ಸೋಮವಾರ, ಅಕ್ಟೋಬರ್ 17, 2022

ಸಂವೇದನೆ

 ಸಂವೇದನೆ 

ರವಿ ಗೋಪಾಲರಾವ್, ಜುಲೈ 2006.


ಇನ್ನೂ ಒಂದು ವಾರ ಕೂಡ ಆಗಿರಲಿಲ್ಲ ನನ್ನ ಶ್ರೀಮತಿ ಮತ್ತು ಮಕ್ಕಳು ಬೆಂಗಳೂರಿಗೆ ಹೋಗಿ. ಮನೆಯಲ್ಲ ಬಿಕೋ ಎನ್ನುತ್ತಿತ್ತು. ಲೈಬ್ರೆರಿಯಿಂದ ಡಿ.ವಿ.ಡಿ ತಂದು ಒಬ್ಬನೇ ಕುಳಿತು ಯಾವುದಾದರೂ ಹಿಂದಿ ಅಥವ ಕನ್ನಡ ಚಲನ ಚಿತ್ರ ನೋಡಬಹುದೆಂಬ ಯೋಚನೆ ಬಂತು. ಸರಿ, ಹತ್ತಿರದಲ್ಲೆ ಇರುವ ನಮ್ಮ ಸ್ಯಾನ್ ಹೋಸೆ ವಾಚನಾಲಯಕ್ಕೆ ಹೋದೆ. ಅಲ್ಲಿ "ಇಂಡಿಯನ್ ಮೂವೀಸ್" ನಾಮಫಲಕದ ಶೆಲ್ಫ್ ಬಳಿ ಬಂದು ಎಷ್ಟು ಹುಡುಕಿದರೂ ಒಂದೂ ನೋಡಬಯಸುವ ಚಲನ ಚಿತ್ರ ಕಾಣಲಿಲ್ಲ. ಮನೆಗೆ ವಾಪಸ್ಸು ಹೊರಡುವವನಿದ್ದೆ. ಆದರೆ ಶೆಲ್ಫಿನ ಮೇಲಿದ್ದ ಒಂದು ಡಿ.ವಿ.ಡಿಯ ಶೀರ್ಷಿಕೆ ನನ್ನ ಗಮನ ಸೆಳೆಯಿತು. ಕೈಗೆತ್ತಿಕೊಂಡು ನೋಡಿದೆ. "ಸಂವೇದನ" ಎಂದಿದ್ದ ಆ ಶೀರ್ಷಿಕೆ ಓದಿ ಯಾವುದೋ ಹಳೆ ಆರ್ಟ್ ಚಲನ ಚಿತ್ರವಿರಬೇಕೆಂದುಕೊಂಡೆ. ಅದರ ಮೇಲಿದ್ದ ಚಿತ್ರ ನೋಡಿ ಸ್ವಲ್ಪ ಆಶ್ಚರ್ಯವಾಯಿತು. ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೈಯವರ ಮುಖಚಿತ್ರ! ಪ್ರಧಾನಮಂತ್ರಿ ಯಾವಾಗ ನಟಿಸಲು ಶುರು ಮಾಡಿದರಪ್ಪ ಈ ಇಳಿವಯಸ್ಸಿನಲ್ಲಿ ಅನ್ನಿಸಿತು. ಲೈಬ್ರೆರಿ ಬಾಗಿಲು ಹಾಕುವುದಕ್ಕೆ ಇನ್ನೈದೇ ನಿಮಿಷಗಳಿತ್ತು. ಇದನ್ನೇ ನೋಡಿದರಾಯಿತು ಎಂದುಕೊಂಡು ಬೇಗನೆ ಚೆಕ್ ಔಟ್ ಮಾಡಿಕೊಂಡು ಮನೆಗೆ ಬಂದೆ. ನಾನಂದುಕೊಂಡಂತೆ ಸಂವೇದನ ಒಂದು ಚಲನ ಚಿತ್ರವಾಗಿರಲಿಲ್ಲ. ಪ್ರಧಾನಮಂತ್ರಿ ವಾಜಪೈಯವರು ಬರೆದ ಕವಿತೆಗಳನ್ನ ಪ್ರಖ್ಯಾತ ಗಜ಼ಲ್ ಹಾಡುಗಾರ ಜಗಜಿತ್ ಸಿಂಗ್ ಸಂಗೀತಕ್ಕೆ ಅಳವಡಿಸಿ, ಯಶ್ ಚೋಪ್ರ ನಿರ್ದೇಷಿಸಿದ ಒಂದು ವೀಡಿಯೋ. ಶಾರೂಖ್ ಖಾನ್ ನಟಿಸಿದ ಹಾಗು ಅಮಿತಾಬ್ ಬಚ್ಚನ್ನನ ಮುನ್ನುಡಿಯೊಂದಿಗೆ ತುಂಬ ಗಂಬೀರವಾದ ಸನ್ನಿವೇಶಗಳಿದ್ದ ಈ ವೀಡಿಯೋ ನನ್ನ ಮನಸ್ಸಿನ ಲಹರಿಯನ್ನೆ ಬೇರೊಂದು ಕಡೆ ತಿರುಗಿಸಿತು. ಜೊತೆಗೆ ಈ ಕವಿತೆಗಳ ಒಳ ಅರ್ಥವನ್ನು ಬಿಡಿಸಿ ಹೇಳಿದ ಪ್ರಸಿದ್ದ ಕವಿ ಜ಼ಾವೇದ್ ಅಕ್ತರ್‌ರ ಶುಷ್ರಾವ್ಯ ಉರ್ದೂ ವಾಚನ ನನ್ನನ್ನು ಬೇರೆ ಲೋಕಕ್ಕೆ ಸೆಳೆಯಿತು. ಆ ವೀಡಿಯೋನಲ್ಲಿರುವ ಒಂದು ಕವಿತೆ "ಕ್ಯಾ ಖೋಯ ಕ್ಯಾ ಪಾಯ" ನಾನೆಷ್ಟು ಬಾರಿ ಕೇಳಿದರೂ ಮತ್ತೆ ಕೇಳಬೇಕೆಂಬ ಹಂಬಲ ಉಂಟುಮಾಡಿತು. ನನಗೆ ನೆನಪಿರುವಂತೆ ಈ ರೀತಿಯಾದ ಭಾವನಾ ಭರಿತ ಕವಿತೆಯನ್ನು ನಾನು ಮತ್ತೆ ಮತ್ತೆ ಆಲಿಸಿ ಕವಿಯ ಮನೋಗತವನ್ನು ಅರಿಯಲು ಹವಣಿಸಿದ್ದು ಇದು ಮೊದಲ ಬಾರಿಯಲ್ಲ. ಹರಿವಂಶ್ ರಾಯ್ ಬಚ್ಚನ್, ರಾಜ ಮೆಹದಿ ಅಲಿ ಖಾನ್, ಶೈಲೇಂದ್ರ, ಮಾಯ ಗೋವಿಂದ್ ಮತ್ತಿತರರ ಕವಿತೆಗಳನ್ನು, ಅವರ ಮೌಲ್ಯಗಳನ್ನು, ಅವರ ಬರವಣಿಗೆಯ ಶೈಲಿಯನ್ನು ಅರಿಯಲು ಪ್ರಯತ್ನ ಮಾಡಿದ್ದೆ. ಈ ಸಂಭಾವಿತ ವ್ಯಕ್ತಿಗಳೆಲ್ಲರೂ ಹುಟ್ಟು ಕವಿಗಳು. ಆದರೆ "ಕ್ಯಾ ಖೋಯ ಕ್ಯಾ ಪಾಯಾ" ಬರೆದ ಕವಿ ಒಬ್ಬ ಪಳಗಿದ ರಾಜಕಾರಣಿ, ದೇಶದ ಪ್ರಧಾನಮಂತ್ರಿ. ನಮ್ಮೆಲ್ಲರ ಮನಸ್ಸಿನಲ್ಲಿ ಅಚ್ಚಾಗಿ ಉಳಿದಿರುವ ರಾಜಕಾರಣಿಗಳ ಡಂಬಾಚಾರ, ಕಪಟತನ, ಕುಟಿಲತೆ ಎಲ್ಲವೂ ಸೇರಿ ರಾಜಕೀಯದ ಬಗ್ಗೆ ಅಸಹ್ಯ ತರಿಸಿವೆ. ಒಬ್ಬ ವ್ಯಕ್ತಿ ರಾಜಕೀಯದಲ್ಲಿ ತನ್ನ ಘನತೆ ಗೌರವಗಳನ್ನ ಮುಡಿಪಾಗಿಟ್ಟು ಅಖಾಡಕ್ಕೆ ಇಳಿಯುತ್ತಾನೆ. ಇದರಲ್ಲಿ ಗೆಲ್ಲುವವರು ಬಹಳ ಕಡಿಮೆ. ಅಂತಹುದರಲ್ಲಿ ಇಮಾಂ ಸಾಬಿಗೂ ಗೋಕುಲಾಷ್ಟಮಿಗೂ ಏನು ಸಂಭಂದ ಎನ್ನುವಂತೆ ರಾಜಕೀಯದಲ್ಲಿ ಪಳಗಿದ ವ್ಯಕ್ತಿ ಸಂವೇದನಶೀಲ ಕವಿಯು ಆಗಲು ಸಾಧ್ಯವೇ? ರಾಜಕಾರಣಿಗಳು ಅನುಕಂಪವಿಲ್ಲದವರು ಎಂಬ ನಮ್ಮ ಅಭಿಪ್ರಾಯ ತಪ್ಪೆ? ಹಾಗದರೆ ಸಂವೇದನೆ ಎಂದರೇನು? ಇದೇ ವಿಚಾರಲಹರಿಯಲ್ಲಿ ನಿದ್ದೆ ಬಂದಿದ್ದೇ ಗೊತ್ತಾಗಲಿಲ್ಲ.

 

ಮರುದಿನ ಬೆಳಿಗ್ಗೆ ಕೈಗೆ ಸಿಕ್ಕಿದ್ದು ನನ್ನ ಶ್ರೀಮತಿಯ ಹಾಡುಗಳ ಪುಸ್ತಕ. ಚಿಕ್ಕ ವಯಸ್ಸಿನಲ್ಲಿ ಆಕೆಯೇ ಮುದ್ದಾದ ಅಕ್ಷರಗಳಲ್ಲಿ ಬರೆದು ಸಂಗೀತ ಕಲೆಯುತ್ತಿದ್ದ ಕಾಲದ ಪುಸ್ತಕ. ನೂರಾರು ಜಾನಪದಗೀತೆ, ಭಾವಗೀತೆ ಮತ್ತು ದೇವರನಾಮಗಳಿರುವ ಆ ಪುಸ್ತಕವನ್ನು ತಿರುವಿಹಾಕಿದೆ. ಕಾಕತಾಳೀಯವೆನ್ನುವಂತೆ ನನ್ನ ಗಮನ ಸೆಳೆದ ಒಂದು ಕವಿತೆಯ ವಿಚಾರದಾಟಿ ರಾತ್ರಿ ಕಾಡಿದ ಸಂವೇದನೆ ಪ್ರಶ್ನೆಗಳಿಗೆ ಉತ್ತರ ದೊರಕಿಸಿತ್ತು. 

 

ಕನ್ನಡದ ಒಬ್ಬ ಕವಿ ಈ ಸಂವೇದನೆಯನ್ನ ಈ ಕೆಳಗಿನ ಕವಿತೆಯಲ್ಲಿ ಮನೋಜ್ಞವಾಗಿ ವಿವರಿಸಿದ್ದರು:

 

ಹೃದಯಂತರಾಳದಿ ಹುದುಗಿ ಹೊಮ್ಮುವ ನೋವ 

ಬಡನುಡಿಯಲೆಂತಡಗಿ ತೋರಬಹುದು

ಆಂತರಿಕ ಶ್ರೀಮಂತನನುಭವದ ಸಾರವನು

ಸಾಂತ ಭಾಷೆಯೊಳೆಂತು ಹಿಡಿಯಬಹುದು

ಅಂತರಂಗದನಂತ ಶ್ರೀಮಂತ ಲೋಕದಲಿ

ಜಗದ ಶ್ರೀಮಂತಿಕೆಯ ಸವಿಯಬಹುದು

ತೊದಲು ನುಡಿವಿಣೆಗೆನೊಲು ಕವಿದೇವನೋಯುತ್ತ 

ದಿನ ದಿನವೂ ತಪಿಸುತ್ತ ಕೊರಗುತಿಹುದು 

ಹೇಗೋ ಏನೋ ಎಂತೋ ಒಳದನಿಯ ಹೊಮ್ಮಿಸುವೆ 

ಕಾವ್ಯಕೃಪೆಗೆನ್ನೆದೆಯು ಮಣಿಯುತಿಹುದು 

ಇನಿತಾದರೂ ಇಂಥ ಶಕ್ತಿಯನು ವ್ಯಕ್ತಿಯಲಿ 

ಕೃಪೆಗೈವ ಶಕ್ತಿಗಿದು ನಮಿಸುತಿಹದು

 

ಮನಸ್ಸಿನ ಲಹರಿ ಹೃದಯದಾಳದಲ್ಲಿ ಬೆಸೆದು ತಂತಿ ಮೀಟಿದಂತಾದಾಗ ಬರುವ ಭಾವನೆಗಳೆ ಸಂವೇದನೆ. ಇದು ಜೀವನದ ಸುಖ ದುಃಖಗಳನ್ನು, ಜಂಜಾಟಗಳನ್ನು ಮೆಟ್ಟಿ ನಿಂತು ಬಹಳಷ್ಟು ಅನುಭವದಿಂದ ಮಾತ್ರ ಪಡೆಯಲು ಸಾಧ್ಯವಾಗುವ ಒಂದು ತೇಜಸ್ಸು. ಆದರೆ ಈ ಸಂವೇದನ ಶಕ್ತಿ ನಮ್ಮೆಲ್ಲರಲ್ಲೂ ಒಂದಲ್ಲ ಒಂದು ರೂಪದಲ್ಲಿ ಗೋಚರಿಸಿಯೂ ಗೋಚರಿಸಿದಂತೆ ವ್ಯಕ್ತವಾಗುತ್ತದೆ. ಅದೇ ಕಾರಣದಿಂದಲೇ ಇರಬೇಕು ಮನುಷ್ಯ ಒಂದು ಸಂವೇದನಾ ಭರಿತ ಕವಿತೆ, ಕಲಾಕೃತಿ, ಅಥವಾ ಪ್ರಕೃತಿಯ ನಿಯಮಗಳನ್ನು ನೋಡಿದಾಗ ಅದರೊಡನೆ ತಾನೂ ಬೆರೆತು ತಲ್ಲೀನನಾಗುವುದು. "ದಿನ ನಿತ್ಯದ ಆಗು ಹೋಗುಗಳ, ಮಾರುಕಟ್ಟೆಯ ‘ಇಂದಿನ ಲಾಭ ನಷ್ಟಗಳೆಷ್ಟು’ ಎಂಬ ಮಾತುಗಳ, ಸಂಭಂದಗಳ, ರಾಜಕೀಯದ ಹಾವಳಿಯಿಂದ ಬಹು ದೂರ ಹೋದಾಗ ಮನಸ್ಸು ಏಕಾಂಗಿತನ ಹುಡುಕಲಾರಂಬಿಸುತ್ತದೆ" ಎನ್ನುತ್ತಾರೆ ಜ಼ಾವೇದ್ ಅಕ್ತರ್. ಮುಂದುವರಿಸಿ ಹೇಳುತ್ತಾರೆ "ಆ ಏಕಾಂಗಿತನದಲ್ಲಿ ಜಾಗೃತಗೊಂಡ ಕವಿಯ ಸ್ಮೃತಿಪಟಲದಲ್ಲಿ ಕನಸಿನಂತೆ ಜೀವನದ ಬಣ್ಣ ಬಣ್ಣದ ಭಾವ ಚಿತ್ರಗಳು ಮೂಡಿ ಕಾಗದದಲ್ಲಿ ಕೆತ್ತಲ್ಪಡುತ್ತವೆ." "ಅಂತಹ ಕವಿತೆಯಲ್ಲಿ ಕವಿಯ ‘ನಾನು’ ಹಾಗು ಕೇಳುವವರ ‘ನೀವು’ ಅನ್ನುವ ಅಹಂಮಿನ ಗೋಡೆ ಇರುವುದಿಲ್ಲ." "ಕವಿಯ ಹಾಗು ಕೇಳುವವರ ‘ಸಂವೇದನೆ’ ಎರಡೂ ಒಂದಾದಾಗ ಕವಿ ವಾಣಿ ಜಗದ ಸಂವೇದನೆಯನ್ನೇ ಪ್ರತಿಧ್ವನಿಸುತ್ತದೆ," ಎನ್ನುತ್ತಾರೆ ಜ಼ಾವೇದ್ ಅಕ್ತರ್.

 


ಅಂತಹುದೇ ಒಂದು ಕವಿತೆ ವಾಜಪೈಯವರು ಬರೆದಿರುವ "ಕ್ಯಾ ಖೋಯಾ, ಕ್ಯಾ ಪಾಯ ಜಗಮೆ." ಹಿಂದಿ ಪಂಡಿತರಿಗೂ ಅರ್ಥಮಾಡಿಕೊಳ್ಳಲು ಕ್ಲಿಷ್ಟವಾದ ಪದಜೋಡಣೆ ಈ ಕಾವ್ಯದಲ್ಲಿದೆ. ಆದರೆ ಈ ಕವಿತೆಯನ್ನು ಕನ್ನಡಕ್ಕೆ ಅನುವಾದ ಮಾಡಿದಾಗ ವಾಜಪೈಯವರ ಸಂವೇದನೆ ಕನ್ನಡಿಗರಾದ ನಮಗೆ ಇನ್ನೂ ಹೆಚ್ಚು ಸ್ಪಂದಿಸುವುದರಲ್ಲಿ ಸಂಷಯವಿಲ್ಲ. ಅನುವಾದದಲ್ಲಿ ಮೂಲ ಕೃತಿಯ ವ್ಯಾಖ್ಯಾನಕ್ಕೆ ಎಲ್ಲಿ ದಕ್ಕೆ ಬಂದು ಕವಿಯ ಮನೋಗತವನ್ನು ಓದುಗರಿಗೆ ತಿಳಿಸಲು ಅಸಫಲನಾಗುವೆನೋ ಎಂಬ ಭಯವಿದ್ದ ಕಾರಣ, ಈ ಕವಿತೆಯನ್ನು ಮೂಲ ಹಿಂದಿ ಭಾಷೆಯಲ್ಲೂ ಮುದ್ರಿಸಲಾಗಿದೆ. ಹಿಂದಿ ಭಾಷೆ ತಿಳಿದವರು ಹಿಂದಿಯಲ್ಲೇ ಓದಿಕೊಳ್ಳಿ.

 

ಏನು ಕಳೆದುಕೊಂಡೆ ಏನು ಗಳಿಸಿದೆ ಜಗದಲಿ 

ಬೇಟಿ-ನಿರ್ಗಮನ ಕೂಡುಹಾದಿಲಿ

ನನಗ್ಯಾರ ಮೇಲೂ ಇಲ್ಲ ದೂರು

ಹೆಜ್ಜೆಹೆಜ್ಜೆಗೂ ಮೋಸ ನೂರು

ಕಳೆದ ದಿನಗಳ ಮೇಲಿತ್ತು ಧೃಷ್ಠಿ

ನೆನೆಪುಗಳ ಎದೆಭಾರ ಕಲಕಿತ್ತು ಮನಶ್ಶಾಂತಿ 

ಹೇಳಿತು ಸ್ವಗತ ನನ್ನೀ ಮನ

ಪೃಥ್ವಿಗುಂಟು ಲಕ್ಷಾಂತರ ವರುಷ

ಜೀವನಕುಂಟು ಅನಂತ ಕಥೆ

ತನುವಿಗಾದರೋ ತನ್ನದೇ ಸೀಮಿತ

ಆದರೂ ನನಗಿತ್ತು ಭರವಸೆ ನಿರಂತರ ಜೀವನದಲಿ 

ಇಷ್ಟೇ ಸಾಕು

ಅಂತಿಮ ಹೊಸ್ತಿಲಲಿ

ನಾನೇ ಬಾಗಿಲು ತೆರೆವೆ

ಹೇಳಿತು ಸ್ವಗತ ನನ್ನೀ ಮನ

ಜನ್ಮ ಮರಣ ಅವಿರತ ಪುನರಾವರ್ತನ

ಜೀವನವೊಂದು ಬಂಜಾರರ ಡೇರೆ

ಇಂದು ಇಲ್ಲಿ ನಾಳೆ ಎಲ್ಲೆಂದು ಕೇಳದಿರೆ 

ಯಾರಿಗೆ ಗೊತ್ತು ಮುಂಜಾವು ಎಲ್ಲೆಂದು 

ಕತ್ತಲು ಆಕಾಶ ಅಸೀಮಿತ

ತುಲನೆ ಮಾಡಿತು ಪ್ರಾಣ ಶಕ್ತಿ

ಹೇಳಿತು ಸ್ವಗತ ನನ್ನೀ ಮನ

ಏನು ಕಳೆದುಕೊಂಡೆ ಏನು ಗಳಿಸಿದೆ ಜಗದಲಿ 

 

-ಅಟಲ್ ಬಿಹಾರಿ ವಾಜಪೈ

 

क्या खॊया क्या पाया जगमे

मिल्ते और बिचड्ते मग मे

मुझे किसीसे नहि षिकायत

यद्यपि चला गया पग पग मे

ऎक धृष्ठि बीति पर डाले

यादॊंकि पॊत्लि टटॊले

अप्ने ही मन से कुछ भॊले

पृथ्वि लाकॊ वर्ष पुरानि

जीवन ऎक अनंत कहानि

पर तन कि अप्नि सीमाये

यद्यपि सौ शर्दॊंकि वाणि

इत्न काफ़ि है 

अंतिम दस्तक पर

खुद दर्वाज खॊले

अप्ने ही मन से कुछ भॊले

जनम मरण के अभिरत फॆरा

जीवन बंजारॊंका डॆरा

आज यँहा कल कँहा पूच है

कौन जानता किधर सवॆरा

अंधियारा आकाश असीमित

प्राणॊंके फंखॊन्को तौँले

अप्ने ही मन से कुछ भॊले

क्या खॊया क्या पाया जगमे

 

-अटल बिहारि वाज्पै

 

ಜ಼ಾವೇದ್ ಅಕ್ತರ್‌ರು ಹೇಳಿದಂತೆ ಈ ಕವಿತೆ ಕಾಗದದಲ್ಲಿ ಕೆತ್ತಲ್ಪಟ್ಟಿದೆ ಎನ್ನುವುದರಲ್ಲಿ ಉತ್ಪ್ರೇಕ್ಷೆಯೆನಿಸಲಿಲ್ಲ. ಆದರೆ ಹೃದಯದಂತರಾಳದಲ್ಲಂತೂ ಪ್ರವಾಹದಂತೆ ಹರಿದ ಸಂವೇದನೆ ನಿಮ್ಮನ್ನೂ ತೋಯ್ದಿತೆಂದು ನನ್ನ ಅನಿಸಿಕೆ. ಮತ್ತೊಮ್ಮೆ ಕವಿತೆಯನ್ನ ಓದಿ. ಆಗ ನಿಮಗೆ ಈ ಕವಿತೆಯಲ್ಲಿರುವ ಜೀವನದ ಕಟು ಸತ್ಯವನ್ನ ಕವಿ ಹೇಗೆ ತುಲನೆ ಮಾಡಿದ್ದಾರೆಂಬುದರ ಅರಿವಾಗುತ್ತದೆ. "ದೇಹ ನೆಪಮಾತ್ರ, ಆತ್ಮ ನಿರಂತರ" ಎಂದು ಗೀತೆಯಲ್ಲಿ ಶ್ರೀಕೃಷ್ಣ ಅರ್ಜುನನಿಗೆ ಬಿಡಿಸಿ ಹೇಳಿದ್ದನ್ನೇ, ಇಲ್ಲಿ ವಾಜಪೈಯವರು ಸರಳವಾದ ಆಂತರ್ಯ ಸಂಭಾಷಣೆಯ ಮೂಲಕ ವ್ಯಕ್ತಪಡಿಸಿದ್ದಾರೆ. ಜನ್ಮ ಮರಣವನ್ನೂ ಅಷ್ಟೇ ಸುಲಭವಾಗಿ ಪರಿಶೀಲಿಸಿ ಜನ ಸಾಮಾನ್ಯರ ವಿಚಾರಧಾಟಿಗೆ ಸರಿದೂಗಿಸಿದ್ದಾರೆ. ಹಾಗಾದರೆ ಮಾನವನಿಗೇಕೆ ನಿರಂತರ ಜೀವನದಲಿ ಭರವಸೆ? ಆಧ್ಯಾತ್ಮ ಚಿಂತನೆಯ ಮೂಲಭೂತ ಪ್ರಶ್ನೆಗಳಿಗೆ ಉತ್ತರ ಹುಡುಕುವುದುರಲ್ಲಿ ಈ ಕವಿತೆ ನಿಜವಾಗಿಯೂ ನಮ್ಮನ್ನು ಮುಂದಿನ ಹಂತಕ್ಕೆ ಹೋಗುವಂತೆ ಪ್ರೇರೇಪಿಸುತ್ತದೆ. ಜೀವನದ ಸಾರ್ಥಕತೆಯನ್ನ ಬರಿ ಲಾಭ ನಷ್ಟಗಳಿಂದ ಅಳೆಯಲು ಸಾಧ್ಯವೇ? ಖಂಡಿತ ಸಾಧ್ಯವಿಲ್ಲದ ಮಾತು.


ಯೂಟ್ಯೂಬ್ನಲ್ಲಿ ಇಲ್ಲಿದೆ ಆ ವಿಡಿಯೋ

https://youtu.be/1sTeazC0x98




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ