ಗುರುವಾರ, ಜನವರಿ 24, 2019

ಮುಂಗೋಪಿ ಮುದುಕಿ

ಮುಂಗೋಪಿ ಮುದುಕಿ

ವೃದ್ಯಾಪ್ಯ, ಜೀವನದ ಎಲ್ಲ ಹಂತಗಳಿಗಿಂತ ಬಲು ಕಷ್ಟ.  ಅದರಲ್ಲೂ ಒಂಟಿಯಾಗಿ ವೃದ್ಧರ ಆಶ್ರಮದಲ್ಲೋ, ವೃದ್ಧ್ಯಾಪ್ಯ ವಸತಿಗೃಹದಲ್ಲೋ ಅಥವಾ ಆಸ್ಪತ್ರೆಯ ವಾರ್ಡಿನಲ್ಲೋ ತಮ್ಮ ಅಂತಿಮ ಕಾಲ ಕಳೆಯ ಬೇಕಾಗಿ ಬರುವ ಸ್ಥಿತಿ ಯಾವ ವೃದ್ಧರಿಗೂ ಬರಬಾರದು.  ಆದರೆ ಅದು ಹಲವರಿಗೆ ವಾಸ್ತವಾಂಶ.  ಕೆನಡಾ ದೇಶದ ಅಂತಹುದೇ ಒಂದು ವೃದ್ಧ್ಯಾಪ್ಯ ವಸತಿಗೃಹ.  ತನ್ನದು ಏನೂ ಇಲ್ಲದ ಒಬ್ಬ ವೃಧ್ಯೆ ಅಸುನೀಗಿದ ಮೇಲೆ ಅಲ್ಲಿನ ದಾದಿಗಳಿಗೆ ಸಿಕ್ಕ ಒಂದೇಒಂದು ಕಾಗದದಲ್ಲಿ ಸಿಕ್ಕ ಕವನವನ್ನು ಓದಿ ಎಲ್ಲರು ದುಃಖಿಗಳಾದ ಕತೆ ಈಗಾಗಲೇ ಇಂಟರ್ನೆಟ್ ಮತ್ತು ಡಿಜಿಟಲ್ ಮಾಧ್ಯಮದಲ್ಲಿ ಸಾಕಷ್ಟು ಗಮನ ಸೆಳೆದಿದೆ.  ಎಲ್ಲ ವೃದ್ಯಾಪ್ಯ ವಸತಿಗೃಹಗಳಲ್ಲಿ ಈ ಕವಿತೆ ಸ್ಪಂದಿಸಿದೆ ಮತ್ತು ಈಗಾಗಲೇ ಪ್ರಿಂಟ್ ಮಾಧ್ಯಮದಲ್ಲೂ ಬೆಳಕು ಕಂಡಿದೆ.  ಅವಳ ಇಡೀ ಜೀವನದ ಸ್ವತ್ತು ಎಂದರೆ ಅದೊಂದು ಕಾಗದ.  ಆದರೆ ಅದರಲ್ಲಿ ಬರೆದ ಕವಿತೆ ಎಲ್ಲರನ್ನೂ ಸ್ಪಂದಿಸಲು ಕಾರಣ ಏನಿರಬಹುದು?  ಬನ್ನಿ ಒಟ್ಟಿಗೆ ಓದುವ ಆ ವೃದ್ಧಳ ಮನಮಿಡಿಯುವ ಕವಿತೆ, ನನ್ನ ಕನ್ನಡ ಅನುವಾದದಲ್ಲಿ.

ಮುಂಗೋಪಿ ಮುದುಕಿ
ಕನ್ನಡ ಅನುವಾದ: ರವಿ ಗೋಪಾಲರಾವ್

ದಾದಿಯರೇ ಏನು ಕಾಣಿಸಿತು? .. ಏನು ನೋಡಿದಿರಿ?
ಏನು ಯೋಚಿಸುವಿರಿ … ನೀವೆನ್ನ ನೋಡಿದಾಗ
ಮುಂಗೋಪಿ ಮುದುಕಿ ….  ತಿಳುವಳಿಕೆಯಿಲ್ಲದವಳು
ಸಂದೇಹಾಸ್ಪದ ಚಟದವಳು … ಎಲ್ಲೋ ನೆಟ್ಟ ದೃಷ್ಟಿಯವಳು?

ತಿಂಡಿತಿನಿಸನು ಜೊಲ್ಲುಸುರಿಸುವಳು …  ಉತ್ತರವನೇ ಕೊಡದವಳು
ನೀ ಕೂಗಿ ಕಿರುಚಿದಾಗಲೂ  …  ‘ಪ್ರಯತ್ನ ಪಡಬಾರದೇ ಒಂದಿಷ್ಟು’
ಯಾರು ಲಕ್ಷ್ಯ ಕೊಡಲೂ ನಿರಾಕರಿಸಿದಳೇಕೋ … ನೀವು ಮಾಡಿದ ಕೃತ್ಯವನು
ಸದಾ ಕಳೆದುಹೋದ … ಕಾಲುಚೀಲವೋ ಇಲ್ಲ ಎಕ್ಕಡವೋ ?

ಯಾರು ಪ್ರತಿಭಟಿಸಿಯೂ ಪ್ರತಿಭಟಿಸದೆ … ನಿಮ್ಮಿಚ್ಛೆಯೆಂತೆ ಮಾಡಲು ಬಿಡುವಳು
ಸ್ನಾನವೊ ಉಣಬಡಿಸುವುದರಲ್ಲೋ … ದಿನವಿಡೀ ತುಂಬಿತೇ?
ಅದೇನಾ ನೀ ಯೋಚಿಸುವುದು ?  … ಅದೇನಾ ನಿನಗೆ ಕಾಣುವುದು?
ಹಾಗಿದ್ದಲ್ಲಿ ನೋಡು ದಾದಿ …  ನೀ ನನ್ನ ನೋಡುತ್ತಿಲ್ಲ.

ನಾ  ಹೇಳುವೆ ನಾ ಯಾರೆಂದು ..  ಅಲುಗದೆ ಕುಳಿತು ನಾನಿಲ್ಲಿ
ನೀ ಕೂಗಿದ ಬೆಲೆಗೆ ನಾ ಮಾಡುವೆ …  ನಿನ್ನಿಚ್ಛೆಯಂತೆ ಭಕ್ಷಿಸುವೆ ನಾ

ಹತ್ತರ ಸಣ್ಣ ಹುಡುಗಿ ನಾ … ತಂದೆ ಒಬ್ಬ ತಾಯಿ ಒಬ್ಬಳು
ಅಣ್ಣಂದಿರು ಮತ್ತು ಅಕ್ಕಂದಿರು  … ಪ್ರೀತಿಸುವರು ಒಬ್ಬರನೊಬ್ಬರು
ಹದಿಹರೆಯದ ಹದಿನಾರರ ಹುಡುಗಿ .. ಕಾಲಿಗೆ ರೆಕ್ಕೆಯನೇ ಬಿಗಿದವಳು
ಈ ಕ್ಷಣದ ಕನಸಲಿ … ನಲ್ಲನ ಸಂದಿಸುವಳು ಅವಳು

ಇಪ್ಪತ್ತರ ಮದುವಣಗಿತ್ತಿ ….  ಜಿಗಿಯುವುದು ಎತ್ತರಕೆ ನನ್ನ ಹೃದಯ
ನೆನಪಿನಲ್ಲಿಡುವೆ ಕೊಟ್ಟ ಭಾಷೆಯನು …  ನಾ ಮಾಡಿದ ಪ್ರತಿಜ್ಞೆಯನು
ಇಪ್ಪತ್ತೈದರ ಹೊಸ್ತಿಲಲಿ  …  ಪಡೆವೆನು ನಾ ನನ್ನದೇ ಕಂದನ
ಮಾರ್ಗದರ್ಶನ ನಾ ನೀಡಬೇಕೆಂದೇ … ನಿರ್ಭಯ ನೆಮ್ಮದಿಯ ಮನೆಯೊಂದ  

ಮೂವತ್ತರ ನಾರಿ …  ನನ್ನ ಕಂದಮ್ಮ ಬೆಳೆವುದು ಬಿರುಸಿನಲಿ
ಪರಸ್ಪರ ಎಲ್ಲೆಯಿಲ್ಲದ ….  ಕೊನೆಗಾಣದ ಬಂಧನದಲಿ 
ನಲವತ್ತರ ಹೊಸ್ತಿಲಲಿ, ಪ್ರಾಯದ ಸುತರು …  ವಯಸ್ಕರ ತೆರೆದಿ ಬಿಟ್ಟೋಡಿದರು
ನನ್ನ ಪುರುಷ ನನ್ನೊಡನಿಹನು …  ನಾ ದುಃಖಿಸದಿರೆಲೆಂದು

ಐವತ್ತರ ಹೊಸ್ತಿಲಲಿ ಮತ್ತೊಮ್ಮೆ …  ಹಸುಳೆಗಳಾಡುವುವು ಮೊಣಕಾಲ ಬಳಿಯಲಿ
ಮಕ್ಕಳನರಿತೆವು ಮಗದೊಮ್ಮೆ, …  ನಾನೂ ನನ್ನಿನಿಯನು

ಕರಾಳ ದಿನಗಳೇ ಬಂದಾವು ….  ನನ್ನಿನಿಯನ ಮರಣದಲಿ
ಭವಿಷ್ಯ ಕಾಲವ ನೋಡಿದೆ ನಾ … ಭಯದಲಿ  ನಡುಗಿದೆ ನಾ
ನನ್ನ ಕಂದಮ್ಮಗಳೇ ಪಾಲಿಸುತಿಹರು …  ತಮ್ಮದೇ ಕಂದಮ್ಮಗಳ
ಕಳೆದ ವರುಷಗಳ ಚಿಂತಿಸಿದೆ ನಾ …  ನಾ ಅರಿತ ಪ್ರೀತಿಯ 

ನಾನೀಗ ಮುಪ್ಪಿನ ಮುದುಕಿ …  ಪ್ರಕೃತಿ ಅದೆಷ್ಟು ನಿರ್ದಯಿ
ವೃಧ್ಯಾಪ್ಯವನು ಮಾಡಲೆಂದೇ … ಕಾಣುವುದು ಬುದ್ಧಿಹೀನನಂತೆ
ದೇಹ ಪುಡಿ ಪುಡಿ ಆಗುವುದು …  ನಿರ್ಗಮಿಸುವುವು ಲಾವಣ್ಯ ಶಕ್ತಿ
ಅಲ್ಲೊಂದು ಕಲ್ಲಿರುವುದು ಈಗ …  ಹೃದಯವಿತ್ತು ಒಮ್ಮೆ ಅಲ್ಲಿ

ಕಳೇಬರದ ಒಳಗಾದರೋ  …  ಬಾಲೆಯೊರ್ವಳು ನೆಲೆಸಿಹಳು
ಆಗೊಮ್ಮೆ ಈಗೊಮ್ಮೆ …  ಉಬ್ಬುವುದು ನನ್ನ ಜಜ್ಜಿದ ಹೃದಯ
ನಾ ನೆನೆಪಿನಲ್ಲಿಡುವೆ ಆ ಆನಂದವ …  ನಾ ನೆನೆಪಿನಲ್ಲಿಡುವೆ ಆ ಯಾತನೆಗಳ
ನಾ ಅನುರಾಗದಿ ಜೀವಿಸಿಹೆನು  …  ಮತ್ತೊಮ್ಮೆ ಜೀವನವನು

ಅಳಿದುಳಿದ ವರುಷಗಳನು ಮಂಥಿಸುವೆ … ಹೋದವೇಕೋ ತ್ವರಿತದಲಿ
ಸ್ವೀಕರಿಸಿದೆ ನಾ ಕಠಿಣ ವಾಸ್ತವಾಂಶವ  …  ಯಾವುದು ಸ್ಥಿರವಲ್ಲವೆಂಬ ಸತ್ಯವ 
ಕಣ್ತೆರದು ನೋಡಿ ಜನರೇ …  ತೆರೆದು ನೋಡಿ
ಮುಂಗೋಪಿ ಮುದುಕಿಯಲ್ಲ …  ಸನಿಹದಲ್ಲಿ ನೋಡಿ ….   ನೋಡಿ ನನ್ನನ್ನು!!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ