ಮಂಗಳವಾರ, ಜೂನ್ 19, 2018

ಮೈಸೂರು ರಾಜಮನೆತನದ ಚಿಕ್ಕ ದೇವ ರಾಜ, ವಿಶಾಲಾಕ್ಷ ಪಂಡಿತನೆಂಬ ಜೈನ ಪ್ರಧಾನ ಮಂತ್ರಿ ಮತ್ತು ಜಂಗಮರ ಕಗ್ಗೊಲೆ.

ಮೈಸೂರು ರಾಜಮನೆತನದ ಚಿಕ್ಕ ದೇವ ರಾಜ, ವಿಶಾಲಾಕ್ಷ ಪಂಡಿತನೆಂಬ ಜೈನ ಪ್ರಧಾನ ಮಂತ್ರಿ ಮತ್ತು ಜಂಗಮರ ಕಗ್ಗೊಲೆ.


16 ನೇ ಶತಮಾನದ ಅಂತ್ಯದಲ್ಲಿ ನಂಜನಗೂಡಿನಲ್ಲಿ ನಡೆದ ಸಮೂಹ ಕೊಲೆಯ ಒಂದು ಐತಿಹಾಸಿಕ ಘಟನೆ ಈ ಬ್ಲಾಗಿನ ಕಥಾವಸ್ತು.  ಇದುವರೆಗೂ ಯಾರು ಅದರ ಬಗ್ಗೆ ಹೆಚ್ಚಿನ ವಿವರಣೆ ಕೊಟ್ಟಿಲ್ಲ.  ನಾನು ಇತ್ತೀಚಿಗೆ ಓದುತ್ತಿದ್ದ “ಮೈಸೂರು ಗೇಜ್ಝೆಟಿಯರ್” ನಲ್ಲಿ ಈ ಘಟನೆಯ ಬಗ್ಗೆ ಕೂಲಂಕಷವಾಗಿ ಸಂಶೋಧನೆ ಮಾಡಿದ ಮೇಲೆ ನನಗೂ ಸಾಕಷ್ಟು ಕುತೂಹಲ ಹುಟ್ಟಿತು.  1897 ರಲ್ಲಿ ಬ್ರಿಟಿಷ್ ಆಡಳಿತದಲ್ಲಿ ಪ್ರಕಟವಾದ ಈ “ಮೈಸೂರು ಗೇಜ್ಝೆಟಿಯರ್” ಅದಕ್ಕಿಂತಲೂ ಮುಂಚಿನ ಹಲವಾರು ಪುಸ್ತಕ ಮತ್ತು ಸಂಶೋಧನೆಯ ಮೇಲೆ ಆಧಾರಿತವಾದ ಎರಡೆನೇ ಮುದ್ರಣವಾದ್ದರಿಂದ ಸಾಕಷ್ಟು ಧೀರ್ಘವಾಗಿದೆ.  ಮೈಸೂರಿನ ಇತಿಹಾಸ, ಭೂಗೋಳ, ಸಂಸ್ಕೃತಿ, ಧಾರ್ಮಿಕ ಹಿನ್ನಲೆ, ಹೀಗೆ ಎಲ್ಲ ವಿಚಾರಗಳ ಬಗ್ಗೆ ಒಂದು ಅತ್ತ್ಯುನ್ನತ ಮಾಹಿತಿಯನ್ನು ನಾವು ಇದರಲ್ಲಿ ಓದ ಬಹುದು.

ಈ ದುರಂತ ಕಥೆಯ ಹಿನ್ನಲೆಯನ್ನು ಅರಿಯಬೇಕಾದರೆ ಒಡೆಯರ್ ರಾಜಮನೆತನದ ಈ ಕೆಳಗಿನ ಸಂಕ್ಷಿಪ್ತ ಇತಿಹಾಸವನ್ನು ತಿಳಿದುಕೊಳ್ಳ ಬೇಕಾಗುತ್ತದೆ.   1399 ರಲ್ಲಿ ಪ್ರಾರಂಭವಾದ ಮೈಸೂರಿನ ಅರಸಾಳ್ವಿಕೆಯಲ್ಲಿ ಹಲವಾರು ತಲೆಮಾರಿನ ರಾಜರು ಬಂದು ಹೋಗಿದ್ದಾರೆ.  ಆದರೆ ವಿಷಯಕ್ಕೆ ಸಂಭಂದಿಸಿದ ರಾಜರಲ್ಲಿ ಬೋಳ ಚಾಮ ರಾಜ ಒಡೆಯರ್ ಒಬ್ಬರು.  ಬೋಳ ಚಾಮ ರಾಜ ಒಡೆಯರ್ (1571 - 1576)  ಐದು ವರ್ಷ ಮೈಸೂರ್ ರಾಜ್ಯಭಾರ ಮಾಡಿದರು. ಅವರನ್ನು ಬೋಳ ಎಂದು ಕರೆಯಲು ಕಾರಣ: ಅವರಿಗೆ ತಲೆಯ ಮೇಲೆ ಕೂದಲಿರಲಿಲ್ಲ. ಅವರ ಮೊಮ್ಮಗ ದೊಡ್ಡ ದೇವ ರಾಜ ಮತ್ತು ರಾಜಮನೆತನದ ಮತ್ತೊಂದು ಶಾಖೆಯಲ್ಲಿ ಹುಟ್ಟಿದ ಮರಿಮೊಮ್ಮಗ ಚಿಕ್ಕ ದೇವ ರಾಜ, ಇವರಿಬ್ಬರು ಸುಮಾರು ಒಂದೇ ವಯಸ್ಸಿನ ಹುಡುಗರು. ಕಾರಣಾಂತರಗಳಿಂದ ಚಿಕ್ಕ ದೇವ ರಾಜನ ತಂದೆಯನ್ನು ಕಾರಾಗೃಹದಲ್ಲಿ ಇಡಲಾಗಿತ್ತು. ಬೋಳ ಚಾಮರಾಜರ ನಂತರ ಹಲವಾರು ರಾಜರು ಮೈಸೂರಿನ ರಾಜ್ಯಭಾರ ಮಾಡಿದರು.   ಅವರುಗಳಲ್ಲಿ 21 ವರ್ಷ ರಾಜ್ಯಭಾರ ಮಾಡಿದ  ರಣಧೀರ ಕಂಠೀರವ ನರಸ ರಾಜ ಒಡೆಯರ್ (1638-1659) ಮುಖ್ಯರು.  ಮಕ್ಕಳಿರದ ಕಾರಣ ನರಸ ರಾಜ ಒಡೆಯರ್ ಮೃತರಾದ ಮೇಲೆ 32 ವರುಷದವನಾದ ದೊಡ್ಡ ದೇವ ರಾಜನನ್ನು ಮೈಸೂರಿನ ರಾಜನನ್ನಾಗಿ ಆರಿಸಲಾಯಿತು. ಅವನಷ್ಟೇ ಸುಂದರನೂ, ಬುದ್ಧಿವಂತನು, ಸಮವಯಸ್ಕನೂ ಆದ ಚಿಕ್ಕ ದೇವ ರಾಜನನ್ನು ತಂದೆ ಕಾರಾಗೃಹದಲ್ಲಿ ಬಂದಿಯಾದ ಕಾರಣ ಅವನನ್ನು ರಾಜಪದವಿಗೆ ಪರಿಗಣಿಸಲಿಲ್ಲ.  1659 ರಿಂದ 1672 ರ ವರೆಗು ಮೈಸೂರಿನ ರಾಜನಾದ ದೊಡ್ಡ ದೇವ ರಾಜರ ಆಡಳಿತದಲ್ಲಿ ಸಾಕಷ್ಟು ಸುಧಾರಣೆಗಳಾಯಿತು.  ರೈತ ಕುಟುಂಬಗಳಿಗೆ ಕಂದಾಯ ಮತ್ತು ಸುಂಕಗಳಿಂದ ಪರಿಹಾರ ಕೊಡುವುದರ ಜೊತೆಗೆ ಬ್ರಾಹ್ಮಣ ಕುಟುಂಬಗಳಿಗೆ ಭೂದಾನ ಮತ್ತು ಭೂಮಾನ್ಯ ಕೊಡುವ ಪದ್ಧತಿ ಕೂಡ ಬಂದಿತು.  ಜೊತೆಗೆ ಪಕ್ಕದ ರಾಜ್ಯದ ಮದುರೈ ನಾಯಕರ ಜೊತೆ ಕೆಲವು ಹೋರಾಟಗಳಲ್ಲಿ ಅನೇಕ ಪ್ರಾಂತ್ಯಗಳನ್ನು ಗೆದ್ದು ಮೈಸೂರಿನ ರಾಜ್ಯವನ್ನು ವಿಸ್ತರಿಸುವುದರಲ್ಲಿ ಸಫಲರಾದರು.  ದೊಡ್ಡ ದೇವ ರಾಜರು ಮಕ್ಕಳಿಲ್ಲದೆ ಮೃತರಾದಾಗ, ರಾಜನ ಸ್ಥಾನಕ್ಕೆ ಮೊದಲ ಬಾರಿಗೆ ಉತ್ತೀರ್ಣನಾಗದ ಚಿಕ್ಕ ದೇವ ರಾಜ ಎರಡನೇ ಬಾರಿಗೆ ಚುನಾಯಿಸಲ್ಪಟ್ಟು 1672 ರಲ್ಲಿ ಮೈಸೂರಿನ ಅರಸರಾದರು.  


ಚಿಕ್ಕ ದೇವ ರಾಜನ ಬಾಲ್ಯ, ಮಿಕ್ಕೆಲ್ಲ ಒಡೆಯರ್ ಮನೆತನದ ರಾಜರಂತೆ ಹೋಲಿಕೆಯಿಲ್ಲದ ಬಾಲ್ಯವೆನ್ನಬಹುದು.  ತಂದೆಯಿಂದ ದೂರವಾಗಿ ಒಡನಾಡಿಗಳಿಲ್ಲದ ಬಾಲ್ಯ.  ಆದರೆ ಈ ನೀರಸ ಬಾಲ್ಯದಲ್ಲಿಯೂ ಪ್ರಕಾಶಮಾನವೆಂಬಂತೆ ಚಿಕ್ಕ ದೇವ ರಾಜನಿಗೆ ದೊರೆತಿದ್ದು ಅವನ ಸಮವಯಸ್ಕನಾದ ವಿಶಾಲಾಕ್ಷ ಪಂಡಿತ ಎನ್ನುವ ಒಬ್ಬ ಜೈನ ಹುಡುಗನ ಸ್ನೇಹ.  ಇಬ್ಬರೂ ಅನ್ಯೋನ್ಯ ಗೆಳೆಯರಂತೆ ಬೆಳದ ಕಾರಣವಿರಬೇಕು ಒಬ್ಬರ ಸಾಮರ್ಥ್ಯವನ್ನು ಮತ್ತೊಬ್ಬರು ಅರ್ಥ ಮಾಡಿಕೊಂಡಿದ್ದರು.  ಚಿಕ್ಕ ದೇವ ರಾಜ ಒಂದಲ್ಲ ಒಂದು ದಿನ ಮೈಸೂರಿನ ರಾಜನಾಗುವ ಭರವಸೆಯನ್ನು  ಚಿಕ್ಕಂದಿನಲ್ಲೇ ಮನಗಂಡಿದ್ದ ವಿಶಾಲಾಕ್ಷ.  ಒಂದು ವೇಳೆ ಈ ಕನಸು ನನಸಾದರೆ, ಅನಾಸಕ್ತ ನಂಬಿಕೆಯಲ್ಲದಿದ್ದರೂ, ಸ್ವಾರ್ಥತೆಯಲ್ಲಿ ವಿಶಾಲಾಕ್ಷ ತನ್ನನ್ನು ಪ್ರಧಾನ ಮಂತ್ರಿಯಾಗಿ ಆಯ್ಕೆ ಮಾಡಲು ತನ್ನ ಗೆಳೆಯನಿಗೆ ಅಪ್ಪಣೆ ಮಾಡಿದ್ದ. ವಿಶಾಲಕ್ಷನ ಮನೋಸ್ಥೈರ್ಯದಲ್ಲಿ, ಚಿಕ್ಕದೇವ ರಾಜನ ಬಲದಲ್ಲಿ ಪರಸ್ಪರ ನಂಬಿಕೆಯಿಟ್ಟು ಬೆಳದ ಗೆಳೆಯರಿವರು.

ಚಿಕ್ಕ ದೇವ ರಾಜ ಮೈಸೂರಿನ ಅರಸನಾದ ವಾಸ್ತವಿಕತೆಯಲ್ಲಿ ವಿಶಾಲಾಕ್ಷ ಪ್ರಧಾನಮಂತ್ರಿಯಾದದ್ದು ಅಷ್ಟೇ ಸಂಭವನೀಯವಾಗಿತ್ತು. ಚಿಕ್ಕ ದೇವ ರಾಜನ ಮೊದಲ ಹೆಜ್ಜೆ ವಿಶಾಲಾಕ್ಷ ಪಂಡಿತನನ್ನು ಪ್ರಧಾನ ಮಂತ್ರಿಯಾಗಿ ನೇಮಿಸುವುದಾಗಿತ್ತು.  ಪ್ರಜೆಗಳು ಚಿಕ್ಕ ದೇವ ರಾಜನನ್ನು ವಿಧಿಲಿಖಿತ ನಿಯಮವೋ ಎನ್ನುವಂತೆ ತಮ್ಮ ರಾಜನೆಂದು ಪರಿಗಣಿಸಿದರೂ ವಿಶಾಲಾಕ್ಷ ಪಂಡಿತನನ್ನು ಅಷ್ಟೇ ಆದರದಿಂದ ಬರಮಾಡಿಕೊಳ್ಳಲಿಲ್ಲ.  ಜೈನ ಮತದವನೆಂದಿರಬಹುದು ಅಥವ ರಾಜ್ಯಾಡಳಿತದಲ್ಲಿ ವ್ಯವಹಾರ ಕೌಶಲವಿಲ್ಲವೆಂದೋ ಒಟ್ಟಿನಲ್ಲಿ ಎಲ್ಲ ಪ್ರಜೆಗಳಿಗೂ ಒಮ್ಮತವಿಲ್ಲದ ಪ್ರಧಾನಮಂತ್ರಿ ಪಟ್ಟವನ್ನು ವಿಶಾಲಾಕ್ಷ ಸ್ವೀಕರಿಸಿದ.  ಆದರೆ ಕೆಲವೇ ದಿನಗಳಲ್ಲಿ ತನ್ನ ದಕ್ಷ ಮತ್ತು ನ್ಯಾಯಸಮ್ಮತವಾದ ಕೆಲಸಗಳಿಂದ ಪ್ರಜೆಗಳ ಮನಗೆದ್ದು ಎಲ್ಲರನ್ನು ಒಲಿಸಿಕೊಂಡ ವಿಶಾಲಾಕ್ಷ.  ಅದೇ ಸಮಯದಲ್ಲಿ ಉತ್ತರ ಕರ್ನಾಟದ ಬಿಜಾಪುರ್ ಪ್ರಾಂತ್ಯದಲ್ಲಿ ಶಿವಾಜಿಯ ಸೈನ್ಯದ ಬಲ ಕಡಿಮೆಯಾದ್ದರಿಂದ, ಚಿಕ್ಕ ದೇವ ರಾಜ ಹಲವಾರು ಕಾಳಗಗಳನ್ನು ಗೆದ್ದು ಮೈಸೂರು ರಾಜ್ಯವನ್ನು ಉತ್ತರಕ್ಕೆ ವಿಸ್ತರಿಸಿದ.  ಒಟ್ಟಿನಲ್ಲಿ, ಈ ಎಲ್ಲ ಪ್ರಸಂಗಗಳು ಚಿಕ್ಕ ದೇವ ರಾಜನ ಬಲ ಮತ್ತು ವಿಶಾಲಾಕ್ಷನ ಹಣಕಾಸಿನ ದೃಷ್ಟಿಯನ್ನು ಸಾಬೀತು ಪಡಿಸಿದವು.  ಮುಂದೆ ಹತ್ತು ವರ್ಷಗಳ ಅವಧಿಯಲ್ಲಿ ಹೊಸ ಹೊಸ ಆರ್ಥಿಕ ಬದಲಾವಣೆಗಳನ್ನು ಜಾರಿ ಮಾಡಲಾಯಿತು.  ಆದರೆ ರಾಜ್ಯದ ಆಡಳಿತದಲ್ಲಿ ವೆಚ್ಚವೇ ಜಾಸ್ತಿಯಾದ ಕಾರಣ ಮತ್ತಷ್ಟು ಹೊಸ ತೆರಿಗೆಗಳನ್ನು ಸೂಚಿಸಲಾಯಿತು.  ಮೊದಲಿಂದಲೂ ರೈತರು ತಮ್ಮ ಫಸಲಿನ ಇಳುವರಿಯಲ್ಲಿ ಆರಾಂಶ (ಆರು ಮಣಕ್ಕೆ ಒಂದು ಮಣ) ರಾಜ್ಯದ ಬೊಕ್ಕಸಕ್ಕೆ ತೆರಬೇಕಾಗಿತ್ತಾದರೂ ಅದನ್ನು ಹೆಚ್ಚಿಸಲು ಚಿಕ್ಕ ದೇವ ರಾಜನಿಗೆ ಮನಸ್ಸಿರಲಿಲ್ಲ.  ಅದರ ಬದಲು ಹಲವಾರು ಹೊಸ ಹೊಸ ಭೂಕಂದಾಯ ಮತ್ತು ತೆರಿಗೆಗಳನ್ನು ರೈತರ ಮೇಲೆ ಹೇರಿದಾಗ ಸಹಜವಾಗಿಯೇ ರೈತರಿಗೆ ಅಸಮಾಧಾನ ತಂದಿತ್ತು.  ಆದರೆ ರೈತರಂತೆ ಭೂ ಒಡೆಯರಾಗಿದ್ದ ಸೈನಿಕರಿಗೆ ತೆರಿಗೆಯಲ್ಲಿ ವಿನಾಯಿತಿ ಕೊಡುವ ಪದ್ಧತಿಯನ್ನು ಜಾರಿಗೆ ತಂದದ್ದು ಮತ್ತಷ್ಟು ಘರ್ಷಣೆಗೆ ದಾರಿ ಮಾಡಿಕೊಟ್ಟಿತು.  ಬಿಗಡಗೊಂಡ ಆರ್ಥಿಕ ಸ್ಥಿತಿಯ ಬಿಸಿ ಸಾಲದು ಎನ್ನುವಂತೆ ಈ ಘರ್ಷಣೆಯಲ್ಲಿ ರೈತರ ಪರವಾಗಿ ಭಾಗವಹಿಸಿದವರಲ್ಲಿ ವೀರಶೈವ ಮಠಾಧಿಪತಿಗಳು ಮತ್ತು ಜಂಗಮರು ಸಾರ್ವಜನಿಕರ ಗಮನ ಸೆಳೆದರು.  ಊರೂರು ಸುತ್ತುವ ಜಂಗಮರು ಕಂಗಾಲಾದ ರೈತರ ದುಃಖಗಳನ್ನು ಕೆಲವೊಮ್ಮೆ ಕಣ್ಣಾರೆ ಕಂಡಂತೆ, ಕೆಲವೊಮ್ಮೆ ಉತ್ಪ್ರೇಕ್ಷಿಸಿ, ಕೆಲವೊಮ್ಮೆ ತಮ್ಮ ಸ್ವಾರ್ಥಕ್ಕಾಗಿ ಉಪಯೋಗಿಸಿಕೊಳ್ಳುವುದು ಪ್ರಧಾನ ಮಂತ್ರಿ ವಿಶಾಲಾಕ್ಷನಿಗೆ ಒಂದು ನುಂಗಲಾರದ ತುತ್ತಿನಂತೆ ಆಗಿತ್ತು.  ವರುಷಗಳು ಉರುಳಿದರೂ ಕೊನೆಗಾಣದ ಈ ತಕರಾರಿನ ಅಂತಿಮ ಘಟ್ಟ ಮುಟ್ಟಿದ್ದು  ರೈತರು ತಾವು ನೆಲವನ್ನೇ ಉಳುವುದಿಲ್ಲ ಎಂದು ಘೋಷಣೆ ಮಾಡಿದಾಗ.  ರೈತರು ತಮ್ಮ ಹಳ್ಳಿಗಳನ್ನು ಬಿಟ್ಟು ಬೇರೆಡೆ ಹೋಗುವ ಬೆದರಿಕೆಯ ಮುಷ್ಕರ ಹೂಡಿದಾಗ, ಚಿಕ್ಕ ದೇವ ರಾಜ ಮತ್ತು ವಿಶಾಲಾಕ್ಷ ಬೇರೊಂದು ನಿರ್ಧಾರವನೇ  ಮಾಡಿದರು.  ರಕ್ತಪಾತದ, ವಿಶ್ವಾಷಘಾತುಕ ನಿರ್ಧಾರ.

ರೈತರ ಅಸಹಕಾರ ಆಂದೋಲನದ ಬಗ್ಗೆ ಮಾತುಕತೆ ನೆಡಸಲು ಎಲ್ಲ ಜಂಗಮರಿಗೆ ಮತ್ತು ಮಠಾಧಿಪತಿಗಳಿಗೆ ಒಂದು ಆಹ್ವಾನವನ್ನು ಸ್ವತಃ ಚಿಕ್ಕ ದೇವ ರಾಜನೇ ಕಳುಹಿಸಿದನು.  ನಂಜನಗೂಡಿನಲ್ಲಿ ನಡೆಯಲಿರುವ ಈ ಸಮಾಗಮದಲ್ಲಿ ಸುಮಾರು ನಾನೂರು ಜಂಗಮರು ಭಾಗವಹಿಸಿದರು. ಆದರೆ ಮುಂದಾದದ್ದೇ ಬೇರೆ.  ವಿಲ್ಕ್ಸ್ ಎನ್ನುವ ಬ್ರಿಟಿಷ್ ಇತಿಹಾಸಜ್ಞ ಮುಂದಾದದನ್ನು ಹೀಗೆ ವಿವರಿಸಿದ್ದಾನೆ:  


ಮೊದಲೇ ನಾಲ್ಕು ಗೋಡೆಗಳ ಅಂಗಳದಲ್ಲಿ ಒಂದು ದೊಡ್ಡ ಹಳ್ಳವನ್ನು ತೋಡಿ ಸುತ್ತಲೂ ಡೇರೆಗಳನ್ನು (ಟೆಂಟ್) ನಿರ್ಮಿಸಲಾಗಿತ್ತು.  ಒಂದಕ್ಕೊಂದು ಅಂಟಿಕೊಂಡಂತೆ ಕಾಣುವ ಈ ಡೇರೆಗಳ ಹಿಂದಿದ್ದ ಹಳ್ಳ ಮೊಗಸಾಲೆಯಲ್ಲಿ ನಿಂತು ನೋಡುವ ಸಾರ್ವಜನಿಕರ ಕಣ್ಣಿಗೆ ಕಾಣಿಸುತ್ತಿರಲಿಲ್ಲ. ಆದರದಿಂದ ಬರಮಾಡಿಕೊಳ್ಳುತ್ತಿದ್ದ ಚಿಕ್ಕ ದೇವ ರಾಜನ ಹುದ್ದೆದಾರರು ಮತ್ತು ಸೈನಿಕರು ಎಲ್ಲೆಡೆ ನಿಂತಿದ್ದರು.  ಜಂಗಮರನ್ನು ಒಬ್ಬರ ನಂತರ ಒಬ್ಬರನ್ನು ಬರಮಾಡಿಕೊಂಡು, ಅವರ ಪ್ರಣಾಮ ಸ್ವೀಕರಿಸಿ ವಿಶ್ರಾಂತಿಗೆಂದು ಅವರುಗಳನ್ನು ಡೇರೆಗೆ ಹೋಗಲು ವಿನಂತಿಸಿಕೊಳ್ಳುತ್ತಿದ್ದರು.  ಹಸಿದಿದ್ದ ಜಂಗಮರು ಡೇರೆಯೊಳಗೆ ರಾಜನುಗ್ರಹದಿಂದ ತಮಗೇನಾದರೂ ಭರ್ಜರಿ ಊಟಕ್ಕೆ ಮುಂಚೆ ಉಪಹಾರ ಸಿಗಬಹುದೆಂದು ಎದುರುನೋಡುತ್ತಿದ್ದರು. ಆದರೆ ಶಿರಚ್ಛೇದನ ಮಾಡಲು ತಯಾರಿದ್ದ ಕಟ್ಟಾಳುಗಳನ್ನು ಎದುರಿಸಬೇಕಾಗಬಹುದು ಎಂದು ಅವರುಗಳು ಎಣಿಸಿರಲಿಲ್ಲ. ಏನಾಗುತ್ತಿದೆಯೆಂದು ಮನ ಗಾಣುವ ಮುನ್ನವೇ ಅವಿತುಕೊಂಡಿದ್ದ ಕಟ್ಟಾಳುಗಳು ಡೇರೆಯೊಳಗೆ ಬರುತ್ತಿದ್ದ ಜಂಗಮನ ಶಿರಚ್ಛೇದನ ಮಾಡಿ, ಹಿಂಬಾಲಿಸಿ ಬರುತ್ತಿದ್ದ ಮತ್ತೊಬ್ಬ ಜಂಗಮ ಸಂಶಯ ಪಡುವ ಮುಂಚೆಯೇ ಡೇರೆಯ ಹಿಂದಿದ್ದ ಹಳ್ಳದಲ್ಲಿ ಶವವನ್ನು ತಳ್ಳಿಬಿಡುತ್ತಿದರು.  ಮೊಗಸಾಲೆಯಲ್ಲಿ ನಿಂತ ಜನಸಾಮಾನ್ಯರು ಜಯಜಯಕಾರ ಮಾಡುವುದರಲ್ಲಿ ಮಗ್ನರಾಗಿದ್ದರೆ ಹೊರತು ಡೇರೆಯೊಳಗೆ ನಡೆದ ಕಗ್ಗೊಲೆಯನ್ನು ಸಂದೇಹಿಸಲೂ ಸಾಧ್ಯವಿರಲಿಲ್ಲ.  ವಿಶ್ರಾಂತಿಯ ನಾಟಕ ಜಂಗಮರಿಗೆ ಚಿರಶಾಂತಿಯನ್ನು ತರುವುದೆಂದು ಯಾರೂ ಊಹಿಸಲಿಲ್ಲ.

ನಂಜನಗೂಡಿನಲ್ಲಿ ಸಾಮೂಹಿಕ ಕಗ್ಗೊಲೆಯ ಸಮಯಕ್ಕೆ ಸರಿಹೊಂದುವಂತೆ ಚಿಕ್ಕ ದೇವ ರಾಜ ಮತ್ತು ವಿಶಾಲಾಕ್ಷ ಪಂಡಿತ ಮತ್ತೊಂದು ಅನಾಗರೀಕ ಹಾಗು ಹೀನ ಕೃತ್ಯವೆಸಗಲು ತಮ್ಮ ಸಿಪಾಯಿಗಳಿಗೆ ಆಜ್ಞೆ ನೀಡಿದ್ದರು.  ಜಂಗಮರ ಮಠಗಳನ್ನು ಅಂದೇ ನಿರ್ನಾಮ ಮಾಡಲು ಕೊಟ್ಟ ಆ ಆದೇಶವನ್ನು ಜಾರಿಗೆ ತಂದವರು ಸ್ಥಳೀಯ ಸೈನಿಕರು. ಅರಸನ ಸರಾಗವಾದ ಅನುಜ್ಞೆ ಹೀಗಿತ್ತು:  ಎಲ್ಲಿ ರೈತರು ಸೇರಿದ್ದಾರೋ ಅಲ್ಲಿಗೆ ಅಶ್ವಾರೂಢರಾದ ಸೈನಿಕರು ಆ ದಿನವೇ ದಾಳಿ ನೆಡಸಿ, ಕೇಸರಿ ಬಣ್ಣದ ಬಟ್ಟೆ ತೊಟ್ಟ ಜಂಗಮರನ್ನು ಕೊಂದು ಜನಜಂಗುಳಿಯನ್ನು ಚದುರಿಸುವುದು.   ಒಂದೇ ದಿನದಲ್ಲಿ ಸುಮಾರು ನಾನೂರು ಜಂಗಮರ ಕಗ್ಗೊಲೆ ಮತ್ತು ಸುಮಾರು ಏಳು ನೂರು ಮಠಗಳ ನಿರ್ನಾಮವನ್ನು ಬಹು ಎಚ್ಚರಿಕೆಯ ಮತ್ತು ನಿಖರವಾದ ಯೋಜನೆಯ ಮೂಲಕ ಸಾಧಿಸಿದ್ದ ವಿಶಾಲಾಕ್ಷ ಪಂಡಿತ. ಮೈಸೂರು ಇತಿಹಾಸದಲ್ಲೇ ಇಂತಹ ಹೇಯ ಕೃತ್ಯ ನಡೆದಿರಲಿಲ್ಲ. ಭೀತಿ ತರಿಸುವ ಈ ಕೃತ್ಯದ ಮಹತ್ತರ ಪ್ರಭಾವ ಕಂಡದ್ದು, ತೆರಿಗೆ ಮತ್ತು ಹೊಸ ಕಂದಾಯ ವಸೂಲಿಯ ಕ್ರಮವನ್ನು ಯಾರೂ ವಿರೋಧಿಸಲು ಸಾಧ್ಯವಿರಲಿಲ್ಲ.  

ಈ ಎಲ್ಲ ಅಮಾನುಷ ಕೆಲಸಗಳನ್ನು ಕಾರ್ಯರೂಪಕ್ಕೆ ತಂದ ವಿಶಾಲಾಕ್ಷನ ಆಡಳಿತದಲ್ಲಿ ಶುರುವಾದ ಮತ್ತೊಂದು ಭೀತಿಯ ವಿಚಾರವೆಂದರೆ, ಚಿಕ್ಕ ದೇವ ರಾಜ ತನ್ನ ಹಿಂದೂ ಮತೀಯ ವರ್ಗವನ್ನು ತೊರೆದು ರಾಜ್ಯದಲ್ಲಿ ಜೈನ ಮತವನ್ನು ಪುನರುಧ್ಧಾನ ಮಾಡುವನೆಂಬ ವದಂತಿ.  ನಿಜವೋ, ಸುಳ್ಳೋ ಏನೇ ಆದರೂ ಜನಸಾಮಾನ್ಯರು ಇದನ್ನು ಸಹಿಸದಾದರು. ಕಗ್ಗೊಲೆಯ ರಹಸ್ಯವೂ ಬಯಲಿಗೆ ಬರುವ ಮುನ್ಸೂಚನೆ ಕಂಡುಬರುತ್ತಿತ್ತು.  ಕೆಲವು ದಿನಗಳ ನಂತರ ಜಂಗಮರನ್ನು ಕೊಂದ ಅಮಾನುಷ ಕೃತ್ಯದ ಪರಾಕಾಷ್ಠೆ ಮತ್ತೊಂದು ಕಗ್ಗೊಲೆಯಲ್ಲಿ ಮುಕ್ತಾಯಗೊಂಡಿತು: ಈ ಬಾರಿ ಮನೆಗೆ ತೆರಳುತ್ತಿದ್ದ ವಿಶಾಲಾಕ್ಷ ಪಂಡಿತನನ್ನು ಸೈನಿಕರಿಬ್ಬರು ರಾಜ ಬೀದಿಯಲ್ಲಿ ಹತ್ಯೆ ಮಾಡಿದರು.

ತಿರುಮಲ ಐಯಂಗಾರ್ ಎನ್ನುವ ಪರಿಚಿತದವರೊಬ್ಬರನ್ನು ಚಿಕ್ಕ ದೇವ ರಾಜ ಮತ್ತೊಮ್ಮೆ ಪ್ರಧಾನ ಮಂತ್ರಿಯನ್ನಾಗಿ ನೇಮಕ ಮಾಡಿದರು.  76 ವಯಸ್ಸಿನ ಚಿಕ್ಕ ದೇವ ರಾಜ 1704 ರಲ್ಲಿ ಮೃತರಾದರು.  31 ವರುಷ ರಾಜ್ಯಭಾರ ಮಾಡಿದ ಚಿಕ್ಕ ದೇವಾ ರಾಜನ ಆಡಳಿತದಲ್ಲಿ ಮೈಸೂರು ಪ್ರಾಂತ್ಯ ಸಾಕಷ್ಟು ಬದಲಾವಣೆ ಕಂಡಿತು.  ಆದರೂ ಜಂಗಮರ ರಹಸ್ಯ ಅಮಾನುಷ ಕೊಲೆ ಮುನ್ನೂರು ವರುಷಗಳ ನಂತರವೂ ಅಳಿಸಲಾಗದ ಕಳಂಕವಾಗಿಯೇ ಉಳಿದಿದೆ.
_________________
ವಿಷಯ ಸೂಚಿ: ಈ ಲೇಖನ ಮೇಲೆ ಕೊಟ್ಟಿರುವ 1897 ರ ಮೈಸೂರು ಗೇಜ್ಝೆಟಿಯರ್ ನ ಮೇಲೆ ಆಧಾರಿತವಾದದ್ದು.  ಪುಟ 360-376 ರಲ್ಲಿರುವ ಸಾಕಷ್ಟು ವಿವರಣೆಯನ್ನು ನನ್ನದೇ ಸಂಕ್ಷಿಪ್ತ ರೀತಿಯಲ್ಲಿ ಕನ್ನಡದಲ್ಲಿ ಬರೆದಿದ್ದೇನೆ ಅಷ್ಟೇ.  ಕೆಲವೊಮ್ಮೆ ಅನುವಾದ, ಕೆಲವೊಮ್ಮೆ ಸಂಶೋಧನೆ, ಕೆಲವೊಮ್ಮೆ ನನ್ನ ವ್ಯಕ್ತಿಗತ ಅನಿಸಿಕೆಯ ಮೇಲೆ ಆಧಾರವಾಗಿರುವ ಈ ಲೇಖನವನ್ನು ನೀವು ಓದಿ ನಿಮ್ಮ ಅನಿಸಿಕೆಗಳನ್ನೂ ಖಂಡಿತ ತಿಳಿಸಿ.    

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ