ವಸಂತನ ಬಗ್ಗೆ ನನ್ನ ಎರಡು ಕವನಗಳು. ಒಂದು, ೧೫ ದಿನಗಳ ಹಿಂದೆ ಮುಂಜಾನೆ ಎವರ್ಗ್ರೀನ್ ಬಡಾವಣೆಯಲ್ಲಿ ವಾಕ್ ಹೋಗಿದ್ದಾಗ ಕಂಡ ಸುಂದರ ಪುಷ್ಪಗಳನ್ನು ನನ್ನ ಕ್ಯಾಮೆರಾದಲ್ಲಿ ಸೆರೆಹಿಡಿದು ಪ್ರೇರಿತನಾಗಿ ಬರೆದ ಕವಿತೆ. ಮತ್ತೊಂದು, ಇಂದು ಭಾನುವಾರ ಕರೋನ ವೈರಸ್ಸಿನ ಸುದ್ದಿಯಲ್ಲಿ ಮೂಡಿಬಂದ ಪ್ರೇರಣೆ. ವಸಂತನ ಆಗಮನಕ್ಕೆ ಎಷ್ಟು ಅಜಗಜಾಂತರದ ಉತ್ಸಾಹ, ಕೇವಲ ಹದಿನೈದು ದಿನಗಳ ಅಂತರದಲ್ಲಿ.
ಹೊಸತೊಂದು ಕುಸುಮ
ರವಿ ಗೋಪಾಲರಾವ್
ಹೊಸತೊಂದು ಗುಂಗಿ ಸ್ವಚ್ಚಂದಲಿ
ಚುಂಬಿಸಿ ಮಲ್ಲಿಗೆ ಜಾಜಿಯ
ಹಾರಿತು ಕರೆದರೂ ಸನಿಹ ಬರದೇ
ನಾನಿರದೆ ನೀ ಸುಮ ಮಾತ್ರವೆಂದು ಕೀಟಲೆ ದನಿಯಲಿ
ಹೊಸತೊಂದು ಭ್ರಮರ ಸ್ವಚ್ಚಂದದಲಿ
ನೈದಿಲೆ ಸಂಪಿಗೆ ತಾವರೆಯ
ಮಕರಂದವನೇ ಹೀರಿ ಝೇಂಕರಿಸಿತು
ನಾನಿರದೆ ನೀ ಬಂಜೆಹೂವೆಂದು ಅಣಕದಲಿ
ಹೊಸತೊಂದು ಹೆಜ್ಜೇನು ಸ್ವಚ್ಚಂದದಲಿ
ನಲುಗಿಸಿ ಹೊಂಗೆ ಸೂರ್ಯಕಾಂತಿಯ
ಮನ ಕೆರಳಿಸಿತು ಹಾಡಿ ಹಾರಿ
ನಾನಿರದೆ ನೀ ವನಕುಸುಮವೆಂದು ನಗೆಬೀರಿ
ಹೊಸತೊಂದು ಕುಸುಮ ದುಗುಡದಲಿ
ಕಿರುಕುಳವ ಸಹಿಸೆನೆಂದು ಕೇಳಿತು ಋತುರಾಜನ
ನಕ್ಕು ವಸಂತ ತಂಗಾಳಿಯಲಿ ನಿನ ಸುಗಂಧವನಾಘ್ರಾಣಿಸಲು
ದೂಡುವರೆಲ್ಲ ಸ್ವಪ್ರಶಂಸೆಯ ಅಂದವಿಲ್ಲದ ಆ ಕೀಟವನು
ಮರುಪ್ರಶ್ನಿಸಿದ ವಸಂತ
ನಿನ ಸೌಂಧರ್ಯಕೆ ಸಮನಾರೋ ಹೊಸ ಕುಸುಮ?
_________________
ಬೇಗುದಿಯ ವಸಂತ
ರವಿ ಗೋಪಾಲರಾವ್
ಹುಲ್ಲೆಮರಿಯೊಂದನ ಅಟ್ಟಿ ಕೊಂದು
ತನ್ನಕಂದಮ್ಮಗಳಿಗೆ ಉಣಬಡಿಸಿದ ಚಿರತೆ
ಗಿಡುಗನ ಉಗುರಿನಲಿ ಚಡಪಡಿಸಿ
ಕೊನೆಯುಸಿರೆಳೆದ ನಾಗ
ತನ್ನ ತತ್ತಿಗಳನುಂಡ ಮೊಸಳೆಯ
ಅಸಹಾಯದಲಿ ನೋಡುವ ಕೂರ್ಮ
ಗುಂಪಿನಲಿ ಕೋಣವನೇ ಬೇಟೆಯಾಡಿ
ಬಗಿದು ತಿನ್ನುವ ವ್ಯಾಘ್ರ
ಎಲ್ಲವು ಕ್ರೂರ ಎಲ್ಲವೂ ಸಹಜ
ಪ್ರಕೃತಿಯಲಿ ಹುಟ್ಟುಸಾವನಾರಿಯದವರುಂಟೆ
ಎಲ್ಲವನು ಸರಿತೂಕದಲಿ ನಿಭಾಯಿಸುವಳು ಭೂಮಾತೆ
ಬೀಜ ಸಸಿಯಲಿ ಗಿಡದಲಿ ಹೂಬಳ್ಳಿಯಲಿ
ಪುನರಾವರ್ತನ ಜೀವಚಕ್ರದ ಸಂಕೇತದಲಿ
ಋತುರಾಜ ಆಗಮಿಸಿಹನೋ ಬೇಗುದಿಯಲಿಂದು
ಎಲ್ಲೆಡೆ ಅರಿಶಿನ ಕುಂಕುಮವನೇನೋ ಹರಡಿಹನು
ಭೂಮಾತೆ ಸಮತೋಲನತಪ್ಪಿ ಏಕಿಂದು
ಸಾವನ್ನೇ ಕಡೆಕಡೆದು ಬಳುವಳಿಯಲಿ ನೀಡುವೆನೆಂದು
ನಿರ್ದಯದಲಿ ನಿರ್ಧಯಿಸಿರುವಳೋ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ