ಇಂದ್ರನ ಇಂದ್ರಜಾಲ
ಎಲ್ಲರಿಗೆಂದೇ
ಹೂ ರಾಶಿಯನೆ ಅಂದು ನೀಡಿದೆ ನಾ
ಬಣ್ಣ ಬಣ್ಣಗಳ ಹೊಳಪಲಿ
ಹೊಗಳಿದರೆಲ್ಲರು ಸಂತಸದಲಿ
ವ್ರಿತ್ರ ಹರಿವಿದ ಬರಗಾಲದಲಿ
ಕಡೆಗಣಿಸಿದರೆಲ್ಲರು ಬೇಸಿಗೆಯ ಬೇಖುದಿಯಲಿ
ಹಿಂಜರಿದರೆಲ್ಲರು ನೋಡಿ ಬಿರುಕುಬಿಟ್ಟ ನೆಲವ
ಶುಷ್ಕ ನಗೆ ಬೀರಿದರೆಲ್ಲರು ನನ್ನೀಸ್ಥಿತಿಯಲಿ
ನವಮಾಸ ಭೂತಾಯಿಯ ಗರ್ಭದಲಿ
ಕದಲದೆ ಕುಳಿತೆ ಗಾಢಮೌನದಲಿ
ವ್ರಿತ್ರನ ಪರಾಭವಗೊಳಿಸಲು ಹಿಂದಿರುಗುವ
ಇಂದ್ರನ ಪ್ರತೀಕ್ಷತೆಯಲಿ
ನೆನ್ನೆಯ ಇಂದ್ರನ ಇಂದ್ರಜಾಲದಲಿ
ಸೃಷ್ಟಿಯ ಸೋಜಿಗದ ಕೂಸಾದೆ ಇಂದು
ಚಳಿಗಾಳಿಯಲಿ ಬೆಳೆವೆ ಮಗದೊಮ್ಮೆ
ಹೂ ರಾಶಿಯನೆ ನೀಡಲೆಂದು
____________
ವಿ.ಸೂ: ವ್ರಿತ್ರ ಒಬ್ಬ ರಾಕ್ಷಸ. ಹಾವು ಅಥವಾ ಡ್ರಾಗನ್ ರೂಪದಲ್ಲಿ ನದಿಗಳನ್ನು ಬಂದಿಸಿ ಬರಗಾಲದ ಮೂರ್ತರೂಪನಾಗಿದ್ದ ಈ ರಾಕ್ಷಸನನ್ನು ಇಂದ್ರ ಕೊಂದನೆಂದು ಋಗ್ ವೇದದಲ್ಲಿ ಬರುವ ಕತೆ. .
ಸ್ಯಾನ್ ಹೋಸೆ ಮತ್ತು ಕ್ಯಾಲಿಫೋರ್ನಿಯಾದ ಇತರ ಪ್ರದೇಶಗಳಲ್ಲಿ ಕಳೆದ ಒಂಬತ್ತು ತಿಂಗಳೂ ಒಂದು ಹನಿ ಮಳೆ ಬೀಳದೆ ಈ ವರ್ಷದ ಬೇಸಿಗೆ ತುಂಬಾ ಕಠಿಣವಾಗಿತ್ತು. ಒಣಗಿ ನಿಂತ ಗಿಡ ಗೆಡ್ಡೆಗಳಿಗೆ ನೆನ್ನೆ ಮೊದಲ ಬಾರಿಗೆ ಪ್ರಕೃತಿ ನೀರನೆರದಿತ್ತು. ಮಳೆಯ ನಂತರ ಆಶ್ಚರ್ಯವೆನ್ನುವಂತೆ ಹಿತ್ತಲಿನಲ್ಲಿ ಹಿಂದಿನ ದಿನ ಕಾಣದ ಮಂಜುಳಹೂವು (daffodils) ತಾನಾಗಿಯೇ ಸ್ಪುಟಿದೆದ್ದು ನನ್ನ ಗಮನ ಸೆಳೆಯಿತು. ಆ ಸ್ಪುಟಿದೆದ್ದ ಮಂಜುಳಹೂವೆ ಈ ಕವಿತೆಗೆ ಸ್ಫೂರ್ತಿ ನೀಡಿದ್ದು. ಓದಿ ನಿಮ್ಮ ಅನಿಸಿಕೆ ಖಂಡಿತ ತಿಳಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ