎಲ್ಲವನ್ನು ತಿಳಿಸಿದರೆ ಮುಂದಿನ ಸ್ವರ್ಣಸೇತುವನ್ನು ಇನ್ನಷ್ಟು ಭದ್ರವಾಗಿ ಕಟ್ಟಬಹುದು. ನಿಂದಕರಿರ ಬೇಕೈಯ್ಯ ಎಂದು ಪುರಂದರ ದಾಸರೇ ಹೇಳಿರುವಂತೆ ನಿಮ್ಮ ನಿಂದನೆಗೆ ಕೂಡ ಸದಾ ಸ್ವಾಗತ.
ಪ್ರದೀಪ್ ನಡುತೋಟ ಅವರ ಜೊತೆ ಹೀಗೆ ಮಾತಾಡುತ್ತಿದ್ದಾಗ, ಅವರು ಸ್ವರ್ಣಸೇತು ಸಮಿತಿಯ ಕೆಲಸದ ಬಗ್ಗೆ ಒಂದೆರಡು ಮಾತುಗಳನ್ನು ಹಂಚಿಕೊಳ್ಳಿ ಎಂದು ವಿನಂತಿಸಿಕೊಂಡರು. ಆಗ ನನಗೆ ಅನಿಸಿದ್ದು, ಈ ಸಂಚಿಕೆಯ ಕಥೆಯೂ, ಒಂದು ರೀತಿ ನಾವು ಚಿಕ್ಕವರಾಗಿದ್ದಾಗ ಚಂದಮಾಮದಲ್ಲಿ ಓದುತ್ತಿದ್ದ ಕಥೆಯಂತೆಯೇ. ಆ ಕಥೆಗಳು ಶುರುವಾಗುವುದು ಒಬ್ಬ ರಾಜಾನೋ ಅಥವಾ ಬ್ರಾಹ್ಮಣ ತನ್ನ ಹೆಂಡತಿ ಮಕ್ಕಳೊಂದಿಗೆ ಜೀವನ ನೆಡಸುತ್ತಿರುತ್ತಾನೆ. ಆದರೆ ಕಥೆ ಮಧ್ಯದಲ್ಲಿ ಇದ್ದಕ್ಕಿದ್ದಂತೆ ಅವನಿಗೆ ನೂರಾರು ಕಷ್ಟ ಕಾರ್ಪಣ್ಯಗಳು ಬರುತ್ತವೆ. ಆದರೂ ಅವನು ದೃಢ ಮನಸ್ಸಿನಿಂದ ಹೋರಾಡಿ, ಸ್ನೇಹಿತರ ಸಹಾಯದಿಂದ ಆ ಕಷ್ಟಗಳಿಂದ ಮುಕ್ತನಾಗುತ್ತಾನೆ. ಕೊನೆಯಲ್ಲಿ ಅವರೆಲ್ಲರೂ ಸುಖವಾಗಿ ಬದುಕಿದರು ಎಂದು ಮುಕ್ತಾಯವಾಗುತ್ತವೆ ಆ ಚಂದಮಾಮದ ಕಥೆಗಳು. ಸ್ವರ್ಣಸೇತು ಕಥೆಯು ಅದೇ ರೀತಿ. ಇಂದು ಕಷ್ಟ ಕಾರ್ಪಣ್ಯಗಳೆಲ್ಲ ದೂರವಾಗಿ ವಿಜಯ ಸಾಧಿಸಿದ ದಿನ!
ಸಂಚಿಕೆ ಹೊರತರಲು ವಿಘ್ನಗಳು ನೂರೆಂಟದರೂ, ನಮ್ಮ ಸಂಪಾದಕ ಸಮಿತಿಯ ಉತ್ಸಾಹಕ್ಕೆ ಯಾವ ಕುಂದೂ ಬರಲಿಲ್ಲ. ಸ್ವರ್ಣಸೇತು ಸಮಿತಿಯಲ್ಲಿ ಕಳೆದ ಹತ್ತು ತಿಂಗಳುಗಳಿಂದ ಅವಿರತವಾಗಿ ದುಡಿದ
ಗುರುಮೂರ್ತಿ, ಚಿತ್ರ ಶ್ರೀನಿವಾಸಯ್ಯ, ದೇವ್ ಮಿಲಿಂದ್, ಶ್ರೀನಿವಾಸ್ ಶೇಷಾದ್ರಿ, ಸಮರ್ಥ್ ನಾಗಭೂಷಣ್, ಸಂಸ್ಕೃತಿ ಸಮೀರ್ ಮತ್ತು ಕಿರಿಯರ ವಿಭಾಗದ ಕೀರ್ತನ ಆನಂದ್ ಇವರಿಗೆ ನಾನು ಚಿರಋಣಿ. ಇವರೆಲ್ಲರಿಗೂ ಒಂದು ಬಾರಿ ಜೋರಾಗಿ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿ.
ಸ್ವರ್ಣಸೇತು ೨೦೧೬ ರ ಮುಖಪುಟದ ಸುಂದರ ವಿನ್ಯಾಸವನ್ನು ಮಾಡಿದವರು ಡಾ. ಬಿ.ಕೆ.ಎಸ್. ವರ್ಮಾ. ಎಲ್ಲರಿಗು ಚಿರಪರಿಚಿತರಾಗಿರುವ ಡಾ. ವರ್ಮಾ ಅವರು ಈ ಕೆಲಸದಲ್ಲಿ ನೀಡಿದ ಸಹಕಾರ, ತೋರಿದ ಉತ್ಸಾಹ, ವಿನಯ, ಆಶೀರ್ವಚನ ಇವುಗಳನ್ನು ನಾವು ವಿಶೇಷವಾಗಿ ಸ್ಮರಿಸಿ ಅವರಿಗೆ ಮನಸಾರೆ ನಮ್ಮ ಕೃತಜ್ಞತೆಗಳನ್ನು ಸಲ್ಲಿಸಲಿಚ್ಛಿಸುತ್ತೇವೆ
ಕಥಾಸ್ಪರ್ಧೆಗೆ ತೀರ್ಪುಗಾರರಾಗಿ ನನಗೆ ಸಹಾಯ ಮಾಡಿದ ದತ್ತಾತ್ರಿ ರಾಮಣ್ಣನವರಿಗೂ ನನ್ನ ವಂದನೆಗಳು.
ಸಿಲಿಕಾನ್ ಕಣಿವೆಯ ಬಿಡುವಿಲ್ಲದ ದಿನಚರಿಯಲ್ಲೂ ಉತ್ತಮ ಕಥೆ, ಕವನ ಪ್ರಬಂಧಗಳನ್ನು ಬರೆದು ಕಳುಹಿಸಿದ ಎಲ್ಲ ಬರಹಗಾರರಿಗೂ ನಾನು ಕೃತಜ್ಞ.
ಛಾಯಾಚಿತ್ರ ಹಾಗು ಜಾಹಿರಾತುಗಳನ್ನು ಒದಗಿಸಿದ ಎಲ್ಲರಿಗು ನನ್ನ ಅಭಿನಂದನೆಗಳು.
ಸ್ವರ್ಣಸೇತು ಮುದ್ರಿತ ಪ್ರತಿಗಳನ್ನು ಬೆಂಗಳೂರಿನಿಂದ ತರಿಸಿಕೊಳ್ಳಲು ಸಹಾಯ ಮಾಡಿದ ಕೂಟದ ಮಾಜಿ ಅಧ್ಯಕ್ಷ ಶ್ರೀ ಧನು ಕೆಂಗಯ್ಯ ಅವರಿಗೆ ನನ್ನ ಸ್ಪೆಷಲ್ ಅಭಿನಂದನೆಗಳು.
ಸ್ವರ್ಣಸೇತು ಸಂಚಿಕೆಯ ಯಶಸ್ಸಿಗೆ ಕಾರಣ ಕೂಟದ ಅಧ್ಯಕ್ಷ ಪ್ರದೀಪ್ ನಡುತೋಟ ಮತ್ತು ಉಪಾಧ್ಯಕ್ಷ ಶ್ರೀ ಅರವಿಂದ್ ಬಾಯರಿ ಅವರ ಪ್ರೋತ್ಸಾಹ, ನಮ್ಮೆಲ್ಲರ ಕುಟುಂಬದವರ ಸಹಾಯ ಮತ್ತು ಸಹಾನುಭೂತಿ ಎಂದರೆ ತಪ್ಪಾಗಲಾರದು. ಅವರೆಲ್ಲರಿಗೂ ನಾನು ಆಭಾರಿ.
ಈ ದಿನದ ಮುಖ್ಯ ಅಥಿತಿಯಾಗಿ ಬಂದಿರುವ ಶ್ರೀಮತಿ ಅಲಮೇಲು ಅವರಿಗೆ ನನ್ನ ಮನಃಪೂರ್ವಕ ಧನ್ಯವಾದಗಳನ್ನು ತಿಳಿಸುತ್ತೇನೆ. ಪುಸ್ತಕವನ್ನು ಓದಿ ಅದರ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಿಳಿಸಿ ಅಂತ ಕೇಳಿದಾಗ ಅವರು ಹೇಳಿದ್ದು ಈ ರೀತಿ: “ಸಹೃದಯರೊಡನೆ ಸಾಹಿತ್ಯ ಸಲ್ಲಾಪದಲ್ಲಿ ಕಾಲಕಳೆಯುವುದಕ್ಕಿಂತ ಮಿಗಿಲಾದ ಸಂತೋಷ ಮತ್ತೊಂದಿಲ್ಲ.” ಅವರಿಗೆ ಮತ್ತೊಮ್ಮೆ ಸ್ವಾಗತ.
ವಿಶಾಲ ಮನೋಭಾವದ ಕೂಟದ ಸದಸ್ಯರೊಡನೆ ಈ ಸಂಚಿಕೆಯನ್ನು ಹಂಚಿಕೊಳ್ಳುವಾಗ ನೆನಪಾದದ್ದು ಗಾಂಧೀಜಿಯವರ ಒಂದು ನುಡಿಮುತ್ತು: “ನೀವು ಮಾಡುವ ಯಾವುದೇ ಕೆಲಸ ಅಲ್ಪ ಎನಿಸಬಹುದು, ಆದರೆ ಅದು ಮಹತ್ವಪೂರ್ಣ ಎನಿಸುವುದು ನೀವು ಏನಾದರೂ ಮಾಡಿದಾಗಲೇ.” ಸ್ವರ್ಣಸೇತು ಮತ್ತು ಕೂಟದ ಎಲ್ಲ ಕೆಲಸಗಳಿಗೂ ಅನ್ವಯಿಸುವ ಈ ನುಡಿಮುತ್ತು ನಿಮಗೂ ಸ್ಫೂರ್ತಿದಾಯಕವಾಗಲಿ ಎಂದು ಹಾರೈಸಿ ಈ ನನ್ನ ಮಾತುಗಳನ್ನು ಮುಗಿಸುತ್ತೇನೆ. ಧನ್ಯವಾದಗಳು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ