ಶನಿವಾರ, ಜುಲೈ 9, 2022

ಶಿಲ್ಪಿಯೇ ಕವಿಯೂ

 ಶಿಲ್ಪಿಯೇ ಕವಿಯೂ 

ಸೀತಾಪಹರಣವ ವರ್ಣಿಸಿದನಾ ಕವಿ 
ರಾವಣ ಬ್ರಾಹ್ಮಣ ರೂಪಧಾರಿ ಬರಸೆಳೆದು 
ಸೀತೆಯನು ಅಪಹರಿಸಿದ ಪುಷ್ಪಕ ವಿಮಾನದಲಿ 
ವೇಷವ ತೊರೆದನಾ ಲಂಕಾಧಿಪತಿ 
ನಿಜ ರಕ್ಕಸನಾದ ಆ ಕ್ಷಣದಲಿ 
ಹಾರಿತು ವಿಮಾನ ಲಂಕೆಯನರಸಿ 
ಜಟಾಯು ತಡೆದನಾ ಅಪಹರಣವನು 
ಕತ್ತರಿಸಿ ರೆಕ್ಕೆಯ ಮತ್ತೆ ಜಿಗಿದನಾ ರಕ್ಕಸ 
ರಾವಣಾಸುರನ ದೇಹಕೆ ಪ್ರತಿಸಮನಾಗದಾ 
ಜಟಾಯು ನೆಲಕುರುಳಿದ ರಕ್ತದ ಮಡುವಿನಲಿ 




ಶಿಲ್ಪಿ ಕಲ್ಲಲಿ ಕೆತ್ತಿದನಾ ಸೀತಾಪಹರಣವನು 
ದೈತ್ಯ ರಕ್ಕಸ ಬರಸೆಳೆದು ಸೀತೆಯನು 
ಬಂದಿಸಿ ಪಂಜರದೊಳು 
ಕೈಒಂದರಲಿ ಖಡ್ಗ ಮತ್ತೊಂದರಲಿ ಪಂಜರವ ಪಿಡಿದು 
ಓಡಿದನಾ ದಶಮುಖಿ ಕಾಡೊಳು 
ಅಡ್ಡಗಟ್ಟಿದನಾ ಆಳೆತ್ತರದ ಜಟಾಯು 
ತನ್ನ ಕಿರೀಟಕೆ ಸಮನಾಗಿ 
ರೆಕ್ಕೆಪುಕ್ಕೆಯಲಿ ನಿಂತ ರಾಮಭಟನ ಕಂಡು 
ಬೆದರಿದನಾ ರಾವಣ ದಿಕ್ಕುಗೆಟ್ಟು 
ದಾರಿಕಾಣದ ಖಡ್ಗಧಾರಿ ಅವಿತನಾ ವೃಕ್ಷದಲಿ 
ನಿರಾಯುಧ ರೆಕ್ಕೆಧಾರಿಯ ಮೇಲೆರಗಿ 
ಖಡ್ಗದೊಳು ಇರಿದನಾ ರಕ್ಕಸ ಕಪಟದಲಿ 
ನೆಲಕುರುಳಿದ ಜಟಾಯು ರಾಮನ ನಿರೀಕ್ಷೆಯಲಿ 

ಶಿಲ್ಪಿ ಅನಕ್ಷರಸ್ಥನೆಂಬ ಅಹಮಿನಲಿ 
ನೋಡುವ ಕಲಿಯುಗದ ಅನಕ್ಷರಸ್ಥ ಮಂದಿ 
ಅವರೇಕೋ ಅರಿಯದಾದರು 
ಶಿಲ್ಪಿಯೇ ಕವಿಯೂ 

____________ 

ವಾಟ್ಸ್ಯಾಪ್ ಗುಂಪೊಂದರಲ್ಲಿ ಮೊನ್ನೆ ಯಾರೋ ಎರಡು ಚಿತ್ರಗಳನ್ನು ಪೋಸ್ಟ್ ಮಾಡಿದ್ದರು. ಅವುಗಳು ಹೊಯ್ಸಳ ಕಾಲದಲ್ಲಿ ಕಟ್ಟಿದ ದೇವಸ್ಥಾನದ ಚಿತ್ರಗಳಾಗಿದ್ದವು. ದೇವಸ್ಥಾನದ ಹೊರಗಡೆಯ ಗೋಡೆಗಳ ಮೇಲೆ ಕಲ್ಲಿನಲ್ಲಿ ಕೆತ್ತಿದ ರಾಮಾಯಣ ಕಥೆಯ ಶಿಲ್ಪಗಳ ಬಗ್ಗೆ ಬೆಳಕು ಚೆಲ್ಲಿದ್ದವು. ರಾಮಾಯಣದ ಪ್ರಮುಖ ಸನ್ನಿವೇಶಗಳನ್ನು ಕೆತ್ತಿದ ದೃಶ್ಯಗಳು. ಅದರಲ್ಲಿ ನನ್ನ ಗಮನ ಸೆಳೆದದ್ದು ಸೀತಾಪಹರಣದ ದೃಶ್ಯ. ಬೆದರಿದ ರಾವಣ, ಕೈಯಲ್ಲಿ ಪಂಜರದಂತೆ ಕಾಣುವ ಒಂದು ಪೆಟ್ಟಿಗೆ, ಮತ್ತೊಂದು ಕೈಯಲ್ಲಿ ಖಡ್ಗ ಹಿಡಿದು ತಪ್ಪಿಸಿಕೊಳ್ಳಲು ಪ್ರಯತ್ನಿಸಿರುವಂತೆ ಕಂಡಿತು. ಆದರೆ ಅವನ ಮುಂದೆ ದೊಡ್ಡ ಗಾತ್ರದ ಪಕ್ಷಿ, ಜಟಾಯು ತಲೆ ಎತ್ತಿ ನಿಂತ ಭಂಗಿ ಮತ್ತಷ್ಟು ನನ್ನ ಗಮನ ಸೆಳೆಯಿತು. ನಮಗೆ ಸೀತಾಪಹರಣದ ದೃಶ್ಯ ಅಂದರೆ ರಾವಣ ತನ್ನ ಬಲಿಷ್ಠ ಬಾಹುಗಳಲ್ಲಿ ಖಡ್ಗ ಹಿಡಿದು, ಸರಿಸಮಾನನಾಗದ ಜಟಾಯುವಿನ ರೆಕ್ಕೆಗಳನ್ನು ಕತ್ತರಿಸಿ ಪುಷ್ಪಕ ವಿಮಾನದಲ್ಲಿ ಸೀತೆಯನ್ನು ಅಪಹರಿಸಿಕೊಂಡು ಆಕಾಶದಲ್ಲಿ ಹಾರಿಹೋಗುವ ಸನ್ನಿವೇಶ. ಆದರೆ ಶಿಲ್ಪಿಯ ಸೃಜನಶೀಲತೆ ಮತ್ತು ಕಲ್ಲಿನಲ್ಲಿ ಕೆತ್ತಿದ ಸೀತಾಪಹರಣದ ಯಥಾರ್ಥತೆ ಭಿನ್ನವಾಗಿಯೇ ಇದ್ದದ್ದನ್ನು ಕಂಡು ನನಗೆ ಒಂದು ರೀತಿಯ ಪುಳಕವೇ ಆಯಿತು. ಮತ್ತೊಮ್ಮೆ, ಮಗದೊಮ್ಮೆ ಎಷ್ಟು ಬಾರಿ ನೋಡಿದರೂ ಈ ಚಿತ್ರಣ ಯಾವ ಕವಿಯೂ ಮಾಡದಿರುವ ದೃಶ್ಯವನ್ನು ಕಲ್ಲಿನಲ್ಲಿ ಕೆತ್ತಿ ಶಿಲ್ಪಿ ತನ್ನದೇ ಆದ ನಿರೂಪಣೆ ಮಾಡಿರುವುದನ್ನು ನೋಡುತ್ತಿರುವುದು ಇದೆ ಮೊದಲ ಬಾರಿ ಅನಿಸಿತು. ಈ ಹೊಯ್ಸಳ ಕಾಲದ ಶಿಲ್ಪಿ ರಾಮಭಟನೆ ಅನ್ನುವುದಕ್ಕೆ ಸಂಶಯವೇ ಉಳಿಯಲಿಲ್ಲ. ಲಂಕಾಧಿಪತಿ ಸೀತೆಯನ್ನು ಪಂಜರದಲ್ಲಿಟ್ಟು ಜಟಾಯುವಿಗೆ ಹೆದರಿ ಓಡುತ್ತಿರುವ ಈ ಕೆತ್ತನೆ ನನ್ನ ಮನದಲ್ಲಿ ಮೇಲಿನ ಆಶು ಕವಿತೆಗೇ ಸ್ಫೂರ್ತಿ ನೀಡಿತು. ಆದರೆ ಮನದಲ್ಲಿ ದ್ವಂದ್ವ ಉಂಟಾದದ್ದು ಕವಿತೆಗೆ ಸ್ಫೂರ್ತಿ ನೀಡಿದ ಶಿಲ್ಪಿ ಅನಕ್ಷರಸ್ತನೆಂದು ಸಾರಿದೆಯಲ್ಲ ಇತರರು ಬರೆದ ನಮ್ಮ ಇತಿಹಾಸ, ಹಾಗಿದ್ದಲ್ಲಿ ಈ ಶಿಲ್ಪಿಗೆ ಓದು ಬರಹ ಇರಲಿಲ್ಲವೇ? ಆದರೆ ಅದಕ್ಕಿಂತಲೂ ಹೆಚ್ಚಾಗಿ ೨೧ನೇ ಶತಮಾನದ ಕಲ್ಪನೆಯಲ್ಲಿ ಕೂಡ ಶಿಲ್ಪಿ ಅನಕ್ಷರಸ್ಥನಲ್ಲವೇ? ಆದರೆ ಯಾವ ಕವಿಯ ಕಲ್ಪನೆಗೂ ಮೀರಿದ ಕೆತ್ತನೆ ಮಾಡಿದ ಈ ಶಿಲ್ಪಿ ನನ್ನ ದೃಷ್ಟಿಯಲ್ಲಿ ಕವಿಯೇ ಹೊರತು ಅನಕ್ಷಸ್ಥರನ್ನಲ್ಲ. ವಾಲ್ಮೀಕಿಯೂ ತನ್ನ ಕೃತಿಯಲ್ಲಿ ರಾವಣ ಜಟಾಯುವಿಗೆ ಹೆದರಿ ಓಡುವ ದೃಶ್ಯ ಬರೆದಿಲ್ಲ. ಹಾಗಾದಲ್ಲಿ ಈ ಅಜ್ಞಾತ ಶಿಲ್ಪಿ ತನ್ನದೇ ಸ್ವತಂತ್ರಕಲ್ಪನೆಯಲ್ಲಿ ಅದೆಷ್ಟು ಸುಂದರವಾಗಿ ಕತೆ ಹಣೆದಿದ್ದಾನೆ ಅಲ್ಲವೇ? ಅದಕ್ಕಾಗಿಯೇ ಈ “ಅನಕ್ಷಸ್ಥರ” ಶಿಲ್ಪಿಯನ್ನು ಕೂಡ ಕವಿಯಂತಲೇ ಗೌರವಿಸಬಹುದಲ್ಲವೇ? ಶಿಲ್ಪಿಯೂ ಕವಿಯೇ! 

 PC: ಇಂಟರ್ನೆಟ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ