ಇಂದು ಬುದ್ಧ ಜಯಂತಿ ಮತ್ತು ಕೂರ್ಮ ಜಯಂತಿ, ಎರಡೂ ಒಂದೇ ದಿವಸ ಬರುವ ವಿಶೇಷ ಶುಭಗಳಿಗೆ.
ಬುದ್ಧ ಜಯಂತಿಯಂದು ನನಗೆ ಅದೇಕೋ ನಮ್ಮ ತಂದೆ ಸದಾ ಜ್ಞಾಪಕಕ್ಕೆ ಬರುತ್ತಾರೆ. ಅವರು ಒಬ್ಬ ಸರ್ಕಾರಿ ಡಾಕ್ಟರ್ ಆಗಿದ್ದರು. ರಿಟೈರ್ ಆದ ಮೇಲೆ ಬೆಂಗಳೂರಿನ ಬಸವನಗುಡಿ ಬಡಾವಣೆಯಲ್ಲಿ ನೆಲಸಿ ತಮ್ಮದೇ ಒಂದು ಸ್ವಂತ ಕ್ಲಿನಿಕ್ ಶುರು ಮಾಡಿಕೊಂಡಿದ್ದರು. ಬ್ರಿಟಿಷ್ ರಾಜ್ಯದ ಕಾಲದಲ್ಲಿ ಮೆಡಿಕಲ್ ಡಿಗ್ರಿ ಪಡೆದ್ದಿದ್ದರಿಂದ ಅಂತ ಕಾಣುತ್ತೆ ಅವರಂತೆಯೇ ಭಾನುವಾರದಂದು ಕ್ಲಿನಿಕ್ ತೆರೆಯುತ್ತಿರಲಿಲ್ಲ. ಆದರೆ ಅವರ ಅಂದಿನ ಸಮಯವನ್ನು ವ್ಯರ್ಥ ಮಾಡದೆ ಬಡ ಜನರ ಸೇವೆಗೆಂದು ಯಾವುದಾದರು ಸಂಘ ಸಂಸ್ಥೆಗಳ ಮೂಲಕ ಸುತ್ತಲಿನ ಹಳ್ಳಿಗಳಿಗೆ ಹೋಗಿ ಅಲ್ಲಿ ಜನರಿಗೆ ಚಿಕೆತ್ಸೆ ಕೊಡುತಿದ್ದರು. ಸ್ವಯಂ ಸೇವಕರಾಗಿ ಯಾವ ಹಣ ಸಂದಾಯವಿಲ್ಲದೆ ಇಡೀ ದಿನ ಹಳ್ಳಿ ಜನರ ಚಿಕಿತ್ಸೆಗೆ ಹೋಗುತ್ತಿದ್ದ ಅವರ ಜೊತೆ ಚಿಕ್ಕ ಹುಡುಗನಾದ ನನ್ನನ್ನೂ ಕರೆದುಕೊಂಡು ಹೋಗುತ್ತಿದ್ದರು. ಅಂತಹುದೇ ಒಂದು ಬೌಧ್ಧ ಅನುಯಾಯಿಗಳ ಸಂಸ್ಥೆಯ ಮೂಲಕ ನಾನು ತಂದೆಯವರೊಡನೆ ಹಳ್ಳಿಗಳಿಗೆ ಭೇಟಿಕೊಡುತ್ತಿದ್ದೆ. ಹಳ್ಳಿಯ ಜನರು ಹೆಚ್ಚು ಟಿಬೆಟ್ನಿಂದ ಬಂದ ನಿರಾಶ್ರಿತರು ಮತ್ತು ಬೌಧ್ಧ ಮತದವರು. ಬೌದ್ಧ ಮತದ ಸಂಪ್ರದಾಯಗಳನ್ನು ಕಣ್ಣಾರೆ ನೋಡಲು ನನಗೆ ಅದೊಂದೇ ಅವಕಾಶ ದೊರೆತಿದ್ದು ನನ್ನ ಜೀವನದಲ್ಲಿ ಅಂತ ಕಾಣುತ್ತೆ. ಅಂದಿನಿಂದಲೂ ಆ ಜನರ ಸರಳ ಜೀವನ ಮತ್ತು ಬುದ್ಧನ ಭೋದನೆಗಳು ಗೊತ್ತಿಲ್ಲದಂತೆ ನನ್ನ ಮೇಲೆ ಪ್ರಭಾವ ಬೀರಿದೆ ಅಂತ ಹೇಳಬಲ್ಲೆ.
ಆ ಸಂಸ್ಥೆಯ ಒಬ್ಬ ಬೌದ್ಧ ಗುರು ನಮ್ಮ ತಂದೆಗೆ ಕೃತಜ್ಞಾಪೂರಕವಾಗಿ ಕೊಟ್ಟ ಒಂದು ಪುಸ್ತಕ ನನಗೆ ಈಗಲೂ ನೆನಪಿದೆ. ಆ ಪುಸ್ತಕದ ಮುಖಪುಟದ ವಿನ್ಯಾಸದಲ್ಲಿ ಸೌಮ್ಯ ಮೂರುತಿ ಬುದ್ಧನ ಒಂದು ಚಿತ್ರ, ಅದರ ಮೇಲ್ಗಡೆ ದೊಡ್ಡಕ್ಷರಗಳಲ್ಲಿ ಮುದ್ರಿಸಿದ “ಧಮ್ಮಪದ” ಎನ್ನುವ ಶೀರ್ಷಿಕೆ. ಬೆಳೆಗ್ಗೆ ೫ ಗಂಟೆಗೆ ಮುಂಚೆ ಎದ್ದು ಕಾಫೀ ಕುಡಿದ ನಂತರ ಪ್ರತಿ ನಿತ್ಯವೂ ಗಮಕ ಹೇಳಿಕೊಳ್ಳುವುದರಲ್ಲೋ ಇಲ್ಲ ಏನಾದರೂ ಓದುವ ಅಭ್ಯಾಸವಿಟ್ಟುಕೊಂಡಿದ್ದ ನಮ್ಮ ತಂದೆ ಧಮ್ಮಪದ ಪುಸ್ತಕವನ್ನು ಓದಿ ತಮ್ಮ ಸುಂದರವಾದ ಕೈಬರಹದಲ್ಲಿ ಪುಟಗಳ ಮೇಲೆ ಟೀಕೆ, ಟಿಪ್ಪಣಿಗಳನ್ನು ಬರೆದಿಟ್ಟುಕೊಳ್ಳುತ್ತಿದ್ದರು. ಇಂಗ್ಲಿಷ್ನಲ್ಲಿದ್ದ ಈ ಪುಸ್ತಕ ಓದಲು ನನಗೆ ಸಿಕ್ಕಿದ್ದು ನಾನು ಪಿಯೂಸಿ ಅಥವಾ ಕಾಲೇಜಿನಲ್ಲಿದ್ದಾಗ. ಧಮ್ಮಪದ ಓದಲು ಶುರು ಮಾಡಿದ ನನಗೆ ಇದು ಬೌದ್ಧ ಧರ್ಮದ “ಗೀತೋಪದೇಶ” ಎಂದು ಅರಿವಾಗಲು ಹೆಚ್ಚುಕಾಲ ಹಿಡಿಯಲಿಲ್ಲ. ತಂದೆಯವರ ಮನಸೆಳೆದ ಬೌದ್ಧ ಧರ್ಮ ಮತ್ತು ಅದರ ಭೋದನೆಗಳನ್ನು ಓದಲು ನನಗೆ ತಾನಾಗಿಯೇ ಆಸಕ್ತಿ ಮೂಡಿತ್ತು.
ಧಮ್ಮಪದದ ಮತ್ತೊಂದು ಹೆಸರು “ಸತ್ಯದ ಭಂಡಾರ,” ಎನ್ನುವುದು ಖಂಡಿತ ಸೂಕ್ತ.
ದಮ್ಮಪದದಲ್ಲಿ ನೂರಾರು ಸತ್ಯದ ಭಂಡಾರವೇ ಅಡಗಿದೆ ಎನ್ನುವುದಕ್ಕೆ ನನಗಿಷ್ಟವಾದ ಒಂದೆರಡು ಭೋದನೆಗಳನ್ನು ಮಾತ್ರ ಇಲ್ಲಿ ಉದಾಹರಿಸಿದ್ದೀನಿ.
ದುರುಳರು ಎಂದೆಂದೂ ತಾವಾಗಿಯೇ ವಿನಾಶಗೊಳ್ಳುತ್ತಾರೆ.
ದುರುಳರು ಧರ್ಮನಿಷ್ಠರನ್ನು ಕಡೆಗಾಣಿಸಿದರೂ, ಕೊನೆಗೊಮ್ಮೆ ಹೂವರಳಿದ ಬಿದಿರಿನ ಗಿಡದಂತೆ ತಾವಾಗಿಯೇ ವಿನಾಶಗೊಳ್ಳುತ್ತಾರೆ.
ಈತನನ್ನು ದುಃಖ ಆಕ್ರಮಣಿಸಲಾರದು
ಕೋಪ ಬಿಡು. ಅಹಂಕಾರವನು ತೊರೆ. ಬಂಧನವನು ಬಿಡು. ಯಾರು ತನ್ನ ಹೆಸರು ಮತ್ತು ಸ್ವರೂಪಕ್ಕೆ ಆಕರ್ಷಿತನಾಗುವುದಿಲ್ಲವೋ, ಯಾರು ಪ್ರಾಪಂಚಿಕ ಪ್ರಜ್ಞೆಗಳಿಸುವವನೋ ಅಂತಹವನನ್ನು ದುಃಖ ಆಕ್ರಮಣಿಸಲಾರದು.
ಸಮಯ ಸಿಕ್ಕಾಗ ನೀವೂ ಸತ್ಯ ಭಂಡಾರವನು ಓದಿದರೆ ಹಂಚಿಕೊಳ್ಳಲು ನೂರಾರು ಸ್ಪಂದಿಸುವ ಬೌದ್ಧ ಧರ್ಮದ ಸುಭಾಷಿತಗಳು ಸಿಗುತ್ತವೆ. ಖಂಡಿತ ಓದಿ.
ಎಷ್ಟೋ ವರ್ಷಗಳ ನಂತರ ಅಮೇರಿಕಾದಲ್ಲಿ ಓದುತ್ತಿದ್ದಾಗ ನಾನು ಚೈನಾಗೆ ಹೋದಾಗಲೂ ಅಲ್ಲಿಯ ಬೌದ್ಧ ಸಂಪ್ರದಾಯಗಳನ್ನು ಹೆಚ್ಚು ಅರಿಯಲು ಅವಕಾಶ ದೊರಕಿತ್ತು. ಆ ಪ್ರವಾಸ ವೃತ್ತಾಂತ ಸಾಕಷ್ಟು ಮರೆತಿದ್ದರೂ ಅಚ್ಚಳಿಯದೆ ಉಳಿದಿರುವುದು ನಾನು ಅಲ್ಲಿನ ‘ಲಾಂಗ್ಮನ್ ಗವಿ’ಗಳು (Longmen Caves) ಎನ್ನುವ ಜಾಗಕ್ಕೆ ಭೇಟಿಕೊಟ್ಟಾಗ. ಚೀನಿಯರ ಶಿಲ್ಪಕಲೆಗೆ ಹೆಸರಾಂತ ಈ ತಾಣದಲ್ಲಿ ಸಾವಿರಾರು ಬುದ್ಧನ ಪ್ರತಿಮೆಗಳನ್ನು ಕೆತ್ತಿದ್ದಾರೆ. ಚೀನಿಯರ ಬುದ್ಧನ ಉಪಾಸನೆ ಕಂಡು ಬೆರಗಾದರೂ ಅವರ ಸಾರಭೂತವಾದ ನಂಬಿಕೆಗಳು ನಮಗಿಂತ ಭಿನ್ನವಾಗಿಲ್ಲ ಎಂದು ಅರಿಯುವುದರ ಜೊತೆಗೆ ಬುದ್ಧನ ಕೊಡುಗೆ ಎಷ್ಟು ವಿಸ್ತಾರವಾದದ್ದು ಎಂದು ಮನದಟ್ಟಾಗುವ ತಾಣವಿದು.
ಚೀನಿಯರ ಅಂಗಡಿಗೆ ಹೋದಾಗ ನಾನು ಕೊಂಡ ಒಂದು ಬುದ್ಧನ ವಿಗ್ರಹ ಇವತ್ತು ಕೂಡ ನನ್ನ ಒಂದು ಅಮೂಲ್ಯ ಸ್ವತ್ತು ಅಂತ ಅನಿಸುತ್ತದೆ. ನನಗೆ ಜ್ಞಾಪಕವಿರುವಂತೆ, ಸುಮಾರು ೨೫ ವರ್ಷಗಳ ಹಿಂದೆ ಬೇ ಏರಿಯಾದ ಸ್ಯಾನ್ ಹೋಸೆ ನಗರದಲ್ಲಿ ನೆಲೆಸಿದ ಕೆಲವು ದಿನಗಳಲ್ಲಿ ನಾನು ಮೊದಲು ಭೇಟಿಕೊಟ್ಟ ಧಾರ್ಮಿಕ ಸಂಸ್ಥೆ ಅಲ್ಲಿನ ‘ಪಾವೋ ಹುವಾ’ ಎನ್ನುವ ಬುದ್ಧನ ಮಂದಿರ. ಆ ಮಂದಿರದ ಬೌದ್ಧ ಗುರುಗಳು ಯಾವ ಮಂತ್ರ ಗುನುಗಿ ಕೊಳ್ಳುತ್ತಿದ್ದರೋ ಗೊತ್ತಿಲ್ಲ, ಆದರೆ ಆ ಪ್ರಶಾಂತ ವಾತಾವರಣದಲ್ಲಿ ಸಿಕ್ಕ ಮನಶ್ಶಾಂತಿ ಮತ್ತು ನೆಮ್ಮದಿ ಬೆಲೆಕಟ್ಟಲಾಗದ್ದು.
೧೫ ವರ್ಷಗಳ ಹಿಂದೆ ಆಗಿನ್ನೂ ಡಿಜಿಟಲ್ ಮಾಧ್ಯಮದಲ್ಲಿ ಪುಸ್ತಕಗಳು ಅಷ್ಟಿರಲಿಲ್ಲ. ಆದರೆ ಹುಟ್ಟುಹಬ್ಬಕ್ಕೆ ‘ಕಿಂಡಲ್ ಬುಕ್ ರೀಡರ್’ ಸಿಕ್ಕಿದ್ದು ನಿಧಿ ದೊರಕಿದಂತಾಗಿತ್ತು. ಏಕೆಂದರೆ ನಾನು ಮೊದಲು download ಮಾಡಿಕೊಂಡ ಎರಡು ಪುಸ್ತಕಗಳಲ್ಲಿ ಧಮ್ಮಪದ ಒಂದು ಮತ್ತೊಂದು ಮಹಾತ್ಮಾ ಗಾಂಧಿ ಆತ್ಮಚರಿತ್ರೆ. ಎರಡೂ ಪುಸ್ತಕಗಳು free download ಎನ್ನುವ ವಿಷಯ ಅಷ್ಟು ಮುಖ್ಯವಲ್ಲ. ಆದರೆ ಡಿಜಿಟಲ್ ಮಾಧ್ಯಮದಲ್ಲಿ ನನಗೆ ಮೊಟ್ಟಮೊದಲು ಓದಬೇಕೆನಿಸಿದ ಪುಸ್ತಕಗಳಲ್ಲಿ ಧಮ್ಮಪದವೇ ಮೊದಲು ಎನ್ನುವುದರಲ್ಲಿ ಅದರ ಪ್ರಭಾವ ಎಷ್ಟು ಎಂದು ಅರಿವಾಯಿತು.
ಬುದ್ಧನ ಪ್ರತಿಮೆಯನ್ನು ನೋಡಿದಾಗಲೆಲ್ಲ ನನಗೆ ಅರಿವಾಗುವುದು ಒಂದೇ ವಿಚಾರ: ಎಷ್ಟೇ ಅಲ್ಪನಾದರೂ ಪ್ರತಿಯೊಬ್ಬ ಮನುಷ್ಯನೂ ಬುದ್ಧನಂತೆಯೇ ಜ್ಞಾನೋದಯವನ್ನು ಪಡೆಯಲು ಸಾಧ್ಯ ಎನ್ನುವ ಒಂದು ಧರ್ಮಶ್ರದ್ಧೆ ಮತ್ತು ಅಚಲ ನಂಬಿಕೆ. ಜೀವನದ ಗುರಿ ಏನು ಎನ್ನುವ ಆಳವಾದ ಚಿಂತನೆ ಮತ್ತು ಆ ಜೀವನದಲ್ಲಿ ಉಂಟಾಗುವ ದುಃಖ ಮತ್ತು ನೋವಿನ ಕಾರಣಗಳನ್ನು ಅರಿವು ಮಾಡಿಕೊಡುವುದರಲ್ಲಿ ಬೌದ್ಧ ಧರ್ಮದ ಕೊಡುಗೆ ಅಪಾರ. ಹಾಗೆಯೆ ಪ್ರಕೃತಿಯ ಸೃಷ್ಠಿಯಲ್ಲಿ ಎಲ್ಲ ಪ್ರಾಣಿ ಜಂತುಗಳು ಒಂದೇ ಸ್ವರೂಪದ್ದು ಎಂದು ಅರಿವು ಮಾಡಿಕೊಟ್ಟ ಏಕೈಕ ಧರ್ಮ ಎನ್ನಬಹುದು. ಇಂದಿನ ಪೂರ್ಣಿಮೆಯಂದು ಬುದ್ಧನ ೨೫೮೦ನೇ ಹುಟ್ಟುಹಬ್ಬವನ್ನು ಆಚರಿಸುತ್ತ ಅವನ ಭೋದನೆಗಳನ್ನು ಮೆಲಕು ಹಾಕುವ. ಇಡೀ ಮಾನವಕುಲಕ್ಕೆ ಬುದ್ಧನ ಕೊಡುಗೆಯನ್ನು ಶ್ಲಾಘಿಸುತ್ತ, ವಿಷ್ಣುವಿನ ದಶಾವತಾರ ಎಂದು ಕೆಲವರು ಪರಿಗಣಿಸದಿದ್ದರೂ, ಬುದ್ಧ ಜಯಂತಿಯನ್ನು ಆಚರಿಸೋಣ.
ಕೂರ್ಮ ಜಯಂತಿಯ ಬಗ್ಗೆ ಬರೆದ ಕಿರು ಲೇಖನದ ಕೊಂಡಿ ಇಲ್ಲಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ