ಪರಿಭ್ರಮಣೆಯ ಧ್ಯಾನ
ರವಿ ಗೋಪಾಲರಾವ್
ಎಲ್ಲವುದಕಿಂತ ವೇಗದಲಿ ಓಡುವುದೇನು
ಯುಧಿಷ್ಠರನಿಗೆ ಯಕ್ಷನ ಪ್ರಶ್ನೆ
ಒಂದೇ ಕ್ಷಣದಲಿ ಉತ್ತರಿಸಿದ ಮನಸು
ಓಡುವ ಮನಸಿಗೆ ಕಡಿವಾಣವೇನು
ಶಿಷ್ಯನ ಪ್ರಶ್ನೆಗೆ ಗುರು ನುಡಿದರು
ಪ್ರತಿಫಲವ ಬಯಸದೆ ದೇವರ ಧ್ಯಾನಿಸು
ಕಪಿಚೇಷ್ಟೆ ಸ್ಮೃತಿಪಟದಲಿ ಉಳಿದ
ಮರ್ಕಟ ಮನವೇ
ಹನುಮಂತನ ಭಜಿಸುವುದೆಂತು
ಸಂಗಾತಿಯ ನೆನಪಲಿ ನಲಿವ
ಚಂಚಲ ಮನವೇ
ಲಕ್ಷ್ಮಿಯನು ಕೊಂಡಾಡುವುದೆಂತು
ಅಗಣಿತ ವ್ಯಾಮೋಹದಲಿ ಸಿಲುಕಿದ
ಸ್ತ್ರಿಲೋಲ ಮನವೇ
ಕೃಷ್ಣನ ಪೂಜಿಸುವುದೆಂತು
ಚಿರಂಜೀವಿ ನೆಪದಲಿ ಅಹಂಭಾವದ
ಅಮರ್ತ್ಯ ಮನವೇ
ರುದ್ರನ ಆರಾಧಿಸುವುದೆಂತು
ಮೋದಕ ನೈವೇದ್ಯದಲಿ ವಿಹರಿಸಿ
ತನ್ಮತೆಯಿರದ ಮನವೇ
ಗಣಪನ ನಮಿಸುವುದೆಂತು
ಕತ್ತಲಮೆಚ್ಚಿ ಬೆಳಕಲಿ ನಿದ್ರಿಪ
ಉಜ್ವಲ ಮನವೇ
ಸೂರ್ಯನ ಅರ್ಚಿಸುವುದೆಂತು
ಹಿಂಸೆಯ ಕೃತ್ಯದಲಿ ನಿರತ
ನಿರ್ದಯಿ ಮನವೇ
ಬುದ್ಧನ ಪೊಗಳುವುದೆಂತು
ಪರಿಭ್ರಮಣ ಮನವ ನೀಡಿದ ದೇವಾ
ತುಂಬಿದೆದೆಯಲಿ
ನಿನ್ನ ಧ್ಯಾನಿಸುವುದೆಂತು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ