ಶನಿವಾರ, ಅಕ್ಟೋಬರ್ 14, 2017

ಧರೆಯೆ ಹತ್ತಿ ಉರಿಯುವಾಗ ಬದುಕಲೆಲ್ಲಿ ಓಡುವೆ


ಧರೆಯೆ ಹತ್ತಿ ಉರಿಯುವಾಗ ಬದುಕಲೆಲ್ಲಿ ಓಡುವೆ


fire1_Oct17.JPG


ಸರಿ ರಾತ್ರಿಯ ಕನಸಿನ ಲೋಕದಲ್ಲಿ ವಿರಮಿಸಿದ್ದವರನ್ನು ಯಾರೋ “ಬೆಂಕಿ,” “ಕಾಡ್ಗಿಚ್ಚಿನ ಬೆಂಕಿ” ಎಂಬ ಆರ್ಥ ಧ್ವನಿಯಲ್ಲಿ ಕೂಗಿ ಎಬ್ಬಿಸಿದಾಗ ಆಗುವ ಭಯ, ಭೀತಿ, ಆತಂಕಗಳನ್ನು ವರ್ಣಿಸುವುದು ಕಷ್ಟ.  ಕಣ್ಣು ಮುಚ್ಚಿ ಕಣ್ಣು ತೆರೆಯುವುದೊರಳಗೆ ಜೀವನವೇ ಬದಲಾಗಬಹುದು. ಒಂದೆರಡು ನಿಮಿಷಗಳ ಅವಧಿಯಲ್ಲಿ, ಇಡೀ ಜೀವನವನ್ನೆ ಕಳೆದ ಮನೆಯನ್ನು ಉಟ್ಟ ಬಟ್ಟೆಯಲ್ಲೇ ತೊರೆದು ದಿಕ್ಕಿಲ್ಲದೆ ಓಡುವ ಪರಿಸ್ಥಿತಿಯನ್ನು ಊಹಿಸಿಕೊಳ್ಳುವುದು ಕಷ್ಟ.  ಪ್ರೀತಿಯಿಂದ ಸಾಕಿದ ಪಕ್ಷಿ ಪ್ರಾಣಿಗಳನ್ನು ಮನಸ್ಸಿಲ್ಲದಿದ್ದರೂ ಅಸಹಾಯಕತೆಯಿಂದ ಉರಿವ ಅಗ್ನಿಗೆ ಬಿಟ್ಟು ಪಲಾಯನ ಮಾಡುವ ದುಃಸ್ಥಿತಿ ಯಾರಿಗೂ ಬರಬಾರದು.  ಅಂತಹ ಸ್ಥಿತಿಯಲ್ಲಿ ಯಾವುದೋ ಒಂದು ಭರವಸೆ --ಮರಳಿ ಬಂದಾಗ ಎಲ್ಲವೂ ಸರಿಯಿರುತ್ತದೆ ಎನ್ನುವ ಆಧಾಮ್ಯ ಭರವಸೆ -- ಎಲ್ಲರಲ್ಲೂ ಮೂಡಿರುತ್ತದೆ.  

fire_Oct17.jpg
ಆದರೆ ಕಾಡ್ಗಿಚ್ಚಿನ ಆಕ್ರೋಶವನು ಆ ಅಗ್ನಿಯೇ ಬಲ್ಲ.  ತನ್ನ ಹಾದಿಯಲ್ಲಿ ಬಂದ ಸರ್ವಸ್ಸವನ್ನು ಭೇದವಿಲ್ಲದೆ ಸುಟ್ಟು ಭಸ್ಮ ಮಾಡಿಬಿಡುತ್ತಾನೆ. ಅಲ್ಲೊಂದು ಮನೆಯಿತ್ತು, ಅಲ್ಲೊಂದು ಸಂಸಾರ ಹೂಡಿದ್ದ ಜನರಿದ್ದರು, ಅಲ್ಲೊಂದು ಮಕ್ಕಳು ಆಡುತ್ತಿದ್ದ ಉದ್ಯಾನ, ಮರಗಿಡಗಳಿತ್ತು, ಅಲ್ಲೊಂದು ಪಕ್ಷಿಗೂಡಿತ್ತು,  ಅಲ್ಲೊಂದು ಶಾಲೆ, ಅಲ್ಲೊಂದು ಸಮಾಜ, ಅಲ್ಲೊಂದು ಊರು, ಅಲ್ಲೊಂದು ಮಾನವೀಯತೆ ಇತ್ತು ಎನ್ನುವ ಸುಳುಹೂ ಇಲ್ಲದ ರೀತಿಯಲ್ಲಿ ಎಲ್ಲವನ್ನು ಧಹಿಸಿ ಮತ್ತೆಲ್ಲೋ ತನ್ನ ಉರಿವ ನಾಲಿಗೆಯನು ಚಾಚುತ್ತಾನೆ ಆ ನಿರ್ದಯಿ ಅಗ್ನಿ. ಅಡಿಪಾಯವನ್ನು ಉಳಿದಂತೆ ಎಲ್ಲವು ಭಸ್ಮ.  ತಪಾಸಣೆಯಲಿ ಸಿಗುವ ಅಲ್ಲೊಂದು ಅರೆ ಸುಟ್ಟ ನೆನಪಿನ ಕಾಣಿಕೆ, ಮತ್ತೊಂದು ಅರೆ ಬೆಂದ ಪ್ರೀತಿಯ ಕುರುಹು, ಮನದ ಚೌಕಟ್ಟಿನೊಳಗೆ ನಶಿಸದ ಚಿತ್ರ,  ಗುರುತೂ ಸಿಗದ ಇನಿಯ ನೀಡಿದ ಒಡವೆ, ಇದ್ದಲಿನಂತೆ ಕಪ್ಪಿಟ್ಟ ಮೂರ್ತಿ, ಎಲ್ಲವೂ ಚಿರಪರಿಚಿತ.  ಆದರೆ ಎಲ್ಲವೂ ಕಣ್ಮರೆಯಾಗಿದೆ.  ಅದರೊಳಗಿನ ಪ್ರೀತಿಯ ಕುರುಹನ್ನು ಅಗ್ನಿ ಸ್ಪರ್ಶಿಸಬಲ್ಲನೆ ಹೊರತು ದಹಿಸಲಾರ.  ಅದೇ ಕಾರಣವಿರಬೇಕು, ಎಲ್ಲೆಲ್ಲೂ ಪವಿತ್ರ ವಿಭೂತಿಯನೇ ಚಲ್ಲಿದಂತ ಭಾವನೆ.  ಗೋಡೆ ಚಾವಣಿಗಳು ದಹಿಸಿದರೂ ಉಳಿವುದು ಪ್ರೀತಿಯ ಅಡಿಪಾಯ.  ಗಂಡು ಹೆಣ್ಣಿನ ಪ್ರೀತಿ, ತಂದೆ ತಾಯಿಗಳ ವಾತ್ಸಲ್ಯ, ಬಂಧು ಬಳಗದ ಆಧಾರ, ಪರಿಸರದ ಮೇಲಿನ ಪ್ರೀತಿ, ಗುರು-ಶಿಷ್ಯ ಭಾಂದವ್ಯ, ನೆರೆಹೊರೆಯವರ ಸಹಾಯ, ಎಲ್ಲವೂ ನಿರಂತರ.  ಆ ತಳಹದಿಯಲಿ ನಿರ್ಮಿತವಾದ ಮಾನವೀಯತೆ ಉರಿದುಬಿದ್ದ ಮನೆಯೊಂದನ್ನೇ ಅಲ್ಲ, ಇಡೀ ಸಮಾಜವನ್ನೇ ಮತ್ತೆ ನಿರ್ಮಿಸಬಹದು.  ಕಾಡ್ಗಿಚ್ಚಿನ ಆಕ್ರೋಶವನ್ನು ಪರಾಭವಗೊಳಿಸುವ ಧೈರ್ಯ ಆ ಅನನ್ಯ ಶಕ್ತಿಗೆ ಮಾತ್ರ ಸಾಧ್ಯ.  ಧರೆಯೆ ಹತ್ತಿ ಉರಿಯುವಾಗ ಬದುಕಲೆಲ್ಲಿ ಓಡುವೆ ಎನ್ನುವ ಹತಾಶ ಮತ್ತು ನಕಾರಾತ್ಮಕ ಪಶ್ನೆಗೆ ಉತ್ತರವೂ ಅದೇ ಎಂದು ಹೇಳಬಲ್ಲೆ.

ಕಾಡ್ಗಿಚ್ಚಿನ ದಾರುಣ ಪರಿಣಾಮವನ್ನು ನಮ್ಮ ಸುಂದರ ಬೇ ಏರಿಯಾದ ಸನಿಹದಲ್ಲೇ ಕಂಡು ಖಿನ್ನ ಮನಸ್ಸಿನಲೂ ಮೂಡಿದ ಸಕಾರಾತ್ಮಕ ದೃಷ್ಟಿಕೋನವಿದು.  ಈ ಅನಾಹುತದಲ್ಲಿ ಭರಿಸಲಾರದ ದುಃಖದಲ್ಲಿ ನರಳುತ್ತಿರುವ ಮತ್ತು ಬಂಧುಬಾಂಧವರನ್ನು ಕಳೆದುಕೊಂಡ ಹಲವರಿಗೂ, ಅಳಿದುಳಿದ ಪಶುಪಕ್ಷಿಪ್ರಾಣಿಗಳಿಗೂ, ಅನುತಾಪ ತೋರುವುದು ನಮ್ಮೆಲ್ಲರ ಮಾನವೀಯ ಕರ್ತವ್ಯ. ಅವರಿಗೆ ನಮ್ಮ ಕೈಯಲ್ಲಾದಷ್ಟು ನೆರವು ನೀಡೋಣ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ