-ರವಿ ಗೋಪಾಲರಾವ್ ಮತ್ತು ಮಂಜುಳಾ ಕುರುಕುಂಧಿ
ಪುಸ್ತಕ ಪರಿಚಯ:
ಪ್ರೀತಿ, ಅನುಕಂಪ, ಪ್ರಕೃತಿ, ತತ್ವಚಿಂತನೆ, ಬುದ್ಧಿವಾದ, ಗಾದೆ, ರಾಷ್ಟ್ರಪ್ರೇಮ, ಸಮೂಹ, ಹೀಗೆ ನೂರಾರು ವಿಷಯಗಳ ಬಗ್ಗೆ ಪ್ರೇರಣೆ ನೀಡುವ ಹಿತನುಡಿಗಳು ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿವೆ. ಸಕಾರಾತ್ಮಕ ಶಬ್ಧಗಳು ನಿಶ್ಚಯವಾಗಿಯೂ ಸಕಾರಾತ್ಮಕ ಪ್ರಭಾವ ಬೀರುತ್ತವೆ ಎಂದು ಮನೋವಿಜ್ಞಾನಿಗಳ ಅಭಿಪ್ರಾಯ. ಎಲ್ಲ ಮತಗಳ ಧರ್ಮೋಪದೇಶಗಳಲ್ಲಿ ಮತ್ತು ನಮ್ಮೆಲ್ಲರ ಅನುಭವದಲ್ಲಿ ಆ ಅಭಿಪ್ರಾಯದ ಸತ್ಯತೆಯನ್ನು ಕಾಣುವುದು ಸುಲಭ. ಆದರೆ ಸೂಕ್ತ ಸಮಯದಲ್ಲಿ ಸೂಕ್ತ ಪದಗಳೊಂದಿಗೆ ಅವುಗಳನ್ನು ನಮ್ಮದೇ ಭಾಷೆಯಲ್ಲಿ ಬಳಸಿ ಜನರನ್ನು ಹುರಿದುಂಬಿಸಲು ಅಥವ ನೊಂದ ಹೃದಯಕ್ಕೆ ಸ್ಫೂರ್ತಿನೀಡುವುದು ಕಠಿಣವೇ ಸರಿ. ಪೌಲ್ ವೇಲೆರಿಯ “The best way to make your dreams come true is to wake up,” ಆಗಲಿ ಅಥವಾ ನೆಲ್ಸನ್ ಮಂಡೆಲಾರ “A good head and a good heart are always a formidable combination,” ಎನ್ನುವ ಅನೇಕ ಉಲ್ಲೇಖಗಳನ್ನು ಆಗೊಮ್ಮೆ ಈಗೊಮ್ಮೆ ನಾವು ಓದಿದಾಗ ಅದೆಷ್ಟು ಚೆಂದದ ಹಿತನುಡಿಗಳಿವು ಎಂದು ನಮಗೆ ಅನಿಸುವುದು ಸಹಜ. ಕೆಲವೊಮ್ಮೆ ಯಾರೋ ನಮ್ಮ ನೆಚ್ಚಿನ ನಟ, ರಾಜಕಾರಣಿ, ಸಾಹಿತಿ ಅಥವಾ ಧಾರ್ಮಿಕ ವ್ಯಕ್ತಿ ಅಂತಹ ಹಿತನುಡಿಗಳನ್ನು ತಾವು ಮಾಡಿದ ಭಾಷಣದಲ್ಲೋ, ಬರವಣಿಗೆಯೆಲ್ಲೋ ಬಳಸಿಕೊಂಡಾಗ ಅವು ಇನ್ನೂ ಹೃದಯಕ್ಕೆ ಸಮೀಪವಾಗುತ್ತವೆ ಮತ್ತು ಬೆರಗುಗೊಳಿಸುತ್ತವೆ. ಅಥವಾ ನಮ್ಮ ಮಕ್ಕಳು ಅದನ್ನು ಶಾಲಾ ಚರ್ಚೆಯಲ್ಲಿ, ಪ್ರಬಂಧದಲ್ಲಿ ಬಳಸಿಕೊಂಡಾಗ ನಮಗೆ ಹೆಮ್ಮೆಉಂಟಾಗುತ್ತದೆ. ಈ ಉಲ್ಲೇಖಗಳು ನಮಗೆ ಸಕಾಲಿಕ ವಿವೇಕದ ಆಸ್ಫೋಟನೆ ನೀಡುವುದರಲ್ಲಿ ಸಂಶಯವೇ ಇಲ್ಲ. ಉಲ್ಲೇಖಗಳಲ್ಲಿ ಅಷ್ಟು ಶಕ್ತಿಯಿರುವುದರಿಂದಲೇ ಅವು ತಲತಲಾಂತರಗಳಿಂದ ಜನಪ್ರಿಯವಾಗಿವೆ ಮತ್ತು ಪ್ರೇರಣೆ ನೀಡುವ ಮಾಧ್ಯಮವಾಗಿದೆ. ದುರದೃಷ್ಟಕರ ಸಂಗತಿಯೆಂದರೆ ಅಂತಹ ಉಲ್ಲೇಖಗಳು ನಮ್ಮ ಕನ್ನಡ ಭಾಷೆಯಲ್ಲಿ ತೀರಾ ವಿರಳ. ನಮ್ಮ ಕನ್ನಡ ಸಾಹಿತಿಗಳೂ ಕೂಡ ಇಂತಹ ಹಿತನುಡಿಗಳನ್ನು ಬರೆಯಲು ಮುಂದೆ ಬಂದಿಲ್ಲ ಎನ್ನುವುದು ಮತ್ತೊಂದು ವಿಷಾದಕರ ಸಂಗತಿ. ಇಂಗ್ಲೀಷಿನಲ್ಲಿ ಸಿಗುವ ಸಾವಿರಾರು ಉಲ್ಲೇಖಗಳಿಗೆ ಹೋಲಿಸಿದರೆ ಒಂದೋ ಎರಡೋ ಕನ್ನಡದಲ್ಲಿ ನಮಗೆ ಲಭ್ಯ ಅಷ್ಟೇ. ಆ ಕೊರತೆಯನ್ನು ನೀಗಲೆಂದೇ ಬರೆದ ಪುಸ್ತಕವಿದು, ಇಂಗ್ಲಿಷ್ನಿಂದ ಕನ್ನಡಕ್ಕೆ ಅನುವಾದ ಮಾಡಿದ ಉಲ್ಲೇಖಗಳೆ ಈ ಪುಸ್ತಕದ ಆಧಾರ ಮತ್ತು ಸ್ಫೂರ್ತಿ. ಪ್ರಾರಂಭದ ಹೆಜ್ಜೆ. ಇಂಗ್ಲಿಷ್ ಮತ್ತು ಪ್ರಪಂಚದ ಬೇರೆ ಭಾಷೆಗಳಲ್ಲಿ ದೊರೆಯುವ ಎಲ್ಲ ಉಲ್ಲೇಖಗಳನ್ನು ಅನುವಾದ ಮಾಡಿದರೆ ಒಂದು ಬೃಹತ್ ಸಂಪುಟವೇ ಆಗುತ್ತದೆ. ಆದರೆ ಮುಂದೆ ಕನ್ನಡದಲ್ಲೂ ಸ್ವಂತ ಉಲ್ಲೇಖಗಳನ್ನು ಬರೆಯಲು ಈ ಪುಸ್ತಕ ಪ್ರೇರಣೆ ನೀಡಿದರೆ ಅದಕ್ಕಿಂತ ಹರ್ಷದ ಸಂಗತಿ ಮತ್ತೊಂದಿಲ್ಲ.
1001 ಆಯ್ದ ಉಲ್ಲೇಖಗಳನ್ನು ಒಟ್ಟುಗೂಡಿಸಿ, ಪರಿಷ್ಕರಿಸಿ, ಅನುವಾದಿಸಿ ಮತ್ತು ಡಿಜಿಟಲ್ ಮಾಧ್ಯಮದಲ್ಲಿ ಈ ಪುಸ್ತಕವನ್ನು ಬಿಡುಗಡೆ ಮಾಡುತ್ತಿರುವುದು ಒಂದು ಕಷ್ಟಸಾಧ್ಯ ಕೆಲಸವಾದರೂ, ಆ ಹಿತನುಡಿಗಳೇ ನಮಗೆ ಪ್ರೇರಣೆ ನೀಡಿದೆ ಎಂದರೆ ಅತಿಶಯೋಕ್ತಿಯಲ್ಲ. ಆ ಅರ್ಥದಲ್ಲಿ ಪ್ರೇರಣೆ ಎನ್ನುವ ಈ ಪುಸ್ತಕದ ಶಿರೋನಾಮೆ ಓದುಗರಿಗೂ ಸಮುಚಿತವಾಗಲಿ ಎಂದು ನಮ್ಮ ಆಶಯ. ಯಶಸ್ಸು, ಬುದ್ಧಿವಾದ, ಜೀವನ, ಅನುಭವ, ಜ್ಞಾನ, ವಿವೇಕ, ಪ್ರಕೃತಿ ಎಂಬ ಹತ್ತಾರು ಮತ್ತಿತರ ವಿಷಯಗಳ ಬಗ್ಗೆ ಮೂಡಿಬಂದ ಪರಿಪೂರ್ಣ ಹಿತನುಡಿಗಳ ಕೈಪಿಡಿ ಇದು.
“ಒಂದು ಒಳ್ಳೆಯ ಪುಸ್ತಕವನ್ನು ಓದಿದೆ ಎಂದು ಅರಿವಾಗುವುದು ಪುಸ್ತಕದ ಕೊನೆ ಪುಟವನ್ನು ತಿರುವಿ ಹಾಕಿದ ಮೇಲೆ ಒಬ್ಬ ಗೆಳೆಯನನ್ನು ಕಳೆದುಕೊಂಡೆ ಎನ್ನುವ ಒಂದು ಸಣ್ಣ ಅನಿಸಿಕೆ ಉಂಟಾದಾಗ,” --ಪಾಲ್ ಸ್ವೀನಿ ಹೇಳಿದ ಈ ಸುಂದರ ಪ್ರೇರಣೆಯೊಂದಿಗೆ ಈ ಪುಸ್ತಕವನ್ನು ನಿಮ್ಮೊಡನೆ ಹಂಚಿಕೊಳ್ಳಲು ಬಯಸುತ್ತೇವೆ.
ಪ್ರೇರಣೆ ಪುಸ್ತಕ eBook ವಿನ್ಯಾಸದಲ್ಲಿ ಮಾತ್ರ ಲಭ್ಯವಿದೆ. ಪ್ರಿಂಟ್ ಮಾಧ್ಯಮದಲ್ಲಿ ಬಿಡುಗಡೆ ಮಾಡುವ ಪ್ರಯತ್ನವೂ ನಡೆಯುತ್ತಿದೆ. ನವೆಂಬರ್ 2021ರಲ್ಲಿ ಬಿಡುಗಡೆಯಾದ eBook ಆಗಲೇ ಸಾಕಷ್ಟು ಜನಪ್ರಿಯತೆ ಗಳಿಸಿದೆ. ಗೂಗಲ್ ಪ್ಲೇ ನಲ್ಲಿ ದೊರೆಯುವ ಈ ಉಚಿತ ಪುಸ್ತಕದಿಂದ ಕನ್ನಡಿಗರು ಪ್ರಯೋಜನ ಪಡೆಯಬಹುದು ಅಂತ ನಮ್ಮ ದೃಢ ನಂಬಿಕೆ. ಓದಿ ನಿಮ್ಮ ಅಭಿಪ್ರಾಯ ತಿಳಿಸಿ. ಧನ್ಯವಾದಗಳು.
ಈ ಪುಸ್ತಕದ ಕೊಂಡಿ ಇಲ್ಲಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ