ಗುರುವಾರ, ಏಪ್ರಿಲ್ 24, 2025

ಬಾನು ಮುಷ್ತಾಕ್ ಮತ್ತು ಬೂಕರ್ ಪ್ರೈಜ್

ಬಾನು ಮುಷ್ತಾಕ್ ಮತ್ತು ಬೂಕರ್ ಪ್ರೈಜ್ 

ಇತ್ತೀಚಿಗೆ ಪ್ರಕಟವಾದ ಬಾನು ಮುಷ್ತಾಕ್ ರ Heart Lamp ಪುಸ್ತಕ ಕನ್ನಡದಿಂದ ಇಂಗ್ಲಿಷ್ ಗೆ ಅನುವಾದಿತವಾದ ಕಥೆಗಳ ಸಂಕಲನ. ಅನುವಾದಿತ ಪುಸ್ತಕಕ್ಕೆ ಈ ವರ್ಷದ ಬೂಕರ್ ಪ್ರೈಜ್ ಗೆ ಶಾರ್ಟ್ ಲಿಸ್ಟ್ (ಬಂದ ನೂರಾರು ಪುಸ್ತಕಗಳಲ್ಲಿ ೫ ಪುಸ್ತಕಗಳನ್ನು ಆಯ್ಕೆಮಾಡಲಾಗಿದೆ) ಎಂದು ತಿಳಿದು ಕನ್ನಡ ಸಾಹಿತ್ಯ ಪ್ರೇಮಿಗಳಿಗೆ ಎಲ್ಲಿಲ್ಲದ ಕನ್ನಡ ಭಾಷಾಭಿಮಾನ, ಹೆಮ್ಮೆ ಮತ್ತು ನಮ್ಮವರೇ ಆದ ಬಾನು ಮುಸ್ತಾಕರಿಗೆ ಅಂತಹ ಪ್ರಸಿದ್ಧ ಬಹುಮಾನ ಸಿಗಲಿ ಎಂಬ ಆಶಯ ತಾನೇ ತಾನಾಗಿ ಬೆಳೆದಿದೆ. ಕನ್ನಡ ಭಾಷೆ ಕೂಡ ಪ್ರಪಂಚದ ಮಿಕ್ಕೆಲ್ಲ ಭಾಷೆಗಳಂತೆ ಉನ್ನತ ಸ್ಥಾನ ಮತ್ತು ಮಾನ್ಯತೆ ಪಡೆಯುತ್ತಿದೆಯೆಲ್ಲ ಎಂದು ಸಂತಸ ಪಟ್ಟಿದ್ದಾರೆ. ಕನ್ನಡ ಸಾಹಿತ್ಯದ ಬಗ್ಗೆ ತಿರಸ್ಕಾರವಿದ್ದವರೂ ಕೂಡ ಇಂಗ್ಲಿಷಿನ ಅನುವಾದ ಓದುವುದಕ್ಕೆ ಹೆಮ್ಮೆ ಪಡುತ್ತಿದ್ದಾರೆ ಮತ್ತು ಅದೇ ಕಾರಣಕ್ಕೆ ಅಮೆಜಾನ್ ನಲ್ಲಿ ಪುಸ್ತಕದ ವ್ಯಾಪಾರ ಭರದಿಂದ ಸಾಗಿದೆ. 


ಇದೇನಿದು, ಇಷ್ಟೊಂದು ಹೊಸ ಚೇತನ ಮೂಡಿದೆಯಲ್ಲ ಎಂದು ಯೋಚಿಸುವರೂ ಕೂಡ ಮೂಗಿನ ಮೇಲೆ ಬೆರಳಿಟ್ಟು ಮೇ ೩೧ ಕ್ಕೆ ಕಾಯುತ್ತಿದ್ದಾರೆ, ಅಂದು ಬೂಕರ್ ಪ್ರೈಜ್ ಘೋಷಿಸಲಾಗುವುದು. ಇಷ್ಟೆಲ್ಲಾ ಸುದ್ದಿಯಾಗಿರುವ ಈ ಪುಸ್ತಕದ ಬಗ್ಗೆ ಹೇಳಬೇಕಾದರೆ, ಬಾನು ಅವರು ಹಲವಾರು ವರ್ಷಗಳಿಂದ (೧೯೯೩-೨೦೦೩) ಬರೆದ ಕಥೆಗಳಲ್ಲಿ ಕೆಲವನ್ನು ಆಯ್ಕೆ ಮಾಡಿ ದೀಪ ಭಷ್ಟ್ರಿ ಅವರು ಅನುವಾದ ಮಾಡಿದ್ದಾರೆ. ಈ ೧೨ ಕಥೆಗಳಲ್ಲಿ ಮುಸ್ಲಿಂ ಜನಾಂಗದ ದಿನ ನಿತ್ಯದ ಆಗುಹೋಗುಗಳನ್ನು ನಿರೂಪಿಸುವುದರ ಜೊತೆಗೆ ಮುಸ್ಲಿಂ ಸ್ತ್ರೀ ಯ ಅನುಭವಗಳನ್ನೇ ಆಧಾರವಾಗಿಟ್ಟುಕೊಂಡು ಅವರ ಸುಖ ದುಃಖಗಳ ಕಥೆಗಳನ್ನೇ ಹಣೆದಿದ್ದಾರೆ ಬಾನು ಅವರು. ಎಲ್ಲ ಕಥೆಗಳೂ ಕಲ್ಪಿತ ಕಥೆಗಳಾದರೂ ನೈಜತೆಯಿಂದ, ತಮ್ಮ ಸ್ವಂತ ಅನುಭವದಿಂದಲೇ ಬರೆದಿರುವುದು ಒಂದು ವಿಶಿಷ್ಟ ಅನಿಸುತ್ತದೆ. ನಮಗೆ ಪರಿಚಯವಿರುವ ದಕ್ಷಿಣ ಭಾರತದ ಹಳ್ಳಿ ಊರುಗಳೇ ಈ ಕಥೆಗಳಿಗೆ ಹಿನ್ನಲೆ ಆದರೆ, ಮುಸ್ಲಿಂ ಜನಾಂಗದ ಬಗ್ಗೆ ನಮಗೆ ಗೊತ್ತಿಲ್ಲದ, ನಮಗೆ ಅನುಭವಕ್ಕೆ ಸಿಗದ ಸೂಕ್ಷ್ಮತೆ ಓದಿದಾಗ ಮಾತ್ರ ಅರಿವಿಗೆ ಬರುತ್ತವೆ. ಮುಸ್ಲಿಮರ ಮತಾಚರಣೆ, ಊಟ, ತಲಾಕ್, ಖತ್ನ, ನಿಖಾ, ಮಸೀದೀಗಳಲ್ಲಿ ಮುಲ್ಲಾಗಳ ಕಾರ್ಯಭಾರ, ಹೀಗೆ ಹೇಳುತ್ತಾ ಹೋದರೆ ಈ ಕಥೆಗಳಲ್ಲಿ ಮುಸಲ್ಮಾನರಲ್ಲದವರಿಗೆ ಅವರ ಬಗ್ಗೆ ಸಿಗುವ ವಿವರಣೆಗಳಿಂದ ಒಂದು ಹೊಸ ತಿಳಿವಳಿಕೆ ಮೂಡುವುದರಲ್ಲಿ ಸಂದೇಹವಿಲ್ಲ. ಕನ್ನಡಿಗಾದ ನನಗೆ ಅವರ ಕಥೆಗಳನ್ನು ಕನ್ನಡದಲ್ಲೇ ಓದಿ ನನಗೆ ಶಾಲೆ, ಕಾಲೇಜು ಮತ್ತು ಅಮೇರಿಕ ವಿಶ್ವವಿದ್ಯಾಲಯಗಳಲ್ಲೂ ಮುಸಲ್ಮಾನ ಸ್ನೇಹಿತರೆ ಆಪ್ತ ಸ್ನೇಹಿತರಾದ ಕಾರಣ ಬಾನು ಅವರ ಕಥೆಗಳು ಹೆಚ್ಚು ಸ್ಪಂದಿಸುತ್ತವೆ. ಬಾನು ಅವರ ಬರಹಗಳ ಅಸ್ತಿತ್ವವೇ ಮುಸಲ್ಮಾನರ ದಿನ ನಿತ್ಯದ ಕಥೆಗಳು, ಮುಸಲ್ಮಾನ ಸ್ತ್ರೀ ಮತ್ತು ಲಾಯರ್ ವೃತ್ತಿಯಲ್ಲಿ ತೊಡಗಿರುವ ಅವರ ಜೀವನದ ಅನುಭವದಿಂದ ಸಹಜತೆಯಿಂದ ಮೂಡಿ ಬರುವ ಕಥೆಗಳು.


ಇನ್ನು ಅನುವಾದಕಿ ದೀಪ ಅವರ ಬಗ್ಗೆ ಹೇಳಬೇಕೆಂದರೆ, ಕೊಡಗಿನ ಕನ್ನಡತಿ, ಪತ್ರಿಕೋದ್ಯಮಿ, ಕೋಟ ಶಿವರಾಮ ಕಾರಂತರ ಕಾದಂಬರಿ ಅನುವಾದ ಮಾಡಿದ ಅನುಭವಿ, ಮತ್ತು ಕೊಡಗಿನ ಗೌರಮ್ಮ ಅವರ ಸಣ್ಣ ಕಥೆಗಳನ್ನು ಇಂಗ್ಲಿಷ್ ಗೆ ಅನುವಾದ ಮಾಡಿರುವ ದೀಪ ಹಲವಾರು ಪ್ರತಿಷ್ಠಿತ ಬಹುಮಾನಗಳನ್ನು ಗೆದ್ದವರು. ಬಾನು ಮತ್ತು ಅವರ ಸ್ನೇಹ ಇತ್ತೀಚಿನದು, ಜೊತೆಗೆ ತಾವು ಮೊದಲ ಬಾರಿಗೆ ಬಾನು ಅವರ ಕಥೆಗಳನ್ನು ಓದುತ್ತಿರುವುದು ಎಂದು ಹೇಳಿಕೊಂಡಿದ್ದಾರೆ. 

ಬೂಕರ್ ಪ್ರೈಜ್ ಬಗ್ಗೆ ಗೊತ್ತಿರುವವರು ಅದರ ವಿವಾದಾಸ್ಪದ ಹಿನ್ನಲೆಯ ಪುಠಗಳನ್ನು ತಿರುವಿ ಹಾಕದೆ ಮುಂದಕ್ಕೆ ಹೋಗಲು ಸಾಧ್ಯವೇ? ಹಿಂದೆ ಬೂಕರ್ ಪ್ರೈಜ್ ಸುದ್ದಿ ಮಾಡಿದ್ದು ಅರುಂಧತಿ ರಾಯ್ ಅವರ ಕಾದಂಬರಿ The God of Small Things ಗೆ ಆ ಬಹುಮಾನ ಬಂದಾಗ. ಬಾನು ಅವರ ಅನುವಾದಿತ ಕತೆ ಹಾರ್ಟ್ ಲ್ಯಾಂಪ್ ಆಯ್ಕೆ ಆಗಿದೆ ಅಂದ ಕ್ಷಣವೇ ಈ ಎರಡೂ ಪುಸ್ತಕಗಳ ಬಗ್ಗೆ ಹೋಲಿಕೆ ಶುರುವಾದ್ದದ್ದು ಸಾಹಿತ್ಯ ವಿಮರ್ಶೆಗಿಂತ ಬೂಕರ್ ಪ್ರೈಜ್ ನ ರಾಜಕೀಯದ ಬಗ್ಗೆ. ಸೋಷಿಯಲ್ ಮೀಡಿಯನಲ್ಲಿ ಕೆಲವರು ಬಾನು ಅವರ ಪುಸ್ತಕ ಭಾರತೀಯರ ಹೆಮ್ಮೆ ಎಂದರೆ ಕೆಲವರು ಅರುಂಧತಿ ರಾಯರ ಹಿಂದೂ ಧರ್ಮ ನಿಂದನೆಯಿಂದಾದ ಕಹಿ ಘಟನೆಗಳನ್ನು ನೆನಪಿಸುಕೊಳ್ಳುತ್ತಾ ಬಾನು ಅವರ ಕಥೆಗಳು ಕೂಡ ಅದರಂತೆಯೇ ಮುಸಲ್ಮಾನರ ನಿಂದನೆಗೆ ಒಳಗಾಗುತ್ತವೋ ಎಂದು ಗುಮಾನಿ ವ್ಯಕ್ತ ಪಡಿಸಿದ್ದಾರೆ. ಸಾಕಷ್ಟು ಜನ ಎರಡೂ ಪುಸ್ತಕಗಳ ಹೋಲಿಕೆಯಲ್ಲೇ ಸಾಹಿತ್ಯ ಮತ್ತು ರಾಜಕೀಯದ ತುಲನೆ ಮಾಡುತ್ತಿರುವುದಂತೂ ನಿಜ. 


Trust, but verify ಅನ್ನುವುದು ಮಾಜಿ ಅಧ್ಯಕ್ಷ ರೇಗನ್ ನ ಸಂದೇಶ. ಅದರಂತೆ ಸ್ವಲ್ಪ ಇನ್ವೆಸ್ಟಿಗೇಟೀವ್ ಕೆಲಸ ಮಾಡಿದರೇನೇ ನಂಬಿಕೆ ಬರಲು ಸಾಧ್ಯ. ಹಾಗಾಗಿ ಕಣ್ಣಿಗೆ ಕಾಣುವುದಕ್ಕಿಂತ ಹಿಂದೆ ಕಾಣದ ವಿಚಾರಗಳನ್ನು ಒಟ್ಟುಗೂಡಿಸಿ ನಂತರ ಮುಂದಕ್ಕೆ ಹೋಗಬೇಕು. 


ಬಾನು ಮುಷ್ತಾಕ್ ರ Heart Lamp ಪುಸ್ತಕದ ಬೂಕರ್ ಪ್ರೈಜ್ ಆಯ್ಕೆಗೆ ಅದರ ಕಥಾವಸ್ತು, ಅನುವಾದ, ಮತ್ತು ಪುಸ್ತಕದ ಪ್ರಕಟಣೆಗಳ ಹಿನ್ನಲೆ ಬಗ್ಗೆ ಅಷ್ಟು ಸ್ಪಷ್ಟತೆ ಇಲ್ಲದ ಕಾರಣ ಹೆಚ್ಚಿನ ಮಾಹಿತಿ ಗಳಿಸುವುದು ಅನಿವಾರ್ಯ ಆಗಿದೆ. ಪ್ರಾರದರ್ಶಕೆ ಇಲ್ಲದಿದ್ದಾಗ ಸಂಶಯ ಮೂಡುವುದು ಸಹಜ. ಈ ಮೇಲಿನ ನಾಲ್ಕು ಪ್ರಕ್ರಿಯೆಗಳಲ್ಲಿ ಮೂರು ಪ್ರಕ್ರಿಯೆಗಳು ಸಂಶಯವಿಲ್ಲದೆ ಅಷ್ಟು ಸುಲಭವಾಗಿ ಕಣ್ಣಿಗೆ ಕಾಣಲಿಲ್ಲ. ಬಾನು ಅವರ ಸಾಹಿತ್ಯ, ಕಥಾವಸ್ತು, ಅವರ ಬರಹದ ಶೈಲಿ, ಕನ್ನಡ ಸಣ್ಣ ಕತೆಗಳ ಕೊಡುಗೆಯ ದೃಷ್ಟಿಯಿಂದ ನೋಡಿದಾಗಲೂ, ಮುಸಲ್ಮಾನ ಸಮುದಾಯದಿಂದ ಕನ್ನಡ ಸಾಹಿತ್ಯ ಕೊಡುಗೆಯ ದೃಷ್ಟಿಯಿಂದಲೂ ತುಲನೆ ಮಾಡಿದಾಗ ಬಾನು ಅವರ ಕೊಡುಗೆ ಅಪಾರವಾದದ್ದು ಎಂದು ಎರಡು ಮಾತಿಲ್ಲ. ಹಾಗಾಗಿ ಬೂಕರ್ ಪ್ರೈಜ್ ಆಯ್ಕೆ ಬಹುಶಃ ಎಲ್ಲ ರೀತಿಯಲ್ಲೂ ಸಮಂಜಸ ಅನಿಸುತ್ತದೆ. 

ಆದರೆ ಒಂದೆರಡು ಸಂಶಯಗಳು ಪರಿಹಾರವಾಗಲಿಲ್ಲ. ಉದಾಹರಣೆಗೆ: ಒಬ್ಬ ಲೇಖಕ ತಾವಾಗಿಯೇ ಅನುವಾದಕರನ್ನು ಹುಡುಕಿಕೊಂಡು ಅನುವಾದ ಮಾಡಿಕೊಡಿ ಎಂದು ಕೇಳುವುದು ತುಂಬಾ ವಿರಳ ಅಥವಾ ಇಲ್ಲವೇ ಇಲ್ಲ ಅಂತ ಹೇಳಬಹುದು. ಆದರೆ ಭಾನು ಅವರು ಅನುವಾದಕಿ ದೀಪ ಅವರನ್ನು ಅರಸಿ ಹೋದದ್ದು ಏಕೆ ಎಂದು ಸ್ವಲ್ಪ ಸೋಜಿಗ. ಅದೂ ದೀಪ ಅವರು ಬಾನು ಅವರ ಯಾವ ಕಥೆಯನ್ನೂ ಮೊದಲು ಓದಿರಲಿಲ್ಲ ಅಥವಾ ಅನುವಾದಿಸಿರಲಿಲ್ಲ ಎಂದು ತಿಳಿದಮೇಲೆ ಮತ್ತಷ್ಟು ಸೋಜಿಗವೇ ಆಗುತ್ತೆ. 


ಕೆಲವೊಮ್ಮೆ ಇಂತಹ ಕನ್ನೆಕ್ಷನ್ ಗೆ ಸ್ಪಂದನ ಸಾಧ್ಯ ಅಂತ ನಾವೇ ಕಣ್ಣಾರೆ ಕಂಡಿರುವುದರಿಂದ ಆ ಪ್ರಕ್ರಿಯೆಗಳು ಹಿಂದಕ್ಕೆ ಸರಿದು ನಮ್ಮನ್ನು ಭಾವನಾತ್ಮಕ ಕಡೆಗೆ ತಳ್ಳಿಬಿಡುತ್ತವೆ. 


ಸ್ವಲ್ಪ ದೀರ್ಘವಾಗಿ ಕಣ್ಣರಳಿಸಿ ನೋಡಿದಾಗ ಮತ್ತೊಂದು ವಿಷಯ ಕಂಡಿತು. ಭಾರತದಲ್ಲಿ ಸಾವಿರಾರು ಪ್ರಕಾಶಕರು ಇರುವಾಗ ಈ ಅನುವಾದ ಪುಸ್ತಕದ ಪ್ರಕಟಣೆಗೆ ಬಾನು ಮತ್ತು ದೀಪ ಅವರು ಹುಡುಕಿ ನಿರ್ಧರಿಸಿದ್ದು &Other Stories ಎನ್ನುವ ಬ್ರಿಟನ್ನಿನ ಪ್ರಕಾಶಕರನ್ನು. ಆ ನಿರ್ಧಾರ ಏಕೆ, ಹೇಗೆ, ಯಾವ ಕಾರಣಕ್ಕಾಗಿ ಆಯಿತು ಅಂತ ಸೋಜಿಗ ಪಟ್ಟರೆ ಸಾಲದು. ಉತ್ತರ ಹುಡಕಲು ಅನೇಕ ಬಿಂದುಗಳನ್ನು ಒಂದಕ್ಕೊಂದು ಪೋಣಿಸಬೇಕು, ಒಂದು ಹಾರದಂತೆ. ಆಗ ಸಿಕ್ಕಿದ್ದು ಬ್ರೂಕರ್ ಪ್ರೈಜ್ ಪುರಸ್ಕಾರಕ್ಕೆ ಒಂದು ಕಂಡೀಷನ್ ಇದೆಯೆಂದು. ಅದೆಂದರೆ ಪುಸ್ತಕ ಬ್ರಿಟನ್/ uk ನಲ್ಲಿ ಮಾತ್ರ ಪ್ರಕಟವಾಗಿರಬೇಕೆಂದು. ಈ ಕಂಡಿಷನ್ಗೂ ದೀಪ ಮತ್ತು ಭಾನು ಅವರ ನಿರ್ಧಾರಕ್ಕೂ ಯಾವ ಸಂಭಂದವೂ ಇರಲಿಕ್ಕಿಲ್ಲ ಅಂತ ಅಂದುಕೊಂಡರೂ, ಮತ್ತೊಮ್ಮೆ ಯೋಚಿಸಬೇಕಾಯಿತು. ದೀಪ ಮತ್ತು ಬಾನು ಅಷ್ಟೇನೂ ಪ್ರತಿಷ್ಠಿತ ಬರಹಗಾರರಲ್ಲದಿದ್ದರೂ, ಭಾರತದಲ್ಲಿ ಇರುವ ಎಲ್ಲಾ ಪ್ರಕಾಶಕರನ್ನು ತಿರಸ್ಕರಿಸಿ 7 ಸಮುದ್ರದಾಚೆಯ &Other Stories ನ್ನು ಪುಸ್ತಕ ಪ್ರಕಟಿಸಲು ಗೊತ್ತುಮಾಡಿಕೊಂಡಿದ್ದು ಒಂದು ಸೋಜಿಗವೇ ಇರಬಹುದು ಮತ್ತು ಸಂಶಯ ಬರಿಸಲು ದಾರಿ ಮಾಡಿಕೊಡುತ್ತೆ. 


ಇನ್ನು ಬೂಕರ್ ಪ್ರೈಜ್ ನ ಹಿನ್ನಲೆಯಲ್ಲಿ ನೋಡಿದಾಗ ಅದೊಂದು ಯಾವಾಗಲೂ ಸಾಹಿತ್ಯಕ್ಕಿಂತ ವಿವಾದಾತ್ಮಕ ವಿಷಯಗಳ ಬಗ್ಗೆಯೇ ನೀಡುವ ಪುರಸ್ಕಾರ. 


ಭಾರತದ ಜಾತೀಯತೆ ಮತ್ತು ಹಿಂದೂ ಧರ್ಮವನ್ನು ಕೀಳುಮಟ್ಟದಿಂದ ತಿರಸ್ಕರಿಸುವ ಪುಸ್ತಕಗಳಿಗೆ ಪುರಸ್ಕಾರ ಕೊಡುವುದು ಅದರ ಗುರಿ ಎಂದು ಈಗಾಗಲೇ ಪುರಾವೆಗಳು ದೊರೆತಿವೆ. ಅರುಂಧತಿ ರಾಯ್ ಕಾದಂಬರಿ The God of Small Things ಇದಕ್ಕೆ ಒಂದು ಉದಾಹರಣೆ. 


 ಒಂದಂತೂ ಸತ್ಯ, ಬಾನು ಅವರ ಕತೆಗಳಲ್ಲಿ ಅಂತಹ ವಿವಾದ ಕಾಣಬರುವುದಿಲ್ಲ. ಅದರಲ್ಲಿ ಹಿಂದೂ ಧರ್ಮವನ್ನು ತೆಗಳದಿದ್ದರೂ ಮತ್ತೊಂದು ದೃಷ್ಟಿಯಲ್ಲಿ ಅವರ ಇಸ್ಲಾಮ್ ಮತದ ಯಾವುದೇ controversy ಯನ್ನು, --ಅರುಂಧತಿ ಹಿಂದೂ ಧರ್ಮಕ್ಕೆ ಮಾಡಿದ ಅಪಪ್ರಚಾರದಂತೆ-- ವಕ್ರದೃಷ್ಟಿಯಿಂದ ವಿವರಿಸುವುದಿಲ್ಲ. ಕತೆಗಳಲ್ಲಿ ಕಂಡುಬರುವುದು ಒಂದೆರಡು ಕಡೆ ಇಸ್ಲಾಮ್ ನ ಹಗುರ ನಿಂದನೆಯೇ ಆದರೂ .. 


ಕೆಲವೊಂದು ಕಥೆಗಳಲ್ಲಿ ಮುಸ್ಲಿಂ ಮಹಿಳೆಯರ ಬಗ್ಗೆ ಅನುಕಂಪ ಮೂಡಿಸುವ ಸನ್ನಿವೇಶಗಳು, ಮುಸ್ಲಿಮರ ಷರಿಯಾ ಖಾನೂನಿಂದ ಆಗುತ್ತಿರುವ ಅನ್ಯಾಯಗಳು, ಮತಾಚರಣೆಗಳಾದ ಖತ್ನ (circumcision) ಮತ್ತು ಮಸೀದಿಗಳಲ್ಲಿ ನಡೆಯುವ ಮುಲ್ಲರ ಕಾರ್ಯಭಾರಗಳನ್ನು ಯಾವ ವಿವಾದಕ್ಕೂ ಆಸ್ಪದ ಕೊಡದೆ ಇಸ್ಲಾಮಿನ ಆದರ್ಶಗಳಿಗೆ ಯಾವುದೇ ಅಪನಿಂದನೆ ಬರದಂತೆ ಬರೆದ ಕಥೆಗಳು. ಈ ಕಥೆಗಳೆಲ್ಲವೂ ಕೇವಲ ಮುಸಲ್ಮಾನ ಸ್ತ್ರೀಯರ ವಯಕ್ತಿಕ ಭಾವನೆಗಳೇ ಹೊರತು ಅವರೂ ಕೂಡ ಸಿಡಿದೆದ್ದು ಇಸ್ಲಾಮಿನ ಮತಾಚರಣೆಗಳನ್ನು ಖಂಡಿಸಿದ್ದು ಕಾಣುವುದಿಲ್ಲ ಈ ಕಥೆಗಳಲ್ಲಿ. ಖತ್ನ ಮಾಡಿಸಿಕೊಂಡಾಗಲೂ ವಿಜ್ಞಾನ ಮತ್ತು ವೈದ್ಯಕೀಯ ಅನುಮೋದನೆಗಿಂತಲೂ ಅಲ್ಲಾನ ಮೇಲೆ ಭಾರ ಹಾಕಿದ ಹುಡುಗನ ಗುಣವಾದದ್ದು ಮುಖ್ಯವಾಗುತ್ತೆ ಒಂದು ಕಥೆಯಲ್ಲಿ. ಇಸ್ಲಾಮ್ ನ ಷರಿಯಾ ಖಾನೂನು ಭಾರತದಲ್ಲಿ ಕೂಡ ಚಲಾವಣೆ ಇದ್ದರೂ ಅದನ್ನು ಖಂಡಿಸಿಯೂ ಖಂಡಿಸದಂತೆ ಬರೆದ ಕಾಲ್ಪನಿಕ ಕಥೆಗಳು ಒಂದೆಡೆ ಯಾವ ವಿವಾದವನ್ನೂ ಬರಿಸಲಾರವು. ಬಹುಶಃ ಈ ದೃಷ್ಟಿಯಿಂದ ಅರುಂಧತಿ ರಾಯ್ರ ಹಿಂದೂ ಧರ್ಮ ನಿಂದನೆಯನ್ನು ಎತ್ತಿ ತೋರಿಸಿದ ಅಂದಿನ ಬೂಕರ್ ಪ್ರೈಜ್ ಇಂದು ಇಸ್ಲಾಮಿನ ಒಂದು ಆಶಾದಾಯಕ ದೃಷ್ಟಿಕೋನದಿಂದ ಬೇರೊಂದು ಸಂದೇಶವನ್ನೇ ತಲುಪಿಸಿತ್ತುದೆ ಏಕೆ ಅಂತ ಸಂಶಯ ಮೂಡುವುದು ಕೂಡ ಸಹಜ. ಬೂಕರ್ ಪ್ರೈಜ್ ನ ಸಂದೇಶವೂ ಅದೇ ಇರಬಹುದು, ಹಿಂದೂ ರಾಜ್ಯದಲ್ಲಿ ಅಲ್ಪಸಂಖ್ಯಾತಿ ಮುಸ್ಲಿಮರು ತಮ್ಮದೇ ಆಶಾದಾಯಕ ಜೀವನ ಶೈಲಿಯಲ್ಲಿ ಎದೆಗುಂದದೆ ಕಷ್ಟಗಳಿಗೆ ಉತ್ತರ ಹುಡುಕುತ್ತಿದ್ದಾರೆ ಎನ್ನುವದೇ? ಗೊತ್ತಿಲ್ಲ. ಈ ಪುಸ್ತಕದಿಂದ ಸಲ್ಮಾನ್ ರಷ್ಡಿ ಅವರ ವಿವಾದಾಸ್ಮಕ ಸಟಾನಿಕ್ ವರ್ಸಸ್ ನಂತೆ ಪ್ರಪಂಚದ್ಯಾಂತ ಗಲಭೆ ಭಯೋತ್ಪಾದನೆಗಂತೂ ಆಸ್ಪದವಿಲ್ಲ! ಆದರೆ ಇಸ್ಲಾಮಿನ ಅವಗುಣಗಳನ್ನೇ ಒಂದು ಆಶಾದಾಯಕ ಕೋನದಿಂದ ಪ್ರಪಂಚದ ಇಂಗ್ಲಿಷ್ ಓದುಗರಿಗೆ ಹೂವಿನ ಹಾಸಿಗೆಯಂತೆ ಹರಡಿರುವ ಈ ಪುಸ್ತಕದ ಕಥಾವಸ್ತುಗಳು, ಅನುವಾದ, ಪ್ರಕಟಣೆ ಮತ್ತು ಬೂಕರ್ ಪ್ರೈಜ್ ಆಯ್ಕೆಗಳನ್ನೂ ನಾವು ಬೇರೆಯೇ ಕೋನದಿಂದ ನೋಡ ಬೇಕು. ನಾವು ಸಾಹಿತ್ಯ ವಿಮರ್ಶಕರು ರಾಜಕೀಯದ ಬಗ್ಗೆ ಮಾತನಾಡುವುದೂ ಕೂಡ ಒಂದು ಅಸಹಜತೆ ಎನ್ನುವ ಈ ಕಾಲಮಾನದಲ್ಲಿ ನಮ್ಮ ಅಭಿಪ್ರಾಯಗಳನ್ನು ಮರೆತು ಎಲ್ಲರಂತೆ ಥಂಬ್ಸ್ ಅಪ್ ಕೊಡುವುದು ಕೊಡ ಅಸಹಜವೆ. 


 ಒಟ್ಟಿನಲ್ಲಿ ಸಾಹಿತ್ಯಕ್ಕಿಂತ ಹೆಚ್ಚಾಗಿ ರಾಜಕೀಯದಲ್ಲಿ ಮುಳಗಿರುವ ಬೂಕರ್ ಪ್ರೈಜ್ ಗೆ ನಾವು ಅಷ್ಟು ಪ್ರಾಮುಖ್ಯತೆ ಕೊಡಬೇಕಿಲ್ಲ ಎನ್ನುವ ವಿಚಾರ ಓದುಗರಿಗೆ ಮನದಟ್ಟಾಗಿದ್ದರೆ ಈ ಲೇಖನ ಬರೆದದ್ದು ಸಾರ್ಥಕ ಅಷ್ಟೇ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ