ಗುರುವಾರ, ಅಕ್ಟೋಬರ್ 11, 2018

ರಾಕೆಟ್ ವಿಜ್ಞಾನಿಗಳಲ್ಲೂ ಮೂಢನಂಬಿಕೆ!

ರಾಕೆಟ್ ವಿಜ್ಞಾನಿಗಳಲ್ಲೂ ಮೂಢನಂಬಿಕೆ!
ನೆನ್ನೆ ರಷ್ಯದ ಸುಯೆಜ್ ರಾಕೆಟ್ನಲ್ಲಿ ಇಬ್ಬರು ವಿಜ್ಞಾನಿಗಳನ್ನು ಅಂತಾರಾಷ್ಟ್ರೀಯ ಹೊರಬಾನು ನಿಲ್ದಾಣಕ್ಕೆ (Space Station) ಉಡಾಯಿಸಲು ಎಲ್ಲ ಸಿದ್ಧತೆ ಮಾಡಿಕೊಂಡಿತ್ತು.  ಒಬ್ಬ ಅಮೇರಿಕಾದ ನಾಸಾ (NASA) ವಿಜ್ಞಾನಿ, ಮತ್ತೊಬ್ಬ ರಷ್ಯಾದ ವಿಜ್ಞಾನಿ. ಭೂಮಿಯಿಂದ ಮೇಲಕ್ಕೆ ಏಳುವ ಸಮಯದವರೆಗೂ ಎಲ್ಲ ಸರಿಯಾಗಿಯೇ ಇತ್ತು.  ಆದರೆ ರಾಕೆಟ್ ಹಾರಿದ ಎರಡು ನಿಮಿಷಗಳ ನಂತರ ತಾಂತ್ರಿಕ ಅಡಚಣೆಗಳಾಗಿ, ರಾಕೆಟ್ನ ಉಡಾವಣೆಯನ್ನು ರದ್ದುಗೊಳಿಸಬೇಕಾಯಿತು.  ಈ ತುರ್ತುಪರಿಸ್ಥಿತಿಯಲ್ಲಿ  ಬದುಕುಳಿಯುವ ಸಾಧ್ಯತೆಗಳು ತೀರಾ ವಿರಳವಾಗಿದ್ದರೂ, ಅದು ಹೇಗೋ ಇಬ್ಬರೂ ಪ್ಯಾರಾಚೂಟ್ ಸಹಾಯದಿಂದ ಭೂಮಿಗೆ ವಾಪಾಸ್ ಬಂದದ್ದು ಒಂದು ಪವಾಡವೆಂದೇ ಹೇಳಬಹುದು.  ಇಂತಹ ಕಷ್ಟ ಸ್ಥಿತಿಯಿಂದ ಪಾರಾದದ್ದು ರಷ್ಯಾದ ರಾಕೆಟ್ ವಿಜ್ಞಾನ ಮತ್ತು ಅವರ ಪ್ರಾವೀಣ್ಯದ ಗುರುತು ಎಂದು ಹೇಳಬಹುದು.  ಆದರೆ ಇಪ್ಪೋತ್ತೊಂದನೇ ಶತಮಾನದ ಈ ದಿನದ ತಾಜಾ ಸುದ್ದಿಗಳಲ್ಲಿ ನನಗೆ ಗಮನ ಸೆಳೆದಿದ್ದು ಮತ್ತೊಂದು ವಿಷಯ.  ಅದೇನೆಂದರೆ, ರಷ್ಯಾದ ರಾಕೆಟ್ ವಿಜ್ಞಾನಿಗಳಲ್ಲೂ ಹುದುಗಿರುವ ಮೂಡನಂಭಿಕೆ. 

ರಾಕೆಟ್ ಉಡಾವಣೆಯ ಮುಂಚಿನ ಈ ಫೋಟೋ ನೋಡಿ ಆಶ್ಚರ್ಯ ಆಯಿತು.  ಒಬ್ಬ ಕ್ರೈಸ್ತ ಪಾದ್ರಿ ಒಂದು ಕೈಯಲ್ಲಿ ಏಸುವಿನ ಶಿಲುಭೆ ಹಿಡಿದು ಮತ್ತೊಂದು ಕೈಯಲ್ಲಿ ಕೊಪ್ಪರದಂಥ ಹುಂಡಿಯಿಂದ ಪವಿತ್ರ ವಿಭೂತಿಯನ್ನು ಪ್ರೋಕ್ಷಿಸುತ್ತಿರುವ ಈ ಫೋಟೋ ನೋಡಿ ನಿಮಗೂ ನನ್ನಂತೆ ಕುತೂಹಲ ಹುಟ್ಟುವುದರಲ್ಲಿ ಆಶ್ಚರ್ಯವಿಲ್ಲ.  ಉಡಾವಣೆಗೆ ಮುಂಚಿತವಾಗಿ ರಾಕೆಟ್ಗೆ ಮತ್ತು ಅದರೊಳಗಿನ ವಿಜ್ಞಾನಿಗಳಿಗೆ ಯಾವ ತೊಂದರೆಯು ಬರದಿರಲೆಂದು ಈ ಕ್ರೈಸ್ತ ಪಾದ್ರಿ ಆಶೀರ್ವ್ರಚನ ಮಾಡುತ್ತಿರುವುದು ಈ ಫೋಟೋದ ವಿಶೇಷ.  ಅಂದರೆ ರಾಕೆಟ್ ವಿಜ್ಞಾನದ ಒಂದು ಉನ್ನತ ಸಂಸ್ಥೆ ಮತ್ತು ಅದರ ವಿಜ್ಞಾನಿಗಳು ಇಂಥ ಮೂಢನಂಬಿಕೆಗಳನ್ನು  ಉತ್ತೇಜಿಸಿ ಅದರಲ್ಲಿ ಭಾಗಿಯಾಗಿದ್ದಾರೆಂದು ತಿಳಿದು ಬರುತ್ತದೆ.  ನಗೆಯೂ ಬರುತ್ತಿದೆ.  ಆದರೆ ಬದುಕುಳಿದ ಆ ಇಬ್ಬರು ವಿಜ್ಞಾನಿಗಳ ಮನದಲ್ಲಿ ಆಗುತ್ತಿರುವ ತಳಮಳಕ್ಕೆ ಕಾರಣ -- ವಿಜ್ಞಾನಿಗಳಾಗಿಯೂ ಮೂಡ ನಂಬಿಕೆಯಲ್ಲಿ ಭಾಗವಹಿಸಿದ್ದೋ, ಅಥವಾ ಬದುಕುಳಿದಿದ್ದೆ ಆ ಕ್ರೈಸ್ತ ಪಾದ್ರಿಯ ಆಶೀರ್ವ್ರಚನದಿಂದಲೋ ಎನ್ನುವುದನ್ನು ನೀವೇ ನಿರ್ಧರಿಸಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ