ವೃಷಭ ಸಂಕ್ರಾಂತಿ
5/14/2025
ಇವತ್ತು ಟಾರಸ್ ಸಂಕ್ರಾಂತಿ ಅಂತೇ. ಅದೇ ರೀ ಟಾರಾಸ್ ಅಂದ್ರೆ ಗೊತ್ತಲ್ಲ ಎತ್ತು, ವೃಷಭ ರಾಶಿಯಲ್ಲಿ ಸಂಕ್ರಾಂತಿ ಆಗುತ್ತಂತೆ.
ಅಯ್ಯೋ, ನಮಗೆ ಗೊತ್ತಿರುವುದು ಆ ಮಕರ ಸಂಕ್ರಾಂತಿ, ಅದೇ ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡ್ತೀವಲ್ಲ ಅದೇ ರೀ ಕಬ್ಬು, ಸಕ್ಕರೆ ಅಚ್ಚು, ಸಿಹಿ ಪೊಂಗಲ್ ಅಂತ ಏನೇನೋ ಮಾಡಿಕೊಂಡು ಎಲ್ಲ ಸ್ನೇಹಿತರ ಮನೆಗೆ ಹೋಗಿ ಹಲ್ಲು ಬೀರುತ್ತಾ ಎಳ್ಳು ಬೀರ್ತೀವಲ್ಲ ಆ ಮಕರ ಸಂಕ್ರಾಂತಿ, ಜನವರಿ ಹದಿನಾಲ್ಕು ಬರುತ್ತಲ್ಲ ಅದೊಂದೇ ನಮಗೆ ಸಂಕ್ರಾಂತಿ ಅಂತ ಗೊತ್ತಿರೋದು. ಇದ್ಯಾವ್ದ್ರಿ ಇದು ಎತ್ತಿನ ಸಂಕ್ರಾಂತಿ ಅಂತ ನೀವು ಹೇಳ್ತಿರೋದು? ನಮಗೆ ಅದಕ್ಕಲ್ಲ ಸಮಯವಿಲ್ಲ. ಅದೇನು ಈ ಎತ್ತಿನ ಸಂಕ್ರಾಂತಿ ಅಂತ ನೀವೇ ಹೇಳಿ.
ಅಯ್ಯೋ ಹೆಂಗಪ್ಪಾ ಇದನ್ನು ವಿವರಿಸೋದು? ನೋಡಿ, ಮಕರ ಸಂಕ್ರಾಂತಿ ದಿನ ಸೂರ್ಯ ಮಕರ ರಾಶಿಯನ್ನ ಪ್ರವೇಶಿಸ್ತಾನೆ ಅಂತ ಗೊತ್ತು ತಾನೇ ನಿಮಗೆ?
ಗೊತ್ತಿಲ್ರಿ ಮರೆತು ಹೋಯಿತು, ನಾಲ್ಕು ತಿಂಗಳಿನ ಹಿಂದೆ ಆಕಾಶದಲ್ಲಿ ಅದೇನೋ ಆದರೆ ಹೆಂಗ್ ಜ್ಞಾಪಕ ಇಟ್ಟುಕೊಳ್ಳ ಬೇಕು ನೀವೇ ಹೇಳಿ.
ಹಾಗಾದರೆ ವೃಷಭ ಸಂಕ್ರಾಂತಿಯೂ ಹಂಗೇ, ಸೂರ್ಯನಿಗೆ ಬೇರೆ ಕೆಲಸವಿಲ್ಲ ಪಾಪ, ಒಂದೇ ಕಡೆ ಕೂತು ಕೂತು ಬೇಜಾರಾಗಿ ಹೋಗಿರುತ್ತೆ ಅದಕ್ಕೆ, ಒಂದೊಂದು ತಿಂಗಳಿನಲ್ಲೂ ಒಂದೊಂದು ರಾಶಿಗೆ ಭೇಟಿ ಕೊಡ್ತಾನೆ.
ಏನಂದ್ರಿ, ಸೂರ್ಯನ ಸುತ್ತ ಎಲ್ಲ ಗ್ರಹಗಳೂ ಸುತ್ತು ಹಾಕ್ತವೆ ಅಂತ ನಮ್ಮ ಪ್ರೈಮರಿ ಸ್ಕೂಲ್ ಟೀಚರ್ ಹೇಳಿದ್ರು ನೀವು ನೋಡಿರೆ ಸೂರ್ಯ ಪ್ರತಿ ತಿಂಗಳು ಬೇರೆ ಬೇರೆ ರಾಶಿಗೆ ಭೇಟಿ ಕೊಡ್ತಾನೆ ಅಂತೀರಾ. ಪರವಾಗ್ಲ್ರಿ ಏಳು ಕುದುರೆ ಮೇಲೆ ಕೂತು ಹನ್ನೆರಡು ರಾಶಿ ಭೇಟಿ ಕೊಡಬೇಕು ಅಂದ್ರೆ ಬಹಳ ವೇಗವಾಗಿ ಕುದುರೆ ಓಡ್ಸಕ್ಕೆ ಬರ್ತದೇ ನಮ್ಮ್ ಸೂರ್ಯಂಗೆ ಅಂತೀರಾ? ನಿಮಗೆ ತಲೇಲಿ ಬುದ್ಧಿ ಇದೆಯೋ ಇಲ್ಲವೋ? ಅದೆಂಗ್ ಸಾಧ್ಯ, ಸೂರ್ಯ ಒಂದೇ ಕಡೆ ಇರ್ತಾನೆ. ಅವನು ಜಪ್ಪಯ್ಯ ಎಂದ್ರೂ ಎಲ್ಲೂ ಹೋಗಲ್ಲ. ಏನೋಪ್ಪ, ಹೋಗ್ಲಿ ಈ ಎತ್ತಿನ ಸಂಕ್ರಾಂತಿ ಇವತ್ತ್ಯಾಕ ಬಂತು?
ಇವತ್ತ್ಯಾಕೆ ಬಂತು ಅಂತ ಹೆಂಗಪ್ಪಾ ಇವನಿಗೆ ವಿವರಿಸೋದು. ಹೋಗ್ಲಿ ನೀವು ಇರೋದು ಖಗೋಳದ ಉತ್ತರದಾಗೆ ಅಂತ ಗೊತ್ತಲ್ಲ.
ಬಿಡ್ರಿ ಅವಲ್ಲ ಪ್ರೈಮರಿ ಶಾಲೆಯಾಗ ಕಲಿತಿದೀವಿ. ಅದ್ ಸರಿ ಈ ಎತ್ತಿನ ರಾಶಿ ಅಂದ್ರ ನಾಲ್ಕೈದು ನಕ್ಷತ್ರಗಳನ್ನ ಒಟ್ಟಿಗೆ ನೋಡಿ ಅವಕ್ಕೊಂದು ಕಾಲ್ಪನಿಕ ರೇಖೆಗಳನ್ನ ಸೇರಿಸಿದರೆ ಅದು ಅದೆಂಗೋ ಎತ್ತಿನ ಆಕಾರದಲ್ಲಿ ಕಾಣ್ತದಲ್ಲ ಅದಕ್ಕೆ ಅದನ್ನ ಎತ್ತಿನ ರಾಶಿ ಅಂತ ಕರೀತಾರೆ ಅಂತ ಗೊತ್ತು ಆದರೆ ಈ ವೃಷಭ ಯಾರ್ರೀ? ಓಹೋ, ಗೊತ್ತಾಯಿತು ಬಿಡಿ. ನ್ಯೂ ಯಾರ್ಕ್ ನಲ್ಲಿ ಅದೇನೋ ವಾಲ್ ಸ್ಟ್ರೀಟ್ ಮೇಲೆ ಒಂದು bull ಇದೆಯಲ್ಲ ಹಂಗೆನೇ ಇದೂ ವೃಷಭ. ಅದೇನ ಇರ್ಲಿ, ನೀವು ಎತ್ತಿನ ಸಂಕ್ರಾಂತಿ ಅಂದ್ರೆ ಹೇಳ್ತೀರಾ ಅಥವಾ ನಾನು ಎದ್ದು ಹೋಗ್ಲಾ?
ಬೇಡ್ರಿ ಸ್ವಲ್ಪ ಹಾಗೆ ಕೂಡ್ರಿ, ನಿಮಗೆ ಅದರ ಬಗ್ಗೆ ವಿವರವಾಗಿ ಹೇಳ್ತಿನಿ. ನಾವು ಉತ್ತರ ಖಗೋಳದಾಗ ಇದೀವಿ ಅಂತ ಹೇಳಿದೆ. ನಾವು ತಲೆ ಎತ್ತಿ ನೋಡಿದರೆ… ರಾತ್ರಿ ಹೊತ್ತು ಕಾಣಲ್ಲ, ಬೆಳಗಿನ ಜಾವ ನೀವು ಪೂರ್ವ ದಿಕ್ಕಿನಾಗ ನೋಡಿರೆ ಕಾಣ್ತದ. ನೀವು ಏಳೋದು ಎಷ್ಟು ಗಂಟೆಗೆ? ನಾ ಏಳೋದು ೮ ಗಂಟೆಗೆ. ಸರಿ ಬಿಡಿ ನೀವು ವೃಷಭ ನೋಡ್ಲಿಕ್ಕೆ ಸಾಧ್ಯವೇ ಇಲ್ಲ.
ರೀ ಸ್ವಾಮಿ, ನಾನು NDTV ಯಾಗ ಯುಗಾದಿ ಭವಿಷ್ಯ ಹೇಳ್ತಾರಲ್ಲ ಆಗ ಟಿವಿನಲ್ಲಿ ನೋಡಿನ್ರೀ ಎಲ್ಲ ರಾಶಿಗಳನ್ನ. ನಂದು ಸಿಂಹ ರಾಶಿ ರೀ. ಎಷ್ಟು ಬಾರಿ ನೋಡಿದ್ರೂ ಅದು ಸಿಂಹದಂಗ ಕಾಣಲ್ಲ. ಆದ್ರ ಅದೇನೋ ಖುಷಿ ಆಗ್ತದೆ ರ್ರೀ ನನ್ನ ಸಿಂಹ ರಾಶಿ ನೋಡ್ಲಿಕ್ಕೆ. ಸರಿ ಈಗ ಗೊತ್ತಾಯಿತು ಬಿಡಿ. ಆ ಎತ್ತಿನ ಸಂಕ್ರಾಂತಿ ದಿನ ನಮ್ಮ್ ಊರ ಗೌಡ್ರು ಎತ್ತುಗಳಿಗೆ ಪೂಜೆ ಮಾಡ್ತಾರಲ್ಲ ಆ ದಿನ ಏನ್ರಿ? ಅರೆ ಅರೆ ಹಾಗಾದ್ರ ಮಕರ ಸಂಕ್ರಾಂತಿಯಾಗ ಎತ್ತಿಗ್ಯಾಕ್ರಿ ಪೂಜೆ ಮಾಡ್ತೀರಿ.
ಅಯ್ಯೋ ಅದಲ್ಲಾರ್ರಿ. ವೃಷಭ ಸಂಕ್ರಾಂತಿ ದಿನ ಸೂರ್ಯ ಆ ವೃಷಭ ರಾಶಿ ಹತ್ರ ಹೋದಂಗ, ಇನ್ನೇನು ಆ ಎತ್ತಿನ ಮೂತಿಯನ್ನ ಹಿಡಿದು ಬಿಟ್ಟ ಅಂತ, ನಮಗ ಭೂಮಿಯಿಂದ ನೋಡಿದ್ರೆ ಹಾಂಗಾ ಅನಿಸ್ತದೆ. ಎರಡೂ ನೇರವಾಗಿ ನಮಗ ಒಂದನ್ನು ಒಂದು ಮುತ್ತಿಡುವಂತೆ ಕಾಣ್ಸ್ತದ.
ಸ್ವಾಮಿ, ನಿಮ್ಮ ರೊಮ್ಯಾಂಟಿಕ್ ವರ್ಣನೆ ಸಾಕ್ರಿ. ಸೂರ್ಯ ಎತ್ತಿಗೆ ಮುತ್ತಿಟ್ಟರೆ ಅದರ ಮೂತಿ ಹನುಮಂತನ ಮೂತಿ ತರ ಆದಂಗೆ ನನಗಂತೂ ಕಾಣಿಸ್ತಿಲ್ಲ. ರಾತ್ರಿ ಅಲ್ಲ ಬೆಳಿಗ್ಗೆ ಅಂತೀರಿ. ಅದೆಂಗ್ ನಿಮಗೆ ಸೂರ್ಯ ನಕ್ಷತ್ರ ಎಲ್ಲ ಒಟ್ಟಿಗೆ ಮುತ್ತಿಡುವಂತೆ ಕಾಣಿಸ್ತದೆ? ನೀವು ಏನಾದ್ರೂ ಹೇಳಿ, ಇದು ನಿಮ್ಮ ಕಲ್ಪನೆ ಅನಿಸ್ತದ.
ಇಲ್ರಿ, ಇದು ನಿಜವಾಗಿಯೂ ಆಗ್ತದ. ಆದರೆ ಒಂದೇ ಕ್ಷಣದಾಗ ಸೂರ್ಯ ಎತ್ತಿನಿಂದ ಬಹು ದೂರ ಹೋಗಿ ಬಿಡ್ತಾನೆ.
ಹೋಗ್ಲಿ ಬಿಡಿ. ಮುಂದೆ ಏನ್ ಆಗ್ತದೆ ಅವತ್ತು?
ಅಬ್ಬಾ, ಅಷ್ಟಾದ್ರೂ ಅರ್ಥವಾಯಿತಲ್ಲ ಇವನಿಗೆ. ಮುಂದೆ ಏನಿಲ್ಲಾರಿ, ವೃಷಭ ಸಂಕ್ರಾಂತಿ ಮುಗಿದು ಹೋಯಿತು ಅಷ್ಟೇ. ಆದ್ರ ನಾವು ಒಂದು ಕಥೆ ಹೇಳಿಲ್ಲ ಅಂದ್ರ ಆ ದಿನ ಮುಗಿಯುವುದಿಲ್ಲ. ನಿಮಗೆ ಕಥೆ ಕೇಳಕ್ಕ ಇಷ್ಟ ಇಲ್ಲ ಅಂದ್ರೆ ಹೋಗಲಿ ಇವತ್ತಿನ ಶುಭ ಅಶುಭಗಳನ್ನಾದರೂ ತಿಳ್ಕೊಳಿ. ಇವತ್ತು ಕ್ರೂರಿಗಳಿಗೆ, ಪಾಪಿಷ್ಠರಿಗೆ, ಅಪ್ರಾಮಾಣಿಕರಿಗೆ ಬಹಳ ಒಳ್ಳೆ ದಿನವಂತೆ.
ಗೊತ್ತಾಯಿತು ಬಿಡಿ. ಅದಕ್ಕೆ ಸೌದಿ ಅರೇಬಿಯಾದಾಗೆ ನಮ್ಮ ದೇಶದ ಅಧ್ಯಕ್ಷ ಟ್ರಮ್ಪ್ ಗೆ ಅಷ್ಟೊಂದು ರಾಜ ಮರ್ಯಾದೆ ಇವತ್ತು ಅಂತೀರಾ?
ಅಕ್ಕಿ ಬೇಳೆಗಳ ಬೆಲೆ ಪರವಾಗಿಲ್ಲವಂತೆ ಇವತ್ತು. ಒಳ್ಳೆ ಆರೋಗ್ಯ ಲಾಭ ಶುರುವಾಗುತ್ತಂತೆ. ಯಾರಿಗೆ ಅಂತ ಕೇಳಬೇಡಿ ಅಷ್ಟೇ.
ಹಂಗಾದ್ರೆ ಎಳ್ಳು ಬೆಲ್ಲ ಏನು ಬೇಡ ಅಂತೀರೋ?
ಇಲ್ರಿ ಇದು ಸ್ವಲ್ಪ ಹೆಚ್ಚು ಖರ್ಚಿನ ಸಂಕ್ರಾಂತಿ. ಏಕೆ? ನೋಡಿ, ಇವತ್ತು ಗೋದಾನ ಮಾಡಿದರೆ ತುಂಬಾ ಒಳ್ಳೆಯದಂತೆ.
ಅಲ್ರಿ, ವೃಷಭ, ಎತ್ತು ಅಂತ ಏನೇನೋ ಅಂತೀರಿ, ನೋಡಿದ್ರೆ ಹಸುವಿನ ದಾನ ಮಾಡಿದರೆ ಒಳ್ಳೇದಾಗುತ್ತೆ ಅಂತೀರಿ. ನನ್ನತ್ರ ಅಷ್ಟೊಂದು ದುಡ್ಡಿಲ್ಲ.
ಹೋಗ್ಲಿ ಬಿಡಿ. ನಂದು ಮೇಷ ರಾಶಿ. ಮುಂದೆಂದಾದ್ರೂ ಮೇಷ ಸಂಕ್ರಾಂತಿಗೆ ದಾನ ಮಾಡಿ. ಅವತ್ತು ಸೂರ್ಯ ಮೇಷ ರಾಶಿಗೆ ಪ್ರವೇಶಿಸ್ತಾನೆ.
ಸರಿ, ಮೇಷ ಅಂದ್ರೆ ಟಗರು ಅಲ್ವ? ಮುಂದಿನ ಟಗರು ಸಂಕ್ರಾಂತಿಗೆ ಒಂದು ಟಗರು ದಾನ ಮಾಡ್ತೀನಿ ನಿಮಗೆ, ಆಗಬಹುದಾ? ನಿಮಗೂ ಮಟ್ಟನ್ ಸಾರು ತಿನ್ನಬೇಕು ಅನಿಸಿದರೆ ಒಳ್ಳೆ ಉಡುಗೊರೆ, ಬೇಡ ಅನ್ನಬೇಡಿ.
ಶಾಂತಂ ಪಾಪಂ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ