ಮಂಗಳವಾರ, ಫೆಬ್ರವರಿ 18, 2020

ಮುನಿವರ್ಯರು ನೆಡೆವ ಪುಣ್ಯದ ನಾಡಲ್ಲಿ ಅಪವಿತ್ರ ಹೆಜ್ಜೆಗಳಿಗೆ ತಯಾರಿ.


ಮುನಿವರ್ಯರು ನೆಡೆವ ಪುಣ್ಯದ ನಾಡಲ್ಲಿ ಅಪವಿತ್ರ ಹೆಜ್ಜೆಗಳಿಗೆ ತಯಾರಿ. 

ನನ್ನ ತಾಯ್ನಾಡನ್ನು ಕವಿಗಳು ಮುನಿವರ್ಯರು ನೆಡೆವ ಪುಣ್ಯದ ನಾಡೆಂದು ಹೊಗಳಿ ಕೊಂಡಾಡಿದ್ದಾರೆ.  ಅದೇ ಭಾವನೆ ನಮ್ಮಲ್ಲಿ ಬೇರೂರಿರುವ ಕಾರಣದಿಂದಲೇ ಸಾವಿರಾರು ಮೈಲಿ ದೂರದ ಅಮೇರಿಕಾದಲ್ಲಿ ನೆಲಸಿದ್ದರೂ ಭಾರತೀಯರಿಗೆ ಅಷ್ಟೊಂದು ದೇಶ ಪ್ರೇಮ.  ಅಂತಹ ಪವಿತ್ರ ನೆಲವನ್ನು ಅಮೇರಿಕಾದ ಪ್ರಜಾಪೀಡಕ, ಅಹಂಕಾರಿ ಅಧ್ಯಕ್ಷ ಟ್ರಂಪ್ ತುಳಿಯುತ್ತಿದ್ದಾನೆ ಎನ್ನುವ ವಿಚಾರ ಓದಿ ಬಹಳ ಕಸಿವಿಸಿಯಾಗುತ್ತಿದೆ.  ಅಪವಿತ್ರ ಮನ, ಅಪವಿತ್ರ ದೇಹ, ಕುಹಕ ಬುದ್ದಿಯುಳ್ಳವ, ಸ್ತ್ರೀದ್ವೇಹಿ, ಈ ದುರಹಂಕಾರಿ ಪವಿತ್ರ ಭಾರತಾಂಬೆಯ ನೆಲಮೆಟ್ಟಲು ಯೋಗ್ಯನಲ್ಲ. ಅವಳ ಅತಿಥಿಯಾಗಲು ಅವನಲ್ಲಿ ಯಾವ ಗುಣವು ಇಲ್ಲ.  ಅತಿಥಿ ದೇವೋಭವ ಎನ್ನುವ ನಮ್ಮ ಸಂಸ್ಕೃತಿಯನ್ನು ನಾವೆಂದೂ ನಮ್ಮ ಇತಿಹಾಸದಲ್ಲೆ ಪ್ರಶ್ನಿಸಿದವರಲ್ಲ. ಆದರೆ ಅಂತಹ ಮೇಲ್ಮಟ್ಟದ ಮನೋಭಾವನೆಯನ್ನು ನಾವು ಇಂದು ಪ್ರಶ್ನಿಸುವಂತೆ ಮಾಡಿದೆ ಈ ಅಯೋಗ್ಯನ ಭೇಟಿಯಿಂದ.  ಅದಕ್ಕೂ ಮೀರಿ ಅಲ್ಲಿಯ ಜನ ಇವನ ಬರುವಿಕೆಗಾಗಿ ಕಾದು ಕುಣಿದು ಕುಪ್ಪಳಿಸುತ್ತಿರುವುದನ್ನು ನೋಡಿ ಹತಾಶಗೊಂಡಿದೆ ನನ್ನ ಮನ. ದೇಶ ದ್ರೋಹಿಗಳು, ರಾಜಕಾರಣಿಗಳು, ಮುಖಂಡರು, ಜನಸಾಮಾನ್ಯರು, ಎಲ್ಲರೂ ಎಲ್ಲಿ ಒಂದಾಗಿಬಿಟ್ಟಿದ್ದರೋ ಎನ್ನುವ ಸಂಶಯ ಹುಟ್ಟಿಸುವಂತ ಈ ಸ್ಥಿತಿಗೆ ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೇ ಕಾರಣ.  

ತಮ್ಮ ಮತ್ತು ತಮ್ಮ ಪಕ್ಷದ ಒಳಿತಿಗಾಗಿ ಟ್ರಂಪ್ ಅಂತಹ ನಿರಂಕುಶ ಪ್ರಭುವಿನ, (ಡಿಕ್ಟೇಟರ್) ಕೈಕುಲುಕಿದ್ದು ಸಾಲದೇನೋ, ಅಪ್ಪಿಕೊಂಡು ನೀನೇ ನನ್ನ ದೊರೆ ನಿನಗೆ ನಮೋ ನಮೋ ಎಂದು ಟೆಕ್ಸಾಸ್ನಲ್ಲಿ ಕೊಂಡಾಡಿದ ನಮ್ಮ ನಮೋ ಬಗ್ಗೆ ನನಗಿದ್ದ ಗೌರವ ಒಂದೇ ದಿನದಲ್ಲಿ ಮಾಯವಾಗಿತ್ತು.  ನಂಬಿಕೆಯ ಮುಖಂಡ ಎಂದು ಉನ್ನತ ಸ್ಥಾನ ಕೊಟ್ಟಿದ್ದೆ ನಾನು. ಆದರೆ ಎತ್ತರದ ಶಿಖರದಿಂದ ದೊಪ್ಪನೆ ನೆಲಕ್ಕುರುಳಿದರು ಅಂದು, ಮತ್ತೊಮ್ಮೆ ಇಡೀ ದೇಶವನ್ನೇ ಕೆಳಗುರಿಳಿಸಿದರು ಇಂದು. ಅದೇ ಗುಲಾಮಗಿರಿ, ಅದೇ ಕೀಳರಿಮೆ, ಅದೇ ವಿಧೇಯತೆ, ಅದೇ ..... ನೆಕ್ಕುವ ಧೇಯದಿಂದ ನಮ್ಮ ನಮೋ ಮುಂದಿನವಾರ ಅಮೇರಿಕಾದ ಅಧ್ಯಕ್ಷನನ್ನು ಬರಮಾಡುಕೊಳ್ಳುವುದರ ಜೊತೆಗೆ ಇಡೀ ಭಾರತವನ್ನೇ ಅವನ ಆಗಮನಕ್ಕೆ ಸಿದ್ಧಪಡಿಸುತ್ತಿರುವ ನಮ್ಮ ಪ್ರಧಾನ ಮಂತ್ರಿಗೆ ಧಿಕ್ಕಾರ. ದೊರೆ ಬರುತ್ತಿದ್ದಾನೆ ಎಂದು ಊರನ್ನು ಅಲಂಕರಿಸಿ ಹೆಮ್ಮೆ ಪಡುವುದರ ಬದಲು ಬಡ ಬಗ್ಗರು ನೋಟಕ್ಕೆಲ್ಲಿ ಬಂದಾರೋ ಎಂದು ಗೋಡೆ ನಿರ್ಮಿಸುತ್ತಿದ್ದಾರೆ ಗುಜುರಾತಿನಲ್ಲಿ, ತಾವು ಬೆಳೆದ ಗಲ್ಲಿಯನ್ನು ತೋರಿಸಲು ಹೇಸಿಕೆ ಪಟ್ಟು ನಮ್ಮ ನಮೋ.  

ಅಲೆಕ್ಸಾಂಡರ್ ಕಾಲದಲ್ಲಿಯೂ ಕೂಡ ಅಹಂಕಾರಿ ಮುಖಂಡರಿಗೆ ಎಂದು ಭಾರತ ತಲೆ ತಗ್ಗಿಸಿರಲಿಲ್ಲ, ಆತಿಥ್ಯ ತೋರಿರಲಿಲ್ಲ.  ಆದರೆ ನಮೋ ಒಬ್ಬ ದುರಹಂಕಾರಿಗೆ ಹೆದರಿ ಈ ರೀತಿ ಶರಣಾಗುತ್ತಿರುವುದು ಮುಂದೆ ಭಾರತಕ್ಕೆ ಒಳಿತಾಗುವುದಿಲ್ಲ. ಅಮೇರಿಕಾದ ಸಂಬಂಧ ಎಂದಿದ್ದರೂ ಅಸ್ಥಿರವಾದದ್ದಲ್ಲ. ನಾಳೆಯೇ ಟ್ರಂಪ್ ನಮ್ಮ ಪ್ರಧಾನಮಂತ್ರಿಯನ್ನು ಬಸ್ಸಿನ ಕೆಳಗೆ ತಳ್ಳಿದರೆ ಶ್ವೇತ ಭವನಕ್ಕೆ ಅದೇನು ಹೊಸತಲ್ಲ. ಪರ ದೇಶಗಳು ಈಗಾಗಲೇ ಭಾರತವನ್ನು ಕೊಳೆಯುತ್ತಿರುವ ಹಣ್ಣೆಂದು ದೂರ ಮಾಡುತ್ತಿರುವ ಸಮಯದಲ್ಲಿ ಟ್ರಂಪ್ ನಿನ್ನ ಕಾಲಿಗೆ ಬೀಳುತ್ತೀನಿ, ನನ್ನ ಸತ್ಕಾರ ಸ್ವೀಕರಿಸು ಎಂದು ಕರೆಯುತ್ತಿರುವ ನಮ್ಮ ದೇಶವಾಸಿಗಳೇ ನನ್ನ ಉಲ್ಲಂಘನೆಯನ್ನು ಕೂಡ ಸ್ವೀಕರಿಸಿ.  ಮೊದಲ ಬಾರಿಗೆ ಭಾರತದ ಬಗ್ಗೆ ನನಗಿರುವ ಹೆಮ್ಮೆ, ಗರ್ವ, ಅಭಿಮಾನ ಕಡಿಮೆ ಆಗುತ್ತಿದೆ ಎನ್ನುವುದೇ ಒಂದು ವಿಷಾದದ ಸಂಗತಿಯಾಗಿದೆ.  

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ