ಬುಧವಾರ, ಜನವರಿ 18, 2017

ಹೆಣ್ಣಿನ ಅಳಲನ್ನು ಅರ್ಥಮಾಡಿಕೊಂಡ ಏಕೈಕ ಕವಿ: ರಾಜ ಮೆಹದಿ ಅಲಿ ಖಾನ್


ಹೆಣ್ಣಿನ ಅಳಲನ್ನು ಅರ್ಥಮಾಡಿಕೊಂಡ ಏಕೈಕ ಕವಿ ರಾಜ ಮೆಹದಿ ಅಲಿ ಖಾನ್

ಹೆಣ್ಣು-ಗಂಡಿನ ನಡುವೆ ಇರುವ ಅಜಗಜಾಂತರವನ್ನು ದಿನ ನಿತ್ಯದ ರೂಡಿಯಲ್ಲಿ ಅರ್ಥೈಸಿಕೊಂಡಾಗ ನಮಗೆ ತಿಳಿಯಬರುವ ಒಂದು ವಿಷಯವೆಂದರೆ ಗಂಡು ಎಂದಿಗೂ ಹೆಣ್ಣಿನ ಅಳಲನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವೇ ಇಲ್ಲವೆಂದು. ಆದರೆ, ಜಾನಪದ ಸಾಹಿತ್ಯದಲ್ಲಿ ಹೊರತು ಪ್ರಪಂಚದ ಎಲ್ಲ ಸಾಹಿತ್ಯ ರೂಪದಲ್ಲೂ ಹೆಣ್ಣು ತನ್ನ ದುಃಖವನ್ನು ತಾನೇ ವರ್ಣಿಸಲು ನಿಷ್ಪಲ ಹೊಂದಿದ್ದಾಳೆ ಎಂದು ನನ್ನ ವೈಯುಕ್ತಿಕ ಅನಿಸಿಕೆ. ಸೀತೆಯ ದುಃಖವನ್ನು ವಾಲ್ಮೀಕಿ ಸ್ಪಂದಿಸಿದಂತೆ ಬೇರಾವ ಹೆಣ್ಣು ತನ್ನದೇ ಕಾವ್ಯದಲ್ಲಿ ಸ್ಪಂದಿಸಿರುವುದನ್ನು ನಾನಂತೂ ಕಂಡಿಲ್ಲ.  ಹಾಗಾದರೆ ಗಂಡಿನ ಮುಖಾಂತರ ತನ್ನ ದುಃಖ ತೋಡಿಕೊಳ್ಳುವುದರಲ್ಲಿ ಹೆಣ್ಣು ಹೆಚ್ಚು ಸಫಲವಾಗಿದ್ದಾಳೆಯೇ?  ಖಂಡಿತವಾಗಿಯೂ ಸಫಲವಾಗಿದ್ದಾಳೆ ಎನ್ನುವುದಕ್ಕೆ ಒಂದು ಉದಾಹರಣೆ ರಾಜ ಮೆಹದಿ ಆಲಿ ಖಾನ್ ಬರೆದಿರುವ ಈ ಕೆಳಗಿನ ಗೀತೆಯೇ ಸಾಕ್ಷಿ.

ರಾಜ ಮೆಹದಿ ಆಲಿ ಖಾನ್ ಪ್ರಖ್ಯಾತ ಹಿಂದಿ ಚಲನಚಿತ್ರದ ಕವಿ. ಉರ್ದೂ ಮತ್ತು ಹಿಂದಿ ಭಾಷೆಗಳಲ್ಲಿ ಅವರು ಬರೆದ ಕವನಗಳು ಹೆಣ್ಣಿನ ದುಃಖವನ್ನು ವ್ಯಕ್ತೀಕರಣ ಮಾಡುವುದರಲ್ಲಿ ಬಹುಪಾಲು ಯಶಸ್ಸು ಪಡೆದಿವೆ. ಐವತ್ತು ಮತ್ತು ಅರವತ್ತರ ದಶಕದಲ್ಲಿ ರಾಜ ಮೆಹದಿ ಅಲಿ ಖಾನರು ಬರೆದ ಕವನ ಮತ್ತು ಮದನ್ ಮೋಹನ್ ರವರ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದ ಹಾಡುಗಳು ಹಿಂದಿ ಚಿತ್ರದ ಸರ್ವ ಶ್ರೇಷ್ಠ ಹಾಡುಗಳೆಂದರೆ ಉತ್ಪ್ರೇಕ್ಷೆ ಎನಿಸದು.  ರಾಜ ಮೆಹದಿ ಅಲಿ ಖಾನರ ರಚನೆಗಳಲ್ಲಿ ಕಂಡು ಬರುವ ವೈಶಿಷ್ಟತೆ ಎಂದರೆ ಆಳವಾದ ಭಾವನೆಗಳನ್ನು ಅದರಲ್ಲೂ ಹೆಚ್ಚಾಗಿ ಹೆಣ್ಣಿನ ಮನದಾಳದ ಅನುಕಂಪನಗಳನ್ನು ಅವಳದೇ ದೃಷ್ಟಿಯಿಂದ ಹಂಚಿಕೊಳ್ಳುವ ಕವನಗಳು.  ಹೃದಯದಿ ಮೂಡಿ ಬಂದರೂ ತುಟಿ ಕೂಡಿಸಲಾಗದ ಮಾತುಗಳ ದ್ವಂದತೆಯನ್ನು ಕನಿಕರಿಸಿ ಹೇಳುವ ಗಝಲ್ಗಳು.  ಅಂತಹುದೇ ಗಝಲ್ ಈ ಹಾಡು, ೧೯೬೨ರಲ್ಲಿ ಬಿಡುಗಡೆಯಾದ ‘ಅನ್ಪಡ್’ ಹಿಂದಿ ಚಿತ್ರದ ಈ ಹಾಡಿನ ಬರಹವನ್ನು ಹಿಂದಿಯಲ್ಲೂ ಕನ್ನಡದಲ್ಲೂ ಕೊಟ್ಟಿದ್ದೇನೆ.  


है इसी में प्यार कि आभुरु
लेखक: राजा मेहदी अली खान

है इसी में प्यार कि आभुरु
वो जफ़ा करें मैं वफ़ा करू
जो वफ़ा भी काम न आसकी
तो वहीँ कहें कि मैं क्या करू

मुजें गं भी उनका अजीज है
के उनीकी दी हुयी चीस है
यही गं है अब मेरि ज़िंदगी
इसे कैसे दिल से जुदा करू

जो न बन सके मैं वो बात हूं
जो न ख़त्म हो मैं वो रात हूं
ये लिखा है मेरे नसीब में
यूँही शम्मा बनके जला करू

न किसी के दिल कि हूं आरज़ू
न किसी नज़र कि हूं जुश्तजू
मैं वो फूल हूं जो उदास हूं
न बहार आये तो क्या करू

ಹೈ ಇಸೀ ಮೆ ಪ್ಯಾರ್ ಕಿ ಆಭುರು
ಕವಿ: ರಾಜ ಮೆಹದಿ ಅಲಿ ಖಾನ್

ಹೈ ಇಸೀ ಮೆ ಪ್ಯಾರ್ ಕಿ ಆಭುರು
ವೋ ಜಫಾ ಕರೇ ಮೈ ವಫಾ ಕರೂ
ಜೋ ವಫಾ ಭೀ ಕಾಮ್ ನ ಆಸಕಿ
ತೊ ವಹಿ ಕಹೇ ಕಿ ಮೈ ಕ್ಯಾ ಕರೂ

ಮುಝೆ ಗಂ ಭೀ ಉನ್ಕಾ ಅಜೀಜ್ ಹೈ
ಕೆ ಉನೀಕೀ ದೀ ಹುಯಿ ಚೀಸ್ ಹೈ
ಯಹಿ ಗಂ ಹೈ ಅಬ್  ಮೇರಿ ಜಿಂದಗಿ  
ಇಸೆ ಕೈಸೇ ದಿಲ್ ಸೆ ಝುದಾ ಕರೂ

ಜೋ ನ ಬನ್ ಸಕೇ ಮೈ ವೋ ಬಾತ್ ಹೂ
ಜೋ ನ ಖತ್ಮ್ ಹೋ ಮೈ ವೋ ರಾತ್ ಹೂ
ಏ ಲಿಖಾ ಹೈ ಮೇರೆ ನಸೀಬ್ ಮೆ
ಯೂಹೀ ಶಮ್ಮ ಬಂಕೆ ಜಲಾ ಕರೂ

ನ ಕಿಸೀ ಕೆ ದಿಲ್ ಕಿ ಹೂ ಆರುಝು
ನ ಕಿಸೀ ನಝರ್ ಕಿ ಹೂ ಜ್ಯೂಸ್ಥಜೂ
ಮೈ ವೊ ಫೂಲ್ ಹೂ ಜೋ ಉಧಾಸ್ ಹೂ
ನ ಬಹಾರ್ ಆಯೆ ತೊ ಕ್ಯಾ ಕರೂ

ಈ ಹಾಡನ್ನು ಕನ್ನಡದಲ್ಲಿ ಭಾಷಾಂತರ ಮಾಡುವುದು ಒಂದು ವ್ಯೆರ್ಥ ಮತ್ತು ಬೂಟಾಟಿಕೆಯ ಕೆಲಸ ಎಂದು ಅನಿಸಿದ್ದು ನಿಜ. ಕಾರಣ ಈ ಹಾಡಿನಲ್ಲಿರುವ ಭಾವನೆಗಳಿಗೆ ನನಗಿರುವ ಕನ್ನಡ ಮತ್ತು ಹಿಂದಿಯ ಜ್ಞಾನ ಖಂಡಿತಾ ಸಾಲದು.  ಅನುವಾದದಲ್ಲಿ ಮೂಲ ಕೃತಿಯ ವ್ಯಾಖ್ಯಾನಕ್ಕೆ ಎಲ್ಲಿ ದಕ್ಕೆ ಬಂದು ಕವಿಯ ಮನೋಗತವನ್ನು ಓದುಗರಿಗೆ ತಿಳಿಸಲು ಅಸಫಲನಾಗುವೆನೋ ಎಂಬ ಭಯವಿದ್ದ ಕಾರಣ, ಈ ಕವಿತೆಯನ್ನು ಮೂಲ ಹಿಂದಿ ಭಾಷೆಯಲ್ಲೂ ಮುದ್ರಿಸಲಾಗಿದೆ. ಹಿಂದಿ ಭಾಷೆ ತಿಳಿದವರು ಹಿಂದಿಯಲ್ಲೇ ಓದಿಕೊಳ್ಳಿ. ಭಾಷಾಂತರದ ಬದಲು ಭಾವಾರ್ಥ ಹಂಚಿಕೊಳ್ಳುವುದೇ ಮುಖ್ಯವಾಗಿ ಕಂಡಿತು.  ಸಿಲಿಕಾನ್ ಕಣಿವೆ ಕನ್ನಡಿಗರಿಗೆ ಹೋಲಿಸಿದರೆ ನನ್ನ ಹಿಂದಿ ಉತ್ತಮ ಮಟ್ಟದ್ದೇ ಏಕೆಂದರೆ ಉತ್ತರ ಭಾರತದಲ್ಲಿ ನನ್ನ ಹಲವಾರು ವರ್ಷಗಳ ಅನುಭವದಿಂದ. ಈ ಹಾಡಿನ ಭಾವಾರ್ಥ ಹೀಗಿದೆ.

ಪ್ರೀತಿಯ ಮರ್ಮ
ಭಾವಾರ್ಥ: ರವಿ ಗೋಪಾಲರಾವ್

ಇದರಲ್ಲೇ ಇರುವುದು ಪ್ರೀತಿಯ ಮರ್ಮ
ಅವನು ದ್ವೇಷಿಸಿದರೂ ನಾ ಅವನ ಪ್ರೀತಿಸುವೆ
ಆ ಪ್ರೀತಿಯೂ ನಿಸ್ಸಾರವಾದರೆ  
ಅವನೇ ಹೇಳಲಿ ನಾ ಏನಮಾಡಲಿಯೆಂದು

ನನಗೆ ವ್ಯೆಥೆಯೂ ಕೂಡ ಅವನ ಪ್ರೀತಿಯಿಂದಲೇ  
ಅವನೇ ನೀಡಿದ ಉಡುಗೊರೆ
ಇದೆ ನನ್ನ ಜೀವನದ ಅಳಲು
ಹೃದಯದಿಂದ ಹೇಗೆ ಬೇರ್ಪಡಿಸಲಿ ನಾ  

ಶಬ್ದವಾಗದ ಮಾತಾದೆ ನಾ
ಮುಗಿಯದ ರಾತ್ರಿಯಾದೆ ನಾ
ನನ್ನೀ ಹಣೆಬರಹದ ಲಿಖಿತ
ತಪಿಸಿ ಜ್ವಾಲೆಯಲಿ ದಹಿಸುವೆ ನಾ

ನಾನಾಗಲಿಲ್ಲ ಯಾರ ಅಂತಃಕರಣ  
ನಾನಾಗಲಿಲ್ಲ ಯಾರ ಕಣ್ಗಳ ಕಣ್ಮಣಿ   
ಬಳಲಿ ಕುಗ್ಗಿದ ಹೂವಾದೆ ನಾ
ಬೀಸದ ತಂಗಾಳಿ ನಾ ಏನ ಮಾಡಲಿ
_________________________  

raja-mehdi-ali-khan-3.png.jpg
ಟಿಪ್ಪಣಿ: ರಾಜ ಮೆಹದಿ ಅಲಿ ಖಾನರ ಚಿತ್ರ ನೋಡಿದರೆ ತುಂಬಾ ಭಾವನಾಭರಿತ ವ್ಯಕ್ತಿ ಎಂದು ಅನಿಸುತ್ತದೆ.  ನಾನು ಕಾಲೇಜಿನಲ್ಲಿದ್ದಾಗ ರೇಡಿಯೋ ಸಿಲೋನ್/ ಶ್ರೀ ಲಂಕಾ ದಲ್ಲಿ ಪ್ರತಿನಿತ್ಯವೂ ಬರುತ್ತಿದ್ದ ‘ಭೊಲೇ ಬಿಸಿರೆ ಗೀತ್’ ನಲ್ಲಿ ಇವರ ಹಾಡುಗಳನ್ನು ಮದನ್ ಮೋಹನ್ರ ಸಂಗೀತದಲ್ಲಿ ಕೇಳಿ ಮಂತ್ರಮಗ್ನನಾಗುತ್ತಿದ್ದೆ.  ಆಗಲೂ ಕನ್ನಡದಲ್ಲಿ ಭಾಷಾಂತರಿಸಿಕೊಂಡು ಸರಿಯೋ ತಪ್ಪೋ ಗೊತ್ತಿಲ್ಲದೇ ಅರ್ಥಮಾಡಿಕೊಳ್ಳುತ್ತಿದ್ದೆ.  ಹಿಂದಿ ಭಾಷೆಯಲ್ಲಿ ಹೆಚ್ಚು ಪರಿಣಿತಿ ಗಳಿಸಿಕೊಂಡಿದ್ದು ನಾನು ಡೆಲ್ಲಿ ಮತ್ತು ಡೆಹ್ರಾ ಡೂನ್ ನಲ್ಲಿ ಓದು ಮತ್ತು ಕೆಲಸದ ಮೇಲೆ ಅಲ್ಲೇ ನೆಲಸಿದ್ದಾಗ.  ಆಗಿನ ನೂರಾರು ಹಿಂದಿ ಚಿತ್ರಗಳನ್ನು ನೋಡಿ ಹಿಂದಿ ಭಾಷೆ ಚೆನ್ನಾಗಿ ಅರ್ಥವಾಗುತ್ತಿತ್ತು.

ಈ ಹಾಡಿನಲ್ಲಿ  “ಅಜೀಜ್” ಎನ್ನುವ ಪದ ಒಂದು ಬಹಳ ಆಳವಾದ ಅರ್ಥವುಳ್ಳದ್ದು.  “ಅವನಿಗೆ ನನ್ನ ಮೇಲಿರುವ ಪ್ರೀತಿಯೇ ನನ್ನ ವ್ಯಥೆಗೆ ಕಾರಣ,” ಎನ್ನುವುದು “ಮುಝೆ ಗಂ ಭೀ ಉನ್ಕಾ ಅಜೀಜ್ ಹೈ” ಎಂಬುವುದರ ಭಾವಾರ್ಥ. ಅದೇ ರೀತಿ “ಜ್ಯೂಸ್ಥಜೂ” ಎನ್ನುವ ಉರ್ದೂ ಪದಕ್ಕೆ ಹತ್ತಿರವಾದ ಕನ್ನಡ ಪದ  ‘ಅನ್ವೇಷಣೆ” ಯಾದರೂ ‘ಕಣ್ಮಣಿ’ ನನಗೆ ಸರಿಯೆನಿಸಿತು. “ಜೋ ನ ಬನ್ ಸಕೇ ಮೈ ವೋ ಬಾತ್ ಹೂ” ಎನ್ನುವುದರ ಭಾಷಾಂತರ ಸಾಧ್ಯವೇ ಇಲ್ಲ. ಶಬ್ದವಾಗದ ಮಾತಾದೆ ನಾ ಎನ್ನುವ ನನ್ನ ಭಾವಾರ್ಥ ಕೇಳಿ ರಾಜ ಮೆಹದಿ ಅಲಿ ಖಾನರು ನಕ್ಕು ಬಿಟ್ಟಾರು!  ಹತಾಶಳಾಗಿ ಪ್ರಿಯತಮನನ್ನೇ ‘ನನ್ನೀ ದುಃಖಕ್ಕೆ ಏನು ಮಾಡಲಿ’ ಎಂದು ಕೇಳುವುದು ಹೆಣ್ಣಿನ ಮನಸ್ಸನ್ನು ಅರಿತ ಕವಿಗೆ ಮಾತ್ರ ಸಾಧ್ಯ. ಸಹಜ ಸ್ಪಂದನ, ಉಮ್ಮಳಿಸುತ್ತಿರುವ ದುಃಖ ಒಂದು ಕಡೆಯಾದರೆ ನಿರಾಶೆಯ ಬೀಸದ ತಂಗಾಳಿ ಮತ್ತೊಂದೆಡೆ.   ಹೃದಯದಿ ಮೂಡಿ ಬಂದರೂ “ತುಟಿ ಕೂಡಿಸಲಾಗದ ಮಾತು ನಾನಾದೆ” ಎಂದು ಹೆಣ್ಣಿನ ದುಃಖವನ್ನು ಅರಿತು ರಾಜ ಮೆಹದಿ ಅಲಿ ಖಾನರು ಆಕೆಯ ಹೃದಯವನ್ನೇ ಹೊಕ್ಕು ಬರೆದಂತಿದೆ ಈ ಸಾಲುಗಳು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ