ಶುಕ್ರವಾರ, ನವೆಂಬರ್ 23, 2018

ದ್ರೌಪದಿಯ ಮನಸ್ಸಿನಂತರಾಳಕ್ಕೊಂದು ಕನ್ನಡಿ

ದ್ರೌಪದಿಯ ಮನಸ್ಸಿನಂತರಾಳಕ್ಕೊಂದು ಕನ್ನಡಿ

Reposting from a 2003 story published in Swarnasetu.

ದಿನ ಬೆಳಿಗ್ಗೆ ಕನ್ನಡಿಯಲ್ಲಿ ನೋಡಿಕೊಂಡಾಗ ನನ್ನ ಕೂದಲು ಎಷ್ಟು ಸುಂದರವಾಗಿ ಕಾಣಿಸ್ತಾ ಇತ್ತಲ್ಲವೆ? ನನ್ನ ಮೈ ಮಾಟ ಕೂಡ ಇನ್ನೂ ಹದಿಹರೆಯದ ಹುಡುಗಿಯಂತೇ ಇದೆ. ಅದಕ್ಕೇ ಇರಬೇಕು ಆ ದುರ್ಯೋಧನ ನನ್ನನ್ನು ಯಾವಾಗಲೂ ಕಾಮ ದೃಷ್ಟಿಯಿಂದಲೇ ನೋಡುವುದು. ಪಾಪ ಅವನಿಗೆ ಈ ಪಾಂಚಾಲಿಯನ್ನು ಕಾಮಿಗಳಿಂದ ಕಾಪಾಡಲು ಐದು ಜನ ಪಾಂಡವರಿದ್ದಾರೆಂದು ಮರೆತುಹೋಗಿರಬೇಕು. ಆತ ಹುರಿಮೀಸೆಯ ದೃಡಕಾಯನೇನೋ ಸರಿ. ಆದರೆ ಮಂದಬುದ್ಧಿಯವ. ಇಲ್ಲದಿದ್ದಲ್ಲಿ ಅಂದು ಮಯ ಭವನದಲ್ಲಿ ಎಲ್ಲರ ಮುಂದೆ ನೀರಿನ ಕೊಳವನ್ನ ಅಮೃತಶಿಲೆಯ ನೆಲವೆಂದು ಭಾವಿಸಿ ಧೊಪ್ಪನೆ ಬೀಳುತ್ತಿರಲಿಲ್ಲ. ಪಾಪ, ಪೆಟ್ಟಾಗಿರಬೇಕು. ನನಗಂತೂ ನಗು ತಡಿಯಲು ಸಾಧ್ಯವಾಗಲಿಲ್ಲ. ಒದ್ದೆಯಾದ ಬಟ್ಟೆಯಲ್ಲಿ ಅವನ ಮೈಕಟ್ಟು ನೋಡಲು ನಾಚಿಕೆ ಆದರೂ ಅವನ ಕೆಳ ನೋಟದ ಮೀಸೆ ನನ್ನ ನಗುವಿಗೆ ಕಾರಣವಾಗಿತ್ತು. ಯಾಕೋ ಏನೋ ಆ ಗಳಿಗೆಯಲ್ಲಿ ನಾನೂ ದುಡುಕಿಬಿಟ್ಟೆ. ಬಿದ್ದವನಿಗೆ ಸಹಾಯ ಮಾಡುವ ಬದಲು "ಕುರುಡನ ಮಕ್ಕಳೆಲ್ಲ ಕುರುಡರೇ" ಅಂತ ಹೀಯಾಳಿಸಿಬಿಟ್ಟೆನಲ್ಲ. ಅಬ್ಬ, ದುರ್ಯೋಧನನ ಕೋಪ ನನ್ನನ್ನ ಜೀವಂತ ಸುಡುವಷ್ಟು ತೀಕ್ಷಣವಾಗಿತ್ತಲ್ಲವೆ? ಸಧ್ಯ ಶ್ರೀಕೃಷ್ಣನೇ ಆ ಗಳಿಗೆಯಲ್ಲಿ ನನ್ನನ್ನ ಪಾರು ಮಾಡಿರಬೇಕು. ಆದರೆ ಮುಂದೇನು ಮಾಡುತ್ತಾನೋ ಆ ಕೋಪಿ ದುರ್ಯೋಧನ ಅಂತ ನನಗಂತು ತುಂಬ ಭಯ ಆಗಿತ್ತು. ನನ್ನದೇ ತಪ್ಪು.

ಸ್ವಾಭಿಮಾನಿ ದುರ್ಯೋಧನ ಎಲ್ಲರ ಮುಂದೆ ಅವಮಾನಗೊಂಡು ನಿಂತಿದ್ದಾಗ ನಾನು ಬೆಂಕಿಗೆ ತುಪ್ಪ ಸುರಿದಂತೆ ಅವನನ್ನ ಹೀಯಾಳಿಸಿದ್ದಲ್ಲದೆ ಪೂಜ್ಯ ಧೃತರಾಷ್ಟ್ರರನ್ನೂ ಕುರುಡರೆಂದು ಅಂದದ್ದು ನನ್ನದೇ ತಪ್ಪು. ಯಾಕಾದರೂ ಆ ಕಟುನುಡಿಗಳು ನನ್ನ ನಾಲಿಗೆಯಲ್ಲಿ ಹೊರಬಂತೋ ನಾ ಕಾಣೆ. ಒಂದು ಮನಸ್ಸು ತಕ್ಷಣ ಹಸ್ತಿನಾಪುರದ ಅರಮನೆಗೆ ಹೋಗಿ ದುರ್ಯೋಧನನ ಕ್ಷಮೆ ಕೇಳಬೇಕು ಅನ್ನಿಸಿತ್ತು.

ಹಾಳಾದ್ದು ಈ ಸ್ವಾಭಿಮಾನ ಇದೆಯಲ್ಲ. ನಾನು ದುರ್ಯೋಧನನ ಕ್ಷಮೆ ಕೇಳುವಂತ ತಪ್ಪು ಮಾಡಿದ್ದಾದರೂ ಏನು? ಅವನ ಕ್ಷಮೆ ಇಡೀ ಪಾಂಡವ ವಂಶಕ್ಕೇ ಬೇಕಿಲ್ಲ. ನಾನು ಪಾಂಡವರು ಅಜ್ಞಾತವಾಗಿ ಒಂದು ವರುಷ ಕಳೆದದ್ದಕ್ಕಿಂತ ಹೆಚ್ಚು ಅವಮಾನವಾಯಿತೆ ದುರ್ಯೋಧನನಿಗೆ? ಖಂಡಿತ ಇಲ್ಲ. ಪಾಂಡವರ ರಾಣಿಯಾದ ನಾನು, ಅತ್ತೆ ಕುಂತಿ ಪಟ್ಟ ಪಾಡಿಗೆಲ್ಲ ಆ ದುರ್ಯೋಧನನಲ್ಲವೆ ಕಾರಣ? ಸೈರಂದ್ರಿಯಾಗಿ ನಾನು ವಿರಾಟನ ರಾಣಿಗೆ ಸೇವಕಿಯಾಗಿ ಕಾಲ ಕಳೆದೆನಲ್ಲ ಆ ಅವಮಾನದ ಗಾಯ ಇನ್ನೂ ಮಾಗಿಲ್ಲ. ಇಂದ್ರಪ್ರಸ್ಥಕ್ಕೆ ಅಧಿಪತಿಯಾದ ಮಧ್ಯಮ ಪಾಂಡವ ಬೃಹನ್ನಳೆಯಾಗಿ ನಪುಂಸಕನಂತೆ ನಾಟ್ಯ ಕಲಿಸಿದಾಗ ಆದ ಅವಮಾನಕ್ಕಿಂತ ಈ ದುರ್ಯೋಧನ ನೀರಿಗೆ ಬಿದ್ದ ಆಕಸ್ಮಿಕ ಘಟನೆ ಹೆಚ್ಚಾಯಿತೆ? ಅಂದು ಆದದ್ದಾದರು ಏನು? ಒಂದು ಆಕಸ್ಮಿಕ ಘಟನೆ. ಅದಕ್ಕೆ ದುರ್ಯೋಧನನೇ ಹೊಣೆಗಾರ. ಕಣ್ಣಿದ್ದವರಿಗೆಲ್ಲ ಕಾಣುವ ಕೊಳದಲ್ಲಿ ಬಿದ್ದ ಕಾರಣವಾದರೂ ಏನಿರಬಹುದು? ನನ್ನನ್ನು ಅಂತಃಪುರದಲ್ಲಿ ನೋಡಿದ ಮೇಲಲ್ಲವೆ ಅವನು ನೀರಿನಲ್ಲಿ ಜಾರಿದ್ದು? ಹಾಗಾದರೆ ಆತ ಕುರುಡನಲ್ಲದಿದ್ದರೂ ಮದಾಂಧನೇ ಆಗಿರಬೇಕು. ಇದರಲ್ಲಿ ನನ್ನದೇನು ತಪ್ಪು? ಜೋರಾಗಿ ನಕ್ಕಿದ್ದೆ? ನಾನೊಬ್ಬಳೇ ನಗಲಿಲ್ಲವಲ್ಲ? ಸಭೆಯಲ್ಲಿ ನೆರೆದಿದ್ದ ಆಮಂತ್ರಿತರೆಲ್ಲರು ನೀರಿಗೆ ಬಿದ್ದ ದುರ್ಯೋಧನನ್ನು ನೋಡಿ ನಗಲಿಲ್ಲವೆ? ನನ್ನೊಬ್ಬಳ ಮೇಲೆ ಮಾತ್ರ ಅಷ್ಟು ಕೋಪ ಯಾಕೆ ಬರಬೇಕಿತ್ತು? ಮಂದಬುದ್ಧಿಯ ಜೊತೆ ಮದಾಂಧತೆ ಸೇರಿದರೆ ಎಲ್ಲರ ಮೇಲೂ ಕೋಪ ತಾನಾಗಿ ಬರುತ್ತೆ. ರೂಪವತಿಯಾದ ಪರಸ್ತ್ರೀಯ ಮೇಲೆ ಇನ್ನೂ ಹೆಚ್ಚು. ಪಾಪ, ದುರ್ಯೋಧನನಿಗೂ ನನ್ನಷ್ಟೆ ರೂಪವತಿ ಅರ್ಧಾಂಗಿ ಇದ್ದಿದ್ದರೆ ಕೋಪ, ತಾಪ, ಕಾಮ, ಕ್ರೋಧ ಎಲ್ಲ ಕಡಿಮೆ ಇರುತ್ತಿತ್ತೇನೋ. ಅವನ ಮುಂಗೋಪ ಎಲ್ಲರಿಗೂ ಗೊತ್ತು. ಆದರೂ ನಾನು ಅವನನ್ನ ಆ ರೀತಿ ಕೆಣಕ ಬಾರದಿತ್ತು. ಎಷ್ಟಾದರು ಕೌರವರೆಲ್ಲ ನಮ್ಮ ಸಂಬಂಧಿಗಳಲ್ಲವೆ?

ಸ್ವಾಭಿಮಾನ ಬಿಟ್ಟು ದುರ್ಯೋಧನನ್ನ ಕ್ಷಮೆ ಕೇಳಲು ಹೋಗಿ ನನ್ನ ಮುಖಕ್ಕೇ ಛೀಮಾರಿ ಹಾಕಿಸಿಕೊಂಡು ಬಂದೆನಲ್ಲ ಆ ದಿನ ಅಂತ ಬೇಜಾರು. ನಾನು ಕ್ಷಮೆ ಕೇಳುವ ಮೊದಲೇ "ಐದು ಜನ ಹೇಡಿ ಪಾಂಡವರ ಒಬ್ಬಳೇ ಅರ್ಧಾಂಗಿ, ಕೌರವ ಪುರುಷೋತ್ತಮನನ್ನು ವರಿಸಲು ಬಂದೆಯಾ?" ಎಂದು ಅವಮಾನ ಮಾಡಿದನಲ್ಲ ಆ ಪಾಪಿ ದುರ್ಯೋಧನ, ಅಗ್ನಿ ಪುತ್ರಿಯಾದ ನನ್ನನ್ನ. ಅಲ್ಲೇ ಭಸ್ಮ ಮಾಡಿಬಿಡುವಷ್ಟು ಕೋಪ ಬಂದಿತ್ತು. ಆದರೆ ಏನು ಮಾಡುವುದು? ನಾನೊಬ್ಬ ಏಕಾಂಗಿ ಹೆಣ್ಣು. ಅವಮಾನ, ಕೋಪ, ದುಃಖ ತಡಿಯಲಾರದೆ ಅವನನ್ನ ಶಪಿಸಲೂ ಆಗದೆ ಅಂತಃಪುರದ ಕತ್ತಲು ಕೋಣೆಯ ಮೊರೆ ಹೊಕ್ಕೆ. ಐದು ಜನರ ಆಸ್ತಿಯಲ್ಲವೆ ನಾನು? ಅತ್ತೆ ಕುಂತಿಯಲ್ಲವೆ ಅಂದು ಮಧ್ಯಮ ಪಾಂಡವ ನನ್ನನ್ನು ಸ್ವಯಂವರದಲ್ಲಿ ಗೆದ್ದು ಮನೆಗೆ ಕರೆತಂದಾಗ ಹೇಳಿದ್ದು ಎಲ್ಲರೂ ಸಮನಾಗಿ ಹಂಚಿಕೊಳ್ಳಿ ಎಂದು. ಸಮನಾಗಿ ಹಂಚಿಕೊಳ್ಳಲು ನಾನೇನು ಒಂದು ವಸ್ತುವೇ, ಆಸ್ತಿಯೇ? ಅದೊಂದು ನನ್ನ ಜೀವನದಲ್ಲಿ ನೆಡೆದ ಮರೆಯಲಾಗದ ಘಟನೆ. ಸಮಾಜದ ದೃಷ್ಟಿಯಲ್ಲಿ ಆದ ದೊಡ್ಡ ವಿಪರ್ಯಾಸ!

ಅಂದು ಅತ್ತೆ ಕುಂತಿ ಪರಿಸ್ಥಿತಿಯ ಅರಿವಿಲ್ಲದೆ ನುಡಿದದ್ದದಾರೂ ಏನು? ಪಾಂಡವರ ಮನೆಗೆ ಬಂದ ಸೊಸೆಯನ್ನ ಹಂಚಿಕೊಳ್ಳಿ ಎಂದು ಅತ್ತೆ ಕುಂತಿ ಹೇಳಿದ್ದು ತಪ್ಪಲ್ಲವೆ? ನನ್ನನ್ನು ಅರ್ಧಾಂಗಿನಿಯಾಗಿ ಐವರು ಹಂಚಿಕೊಳ್ಳಲು ಯಾವ ನೀತಿ ಶಾಸ್ತ್ರದಲ್ಲೂ ಬರೆದಿಲ್ಲವಲ್ಲ. ಆದರೆ ಜನರಿಗೇನು ಗೊತ್ತು ಪಾಂಡವರ ಗುಟ್ಟು? ಧರ್ಮರಾಯನಲ್ಲವೆ ಅಂದು ಈ ಘಟನೆಯನ್ನ ಪಾಂಡವರ ಅನುಕೂಲಕ್ಕೆ ತಿರುವು ಮಾಡಿಕೊಟ್ಟಿದ್ದು? ಅಜ್ಞಾತವಾಸದಲ್ಲಿದ್ದ ಪಾಂಡವರ ಮನೆಗೆ ಬಂದ ಹೊಸತೊಂದು ಹೆಣ್ಣಿನ ರಕ್ಷಣೆಯನ್ನ ಹಂಚಿಕೊಳ್ಳಲು ಪಣ ತೊಡುತ್ತೇವೆ ಹೊರತು ದೇಹವನ್ನಲ್ಲ ಅಂತ ಅಮ್ಮನೊಡನೆ ವಾದಿಸಿ ಗೆದ್ದ ಧರ್ಮರಾಯನಿಗೆ ನನ್ನ ಗೌರವ ನಿರಂತರ. ಅಜ್ಞಾತವಾಸದ ಸಂಧಿಗ್ಧ ಪರಿಸ್ಥಿತಿಯಲ್ಲಿ ಅರ್ಜುನ ಮದುವೆಯಾದದ್ದೇ ತಪ್ಪೆಂದು ವಾದಿಸಿದ್ದು ನಕುಲನಲ್ಲವೆ? ಭೀಮ ತಾನಾಗಲೇ ಹಿಡಂಬಿಯನ್ನು ವರಿಸಿ ಘಟೋತ್ಕಚ ಪುತ್ರನಿರುವಾಗ ಈ ಮದುವೆ ಬೇಡ ಎನ್ನಲಿಲ್ಲವೇ? ಸಹದೇವ ಕೂಡ ಭೀಮನ ಜೊತೆ ಸೇರಿ ಅಜ್ಞಾತವಾಸದ ಅವದಿಯಲ್ಲಿ ತಾವುಗಳು ಮದುವೆಯಾಗುವುದು ಉಚಿತವಲ್ಲವೆಂದು ಹೇಳಿದ್ದು ಈಗಲೂ ನೆನಪಿನಲ್ಲಿದೆ.

ಧರ್ಮರಾಯನ ಧರ್ಮಸಂಕಟ ನನಗೊಬ್ಬಳಿಗೇ ಅರ್ಥವಾಗಿದ್ದು ಅಂದರೂ ತಪ್ಪಿಲ್ಲ. ಒಂದು ಕಡೆ ಅಮ್ಮ ನುಡಿದಂತೆ ನಡೆದರೆ ಒಂದು ಹೆಣ್ಣು ಜೀವನಪರ್ಯಂತ ಪಡುವ ದುಃಖಕ್ಕೆ ಪಾಂಡವರು ಕಾರಣರಾಗುವರು. ಮತ್ತೊಂದು ಕಡೆ ಅಮ್ಮನ ಆದೇಶವನ್ನು ಉಲ್ಲಂಘಿಸಿದ ಪಾಂಡವರು ಎಂದೆಂದೂ ಸಮಾಜದಲ್ಲಿ ತಲೆ ತಗ್ಗಿಸಿ ನಡೆಯಬೇಕಾಗಬಹುದೆಂಬ ಭಯ. ಅಗ್ರಜ ಧರ್ಮರಾಯನ ಸಲಹೆಗೆ ಒಮ್ಮತಿಯಿತ್ತು ನನ್ನ ರಕ್ಷಣೆಗೇ ಪಣ ತೊಟ್ಟು ಎಲ್ಲ ಪಾಂಡವರು ಅಂದು ಮಲಗಿದಾಗ ಬೆಳಕು ಹರಿದಿತ್ತು. ಒಟ್ಟಿನಲ್ಲಿ ವಾದ ವಿವಾದಲ್ಲಿ ಕಳೆದಿತ್ತು ನನ್ನ ಮಧುಚಂದ್ರ. ಆದರೆ ಮಾರನೆಯ ದಿನ ಗುಲ್ಲೆದ್ದಿದ್ದು ಬರೀ ಸುಳ್ಳಲ್ಲವೆ? ಐವರಿಗೂ ಅರ್ಧಾಂಗಿನಿ ಎಂಬ ಬಿರುದು ಬಿರುಗಾಳಿಯಂತೆ ಹಬ್ಬಿತ್ತು. ಜನರ ಗುಸು ಗುಸು ಮಾತು ಕೇಳಿಸಿದರೂ ಕೇಳಿಸದಂತೆ ನಡೆಯುವ ಈ ಪಾಂಡವರ ಮನೆಗೆ ಏಕಾದರೂ ಸೊಸೆಯಾಗಿ ಬಂದೆನೋ. ಎಲ್ಲ ಅವಮಾನಗಳ ಸಹಿಷ್ಣತೆಗೆ ಕಾರಣವೂ ಉತ್ತರವೂ ಅಜ್ಞಾತವಾಸವೆ. ಅಜ್ಞಾತವಾಸ. ಎಂತಹ ರಣಧೀರರನ್ನೂ ಸಂಕುಚಿತಗೊಳಿಸಿ ನಿಸ್ಸಹಾಯಕರಂತೆ ಮಾಡುವ ದುರ್ಭಿಕ್ಷ ಕಾಲ. ದೃಪದರಾಜನ ರಾಜಕುಮಾರಿಯಾದ ನನಗೆ ಅಂತಹ ಸ್ಥಿತಿ ಬಂದೊದಗಿತ್ತಲ್ಲ. ಯಜ್ಞಸೇನಿ ಎಂದು ಕರೆಸಿಕೊಂಡ ನನಗೆ ಈ ಅವಮಾನ ಸಹಿಸಲಸಾಧ್ಯವಾಗಿತ್ತು. ಎಷ್ಟು ಚಿಂತಿಸಿ ಪ್ರಯೋಜನವೇನು? ಸಮಾಜದ ದೃಷ್ಟಿಯಲ್ಲಿ ನಾನೊಬ್ಬ ಅಧರ್ಮಿ ಹೆಣ್ಣು ಆದರೆ ದೇಹ ಮನಸ್ಸೆರಡೂ ಗಂಗೆಯಂತೆ ನಿರ್ಮಲ. ಐವರಿಗೂ ಅರ್ಧಾಂಗಿನಿಯಾಗುವ ಬದಲು ಕುಮಾರಿಯಾಗಿ ಉಳಿಯುವುದೇ ಮೇಲು. ಮನಸ್ಸಿನ್ನಲ್ಲಾಗುತ್ತಿದ್ದ ಈ ಹೋರಾಟಕ್ಕೆ ಉತ್ತರ ದೊರೆತಿದ್ದು ನಾನಂದು ಕೈಗೊಂಡ ‘ಚಂದ್ರಯಾನ ವ್ರತ’ದಿಂದ. ಈ ವ್ರತವನ್ನಾಚರಿಸುವ ಹೆಣ್ಣು ತನ್ನ ಇಚ್ಛೆಯಂತೆ ಸದಾ ಕುಮಾರಿಯಾಗೆ ಇರಲು ಸಾಧ್ಯವಾಗುವುದೆಂದು ನಾನಾಗಲೇ ತಿಳಿದಿದ್ದೆ. ನೋಡುವವರ ಕಣ್ಣಿಗೆ ಐದು ಪುರುಷರ ಸ್ತ್ರೀ. ಆದರೆ ನಿಜರೂಪದಲ್ಲಿ ಚಂದ್ರಯಾನ ವ್ರತ ಆಚರಿಸುವ ಯಜ್ಞಸೇನಿ. ಎಲ್ಲ ಕಳಂಕಗಳೂ ದೂರವಾಗಿ ಮನಸ್ಸು ಹಗುರವಾಗಿತ್ತು. ಆ ದಿನಗಳ ಕಹಿ ನೆನಪುಗಳನ್ನ ಈಗಲಾದರೂ ಮರೆತು ಸುಖದಿಂದಿರುವೆನೆಂದುಕೊಂಡರೆ ಈ ಪಾಪಿ ದುರ್ಯೋಧನ "ಐವರಿಗೂ ಅರ್ಧಾಂಗಿ" ಎಂದು ಮತ್ತೆ ಹೀಯಾಳಿಸಿದನಲ್ಲ. ಶ್ರೀಕೃಷ್ಣ ನಿನಗೊಬ್ಬನಿಗಲ್ಲವೇ ನನ್ನ ದುಃಖ ತಿಳಿಯುವುದು. ರೂಪ ಎಷ್ಟಿದ್ದರೇನು? ಈ ಜನ್ಮದಲ್ಲಿ ನನ್ನೀ ಕಳಂಕ ದೂರವಾಗುವುದೆ, ನೀನೇ ಹೇಳು ಕೃಷ್ಣ. ಇದೇ ಕೊರಗಿನಲ್ಲಿ ನಾನೆಷ್ಟು ಸಲ ಮಧ್ಯಮ ಪಾಂಡವನನ್ನು ನಿಂದಿಸಿ ನನ್ನನ್ನು ಮದುವೆಯಾದದ್ದಾರೂ ಏಕೆ ಎಂದು ಕೇಳಲಿಲ್ಲವೆ?

ಅಂತಹ ಕಷ್ಟ ಕಾಲದಲ್ಲೂ ನನಗೊಂದು ಸದಾ ನೆಮ್ಮದಿ ತರುತ್ತಿದ್ದ ವಿಷಯವೆಂದರೆ ಶ್ರೀಕೃಷ್ಣನ ಸಾನ್ನಿಧ್ಯ. ಹಸನ್ಮುಖಿಯೂ ಸ್ನೇಹಮಯಿಯೂ ಆದ ಅವನಿಲ್ಲದಿದ್ದರೆ ನನ್ನ ಜೀವನ ಮತ್ತಷ್ಟು ಬರಡಾಗಿರುತ್ತಿತ್ತು. ಮಧ್ಯಮ ಪಾಂಡವ ನನ್ನನ್ನು ವರಿಸದಿದ್ದರೆ ನನಗೆ ಶ್ರೀಕೃಷ್ಣನ ಸ್ನೇಹ ದೊರೆಯುತ್ತಿತ್ತೆ? ಸ್ನೇಹವೇನೋ ಸರಿ. ಆದರೆ ಸ್ನೇಹ ಸಂಬಂಧದಲ್ಲಿ ಕೊನೆಗೊಳ್ಳುತ್ತೆ ಅಂತ ನಾನು ಎಣಿಸಿರಲಿಲ್ಲ. ಸುಭದ್ರೆ ನನ್ನ ಸವತಿಯಾಗಿ ಮದ್ಯಮ ಪಾಂಡವನ ಮಡದಿಯಾಗಿ ಬರುವ ವಿಷಯ ನನಗಂತೂ ಬೇವು-ಬೆಲ್ಲ ಸವಿದಂತಾಗಿತ್ತು. ಸುಭದ್ರೆ ಬೇವಿನಂತಾದರೆ, ಚಂದ್ರಯಾನ ವ್ರತದಿಂದ ಮಧ್ಯಮ ಪಾಂಡವ ವಿಮುಕ್ತನಾಗುವ ಅಶಾಕಿರಣ ಬೆಲ್ಲತಿಂದಷ್ಟೇ ಸವಿಯಾಗಿತ್ತು. ಬಂದ ಹೊಸದರಲ್ಲಿದ್ದ ನನ್ನ-ಸುಭದ್ರೆಯ ಸವತಿ ಮಾತ್ಸರ್ಯ ಕೆಲವೇ ದಿನಗಳಲ್ಲಿ ಮಾಯವಾಗಲು ಆ ಮಾಯಾವಿ ಶ್ರೀಕೃಷ್ಣನೇ ಕಾರಣವಿರಬೇಕು. ಎಷ್ಟಾದರೂ ನಾನು ಸುಭದ್ರೆ ಅವನ ಅನುಜೆಯರಲ್ಲವೇ? ಆದರೂ ನಾನು ಸೊಸೆಯಾಗಿ ಬಂದಾಗ ಸಿಕ್ಕ ಹೊಟ್ಟೆಗಿಲ್ಲದ ವೈಭವಕ್ಕೂ ಸುಭದ್ರೆ ಬಂದಾಗ ದೊರೆತ ಸತ್ಕಾರಕ್ಕೂ ಅಜಗಜಾಂತರ. ಛೇ, ಹಳೆಯದನ್ನ ನೆನಸಿಕೊಂಡಾಗಲೆಲ್ಲ ಬರೀ ದುಃಖದ ದಿನಗಳೇ ಕಣ್ಮುಂದೆ ಬರುತ್ತವೆ. ನಾನು ವಧುವಾಗಿ ಬಂದ ಸಂತೋಷದ ಕಾಲದಲ್ಲೂ ಮನೆಯಲ್ಲಿ ಬಡತನವೇ. ಪಾಂಡು ಪುತ್ರರಿಗೂ ಬ್ರಾಹ್ಮಣ ವಟುಗಳಂತೆ ಭಿಕ್ಷೆ ಬೇಡುವ ಕಾಲ. ಸುಭದ್ರೆ ಬಂದ ಕೆಲವೇ ಮಾಸಗಳಲ್ಲಿ ಗರ್ಭಿಣಿಯಾದಾಗ ನನ್ನ ಅಸೊಯೆ, ಮಾತ್ಸರ್ಯಗಳನ್ನ ಮನಸ್ಸಿನೊಳಗೇ ಮುಚ್ಚಿಡಲು ಬಹಳ ಕಷ್ಟವೇ ಆಗುತ್ತಿತ್ತು. ಸುಭದ್ರೆಯ ಷೋಷಣೆಗೆ ಹಣ್ಣು ಹಂಪಲಗಳನ್ನು ತವರಿಂದ ಶ್ರೀಕೃಷ್ಣನೇ ತಂದುಕೊಡುತ್ತಿದ್ದ. ತುಂಬು ಗರ್ಭಿಣಿಯಾದ ಅವಳಿಗೆ ಕಥೆ ಕೂಡ ಹೇಳಿ ಮಲಗಲು ಸಹಾಯ ಮಾಡುತ್ತಿದ್ದ. ನವಮಾಸದಲ್ಲಿ ಅದೆಷ್ಟು ಸಲ ಅವಳು ತವರಿಗೆ ಹೋಗಿ ಕಾಲ ಕಳೆದಿದ್ದು?

ತಾಯ್ತನದ ಹಂಬಲ ನನ್ನನ್ನೆಷ್ಟು ಕಾಡಿದರೂ ಚಂದ್ರಯಾನ ವ್ರತದಿಂದ ವಿಮುಕ್ತಳಾಗಲು ನನಗೆ ಧೈರ್ಯವೇ ಬರಲಿಲ್ಲ. ವ್ರತಭ್ರಷ್ಟೆಯಾದರೆ ಗಾಯದ ಮೇಲೆ ಬರೆಯೆಳೆದಂತಾಗುವುದೆಂಬ ಭಯ. ಪಂಜರದಲ್ಲಿ ಕೂಡಿಟ್ಟ ಸಿಂಹಿಣಿಯಂತಾಗಿತ್ತು ನನ್ನ ಸ್ಥಿತಿ. ನವಮಾಸ ಕಳೆದು ಸುಭದ್ರೆಗೆ ಗಂಡು ಮಗು ಹುಟ್ಟಿದಾಗ ಆ ಮುಗ್ಧ ಮಗುವಿನ ನಗುಮುಖ ಮಧ್ಯಮ ಪಾಂಡವನನ್ನೇ ಹೋಲುತ್ತಿದ್ದನ್ನ ಕಂಡು ನಾನೇ ಆ ಮಗುವಿಗೆ ಜನ್ಮ ಕೊಟ್ಟಷ್ಟು ಸಂತೋಷವಾಗಿತ್ತು. ಅಭಿಮನ್ಯುವನ್ನು ನಾನೇ ಅಲ್ಲವೆ ಸುಭದ್ರೆಗಿಂತ ಹೆಚ್ಚು ಪ್ರೀತಿಯಿಂದ ಬೆಳೆಸಿದ್ದು? ತುಂಟಾಟ ಮಾಡಿ ಸುಭದ್ರೆಯ ಪೆಟ್ಟುಗಳನ್ನ ತಪ್ಪಿಸಿಕೊಂಡು ನನ್ನನ್ನಪ್ಪಿ ಸೆರಗಿನ ಆಶ್ರಯ ಪಡೆದಾಗ ನನಗಾಗುತ್ತಿದ್ದ ಮಾತೃವಾತ್ಸಲ್ಯ ಯಾರಿಗೂ ಅರ್ಥವಾಗುತ್ತಿರಲಿಲ್ಲ. ನೋಡುವವರ ಕಣ್ಣಿಗೆ ನಾನೊಬ್ಬಳು ಬಂಜೆಯಲ್ಲವೇ? ಅಭಿಮನ್ಯುಗೂ ಶ್ರೀಕೃಷ್ಣನನ್ನು ಕಂಡರೆ ಎಷ್ಟು ಪ್ರೀತಿ, ಗೌರವ. ಹೆಮ್ಮೆ ಪಡಲು ಅರ್ಹನಾದ ನಮ್ಮ ಏಕ ಮಾತ್ರ ಪುತ್ರ. ಅವನನ್ನು ಹೆತ್ತ ಸುಭದ್ರೆಯೇ ಧನ್ಯಳು.

ಅತ್ತೆ ಕುಂತಿಯ ಹದ್ದಿನ ಕಣ್ಣು ನನ್ನ ಮೇಲೆ ಸದಾ ಇದ್ದೇ ಇರುತ್ತಿತ್ತು. ನಾನು ತವರಿಗೆ ಹೋಗಲು ಅನುಮತಿ ಕೇಳಿದಾಗಲೆಲ್ಲ ಒಂದಲ್ಲ ಒಂದು ಕಾರಣ ಹೇಳಿ ಏಕಚಕ್ರಿ ನಗರದಲ್ಲೇ ಇರುವಂತೆ ಮಾಡುತ್ತಿದ್ದನ್ನ ನೆನಪಿಸಿಕೊಂಡರೆ ಅತ್ತೆ ಕುಂತಿಗೆ ನನ್ನ ಮೇಲೆ ಅಪಾರ ಪ್ರೀತಿ ಇತ್ತೋ ಅಥವಾ ಹತೋಟಿಯಲ್ಲಿಡಲೋ ಹೇಳುವುದು ಕಷ್ಟ. ಬರೀ ದೃಢಕಾಯ ಗಂಡು ಮಕ್ಕಳನ್ನೇ ಬೆಳಸಿದ ಅತ್ತೆ ಕುಂತಿ ನನ್ನ ಕೋಮಲ ದೇಹ, ಹೆಣ್ಣಿನ ಮೃದು ಸ್ವಭಾವ ಕಂಡು ನನ್ನನ್ನ ಮಗಳಂತೆ ನೋಡಿಕೊಳ್ಳುತ್ತಿದ್ದರು. ಹೆಣ್ಣಿನ ಕಷ್ಟ ಸುಖಗಳನ್ನ ಕೇಳಿ ತಿಳಿಯುವ ತಾಳ್ಮೆ ಮತ್ತೊಂದು ಹೆಣ್ಣಿಗಷ್ಟೇ ಸಾಧ್ಯ. ನನ್ನ ಎಲ್ಲ ಪ್ರಶ್ನೆಗಳಿಗೂ ಅತ್ತೆ ಕುಂತಿಯ ಬಳಿ ಉತ್ತರವಿದ್ದೇ ಇರುತ್ತಿತ್ತು. ಆಂತರ್ಯದಲ್ಲಿ ಚರ್ಚಿಸಲು ಸಮಯ ಸಾಕಷ್ಟು ಸಿಗುತ್ತಿತ್ತು. ತೆರದಿಟ್ಟ ಪುಸ್ತಕದಂತೆ ನನ್ನ ಮನಸ್ಸನ್ನ ಓದಿಬಿಡುತ್ತಿದ್ದರು ಅತ್ತೆ ಕುಂತಿ. ನಾನು ಪ್ರಶ್ನೆ ಕೇಳುವ ಮೊದಲೇ ಮಧ್ಯಮ ಪಾಂಡವ ಚಿಕ್ಕವನಾಗಿದ್ದಾಗ ಮಾಡಿದ ಸಾಹಸ ಕತೆಗಳನ್ನ ಮನದಟ್ಟವಾಗುವಂತೆ ಹೇಳಿಬಿಡುತ್ತಿದ್ದರು. ಅಬ್ಬ, ಆಗಲೂ ಆ ದುರ್ಯೋಧನನ ದ್ವೇಷ, ವಾರಣಾವತಿಯಲ್ಲಿ ಅವನು ಅರಗಿನರಮನೆಯಲ್ಲಿ ಪಾಂಡವರನ್ನು ಸುಟ್ಟುಬಿಡಲು ಹೂಡಿದ ಸಂಚು ಎಲ್ಲ ಕಣ್ಣಿಗೆ ಕಟ್ಟುವಂತೆ ಹೇಳುತ್ತಿದ್ದರು. ದುಃಖ ತಡೆಯಲಾರದೆ ಕಣ್ಣೀರು ಬಂದರೂ ತೋರಿಸದೆ ನನಗೆ ಧೈರ್ಯ ಹೇಳುತ್ತಿದ್ದರು.

ನನ್ನನ್ನು ಕಾಡುತ್ತಿದ್ದ ಬಂಜೆ ಎಂಬ ಕಲುಷಿತ ಅಪವಾದವನ್ನ ದೂರ ಮಾಡಲು ಪರಿಹಾರ ಅತ್ತೆ ಕುಂತಿಯೇ ತೋರಿಸಿಕೊಟ್ಟಿದ್ದು. ಅದೊಂದು ನಮ್ಮಿಬ್ಬರ ಮದ್ಯದಲ್ಲಿರುವ ನಿಗೂಡ ರಹಸ್ಯ. ಯಾರಿಗೂ ಗೊತ್ತಿಲ್ಲದ, ನಂಬಲು ಸಾಧ್ಯವಿಲ್ಲದ ಗುಟ್ಟು. ನಾನು ನನ್ನ ಸ್ವ-ಇಚ್ಛೆಯಿಂದಲೇ ಕುವರಿಯಾಗಿರಲು ನಿರ್ಧರಿಸಿದ್ದನ್ನ ಅತ್ತೆ ಕುಂತಿ ತುಂಬ ಸಹಾನುಭೂತಿ ತೋರಿಸಿದ್ದಲ್ಲದೆ ನನ್ನನ್ನು ಅರ್ಥ ಮಾಡಿಕೊಂಡಿದ್ದರು. ಆದರೆ ಪಾಂಡು ಸಂತಾನ ನನ್ನಿಂದಲೇ ಕೊನೆಗೊಳ್ಳುವುದೆಂಬ ಅರಿವಾದಾಗ ಚಿಂತೆ ಅವರನ್ನು ಕಾಡಿತ್ತು. ಪ್ರಜೆಗಳು ಏನಂದಾರು? ಸುಮ್ಮನೆ ಚಿಂತಿಸಿ ಕೂಡುತ್ತಾರೆಯೇ ಅತ್ತೆ ಕುಂತಿ? ಸ್ವಲ್ಪ ದಿನಗಳ ನಂತರ ಒಂದು ನಿರ್ದಿಷ್ಟ ನಿರ್ಣಯಕ್ಕೆ ಬಂದಿದ್ದರು. ವ್ರತ ಮುಂದುವರೆಸಲು ಅವರ ಎರಡು ಷರತ್ತಿಗೆ ನಾನು ಒಪ್ಪಿಗೆ ಕೊಡಲೇ ಬೇಕೆಂಬುದೇ ಆ ನಿರ್ಧಿಷ್ಟ ನಿರ್ಣಯ. ಒಂದು, ಪಾಂಡು ಸಂತಾನ ಮುಂದುವರೆಯಲು ಮಧ್ಯಮ ಪಾಂಡವನಿಗೆ ನಾನೆ ನಿಂತು ಮತ್ತೊಂದು ಮದುವೆ ನೆರವೇರಿಸುವುದು. ಎರಡನೆಯದಾಗಿ, ನನ್ನ ಬಂಜೆತನದ ಅಪವಾದ ಹೋಗಿಸಲು ಯಾರಿಗೂ ಗೊತ್ತಾಗದಂತೆ ಐದು ಪುಟ್ಟ ಬಾಲಕರನ್ನ ದತ್ತು ತೆಗೆದುಕೊಳ್ಳುವುದು. ಎಷ್ಟು ಯೋಚಿಸಿದರೂ ಎರಡೂ ಷರತ್ತುಗಳು ನನ್ನನ್ನ ಹತಾಷಗೊಳಿಸಿದವೇ ಹೊರತು ನನ್ನ ಮನಸ್ಸಿನ ದ್ವಂದ್ವವನ್ನ ಹೋಗಲಾಡಿಸಲಿಲ್ಲ. ಕೊನೆಗೆ ನಾನೇ ಸೋತು ಅತ್ತೆ ಕುಂತಿ ಸಲಹೆಯಂತೆ ನಡೆದುಕೊಂಡೆ. ಕಾಕತಾಳೀಯವೋ ಎನ್ನುವಂತೆ ಮಧ್ಯಮ ಪಾಂಡವ ಸುಭದ್ರೆಯನ್ನು ಮನೆಗೆ ಕರೆತಂದದ್ದೂ ಆ ಸಮಯದಲ್ಲೆ. ಅಷ್ಟೇ ಸುಲಭವಾಗಿ ಎರಡನೇ ಷರತ್ತಿಗೆ ಅತ್ತೆ ಕುಂತಿ ತಾವೇ ಉತ್ತರ ಹುಡಿಕಿದ್ದರು. ಅಂದು ವಾರಾಣವತಿಯಲ್ಲಿ ಅರಗಿನಮನೆಯಲ್ಲಿ ದುರ್ಯೋಧನ ಕೊಂದದ್ದು ಪಾಂಡವರನ್ನಲ್ಲ. ಒಂದು ಬೇಡರ ಹೆಣ್ಣು ಹಾಗು ಅವಳ ಐದು ಪುತ್ರರನ್ನ. ಆದರೆ ಕಾಡಿನಲ್ಲೇ ಉಳಿದು ಅನಾಥರಾದ ಆ ಹೆಣ್ಣಿನ ಐದು ಮೊಮ್ಮಕ್ಕಳನ್ನ ಕಂಡು ಅತ್ತೆ ಕುಂತಿಗೆ ತುಂಬ ಪಶ್ಚಾತ್ತಾಪವಾಯಿತಂತೆ. ಆ ಪುಟ್ಟ ಬಾಲಕರು ಬೆಳೆದದ್ದು ವಿದುರನ ಜೊತೆ. ಆ ಐವರನ್ನ ಉಪಪಾಂಡವರೆಂದು ಕರೆದು ನಾನು ಅತ್ತೆ ಕುಂತಿ ರಹಸ್ಯದಲ್ಲಿ ದತ್ತು ತೆಗೆದುಕೊಂಡದ್ದು ಯಾರಿಗೂ ಗೊತ್ತಾಗಲಿಲ್ಲ. ಜನರೆಲ್ಲ ನಾನೆ ಪಾಂಡವರಿಂದ ಪಡೆದ ಸಂತಾನವೆಂದು ನಂಬಿದರು. ಇದರಿಂದ ನನ್ನ ಚಂದ್ರಯಾನ ವ್ರತದ ಗುಟ್ಟು ಬೇರೆಯವರಿಗೆ ಗೊತ್ತಾಗಲೇಇಲ್ಲ. ಅತ್ತೆ ಕುಂತಿಯ ಸಹಾಯವಿಲ್ಲದಿದ್ದರೆ ನಾನೆಂದೂ ಕಣ್ಣೀರು ಮಿಡಿಯಬೇಕಾಗುತ್ತಿತ್ತು. ಕುಂತಿಯಂತಹ ಅತ್ತೆಯನ್ನ ಪಡೆದ ನಾನೇ ಧನ್ಯಳು.

ಆದರೆ ನನ್ನ-ಉತ್ತರೆಯ ಸಂಬಂಧ ಒಂದು ರೀತಿ ಘರ್ಷಣೆಯಲ್ಲೆ ಕೊನೆಗೊಂಡಿದೆಯಲ್ಲ. ಸೊಸೆಯಾಗಿ ನಾನು ಅತ್ತೆ ಕುಂತಿಯನ್ನ ಅರ್ಥ ಮಾಡಿಕೊಂಡಂತೆ ನನ್ನ ಸೊಸೆ ಉತ್ತರೆ ನನ್ನನ್ನ ಅರ್ಥ ಮಾಡಿಕೊಂಡಿಲ್ಲವಲ್ಲ. ಏಕಿರಬಹುದು? ಇನ್ನೂ ಹದಿಹರೆಯದ ಅಭಿಮನ್ಯು ಶಸ್ತ್ರಾಭ್ಯಾಸದಲ್ಲಿ ತೊಡಗಿರುವಾಗಲೇ ಉತ್ತರೆಯನ್ನ ಮನೆಗೆ ಸೊಸೆಯಾಗಿ ತಂದಿದ್ದು ನಮ್ಮದೇ ತಪ್ಪು. ಸ್ವಯಂವರದಲ್ಲಿ ಮಧ್ಯಮ ಪಾಂಡವ ನನ್ನನ್ನು ಗೆದ್ದಂತೆ ಅಭಿಮನ್ಯು ಉತ್ತರೆಯನ್ನು ಗೆದ್ದು ತಂದಿದ್ದರೆ ಜೋಡಿ ಸಮನಾಗಿರುತ್ತಿತ್ತೋ ಏನೋ. ಮತ್ಸ್ಯ ದೇಶದ ವಿರಾಟ ರಾಜನ ಪುತ್ರಿ ಉತ್ತರೆ ನಮ್ಮ ಮನೆಗೆ ಸೊಸೆಯಾಗಿ ಬಂದಿದ್ದು ಬಳುವಳಿಯಾಗಲ್ಲವೇ? ಏಕಚಕ್ರ ನಗರಿಯಲ್ಲಿ ಎಲ್ಲವೂ ವಿಚಿತ್ರವೆ. ಕೀಚಕನಂತ ದುಷ್ಕರ್ಮಿಗೆ ಸೇನಾಧಿಪತಿ ಸ್ಥಾನ! ಪೌರುಷಕ್ಕೇ ನಗೆಗೀಡಲಾದ ರಾಜಕುಮಾರ ಉತ್ತರ! ಮಗಳನ್ನ ಸ್ವಯಂವರದಲ್ಲಿ ಧಾರೆ ಕೊಡುವ ಸಂಪ್ರದಾಯವೇ ಇಲ್ಲದ ಸಾಮಂತ ಮನೆತನ! ಉತ್ತರ ಕುಮಾರನ ಪೌರುಷ ಬಯಲಾದದ್ದು ಮಧ್ಯಮ ಪಾಂಡವ ಬೃಹನ್ನಳೆಯ ರೂಪದಲ್ಲಿ ಸಾರಥಿಯಾಗಿ ಕೌರವರನ್ನ ಸೋಲಿಸಿದಾಗಲಲ್ಲವೇ? ಆದರೇನು ಏಕಚಕ್ರ ನಗರವಾಸಿಗಳು ನಂಬಿದ್ದು ಉತ್ತರ ಕುಮಾರನ ಧೀರತನದಲ್ಲಿ. ವಿರಾಟ ರಾಜ ಬೃಹನ್ನಳೆಯೇ ಮಧ್ಯಮ ಪಾಂಡವ ಎಂದು ಗೊತ್ತಾದ ಮೇಲಲ್ಲವೆ ಉತ್ತರೆಯನ್ನ ಅಭಿಮನ್ಯುವಿಗೆ ಬಹುಮಾನವಾಗಿ ಧಾರೆಯೆರದು ಕೊಡಲು ಮುಂದೆ ಬಂದದ್ದು? ನನಗಂತೂ ಈ ಸಂಬಂಧ ಅಷ್ಟೊಂದು ಉಚಿತವೆನಿಸಲಿಲ್ಲ. ವಿರಾಟ ರಾಜನ ಸ್ನೇಹ, ವಿನಯ ಜೊತೆಗೆ ಶ್ರೀಕೃಷ್ಣನ ಒಪ್ಪಿಗೆ ಎಲ್ಲ ಸೇರಿ ನನ್ನ ವಿಚಾರಧಾರೆಗಳು, ಸಂಶಯಗಳು ನನ್ನೊಳಗೇ ಉಳಿದುಬಿಟ್ಟವು. ನನ್ನ ಮನಸ್ಸಿನಲ್ಲಿದ್ದನ್ನ ಆಗಲೇ ಎಲ್ಲರಿಗೂ ತಿಳಿಸಬೇಕಿತ್ತು. ಮದುವೆಯ ಎಲ್ಲ ಕಾರ್ಯಗಳೂ ತರಾತುರಿಯಲ್ಲಿ ನಡೆದದಿದ್ದರಿಂದ ನನಗೂ ಯೋಚಿಸಲು ಸಮಯವೇ ಸಿಗಲಿಲ್ಲ. ಆದರೂ ಅಂದಿನ ಚಿಂತನೆಗಳು ಇಂದೂ ನೆನೆಪಿನಲ್ಲಿವೆ. ಮದುವೆಯ ಮುಂಚೆ ಪ್ರತಿದಿನವೂ ಉತ್ತರೆ ನನ್ನನ್ನು ಕಂಡದ್ದು ರಾಣಿಯ ಸೇವಕಿ ಸೈರಂದ್ರಿಯಾಗಿ. ಮದ್ಯಮ ಪಾಂಡವನನ್ನು ನೋಡಿದ್ದು ನಪುಂಸಕ ಬೃಹನ್ನಳೆಯಾಗಿ. ಭೀಮನನ್ನು ನೋಡಿದ್ದು ಅಡಿಗೆ ಭಟ್ಟ ವಲಾಳನಾಗಿ. ನಕುಲ ಕೇವಲ ಅಶ್ವಗಳನ್ನು ನೋಡಿಕೊಳ್ಳುವ ಧರ್ಮಗ್ರಂಥಿಯಾಗಿ. ಸಹದೇವ ಹಸುಕರುಗಳನ್ನು ನೋಡಿಕೊಳ್ಳುವ ತಂತ್ರಪಾಲನಾಗಿ. ಪಾಂಡು ಪುತ್ರರ ಸಂಸಾರವೇ ಈ ರೀತಿ ಕೆಳಮಟ್ಟದ ಕೆಲಸಗಳಲ್ಲಿ ತೊಡಗಿದ್ದಾಗ ರಾಜಕುಮಾರಿ ಉತ್ತರೆಗೆ ಗೌರವ, ಅಭಿಮಾನ ಬರಲು ಸಾಧ್ಯವೇ? ಅಭಿಮನ್ಯುವಿನ ಮೇಲೆ ಪ್ರೀತಿಯಿರಲು ಸಾಧ್ಯವೇ? ವಿರಾಟ ರಾಜನಿಗಂತು ಪಾಂಡವರ ಸಂಬಂಧ ಲಾಭದಾಯಕವೆ. ಎಲ್ಲ ತಿಳಿದ ಶ್ರೀಕೃಷ್ಣನೇ ಸಮ್ಮತಿಯಿತ್ತು ಮುಂದೆ ವಿರಾಟರಾಜನ ಸಹಾಯ ಬೇಕಾಗಬಹುದೆಂದು ಹೇಳಿದಾಗ ಅತ್ತೆ ಕುಂತಿ ಕೂಡ ಸುಮ್ಮನಾದರು. ಉತ್ತರ ಕುಮಾರನ ಪೌರುಷ ನೆನೆಸಿಕೊಂಡು ಅವನಿಂದ ಸಹಾಯ? ಮನಸ್ಸಿನಲ್ಲೇ ನಕ್ಕಿದ್ದೆ ಅಂದು! ಅಂತೂ ನನ್ನ ಅನಿಸಿಕೆಗಳನ್ನ ಅದುಮಿಡಲು ಕಷ್ಟವೇ ಆಗಿತ್ತು. ಮದುವೆಯ ದಿಬ್ಬಣದಲ್ಲೂ ವಧುಗಿಂತ ವರನೇ ಹೆಚ್ಚು ಆಕರ್ಷಣೀಯವಾಗಿ ಕಂಡದ್ದು. ಎಷ್ಟಾದರು ನನ್ನ ಕುಮಾರನಲ್ಲವೇ ಅಭಿಮನ್ಯು?

ಅಥವಾ ಅದೊಂದು ನನ್ನ ಮನಸ್ಸಿನ ಭ್ರಮೆಯೆ? ತಾಯ್ತನದ ಹಂಬಲ ಮಾತ್ರವೇ? ಹಾಗಾದರೆ ಉತ್ತರೆ ನನ್ನ ಸೊಸೆಯಲ್ಲವೆ? ಮದುವೆಯ ನಂತರವೂ ನನ್ನನ್ನು ಸೈರಂದ್ರಿಯ ರೂಪದಲ್ಲೇ ನೋಡುತ್ತಿದ್ದಾಳೆಯೆ ಉತ್ತರೆ? ಇಲ್ಲದಿದ್ದಲ್ಲಿ ನನ್ನ ಬಗ್ಗೆ ಅಷ್ಟೊಂದು ತಾತ್ಸಾರ ಬರಲು ಕಾರಣವಾದರೂ ಏನಿರಬಹುದು? ಐವರಿಗೆ ಅರ್ಧಾಂಗಿ ಎಂದು ಬಿರುದು ಗಳಿಸಿರುವ ನನ್ನನ್ನು ಯಾವ ಹೆಣ್ಣು ತಾನೆ ಗೌರವದಿಂದ ಕಾಣಲು ಸಾಧ್ಯ?

ಛೆ, ಈ ಮನಸ್ಸೊಂದು ಲಗಾಮಿಲ್ಲದ ಕುದುರೆಯಂತೆ. ಮತ್ತೆ ಆ ಅಜ್ಞಾತವಾಸದ ಚಕ್ರವ್ಯೂಹಕ್ಕೆ ಎಳೆದು ನನ್ನನ್ನು ನಾನೇ ನಿಂದಿಸಿಕೊಳ್ಳುವಂತೆ ಮಾಡತ್ತೆ. ಒಮ್ಮೊಮ್ಮೆ ಮನಸ್ಸು ಇನ್ನೂ ದುಗುಡಗೊಳ್ಳುತ್ತೆ. ಮತ್ತೊಮ್ಮೆ ಆ ಸ್ವನಿಂದನೆಯಿಂದಲೇ ಮನಸ್ಸು ಹಗುರಗೊಳ್ಳುತ್ತೆ. ನನ್ನ ದುಃಖಕ್ಕೆ ಬೇರೆಯವರು ಕಾರಣರಾದರೆ ನನ್ನಮೇಲೆ ನನಗೇ ಅನುಕಂಪ ಹುಟ್ಟುತ್ತದೆ. ಸ್ವ-ಅನುಕಂಪದ ಜೊತೆ ಸ್ವ-ಅಭಿಮಾನ ಬೆರತಾಗ ಮನಸ್ಸು ವಿಕಾರಗೊಳ್ಳುತ್ತೆ. ಒಟ್ಟಿನಲ್ಲಿ ಈ ಮನಸ್ಸನ್ನ ಅರ್ಥ ಮಾಡಿಕೊಳ್ಳಲು ಆ ಬ್ರಹ್ಮನಿಗೂ ಸಾಧ್ಯವಿಲ್ಲ.

ಈ ಮನಸ್ಸಿನಂತರಾಳಕ್ಕೊಂದು ತಳಹದಿಯೇ ಇಲ್ಲ. ಕನ್ನಡಿ ಹಿಡಿದರೆ ಬೇರಾರು ನೋಡಲಸಾಧ್ಯವಾದ ನನ್ನದೆ ಪ್ರತಿಬಿಂಬ ಮೂಡಿ ನನ್ನ ಅಸ್ತಿತ್ವವನ್ನೇ ಪ್ರಶ್ನಿಸುವಂತೆ ಮಾಡಿದೆ.




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ