ಟ್ರಂಪ್ ಮತ್ತು ಚೀನಿಯರ ಹೊಸವರ್ಷದ ಪಂಚಾಂಗ!!!
ಹುಂಜ ಈ ವರ್ಷದ ಸಂಕೇತ ಚೀನಿಯರಿಗೆ. ಅವರು ನಮ್ಮಂತೆಯೇ ಹೊಸವರ್ಷವನ್ನು ಚಾಂದ್ರಮಾನ ಯುಗಾದಿಯ ಸಮಯಕ್ಕೆ ಹತ್ತಿರವಾಗಿಯೇ ಪ್ರತಿ ವರ್ಷ ಆಚರಿಸುತ್ತಾರೆ. ನಮ್ಮಂತೆಯೇ ಪಂಚಾಂಗ ಶ್ರವಣ ಮಾಡಿ ಎಲ್ಲರ ಆರೋಗ್ಯ, ಐಶ್ವರ್ಯ ಮತ್ತು ಅವರ ಪ್ರೀತಿ ಜೀವನದ ಬಗ್ಗೆ ಮಾಹಿತಿ ಕೊಡುತ್ತಾರೆ. ನಮ್ಮ ಚಾಂದ್ರಮಾನದ ಪ್ರಕಾರ ೬೦ ಸಂವತ್ಸರ ಕಳೆದ ನಂತರವೇ ಮತ್ತೆ ಅದೇ ಸಂವತ್ಸರದ ಹೆಸರು ಬರಲು ಸಾಧ್ಯ. ಪ್ರಭವ ಸಂವತ್ಸರದಿಂದ ಶುರು ಮಾಡಿ ಅಕ್ಷಯ ಸಂವತ್ಸರದಲ್ಲಿ ಕೊನೆಗೊಂಡು ೬೦ ವರ್ಷಗಳ ಚಕ್ರ ಮತ್ತೆ ಪ್ರಾರಂಭವಾಗುತ್ತದೆ. ಆದರೆ ಚೀನಿಯರು ೬೦ ಸಂವತ್ಸರಗಳಿಗೆ ಬೇರೆ ಬೇರೆ ಹೆಸರಿಡದೆ ಪ್ರತಿ ೧೨ ವರ್ಷಗಳಿಗೊಮ್ಮೆ ಪಂಚಾಂಗದ ಚಕ್ರವನ್ನು ಗುಂಪುಮಾಡಿದ್ದಾರೆ. ಜೊತೆಗೆ ಆ ೧೨ ಸಂವತ್ಸರಗಳ ಗುಂಪನ್ನು ಬೇರೆ ಬೇರೆ ಪ್ರಾಣಿಗಳ ಸಂಕೇತದಲ್ಲಿ -- ಹುಂಜ, ನಾಯಿ, ಹುಲಿ, ಹೆಗ್ಗಣ, ಇತ್ಯಾದಿ -- ಹೆಸರಿಟ್ಟಿದ್ದಾರೆ. ಅಂದರೆ ಹುಂಜ ಸಂವತ್ಸರ ಮತ್ತೆ ಬರಲು ೧೨ ವರ್ಷಗಳೇ ಕಾಯಬೇಕು. ೨೦೧೭ರಲ್ಲಿ ಬಂದ ಹುಂಜ ಮತ್ತೆ ಬರುವುದು ೨೦೨೯ ರಲ್ಲಿ. ಇನ್ನೊಂದು ವಿಶೇಷವೆಂದರೆ ಈ ಎಲ್ಲ ಸಾಂಕೇತಿಕ ಪ್ರಾಣಿಗಳ ಸಂವತ್ಸರದಲ್ಲಿ ಹುಟ್ಟಿದವರ ಹುಟ್ಟು ಗುಣ ಅಥವಾ ಅವರ ಗುಣವಿಶೇಷಗಳನ್ನು ನಿಗದಿಯಾಗಿ ಹೇಳುತ್ತವೆ ಈ ರಾಶಿಫಲಗಳು. ಈ ರೀತಿಯ ಪಂಚಾಂಗ ಕ್ರಮದಲ್ಲಿ ಗಣಿತ ಮತ್ತು ಗುಂಪಿಗಿಂತ ಹೆಚ್ಚಾಗಿ ಸಾಮಾನ್ಯರಿಗೂ ಅವರ ಹುಟ್ಟು ಗುಣ ಮತ್ತು ಪ್ರತಿವರ್ಷದ ಭವಿಷ್ಯವನ್ನು ಅರ್ಥಮಾಡಿಕೊಳ್ಳಲು ಸುಲಭವಾಗುತ್ತದೆ.
ನಾಯಿಯನ್ನು ಸಾಂಕೇತಿಕವಾಗಿ ಬಳಸಿಕೊಂಡು ಆ ಸಂವತ್ಸರದಲ್ಲಿ ಹುಟ್ಟಿದವರ ಗುಣಗಳಲ್ಲಿ ಸ್ನೇಹಪರ, ನಿಷ್ಠಾವಂತ ಎಂದು ಅವರ ನಿಲುವನ್ನು ನಿರೂಪಿಸಲಾಗಿದೆ. ಸಭ್ಯನಡವಳಿಕೆಯ ದಿಕ್ಸೂಚಿ ತೋರುವ, ನೀತಿಬೋಧಕರು ಈ ರಾಶಿಯವರೆಂದು ಚೀನಿಯರ ನಂಬಿಕೆ. ಈ ಜನ್ಮಕುಂಡಲಿಯ ದೋಷಾತೀತ ವ್ಯಕ್ತಿಗಳ ಭುಜದ ಮೇಲೆ ಹಣೆಯಿಟ್ಟು ದುಃಖವನ್ನು ಹಂಚಿಕೊಂಡು ಅಳಬಹುದು ಎಂದು ನಂಬುತ್ತಾರೆ ಚೀನಿಯರು. ಹೀಗೆ ಹುಟ್ಟಿದ ಎಲ್ಲ ಮನುಷ್ಯರ ಸ್ವಭಾವವನ್ನು ಗುರಿತಿಸಿದ್ದಾರೆ ಚೀನಿಯರು.
ಚೀನಿಯರ ಈ ಭವಿಷ್ಯವಾಣಿಯನ್ನು ಅಮೇರಿಕಾದ ಹೊಸ ಅಧ್ಯಕ್ಷ ಟ್ರಂಪ್ ಹುಟ್ಟಿದ ದಿನವನುಗುಣವಾಗಿ ಯಾವ ಪ್ರಾಣಿಯ ಸಂಕೇತವಿರಬಹುದೆಂಬ ಕುತೂಹಲ ಪ್ರಶ್ನೆ ಮೂಡಿತು. ಸರಿ, ಗೂಗಲ್ ಮಾಡಿ ಗೊತ್ತಾಗಿದ್ದು ಅವರು ಹುಟ್ಟಿದ ದಿನ ಜೂನ್ ೧೪, ೧೯೪೬ ರೆಂದು. ಚೀನಿಯರ ಪಂಚಾಗದ ವೆಬ್ ಸೈಟಿನಲ್ಲಿ ಹುಡಿಕಿ ಅವರ ರಾಶಿಫಲವನ್ನು ನೋಡಿದೆ. ನನಗೆ ಆದಂತೆ ನಿಮಗು ತಲೆ ಸುತ್ತಿ ಬಂದೀತು! ಏಕೆಂದರೆ ಚೀನಿಯರ ಪ್ರಕಾರ ಅಧ್ಯಕ್ಷ ಟ್ರಂಪ್ ಹುಟ್ಟಿದ್ದು ನಾಯಿ ರಾಶಿಯಲ್ಲಿ. ನಿಷ್ಠಾವಂತ, ದೋಷಾತೀತ, ಸಭ್ಯನಡವಳಿಕೆಯ ಜನ್ಮಕುಂಡಲಿ ಇವರೆದೆಂದು ಓದಿ ನಮಗೆ ಪಂಚಾಂಗದಲ್ಲಿರುವ ನಂಬಿಕೆಯನ್ನು ಪ್ರಶ್ನಿಸುವಂತಾಯಿತು! ತಮ್ಮ ಸ್ವಭಾವದ ಮಾಲೀಕ ಪ್ರಪಂಚದ ಅತ್ಯಂತ ಬಲಶಾಲಿ ದೇಶದ ಅಧ್ಯಕ್ಷನೆಂದು ತಿಳಿದು ನಾಯಿಗಳು ಕೂಡ ಸಂತೋಷ ಪಡುವ ಬದಲು ಊಳಿಡುತ್ತಿವೆ ಅಂತ ನನಗನಿಸುತ್ತಿದೆ. ಚೀನಿಯರ ಪ್ರಕಾರ ನಾಯಿಗಳಲ್ಲೂ ಬೇರೆ ಬೇರೆ ಸಂಕೇತಗಳಿವೆಯಂತೆ. ಉದಾಹರಣೆಗೆ ಚಿನ್ನದ ನಾಯಿ (ಮದರ್ ತೆರೇಸಾ), ಭೂಮಿ ನಾಯಿ (ಮೈಕೆಲ್ ಜ್ಯಾಕ್ಸನ್). ಆದರೆ ಟ್ರಂಪ್ ಬೆಂಕಿ ನಾಯಿ ರಾಶಿಯವ ಅಂತೆ. ನಿಮ್ಮ ದುಃಖವನ್ನು ಯಾವುದಾದರು ನಿಜವಾದ ಜೀವಂತ ನಾಯಿ ಒಂದನ್ನು ತಬ್ಬಿ ಕೊಂಡು ಶಮನ ಮಾಡಿಕೊಳ್ಳಿ. ಬೆಂಕಿ ನಾಯಿಯನ್ನು ಯಾರಾದರೂ ತಬ್ಬಿ ಕೊಳ್ಳಬಹುದೇ? ನಿಮಗೆನಿಸುತ್ತೆ ಎಂದು ಖಂಡಿತ ತಿಳಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ