ಸೋಮವಾರ, ಫೆಬ್ರವರಿ 23, 2026

ಅಯೋಧ್ಯ ರಾಮನ ಗಂಧಾಕ್ಷತೆ

 


ಅಯೋಧ್ಯ ರಾಮನ ಗಂಧಾಕ್ಷತೆ.

ಸುಮಾರು ೧೫ ವರ್ಷಗಳಿರಬಹುದು ನಾನು ಈ ಬ್ಲಾಗ್ ಶುರು ಮಾಡಿ. ಬ್ಲಾಗ್ ಗೆ ಏನು ಹೆಸರು ಕೊಡುವ ಅಂತ ಯೋಚಿಸಿದಾಗ ಹೊಳೆದದ್ದು ಗಂಧಾಕ್ಷತೆ.  ಗಂಧಾಕ್ಷತೆ ಕೊಡುವುದು ಯಾವುದಾದರೂ ಪುಣ್ಯಕಾರ್ಯದಲ್ಲಿ ಅಲ್ಲವೇ? ಗಂಧಾಕ್ಷತೆ ಎಂದು ಹೊಳೆದ ತಕ್ಷಣ ಶ್ರೀ ರಾಮನ ಪಟ್ಟಾಭಿಷೇಕಕ್ಕಿಂತ ಮತ್ತೊಂದು ಸಂಭ್ರಮದ ಘಳಿಗೆಯೇ ಮನಸ್ಸಿಗೆ ಬರಲಿಲ್ಲ ಅಂದು.  ತಕ್ಷಣ ನನ್ನ ಬ್ಲಾಗ್ ಗೆ ಒಂದು ಸುಂದರ ಫೋಟೋ ಹುಡುಕಿದೆ.  ಸಿಕ್ಕಿದ್ದು ಶ್ರೀ ರಾಮನ ಪಟ್ಟಾಭಿಷೇಕದ ಒಂದು ತಾಮ್ರದಲ್ಲಿ ಮಾಡಿದ ಸುಂದರ ಕೆತ್ತನೆಯ ಶಿಲ್ಪಕೃತಿ. ಅದರಲ್ಲಿ ಶ್ರೀರಾಮ, ಸೀತೆ ಪಟ್ಟದಮೇಲೆ ಕುಳಿತ ದೃಶ್ಯ. ಲಕ್ಷ್ಮಣ, ಭರತ, ಶತ್ರುಜ್ಞ, ಮುನಿವರ್ಯರು, ಗಂಧರ್ವರು, ನಿಂತಿದ್ದಾರೆ, ಆಂಜನೇಯ ನಮ್ರತೆಯಿಂದ ಶ್ರೀ ರಾಮನ ಪಾದದ ಬಳಿ ಕುಳಿತಿರುವ ಈ ದೃಶ್ಯ ಬಹಳ ಇಷ್ಟವಾಯಿತು ಅಂದು.  ಅಂದಿನಿಂದ ನನಗೆ ಗಂಧಾಕ್ಷತೆ ಅಂದರೂ ಒಂದೇ, ಶ್ರೀ ರಾಮ ಪಟ್ಟಾಭಿಷೇಕವೂ ಒಂದೇ ಎಂದು ಆಗಿಬಿಟ್ಟಿದೆ.  

ನಾನು ಬ್ಲಾಗ್ ಶುರು ಮಾಡಿದಾಗ ಅಯೋಧ್ಯೆಯಲ್ಲಿ ಅಂದು ಶ್ರೀ ರಾಮನ ದೇವಸ್ಥಾನವೇ ಇರಲಿಲ್ಲ.  ಆದರೆ ಇಂದು ನನಗೆ ಇಂಟರ್ನೆಟ್ ನಲ್ಲಿ ದೊರೆತದ್ದು ಅಲ್ಲಿಯ ಒಂದು ಶಿಲ್ಪಕೃತಿ.  ಅದೂ ಶ್ರೀ ರಾಮ ಪಟ್ಟಾಭಿಷೇಕದ ಕೆತ್ತನೆ.  ಅಯೋಧ್ಯಾ ರಾಮನ ಗುಡಿಯ ಸುತ್ತಲೂ ಕೆತ್ತಿರುವ ಅನೇಕ ಶಿಲ್ಪಗಳಲ್ಲಿ ಇದೂ ಕೂಡ ಒಂದು. ಕಳೆದ ವರ್ಷ ಅಂದರೆ ಜುಲೈ ನಲ್ಲಿ ನಾನು ಅಯೋಧ್ಯೆಗೆ ಹೋಗಿ ಶ್ರೀ ರಾಮನ ದರ್ಶನ ಪಡೆದಿದ್ದೆ.  ಆಗ ಅಲ್ಲಿ ನೂರಾರು ಶಿಲ್ಪಿಗಳು ಇನ್ನೂ ಕೆಲಸ ಮುಂದುವರೆಸೆ ಇದ್ದರು.  ಆ ಕೆತ್ತನೆಗಳ ಕಾರ್ಯವನ್ನು ಕಣ್ಣಾರೆ ಕಂಡು ಖುಷಿ ಪಟ್ಟಿದ್ದೆ.  ಫೋಟೋ ತೆಗೆಯಲು ಅನುಮತಿ ಇರಲಿಲ್ಲದ ಕಾರಣ ನಿರಾಶೆಯೇ ಆಗಿತ್ತು.  ಆದರೆ ಇಂದು ಈ ಇಂಟರ್ನೆಟ್ ನಲ್ಲಿ ನೋಡಿದ ಈ ಚಿತ್ರ ಗಮನ ಸೆಳೆದದ್ದೂ ನನ್ನ ಗಂಧಾಕ್ಷತೆಯ ಫೋಟೋವನ್ನೇ ಹೋಲುತ್ತಿದೆ ಎನ್ನುವ ಕಾರಣವೇ ಇರಬೇಕು.  ಅಯೋದ್ಯೆಯ ಭೇಟಿ ಮಾಡಿದವರಿಗೆ ನಿನ್ನೆಯೋ ಮೊನ್ನೆಯೋ ಈ ಸುಂದರ ಶಿಲ್ಪಕೃತಿಯನ್ನು ದೇವಸ್ಥಾನದ ಪ್ರಾಕಾರದ ಗೋಡೆಗಳಲ್ಲಿ ನೋಡುವ ಸೌಭಾಗ್ಯ ದೊರೆಕಿದೆಯಂತೆ. ನನಗೂ ಇಷ್ಟವಾಯಿತು.  ಜೊತೆಗೆ ನನ್ನ ಗಂಧಾಕ್ಷತೆಯ ಹಿನ್ನಲೆ ತಾನಾಗಿಯೇ ಜ್ಞಾಪಿಸಿಬಿಟ್ಟ ಶ್ರೀ ರಾಮ. ನನ್ನ ಬ್ಲಾಗಿಗೆ ಅಂದೂ ಕೂಡ ಗಂಧಾಕ್ಷತೆ ಶ್ರೀ ರಾಮ ಪಟ್ಟಾಭಿಷೇಕದ ಸಂಕೇತ, ಇಂದೂ ಕೂಡ ಅಯೋಧ್ಯೆಯಲ್ಲಿ ಶ್ರೀ ರಾಮ ಪಟ್ಟಾಭಿಷೇಕದ ಸಂಕೇತ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ