ಆಹಾ ಯುಗಾದಿಯ ಭಕ್ಷ್ಯಗಳಿವು….
ಊಟ ಪ್ರಾರಂಭಿಸಿದ್ದು ಬಲಗೈಯ ಬೆರಳಿನ ತುದಿಗಳಿಂದಲೇ ನಯವಾಗಿ ಅಂಟಿಯೂ ಅಂಟದಂತೆ ಎತ್ತಿ ನಾಲಿಗೆಗೆ ರುಚಿ ತೋರಿಸಿದ ಹಲಸಿನ ಹಣ್ಣಿನ ಪಾಯಸದೊಂದಿಗೆ. ಸಿಹಿಯಾದ ಹಲಸಿನ ಹಣ್ಣಿನ ತೊಳೆಯನ್ನು ಅಂದವಾಗಿ ತುಂಡರಿಸಿ ತುಪ್ಪದಲ್ಲಿ ಹುರಿದು ಗೋಡಂಬಿ ದ್ರಾಕ್ಷಿ ಏಲಕ್ಕಿ ಪುಡಿ ಕೇಸರಿ ದಳ ಬೆರಸಿ ನಂತರ ಬೇಯಿಸಿದ ಕಡಲೆಬೇಳೆಯನ್ನು ತೆಂಗಿನಹಾಲಿನಲ್ಲಿ ನುಣ್ಣಗೆ ರುಬ್ಬಿ ಸಕ್ಕರೆಯೊಂದಿಗೆ ಕುದಿಸಿದ ಪಾಯಸ ಮತ್ತಷ್ಟು ಬೇಕೆನಿಸಿದರೂ ಅದು ಮೊದಲು ರುಚಿಗಷ್ಟೇ. ಕಾದ ಹೊಟ್ಟೆಗೆ ಅದೊಂದು ನೆಪವಷ್ಟೇ. ಮಧ್ಯದಲ್ಲಿ ಸ್ವಲ್ಪವೇ ಇರುವ ಬಿಳಿ ಮೃದುವಾದ ಬಿಸಿ ಬಿಸಿ ಅನ್ನ, ಅನ್ನದ ಮೇಲೆ ಬೇಳೆ ಮತ್ತು ಹೀರೆಕಾಯಿಯ ತೊವ್ವೆ, ಅದಕ್ಕೊಂದಿಷ್ಟು ಹೊಂದುವ ಒಂದು ಚಮಚ ತುಪ್ಪವೇ ಮುಂದಿನ ಗಮನ ಸೆಳೆದದ್ದು. ಹೀರೇಕಾಯಿಯನ್ನು ಸಿಪ್ಪೆ ತೆಗೆದು ತುಪ್ಪದ ಒಗ್ಗರಣೆಯಲ್ಲಿ ಬೇಯಿಸಿ ಬೆಂದ ತೊಗರಿಬೇಳೆಯಲ್ಲಿ ಕುದಿಸಿ ಅರಿಶಿನ ಹಿಂಗು ಹಾಕಿದ ಆ ಖಾದ್ಯವನ್ನು ಸಂಕೋಚವಿಲ್ಲದೆ ತಿನ್ನಲು ಬಲು ಹಿತ. ಬೆರಳುಗಳು ಯಾವುದೇ ಕಲಾಕಾರನಿಗೂ ಕಡಿಮೆ ಇಲ್ಲ ಎನ್ನುವಂತೆ ಅಷ್ಟೇ ಸಲೀಸಾಗಿ ಆ ಅನ್ನ ತೊವ್ವೆಯನ್ನು ತುಟಿಗೆ ಹಳದಿ ಬಣ್ಣ ಹಚ್ಚಿಬಿಟ್ಟವು.
ಒಹ್ ಒಹ್ ಆ ಹೆಸರುಬೇಳೆ ಕ್ಯಾರೆಟ್ ಕೋಸಂಬರಿಯ ಬಣ್ಣವೇ ಅಂದ ಇನ್ನು ಅದನ್ನು ತಿನ್ನದಿರಲು ಸಾಧ್ಯವೇ! ಸಣ್ಣಗೆ ಹೆಚ್ಚಿದ ಸೌತೆಕಾಯಿ ನೆನಸಿದ ಕಡಲೆಬೇಳೆಯ ಕೋಸಂಬರಿ ಅದರ ಪಕ್ಕದಲ್ಲೇ ಇರುವಾಗ ಅದನ್ನು ತಿಂದಮೇಲೆ ಕಣ್ಣು ತಟ್ಟೆಯನ್ನು ಹುಡುಕಲೇ ಬೇಕಿಲ್ಲ, ಸ್ವಲ್ಪ ಸೀಮೆಬದನೆಕಾಯಿಯ ಪಲ್ಯವನ್ನು ಕಂಡು ನಾಲಿಗೆ ಅದರ ರುಚಿ ಸವಿಯಲು ಅಬ್ಬಾ ಅದೆಷ್ಟು ಹಿತವಾಗಿ ಬೆಂದಿದೆ, ಸ್ವಲ್ಪ ಗಟ್ಟಿಯಾದ ಕೋಸಂಬರಿ ತಿಂದಮೇಲೆ ನಾಲಿಗೆ ಖಂಡಿತ ಸಂತೋಷಿಸಿತು ಆ ಪಲ್ಯದ ರುಚಿಯಿಂದ. ಅದರಲ್ಲಿ ಸಿಗುವ ಸಾಸಿವೆ ಉದ್ದಿನಬೇಳೆ ಒಗ್ಗರಣೆ ಹಿಂಗಿನ ಸುವಾಸನೆ ಅಬ್ಬಾ ಖಾಲಿಯಾದ ನಂತರ ಮತ್ತೆ ಇನ್ನಷ್ಟು ಹಾಕಿಸಿಕೊಂಡರೆ ಆಯಿತೂ ಅಂತ ನಿರ್ಧಾರ ಬೇರೆ ಮಾಡಿಬಿಟ್ಟಿದ್ದೆ. ಇದೇನೋ ಬಿಳಿ ಆಲೂಗಡ್ಡೆ ಪಲ್ಯ ಅದಕ್ಕಿಂತಲೂ ರುಚಿಯಾಗಿದೆಯಲ್ಲಪ್ಪ. ಅದನ್ನು ಮುಗಿಸಿದ ಮತ್ತೊಮ್ಮೆ.. ಅಯ್ಯೋ ಇನ್ನೂ ತಟ್ಟೆಯಲ್ಲಿ ಇರುವ ಚಿತ್ರಾನ್ನವನ್ನೇ ತಿಂದಿಲ್ಲ, ಹಿತವಾದ ನಿಂಬೆಹಣ್ಣಿನ ಹುಳಿ ಹಲ್ಲಿಗೆ ಸಿಗುವ ಮೆತ್ತನೆಯ ಹುರಿದ ಗೋಡಂಬಿ ಬೀಜ, ಆಹಾ ಚಿತ್ರಾನ್ನವೂ ಕೂಡ ಇಷ್ಟು ರುಚಿಯಾಗಿರಬಲ್ಲದು ಅಂತ ತಿಳಿದೇ ಇರಲಿಲ್ಲ.
ಮುಂದೆ ಬಂದದ್ದು ಹೂರಣದ ಸಾರು. ತಿಳಿ ಟೊಮೇಟೊ ಸಾರಿಗೆ ಹೂರಣ ಸೇರಿಸಿದಾಗ ಅದರ ರುಚಿಯೇ ಬದಲಾಗಿಬಿಡುತ್ತೆ. ಹಬ್ಬದ ಊಟಕ್ಕೆ ಮತ್ತೊಂದು ಹಂತ, ಅನ್ನದ ಜೊತೆ ಕಲಸಿ ತಿಂದಾಗ ಛೇ ಇದನ್ನೇ ಜಾಸ್ತಿ ತಿನ್ನಬೇಕಿತ್ತು ಅಂತ ಸ್ವಲ್ಪ ಖಿನ್ನತೆ ಮೂಡಿದರೂ ಬೇಳೆ ಒಬ್ಬಟ್ಟು, ಪೂರ್ಣ ಪೋಳಿಗೆ ಸ್ವಲ್ಪ ಜಾಗಬೇಕಲ್ಲ. ಅಬ್ಬಅಬ್ಬಾ ಬಿಸಿ ಬಿಸಿ ಹೋಳಿಗೆ ಮಾಡುವುದೂ ಒಂದು ಕಲೆ. ಕಣಕ ಮಾಡಿ ಬದಿಗಿಟ್ಟು ಬೇಳೆ ಬೇಯಿಸಿ ಅದಕ್ಕೆ ಬೆಲ್ಲ ಏಲಕ್ಕಿಪುಡಿ ಬೆರಸಿ ಉಂಡೆ ಮಾಡಿ ಕಣಕದೊಳಗೆ ಅದನ್ನಿಟ್ಟು ಬಾಳೆ ಎಲೆಯ ಮೇಲೆ ಹಗುರವಾಗಿ ತಟ್ಟಿ ಕಾದ ಟವದ ಮೇಲೆ ನಿಧಾನವಾಗಿ ಬೋರಲು ಹಾಕಿ ಬಾಳೆ ಎಲೆಯನ್ನು ಹೋಳಿಗೆ ಹರಿಯದಂತೆ ಪ್ರತ್ಯೇಕಿಸಿ ಎರಡೂ ಕಡೆ ಕೆಂಬಣ್ಣ ಬರುವಂತೆ ಬೇಯಿಸಿ ಅಬ್ಬಾ ಹೆಣ್ಣಿನ ಕೈಚಳಕದಲ್ಲಿ ಮಾತ್ರ ಮೂಡಿಬರಲು ಸಾಧ್ಯ ಆ ಹೋಳಿಗೆಗೆ. ಹಾಗಂತ ಕಷ್ಟಪಟ್ಟು ಇಡೀ ದಿನ ಒಲೆಯ ಮುಂದೆ ನಿಂತು ರುಚಿ ರುಚಿಯಾದ ಊಟ ತಯಾರಿಸಿದ ಶ್ರೀಮತಿಗೆ ಒಬ್ಬಟ್ಟು ಚೆನ್ನಾಗಿದೆ ಅಂತ ಹೇಳಲು ಸ್ವಲ್ಪ ಅಹಮಿನ ಅಡ್ಡಿ ಜೊತೆಗೆ ಹಿಂದಿನವರು ಊಟ ಮಾಡುವಾಗ ಮಾತಾಡಬೇಡಿ ಅಂತ ಹೇಳಿದ್ದಾರಲ್ಲ. ಅಯ್ಯೋ ಕೊಲೆಸ್ಟರಾಲು ಅಂತ ಭಯಪಡದೆ ಒಂದು ದೊಡ್ಡ ಚಮಚ ತುಪ್ಪ ಹಾಕಿಸಿಕೊಂಡು ಆ ಸವಿಯಾದ ಹೋಳಿಗೆ ಚಪ್ಪರಿಸಿದರೆ ಇನ್ನೇನು ಊಟ ಮುಗಿಯಿತು ಅಂತ ಅಲ್ಲ. ಊಟದ ಪ್ರಾರಂಭದಲ್ಲಿ ರುಚಿಗಷ್ಟೇ ಹಾಕಿದ್ದ ಹಲಸಿನ ಹಣ್ಣಿನ ಪಾಯಸ ಈಗ ಒಂದು ದೊಡ್ಡ ಸೌಟಿನಲ್ಲೇ ಬಡಿಸಿಕೊಂಡು ಸವಿದರೆ ಆಹಾ ಆ ಹಿತವಾದ ಮೆತ್ತನೆಯ ಹಣ್ಣಿನ ತುಂಡುಗಳು ಬಾಯಲ್ಲಿ ಇಟ್ಟ ತಕ್ಷಣ ಗುಳುಂ ಅಂತ ಮಾಯವಾಗಿ ಬಿಡುತ್ತೆ. ಹೋಳಿಗೆ ನಂತರ ಪಾಯಸ ಸ್ವಲ್ಪ ಸಿಹಿ ಜಾಸ್ತಿ ಆಯ್ತಾ ಅಂತ ಯೋಚಿಸುವುದರೊಳಗೆ ಮತ್ತಷ್ಟು ಮೊಸರಿಗೆ ಅನ್ನ, ಕಲಸಿ ಅದಕ್ಕೊಂದಿಷ್ಟು ಉಪ್ಪು ಸೇರಿಸಿ ಕೊಂಡು ತಿನ್ನಲು ಶುರು ಮಾಡಿದರೆ ಖಾಲಿಯಾದ ತಟ್ಟೆ ಕಂಡು ಯಾಕೋ ಈ ಸಿಹಿಯಾದ ಮೊಸರಿನ ಜೊತೆ ಸ್ವಲ್ಪ ಸೀಮೆಬದನೆಕಾಯಿ ಪಲ್ಯ ಚೆನ್ನಾಗಿರುತ್ತೆ ಅಂತ ಅದನ್ನು ಹಾಕಿಸಿಕೊಂಡು ಊಟ ಮುಗಿಸಿದಾಗ ಎಡಗೈ ತನ್ನಷ್ಟಕ್ಕೆ ತಾನೇ ಹೊಟ್ಟೆಯನ್ನು ಸವರಿಕೊಂಡು ಒಂದು ಉದ್ದನೆಯ ಲೋಟದಲ್ಲಿ ನೀರು ಕುಡಿದಮೇಲೆ ಕೃಷ್ಣಾರ್ಪಣ ಮಸ್ತು ಅಂತ ನಾಲಿಗೆ ಕೂಡ ತನ್ನ ತಾನಾಗಿ ದೇವರ ನೆನೆಯುತ್ತೆ.
ಕೈ ತೊಳೆದು ಎಲೆ ಅಡಿಕೆ ಜಗಿದ ಮೇಲೆ ಚಾಪೆ ಎಲ್ಲಿದೆ ಅಂತ ಹುಡುಕಲು ತನ್ತಾನಾಗಿ ಹುಡುಕುತ್ತೆ ಗಂಡಸಿನ ಮನಸ್ಸು. ನಮ್ಮ ಸಂಸ್ಕೃತಿಯ ಅಸ್ತಿತ್ವವೇ ಈ ಹಬ್ಬಗಳು ಅಂತ ಅನಿಸಿ ಇದನ್ನು ಕಾಪಾಡಿಕೊಂಡು ಬಂದ ನಮ್ಮ ಸ್ತ್ರೀಯರಿಗೆ ಮನಸ್ಸಿನ್ನಲ್ಲೇ ದೊಡ್ಡ ನಮಸ್ಕಾರ ಹಾಕುತ್ತಾ ದೊಡ್ಡ ಗೊರಕೆಯೊಂದಿಗೆ ಮಧ್ಯಾಹ್ನದ ತಾಪದಲ್ಲಿ ನಿದ್ದೆ ಬಂದಿದ್ದೆ ಗೊತ್ತಾಗಲಿಲ್ಲ.
(ಕಳೆದ ಉಗಾದಿ ಸಮಯದಲ್ಲಿ ಬರೆದ ಒಂದು ಹರಟೆ. ನನ್ನ ಈ ಗಂಧಾಕ್ಷತೆ ಬ್ಲಾಗಿನ ಬದಲು ‘ನಿತ್ಯ ಸತ್ಯ’ ಎನ್ನುವ, ಎರಡೂವರೆ ಲಕ್ಷ ಸದಸ್ಯರಿರುವ ವಾಟ್ಸಪ್ಪ್ ತಂಡದಲ್ಲಿ ಪೋಸ್ಟ್ ಮಾಡಿದ್ದೆ.)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ