ತಂದೆಯಂತೆ ಮಗಳು
ತನ್ನ ಮಕ್ಕಳು ತನ್ನ ಎಲ್ಲ ಒಳ್ಳೆಯಗುಣಗಳನ್ನು ಮೀರಿಸಿ ಬೆಳೆಯಲಿ, ತನಗಿಂತಾ ಹಣವಂತರಾಗಲಿ, ಬುದ್ಧಿವಂತರಾಗಲಿ, ತಾನು ಸಾಧಿಸದ್ದನ್ನು ಸಾಧಿಸಲಿ, ಹೀಗೆ ಎಲ್ಲಾ ವಿಚಾರಗಳಲ್ಲಿ ಒಬ್ಬ ತಂದೆ ತನ್ನ ಮಕ್ಕಳಲ್ಲಿ ಶ್ರೇಷ್ಠ ಸಾಧನೆಯನ್ನೇ ಬಯಸುತ್ತಾನೆ. ಜನ್ಮ ನೀಡಿದ ತಂದೆಗೆ ಅದು ಸ್ವಾಭಾವಿಕವೇ. “ತಂದೆತನ” ಅನ್ನುವ ಪದವಿದ್ದಿದ್ದರೆ ಅದರಲ್ಲಿರುವ ನ್ಯೂನತೆ ಅಥವಾ ಸಫಲತೆ ಎರಡನ್ನೂ ತುಲನೆ ಮಾಡಲು ಪರರ ಅಭಿಪ್ರಾಯ ವ್ಯರ್ಥ. ಏಕೆಂದರೆ ಅದು ಕೇವಲ ತಂದೆಯ ಅಂತರ್ಗತದಲ್ಲೇ ಉಳಿಯುವ ಭಾವನೆಯೇ ಹೊರತು ಅದಕ್ಕೆ ಸ್ವರೂಪವನ್ನು ಕೊಡಲು ಕಷ್ಟ. ಹೃದಯದಾಳದ ಆ ಸ್ವಗತ ಮಾತುಕತೆಗಳು ಅಪೂರ್ಣ ಕೂಡ. ಆ ಆಲೋಚನೆ ಆಸೆ-ನಿರಾಸೆಗಳ ಸಂಗಮವೇ ಆಗಿ ತನ್ನ ಮಕ್ಕಳ ಅಜ್ಜನ ಜೊತೆ ತಾನು ಚಿಕ್ಕವನಾಗಿದ್ದಾಗ ಕಳೆದ ಕಾಲಗಳನ್ನೇ ಮೆಲಕು ಹಾಕಲು ಪ್ರೇರಿಪಿಸಿಬಿಡುತ್ತದೆ, ಅಷ್ಟು ಭಾವುಕ ಶಕ್ತಿ ಅದಕ್ಕೆ. ಒಪ್ಪಿಕೊಳ್ಳಲು ಕಷ್ಟವಾದ ವಿಚಾರವಾದರೂ ತಂದೆ-ಮಗನ ಮಧ್ಯೆ ಬೆಳೆಯುವ ಪರಸ್ಪರ ಶಿಸ್ತಿನ ನಿರೀಕ್ಷೆ, ಗೌರವ ಮತ್ತು ಋಣಾನುಬಂಧ, ತಂದೆ-ಮಗಳ ಮಧ್ಯೆ ಬೆಳೆಯುವ ಪರಸ್ಪರ ಸಹಾನುಭೂತಿ, ಗೆಳೆತನ ಮತ್ತು ಸಲಿಗೆಗಿಂತ ಬಹಳ ವಿಭಿನ್ನ. ಆದರೂ ತಂದೆಯಂತೆ ಮಗ ಅಥವಾ ತಂದೆಯಂತೆ ಮಗಳು ಯಾವುದೂ ಅಸಂಭವವೇನಲ್ಲ. ತಿಳಿದೋ ತಿಳಿಯದೆಯೋ ತಂದೆಯ ಗುಣಗಳನ್ನು ಮಗನೂ ಅನುಕರಿಸಬಹುದು ಮಗಳೂ ಅನುಕರಿಸಬಹುದು. ನಮ್ಮ ಅನುಭವಕ್ಕೆ ಬಂದ ವಿಚಾರಗಳಾದ್ದರಿಂದ ಇವೆಲ್ಲವೂ ನಿಮ್ಮಲ್ಲಿ, ನಮ್ಮಲ್ಲಿ, ನಮ್ಮಂತಹ ಜನಸಾಮಾನ್ಯರಲ್ಲಿ ವಿಶೇಷವೇನಲ್ಲ. ಆದರೆ ಪ್ರಸಿದ್ಧ ‘ಪಂಡಿತನ ಮಗ ಶುಂಠಿ’ ಆದರೆ ಜನರು ಹುಬ್ಬೇರಿಸುವುದು ಖಂಡಿತ. ಅದಕ್ಕೆ ಮುಖ್ಯ ಕಾರಣ ಮುಂದಿನ ಪೀಳಿಗೆಯಲ್ಲಿ ಮಹತ್ತರವಾದದ್ದನ್ನೇ ನಿರೀಕ್ಷಿಸುತ್ತದೆ ಸಮಾಜ. ಒಂದುವೇಳೆ ತಂದೆ ಪ್ರಸಿದ್ಧಿ ಪಡೆದ ಗೌರವಾನ್ವಿತ ವ್ಯಕ್ತಿ ಆಗಿದ್ದಲ್ಲಿ ಸಮಾಜದ ನಿರೀಕ್ಷೆ ಎರಡೂ ಕಡೆ ಮೊನಚಾದ ಕತ್ತಿಯಂತೆ ಸದಾ ಮಕ್ಕಳ ತಲೆಯ ಮೇಲೆ ತೂಗಾಡುತ್ತಿರುತ್ತದೆ. ಆ ಕತ್ತಿಯ ಹರಿತವನ್ನು ತಪ್ಪಿಸುಕೊಳ್ಳುವವರು ಬಹು ಕಡಿಮೆ.
ಈ ಹಿನ್ನಲೆಯಲ್ಲಿ ಸಮಾಜದ ನಿರೀಕ್ಷಯೊಂದನ್ನೇ ಅಲ್ಲ, ತಂದೆಯ ನಿರೀಕ್ಷೆಯನ್ನು ಕೂಡ ಮೀರಿ ತಮ್ಮದೇ ಸ್ಥಾನ ಗಳಿಸಿರುವ ಮೂರು ತಂದೆ-ಮಗಳ ಜೋಡಿ ಜೀವನ ಯಾತ್ರೆ ಮತ್ತು ಅವರುಗಳ ಸಂಗೀತ ಈ ಲೇಖನದ ಕಥಾವಸ್ತು. ಪ್ರಸಿದ್ಧ ಹಿಂದೂಸ್ತಾನಿ ಗಾಯಕ ಕುಮಾರ ಗಂಧರ್ವ, ಮತ್ತೊಬ್ಬ ಪ್ರಸಿದ್ಧ ಹಿಂದುಸ್ಥಾನಿ ಗಾಯಕರಾದ ಪಂಡಿತ್ ಅಜಯ್ ಚಕ್ರವರ್ತಿ, ಹಾಗು ಪ್ರಸಿದ್ಧ ಸಿತಾರ್ ವಾದಕ ಪಂಡಿತ್ ರವಿ ಶಂಕರ್ ಬಗ್ಗೆ ಎಲ್ಲರಿಗೂ ಸಾಕಷ್ಟು ಪರಿಚಯವಿದೆ. ಆದರೆ ತಂದೆಯಂತೆಯೇ ಮಗಳು ಎನ್ನುವುದಕ್ಕೆ ಸಾಕ್ಷಿಯೋ ಎನ್ನುವಂತೆ ಕುಮಾರ ಗಂಧರ್ವರ ಪುತ್ರಿ ಪ್ರಸಿದ್ಧ ಹಿಂದೂಸ್ತಾನಿ ಗಾಯಕಿ ವಿದೂಷಿ ಕೋಮಕಲಿ ಕಲಾಪಿನಿ, ಅಜಯ್ ಚಕ್ರವರ್ತಿಯವರ ಪುತ್ರಿ ಪ್ರಸಿದ್ಧ ಹಿಂದುಸ್ಥಾನಿ ಗಾಯಕಿ ಕೌಶಿಕಿ ಚಕ್ರವರ್ತಿ, ಹಾಗು ರವಿ ಶಂಕರರ ಪುತ್ರಿ ಪ್ರಸಿದ್ಧ ಸಿತಾರ್ ವಾದಕಿ ಅನೌಷ್ಕ ಶಂಕರ್ ಬಗ್ಗೆ ತಂದೆ-ಮಗಳ ಜೋಡಿಯ ಪರಿಚಯ ಮಾಡಿಕೊಡುವ ಪ್ರಯತ್ನ ಮಾಡಿದ್ದೇನೆ. ಈ ಎಲ್ಲ ಸಂಗೀತಗಾರರ ಬಗ್ಗೆ ತಿಳಿದುಕೊಳ್ಳಲು ಇಂಟರ್ನೆಟ್ ನಲ್ಲಿ ಬಹಳ ಮಾಹಿತಿ ದೊರೆಯುತ್ತದೆ. ಅದನ್ನೇ ಇಲ್ಲಿ ಮತ್ತೊಮ್ಮೆ ಹೇಳುವುದರ ಬದಲು ಅವರುಗಳ ಸಂಗೀತವನ್ನೇ ಇಲ್ಲಿ ನಾನು ಯೂಟ್ಯೂಬ್ ವಿಡಿಯೋಗಳ ಮೂಲಕ ನಿಮ್ಮೊಡನೆ ಹಂಚಿಕೊಂಡಿದ್ದೇನೆ. ವಿಶೇಷವಾಗಿ, ನಾನು ಇಲ್ಲಿ ತಂದೆ-ಮಗಳು ಹಾಡಿದ ಒಂದೇ ರಾಗವನ್ನು ಚುನಾಯಿಸಿದ್ದೇನೆ.
ಕಲಾಪಿನಿಯ ತಂದೆ ತಾಯಿ ಇಬ್ಬರೂ ಹಿಂದೂಸ್ತಾನಿ ಗಾಯಕರೇ. ತಂದೆ ಪಂಡಿತ್ ಕುಮಾರ ಗಂಧರ್ವರು, ತಾಯಿ ವಿದೂಷಿ ವಸುಂಧರ ಕೋಮಕಲಿ. ತಂದೆಯ ಮಾತೃಭಾಷೆ ಕನ್ನಡ, ತಾಯಿಯದು ಬೆಂಗಾಲಿ. ಕಲಾಪಿನಿಯ ಹಾಡುಗಾರಿಕೆ ಕೇಳಿದರೆ ತಾಯಿಯಿಂದಲೇ ಹೆಚ್ಚಾಗಿ ಗಾಯನ ಕಲಿತಿದ್ದರೂ ತಂದೆಯ ಗಾಯನ ಶೈಲಿ ಹೆಚ್ಚು ಪ್ರಭಾವ ಬೀರಿರಬಹದು ಎಂದು ಊಹಿಸಿದ್ದಾರೆ ಕೆಲವರು. ಆದರೆ ಪಾರಂಪರಾಗತವಾಗಿ ಬಂದ ಇಬ್ಬರ ಶೈಲಿಯನ್ನು ಕಾರಗತಮಾಡಿಕೊಂಡಿದ್ದರೂ, ಕಲಾಪಿನಿ ಅವರು ತಮ್ಮದೇ ಬಹುಮುಖ ಪ್ರತಿಭೆಯಿಂದ ಹೆಸರು ಪಡೆದವರು.
ನನಗೆ ಇಷ್ಟವಾದ ಸೋಹನಿ ರಾಗದ ಹಾಡನ್ನು ತಂದೆ ಪಂಡಿತ ಕುಮಾರ ಗಂಧರ್ವರ ಧ್ವನಿಯಲ್ಲಿ ಮೊದಲು ಕೇಳಿ. ನಂತರ ವಿದೂಷಿ ಕೋಮಕಲಿ ಕಲಾಪಿನಿಯವರು ಒಂದು ಲೋಕಾಭಿರಾಮವಾದ ಸಂಘದಲ್ಲಿ ಕುಳಿತು ಹಾಡಿದ ಅದೇ ಸೋಹನಿ ರಾಗದ ಹಾಡನ್ನು ಕೇಳಿ. ಅಲ್ಲಿ ನೆರದಿದ್ದ ಮಹಾಕಲಾವಿದರೂ ಕೂಡ ಮೂಕವಿಸ್ಮಿತರಾಗಿ ಕೇಳಿ ನಂತರ ಕರತಾಡನ ಮಾಡುವುದನ್ನು ನೋಡಿದಾಗ ನನಗೆ ಅನಿಸಿದ್ದು, ಒಂದು ವೇಳೆ ಪಂಡಿತ್ ಕುಮಾರ ಗಂಧರ್ವರು ಅಲ್ಲಿ ಆಸೀನರಾಗಿದ್ದರೆ ಅವರೂ ಕೂಡ ಮೂಕವಿಸ್ಮಯರಾಗಿ ಕರತಾಡನ ಮಾಡುತ್ತಿದ್ದಾರೆಂದು. ಅಬ್ಬಾ, ಅದೆಷ್ಟು ಆತ್ಮವಿಶ್ವಾಸದಿಂದ, ಅದೆಷ್ಟು ತಲ್ಲೀನರಾಗಿ ಹಾಡಿದ್ದಾರೆ, ಅದೆಷ್ಟು ಸ್ವರ ವ್ಯಾಪ್ತಿ ಇದೆ ಅವರ ಹಾಡುಗಾರಿಕೆಯಲ್ಲಿ ನೀವೇ ನೋಡಿ. ಯಾವ ತಂದೆ ತಾನೇ ಹೆಮ್ಮೆ ಪಡದಿರಲು ಸಾಧ್ಯ, ತಂದೆಯನ್ನು ಮೀರಿಸಿದ ಮಗಳ ಗಾಯನವನ್ನು ಕೇಳಿ?
ಪಂಡಿತ್ ಕುಮಾರ ಗಂಧರ್ವ
ವಿಧೂಷಿ ಕೋಮಕಲೀ ಕಲಾಪಿನಿ
ಪಂಡಿತ್ ಅಜಯ್ ಚಕ್ರವರ್ತಿ ಮತ್ತು ವಿದೂಷಿ ಕೌಶಿಕಿ ಚಕ್ರವರ್ತಿ
ಹಿಂದೂಸ್ತಾನಿ ಕಲೆಯಲ್ಲಿ ತಮ್ಮದೇ ವೈಶಿಷ್ಟ್ಯ ಗಳಿಸಿರುವ ಸಂಗೀತಕಾರರಲ್ಲಿ ಒಬ್ಬರಾದ ಪಂಡಿತ್ ಅಜೋಯ್ ಚಕ್ರಬರ್ತಿ (ಅವರ ಮಾತೃಭಾಷೆ ಬೆಂಗಾಲಿಯಲ್ಲಿ ಹೇಳುವುದಾದರೆ), ಕಳೆದ ಹಲವಾರು ದಶಕಗಳಿಂದ ಭಾರತ ಮತ್ತು ವಿದೇಶಗಳಲ್ಲಿ ಹೆಸರುಗಳಿಸಿದ್ದಾರೆ. ಪಾಟಿಯಾಲ ಘರಾನದಲ್ಲಿ ತುಮ್ರಿ, ಶೃಂಗಾರ ಮತ್ತು ಭಕ್ತಿಗೀತೆಗಳನ್ನು ಹಾಡುವ ಇವರ ಧ್ವನಿ ಮೃಧು, ಯಾವ ಸ್ವರವನ್ನೂ ಎತ್ತರದಲ್ಲಿ ಅಷ್ಟಮ ಶ್ರೇಣಿಯಲ್ಲಿ ಹಾಡುವುದಕ್ಕಿಂತ ಕೆಳ ಸ್ಥಾಯಿಯಲ್ಲಿ ಹಾಡುವುದು ಇವರ ಶೈಲಿ. ರಾಗಪ್ರಧಾನವಾದ ದಾದ್ರಾ, ಭಜನೆಗಳು, ರಬೀನ್ದ್ರ ಸಂಗೀತ, ಚಲನಚಿತ್ರ ಹಿನ್ನಲೆ ಗಾಯನ, ಹೀಗೆ ವಿವಿಧ ಶೈಲಿಯಲ್ಲಿ ಹಾಡಿ ನೂರಕ್ಕೂ ಹೆಚ್ಚು ಆಲ್ಬಮ್ಗಳನ್ನು ಬಿಡುಗಡೆ ಮಾಡಿದ್ದಾರೆ.
ವಿದೂಷಿ ಕೌಶಿಕಿ ಚಕ್ರವರ್ತಿ ಸಂಗೀತ ಕಲಿತದ್ದು ಕಲ್ಕತ್ತಾದ ಸಂಗೀತ ರೀಸರ್ಚ್ ಅಕಾಡೆಮಿಯಲ್ಲಿ. ತಂದೆ ಪಂಡಿತ್ ಅಜಯ್ ಚಕ್ರವರ್ತಿಯವರ ಗುರು ಜ್ಞಾನ ಪ್ರಕಾಶ್ ಘೋಷ್ ಕೌಶಿಕಿಯವರ ಗುರು ಕೂಡ. ಹಿಂದುಸ್ಥಾನಿ ಸಂಗೀತವನ್ನು ಕಲಿತು ನಂತರ ಶ್ರೀ ಬಾಲಮುರಳಿ ಕೃಷ್ಣವರ ಜೊತೆ ಕರ್ನಾಟಕ ಸಂಗೀತವನ್ನು ಕಲಿತಿರುವ ಕಾರಣವಾಗಿ ಎರಡೂ ಸಂಗೀತ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದರೆ. ಪಾಟಿಯಾಲ ಘರಾನದಲ್ಲಿ ಪಳಗಿದ ಕೌಶಿಕಿ ತಂದೆಯಂತೆಯೇ ತುಮ್ರಿ, ದಾದ್ರಾ, ಭಜನೆ ಮತ್ತು ಚಲನಚಿತ್ರ ಹಿನ್ನಲೆ ಗಾಯನದ ಮೂಲಕ 2002ನೇ ಇಸವಿಯಿಂದ ಭಾರತ ಮತ್ತು ವಿದೇಶಗಳಲ್ಲಿ ಹಾಡುತ್ತಲೇ ಬಂದಿದ್ದಾರೆ.
ಕ ಕರೂ ಸಜನಿ, ಭೈರವಿ ರಾಗದಲ್ಲಿ ತಂದೆ ಮಗಳು ಹೇಳಿರುವ ಈ ಜನಪ್ರಿಯ ಹಾಡನ್ನು ಕೇಳಿ.
ಪಂಡಿತ್ ಅಜಯ್ ಚಕ್ರವರ್ತಿ
ವಿದೂಷಿ ಕೌಶಿಕಿ ಚಕ್ರವರ್ತಿ
ಪಂಡಿತ್ ರವಿ ಶಂಕರ್ ಮತ್ತು ವಿದೂಷಿ ಅನೌಷ್ಕ ಶಂಕರ್
ವಿದೇಶಿಯರಿಗೆ ಭಾರತದ ಸಾಂಸ್ಕೃತಿಕ ಪರಿಚಯ ಮಾಡಿದ ವ್ಯಕ್ತಿ ಪಂಡಿತ್ ರವಿ ಶಂಕರ್ ಎಂದರೆ ತಪ್ಪಾಗದು. ಏಳೆಂಟು ದಶಕಗಳ ದೀರ್ಘ ಅವಧಿಯಲ್ಲಿ ಸಿತಾರ್ ಮತ್ತು ರವಿ ಶಂಕರ್ ಭಾರತದ ಅವಿಭಾಜ್ಯ ಅಂಗವಾಗಿ ಪ್ರಸಿದ್ಧಿ ಗಳಿಸಿರುವ ವಿಚಾರ ಮತ್ತು ಭಾರತ ರತ್ನ ಬಿರುದು ಗಳಿಸಿದ್ದು ಎಲ್ಲರಿಗೂ ಚಿರಪರಿಚಿತ. ಆದರೆ ದಶರಥನಂತೆ ಮೂರು ಹೆಂಡತಿಯರೊಡನೆ ಸಂಸಾರ ನಿರ್ವಹಿಸಿದ ಪಂಡಿತ್ ರವಿ ಶಂಕರ್ ತಮ್ಮ ಹಿರಿಯ ವಯಸ್ಸಿನಲ್ಲಿ ಅನೌಷ್ಕಳಿಗೆ ಜನ್ಮನೀಡಿ ನಂತರ ತಾವೇ ಗುರುವಾಗಿ ಸಿತಾರ್ ಕಲಿಸಿದ್ದು ಒಂದು ಗಾಳಿ ಮಾತೇನಲ್ಲ. ಅನೌಷ್ಕ ಸಿತಾರ್ ನುಡಿಸುವುದರಲ್ಲಿ ಮತ್ತು ಅವಳ ಅಕ್ಕ ನಾರ ಜೋನ್ಸ್ ಜ್ಯಾಜ್ ಸಿಂಗರ್ ಆಗಿ ಇಬ್ಬರೂ ಸಂಗೀತ ಕ್ಷೇತ್ರದಲ್ಲಿ ಹೆಸರು ಪಡೆದಿದ್ದಾರೆ.
ಅನೌಷ್ಕ ಹದಿಮೂರರ ವಯಸ್ಸಿನಲ್ಲೇ ನವ ದೆಹಲಿಯಲ್ಲಿ ತನ್ನ ಮೊದಲ ಸಂಗೀತ ಕಚೇರಿ ನಡೆಸಿಕೊಟ್ಟ ಪ್ರಚಂಡ ಕಲಾವಿದೆ. ತಂದೆ ಪಂಡಿತ್ ರವಿ ಶಂಕರ್ ಜೊತೆ ಮತ್ತು ಉಸ್ತಾದ್ ಝಕೀರ್ ಹುಸೈನ್ ಅವರ ಜೊತೆ ನಿಕಟವಾಗಿ ಸಹಕರಿಸಿ, ಪ್ರಪಂಚದ ಹಲವಾರು ಶ್ರೇಷ್ಠ ಸಭಾಂಗಣದಲ್ಲಿ ಸಿತಾರ್ ನುಡಿಸಿ ಹೆಸರುಗಳಿಸಿದ್ದಾರೆ. ಹಿಂದೂಸ್ತಾನಿ ಶೈಲಿಯ ಸಿತಾರ್ ವಾದನದ ಜೊತೆ ಜ್ಯಾಜ್, ಎಲೆಕ್ಟ್ರಾನಿಕ, ಮುಂತಾದ ಸಮಕಾಲೀನ ಸಂಗೀತ ಮಾಧ್ಯಮಗಳಲ್ಲಿ ಹಲವಾರು ಆಲ್ಬಮ್ ಬಿಡುಗಡೆ ಮಾಡಿದ್ದಲ್ಲದೆ ಹಲವಾರು ಪ್ರಶಸ್ತಿ ಕೂಡ ಪಡೆದಿದ್ದಾರೆ. ತಂದೆಯಂತೆ ಭಾರತ ಸಾಂಸ್ಕೃತಿಕ ಪ್ರತಿನಿಧಿಯಾಗಿ ಸಿತಾರ್ ವಾದನವನ್ನು ಮತ್ತಷ್ಟು ಜನಪ್ರಿಯಗೊಳಿಸಿದ್ದಾರೆ.
ಪಂಡಿತ್ ರವಿ ಶಂಕರ್
ವಿದೂಷಿ ಅನೌಷ್ಕ ಶಂಕರ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ