ಮಂಗಳವಾರ, ಜೂನ್ 18, 2019

ಜೀವನದ ದೃಷ್ಟಿಕೋನಕ್ಕೊಂದು ಗಾಲಿಬನ ಕೈಪಿಡಿ

ಜೀವನದ ದೃಷ್ಟಿಕೋನಕ್ಕೊಂದು ಗಾಲಿಬನ ಕೈಪಿಡಿ
ಕನ್ನಡ ಭಾವಾರ್ಥ - ರವಿ ಗೋಪಾಲರಾವ್

ಕನಸಿನಲೂ ಹಂಬಲಿಸಲಿಲ್ಲ ನಾ
ಆಗುವೆ ಪ್ರತಿಷ್ಠಿತ ನಾ ಎಂದು
ನೀವು ನನ್ನನ್ನು ಪರಿಚಿತನೆಂದಿರಿ
ಅಷ್ಟೇ ಸಾಕೆನಗೆ

ಒಳ್ಳೆಯವರು ಒಳ್ಳೆಯವನೆಂದು
ಕೆಟ್ಟವರು ಕೆಟ್ಟವನೆಂದು ಅರಿತರೆನ್ನನು
    ಯಾರಿಗೆ ಎಷ್ಟು ಅವಶ್ಯಕತೆಯಿತ್ತೋ
    ಅಷ್ಟನ್ನೇ ಗುರುತಿಸಿದರೆನ್ನಲ್ಲಿ

ಜೀವನದ ತತ್ವಜ್ಞಾನವು ಕೂಡ
ಅದೆಷ್ಟು ಆಶ್ಚರ್ಯಕರ
    ಸಂಜೆ ಕೂಡ ಕಳೆಯಲಿಲ್ಲವಾದರೂ
ವರುಷಗಳೇ ಉರುಳಿ ಹೋದವೇಕೋ

ಅತ್ಯಾಶ್ಚಕರವಾದೊಂದು
ಓಟ ಈ ಜೀವನ
    ಒಂದುವೇಳೆ ಜಯಗಳಿಸಿದೆಯೋ
ನಿನ್ನಹಿಂದಯೇ  ಬೆಂಗಾವಲು ಬೀಳುವರು

ಪರಾಭವ ಗಳಿಸಿದೆಯೋ
ನಿನ್ನನ್ನು ಹಿಂದೆಯೇ ಬಿಟ್ಟೋಡುವರು

ಒಮ್ಮೊಮ್ಮೆ ಕುಳಿತು ಬಿಡುವೆ
ಮಣ್ಣಿನ ಮೇಲೆ
    ಏಕೋಏನೋ ನನಗೆ ನನ್ನದೇ
    ಬಿಳಿಲುಬಿಟ್ಟ ಬೇರುಗಳೇ ಇಷ್ಟವಾಗುವುದು

ನಾ ಸಮುದ್ರದಿಂದಲೇ
ಬದುಕುವುದನು ಕಲಿತೆ
    ಸದ್ದಿಲ್ಲದೇ ಹರಿಯುವೆ
    ನನ್ನ ಸರಹದ್ದಿನಲ್ಲೇ ಇರುವೆ

ಹಾಗೇನಿಲ್ಲ ಯಾವ ಅವಗುಣವೂ
ನನ್ನಲ್ಲಿಲ್ಲ ಎಂದು ಹೇಳಲಾರೆ ನಾ
    ಆದರೆ ಸತ್ಯ ಹೇಳುವೆ ನಾ
    ಯಾವ ವಂಚನೆಯೂ ನನ್ನಲ್ಲಿಲ್ಲ

ತಮ್ಮ ಅಂದಾಜಿನ ತುಲನೆಯಲ್ಲೇ
ಕುದಿಯುವರು ನನ್ನ ಶತ್ರುಗಳು
    ಒಂದೇ ಕ್ಷಣದಲಿ
    ಬದಲಿಸಲಿಲ್ಲ ನನ್ನ ಪ್ರೀತಿ
    ಬದಲಾಗಲಿಲ್ಲ ನನ್ನ ಸ್ನೇಹ

ಒಂದು ಕೈಗಡಿಯಾರವನೆ ಕೊಂಡು
ಕೈಯಲ್ಲಿ ಏನೆಂದು ಕಟ್ಟಿಕೊಳ್ಳಲಿ
    ಉಳಿಯಿತು ಕಾಲ ಹಿಂದೆಯೇ
ನನ್ನ ಹಿಂದೆಯೇ

ಎಣಿಸಿದ್ದೆ ನಾ ಮನೆಯೊಂದ ಕಟ್ಟಿ
ಸುಖದಲ್ಲಿ ಕುಳಿತುಕೊಳ್ಳುವೆನೆಂದು
    ಮನೆಯ ಅಗತ್ಯಗಳೇಕೋ
    ಮಾಡಿದವು ಎನ್ನನು ದಾರಿಹೋಕನ ತೆರದಿ

ಸುಖದ ಮಾತುಗಳನಾಡದಿರು
ಏ ಗಾಲಿಬ್
    ಬಾಲ್ಯದ ಭಾನುವಾರ
    ಬರಲಾರವೇಕೋ ಮತ್ತೊಮ್ಮೆ

ಜೀವನದ ಜಂಜಾಟದಲಿ
ಕಾಲದ ಜೊತೆ ಬಣ್ಣವೇ ಕಳೆದು ಹೋಗುವುದೇಕೋ
    ನಕ್ಕು ನಲಿಯುವ ಜೀವನವು ಕೂಡ
    ಸಾಧಾರಣ ಆಗುವುದೇಕೋ

ಅಂದೊಂದು ಮುಂಜಾವು ಇರುತಲಿತ್ತು
ನಗುತ್ತಲೇ ಏಳುತ್ತಿದ್ದೆ ನಾ
    ಮುಗುಳ್ನಗೆಯೇ ಇಲ್ಲದೆ
    ಇಂದೇಕೋ ಸಂಜೆ ಆವರಿಸುತಿಹದು

ಅದೆಷ್ಟು ದೂರ ಸರಿದೆವು
ಸಂಭಂದಗಳನು ನಿಭಾಯಿಸಿ, ನಿಭಾಯಿಸೀ
    ನಮ್ಮನ್ನೇ ಕಳೆದುಕೊಂಡೆವು
    ನಮ್ಮವರನ್ನು ಗಳಿಸಿ, ಗಳಿಸೀ

ಜನ ಹೇಳುವರು
ಅದೆಷ್ಟು ಮುಗುಳುನಗೆ ಬೀರುವೆನೆಂದು
    ದಣಿದಿರುವೆನು ನಾ
    ನೋವುಗಳಲಿ ಅವಿತು, ಅವಿತೂ

ಸುಖದಿಂದಿರುವೆನು
ಎಲ್ಲರನು ಖುಷಿಯಿಂದಲೇ ಇರಿಸುವೆನು
ಬೇಜವಾಬ್ದಾರಿ ನಾ ಆದರೂ
ಎಲ್ಲರ ಜವಾಬ್ದಾರಿ ಹೊರುವೆನು

ತಿಳಿದಿದೆ ಎನಗೆ
ನನದೆಂಬ ಅಮೂಲ್ಯ ನನ್ನಲ್ಲಿಲ್ಲವಾದರೂ
    ಕೆಲವೊಂದು ಅತ್ಯಮೂಲ್ಯ ಜನರ
    ನೆಂಟಸ್ತಿಕೆ ಇರುವುದೆನಗೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ