ಕೆಂಪು ಚಪ್ಪಲಿ ಮತ್ತು ಕೊಳ್ಳಿದೆವ್ವ
ಮೊನ್ನೆ ಹಲ್ಲಿನ ಡಾಕ್ಟರ್ ಬಳಿ ಹೋಗಿದ್ದೆ. ಡೆಂಟಿಸ್ಟ್ ಆಫೀಸ್ ಅಂದರೆ ಕಾಯಿಸದೆ ಕೆಲಸ ಆಗುತ್ಯೇ? ವೈಟಿಂಗ್ ರೂಮಿನಲ್ಲಿ ಕಾಯುತ್ತ ಕುಳಿತ್ತಿದ್ದೆ. ಕಣ್ಣಿಗೆ ಕಂಡಿದ್ದು ಒಂದು ಹಳೇ ನ್ಯಾಷನಲ್ ಜೀಯೋಗ್ರಾಫಿಕ್ ಸಂಚಿಕೆ. ಆಗಸ್ಟ್ ೨೦೧೫ ರ ಸಂಚಿಕೆ. ಅದನ್ನು ಹಾಗೆ ತಿರುವು ಹಾಕುತ್ತಿದ್ದೆ. ಅದರಲ್ಲಿ ಕಂಡಿದ್ದು ಒಂದು ಚಿತ್ರ. ಬೆಂಕಿಯ ಚಿತ್ರ. ಅದೇಕೋ ಏನೋ ಚಿತ್ರದ ಶೀರ್ಷಿಕೆಯನ್ನು ಓದಲು ಹಿಂಜರಿಯಿತು ಮನ. ತ್ವರಿತದಲ್ಲೇ ಪುಟಗಳನ್ನೂ ತಿರುವಿ ಹಾಕಿದೆ. ಅಷ್ಟರಲ್ಲೇ ನನ್ನ ಸರದಿ ಬಂದಿದ್ದರಿಂದ ಆ ಸಂಚಿಕೆಯನ್ನು ಹಾಗೆಯೆ ಇಟ್ಟು ಡೆಂಟಿಸ್ಟ್ ಕೋಣೆಗೆ ಹೋಗಿ ಅಂದಿನ ಕಾರ್ಯ ಮುಗಿಸಿಕೊಂಡು ಮನೆಗೆ ಬಂದಿದ್ದೆ.
ರಾತ್ರಿ ಅರೆಬರೆ ಕನಸಿನಿಂದ ಎಚ್ಚರ ಆಯಿತು. ಢವಗುಟ್ಟುತ್ತಿದ್ದ ಹೃದಯ, ಬೆವರು ಹನಿಗಳಿಂದ ತೊಯ್ದ ಹಣೆ. ಕಾರಣ ಹುಡುಕುವುದು ಅಷ್ಟೇನೂ ಕಷ್ಟವಾಗಲಿಲ್ಲ. ಕನಸ್ಸಾಗಿರಲಿಲ್ಲ ಅದು. ಅಷ್ಪಷ್ಟ ಕಲ್ಪನೆ, ಅಷ್ಪಷ್ಟ ವಾಸ್ತವಿಕತೆ, ಅಷ್ಪಷ್ಟ ಭಯವಾಗಿತ್ತು ಆ ದೃಶ್ಯ. ಸ್ಮೃತಿಪಟದಲ್ಲಿ ಕಂಡ ಆ ದೃಶ್ಯ ನಿಗೂಢತೆಯಲ್ಲಿ ಮರೆಯಾಗಲು ಸಾಧ್ಯವೇ? ಅದು ಚಿಕ್ಕಂದಿನಲ್ಲಿ ಕಾಡುತ್ತಿದ್ದ ಕೊಳ್ಳಿದೆವ್ವ ಎನ್ನುವ ಅರಿವಾಗಿ ಮತ್ತಷ್ಟು ಭಯದಿಂದ ನಿದ್ರೆ ಮಾಯವಾಗಿತ್ತು.
ಕೊಳ್ಳಿದೆವ್ವ ಅನ್ನುವ ಭಯವೇ ದೂರಾವಾಗಿ ಸಾಕಷ್ಟು ವರ್ಷಗಳಾಗಿವೆ. ಆ ಪದವನ್ನು ಯಾವುದಾದರೂ ಸಂಭಾಷಣೆಯಲ್ಲಿ, ಯಾವುದಾದರೂ ಕಥೆಯಲ್ಲಿ ಕೇಳಿ ಒಂದು ಯುಗವೇ ಕಳೆದಂತೆ ಆಗಿದೆ. ಯಾರು ಬಳಸದ ಪದ, ಯಾರು ಯೋಚಿಸದ ಪದ, ಯಾರೂ ಕ್ಯಾರೇ ಅನ್ನದ ಪದ, ಹಾಗಿರುವಾಗ ಇಂದು ಅದೇಕೆ ಕನಸಿನಲ್ಲಿ, ಅಲ್ಲ, ಅಷ್ಪಷ್ಟ ಕಲ್ಪನೆಯಲ್ಲಿ ಕಾಣಿಸಿತು ಎನ್ನುವ ಕುತೂಹಲ ಮೂಡಿತು. ನಿದ್ದೆ ಬಾರದ ರಾತ್ರಿಯಲ್ಲಿ ಹಿಂದಿನದನ್ನು ಮೆಲಕು ಹಾಕುವುದಕ್ಕಿಂತ ಉತ್ತಮ ಕೆಲಸ ಏನಿದೆ. ಸರಿ ಹಿಂದಕ್ಕೆ ಸರಿಯಿತು ಮನಸ್ಸು. ಆಗಿನ್ನು ನನಗೆ ಏಳೆಂಟರ ವಯಸ್ಸು. ಹಾಸನದ ಒಂದು ಹೊಸ ಬಡಾವಣೆಯಲ್ಲಿ, ಊರಿನ ದೂರದಲ್ಲಿ ನಿರ್ಜನವಾದ ಪ್ರದೇಶದಲ್ಲಿ ಒಂದು ಪುಟ್ಟ ಮನೆ. ಮನೆಯ ಮುಂದಿನ ವಿಸ್ತಾರವಾದ ಬಯಲು. ಇಡೀ ಬಯಲೇ ನಮ್ಮ ಆಟದ ಮೈದಾನ. ಅಷ್ಟು ದೊಡ್ಡ ಮೈದಾನದ ಉತ್ತರದ ಗಡಿ ಅಂದರೆ ಒಂದು ಸಣ್ಣ ಕೆರೆ. ಹರಿಯುತ್ತಿರುವ ಒಂದು ಝರಿಗೆ ಒಂದು ಸಣ್ಣ ಆಣೆಕಟ್ಟನ್ನು ಕಟ್ಟಿ ಅಲ್ಲಿನ ರೈತರು ನಿರ್ಮಿಸಿದ ಸಣ್ಣ ಕೆರೆ ಅಷ್ಟೇ ಅದು. ಅವರಿತ್ತ ಹೆಸರು ದೇವನ ಕೆರೆ. ಮನೆಯಿಂದ ೨೦ ನಿಮಿಷ ಕಾಲುದಾರಿಯಲ್ಲಿ ನೆಡೆದರೆ ಸಿಕ್ಕುತ್ತಿತ್ತು ಆ ದೇವನ ಕೆರೆ. ನಾನು ಮತ್ತು ನನ್ನ ಗೆಳೆಯರಿಗೆ ಅದು ‘ಗಾಳಿ ಕೆರೆ.’ ಏಕೆಂದರೆ ಕೆರೆ ದಿಬ್ಬದ ಮೇಲೆ ನಿಂತರೆ ಸದಾ ತಣ್ಣನೆ ಗಾಳಿ ಬೀಸುತ್ತಿತ್ತು ಮತ್ತು ಲಹರಿ ಲಹರಿಯಾಗಿ ಸಣ್ಣ ಅಲೆಗಳು ಕೆರೆಯಲ್ಲಿ ಮೂಡುವುದನ್ನು ನೋಡುವುದೇ ನಮಗೆ ಬೆರಗು. ನಮ್ಮ ನೆಚ್ಚಿನ ಆಟ ಅಂದರೆ ದಿಬ್ಬದ ಮೇಲೆ ನಿಂತು ನಾವು ಹಾಕಿಕೊಂಡಿದ್ದ ಹವಾಯಿ ಚಪ್ಪಲಿಗಳನ್ನು ಕೆರೆಯೊಳಗೆ ಎಸೆಯುವುದು. ನಂತರ ಕೆರೆಯ ಪೂರ್ವಕ್ಕೆ ಓಡಿ ನೀರಿಗಿಳಿದು ತೇಲಿ ಬರುತ್ತಿದ್ದ ಚಪ್ಪಲಿಗಳನ್ನು ಝರಿಯಲ್ಲಿ ಸೇರಿಹೋಗುವ ಮುನ್ನ ಹಿಡಿದು ಕೊಳ್ಳುವುದು. ನಮ್ಮ ಕಲ್ಪನೆಯಲ್ಲಿ ಅವು ಸಣ್ಣ ದೋಣಿಯಂತೆ ಕಾಣುತ್ತಿದ್ದವು. ಯಾರ ‘ದೋಣಿ’ ಮೊದಲು ತೇಲಿ ಬರುತ್ತೋ ಅವರೇ ವಿಜೇತರು, ಏಕೆಂದರೆ ದಿಬ್ಬದಿಂದ ಎಸೆಯುವಾಗ ಯಾರು ಬಲಶಾಲಿಯೋ ಅವನೇ ತಾನೇ ದೂರ ಎಸೆಯಲು ಸಾಧ್ಯ. ದೂರ ಎಸೆದಷ್ಟೂ ಬೇಗ ಝರಿಯನ್ನು ತಲುಪುತ್ತಿತ್ತು ಅಲೆಗಳ ಸಹಾಯದಿಂದ. ಈ ಆಟದಲ್ಲಿ ನಾನೇ ಗೆಲ್ಲುತ್ತಿದ್ದು, ಕಾರಣ ನನ್ನ ಸ್ನೇಹಿತರು ಎಷ್ಟು ಬಲಶಾಲಿಗಳಾದರೂ ಅವರ ಚಪ್ಪಲಿಯ ಬಣ್ಣ ತಿಳಿ ನೀಲಿ. ನೀರಿನಲ್ಲಿ ತೇಲಿಬರುತ್ತಿರುವ ನೀಲಿ ಚಪ್ಪಲಿ ಯಾವ ದಿಕ್ಕಿಗೆ ಹೋಗುತ್ತಿದೆ ಎಂದು ಗೊತ್ತಾಗುತ್ತಿರಲಿಲ್ಲ. ಆದರೆ ನನ್ನದು ಕೆಂಪು, ದೂರದಿಂದಲೇ ಕಾಣುತ್ತಿತ್ತು!
ಸೂರ್ಯ ಇದ್ದಷ್ಟು ಹೊತ್ತು ಗಾಳಿ ಕೆರೆ ಎಷ್ಟು ಉಲ್ಲಾಸ ತರುತ್ತಿತ್ತೋ ಸಂಜೆಯಾದರೆ ಅಷ್ಟೇ ಭಯವನ್ನೂ ಹುಟ್ಟುಸುತ್ತಿತ್ತು. ಸುತ್ತಲೂ ಕಗ್ಗತ್ತಲು. ಬಟ್ಟ ಬಯಲಿನಲ್ಲಿ ಯಾವ ದಿಕ್ಕಿಗೆ ಹೋಗುತ್ತಿದ್ದೇವೆ ಅಂತ ಅರಿವಾಗುತ್ತಿರಲಿಲ್ಲ. ಅದಕ್ಕೂ ಹೆಚ್ಚಾಗಿ ಆ ದೇವನ ಕೆರೆಯನ್ನು ಕೆಲವು ಪುಂಡ ಹುಡುಗರು ‘ದೆವ್ವದ ಕೆರೆ ‘ ಅಂತಲೇ ಕರೆಯುತ್ತಿದ್ದರು. ಕತ್ತಲಾದ ನಂತರ ಕೆರೆಯ ದಂಡೆಯಲ್ಲಿ ಕೊಳ್ಳಿದೆವ್ವ ಬರುತ್ತವೆ ಅಂತ ವದಂತಿಗಳನ್ನು ಹುಟ್ಟಿಸಿ ಹಿಂದೆಗೆಯುವ ಹುಡುಗರನ್ನು ಸದಾ ಹೆದರಿಸಿ ತಮ್ಮ ಅಧಿಕಾರ ಶ್ರೇಣಿಯನ್ನು ಸ್ಥಾಪಿಸಿಕೊಳ್ಳುತ್ತಿದರು. ಅದೊಂದು ಬೇಸಿಗೆ ರಜಾ ದಿನ. ಸೂರ್ಯ ಮುಳುಗುವವರೆಗೂ ಆಟ ಆಡುತ್ತಲೇ ಇದ್ದೆವು ನಾನು ನನ್ನ ಗೆಳೆಯರು. ಎಲ್ಲರೂ ಎಸೆದ ಚಪ್ಪಲಿಗಳು ಬಂದು ದಡ ಸೇರಿದ್ದವು. ಆದರೆ ಗಾಳಿ ಮತ್ತು ಅಲೆಗಳು ಕಡಿಮೆಯಾಗಿ ನನ್ನ ಮತ್ತು ನನ್ನ ಆಪ್ತ ಗೆಳೆಯ ಆನಂದನ ಚಪ್ಪಲಿ ಮಾತ್ರ ಕೆರೆಯ ಮಧ್ಯದಲ್ಲೇ ಉಳಿದಿತ್ತು. ಸಂಜೆ ಆವರಿಸುತ್ತಿದೆ, ನನ್ನ ಮಿಕ್ಕ ಸ್ನೇಹಿತರು ಹೆದರಿಕೆಯಿಂದ ಬನ್ನಿರೋ ನಾಳೆ ಬೆಳಿಗ್ಗೆ ಸಿಗುತ್ತೆ ಎಂದು ಹೊರಡುವ ಆತುರದಲ್ಲಿದ್ದರು. ಚಪ್ಪಲಿ ಇಲ್ಲದೆ ಮನೆಗೆ ಹೋಗುವ ಸಾಧ್ಯತೆಯೇ ಇರಲಿಲ್ಲ ನನಗೆ ಆನಂದನಿಗೆ. ಸರಿ ನಾವಿಬ್ಬರು ಸ್ವಲ್ಪ ನಿಧಾನವಾಗಿ ಮನೆ ತಲುಪುತ್ತೇವೆಂದು ನಿರ್ಧಾರವಾಯಿತು. ಅವರೆಲ್ಲ ಹೊರಟು ಹೋದ ಮೇಲೆ ಮತ್ತಷ್ಟು ಭಯ ಭೀತಿಯಲ್ಲಿ ಕಾದು ಕುಳಿತೆವು. ಚಪ್ಪಲಿಗಳೇನೋ ಸಿಕ್ಕವು. ಆದರೆ ನೋಡುತ್ತಿದ್ದಂತೆ ಕತ್ತಲಾವರಿಸಿತ್ತು. ಸಂಪೂರ್ಣ ಕತ್ತಲಿನಲ್ಲಿ ಪರಿಚಯವಿದ್ದ ಮನೆಯ ಕಾಲುದಾರಿ ಮಾತ್ರ ಸಿಗಲಿಲ್ಲ. ಸ್ವಲ್ಪ ದೂರ ಬಂದ ಮೇಲೆ ಮನಸ್ಸಿನ ತಳಮಳದ ಕಾತುರತೆಯಲ್ಲಿ ಆನಂದ್ ಪಿಸುಗುಟ್ಟಿದ: ‘ಯಾವತ್ತಾದರೂ ಕೊಳ್ಳಿದೆವ್ವ ನೋಡಿದ್ಯಾ?’ ನಡುಗುತ್ತ ಮೆಲುದನಿಯಲ್ಲಿ ಇಲ್ಲ ಎಂದಿದ್ದೆ. ಝರಿಯ ಆ ಬದಿ ಬೆರಳು ಮಾಡಿ ಅಲ್ಲ್ನೋಡು ಅಲ್ಲಿ ಕಾಣಿಸ್ತಾಇವೆ ಅಂತ ಪಿಸುಗುಟ್ಟಿದ. ಭಯಾನಕ ದೃಶ್ಯ. ಗಂಡು ಹೆಣ್ಣು ಮತ್ತು ಸಣ್ಣ ಮಕ್ಕಳ ಆಕಾರದಲ್ಲಿ ಉರಿಯುತ್ತಿದ್ದ ಬೆಂಕಿ. ತೀಕ್ಷ್ಣ ಬೆಂಕಿಯಲ್ಲ ಆದರೆ ನಿಂತ ಕಡೆಯಿಂದಲೇ ಆ ಆಕಾರಗಳು ಒಂದು ಗಳಿಗೆ ಎತ್ತರಕ್ಕೆ ಮತ್ತೊಂದು ಗಳಿಗೆ ಪುಟ್ಟದಾಗಿ ಉರಿದು ಆರಿಹೋಗುತ್ತಿದ್ದವು. ಆರಿಹೋದ ಸಮಯದಲ್ಲೇ ಮೂರೂ ನಾಲ್ಕು ಗಜಗಳ ದೂರದಲ್ಲಿ ಮತ್ತೊಂದು ಬೆಂಕಿ ಧಗ್ಗನೆ ಹತ್ತಿಕೊಳ್ಳುವುದು ಹಾಗೆಯೇ ಮರೆಯಾಗುವುದು. ಕಾಲುಗಳೇ ಇಲ್ಲದ ಈ ದೆವ್ವಗಳು ನೆಡೆಯಲು ಹೇಗೆ ಸಾಧ್ಯ. ಆದ್ರೆ ಅಲ್ಲಿ ಯಾರೂ ಇಲ್ಲ, ಬೆಂಕಿಯನ್ನು ಹಚ್ಚಿಸಲು ಅಥವಾ ಆರಿಸಲು. ಕೊಳ್ಳಿದೆವ್ವ ನೋಡಿದೆವೆಂದು ಯಾರೂ ಖಾತ್ರಿ ಪಡಿಸಲೇ ಬೇಕಿರಲಿಲ್ಲ ಆ ದೃಶ್ಯ. ಕೆಟ್ಟವೊ ಬದುಕಿದ್ವೋ ಅಂತ ಇಬ್ಬರೂ ಓಡಿ ಅಲ್ಲೇ ಇದ್ದ ಒಂದು ಸಣ್ಣ ಮರವನ್ನು ಹತ್ತಿ ಕುಳಿತೆವು. ಐದಾರು ನಿಮಿಷಗಳ ನಂತರ ಸ್ವಲ್ಪ ದೂರದಲ್ಲೇ ನೆಲದ ಮೇಲೆ ಕಂಡ ದೃಶ್ಯ ಮರದ ಮೇಲಿಂದ ಅದೇಕೋ ಅಂದುಕೂಂಡಂತೆ ಹೆದರಿಕೆ ತರಿಸಲಿಲ್ಲ. ಬಹುಷಃ ಪಕ್ಷಿನೋಟೋದಲ್ಲಿ ಎಲ್ಲವು ಚಿಕ್ಕದಾಗಿಯೇ ಕಾಣುವುದು. ಎಲ್ಲ ಕೊಳ್ಳಿದೆವ್ವಗಳು ಆರಿಹೋದವು ಎಂದುಕೊಳ್ಳುವಷ್ಟರಲ್ಲೇ ನಾವು ಕುಳಿತ್ತಿದ್ದ ಮರದ ಕೆಳಗಡನೆ ಬೆಂಕಿ ಧಗ್ಗನೆ ಆಳೆತ್ತರಕ್ಕೆ ಹತ್ತಿ ನಮ್ಮನ್ನೇ ಸುಡುವಂತೆ ಕೈಚಾಚಿದಾಗ ಇದ್ದ ಭಯವೆಲ್ಲ ಮರುಕಳಿಸಿತು. ಮರದ ಇನ್ನೆರೆಡು ಕೊಂಬೆಗಳನ್ನು ಹತ್ತಿ ಕಣ್ಣುಮುಚ್ಚಿ ಕುಳಿತೆವು. ಅಷ್ಟು ಹೊತ್ತಿಗಾಗಲೇ ಕೊಳ್ಳಿ ದೆವ್ವ ದೂರ ಹೋದಂತೆ ಆರಿಹೋಗಿತ್ತು. ನಮ್ಮ ಅದೃಷ್ಟಕ್ಕೆ ಸ್ವಲ್ಪ ಸಮಯದ ನಂತರ ದೂರ ದಿಗಂತದಲ್ಲಿ ಪೂರ್ಣ ಚಂದ್ರನ ಉದಯವಾಗಿ ಕಗ್ಗತ್ತಲು ಹೋಗಿ ಧೈರ್ಯ ಬಂದಿತು. ಹೆದರುತ್ತಲೇ ಮರ ಇಳಿದು ಹಾಗು ಹೀಗೂ ದಾರಿ ತಪ್ಪಿಸಿಕೊಳ್ಳದೆ ಮನೆ ಸೇರಿಕೊಂಡೆವು. ಕೆರೆಯ ಹತ್ತಿರ ಕಂಡ ದೃಶ್ಯದ ಬಗ್ಗೆ ಯಾರಿಗೂ ಹೇಳದೆ ಬೇಸಿಗೆಯಲ್ಲೂ ನಡಗುತ್ತ ಬೇಗನೆ ನಿದ್ದೆ ಮಾಡಿದ್ದೆ ಅಂದು ನಾನು. ಡಾಕ್ಟರ್ ವೃತ್ತಿಯಲ್ಲಿರುವ ನಮ್ಮ ತಂದೆಗೆ ನನ್ನ ಭಯ ಗೊತ್ತಾಗದಿರಲಿ ಎಂದು ಮುಸುಕು ಹಾಕಿ ಕೊಂಡು ಮಲಗಿದ್ದೆ. ಮಾರನೇ ದಿನ ಆನಂದ್ ಅಮ್ಮ ಅವನನ್ನು ನಮ್ಮ ತಂದೆ ಬಳಿ ಕರೆದುಕೊಂಡುಬಂದಿದ್ದರು. “ಯಾಕೋ ರಾತ್ರಿಯೆಲ್ಲ ಮೈ ಸುಡುತ್ತಿತ್ತು ಮತ್ತು ಯಾಕೋ ಬೆಚ್ಚಿಕೊಂಡವನಂತೆ ಕಾಣ್ತಾ ಇದಾನೆ ಡಾಕ್ಟರೇ” ಅಂತ ಹೇಳಿ ಔಷಧಿ ತೆಗೆದುಕೊಂಡು ಹೋಗಿದ್ದರು. ಮರದ ಕೆಳಗೆ ಬಿಟ್ಟು ಬಂದ ಚಪ್ಪಲಿ ಬಗ್ಗೆ ಚಕಾರವೆತ್ತಲಿಲ್ಲ ನಾನು ಜೊತೆಗೆ ಚಪ್ಪಲಿ ಎಲ್ಲಿ ಅಂತ ಅಮ್ಮ ಕೇಳಲಿಲ್ಲ ಸಧ್ಯ. ಮಾರನೇ ದಿನ ಸುಡುವ ಬಿಸಿಲಿನಲ್ಲಿ ಬರಿಗಾಲಿನಲ್ಲಿ ಕೆರೆಯವರೆಗೂ ಹೋಗಿ ಅಲ್ಲೇ ಮರದ ಕೆಳಗೆ ಬಿದ್ದಿದ್ದ ಚಪ್ಪಲಿಯನ್ನು ಧರಿಸಿ ಮನೆಗೆ ಬಂದಿದ್ವಿ. ಮತ್ತೊಂದು ಬಾರಿ ಆ ಕೆರೆಯ ಬಳಿ ಹೋಗಲೇ ಇಲ್ಲ.
ಬಾಲ್ಯದ ಆ ನೆನಪಿನಿಂದ ವಾಸ್ತವಕ್ಕೆ ಬರಲು ಸ್ವಲ್ಪ ಸಮಯ ಬೇಕಾಯಿತು. ಬೆಳೆಗ್ಗೆ ತಾನೇ ಹುಳುಕು ಹಲ್ಲನ್ನು ಕೊರೆದು ಫಿಲ್ ಮಾಡಿಸಿಕೊಂಡಿದ್ದರಿಂದ ಹಲ್ಲು ನೋವು ಮರುಕಳಿಸಿತ್ತು. ಹಾಗೆಯೇ ಇಂದು ಡೆಂಟಿಸ್ಟ್ ಆಫೀಸ್ನಲ್ಲಿ ನೋಡಿದ್ದ ಆ ವಿಭಿನ್ನ ಬೆಂಕಿ ಚಿತ್ರ ತಲೆ ಕೊರೆಯಲು ಪ್ರಾರಂಭ ಮಾಡಿತು. ಅದೇಕೋ ಒಂದು ರೀತಿ ಭಯ ಹುಟ್ಟಿಸಿತು. ಬೆಂಕಿಯು ಅಲ್ಲ, ಅನಿಲವು ಅಲ್ಲದ ಆ ಚಿತ್ರ ಯಾರೋ ಬೆಂಕಿಯ ಅನಾಹುತದಲ್ಲಿ ಸುಟ್ಟು ಆರ್ತನಾದ ಮಾಡುತ್ತಿರುವಂತೆ, ಆಕಾರವಿಲ್ಲದ ಕೆಂಪು ಹೊಗೆಯಂತೆ ಭಾಸವಾಯಿತು. ನಿದ್ದೆ ಮಾಯವಾಗಿತ್ತು. ಸರಿ, ಇಂಟರ್ನೆಟ್ನಲ್ಲಿ ಹುಡುಕಿ ಆ ಹಳೆ ಆಗಸ್ಟ್ ೨೦೧೫ ರ ನ್ಯಾಷನಲ್ ಜಿಯೋಗ್ರಾಫಿಕ್ ಹುಡುಕಿ ಆ ಬೆಂಕಿಯ ಚಿತ್ರವನ್ನು ಮತ್ತೊಮ್ಮೆ ನೋಡಿದೆ. ಭಯಕ್ಕೆ ಕಾರಣ ಸ್ಪಷ್ಟವಾಗಿತ್ತು. ಈ ಚಿತ್ರ ನಾನು ಚಿಕ್ಕಂದಿನಲ್ಲಿ ವಾಸ್ತವಿಕೆಯಲ್ಲಿ ಕಂಡ ಕೊಳ್ಳಿದೆವ್ವ ಎನ್ನುವುದು ಅರಿವಾಗಿತ್ತು. ಸುಮಾರು ೫ ದಶಕಗಳ ಹಿಂದೆ ನಾನು ಆನಂದ್ ‘ಗಾಳಿ ಕೆರೆ ‘ ಬಳಿ ಭಯದಲ್ಲಿ ಕಂಡ ವಾಸ್ತವಿಕ ದೃಶ್ಯವನ್ನು ಈ ಛಾಯಾಚಿತ್ರಕಾರ ಅದೆಷ್ಟು ಸುಂದರವಾಗಿ ತನ್ನ ಕ್ಯಾಮರಾದಲ್ಲಿ ೨೦೧೫ರಲ್ಲಿ ಸೆರೆಹಿಡಿದ್ದಿದ್ದಾನೆ ಎಂದು ಅನಿಸಿ, ರೋಮಾಂಚನವಾಯಿತು, ಬೆರಗುಗೊಳಿಸಿತು ಜೊತೆಗೆ ನಡುಕ ಹುಟ್ಟಿಸಿತು. ಏಕೆಂದರೆ ಇಷ್ಟು ವರ್ಷಗಳಿಂದಲೂ ಕೊಳ್ಳಿದೆವ್ವವನ್ನು ಒಂದು ಕಲ್ಪನೆ ಮಾತ್ರವಿರಬೇಕೆಂದು ನನ್ನನ್ನು ನಾನೇ ಮನದಟ್ಟು ಮಾಡಿಕೊಂಡು ಮರೆತ್ತಿದ್ದೆ. ಆದರೆ ಕಣ್ಣಿಗೆ ಕಟ್ಟುವಂತಿದ್ದ ಆ ಅನುಭವವನ್ನು ನೈಜ ಚಿತ್ರದಲ್ಲಿ ಮತ್ತೆ ನೋಡಿದ್ದು ನಂಬಲು ಸಾಧ್ಯವಾಗದ ಮಾತಾಗಿತ್ತು. ಮತ್ತೊಮ್ಮೆ ಚಿತ್ರವನ್ನು ನೋಡಿದೆ. ಅದೇ ಕೊಟ್ಟಿಗೆಗಳಿಲ್ಲದೆ ನೆಲದಿಂದ ಧಗ್ಗನೆದ್ದು ಉರಿವ ಬೆಂಕಿ, ಅನಿಲದಲ್ಲಿ ಮೂಡಿಬಂದ ಮನುಷ್ಯಾಕೃತಿ, ಅದೇ ಮುತ್ಸಂಜೆ, ಅದೇ ಕೊಳ್ಳಿದೆವ್ವ! ತುಸು ವ್ಯತ್ಯಾಸವೆನಿಸಿದ್ದು ಈ ಚಿತ್ರದಲ್ಲಿ ನೆಲದಲ್ಲಿ ಹಿಮಪಾತವಿತ್ತು ಆದರೆ ಆ ಸಂಜೆ ಬೇಸಿಗೆಯ ದಿನ, ಎಲ್ಲೆಡೆ ಪಾಚಿಹಿಡಿದ ಒಣಗಿದ ಜವುಗು ಅಷ್ಟೇ. ಮಲೆನಾಡಿನ ಬಟ್ಟ ಬಯಲು, ಅಲ್ಲೊಂದು ಇಲ್ಲೊಂದು ಮರವಷ್ಟೇ. ಕಡಿವಾಣವಿಲ್ಲದ ಕುದುರೆಯಂತೆ ಮನಸ್ಸನ್ನು ಸಡಿಲಬಿಟ್ಟರೆ ನೀವು ಈ ಚಿತ್ರದಲ್ಲಿ ಮನುಷ್ಯ ಕೊಳ್ಳಿದೆವ್ವದ ತೋಳಿನ ಆಸರೆಯಲ್ಲಿ ಕುಳಿತ ಮಗುವನ್ನು ಕೂಡ ಊಹಿಸಿಕೊಳ್ಳಬಹುದು. ನಿಮಿಷಕ್ಕೊಂದು ಆಕೃತಿ ಪಡೆಯುವ ಈ ಕೊಳ್ಳಿದೆವ್ವಗಳನ್ನು ಅದೆಷ್ಟು ಬಾರಿ ನೋಡಿದ್ದೇನೆಯೋ ನಾನು ಎನ್ನುವ ಭಾವನೆ ಹುಟ್ಟಿಸಿತು ಈ ಚಿತ್ರ. ಒಟ್ಟಿನಲ್ಲಿ ಕೊಳ್ಳಿದೆವ್ವ ನನ್ನ ಕಲ್ಪನೆ ಮಾತ್ತ್ರವಲ್ಲ ಎನ್ನುವುದನ್ನು ಸಾಬೀತುಗೊಳಿಸಿತು ಈ ಚಿತ್ರ. ಧೈರ್ಯದಿಂದ ಆ ಚಿತ್ರದ ಶೀರ್ಷಿಕೆಯನ್ನು ಮತ್ತು ವಿವರಣೆಯನ್ನು ಓದಲು ಶುರು ಮಾಡಿದೆ. ವಿಜ್ಞಾನಿಗಳ ಪ್ರಕಾರ ಜವುಗಾಳಿ (ಮೀಥೇನ್ ಗ್ಯಾಸ್) ಪರಿಸರದಲ್ಲಿ, ಹೆಚ್ಚಾಗಿ ಕೆರೆಗಳ ಜವುಗು ಅಥವಾ ಕೊಳೆತ ಸಗಣಿ ಮತ್ತು ಒಣಗಿದ ಸಸ್ಯಗಳಿಂದ ಕೂಡಿರುವ ಕೆರೆಯ ನೀರು ಮತ್ತು ಮಣ್ಣಿನ ಮಿಲನದ ಜಾಗದಲ್ಲಿ ತಾನಾಗಿಯೇ ಉತ್ಪತ್ತಿಯಾಗುವ ಒಂದು ಅನಿಲ. ಕೆಲವೊಮ್ಮೆ ಬಿಸಿಲಿನ ಧಗೆಯಿಂದ ಒಣಗಿದ ಎಲೆಗಳು ಕೆಂಡದಂತೆ ಕಾದು ಗಾಳಿ ಬೀಸಿದಾಗ ಜ್ವಾಲೆಯಂತೆ ಹತ್ತಿಕೊಳ್ಳುತ್ತವೆ. ಜೊತೆಗೆ ಮಣ್ಣು ಮತ್ತು ಎಲೆಗಳ ಕೆಳಗೆ ಶೇಖರಿಸಿದ್ದ ಜವುಗಾಳಿ ಹೊರಬಂದು ಒಂದು ಸ್ಫೋಟನೆಯಲ್ಲಿ ಬೆಂಕಿಯಂತೆ ಕೆಲ ಕಾಲ ಉರಿದು ನೋಡುವವರಿಗೆ ಕೊಳ್ಳಿದೆವ್ವ ಕುಣಿಯುತ್ತಿರುವಂತೆ ಕಾಣುತ್ತದೆ. ಜವುಗಾಳಿ ಮುಗಿದ ಮೇಲೆ ತಾನಾಗಿಯೇ ಆರಿಹೋಗುತ್ತವೆ, ಈ ಕೊಳ್ಳಿದೆವ್ವಗಳು! ಎಲ್ಲ ಮೂಢನಂಬಿಕೆಗೂ ಬೌತಿಕ ವಿಜ್ಞಾನ ವಿವರಣೆ ಕೊಡಬಲ್ಲದು ಎಂದು ಅರಿವಾಗಿ ಗಾಢ ನಿದ್ರೆ ಬಂದಿತ್ತು.
ಸಂಜೆ ಆಫೀಸಿನಿಂದ ಮನೆಗೆ ಬಂದಾಗ ಹೆಂಡತಿ ಮಕ್ಕಳು ಶಾಪಿಂಗ್ ಗೆ ಹೋಗಿದ್ದರು. ಕಂಪ್ಯೂಟರ್ನಲ್ಲಿ ಟೈಪ್ ಮಾಡ್ತಿದ್ದ ಈ ನನ್ನ ಬಾಲ್ಯದ ಘಟನೆಯನ್ನು ಅಲ್ಲಿಗೆ ಮುಗಿಸಿ ಇನ್ನೇನು ನನ್ನ ಬ್ಲಾಗಿನಲ್ಲಿ ಪೋಸ್ಟ್ ಮಾಡುವವನಿದ್ದೆ. ಶಾಪಿಂಗ್ ಮುಗಿಸಿ ಒಳಗೆ ಬಂದ ಮಗಳು ತಾನು ತಂದದ್ದನ್ನು ತೋರಿಸಿ “ಡ್ಯಾಡ್ ಡು ಯೂ ಲೈಕ್ ದಿಸ್” ಅಂತ ಎಲ್ಲ ಡ್ರೆಸ್ಗಳನ್ನು ತೋರಿಸಿದ್ದಕ್ಕೆಲ್ಲ ಗುಡ್ ಗುಡ್ ಅಂತ ಯಾಂತ್ರಿಕವಾಗಿ ಹೇಳುತ್ತಿದ್ದೆ. ಆದರೆ ಅವಳು ಕೊನೆಯಲ್ಲಿ “ದಿಸ್ ಐ ಗಾಟ್ ಫಾರ್ ೫೦ ಸೆಂಟ್ಸ್” ಅಂತ ಹೇಳಿ ತೋರಿಸಿದ ಕೆಂಪು ಚಪ್ಪಲಿಗಳನ್ನು ನೋಡಿ ನನಗೆ ಬೌತಿಕ ವಿಜ್ಞಾದಲ್ಲಿ ಇದ್ದ ನಂಬಿಕೆಯನ್ನು ಪ್ರಶ್ನಿಸುವಂತೆ ಆಯಿತು. ಅದೇ ಕೆಂಪು ಹವಾಯಿ ಚಪ್ಪಲಿ! ನಾನು ಅಂದು ಧರಿಸಿದ್ದ ನನ್ನ ಬಾಲ್ಯದ ಕಾಲಿನ ಅಳತೆಯ ಕೆಂಪು ಚಪ್ಪಲಿ. ಕಾಕತಾಳೀಯ? ಖಂಡಿತಾ ಗೊತ್ತಿಲ್ಲ ಆದರೆ ಮೂಕವಿಸ್ಮಿತನಾದೆ. ತಕ್ಷಣ ಒಂದು ಫೋಟೋ ತೆಗೆದು ನನ್ನ ಬ್ಲಾಗ್ ಜೊತೆಗೆ ಲಗತ್ತಿಸಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ