ಋತುರಾಜನ ಕೊಡುಗೆ
ಭೂಮಿಯ ಸೃಷ್ಟಿಸಲು ಕುಳಿತು
ದೇವರೊಮ್ಮೆ ಬೆಳಕಿರಲಿ ಎಂದ
ಎಲ್ಲೆಡೆ ಹರಡಿತು ಸೂರ್ಯನ ಬೆಳಕು
ಸೂರ್ಯನಿರದ ಕತ್ತಲಿನಲಿ ಕುಳಿತು
ದೇವರೊಮ್ಮೆ ಬೆಳದಿಂಗಳಿರಲಿ ಎಂದ
ಎಲ್ಲೆಡೆ ಕಂಗೊಳಿಸಿತು ಚಂದ್ರನ ಬೆಳಕು
ಪೂರ್ಣ ಚಂದ್ರನ ಬೆಳಕಲಿ ಕುಳಿತು
ದೇವರೇಕೋ ಇಂದು ಬಣ್ಣವಿರಲಿ ಎಂದ
ಎಲ್ಲೆಡೆ ರಂಗೊಳಿಸಿತು ಬಣ್ಣದ ಹೋಳಿ ಹಬ್ಬ!
ತೊಯ್ದ ಬಣ್ಣದ ಬಟ್ಟೆಯಲಿ ಕುಳಿತು
ದೇವರೊಮ್ಮೆ ಬೆಚ್ಚಗಿನ ಕಿಡಿಯಿರಲಿ ಎಂದ
ಎಲ್ಲೆಡೆ ಹತ್ತಿ ಭಸ್ಮವಾಯಿತು ಕಾಮದ ಕಣ್ಣು
ಭಸ್ಮದ ಬೂದಿಯಲಿ ಕುಳಿತು
ದೇವರೊಮ್ಮೆ ಶುದ್ದೋಧಕ ಸ್ನಾನವಾಗಲಿ ಎಂದ
ಎಲ್ಲೆಡೆ ವರುಣ ಸಂಪ್ರೋಕ್ಷಿಸಿದ ಝುಳು ಝುಳು ನೀರ
ಝುಳು ಝುಳು ಹರಿವ ನೀರಲಿ ಕುಳಿತು
ದೇವರೊಮ್ಮೆಎಲ್ಲೆಡೆ ಹಸಿರು ಇರಲೆಂದ
ಎಲ್ಲೆಡೆ ಹಸಿರಿನ ಸಿರಿಯನೆ ಹರಸಿದಳು ಭೂತಾಯಿ
ಹಸಿರು ಪಿತಾಂಬರವನುಟ್ಟು ಕುಳಿತ
ದೇವರೊಮ್ಮೆ ಸುಗಂಧವನಾಘ್ರಾಣಿಸುವ ಎಂದ
ಎಲ್ಲೆಡೆ ಪುಷ್ಪ ರಾಶಿಯನೇ ತಂದಿತ್ತ ಋತುರಾಜ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ