ಭಾನುವಾರ, ಫೆಬ್ರವರಿ 12, 2017

ನೀ ನೀಡಿದ ಕೆಂಪು ಗುಲಾಬಿಯ ಗುಚ್ಛ


ವ್ಯಾಲೆಂಟೈನ್ ದಿನದ ಕೆಂಪು ಗುಲಾಬಿ ಮತ್ತು ಬೆಲೆಕಟ್ಟಲಾಗದ ಉಡುಗೊರೆ: ನೀವೇ ನಿರ್ಧರಿಸಿ!

Val_Jpg.JPG

ವ್ಯಾಲೆಂಟೈನ್ ದಿನ ಒಂದು ರೀತಿಯಲ್ಲಿ ಸಂತಸ ತಂದರೆ ಆತಂಕಕ್ಕೂ ಕಾರಣವಾಗುವ ದಿನ!  ಚಳಿಗಾಲದ ನೀರವತೆಯನು ಕಳೆದು ವಸಂತ ಬರಲೆಂದು ಹಾರೈಸಿ --ಅಕ್ಕರೆ, ಮಮತೆ, ವಾತ್ಸಲ್ಯ, ಪ್ರೇಮ, ಅನುರಕ್ತಿ-- ಎಂದು ವಿವಿಧ ರೀತಿಯಲ್ಲಿ ಬಣ್ಣಿಸಲಾಗದ ಪ್ರೀತಿಯನ್ನು ಇತರರೊಂದಿಗೆ ಹಂಚಿಕೊಳ್ಳುವ ದಿನ.  ಉಡುಗೊರೆ ಕೊಡುವ ಕೆಲಸ ಮಾತ್ರ ಪುರುಷನಿಗೆ ಆತಂಕಕ್ಕೆ ಕಾರಣ.  ಪುರುಷ ಪ್ರಧಾನವಾದ ಈ ದಿನದಂದು ಪ್ರಿಯತೆಮೆಯನ್ನು ತಣಿಸುವ ಜವಾಬ್ದಾರಿ ಪುರುಷನದೇ  ಎಂದಾಗಿಬಿಟ್ಟಿದೆ.  ಏಕೆಂದರೆ ಪ್ರಿಯತಮೆಗೆ ೧೨ ಕೆಂಪು ಗುಲಾಬಿ ಹೂವಿನ ಗುಚ್ಛ ಕೊಡಲೋ ಅಥವಾ ೨೪ ರ ಹಳದಿ ಗುಲಾಬಿ ಕೊಡಲೋ. ಜೊತೆಗೆ ಗ್ರೀಟಿಂಗ್ ಕಾರ್ಡ್ ಮತ್ತು ಸಿಹಿಮಿಠಾಯಿ ಕೊಟ್ಟರೆ ಸಾಕೆ ಜೊತೆಗೆ ಮುತ್ತಿನ ಹಾರ ಕೊಡಲೋ ಅಥವಾ ಬರಿ ಮುತ್ತಿನ ಸುರಿ ಮಳೆ ಸಾಕೋ?  ಹೀಗೆ ನಾನಾವಿಧದಲಿ ಉಡುಗೊರೆಯನು ವಾಣಿಜ್ಯ ವಹಿವಾಟಿನಲ್ಲಿ ಅಳೆದು ಸುರಿದು ಬೆಲೆಕಟ್ಟಲು  ನೋಡುವುದರಿಂದ ಹೆಣ್ಣಿಗೆ ಪ್ರೀತಿಯೂ ಕೃತಕವೆನಿಸುವುದು ಸಹಜ. ಆದರೆ ವಾಸ್ತವಿಕವಾಗಿ ಹೆಣ್ಣಿನ ಮನದಲ್ಲಿ ಮೂಡುವ ಭಾವನೆಗಳೇ ಬೇರೆ ಎಂದು ಗಂಡಿಗೆ ಹೇಗೆ ಅರ್ಥವಾಗಬೇಕು?  ನನ್ನೀ ಪ್ರೀತಿ ಒಂದು ದಿನಕೆ ಸೀಮಿತವಲ್ಲ ಎಂದರಿತರೆ ಸಾಲದೇ? ನನ್ನೀ ಈ ಕವಿತೆ ಪ್ರಿಯತಮನಿಗೆ ಸ್ಪಂದಿಸೀತೆ?

ನೀ ನೀಡಿದ ಕೆಂಪು ಗುಲಾಬಿಯ ಗುಚ್ಛ

ನಿರ್ಧಿಷ್ಟ ದಿನಂದಂದು ಕೈಗಿತ್ತ
ಮುಡಿಯಲಾರದ ಕೆಂಪು
ಗುಲಾಬಿಯ ಈ ಗುಚ್ಛದಲಿ
ಅಂದಾಜು ಮಾಡಿದೆಯೇಕೋ
ನನ್ನೀ ಅಮಿತ ಪ್ರೀತಿಯನು
ಬೆಲೆಕಟ್ಟಲು ಪ್ರಯತ್ನಿಸಿದೆಯೇಕೋ
ಬಾಳಸಂಗಾತಿಯ ಪ್ರೀತಿಯ ಉಡುಗೊರೆಯನು

ಬರಿದುಗೈಯಲಿ ಬಂದು ನಿಂತರೂ
ಗುಚ್ಛದಲಿ ಅವಿತ ಮುಳ್ಳಿನತೆರೆದಲಿ
ಚುಚ್ಛೆನು ನಾ
ಹೃದಯವನೇ ಭರಿಸಿದ ಇನಿಯ ನೀ ತಂದ  
ಆ ಸಿಹಿಮಿಠಾಯಿ ಆಗದು ಏಕೋ ನನ್ನೀ
ಅಮರ ಪ್ರೇಮದ ಸಂಕೇತ
ಇಂಪಿನ ಸಂಗೀತ
______________
ಅದೇಕೋ ಏನೋ ಪ್ರತಿ ವರ್ಷವೂ ವ್ಯಾಲೆಂಟೈನ್ ದಿನ ನನ್ನ ಮನ “ನಾಂದಿ” ಚಿತ್ರದ ಈ ಹಾಡನ್ನು ಗುನಿಗಿಕೊಳ್ಳಲು ಕಾತರಿಸುತ್ತದೆ.
ಉಡುಗೊರೆಯೊಂದ ತಂದ
ಎನ್ನಯ ಮನದಾನಂದ
ಮನವನು ತಣಿಸಲು ಬಂದ ….


ನಿರಾಡಂಬರ ಪ್ರೇಮ ಗೀತೆ, ಸದಾ ಮನದೊಳು ಉಳಿವ ಸಹಜತೆ, ನೀನೇ ನನ್ನವಳೆಂದರೆ ಸಾಲದೇ ಇನಿಯ?






ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ