ಇದು ಮೋದಿಯವರ ಮರುಷಿಯಸ್ ಪ್ರವಾಸದ ಚಿತ್ರ. ಇದರಲ್ಲಿ ವಿಶೇಷತೆ ಏನಂದರೆ, ಭಾರತದ ಗಂಗೆ ಯಮುನೆ ಸರಸ್ವತಿಯರ ಸಂಗಮದಿಂದ ತಂದ ಜಲವನ್ನು ಮರುಷಿಯಸ್ ದೇಶದ ಗಂಗಾ ತಲಾವ್ ಅನ್ನುವ ಜಾಗದಲ್ಲಿ ಅಲ್ಲಿಯ ಒಂದು ಸರೋವರಕ್ಕೆ "ಜಲ ತರ್ಪಣೆ" ಮಾಡುತ್ತಿದ್ದಾರೆ ಮೋದಿಯವರು. ಗಂಗೆಯ ಪವಿತ್ರತೆಯನ್ನು ಅಲ್ಲಿಯ ಗಂಗೆಗೆ ತಲುಪಿಸಿದ ತೃಪ್ತಿ ಕಾಣುತ್ತಿದೆ ಅವರ ಮುಖಚರ್ಯೆಯಲ್ಲಿ.
ಈ ಸುದ್ದಿ ತಲುಪುವ ಮುಂಚೆಯೇ ಕೆಲವು ದಿನಗಳ ಹಿಂದೆ, ಕುಂಭಮೇಳ ಪ್ರಯುಕ್ತ, ಒಂದು ಆಶುಕವಿತೆಯನ್ನು ಬರೆದಿದ್ದೆ. ಗಂಗೆಯ ಈ ಪವಿತ್ರತೆಯ ಬಗ್ಗೆ, ವಿಜ್ಞಾನಿಗಳ ಅಜ್ಞಾನದ ಬಗ್ಗೆ. ಬಿಡುವಿದ್ದಾಗ ಓದಿ.
ತ್ರಿವೇಣಿ ಸಂಗಮ
-ರವಿ ಗೋಪಾಲರಾವ್
ಮಹಾ ಕುಂಭಮೇಳವ ಕಂಡು
ನದಿ ಗಂಗೆಯಾದರೇನು
ನೈಲ್ ಆದರೇನು
ಸೇರುವುವು ಕಡಲನೇ
ಕಡಲು ಬೆಂಗಾಲ ಕೊಲ್ಲಿಯಾದರೇನು
ಅರಬಿ ಸಮುದ್ರವಾದರೇನು
ಮಿಲನವಾಗುವುವು ಸಾಗರದಲಿ
ಸಾಗರ ಅಟ್ಲಾಂಟಿಕ್ ಆದರೇನು
ಹಿಂದೂ ಮಹಾಸಾಗರ ಆದರೇನು
ಬೆರೆಯುವವು ಶಾಂತ ಸಾಗರವನೇ
ಹಿಮಗಟ್ಟುವುವು ಉತ್ತರದಕ್ಷಿಣ ದ್ರುವದಲಿ
ಹನಿ ಹನಿಯ ಜಲವೆಲ್ಲಾ
ಒಂದೇ ಎಂದರು ವಿಜ್ಞಾನಿಗಳು
ಆದರೇಕೋ .....
ಮನುಜರೆಲ್ಲರ ಪಾಪವನೇ ತೊಳೆಯಲೆಂದೇ
ಕೈಲಾಸದಲಿ ಶಿವ ಬಿಗಿಹಿಡಿದ ಜಟೆಯ ತೊರೆದು
ಭಗೀರಥ ಪ್ರಯತ್ನದಲಿ ಧರೆಗಿಳಿದ ಗಂಗೆ ಜಾಹ್ನವಿ
ಶ್ರೀಕೃಷ್ಣನ ಯಮುನೆ ವೇದದಲಿ ಮೆರೆದ ಸರಸ್ವತಿ
ಹನಿಹನಿಯಲೂ ಪರಶಿವನ ಪವಿತ್ರತೆ ಪಡೆದು
ಅಜ್ಞಾನವನೇ ದೂರಮಾಡಿದರೆಂದೇಕೆ
ಅರಿಯೆಯೋ ಮನುಜ?
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ