ಪಂಜರದ ಹಕ್ಕಿ ಹಾಡುವುದೇಕೆಂದು ನಾ ಬಲ್ಲೆ
-- ಮಾಯಾ ಆಂಜೆಲೋ
ಅನಿರ್ಬಂಧಿತ ಹಕ್ಕಿ ಜಿಗಿವುದು ಪವನನ ಬೆನ್ನೇರಿ
ಇಳಿಜಾರಿನೆಡೆ ತೇಲುವುದು
ಸೆಳೆವಿನ ಅಂತ್ಯವನರಸಿ
ಬೀಸುರೆಕ್ಕೆಯ ಏರಿಳತದಲಿ
ರವಿಯ ಕಿತ್ತಳೆಯ ಕಿರಣದಲಿ
ಆಕಾಶಕೆ ಹಕ್ಕುದಾರನ ಸವಾಲಿನಲಿ
ನಿಧಾನದಲಿ ನೆಡೆವುದು ಎಲ್ಲೋ ಒಮ್ಮೊಮ್ಮೆ
ಕಾಣ್ವುದು
ಕ್ರೋಧೋನ್ಮಕ ಕಟಕಟೆಯಲಿ
ಕತ್ತರಿಸಿದ ರೆಕ್ಕೆಗಳಲಿ
ಬಿಗಿದ ಕಾಲ್ಗಳ ಸರಪಣಿಯಲಿ
ಹಾಡಲು ಗಂಟಲ ತೆರೆವುದು
ಸಂಕುಚಿತ ಪಂಜರದೊಳಗಿನ ಹಕ್ಕಿ
ಪಂಜರದ ಹಕ್ಕಿ ಹಾಡುವುವು
ಭಯದಲಿ
ಬೆರೆತ ಚಿಲಿಪಿಲಿ
ಅಪರಿಚಿತ ಸ್ಥಿತಿಯ
ಮೌನ ತವಕದಲಿ
ದೂರದ ಬೆಟ್ಟದಲಿ ಪಂಜರದ ಹಕ್ಕಿಯ
ಸ್ವರ ಕೇಳಿಹುದು
ಬಿಡುಗಡೆಯ ಸ್ತುತಿಯೊಂದು
ಅನಿರ್ಬಂಧಿತ ಹಕ್ಕಿ ಅಪೇಕ್ಷಿಸಿಹುದು
ಎಲರೊಂದನು
ತರುಗಳ ನಿಟ್ಟುಸಿರಿನಲಿ ಸುಯ್ವ ನಸುಗಾಳಿಯೊಂದನು
ಮುಂಜಾವಿನ ಹುಲ್ಲುಹಾಸಿನಲಿ ಕಾಯ್ವ ಹುಳುವೊಂದನು
ಅಭಿದಾನಿಸಿ ಆಕಾಶವೇ ತನದೆಂದನು
ಕನಸಿನ ಸ್ಮಶಾನದಲಿ ನಿಂತ ಹಕ್ಕಿಯ
ನೆಳಲು ಕೂಗಿಹುದು ದುಃಸ್ವಪ್ನದ ಆಕ್ರಂದನದಲಿ
ಬಿಗಿದ ಕಾಲ್ಗಳ ಸರಪಣಿಯಲಿ
ಹಾಡಲು ಗಂಟಲ ತೆರೆವುದು ಪಂಜರದ ಹಕ್ಕಿ
ಪಂಜರದ ಹಕ್ಕಿ ಹಾಡುವುವು
ಭಯದಲಿ ಬೆರೆತ ಚಿಲಿಪಿಲಿ
ಅಪರಿಚಿತ ಸ್ಥಿತಿಯ
ಮೌನ ತವಕದಲಿ
ದೂರದ ಬೆಟ್ಟದಲಿ ಪಂಜರದ ಹಕ್ಕಿಯ
ಸ್ವ
ರ ಕೇಳಿಹುದು
ಬಿಡುಗಡೆಯ ಸ್ತುತಿಯೊಂದು
________________________________
* I Know Why The Caged Bird Sings
By Maya Angelou
ಕನ್ನಡ ಭಾವಾನುವಾದ: ರವಿ ಗೋಪಾಲರಾವ್, ಜನವರಿ 2021
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ