ಗುರುವಾರ, ಏಪ್ರಿಲ್ 23, 2026

‘ಸಿನ್ನರ್ಸ್’ ಚಲನ ಚಿತ್ರದ ಚಿತ್ರಕಥೆ.

 

ನೆನ್ನೆ ರಾತ್ರಿ (ಮಾರ್ಚ್ ೮, ೨೦೨೬) ನೋಡಿದ ಆಸ್ಕರ್ ಪುರಸ್ಕಾರದಲ್ಲಿ ಎಲ್ಲದಕ್ಕಿಂತ ನಾನು ಹೆಚ್ಚು ಗಮನ ಕೊಟ್ಟ ಪುರಸ್ಕಾರ: ಅತ್ತ್ಯತ್ತಮ ಚಿತ್ರಕಥೆ. Best original screenplay, WINNER: “Sinners” ‘ಸಿನ್ನರ್ಸ್’ ಚಿತ್ರಕಥೆ ಬರೆದಿರುವವರು ರಯಾನ್ ಕೂಗ್ಲರ್. ಇನ್ನೂ ಚಿಕ್ಕ ವಯಸ್ಸಿನ ಬರಹಗಾರ. ‘ಸಿನ್ನರ್ಸ್’ 1930ರ ದಶಕದಲ್ಲಿ ಮಿಸಿಸಿಪ್ಪಿ ರಾಜ್ಯದ ಸುತ್ತಮುತ್ತವಿರುವ ಸಣ್ಣ ಸಣ್ಣ ಹಳ್ಳಿಯಲ್ಲಿ ನಡೆಯುವ ಘಟನೆಗಳ ಚಿತ್ರಣ. ಆಗಿನ ಹತ್ತಿಬೆಳೆಯುವ ‘ಶೇರ್ ಕ್ರಾಪರ್’ (sharecropper) ಕಥೆಯಸುತ್ತಾ ಹೆಣೆದಿರುವ ಒಂದು ಚಿತ್ರಕಥೆ. ಇಡೀ ಚಿತ್ರದಲ್ಲಿ ಸುಮಾರು 24-26 ತಾಸುಗಳಲ್ಲಾಗುವ ಘಟನೆಗಳ ಮೂಲಕವೇ ಹತ್ತಾರು ಜನರ ಮಧ್ಯೆ ಪರಸ್ಪರ ಪ್ರಭಾವ ಬೀರುವ ಆಘಾತ, ವ್ಯಸನ, ಕಲಹ, ನಂಬಿಕೆ, ದ್ರೋಹ ಹೀಗೆ ಹಲವಾರು ಸ್ಪಂದನಗಳ ಕಥಾವಸ್ತುಗಳನ್ನು ಕೇಂದ್ರೀಕರಿಸಿ ಬರೆದ ಶೈಲಿ ಚೆನ್ನಾಗಿದೆ. ಯಾವುದೇ ಕಾದಂಬರಿ, ಅಥವಾ ಹಳೆಯ ಕಥಾವಸ್ತುವನ್ನು ಆದರಿಸಿ ಬರೆದ ಚಿತ್ರಕಥೆ ಆಗಿಲ್ಲದ ಕಾರಣ ‘ಸಿನ್ನರ್ಸ್’ ಮೂವತ್ತರ ದಶಕದ ದಕ್ಷಿಣ ಅಮೇರಿಕಾದ ಸಾಮಾಜಿಕ ಜೀವನ ಶೈಲಿಯನ್ನು ಸಾಹಿತ್ಯಾಸಕ್ತರ ಮುಂದಿಡಲು ಯಶಸ್ವಿಯಾಗಿದೆ.

ಚಿತ್ರಕಥೆಗೆ ಸಂಭಾಷಣೆಯೇ ಮುಖ್ಯ. ಈ ಚಿತ್ರದಲ್ಲಿ ಬಳಸಿರುವ ಹತ್ತಿ ರೈತರ ಭಾಷೆಯ ಸೊಗಡು ಯಾವುದೇ ಸಮಕಾಲೀನ ಸಾಹಿತ್ಯದಲ್ಲಿ ಕಾಣುವುದಿಲ್ಲ ಎಂದರೂ ಅತಿಶಯೋಕ್ತಿಯಲ್ಲ. ಅದಕ್ಕಿಂತಲೂ ಹೆಚ್ಚಾಗಿ ಸಮಾಜದಲ್ಲಿ ಬಗೆಹರಿಸಲಾಗದ ವ್ಯಾಂಪೈರ್ ಭಯಾನಕತೆ; ಬ್ಲೂಸ್ ಸಂಗೀತದ ಆಧ್ಯಾತ್ಮಿಕ ಮತ್ತು ಅತೀಂದ್ರಿಯ ಶಕ್ತಿಯ ಚುರುಕಿನ ಪ್ರತಿಬಿಂಬ; ಲೌಕಿಕವಲ್ಲದ ಅನುಭವಗಳು, ಎಲ್ಲವನ್ನೂ ಮನಸ್ಸಿಗೆ ತಟ್ಟುವಂತೆ ಬರೆದ ಚಿತ್ರಕಥೆಯಿಂದಲೇ ಈ ಚಿತ್ರ ಮೆಚ್ಚುವಂತಾಗಿರಬೇಕು. ಚಲನ ಚಿತ್ರಕ್ಕಿಂತಲೂ ಚಿತ್ರಕಥೆಯ ಚಮತ್ಕಾರ ಹೆಚ್ಚು. ಚಿತ್ರಕಥೆಯ ಒಂದು ತುಣುಕು ನೋಡಿ, ಹೀಗಿದೆ.

EXT. GREY OAKS PLANTATION - DAY SAMMIE (19, BLACK)
A SHARECROPPER works barefoot in a cotton field, the morning sun is still low in the sky. He hums a tune to himself, (I LIED TO YOU). He’s been at it for hours, evidenced by the full 9 ft sack beside him. Other SHARECROPPERS begin to show to start their day.

SHARECROPPER You out early this fine Saturday morning. I take it you strummin’ that guitar tonight? Sammie smiles.

SHARECROPPER (CONT’D)You gonna tell me where you playin’ or am I gonna have to hear it through the grapevine? Sammie packs up the massive bag of cotton.

ಕನ್ನಡ ಚಲನ ಚಿತ್ರಗಳ ಸುವರ್ಣ ಸಮಯ ಅನ್ನುವ ಅರವತ್ತರ ದಶಕದಲ್ಲಿ ಕೂಡ ಎಲ್ಲಾ ಚಿತ್ರಕಥೆಗಳು ಯಾವುದಾದರೂ ಕಾದಂಬರಿ, ಇತಿಹಾಸ, ಪುರಾಣ ಕಥೆಗಳನ್ನಾಧರಿಸಿ ಬರೆದ ಕಥಾವಸ್ತುಗಳು. ಕನ್ನಡದಲ್ಲಿ ಸ್ವಂತ ಚಿತ್ರಕಥೆಗಳನ್ನು ನಾವು ಕಾಣುವುದು 1990ರ ಕೊನೆ ಕೊನೆಗೆ ಬಂದ ‘ಉಪೇಂದ್ರ,’ ‘ಓಂ’ ‘A’, ಮುಂತಾದವು. ಆದರೆ ಅವುಗಳೂ ಕೂಡ ಯಾವುದಾದರೂ ನೈಜ ಘಟನೆ ಅಥವಾ ವಾಸ್ತವ ಕತೆಗಳನ್ನು ಆದರಿಸಿ ಬರೆದ ಚಿತ್ರಕಥೆಗಳು. ಹಾಗೆ ನೋಡಿದರೆ ಮೂಲ ಚಿತ್ರ ಕಥೆ 2006ನೇ ಇಸವಿಯವರೆಗೂ ಬರಲೇ ಇಲ್ಲ. ಆ ವರ್ಷದ ‘ಮುಂಗಾರು ಮಳೆ’ ಚಿತ್ರಕಥೆ ತಳಹದಿಯಾಯಿತು ಎನ್ನಬಹುದು. ನಂತರ ‘ಲೂಸಿಯಾ’ (2013), ‘ಉಳಿದವರು ಕಂಡಂತೆ’ (2014), ‘ತಿಥಿ’ (2016), ‘ಗರುಡ ಗಮನ ವೃಷಭ ವಾಹನ’ (2021) ಇತ್ಯಾದಿ ಚಿತ್ರಗಳು ಕೂಡ ಹಾಲಿವುಡ್ ನಂತೆಯೇ ಸ್ವಂತ ಚಿತ್ರಕಥೆಗಳನ್ನು ಚಲನ ಚಿತ್ರವಾಗಿಸಿ ಯಶಸ್ಸುಗಳಿಸಿದವು. ನಮ್ಮ ಚಿತ್ರಕಥೆಗಳು ಇನ್ನೂ ಆಸ್ಕರ್ ಮಟ್ಟಕ್ಕೆ ಬಾರದಿರಬಹುದು, ಚಿತ್ರಕಥೆಯೂ ಸಾಹಿತ್ಯವಾಗುವ ಆಶಯ ಇನ್ನೂ ಮೂಡದಿರಬಹುದು. ಆದರೆ ಕಾದಂಬರಿಗಳ ಅಥವಾ ಸಣ್ಣ ಕಥೆಗಳ ಸಾಹಿತ್ಯ ದೃಷ್ಟಿಯಿಂದಲೇ ಚಲನ ಚಿತ್ರಗಳನ್ನು ನೋಡುವ ಕಾಲ ಮುಗಿದಿದೆಯೇ? ಚಿತ್ರಕಥೆಗಳ ಹೊಸ ಆವಿಷ್ಕಾರಕ್ಕೆ ಅಡಚಣೆಗಳು ಏನು? ಸಿನಿಮಾ ರಂಗದ ಅನುಭವಿದ್ದರೆ ಮಾತ್ರ ಈ ಸಾಹಿತ್ಯ ಮಾಧ್ಯಮ ಕರಗತವಾಗುವುದೇ? ಈ ಮಾಧ್ಯಮ ಮುಂದೆ ಬೆಳೆದು ಸಾಹಿತ್ಯದ ತೀಕ್ಷಣತೆಗೆ ಗುರಿಯಾಗದೆ ಸಮಾಜದ ಸಮಸ್ಸೆಗಳಿಗೆ ಹೊಸ ರೂಪ ಕೊಡಬಹುದೇ? ಹಲವಾರು ಪ್ರಶ್ನೆಗಳು ಹುಟ್ಟುತ್ತವೆ



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ