ಮಂಗಳವಾರ, ಸೆಪ್ಟೆಂಬರ್ 24, 2024

ಕಮಲಾ ಹ್ಯಾರಿಸ್ ಅವರ ಜನ್ಮಕುಂಡಲಿನಿಯಲ್ಲಿ ರಾಜಯೋಗ ಬರೆದಿದಿಯೇ?

 ಕಮಲಾ ಹ್ಯಾರಿಸ್ ಅವರ ಜನ್ಮಕುಂಡಲಿನಿಯಲ್ಲಿ ರಾಜಯೋಗ ಬರೆದಿದಿಯೇ?

ಜ್ಯೋತಿಷಿ ಆಗಿರದಿದ್ದರೂ ಕುತೂಹಲದಿಂದ ಭವಿಷ್ಯ ನುಡಿದವರು: ರವಿ ಗೋಪಾಲರಾವ್.  


ಜ್ಯೋತಿಷ್ಯದಲ್ಲಿ ನಂಬಿಕೆ ಇದ್ದವರಿಗೆ ಮುಂದೇನಾಗಬಹುದು ಎನ್ನುವುದರ ಬಗ್ಗೆ ತುಂಬಾ ಕುತೂಹಲ ಪ್ರಶ್ನೆಗಳಿಗೆ ಉತ್ತರ ಹುಡುಕಿದಂತೆ.  ಹಿಂದೆಯೂ ಈಗಲೂ ಹುಟ್ಟಿದ ಮಕ್ಕಳ ಜನ್ಮ ಕುಂಡಲಿ ಬರೆಸುವುದು, ಮದುವೆಗೆ ಗುಣಗಳನ್ನು ಹೋಲಿಸುವುದು, ಯುದ್ಧಕ್ಕೆ ಹೋಗುವವರಿಗೆ ಗ್ರಹಗಳ ಮತ್ತು ರಾಶಿ ಫಲಗಳನ್ನು ತಿಳಿಸಿ ಅವರ ಜಯ-ಪರಾಜಯಗಳ ಬಗ್ಗೆ ಯೋಚಿಸಿ ಯಜ್ಞಯಾಗಾದಿಗಳನ್ನು ಪರಿಹಾರಕ್ಕೆ ಸೂಚಿಸುವುದು, ಹೀಗೆ ಎಲ್ಲ ಜೀವನದ ಎಲ್ಲ ಘಟನೆಗಳಿಗೂ ಜ್ಯೋತಿಷ್ಯ ಒಂದು ಉಪಯುಕ್ತ ಮಾಹಿತಿ ನೀಡುವುದೆಂದು ಬಹುಶಃ ಹತ್ತು ಜನರಲ್ಲಿ ಎಂಟು ಮಂದಿ ನಂಬುತ್ತಾರೆ.  ಭಾರತದಲ್ಲಿ ಹುಟ್ಟಿ ಬೆಳೆದ ನಮ್ಮಂತವರಿಗೆ ಇದರ ಬಗ್ಗೆ ಸಾಕಷ್ಟು ಪರಿಚಯ ಇದೆ.  ಜನಸಾಮಾನ್ಯರಿಗೆ ನಂಬಿಕೆ ಮುಖ್ಯವಲ್ಲ ಆದರೆ  ಜ್ಯೋತಿಷಿಗಳ ವರ್ತನೆಯಲ್ಲಿ ಅದೇನೋ ಒಂದು ರೀತಿಯ ಗುಪ್ತತೆ ಕಂಡು ಜನರಲ್ಲಿ ಭಯವನ್ನೂ ಕೂಡ ಮೂಡಿಸುತ್ತದೆ. ರಾಜಕಾರಣಿಗಳು ಹೆಚ್ಚು ನಂಬಿಕೆ ಅಥವಾ ಭಯ ಉಳ್ಳವರಿರಬೇಕು,  ಅವರಿಂದಲೇ ಜ್ಯೋತಿಷಿಗಳಿಗೆ ಹೆಚ್ಚು ಆದಾಯ. ಜ್ಯೋತಿಷ್ಯದ ಹಿನ್ನಲೆ ಬಹಳವೇ ವೈಜ್ಞಾನಿಕ ಅಂತ ಹೇಳಿದರೆ ಕೆಲವರು ನಕ್ಕಾರು, ಕೆಲವರು ದೀರ್ಘ ಕಾಲ ಅದನ್ನು ಅಧ್ಯಾಯನ ಮಾಡಿ ಅದಕ್ಕಿಂತಲೂ ಯಾವುದೇ ವೈಜ್ಞಾನಿಕ ವಿದ್ಯೆಯೇ ಇಲ್ಲ ಎನ್ನುವಷ್ಟು ನಂಬಿಕೆ ಬೆಳೆಯಸಿಕೊಳ್ಳುವವರು ಕೂಡ ಇದ್ದಾರೆ.  ಅದು ಏನೇ ಇರಲಿ, ಜ್ಯೋತಿಷ್ಯದ ಹಿನ್ನಲೆ ಬಹಳ ದೀರ್ಘವಾದದ್ದು ಮತ್ತು ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ಬೆಳೆದು ಬಂದಿರುವ ರೀತಿಯನ್ನು ನೋಡಿದರೆ, ಅಬ್ಬಾ, ನಮ್ಮ ಭಾರತದಲ್ಲಿ ಜ್ಯೋತಿಷ್ಯ ಇಲ್ಲದೆ ಯಾವ ಕಾರ್ಯವೂ ಸಾಧ್ಯವಿಲ್ಲ ಎನ್ನುವಷ್ಟು ಬೆಳೆದಿದೆ.  

ಜ್ಯೋತಿಷ್ಯದಲ್ಲಿ ಜನ್ಮ ಕುಂಡಲಿ ಬಹಳ ಮುಖ್ಯವಾದದ್ದು.  ಹುಟ್ಟಿದ ಕ್ಷಣ, ಆ ಕ್ಷಣದಲ್ಲಿ ಗ್ರಹಗಳ ರಾಶಿಗಳ ನಕ್ಷತ್ರಗಳ ಸೂರ್ಯ ಚಂದ್ರರ ಸ್ಥಾನಗಳನ್ನು ಅರಿಯುವುದು ಬಹಳ ಮುಖ್ಯ. ಇದೆಲ್ಲ ಏಕೆ ಹೇಳುತ್ತಿದೀನಿ ಅಂತ ನಿಮಗೆ ಕುತೂಹಲ ಮೂಡಿದರೆ, ಅದು ಒಳ್ಳೆಯ ಸೂಚನೆಯೇ.  ಏಕೆಂದರೆ ಅಮೇರಿಕಾದಲ್ಲಿ ಮುಂದೆ ನಡೆಯಲಿರುವ ಚುನಾವಣೆಯಲ್ಲಿ ಏನಾಗಬಹುದು ಎನ್ನುವ ಪ್ರಶ್ನೆಗೆ ಉತ್ತರ ತಿಳಿದುಕೊಳ್ಳಬೇಕೆಂಬ ನಮ್ಮ ನಿಮ್ಮ ಎಲ್ಲರ ಕುತೂಹಲಕ್ಕೆ ಸ್ವಲ್ಪ ವಿರಾಮ ಕೊಡಬಹುದು.  ಅಂದರೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವವರ ಜನ್ಮ ಕುಂಡಲಿಯನ್ನು ಬಿಡಿಸಿ ನೋಡಿ, ಗ್ರಹಗತಿಗಳನ್ನು ಕೂಲಂಕಷವಾಗಿ ಅರ್ಥೈಸಿಕೊಂಡು ಯೋಗವಾಹಗಳನ್ನು ತಾಳೆ ಮಾಡಿ ನೋಡಬಹುದು.  ಬನ್ನಿ ಮೊದಲು ಕಮಲ ಹ್ಯಾರಿಸ್ ಅವರ ಜನ್ಮ ಕುಂಡಲಿಯನ್ನು ನೋಡುವ. ಆಕೆ ಹುಟ್ಟಿದ್ದು ನಮ್ಮ ಕ್ಯಾಲಿಫೋರ್ನಿಯಾದ ಒಕ್ಲಾನ್ಡ್ ನಲ್ಲಿ, ಅಕ್ಟೊಬರ್ ಇಪ್ಪತ್ತನೇ ತಾರೀಖು, ೧೯೬೪ನೇ ಇಸವಿಯಲ್ಲಿ.  ಅಂದರೆ ಮಂಗಳವಾರ, ಶುಕ್ಲಪಕ್ಷ ಪೂರ್ಣಿಮೆಯಲ್ಲಿ, ರೇವತಿ ನಕ್ಷತ್ರದಲ್ಲಿ ಹುಟ್ಟಿದವರು.  ಚಾಂದ್ರಮಾನದ ಪ್ರಕಾರ ಮೀನಾ ರಾಶಿಯಲ್ಲೂ, ಸೌರಮಾನ ಪ್ರಕಾರ ತುಲಾ ರಾಶಿಯಲ್ಲೂ ಜನಿಸಿದರೆಂದು ತಿಳಿಯಬಹುದು. ಹತ್ತು ಅಂಶಗಳ ಅಂದರೆ ದಶಾಂಶ ಸಂಖ್ಯಾಬಲವನ್ನು ಕೇಂದ್ರೀಕರಿಸಿ ಜನ್ಮ ಕುಂಡಲಿಯನ್ನು ನೋಡಿದಾಗ ಗುರು, ಹತ್ತನೆಯಮನೆಯಲ್ಲೂ, ಸೂರ್ಯ ಎಂಟನೇ ಮನೆಯಲ್ಲೂ, ಮಂಗಳ, ಕೇತು ಮತ್ತು ಬುಧ  ಒಂಬತ್ತನೇ ಮನೆಯಲ್ಲೂ, ಶುಕ್ರ ಒಂದನೇ ಮನೆಯಲ್ಲೂ, ಶನಿ ಹನ್ನೆರಡನೇ ಮನೆಯಲ್ಲೂ, ರಾಹು ಮೂರನೇ ಮನೆಯಲ್ಲಿ ಮತ್ತು ಕೊನೆಯದಾಗಿ ಚಂದ್ರ ಐದನೇ ಮನೆಯಲ್ಲಿ ಇದ್ದಾನೆ ಅಂತ ನೀವು ಜನ್ಮಕುಂಡಲಿಯನ್ನು ಗಮನವಿಟ್ಟು ನೋಡಿದರೆ ಗೊತ್ತಾಗಿ ಬಿಡುತ್ತದೆ.  ಅಂದರೆ ಎಲ್ಲ ಗ್ರಹಗಳೂ ಒಳ್ಳೆಯ ಮನೆಗಳಲ್ಲೇ ಇರುವುದರಿಂದ ಈ ಜನ್ಮಕುಂಡಲಿಯವರಿಗೆ ಒಳ್ಳೆಯ ಭವಿಷ್ಯವಿದೆ ಎಂದು ಜ್ಯೋತಿಷ್ಯ ಹೇಳುತ್ತದೆ.  

ಕುಂಡಲಿನಿ ಯೋಗ, ಅಂದರೆ, ಮೇಲಿನ ಕುಂಡಲಿನಿಯಲ್ಲಿ ಹುಟ್ಟಿದವರಿಗೆ ಬರಬಹುದಾದ ಸುಮಾರು ಮೂವತ್ತಾರು ಯೋಗಕಾಲಗಳನ್ನು ಪರಿಶೀಲಿಸುವ ಒಂದು ಪ್ರಕ್ರಿಯೆ.  ಮಂಗಳ ದೋಷ, ರಾಜಲಕ್ಷಣ ಯೋಗ, ಮಹಾಯೋಗ, ಲಕ್ಷ್ಮಿ ಯೋಗ ಹೀಗೆ ಬೇರೆ ಬೇರೆ ಯೋಗಲಕ್ಷಣಗಳನ್ನು ಗುರುತಿಸಿ ಆ ಜನ್ಮಕುಂಡಲಿಯಲ್ಲಿ ದೋಷ ಅಥವಾ ಯೋಗಗಳ ಕಾಲಮಾಪನವನ್ನು ಮತ್ತು ಅದಕ್ಕೆ ಬೇಕಾದ ಪರಿಹಾರ ಅಥವಾ ಸಿದ್ಧತೆಗಳನ್ನು ತಿಳಿಸಿಕೊಡಲು ಜ್ಯೋತಿಷಿಗಳು ಅರಿಯುತ್ತಾರೆ.  ಉದಾಹರಣೆಗೆ ಮಂಗಳ ದೋಷ ಬರುವುದು ಮಂಗಳ ಗ್ರಹ ತನ್ನ ಮನೆಯಲ್ಲಿ ಇರದೇ ವೈರಿಯ ಮನೆಯಲ್ಲಿರುವುದರಿಂದ ಅಂತ ತಿಳಿಯತಕ್ಕದ್ದು.  ಆ ದೋಷದಿಂದ ಆಗುವ ಕೆಲವು ಸಮಸ್ಯೆಗಳು ಪ್ರಾಪ್ತವಯಸ್ಸಿಗೆ  ಆಗದಿರುವುದು, ಗಂಡ ಹೆಂಡಿರಲ್ಲಿ ಮನಸ್ಥಾಪ ಇತ್ಯಾದಿ ದೋಷಗಳಿಗೆ ಕಾರಣವೆಂದು ಹೇಳುತ್ತಾರೆ.  ಅದೇ ರೀತಿ ಆರು ಮತ್ತು ಎಂಟನೆಯ ಮನೆಯಲ್ಲಿ ಯಾವ ಗ್ರಹಗಳೂ ಇಲ್ಲದೆ ಅಥವಾ ಒಳ್ಳೆಯ ಗ್ರಹ ಇದ್ದರೆ, ಅದು ಶುಭದಾಯಕವಾಗಿ ಪ್ರವತ ಯೋಗ ಎಂದು ಕರೆಯುತ್ತಾರೆ.  ಆ ಯೋಗದಲ್ಲಿ ಶ್ರೀಮಂತಿಕೆ, ಗೌರವಪ್ರಾಪ್ತಿ, ಇತ್ಯಾದಿ ಶುಭಕಾರ್ಯಗಳೆ  ಆಗುತ್ತವೆ.  ಅದೇ ರೀತಿ ಬುಧ ಗ್ರಹ ಮತ್ತು ಸೂರ್ಯನ ಸ್ಧಾನದಿಂದ ಕೂಡಿಬರುವ ಬುಧಾದಿತ್ಯ ಯೋಗ ಬಹಳವೇ  ಒಳ್ಳೆಯದು.  ರಾಜನಾಗುವ ಭಾಗ್ಯವೂ ದೊಡ್ಡ ಸೈನ್ಯಕ್ಕೆ ಅಧಿಪತಿಯಾಗುವ ಯೋಗವೂ ಪ್ರಾಪ್ತವಾಗುತ್ತದೆ.  ಮತ್ತೊಂದು ಪಾರಿಜಾತ ಯೋಗ.  ಇದರಲ್ಲಿ ಲಗ್ನ ಕುಂಡಲಿಯ ಅಧಿಪತಿ ರಾಶಿಯ ಅಧಿಪತಿಯ ಜೊತೆ ಇದ್ದರೆ ಅದರಿಂದ ಪಡೆಯುವ ಭಾಗ್ಯ ಅಂತಿಂತದ್ದಲ್ಲ:  ಅರ್ಧಾಯುಶ್ಶ್ಯಾದ ವೇಳೆಗೆ ರಾಜ ಮರ್ಯಾದೆ, ಗಜಾಧಿಪತಿ ಆಗುವ ಭಾಗ್ಯ, ಗೌರವ ಬಾಳ್ವೆ, ಅತ್ಯಂತ ಉನ್ನತ ಯಶಸ್ಸು, ಹೀಗೆ ಎಲ್ಲ ರೀತಿಯಲ್ಲೂ ಸತ್ಕಾಲ ಬರುತ್ತದೆ.  ಈ ಮೂವತ್ತಾರು ಯೋಗಗಳಲ್ಲಿ ಇನ್ನೂ ಒಳ್ಳೆಯವು ಬೇಕಾದಷ್ಟಿವೆ, ಕೆಟ್ಟವೂ ಇದೆ.  ಆದ್ದರಿಂದ ಎಲ್ಲವೂ ಒಟ್ಟಿಗೆ ಬರಲು ಸಾಧ್ಯವಿಲ್ಲ.  ಜ್ಯೋತಿಷಿಗಳು ಈ ಯೋಗಗಳು ಯಾವ ಇಸವಿಯಿಂದ ಯಾವ ಇಸವಿಯವರೆಗೆ ಇರುತ್ತವೆ ಎಂದು ಕೂಡ ಗುಣಿಸಿ ಹೇಳಿಬಿಡುತ್ತಾರೆ.  ಅಂದ್ರೆ ಎಲ್ಲ ಒಳ್ಳೆಕಾಲಕ್ಕೂ ಕೆಟ್ಟ ಕಾಲಕ್ಕೋ ನಮ್ಮ ಜನ್ಮಕುಂಡಲಿನಿಯಲ್ಲಿ ಬರೆದುಬಿಡಲಾಗುತ್ತದೆ.  ಕೆಟ್ಟ ಅಂಶಗಳುಳ್ಳ ಕಾಳಸರ್ಪ ಯೋಗ, ಕೆಲವೊಮ್ಮೆ ಏಳು ವರ್ಷ ಇರುತ್ತಂತೆ.  ಹಾಗೆಯೇ ಒಳ್ಳೆಯ ಗುಣಗಳು ಕೆಲವೊಮ್ಮೆ ಇಪ್ಪತ್ತು ಮೂವತ್ತು ವರ್ಷಗಳೂ ಇರುತ್ತವೆ.  ಈ ಜನ್ಮಕುಂಡಲಿನಿಯಲ್ಲಿ ಹುಟ್ಟಿದ ಕಮಲಾ ಅವರಿಗೆ ಮಂಗಳನ ಮಹಾ ದಶ ೨೦೦೯ ರಿಂದ ೨೦೧೬ ರ ವರೆಗೆ ಇದ್ದಿದ್ದು ನಂತರ ೨೦೧೬ ರಿಂದ ೨೦೩೪ ರ ವರೆಗೆ ರಾಹುವಿನ ಮಹಾ ದಶ ಯೋಗ ವಿರುತ್ತದೆ.  ನಂಬಿದರೆ ಜುಲೈ ೮, ೨೦೨೪ ರಿಂದ ಆ ಮಹಾ ದಶೆ ಶುರುವಾಯಿತಂತೆ.  ಅಂದರೆ ಬೈಡನ್ ಸ್ಪರ್ಧಿಸಲು ನಿರಾಕರಿಸಿ ಕಮಲಾಗೆ ಬಿಟ್ಟುಕೊಟ್ಟ ಸಮಯ.  ಒಟ್ಟಿನಲ್ಲಿ ಮೂವತ್ತಾರು ಯೋಗಗಳಲ್ಲಿ ಯಾವುದೇ ದೋಷದಿಂದ ಕೂಡಿರದೆ ಒಟ್ಟು ಆರು ಅತ್ಯತ್ತಮ ಯೋಗಗಳಾದ ಪರ್ವತ, ಬುಧಾದಿತ್ಯ, ಪಾರಿಜಾತ, ಅನಫ, ಆಮಲ ಮತ್ತು ಶಾಶ ಯೋಗಗಳು ಕಮಲಾ ಅವರ ಜನ್ಮಕುಂಡಲಿಯಲ್ಲಿ ಇಂದು ಮುಖ್ಯವಾಗಿ ಕಾಣುತ್ತಿವೆ.  ಅಂದರೆ ಇನ್ನೇನು ಹೇಳಬೇಕು?  ಯಾವುದೇ ಕಾರಣಕ್ಕೂ ಅಮೇರಿಕ ದೇಶದ ಅಧ್ಯಕ್ಷೆ ಆಗಲು ಎಲ್ಲ ಒಳ್ಳೆಯ ದಶೆಗಳು ಒಟ್ಟಾಗಿ ಸೇರಿವೆ.  ನೋಡೋಣ ಜ್ಯೋತಿಷ್ಯ ನಿಜವಾಗುವುದೋ ಇಲ್ಲವೋ ಎಂದು, ನವಂಬರಿನಲ್ಲಿ.   ಆದರೆ ನನ್ನ ಈ ಅರ್ಧಂಬರ್ಧ ಜ್ಯೋತಿಷ್ಯ ಜ್ಞಾನದಲ್ಲಿ ಅರ್ಧ ನಿಜವಾದರೂ ಕಮಲಾ ಅವರ ಗ್ರಹಗತಿಗಳು ಬಹಳವೇ ಚೆನ್ನಾಗಿವೆ, ಅಧ್ಯಕ್ಷೆ ಆಗಲು.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ