ಬದಲಾಗದ ಬ್ರಿಟಿಷ್ ರಾಜ ಮನೆತನದ ಮದುವೆಯ ವೈಭವ ಮತ್ತು ಭಾರತೀಯರ ಗುಲಾಮಗಿರಿ!
1981 ರಲ್ಲಿ ಪ್ರಪಂಚದ ಚರಿತ್ರಾತ್ಮಕ ಸುದ್ದಿಗಳಲ್ಲಿ ಒಂದಾದ ಪ್ರಿನ್ಸ್ ಚಾರ್ಲ್ಸ್ ಮತ್ತು ಡಯಾನಾ ಮದುವೆಯನ್ನು ಜ್ಞಾಪಿಸಿಕೊಂಡರೆ ರೊಚ್ಚಿಗೇಳುತ್ತದೆ ನನ್ನ ಮನ. ಆಗಿನ್ನೂ ನಾನು ಕಾಲೇಜಿನಲ್ಲಿ ಓದುತ್ತಿದ್ದೆ. ದೇಶಾಭಿಮಾನದ ಜೊತೆಗೆ ನಮ್ಮ ಸಂಕೃತಿಯ ಬಗ್ಗೆ ಗೌರವ ಮೊಳಕೆ ಒಡೆಯುವ ವಯಸ್ಸಲ್ಲ ಅದು. ಆದರೂ ಬ್ರಿಟಿಷರಿಂದ ಭಾರತಕ್ಕೆ ಆದ ಹಾನಿಯನ್ನು ಮನದಟ್ಟವಾಗುವಂತೆ ವಿವರಿಸುತ್ತಿದ್ದ ಪ್ರೊಫೆಸ್ಸರ್ ಒಬ್ಬರು ಅವರ ಬಳಿ ಇದ್ದ ಚರಿತ್ರೆ ಪುಸ್ತಕಗಳನ್ನು ನನಗೆ ಓದಲು ಕೊಡುತ್ತಿದ್ದರು. ಆ ಪುಸ್ತಕಗಳ ಮಹತ್ತರ ಪರಿಣಾಮ ನನ್ನ ಮೇಲೆ ಎಷ್ಟಿತ್ತು ಅಂದರೆ, ಬೇರೆ ವಿದ್ಯಾರ್ಥಿಗಳು ಸದಾ ವಿದೇಶಿಯರ ಜೀವನ ಶೈಲಿಯನ್ನು ನಕಲು ಮಾಡಿಕೊಂಡು ನಮ್ಮ ಸಂಸ್ಕೃತಿಯನ್ನು ಅವಹೇಳನ ಮಾಡುತ್ತಿದ್ದರೆ ನಾನು ಸದಾ ವಿರುದ್ಧವಾಗಿ ವಾದಿಸುತ್ತಿದ್ದೆ. ಪ್ರಪಂಚದ ಮುಕ್ಕಾಲು ಪಾಲು ಜನರು ಪ್ರಿನ್ಸ್ ಚಾರ್ಲ್ಸ್ ಮತ್ತು ಡಯಾನ ಮದುವೆಯ ವೈಭವವನ್ನು ಹೊಗಳಿ ಅದೊಂದು ಚರಿತ್ರಾತ್ಮಕ ಸುದ್ದಿಯೆಂದು ಪರಿಗಣಿಸಿದರೆ ನಾನು ವಿರುದ್ಧವಾಗಿ ವಾದಿಸಿದ್ದೆ. ಆ ಬ್ರಿಟಿಷ್ ರಾಜ್ಯದ ಅರಸರು ಭಾರತವನ್ನು ಮುನ್ನೂರು ವರ್ಷಗಳ ಕಾಲ ಕೊಳ್ಳೆಹೊಡೆದು ಸಂಗ್ರಹಿಸಿದ ಹಣದಲ್ಲಿ ಎಥೇಚ್ಚವಾಗಿ ಖರ್ಚು ಮಾಡಿ ಇಂಗ್ಲೆಂಡಿನ ರಾಜಕುಮಾರನ ಆ ಮದುವೆ ಪ್ರೀತಿಯ ಅದ್ಭುತ ಕತೆಯೆಂದು (fairy tale) ಪ್ರಸಾರ ಮಾಡಿದ್ದಲ್ಲದೆ ವಾಣಿಜ್ಯ ವಹಿವಾಟಿನಲ್ಲಿ ಮತ್ತಷ್ಟು ಹಣಗಳಿಸಿದ ವಂಚಕರೆಂದು ಸಮರ್ಥಿಸಿದ್ದೆ. ಸ್ವತಂತ್ರ ಗಳಿಸಿ ಮೂವತ್ತನಾಲ್ಕು ವರುಷಗಳೇ ಉರುಳಿದ್ದರು ಆ ವಂಚಕ ಅರಸೊತ್ತಿಗೆಯ ಮುಂದೆ ನಮ್ಮ ಗುಲಾಮಗಿರಿ ಕಡಿಮೆ ಆಗಲಿಲ್ಲವಲ್ಲ ಎಂದು ಕಳಕಳಿಯಲಿ ವಿವರಿಸಿದರು ಕೇಳುವ ಅಪೇಕ್ಷೆ ಯಾರಿಗೂ ಇರಲಿಲ್ಲ. 2018ರ ವೆಚ್ಚದಲ್ಲಿ ಅಂದಿನ ಆ ದಿವಸದ ಮದುವೆಗೆ 70 ಮಿಲಿಯನ್ ಡಾಲರು ಖರ್ಚಾಯಿತಂತೆ. ಪ್ರಿನ್ಸ್ ಚಾರ್ಲ್ಸ್ ಆದರೇನು, ಅವನ ಕುಮಾರರಾದ ಪ್ರಿನ್ಸ್ ವಿಲಿಯಮ್ ಮತ್ತು ಪ್ರಿನ್ಸ್ ಹ್ಯಾರಿ ಆದರೇನು, ಅಂತಹ ವಂಚಕ ವಂಶಜರಿಗೆ ನಾವು ಮತ್ತೆ ಮನ್ನಣೆ ತೋರುತ್ತಿರುವುದು ಒಂದು ವಿಷಾಧಕರ ಸಂಗತಿ.
________________
ಮೂವತ್ತೇಳು ವರ್ಷಗಳ ನಂತರ ಮುಂದಿನ ಶನಿವಾರ ಬರಲಿದೆ ಬ್ರಿಟಿಷ್ ಅರಸೊತ್ತಿಗೆಯ ಮತ್ತೊಂದು ಮದುವೆಯ ಮೆರವಣಿಗೆ. ಪ್ರಪಂಚವೇ ಎದುರು ನೋಡುತ್ತಿರುವ 21 ನೇ ಶತಮಾನದ ಮತ್ತೊಂದು ವೈಭವದ ಮದುವೆ. ಈ ಬಾರಿ ಪ್ರಿನ್ಸ್ ಹ್ಯಾರಿ ಮತ್ತು ಅಮೆರಿಕದ ಮೇಘನ್ ಮಾರ್ಕಲ್ ದಂಪತಿಗಳದು! ಈ ಮದುವೆಗೆ ವೆಚ್ಚ ಕೇವಲ ೪೫ ಮಿಲಿಯನ್ ಡಾಲರುಗಳಷ್ಟೇ. ಪ್ರಿನ್ಸ್ ಚಾರ್ಲ್ಸ್ ಮತ್ತು ಡಯಾನ ಮದುವೆಗಿಂತ ಕಡಿಮೆ ಖರ್ಚು ಅಂತ ಬ್ರಿಟಿಷ್ ಪ್ರಜೆಗಳು ನೆಮ್ಮದಿಯ ಉಸಿರು ಬಿಡುತ್ತಿದ್ಧಾರೆ. ಆದರೆ ಭಾರತೀಯರು ಆಗಲೇ ಈ ದಂಪತಿಗಳನ್ನು ಬರಮಾಡಿಕೊಳ್ಳಲು ಉಸಿರು ಹಿಡಿದು ಕೆಲಸ ಮಾಡುತ್ತಿದ್ದಾರೆ ಎಂದು ಅನಿಸುತ್ತಿದೆ. ಅಡ್ಡಬಿದ್ದೆ ರಾಜರೇ ಎಂದು ಆಗಲೇ ಕೆಂಪು ರತ್ನಗಂಬಳಿಯನ್ನು ಹಾಸಲು ಅಣಿಯಾಗುತ್ತಿದ್ದರೆ ಮತ್ತು ಮುಂದಿನ ವರ್ಷ ಭಾರತದ ಪಿತಾಮಹ ಗಾಂಧಿಯ 150ನೇ ಜಯಂತಿಗೆ ಯೋಗ್ಯ ಮತ್ತು ಗೌರವ ಅಥಿತಿಗಳಾಗಿ ಬ್ರಿಟಿಷ್ ರಾಜಮನೆತನಕ್ಕೆ ಈಗಲೇ ಆಮಂತ್ರಣ ತಯಾರಾಗಿದ್ದರೆ ಅತಿಶಯೋಕ್ತಿ ಎನಿಸಲಾರದು. ಮುಂಬೈನ ಪ್ರಸಿದ್ಧ ಡಬ್ಬಾವಾಲರ ಗುಂಪು ಪ್ರಿನ್ಸ್ ಹ್ಯಾರಿ ಮತ್ತು ಮೇಘನಳ ಮದುವೆಯ ದಿನ ಬಡಜನರಿಗೆ ಸಿಹಿ ಹಂಚುವುದರ ಜೊತೆಗೆ ಮಹಾರಾಷ್ಟ್ರದ ಸಾಂಪ್ರದಾಯಿಕ ಉಡುಗೆಗಳನ್ನು ರಾಜ ಮನೆತನಕ್ಕೆ ತಲುಪಿಸುವುದಂತೆ. ಏಕೆಂದರೆ ಪ್ರಿನ್ಸ್ ಚಾರ್ಲ್ಸ್ ಒಮ್ಮೆ ಮುಂಬೈ ಭೇಟಿಕೊಟ್ಟಾಗ ಡಬ್ಬಾವಾಲರು ಕಷ್ಟಪಟ್ಟು ೨ ಲಕ್ಷ ಮುಂಬೈ ವಾಸಿಗಳಿಗೆ ಪ್ರತಿದಿನ ಟಿಫನ್ ಕ್ಯಾರಿಯರ್ ಸರಬರಾಜು ಮಾಡುವುದನ್ನು ನೋಡಿ ಆಕರ್ಷಿತನಾಗಿ ತನ್ನ ಎರಡನೇ ಮದುವೆಗೆ (ಕಮಿಲ್ಲ ಜೊತೆ) ಅವರನ್ನು ಲಂಡನ್ ಗೆ ಆಮಂತ್ರಿಸಿದ್ದನಂತೆ. ಬಡಜನರ ಪ್ರೇಮ ಮತ್ತು ಮುಗ್ದತೆ ಕೈ ಕಟ್ಟಿ ನಿಂತ ಗುಲಾಮಗಿರಿಗಿಂತ ಶ್ರೇಷ್ಠವಾದದ್ದು ಎಂದು ನಮಗೆ ಅರಿವು ಮಾಡಿಕೊಟ್ಟ ಡಬ್ಬಾವಾಲಾ ಗುಂಪಿಗೆ ನನ್ನ ನಮಸ್ಕಾರ! ಗಾಂಧಿ ತಾತನೂ ಡಬ್ಬಾವಾಲರಿಗೆ ಶುಭ ಕೋರುವುದರಲ್ಲಿ ನನಗೆ ಸಂಶಯವಿಲ್ಲ. ಆದರೆ ಇಂತಹ ಸುದ್ದಿಗಳನ್ನು ಅಮೇರಿಕ ಮತ್ತು ಪ್ರಪಂಚದ ಯಾವುದೇ ಟಿವಿ ಸಂಸ್ಥೆಗಳಾಗಲಿ ಪತ್ರಿಕೆಗಳಾಗಲಿ ಪ್ರಚುರಪಡಿಸುವುದಿ
ಲ್ಲ.
ಲ್ಲ.
ಅರವತ್ತೇಳು ವರ್ಷಗಳ ನಂತರ (2048ರಲ್ಲಿ) ಪ್ರಿನ್ಸ್ ಚಾರ್ಲ್ಸ್ ನ ಮೊಮ್ಮಕ್ಕಳ (ಜಾರ್ಜ್, ಶಾರ್ಲೆಟ್ಟ್, ಮತ್ತು ಇತ್ತೀಚಿಗೆ ಹುಟ್ಟಿದ ಗಂಡು ಮಗು ಲೂಯಿಸ್) ಮದುವೆಯೂ ಅಷ್ಟೇ ವೈಭವದಿಂದ ನೆಡಯುವದರಲ್ಲಿ ಯಾರಿಗೂ ಸಂಶಯವಿಲ್ಲ. ಆ ಸಮಯಕ್ಕೆ ಭಾರತ ಬ್ರಿಟಿಷರಿಂದ ಸ್ವತಂತ್ರ ಗಳಿಸಿ ಸರಿಯಾಗಿ ನೂರು ವರ್ಷಗಳಾಗಿರುತ್ತದೆ. ಶತಾಭ್ದಿ ಜೊತೆಗೆ ಬ್ರಿಟಿಷ್ ರಾಜ್ಯದ ಗುಲಾಮಗಿರಿಯನ್ನೂ ಆಚರಿಸಬಹುದು. ಆಗಲಾದರೂ ಮುಂದಿನ ಜನಾಂಗದ ಭಾರತೀಯರಿಗೆ ಬ್ರಿಟಿಷ್ ಚಟ ಬಿಟ್ಟು ಹೋಗಿರಬಹುದೆಂದು ನೀವು ಅಂದುಕೊಂಡರೆ ಮತ್ತೊಮ್ಮೆ ಯೋಚಿಸಿ.
ಬ್ರಿಟಿಷ್ ಅರಸೊತ್ತಿಗೆಯನ್ನು ನೆಡಸಲು ಪ್ರತಿ ವರ್ಷವೂ ಸುಮಾರು 368 ಮಿಲಿಯನ್ ಡಾಲರುಗಳು ಬೇಕಾಗುತ್ತವಂತೆ. ಅಂದರೆ ದಿವಸಕ್ಕೆ ಒಂದು ಮಿಲಿಯನ್ ಡಾಲರುಗಳು. ಇಷ್ಟೊಂದು ಹಣ ಎಲ್ಲಿಂದ ಬರುತ್ತದೆ? ರಾಣಿ ಎಲಿಝಬೆತ್ ಳ ಖಾಸಗಿ ಸಂಪತ್ತು ಸುಮಾರು 414 ಮಿಲಿಯನ್ ಡಾಲರುಗಳು. ಇವು ತಲತಲಾಂತರಿದಿಂದ ಗಳಿಸಿದ (ಅಥವಾ ಕೊಳ್ಳೆಹೊಡೆದ ಸಂಪತ್ತು ಎನ್ನಬಹುದು) ಅರಮನೆಗಳು, 20 ಸಾವಿರ ಹೆಕ್ಟರ್ ಭೂಮಿ, ವಾಣಿಜ್ಯ ವಿಭಾಗಗಳು, ಇತರ ದೇಶಗಳಲ್ಲಿ ಕೂಡಿಟ್ಟಿರುವ ಹಣ ಹೀಗೆ ನೂರಾರು ತರಹದ ಬಂಡವಾಳದಿಂದ ಬರುವ ಆದಾಯಗಳು ಇದರಲ್ಲಿ ಸೇರಿವೆ. ಜೊತೆಗೆ ಬ್ರಿಟಿಷ್ ಸರಕಾರ ಈ ಸಂಪತ್ತಿನಿಂದ ಬರುವ ಶೇಖಡ 15 ರಷ್ಟು ಲಾಭವನ್ನು ರಾಣಿ ಸಹಾಯಧನವೆಂದು ಅರಸೊತ್ತಿಗೆ ಕೊಡುತ್ತದೆ. ಅಂದರೆ ಪ್ರತಿ ವರ್ಷ ಬ್ರಿಟಿಷ್ ಪ್ರಜೆಗಳು 50 ಮಿಲಿಯನ್ ಡಾಲರ್ನಷ್ಟು ತಮ್ಮ ಮೇಲೆ ಹೊರಸಿದ ತೆರಿಗೆ ಮೂಲಕ ರಾಣಿಗೆ ಕೊಡುತ್ತಾರೆ. ಅಂದರೆ ಬ್ರಿಟಿಷ್ ರಾಜ ಮನೆತನಕ್ಕೆ ನೂರಾರು ವರ್ಷಗಳಿಂದ ಆದಾಯವಿದ್ದು ಮುಂದೆ ನೂರಾರು ವರ್ಷಗಳ ಕಾಲ ಖರ್ಚು ಮಾಡಿದರೂ ಸುಖವಾಗಿ ಜೀವನ ಕಳೆಯಬಹುದು. ಇಂತಹ ಸ್ಥಿತಿಯಲ್ಲಿ ಒಂದು ಮದುವೆಗೆ 45 ಮಿಲಿಯನ್ ಡಾಲರು ಖರ್ಚು ಮಾಡುವುದು ಅಷ್ಟೇ ಸುಲಭವೆಂದಾಯಿತು. ಕೊಳ್ಳೆಹೊಡೆದ ಕುಬೇರರಿಗೆ ಹಣದ ಚಿಂತೆ ಇರಲು ಸಾಧ್ಯವೇ? ಆದರೆ ಬಡಬಗ್ಗರಿಗೆ ಮತ್ತು ಆಫ್ರಿಕಾ ದೇಶದ ಬಡಜನಾಂಗಕ್ಕೆ ಔದಾರ್ಯದಲ್ಲಿ ಕೊಡುವ ಹಣ ಮತ್ತು ನಿಧಿ ಸಂಗ್ರಹದಲ್ಲಿ ತೊಡಗಿಕೊಂಡು ಬ್ರಿಟಿಷ್ ಅರಸೊತ್ತಿಗೆ ಎಲ್ಲರ ಬೆಂಬಲ ಗಳಿಸಿದೆ. ಆದರೆ ಪ್ರದರ್ಶನಾ ಅನುಷ್ಠಾನದಲ್ಲಿ ಕೆದಕಿದರೆ ಸಿಗುವುದು ಬರಿ ಕುಟಿಲತೆಯೇ. ಬೆವರು ಸುರಿಸಿ ಹಣ ಕೂಡಿಸಿಟ್ಟವರು ಯಾರು ಕೂಡ ಮಧುಮಗಳ ಉಡುಗೆಯೊಂದಕ್ಕೆ 135,000 ಡಾಲರುಗಳನ್ನು ಖರ್ಚು ಮಾಡಲು ಸಾಧ್ಯವೇ. ಮುಂದಿನ ಶನಿವಾರ ಮೇಘನ್ ತೊಡುವ ಈ 135 ಸಾವಿರ ಡಾಲರಿನ ಗೌನ್ ನೋಡಿ ನೀವೇ ನಿರ್ಧರಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ