ಭಾನುವಾರ, ಆಗಸ್ಟ್ 15, 2021

ಭಾರತ ದೇಶದ ಜನ್ಮಕುಂಡಲಿ

ಭಾರತ ದೇಶದ ಜನ್ಮಕುಂಡಲಿ


ಅಂದು ಆಗಸ್ಟ್ 15, 1947. ಬಾಳೇಪುರದ ಭಗವಂತರಾವ್ ತಮ್ಮ ಶಂಕರಪುರದ ದೊಡ್ಡ ಮನೆಯಲ್ಲಿ ಕುಳಿತು ಯೋಚಿಸುತ್ತಿದ್ದರು. ಭಾರತದ ಜನ್ಮವಂತೆ, ಅದು ಹೇಗೆ ಸಾಧ್ಯ? ಐದು ಸಾವಿರಕ್ಕೂ ಹೆಚ್ಚು ವರ್ಷಗಳಿಂದ ವಿಜೃಂಭಿಸಿದ ದೇಶಕ್ಕೆ ಇಂದು ಜನ್ಮ ದಿನವೇಕಾದೀತು? ಬ್ರಿಟಿಷರ ದಬ್ಬಾಳಿಕೆ ಮುಗಿದು ಸ್ವತಂತ್ರವಾದ ದಿನದಂದು ಜನ್ಮದಿನವೇ ಅಹುದು ಎಂದು ಸಮಾಧಾನ ಪಟ್ಟುಕೊಂಡರು. ಬ್ರಾಹ್ಮಣನಾಗಿ ಹುಟ್ಟಿ ಜನ್ಮದಿನದ ಶುಭಾಅಶುಭಗಳನ್ನು ತಿಳಿದುಕೊಳ್ಳದಿದ್ದರೆ ಇಷ್ಟು ವರ್ಷ ವೇದಾಧ್ಯಾಯನ, ಜ್ಯೋತಿಷ ಶಾಸ್ತ್ರ, ಹಸ್ತಸಾಮುದ್ರಿಕಾ ಶಾಸ್ತ್ರ ಓದಿ ಏನು ಪ್ರಯೋಜನ, ಹುಟ್ಟಿದ ಕೂಸಿನ ಜನ್ಮಕುಂಡಲಿಯನ್ನು ಬಿಡಿಸದಿದ್ದರೆ ಎಂದು ಯೋಚಿಸುತ್ತಿದ್ದರು. ಮಧ್ಯರಾತ್ರಿ ಆಗುವ ಮುನ್ನವೇ ತಾಳೆ ಹಿಡಿಯಲು ಕುಳಿತರು. ಭರತ ಖಂಡೆ, ಯಮುನಾ ನದಿ ತೀರೇ ಎಂದು ಶುರುವಾದ ಅವರ ಮಂತ್ರೋಚ್ಚಾರಣೆ ಮುಂದುವರೆಯುತ್ತಿತ್ತು.

ಸರವಜಿತ್ ಸಂವತ್ಸರ, ದಕ್ಷಿಣಾಯನ ಪುಣ್ಯಕಾಲ, ವರ್ಷ ಋತು, ಶ್ರಾವಣ ಮಾಸ (ಅಧಿಕ ಮಾಸ) ಕೃಷ್ಣ ಪಕ್ಷ, ಗುರುವಾರ, ತ್ರಯೋದಶಿ, ಪುನರ್ವಸು ನಕ್ಷತ್ರ, ಮಿಥುನ ರಾಶಿ, ಶಕ :1869, ಸೂರ್ಯೋದಯ : 5:53 am, ಸೂರ್ಯಾಸ್ತಮ: 6:58 pm, ಚಂದ್ರೋದಯ: 4:05 am, ಚಂದ್ರಾಸ್ತಮ: 5:36 pm.

ಸೂರ್ಯ, ಚಂದ್ರ, ಶನಿ, ಬುಧ ಮತ್ತು ಶುಕ್ರ ಗ್ರಹಗಳು ಮೊದಲನೇ ಮನೆಯಲ್ಲಿ ಇರುವುದರಿಂದ ಎಲ್ಲವು ಶುಭವಾಗುವುದು. ಮಂಗಳ ಗ್ರಹ ಹನ್ನೆರಡೆನೆ ಮನೆಯಲ್ಲಿರುವುದು ಕೂಡ ಶುಭ ತರುವುದು. ಜೊತೆಗೆ ರಾಹು ಹನ್ನೊಂದನೇ ಮನೆಯಲ್ಲಿರುವುದರಿಂದ ಯಾವ ಅಶುಭ ಘಟನೆಗಳು ಸಂಭವಿಸುವುದಿಲ್ಲ. ಆದರೆ ಕೇತು ಪ್ರಭಾವ ಅಷ್ಟು ಶುಭದಾಯಕವಾಗಿಲ್ಲ. ನಾಲ್ಕನೇ ಮನೆಯಲ್ಲಿ ಗುರು ಗ್ರಹವಿರುವುದರಿಂದ ತಾತ್ಕಾಲಿಕವಾಗಿ ಗುರುಬಲ ಕಡಿಮೆ ಆಗಿ ಅನಾಹುತಗಳೇ ಆಗಬಹುದು.

ಸರಿ, ಎಲ್ಲ ಗ್ರಹಗತಿಗಳನ್ನು ಕೂಲಂಕಷವಾಗಿ ಒಂದೆಡೆ ಸೇರಿಸಿ ತಾಳೆ ಹಿಡಿದು ನೋಡುತ್ತಾ ಒಮ್ಮೊಮ್ಮೆ ನಿಟ್ಟಿಸಿರು ಮತ್ತೊಂದು ಕ್ಷಣ ಭಯ ಮತ್ತೊಂದು ಕ್ಷಣದಲ್ಲಿ ಹುಮ್ಮಸ್ಸು ಎಲ್ಲ ಅವರ ಮುಖದ ಕಾಂತಿಯನ್ನೇ ಬದಲಿಸುತ್ತಿದ್ದರೂ, ಬೆರಳುಗಳು ತಾವಾಗಿಯೇ ಜನ್ಮ ಕುಂಡಲಿಯನ್ನು ರಚಿಸಿದ್ದವು. ಪುನರ್ವಸು ನಕ್ಷತ್ರದಲ್ಲಿ ಹುಟ್ಟಿದ ಭಾರತ ದೇಶ ಸುಭಿಕ್ಷ ಎಂದು ಮನವರಿಕೆಯಾಗಿ ಮಂದಹಾಸ ಮೂಡಿತ್ತು. 75 ವರ್ಷಗಳ ನಂತರವೂ ಭಾರತದ ಪ್ರಜೆಗಳಲ್ಲಿ ಕೂಡ ಅದೇ ಮಂದಹಾಸ ಬರಲಿ ಎಂದು ಆಶಿಸುತ್ತಾ ವಿಶ್ರಮಿಸಿದರು ಅಂದು ಭಗವಂತ್ ರಾವ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ