ದಾಸಯ್ಯ
ನಮ್ಮ ಮನೆಯ ಸಂಪ್ರದಾಯದಲ್ಲಿ ಮದುವೆಯ ಶುಭ ಆರಂಭವಾಗುವುದೇ ದಾಸಯ್ಯನ ಶಂಖನಾದದಿಂದ ಮತ್ತು ತಮಟೆಯ ಅಬ್ಬರದಲ್ಲಿ. ನಾನು ಚಿಕ್ಕವನಾಗಿದ್ದಾಗ ಮಾತ್ರ ನೋಡಿದ್ದಲ್ಲ ಈ ಸಂಪ್ರದಾಯವನ್ನು, ನನ್ನ ಮದುವೆಯನ್ನೂ ಆರಂಭ ಮಾಡಿದ್ದೆ ದಾಸಯ್ಯ. ಮನೆಗೆ ಬಂದ ದಾಸಯ್ಯನಿಗೆ ಮನೆಯಲ್ಲಿ ಮುಂಬರುವ ಇಂತಹ ದಿನದಲ್ಲಿ ನಮ್ಮ ಮಗನ/ ಮಗಳ ಮದುವೇ ಅಂತ ಹೇಳಿದರೆ ಸಾಕು ಅವನೇ ಊರಿಗೆಲ್ಲ ಶುಭ ಸುದ್ದಿ ಹರಡುವ ಕೆಲಸ ವಹಿಸಿಕೊಂಡು ಬಿಡುತ್ತಾನೆ. ಅದಕ್ಕಾಗಿಯೇ ಅವನು ಬಂದರೆ ಶುಭ ಸುದ್ದಿಯನ್ನೇ ತರುವವ ಎಂದು ಗೌರವ ನಮ್ಮ ಮನೆಯಲ್ಲಿ. ಶುಭ ಸೂಚಕವಾಗಿ ಒಂದು ವಾರ ಮದುವೆಯ ಮುನ್ನವೇ ಮನೆಯ ಮುಖ್ಯ ಬಾಗಿಲಿಗೆ ಚಪ್ಪರ ಕಟ್ಟುವ ದಿನ ದಾಸಯ್ಯನೆ ಮುಖ್ಯ ಅತಿಥಿ. ಶಿವನ ವಾಹನವಾದ ನಂದಿಯನ್ನು ಅಲಂಕರಿಸಿಕೊಂಡು ಮನೆಯ ಮುಂದೆ ನಿಂತನೆಂದರೆ ಸಾಕು, ಎಲ್ಲರೂ ಬಂದು ನಂದಿಗೆ ಆರತಿ ಎತ್ತಿ ಅಂದಿನ ಕಾರ್ಯವನ್ನು ಶುರು ಮಾಡುತ್ತಿದ್ದರು. ಅವನ ನಿರ್ದೇಶನದಲ್ಲಿ ಚಪ್ಪರದ ಪೂಜೆ, ಬಾಳೆ ಕಂದು, ಮಾವಿನ ತೋರಣ, ಎಲ್ಲದರಲ್ಲೂ ದಾಸಯ್ಯನ ಪಾಂಡಿತ್ಯ ಅರಿವಾಗುತ್ತದೆ. ಅಂದಿನ ಹೂವೀಳ್ಯದ ಸಮಯದಲ್ಲಿ ಶಂಖ ತಮಟೆ ಬಾರಿಸಿ ಇಡೀ ನೆರೆಹೊರೆಯಲ್ಲಿ ಅತ್ಯಂತ ಸಂಭ್ರಮದ ವಾತಾವರಣ ಕಲ್ಪಿಸಿ ಬಿಡುತ್ತಿದ್ದ ದಾಸಯ್ಯ. ಅಂದಿನ ದಾಸಯ್ಯನ ಊಟ ನಮ್ಮ ಮನೆಯಲ್ಲೇ, ನಂದಿಗೂ ಕೂಡ ಬಾಳೆಎಲೆಯ ಊಟ! ಎಲ್ಲರನ್ನೂ ಹರಸಿ ಹೊರಟನೆಂದರೆ ಮತ್ತೆ ಅವನ ದರ್ಶನ ಮದುವೆಯ ದಿನ ಛತ್ರಕ್ಕೆ ಹೊರಡುವ ಮುನ್ನ. ಅಂದೂ ಕೂಡ ಅವನು ಕಲ್ಪಿಸುವ ಸಂಭ್ರಮದ ವಾತಾವರಣ ಮರೆಯಲು ಸಾಧ್ಯವಿಲ್ಲ. ಇದು ನಮ್ಮ ಅಜ್ಜ ಅಜ್ಜಿಯ ಕಾಲದಿಂದಲೂ ನಡೆದು ಬಂದದ್ದು. ದೊಡ್ಡ ಸಂಸಾರದಲ್ಲಿ ಬೆಳೆದ ನನಗೆ 10-12 ಮದುವೆಗಳಲ್ಲಿ ಆದ ಈ ಅನುಭವದಿಂದ ದಾಸಯ್ಯನ ಬಗ್ಗೆ ಇಂದಿಗೂ ಗೌರವ ಉಳಿದಿದೆ. 1990ರ ದಶಕದಲ್ಲಿ ಕೂಡ ಬೆಂಗಳೂರಿನಲ್ಲೇ ನಮ್ಮ ಮನೆಯಲ್ಲಿ ತಪ್ಪದೆ ನಡೆಯುತ್ತಿದ್ದ ಈ ಸಂಪ್ರದಾಯದ ಆಚರಣೆ ಮತ್ತೆ 2020ರಲ್ಲಿ ಆದ ಅಕ್ಕನ ಮಗಳ ಮದುವೆಯಲ್ಲೂ ನಡೆಯಿತೆನ್ನುವುದರ ಬಗ್ಗೆ ಇಲ್ಲಿ ಹಂಚಿಕೊಳ್ಳಲು ನನಗೆ ಸಂತೋಷವೇ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ