ಬುಧವಾರ, ಏಪ್ರಿಲ್ 15, 2020

ಚರಿತ್ರೆ

ಚರಿತ್ರೆ
- ರವಿ ಗೋಪಾಲರಾವ್

ಚರಿತ್ರೆ ನಿನಗೊಂದು ಅಸ್ತಿತ್ವವಿರೆ
ನೀ ರಚಿಸಿದ ಅನೃತ ಘಟನೆ
ಸೃಷ್ಟಿಸಿದ ನಕಲಿನ ಚೌಕಟ್ಟು
ಹರಡಿದ ಅಸ್ಥಿರತೆ

ನೀ ದಾಖಲು ಮಾಡಿದ ಅಸತ್ಯ
ನಡೆಸಿದ ಪಿತೂರಿ
ಅಡಗಿಸಿದ ಧ್ವನಿ
ಎಲ್ಲವೂ ಬಯಲಾಗುತ್ತಿತ್ತೇನೋ

ಸಲೀಮ್ ಅನಾರ್ಕಲಿಯ ಪ್ರಣಯ
ವಾಸ್ತವದಲಿ ಜಹಾಂಗೀರ್ ನೂರ್ಜಹಾನ್
ಪ್ರೇಮಕಥನವೆಂದೇಕೆ ಹೇಳಲಿಲ್ಲ
ಚರಿತ್ರೆ ನಿನಗೇಕೆ ಸುಳ್ಳಿನ ಮಜಲು . .. ೧

ಮೊಘಲರ ರಾಜ್ಯದಲಿ ಸ್ತ್ರಿ
ಬುರುಕಿಯ ಹಿಂದೆ ಅವಿತಿರಲಿಲ್ಲವೆಂದೇಕೆ
ಸಾದರಪಡಿಸಲಿಲ್ಲ
ಚರಿತ್ರೆ ನೀನೇಕೆ ಪರರ ನಿಂದಿಸಿದೆ … ೨

ಗುಲಾಮ ವ್ಯಾಪಾರದಲಿ ಕೊಂಡುತಂದ
ಮಲಿಕ್ ಅಂಬರ್ ರಾಜನಾಗಿ ಮೊಘಲರನು ತಡೆದರೂ
ಶಿವಾಜಿಯನೆ ನೆನವರೇಕೆ
ಚರಿತ್ರೆ ನೀನೇಕೆ ಪಕ್ಷಪಾತಿಯಾದೆ … ೩

ಬಾಬರ್ ಕಟ್ಟಿಸಿದ ಮಸೀದಿ
ರಾಮ ಮಂದಿರವೆಂದು
ನಿಜವನರಿತು ಅಸತ್ಯವನೇಕೆ ಸಾರಿದೆ
ಚರಿತ್ರೆ ನೀನೇಕೆ ಪರವಹಿಸಿದೆ … ೪

ಕೊಳ್ಳೆಹೊಡೆದ ಮುಸ್ಲಿಮರು, ಮುಸ್ಲಿಮರಿಂದ ಕಸಿದ ಬ್ರಿಟಿಷರು
ತುಂಡರಿಸಿದರೂ ಕೊಹಿನೂರ್ ವಜ್ರ ಆದಿಯಲಿ
ಶ್ರೀ ಕೃಷ್ಣನ ಸ್ಯಮಂತಕ ಮಣಿಯೆಂದು ಅವಿತರೇಕೋ
ಚರಿತ್ರೆ ನೀನೇಕೆ ಕುರುಡನಾದೆ … ೫

ಪುರಾಣ ಇತಿಹಾಸ ಒಂದನ್ನೊಂದು
ಸರಿದೂಗಿದರೂ ಒಂದುಬಾರಿ
ಸತ್ಯ ಸತ್ಯವೆಂದು
ಖಚಿತಪಡಿಸಲಿಲ್ಲವೇಕೋ ನೀ ಚರಿತ್ರೆ

_____________
ಅಡಿಟಿಪ್ಪಣಿ:
೧. ಸಲೀಮ್ ಅನಾರ್ಕಲಿಯ ಪ್ರಣಯ ಶೇಕ್ಷ್ ಪಿಯರನ ರೋಮಿಯೋ ಜೂಲಿಯೆಟ್ ಕತೆಯಂತೆಯೇ ಒಂದು ಹೆಸರಾಂತ ಕತೆ. ಆದರೆ ಅದರಲ್ಲಿ ಎಷ್ಟು ನೈಜತೆ ಇದೆಯೆಂದರೆ ಅದನ್ನು ಚರಿತ್ರೆಯಲ್ಲಿ ನೆಡದ ಒಂದು ಸುಂದರ ಪ್ರಣಯ ಕತೆ ಎಂದು ನಂಬುತ್ತೀವಿ. ‘ಮೊಘುಲ್ ಈ ಅಜಮ್’ ಚಿತ್ರವನ್ನು ನೋಡಿದರೆ ಎಲ್ಲರೂ ಅದೊಂದು ಐತಿಹಾಸಿಕ ಕತೆಯೆಂದೇ ನಂಬುವರು. ಅದರ ವಾಸ್ತವಿಕ ಹಿನ್ನಲೆ ಮೊಘಲರ ರಾಜ ಜಹಾಂಗೀರ್ ಮತ್ತು ನೂರ್ಜಹಾನ್ ಮಧ್ಯೆ ನೆಡೆದ ಪ್ರಣಯ ಕತೆ. ಚರಿತ್ರೆಗೇಕೆ ಸುಳ್ಳಿನ ಮಜಲು.
೨. ಮುಸ್ಲಿಂ ಮಹಿಳೆಯರು ಮೊಘಲರ ಕಾಲದಲ್ಲಿ ಬುರ್ಕಾ (ಬುರಕಿ ಕವಿ ಭಾಷೆಯಲ್ಲಿ) ಧರಿಸುತ್ತಿರಲಿಲ್ಲ. ಆದರೆ ನಮಗೆ ಚರಿತ್ರೆಯಲ್ಲಿ ಅದನ್ನು ಊಹಿಸಲೂ ಸಾಧ್ಯವಿಲ್ಲ.
೩. ಮಲಿಕ್ ಅಂಬರನ ಚರಿತ್ರೆ ಅಷ್ಟು ಜನಜನಿತವಾಗಿಲ್ಲ. ಆಫ್ರಿಕಾ ದೇಶದ ಗುಲಾಮರನ್ನು ಭಾರತದಲ್ಲೂ ವ್ಯಾಪಾರ ಮಾಡುತ್ತಿದ್ದರೆಂಬ ಚರಿತ್ರೆ ನಮಗೆ ಪರಿಚಯವಿಲ್ಲ.. ಮಲಿಕ್ ಅಂಬರ್ ಆಫ್ರಿಕಾದಿಂದ ವ್ಯಾಪಾರದಲ್ಲಿ ಕೊಂಡು ತಂದ ಒಬ್ಬ ಗುಲಾಮ. ಆದರೆ ಅವನ ಸ್ಥೈರ್ಯ, ನಿಷ್ಠೆ ಮತ್ತು ದೃಢ ನಿಶ್ಚಯದಿಂದ ಸಾಹಸಿಯೆಂತೆ ಮೇಲಕ್ಕೇರಿ, ತನ್ನ ಕೆಳಗೆ ೫೦ ಸಾವಿರ ಮಂದಿ ಸೈನಕರನ್ನು ದಕ್ಷಿಣ ಭಾರತದಲ್ಲಿ ಸೇರಿಸಿದ್ದ. ಉತ್ತರದಿಂದ ಹಾವಳಿ ಮಾಡುತ್ತಿದ್ದ ಮೊಘಲರಿಗೆ ದುಃಸ್ವಪ್ನವಾಗಿದ್ದ. ಶಿವಾಜಿಗು ಮುಂಚೆಯೇ ಮೊಘಲರನ್ನು ತಡೆದು ದಕ್ಷಿಣ ಭಾರತ ಸುಭಿಕ್ಷವಾಗಲು ಅವನೇ ಕಾರಣನಾಗಿದ್ದ. ಜಹಾಂಗೀರ್ ಕೂಡ ಮಲಿಕ್ ಅಂಬರನನ್ನು ಸೋಲಿಸಲು ಏಕಾಗ್ರತೆಗೆ ಅವನ ಭಾವಚಿತ್ರವನ್ನು ತನ್ನ ಅರಮನೆಯಲ್ಲಿ ಹಾಕಿಕೊಂಡಿದ್ದನಂತೆ. ಶಿವಾಜಿಗೆ ಸಿಕ್ಕ ಪ್ರಸಿದ್ದಿ ಮಲಿಕ್ ಅಂಬರನಿಗೆ ಸಿಗದಿರಲು ಕಾರಣ ಅವನ ಗುಲಾಮಗಿರಿಯ ಹಿನ್ನಲೆ ಮತ್ತು ಕಪ್ಪು ಜನಾಂಗದವನೆಂಬ ಪಕ್ಷಪಾತ. ಚರಿತ್ರೆ ಅವನಿಗೆ ನೀಡಬೇಕಾದ ಸ್ಥಾನವನ್ನು ಕೊಡಲಿಲ್ಲ. ಅದು ಶಿವಾಜಿಗೆ ಮಾತ್ರ ದಕ್ಕಿತು. ನಿಜ ಚರಿತ್ರೆಯ ಬದಲು ‘ಅಮರಚಿತ್ರ’ದ ಕಾಮಿಕ್ಸ್ ಕತೆ ಬರೆಯುವುದೇ ಸುಲಭ.
೪. ಬಾಬರ್ ಕಟ್ಟಿಸಿದ ಮಸೀದಿ ರಾಮನ ಮಂದಿರ: ಎಲ್ಲರಿಗೂ ತೀರಾ ಪರಿಚಿತ ಚರಿತ್ರೆ
೫. ಕೊಹಿನೂರ್ ವಜ್ರ ಪ್ರಪಂಚದ ಅತಿ ದೊಡ್ಡ ವಜ್ರವೆಂದು ಖ್ಯಾತಿ ಪಡೆದಿದೆ. ಆದರೆ ಅದರ ಚರಿತ್ರೆಯಲ್ಲಿ ಹಲವಾರು ಚಕ್ರಾದಿಪತ್ಯಗಳ ಕೈಸೇರಿ ಅದನ್ನು ಅವರುಗಳು ಪುಡಿ ಮಾಡಿ, ತುಂಡರಿಸಿ ಕೊನೆಗೆ ಕಳ್ಳತನದಿಂದ ಬ್ರಿಟಿಷರು ತಮ್ಮದಾಗಿಸಿಕೊಂಡ ಇತಿಹಾಸ ಈಗಾಗಲೇ ಎಲ್ಲರಿಗು ಗೊತ್ತಿದೆ. ಆದ್ರೆ ಅದು ಆದಿಯಲ್ಲಿ ಒಂದು ಹಿಂದೂ ದೇವತೆಯ ಅಲಂಕಾರಕ್ಕೆ ಸೀಮಿತವಾಗಿತ್ತು ಎಂದು ತಿಳಿದುಬರುತ್ತದೆ. ಇತಿಹಾಸಕಾರರು ಇದನ್ನು ಶ್ರೀ ಕೃಷ್ಣನ ಸ್ಯಮಂತಕ ಮಣಿಯೆಂದು ಗುರುತಿಸಿದ್ದಾರೆ. ಚರಿತ್ರೆಯ ದೃಷ್ಟಿಯಲ್ಲಿ ವಿಕ್ಟೊರಿಯ ರಾಣಿಯ ಸ್ವಂತ ಭಂಡಾರವಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ